ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಅಭಿಮನ್ಯುವಧ ಪರ್ವ
ಅಧ್ಯಾಯ 32
ಸಾರ
ದುರ್ಯೋಧನ-ದ್ರೋಣರ ಸಂವಾದ (1-14). ಅಭಿಮನ್ಯುವಧೆಯ ಸಂಕ್ಷೇಪಕಥನ (15-20). ಧೃತರಾಷ್ಟ್ರನ ಪ್ರಶ್ನೆ (21-26).
07032001 ಸಂಜಯ ಉವಾಚ।
07032001a ಪೂರ್ವಮಸ್ಮಾಸು ಭಗ್ನೇಷು ಫಲ್ಗುನೇನಾಮಿತೌಜಸಾ।
07032001c ದ್ರೋಣೇ ಚ ಮೋಘಸಂಕಲ್ಪೇ ರಕ್ಷಿತೇ ಚ ಯುಧಿಷ್ಠಿರೇ।।
ಸಂಜಯನು ಹೇಳಿದನು: “ಅಮಿತೌಜಸ ಫಲ್ಗುನನು ನಮ್ಮನ್ನು ಮೊದಲೇ ಭಗ್ನಗೊಳಿಸಿದ್ದನು. ಮತ್ತು ಯುಧಿಷ್ಠಿರನನ್ನು ರಕ್ಷಿಸಿ ದ್ರೋಣನ ಸಂಕಲ್ಪವನ್ನು ಅಸಫಲಗೊಳಿಸಿದ್ದನು.
07032002a ಸರ್ವೇ ವಿಧ್ವಸ್ತಕವಚಾಸ್ತಾವಕಾ ಯುಧಿ ನಿರ್ಜಿತಾಃ।
07032002c ರಜಸ್ವಲಾ ಭೃಶೋದ್ವಿಗ್ನಾ ವೀಕ್ಷಮಾಣಾ ದಿಶೋ ದಶ।।
ನಿನ್ನವರೆಲ್ಲರೂ ಯುದ್ಧದಲ್ಲಿ ಸೋತು, ಕವಚಗಳನ್ನು ಕಳೆದುಕೊಂಡು ಧೂಳಿನಿಂತ ತುಂಬಿಕೊಂಡು, ತುಂಬಾ ಉದ್ವಿಗ್ನರಾಗಿ ದಿಕ್ಕು ದಿಕ್ಕುಗಳನ್ನು ನೋಡುತ್ತಿದ್ದರು.
07032003a ಅವಹಾರಂ ತತಃ ಕೃತ್ವಾ ಭಾರದ್ವಾಜಸ್ಯ ಸಮ್ಮತೇ।
07032003c ಲಬ್ಧಲಕ್ಷ್ಯೈಃ ಪರೈರ್ದೀನಾ ಭೃಶಾವಹಸಿತಾ ರಣೇ।।
ಭಾರದ್ವಾಜನ ಸಮ್ಮತಿಯಂತೆ ಯುದ್ಧದಿಂದ ಹಿಂದಿರುಗಿದರು. ಅರ್ಜುನನ ಗುರಿಗೆ ಸಿಲುಕಿದ್ದ ಅವರು ರಣದಲ್ಲಿ ಶತ್ರುಗಳಿಂದ ದೀನರಾಗಿಸಿಕೊಂಡಿದ್ದರು ಮತ್ತು ಅವಹೇಳನಕ್ಕೊಳಗಾಗಿದ್ದರು.
07032004a ಶ್ಲಾಘಮಾನೇಷು ಭೂತೇಷು ಫಲ್ಗುನಸ್ಯಾಮಿತಾನ್ಗುಣಾನ್।
07032004c ಕೇಶವಸ್ಯ ಚ ಸೌಹಾರ್ದೇ ಕೀರ್ತ್ಯಮಾನೇಽರ್ಜುನಂ ಪ್ರತಿ।
07032004e ಅಭಿಶಸ್ತಾ ಇವಾಭೂವನ್ಧ್ಯಾನಮೂಕತ್ವಮಾಸ್ಥಿತಾಃ।।
ಎಲ್ಲ ಭೂತಗಳು ಫಲ್ಗುನನ ಅಮಿತ ಗುಣಗಳನ್ನು ಮತ್ತು ಕೇಶವನ ಸೌಹಾರ್ದತೆಯನ್ನು ಶ್ಲಾಘಿಸುತ್ತಿದ್ದವು. ಅರ್ಜುನನ ಗುಣಗಾನವನ್ನೇ ಮಾಡುತ್ತಿದ್ದರು. ನಿನ್ನವರು ಮಾತ್ರ ಕಳಂಕಿತರಾದವರಂತೆ ಧ್ಯಾನಮೂಕರಾಗಿದ್ದರು.
07032005a ತತಃ ಪ್ರಭಾತಸಮಯೇ ದ್ರೋಣಂ ದುರ್ಯೋಧನೋಽಬ್ರವೀತ್।
07032005c ಪ್ರಣಯಾದಭಿಮಾನಾಚ್ಚ ದ್ವಿಷದ್ವೃದ್ಧ್ಯಾ ಚ ದುರ್ಮನಾಃ।
07032005e ಶೃಣ್ವತಾಂ ಸರ್ವಭೂತಾನಾಂ ಸಂರಬ್ಧೋ ವಾಕ್ಯಕೋವಿದಃ।।
ಆಗ ಪ್ರಭಾತಸಮಯದಲ್ಲಿ ಶತ್ರುಗಳ ಗೆಲುವಿನಿಂದ ಮನಸ್ಸು ಕೆಟ್ಟುಹೋಗಿ ಸಂರಬ್ಧನಾಗಿದ್ದ ವಾಕ್ಯಕೋವಿದ ದುರ್ಯೋಧನನು ಎಲ್ಲರಿಗೂ ಕೇಳುವಂತೆ ಪ್ರಣಯ ಮತ್ತು ಅಭಿಮಾನಗಳಿಂದ ದ್ರೋಣನಿಗೆ ಹೇಳಿದನು.
07032006a ನೂನಂ ವಯಂ ವಧ್ಯಪಕ್ಷೇ ಭವತೋ ಬ್ರಹ್ಮವಿತ್ತಮ।
07032006c ತಥಾ ಹಿ ನಾಗ್ರಹೀಃ ಪ್ರಾಪ್ತಂ ಸಮೀಪೇಽದ್ಯ ಯುಧಿಷ್ಠಿರಂ।।
“ಬ್ರಹ್ಮವಿತ್ತಮ! ನಾವೆಲ್ಲರೂ ನಿಮ್ಮ ಶತ್ರುಪಕ್ಷದಲ್ಲಿದ್ದೇವೆ ಎಂದು ತೋರುತ್ತದೆ. ಆದುದರಿಂದಲೇ ಯುಧಿಷ್ಠರನು ಸಮೀಪದಲ್ಲಿ ದೊರಕಿದ್ದರೂ ಅವನನ್ನು ನೀವು ಸೆರೆಹಿಡಿಯಲಿಲ್ಲ!
07032007a ಇಚ್ಚತಸ್ತೇ ನ ಮುಚ್ಯೇತ ಚಕ್ಷುಃಪ್ರಾಪ್ತೋ ರಣೇ ರಿಪುಃ।
07032007c ಜಿಘೃಕ್ಷತೋ ರಕ್ಷ್ಯಮಾಣಃ ಸಾಮರೈರಪಿ ಪಾಂಡವೈಃ।।
ನೀವು ಬಯಸಿದರೆ ರಣದಲ್ಲಿ ನಿಮ್ಮ ಕಣ್ಣಿಗೆ ಸಿಲುಕಿದ ಯಾವ ಶತ್ರುವೂ ಅಮರರಿಂದಾಗಲೀ ಪಾಂಡವರಿಂದಾಗಲೀ ರಕ್ಷಿಸಲ್ಪಡುತ್ತಿದ್ದರೂ ನಿಮ್ಮಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ.
07032008a ವರಂ ದತ್ತ್ವಾ ಮಮ ಪ್ರೀತಃ ಪಶ್ಚಾದ್ವಿಕೃತವಾನಸಿ।
07032008c ಆಶಾಭಂಗಂ ನ ಕುರ್ವಂತಿ ಭಕ್ತಸ್ಯಾರ್ಯಾಃ ಕಥಂ ಚನ।।
ನನ್ನ ಮೇಲೆ ಪ್ರೀತರಾಗಿ ವರವನ್ನಿತ್ತು ನಂತರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಆರ್ಯರು ಎಂದೂ ಭಕ್ತರ ಆಶಾಭಂಗವನ್ನು ಎಸಗುವುದಿಲ್ಲ.”
07032009a ತತೋಽಪ್ರೀತಸ್ತಥೋಕ್ತಃ ಸ ಭಾರದ್ವಾಜೋಽಬ್ರವೀನ್ನೃಪಂ।
07032009c ನಾರ್ಹಸೇ ಮಾನ್ಯಥಾ ಜ್ಞಾತುಂ ಘಟಮಾನಂ ತವ ಪ್ರಿಯೇ।।
ಆಗ ಅಪ್ರೀತನಾಗಿ ಭಾರದ್ವಾಜನು ನೃಪನಿಗೆ ಹೇಳಿದನು: “ನಿನಗೋಸ್ಕರವಾಗಿ ಸರ್ವ ಪ್ರಯತ್ನಮಾಡಿ ದುಡಿಯುತ್ತಿದ್ದವನ ಕುರಿತು ಹಾಗೆ ಆಲೋಚಿಸುವುದು ಸರಿಯಲ್ಲ.
07032010a ಸಸುರಾಸುರಗಂಧರ್ವಾಃ ಸಯಕ್ಷೋರಗರಾಕ್ಷಸಾಃ।
07032010c ನಾಲಂ ಲೋಕಾ ರಣೇ ಜೇತುಂ ಪಾಲ್ಯಮಾನಂ ಕಿರೀಟಿನಾ।।
ರಣದಲ್ಲಿ ಕಿರೀಟಿಯಿಂದ ಪಾಲಿತನಾದವನನ್ನು ಜಯಿಸಲು ಲೋಕದಲ್ಲಿ ಸುರಾಸುರಗಂಧರ್ವರಿಗೂ ಯಕ್ಷೋರಗರಾಕ್ಷಸರಿಗೂ ಸಾಧ್ಯವಿಲ್ಲ.
07032011a ವಿಶ್ವಸೃಗ್ಯತ್ರ ಗೋವಿಂದಃ ಪೃತನಾರಿಸ್ತಹಾರ್ಜುನಃ।
07032011c ತತ್ರ ಕಸ್ಯ ಬಲಂ ಕ್ರಾಮೇದನ್ಯತ್ರ ತ್ರ್ಯಂಬಕಾತ್ಪ್ರಭೋಃ।।
ಎಲ್ಲಿ ವಿಶ್ವದ ಸೃಷ್ಟಿಕರ್ತನಾದ ಗೋವಿಂದನಿದ್ದಾನೋ ಎಲ್ಲಿ ಸೇನಾಧಿಪತಿ ಅರ್ಜುನನಿದ್ದಾನೋ ಅಲ್ಲಿ ಪ್ರಭು ತ್ರ್ಯಂಬಕನ ಬಲವನ್ನು ಬಿಟ್ಟು ಬೇರೆ ಯಾರ ಬಲವು ತಾನೇ ನಾಟೀತು?
07032012a ಸತ್ಯಂ ತು ತೇ ಬ್ರವೀಮ್ಯದ್ಯ ನೈತಜ್ಜಾತ್ವನ್ಯಥಾ ಭವೇತ್।
07032012c ಅದ್ಯೈಷಾಂ ಪ್ರವರಂ ವೀರಂ ಪಾತಯಿಷ್ಯೇ ಮಹಾರಥಂ।।
ಇಂದು ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇದು ಅನ್ಯಥಾ ಆಗುವುದಿಲ್ಲ ಎಂದು ತಿಳಿ. ಇಂದು ನಾನು ಓರ್ವ ಮುಖ್ಯ ವೀರ ಮಹಾರಥನನ್ನು ಕೆಡವುತ್ತೇನೆ.
07032013a ತಂ ಚ ವ್ಯೂಹಂ ವಿಧಾಸ್ಯಾಮಿ ಯೋಽಭೇದ್ಯಸ್ತ್ರಿದಶೈರಪಿ।
07032013c ಯೋಗೇನ ಕೇನ ಚಿದ್ರಾಜನ್ನರ್ಜುನಸ್ತ್ವಪನೀಯತಾಂ।।
ಅದಕ್ಕಾಗಿ ನಾನು ದೇವತೆಗಳಿಗೂ ಅಭೇದ್ಯವಾದ ವ್ಯೂಹವನ್ನು ರಚಿಸುತ್ತೇನೆ. ಆದರೆ ಯಾವುದಾದರೂ ಉಪಾಯದಿಂದ ನೀನು ಅರ್ಜುನನನ್ನು ಬೇರೆಕಡೆ ಒಯ್ಯಬೇಕು.
07032014a ನ ಹ್ಯಜ್ಞಾತಮಸಾಧ್ಯಂ ವಾ ತಸ್ಯ ಸಂಖ್ಯೇಽಸ್ತಿ ಕಿಂ ಚನ।
07032014c ತೇನ ಹ್ಯುಪಾತ್ತಂ ಬಲವತ್ಸರ್ವಜ್ಞಾನಮಿತಸ್ತತಃ।।
ಏಕೆಂದರೆ ಅವನಿಗೆ ಯುದ್ಧದ ವಿಷಯದಲ್ಲಿ ತಿಳಿಯದೇ ಇದ್ದುದು ಮತ್ತು ಅಸಾಧ್ಯವಾದುದು ಯಾವುದೂ ಇಲ್ಲ. ಅವನು ಸೇನೆಗಳ ಕುರಿತು ಸರ್ವ ಜ್ಞಾನವನ್ನೂ ಇಲ್ಲಿಂದ ಮತ್ತು ಬೇರೆಕಡೆಗಳಿಂದ ಪಡೆದುಕೊಂಡಿದ್ದಾನೆ.”
07032015a ದ್ರೋಣೇನ ವ್ಯಾಹೃತೇ ತ್ವೇವಂ ಸಂಶಪ್ತಕಗಣಾಃ ಪುನಃ।
07032015c ಆಹ್ವಯನ್ನರ್ಜುನಂ ಸಂಖ್ಯೇ ದಕ್ಷಿಣಾಮಭಿತೋ ದಿಶಂ।।
ದ್ರೋಣನು ಹೀಗೆ ಹೇಳಲು ಪುನಃ ಸಂಶಪ್ತಕಗಣಗಳು ರಣದ ದಕ್ಷಿಣಭಾಗಕ್ಕೆ ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿದರು.
07032016a ತತ್ರಾರ್ಜುನಸ್ಯಾಥ ಪರೈಃ ಸಾರ್ಧಂ ಸಮಭವದ್ರಣಃ।
07032016c ತಾದೃಶೋ ಯಾದೃಶೋ ನಾನ್ಯಃ ಶ್ರುತೋ ದೃಷ್ಟೋಽಪಿ ವಾ ಕ್ವ ಚಿತ್।।
ಅಲ್ಲಿ ಅರ್ಜುನ ಮತ್ತು ಶತ್ರುಗಳ ನಡುವೆ ಎಲ್ಲಿಯೂ ಎಂದೂ ಕಂಡು-ಕೇಳಿರದಂತಹ ಕಾಳಗವು ನಡೆಯಿತು.
07032017a ತತೋ ದ್ರೋಣೇನ ವಿಹಿತೋ ರಾಜನ್ವ್ಯೂಹೋ ವ್ಯರೋಚತ।
07032017c ಚರನ್ಮಧ್ಯಂದಿನೇ ಸೂರ್ಯಃ ಪ್ರತಪನ್ನಿವ ದುರ್ದೃಶಃ।।
ರಾಜನ್! ಆಗ ದ್ರೋಣನು ಮಧ್ಯಾಹ್ನದ ಸೂರ್ಯನು ಸುಡುವಂತೆ ನೋಡಲೂ ಅಸಾದ್ಯವಾದ ವ್ಯೂಹವನ್ನು ರಚಿಸಿದನು.
07032018a ತಂ ಚಾಭಿಮನ್ಯುರ್ವಚನಾತ್ಪಿತುರ್ಜ್ಯೇಷ್ಠಸ್ಯ ಭಾರತ।
07032018c ಬಿಭೇದ ದುರ್ಭಿದಂ ಸಂಖ್ಯೇ ಚಕ್ರವ್ಯೂಹಮನೇಕಧಾ।।
ಭಾರತ! ರಣದಲ್ಲಿ ಭೇದಿಸಲಸಾಧ್ಯವಾದ ಆ ಚಕ್ರವ್ಯೂಹವನ್ನು ಕೂಡ ಅಭಿಮನ್ಯುವು ದೊಡ್ಡಪ್ಪನ ಮಾತಿನಂತೆ ಅನೇಕ ಪ್ರಕಾರವಾಗಿ ಭೇದಿಸಿದನು.
07032019a ಸ ಕೃತ್ವಾ ದುಷ್ಕರಂ ಕರ್ಮ ಹತ್ವಾ ವೀರಾನ್ ಸಹಸ್ರಶಃ।
07032019c ಷಟ್ಸು ವೀರೇಷು ಸಂಸಕ್ತೋ ದೌಃಶಾಸನಿವಶಂ ಗತಃ।।
ಅವನು ದುಷ್ಕರ ಕರ್ಮಗಳನ್ನು ಮಾಡಿ ಸಹಸ್ರಾರು ವೀರರನ್ನು ಸಂಹರಿಸಿ ಆರು ವೀರರೊಂದಿಗೆ ಯುದ್ಧದಲ್ಲಿ ತೊಡಗಿರುವಾಗ ದುಃಶಾಸನನ ಮಗನಿಂದ ಹತನಾದನು.
07032020a ವಯಂ ಪರಮಸಂಹೃಷ್ಟಾಃ ಪಾಂಡವಾಃ ಶೋಕಕರ್ಶಿತಾಃ।
07032020c ಸೌಭದ್ರೇ ನಿಹತೇ ರಾಜನ್ನವಹಾರಮಕುರ್ವತ।।
ರಾಜನ್! ಅದರಿಂದ ನಾವು ಪರಮ ಹರ್ಷಿತರಾದೆವು. ಪಾಂಡವರು ಶೋಕಾವಿಷ್ಟರಾದರು. ಸೌಭದ್ರನು ಹತನಾಗಲು ಆ ದಿನದ ಯುದ್ಧವು ನಿಂತಿತು.”
07032021 ಧೃತರಾಷ್ಟ್ರ ಉವಾಚ।
07032021a ಪುತ್ರಂ ಪುರುಷಸಿಂಹಸ್ಯ ಸಂಜಯಾಪ್ರಾಪ್ತಯೌವನಂ।
07032021c ರಣೇ ವಿನಿಹತಂ ಶ್ರುತ್ವಾ ಭೃಶಂ ಮೇ ದೀರ್ಯತೇ ಮನಃ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಪುರುಷಸಿಂಹನ ಮಗನೂ ಇನ್ನೂ ಎಳೆಯ ವಯಸ್ಸಿನವನೂ ಆದ ಅವನು ರಣದಲ್ಲಿ ಹತನಾದನೆಂದು ಕೇಳಿ ನನ್ನ ಎದೆಯು ತುಂಬಾ ಸೀಳಿಹೋಗುವಂತಿದೆ.
07032022a ದಾರುಣಃ ಕ್ಷತ್ರಧರ್ಮೋಽಯಂ ವಿಹಿತೋ ಧರ್ಮಕರ್ತೃಭಿಃ।
07032022c ಯತ್ರ ರಾಜ್ಯೇಪ್ಸವಃ ಶೂರಾ ಬಾಲೇ ಶಸ್ತ್ರಮಪಾತಯನ್।।
ಧರ್ಮಗಳನ್ನು ಮಾಡಿರುವವರು ಈ ಕ್ಷತ್ರಿಯ ಧರ್ಮವನ್ನು ದಾರುಣವನ್ನಾಗಿಸಿದ್ದಾರೆ. ರಾಜ್ಯವನ್ನು ಬಯಸುವ ಅವರು ಬಾಲಕ ಮಕ್ಕಳ ಮೇಲೂ ಶಸ್ತ್ರಗಳನ್ನು ಬೀಳಿಸಬೇಕಾಗುತ್ತದೆ.
07032023a ಬಾಲಮತ್ಯಂತಸುಖಿನಂ ವಿಚರಂತಮಭೀತವತ್।
07032023c ಕೃತಾಸ್ತ್ರಾ ಬಹವೋ ಜಘ್ನುರ್ಬ್ರೂಹಿ ಗಾವಲ್ಗಣೇ ಕಥಂ।।
ಗಾವಲ್ಗಣೇ! ಅತ್ಯಂತ ಸುಖಿಯಾಗಿದ್ದ, ಭಯಪಡದೇ ಸಂಚರಿಸುತ್ತಿದ್ದ, ಕೃತಾಸ್ತ್ರ ಬಾಲಕನನ್ನು ಹಲವಾರು ಮಂದಿ ಹೇಗೆ ಸಂಹರಿಸಿದರು ಹೇಳು.
07032024a ಬಿಭಿತ್ಸತಾ ರಥಾನೀಕಂ ಸೌಭದ್ರೇಣಾಮಿತೌಜಸಾ।
07032024c ವಿಕ್ರೀಡಿತಂ ಯಥಾ ಸಂಖ್ಯೇ ತನ್ಮಮಾಚಕ್ಷ್ವ ಸಂಜಯ।।
ಸಂಜಯ! ರಥಸೇನೆಯನ್ನು ಧ್ವಂಸಗೊಳಿಸಲು ಬಯಸಿದ ಅಮಿತೌಜಸ ಸೌಭದ್ರನು ರಣರಂಗದಲ್ಲಿ ಹೇಗೆ ಆಟವಾಡಿದನು ಎನ್ನುವುದನ್ನು ನನಗೆ ಹೇಳು.”
07032025 ಸಂಜಯ ಉವಾಚ।
07032025a ಯನ್ಮಾಂ ಪೃಚ್ಚಸಿ ರಾಜೇಂದ್ರ ಸೌಭದ್ರಸ್ಯ ನಿಪಾತನಂ।
07032025c ತತ್ತೇ ಕಾರ್ತ್ಸ್ನ್ಯೆನ ವಕ್ಷ್ಯಾಮಿ ಶೃಣು ರಾಜನ್ಸಮಾಹಿತಃ।
07032025e ವಿಕ್ರೀಡಿತಂ ಕುಮಾರೇಣ ಯಥಾನೀಕಂ ಬಿಭಿತ್ಸತಾ।।
ಸಂಜಯನು ಹೇಳಿದನು: “ರಾಜೇಂದ್ರ! ರಾಜನ್! ಸೌಭದ್ರನ ಪತನದ ಕುರಿತು ನನ್ನನ್ನು ಕೇಳುತ್ತಿರುವೆಯಲ್ಲಾ ಅದನ್ನು ಮತ್ತು ರಥ ಸೇನೆಯನ್ನು ನಾಶಗೊಳಿಸಲು ಬಯಸಿದ ಆ ಕುಮಾರನು ಹೇಗೆ ಯುದ್ಧದ ಆಟವಾಡಿದನು ಎನ್ನುವುದನ್ನು ಸಂಪೂರ್ಣವಾಗಿ ಹೇಳುತ್ತೇನೆ. ಗಮನವಿಟ್ಟು ಕೇಳು.
07032026a ದಾವಾಗ್ನ್ಯಭಿಪರೀತಾನಾಂ ಭೂರಿಗುಲ್ಮತೃಣದ್ರುಮೇ।
07032026c ವನೌಕಸಾಮಿವಾರಣ್ಯೇ ತ್ವದೀಯಾನಾಮಭೂದ್ಭಯಂ।।
ಅರಣ್ಯದಲ್ಲಿ ದಾವಾಗ್ನಿಯಿಂದ ಪರಿತಪ್ತವಾದ ಹೂ-ತಳಿರುಗಳನ್ನುಳ್ಳ ವೃಕ್ಷಗಳಂತೆ ನಿನ್ನ ಸೇನೆಗಳು ಆದವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುವಧಸಂಕ್ಷೇಪಕಥನೇ ದ್ವಾತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುವಧಸಂಕ್ಷೇಪಕಥನ ಎನ್ನುವ ಮೂವತ್ತೆರಡನೇ ಅಧ್ಯಾಯವು.