030 ನೀಲವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಸಂಶಪ್ತಕವಧ ಪರ್ವ

ಅಧ್ಯಾಯ 30

ಸಾರ

ತುಮುಲ ಯುದ್ಧ (1-18). ಅಶ್ವತ್ಥಾಮನಿಂದ ನೀಲವಧೆ (19-29).

07030001 ಧೃತರಾಷ್ಟ್ರ ಉವಾಚ।
07030001a ತೇಷ್ವನೀಕೇಷು ಭಗ್ನೇಷು ಪಾಂಡುಪುತ್ರೇಣ ಸಂಜಯ।
07030001c ಚಲಿತಾನಾಂ ದ್ರುತಾನಾಂ ಚ ಕಥಮಾಸೀನ್ಮನೋ ಹಿ ವಃ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಪಾಂಡುಪುತ್ರನಿಂದ ಹಾಗೆ ಭಗ್ನಗೊಂಡ ಆ ಸೇನೆಗಳು ಓಡಿಹೋಗುತ್ತಿರುವಾಗ ನಮ್ಮವರ ಮನಸ್ಸು ಹೇಗಿತ್ತು?

07030002a ಅನೀಕಾನಾಂ ಪ್ರಭಗ್ನಾನಾಂ ವ್ಯವಸ್ಥಾನಮಪಶ್ಯತಾಂ।
07030002c ದುಷ್ಕರಂ ಪ್ರತಿಸಂಧಾನಂ ತನ್ಮಮಾಚಕ್ಷ್ವ ಸಂಜಯ।।

ಭಗ್ನವಾಗಿ ಹೋಗುತ್ತಿದ್ದ ಸೇನೆಗಳನ್ನು ಪುನಃ ಒಂದುಗೂಡಿಸುವುದು ಕಷ್ಟವಾದುದು. ಅದಕ್ಕಾಗಿ ನಮ್ಮವರು ಏನು ಮಾಡಿದರು ಅದನ್ನು ನನಗೆ ಹೇಳು ಸಂಜಯ!”

07030003 ಸಂಜಯ ಉವಾಚ।
07030003a ತಥಾಪಿ ತವ ಪುತ್ರಸ್ಯ ಪ್ರಿಯಕಾಮಾ ವಿಶಾಂ ಪತೇ।
07030003c ಯಶಃ ಪ್ರವೀರಾ ಲೋಕೇಷು ರಕ್ಷಂತೋ ದ್ರೋಣಮನ್ವಯುಃ।।

ಸಂಜಯನು ಹೇಳಿದನು: “ವಿಶಾಂಪತೇ! ಹಾಗಿದ್ದರೂ ನಿನ್ನ ಮಗನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಪ್ರಮುಖರು ಲೋಕದಲ್ಲಿ ತಮ್ಮ ಯಶಸ್ಸನ್ನು ರಕ್ಷಿಸಿಕೊಳ್ಳುತ್ತಾ ದ್ರೋಣನನ್ನು ಅನುಸರಿಸಿದರು.

07030004a ಸಮುದ್ಯತೇಷು ಶಸ್ತ್ರೇಷು ಸಂಪ್ರಾಪ್ತೇ ಚ ಯುಧಿಷ್ಠಿರೇ।
07030004c ಅಕುರ್ವನ್ನಾರ್ಯಕರ್ಮಾಣಿ ಭೈರವೇ ಸತ್ಯಭೀತವತ್।।

ಅವರು ಯುಧಿಷ್ಠಿರನನ್ನು ತಲುಪಿ ಶಸ್ತ್ರಗಳನ್ನು ಎತ್ತಿ ಹಿಡಿದು ಭಯಪಡದೇ ಸತ್ಯವಾದ ಭೈರವ ಆರ್ಯಕರ್ಮಗಳನ್ನು ಎಸಗಿದರು.

07030005a ಅಂತರಂ ಭೀಮಸೇನಸ್ಯ ಪ್ರಾಪತನ್ನಮಿತೌಜಸಃ।
07030005c ಸಾತ್ಯಕೇಶ್ಚೈವ ಶೂರಸ್ಯ ಧೃಷ್ಟದ್ಯುಮ್ನಸ್ಯ ಚಾಭಿಭೋ।।

ವಿಭೋ! ಬಳಿಯಲ್ಲಿ ಅಮಿತೌಜಸ ಭೀಮಸೇನನೂ, ಶೂರ ಸಾತ್ಯಕಿಯೂ, ಧೃಷ್ಟದ್ಯುಮ್ನನೂ ಇಲ್ಲದಿರುವ ಅವಕಾಶದಲ್ಲಿ ಅವನ ಮೇಲೆ ಎರಗಿದರು.

07030006a ದ್ರೋಣಂ ದ್ರೋಣಮಿತಿ ಕ್ರೂರಾಃ ಪಾಂಚಾಲಾಃ ಸಮಚೋದಯನ್।
07030006c ಮಾ ದ್ರೋಣಮಿತಿ ಪುತ್ರಾಸ್ತೇ ಕುರೂನ್ಸರ್ವಾನಚೋದಯನ್।।

“ದ್ರೋಣ! ದ್ರೋಣ!” ಎಂದು ಕ್ರೂರರಾದ ಪಾಂಚಾಲರು ಹುರಿದುಂಬಿಸುತ್ತಿದ್ದರು. “ದ್ರೋಣನನ್ನು ಬಿಟ್ಟುಕೊಡಬೇಡಿ!” ಎಂದು ನಿನ್ನ ಮಕ್ಕಳು ಕುರುಗಳನ್ನು ಹುರಿದುಂಬಿಸುತ್ತಿದ್ದರು.

07030007a ದ್ರೋಣಂ ದ್ರೋಣಮಿತಿ ಹ್ಯೇಕೇ ಮಾ ದ್ರೋಣಮಿತಿ ಚಾಪರೇ।
07030007c ಕುರೂಣಾಂ ಪಾಂಡವಾನಾಂ ಚ ದ್ರೋಣದ್ಯೂತಮವರ್ತತ।।

“ದ್ರೋಣ! ದ್ರೋಣ!” ಎಂದು ಒಂದುಕಡೆ ಪಾಂಡವರು ಮತ್ತು “ದ್ರೋಣನನ್ನು ಬಿಟ್ಟುಕೊಡಬೇಡಿ!” ಎಂದು ಇನ್ನೊಂದು ಕಡೆಯಲ್ಲಿ ಕುರುಗಳು ಕೂಗುತ್ತಾ ದ್ರೋಣನನ್ನು ದ್ಯೂತದ ಪಣವಾನ್ನಾಗಿಸಿದ್ದರು.

07030008a ಯಂ ಯಂ ಸ್ಮ ಭಜತೇ ದ್ರೋಣಃ ಪಾಂಚಾಲಾನಾಂ ರಥವ್ರಜಂ।
07030008c ತತ್ರ ತತ್ರ ಸ್ಮ ಪಾಂಚಾಲ್ಯೋ ಧೃಷ್ಟದ್ಯುಮ್ನೋಽಥ ಧೀಯತೇ।।

ದ್ರೋಣನು ಪಾಂಚಾಲರ ಯಾವ ಯಾವ ರಥಸಮೂಹಗಳನ್ನು ಆಕ್ರಮಣಿಸುತ್ತಿದ್ದನೋ ಅಲ್ಲಲ್ಲಿ ಪಾಂಚಾಲ್ಯ ಧೃಷ್ಟದ್ಯುಮ್ನನು ಅವನನ್ನು ಎದುರಿಸುತ್ತಿದ್ದನು.

07030009a ಯಥಾಭಾಗವಿಪರ್ಯಾಸೇ ಸಂಗ್ರಾಮೇ ಭೈರವೇ ಸತಿ।
07030009c ವೀರಾಃ ಸಮಾಸದನ್ವೀರಾನಗಚ್ಚನ್ಭೀರವಃ ಪರಾನ್।।

ಹೀಗೆ ಭಾಗವಿಪರ್ಯಾಸದಿಂದ ನಡೆಯುತ್ತಿದ್ದ ಸಂಗ್ರಾಮವು ಭೈರವ ರೂಪವನ್ನು ತಾಳಿ, ವೀರರು ಶತ್ರು ವೀರರನ್ನು ಜೋರಾಗಿ ಗರ್ಜಿಸುತ್ತಾ ಎದುರಿಸಿದರು.

07030010a ಅಕಂಪನೀಯಾಃ ಶತ್ರೂಣಾಂ ಬಭೂವುಸ್ತತ್ರ ಪಾಂಡವಾಃ।
07030010c ಅಕಂಪಯಂಸ್ತ್ವನೀಕಾನಿ ಸ್ಮರಂತಃ ಕ್ಲೇಶಮಾತ್ಮನಃ।।

ಪಾಂಡವರು ಶತ್ರುಗಳಿಂದ ಸ್ವಲ್ಪವೂ ತತ್ತರಿಸಲಿಲ್ಲ. ಆದರೆ ಅವರ ಕಷ್ಟಗಳನ್ನು ಸ್ಮರಿಸಿಕೊಂಡು ನಿನ್ನ ಸೇನೆಯು ತತ್ತರಿಸುವಂತೆ ಮಾಡಿದರು.

07030011a ತೇ ತ್ವಮರ್ಷವಶಂ ಪ್ರಾಪ್ತಾ ಹ್ರೀಮಂತಃ ಸತ್ತ್ವಚೋದಿತಾಃ।
07030011c ತ್ಯಕ್ತ್ವಾ ಪ್ರಾಣಾನ್ನ್ಯವರ್ತಂತ ಘ್ನಂತೋ ದ್ರೋಣಂ ಮಹಾಹವೇ।।

ಲಜ್ಜಾಶೀಲರಾದ ಸತ್ತ್ವಗುಣಸಂಪನ್ನರಾದ ಪಾಂಡವರೂ ಕೂಡ ಕೋಪಾವಿಷ್ಟರಾಗಿ ಪ್ರಾಣಗಳನ್ನೂ ತೊರೆದು ಮಹಾರಣದಲ್ಲಿ ದ್ರೋಣನನ್ನು ಸಂಹರಿಸಲು ಮುನ್ನುಗ್ಗಿ ಹೋಗುತ್ತಿದ್ದರು.

07030012a ಅಯಸಾಮಿವ ಸಂಪಾತಃ ಶಿಲಾನಾಮಿವ ಚಾಭವತ್।
07030012c ದೀವ್ಯತಾಂ ತುಮುಲೇ ಯುದ್ಧೇ ಪ್ರಾಣೈರಮಿತತೇಜಸಾಂ।।

ಪ್ರಾಣಗಳನ್ನೇ ಪಣವಾಗಿಟ್ಟ ಅಮಿತತೇಜಸರ ಆ ತುಮುಲ ಯುದ್ಧವು ಕಬ್ಬಿಣದ ಒನಕೆಗಳ ಘರ್ಷಣೆಗೆ ಅಥವಾ ಕಲ್ಲುಗಳ ಘರ್ಷಣೆಗೆ ಸಮಾನವಾಗಿತ್ತು.

07030013a ನ ತು ಸ್ಮರಂತಿ ಸಂಗ್ರಾಮಮಪಿ ವೃದ್ಧಾಸ್ತಥಾವಿಧಂ।
07030013c ದೃಷ್ಟಪೂರ್ವಂ ಮಹಾರಾಜ ಶ್ರುತಪೂರ್ವಮಥಾಪಿ ವಾ।।

ಮಹಾರಾಜ! ವೃದ್ಧರು ಕೂಡ ಆ ರೀತಿಯ ಸಂಗ್ರಾಮವನ್ನು ನೆನಪಿಸಿಕೊಳ್ಳಲಾಗುತ್ತಿರಲಿಲ್ಲ. ಏಕೆಂದರೆ ಆ ರೀತಿಯ ಯುದ್ಧವನ್ನು ಅವರು ಕಂಡೂ ಇರಲಿಲ್ಲ. ಕೇಳಿಯೂ ಇರಲಿಲ್ಲ.

07030014a ಪ್ರಾಕಂಪತೇವ ಪೃಥಿವೀ ತಸ್ಮಿನ್ವೀರಾವಸಾದನೇ।
07030014c ಪ್ರವರ್ತತಾ ಬಲೌಘೇನ ಮಹತಾ ಭಾರಪೀಡಿತಾ।।

ವೀರರ ವಿನಾಶಕಾರಕ ಆ ಮಹಾಯುದ್ಧದಲ್ಲಿ ರಣಾಂಗಣಕ್ಕೆ ಹಿಂದಿರುಗುತ್ತಿದ್ದ ಮಹಾ ಸೇನಾ ಸಮೂಹದ ಭಾರದಿಂದ ಪೀಡಿತಳಾಗಿ ಭೂಮಿಯು ಕಂಪಿಸಿದಳು.

07030015a ಘೂರ್ಣತೋ ಹಿ ಬಲೌಘಸ್ಯ ದಿವಂ ಸ್ತಬ್ಧ್ವೇವ ನಿಸ್ವನಃ।
07030015c ಅಜಾತಶತ್ರೋಃ ಕ್ರುದ್ಧಸ್ಯ ಪುತ್ರಸ್ಯ ತವ ಚಾಭವತ್।।

ಅಜಾತಶತ್ರುವಿನ ಮತ್ತು ಕ್ರುದ್ಧನಾದ ನಿನ್ನ ಮಗನ ಸೈನ್ಯಸಮೂಹಗಳ ಆ ಭಯಂಕರ ಸಂಚಲನದಿಂದಾದ ಶಬ್ಧವು ನಾಕವನ್ನೂ ಸ್ತಬ್ಧಗೊಳಿಸಿತು.

07030016a ಸಮಾಸಾದ್ಯ ತು ಪಾಂಡೂನಾಮನೀಕಾನಿ ಸಹಸ್ರಶಃ।
07030016c ದ್ರೋಣೇನ ಚರತಾ ಸಂಖ್ಯೇ ಪ್ರಭಗ್ನಾನಿ ಶಿತೈಃ ಶರೈಃ।।

ಪಾಂಡವರ ಸೇನೆಗಳನ್ನು ಹೊಕ್ಕು ಸಂಚರಿಸುತ್ತಿದ್ದ ದ್ರೋಣನು ನಿಶಿತ ಶಿರಗಳಿಂದ ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸಿದನು.

07030017a ತೇಷು ಪ್ರಮಥ್ಯಮಾನೇಷು ದ್ರೋಣೇನಾದ್ಭುತಕರ್ಮಣಾ।
07030017c ಪರ್ಯವಾರಯದಾಸಾದ್ಯ ದ್ರೋಣಂ ಸೇನಾಪತಿಃ ಸ್ವಯಂ।।

ದ್ಭುತಕರ್ಮಿ ದ್ರೋಣನಿಂದ ಪ್ರಮಥಗೊಳ್ಳುತ್ತಿರಲು ಸ್ವಯಂ ಸೇನಾಪತಿ ಧೃಷ್ಟದ್ಯುಮ್ನನು ಎದುರಿಸಿ ತಡೆದನು.

07030018a ತದದ್ಭುತಮಭೂದ್ಯುದ್ಧಂ ದ್ರೋಣಪಾಂಚಾಲ್ಯಯೋಸ್ತದಾ।
07030018c ನೈವ ತಸ್ಯೋಪಮಾ ಕಾ ಚಿತ್ಸಂಭವೇದಿತಿ ಮೇ ಮತಿಃ।।

ಆಗ ದ್ರೋಣ-ಪಾಂಚಾಲ್ಯರ ನಡುವೆ ಅದ್ಭುತ ಯುದ್ಧವು ನಡೆಯಿತು. ಅದರಂತಹ ಯುದ್ಧವು ಹಿಂದೆ ಎಂದೂ ನಡೆದಿರಲಿಲ್ಲ ಎನ್ನುವುದು ನನ್ನ ಮತ.

07030019a ತತೋ ನೀಲೋಽನಲಪ್ರಖ್ಯೋ ದದಾಹ ಕುರುವಾಹಿನೀಂ।
07030019c ಶರಸ್ಫುಲಿಂಗಶ್ಚಾಪಾರ್ಚಿರ್ದಹನ್ಕಕ್ಷಮಿವಾನಲಃ।।

ಆಗ ಅನಲನೆಂದೇ ಪ್ರಖ್ಯಾತನಾಗಿದ್ದ ನೀಲನು ಬಾಣಗಳನ್ನೇ ಕಿಡಿಯನ್ನಾಗಿ ಬಿಲ್ಲನ್ನೇ ಜ್ವಾಲೆಯನ್ನಾಗಿಸಿಕೊಂಡು ಬೆಂಕಿಯು ಹುಲ್ಲಿನ ಮೆದೆಯನ್ನು ಸುಡುವಂತೆ ಕುರುಸೇನೆಯನ್ನು ದಹಿಸತೊಡಗಿದನು.

07030020a ತಂ ದಹಂತಮನೀಕಾನಿ ದ್ರೋಣಪುತ್ರಃ ಪ್ರತಾಪವಾನ್।
07030020c ಪೂರ್ವಾಭಿಭಾಷೀ ಸುಶ್ಲಕ್ಷ್ಣಂ ಸ್ಮಯಮಾನೋಽಭ್ಯಭಾಷತ।।

ಅವನು ಸೇನೆಗಳನ್ನು ಸುಡುತ್ತಿರುವಾಗ ಪೂರ್ವಭಾಷೀ, ಪ್ರತಾಪವಾನ್ ದ್ರೋಣಪುತ್ರನು ನಸುನಗುತ್ತಾ ನಸುನಗುತ್ತಾ ಸುಮಧುರವಾಗಿ ಹೇಳಿದನು:

07030021a ನೀಲ ಕಿಂ ಬಹುಭಿರ್ದಗ್ಧೈಸ್ತವ ಯೋಧೈಃ ಶರಾರ್ಚಿಷಾ।
07030021c ಮಯೈಕೇನ ಹಿ ಯುಧ್ಯಸ್ವ ಕ್ರುದ್ಧಃ ಪ್ರಹರ ಚಾಶುಗೈಃ।।

“ನೀಲ! ಬಾಣಗಳೆಂಬ ಜ್ವಾಲೆಯಿಂದ ಅನೇಕ ಯೋಧರನ್ನು ಸುಡುತ್ತೀಯೆ ಏಕೆ? ನನ್ನೊಬ್ಬನೊಡನೆಯೇ ಯುದ್ಧ ಮಾಡು. ಕೋಪಗೊಂಡು ಆಶುಗಗಳಿಂದ ನನ್ನನ್ನು ಪ್ರಹರಿಸು!”

07030022a ತಂ ಪದ್ಮನಿಕರಾಕಾರಂ ಪದ್ಮಪತ್ರನಿಭೇಕ್ಷಣಂ।
07030022c ವ್ಯಾಕೋಶಪದ್ಮಾಭಮುಖಂ ನೀಲೋ ವಿವ್ಯಾಧ ಸಾಯಕೈಃ।।

ಆಗ ನೀಲನು ಅರಳುತ್ತಿರುವ ಪದ್ಮದಂತಿದ್ದ, ಪದ್ಮಪತ್ರನಿಭೇಕ್ಷಣ, ಕಮಲಗಳ ಸಮೂಹದಂತೆ ಸುಂದರಾಂಗನಾಗಿದ್ದ ಅಶ್ವತ್ಥಾಮನನ್ನು ಸಾಯಕಗಳಿಂದ ಹೊಡೆದನು.

07030023a ತೇನಾತಿವಿದ್ಧಃ ಸಹಸಾ ದ್ರೌಣಿರ್ಭಲ್ಲೈಃ ಶಿತೈಸ್ತ್ರಿಭಿಃ।
07030023c ಧನುರ್ಧ್ವಜಂ ಚ ಚತ್ರಂ ಚ ದ್ವಿಷತಃ ಸ ನ್ಯಕೃಂತತ।।

ಅವನಿಂದ ಪೆಟ್ಟುತಿಂದ ದ್ರೌಣಿಯು ತಕ್ಷಣವೇ ಮೂರು ನಿಶಿತ ಭಲ್ಲಗಳಿಂದ ಶತ್ರುವಿನ ಧನುಸ್ಸನ್ನೂ, ಧ್ವಜವನ್ನೂ, ಚತ್ರವನ್ನೂ ತುಂಡರಿಸಿದನು.

07030024a ಸೋತ್ಪ್ಲುತ್ಯ ಸ್ಯಂದನಾತ್ತಸ್ಮಾನ್ನೀಲಶ್ಚರ್ಮವರಾಸಿಧೃಕ್।
07030024c ದ್ರೋಣಾಯನೇಃ ಶಿರಃ ಕಾಯಾದ್ಧರ್ತುಮೈಚ್ಚತ್ಪತತ್ರಿವತ್।।

ಆಗ ದ್ರೌಣಿಯ ಶಿರವನ್ನು ದೇಹದಿಂದ ಕತ್ತರಿಸಲು ಬಯಸಿ ನೀಲನು ಕತ್ತಿ ಗುರಾಣಿಯನ್ನು ಹಿಡಿದು ಪಕ್ಷಿಯಂತೆ ರಥದಿಂದ ಧುಮುಕಿದನು.

07030025a ತಸ್ಯೋದ್ಯತಾಸೇಃ ಸುನಸಂ ಶಿರಃ ಕಾಯಾತ್ಸಕುಂಡಲಂ।
07030025c ಭಲ್ಲೇನಾಪಾಹರದ್ದ್ರೌಣಿಃ ಸ್ಮಯಮಾನ ಇವಾನಘ।।

ಅನಘ! ಅಷ್ಟರಲ್ಲಿಯೇ ದ್ರೌಣಿಯು ನಗುತ್ತಲೇ ಭಲ್ಲದಿಂದ ಉನ್ನತ ಹೆಗಲಿನಿಂದಲೂ, ಶೋಭಾಯಮಾನ ಮೂಗಿನಿಂದಲೂ ಮತ್ತು ಕರ್ಣಕುಂಡಲಗಳಿಂದಲೂ ಯುಕ್ತವಾಗಿದ್ದ ಅವನ ಶಿರವನ್ನು ಶರೀರರಿಂದ ಅಪಹರಿಸಿಬಿಟ್ಟನು.

07030026a ಸಂಪೂರ್ಣಚಂದ್ರಾಭಮುಖಃ ಪದ್ಮಪತ್ರನಿಭೇಕ್ಷಣಃ।
07030026c ಪ್ರಾಂಶುರುತ್ಪಲಗರ್ಭಾಭೋ ನಿಹತೋ ನ್ಯಪತತ್ ಕ್ಷಿತೌ।।

ಪೂರ್ಣಚಂದ್ರನಿಗೆ ಸಮಾನ ಮುಖಕಾಂತಿಯನ್ನು ಹೊಂದಿದ್ದ, ಕವಲದಳಸದೃಶವಾದ ಕಣ್ಣುಗಳಿಂದ ವಿರಾಜಿಸುತ್ತಿದ್ದ, ಉನ್ನತಾಕಾರವಾಗಿದ್ದ, ಕನ್ನೈದಿಲಿಗೆ ಸಮಾನ ಕಾಂತಿಯುಕ್ತನಾಗಿದ್ದ ನೀಲನು ಹತನಾಗಿ ಭೂಮಿಯ ಮೇಲೆ ಬಿದ್ದನು.

07030027a ತತಃ ಪ್ರವಿವ್ಯಥೇ ಸೇನಾ ಪಾಂಡವೀ ಭೃಶಮಾಕುಲಾ।
07030027c ಆಚಾರ್ಯಪುತ್ರೇಣ ಹತೇ ನೀಲೇ ಜ್ವಲಿತತೇಜಸಿ।।

ಆಚಾರ್ಯಪುತ್ರನಿಂದ ಜ್ವಲಿತತೇಜಸ್ವಿ ನೀಲನು ಹತನಾಗಲು ಬಹಳವಾಗಿ ವ್ಯಾಕುಲಗೊಂಡ ಪಾಂಡವ ಸೇನೆಯು ದುಃಖಿಸಿತು.

07030028a ಅಚಿಂತಯಂಶ್ಚ ತೇ ಸರ್ವೇ ಪಾಂಡವಾನಾಂ ಮಹಾರಥಾಃ।
07030028c ಕಥಂ ನೋ ವಾಸವಿಸ್ತ್ರಾಯಾಚ್ಚತ್ರುಭ್ಯ ಇತಿ ಮಾರಿಷ।।

ಮಾರಿಷ! “ವಾಸವಿಯು ಹೇಗೆ ನಮ್ಮನ್ನು ಶತ್ರುಗಳಿಂದ ರಕ್ಷಸಿಸುತ್ತಾನೆ?” ಎಂದು ಪಾಂಡವರ ಮಹಾರಥರೆಲ್ಲರೂ ಚಿಂತಿಸತೊಡಗಿದರು.

07030029a ದಕ್ಷಿಣೇನ ತು ಸೇನಾಯಾಃ ಕುರುತೇ ಕದನಂ ಬಲೀ।
07030029c ಸಂಶಪ್ತಕಾವಶೇಷಸ್ಯ ನಾರಾಯಣಬಲಸ್ಯ ಚ।।

ಆದರೆ ಆ ಬಲಶಾಲಿಯು ದಕ್ಷಿಣ ಭಾಗದಲ್ಲಿ ಅಳಿದುಳಿದ ಸಂಶಪ್ತಕ ಮತ್ತು ನಾರಾಯಣ ಸೇನೆಗಳೊಂದಿಗೆ ಕದನವಾಡುತ್ತಿದ್ದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ನೀಲವಧೇ ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ನೀಲವಧ ಎನ್ನುವ ಮೂವತ್ತನೇ ಅಧ್ಯಾಯವು.