ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಸಂಶಪ್ತಕವಧ ಪರ್ವ
ಅಧ್ಯಾಯ 29
ಸಾರ
ಸುಬಲನ ಮಕ್ಕಳಾದ ವೃಷಕ ಮತ್ತು ಅಚಲರನ್ನು ಅರ್ಜುನನು ವಧಿಸಿದುದು (1-13). ಅರ್ಜುನನೊಡನೆ ಶಕುನಿಯ ಮಾಯಾಯುದ್ಧ; ಶಕುನಿಯ ಪಲಾಯನ (14-41).
07029001 ಸಂಜಯ ಉವಾಚ।
07029001a ಪ್ರಿಯಮಿಂದ್ರಸ್ಯ ಸತತಂ ಸಖಾಯಮಮಿತೌಜಸಂ।
07029001c ಹತ್ವಾ ಪ್ರಾಗ್ಜ್ಯೋತಿಷಂ ಪಾರ್ಥಃ ಪ್ರದಕ್ಷಿಣಮವರ್ತತ।।
ಸಂಜಯನು ಹೇಳಿದನು: “ಸತತವೂ ಇಂದ್ರನ ಪ್ರಿಯನಾಗಿದ್ದ ಸಖ ಅಮಿತೌಜಸ ಪ್ರಾಗ್ಜ್ಯೋತಿಷನನ್ನು ಸಂಹರಿಸಿ ಪಾರ್ಥನು ಪ್ರದಕ್ಷಿಣಾಕಾರವಾಗಿ ಹಿಂದಿರುಗಿದನು.
07029002a ತತೋ ಗಾಂಧಾರರಾಜಸ್ಯ ಸುತೌ ಪರಪುರಂಜಯೌ।
07029002c ಆರ್ಚೇತಾಮರ್ಜುನಂ ಸಂಖ್ಯೇ ಭ್ರಾತರೌ ವೃಷಕಾಚಲೌ।।
ಆಗ ಗಾಂಧಾರರಾಜನ ಮಕ್ಕಳು, ಪರಪುರಂಜಯ ಸಹೋದರರಾದ ವೃಷಕ ಮತ್ತು ಅಚಲರಿಬ್ಬರೂ ರಣದಲ್ಲಿ ಅರ್ಜುನನ ಮೇಲೆ ಬಾಣಗಳನ್ನು ಪ್ರಯೋಗಿಸಿದರು.
07029003a ತೌ ಸಮೇತ್ಯಾರ್ಜುನಂ ವೀರೌ ಪುರಃ ಪಶ್ಚಾಚ್ಚ ಧನ್ವಿನೌ।
07029003c ಅವಿಧ್ಯೇತಾಂ ಮಹಾವೇಗೈರ್ನಿಶಿತೈರಾಶುಗೈರ್ಭೃಶಂ।।
ಆ ಇಬ್ಬರು ವೀರ ಧನ್ವಿಗಳೂ ಅರ್ಜುನನ ಮುಂದೆ ಮತ್ತು ಹಿಂದಿನಿಂದ ಮಹಾವೇಗದಿಂದ ನಿಶಿತ ಆಶುಗಗಳಿಂದ ತುಂಬಾ ಹೊಡೆದು ಗಾಯಗೊಳಿಸಿದರು.
07029004a ವೃಷಕಸ್ಯ ಹಯಾನ್ಸೂತಂ ಧನುಶ್ಚತ್ರಂ ರಥಂ ಧ್ವಜಂ।
07029004c ತಿಲಶೋ ವ್ಯಧಮತ್ಪಾರ್ಥಃ ಸೌಬಲಸ್ಯ ಶಿತೈಃ ಶರೈಃ।।
ಪಾರ್ಥನು ಹರಿತ ಬಾಣಗಳಿಂದ ಸೌಬಲನ ಮಗ ವೃಷಕನ ಕುದುರೆಗಳನ್ನೂ, ಸೂತನನ್ನೂ ಕೊಂದು ಧನುಸ್ಸನ್ನೂ, ಚತ್ರವನ್ನೂ, ರಥವನ್ನೂ, ಧ್ವಜವನ್ನೂ ಕತ್ತರಿಸಿದನು.
07029005a ತತೋಽರ್ಜುನಃ ಶರವ್ರಾತೈರ್ನಾನಾಪ್ರಹರಣೈರಪಿ।
07029005c ಗಾಂಧಾರಾನ್ವ್ಯಾಕುಲಾಂಶ್ಚಕ್ರೇ ಸೌಬಲಪ್ರಮುಖಾನ್ಪುನಃ।।
ಆಗ ಅರ್ಜುನನು ಬಾಣಗಳ ಮಳೆಯಿಂದಲೂ ನಾನಾ ವಿಧದ ಶಸ್ತ್ರಪ್ರಹಾರಗಳಿಂದ ಪುನಃ ಪುನಃ ಸೌಬಲಪ್ರಮುಖ ಗಾಂಧಾರರನ್ನು ವ್ಯಾಕುಲಗೊಳಿಸಿದನು.
07029006a ತತಃ ಪಂಚಶತಾನ್ವೀರಾನ್ಗಾಂಧಾರಾನುದ್ಯತಾಯುಧಾನ್।
07029006c ಪ್ರಾಹಿಣೋನ್ಮೃತ್ಯುಲೋಕಾಯ ಕ್ರುದ್ಧೋ ಬಾಣೈರ್ಧನಂಜಯಃ।।
ಆಗ ಆಯುಧಗಳನ್ನು ಹಿಡಿದು ಆಕ್ರಮಣ ಮಾಡುತ್ತಿದ್ದ ಐನೂರು ಗಾಂಧಾರವೀರರನ್ನು ಧನಂಜಯನು ಕ್ರುದ್ಧನಾಗಿ ಮೃತ್ಯುಲೋಕಕ್ಕೆ ಕಳುಹಿಸಿದನು.
07029007a ಹತಾಶ್ವಾತ್ತು ರಥಾತ್ತೂರ್ಣಮವತೀರ್ಯ ಮಹಾಭುಜಃ।
07029007c ಆರುರೋಹ ರಥಂ ಭ್ರಾತುರನ್ಯಚ್ಚ ಧನುರಾದದೇ।।
ಕುದುರೆಗಳು ಹತವಾಗಲು ತಕ್ಷಣವೇ ಆ ಮಹಾಭುಜ ವೃಷಕನು ರಥದಿಂದ ಇಳಿದು ಸಹೋದರ ಅಚಲನ ರಥವನ್ನೇರಿ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.
07029008a ತಾವೇಕರಥಮಾರೂಢೌ ಭ್ರಾತರೌ ವೃಷಕಾಚಲೌ।
07029008c ಶರವರ್ಷೇಣ ಬೀಭತ್ಸುಮವಿಧ್ಯೇತಾಂ ಪುನಃ ಪುನಃ।।
ಅವರಿಬ್ಬರು ಸಹೋದರ ವೃಷಕ-ಅಚಲರು ಶರವರ್ಷಗಳಿಂದ ಪುನಃ ಪುನಃ ಬೀಭತ್ಸುವನ್ನು ಆಕ್ರಮಣಿಸಿದರು.
07029009a ಸ್ಯಾಲೌ ತವ ಮಹಾತ್ಮಾನೌ ರಾಜಾನೌ ವೃಷಕಾಚಲೌ।
07029009c ಭೃಶಂ ನಿಜಘ್ನತುಃ ಪಾರ್ಥಮಿಂದ್ರಂ ವೃತ್ರಬಲಾವಿವ।।
ಮಹಾತ್ಮರಾದ ನಿನ್ನ ಬಾವನ ಮಕ್ಕಳಾದ ರಾಜಕುಮಾರ ವೃಷಕ-ಅಚಲರಿಬ್ಬರೂ ವೃತ್ರ-ಬಲರು ಇಂದ್ರನನ್ನು ಹೇಗೋ ಹಾಗೆ ಪಾರ್ಥನನ್ನು ಚೆನ್ನಾಗಿ ಗಾಯಗೊಳಿಸಿದರು.
07029010a ಲಬ್ಧಲಕ್ಷ್ಯೌ ತು ಗಾಂಧಾರಾವಹತಾಂ ಪಾಂಡವಂ ಪುನಃ।
07029010c ನಿದಾಘವಾರ್ಷಿಕೌ ಮಾಸೌ ಲೋಕಂ ಘರ್ಮಾಂಬುಭಿರ್ಯಥಾ।।
ಆಷಾಢ-ಶ್ರಾವಣ ಮಾಸಗಳು ಹೇಗೆ ಉರಿಯುವ ಕಿರಣಗಳಿಂದ ಲೋಕವನ್ನು ತಾಪಗೊಳಿಸುತ್ತವೆಯೋ ಹಾಗೆ ಲಕ್ಷ್ಯಭೇದದಲ್ಲಿ ಸಿದ್ಧಹಸ್ತರಾದ ಆ ಗಾಂಧಾರರು ಪಾಂಡವನನ್ನು ಪುನಃ ಪುನಃ ಬಾಣಗಳಿಂದ ಪ್ರಹರಿಸಿದರು.
07029011a ತೌ ರಥಸ್ಥೌ ನರವ್ಯಾಘ್ರೌ ರಾಜಾನೌ ವೃಷಕಾಚಲೌ।
07029011c ಸಂಶ್ಲಿಷ್ಟಾಂಗೌ ಸ್ಥಿತೌ ರಾಜನ್ಜಘಾನೈಕೇಷುಣಾರ್ಜುನಃ।।
ರಾಜನ್! ರಥದಲ್ಲಿ ಒಬ್ಬರಿಗೊಬ್ಬರು ತಾಗಿಕೊಂಡೇ ನಿಂತಿದ್ದ ಆ ಇಬ್ಬರು ನರವ್ಯಾಘ್ರ ರಾಜಕುಮಾರ ವೃಷಕ-ಅಚಲರಿಬ್ಬರನ್ನೂ ಅರ್ಜುನನು ಒಂದೇ ಒಂದು ಬಾಣದಿಂದ ಪ್ರಹರಿಸಿದನು.
07029012a ತೌ ರಥಾತ್ ಸಿಂಹಸಂಕಾಶೌ ಲೋಹಿತಾಕ್ಷೌ ಮಹಾಭುಜೌ।
07029012c ಗತಾಸೂ ಪೇತತುರ್ವೀರೌ ಸೋದರ್ಯಾವೇಕಲಕ್ಷಣೌ।।
ಸಿಂಹಗಳಂತಿದ್ದ, ಕೆಂಪುಗಣ್ಣುಳ್ಳವರಾಗಿದ್ದ, ಒಂದೇ ದೇಹಲಕ್ಷಣಗಳನ್ನು ಹೊಂದಿದ್ದ ಆ ಇಬ್ಬರು ವೀರ ಮಹಾಭುಜ ಸೋದರರಿಬ್ಬರೂ ಅಸುನೀಗಿ ರಥದಿಂದ ಕೆಳಗೆ ಬಿದ್ದರು.
07029013a ತಯೋರ್ದೇಹೌ ರಥಾದ್ಭೂಮಿಂ ಗತೌ ಬಂಧುಜನಪ್ರಿಯೌ।
07029013c ಯಶೋ ದಶ ದಿಶಃ ಪುಣ್ಯಂ ಗಮಯಿತ್ವಾ ವ್ಯವಸ್ಥಿತೌ।।
ಬಂಧುಜನರಿಗೆ ಪ್ರಿಯರಾದ ಅವರ ದೇಹಗಳು ತಮ್ಮ ಪುಣ್ಯ ಯಶಸ್ಸನ್ನು ಹತ್ತು ದಿಕ್ಕ್ಕುಗಳಲ್ಲಿಯೂ ಪಸರಿಸಿ ರಥದಿಂದ ಭೂಮಿಯ ಮೇಲೆ ಬಿದ್ದು ಮಲಗಿದವು.
07029014a ದೃಷ್ಟ್ವಾ ವಿನಿಹತೌ ಸಂಖ್ಯೇ ಮಾತುಲಾವಪಲಾಯಿನೌ।
07029014c ಭೃಶಂ ಮುಮುಚುರಶ್ರೂಣಿ ಪುತ್ರಾಸ್ತವ ವಿಶಾಂ ಪತೇ।।
ವಿಶಾಂಪತೇ! ಪಲಾಯನಗೈಯದೇ ರಣದಲ್ಲಿ ಹತರಾದ ಸೋದರ ಮಾವಂದಿರನ್ನು ನೋಡಿ ನಿನ್ನ ಮಕ್ಕಳು ಬಹಳವಾಗಿ ಕಣ್ಣೀರು ಸುರಿಸಿದರು.
07029015a ನಿಹತೌ ಭ್ರಾತರೌ ದೃಷ್ಟ್ವಾ ಮಾಯಾಶತವಿಶಾರದಃ।
07029015c ಕೃಷ್ಣೌ ಸಮ್ಮೋಹಯನ್ಮಾಯಾಂ ವಿದಧೇ ಶಕುನಿಸ್ತತಃ।।
ಆಗ ತನ್ನ ಸಹೋದರರು ಹತರಾದುದನ್ನು ನೋಡಿ ನೂರಾರು ಮಾಯೆಗಳ ವಿಶಾರದ ಶಕುನಿಯು ಮಾಯೆಗಳನ್ನು ಬಳಸಿ ಕೃಷ್ಣರಿಬ್ಬರನ್ನೂ ಸಮ್ಮೋಹಗೊಳಿಸತೊಡಗಿದನು.
07029016a ಲಗುಡಾಯೋಗುಡಾಶ್ಮಾನಃ ಶತಘ್ನ್ಯಶ್ಚ ಸಶಕ್ತಯಃ।
07029016c ಗದಾಪರಿಘನಿಸ್ತ್ರಿಂಶಶೂಲಮುದ್ಗರಪಟ್ಟಿಶಾಃ।।
07029017a ಸಕಂಪನರ್ಷ್ಟಿನಖರಾ ಮುಸಲಾನಿ ಪರಶ್ವಧಾಃ।
07029017c ಕ್ಷುರಾಃ ಕ್ಷುರಪ್ರನಾಲೀಕಾ ವತ್ಸದಂತಾಸ್ತ್ರಿಸಂಧಿನಃ।।
07029018a ಚಕ್ರಾಣಿ ವಿಶಿಖಾಃ ಪ್ರಾಸಾ ವಿವಿಧಾನ್ಯಾಯುಧಾನಿ ಚ।
07029018c ಪ್ರಪೇತುಃ ಸರ್ವತೋ ದಿಗ್ಭ್ಯಃ ಪ್ರದಿಗ್ಭ್ಯಶ್ಚಾರ್ಜುನಂ ಪ್ರತಿ।।
ದೊಣ್ಣೆಗಳು, ಕಬ್ಬಿಣದ ಸಲಾಕೆಗಳು, ಕಲ್ಲುಗಳು, ಶತಘ್ನಿಗಳು, ಶಕ್ತಿಗಳು, ಗದೆಗಳು, ಪರಿಘಗಳು, ಖಡ್ಗಗಳು, ಶೂಲಗಳು, ಮುದ್ಗರ-ಪಟ್ಟಿಷಗಳು, ಕಂಪನಗಳು, ಋಷ್ಟಿಗಳು, ನಖರಗಳು, ಮುಸಲಗಳು, ಪರಶುಗಳು, ಕ್ಷುರಗಳು, ಕ್ಷುರಪ್ರನಾಲೀಕಗಳು, ವತ್ಸದಂತಿಗಳು, ಅಸ್ಥಿಸಂಧಿಗಳು, ಚಕ್ರಗಳು, ಬಾಣಗಳು, ಪ್ರಾಸಗಳು, ಮತ್ತು ವಿವಿಧ ಆಯುಧಗಳು ಎಲ್ಲ ದಿಕ್ಕು-ಉಪ ದಿಕ್ಕ್ಕುಗಳಿಂದ ಅರ್ಜುನನ ಮೇಲೆ ಬಂದು ಬೀಳತೊಡಗಿದವು.
07029019a ಖರೋಷ್ಟ್ರಮಹಿಷಾಃ ಸಿಂಹಾ ವ್ಯಾಘ್ರಾಃ ಸೃಮರಚಿಲ್ಲಿಕಾಃ।
07029019c ಋಕ್ಷಾಃ ಸಾಲಾವೃಕಾ ಗೃಧ್ರಾಃ ಕಪಯೋಽಥ ಸರೀಸೃಪಾಃ।।
07029020a ವಿವಿಧಾನಿ ಚ ರಕ್ಷಾಂಸಿ ಕ್ಷುಧಿತಾನ್ಯರ್ಜುನಂ ಪ್ರತಿ।
07029020c ಸಂಕ್ರುದ್ಧಾನ್ಯಭ್ಯಧಾವಂತ ವಿವಿಧಾನಿ ವಯಾಂಸಿ ಚ।।
ಕತ್ತೆಗಳು, ಒಂಟೆಗಳು, ಕೋಣಗಳು, ಸಿಂಹಗಳು, ಹುಲಿಗಳು, ಬೆಟ್ಟದ ಹಸುಗಳು, ಚಿರತೆಗಳು, ಕರಡಿಗಳು, ಹದ್ದುಗಳು, ಕಪಿಗಳು, ಹಾವುಗಳು, ಮತ್ತು ವಿವಿಧ ಪಕ್ಷಿಗಳು ಹಸಿವಿನಿಂದ ಬಳಲಿ ಸಂಕ್ರುದ್ಧರಾಗಿ ಅರ್ಜುನನ ಕಡೆ ಧಾವಿಸಿ ಬಂದವು.
07029021a ತತೋ ದಿವ್ಯಾಸ್ತ್ರವಿಚ್ಚೂರಃ ಕುಂತೀಪುತ್ರೋ ಧನಂಜಯಃ।
07029021c ವಿಸೃಜನ್ನಿಷುಜಾಲಾನಿ ಸಹಸಾ ತಾನ್ಯತಾಡಯತ್।।
ಆಗ ದಿವ್ಯಾಸ್ತ್ರಗಳನ್ನು ತಿಳಿದಿದ್ದ ಶೂರ ಕುಂತೀಪುತ್ರ ಧನಂಜಯನು ತಕ್ಷಣವೇ ಬಾಣಗಳ ಜಾಲಗಳನ್ನು ಪ್ರಯೋಗಿಸಿ ಅವುಗಳನ್ನು ನಾಶಗೊಳಿಸಿದನು.
07029022a ತೇ ಹನ್ಯಮಾನಾಃ ಶೂರೇಣ ಪ್ರವರೈಃ ಸಾಯಕೈರ್ದೃಢೈಃ।
07029022c ವಿರುವಂತೋ ಮಹಾರಾವಾನ್ವಿನೇಶುಃ ಸರ್ವತೋ ಹತಾಃ।।
ಆ ಶೂರನ ಪ್ರವರ ದೃಢ ಸಾಯಕಗಳಿಂದ ಗಾಯಗೊಂಡ ಅವುಗಳೆಲ್ಲವೂ ಮಹಾರವದಲ್ಲಿ ಕೂಗುತ್ತಾ ಹತಗೊಂಡು ಬಿದ್ದು ನಾಶಗೊಂಡವು.
07029023a ತತಸ್ತಮಃ ಪ್ರಾದುರಭೂದರ್ಜುನಸ್ಯ ರಥಂ ಪ್ರತಿ।
07029023c ತಸ್ಮಾಚ್ಚ ತಮಸೋ ವಾಚಃ ಕ್ರೂರಾಃ ಪಾರ್ಥಮಭರ್ತ್ಸಯನ್।।
ಆಗ ಅರ್ಜುನನ ರಥದ ಸುತ್ತಲೂ ಕತ್ತಲೆಯುಂಟಾಯಿತು. ಆ ಕತ್ತಲೆಯಲ್ಲಿ ಕ್ರೂರ ಮಾತುಗಳು ಪಾರ್ಥನನ್ನು ಬೆದರಿಸಿದವು.
07029024a ತತ್ತಮೋಽಸ್ತ್ರೇಣ ಮಹತಾ ಜ್ಯೋತಿಷೇಣಾರ್ಜುನೋಽವಧೀತ್।
07029024c ಹತೇ ತಸ್ಮಿನ್ಜಲೌಘಾಸ್ತು ಪ್ರಾದುರಾಸನ್ಭಯಾನಕಾಃ।।
ಆಗ ಅರ್ಜುನನು ಆ ಮಹಾ ಕತ್ತಲೆಯನ್ನು ಜ್ಯೋತಿಷಾಸ್ತ್ರದಿಂದ ನಿರಸನಗೊಳಿಸಿದನು. ಅದು ನಾಶಗೊಳ್ಳಲು ಭಯಾನಕವಾದ ಜಲರಾಶಿಯು ಅವನನ್ನು ಆವರಿಸಿತು.
07029025a ಅಂಭಸಸ್ತಸ್ಯ ನಾಶಾರ್ಥಮಾದಿತ್ಯಾಸ್ತ್ರಮಥಾರ್ಜುನಃ।
07029025c ಪ್ರಾಯುಂಕ್ತಾಂಭಸ್ತತಸ್ತೇನ ಪ್ರಾಯಶೋಽಸ್ತ್ರೇಣ ಶೋಷಿತಂ।।
ಆ ನೀರಿನ ವಿನಾಶಕ್ಕಾಗಿ ಅರ್ಜುನನು ಆದಿತ್ಯಾಸ್ತ್ರವನ್ನು ಪ್ರಯೋಗಿಸಿದನು. ಆ ಅಸ್ತ್ರದಿಂದ ಜಲರಾಶಿಯೆಲ್ಲವೂ ಶೋಷಿತವಾಯಿತು.
07029026a ಏವಂ ಬಹುವಿಧಾ ಮಾಯಾಃ ಸೌಬಲಸ್ಯ ಕೃತಾಃ ಕೃತಾಃ।
07029026c ಜಘಾನಾಸ್ತ್ರಬಲೇನಾಶು ಪ್ರಹಸನ್ನರ್ಜುನಸ್ತದಾ।।
ಹೀಗೆ ಸೌಬಲನು ಮಾಡಿದ ಬಹುವಿಧದ ಮಾಯೆಗಳನ್ನು ಅರ್ಜುನನು ನಗುತ್ತಾ ಅಸ್ತ್ರಬಲದಿಂದ ನಾಶಪಡಿಸಿದನು.
07029027a ತಥಾ ಹತಾಸು ಮಾಯಾಸು ತ್ರಸ್ತೋಽರ್ಜುನಶರಾಹತಃ।
07029027c ಅಪಾಯಾಜ್ಜವನೈರಶ್ವೈಃ ಶಕುನಿಃ ಪ್ರಾಕೃತೋ ಯಥಾ।।
ಹಾಗೆ ಮಾಯೆಗಳು ನಾಶಗೊಳ್ಳಲು, ಅರ್ಜುನನ ಶರಗಳ ಪೆಟ್ಟಿನಿಂದ ತ್ರಸ್ತನಾದ ಶಕುನಿಯು ಪ್ರಾಕೃತನಂತೆ ವೇಗ ಕುದುರೆಗಳೊಂದಿಗೆ ಪಲಾಯನಗೈದನು.
07029028a ತತೋಽರ್ಜುನೋಽಸ್ತ್ರವಿಚ್ಚ್ರೈಷ್ಠ್ಯಂ ದರ್ಶಯನ್ನಾತ್ಮನೋಽರಿಷು।
07029028c ಅಭ್ಯವರ್ಷಚ್ಚರೌಘೇಣ ಕೌರವಾಣಾಮನೀಕಿನೀಂ।।
ಆಗ ಅರ್ಜುನನು ಅರಿಗಳ ಮಧ್ಯೆ ತನ್ನಲ್ಲಿದ್ದ ಅಸ್ತ್ರಗಳ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತಾ ಕೌರವರ ಸೇನೆಗಳನ್ನು ಶರೌಘಗಳಿಂದ ಮುಚ್ಚಿದನು.
07029029a ಸಾ ಹನ್ಯಮಾನಾ ಪಾರ್ಥೇನ ಪುತ್ರಸ್ಯ ತವ ವಾಹಿನೀ।
07029029c ದ್ವೈಧೀಭೂತಾ ಮಹಾರಾಜ ಗಂಗೇವಾಸಾದ್ಯ ಪರ್ವತಂ।।
ಮಹಾರಾಜ! ಪಾರ್ಥನಿಂದ ನಾಶಗೊಳ್ಳುತ್ತಿದ್ದ ನಿನ್ನ ಮಗನ ಸೇನೆಯು ಗಂಗಾನದಿಯು ಪರ್ವತವನ್ನು ಸಮೀಪಿಸಿದಾಗ ಎರಡಾಗಿ ಕವಲೊಡೆಯುವಂತೆ ಇಬ್ಬಾಗಗೊಂಡಿತು.
07029030a ದ್ರೋಣಂ ಏವಾನ್ವಪದ್ಯಂತ ಕೇ ಚಿತ್ತತ್ರ ಮಹಾರಥಾಃ।
07029030c ಕೇ ಚಿದ್ದುರ್ಯೋಧನಂ ರಾಜನ್ನರ್ದ್ಯಮಾನಾಃ ಕಿರೀಟಿನಾ।।
ರಾಜನ್! ಕಿರೀಟಿಯಿಂದ ಪೀಡಿತರಾದ ಕೆಲವರು ದ್ರೋಣನನ್ನು ಮೊರೆಹೊಕ್ಕರು. ಇನ್ನು ಕೆಲವರು ದುರ್ಯೋಧನನನ್ನು ಮೊರೆಹೊಕ್ಕರು.
07029031a ನಾಪಶ್ಯಾಮ ತತಸ್ತ್ವೇತತ್ಸೈನ್ಯಂ ವೈ ತಮಸಾವೃತಂ।
07029031c ಗಾಂಡೀವಸ್ಯ ಚ ನಿರ್ಘೋಷಃ ಶ್ರುತೋ ದಕ್ಷಿಣತೋ ಮಯಾ।।
ಅಲ್ಲಿಂದಿಲ್ಲಿಗೆ ಓಡುವುದರಿಂದುಂಟಾದ ಧೂಳಿನಿಂದ ಸೈನ್ಯದಲ್ಲಿ ಕತ್ತಲೆಯು ಕವಿದು ಅರ್ಜುನನೇ ಕಾಣದಂತಾದನು. ಆದರೆ ನಾನು ಗಾಂಡೀವದ ನಿರ್ಘೋಷವನ್ನು ಪದೇ ಪದೇ ಕೇಳುತ್ತಿದ್ದೆನು.
07029032a ಶಂಖದುಂದುಭಿನಿರ್ಘೋಷಂ ವಾದಿತ್ರಾಣಾಂ ಚ ನಿಸ್ವನಂ।
07029032c ಗಾಂಡೀವಸ್ಯ ಚ ನಿರ್ಘೋಷೋ ವ್ಯತಿಕ್ರಮ್ಯಾಸ್ಪೃಶದ್ದಿವಂ।।
ಶಂಖದುಂದುಭಿಗಳ ನಿರ್ಘೋಷ ಮತ್ತು ವಾದ್ಯಗಳ ಸ್ವರಗಳನ್ನೂ ಮೀರಿಸಿ ಗಾಂಡೀವದ ನಿರ್ಘೋಷವು ದಿವಿಯನ್ನು ತಲುಪಿತು.
07029033a ತತಃ ಪುನರ್ದಕ್ಷಿಣತಃ ಸಂಗ್ರಾಮಶ್ಚಿತ್ರಯೋಧಿನಾಂ।
07029033c ಸುಯುದ್ಧಮರ್ಜುನಸ್ಯಾಸೀದಹಂ ತು ದ್ರೋಣಮನ್ವಗಾಂ।।
ಆಗ ಪುನಃ ದಕ್ಷಿಣಭಾಗದಲ್ಲಿ ದ್ರೋಣನನ್ನು ಅನುಸರಿಸುತ್ತಿದ್ದ ಚಿತ್ರ ಯೋಧಿಗಳೊಂದಿಗೆ ಅರ್ಜುನನ ಉತ್ತಮ ಸಂಗ್ರಾಮವು ನಡೆಯಿತು.
07029034a ನಾನಾವಿಧಾನ್ಯನೀಕಾನಿ ಪುತ್ರಾಣಾಂ ತವ ಭಾರತ।
07029034c ಅರ್ಜುನೋ ವ್ಯಧಮತ್ಕಾಲೇ ದಿವೀವಾಭ್ರಾಣಿ ಮಾರುತಃ।।
ಭಾರತ! ನಿನ್ನ ಪುತ್ರರ ನಾನಾ ವಿಧದ ಸೇನೆಗಳನ್ನು ಭಿರುಗಾಳಿಯು ಆಕಾಶದಲ್ಲಿ ಮೋಡಗಳನ್ನು ಚದುರಿಸುವಂತೆ ಅರ್ಜುನನು ನಾಶಗೊಳಿಸಿದನು.
07029035a ತಂ ವಾಸವಮಿವಾಯಾಂತಂ ಭೂರಿವರ್ಷಶರೌಘಿಣಂ।
07029035c ಮಹೇಷ್ವಾಸಂ ನರವ್ಯಾಘ್ರಂ ನೋಗ್ರಂ ಕಶ್ಚಿದವಾರಯತ್।।
ಅಂತಕನಂತೆ ಜೋರಾಗಿ ಬಾಣಗಳ ಮಳೆಯನ್ನು ಸುರಿಸುತ್ತಿದ್ದ ಆ ವಾಸವ ಮಹೇಷ್ವಾಸ ನರವ್ಯಾಘ್ರ ಉಗ್ರನನ್ನು ಯಾರೂ ತಡೆಯಲಿಲ್ಲ.
07029036a ತೇ ಹನ್ಯಮಾನಾಃ ಪಾರ್ಥೇನ ತ್ವದೀಯಾ ವ್ಯಥಿತಾ ಭೃಶಂ।
07029036c ಸ್ವಾನೇವ ಬಹವೋ ಜಘ್ನುರ್ವಿದ್ರವಂತಸ್ತತಸ್ತತಃ।।
ಪಾರ್ಥರಿಂದ ಹತರಾದ ನಿನ್ನವರು ತುಂಬಾ ವ್ಯಥಿತರಾದರು. ಪಲಾಯನ ಮಾಡುತ್ತಿದ್ದವರು ಬಹಳಷ್ಟು ತಮ್ಮವರನ್ನೇ ನಾಶಗೊಳಿಸಿದರು.
07029037a ತೇಽರ್ಜುನೇನ ಶರಾ ಮುಕ್ತಾಃ ಕಂಕಪತ್ರಾಸ್ತನುಚ್ಚಿದಃ।
07029037c ಶಲಭಾ ಇವ ಸಂಪೇತುಃ ಸಂವೃಣ್ವಾನಾ ದಿಶೋ ದಶ।।
ಅರ್ಜುನನಿಂದ ಬಿಡಲ್ಪಟ್ಟು ದೇಹಗಳನ್ನು ತುಂಡರಿಸುತ್ತಿದ್ದ ಕಂಕಪತ್ರಗಳು ಮಿಡತೆಗಳೋಪಾದಿಯಲ್ಲಿ ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿ ಬೀಳುತ್ತಿದ್ದವು.
07029038a ತುರಗಂ ರಥಿನಂ ನಾಗಂ ಪದಾತಿಮಪಿ ಮಾರಿಷ।
07029038c ವಿನಿರ್ಭಿದ್ಯ ಕ್ಷಿತಿಂ ಜಗ್ಮುರ್ವಲ್ಮೀಕಮಿವ ಪನ್ನಗಾಃ।।
ಮಾರಿಷ! ಅವುಗಳು ಆನೆ-ಕುದುರೆ-ಪದಾತಿ-ರಥಿಗಳನ್ನು ಭೇದಿಸಿ ಹಾವುಗಳು ಹುತ್ತವನ್ನು ಪ್ರವೇಶಿಸುವಂತೆ ನೆಲವನ್ನು ಹೊಗುತ್ತಿದ್ದವು.
07029039a ನ ಚ ದ್ವಿತೀಯಂ ವ್ಯಸೃಜತ್ಕುಂಜರಾಶ್ವನರೇಷು ಸಃ।
07029039c ಪೃಥಗೇಕಶರಾರುಗ್ಣಾ ನಿಪೇತುಸ್ತೇ ಗತಾಸವಃ।।
ಅವನು ಆನೆ-ಕುದುರೆ-ಮನುಷ್ಯರ ಮೇಲೆ ಎರಡನೆಯ ಬಾಣವನ್ನು ಬಿಡುತ್ತಿರಲಿಲ್ಲ. ಅವನ ಒಂದೊಂದು ಬಾಣದಿಂದಲೂ ಗಾಯಗೊಂಡು ಅಸುನೀಗಿ ಬೀಳುತ್ತಿದ್ದರು.
07029040a ಹತೈರ್ಮನುಷ್ಯೈಸ್ತುರಗೈಶ್ಚ ಸರ್ವತಃ ಶರಾಭಿವೃಷ್ಟೈರ್ ದ್ವಿರದೈಶ್ಚ ಪಾತಿತೈಃ।
07029040c ತದಾ ಶ್ವಗೋಮಾಯುಬಡಾಭಿನಾದಿತಂ ವಿಚಿತ್ರಮಾಯೋಧಶಿರೋ ಬಭೂವ ಹ।।
ಶರವೃಷ್ಟಿಯಿಂದ ಹತರಾದ ಮನುಷ್ಯ-ಕುದುರೆ-ಆನೆಗಳು ಬಿದ್ದು ರಣರಂಗವು ತುಂಬಿಹೋಯಿತು. ಹೆಣಗಳನ್ನು ತಿನ್ನಲು ಬಂದ ನಾಯಿ ಗುಳ್ಳೇನರಿಗಳ ಕೂಗಿನಿಂದ ರಣರಂಗದ ಮಧ್ಯಭಾಗವು ವಿಚಿತ್ರವಾಗಿ ತೋರಿತು.
07029041a ಪಿತಾ ಸುತಂ ತ್ಯಜತಿ ಸುಹೃದ್ವರಂ ಸುಹೃತ್ ತಥೈವ ಪುತ್ರಃ ಪಿತರಂ ಶರಾತುರಃ।
07029041c ಸ್ವರಕ್ಷಣೇ ಕೃತಮತಯಸ್ತದಾ ಜನಾಸ್ ತ್ಯಜಂತಿ ವಾಹಾನಪಿ ಪಾರ್ಥಪೀಡಿತಾಃ।।
ಶರಾತುರರಾಗಿ ತಂದೆಯು ಮಗನನ್ನು ತೊರೆಯುತ್ತಿದ್ದನು. ಸ್ನೇಹಿತರು ಸ್ನೇಹಿತರನ್ನು ತೊರೆಯುತ್ತಿದ್ದರು. ಮತ್ತು ಹಾಗೆಯೇ ಪುತ್ರರು ಪಿತ್ರುಗಳನ್ನು ತೊರೆಯುತ್ತಿದ್ದರು. ಪಾರ್ಥನಿಂದ ಪೀಡಿತರಾದ ಕೃತಮತರು ತಮ್ಮ ತಮ್ಮ ರಕ್ಷಣೆಯಲ್ಲಿ ವಾಹನಗಳನ್ನೂ ಬಿಟ್ಟು ಓಡುತ್ತಿದ್ದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಶಕುನಿಪಲಾಯನೇ ಏಕೋನತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಶಕುನಿಪಲಾಯನ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.