ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಸಂಶಪ್ತಕವಧ ಪರ್ವ
ಅಧ್ಯಾಯ 28
ಸಾರ
ಭಗದತ್ತವಧೆ (1-44).
07028001 ಧೃತರಾಷ್ಟ್ರ ಉವಾಚ।
07028001a ತಥಾ ಕ್ರುದ್ಧಃ ಕಿಮಕರೋದ್ಭಗದತ್ತಸ್ಯ ಪಾಂಡವಃ।
07028001c ಪ್ರಾಗ್ಜ್ಯೋತಿಷೋ ವಾ ಪಾರ್ಥಸ್ಯ ತನ್ಮೇ ಶಂಸ ಯಥಾತಥಂ।।
ಧೃತರಾಷ್ಟ್ರನು ಹೇಳಿದನು: “ಆಗ ಕ್ರುದ್ಧ ಪಾಂಡವನು ಭಗದತ್ತನಿಗೆ ಏನು ಮಾಡಿದನು? ಅಥವಾ ಪ್ರಾಗ್ಜ್ಯೋತಿಷನು ಪಾರ್ಥನಿಗೆ ಏನು ಮಾಡಿದನು? ಅದನ್ನು ನನಗೆ ನಡೆದಹಾಗೆ ಹೇಳು.”
07028002 ಸಂಜಯ ಉವಾಚ।
07028002a ಪ್ರಾಗ್ಜ್ಯೋತಿಷೇಣ ಸಂಸಕ್ತಾವುಭೌ ದಾಶಾರ್ಹಪಾಂಡವೌ।
07028002c ಮೃತ್ಯೋರಿವಾಂತಿಕಂ ಪ್ರಾಪ್ತೌ ಸರ್ವಭೂತಾನಿ ಮೇನಿರೇ।।
ಸಂಜಯನು ಹೇಳಿದನು: “ಪ್ರಾಗ್ಜ್ಯೋತಿಷನೊಡನೆ ಯುದ್ಧಮಾಡುತ್ತಿದ್ದ ದಾಶಾರ್ಹ-ಪಾಂಡವರಿಬ್ಬರೂ ಮೃತ್ಯುವಿನ ಬಳಿ ಹೋಗುತ್ತಿದ್ದಾರೆಂದು ಸರ್ವ ಭೂತಗಳೂ ಅಂದುಕೊಂಡವು.
07028003a ತಥಾ ಹಿ ಶರವರ್ಷಾಣಿ ಪಾತಯತ್ಯನಿಶಂ ಪ್ರಭೋ।
07028003c ಭಗದತ್ತೋ ಗಜಸ್ಕಂಧಾತ್ಕೃಷ್ಣಯೋಃ ಸ್ಯಂದನಸ್ಥಯೋಃ।।
ಹಾಗೆಯೇ ಪ್ರಭು ಭಗದತ್ತನು ಆನೆಯ ಭುಜದ ಮೇಲಿಂದ ರಥದಲ್ಲಿ ಕುಳಿತಿದ್ದ ಇಬ್ಬರು ಕೃಷ್ಣರ ಮೇಲೂ ತಡೆಯಿಲ್ಲದೇ ಶರವರ್ಷವನ್ನು ಸುರಿಸಿದನು.
07028004a ಅಥ ಕಾರ್ಷ್ಣಾಯಸೈರ್ಬಾಣೈಃ ಪೂರ್ಣಕಾರ್ಮುಕನಿಃಸೃತೈಃ।
07028004c ಅವಿಧ್ಯದ್ದೇವಕೀಪುತ್ರಂ ಹೇಮಪುಂಖೈಃ ಶಿಲಾಶಿತೈಃ।।
ಆಗ ಕಪ್ಪು ಉಕ್ಕಿನ ಹೇಮಪುಂಖದ ಶಿಲಾಶಿತ ಬಾಣವನ್ನು ಹೂಡಿ ಬಿಲ್ಲನ್ನು ಅಕರ್ಣಾಂತವಾಗಿ ಎಳೆದು ದೇವಕೀಪುತ್ರನನ್ನು ಹೊಡೆದನು.
07028005a ಅಗ್ನಿಸ್ಪರ್ಶಸಮಾಸ್ತೀಕ್ಷ್ಣಾ ಭಗದತ್ತೇನ ಚೋದಿತಾಃ।
07028005c ನಿರ್ಭಿದ್ಯ ದೇವಕೀಪುತ್ರಂ ಕ್ಷಿತಿಂ ಜಗ್ಮುಃ ಶರಾಸ್ತತಃ।।
ಭಗದತ್ತನು ಪ್ರಯೋಗಿಸಿದ, ಮುಟ್ಟಲು ಅಗ್ನಿಯಂತೆ ತೀಕ್ಷ್ಣವಾಗಿದ್ದ ಆ ಬಾಣವು ದೇವಕೀಪುತ್ರನನ್ನು ಬೇಧಿಸಿ ಭೂಮಿಯನ್ನು ಪ್ರವೇಶಿಸಿತು.
07028006a ತಸ್ಯ ಪಾರ್ಥೋ ಧನುಶ್ಚಿತ್ತ್ವಾ ಶರಾವಾಪಂ ನಿಹತ್ಯ ಚ।
07028006c ಲಾಡಯನ್ನಿವ ರಾಜಾನಂ ಭಗದತ್ತಮಯೋಧಯತ್।।
ಆಗ ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ, ಅಂಗರಕ್ಷಕರನ್ನೂ ಸಂಹರಿಸಿ, ರಾಜಾ ಭಗದತ್ತನನ್ನು ಅಣಗಿಸುವ ರೀತಿಯಲ್ಲಿ ಹೊಡೆದನು.
07028007a ಸೋಽರ್ಕರಶ್ಮಿನಿಭಾಂಸ್ತೀಕ್ಷ್ಣಾಂಸ್ತೋಮರಾನ್ವೈ ಚತುರ್ದಶ।
07028007c ಪ್ರೇರಯತ್ಸವ್ಯಸಾಚೀ ತಾಂಸ್ತ್ರಿಧೈಕೈಕಮಥಾಚ್ಚಿನತ್।।
ಅನಂತರ ಅವನು ಹದಿನಾಲ್ಕು ತೀಕ್ಷ್ಣ ಸೂರ್ಯನ ರಶ್ಮಿಗಳಂತಹ ತೋಮರಗಳನ್ನು ಪ್ರಯೋಗಿಸಲು, ಸವ್ಯಸಾಚಿಯು ಆ ಒಂದೊಂದನ್ನೂ ಎರೆಡೆರೆಡನ್ನಾಗಿ ಮಾಡಿ ಕತ್ತರಿಸಿದನು.
07028008a ತತೋ ನಾಗಸ್ಯ ತದ್ವರ್ಮ ವ್ಯಧಮತ್ಪಾಕಶಾಸನಿಃ।
07028008c ಶರಜಾಲೇನ ಸ ಬಭೌ ವ್ಯಭ್ರಃ ಪರ್ವತರಾಡಿವ।।
ಆಗ ಪಾಕಶಾಸನಿಯು ಶರಜಾಲದಿಂದ ಆನೆಯ ಕವಚವನ್ನು ಬೇಧಿಸಿದನು. ಅದು ಮೋಡಗಳಿಲ್ಲದ ಪರ್ವತದಂತೆ ಕಂಡಿತು.
07028009a ತತಃ ಪ್ರಾಗ್ಜ್ಯೋತಿಷಃ ಶಕ್ತಿಂ ಹೇಮದಂಡಾಮಯಸ್ಮಯೀಂ।
07028009c ವ್ಯಸೃಜದ್ವಾಸುದೇವಾಯ ದ್ವಿಧಾ ತಾಮರ್ಜುನೋಽಚ್ಚಿನತ್।।
ಆಗ ಪ್ರಾಗ್ಜ್ಯೋತಿಷನು ಉಕ್ಕಿನಿಂದ ರಚಿತವಾದ ಹೇಮದಂಡದ ಶಕ್ತಿಯನ್ನು ವಾಸುದೇವನ ಮೇಲೆ ಎಸೆಯಲು ಅರ್ಜುನನು ಅದನ್ನು ಎರಡಾಗಿ ತುಂಡರಿಸಿದನು.
07028010a ತತಶ್ಚತ್ರಂ ಧ್ವಜಂ ಚೈವ ಚಿತ್ತ್ವಾ ರಾಜ್ಞೋಽರ್ಜುನಃ ಶರೈಃ।
07028010c ವಿವ್ಯಾಧ ದಶಭಿಸ್ತೂರ್ಣಮುತ್ಸ್ಮಯನ್ಪರ್ವತಾಧಿಪಂ।।
ಆಗ ಅರ್ಜುನನು ಶರಗಳಿಂದ ರಾಜನ ಚತ್ರ-ಧ್ವಜಗಳನ್ನು ಕತ್ತರಿಸಿ, ತಕ್ಷಣವೇ ನಸುನಗುತ್ತಾ ಹತ್ತು ಬಾಣಗಳಿಂದ ಪರ್ವತಾಧಿಪನನ್ನು ಗಾಯಗೊಳಿಸಿದನು.
07028011a ಸೋಽತಿವಿದ್ಧೋಽರ್ಜುನಶರೈಃ ಸುಪುಂಖೈಃ ಕಂಕಪತ್ರಿಭಿಃ।
07028011c ಭಗದತ್ತಸ್ತತಃ ಕ್ರುದ್ಧಃ ಪಾಂಡವಸ್ಯ ಮಹಾತ್ಮನಃ।।
07028012a ವ್ಯಸೃಜತ್ತೋಮರಾನ್ಮೂರ್ಧ್ನಿ ಶ್ವೇತಾಶ್ವಸ್ಯೋನ್ನನಾದ ಚ।
ಅರ್ಜುನನ ಆ ಸುಂದರ ಪುಂಖಗಳ ಕಂಕಪತ್ರಿಗಳಿಂದ ಗಾಯಗೊಂಡು ಕ್ರುದ್ಧನಾದ ಭಗದತ್ತನು ಮಹಾತ್ಮ ಶ್ವೇತಾಶ್ವ ಅರ್ಜುನನ ತಲೆಗೆ ಗುರಿಯಿಟ್ಟು ತೋಮರಗಳನ್ನು ಎಸೆದು ಜೋರಾಗಿ ಗರ್ಜಿಸಿದನು.
07028012c ತೈರರ್ಜುನಸ್ಯ ಸಮರೇ ಕಿರೀಟಂ ಪರಿವರ್ತಿತಂ।।
07028013a ಪರಿವೃತ್ತಂ ಕಿರೀಟಂ ತಂ ಯಮಯನ್ನೇವ ಫಲ್ಗುನಃ।
07028013c ಸುದೃಷ್ಟಃ ಕ್ರಿಯತಾಂ ಲೋಕ ಇತಿ ರಾಜಾನಮಬ್ರವೀತ್।।
ಅವು ಅರ್ಜುನನ ಕಿರೀಟವನ್ನು ತಲೆಕೆಳಗೆ ಮಾಡಿದವು. ಕಿರೀಟವನ್ನು ಸರಿಮಾಡಿಕೊಳ್ಳುತ್ತಾ ಫಲ್ಗುನನು ರಾಜನಿಗೆ “ಲೋಕವೆಲ್ಲವನ್ನೂ ಒಮ್ಮೆ ನೋಡಿಕೊಂಡುಬಿಡು!” ಎಂದು ಹೇಳಿದನು.
07028014a ಏವಮುಕ್ತಸ್ತು ಸಂಕ್ರುದ್ಧಃ ಶರವರ್ಷೇಣ ಪಾಂಡವಂ।
07028014c ಅಭ್ಯವರ್ಷತ್ಸಗೋವಿಂದಂ ಧನುರಾದಾಯ ಭಾಸ್ವರಂ।।
ಹೀಗೆ ಹೇಳಲು ಸಂಕ್ರುದ್ಧನಾಗಿ ಪ್ರಕಾಶಮಾನವಾದ ಧನುಸ್ಸನ್ನು ಎತ್ತಿಕೊಂಡು ಗೋವಿಂದನೊಂದಿಗೆ ಪಾಂಡವನ ಮೇಲೆ ಶರವರ್ಷವನ್ನು ಸುರಿಸಿದನು.
07028015a ತಸ್ಯ ಪಾರ್ಥೋ ಧನುಶ್ಚಿತ್ತ್ವಾ ತೂಣೀರಾನ್ಸನ್ನಿಕೃತ್ಯ ಚ।
07028015c ತ್ವರಮಾಣೋ ದ್ವಿಸಪ್ತತ್ಯಾ ಸರ್ವಮರ್ಮಸ್ವತಾಡಯತ್।।
ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ ಭತ್ತಳಿಕೆಯನ್ನು ಪುಡಿಮಾಡಿದನು. ತ್ವರೆಮಾಡಿ ಇಪ್ಪತ್ತೆರಡು ಬಾಣಗಳಿಂದ ಅವನ ಸರ್ವ ಮರ್ಮಗಳಿಗೂ ಹೊಡೆದನು.
07028016a ವಿದ್ಧಸ್ತಥಾಪ್ಯವ್ಯಥಿತೋ ವೈಷ್ಣವಾಸ್ತ್ರಮುದೀರಯನ್।
07028016c ಅಭಿಮಂತ್ರ್ಯಾಂಕುಶಂ ಕ್ರುದ್ಧೋ ವ್ಯಸೃಜತ್ಪಾಂಡವೋರಸಿ।।
ಅದರಿಂದ ಗಾಯಗೊಂಡು ವ್ಯಥಿತನಾದ ಅವನು ಕ್ರುದ್ಧನಾಗಿ ವೈಷ್ಣವಾಸ್ತ್ರವನ್ನು ಸ್ಮರಿಸಿಕೊಂಡು ಅಂಕುಶವನ್ನು ಅಭಿಮಂತ್ರಿಸಿ ಪಾಂಡವನ ಎದೆಗೆ ಗುರಿಯಿಟ್ಟು ಎಸೆದನು.
07028017a ವಿಸೃಷ್ಟಂ ಭಗದತ್ತೇನ ತದಸ್ತ್ರಂ ಸರ್ವಘಾತಕಂ।
07028017c ಉರಸಾ ಪ್ರತಿಜಗ್ರಾಹ ಪಾರ್ಥಂ ಸಂಚಾದ್ಯ ಕೇಶವಃ।।
ಭಗದತ್ತನಿಂದ ಪ್ರಯೋಗಿಸಲ್ಪಟ್ಟ ಆ ಸರ್ವಘಾತಕ ಅಸ್ತ್ರವನ್ನು ಕೇಶವನು ಪಾರ್ಥನಿಗೆ ಆವರಣವಾಗಿ ನಿಂತು ತನ್ನ ವಕ್ಷಃಸ್ಥಳದಲ್ಲಿ ಧರಿಸಿದನು.
07028018a ವೈಜಯಂತ್ಯಭವನ್ಮಾಲಾ ತದಸ್ತ್ರಂ ಕೇಶವೋರಸಿ।
07028018c ತತೋಽರ್ಜುನಃ ಕ್ಲಾಂತಮನಾಃ ಕೇಶವಂ ಪ್ರತ್ಯಭಾಷತ।।
ಆ ಅಸ್ತ್ರವು ಕೇಶವನ ಎದೆಯಮೇಲೆ ವೈಜಯಂತಿ ಮಾಲೆಯಾಯಿತು. ಆಗ ಅರ್ಜುನನು ಆಯಾಸಗೊಂಡ ಮನಸ್ಸಿನಿಂದ ಕೇಶವನಿಗೆ ಹೇಳಿದನು:
07028019a ಅಯುಧ್ಯಮಾನಸ್ತುರಗಾನ್ಸಮ್ಯಂತಾಸ್ಮಿ ಜನಾರ್ದನ।
07028019c ಇತ್ಯುಕ್ತ್ವಾ ಪುಂಡರೀಕಾಕ್ಷ ಪ್ರತಿಜ್ಞಾಂ ಸ್ವಾಂ ನ ರಕ್ಷಸಿ।।
“ಪುಂಡರೀಕಾಕ್ಷ! ಜನಾರ್ದನ! ಯುದ್ಧವನ್ನು ಮಾಡದೇ ಕುದುರೆಗಳನ್ನೂ ಮಾತ್ರ ನಡೆಸುತ್ತೇನೆ ಎಂದು ಮಾಡಿದ್ದ ಪ್ರತಿಜ್ಞೆಯನ್ನು ನೀನು ರಕ್ಷಿಸುತ್ತಿಲ್ಲ.
07028020a ಯದ್ಯಹಂ ವ್ಯಸನೀ ವಾ ಸ್ಯಾಮಶಕ್ತೋ ವಾ ನಿವಾರಣೇ।
07028020c ತತಸ್ತ್ವಯೈವಂ ಕಾರ್ಯಂ ಸ್ಯಾನ್ನ ತು ಕಾರ್ಯಂ ಮಯಿ ಸ್ಥಿತೇ।।
ಒಂದುವೇಳೆ ನಾನು ವ್ಯಸನದಿಂದಿದ್ದರೆ ಅಥವಾ ಇದನ್ನು ನಿವಾರಿಸಲು ಅಶಕ್ತನಾಗಿದ್ದರೆ ನೀನು ಇದನ್ನು ಮಾಡಬಹುದಾಗಿತ್ತು. ಆದರೆ ನಾನು ಇಲ್ಲಿ ಶಕ್ಯನಾಗಿರುವಾಗ ನೀನು ಹೀಗೆ ಮಾಡಬಾರದಾಗಿತ್ತು.
07028021a ಸಬಾಣಃ ಸಧನುಶ್ಚಾಹಂ ಸಸುರಾಸುರಮಾನವಾನ್।
07028021c ಶಕ್ತೋ ಲೋಕಾನಿಮಾಂ ಜೇತುಂ ತಚ್ಚಾಪಿ ವಿದಿತಂ ತವ।।
ಧನುರ್ಬಾಣಸಹಿತನಾದ ನಾನು ಸುರಾಸುರ ಮಾನವರೊಂದಿಗೆ ಈ ಲೋಕವನ್ನು ಗೆಲ್ಲನು ಶಕ್ಯ ಎನ್ನುವುದೂ ಕೂಡ ನಿನಗೆ ತಿಳಿದೇ ಇದೆ.”
07028022a ತತೋಽರ್ಜುನಂ ವಾಸುದೇವಃ ಪ್ರತ್ಯುವಾಚಾರ್ಥವದ್ವಚಃ।
07028022c ಶೃಣು ಗುಹ್ಯಮಿದಂ ಪಾರ್ಥ ಯಥಾ ವೃತ್ತಂ ಪುರಾನಘ।।
ಆಗ ವಾಸುದೇವನು ಅರ್ಜುನನಿಗೆ ಅರ್ಥವತ್ತಾದ ಮಾತುಗಳಿಂದ ಉತ್ತರಿಸಿದನು: “ಅನಘ! ಪಾರ್ಥ! ಹಿಂದೆ ನಡೆದ ಈ ಗುಹ್ಯ ವೃತ್ತಾಂತವನ್ನು ಕೇಳು.
07028023a ಚತುರ್ಮೂರ್ತಿರಹಂ ಶಶ್ವಲ್ಲೋಕತ್ರಾಣಾರ್ಥಮುದ್ಯತಃ।
07028023c ಆತ್ಮಾನಂ ಪ್ರವಿಭಜ್ಯೇಹ ಲೋಕಾನಾಂ ಹಿತಮಾದಧೇ।।
ಚತುರ್ಮೂರ್ತಿಯಾದ ನಾನು ಶಾಶ್ವತವಾಗಿ ಲೋಕೋದ್ಧಾರದಲ್ಲಿ ತೊಡಗಿದ್ದೇನೆ. ಲೋಕಗಳ ಹಿತಕ್ಕಾಗಿ ನನ್ನನ್ನು ನಾನೇ ವಿಭಜನ ಮಾಡಿಕೊಂಡಿದ್ದೇನೆ.
07028024a ಏಕಾ ಮೂರ್ತಿಸ್ತಪಶ್ಚರ್ಯಾಂ ಕುರುತೇ ಮೇ ಭುವಿ ಸ್ಥಿತಾ।
07028024c ಅಪರಾ ಪಶ್ಯತಿ ಜಗತ್ಕುರ್ವಾಣಂ ಸಾಧ್ವಸಾಧುನೀ।।
ನನ್ನ ಒಂದು ಮೂರ್ತಿಯು ಭೂಮಿಯ ಮೇಲಿದ್ದುಕೊಂಡು ತಪಶ್ಚರ್ಯವನ್ನು ಮಾಡುತ್ತಿದೆ. ಇನ್ನೊಂದು ಜಗತ್ತಿನಲ್ಲಿ ನಡೆಯುವ ಒಳ್ಳೆಯದು-ಕೆಟ್ಟವುಗಳನ್ನು ನೋಡುತ್ತಿರುತ್ತದೆ.
07028025a ಅಪರಾ ಕುರುತೇ ಕರ್ಮ ಮಾನುಷಂ ಲೋಕಮಾಶ್ರಿತಾ।
07028025c ಶೇತೇ ಚತುರ್ಥೀ ತ್ವಪರಾ ನಿದ್ರಾಂ ವರ್ಷಸಹಸ್ರಿಕಾಂ।।
ಇನ್ನೊಂದು ಮನುಷ್ಯ ಲೋಕವನ್ನಾಶ್ರಯಿಸಿ ಕರ್ಮಗಳನ್ನು ಮಾಡುತ್ತಿರುತ್ತದೆ. ನಾಲ್ಕನೆಯ ಇನ್ನೊಂದು ಸಹಸ್ರವರ್ಷಗಳ ಪರ್ಯಂತ ನಿದ್ರಾವಸ್ಥೆಯಲ್ಲಿ ಮಲಗಿರುತ್ತದೆ.
07028026a ಯಾಸೌ ವರ್ಷಸಹಸ್ರಾಂತೇ ಮೂರ್ತಿರುತ್ತಿಷ್ಠತೇ ಮಮ।
07028026c ವರಾರ್ಹೇಭ್ಯೋ ವರಾಂ ಶ್ರೇಷ್ಠಾಂಸ್ತಸ್ಮಿನ್ಕಾಲೇ ದದಾತಿ ಸಾ।।
ನನ್ನ ಈ ಮೂರ್ತಿಯು ಸಹಸ್ರ ವರ್ಷಗಳ ಅಂತ್ಯದಲ್ಲಿ ಏಳುತ್ತದೆ. ಆ ಕಾಲದಲ್ಲಿ ವರಗಳಿಗೆ ಅರ್ಹರಾದವರು ಕೇಳಿದ ಶ್ರೇಷ್ಠ ವರಗಳನ್ನು ಅದು ಕರುಣಿಸುತ್ತದೆ.
07028027a ತಂ ತು ಕಾಲಮನುಪ್ರಾಪ್ತಂ ವಿದಿತ್ವಾ ಪೃಥಿವೀ ತದಾ।
07028027c ಪ್ರಾಯಾಚತ ವರಂ ಯಂ ಮಾಂ ನರಕಾರ್ಥಾಯ ತಂ ಶೃಣು।।
ಅಂತಹ ಒಂದು ಕಾಲವು ಬಂದೊದಗಿದಾಗ ತಿಳಿದು ಪೃಥ್ವಿಯು ನರಕನಿಗಾಗಿ ನನ್ನಿಂದ ಒಂದು ವರವನ್ನು ಕೇಳಿದ್ದಳು. ಅದನ್ನು ಕೇಳು.
07028028a ದೇವಾನಾಮಸುರಾಣಾಂ ಚ ಅವಧ್ಯಸ್ತನಯೋಽಸ್ತು ಮೇ।
07028028c ಉಪೇತೋ ವೈಷ್ಣವಾಸ್ತ್ರೇಣ ತನ್ಮೇ ತ್ವಂ ದಾತುಮರ್ಹಸಿ।।
“ನನ್ನ ಮಗನು ದೇವ ಮತ್ತು ಅಸುರರಿಂದ ಅವಧ್ಯನಾಗಲಿ. ಅವನು ವೈಷ್ಣವಾಸ್ತ್ರವನ್ನು ಹೊಂದಿರಬೇಕು. ನನಗೆ ಇದನ್ನು ದಯಪಾಲಿಸಬೇಕು.”
07028029a ಏವಂ ವರಮಹಂ ಶ್ರುತ್ವಾ ಜಗತ್ಯಾಸ್ತನಯೇ ತದಾ।
07028029c ಅಮೋಘಮಸ್ತ್ರಮದದಂ ವೈಷ್ಣವಂ ತದಹಂ ಪುರಾ।।
ಈ ರೀತಿಯ ವರವನ್ನು ಕೇಳಿ ನಾನು ಭೂಮಿಯ ತನಯನಿಗೆ ಅಮೋಘವಾದ ಈ ವೈಷ್ಣವಾಸ್ತ್ರವನ್ನು ಹಿಂದೆ ನೀಡಿದ್ದೆ.
07028030a ಅವೋಚಂ ಚೈತದಸ್ತ್ರಂ ವೈ ಹ್ಯಮೋಘಂ ಭವತು ಕ್ಷಮೇ।
07028030c ನರಕಸ್ಯಾಭಿರಕ್ಷಾರ್ಥಂ ನೈನಂ ಕಶ್ಚಿದ್ವಧಿಷ್ಯತಿ।।
ಅವಳಿಗೆ ಹೇಳಿದ್ದೆ: “ಈ ಅಮೋಘ ಅಸ್ತ್ರವು ನರಕನನ್ನು ರಕ್ಷಿಸುತ್ತದೆ. ಇದು ಅವನಲ್ಲಿ ಇರುವಾಗ ಯಾರೂ ಅವನನ್ನು ವಧಿಸಲಾರರು.
07028031a ಅನೇನಾಸ್ತ್ರೇಣ ತೇ ಗುಪ್ತಃ ಸುತಃ ಪರಬಲಾರ್ದನಃ।
07028031c ಭವಿಷ್ಯತಿ ದುರಾಧರ್ಷಃ ಸರ್ವಲೋಕೇಷು ಸರ್ವದಾ।।
ಈ ಅಸ್ತ್ರದಿಂದ ನಿನ್ನ ಮಗ ಪರಬಲಾರ್ದನನು ಸರ್ವಲೋಕಗಳಲ್ಲಿ ಸರ್ವರಿಂದ ಜಯಿಸಲಸಾಧ್ಯನಾಗಿರುತ್ತಾನೆ.”
07028032a ತಥೇತ್ಯುಕ್ತ್ವಾ ಗತಾ ದೇವೀ ಕೃತಕಾಮಾ ಮನಸ್ವಿನೀ।
07028032c ಸ ಚಾಪ್ಯಾಸೀದ್ದುರಾಧರ್ಷೋ ನರಕಃ ಶತ್ರುತಾಪನಃ।।
ಹಾಗೆಯೇ ಆಗಲೆಂದು ಹೇಳಿ ಬಯಸಿದುದನ್ನು ಪಡೆದು ಆ ಮನಸ್ವಿನೀ ದೇವಿಯು ಹೋದಳು. ಶತ್ರುತಾಪನ ನರಕನಾದರೋ ಅದರಿಂದಾಗಿ ದುರಾಧರ್ಷನಾಗಿದ್ದನು.
07028033a ತಸ್ಮಾತ್ಪ್ರಾಗ್ಜ್ಯೋತಿಷಂ ಪ್ರಾಪ್ತಂ ತದಸ್ತ್ರಂ ಪಾರ್ಥ ಮಾಮಕಂ।
07028033c ನಾಸ್ಯಾವಧ್ಯೋಽಸ್ತಿ ಲೋಕೇಷು ಸೇಂದ್ರರುದ್ರೇಷು ಮಾರಿಷ।।
ಪಾರ್ಥ! ಅವನಿಂದ ನನ್ನ ಆ ಅಸ್ತ್ರವನ್ನು ಪ್ರಾಗ್ಜ್ಯೋತಿಷನು ಪಡೆದನು. ಮಾರಿಷ! ಅದರಿಂದ ಇವನು ಲೋಕದಲ್ಲಿ ಇಂದ್ರ ರುದ್ರರಿಗೂ ಅವಧ್ಯನು.
07028034a ತನ್ಮಯಾ ತ್ವತ್ಕೃತೇನೈತದನ್ಯಥಾ ವ್ಯಪನಾಶಿತಂ।
07028034c ವಿಯುಕ್ತಂ ಪರಮಾಸ್ತ್ರೇಣ ಜಹಿ ಪಾರ್ಥ ಮಹಾಸುರಂ।।
07028035a ವೈರಿಣಂ ಯುಧಿ ದುರ್ಧರ್ಷಂ ಭಗದತ್ತಂ ಸುರದ್ವಿಷಂ।
07028035c ಯಥಾಹಂ ಜಘ್ನಿವಾನ್ಪೂರ್ವಂ ಹಿತಾರ್ಥಂ ನರಕಂ ತಥಾ।।
ನಿನಗಾಗಿಯೇ ಹೊರತು ಬೇರೆ ಯಾವ ಕಾರಣದಿಂದಲೂ ನಾನು ಅದನ್ನು ನಾಶಗೊಳಿಸಲಿಲ್ಲ. ಪಾರ್ಥ! ಹಿಂದೆ ನಾನು ಲೋಕ ಹಿತಾರ್ಥಕ್ಕಾಗಿ ಹೇಗೆ ನರಕನನ್ನು ಸಂಹರಿಸಿದೆನೋ ಹಾಗೆ ಪರಮಾಸ್ತ್ರವನ್ನು ಪ್ರಯೋಗಿಸಿ ಯುದ್ಧದಲ್ಲಿ ವೈರಿ ದುರ್ಧರ್ಷ ಸುರದ್ವೇಷೀ ಭಗದತ್ತನನ್ನು ಸಂಹರಿಸು.”
07028036a ಏವಮುಕ್ತಸ್ತತಃ ಪಾರ್ಥಃ ಕೇಶವೇನ ಮಹಾತ್ಮನಾ।
07028036c ಭಗದತ್ತಂ ಶಿತೈರ್ಬಾಣೈಃ ಸಹಸಾ ಸಮವಾಕಿರತ್।।
ಮಹಾತ್ಮ ಕೇಶವನು ಹೀಗೆ ಹೇಳಲು ಪಾರ್ಥನು ತಕ್ಷಣವೇ ಭಗದತ್ತನನ್ನು ನಿಶಿತ ಬಾಣಗಳಿಂದ ಮುಚ್ಚಿದನು.
07028037a ತತಃ ಪಾರ್ಥೋ ಮಹಾಬಾಹುರಸಂಭ್ರಾಂತೋ ಮಹಾಮನಾಃ।
07028037c ಕುಂಭಯೋರಂತರೇ ನಾಗಂ ನಾರಾಚೇನ ಸಮಾರ್ಪಯತ್।।
ಆಗ ಮಹಾಮನ ಮಹಾಬಾಹು ಪಾರ್ಥನು ಅಸಂಭ್ರಾಂತನಾಗಿ ನಾರಾಚದಿಂದ ಆನೆಯ ಕುಂಭಸ್ಥಳದ ಮಧ್ಯದಲ್ಲಿ ಹೊಡೆದನು.
07028038a ಸಮಾಸಾದ್ಯ ತು ತಂ ನಾಗಂ ಬಾಣೋ ವಜ್ರ ಇವಾಚಲಂ।
07028038c ಅಭ್ಯಗಾತ್ಸಹ ಪುಂಖೇನ ವಲ್ಮೀಕಮಿವ ಪನ್ನಗಃ।।
ಆ ಬಾಣವು ವಜ್ರವು ಪರ್ವತವನ್ನು ಹೊಗುವಂತೆ ಮತ್ತು ಸರ್ಪವು ಬಿಲವನ್ನು ಹೊಗುವಂತೆ ಪುಂಖಗಳೊಂದಿಗೆ ಆನೆಯ ಒಳ ಹೊಕ್ಕಿತು.
07028039a ಸ ತು ವಿಷ್ಟಭ್ಯ ಗಾತ್ರಾಣಿ ದಂತಾಭ್ಯಾಮವನಿಂ ಯಯೌ।
07028039c ನದನ್ನಾರ್ತಸ್ವರಂ ಪ್ರಾಣಾನುತ್ಸಸರ್ಜ ಮಹಾದ್ವಿಪಃ।।
ಆ ಮಹಾಗಜವು ತನ್ನ ಅಂಗಾಂಗಗಳನ್ನು ನಿಷ್ಕ್ರಿಯಗೊಳಿಸಿ ಎರಡೂ ದಂತಗಳನ್ನು ಭೂಮಿಗೆ ಊರಿಕೊಂಡು, ಆರ್ತಸ್ವರದಲ್ಲಿ ಕೂಗಿ ಪ್ರಾಣಗಳನ್ನು ತೊರೆಯಿತು.
07028040a ತತಶ್ಚಂದ್ರಾರ್ಧಬಿಂಬೇನ ಶರೇಣ ನತಪರ್ವಣಾ।
07028040c ಬಿಭೇದ ಹೃದಯಂ ರಾಜ್ಞೋ ಭಗದತ್ತಸ್ಯ ಪಾಂಡವಃ।।
ಆಗ ಪಾಂಡವನು ಅರ್ಧಚಂದ್ರದ ಬಿಂಬವುಳ್ಳ ನತಪರ್ವ ಶರದಿಂದ ರಾಜಾ ಭಗದತ್ತನ ಹೃಧಯವನ್ನು ಬೇಧಿಸಿದನು.
07028041a ಸ ಭಿನ್ನಹೃದಯೋ ರಾಜಾ ಭಗದತ್ತಃ ಕಿರೀಟಿನಾ।
07028041c ಶರಾಸನಂ ಶರಾಂಶ್ಚೈವ ಗತಾಸುಃ ಪ್ರಮುಮೋಚ ಹ।।
ಕಿರೀಟಿಯಿಂದ ಭಿನ್ನಹೃದಯನಾದ ರಾಜಾ ಭಗದತ್ತನು ಒಡನೆಯೇ ಅಸು ನೀಗಿದನು. ಅವನ ಕೈಯಲ್ಲಿದ್ದ ಬಾಣ ಭತ್ತಳಿಕೆಗಳು ಕೆಳಗೆ ಬಿದ್ದವು.
07028042a ಶಿರಸಸ್ತಸ್ಯ ವಿಭ್ರಷ್ಟಃ ಪಪಾತ ಚ ವರಾಂಕುಶಃ।
07028042c ನಾಲತಾಡನವಿಭ್ರಷ್ಟಂ ಪಲಾಶಂ ನಲಿನಾದಿವ।।
ಕಮಲದ ನಾಳವನ್ನು ಹೊಡೆದರೆ ಕಮಲವು ಬೀಳುವಂತೆ ಅವನ ಶಿರಸ್ತ್ರಾಣ ಮತ್ತು ಶ್ರೇಷ್ಠ ಅಂಕುಶಗಳು ಕೆಳಗೆ ಉರುಳಿದವು.
07028043a ಸ ಹೇಮಮಾಲೀ ತಪನೀಯಭಾಂಡಾತ್ ಪಪಾತ ನಾಗಾದ್ಗಿರಿಸನ್ನಿಕಾಶಾತ್।
07028043c ಸುಪುಷ್ಪಿತೋ ಮಾರುತವೇಗರುಗ್ಣೋ ಮಹೀಧರಾಗ್ರಾದಿವ ಕರ್ಣಿಕಾರಃ।।
ಹೂಗಳಿಂದ ಸಮೃದ್ಧ ಬೆಟ್ಟದ ಕಣಗಿಲೆ ಮರವು ಭಿರುಗಾಳಿಯ ಬಡಿತಕ್ಕೆ ಸಿಲುಕಿ ಬುಡಮೇಲಾಗಿ ಬೆಟ್ಟದ ತುದಿಯಿಂದ ಕೆಳಕ್ಕೆ ಬೀಳುವಂತೆ ಸುವರ್ಣಮಾಲೆಯಿಂದ ಅಮಲಂಕೃತನಾಗಿದ್ದ ಭಗದತ್ತನು ಸುವರ್ಣಾಭರಣ ವಿಭೂಷಿತ ಪರ್ವತೋಪಮ ಆನೆಯ ಮೇಲಿಂದ ಕೆಳಗೆ ಬಿದ್ದನು.
07028044a ನಿಹತ್ಯ ತಂ ನರಪತಿಮಿಂದ್ರವಿಕ್ರಮಂ ಸಖಾಯಮಿಂದ್ರಸ್ಯ ತಥೈಂದ್ರಿರಾಹವೇ।
07028044c ತತೋಽಪರಾಂಸ್ತವ ಜಯಕಾಂಕ್ಷಿಣೋ ನರಾನ್ ಬಭಂಜ ವಾಯುರ್ಬಲವಾನ್ದ್ರುಮಾನಿವ।।
ಈ ರೀತಿ ನರಪತಿ ಇಂದ್ರವಿಕ್ರಮಿ ಇಂದ್ರನ ಸಖನನ್ನು ಆಹವದಲ್ಲಿ ಸಂಹರಿಸಿ ಐಂದ್ರಿಯು ವಿಜಯದ ಆಕಾಂಕ್ಷೆಯಿಂದಿದ್ದ ನಿನ್ನ ಕಡೆಯ ಯೋಧರನ್ನು ಚಂಡಮಾರುತವು ವೃಕ್ಷಗಳನ್ನು ಧ್ವಂಸಮಾಡುವಂತೆ ಧ್ವಂಸಮಾಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಭಗದತ್ತವಧೇ ಅಷ್ಟವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಭಗದತ್ತವಧ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.