027 ಭಗದತ್ತಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಸಂಶಪ್ತಕವಧ ಪರ್ವ

ಅಧ್ಯಾಯ 27

ಸಾರ

ಭಗದತ್ತನ ಕಡೆ ಹೋಗುತ್ತಿದ್ದ ಅರ್ಜುನನನ್ನು ಯುದ್ಧಕ್ಕೆ ಹಿಂದೆ ಕರೆದ ಸುಶರ್ಮನನ್ನು ಪಲಾಯನಹೋಗುವಂತೆ ಮಾಡಿ ಅರ್ಜುನನು ಭಗದತ್ತನಿದ್ದಲ್ಲಿಗೆ ಬಂದುದು (1-14). ಅರ್ಜುನ-ಭಗದತ್ತರ ಯುದ್ಧ (15-31).

07027001 ಸಂಜಯ ಉವಾಚ।
07027001a ಯಿಯಾಸತಸ್ತತಃ ಕೃಷ್ಣಃ ಪಾರ್ಥಸ್ಯಾಶ್ವಾನ್ಮನೋಜವಾನ್।
07027001c ಅಪ್ರೈಷೀದ್ಧೇಮಸಂಚನ್ನಾನ್ದ್ರೋಣಾನೀಕಾಯ ಪಾಂಡುರಾನ್।।

ಸಂಜಯನು ಹೇಳಿದನು: “ಅನಂತರ ಕೃಷ್ಣನು ಪಾರ್ಥನ ಸುವರ್ಣಭೂಷಿತ ಮನೋವೇಗದ ಬಿಳೀ ಕುದುರೆಗಳನ್ನು ದ್ರೋಣನ ಸೇನೆಯಕಡೆ ಕೊಂಡೊಯ್ದನು.

07027002a ತಂ ಪ್ರಯಾಂತಂ ಕುರುಶ್ರೇಷ್ಠಂ ಸ್ವಾಂಸ್ತ್ರಾತುಂ ದ್ರೋಣತಾಪಿತಾನ್।
07027002c ಸುಶರ್ಮಾ ಭ್ರಾತೃಭಿಃ ಸಾರ್ಧಂ ಯುದ್ಧಾರ್ಥೀ ಪೃಷ್ಠತೋಽನ್ವಯಾತ್।।

ದ್ರೋಣನಿಂದ ಪೀಡಿತರಾಗಿದ್ದ ತನ್ನವರನ್ನು ಬಿಡುಗಡೆಗೊಳಿಸಲು ಹೋಗುತ್ತಿದ್ದ ಆ ಕುರುಶ್ರೇಷ್ಠನನ್ನು ಯುದ್ಧಾರ್ಥಿ ಸುಶರ್ಮನು ಸಹೋದರರೊಂದಿಗೆ ಅವನ ಹಿಂದೆಯೇ ಅನುಸರಿಸಿ ಹೋದನು.

07027003a ತತಃ ಶ್ವೇತಹಯಃ ಕೃಷ್ಣಮಬ್ರವೀದಜಿತಂ ಜಯಃ।
07027003c ಏಷ ಮಾಂ ಭ್ರಾತೃಭಿಃ ಸಾರ್ಧಂ ಸುಶರ್ಮಾಹ್ವಯತೇಽಚ್ಯುತ।।

ಆಗ ಶ್ವೇತಹಯ ಜಯ ಅರ್ಜುನನು ಅಪರಾಜಿತ ಕೃಷ್ಣನಿಗೆ ಹೇಳಿದನು: “ಅಚ್ಯುತ! ಈ ಸುಶರ್ಮನು ತನ್ನ ತಮ್ಮಂದಿರೊಡಗೂಡಿ ನನ್ನನ್ನು ಕರೆಯುತ್ತಿದ್ದಾನೆ.

07027004a ದೀರ್ಯತೇ ಚೋತ್ತರೇಣೈತತ್ಸೈನ್ಯಂ ನಃ ಶತ್ರುಸೂದನ।
07027004c ದ್ವೈಧೀಭೂತಂ ಮನೋ ಮೇಽದ್ಯ ಕೃತಂ ಸಂಶಪ್ತಕೈರಿದಂ।।

ಆದರೆ ಶತ್ರುಸೂದನ! ಉತ್ತರ ಭಾಗದಲ್ಲಿ ನಮ್ಮ ಸೈನ್ಯವು ವಿನಾಶಹೊಂದುತ್ತಿದೆ. ಈ ಸಂಶಪ್ತಕರು ಇಂದು ನನ್ನ ಮನಸ್ಸನ್ನು ಎರಡನ್ನಾಗಿ ಒಡೆದಿದ್ದಾರೆ.

07027005a ಕಿಂ ನು ಸಂಶಪ್ತಕಾನ್ ಹನ್ಮಿ ಸ್ವಾನ್ರಕ್ಷಾಮ್ಯಹಿತಾರ್ದಿತಾನ್।
07027005c ಇತಿ ಮೇ ತ್ವಂ ಮತಂ ವೇತ್ಥ ತತ್ರ ಕಿಂ ಸುಕೃತಂ ಭವೇತ್।।

ಈಗ ನಾನು ಅಳಿದುಳಿದ ಸಂಶಪ್ತಕರನ್ನು ಕೊಲ್ಲಬೇಕೇ? ಅಥವಾ ಬಾಧಿತರಾದ ನಮ್ಮವರನ್ನು ರಕ್ಷಿಸಲೇ? ನನ್ನ ಈ ದ್ವಂದ್ವಭಾವವು ನಿನಗೆ ತಿಳಿದಿದೆ. ಏನು ಮಾಡಿದರೆ ಒಳ್ಳೆಯದಾಗುವುದು?”

07027006a ಏವಮುಕ್ತಸ್ತು ದಾಶಾರ್ಹಃ ಸ್ಯಂದನಂ ಪ್ರತ್ಯವರ್ತಯತ್।
07027006c ಯೇನ ತ್ರಿಗರ್ತಾಧಿಪತಿಃ ಪಾಂಡವಂ ಸಮುಪಾಹ್ವಯತ್।।

ಹೀಗೆ ಹೇಳಲು ದಾಶಾರ್ಹನು ರಥವನ್ನು ಹಿಂದಿರುಗಿಸಿ ಎಲ್ಲಿ ತ್ರಿಗರ್ತಾಧಿಪತಿಯು ಪಾಂಡವನನ್ನು ಕರೆಯುತ್ತಿದ್ದನೋ ಅಲ್ಲಿಗೆ ಕೊಂಡೊಯ್ದನು.

07027007a ತತೋಽರ್ಜುನಃ ಸುಶರ್ಮಾಣಂ ವಿದ್ಧ್ವಾ ಸಪ್ತಭಿರಾಶುಗೈಃ।
07027007c ಧ್ವಜಂ ಧನುಶ್ಚಾಸ್ಯ ತಥಾ ಕ್ಷುರಾಭ್ಯಾಂ ಸಮಕೃಂತತ।।

ಆಗ ಅರ್ಜುನನು ಸುಶರ್ಮನನ್ನು ಏಳು ಆಶುಗಗಳಿಂದ ಹೊಡೆದು ಹಾಗೆಯೇ ಕ್ಷುರಗಳೆರಡರಿಂದ ಅವನ ಧ್ವಜವನ್ನೂ ಧನುಸ್ಸನ್ನೂ ತುಂಡರಿಸಿದನು.

07027008a ತ್ರಿಗರ್ತಾಧಿಪತೇಶ್ಚಾಪಿ ಭ್ರಾತರಂ ಷಡ್ಭಿರಾಯಸೈಃ।
07027008c ಸಾಶ್ವಂ ಸಸೂತಂ ತ್ವರಿತಃ ಪಾರ್ಥಃ ಪ್ರೈಷೀದ್ಯಮಕ್ಷಯಂ।।

ಪಾರ್ಥನು ತ್ವರೆಮಾಡಿ ತ್ರಿಗರ್ತಾಧಿಪತಿಯ ತಮ್ಮನನ್ನೂ ಕೂಡ ಆರು ಆಯಸಗಳಿಂದ, ಅಶ್ವ-ಸೂತರೊಂದಿಗೆ ಯಮಾಲಯಕ್ಕೆ ಕಳುಹಿಸಿದನು.

07027009a ತತೋ ಭುಜಗಸಂಕಾಶಾಂ ಸುಶರ್ಮಾ ಶಕ್ತಿಮಾಯಸೀಂ।
07027009c ಚಿಕ್ಷೇಪಾರ್ಜುನಮಾದಿಶ್ಯ ವಾಸುದೇವಾಯ ತೋಮರಂ।।

ಆಗ ಸುಶರ್ಮನು ಸರ್ಪದಂತಿದ್ದ ಉಕ್ಕಿನ ಶಕ್ತಿಯನ್ನು ಅರ್ಜುನನ ಮೇಲೆ ಮತ್ತು ತೋಮರವನ್ನು ವಾಸುದೇವನ ಮೇಲೆ ಗುರಿಯಿಟ್ಟು ಪ್ರಯೋಗಿಸಿದನು.

07027010a ಶಕ್ತಿಂ ತ್ರಿಭಿಃ ಶರೈಶ್ಚಿತ್ತ್ವಾ ತೋಮರಂ ತ್ರಿಭಿರರ್ಜುನಃ।
07027010c ಸುಶರ್ಮಾಣಂ ಶರವ್ರಾತೈರ್ಮೋಹಯಿತ್ವಾ ನ್ಯವರ್ತತ।।

ಅರ್ಜುನನು ಶಕ್ತಿಯನ್ನು ಮೂರು ಮತ್ತು ತೋಮರವನ್ನು ಮೂರು ಶರಗಳಿಂದ ಕತ್ತರಿಸಿ ಸುಶರ್ಮನನ್ನು ಶರವೃಷ್ಟಿಯಿಂದ ಭ್ರಾಂತಗೊಳಿಸಿ ಹಿಮ್ಮೆಟ್ಟಿಸಿದನು.

07027011a ತಂ ವಾಸವಮಿವಾಯಾಂತಂ ಭೂರಿವರ್ಷಶರೌಘಿಣಂ।
07027011c ರಾಜಂಸ್ತಾವಕಸೈನ್ಯಾನಾಂ ನೋಗ್ರಂ ಕಶ್ಚಿದವಾರಯತ್।।

ರಾಜನ್! ಬಾಣಗಳ ಭಾರೀ ಮಳೆಗರೆಯುತ್ತಾ ಹಿಂದಿರುಗಿ ಬರುತ್ತಿದ್ದ ಉಗ್ರ ವಾಸವಿಯನ್ನು ನಿನ್ನ ಸೇನೆಯಲ್ಲಿ ಯಾರೂ ತಡೆಯಲಿಲ್ಲ.

07027012a ತತೋ ಧನಂಜಯೋ ಬಾಣೈಸ್ತತ ಏವ ಮಹಾರಥಾನ್।
07027012c ಆಯಾದ್ವಿನಿಘ್ನನ್ಕೌರವ್ಯಾನ್ದಹನ್ಕಕ್ಷಮಿವಾನಲಃ।।

ಆಗ ಧನಂಜಯನು ಬಾಣಗಳಿಂದ ಮಹಾರಥಿ ಕೌರವ್ಯರನ್ನು ಬೆಂಕಿಯು ಹುಲ್ಲಿನ ಗೊಣಬೆಯನ್ನು ಸುಡುವಂತೆ ಸುಟ್ಟು ನಾಶಗೊಳಿಸಿದನು.

07027013a ತಸ್ಯ ವೇಗಮಸಹ್ಯಂ ತು ಕುಂತೀಪುತ್ರಸ್ಯ ಧೀಮತಃ।
07027013c ನಾಶಕ್ನುವಂಸ್ತೇ ಸಂಸೋಢುಂ ಸ್ಪರ್ಶಮಗ್ನೇರಿವ ಪ್ರಜಾಃ।।

ಜನರು ಅಗ್ನಿಯ ಸ್ಪರ್ಶವನ್ನು ಸಹಿಸಿಕೊಳ್ಳಲಾಗದಂತೆ ಆ ಧೀಮತ ಕುಂತೀಪುತ್ರನ ವೇಗವನ್ನು ಸಹಿಸಿಕೊಳ್ಳಲಾಗಲಿಲ್ಲ.

07027014a ಸಂವೇಷ್ಟಯನ್ನನೀಕಾನಿ ಶರವರ್ಷೇಣ ಪಾಂಡವಃ।
07027014c ಸುಪರ್ಣಪಾತವದ್ರಾಜನ್ನಾಯಾತ್ಪ್ರಾಗ್ಜ್ಯೋತಿಷಂ ಪ್ರತಿ।।

ಶರವರ್ಷಗಳಿಂದ ಸೇನೆಗಳನ್ನು ನಾಶಗೊಳಿಸುತ್ತಾ ಪಾಂಡವನು ಪ್ರಾಗ್ಜ್ಯೋತಿಷನ ಕಡೆ ಗರುಡನು ಬಂದೆರಗುವಂತೆ ಬಂದು ಆಕ್ರಮಣಿಸಿದನು.

07027015a ಯತ್ತದಾನಾಮಯಜ್ಜಿಷ್ಣುರ್ಭರತಾನಾಮಪಾಯಿನಾಂ।
07027015c ಧನುಃ ಕ್ಷೇಮಕರಂ ಸಂಖ್ಯೇ ದ್ವಿಷತಾಮಶ್ರುವರ್ಧನಂ।।

ಯಾವುದರಿಂದ ಅಪಾಯದಲ್ಲಿರುವ ಭರತರಿಗೆ ಕ್ಷೇಮವನ್ನುಂಟು ಮಾಡುವನೋ ಯಾವುದರಿಂದ ಯುದ್ಧದಲ್ಲಿ ಶತ್ರುಗಳ ಕಣ್ಣೀರನ್ನು ಹೆಚ್ಚಿಸುವನೋ ಆ ಧನುಸ್ಸನ್ನು ಜಿಷ್ಣುವು ಹಿಡಿದುಕೊಂಡನು.

07027016a ತದೇವ ತವ ಪುತ್ರಸ್ಯ ರಾಜನ್ದುರ್ದ್ಯೂತದೇವಿನಃ।
07027016c ಕೃತೇ ಕ್ಷತ್ರವಿನಾಶಾಯ ಧನುರಾಯಚ್ಚದರ್ಜುನಃ।।

ರಾಜನ್! ನಿನ್ನ ಕೆಟ್ಟ ದ್ಯೂತವನ್ನಾಡಿ ಗೆದ್ದಿದ್ದ ಅದೇ ಧನುಸ್ಸನು ಅರ್ಜುನನು ಈಗ ಕ್ಷತ್ರಿಯರ ವಿನಾಶಕ್ಕೆ ಎತ್ತಿ ಹಿಡಿದನು.

07027017a ತಥಾ ವಿಕ್ಷೋಭ್ಯಮಾಣಾ ಸಾ ಪಾರ್ಥೇನ ತವ ವಾಹಿನೀ।
07027017c ವ್ಯದೀರ್ಯತ ಮಹಾರಾಜ ನೌರಿವಾಸಾದ್ಯ ಪರ್ವತಂ।।

ಮಹಾರಾಜ! ಪರ್ವತಕ್ಕೆ ಬಡಿದ ನೌಕೆಯಂತೆ ನಿನ್ನ ಸೇನೆಯನ್ನು ಪಾರ್ಥನು ಕ್ಷೋಭೆಗೊಳಿಸಿ ನುಚ್ಚು ನೂರು ಮಾಡಿದನು.

07027018a ತತೋ ದಶ ಸಹಸ್ರಾಣಿ ನ್ಯವರ್ತಂತ ಧನುಷ್ಮತಾಂ।
07027018c ಮತಿಂ ಕೃತ್ವಾ ರಣೇ ಕ್ರುದ್ಧಾ ವೀರಾ ಜಯಪರಾಜಯೇ।।

ಆಗ ಹತ್ತು ಸಾವಿರ ವೀರ ಧನುಷ್ಮತರು ಕ್ರುದ್ಧರಾಗಿ ಜಯವಾಗಲೀ ಪರಾಜಯವಾಗಲೀ ಯುದ್ಧಮಾಡಬೇಕೆಂದು ನಿಶ್ಚಯಿಸಿ ಹಿಂದಿರುಗಿದರು.

07027019a ವ್ಯಪೇತಹೃದಯತ್ರಾಸ ಆಪದ್ಧರ್ಮಾತಿಗೋ ರಥಃ।
07027019c ಆರ್ಚತ್ಪಾರ್ಥೋ ಗುರುಂ ಭಾರಂ ಸರ್ವಭಾರಸಹೋ ಯುಧಿ।।

ಆಪದ್ಧರ್ಮವನ್ನು ಅನುಸರಿಸಿದ ಆ ರಥರು ಹೃದಯದ ಭಯವನ್ನು ತೊರೆದು ಪಾರ್ಥನ ಮೇಲೆ ಆಕ್ರಮಣಿಸಲು ಯುದ್ಧದಲ್ಲಿ ಅವರೆಲ್ಲರ ದೊಡ್ಡ ಭಾರವನ್ನೂ ಪಾರ್ಥನು ಸಹಿಸಿಕೊಂಡನು.

07027020a ಯಥಾ ನಡವನಂ ಕ್ರುದ್ಧಃ ಪ್ರಭಿನ್ನಃ ಷಷ್ಟಿಹಾಯನಃ।
07027020c ಮೃದ್ನೀಯಾತ್ತದ್ವದಾಯಸ್ತಃ ಪಾರ್ಥೋಽಮೃದ್ನಾಚ್ಚಮೂಂ ತವ।।

ಮದೋದಕವನ್ನು ಸುರಿಸುವ ಸಿಟ್ಟಿಗೆದ್ದ ಅರವತ್ತು ವರ್ಷದ ಸಲಗವು ಹೇಗೆ ಬೆಂಡಿನ ವನವನ್ನು ಧ್ವಂಸಮಾಡುತ್ತದೆಯೋ ಹಾಗೆ ಪಾರ್ಥನು ನಿನ್ನ ಸೇನೆಯನ್ನು ಮರ್ದಿಸಿದನು.

07027021a ತಸ್ಮಿನ್ಪ್ರಮಥಿತೇ ಸೈನ್ಯೇ ಭಗದತ್ತೋ ನರಾಧಿಪಃ।
07027021c ತೇನ ನಾಗೇನ ಸಹಸಾ ಧನಂಜಯಮುಪಾದ್ರವತ್।।

ಅವನು ಹಾಗೆ ಸೇನೆಯನ್ನು ನಾಶಗೊಳಿಸುತ್ತಿರಲು ನರಾಧಿಪ ಭಗದತ್ತನು ತನ್ನ ಆನೆಯೊಂದಿಗೆ ರಭಸದಿಂದ ಬಂದು ಧನಂಜಯನ ಮೇಲೆ ಎರಗಿದನು.

07027022a ತಂ ರಥೇನ ನರವ್ಯಾಘ್ರಃ ಪ್ರತ್ಯಗೃಹ್ಣಾದಭೀತವತ್।
07027022c ಸ ಸನ್ನಿಪಾತಸ್ತುಮುಲೋ ಬಭೂವ ರಥನಾಗಯೋಃ।।

ಆ ನರವ್ಯಾಘ್ರನು ರಥದಲ್ಲಿಯೇ ಕುಳಿತು ಭಯಪಡದೇ ಅವನನ್ನು ಎದುರಿಸಿದನು. ಆಗ ಅವನ ರಥ ಮತ್ತು ಆ ಆನೆಗಳ ನಡುವೆ ತುಮುಲ ಯುದ್ಧವು ನಡೆಯಿತು.

07027023a ಕಲ್ಪಿತಾಭ್ಯಾಂ ಯಥಾಶಾಸ್ತ್ರಂ ರಥೇನ ಚ ಗಜೇನ ಚ।
07027023c ಸಂಗ್ರಾಮೇ ಚೇರತುರ್ವೀರೌ ಭಗದತ್ತಧನಂಜಯೌ।।

ಯಥಾಶಾಸ್ತ್ರವಾಗಿ ಪರಿಣಿತರಾದ ಆ ವೀರ ಭಗದತ್ತ-ಧನಂಜಯರ ನಡುವೆ ರಥ ಮತ್ತು ಆನೆಗಳ ಸಂಗ್ರಾಮವು ನಡೆಯಿತು.

07027024a ತತೋ ಜೀಮೂತಸಂಕಾಶಾನ್ನಾಗಾದಿಂದ್ರ ಇವಾಭಿಭೂಃ।
07027024c ಅಭ್ಯವರ್ಷಚ್ಚರೌಘೇಣ ಭಗದತ್ತೋ ಧನಂಜಯಂ।।

ಆಗ ಮೋಡದಂತಿದ್ದ ಆನೆಯಮೇಲೆ ಇಂದ್ರನಂತಿದ್ದ ವಿಭೂ ಭಗದತ್ತನು ಶರವರ್ಷದಿಂದ ಧನಂಜಯನನ್ನು ಮುಚ್ಚಿದನು.

07027025a ಸ ಚಾಪಿ ಶರವರ್ಷಂ ತಚ್ಚರವರ್ಷೇಣ ವಾಸವಿಃ।
07027025c ಅಪ್ರಾಪ್ತಮೇವ ಚಿಚ್ಚೇದ ಭಗದತ್ತಸ್ಯ ವೀರ್ಯವಾನ್।।

ವಾಸವಿಯೂ ಕೂಡ ಆ ಶರವರ್ಷವು ತನ್ನನ್ನು ತಲುಪುವುದರೊಳಗೆ ಇನ್ನೊಂದು ಶರವರ್ಷದಿಂದ ಅದನ್ನು ಕತ್ತರಿಸಿದನು.

07027026a ತತಃ ಪ್ರಾಗ್ಜ್ಯೋತಿಷೋ ರಾಜಾ ಶರವರ್ಷಂ ನಿವಾರ್ಯ ತತ್।
07027026c ಶರೈರ್ಜಘ್ನೇ ಮಹಾಬಾಹುಂ ಪಾರ್ಥಂ ಕೃಷ್ಣಂ ಚ ಭಾರತ।।

ಭಾರತ! ಆಗ ರಾಜಾ ಪ್ರಾಗ್ಜ್ಯೋತಿಷನು ಆ ಶರವರ್ಷವನ್ನು ನಿವಾರಿಸಿ, ಮಹಾಬಾಹು ಪಾರ್ಥ ಮತ್ತು ಕೃಷ್ಣನನ್ನು ಶರಗಳಿಂದ ಹೊಡೆದನು.

07027027a ತತಃ ಸ ಶರಜಾಲೇನ ಮಹತಾಭ್ಯವಕೀರ್ಯ ತೌ।
07027027c ಚೋದಯಾಮಾಸ ತಂ ನಾಗಂ ವಧಾಯಾಚ್ಯುತಪಾರ್ಥಯೋಃ।।

ಆಗ ಆ ಮಹಾಶರಜಾಲದಿಂದ ಅವರಿಬ್ಬರನ್ನೂ ಮುಚ್ಚಿ ಅಚ್ಯುತ-ಪಾರ್ಥರನ್ನು ಕೊಲ್ಲಲು ಆನೆಯನ್ನು ಪ್ರಚೋದಿಸಿದನು.

07027028a ತಮಾಪತಂತಂ ದ್ವಿರದಂ ದೃಷ್ಟ್ವಾ ಕ್ರುದ್ಧಮಿವಾಂತಕಂ।
07027028c ಚಕ್ರೇಽಪಸವ್ಯಂ ತ್ವರಿತಃ ಸ್ಯಂದನೇನ ಜನಾರ್ದನಃ।।

ಕ್ರುದ್ಧನಾದ ಅಂತಕನಂತೆ ಮೇಲೆ ಬೀಳುತ್ತಿದ್ದ ಆನೆಯನ್ನು ನೋಡಿ ಕೂಡಲೇ ಜನಾರ್ದನನು ರಥವನ್ನು ಬಲಕ್ಕೆ ತಿರುಗಿಸಿದನು.

07027029a ಸಂಪ್ರಾಪ್ತಮಪಿ ನೇಯೇಷ ಪರಾವೃತ್ತಂ ಮಹಾದ್ವಿಪಂ।
07027029c ಸಾರೋಹಂ ಮೃತ್ಯುಸಾತ್ಕರ್ತುಂ ಸ್ಮರನ್ಧರ್ಮಂ ಧನಂಜಯಃ।।

ಆ ಮಹಾಗಜವು ತನ್ನ ಸಮೀಪ ಬಂದಿದ್ದರೂ ರಥವನ್ನು ತಿರುಗಿಸಿದುದರಿಂದ ಅದು ಹಿಂದೆ ಸರಿದುದಕ್ಕಾಗಿ ಯುದ್ಧ ಧರ್ಮವನ್ನು ಸ್ಮರಿಸಿ ಧನಂಜಯನು ಅದನ್ನು ಸಂಹರಿಸಲು ಇಚ್ಛಿಸಲಿಲ್ಲ.

07027030a ಸ ತು ನಾಗೋ ದ್ವಿಪರಥಾನ್ ಹಯಾಂಶ್ಚಾರುಜ್ಯ ಮಾರಿಷ।
07027030c ಪ್ರಾಹಿಣೋನ್ಮೃತ್ಯುಲೋಕಾಯ ತತೋಽಕ್ರುಧ್ಯದ್ಧನಂಜಯಃ।।

ಮಾರಿಷ! ಆದರೆ ಆ ಆನೆಯು ಮುಂದೆ ಹಾಯ್ದು ರಥಗಳನ್ನೂ ಕುದುರೆಗಳನ್ನೂ ತುಳಿದು ಮೃತ್ಯುಲೋಕಕ್ಕೆ ಕಳುಹಿಸಿತು. ಆಗ ಧನಂಜಯನು ಕ್ರುದ್ಧನಾದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಭಗದತ್ತಯುದ್ಧೇ ಸಪ್ತವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಭಗದತ್ತಯುದ್ಧ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.