ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಸಂಶಪ್ತಕವಧ ಪರ್ವ
ಅಧ್ಯಾಯ 26
ಸಾರ
ಸಂಶಪ್ತಕ ವಧೆ (1-29).
07026001 ಸಂಜಯ ಉವಾಚ।
07026001a ಯನ್ಮಾಂ ಪಾರ್ಥಸ್ಯ ಸಂಗ್ರಾಮೇ ಕರ್ಮಾಣಿ ಪರಿಪೃಚ್ಚಸಿ।
07026001c ತಚ್ಚೃಣುಷ್ವ ಮಹಾರಾಜ ಪಾರ್ಥೋ ಯದಕರೋನ್ಮೃಧೇ।।
ಸಂಜಯನು ಹೇಳಿದನು: “ಸಂಗ್ರಾಮದಲ್ಲಿ ಪಾರ್ಥನ ಕೃತ್ಯಗಳ ಕುರಿತು ನೀನು ನನ್ನನ್ನು ಕೇಳಿದೆಯಲ್ಲ! ಮಹಾರಾಜ! ರಣದಲ್ಲಿ ಪಾರ್ಥನು ಏನು ಮಾಡಿದನು ಎನ್ನುವುದನ್ನು ಕೇಳು.
07026002a ರಜೋ ದೃಷ್ಟ್ವಾ ಸಮುದ್ಭೂತಂ ಶ್ರುತ್ವಾ ಚ ಗಜನಿಸ್ವನಂ।
07026002c ಭಜ್ಯತಾಂ ಭಗದತ್ತೇನ ಕೌಂತೇಯಃ ಕೃಷ್ಣಮಬ್ರವೀತ್।।
ಮೇಲೆದ್ದ ಧೂಳನ್ನು ನೋಡಿ ಮತ್ತು ಭಗದತ್ತನಿಂದ ನಿಯಂತ್ರಿಸಲ್ಪಟ್ಟ ಆನೆಯು ಘೀಳಿಡುವುದನ್ನು ಕೇಳಿದ ಕೌಂತೇಯನು ಕೃಷ್ಣನಿಗೆ ಹೇಳಿದನು.
07026003a ಯಥಾ ಪ್ರಾಗ್ಜ್ಯೋತಿಷೋ ರಾಜಾ ಗಜೇನ ಮಧುಸೂದನ।
07026003c ತ್ವರಮಾಣೋಽಭ್ಯತಿಕ್ರಾಂತೋ ಧ್ರುವಂ ತಸ್ಯೈಷ ನಿಸ್ವನಃ।।
“ಮಧುಸೂದನ! ಪ್ರಾಗ್ಜ್ಯೋತಿಷದ ರಾಜನು ಆನೆಯೊಂದಿಗೆ ತ್ವರೆಮಾಡಿ ಆಕ್ರಮಣಿಸುತ್ತಿದ್ದಾನೆ. ನಿಶ್ಚಯವಾಗಿಯೂ ಇದು ಅವನದೇ ಕೂಗು!
07026004a ಇಂದ್ರಾದನವರಃ ಸಂಖ್ಯೇ ಗಜಯಾನವಿಶಾರದಃ।
07026004c ಪ್ರಥಮೋ ವಾ ದ್ವಿತೀಯೋ ವಾ ಪೃಥಿವ್ಯಾಮಿತಿ ಮೇ ಮತಿಃ।।
ಗಜಯಾನದಲ್ಲಿ ವಿಶಾರದನಾಗಿರುವ ಇವನು ಯುದ್ಧದಲ್ಲಿ ಇಂದ್ರನಿಗೂ ಕಡಿಮೆಯಲ್ಲ. ಇವನು ಪೃಥ್ವಿಯಲ್ಲಿಯೇ ಮೊದಲನೆಯವನು ಅಥವಾ ಎರಡನೆಯವನು ಎಂದು ನನ್ನ ಅಭಿಪ್ರಾಯ.
07026005a ಸ ಚಾಪಿ ದ್ವಿರದಶ್ರೇಷ್ಠಃ ಸದಾಪ್ರತಿಗಜೋ ಯುಧಿ।
07026005c ಸರ್ವಶಬ್ದಾತಿಗಃ ಸಂಖ್ಯೇ ಕೃತಕರ್ಮಾ ಜಿತಕ್ಲಮಃ।।
ಆ ಆನೆಯೂ ಕೂಡ ಶ್ರೇಷ್ಠವಾದುದು. ಯುದ್ಧದಲ್ಲಿ ಸರಿಸಾಟಿಯಾದ ಆನೆಯು ಇಲ್ಲ. ಎಲ್ಲ ಶಬ್ಧಗಳನ್ನೂ ಮೀರಿಸುವಂತವನು. ಯುದ್ಧದಲ್ಲಿ ಯಶಸ್ವಿಯು. ಆಯಾಸವೇ ಇಲ್ಲದವನು.
07026006a ಸಹಃ ಶಸ್ತ್ರನಿಪಾತಾನಾಮಗ್ನಿಸ್ಪರ್ಶಸ್ಯ ಚಾನಘ।
07026006c ಸ ಪಾಂಡವಬಲಂ ವ್ಯಕ್ತಮದ್ಯೈಕೋ ನಾಶಯಿಷ್ಯತಿ।।
ಅನಘ! ಮೇಲೆ ಬೀಳುತ್ತಿರುವ ಶಸ್ತ್ರಗಳನ್ನೂ, ಅಗ್ನಿಯನ್ನೂ ಸಹಿಸಿಕೊಳ್ಳಬಹುದಾದ ಇದು ಒಂದೇ ಪಾಂಡವ ಬಲವನ್ನು ನಾಶಪಡಿಸುತ್ತದೆ ಎನ್ನುವುದು ವ್ಯಕ್ತವಾಗುತ್ತಿದೆ.
07026007a ನ ಚಾವಾಭ್ಯಾಂ ಋತೇಽನ್ಯೋಽಸ್ತಿ ಶಕ್ತಸ್ತಂ ಪ್ರತಿಬಾಧಿತುಂ।
07026007c ತ್ವರಮಾಣಸ್ತತೋ ಯಾಹಿ ಯತಃ ಪ್ರಾಗ್ಜ್ಯೋತಿಷಾಧಿಪಃ।।
ಅವರ ಈ ಉಪಟಳವನ್ನು ಸಹಿಸುವವರು ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರಿಗೂ ಶಕ್ಯವಿಲ್ಲ. ತ್ವರೆಮಾಡಿ ಪ್ರಾಗ್ಜ್ಯೋತಿಷಾಧಿಪನು ಎಲ್ಲಿದ್ದಾನೋ ಅಲ್ಲಿಗೆ ಕರೆದೊಯ್ಯಿ.
07026008a ಶಕ್ರಸಖ್ಯಾದ್ದ್ವಿಪಬಲೈರ್ವಯಸಾ ಚಾಪಿ ವಿಸ್ಮಿತಂ।
07026008c ಅದ್ಯೈನಂ ಪ್ರೇಷಯಿಷ್ಯಾಮಿ ಬಲಹಂತುಃ ಪ್ರಿಯಾತಿಥಿಂ।।
ಶಕ್ರನೊಂದಿಗಿನ ಸಖ್ಯದಿಂದ, ಆನೆಯ ಬಲದಿಂದ ಮತ್ತು ವಯಸ್ಸಿನಲ್ಲಿ ವಿಸ್ಮಿತನಾಗಿರುವ ಅವನನ್ನು ಇಂದು ನಾನು ಬಲಹಂತುವಿನ ಪ್ರಿಯ ಅತಿಥಿಯಾಗಿ ಕಳುಹಿಸುತ್ತೇನೆ.”
07026009a ವಚನಾದಥ ಕೃಷ್ಣಸ್ತು ಪ್ರಯಯೌ ಸವ್ಯಸಾಚಿನಃ।
07026009c ದಾರ್ಯತೇ ಭಗದತ್ತೇನ ಯತ್ರ ಪಾಂಡವವಾಹಿನೀ।।
ಸವ್ಯಸಾಚಿಯ ಮಾತಿನಂತೆ ಕೃಷ್ಣನು ಎಲ್ಲಿ ಪಾಂಡವವಾಹಿನಿಯನ್ನು ಸೀಳುತ್ತಿದ್ದನೋ ಅಲ್ಲಿಗೆ ಕರೆದೊಯ್ದನು.
07026010a ತಂ ಪ್ರಯಾಂತಂ ತತಃ ಪಶ್ಚಾದಾಹ್ವಯಂತೋ ಮಹಾರಥಾಃ।
07026010c ಸಂಶಪ್ತಕಾಃ ಸಮಾರೋಹನ್ಸಹಸ್ರಾಣಿ ಚತುರ್ದಶ।।
ಅವನು ಬೇರೆಕಡೆ ಯುದ್ಧ ಮಾಡಲು ಹೋಗುವಾಗ ಅವನ ಹಿಂದಿನಿಂದ ಹದಿನಾಲ್ಕು ಸಾವಿರ ಸಂಶಪ್ತಕರು ಎರಗಿದರು.
07026011a ದಶೈವ ತು ಸಹಸ್ರಾಣಿ ತ್ರಿಗರ್ತಾನಾಂ ನರಾಧಿಪ।
07026011c ಚತ್ವಾರಿ ತು ಸಹಸ್ರಾಣಿ ವಾಸುದೇವಸ್ಯ ಯೇಽನುಗಾಃ।।
ನರಾಧಿಪ! ಅದರಲ್ಲಿ ಹತ್ತು ಸಾವಿರ ತ್ರಿಗರ್ತರಿದ್ದರು. ಮತ್ತು ನಾಲ್ಕು ಸಾವಿರ ವಾಸುದೇವನ ಅನುಯಾಯಿಗಳಿದ್ದರು.
07026012a ದಾರ್ಯಮಾಣಾಂ ಚಮೂಂ ದೃಷ್ಟ್ವಾ ಭಗದತ್ತೇನ ಮಾರಿಷ।
07026012c ಆಹೂಯಮಾನಸ್ಯ ಚ ತೈರಭವದ್ಧೃದಯಂ ದ್ವಿಧಾ।।
ಮಾರಿಷ! ಭಗದತ್ತನಿಂದ ನಾಶವಾಗುತ್ತಿರುವ ಸೇನೆಯನ್ನು ನೋಡಿ ಮತ್ತು ಆಹ್ವಾನಿಸುತ್ತಿದ್ದ ಅವರ ನಡುವೆ ಅವನ ಹೃದಯವು ಎರಡಾಯಿತು.
07026013a ಕಿಂ ನು ಶ್ರೇಯಸ್ಕರಂ ಕರ್ಮ ಭವೇದಿತಿ ವಿಚಿಂತಯನ್।
07026013c ಇತೋ ವಾ ವಿನಿವರ್ತೇಯಂ ಗಚ್ಚೇಯಂ ವಾ ಯುಧಿಷ್ಠಿರಂ।।
“ಏನನ್ನು ಮಾಡಿದರೆ ಶ್ರೇಯಸ್ಕರವಾದುದು? ಇವರ ಬಳಿ ಹಿಂದಿರುಗಲೇ ಅಥವಾ ಯುಧಿಷ್ಠಿರನ ಬಳಿ ಹೋಗಲೇ?” ಎಂದು ಚಿಂತಿಸಿದನು.
07026014a ತಸ್ಯ ಬುದ್ಧ್ಯಾ ವಿಚಾರ್ಯೈತದರ್ಜುನಸ್ಯ ಕುರೂದ್ವಹ।
07026014c ಅಭವದ್ಭೂಯಸೀ ಬುದ್ಧಿಃ ಸಂಶಪ್ತಕವಧೇ ಸ್ಥಿರಾ।।
ಕುರೂದ್ವಹ! ಸಂಶಪ್ತಕರನ್ನು ವಧಿಸುವುದೇ ಯಶಸ್ಕರವಾದುದು ಎಂದು ಅರ್ಜುನನ ಬುದ್ಧಿಯು ವಿಚಾರಿಸಲು ಅವನು ಅಲ್ಲಿಯೇ ನಿಂತನು.
07026015a ಸ ಸನ್ನಿವೃತ್ತಃ ಸಹಸಾ ಕಪಿಪ್ರವರಕೇತನಃ।
07026015c ಏಕೋ ರಥಸಹಸ್ರಾಣಿ ನಿಹಂತುಂ ವಾಸವೀ ರಣೇ।।
ತಕ್ಷಣವೇ ಆ ಕಪಿಪ್ರವರಕೇತನ ವಾಸವಿಯು ಒಬ್ಬನೇ ಸಹಸ್ರಾರು ರಥರನ್ನು ಸಂಹರಿಸಲು ಹಿಂದಿರುಗಿದನು.
07026016a ಸಾ ಹಿ ದುರ್ಯೋಧನಸ್ಯಾಸೀನ್ಮತಿಃ ಕರ್ಣಸ್ಯ ಚೋಭಯೋಃ।
07026016c ಅರ್ಜುನಸ್ಯ ವಧೋಪಾಯೇ ತೇನ ದ್ವೈಧಮಕಲ್ಪಯತ್।।
ಇದು ಅರ್ಜುನನ ವಧೆಗೆಂದು ದುರ್ಯೋಧನ-ಕರ್ಣರಿಬ್ಬರ ಉಪಾಯವಾಗಿದ್ದಿತು. ಅವರಿಂದಾಗಿ ರಣರಂಗವು ಎರಡು ಭಾಗವಾಗಿತ್ತು.
07026017a ಸ ತು ಸಂವರ್ತಯಾಮಾಸ ದ್ವೈಧೀಭಾವೇನ ಪಾಂಡವಃ।
07026017c ರಥೇನ ತು ರಥಾಗ್ರ್ಯಾಣಾಮಕರೋತ್ತಾಂ ಮೃಷಾ ತದಾ।।
ಡೋಲಾಯಮಾನನಾದ ಪಾಂಡವನು ರಥದಿಂದ ರಥಾಗ್ರಣ್ಯರನ್ನು ಸಂಹರಿಸಲು ಹಿಂದಿರುಗಿ ಬಂದನು.
07026018a ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಂ।
07026018c ವ್ಯಸೃಜನ್ನರ್ಜುನೇ ರಾಜನ್ಸಂಶಪ್ತಕಮಹಾರಥಾಃ।।
ಆಗ ಸಂಶಪ್ತಕ ಮಹಾರಥರು ಒಂದು ಲಕ್ಷ ನತಪರ್ವಣ ಶರಗಳನ್ನು ಅರ್ಜುನನ ಮೇಲೆ ಪ್ರಯೋಗಿಸಿದರು.
07026019a ನೈವ ಕುಂತೀಸುತಃ ಪಾರ್ಥೋ ನೈವ ಕೃಷ್ಣೋ ಜನಾರ್ದನಃ।
07026019c ನ ಹಯಾ ನ ರಥೋ ರಾಜನ್ದೃಶ್ಯಂತೇ ಸ್ಮ ಶರೈಶ್ಚಿತಾಃ।।
ರಾಜನ್! ಆ ಶರಗಳಿಂದ ಮುಚ್ಚಿಹೋಗಲು ಕುಂತೀಸುತ ಪಾರ್ಥನಾಗಲೀ ಕೃಷ್ಣ ಜನಾರ್ದನನಾಗಲೀ, ರಥವಾಗಲೀ ಕುದುರೆಗಳಾಗಲೀ ಕಾಣಲಿಲ್ಲ.
07026020a ಯದಾ ಮೋಹಮನುಪ್ರಾಪ್ತಃ ಸಸ್ವೇದಶ್ಚ ಜನಾರ್ದನಃ।
07026020c ತತಸ್ತಾನ್ಪ್ರಾಯಶಃ ಪಾರ್ಥೋ ವಜ್ರಾಸ್ತ್ರೇಣ ನಿಜಘ್ನಿವಾನ್।।
ಆಗ ಮೋಹಿತನಾಗಿ ಜನಾರ್ದನನು ಬೆವತುಹೋಗಲು ಪಾರ್ಥನು ವಜ್ರಾಸ್ತ್ರದಿಂದ ಹೆಚ್ಚುಭಾಗ ಅವರನ್ನು ಸಂಹರಿಸಿದನು.
07026021a ಶತಶಃ ಪಾಣಯಶ್ಚಿನ್ನಾಃ ಸೇಷುಜ್ಯಾತಲಕಾರ್ಮುಕಾಃ।
07026021c ಕೇತವೋ ವಾಜಿನಃ ಸೂತಾ ರಥಿನಶ್ಚಾಪತನ್ ಕ್ಷಿತೌ।।
ಬಾಣ-ಶಿಂಜಿನಿ-ಧನುಸ್ಸುಗಳನ್ನು ಹಿಡಿದಿದ್ದ ನೂರಾರು ಕೈಗಳು ತುಂಡಾಗಿ, ಧ್ವಜಗಳು, ಕುದುರೆಗಳು, ಸೂತರು ಮತ್ತು ರಥಿಗಳು ಭೂಮಿಯ ಮೇಲೆ ಬಿದ್ದವು.
07026022a ದ್ರುಮಾಚಲಾಗ್ರಾಂಬುಧರೈಃ ಸಮರೂಪಾಃ ಸುಕಲ್ಪಿತಾಃ।
07026022c ಹತಾರೋಹಾಃ ಕ್ಷಿತೌ ಪೇತುರ್ದ್ವಿಪಾಃ ಪಾರ್ಥಶರಾಹತಾಃ।।
ವೃಕ್ಷ, ಪರ್ವತ ಮತ್ತು ಮೋಡಗಳಂತಿದ್ದ, ಸುಕಲ್ಪಿತಗೊಂಡಿದ್ದ ಆನೆಗಳು ಪಾರ್ಥನ ಶರಗಳಿಂದ ಹತಗೊಂಡು, ಮಾವುತರನ್ನೂ ಕಳೆದುಕೊಂಡು ಭೂಮಿಯ ಮೇಲೆ ಬಿದ್ದವು.
07026023a ವಿಪ್ರವಿದ್ಧಕುಥಾವಲ್ಗಾಶ್ಚಿನ್ನಭಾಂಡಾಃ ಪರಾಸವಃ।
07026023c ಸಾರೋಹಾಸ್ತುರಗಾಃ ಪೇತುರ್ಮಥಿತಾಃ ಪಾರ್ಥಮಾರ್ಗಣೈಃ।।
ಅವುಗಳ ಬೆನ್ನಮೇಲಿದ್ದ ಚಿತ್ರಗಂಬಳಿಗಳೂ ಆಭರಣಗಳೂ ಚೆಲ್ಲಪಿಲ್ಲಿಯಾಗಿ ಬಿದ್ದವು. ಪಾರ್ಥನ ಮಾರ್ಗಣಗಳಿಂದ ಮಥಿತವಾದ ಕುದುರೆಗಳು ಆರೋಹಿಗಳೊಂದಿಗೆ ಉರುಳಿ ಬಿದ್ದವು.
07026024a ಸರ್ಷ್ಟಿಚರ್ಮಾಸಿನಖರಾಃ ಸಮುದ್ಗರಪರಶ್ವಧಾಃ।
07026024c ಸಂಚಿನ್ನಾ ಬಾಹವಃ ಪೇತುರ್ನೃಣಾಂ ಭಲ್ಲೈಃ ಕಿರೀಟಿನಾ।।
ಕಿರೀಟಿಯ ಭಲ್ಲಗಳಿಂದ ಋಷ್ಟಿ, ಪ್ರಾಸ, ಖಡ್ಗ, ನಖರ, ಮುದ್ಗರ ಮತ್ತು ಪರಶುಗಳನ್ನು ಹಿಡಿದ ಮನುಷ್ಯರ ಬಾಹುಗಳು ಕತ್ತರಿಸಿ ಬಿದ್ದವು.
07026025a ಬಾಲಾದಿತ್ಯಾಂಬುಜೇಂದೂನಾಂ ತುಲ್ಯರೂಪಾಣಿ ಮಾರಿಷ।
07026025c ಸಂಚಿನ್ನಾನ್ಯರ್ಜುನಶರೈಃ ಶಿರಾಂಸ್ಯುರ್ವೀಂ ಪ್ರಪೇದಿರೇ।।
ಮಾರಿಷ! ಬಾಲಾದಿತ್ಯ, ಕಮಲ ಮತ್ತು ಚಂದ್ರರ ರೂಪದಂತಿರುವ ಶಿರಗಳು ಅರ್ಜುನನ ಶರಗಳಿಂದ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಬಿದ್ದವು.
07026026a ಜಜ್ವಾಲಾಲಂಕೃತೈಃ ಸೇನಾ ಪತ್ರಿಭಿಃ ಪ್ರಾಣಭೋಜನೈಃ।
07026026c ನಾನಾಲಿಂಗೈಸ್ತದಾಮಿತ್ರಾನ್ಕ್ರುದ್ಧೇ ನಿಘ್ನತಿ ಫಲ್ಗುನೇ।।
ನಾನಾ ವಿಧದ ಪ್ರಾಣವನ್ನೇ ಭೋಜನವಾಗುಳ್ಳ ಪತ್ರಿಗಳಿಂದ ಕ್ರುದ್ಧನಾದ ಫಲ್ಗುನನು ಅಲಂಕೃತ ಸೇನೆಯನ್ನು ಸುಟ್ಟು ಸಂಹರಿಸಿದನು.
07026027a ಕ್ಷೋಭಯಂತಂ ತದಾ ಸೇನಾಂ ದ್ವಿರದಂ ನಲಿನೀಮಿವ।
07026027c ಧನಂಜಯಂ ಭೂತಗಣಾಃ ಸಾಧು ಸಾಧ್ವಿತ್ಯಪೂಜಯನ್।।
ಆನೆಯು ಸರೋವರವನ್ನು ಕ್ಷೋಭೆಗೊಳಿಸುವಂತೆ ಸೇನೆಯನ್ನು ಕ್ಷೋಭೆಗೊಳಿಸಿದ ಧನಂಜಯನನ್ನು ಭೂತಗಣಗಳು “ಸಾಧು! ಸಾಧು!” ಎಂದು ಗೌರವಿಸಿತು.
07026028a ದೃಷ್ಟ್ವಾ ತತ್ಕರ್ಮ ಪಾರ್ಥಸ್ಯ ವಾಸವಸ್ಯೇವ ಮಾಧವಃ।
07026028c ವಿಸ್ಮಯಂ ಪರಮಂ ಗತ್ವಾ ತಲಮಾಹತ್ಯ ಪೂಜಯತ್।।
ವಾಸವನ ಪರಾಕ್ರಮದ ಪಾರ್ಥನ ಆ ಕರ್ಮವನ್ನು ನೋಡಿ ಮಾಧವನು ಪರಮ ವಿಸ್ಮಯಗೊಂಡು ಕೈಜೋಡಿಸಿ ಗೌರವಿಸಿದನು.
07026029a ತತಃ ಸಂಶಪ್ತಕಾನ್ ಹತ್ವಾ ಭೂಯಿಷ್ಠಂ ಯೇ ವ್ಯವಸ್ಥಿತಾಃ।
07026029c ಭಗದತ್ತಾಯ ಯಾಹೀತಿ ಪಾರ್ಥಃ ಕೃಷ್ಣಮಚೋದಯತ್।।
ಆಗ ಸಂಶಪ್ತಕರನ್ನು ಸಂಹರಿಸಿ ಪುನಃ ವ್ಯವಸ್ಥಿತನಾಗಿ ಪಾರ್ಥನು “ಭಗದತ್ತನ ಬಳಿ ಹೋಗು!” ಎಂದು ಕೃಷ್ಣನನ್ನು ಪ್ರಚೋದಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಸಂಶಪ್ತಕವಧೇ ಷಡ್ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಸಂಶಪ್ತಕವಧ ಎನ್ನುವ ಇಪ್ಪತ್ತಾರನೇ ಅಧ್ಯಾಯವು.