ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಸಂಶಪ್ತಕವಧ ಪರ್ವ
ಅಧ್ಯಾಯ 25
ಸಾರ
ಭೀಮಸೇನನು ಕೌರವರ ಗಜಸೇನೆಯನ್ನು ನಾಶಪಡಿಸಿ ದುರ್ಯೋಧನನೊಂದಿಗೆ ಯುದ್ಧಮಾಡಿದುದು (1-18). ಭಗದತ್ತನ ಯುದ್ಧ (19-59).
07025001 ಧೃತರಾಷ್ಟ್ರ ಉವಾಚ।
07025001a ತೇಷ್ವೇವಂ ಸನ್ನಿವೃತ್ತೇಷು ಪ್ರತ್ಯುದ್ಯಾತೇಷು ಭಾಗಶಃ।
07025001c ಕಥಂ ಯುಯುಧಿರೇ ಪಾರ್ಥಾ ಮಾಮಕಾಶ್ಚ ತರಸ್ವಿನಃ।।
ಧೃತರಾಷ್ಟ್ರನು ಹೇಳಿದನು: “ಅವರು ಹೀಗೆ ಹಿಂದಿರುಗಿ ತಮ ತಮಗೆ ಬೇಕಾದವರೊಂದಿಗೆ ಹೋರಾಡುವಾಗ ತರಸ್ವಿಗಳಾಗಿದ್ದ ನಮ್ಮವರು ಮತ್ತು ಪಾರ್ಥರು ಹೇಗೆ ಯುದ್ಧಮಾಡಿದರು?
07025002a ಕಿಮರ್ಜುನಶ್ಚಾಪ್ಯಕರೋತ್ಸಂಶಪ್ತಕಬಲಂ ಪ್ರತಿ।
07025002c ಸಂಶಪ್ತಕಾ ವಾ ಪಾರ್ಥಸ್ಯ ಕಿಮಕುರ್ವತ ಸಂಜಯ।।
ಸಂಶಪ್ತಕರ ಸೇನೆಯ ಕುರಿತು ಅರ್ಜುನನು ಏನು ಮಾಡಿದನು? ಮತ್ತು ಸಂಜಯ! ಪಾರ್ಥನ ಕುರಿತು ಸಂಶಪ್ತಕರು ಏನು ಮಾಡಿದರು?” 7025003 ಸಂಜಯ ಉವಾಚ।
07025003a ತಥಾ ತೇಷು ನಿವೃತ್ತೇಷು ಪ್ರತ್ಯುದ್ಯಾತೇಷು ಭಾಗಶಃ।
07025003c ಸ್ವಯಮಭ್ಯದ್ರವದ್ಭೀಮಂ ನಾಗಾನೀಕೇನ ತೇ ಸುತಃ।।
ಸಂಜಯನು ಹೇಳಿದನು: “ಅವರು ಹಾಗೆ ಹಿಂದಿರುಗಿ ತಮ ತಮಗೆ ಬೇಕಾದವರೊಂದಿಗೆ ಹೋರಾಡುತ್ತಿರಲು ಸ್ವಯಂ ನಿನ್ನ ಮಗನು ಗಜಸೇನೆಯೊಂದಿಗೆ ಭೀಮನ ಮೇಲೆ ಎರಗಿದನು.
07025004a ಸ ನಾಗ ಇವ ನಾಗೇನ ಗೋವೃಷೇಣೇವ ಗೋವೃಷಃ।
07025004c ಸಮಾಹೂತಃ ಸ್ವಯಂ ರಾಜ್ಞಾ ನಾಗಾನೀಕಮುಪಾದ್ರವತ್।।
ಸಲಗನಿಂದ ಕಾಳಗಕ್ಕೆ ಸೆಳೆಯಲ್ಪಟ್ಟ ಸಲಗದಂತೆ ಮತ್ತು ಗೂಳಿಯಿಂದ ಕರೆಯಲ್ಪಟ್ಟ ಗೂಳಿಯಂತೆ ಸ್ವಯಂ ರಾಜನಿಂದಲೇ ನಡೆಸಲ್ಪಡುತ್ತಿದ್ದ ಗಜಸೇನೆಯನ್ನು ಅವನು ಆಕ್ರಮಣಿಸಿದನು.
07025005a ಸ ಯುದ್ಧಕುಶಲಃ ಪಾರ್ಥೋ ಬಾಹುವೀರ್ಯೇಣ ಚಾನ್ವಿತಃ।
07025005c ಅಭಿನತ್ಕುಂಜರಾನೀಕಮಚಿರೇಣೈವ ಮಾರಿಷ।।
ಮಾರಿಷ! ಯುದ್ಧಕುಶಲನಾದ ಮತ್ತು ಬಾಹುವೀರ್ಯದಿಂದ ಸಮನ್ವಿತನಾದ ಆ ಪಾರ್ಥನು ಆನೆಗಳ ಸೇನೆಯನ್ನು ಕ್ಷಣದಲ್ಲಿಯೇ ಧ್ವಂಸಮಾಡಿದನು.
07025006a ತೇ ಗಜಾ ಗಿರಿಸಂಕಾಶಾಃ ಕ್ಷರಂತಃ ಸರ್ವತೋ ಮದಂ।
07025006c ಭೀಮಸೇನಸ್ಯ ನಾರಾಚೈರ್ವಿಮುಖಾ ವಿಮದೀಕೃತಾಃ।।
ಮದಿಸಿ ಎಲ್ಲಕಡೆ ಓಡುತ್ತಿರುವ, ಪರ್ವತಗಳಂತಿದ್ದ ಆ ಆನೆಗಳು ಭೀಮಸೇನನ ನಾರಾಚಗಳಿಗೆ ಸಿಲುಕಿ ಮತ್ತನ್ನು ಕಳೆದುಕೊಂಡು ಹಿಮ್ಮೆಟ್ಟಿದವು.
07025007a ವಿಧಮೇದಭ್ರಜಾಲಾನಿ ಯಥಾ ವಾಯುಃ ಸಮಂತತಃ।
07025007c ವ್ಯಧಮತ್ತಾನ್ಯನೀಕಾನಿ ತಥೈವ ಪವನಾತ್ಮಜಃ।।
ವಾಯುವು ಹೇಗೆ ಮೋಡಗಳ ಜಾಲಗಳನ್ನು ಎಲ್ಲಕಡೆ ಚದುರಿಸುತ್ತಾನೋ ಹಾಗೆಯೇ ಪವನಾತ್ಮಜನೂ ಕೂಡ ಗಜಸೇನೆಗಳನ್ನು ಚಲ್ಲಾಪಿಲ್ಲಿ ಮಾಡಿದನು.
07025008a ಸ ತೇಷು ವಿಸೃಜನ್ಬಾಣಾನ್ಭೀಮೋ ನಾಗೇಷ್ವಶೋಭತ।
07025008c ಭುವನೇಷ್ವಿವ ಸರ್ವೇಷು ಗಭಸ್ತೀನುದಿತೋ ರವಿಃ।।
ಕಿರಣಗಳಿಂದ ಜಗತ್ತೆಲ್ಲವನ್ನೂ ಬೆಳಗಿಸುವ ಉದಿಸುತ್ತಿರುವ ರವಿಯಂತೆ ಭೀಮನು ಆನೆಗಳ ಮೇಲೆ ಬಾಣಗಳನ್ನು ಪ್ರಯೋಗಿಸಿ ಶೋಭಿಸಿದನು.
07025009a ತೇ ಭೀಮಬಾಣೈಃ ಶತಶಃ ಸಂಸ್ಯೂತಾ ವಿಬಭುರ್ಗಜಾಃ।
07025009c ಗಭಸ್ತಿಭಿರಿವಾರ್ಕಸ್ಯ ವ್ಯೋಮ್ನಿ ನಾನಾಬಲಾಹಕಾಃ।।
ಆಕಾಶದಲ್ಲಿ ನಾನಾ ಮೋಡಗಳು ಸೂರ್ಯನ ಕಿರಣಗಳಿಂದ ಬೆಳಗುತ್ತಿರುವಂತೆ ಆನೆಗಳು ಶರೀರದ ತುಂಬ ಭೀಮನ ನೂರಾರು ಬಾಣಗಳಿಂದ ಹೊಡೆಯಲ್ಪಟ್ಟು ಪ್ರಕಾಶಿಸಿದವು.
07025010a ತಥಾ ಗಜಾನಾಂ ಕದನಂ ಕುರ್ವಾಣಮನಿಲಾತ್ಮಜಂ।
07025010c ಕ್ರುದ್ಧೋ ದುರ್ಯೋಧನೋಽಭ್ಯೇತ್ಯ ಪ್ರತ್ಯವಿಧ್ಯಚ್ಚಿತೈಃ ಶರೈಃ।।
ಈ ರೀತಿ ಆನೆಗಳೊಡನೆ ಕದನ ಮಾಡುತ್ತಿದ್ದ ಅನಿಲಾತ್ಮಜನ ಬಳಿ ಕ್ರುದ್ಧನಾದ ದುರ್ಯೋಧನನು ಬಂದು ನಿಶಿತ ಶರಗಳಿಂದ ಹೊಡೆದನು.
07025011a ತತಃ ಕ್ಷಣೇನ ಕ್ಷಿತಿಪಂ ಕ್ಷತಜಪ್ರತಿಮೇಕ್ಷಣಃ।
07025011c ಕ್ಷಯಂ ನಿನೀಷುರ್ನಿಶಿತೈರ್ಭೀಮೋ ವಿವ್ಯಾಧ ಪತ್ರಿಭಿಃ।।
ಒಡನೆಯೇ ಗಾಯದಿಂದ ಹೊರಡುವ ರಕ್ತದಂತೆ ಕಣ್ಣುಗಳನ್ನು ಕೆಂಪು ಮಾಡಿಕೊಂಡು ಭೀಮನು ಅವನನ್ನು ಕೊನೆಗೊಳಿಸಲು ಬಯಸಿ ನಿಶಿತ ಪತ್ರಿಗಳಿಂದ ಹೊಡೆದನು.
07025012a ಸ ಶರಾರ್ಪಿತಸರ್ವಾಂಗಃ ಕ್ರುದ್ಧೋ ವಿವ್ಯಾಧ ಪಾಂಡವಂ।
07025012c ನಾರಾಚೈರರ್ಕರಶ್ಮ್ಯಾಭೈರ್ಭೀಮಸೇನಂ ಸ್ಮಯನ್ನಿವ।।
ಶರೀರವೆಲ್ಲ ಬಾಣಗಳಿಂದ ಚುಚ್ಚಲ್ಪಡಲು ಕ್ರುದ್ಧನಾದ ಅವನು ನಸುನಗುತ್ತಾ ಪಾಂಡವ ಭೀಮಸೇನನನ್ನು ಸೂರ್ಯನ ರಶ್ಮಿಗಳಂತಿದ್ದ ನಾರಾಚಗಳಿಂದ ಹೊಡೆದನು.
07025013a ತಸ್ಯ ನಾಗಂ ಮಣಿಮಯಂ ರತ್ನಚಿತ್ರಂ ಧ್ವಜೇ ಸ್ಥಿತಂ।
07025013c ಭಲ್ಲಾಭ್ಯಾಂ ಕಾರ್ಮುಕಂ ಚೈವ ಕ್ಷಿಪ್ರಂ ಚಿಚ್ಚೇದ ಪಾಂಡವಃ।।
ತಕ್ಷಣವೇ ಪಾಂಡವನು ಎರಡು ಭಲ್ಲಗಳಿಂದ ಅವನ ಧ್ವಜದಲ್ಲಿದ್ದ ಮಣಿಮಯ ರತ್ನಚಿತ್ರಿತ ಆನೆಯನ್ನೂ ಮತ್ತು ಬಿಲ್ಲನ್ನೂ ಕತ್ತರಿಸಿದನು.
07025014a ದುರ್ಯೋಧನಂ ಪೀಡ್ಯಮಾನಂ ದೃಷ್ಟ್ವಾ ಭೀಮೇನ ಮಾರಿಷ।
07025014c ಚುಕ್ಷೋಭಯಿಷುರಭ್ಯಾಗಾದಂಗೋ ಮಾತಂಗಮಾಸ್ಥಿತಃ।।
ಮಾರಿಷ! ಈ ರೀತಿ ದುರ್ಯೋಧನನನ್ನು ಪೀಡಿಸುತ್ತಿದ್ದ ಭೀಮನನ್ನು ಕಂಡು ಅವನನ್ನು ಅಲ್ಲಿಂದ ಕದಲಿಸಲು ಆನೆಯನ್ನೇರಿದ್ದ ಅಂಗರಾಜನು ಧಾವಿಸಿ ಬಂದನು.
07025015a ತಮಾಪತಂತಂ ಮಾತಂಗಮಂಬುದಪ್ರತಿಮನಂ।
07025015c ಕುಂಭಾಂತರೇ ಭೀಮಸೇನೋ ನಾರಾಚೇನಾರ್ದಯದ್ಭೃಶಂ।।
ಮೋಡಗಳಂತೆ ಗುಡುಗುತ್ತ ತನ್ನ ಮೇಲೆ ಎರಗುತ್ತಿದ್ದ ಆ ಆನೆಯನ್ನು ನೋಡಿ ಭೀಮಸೇನನು ನಾರಾಚಗಳಿಂದ ಅದರ ಕುಂಭಸ್ಥಳಕ್ಕೆ ಹೊಡೆದನು.
07025016a ತಸ್ಯ ಕಾಯಂ ವಿನಿರ್ಭಿದ್ಯ ಮಮಜ್ಜ ಧರಣೀತಲೇ।
07025016c ತತಃ ಪಪಾತ ದ್ವಿರದೋ ವಜ್ರಾಹತ ಇವಾಚಲಃ।।
ಅವು ಅದರ ದೇಹವನ್ನು ಸೀಳಿ ಭೂಮಿಯಲ್ಲಿ ಹುಗಿದುಕೊಂಡವು. ಅನಂತರ ಆ ಅನೆಯು ವಜ್ರವು ತಾಗಿದ ಪರ್ವತದಂತೆ ಕೆಳಗುರುಳಿತು.
07025017a ತಸ್ಯಾವರ್ಜಿತನಾಗಸ್ಯ ಮ್ಲೇಚ್ಚಸ್ಯಾವಪತಿಷ್ಯತಃ।
07025017c ಶಿರಶ್ಚಿಚ್ಚೇದ ಭಲ್ಲೇನ ಕ್ಷಿಪ್ರಕಾರೀ ವೃಕೋದರಃ।।
ಆ ಆನೆಯಿಂದ ಕೆಳಗೆ ಹಾರಲು ಪ್ರಯತ್ನಿಸುತ್ತಿದ್ದ ಮ್ಲೇಚ್ಛರ ರಾಜನ ಶಿರವನ್ನು ಕ್ಷಿಪ್ರಕಾರೀ ವೃಕೋದರನು ಭಲ್ಲದಿಂದ ಕತ್ತರಿಸಿದನು.
07025018a ತಸ್ಮಿನ್ನಿಪತಿತೇ ವೀರೇ ಸಂಪ್ರಾದ್ರವತ ಸಾ ಚಮೂಃ।
07025018c ಸಂಭ್ರಾಂತಾಶ್ವದ್ವಿಪರಥಾ ಪದಾತೀನವಮೃದ್ನತೀ।।
ಆ ವೀರನು ಕೆಳಗೆ ಬೀಳಲು ಅವನ ಸೇನೆಯು ಪಲಾಯನ ಮಾಡಿತು. ಸಂಭ್ರಾಂತರಾಗಿ ಓಡಿ ಹೋಗುತ್ತಿದ್ದ ಕುದುರೆ-ಆನೆ-ರಥಗಳು ಪದಾತಿಗಳನ್ನೇ ತುಳಿದವು.
07025019a ತೇಷ್ವನೀಕೇಷು ಸರ್ವೇಷು ವಿದ್ರವತ್ಸು ಸಮಂತತಃ।
07025019c ಪ್ರಾಗ್ಜ್ಯೋತಿಷಸ್ತತೋ ಭೀಮಂ ಕುಂಜರೇಣ ಸಮಾದ್ರವತ್।।
ಆ ಸೇನೆಗಳು ಎಲ್ಲ ಕಡೆ ಓಡಿ ಹೋಗುತ್ತಿರಲು ಪ್ರಾಗ್ಜ್ಯೋತಿಷನು ಆನೆಯೊಂದಿಗೆ ಆಕ್ರಮಣಿಸಿದನು.
07025020a ಯೇನ ನಾಗೇನ ಮಘವಾನಜಯದ್ದೈತ್ಯದಾನವಾನ್।
07025020c ಸ ನಾಗಪ್ರವರೋ ಭೀಮಂ ಸಹಸಾ ಸಮುಪಾದ್ರವತ್।।
ಯಾವ ಆನೆಯ ಮೇಲೆ ಕುಳಿತು ಮಘವಾನನು ದೈತ್ಯ-ದಾನವರನ್ನು ಜಯಿಸಿದನೋ ಅದೇ ಶ್ರೇಷ್ಠ ಆನೆಗಳ ಕುಲದಲ್ಲಿ ಹುಟ್ಟಿದ ಆನೆಯ ಮೇಲೆ ಕುಳಿತು ಒಮ್ಮಿಂದೊಮ್ಮೆಲೇ ಆಕ್ರಮಣಿಸಿದನು.
07025021a ಶ್ರವಣಾಭ್ಯಾಮಥೋ ಪದ್ಭ್ಯಾಂ ಸಂಹತೇನ ಕರೇಣ ಚ।
07025021c ವ್ಯಾವೃತ್ತನಯನಃ ಕ್ರುದ್ಧಃ ಪ್ರದಹನ್ನಿವ ಪಾಂಡವಂ।।
ಕ್ರುದ್ದವಾದ ಆ ಶ್ರೇಷ್ಠ ಆನೆಯು ಕಣ್ಣುಗಳನ್ನು ಅಗಲ ಮಾಡಿಕೊಂಡು ತನ್ನ ಎರಡೂ ಮುಂಗಾಲುಗಳಿಂದ ಮತ್ತು ಸುತ್ತಿಕೊಂಡಿರುವ ಸೊಂಡಿಲಿನಿಂದ ಮಥಿಸಿಬಿಡುವಂತೆ ಪಾಂಡವನ ಮೇಲೆ ಎರಗಿತು.
07025022a ತತಃ ಸರ್ವಸ್ಯ ಸೈನ್ಯಸ್ಯ ನಾದಃ ಸಮಭವನ್ಮಹಾನ್।
07025022c ಹಾ ಹಾ ವಿನಿಹತೋ ಭೀಮಃ ಕುಂಜರೇಣೇತಿ ಮಾರಿಷ।।
ಮಾರಿಷ! ಆಗ “ಹಾಹಾ! ಆನೆಯಿಂದ ಭೀಮನು ಹತನಾದನು!” ಎಂದು ಸೈನ್ಯದ ಎಲ್ಲ ಕಡೆಗಳಲ್ಲಿ ಮಹಾನಾದವುಂಟಾಯಿತು.
07025023a ತೇನ ನಾದೇನ ವಿತ್ರಸ್ತಾ ಪಾಂಡವಾನಾಮನೀಕಿನೀ।
07025023c ಸಹಸಾಭ್ಯದ್ರವದ್ರಾಜನ್ಯತ್ರ ತಸ್ಥೌ ವೃಕೋದರಃ।।
ರಾಜನ್! ಆ ಕೂಗಿನಿಂದ ತತ್ತರಿಸಿದ ಪಾಂಡವರ ಸೇನೆಯು ತಕ್ಷಣವೇ ವೃಕೋದರನು ಎಲ್ಲಿ ನಿಂತಿದ್ದನೋ ಅಲ್ಲಿಗೆ ಧಾವಿಸಿತು.
07025024a ತತೋ ಯುಧಿಷ್ಠಿರೋ ರಾಜಾ ಹತಂ ಮತ್ವಾ ವೃಕೋದರಂ।
07025024c ಭಗದತ್ತಂ ಸಪಾಂಚಾಲಃ ಸರ್ವತಃ ಸಮವಾರಯತ್।।
ಆಗ ರಾಜಾ ಯುಧಿಷ್ಠಿರನು ವೃಕೋದರನು ಹತನಾದನೆಂದು ತಿಳಿದು ಪಾಂಚಾಲರೊಂದಿಗೆ ಭಗದತ್ತನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.
07025025a ತಂ ರಥೈ ರಥಿನಾಂ ಶ್ರೇಷ್ಠಾಃ ಪರಿವಾರ್ಯ ಸಮಂತತಃ।
07025025c ಅವಾಕಿರಂ ಶರೈಸ್ತೀಕ್ಷ್ಣೈಃ ಶತಶೋಽಥ ಸಹಸ್ರಶಃ।।
ರಥಿಗಳಲ್ಲಿ ಶ್ರೇಷ್ಠರು ರಥಗಳಿಂದ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದು ನೂರಾರು ಸಹಸ್ರಾರು ತೀಕ್ಷ್ಣ ಶರಗಳಿಂದ ಮುಚ್ಚಿದರು.
07025026a ಸ ವಿಘಾತಂ ಪೃಷತ್ಕಾನಾಮಂಕುಶೇನ ಸಮಾಚರನ್।
07025026c ಗಜೇನ ಪಾಂಡುಪಾಂಚಾಲಾನ್ವ್ಯಧಮತ್ಪರ್ವತೇಶ್ವರಃ।।
ಆ ಪರ್ವತೇಶ್ವರನು ಅಂಕುಶದಿಂದಲೇ ತನ್ನ ಮೇಲೆ ಬೀಳುತ್ತಿದ್ದ ಶರಗಳನ್ನು ತಡೆದು ಆನೆಯೊಂದಿಗೆ ಪಾಂಡವ-ಪಾಂಚಾಲರನ್ನು ಜಜ್ಜಿದನು.
07025027a ತದದ್ಭುತಮಪಶ್ಯಾಮ ಭಗದತ್ತಸ್ಯ ಸಂಯುಗೇ।
07025027c ತಥಾ ವೃದ್ಧಸ್ಯ ಚರಿತಂ ಕುಂಜರೇಣ ವಿಶಾಂ ಪತೇ।।
ವಿಶಾಂಪತೇ! ಆಗ ನಾವು ಸಂಯುಗದಲ್ಲಿ ಆ ವೃದ್ಧ ಭಗದತ್ತನ ಆನೆಯು ಮಾಡಿ ತೋರಿಸಿದ ಅದ್ಭುತವನ್ನು ಕಂಡೆವು.
07025028a ತತೋ ರಾಜಾ ದಶಾರ್ಣಾನಾಂ ಪ್ರಾಗ್ಜ್ಯೋತಿಷಮುಪಾದ್ರವತ್।
07025028c ತಿರ್ಯಗ್ಯಾತೇನ ನಾಗೇನ ಸಮದೇನಾಶುಗಾಮಿನಾ।।
ಆಗ ದಶಾರ್ಣರ ರಾಜನು ಮದೋದಕವನ್ನು ಸುರಿಸುತ್ತಿದ್ದ, ಶೀಘ್ರವಾಗಿ ಸಾಗುತ್ತಿದ್ದ, ಮತ್ತು ವಕ್ರಗತಿಯಲ್ಲಿ ಹೋಗುತ್ತಿದ್ದ ಆನೆಯ ಮೇಲೇರಿ ಪ್ರಾಗ್ಜ್ಯೋತಿಷನನ್ನು ಆಕ್ರಮಣಿಸಿದನು.
07025029a ತಯೋರ್ಯುದ್ಧಂ ಸಮಭವನ್ನಾಗಯೋರ್ಭೀಮರೂಪಯೋಃ।
07025029c ಸಪಕ್ಷಯೋಃ ಪರ್ವತಯೋರ್ಯಥಾ ಸದ್ರುಮಯೋಃ ಪುರಾ।।
ಭೀಮರೂಪದ ಆ ಎರಡು ಆನೆಗಳ ನಡುವೆ ಹಿಂದೆ ರೆಕ್ಕೆಗಳನ್ನು ಹೊಂದಿದ್ದ ಪರ್ವತಗಳು ವೃಕ್ಷಗಳೊಂದಿಗೆ ಹೊಡೆದಾಡುತ್ತಿದ್ದಂತೆ ಭಯಂಕರ ಯುದ್ಧವು ನಡೆಯಿತು.
07025030a ಪ್ರಾಗ್ಜ್ಯೋತಿಷಪತೇರ್ನಾಗಃ ಸನ್ನಿಪತ್ಯಾಪವೃತ್ಯ ಚ।
07025030c ಪಾರ್ಶ್ವೇ ದಶಾರ್ಣಾಧಿಪತೇರ್ಭಿತ್ತ್ವಾ ನಾಗಮಪಾತಯತ್।।
ಪ್ರಾಗ್ಜ್ಯೋತಿಷಪತಿಯ ಆನೆಯು ಹಿಂದೆ ಸರಿದು ಪುನಃ ರಭಸದಿಂದ ಮುಂದೆ ಬಂದು ದಶಾರ್ಣಾಧಿಪತಿಯ ಆನೆಯ ಪಾರ್ಶ್ವಭಾಗವನ್ನು ಪ್ರಹರಿಸಿ ಸೀಳಿ ಕೆಳಗುರುಳಿಸಿತು.
07025031a ತೋಮರೈಃ ಸೂರ್ಯರಶ್ಮ್ಯಾಭೈರ್ಭಗದತ್ತೋಽಥ ಸಪ್ತಭಿಃ।
07025031c ಜಘಾನ ದ್ವಿರದಸ್ಥಂ ತಂ ಶತ್ರುಂ ಪ್ರಚಲಿತಾಸನಂ।।
ಆಗ ಸೂರ್ಯನ ರಶ್ಮಿಗಳಂತೆ ಹೊಳೆಯುತ್ತಿದ್ದ ಏಳು ತೋಮರಗಳಿಂದ ಆನೆಯ ಮೇಲೆ ಕುಳಿತಿದ್ದ ಶತ್ರುವನ್ನು ಕೆಳಗೆ ಬೀಳುವಾಗ ಸಂಹರಿಸಿದನು.
07025032a ಉಪಸೃತ್ಯ ತು ರಾಜಾನಂ ಭಗದತ್ತಂ ಯುಧಿಷ್ಠಿರಃ।
07025032c ರಥಾನೀಕೇನ ಮಹತಾ ಸರ್ವತಃ ಪರ್ಯವಾರಯತ್।।
ಯುಧಿಷ್ಠಿರನಾದರೋ ರಾಜಾ ಭಗದತ್ತನ ಮೇಲೆ ಪ್ರಹರಿಸುತ್ತಾ ಮಹಾ ರಥಸೇನೆಯೊಂದಿಗೆ ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.
07025033a ಸ ಕುಂಜರಸ್ಥೋ ರಥಿಭಿಃ ಶುಶುಭೇ ಸರ್ವತೋ ವೃತಃ।
07025033c ಪರ್ವತೇ ವನಮಧ್ಯಸ್ಥೋ ಜ್ವಲನ್ನಿವ ಹುತಾಶನಃ।।
ಪರ್ವತದ ಮೇಲಿನ ವನ ಮಧ್ಯದಲ್ಲಿ ಪ್ರಜ್ವಲಿಸುತ್ತಿರುವ ಹುತಾಶನನಂತೆ ರಥಗಳಿಂದ ಎಲ್ಲಕಡೆಗಳಲ್ಲಿ ಸುತ್ತುವರೆಯಲ್ಪಟ್ಟಿದ್ದ ಆನೆಯ ಮೇಲೆ ಕುಳಿತಿದ್ದ ಅವನು ಶೋಭಿಸಿದನು.
07025034a ಮಂಡಲಂ ಸರ್ವತಃ ಶ್ಲಿಷ್ಟಂ ರಥಿನಾಮುಗ್ರಧನ್ವಿನಾಂ।
07025034c ಕಿರತಾಂ ಶರವರ್ಷಾಣಿ ಸ ನಾಗಃ ಪರ್ಯವರ್ತತ।।
ಬಾಣಗಳ ಮಳೆಗರೆಯುತ್ತಿದ್ದ ಉಗ್ರಧನ್ವಿ ರಥಿಗಳ ಮಂಡಲವು ಎಲ್ಲ ಕಡೆಗಳಿಂದಲೂ ಆನೆಯ ಮೇಲೆ ಆಕ್ರಮಣ ನಡೆಸುತ್ತಿತ್ತು.
07025035a ತತಃ ಪ್ರಾಗ್ಜ್ಯೋತಿಷೋ ರಾಜಾ ಪರಿಗೃಹ್ಯ ದ್ವಿಪರ್ಷಭಂ।
07025035c ಪ್ರೇಷಯಾಮಾಸ ಸಹಸಾ ಯುಯುಧಾನರಥಂ ಪ್ರತಿ।।
ಆಗ ಪ್ರಾಗ್ಜ್ಯೋತಿಷದ ರಾಜನು ಆ ಮಹಾಗಜವನ್ನು ಹತೋಟಿಗೆ ತೆಗೆದುಕೊಂಡು ಯುಯುಧಾನನ ರಥದ ಕಡೆ ರಭಸದಿಂದ ನುಗ್ಗಿಸಿದನು.
07025036a ಶಿನೇಃ ಪೌತ್ರಸ್ಯ ತು ರಥಂ ಪರಿಗೃಹ್ಯ ಮಹಾದ್ವಿಪಃ।
07025036c ಅಭಿಚಿಕ್ಷೇಪ ವೇಗೇನ ಯುಯುಧಾನಸ್ತ್ವಪಾಕ್ರಮತ್।।
ಆ ಮಹಾಗಜವು ಶಿನಿಯ ಮೊಮ್ಮಗನ ರಥವನ್ನು ಸೊಂಡಿಲಿನಿಂದ ಹಿಡಿದು ವೇಗದಿಂದ ದೂರಕ್ಕೆಸೆಯಿತು. ಅಷ್ಟರೊಳಗೆ ಯುಯುಧಾನನು ರಥದಿಂದ ಕೆಳಕ್ಕೆ ಹಾರಿದ್ದನು.
07025037a ಬೃಹತಃ ಸೈಂಧವಾನಶ್ವಾನ್ಸಮುತ್ಥಾಪ್ಯ ತು ಸಾರಥಿಃ।
07025037c ತಸ್ಥೌ ಸಾತ್ಯಕಿಮಾಸಾದ್ಯ ಸಂಪ್ಲುತಸ್ತಂ ರಥಂ ಪುನಃ।।
ಸಾರಥಿಯಾದರೋ ದೊಡ್ಡದಾಗಿದ್ದ ಸೈಂಧವ ಕುದುರೆಗಳನ್ನು ಮೇಲೆಬ್ಬಿಸಿ ರಥದ ಮೇಲೆ ಹಾರಿ ಕುಳಿತು ರಥವನ್ನು ಪುನಃ ಸಾತ್ಯಕಿಯ ಬಳಿ ತಂದು ನಿಲ್ಲಿಸಿದನು.
07025038a ಸ ತು ಲಬ್ಧ್ವಾಂತರಂ ನಾಗಸ್ತ್ವರಿತೋ ರಥಮಂಡಲಾತ್।
07025038c ನಿಶ್ಚಕ್ರಾಮ ತತಃ ಸರ್ವಾನ್ಪರಿಚಿಕ್ಷೇಪ ಪಾರ್ಥಿವಾನ್।।
ಅಷ್ಟರಲ್ಲಿಯೇ ತ್ವರೆಮಾಡಿ ಆ ಆನೆಯು ರಥಮಂಡಲದಿಂದ ಹೊರಬಂದು ಎಲ್ಲ ರಾಜರನ್ನೂ ಎಳೆದೆಳೆದು ಎಸೆಯತೊಡಗಿತ್ತು.
07025039a ತೇ ತ್ವಾಶುಗತಿನಾ ತೇನ ತ್ರಾಸ್ಯಮಾನಾ ನರರ್ಷಭಾಃ।
07025039c ತಮೇಕಂ ದ್ವಿರದಂ ಸಂಖ್ಯೇ ಮೇನಿರೇ ಶತಶೋ ನೃಪಾಃ।।
ಅತಿ ವೇಗದ ಆ ಆನೆಯಿಂದ ಪೀಡಿತರಾದ ನರರ್ಷಭರು ಒಂದೇ ಆನೆಯೊಂದಿಗೆ ಹೋರಾಡುತ್ತಿದ್ದರೂ ನೂರಾರರೊಂದಿಗೆ ಹೋರಾಡುತ್ತಿದ್ದೇವೋ ಎಂದು ಭಾವಿಸಿದರು.
07025040a ತೇ ಗಜಸ್ಥೇನ ಕಾಲ್ಯಂತೇ ಭಗದತ್ತೇನ ಪಾಂಡವಾಃ।
07025040c ಐರಾವತಸ್ಥೇನ ಯಥಾ ದೇವರಾಜೇನ ದಾನವಾಃ।।
ಆ ಆನೆಯ ಮೇಲೆ ಕುಳಿತಿದ್ದ ಭಗದತ್ತನು ಐರಾವತದ ಮೇಲೆ ಕುಳಿತಿದ್ದ ದೇವರಾಜನು ದಾನವರನ್ನು ಹೇಗೋ ಹಾಗೆ ಪಾಂಡವರನ್ನು ನಾಶಗೊಳಿಸುತ್ತಿದ್ದನು.
07025041a ತೇಷಾಂ ಪ್ರದ್ರವತಾಂ ಭೀಮಃ ಪಾಂಚಾಲಾನಾಮಿತಸ್ತತಃ।
07025041c ಗಜವಾಜಿಕೃತಃ ಶಬ್ದಃ ಸುಮಹಾನ್ಸಮಜಾಯತ।।
ಅಲ್ಲಿಂದ ಓಡಿಹೋಗುತ್ತಿದ್ದ ಪಾಂಚಾಲರ ಆನೆ-ಕುದುರೆಗಳು ಮಾಡುತ್ತಿದ್ದ ಭಯಂಕರ ಚೀತ್ಕಾರಗಳ ಶಬ್ಧವು ಜೋರಾಗಿ ಕೇಳಿಬರುತ್ತಿತ್ತು.
07025042a ಭಗದತ್ತೇನ ಸಮರೇ ಕಾಲ್ಯಮಾನೇಷು ಪಾಂಡುಷು।
07025042c ಪ್ರಾಗ್ಜ್ಯೋತಿಷಮಭಿಕ್ರುದ್ಧಃ ಪುನರ್ಭೀಮಃ ಸಮಭ್ಯಯಾತ್।।
ಸಮರದಲ್ಲಿ ಪ್ರಾಗ್ಜ್ಯೋತಿಷದ ಭಗದತ್ತನು ಪಾಂಡವರ ಸೇನೆಯನ್ನು ನಾಶಗೊಳಿಸುತ್ತಿರಲು ಪರಮ ಕ್ರುದ್ಧನಾದ ಭೀಮನು ಪುನಃ ಅವನನ್ನು ಆಕ್ರಮಣಿಸಿದನು.
07025043a ತಸ್ಯಾಭಿದ್ರವತೋ ವಾಹಾನ್ ಹಸ್ತಮುಕ್ತೇನ ವಾರಿಣಾ।
07025043c ಸಿಕ್ತ್ವಾ ವ್ಯತ್ರಾಸಯನ್ನಾಗಸ್ತೇ ಪಾರ್ಥಮಹರಂಸ್ತತಃ।।
ರಭಸದಿಂದ ತನ್ನ ಕಡೆಗೆ ಬರುತ್ತಿದ್ದ ಅವನ ಕುದುರೆಗಳ ಮೇಲೆ ಆ ಆನೆಯು ಸೊಂಡಿಲಿನಿಂದ ನೀರನ್ನು ಸುರಿಸಿ ತೋಯಿಸಿತು. ಅನಂತರ ಅವು ಪಾರ್ಥನನ್ನು ದೂರಕ್ಕೆ ಕೊಂಡೊಯ್ದವು.
07025044a ತತಸ್ತಮಭ್ಯಯಾತ್ತೂರ್ಣಂ ರುಚಿಪರ್ವಾಕೃತೀಸುತಃ।
07025044c ಸಮುಕ್ಷಂ ಶರವರ್ಷೇಣ ರಥಸ್ಥೋಽಂತಕಸನ್ನಿಭಃ।।
ಆಗ ತಕ್ಷಣವೇ ರಥದ ಮೇಲೆ ಕುಳಿತು ಅಂತಕನಂತೆ ತೋರುತ್ತಿದ್ದ ಅಕೃತಿಯ ಮಗ ರುಚಿಪರ್ವನು ಭಗದತ್ತನ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಆಕ್ರಮಣಿಸಿದನು.
07025045a ತತೋ ರುಚಿರಪರ್ವಾಣಂ ಶರೇಣ ನತಪರ್ವಣಾ।
07025045c ಸುಪರ್ವಾ ಪರ್ವತಪತಿರ್ನಿನ್ಯೇ ವೈವಸ್ವತಕ್ಷಯಂ।।
ಆಗ ಪರ್ವತಪತಿಯು ಸುಂದರ ನತಪರ್ವ ಶರದಿಂದ ಅವನನ್ನು ವೈವಸ್ವತನ ಸದನಕ್ಕೆ ಕಳುಹಿಸಿದನು.
07025046a ತಸ್ಮಿನ್ನಿಪತಿತೇ ವೀರೇ ಸೌಭದ್ರೋ ದ್ರೌಪದೀಸುತಾಃ।
07025046c ಚೇಕಿತಾನೋ ಧೃಷ್ಟಕೇತುರ್ಯುಯುತ್ಸುಶ್ಚಾರ್ದಯನ್ದ್ವಿಪಂ।।
ಆ ವೀರನು ಕೆಳಗುರುಳಲು ಸೌಭದ್ರ ಮತ್ತು ದ್ರೌಪದೀಸುತರು, ಚೇಕಿತಾನ, ಧೃಷ್ಟಕೇತು ಮತ್ತು ಯುಯುತ್ಸುವು ಆನೆಯನ್ನು ಪೀಡಿಸತೊಡಗಿದರು.
07025047a ತ ಏನಂ ಶರಧಾರಾಭಿರ್ಧಾರಾಭಿರಿವ ತೋಯದಾಃ।
07025047c ಸಿಷಿಚುರ್ಭೈರವಾನ್ನಾದಾನ್ವಿನದಂತೋ ಜಿಘಾಂಸವಃ।।
ಅದನ್ನು ಕೊಲ್ಲಲು ಬಯಸಿ ಭೈರವ ಗರ್ಜನೆಯನ್ನು ಗರ್ಜಿಸುತ್ತಾ ಮೋಡಗಳಂತೆ ಬಾಣದ ಮಳೆಯನ್ನು ಸುರಿಸಿ ತೋಯಿಸಿದರು.
07025048a ತತಃ ಪಾರ್ಷ್ಣ್ಯಂಕುಶಾಂಗುಷ್ಠೈಃ ಕೃತಿನಾ ಚೋದಿತೋ ದ್ವಿಪಃ।
07025048c ಪ್ರಸಾರಿತಕರಃ ಪ್ರಾಯಾತ್ಸ್ತಬ್ಧಕರ್ಣೇಕ್ಷಣೋ ದ್ರುತಂ।।
ಆಗ ಹಿಮ್ಮಡಿ, ಅಂಕುಶ ಮತ್ತು ಅಂಗುಷ್ಠಗಳಿಂದ ಪ್ರಚೋದಿತಗೊಂಡ ಆನೆಯು ಸೊಂಡಿಲನ್ನು ಮೇಲೆತ್ತಿ ಕಿವಿಯನ್ನು ನಿಮಿರಿಸಿ ಒಂದೇ ಕಡೆ ನೋಡುತ್ತಾ ಶೀಘ್ರವಾಗಿ ಓಡತೊಡಗಿತು.
07025049a ಸೋಽಧಿಷ್ಠಾಯ ಪದಾ ವಾಹಾನ್ಯುಯುತ್ಸೋಃ ಸೂತಮಾರುಜತ್।
07025049c ಪುತ್ರಸ್ತು ತವ ಸಂಭ್ರಾಂತಃ ಸೌಭದ್ರಸ್ಯಾಪ್ಲುತೋ ರಥಂ।।
ಅದು ಕಾಲಿನಿಂದ ಯುಯುತ್ಸುವಿನ ಕುದುರೆಗಳನ್ನು ಒದೆದು ಸೂತನನ್ನು ಕೊಂದಿತು. ಆಗ ಸಂಭ್ರಾಂತನಾದ ನಿನ್ನ ಮಗನು ಹಾರಿ ಸೌಭದ್ರನ ರಥವನ್ನು ಏರಿದನು.
07025050a ಸ ಕುಂಜರಸ್ಥೋ ವಿಸೃಜನ್ನಿಷೂನರಿಷು ಪಾರ್ಥಿವಃ।
07025050c ಬಭೌ ರಶ್ಮೀನಿವಾದಿತ್ಯೋ ಭುವನೇಷು ಸಮುತ್ಸೃಜನ್।।
ಆ ಆನೆಯ ಮೇಲೆ ಕುಳಿತಿದ್ದ ಪಾರ್ಥಿವನು ಭುವನಗಳನ್ನು ತನ್ನ ರಶ್ಮಿಗಳಿಂದ ಬೆಳಗಿಸುವ ಆದಿತ್ಯನಂತೆ ತನ್ನ ಶತ್ರುಗಳ ಮೇಲೆ ಬಾಣಗಳನ್ನು ಪ್ರಹರಿಸುತ್ತಾ ಶೋಭಿಸಿದನು.
07025051a ತಮಾರ್ಜುನಿರ್ದ್ವಾದಶಭಿರ್ಯುಯುತ್ಸುರ್ದಶಭಿಃ ಶರೈಃ।
07025051c ತ್ರಿಭಿಸ್ತ್ರಿಭಿರ್ದ್ರೌಪದೇಯಾ ಧೃಷ್ಟಕೇತುಶ್ಚ ವಿವ್ಯಧುಃ।।
ಅವನನ್ನು ಆರ್ಜುನಿಯು ಹನ್ನೆರಡು, ಯುಯುತ್ಸುವು ಹತ್ತು, ದ್ರೌಪದೇಯರು ಮತ್ತು ಧೃಷ್ಟಕೇತುವು ಮೂರು ಮೂರು ಬಾಣಗಳಿಂದ ಹೊಡೆದರು.
07025052a ಸೋಽರಿಯತ್ನಾರ್ಪಿತೈರ್ಬಾಣೈರಾಚಿತೋ ದ್ವಿರದೋ ಬಭೌ।
07025052c ಸಂಸ್ಯೂತ ಇವ ಸೂರ್ಯಸ್ಯ ರಶ್ಮಿಭಿರ್ಜಲದೋ ಮಹಾನ್।।
ಆ ಶತ್ರುಗಳಿಂದ ಪ್ರಹರಿಸಲ್ಪಟ್ಟ ಬಾಣಗಳಿಂದ ಮುಚ್ಚಿ ಹೋದ ಆನೆಯು ಸೂರ್ಯನ ಕಿರಣಗಳಿಂದ ಸಂಸ್ಯೂತವಾದ ಮಹಾ ಮೇಘದಂತೆ ಕಾಣತ್ತಿತ್ತು.
07025053a ನಿಯಂತುಃ ಶಿಲ್ಪಯತ್ನಾಭ್ಯಾಂ ಪ್ರೇಷಿತೋಽರಿಶರಾರ್ದಿತಃ।
07025053c ಪರಿಚಿಕ್ಷೇಪ ತಾನ್ನಾಗಃ ಸ ರಿಪೂನ್ಸವ್ಯದಕ್ಷಿಣಂ।।
ನಿಯಂತ್ರಿಸಲು ಪ್ರಯತ್ನಪಡುತ್ತಿದ್ದ ಶತ್ರುಗಳು ಪ್ರಯೋಗಿಸಿದ ಶರಗಳಿಂದ ಆರ್ದಿತಗೊಂಡ ಆ ಆನೆಯು ತನ್ನ ಸೊಂಡಿಲಿನಿಂದ ರಿಪುಗಳನ್ನು ಹಿಡಿದು ಎಡ-ಬಲಗಳಲ್ಲಿ ಎಸೆಯತೊಡಗಿತು.
07025054a ಗೋಪಾಲ ಇವ ದಂಡೇನ ಯಥಾ ಪಶುಗಣಾನ್ವನೇ।
07025054c ಆವೇಷ್ಟಯತ ತಾಂ ಸೇನಾಂ ಭಗದತ್ತಸ್ತಥಾ ಮುಹುಃ।।
ವನದಲ್ಲಿ ಗೋಪಾಲಕನು ಕೋಲಿನಿಂದ ದನಗಳನ್ನು ತರುಬುವಂತೆ ಭಗದತ್ತನು ಬಾರಿ ಬಾರಿಗೂ ಅವರ ಸೇನೆಯನ್ನು ತರುಬುತ್ತಿದ್ದನು.
07025055a ಕ್ಷಿಪ್ರಂ ಶ್ಯೇನಾಭಿಪನ್ನಾನಾಂ ವಾಯಸಾನಾಮಿವ ಸ್ವನಃ।
07025055c ಬಭೂವ ಪಾಂಡವೇಯಾನಾಂ ಭೃಶಂ ವಿದ್ರವತಾಂ ಸ್ವನಃ।।
ವೇಗವಾಗಿ ಬಂದ ಗಿಡುಗದ ಹಿಡಿತಕ್ಕೆ ಸಿಲುಕಿದ ಕಾಗೆಗಳು ಕೂಗಿಕೊಳ್ಳುವಂತೆ ಅವನಿಂದ ಪೀಡಿತರಾಗಿ ಪಾಂಡವರ ಸೇನೆಯು ಜೋರಾಗಿ ಕೂಗುತ್ತಾ ಓಡಿ ಹೋಗುತ್ತಿತ್ತು.
07025056a ಸ ನಾಗರಾಜಃ ಪ್ರವರಾಂಕುಶಾಹತಃ ಪುರಾ ಸಪಕ್ಷೋಽದ್ರಿವರೋ ಯಥಾ ನೃಪ।
07025056c ಭಯಂ ತಥಾ ರಿಪುಷು ಸಮಾದಧದ್ಭೃಶಂ ವಣಿಗ್ಗಣಾನಾಂ ಕ್ಷುಭಿತೋ ಯಥಾರ್ಣವಃ।।
ನೃಪ! ಅಂಕುಶದಿಂದ ತಿವಿಯಲ್ಪಟ್ಟ ಆ ಗಜರಾಜನು ಹಿಂದೆ ರೆಕ್ಕೆಗಳನ್ನು ಹೊಂದಿದ್ದ ಶ್ರೇಷ್ಠ ಗಿರಿಗಳು ಹೇಗೋ ಹಾಗೆ ರಿಪುಸೇನೆಗಳಲ್ಲಿ ಭಯವನ್ನು ತರುತ್ತಿತ್ತು. ಸಾಗರವನ್ನು ಕ್ಷೋಭೆಗೊಳಿಸಿ ವರ್ತಕರನ್ನು ಅಲ್ಲೋಲಕಲ್ಲೋಲಗೊಳಿಸುವಂತೆ ತೋರುತ್ತಿತ್ತು.
07025057a ತತೋ ಧ್ವನಿರ್ದ್ವಿರದರಥಾಶ್ವಪಾರ್ಥಿವೈರ್ ಭಯಾದ್ದ್ರವದ್ಭಿರ್ಜನಿತೋಽತಿಭೈರವಃ।
07025057c ಕ್ಷಿತಿಂ ವಿಯದ್ದ್ಯಾಂ ವಿದಿಶೋ ದಿಶಸ್ತಥಾ ಸಮಾವೃಣೋತ್ಪಾರ್ಥಿವ ಸಂಯುಗೇ ತದಾ।।
ಪಾರ್ಥಿವ! ಆ ಆನೆಯಿಂದ ಭಯಾರ್ದಿತರಾಗಿ ಅತಿ ಭೈರವ ಸ್ವರದಲ್ಲಿ ಕೂಗಿಕೊಂಡು ಓಡಿ ಹೋಗುತ್ತಿರುವ ರಥ-ಅಶ್ವ-ಪಾರ್ಥಿವರ ಧ್ವನಿಯು ಭೂಮಿಯನ್ನೂ, ಆಕಾಶವನ್ನೂ, ದಿಕ್ಕುಗಳನ್ನೂ, ಉಪದಿಕ್ಕುಗಳನ್ನೂ ತುಂಬಿತು.
07025058a ಸ ತೇನ ನಾಗಪ್ರವರೇಣ ಪಾರ್ಥಿವೋ ಭೃಶಂ ಜಗಾಹೇ ದ್ವಿಷತಾಮನೀಕಿನೀಂ।
07025058c ಪುರಾ ಸುಗುಪ್ತಾಂ ವಿಬುಧೈರಿವಾಹವೇ ವಿರೋಚನೋ ದೇವವರೂಥಿನೀಮಿವ।।
ಹಿಂದೆ ವಿಬುಧರಿಂದ ರಕ್ಷಿಸಲ್ಪಟ್ಟ ದೇವಸೇನೆಯನ್ನು ವಿರೋಚನನು ಬೇಧಿಸಿ ಒಳಹೊಕ್ಕಿದಂತೆ ಆ ಗಜಶ್ರೇಷ್ಠನ ಮೇಲೇರಿ ಪಾರ್ಥಿವನು ಶತ್ರುಸೇನೆಯನ್ನು ಚೆನ್ನಾಗಿ ಮರ್ದಿಸಿದನು.
07025059a ಭೃಶಂ ವವೌ ಜ್ವಲನಸಖೋ ವಿಯದ್ರಜಃ ಸಮಾವೃಣೋನ್ಮುಹುರಪಿ ಚೈವ ಸೈನಿಕಾನ್।
07025059c ತಂ ಏಕನಾಗಂ ಗಣಶೋ ಯಥಾ ಗಜಾಃ ಸಮಂತತೋ ದ್ರುತಮಿವ ಮೇನಿರೇ ಜನಾಃ।।
ಆಗ ಅಗ್ನಿ ಸಖ ವಾಯುವೂ ಜೋರಾಗಿ ಬೀಸಿ ಎಬ್ಬಿಸಿದ ಧೂಳು ಸೈನಿಕರೆಲ್ಲರನ್ನೂ ವ್ಯಾಪಿಸಿತು. ಒಂದೇ ಒಂದು ಆನೆಯು ನಾಲ್ಕೂ ದಿಕ್ಕುಗಳಲ್ಲಿ ಸಂಚರಿಸುತ್ತಿದ್ದರೂ ಹಲವಾರು ಆನೆಗಳು ಗುಂಪಾಗಿ ರಣಾಂಗಣದಲ್ಲಿ ಓಡಾಡುತ್ತಿರುವಂತೆ ತೋರುತ್ತಿದ್ದವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಭಗದತ್ತಯುದ್ಧೇ ಪಂಚವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಭಗದತ್ತಯುದ್ಧ ಎನ್ನುವ ಇಪ್ಪತ್ತೈದನೇ ಅಧ್ಯಾಯವು.