024 ದ್ವಂದ್ವಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಸಂಶಪ್ತಕವಧ ಪರ್ವ

ಅಧ್ಯಾಯ 24

ಸಾರ

ದ್ವಂದ್ವಯುದ್ಧಗಳು (1-61).

07024001 ಸಂಜಯ ಉವಾಚ।
07024001a ಮಹದ್ಭೈರವಮಾಸೀನ್ನಃ ಸಮ್ನಿವೃತ್ತೇಷು ಪಾಂಡುಷು।
07024001c ದೃಷ್ಟ್ವಾ ದ್ರೋಣಂ ಚಾದ್ಯಮಾನಂ ತೈರ್ಭಾಸ್ಕರಮಿವಾಂಬುದೈಃ।।

ಸಂಜಯನು ಹೇಳಿದನು: “ಪಾಂಡವರು ಹಿಂದಿರುಗಿದ ನಂತರ ಮೋಡಗಳಿಂದ ಸೂರ್ಯನು ಹೇಗೋ ಹಾಗೆ ದ್ರೋಣನು ಬಾಣಗಳಿಂದ ಮುಚ್ಚಲ್ಪಡಲು ನಮಗೆ ಮಹಾ ಭಯವುಂಟಾಯಿತು.

07024002a ತೈಶ್ಚೋದ್ಧೂತಂ ರಜಸ್ತೀವ್ರಮವಚಕ್ರೇ ಚಮೂಂ ತವ।
07024002c ತತೋ ಹತಮಮನ್ಯಾಮ ದ್ರೋಣಂ ದೃಷ್ಟಿಪಥೇ ಹತೇ।।

ಅವರ ತೀವ್ರ ನಡೆದಾಟದಿಂದ ಎದ್ದ ಧೂಳು ನಿನ್ನ ಸೈನ್ಯವನ್ನು ಸಂಪೂರ್ಣವಾಗಿ ಮುಚ್ಚಿತು. ಅದರಿಂದ ನಮಗೆ ಕಾಣದಂತಾಗಿ, ದ್ರೋಣನು ಹತನಾದನೆಂದೇ ನಾವು ಭಾವಿಸಿದೆವು.

07024003a ತಾಂಸ್ತು ಶೂರಾನ್ಮಹೇಷ್ವಾಸಾನ್ಕ್ರೂರಂ ಕರ್ಮ ಚಿಕೀರ್ಷತಃ।
07024003c ದೃಷ್ಟ್ವಾ ದುರ್ಯೋಧನಸ್ತೂರ್ಣಂ ಸ್ವಸೈನ್ಯಂ ಸಮಚೂಚುದತ್।।

ಕ್ರೂರ ಕರ್ಮವನ್ನು ಮಾಡಲು ಬಯಸಿದ್ದ ಆ ಶೂರ ಮಹೇಷ್ವಾಸರನ್ನು ಕಂಡು ತಕ್ಷಣವೇ ದುರ್ಯೋಧನನು ತನ್ನ ಸೈನ್ಯವನ್ನು ಪ್ರಚೋದಿಸಿದನು.

07024004a ಯಥಾಶಕ್ತಿ ಯಥೋತ್ಸಾಹಂ ಯಥಾಸತ್ತ್ವಂ ನರಾಧಿಪಾಃ।
07024004c ವಾರಯಧ್ವಂ ಯಥಾಯೋಗಂ ಪಾಂಡವಾನಾಮನೀಕಿನೀಂ।।

“ನರಾಧಿಪರೇ! ಯಥಾಶಕ್ತಿಯಾಗಿ, ಯಥೋತ್ಸಾಹದಿಂದ, ಯಥಾಸತ್ವವನ್ನು ಬಳಸಿ ಯಥಾಯೋಗವಾಗಿ ಪಾಂಡವರ ಸೇನೆಯನ್ನು ತಡೆಯಿರಿ!”

07024005a ತತೋ ದುರ್ಮರ್ಷಣೋ ಭೀಮಮಭ್ಯಗಚ್ಚತ್ಸುತಸ್ತವ।
07024005c ಆರಾದ್ದೃಷ್ಟ್ವಾ ಕಿರನ್ಬಾಣೈರಿಚ್ಚನ್ದ್ರೋಣಸ್ಯ ಜೀವಿತಂ।।

ಆಗ ನಿನ್ನ ಮಗ ದುರ್ಮರ್ಷಣನು ಬಾಣಗಳನ್ನು ಎರಚುತ್ತಾ ದ್ರೋಣನ ಜೀವವನ್ನು ಕಳೆಯಲಿಚ್ಛಿಸಿದ ಭೀಮನನ್ನು ಎದುರಿಸಿದನು.

07024006a ತಂ ಬಾಣೈರವತಸ್ತಾರ ಕ್ರುದ್ಧೋ ಮೃತ್ಯುಮಿವಾಹವೇ।
07024006c ತಂ ಚ ಭೀಮೋಽತುದದ್ಬಾಣೈಸ್ತದಾಸೀತ್ತುಮುಲಂ ಮಹತ್।।

ಕ್ರುದ್ಧನಾಗಿ ಯುದ್ಧದಲ್ಲಿ ಮೃತ್ಯುಸಮಾನ ಬಾಣಗಳಿಂದ ಅವನನ್ನು ಹೊಡೆಯಲು, ಭೀಮಸೇನನೂ ಕೂಡ ಬಾಣಗಳಿಂದ ಅವನನ್ನು ಗಾಯಗೊಳಿಸಿದನು. ಮಹಾತುಮುಲ ಯುದ್ಧವು ನಡೆಯಿತು.

07024007a ತ ಈಶ್ವರಸಮಾದಿಷ್ಟಾಃ ಪ್ರಾಜ್ಞಾಃ ಶೂರಾಃ ಪ್ರಹಾರಿಣಃ।
07024007c ಬಾಹ್ಯಂ ಮೃತ್ಯುಭಯಂ ಕೃತ್ವಾ ಪ್ರತ್ಯತಿಷ್ಠನ್ಪರಾನ್ಯುಧಿ।।

ತಮ್ಮ ಯಜಮಾನದಿಂದ ಆಜ್ಞಾಪಿತರಾದ ಆ ಪ್ರಾಜ್ಞರು, ಶೂರರು, ಪ್ರಹಾರಿಗಳು ಮೃತ್ಯುಭಯವನ್ನು ಮತ್ತು ಅಧಿಕಾರಭಯವನ್ನು ತೊರೆದು ಶತ್ರುಗಳೊಂದಿಗೆ ಯುದ್ಧಮಾಡಿದರು.

07024008a ಕೃತವರ್ಮಾ ಶಿನೇಃ ಪುತ್ರಂ ದ್ರೋಣಪ್ರೇಪ್ಸುಂ ವಿಶಾಂ ಪತೇ।
07024008c ಪರ್ಯವಾರಯದಾಯಾಂತಂ ಶೂರಂ ಸಮಿತಿಶೋಭನಂ।।

ವಿಶಾಂಪತೇ! ಕೃತವರ್ಮನು ದ್ರೋಣನ ಬಳಿಬರುತ್ತಿದ್ದ ಶಿನಿಯ ಪುತ್ರ, ಸಮಿತಿ ಶೋಭನ, ಶೂರ, ದಾಯಾದಿ (ಸಾತ್ಯಕಿ) ಯನ್ನು ಸುತ್ತುವರೆದನು.

07024009a ತಂ ಶೈನೇಯಃ ಶರವ್ರಾತೈಃ ಕ್ರುದ್ಧಃ ಕ್ರುದ್ಧಮವಾರಯತ್।
07024009c ಕೃತವರ್ಮಾ ಚ ಶೈನೇಯಂ ಮತ್ತೋ ಮತ್ತಮಿವ ದ್ವಿಪಂ।।

ಅವನನ್ನು ಶೈನೇಯನೂ ಶೈನೇಯನನ್ನು ಕೃತವರ್ಮನೂ ಮದಿಸಿದ ಆನೆಗಳಂತೆ ಕ್ರುದ್ಧರಾಗಿ ಕ್ರುದ್ಧರನ್ನು ತಡೆದರು.

07024010a ಸೈಂಧವಃ ಕ್ಷತ್ರಧರ್ಮಾಣಮಾಪತಂತಂ ಶರೌಘಿಣಂ।
07024010c ಉಗ್ರಧನ್ವಾ ಮಹೇಷ್ವಾಸಂ ಯತ್ತೋ ದ್ರೋಣಾದವಾರಯತ್।।

ಉಗ್ರಧನ್ವಿ ಸೈಂಧವನು ದ್ರೋಣನ ಕಡೆ ಬರುತ್ತಿದ್ದ ಶರಗಳ ಮಳೆಯನ್ನು ಸುರಿಸುತ್ತಿದ್ದ ಮಹೇಷ್ವಾಸ ಕ್ಷತ್ರಧರ್ಮನನ್ನು ತಡೆದನು.

07024011a ಕ್ಷತ್ರಧರ್ಮಾ ಸಿಂಧುಪತೇಶ್ಚಿತ್ತ್ವಾ ಕೇತನಕಾರ್ಮುಕೇ।
07024011c ನಾರಾಚೈರ್ಬಹುಭಿಃ ಕ್ರುದ್ಧಃ ಸರ್ವಮರ್ಮಸ್ವತಾಡಯತ್।।

ಕ್ರುದ್ಧನಾದ ಕ್ಷತ್ರಧರ್ಮನು ಸಿಂಧುಪತಿಯ ಕೇತನ-ಕಾರ್ಮುಕಗಳನ್ನು ತುಂಡುಮಾಡಿ ಅನೇಕ ನಾರಾಚಗಳಿಂದ ಅವನ ಸರ್ವ ಮರ್ಮಗಳಿಗೆ ಹೊಡೆದನು.

07024012a ಅಥಾನ್ಯದ್ಧನುರಾದಾಯ ಸೈಂಧವಃ ಕೃತಹಸ್ತವತ್।
07024012c ವಿವ್ಯಾಧ ಕ್ಷತ್ರಧರ್ಮಾಣಂ ರಣೇ ಸರ್ವಾಯಸೈಃ ಶರೈಃ।।

ಕೃತಹಸ್ತನಾದ ಸೈಂಧವನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಎಲ್ಲವೂ ಲೋಹಮಯವಾದ ಶರಗಳಿಂದ ರಣದಲ್ಲಿ ಕ್ಷತ್ರಧರ್ಮನನ್ನು ಹೊಡೆದನು.

07024013a ಯುಯುತ್ಸುಂ ಪಾಂಡವಾರ್ಥಾಯ ಯತಮಾನಂ ಮಹಾರಥಂ।
07024013c ಸುಬಾಹುರ್ಭ್ರಾತರಂ ಶೂರಂ ಯತ್ತೋ ದ್ರೋಣಾದವಾರಯತ್।।

ಪಾಂಡವರಿಗೋಸ್ಕರವಾಗಿ ಯುದ್ಧಮಾಡುತ್ತಾ ದ್ರೋಣನ ಕಡೆ ಬರುತ್ತಿದ್ದ ಅಣ್ಣ ಶೂರ ಮಹಾರಥ ಯುಯುತ್ಸುವನ್ನು ಸುಬಾಹುವು ಪ್ರಯತ್ನಿಸಿ ತಡೆದನು.

07024014a ಸುಬಾಹೋಃ ಸಧನುರ್ಬಾಣಾವಸ್ಯತಃ ಪರಿಘೋಪಮೌ।
07024014c ಯುಯುತ್ಸುಃ ಶಿತಪೀತಾಭ್ಯಾಂ ಕ್ಷುರಾಭ್ಯಾಮಚ್ಚಿನದ್ಭುಜೌ।।

ಅದರಿಂದ ಕ್ರುದ್ಧನಾದ ಯುಯುತ್ಸುವು ಪೀತವರ್ಣದ ಎರಡು ನಿಶಿತ ಕ್ಷುರಗಳಿಂದ ಧನುರ್ಬಾಣಯುಕ್ತವಾಗಿದ್ದ ಪರಿಘಗಳಂತಿದ್ದ ಅವರ ಎರಡು ಭುಜಗಳನ್ನೂ ಕತ್ತರಿಸಿದನು.

07024015a ರಾಜಾನಂ ಪಾಂಡವಶ್ರೇಷ್ಠಂ ಧರ್ಮಾತ್ಮಾನಂ ಯುಧಿಷ್ಠಿರಂ।
07024015c ವೇಲೇವ ಸಾಗರಂ ಕ್ಷುಬ್ಧಂ ಮದ್ರರಾಟ್ಸಮವಾರಯತ್।।

ಪ್ರಕ್ಷುಬ್ಧ ಸಾಗರವನ್ನು ದಡವು ತಡೆಯುವಂತೆ ಪಾಂಡವಶ್ರೇಷ್ಠ, ಧರ್ಮಾತ್ಮ, ರಾಜಾ ಯುಧಿಷ್ಠಿರನನ್ನು ಮದ್ರರಾಜನು ತಡೆಹಿಡಿದನು.

07024016a ತಂ ಧರ್ಮರಾಜೋ ಬಹುಭಿರ್ಮರ್ಮಭಿದ್ಭಿರವಾಕಿರತ್।
07024016c ಮದ್ರೇಶಸ್ತಂ ಚತುಃಷಷ್ಟ್ಯಾ ಶರೈರ್ವಿದ್ಧ್ವಾನದದ್ಭೃಶಂ।।

ಅವನ ಮೇಲೆ ಧರ್ಮರಾಜನು ಅನೇಕ ಮರ್ಮಭೇದಿ ಬಾಣಗಳನ್ನು ಎರಚಲು ಮದ್ರೇಶಸ್ತನು ಅರವತ್ನಾಲ್ಕು ಬಾಣಗಳಿಂದ ಅವನನ್ನು ಹೊಡೆದು ಜೋರಾಗಿ ಗರ್ಜಿಸಿದನು.

07024017a ತಸ್ಯ ನಾನದತಃ ಕೇತುಮುಚ್ಚಕರ್ತ ಸಕಾರ್ಮುಕಂ।
07024017c ಕ್ಷುರಾಭ್ಯಾಂ ಪಾಂಡವಶ್ರೇಷ್ಠಸ್ತತ ಉಚ್ಚುಕ್ರುಶುರ್ಜನಾಃ।।

ಗರ್ಜಿಸುತ್ತಿದ್ದ ಅವನ ಕೇತು ಮತ್ತು ಕಾರ್ಮುಕಗಳನ್ನು ಪಾಂಡವಶ್ರೇಷ್ಠನು ಎರಡು ಕ್ಷುರಗಳಿಂದ ಕತ್ತರಿಸಲು ಜನರು ಜೋರಾಗಿ ಜಯಕಾರ ಮಾಡಿದರು.

07024018a ತಥೈವ ರಾಜಾ ಬಾಹ್ಲೀಕೋ ರಾಜಾನಂ ದ್ರುಪದಂ ಶರೈಃ।
07024018c ಆದ್ರವಂತಂ ಸಹಾನೀಕಂ ಸಹಾನೀಕೋ ನ್ಯವಾರಯತ್।।

ಹಾಗೆಯೇ ರಾಜಾ ಬಾಹ್ಲೀಕನು ತನ್ನ ಸೇನೆಯೊಂದಿಗೆ ಬರುತ್ತಿದ್ದ ರಾಜ ದ್ರುಪದನನ್ನು ಸೇನೆಯನ್ನೊಡಗೂಡಿ ಶರಗಳಿಂದ ತಡೆದನು.

07024019a ತದ್ಯುದ್ಧಮಭವದ್ಘೋರಂ ವೃದ್ಧಯೋಃ ಸಹಸೇನಯೋಃ।
07024019c ಯಥಾ ಮಹಾಯೂಥಪಯೋರ್ದ್ವಿಪಯೋಃ ಸಂಪ್ರಭಿನ್ನಯೋಃ।।

ಆಗ ಸೇನೆಗಳೊಡನಿದ್ದ ಆ ಇಬ್ಬರು ವೃದ್ಧರ ನಡುವೆ ಮದೋದಕವನ್ನು ಸುರಿಸುತ್ತಿದ್ದ ಎರಡು ಮಹಾಗಜಗಳ ನಡುವಿನಂತೆ ಘೋರ ಯುದ್ಧವು ನಡೆಯಿತು.

07024020a ವಿಂದಾನುವಿಂದಾವಾವಂತ್ಯೌ ವಿರಾಟಂ ಮತ್ಸ್ಯಮಾರ್ಚ್ಚತಾಂ।
07024020c ಸಹಸೈನ್ಯೌ ಸಹಾನೀಕಂ ಯಥೇಂದ್ರಾಗ್ನೀ ಪುರಾ ಬಲಿಂ।।

ಅವಂತಿಯ ವಿಂದಾನುವಿಂದರು ಸೇನೆಗಳೊಡನೆ ಸೇನಾಸಮೇತನಾಗಿದ್ದ ಮತ್ಸ್ಯ ವಿರಾಟನನ್ನು ಹಿಂದೆ ಇಂದ್ರಾಗ್ನಿಗಳಿಬ್ಬರೂ ಬಲಿಯನ್ನು ಆಕ್ರಮಣಿಸಿದಂತೆ ಆಕ್ರಮಣಿಸಿದರು.

07024021a ತದುತ್ಪಿಂಜಲಕಂ ಯುದ್ಧಮಾಸೀದ್ದೇವಾಸುರೋಪಮಂ।
07024021c ಮತ್ಸ್ಯಾನಾಂ ಕೇಕಯೈಃ ಸಾರ್ಧಮಭೀತಾಶ್ವರಥದ್ವಿಪಂ।।

ಆಗ ದೇವಾಸುರರ ಯುದ್ದದಂತೆ ಮತ್ಸ್ಯ ಮತ್ತು ಕೇಕಯರ ನಡುವೆ ಭಯವಿಲ್ಲದೇ ಅಶ್ವ-ರಥ-ಗಜಗಳ ಭಯಂಕರ ಯುದ್ಧವು ನಡೆಯಿತು.

07024022a ನಾಕುಲಿಂ ತು ಶತಾನೀಕಂ ಭೂತಕರ್ಮಾ ಸಭಾಪತಿಃ।
07024022c ಅಸ್ಯಂತಮಿಷುಜಾಲಾನಿ ಯಾಂತಂ ದ್ರೋಣಾದವಾರಯತ್।।

ನಕುಲನ ಮಗ ಶತಾನೀಕನನ್ನು ಸಭಾಪತಿ ಭೂತಕರ್ಮನು ಬಾಣಗಳ ಜಾಲವನ್ನೇ ಬೀಸುತ್ತಾ ದ್ರೋಣನ ಬಳಿ ಬಾರದಂತೆ ತಡೆದನು.

07024023a ತತೋ ನಕುಲದಾಯಾದಸ್ತ್ರಿಭಿರ್ಭಲ್ಲೈಃ ಸುಸಂಶಿತೈಃ।
07024023c ಚಕ್ರೇ ವಿಬಾಹುಶಿರಸಂ ಭೂತಕರ್ಮಾಣಮಾಹವೇ।।

ಆಗ ಯುದ್ಧದಲ್ಲಿ ನಕುಲನ ಮಗನು ಮೂರು ತೀಕ್ಷ್ಣ ಭಲ್ಲಗಳಿಂದ ಭೂತಕರ್ಮನ ಬಾಹುಗಳನ್ನೂ ಕತ್ತನ್ನೂ ದೇಹದಿಂದ ಬೇರ್ಪಡಿಸಿದನು.

07024024a ಸುತಸೋಮಂ ತು ವಿಕ್ರಾಂತಮಾಪತಂತಂ ಶರೌಘಿಣಂ।
07024024c ದ್ರೋಣಾಯಾಭಿಮುಖಂ ವೀರಂ ವಿವಿಂಶತಿರವಾರಯತ್।।

ಶರಗಳ ಮಳೆಯನ್ನೇ ಪ್ರಯೋಗಿಸುತ್ತಾ ದ್ರೋಣಾಭಿಮುಖನಾಗಿ ಬರುತ್ತಿದ್ದ ವೀರ ವಿಕ್ರಾಂತ ಸುತಸೋಮನನ್ನು ವಿವಿಂಶತಿಯು ತಡೆದನು.

07024025a ಸುತಸೋಮಸ್ತು ಸಂಕ್ರುದ್ಧಃ ಸ್ವಪಿತೃವ್ಯಮಜಿಹ್ಮಗೈಃ।
07024025c ವಿವಿಂಶತಿಂ ಶರೈರ್ವಿದ್ಧ್ವಾ ನಾಭ್ಯವರ್ತತ ದಂಶಿತಃ।।

ಕವಚವನ್ನು ಧರಿಸಿದ್ದ ಸಂಕ್ರುದ್ಧ ಸುತಸೋಮನು ಚಿಕ್ಕಪ್ಪ ವಿವಿಂಶತಿಯನ್ನು ಜಿಹ್ಮಗ ಶರಗಳಿಂದ ಹೊಡೆದು ಹಿಮ್ಮೆಟ್ಟಲಿಲ್ಲ.

07024026a ಅಥ ಭೀಮರಥಃ ಶಾಲ್ವಮಾಶುಗೈರಾಯಸೈಃ ಶಿತೈಃ।
07024026c ಷಡ್ಭಿಃ ಸಾಶ್ವನಿಯಂತಾರಮನಯದ್ಯಮಸಾದನಂ।।

ಅನಂತರ ಭೀಮರಥನು ಆರು ನಿಶಿತ ಆಯಸಗಳಿಂದ ಶಾಲ್ವನನ್ನು ಕುದುರೆಗಳೊಂದಿಗೆ ಯಮಸಾದನಕ್ಕೆ ಕಳುಹಿಸಿದನು.

07024027a ಶ್ರುತಕರ್ಮಾಣಮಾಯಾಂತಂ ಮಯೂರಸದೃಶೈರ್ಹಯೈಃ।
07024027c ಚೈತ್ರಸೇನಿರ್ಮಹಾರಾಜ ತವ ಪೌತ್ರೋ ನ್ಯವಾರಯತ್।।

ಮಹಾರಾಜ! ನವಿಲಿನ ಬಣ್ಣದ ಕುದುರೆಗಳೊಡನೆ ಬರುತ್ತಿದ್ದ ಶ್ರುತಕರ್ಮನನ್ನು ನಿನ್ನ ಮೊಮ್ಮಗ, ಚಿತ್ರಸೇನಿಯ ಮಗನು ತಡೆದನು.

07024028a ತೌ ಪೌತ್ರೌ ತವ ದುರ್ಧರ್ಷೌ ಪರಸ್ಪರವಧೈಷಿಣೌ।
07024028c ಪಿತೄಣಾಮರ್ಥಸಿದ್ಧ್ಯರ್ಥಂ ಚಕ್ರತುರ್ಯುದ್ಧಮುತ್ತಮಂ।।

ಪರಸ್ಪರರ ವಧೆಮಾಡಲು ಬಯಸಿದ್ದ ಆ ಇಬ್ಬರು ನಿನ್ನ ದುರ್ಧರ್ಷ ಮೊಮ್ಮೊಕ್ಕಳು ತಂದೆಯರಿಗೆ ಅರ್ಥಸಿದ್ಧಿಯಾಗಲೆಂದು ಉತ್ತಮ ಯುದ್ಧದಲ್ಲಿ ತೊಡಗಿದರು.

07024029a ತಿಷ್ಠಂತಮಗ್ರತೋ ದೃಷ್ಟ್ವಾ ಪ್ರತಿವಿಂಧ್ಯಂ ತಮಾಹವೇ।
07024029c ದ್ರೌಣಿರ್ಮಾನಂ ಪಿತುಃ ಕುರ್ವನ್ಮಾರ್ಗಣೈಃ ಸಮವಾರಯತ್।।

ರಣರಂಗದಲ್ಲಿ ಮುಂದೆ ನಿಂತಿರುವ ಪ್ರತಿವಿಂಧ್ಯನನ್ನು ನೋಡಿ ದ್ರೌಣಿಯು, ತಂದೆಗೆ ಮಾನವನ್ನುಂಟು ಮಾಡುತ್ತಾ ಮಾರ್ಗಣಗಳಿಂದ ಅವನನ್ನು ಮುಚ್ಚಿದನು.

07024030a ತಂ ಕ್ರುದ್ಧಃ ಪ್ರತಿವಿವ್ಯಾಧ ಪ್ರತಿವಿಂಧ್ಯಃ ಶಿತೈಃ ಶರೈಃ।
07024030c ಸಿಂಹಲಾಂಗೂಲಲಕ್ಷ್ಮಾಣಂ ಪಿತುರರ್ಥೇ ವ್ಯವಸ್ಥಿತಂ।।

ತಂದೆಗೋಸ್ಕರವಾಗಿ ನಿಂತಿದ್ದ ಆ ಸಿಂಹದಬಾಲದ ಚಿಹ್ನೆಯ ಧ್ವಜವುಳ್ಳವನನ್ನು ಕ್ರುದ್ಧನಾದ ಪ್ರತಿವಿಂಧ್ಯನು ನಿಶಿತ ಶರಗಳಿಂದ ಪ್ರತಿಯಾಗಿ ಹೊಡೆದನು.

07024031a ಪ್ರವಪನ್ನಿವ ಬೀಜಾನಿ ಬೀಜಕಾಲೇ ನರರ್ಷಭ।
07024031c ದ್ರೌಣಾಯನಿರ್ದ್ರೌಪದೇಯಂ ಶರವರ್ಷೈರವಾಕಿರತ್।।

ನರರ್ಷಭ! ಬೀಜಬಿತ್ತುವ ಕಾಲದಲ್ಲಿ ಬೀಜಗಳನ್ನು ಸುರಿಸುವಂತೆ ದ್ರೌಣಿಯು ದ್ರೌಪದೇಯನನ್ನು ಶರವರ್ಷಗಳಿಂದ ಮುಚ್ಚಿದನು.

07024032a ಯಸ್ತು ಶೂರತಮೋ ರಾಜನ್ಸೇನಯೋರುಭಯೋರ್ಮತಃ।
07024032c ತಂ ಪಟಚ್ಚರಹಂತಾರಂ ಲಕ್ಷ್ಮಣಃ ಸಮವಾರಯತ್।।

ರಾಜನ್! ಯಾರನ್ನು ಎರಡೂ ಸೇನೆಗಳಲ್ಲಿ ಅತ್ಯಂತ ಶೂರನೆಂದು ಅಭಿಪ್ರಾಯಪಡುತ್ತಾರೋ ಆ ಪಟಚ್ಚರಹಂತಾರನನ್ನು ಲಕ್ಷ್ಮಣನು ಎದುರಿಸಿದನು.

07024033a ಸ ಲಕ್ಷ್ಮಣಸ್ಯೇಷ್ವಸನಂ ಚಿತ್ತ್ವಾ ಲಕ್ಷ್ಮ ಚ ಭಾರತ।
07024033c ಲಕ್ಷ್ಮಣೇ ಶರಜಾಲಾನಿ ವಿಸೃಜನ್ಬಹ್ವಶೋಭತ।।

ಅವನು ಲಕ್ಷ್ಮಣನ ಧನುಸ್ಸು ಮತ್ತು ಧ್ವಜಗಳನ್ನು ತುಂಡರಿಸಿ ಲಕ್ಷ್ಮಣನ ಮೇಲೆ ಶರಜಾಲಗಳನ್ನು ಪ್ರಯೋಗಿಸಿ ಬಹುವಾಗಿ ಶೋಭಿಸಿದನು.

07024034a ವಿಕರ್ಣಸ್ತು ಮಹಾಪ್ರಾಜ್ಞೋ ಯಾಜ್ಞಸೇನಿಂ ಶಿಖಂಡಿನಂ।
07024034c ಪರ್ಯವಾರಯದಾಯಾಂತಂ ಯುವಾನಂ ಸಮರೇ ಯುವಾ।।

ಸಮರದಲ್ಲಿ ಮಹಾಪ್ರಾಜ್ಞ ಯುವಕ ವಿಕರ್ಣನು ಮುಂದುವರೆಯುತ್ತಿದ್ದ ಯುವಕ ಯಾಜ್ಞಸೇನೆ ಶಿಖಂಡಿಯನ್ನು ಸುತ್ತುವರೆದು ತಡೆದನು.

07024035a ತತಸ್ತಮಿಷುಜಾಲೇನ ಯಾಜ್ಞಸೇನಿಃ ಸಮಾವೃಣೋತ್।
07024035c ವಿಧೂಯ ತದ್ಬಾಣಜಾಲಂ ಬಭೌ ತವ ಸುತೋ ಬಲೀ।।

ಆಗ ಯಾಜ್ಞಸೇನಿಯು ಅವನನ್ನು ಶರಜಾಲಗಳಿಂದ ಮುಚ್ಚಿದನು. ನಿನ್ನ ಬಲಶಾಲಿ ಮಗನು ಆ ಬಾಣಜಾಲವನ್ನು ತೆಗೆದುಹಾಕಿದನು.

07024036a ಅಂಗದೋಽಭಿಮುಖಃ ಶೂರಮುತ್ತಮೌಜಸಮಾಹವೇ।
07024036c ದ್ರೋಣಾಯಾಭಿಮುಖಂ ಯಾಂತಂ ವತ್ಸದಂತೈರವಾರಯತ್।।

ದ್ರೋಣಾಭಿಮುಖನಾಗಿ ಬರುತ್ತಿದ್ದ ಉತ್ತಮೌಜಸನನ್ನು ರಣದಲ್ಲಿ ಅಂಗದನು ಎದುರಿಸಿ ವತ್ಸದಂತಗಳಿಂದ ತಡೆದನು.

07024037a ಸ ಸಂಪ್ರಹಾರಸ್ತುಮುಲಸ್ತಯೋಃ ಪುರುಷಸಿಂಹಯೋಃ।
07024037c ಸೈನಿಕಾನಾಂ ಚ ಸರ್ವೇಷಾಂ ತಯೋಶ್ಚ ಪ್ರೀತಿವರ್ಧನಃ।।

ಆ ಇಬ್ಬರು ಪುರುಷಸಿಂಹರು ಪ್ರಹಾರಿಸುತ್ತಾ ತುಮುಲ ಯುದ್ಧವನ್ನು ನಡೆಸಿರಲು ಅವರ ಮೆಲೆ ಎಲ್ಲ ಸೈನಿಕರಿಗೂ ಪ್ರೀತಿಯು ಹೆಚ್ಚಾಯಿತು.

07024038a ದುರ್ಮುಖಸ್ತು ಮಹೇಷ್ವಾಸೋ ವೀರಂ ಪುರುಜಿತಂ ಬಲೀ।
07024038c ದ್ರೋಣಾಯಾಭಿಮುಖಂ ಯಾಂತಂ ಕುಂತಿಭೋಜಮವಾರಯತ್।।

ಮಹೇಷ್ವಾಸ ದುರ್ಮುಖನಾದರೋ ದ್ರೋಣನ ಕಡೆ ಬರುತ್ತಿದ್ದ ವೀರ ಪುರಜಿತ ಬಲಶಾಲೀ ಕುಂತಿಭೋಜನನ್ನು ತಡೆದನು.

07024039a ಸ ದುರ್ಮುಖಂ ಭ್ರುವೋರ್ಮಧ್ಯೇ ನಾರಾಚೇನ ವ್ಯತಾಡಯತ್।
07024039c ತಸ್ಯ ತದ್ವಿಬಭೌ ವಕ್ತ್ರಂ ಸನಾಲಮಿವ ಪಂಕಜಂ।।

ಅವನು ನಾರಾಚಗಳಿಂದ ದುರ್ಮುಖನ ಹುಬ್ಬುಗಳ ಮಧ್ಯೆ ಹೊಡೆದನು. ಆಗ ಅವನ ಮುಖವು ನಾಳಯುಕ್ತವಾದ ಕಮಲದಂತೆ ಕಂಡಿತು.

07024040a ಕರ್ಣಸ್ತು ಕೇಕಯಾನ್ಭ್ರಾತೄನ್ಪಂಚ ಲೋಹಿತಕಧ್ವಜಾನ್।
07024040c ದ್ರೋಣಾಯಾಭಿಮುಖಂ ಯಾತಾಂ ಶರವರ್ಷೈರವಾರಯತ್।।

ಕರ್ಣನಾದರೋ ದ್ರೋಣನ ಅಭಿಮುಖವಾಗಿ ಬರುತ್ತಿದ್ದ ಕೆಂಪು ಧ್ವಜಗಳನ್ನುಳ್ಳ ಕೇಕಯ ಸಹೋದರರನ್ನು ಶರವರ್ಷಗಳಿಂದ ತಡೆದನು.

07024041a ತೇ ಚೈನಂ ಭೃಶಸಂಕ್ರುದ್ಧಾಃ ಶರವ್ರಾತೈರವಾಕಿರನ್।
07024041c ಸ ಚ ತಾಂಶ್ಚಾದಯಾಮಾಸ ಶರಜಾಲೈಃ ಪುನಃ ಪುನಃ।।

ತುಂಬಾ ಸಿಟ್ಟಿಗೆದ್ದ ಅವರು ಅವನನ್ನೂ ಬಾಣಗಳ ಮಳೆಯಿಂದ ಮುಚ್ಚಿದರು. ಅವನೂ ಕೂಡ ಅವರನ್ನು ಪುನಃ ಪುನಃ ಶರಜಾಲಗಳಿಂದ ಮುಚ್ಚಿದನು.

07024042a ನೈವ ಕರ್ಣೋ ನ ತೇ ಪಂಚ ದದೃಶುರ್ಬಾಣಸಂವೃತಾಃ।
07024042c ಸಾಶ್ವಸೂತಧ್ವಜರಥಾಃ ಪರಸ್ಪರಶರಾಚಿತಾಃ।।

ಪರಸ್ಪರ ಬಾಣಪ್ರಯೋಗಳಿಂದ ಮುಚ್ಚಲ್ಪಟ್ಟ ಕರ್ಣನಾಗಲೀ, ಆ ಐವರಾಗಲೀ ಅವರ ಕುದುರೆ-ಸೂತ-ರಥಗಳ ಸಹಿತ ಕಾಣಲಿಲ್ಲ.

07024043a ಪುತ್ರಸ್ತೇ ದುರ್ಜಯಶ್ಚೈವ ಜಯಶ್ಚ ವಿಜಯಶ್ಚ ಹ।
07024043c ನೀಲಂ ಕಾಶ್ಯಂ ಜಯಂ ಶೂರಾಸ್ತ್ರಯಸ್ತ್ರೀನ್ಪ್ರತ್ಯವಾರಯನ್।।

ನಿನ್ನ ಮಕ್ಕಳಾದ ದುರ್ಜಯ, ಜಯ ಮತ್ತು ವಿಜಯರು ನೀಲ, ಕಾಶ್ಯ ಮತ್ತು ಜಯ ಈ ಮೂರು ಶೂರರನ್ನು ತಡೆದರು.

07024044a ತದ್ಯುದ್ಧಮಭವದ್ಘೋರಮೀಕ್ಷಿತೃಪ್ರೀತಿವರ್ಧನಂ।
07024044c ಸಿಂಹವ್ಯಾಘ್ರತರಕ್ಷೂಣಾಂ ಯಥೇಭಮಹಿಷರ್ಷಭೈಃ।।

ಆಗ ಕಾಡು ಕೋಣಗಳೊಂದಿಗೆ ಸಿಂಹ-ವ್ಯಾಘ್ರ-ತೋಳಗಳ ಹೊಡೆದಾಟದಂತೆ ನೋಡುವವರಿಗೆ ಸಂತೋಷವನ್ನು ಕೊಡುವ ಘೋರ ಯುದ್ಧವು ಅವರ ನಡುವೆ ನಡೆಯಿತು.

07024045a ಕ್ಷೇಮಧೂರ್ತಿಬೃಹಂತೌ ತೌ ಭ್ರಾತರೌ ಸಾತ್ವತಂ ಯುಧಿ।
07024045c ದ್ರೋಣಾಯಾಭಿಮುಖಂ ಯಾಂತಂ ಶರೈಸ್ತೀಕ್ಷ್ಣೈಸ್ತತಕ್ಷತುಃ।।

ಕ್ಷೇಮಧೂರ್ತಿ ಮತ್ತು ಬೃಹಂತ ಈ ಇಬ್ಬರು ಸಹೋದರರೂ ಯುದ್ಧದಲ್ಲಿ ದ್ರೋಣನ ಕಡೆ ಬರುತ್ತಿದ್ದ ಸಾತ್ವತ ಸಾತ್ಯಕಿಯನ್ನು ತೀಕ್ಷ್ಣ ಶರಗಳಿಂದ ಗಾಯಗೊಳಿಸಿದರು.

07024046a ತಯೋಸ್ತಸ್ಯ ಚ ತದ್ಯುದ್ಧಮತ್ಯದ್ಭುತಮಿವಾಭವತ್।
07024046c ಸಿಂಹಸ್ಯ ದ್ವಿಪಮುಖ್ಯಾಭ್ಯಾಂ ಪ್ರಭಿನ್ನಾಭ್ಯಾಂ ಯಥಾ ವನೇ।।

ಅವರ ನಡುವೆ ವನದಲ್ಲಿ ಮದೋದಕವನ್ನು ಸುರಿಸುವ ಎರಡು ಆನೆಗಳೊಡನೆ ಸಿಂಹದ ಹೋರಾಟದಂತೆ ಅದ್ಭುತ ಯುದ್ಧವು ನಡೆಯಿತು.

07024047a ರಾಜಾನಂ ತು ತಥಾಂಬಷ್ಠಮೇಕಂ ಯುದ್ಧಾಭಿನಂದಿನಂ।
07024047c ಚೇದಿರಾಜಃ ಶರಾನಸ್ಯನ್ಕ್ರುದ್ಧೋ ದ್ರೋಣಾದವಾರಯತ್।।

ಚೇದಿರಾಜನು ಕ್ರುದ್ಧನಾಗಿ ಬಾಣಗಳನ್ನು ಪ್ರಯೋಗಿಸಿ ಯುದ್ಧಾಭಿನಂದನ ರಾಜಾ ಅಂಬಷ್ಠನನ್ನು ದ್ರೋಣನ ಬಳಿ ಹೋಗದಂತೆ ತಡೆದನು.

07024048a ತಮಂಬಷ್ಠೋಽಸ್ಥಿಭೇದಿನ್ಯಾ ನಿರವಿಧ್ಯಚ್ಚಲಾಕಯಾ।
07024048c ಸ ತ್ಯಕ್ತ್ವಾ ಸಶರಂ ಚಾಪಂ ರಥಾದ್ಭೂಮಿಮಥಾಪತತ್।।

ಅಂಬಷ್ಟನು ಅವನನ್ನು ಅಸ್ಥಿಯನ್ನೂ ಭೇದಿಸುವ ಶಲಾಕಗಳಿಂದ ಹೊಡೆಯಲು, ಅವನು ಬಾಣದೊಂದಿಗೆ ಬಿಲ್ಲನ್ನು ಬಿಟ್ಟು, ರಥದಿಂದ ನೆಲದ ಮೇಲೆ ಬಿದ್ದನು.

07024049a ವಾರ್ಧಕ್ಷೇಮಿಂ ತು ವಾರ್ಷ್ಣೇಯಂ ಕೃಪಃ ಶಾರದ್ವತಃ ಶರೈಃ।
07024049c ಅಕ್ಷುದ್ರಃ ಕ್ಷುದ್ರಕೈರ್ದ್ರೋಣಾತ್ಕ್ರುದ್ಧರೂಪಮವಾರಯತ್।।

ಕ್ರೋಧರೂಪಿ ವಾರ್ಷ್ಣೇಯ ವಾರ್ಧಕ್ಷೇಮಿಯನ್ನು ಶಾರದ್ವತ ಕೃಪನು ಸಣ್ಣ ಸಣ್ಣ ಶರಗಳಿಂದ ದ್ರೋಣನ ಬಳಿ ಹೋಗದಂತೆ ತಡೆದನು.

07024050a ಯುಧ್ಯಂತೌ ಕೃಪವಾರ್ಷ್ಣೇಯೌ ಯೇಽಪಶ್ಯಂಶ್ಚಿತ್ರಯೋಧಿನೌ।
07024050c ತೇ ಯುದ್ಧಸಕ್ತಮನಸೋ ನಾನ್ಯಾ ಬುಬುಧಿರೇ ಕ್ರಿಯಾಃ।।

ಆ ಇಬ್ಬರು ಚಿತ್ರಯೋಧಿಗಳು - ಕೃಪ ವಾರ್ಷ್ಣೇಯರು - ಯುದ್ಧಮಾಡುತ್ತಿರುವುದನ್ನು ನೋಡುತ್ತಿದ್ದವರು ಆ ಯುದ್ಧದಲ್ಲಿ ಆಸಕ್ತಿ ತೋರಿಸುವುದನ್ನು ಬಿಟ್ಟು ಬೇರೆ ಏನನ್ನು ಮಾಡಲೂ ಮನಸ್ಸುಮಾಡಲಿಲ್ಲ.

07024051a ಸೌಮದತ್ತಿಸ್ತು ರಾಜಾನಂ ಮಣಿಮಂತಮತಂದ್ರಿತಂ।
07024051c ಪರ್ಯವಾರಯದಾಯಾಂತಂ ಯಶೋ ದ್ರೋಣಸ್ಯ ವರ್ಧಯನ್।।

ಸೋಮದತ್ತನ ಮಗನಾದರೋ ಬರುತ್ತಿದ್ದ ರಾಜರ ಅತಂದ್ರಿತ ಮಣಿಮಂತನನ್ನು ತಡೆದು ದ್ರೋಣನ ಯಶಸ್ಸನ್ನು ಹೆಚ್ಚಿಸಿದನು.

07024052a ಸ ಸೌಮದತ್ತೇಸ್ತ್ವರಿತಶ್ಚಿತ್ತ್ವೇಷ್ವಸನಕೇತನೇ।
07024052c ಪುನಃ ಪತಾಕಾಂ ಸೂತಂ ಚ ಚತ್ರಂ ಚಾಪಾತಯದ್ರಥಾತ್।।

ಅವನು ಸೌಮದತ್ತಿಯ ಧನುಸ್ಸಿನ ಶಿಂಜಿನಿಯನ್ನೂ, ಕೇತನವನ್ನೂ ಮತ್ತೆ ಪುನಃ ಪತಾಕೆ, ಸೂತ ಮತ್ತು ಚತ್ರಗಳನ್ನು ರಥದಿಂದ ಬೀಳಿಸಿದನು.

07024053a ಅಥಾಪ್ಲುತ್ಯ ರಥಾತ್ತೂರ್ಣಂ ಯೂಪಕೇತುರಮಿತ್ರಹಾ।
07024053c ಸಾಶ್ವಸೂತಧ್ವಜರಥಂ ತಂ ಚಕರ್ತ ವರಾಸಿನಾ।।

ಆಗ ಯೂಪಕೇತು ಅಮಿತ್ರಹ ಸೌಮದತ್ತಿಯು ತಕ್ಷಣವೇ ರಥದಿಂದ ಹಾರಿ ಶ್ರೇಷ್ಠ ಖಡ್ಗದಿಂದ ಅವನನ್ನು ಕುದುರೆಗಳು, ಸೂತ, ಧ್ವಜ ಮತ್ತು ರಥಗಳೊಂದಿಗೆ ತುಂಡರಿಸಿದನು.

07024054a ರಥಂ ಚ ಸ್ವಂ ಸಮಾಸ್ಥಾಯ ಧನುರಾದಾಯ ಚಾಪರಂ।
07024054c ಸ್ವಯಂ ಯಚ್ಚನ್ ಹಯಾನ್ರಾಜನ್ವ್ಯಧಮತ್ಪಾಂಡವೀಂ ಚಮೂಂ।।

ತನ್ನ ರಥವನ್ನು ಏರಿ, ಇನ್ನೊಂದು ಧನ್ನುಸ್ಸನ್ನು ತೆಗೆದುಕೊಂಡು, ಸ್ವಯಂ ತಾನೇ ಕುದುರೆಗಳನ್ನು ನಡೆಸುತ್ತಾ ಪಾಂಡವ ಸೇನೆಯನ್ನು ಸಂಹರಿಸುತ್ತಿದ್ದನು.

07024055a ಮುಸಲೈರ್ಮುದ್ಗರೈಶ್ಚಕ್ರೈರ್ಭಿಂಡಿಪಾಲೈಃ ಪರಶ್ವಧೈಃ।
07024055c ಪಾಂಸುವಾತಾಗ್ನಿಸಲಿಲೈರ್ಭಸ್ಮಲೋಷ್ಠತೃಣದ್ರುಮೈಃ।।
07024056a ಆರುಜನ್ಪ್ರರುಜನ್ಭಂಜನ್ನಿಘ್ನನ್ವಿದ್ರಾವಯನ್ ಕ್ಷಿಪನ್।
07024056c ಸೇನಾಂ ವಿಭೀಷಯನ್ನಾಯಾದ್ದ್ರೋಣಪ್ರೇಪ್ಸುರ್ಘಟೋತ್ಕಚಃ।।

ಮುಸಲ, ಮುದ್ಗರ, ಚಕ್ರ, ಭಿಂಡಿಪಾಲ, ಪರಶು, ನೀರು, ಗಾಳಿ, ಅಗ್ನಿ, ಕಲ್ಲು, ಭಸ್ಮ, ಹುಲ್ಲು, ಮರಗಳೊಂದಿಗೆ ಏರುತ್ತಾ, ಇಳಿಯುತ್ತಾ, ಒಡೆಯುತ್ತಾ, ಕೊಲ್ಲುತ್ತಾ, ಓಡಿಸುತ್ತಾ, ಎಸೆಯುತ್ತಾ ಸೇನೆಗಳನ್ನು ಬೆದರಿಸುತ್ತಾ ದ್ರೋಣನನ್ನು ತಲುಪಲು ಘಟೋತ್ಕಚನು ಧಾವಿಸಿ ಬಂದನು.

07024057a ತಂ ತು ನಾನಾಪ್ರಹರಣೈರ್ನಾನಾಯುದ್ಧವಿಶೇಷಣೈಃ।
07024057c ರಾಕ್ಷಸಂ ರಾಕ್ಷಸಃ ಕ್ರುದ್ಧಃ ಸಮಾಜಘ್ನೇ ಹ್ಯಲಂಬುಸಃ।।

ನಾನಾಪ್ರಹರಣಗಳಿಂದ, ನಾನಾ ಯುದ್ಧ ವಿಶೇಷಗಳಿಂದ ರಾಕ್ಷಸನನ್ನು ರಾಕ್ಷಸ ಅಲಂಬುಸನು ಕ್ರುದ್ಧನಾಗಿ ಎದುರಿಸಿದನು.

07024058a ತಯೋಸ್ತದಭವದ್ಯುದ್ಧಂ ರಕ್ಷೋಗ್ರಾಮಣಿಮುಖ್ಯಯೋಃ।
07024058c ತಾದೃಗ್ಯಾದೃಕ್ಪುರಾ ವೃತ್ತಂ ಶಂಬರಾಮರರಾಜಯೋಃ।।

ಹಿಂದೆ ಶಂಬರ ಮತ್ತು ಅಮರರಾಜನೊಡನೆ ನಡೆದ ಯುದ್ಧದಂತೆ ಆ ಇಬ್ಬರು ರಾಕ್ಷಸನರಗದ ಮುಖ್ಯರ ನಡುವೆ ಯುದ್ಧವು ನಡೆಯಿತು.

07024059a ಏವಂ ದ್ವಂದ್ವಶತಾನ್ಯಾಸನ್ರಥವಾರಣವಾಜಿನಾಂ।
07024059c ಪದಾತೀನಾಂ ಚ ಭದ್ರಂ ತೇ ತವ ತೇಷಾಂ ಚ ಸಂಕುಲಂ।।

ನಿನಗೆ ಮಂಗಳವಾಗಲಿ! ಹೀಗೆ ನಿನ್ನವರ ಮತ್ತು ಅವರ ರಥ-ಆನೆ-ಕುದುರೆ ಸವಾರರ ಮತ್ತು ಪದಾತಿಗಳ ನಡುವೆ ದ್ವಂದ್ವಯುದ್ಧವು ನಡೆಯಿತು.

07024060a ನೈತಾದೃಶೋ ದೃಷ್ಟಪೂರ್ವಃ ಸಂಗ್ರಾಮೋ ನೈವ ಚ ಶ್ರುತಃ।
07024060c ದ್ರೋಣಸ್ಯಾಭಾವಭಾವೇಷು ಪ್ರಸಕ್ತಾನಾಂ ಯಥಾಭವತ್।।

ದ್ರೋಣನ ನಾಶಕ್ಕೆ ಮತ್ತು ರಕ್ಷಣೆಗೆ ತೊಡಗಿದ್ದ ಅವರ ನಡುವೆ ನಡೆದ ಯುದ್ಧದಂತಹ ಯುದ್ಧವನ್ನು ಈ ಮೊದಲು ಯಾರೂ ನೋಡಲೂ ಇರಲಿಲ್ಲ ಮುತ್ತು ಕೇಳಲೂ ಇರಲಿಲ್ಲ.

07024061a ಇದಂ ಘೋರಮಿದಂ ಚಿತ್ರಮಿದಂ ರೌದ್ರಮಿತಿ ಪ್ರಭೋ।
07024061c ತತ್ರ ಯುದ್ಧಾನ್ಯದೃಶ್ಯಂತ ಪ್ರತತಾನಿ ಬಹೂನಿ ಚ।।

ಪ್ರಭೋ! ಅಲ್ಲಿ ಕಾಣುತ್ತಿದ್ದ ಅನೇಕ ಯುದ್ಧಗಳಲ್ಲಿ ಇದು ಘೋರವಾದುದು, ಇದು ವಿಚಿತ್ರವಾದುದು ಮತ್ತು ಇದು ರೌದ್ರವಾದುದು ಎಂದು ಹೇಳುತ್ತಿದ್ದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ದ್ವಂದ್ವಯುದ್ಧೇ ಚತುರ್ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.