022 ಹಯಧ್ವಜಾದಿಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಸಂಶಪ್ತಕವಧ ಪರ್ವ

ಅಧ್ಯಾಯ 22

ಸಾರ

ದ್ರೋಣನನ್ನು ಆಕ್ರಮಣಿಸಿದ ಪಾಂಡವ ಯೋಧರ ರಥಚಿಹ್ನೆಗಳ ವರ್ಣನೆ (1-63).

07022001 ಧೃತರಾಷ್ಟ್ರ ಉವಾಚ।
07022001a ಸರ್ವೇಷಾಮೇವ ಮೇ ಬ್ರೂಹಿ ರಥಚಿಹ್ನಾನಿ ಸಂಜಯ।
07022001c ಯೇ ದ್ರೋಣಮಭ್ಯವರ್ತಂತ ಕ್ರುದ್ಧಾ ಭೀಮಪುರೋಗಮಾಃ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಭೀಮನನ್ನು ಮುಂದಿಟ್ಟುಕೊಂಡು ಕ್ರುದ್ಧರಾಗಿ ದ್ರೋಣನನ್ನು ಆಕ್ರಮಣಿಸಲು ಬರುತ್ತಿರುವ ಎಲ್ಲರ ರಥಚಿಹ್ನೆಗಳನ್ನು ನನಗೆ ಹೇಳು.”

07022002 ಸಂಜಯ ಉವಾಚ।
07022002a ಋಶ್ಯವರ್ಣೈರ್ಹಯೈರ್ದೃಷ್ಟ್ವಾ ವ್ಯಾಯಚ್ಚಂತಂ ವೃಕೋದರಂ।
07022002c ರಜತಾಶ್ವಸ್ತತಃ ಶೂರಃ ಶೈನೇಯಃ ಸಂನ್ಯವರ್ತತ।।

ಸಂಜಯನು ಹೇಳಿದನು: “ಕರಡಿಯ ಬಣ್ಣದ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ಬರುತ್ತಿದ್ದ ವೃಕೋದರನನ್ನು ನೋಡಿ ಶೂರ ಶೈನೇಯನು ಬೆಳ್ಳೆಯ ಬಣ್ಣದ ಕುದುರೆಗಳನ್ನೊಡಗೂಡಿ ಅವನೊಂದಿಗೆ ಹಿಂದಿರುಗಿದನು.

07022003a ದರ್ಶನೀಯಾಸ್ತು ಕಾಂಬೋಜಾಃ ಶುಕಪತ್ರಪರಿಚ್ಚದಾಃ।
07022003c ವಹಂತೋ ನಕುಲಂ ಶೀಘ್ರಂ ತಾವಕಾನಭಿದುದ್ರುವುಃ।।

ಸುಂದರ ಗಿಣಿಯ ರೆಕ್ಕೆಗಳ ಬಣ್ಣದ ಕಾಂಬೋಜ ಕುದುರೆಗಳು ಶೀಘ್ರವಾಗಿ ನಕುಲನನ್ನು ಹೊತ್ತು ನಿನ್ನ ಸೈನಿಕರಿದ್ದೆಡೆಗೆ ಓಡಿಬಂದವು.

07022004a ಕೃಷ್ಣಾಸ್ತು ಮೇಘಸಂಕಾಶಾಃ ಸಹದೇವಮುದಾಯುಧಂ।
07022004c ಭೀಮವೇಗಾ ನರವ್ಯಾಘ್ರಮವಹನ್ವಾತರಂಹಸಃ।।

ಆಯುಧವನ್ನು ಎತ್ತಿಹಿಡಿದಿದ್ದ ನರವ್ಯಾಘ್ರ ಸಹದೇವನನ್ನು ಭೀಮವೇಗದ, ಗಾಳಿಯ ವೇಗವುಳ್ಳ, ಮೋಡಗಳಂತೆ ಕಪ್ಪಾಗಿದ್ದ ಕುದುರೆಗಳು ಒಯ್ದುತಂದವು.

07022005a ಹೇಮೋತ್ತಮಪ್ರತಿಚ್ಚನ್ನೈರ್ಹಯೈರ್ವಾತಸಮೈರ್ಜವೇ।
07022005c ಅಭ್ಯವರ್ತಂತ ಸೈನ್ಯಾನಿ ಸರ್ವಾಣ್ಯೇವ ಯುಧಿಷ್ಠಿರಂ।।

ಸುವರ್ಣಮಯ ವಸ್ತ್ರಗಳಿಂದ ಆಚ್ಛಾದಿತವಾದ, ವೇಗದಲ್ಲಿ ವಾಯುವಿಗೆ ಸಮನಾಗಿದ್ದ ಕುದುರೆಗಳ ರಥದಲ್ಲಿದ್ದ ಯುಧಿಷ್ಠಿರನನ್ನು ಎಲ್ಲ ಸೇನೆಗಳೂ ಅನುಸರಿಸಿದವು.

07022006a ರಾಜ್ಞಸ್ತ್ವನಂತರಂ ರಾಜಾ ಪಾಂಚಾಲ್ಯೋ ದ್ರುಪದೋಽಭವತ್।
07022006c ಜಾತರೂಪಮಯಚ್ಚತ್ರಃ ಸರ್ವೈಃ ಸ್ವೈರಭಿರಕ್ಷಿತಃ।।

ರಾಜನ ಅನಂತರ ರಾಜಾ ಪಾಂಚಾಲ್ಯ ದ್ರುಪದನು ಬಂಗಾರದ ರೂಪಮಯ ಛತ್ರದಡಿಯಲ್ಲಿ ತನ್ನವರೆಲ್ಲರಿಂದ ರಕ್ಷಿಸಲ್ಪಟ್ಟು ಇದ್ದನು.

07022007a ಲಲಾಮೈರ್ಹರಿಭಿರ್ಯುಕ್ತೈಃ ಸರ್ವಶಬ್ದಕ್ಷಮೈರ್ಯುಧಿ।
07022007c ರಾಜ್ಞಾಂ ಮಧ್ಯೇ ಮಹೇಷ್ವಾಸಃ ಶಾಂತಭೀರಭ್ಯವರ್ತತ।।

ಲಲಾಮ ಎಂಬ ಚಿಹ್ನೆಯನ್ನು ಹೊಂದಿದ್ದ ಎಂತಹ ಮುಹಾಶಬ್ಧವನ್ನೂ ಸಹಿಸಿಕೊಳ್ಳಬಲ್ಲ ಕುದುರೆಗಳಿಂದ ಕೂಡಿದವನಾಗಿ ಯುದ್ಧದಲ್ಲಿ ರಾಜರ ಮಧ್ಯೆ ಆ ಮಹೇಷ್ವಾಸನು ಶಾಂತನಾಗಿ, ಭಯವಿಲ್ಲದೇ ಹೋಗುತ್ತಿದ್ದನು.

07022008a ತಂ ವಿರಾಟೋಽನ್ವಯಾತ್ಪಶ್ಚಾತ್ಸಹ ಶೂರೈರ್ಮಹಾರಥೈಃ।
07022008c ಕೇಕಯಾಶ್ಚ ಶಿಖಂಡೀ ಚ ಧೃಷ್ಟಕೇತುಸ್ತಥೈವ ಚ।
07022008e ಸ್ವೈಃ ಸ್ವೈಃ ಸೈನ್ಯೈಃ ಪರಿವೃತಾ ಮತ್ಸ್ಯರಾಜಾನಮನ್ವಯುಃ।।

ಅವನನ್ನು ವಿರಾಟನು ಮಹಾರಥ ಶೂರರಿಂದೊಡಗೂಡಿ ಅನುಸರಿಸಿದನು. ಕೇಕಯರು, ಶಿಖಂಡಿ ಮತ್ತು ಧೃಷ್ಟಕೇತು ಇವರು ಅವರವರ ಸೈನ್ಯಗಳೊಂದಿಗೆ ಪರಿವೃತರಾಗಿ ಮತ್ಸ್ಯರಾಜನನ್ನು ಹಿಂಬಾಲಿಸಿದರು.

07022009a ತೇ ತು ಪಾಟಲಪುಷ್ಪಾಣಾಂ ಸಮವರ್ಣಾ ಹಯೋತ್ತಮಾಃ।
07022009c ವಹಮಾನಾ ವ್ಯರಾಜಂತ ಮತ್ಸ್ಯಸ್ಯಾಮಿತ್ರಘಾತಿನಃ।।

ಅಮಿತ್ರಘಾತಿ ಮತ್ಸ್ಯರಾಜನು ಪಾಟಲ ಪುಷ್ಪಗಳ ಸಮವರ್ಣದ ಉತ್ತಮ ಕುದುರೆಗಳು ಕೊಂಡೊಯ್ಯುತ್ತಿದ್ದ ರಥದಲ್ಲಿ ವಿರಾಜಿಸಿದನು.

07022010a ಹಾರಿದ್ರಸಮವರ್ಣಾಸ್ತು ಜವನಾ ಹೇಮಮಾಲಿನಃ।
07022010c ಪುತ್ರಂ ವಿರಾಟರಾಜಸ್ಯ ಸತ್ವರಾಃ ಸಮುದಾವಹನ್।।

ಚಿನ್ನದ ಸರದಿಂದ ಅಲಂಕೃತವಾಗಿದ್ದ, ಹಳದೀ ಬಣ್ಣದ ವೇಗದ ಕುದುರೆಗಳು ವಿರಾಟರಾಜನ ಮಗನನ್ನು ತ್ವರೆಮಾಡಿ ಕೊಂಡೊಯ್ಯುತ್ತಿದ್ದವು.

07022011a ಇಂದ್ರಗೋಪಕವರ್ಣೈಸ್ತು ಭ್ರಾತರಃ ಪಂಚ ಕೇಕಯಾಃ।
07022011c ಜಾತರೂಪಸಮಾಭಾಸಃ ಸರ್ವೇ ಲೋಹಿತಕಧ್ವಜಾಃ।।

ಇಂದ್ರಗೋಪಗಳ (ಮಿಂಚುಹುಳುಗಳ) ಬಣ್ಣದ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತಿದ್ದ ಐವರು ಕೇಕಯ ಸಹೋದರರು ಬಂಗಾರದ ಬಣ್ಣದಂತೆ ಪ್ರಕಾಶಿಸುತ್ತಿದ್ದರು. ಎಲ್ಲರೂ ಕೆಂಪು ಧ್ವಜಗಳನ್ನು ಹೊಂದಿದ್ದರು.

07022012a ತೇ ಹೇಮಮಾಲಿನಃ ಶೂರಾಃ ಸರ್ವೇ ಯುದ್ಧವಿಶಾರದಾಃ।
07022012c ಯವರ್ಷಂತ ಇವ ಜೀಮೂತಾಃ ಪ್ರತ್ಯದೃಶ್ಯಂತ ದಂಶಿತಾಃ।।

ಚಿನ್ನದ ಮಾಲೆಗಳನ್ನು ಧರಿಸಿದ್ದ ಆ ಎಲ್ಲ ಶೂರ ಯುದ್ಧವಿಶಾರದರೂ ಕವಚಗಳನ್ನು ಧರಿಸಿ ಮಳೆಸುರಿಸುವ ಮೋಡಗಳಂತೆ ಕಂಡರು.

07022013a ಆಮಪಾತ್ರನಿಭಾಕಾರಾಃ ಪಾಂಚಾಲ್ಯಮಮಿತೌಜಸಂ।
07022013c ದಾಂತಾಸ್ತಾಮ್ರಾರುಣಾ ಯುಕ್ತಾಃ ಶಿಖಂಡಿನಮುದಾವಹನ್।।

ಅಮಿತೌಜಸ ಪಾಂಚಾಲ್ಯ ಶಿಖಂಡಿಯನ್ನು ಆಮಪಾತ್ರದ ಆಕಾರದ ಅರುಣೋದಯದ ಕೆಂಪುಬಣ್ಣದ ನಿಯಮವುಳ್ಳ ಕುದುರೆಗಳು ಒಯ್ದವು.

07022014a ತಥಾ ದ್ವಾದಶಸಾಹಸ್ರಾಃ ಪಾಂಚಾಲಾನಾಂ ಮಹಾರಥಾಃ।
07022014c ತೇಷಾಂ ತು ಷಟ್ಸಹಸ್ರಾಣಿ ಯೇ ಶಿಖಂಡಿನಮನ್ವಯುಃ।।

ಹನ್ನೆರಡು ಸಾವಿರ ಪಾಂಚಾಲರ ಮಹಾರಥರಲ್ಲಿ ಆರು ಸಾವಿರ ಮಂದಿ ಶಿಖಂಡಿಯನ್ನು ಅನುಸರಿಸಿದರು.

07022015a ಪುತ್ರಂ ತು ಶಿಶುಪಾಲಸ್ಯ ನರಸಿಂಹಸ್ಯ ಮಾರಿಷ।
07022015c ಆಕ್ರೀಡಂತೋ ವಹಂತಿ ಸ್ಮ ಸಾರಂಗಶಬಲಾ ಹಯಾಃ।।

ಮಾರಿಷ! ಶಿಶುಪಾಲನ ಮಗ ನರಸಿಂಹನನ್ನು ಸಾರಂಗದಂತೆ ಚುಕ್ಕೆಗಳನ್ನು ಹೊಂದಿದ ಕುದುರೆಗಳು ಕುಣಿಯುತ್ತಾ ಕೊಂಡೊಯ್ಯುತ್ತಿದ್ದವು.

07022016a ಧೃಷ್ಟಕೇತುಶ್ಚ ಚೇದೀನಾಂ ಋಷಭೋಽತಿಬಲೋದಿತಃ।
07022016c ಕಾಂಬೋಜೈಃ ಶಬಲೈರಶ್ವೈರಭ್ಯವರ್ತತ ದುರ್ಜಯಃ।।

ಚೇದಿಗಳ ಋಷಭ, ಅತಿಬಲಾನ್ವಿತ ದುರ್ಜಯ ಧೃಷ್ಟಕೇತುವನ್ನು ಚುಕ್ಕೆಗಳನ್ನು ಹೊಂದಿದ್ದ ಕಾಂಬೋಜದ ಕುದುರೆಗಳು ಕೊಂಡೊಯ್ಯುತ್ತಿದ್ದವು.

07022017a ಬೃಹತ್ಕ್ಷತ್ರಂ ತು ಕೈಕೇಯಂ ಸುಕುಮಾರಂ ಹಯೋತ್ತಮಾಃ।
07022017c ಪಲಾಲಧೂಮವರ್ಣಾಭಾಃ ಸೈಂಧವಾಃ ಶೀಘ್ರಮಾವಹನ್।।

ಕೈಕೇಯರ ಸುಕುಮಾರ ಬೃಹತ್ಕ್ಷತ್ರನನ್ನು ಬೆಂಕಿಬಿದ್ದ ಹುಲ್ಲುಮೆದೆಯಿಂದ ಹೊರಡುವ ಹೊಗೆಯ ಬಣ್ಣದ ಸಿಂಧುದೇಶದ ಉತ್ತಮ ಕುದುರೆಗಳು ಶೀಘ್ರವಾಗಿ ಕೊಂಡೊಯ್ಯುತ್ತಿದ್ದವು.

07022018a ಮಲ್ಲಿಕಾಕ್ಷಾಃ ಪದ್ಮವರ್ಣಾ ಬಾಹ್ಲಿಜಾತಾಃ ಸ್ವಲಂಕೃತಾಃ।
07022018c ಶೂರಂ ಶಿಖಂಡಿನಃ ಪುತ್ರಂ ಕ್ಷತ್ರದೇವಮುದಾವಹನ್।।

ಶಿಖಂಡಿಯ ಶೂರಪುತ್ರ ಕ್ಷತ್ರದೇವನನ್ನು ಸ್ವಲಂಕೃತ ಮಲ್ಲಿಕಾಕ್ಷ, ಪದ್ಮವರ್ಣದ, ಬಾಹ್ಲಿಜಾತ ಕುದುರೆಗಳು ಕೊಂಡೊಯ್ಯುತ್ತಿದ್ದವು.

07022019a ಯುವಾನಮವಹನ್ಯುದ್ಧೇ ಕ್ರೌಂಚವರ್ಣಾ ಹಯೋತ್ತಮಾಃ।
07022019c ಕಾಶ್ಯಸ್ಯಾಭಿಭುವಃ ಪುತ್ರಂ ಸುಕುಮಾರಂ ಮಹಾರಥಂ।।

ಕಾಶೀರಾಜ ಅಭಿಭುವನ ಮಗ ಯುವಕ ಸುಕುಮಾರ ಮಹಾರಥನನ್ನು ಕ್ರೌಂಚವರ್ಣದ ಉತ್ತಮ ಕುದುರೆಗಳು ಯುದ್ಧಕ್ಕೆ ಕೊಂಡೊಯ್ಯುತ್ತಿದ್ದವು.

07022020a ಶ್ವೇತಾಸ್ತು ಪ್ರತಿವಿಂಧ್ಯಂ ತಂ ಕೃಷ್ಣಗ್ರೀವಾ ಮನೋಜವಾಃ।
07022020c ಯಂತುಃ ಪ್ರೇಷ್ಯಕರಾ ರಾಜನ್ರಾಜಪುತ್ರಮುದಾವಹನ್।।

ರಾಜನ್! ಮನೋವೇಗದ ಕಪ್ಪು ಕುತ್ತಿಗೆಯ ಬಿಳೀ ಕುದುರೆಗಳು ರಾಜಪುತ್ರ ಪ್ರತಿವಿಂಧ್ಯನನ್ನು ಒಯ್ಯುತ್ತಿದ್ದವು.

07022021a ಸುತಸೋಮಂ ತು ಯಂ ಧೌಮ್ಯಾತ್ಪಾರ್ಥಃ ಪುತ್ರಮಯಾಚತ।
07022021c ಮಾಷಪುಷ್ಪಸವರ್ಣಾಸ್ತಮವಹನ್ವಾಜಿನೋ ರಣೇ।।

ಪಾರ್ಥನ ಮಗ ಸುತಸೋಮನನ್ನು ಉದ್ದಿನ ಹೂವಿನ ಬಣ್ಣದ ಕುದುರೆಗಳು ರಣರಂಗಕ್ಕೆ ಕೊಂಡೊಯ್ಯುತ್ತಿದ್ದವು.

07022022a ಸಹಸ್ರಸೋಮಪ್ರತಿಮಾ ಬಭೂವುಃ ಪುರೇ ಕುರೂಣಾಮುದಯೇಂದುನಾಮ್ನಿ।
07022022c ತಸ್ಮಿಂ ಜಾತಃ ಸೋಮಸಂಕ್ರಂದಮಧ್ಯೇ ಯಸ್ಮಾತ್ತಸ್ಮಾತ್ಸುತಸೋಮೋಽಭವತ್ಸಃ।।

ಕುರುಗಳ ಪುರ ಉದಯೇಂದು (ಉದಯಿಸುತ್ತಿರುವ ಚಂದ್ರ – ಇಂದ್ರಪ್ರಸ್ಥ) ವಿನಲ್ಲಿ ಜನಿಸಿದುದರಿಂದ , ಯಜ್ಞದಲ್ಲಿ ಸೋಮರಸವನ್ನು ಹಿಂಡುವ ಸಮಯದಲ್ಲಿ ಜನಿಸಿದುದರಿಂದ ಮತ್ತು ಸಹಸ್ರಸೋಮರ ಸಮಾನ ಕಾಂತಿಯನ್ನು ಹೊಂದಿದ್ದ ಅವನ ಹೆಸರು ಸುತಸೋಮನೆಂದಾಯಿತು.

07022023a ನಾಕುಲಿಂ ತು ಶತಾನೀಕಂ ಶಾಲಪುಷ್ಪನಿಭಾ ಹಯಾಃ।
07022023c ಆದಿತ್ಯತರುಣಪ್ರಖ್ಯಾಃ ಶ್ಲಾಘನೀಯಮುದಾವಹನ್।।

ನಕುಲನ ಮಗ ಶತಾನೀಕನನ್ನು ಶಾಲಪುಷ್ಪ ಬಣ್ಣದ, ಬಾಲಸೂರ್ಯನ ಕಾಂತಿಯ, ಶ್ಲಾಘನೀಯ ಕುದುರೆಗಳು ಕೊಂಡೊಯ್ದವು.

07022024a ಕಾಂಚನಪ್ರತಿಮೈರ್ಯೋಕ್ತ್ರೈರ್ಮಯೂರಗ್ರೀವಸನ್ನಿಭಾಃ।
07022024c ದ್ರೌಪದೇಯಂ ನರವ್ಯಾಘ್ರಂ ಶ್ರುತಕರ್ಮಾಣಮಾವಹನ್।।

ಕಾಂಚನದ ಹಗ್ಗಗಳಿಂದ ಬಿಗಿಯಲ್ಪಟ್ಟ, ನವಿಲಿನ ಕುತ್ತಿಗೆಯ ಬಣ್ಣದಂತಿದ್ದ ಕುದುರೆಗಳು ದ್ರೌಪದೇಯ, ನರವ್ಯಾಘ್ರ, ಶ್ರುತಕರ್ಮನನ್ನು ಒಯ್ದವು.

07022025a ಶ್ರುತಕೀರ್ತಿಂ ಶ್ರುತನಿಧಿಂ ದ್ರೌಪದೇಯಂ ಹಯೋತ್ತಮಾಃ।
07022025c ಊಹುಃ ಪಾರ್ಥಸಮಂ ಯುದ್ಧೇ ಚಾಷಪತ್ರನಿಭಾ ಹಯಾಃ।।

ಯುದ್ಧದಲ್ಲಿ ಪಾರ್ಥನ ಸಮನೆಂದು ಹೇಳುವ, ವಿದ್ಯೆಯ ನಿಧಿಯೆನಿಸಿದ್ದ, ದ್ರೌಪದೇಯ ಶ್ರುತಕೀರ್ತಿಯನ್ನು ಕಳಿಂಗಪಕ್ಷಿಯ ರೆಕ್ಕೆಗಳ ಬಣ್ಣದ ಉತ್ತಮ ಕುದುರೆಗಳು ಒಯ್ದವು.

07022026a ಯಮಾಹುರಧ್ಯರ್ಧಗುಣಂ ಕೃಷ್ಣಾತ್ಪಾರ್ಥಾಚ್ಚ ಸಂಯುಗೇ।
07022026c ಅಭಿಮನ್ಯುಂ ಪಿಶಂಗಾಸ್ತಂ ಕುಮಾರಮವಹನ್ರಣೇ।।

ಯುದ್ಧದಲ್ಲಿ ಕೃಷ್ಣ ಮತ್ತು ಪಾರ್ಥರಿಗಿಂತಲೂ ಅರ್ಧಗುಣ ಹೆಚ್ಚಿನವನೆಂದು ಯಾರಿಗೆ ಹೇಳುತ್ತಾರೋ ಆ ಕುಮಾರ ಅಭಿಮನ್ಯುವನ್ನು ರಣಕ್ಕೆ ಕಪಿಲವರ್ಣದ ಕುದುರೆಗಳು ಕೊಂಡೊಯ್ಯುತ್ತಿದ್ದವು.

07022027a ಏಕಸ್ತು ಧಾರ್ತರಾಷ್ಟ್ರೇಭ್ಯಃ ಪಾಂಡವಾನ್ಯಃ ಸಮಾಶ್ರಿತಃ।
07022027c ತಂ ಬೃಹಂತೋ ಮಹಾಕಾಯಾ ಯುಯುತ್ಸುಮವಹನ್ರಣೇ।।

ಧಾರ್ತರಾಷ್ಟ್ರರಲ್ಲಿ ಪಾಂಡವರನ್ನು ಆಶ್ರಯಿಸಿದ ಒಬ್ಬನೇ ಒಬ್ಬ ಯುಯುತ್ಸುವನ್ನು ವಿಶಾಲ ಮಹಾಕಾಯ ಕುದುರೆಗಳು ರಣಕ್ಕೆ ಕೊಂಡೊಯ್ದವು.

07022028a ಪಲಾಲಕಾಂಡವರ್ಣಾಸ್ತು ವಾರ್ಧಕ್ಷೇಮಿಂ ತರಸ್ವಿನಂ।
07022028c ಊಹುಃ ಸುತುಮುಲೇ ಯುದ್ಧೇ ಹಯಾ ಹೃಷ್ಟಾಃ ಸ್ವಲಂಕೃತಾಃ।।

ತರಸ್ವಿ ವಾರ್ಧಕ್ಷೇಮಿಯನ್ನು ಜೋಳದ ಕಡ್ಡಿಯ ಬಣ್ಣದ ಸ್ವಲಂಕೃತ ಹೃಷ್ಟ ಕುದುರೆಗಳು ಆ ತುಮುಲ ಯುದ್ಧಕ್ಕೆ ಕರೆದೊಯ್ದವು.

07022029a ಕುಮಾರಂ ಶಿತಿಪಾದಾಸ್ತು ರುಕ್ಮಪತ್ರೈರುರಶ್ಚದೈಃ।
07022029c ಸೌಚಿತ್ತಿಮವಹನ್ಯುದ್ಧೇ ಯಂತುಃ ಪ್ರೇಷ್ಯಕರಾ ಹಯಾಃ।।

ಕುಮಾರ ಸೌಚಿತ್ತಿಯನ್ನು ರುಕ್ಮಪತ್ರಗಳನ್ನು ಹೊದ್ದಿದ್ದ, ಕಪ್ಪು ಕಾಲುಗಳುಳ್ಳ, ಸಾರಥಿಯ ಆಜ್ಞಾನುಸಾರವಾಗಿ ಹೆಜ್ಜೆಗಳನ್ನಿಡುತ್ತಿದ್ದ ಕುದುರೆಗಳು ಯುದ್ಧಕ್ಕೆ ಕೊಂಡೊಯ್ಯುತ್ತಿದ್ದವು.

07022030a ರುಕ್ಮಪೃಷ್ಠಾವಕೀರ್ಣಾಸ್ತು ಕೌಶೇಯಸದೃಶಾ ಹಯಾಃ।
07022030c ಸುವರ್ಣಮಾಲಿನಃ ಕ್ಷಾಂತಾಃ ಶ್ರೇಣಿಮಂತಮುದಾವಹನ್।।

ಸುವರ್ಣಪೀಠವನ್ನು ಹೊತ್ತಿದ್ದ, ರೇಷ್ಮೆಯಂತಹ ನವಿರಾದ ಕೂದಲುಗಳುಳ್ಳ, ಸುವರ್ಣದ ಮಾಲೆಗಳನ್ನು ಧರಿಸಿದ, ಸಾಹಸಶಕ್ತಿಯುಳ್ಳ ಕುದುರೆಗಳು ಶ್ರೇಣಿಮಂತನನ್ನು ಕೊಂಡೊಯ್ಯುತ್ತಿದ್ದವು.

07022031a ರುಕ್ಮಮಾಲಾಧರಾಃ ಶೂರಾ ಹೇಮವರ್ಣಾಃ ಸ್ವಲಂಕೃತಾಃ।
07022031c ಕಾಶಿರಾಜಂ ಹಯಶ್ರೇಷ್ಠಾಃ ಶ್ಲಾಘನೀಯಮುದಾವಹನ್।।

ಚಿನ್ನದ ಮಾಲೆಯನ್ನು ಧರಿಸಿದ್ದ, ಶೂರ, ಹೇಮವರ್ಣದ, ಸ್ವಲಂಕೃತವಾಗಿದ್ದ, ಶ್ಲಾಘನೀಯ ಶ್ರೇಷ್ಠ ಹಯಗಳು ಕಾಶಿರಾಜನನ್ನು ಕೊಂಡೊಯ್ಯುತ್ತಿದ್ದವು.

07022032a ಅಸ್ತ್ರಾಣಾಂ ಚ ಧನುರ್ವೇದೇ ಬ್ರಾಹ್ಮೇ ವೇದೇ ಚ ಪಾರಗಂ।
07022032c ತಂ ಸತ್ಯಧೃತಿಮಾಯಾಂತಮರುಣಾಃ ಸಮುದಾವಹನ್।।

ಅಸ್ತ್ರಗಳಲ್ಲಿ, ಧನುರ್ವೇದದಲ್ಲಿ ಮತ್ತು ಬ್ರಾಹ್ಮೀ ವೇದದಲ್ಲಿ ಪಾರಂಗತನಾದ ಆ ಸತ್ಯಧೃತಿಯನ್ನು ಅರುಣವರ್ಣದ (ಎಣ್ಣೆಗಂಪಿನ) ಕುದುರೆಗಳು ಕೊಂಡೊಯ್ಯುತ್ತಿದ್ದವು.

07022033a ಯಃ ಸ ಪಾಂಚಾಲಸೇನಾನೀರ್ದ್ರೋಣಮಂಶಮಕಲ್ಪಯತ್।
07022033c ಪಾರಾವತಸವರ್ಣಾಶ್ವಾ ಧೃಷ್ಟದ್ಯುಮ್ನಮುದಾವಹನ್।।

ಯಾವ ಪಾಂಚಾಲಸೇನಾನಿಯು ದ್ರೋಣನನ್ನು ತನ್ನ ಪಾಲಿಗೆ ಕಲ್ಪಿಸಿಕೊಂಡಿದ್ದನೋ ಆ ಧೃಷ್ಟದ್ಯುಮ್ನನನ್ನು ಪಾರಿವಾಳದ ಬಣ್ಣದ ಕುದುರೆಗಳು ಒಯ್ದವು.

07022034a ತಮನ್ವಯಾತ್ಸತ್ಯಧೃತಿಃ ಸೌಚಿತ್ತಿರ್ಯುದ್ಧದುರ್ಮದಃ।
07022034c ಶ್ರೇಣಿಮಾನ್ವಸುದಾನಶ್ಚ ಪುತ್ರಃ ಕಾಶ್ಯಸ್ಯ ಚಾಭಿಭೋ।।

ಅವನನ್ನು ಸೌಚಿತ್ತಿ ಯುದ್ಧದುರ್ಮದ ಸತ್ಯಧೃತಿ, ವಸುದಾನನ ಪುತ್ರ ಶ್ರೇಣಿಮಾನ್ ಮತ್ತು ಕಾಶೀರಾಜನ ಮಗ ಅಭಿಭೋ ಇವರು ಅನುಸರಿಸಿದರು.

07022035a ಯುಕ್ತೈಃ ಪರಮಕಾಂಬೋಜೈರ್ಜವನೈರ್ಹೇಮಮಾಲಿಭಿಃ।
07022035c ಭೀಷಯಂತೋ ದ್ವಿಷತ್ಸೈನ್ಯಂ ಯಮವೈಶ್ರವಣೋಪಮಾಃ।।
07022036a ಪ್ರಭದ್ರಕಾಸ್ತು ಪಾಂಚಾಲಾಃ ಷಟ್ಸಹಸ್ರಾಣ್ಯುದಾಯುಧಾಃ।
07022036c ನಾನಾವರ್ಣೈರ್ಹಯಶ್ರೇಷ್ಠೈರ್ಹೇಮಚಿತ್ರರಥಧ್ವಜಾಃ।।
07022037a ಶರವ್ರಾತೈರ್ವಿಧುನ್ವಂತಃ ಶತ್ರೂನ್ವಿತತಕಾರ್ಮುಕಾಃ।
07022037c ಸಮಾನಮೃತ್ಯವೋ ಭೂತ್ವಾ ಧೃಷ್ಟದ್ಯುಮ್ನಂ ಸಮನ್ವಯುಃ।।

ಹೇಮಮಾಲೆಗಳನ್ನು ಧರಿಸಿದ್ದ, ಶತ್ರುಗಳ ಸೇನೆಯನ್ನು ಭಯಪಡಿಸುತ್ತಿದ್ದ, ವೈಶ್ರವಣ ಯಮರಂತಿದ್ದ, ಆಯುಧಗಳನ್ನು ಎತ್ತಿ ಹಿಡಿದಿದ್ದ ಆರು ಸಾವಿರ ಪಾಂಚಾಲದ ವೇಗಯುಕ್ತ ಪ್ರಭದ್ರಕರು ನಾನಾ ವರ್ಣದ ಶ್ರೇಷ್ಠ ಪರಮ ಕಾಂಬೋಜ ಕುದುರೆಗಳೊಂದಿಗೆ ಹೇಮಚಿತ್ರರಥಧ್ವಜಗಳೊಂದಿಗೆ, ಕಾರ್ಮುಕಗಳನ್ನು ಹಿಡಿದು ಶತ್ರುಗಳನ್ನು ಶರಗಳ ಮಳೆಯಿಂದ ಭಯಗೊಳಿಸುತ್ತ ಮೃತ್ಯುವಿನ ಸಮನಾಗಿದ್ದುಕೊಂಡು ಧೃಷ್ಟದ್ಯುಮ್ನನನ್ನು ಅನುಸರಿಸಿದರು.

07022038a ಬಭ್ರುಕೌಶೇಯವರ್ಣಾಸ್ತು ಸುವರ್ಣವರಮಾಲಿನಃ।
07022038c ಊಹುರಗ್ಲಾನಮನಸಶ್ಚೇಕಿತಾನಂ ಹಯೋತ್ತಮಾಃ।।

ಕೌಶೇಯವರ್ಣದ, ಸುವರ್ಣವರಮಾಲೆಗಳನ್ನು ಧರಿಸಿದ್ದ ಉತ್ತಮ ಹಯಗಳು ಅಗ್ಲಾನಮನಸ ಚೇಕಿತಾನನನ್ನು ಕೊಂಡೊಯ್ದವು.

07022039a ಇಂದ್ರಾಯುಧಸವರ್ಣೈಸ್ತು ಕುಂತಿಭೋಜೋ ಹಯೋತ್ತಮೈಃ।
07022039c ಆಯಾತ್ಸುವಶ್ಯೈಃ ಪುರುಜಿನ್ಮಾತುಲಃ ಸವ್ಯಸಾಚಿನಃ।।

ಸವ್ಯಸಾಚಿಯ ಸೋದರಮಾವ ಪುರುಜಿತ್ ಕುಂತೀಭೋಜನನ್ನು ಕಾಮನಬಿಲ್ಲಿನ ಬಣ್ಣದ ಉತ್ತಮ ಕುದುರೆಗಳು ಸುಂದರ ರಥದಲ್ಲಿ ಕೊಂಡೊಯ್ದವು.

07022040a ಅಂತರಿಕ್ಷಸವರ್ಣಾಸ್ತು ತಾರಕಾಚಿತ್ರಿತಾ ಇವ।
07022040c ರಾಜಾನಂ ರೋಚಮಾನಂ ತೇ ಹಯಾಃ ಸಂಖ್ಯೇ ಸಮಾವಹನ್।।

ನಕ್ಷತ್ರಗಳಿಂದ ಚಿತ್ರಿತ ಅಂತರಿಕ್ಷದ ಬಣ್ಣದ ಕುದುರೆಗಳು ರಾಜಾ ರೋಚಮಾನನನ್ನು ಯುದ್ಧಕ್ಕೆ ಕೊಂಡೊಯ್ದವು.

07022041a ಕರ್ಬುರಾಃ ಶಿತಿಪಾದಾಸ್ತು ಸ್ವರ್ಣಜಾಲಪರಿಚ್ಚದಾಃ।
07022041c ಜಾರಾಸಂಧಿಂ ಹಯಶ್ರೇಷ್ಠಾಃ ಸಹದೇವಮುದಾವಹನ್।।

ಜರಾಸಂಧನ ಮಗ ಸಹದೇವನನ್ನು ಬಂಗಾರದ ಜಾಲಗಳಿಂದ ಅಲಂಕೃತ ಚಿತ್ರವರ್ಣದ, ಕಪ್ಪು ಕಾಲುಗಳ ಶ್ರೇಷ್ಠ ಹಯಗಳು ಕೊಂಡೊಯ್ದವು.

07022042a ಯೇ ತು ಪುಷ್ಕರನಾಲಸ್ಯ ಸಮವರ್ಣಾ ಹಯೋತ್ತಮಾಃ।
07022042c ಜವೇ ಶ್ಯೇನಸಮಾಶ್ಚಿತ್ರಾಃ ಸುದಾಮಾನಮುದಾವಹನ್।।

ಕಮಲದ ದಂಟಿನ ಬಣ್ಣದ, ವೇಗದಲ್ಲಿ ಗಿಡುಗಕ್ಕೆ ಸಮ ವಿಚಿತ್ರ ಉತ್ತಮ ಕುದುರೆಗಳು ಸುದಾಮಾನನನ್ನು ಕೊಂಡೊಯ್ದವು.

07022043a ಶಶಲೋಹಿತವರ್ಣಾಸ್ತು ಪಾಂಡುರೋದ್ಗತರಾಜಯಃ।
07022043c ಪಾಂಚಾಲ್ಯಂ ಗೋಪತೇಃ ಪುತ್ರಂ ಸಿಂಹಸೇನಮುದಾವಹನ್।।

ಮೊಲದ ಬಣ್ಣದ ಮತ್ತು ಕೆಂಪು ಬಣ್ಣದ, ಬಿಳೀ ಕೂದಲಿನಿಂದ ಹೊಳೆಯುತ್ತಿದ್ದ ಕುದುರೆಗಳು ಪಾಂಚಾಲ್ಯ ಗೋಪತಿಯ ಮಗ ಸಿಂಹಸೇನನನ್ನು ಕೊಂಡೊಯ್ಯುತ್ತಿದ್ದವು.

07022044a ಪಾಂಚಾಲಾನಾಂ ನರವ್ಯಾಘ್ರೋ ಯಃ ಖ್ಯಾತೋ ಜನಮೇಜಯಃ।
07022044c ತಸ್ಯ ಸರ್ಷಪಪುಷ್ಪಾಣಾಂ ತುಲ್ಯವರ್ಣಾ ಹಯೋತ್ತಮಾಃ।।

ಜನಮೇಜಯನೆಂದು ಖ್ಯಾತನಾಗಿದ್ದ ಪಾಂಚಾಲರ ನರವ್ಯಾಘ್ರನನ್ನು ಸಾಸಿವೆ ಹೂವಿನ ಬಣ್ಣದ ಉತ್ತಮ ಹಯಗಳು ಕೊಂಡೊಯ್ಯುತ್ತಿದ್ದವು.

07022045a ಮಾಷವರ್ಣಾಸ್ತು ಜವನಾ ಬೃಹಂತೋ ಹೇಮಮಾಲಿನಃ।
07022045c ದಧಿಪೃಷ್ಠಾಶ್ಚಂದ್ರಮುಖಾಃ ಪಾಂಚಾಲ್ಯಮವಹನ್ದ್ರುತಂ।।

ಉದ್ದಿನ ಬಣ್ಣದ, ವೇಗಶಾಲೀ, ಬಂಗಾರದ ಮಾಲೆಗಳನ್ನು ಧರಿಸಿದ್ದ, ಮೊಸರಿನಂತೆ ಬಿಳುಪಾದ ಪೃಷ್ಠಭಾಗವನ್ನು ಹೊಂದಿದ್ದ, ಮುಖದಲ್ಲಿ ಚುಕ್ಕೆಗಳನ್ನು ಹೊಂದಿದ್ದ ಎತ್ತರ ಕುದುರೆಗಳು ಪಾಂಚಾಲ್ಯ ದ್ರುತನನ್ನು ಕೊಂಡೊಯ್ಯುತ್ತಿದ್ದವು.

07022046a ಶೂರಾಶ್ಚ ಭದ್ರಕಾಶ್ಚೈವ ಶರಕಾಂಡನಿಭಾ ಹಯಾಃ।
07022046c ಪದ್ಮಕಿಂಜಲ್ಕವರ್ಣಾಭಾ ದಂಡಧಾರಮುದಾವಹನ್।।

ಬಿದಿರಿನ ಗಿಣ್ಣಿನ ಬಣ್ಣದ ಕಮಲಬಣ್ಣದಂತೆ ಕಾಂತಿಯುಕ್ತವಾಗಿದ್ದ ಶೂರ ಭದ್ರಕ ಕುದುರೆಗಳು ದಂಡಧಾರನನ್ನು ಒಯ್ದವು.

07022047a ಬಿಭ್ರತೋ ಹೇಮಮಾಲಾಶ್ಚ ಚಕ್ರವಾಕೋದರಾ ಹಯಾಃ।
07022047c ಕೋಸಲಾಧಿಪತೇಃ ಪುತ್ರಂ ಸುಕ್ಷತ್ರಂ ವಾಜಿನೋಽವಹನ್।।

ಕೋಸಲಾಧಿಪತಿಯ ಮಗ ಸುಕ್ಷತ್ರನನ್ನು ಹೇಮಮಾಲೆಗಳಿಂದ ಬೆಳಗುತ್ತಿದ್ದ ಚಕ್ರವಾಕದ ಬಣ್ಣದ ಕುದುರೆಗಳು ರಥದಲ್ಲಿ ಕೊಂಡೊಯ್ದವು.

07022048a ಶಬಲಾಸ್ತು ಬೃಹಂತೋಽಶ್ವಾ ದಾಂತಾ ಜಾಂಬೂನದಸ್ರಜಃ।
07022048c ಯುದ್ಧೇ ಸತ್ಯಧೃತಿಂ ಕ್ಷೈಮಿಮವಹನ್ಪ್ರಾಂಶವಃ ಶುಭಾಃ।।

ಅನೇಕ ಚುಕ್ಕೆಗಳಿಂದ ಕೂಡಿದ್ದ, ಎತ್ತರವಾಗಿದ್ದ, ವಶವರ್ತಿಗಳಾಗಿದ್ದ, ಬಂಗಾರದ ಮಾಲೆಗಳನ್ನು ಧರಿಸಿದ್ದ, ಶುಭಕರವಾಗಿದ್ದ ಕುದುರೆಗಳು ಕ್ಷೇಮಿಯ ಮಗ ಸತ್ಯಧೃತಿಯನ್ನು ಯುದ್ಧಕ್ಕೆ ಕೊಂಡೊಯ್ದವು.

07022049a ಏಕವರ್ಣೇನ ಸರ್ವೇಣ ಧ್ವಜೇನ ಕವಚೇನ ಚ।
07022049c ಅಶ್ವೈಶ್ಚ ಧನುಷಾ ಚೈವ ಶುಕ್ಲೈಃ ಶುಕ್ಲೋ ನ್ಯವರ್ತತ।।

ಯಾರ ಧ್ವಜ, ಕವಚ, ಧನುಸ್ಸು ಎಲ್ಲವೂ ಒಂದೇ ಬಣ್ಣದವುಗಳೋ ಆ ಶುಕ್ಲನು ಬಿಳೀ ಬಣ್ಣದ ಕುದುರೆಗಳೊಂದಿಗೆ ಹಿಂದಿರುಗಿದನು.

07022050a ಸಮುದ್ರಸೇನಪುತ್ರಂ ತು ಸಾಮುದ್ರಾ ರುದ್ರತೇಜಸಂ।
07022050c ಅಶ್ವಾಃ ಶಶಾಂಕಸದೃಶಾಶ್ಚಂದ್ರದೇವಮುದಾವಹನ್।।

ಸಮುದ್ರಸೇನನ ಮಗ, ರುದ್ರತೇಜಸ್ವಿ, ಚಂದ್ರದೇವನನ್ನು ಸಮುದ್ರದಲ್ಲಿ ಜನಿಸಿದ ಚಂದ್ರನ ಸದೃಶ ಕುದುರೆಗಳು ಕೊಂಡೊಯ್ದವು.

07022051a ನೀಲೋತ್ಪಲಸವರ್ಣಾಸ್ತು ತಪನೀಯವಿಭೂಷಿತಾಃ।
07022051c ಶೈಬ್ಯಂ ಚಿತ್ರರಥಂ ಯುದ್ಧೇ ಚಿತ್ರಮಾಲ್ಯಾವಹನ್ ಹಯಾಃ।।

ಬಂಗಾರದ ಆಭರಣಗಳಿಂದ ವಿಭೂಷಿತವಾದ, ಚಿತ್ರಮಾಲೆಗಳನ್ನು ಧರಿಸಿದ್ದ ಕನ್ನೈದಿಲೆಯ ಬಣ್ಣದ ಹಯಗಳು ಶೈಬ್ಯ ಚಿತ್ರರಥನನ್ನು ಯುದ್ಧಕ್ಕೆ ಕೊಂಡೊಯ್ದವು.

07022052a ಕಲಾಯಪುಷ್ಪವರ್ಣಾಸ್ತು ಶ್ವೇತಲೋಹಿತರಾಜಯಃ।
07022052c ರಥಸೇನಂ ಹಯಶ್ರೇಷ್ಠಾಃ ಸಮೂಹುರ್ಯುದ್ಧದುರ್ಮದಂ।।

ನೆಲಗಡಲೆ ಹೂವಿನ ಬಣ್ಣದ, ಕೆಂಪು ಮತ್ತು ಬಿಳಿಪು ಕೂದಲಿನಿಂದ ರಾರಾಜಿಸುತ್ತಿದ್ದ ಶ್ರೇಷ್ಠ ಹಯಗಳು ಯುದ್ಧದುರ್ಮದ ರಥಸೇನನನ್ನು ಕೊಂಡೊಯ್ಯುತ್ತಿದ್ದವು.

07022053a ಯಂ ತು ಸರ್ವಮನುಷ್ಯೇಭ್ಯಃ ಪ್ರಾಹುಃ ಶೂರತರಂ ನೃಪಂ।
07022053c ತಂ ಪಟಚ್ಚರಹಂತಾರಂ ಶುಕವರ್ಣಾವಹನ್ ಹಯಾಃ।।

ಯಾರನ್ನು ಸರ್ವಮನುಷ್ಯರಿಗಿಂತಲೂ ಶೂರನೆಂದು ಹೇಳುತ್ತಾರೋ ಪಟಚ್ಚರ ಹಂತಾರ ನೃಪನನ್ನು ಗಿಳಿಯ ಬಣ್ಣದ ಕುದುರೆಗಳು ಕೊಂಡೊಯ್ದವು.

07022054a ಚಿತ್ರಾಯುಧಂ ಚಿತ್ರಮಾಲ್ಯಂ ಚಿತ್ರವರ್ಮಾಯುಧಧ್ವಜಂ।
07022054c ಊಹುಃ ಕಿಂಶುಕಪುಷ್ಪಾಣಾಂ ತುಲ್ಯವರ್ಣಾ ಹಯೋತ್ತಮಾಃ।।

ಚಿತ್ರಮಾಲ್ಯ, ಚಿತ್ರ ಕವಚ-ಆಯುಧ-ಧ್ವಜಗಳನ್ನು ಹೊಂದಿದ್ದ ಚಿತ್ರಾಯುಧನನ್ನು ಮುತ್ತುಗದ ಹೂವಿನ ಬಣ್ಣದ ಉತ್ತಮ ಹಯಗಳು ಕೊಂಡೊಯ್ದವು.

07022055a ಏಕವರ್ಣೇನ ಸರ್ವೇಣ ಧ್ವಜೇನ ಕವಚೇನ ಚ।
07022055c ಧನುಷಾ ರಥವಾಹೈಶ್ಚ ನೀಲೈರ್ನೀಲೋಽಭ್ಯವರ್ತತ।।

ಧ್ವಜ-ಕವಚ-ಧನುಸ್ಸು-ರಥ-ಕುದುರೆಗಳು ಎಲ್ಲವೂ ಒಂದೇ ನೀಲಿ ಬಣ್ಣದಲ್ಲಿರುವ ನೀಲನು ಹಿಂದಿರುಗಿದನು.

07022056a ನಾನಾರೂಪೈ ರತ್ನಚಿತ್ರೈರ್ವರೂಥಧ್ವಜಕಾರ್ಮುಕೈಃ।
07022056c ವಾಜಿಧ್ವಜಪತಾಕಾಭಿಶ್ಚಿತ್ರೈಶ್ಚಿತ್ರೋಽಭ್ಯವರ್ತತ।।

ಯಾರ ಕಟಾಂಜನ, ರಥ ಮತ್ತು ಧನುಸ್ಸುಗಳು ನಾನಾರೂಪದ ರತ್ನಗಳಿಂದ ಮೆತ್ತಲ್ಪಟ್ಟಿದ್ದವೋ ಆ ಚಿತ್ರರಾಜನು ಚಿತ್ರಿತವಾಗಿ ಕಾಣುತ್ತಿದ್ದ ಚಿತ್ರವರ್ಣದ ಕುದುರೆ, ಧ್ವಜ ಮತ್ತು ಪತಾಕೆಗಳೊಂದಿಗೆ ಯುದ್ಧಕ್ಕೆ ಹೋದನು.

07022057a ಯೇ ತು ಪುಷ್ಕರಪತ್ರಸ್ಯ ತುಲ್ಯವರ್ಣಾ ಹಯೋತ್ತಮಾಃ।
07022057c ತೇ ರೋಚಮಾನಸ್ಯ ಸುತಂ ಹೇಮವರ್ಣಮುದಾವಹನ್।।

ಕಮಲಪತ್ರದ ಸಮಾನ ಬಣ್ಣದ ಉತ್ತಮ ಹಯಗಳು ರೋಚಮಾನನ ಮಗ ಹೇಮವರ್ಣನನ್ನು ಕೊಂಡೊಯ್ದವು.

07022058a ಯೋಧಾಶ್ಚ ಭದ್ರಕಾರಾಶ್ಚ ಶರದಂಡಾನುದಂಡಜಾಃ।
07022058c ಶ್ವೇತಾಂಡಾಃ ಕುಕ್ಕುಟಾಂಡಾಭಾ ದಂಡಕೇತುಮುದಾವಹನ್।।

ಯುದ್ಧಪ್ರಯೋಜಕಗಳಾದ, ಮಂಗಳದಾಯಕಗಳಾದ, ಲಾಳದ ಕಡ್ಡಿಯ ಬಣ್ಣದ, ಬಿಳಿಯ ಅಂಡಗಳನ್ನು ಹೊಂದಿದ್ದ, ಕೋಳಿಯ ಮೊಟ್ಟೆಯಂತೆ ಬಿಳುಪಾಗಿದ್ದ ಕುದುರುಗಳು ದಂಡಕೇತುವನ್ನು ಕೊಂಡೊಯ್ದವು.

07022059a ಆಟರೂಷಕಪುಷ್ಪಾಭಾ ಹಯಾಃ ಪಾಂಡ್ಯಾನುಯಾಯಿನಾಂ।
07022059c ಅವಹನ್ರಥಮುಖ್ಯಾನಾಮಯುತಾನಿ ಚತುರ್ದಶ।।

ಅಡುಸೋಗೇಗಿಡದ ಬಣ್ಣದಂತೆ ಪ್ರಕಾಶಮಾನವಾಗಿದ್ದ ಕುದುರೆಗಳು ಪಾಂಡ್ಯನನ್ನು ಅನುಸರಿಸಿ ಹೋಗುತ್ತಿದ್ದ ಒಂದು ಲಕ್ಷ ನಲವತ್ತು ಸಾವಿರ ರಥಮುಖ್ಯರನ್ನು ಕೊಂಡೊಯ್ಯುತ್ತಿದ್ದವು.

07022060a ನಾನಾರೂಪೇಣ ವರ್ಣೇನ ನಾನಾಕೃತಿಮುಖಾ ಹಯಾಃ।
07022060c ರಥಚಕ್ರಧ್ವಜಂ ವೀರಂ ಘಟೋತ್ಕಚಮುದಾವಹನ್।।

ನಾನವಿಧದ ರೂಪ-ಬಣ್ಣಗಳ, ನಾನಾ ಆಕೃತಿಯ ಮುಖಗಳುಳ್ಳ ಕುದುರೆಗಳು ರಥಚಕ್ರದ ಚಿಹ್ನೆಯ ಧ್ವಜವಿದ್ದ ವೀರ ಘಟೋತ್ಕಚನನ್ನು ಕೊಂಡೊಯ್ದವು.

07022061a ಸುವರ್ಣವರ್ಣಾ ಧರ್ಮಜ್ಞಮನೀಕಸ್ಥಂ ಯುಧಿಷ್ಠಿರಂ।
07022061c ರಾಜಶ್ರೇಷ್ಠಂ ಹಯಶ್ರೇಷ್ಠಾಃ ಸರ್ವತಃ ಪೃಷ್ಠತೋಽನ್ವಯುಃ।।

ಸುವರ್ಣವರ್ಣದ ಶ್ರೇಷ್ಠ ಕುದುರೆಗಳು ಸೇನೆಗಳ ಮಧ್ಯವಿದ್ದ ಧರ್ಮಜ್ಞ ರಾಜಶ್ರೇಷ್ಠ ಯುಧಿಷ್ಠಿರನನ್ನು ಎಲ್ಲ ಕಡೆಯಿಂದ ಸುತ್ತುವರೆದು ಹಿಂದೆ ಹಿಂದೆ ಹೋಗುತ್ತಿದ್ದವು.

07022061e ವರ್ಣೈಶ್ಚೋಚ್ಚಾವಚೈರ್ದಿವ್ಯೈಃ ಸದಶ್ವಾನಾಂ ಪ್ರಭದ್ರಕಾಃ।।
07022062a ತೇ ಯತ್ತಾ ಭೀಮಸೇನೇನ ಸಹಿತಾಃ ಕಾಂಚನಧ್ವಜಾಃ।
07022062c ಪ್ರತ್ಯದೃಶ್ಯಂತ ರಾಜೇಂದ್ರ ಸೇಂದ್ರಾ ಇವ ದಿವೌಕಸಃ।।

ರಾಜನ್! ನಾನಾವಿಧದ ಬಣ್ಣಗಳ ಸುಂದರ ಕುದುರೆಗಳಿಂದ ಯುಕ್ತವಾದ ರಥಗಳಲ್ಲಿ ದೇವರೂಪೀ ಅನೇಕ ಪ್ರಭದ್ರಕರು ಕಾಂಚನಧ್ವಜರಾಗಿ ಭೀಮಸೇನನೊಂದಿಗೆ ಇಂದ್ರನೊಡನಿರುವ ದಿವೌಕಸರಂತೆ ಕಾಣುತ್ತಿದ್ದರು.

07022063a ಅತ್ಯರೋಚತ ತಾನ್ಸರ್ವಾನ್ಧೃಷ್ಟದ್ಯುಮ್ನಃ ಸಮಾಗತಾನ್।
07022063c ಸರ್ವಾಣ್ಯಪಿ ಚ ಸೈನ್ಯಾನಿ ಭಾರದ್ವಾಜೋಽತ್ಯರೋಚತ।।

ಅಲ್ಲಿ ಸೇರಿದ್ದ ಅವರೆಲ್ಲರನ್ನೂ ಮೀರಿಸಿ ಧೃಷ್ಟದ್ಯುಮ್ನನು ರಾಜಿಸಿದನು. ಆದರೆ ಸರ್ವ ಸೇನೆಗಳಲ್ಲಿಯೂ ಭಾರದ್ವಾಜನು ಅತಿಯಾಗಿ ರಾರಾಜಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಹಯಧ್ವಜಾದಿಕಥನೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಹಯಧ್ವಜಾದಿಕಥನ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.