021 ದ್ರೋಣಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಸಂಶಪ್ತಕವಧ ಪರ್ವ

ಅಧ್ಯಾಯ 21

ಸಾರ

ಕರ್ಣ-ದುರ್ಯೋಧನ ಸಂವಾದ (1-29).

07021001 ಧೃತರಾಷ್ಟ್ರ ಉವಾಚ।
07021001a ಭಾರದ್ವಾಜೇನ ಭಗ್ನೇಷು ಪಾಂಡವೇಷು ಮಹಾಮೃಧೇ।
07021001c ಪಾಂಚಾಲೇಷು ಚ ಸರ್ವೇಷು ಕಶ್ಚಿದನ್ಯೋಽಭ್ಯವರ್ತತ।।

ಧೃತರಾಷ್ಟ್ರನು ಹೇಳಿದನು: “ಮಹಾಯುದ್ಧದಲ್ಲಿ ಭಾರದ್ವಾಜನು ಪಾಂಡವರು ಮತ್ತು ಪಾಂಚಾಲರೆಲ್ಲರನ್ನೂ ಭಗ್ನಗೊಳಿಸಲು ಬೇರೆ ಯಾರು ಅವನನ್ನು ಎದುರಿಸಿದರು?

07021002a ಆರ್ಯಾಂ ಯುದ್ಧೇ ಮತಿಂ ಕೃತ್ವಾ ಕ್ಷತ್ರಿಯಾಣಾಂ ಯಶಸ್ಕರೀಂ।
07021002c ಅಸೇವಿತಾಂ ಕಾಪುರುಷೈಃ ಸೇವಿತಾಂ ಪುರುಷರ್ಷಭೈಃ।।

ಕ್ಷತ್ರಿಯರಿಗೆ ಯಶಸ್ಸನ್ನುಂಟುಮಾಡುವ, ನೀಚಪುರುಷರಿಗೆ ಅನುಸರಿಸಲು ಅಸಾದ್ಯವಾದ, ಪುರುಷಶ್ರೇಷ್ಠರು ಅನುಸರಿಸುವ, ಯಾವ ಆರ್ಯನು ಅವನೊಂದಿಗೆ ಯುದ್ಧದ ಮನಸ್ಸನ್ನು ಮಾಡಿದನು?

07021003a ಸ ಹಿ ವೀರೋ ನರಃ ಸೂತ ಯೋ ಭಗ್ನೇಷು ನಿವರ್ತತೇ।
07021003c ಅಹೋ ನಾಸೀತ್ಪುಮಾನ್ಕಶ್ಚಿದ್ದೃಷ್ಟ್ವಾ ದ್ರೋಣಂ ವ್ಯವಸ್ಥಿತಂ।।

ಸೂತ! ಭಗ್ನವಾದರೂ ಮರಳಿ ಬರುವ ನರನೇ ವೀರನು. ಅಲ್ಲಿ ವ್ಯವಸ್ಥಿತನಾಗಿದ್ದ ದ್ರೋಣನನ್ನು ನೋಡಿ ಎದುರಿಸುವ ಪುರುಷರು ಯಾರೂ ಇರಲಿಲ್ಲವೇ?

07021004a ಜೃಂಭಮಾಣಮಿವ ವ್ಯಾಘ್ರಂ ಪ್ರಭಿನ್ನಮಿವ ಕುಂಜರಂ।
07021004c ತ್ಯಜಂತಮಾಹವೇ ಪ್ರಾಣಾನ್ಸನ್ನದ್ಧಂ ಚಿತ್ರಯೋಧಿನಂ।।
07021005a ಮಹೇಷ್ವಾಸಂ ನರವ್ಯಾಘ್ರಂ ದ್ವಿಷತಾಮಘವರ್ಧನಂ।
07021005c ಕೃತಜ್ಞಂ ಸತ್ಯನಿರತಂ ದುರ್ಯೋಧನಹಿತೈಷಿಣಂ।।
07021006a ಭಾರದ್ವಾಜಂ ತಥಾನೀಕೇ ದೃಷ್ಟ್ವಾ ಶೂರಮವಸ್ಥಿತಂ।
07021006c ಕೇ ವೀರಾಃ ಸಮ್ನ್ಯವರ್ತಂತ ತನ್ಮಮಾಚಕ್ಷ್ವ ಸಂಜಯ।।

ಬಾಯ್ದೆರೆದ ಹುಲಿಯಂತಿದ್ದ, ಮದೋದಕವನ್ನು ಸುರಿಸುವ ಆನೆಯಂತಿದ್ದ, ಯುದ್ಧದಲ್ಲಿ ಪ್ರಾಣವನ್ನೂ ತ್ಯಜಿಸಲು ಸಿದ್ಧನಾಗಿದ್ದ ಆ ಚಿತ್ರಯೋಧಿ, ಮಹೇಷ್ವಾಸ, ನರವ್ಯಾಘ್ರ, ಶತ್ರುಗಳ ಭಯವನ್ನು ವರ್ಧಿಸುವ, ಕೃತಜ್ಞ, ಸತ್ಯನಿರತ, ದುರ್ಯೋಧನನ ಹಿತೈಷಿಣಿ, ಶೂರ ಭಾರದ್ವಾಜನು ರಣದಲ್ಲಿ ನಿಂತಿದ್ದುದನ್ನು ನೋಡಿ ಯಾವ ವೀರರು ಯುದ್ಧಕ್ಕೆ ಹಿಂದಿರುಗಿದರು ಎನ್ನುವುದನ್ನು ನನಗೆ ಹೇಳು ಸಂಜಯ!”

07021007 ಸಂಜಯ ಉವಾಚ।
07021007a ತಾನ್ದೃಷ್ಟ್ವಾ ಚಲಿತಾನ್ಸಂಖ್ಯೇ ಪ್ರಣುನ್ನಾನ್ದ್ರೋಣಸಾಯಕೈಃ।
07021007c ಪಾಂಚಾಲಾನ್ಪಾಂಡವಾನ್ಮತ್ಸ್ಯಾನ್ಸೃಂಜಯಾಂಶ್ಚೇದಿಕೇಕಯಾನ್।।
07021008a ದ್ರೋಣಚಾಪವಿಮುಕ್ತೇನ ಶರೌಘೇಣಾಸುಹಾರಿಣಾ।
07021008c ಸಿಂಧೋರಿವ ಮಹೌಘೇನ ಹ್ರಿಯಮಾಣಾನ್ಯಥಾ ಪ್ಲವಾನ್।।
07021009a ಕೌರವಾಃ ಸಿಂಹನಾದೇನ ನಾನಾವಾದ್ಯಸ್ವನೇನ ಚ।
07021009c ರಥದ್ವಿಪನರಾಶ್ವೈಶ್ಚ ಸರ್ವತಃ ಪರ್ಯವಾರಯನ್।।

ದ್ರೋಣನ ಸಾಯಕಗಳಿಂದ ಪೀಡಿತರಾಗಿ ರಣರಂಗದಿಂದ ಚದುರಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದ ಪಾಂಚಾಲ-ಪಾಂಡವ-ಮತ್ಸ್ಯ-ಸೃಂಜಯ-ಚೇದಿ-ಕೇಕಯರನ್ನು ನೋಡಿ, ನದಿಯ ಪ್ರವಾಹದಿಂದ ದೋಣಿಗಳು ಸೆಳೆಯಲ್ಪಡುವಂತೆ ದ್ರೋಣನ ಬಿಲ್ಲಿನಿಂದ ಬಿಡಲ್ಪಟ್ಟ ಬಾಣಗಳ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿರುವ ಅವರನ್ನು ನೋಡಿ ಕೌರವರು ಸಿಂದನಾದಗೈದು, ನಾನಾವಾದ್ಯಗಳನ್ನು ನುಡಿಸಿ, ರಥ-ಗಜ-ನರ-ಅಶ್ವಗಳನ್ನು ಎಲ್ಲ ಕಡೆಯಿಂದ ಸುತ್ತುವರೆದರು.

07021010a ತಾನ್ಪಶ್ಯನ್ಸೈನ್ಯಮಧ್ಯಸ್ಥೋ ರಾಜಾ ಸ್ವಜನಸಂವೃತಃ।
07021010c ದುರ್ಯೋಧನೋಽಬ್ರವೀತ್ಕರ್ಣಂ ಪ್ರಹೃಷ್ಟಃ ಪ್ರಹಸನ್ನಿವ।।

ಅವರನ್ನು ನೋಡಿ ಸ್ವಜನರಿಂದ ಸಂವೃತನಾಗಿ ಸೇನೆಯ ಮಧ್ಯದಲ್ಲಿದ್ದ ರಾಜಾ ದುರ್ಯೋಧನನು ಸಂತೋಷದಿಂದ ನಗುತ್ತಾ ಕರ್ಣನಿಗೆ ಹೇಳಿದನು:

07021011a ಪಶ್ಯ ರಾಧೇಯ ಪಾಂಚಾಲಾನ್ಪ್ರಣುನ್ನಾನ್ದ್ರೋಣಸಾಯಕೈಃ।
07021011c ಸಿಂಹೇನೇವ ಮೃಗಾನ್ವನ್ಯಾಂಸ್ತ್ರಾಸಿತಾನ್ದೃಢಧನ್ವನಾ।।

“ರಾಧೇಯ! ಸಿಂಹವು ವನ್ಯಪ್ರಾಣಿಗಳನ್ನು ಹೇಗೋ ಹಾಗೆ ಸಾಯಕಗಳಿಂದ ಪಾಂಚಾಲರನ್ನು ಪೀಡಿಸುತ್ತಿರುವ ದೃಢಧನ್ವಿ ದ್ರೋಣನನ್ನು ನೋಡು!

07021012a ನೈತೇ ಜಾತು ಪುನರ್ಯುದ್ಧಮೀಹೇಯುರಿತಿ ಮೇ ಮತಿಃ।
07021012c ಯಥಾ ತು ಭಗ್ನಾ ದ್ರೋಣೇನ ವಾತೇನೇವ ಮಹಾದ್ರುಮಾಃ।।

ಭಿರುಗಾಳಿಗೆ ಸಿಲುಕಿ ಮುರಿದು ಬಿದ್ದ ಮಹಾಮರಗಳಂತೆ ದ್ರೋಣನಿಂದ ಭಗ್ನರಾದ ಇವರು ಪುನಃ ಯುದ್ಧಕ್ಕೆ ಬರುತ್ತಾರೆಂದು ನನಗನ್ನಿಸುವುದಿಲ್ಲ.

07021013a ಅರ್ದ್ಯಮಾನಾಃ ಶರೈರೇತೇ ರುಕ್ಮಪುಂಖೈರ್ಮಹಾತ್ಮನಾ।
07021013c ಪಥಾ ನೈಕೇನ ಗಚ್ಚಂತಿ ಘೂರ್ಣಮಾನಾಸ್ತತಸ್ತತಃ।।

ಆ ಮಹಾತ್ಮನ ರುಕ್ಮಪುಂಖ ಶರಗಳಿಂದ ಪೆಟ್ಟುತಿಂದ ಅವರು ಅಲ್ಲಲ್ಲಿಯೇ ಸುತ್ತುತ್ತಾ ಒಂದೇ ಮಾರ್ಗದಲ್ಲಿ ಹೋಗುತ್ತಿಲ್ಲ.

07021014a ಸಮ್ನಿರುದ್ಧಾಶ್ಚ ಕೌರವ್ಯೈರ್ದ್ರೋಣೇನ ಚ ಮಹಾತ್ಮನಾ।
07021014c ಏತೇಽನ್ಯೇ ಮಂಡಲೀಭೂತಾಃ ಪಾವಕೇನೇವ ಕುಂಜರಾಃ।।

ಬೆಂಕಿಯನ್ನು ಹಾಕಿ ಆನೆಗಳ ಹಿಂಡನ್ನು ಒಂದೇಕಡೆ ಗೋಲಾಕಾರವಾಗಿ ತಿರುಗಿಸುವಂತೆ ಮಹಾತ್ಮ ದ್ರೋಣ ಮತ್ತು ಕುರುಗಳು ಇವರನ್ನು ಮಾಡಿದ್ದಾರೆ.

07021015a ಭ್ರಮರೈರಿವ ಚಾವಿಷ್ಟಾ ದ್ರೋಣಸ್ಯ ನಿಶಿತೈಃ ಶರೈಃ।
07021015c ಅನ್ಯೋನ್ಯಂ ಸಮಲೀಯಂತ ಪಲಾಯನಪರಾಯಣಾಃ।।

ದುಂಬಿಗಳಂತಿರುವ ದ್ರೋಣನ ನಿಶಿತ ಶರಗಳಿಂದ ಮುಸುಕಲ್ಪಟ್ಟು ಇವರು ಪಲಾಯನವೊಂದೇ ಮಾರ್ಗವೆಂದು ತಿಳಿದು ಅನ್ಯೋನ್ಯರ ಹಿಂದೆ ಅಡಗಿಕೊಳ್ಳುತ್ತಿದ್ದಾರೆ.

07021016a ಏಷ ಭೀಮೋ ದೃಢಕ್ರೋಧೋ ಹೀನಃ ಪಾಂಡವಸೃಂಜಯೈಃ।
07021016c ಮದೀಯೈರಾವೃತೋ ಯೋಧೈಃ ಕರ್ಣ ತರ್ಜಯತೀವ ಮಾಂ।।

ಈ ಕೋಪಿಷ್ಟ ಭೀಮನು ಪಾಂಡವ-ಸೃಂಜಯರಿಂದ ವಿಹೀನನಾಗಿ ನಮ್ಮವರ ಯೋಧರಿಂದ ಸುತ್ತುವರೆಯಲ್ಪಟ್ಟಿದ್ದಾನೆ. ಕರ್ಣ! ಇದು ನನಗೆ ಅತೀವ ತೃಪ್ತಿಯುನ್ನು ನೀಡುತ್ತಿದೆ.

07021017a ವ್ಯಕ್ತಂ ದ್ರೋಣಮಯಂ ಲೋಕಮದ್ಯ ಪಶ್ಯತಿ ದುರ್ಮತಿಃ।
07021017c ನಿರಾಶೋ ಜೀವಿತಾನ್ನೂನಮದ್ಯ ರಾಜ್ಯಾಚ್ಚ ಪಾಂಡವಃ।।

ಆ ದುರ್ಮತಿಗೆ ಇಂದು ಲೋಕವೆಲ್ಲವೂ ದ್ರೋಣಮಯವಾಗಿಯೇ ಕಾಣುತ್ತಿದೆ. ಇಂದು ಆ ಪಾಂಡವನಿಗೆ ಜೀವಿತದಲ್ಲಿಯೂ ರಾಜ್ಯದಲ್ಲಿಯೂ ನಿರಾಶೆಯುಂಟಾಗಿದೆ ಎನ್ನುವುದು ತೋರುತ್ತಿದೆ.”

07021018 ಕರ್ಣ ಉವಾಚ।
07021018a ನೈಷ ಜಾತು ಮಹಾಬಾಹುರ್ಜೀವನ್ನಾಹವಮುತ್ಸೃಜೇತ್।
07021018c ನ ಚೇಮಾನ್ಪುರುಷವ್ಯಾಘ್ರ ಸಿಂಹನಾದಾನ್ವಿಶಕ್ಷ್ಯತೇ।।

ಕರ್ಣನು ಹೇಳಿದನು: “ಈ ಮಹಾಬಾಹುವು ಜೀವವಿರುವವರೆಗೆ ಯುದ್ಧವನ್ನು ಬಿಟ್ಟು ಹೋಗುವುಲ್ಲ ಎಂದು ತಿಳಿ. ಪುರುಷವ್ಯಾಘ್ರ! ಇವನು ನಮ್ಮವರ ಈ ಸಿಂಹನಾದವನ್ನೂ ಸಹಿಸಿಕೊಳ್ಳುವವನಲ್ಲ.

07021019a ನ ಚಾಪಿ ಪಾಂಡವಾ ಯುದ್ಧೇ ಭಜ್ಯೇರನ್ನಿತಿ ಮೇ ಮತಿಃ।
07021019c ಶೂರಾಶ್ಚ ಬಲವಂತಶ್ಚ ಕೃತಾಸ್ತ್ರಾ ಯುದ್ಧದುರ್ಮದಾಃ।।

ಶೂರ, ಬಲವಂತ, ಕೃತಾಸ್ತ್ರ, ಯುದ್ಧದುರ್ಮದ ಪಾಂಡವರು ಯುದ್ಧವನ್ನು ಮುಂದುವರಿಸುತ್ತಾರೆ ಎಂದು ನನ್ನ ಅಭಿಪ್ರಾಯ.

07021020a ವಿಷಾಗ್ನಿದ್ಯೂತಸಂಕ್ಲೇಶಾನ್ವನವಾಸಂ ಚ ಪಾಂಡವಾಃ।
07021020c ಸ್ಮರಮಾಣಾ ನ ಹಾಸ್ಯಂತಿ ಸಂಗ್ರಾಮಮಿತಿ ಮೇ ಮತಿಃ।।

ವಿಷ-ಬೆಂಕಿ-ದ್ಯೂತ ಮತ್ತು ವನವಾಸಗಳ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡಿರುವ ಪಾಂಡವರು ಸಂಗ್ರಾಮದಿಂದ ಓಡಿಹೋಗುವುದಿಲ್ಲವೆಂದು ನನಗನ್ನಿಸುತ್ತದೆ.

07021021a ನಿಕೃತೋ ಹಿ ಮಹಾಬಾಹುರಮಿತೌಜಾ ವೃಕೋದರಃ।
07021021c ವರಾನ್ವರಾನ್ ಹಿ ಕೌಂತೇಯೋ ರಥೋದಾರಾನ್ ಹನಿಷ್ಯತಿ।।

ಏಕೆಂದರೆ ಮಹಾಬಾಹು ಅಮಿತ ಓಜಸ್ವಿ ವೃಕೋದರ ಕೌಂತೇಯನು ಮರಳಿ ನಮ್ಮವರ ಶ್ರೇಷ್ಠ ಶ್ರೇಷ್ಠ ರಥೋದಾರರನ್ನು ಕೊಲ್ಲುತ್ತಾನೆ.

07021022a ಅಸಿನಾ ಧನುಷಾ ಶಕ್ತ್ಯಾ ಹಯೈರ್ನಾಗೈರ್ನರೈ ರಥೈಃ।
07021022c ಆಯಸೇನ ಚ ದಂಡೇನ ವ್ರಾತಾನ್ವ್ರಾತಾನ್ ಹನಿಷ್ಯತಿ।।

ಖಡ್ಗದಿಂದ, ಧನುಸ್ಸಿನಿಂದ, ಶಕ್ತಿಯಿಂದ, ಕುದುರೆಗಳಿಂದ, ಆನೆಗಳಿಂದ, ಮುನುಷ್ಯರಿಂದ, ರಥಗಳಿಂದ, ಹಾರೆಕೋಲಿನಿಂದ ಮತ್ತು ದಂಡದಿಂದ ಗುಂಪು ಗುಂಪಾಗಿ ಸಂಹರಿಸುತ್ತಿದ್ದಾನೆ.

07021023a ತಮೇತೇ ಚಾನುವರ್ತಂತೇ ಸಾತ್ಯಕಿಪ್ರಮುಖಾ ರಥಾಃ।
07021023c ಪಾಂಚಾಲಾಃ ಕೇಕಯಾ ಮತ್ಸ್ಯಾಃ ಪಾಂಡವಾಶ್ಚ ವಿಶೇಷತಃ।।

ಅವನನ್ನು ಹಿಂಬಾಲಿಸಿ ಸಾತ್ಯಕಿಪ್ರಮುಖರಾದ ರಥರು, ವಿಶೇಷವಾಗಿ ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಪಾಂಡವರು ಬರುತ್ತಿದ್ದಾರೆ.

07021024a ಶೂರಾಶ್ಚ ಬಲವಂತಶ್ಚ ವಿಕ್ರಾಂತಾಶ್ಚ ಮಹಾರಥಾಃ।
07021024c ವಿಶೇಷತಶ್ಚ ಭೀಮೇನ ಸಂರಬ್ಧೇನಾಭಿಚೋದಿತಾಃ।।

ಆ ಶೂರರು, ಬಲವಂತರು, ವಿಕ್ರಾಂತ ಮಹಾರಥರು ಭೀಮನ ರಣೋತ್ಸಾಹದಿಂದ ವಿಶೇಷವಾಗಿ ಪ್ರಚೋದಿತಗೊಂಡಿದ್ದಾರೆ.

07021025a ತೇ ದ್ರೋಣಮಭಿವರ್ತಂತೇ ಸರ್ವತಃ ಕುರುಪುಂಗವಾಃ।
07021025c ವೃಕೋದರಂ ಪರೀಪ್ಸಂತಃ ಸೂರ್ಯಮಭ್ರಗಣಾ ಇವ।।

ವೃಕೋದರನನ್ನು ರಕ್ಷಿಸಲೋಸುಗ ಈ ಕುರುಪಾಂಡವರು ಸೂರ್ಯನನ್ನು ಮುತ್ತುವ ಮೋಡಗಳಂತೆ ದ್ರೋಣನ ಮೇಲೆ ಮುತ್ತಿಗೆ ಹಾಕಿದ್ದಾರೆ.

07021026a ಏಕಾಯನಗತಾ ಹ್ಯೇತೇ ಪೀಡಯೇಯುರ್ಯತವ್ರತಂ।
07021026c ಅರಕ್ಷ್ಯಮಾಣಂ ಶಲಭಾ ಯಥಾ ದೀಪಂ ಮುಮೂರ್ಷವಃ।
07021026e ಅಸಂಶಯಂ ಕೃತಾಸ್ತ್ರಾಶ್ಚ ಪರ್ಯಾಪ್ತಾಶ್ಚಾಪಿ ವಾರಣೇ।।

ರಕ್ಷಣೆಯಿಲ್ಲದ ಯತವ್ರತನನ್ನು ಪೀಡಿಸುವ ಒಂದೇ ಒಂದು ಉದ್ದೇಶವನ್ನಿಟ್ಟುಕೊಂಡಿರುವ ಇವರು ದೀಪದ ಹುಳುಗಳು ದೀಪವನ್ನು ಮುತ್ತಿಕೊಂಡು ತಾವು ಸಾಯುವುದನ್ನೂ ಗಮನಿಸದೇ ದೀಪವನ್ನು ಆರಿಸಲು ಪ್ರಯತ್ನಿಸುತ್ತಿರುವಂತೆ ಇರುವ ಈ ಕೃತಾಸ್ತ್ರರು ಅವನನ್ನು ತಡೆಯಲು ಸಮರ್ಥರು ಎನ್ನುವುದರಲ್ಲಿ ಸಂಶಯವಿಲ್ಲ.

07021027a ಅತಿಭಾರಂ ತ್ವಹಂ ಮನ್ಯೇ ಭಾರದ್ವಾಜೇ ಸಮಾಹಿತಂ।
07021027c ತೇ ಶೀಘ್ರಮನುಗಚ್ಚಾಮೋ ಯತ್ರ ದ್ರೋಣೋ ವ್ಯವಸ್ಥಿತಃ।
07021027e ಕಾಕಾ ಇವ ಮಹಾನಾಗಂ ಮಾ ವೈ ಹನ್ಯುರ್ಯತವ್ರತಂ।।

ಆದುದರಿಂದ ಇದು ಭಾರದ್ವಾಜನ ಮೇಲಿರುವ ಅತಿಭಾರವೆಂದು ನನಗನ್ನಿಸುತ್ತದೆ. ದ್ರೋಣನಿರುವಲ್ಲಿಗೆ ಶೀಘ್ರವಾಗಿ ಹೋಗೋಣ. ಕಾಗೆಗಳು ಮಹಾಸರ್ಪವನ್ನು ಹೇಗೋ ಹಾಗೆ ಅವರು ಆ ಯತವ್ರತನನ್ನು ಸಂಹರಿಸಬಾರದು!””

07021028 ಸಂಜಯ ಉವಾಚ।
07021028a ರಾಧೇಯಸ್ಯ ವಚಃ ಶ್ರುತ್ವಾ ರಾಜಾ ದುರ್ಯೋಧನಸ್ತದಾ।
07021028c ಭ್ರಾತೃಭಿಃ ಸಹಿತೋ ರಾಜನ್ಪ್ರಾಯಾದ್ದ್ರೋಣರಥಂ ಪ್ರತಿ।।

ಸಂಜಯನು ಹೇಳಿದನು: “ರಾಜನ್! ರಾಧೇಯನ ಮಾತನ್ನು ಕೇಳಿ ರಾಜಾ ದುರ್ಯೋಧನನು ಸಹೋದರರೊಂದಿಗೆ ದ್ರೋಣನ ಕಡೆ ಹೋದನು.

07021029a ತತ್ರಾರಾವೋ ಮಹಾನಾಸೀದೇಕಂ ದ್ರೋಣಂ ಜಿಘಾಂಸತಾಂ।
07021029c ಪಾಂಡವಾನಾಂ ನಿವೃತ್ತಾನಾಂ ನಾನಾವರ್ಣೈರ್ಹಯೋತ್ತಮೈಃ।।

ಅಲ್ಲಿ ದ್ರೋಣನನ್ನು ಸಂಹರಿಸುವ ಒಂದೇ ಉದ್ದೇಶವನ್ನಿಟ್ಟುಕೊಂಡು ನಾನಾ ಬಣ್ಣದ ಉತ್ತಮ ಕುದುರೆಗಳನ್ನೇರಿ ಹಿಂದಿರುಗಿ ಬರುತ್ತಿದ್ದ ಪಾಂಡವರ ಮಹಾ ಶಬ್ಧವು ಕೇಳಿಬರುತ್ತಿತ್ತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ದ್ರೋಣಯುದ್ಧೇ ಏಕವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ದ್ರೋಣಯುದ್ಧ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.