018 ಅರ್ಜುನಸಂಶಪ್ತಕಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ಸಂಶಪ್ತಕವಧ ಪರ್ವ

ಅಧ್ಯಾಯ 18

ಸಾರ

ಸಂಶಪ್ತಕರೊಡನೆ ಅರ್ಜುನನ ಯುದ್ಧ (1-39).

07018001 ಸಂಜಯ ಉವಾಚ।
07018001a ದೃಷ್ಟ್ವಾ ತು ಸನ್ನಿವೃತ್ತಾಂಸ್ತಾನ್ಸಂಶಪ್ತಕಗಣಾನ್ಪುನಃ।
07018001c ವಾಸುದೇವಂ ಮಹಾತ್ಮಾನಮರ್ಜುನಃ ಸಮಭಾಷತ।।

ಸಂಜಯನು ಹೇಳಿದನು: “ಆ ಸಂಶಪ್ತಕಗಣಗಳು ಪುನಃ ಹಿಂದಿರುಗಿದುದನ್ನು ನೋಡಿ ಅರ್ಜುನನು ಮಹಾತ್ಮ ವಾಸುದೇವನಿಗೆ ಹೇಳಿದನು:

07018002a ಚೋದಯಾಶ್ವಾನ್ ಹೃಷೀಕೇಶ ಸಂಶಪ್ತಕಗಣಾನ್ಪ್ರತಿ।
07018002c ನೈತೇ ಹಾಸ್ಯಂತಿ ಸಂಗ್ರಾಮಂ ಜೀವಂತ ಇತಿ ಮೇ ಮತಿಃ।।

“ಹೃಷೀಕೇಶ! ಸಂಶಪ್ತಕಗಣಗಳ ಕಡೆ ಕುದುರೆಗಳನ್ನು ಓಡಿಸು. ಜೀವಂತವಿರುವವರೆಗೂ ಇವರು ಯುದ್ಧಮಾಡುವುದನ್ನು ಬಿಡುವುದಿಲ್ಲವೆಂದು ನನಗನ್ನಿಸುತ್ತಿದೆ.

07018003a ಪಶ್ಯ ಮೇಽಸ್ತ್ರಬಲಂ ಘೋರಂ ಬಾಹ್ವೋರಿಷ್ವಸನಸ್ಯ ಚ।
07018003c ಅದ್ಯೈತಾನ್ಪಾತಯಿಷ್ಯಾಮಿ ಕ್ರುದ್ಧೋ ರುದ್ರಃ ಪಶೂನಿವ।।

ನನ್ನ ಘೋರ ಅಸ್ತ್ರಬಲವನ್ನು ಮತ್ತು ಬಾಹು-ಧನುಸ್ಸುಗಳ ಬಲವನ್ನು ನೋಡು! ಕ್ರುದ್ಧ ರುದ್ರನು ಪಶುಗಳನ್ನು ಹೇಗೋ ಹಾಗೆ ಇಂದು ಇವರನ್ನು ಉರುಳಿಸುತ್ತೇನೆ.”

07018004a ತತಃ ಕೃಷ್ಣಃ ಸ್ಮಿತಂ ಕೃತ್ವಾ ಪರಿಣಂದ್ಯ ಶಿವೇನ ತಂ।
07018004c ಪ್ರಾವೇಶಯತ ದುರ್ಧರ್ಷೋ ಯತ್ರ ಯತ್ರೈಚ್ಚದರ್ಜುನಃ।।

ಆಗ ಕೃಷ್ಣನು ನಸುನಕ್ಕು ಶುಭಾಶಂಸನೆಗೆಳಿಂದ ಅವನನ್ನು ಅಭಿನಂದಿಸಿ ದುರ್ಧರ್ಷ ಅರ್ಜುನನು ಎಲ್ಲಿಗೆ ಹೋಗಬಯಸಿದನೋ ಅಲ್ಲಿಗೆ ಪ್ರವೇಶಿಸಿದನು.

07018005a ಬಭ್ರಾಜೇ ಸ ರಥೋಽತ್ಯರ್ಥಮುಹ್ಯಮಾನೋ ರಣೇ ತದಾ।
07018005c ಉಹ್ಯಮಾನಮಿವಾಕಾಶೇ ವಿಮಾನಂ ಪಾಂಡುರೈರ್ಹಯೈಃ।।

ರಣರಂಗದಲ್ಲಿ ಬಿಳಿಯ ಕುದುರುಗಳು ಎಳೆದುಕೊಂಡು ಹೋಗುತ್ತಿದ್ದ ಆ ಬಿಳೀ ರಥವು ಆಕಾಶದಲ್ಲಿ ಹಾರಿಕೊಂಡು ಹೋಗುತ್ತಿದ್ದ ವಿಮಾನದಂತೆ ವಿಜೃಂಭಿಸಿತು.

07018006a ಮಂಡಲಾನಿ ತತಶ್ಚಕ್ರೇ ಗತಪ್ರತ್ಯಾಗತಾನಿ ಚ।
07018006c ಯಥಾ ಶಕ್ರರಥೋ ರಾಜನ್ಯುದ್ಧೇ ದೇವಾಸುರೇ ಪುರಾ।।

ರಾಜನ್! ಹಿಂದೆ ದೇವಾಸುರರ ಯುದ್ಧದಲ್ಲಿ ಶಕ್ರನ ರಥವು ಹೇಗೋ ಹಾಗೆ ಇವರ ರಥವೂ ಕೂಡ ಮಂಡಲಾಕಾರದಲ್ಲಿ, ಮುಂದೆ ಮತ್ತು ಹಿಂದೆ ಚಲಿಸುತ್ತಿತ್ತು.

07018007a ಅಥ ನಾರಾಯಣಾಃ ಕ್ರುದ್ಧಾ ವಿವಿಧಾಯುಧಪಾಣಯಃ।
07018007c ಚಾದಯಂತಃ ಶರವ್ರಾತೈಃ ಪರಿವವ್ರುರ್ಧನಂಜಯಂ।।

ಆಗ ನಾರಾಯಣರು ಕ್ರುದ್ಧರಾಗಿ ವಿವಿಧ ಆಯುಧಗಳನ್ನು ಹಿಡಿದು ಧನಂಜಯನನ್ನು ಬಾಣಗಳ ಮಳೆಯಿಂದ ಮುಚ್ಚಿ ಸುತ್ತುವರೆದರು.

07018008a ಅದೃಶ್ಯಂ ಚ ಮುಹೂರ್ತೇನ ಚಕ್ರುಸ್ತೇ ಭರತರ್ಷಭ।
07018008c ಕೃಷ್ಣೇನ ಸಹಿತಂ ಯುದ್ಧೇ ಕುಂತೀಪುತ್ರಂ ಧನಂಜಯಂ।।

ಭರತರ್ಷಭ! ಅವರು ಯುದ್ಧದಲ್ಲಿ ಕೃಷ್ಣನ ಸಹಿತ ಕುಂತೀಪುತ್ರ ಧನಂಜಯನನ್ನು ಮುಹೂರ್ತಕಾಲ ಅದೃಶ್ಯನನ್ನಾಗಿ ಮಾಡಿಬಿಟ್ಟರು.

07018009a ಕ್ರುದ್ಧಸ್ತು ಫಲ್ಗುನಃ ಸಂಖ್ಯೇ ದ್ವಿಗುಣೀಕೃತವಿಕ್ರಮಃ।
07018009c ಗಾಂಡೀವಮುಪಸಮ್ಮೃಜ್ಯ ತೂರ್ಣಂ ಜಗ್ರಾಹ ಸಂಯುಗೇ।।

ಕ್ರುದ್ಧ ಫಲ್ಗುನನ ವಿಕ್ರಮವು ರಣದಲ್ಲಿ ಇಮ್ಮಡಿಯಾಯಿತು. ತಕ್ಷಣವೇ ಸಂಯುಗದಲ್ಲಿ ಅವನು ಗಾಂಡೀವವನ್ನು ಹಿಡಿದು ಶಿಂಜಿನಿಯನ್ನು ಮೀಟಿದನು.

07018010a ಬದ್ಧ್ವಾ ಚ ಭೃಕುಟೀಂ ವಕ್ತ್ರೇ ಕ್ರೋಧಸ್ಯ ಪ್ರತಿಲಕ್ಷಣಂ।
07018010c ದೇವದತ್ತಂ ಮಹಾಶಂಖಂ ಪೂರಯಾಮಾಸ ಪಾಂಡವಃ।।

ಕ್ರೋಧದ ಪ್ರತಿಲಕ್ಷಣವಾದ ಹುಬ್ಬು-ಮುಖಗಳನ್ನು ಗಂಟಿಕ್ಕಿ ಪಾಂಡವನು ಮಹಾಶಂಖ ದೇವದತ್ತವನ್ನು ಜೋರಾಗಿ ಊದಿದನು.

07018011a ಅಥಾಸ್ತ್ರಮರಿಸಂಘಘ್ನಂ ತ್ವಾಷ್ಟ್ರಮಭ್ಯಸ್ಯದರ್ಜುನಃ।
07018011c ತತೋ ರೂಪಸಹಸ್ರಾಣಿ ಪ್ರಾದುರಾಸನ್ ಪೃಥಕ್ ಪೃಥಕ್।।

ಆಗ ಅರ್ಜುನನು ಅರಿಸಂಹಾರಕ ತ್ವಾಷ್ಟ್ರವೆಂಬ ಮಹಾ‌ ಅಸ್ತ್ರವನ್ನು ಪ್ರಯೋಗಿಸಲು ಅದರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಹಸ್ರಾರು ರೂಪಗಳು ಹೊರಹೊಮ್ಮಿದವು.

07018012a ಆತ್ಮನಃ ಪ್ರತಿರೂಪೈಸ್ತೈರ್ನಾನಾರೂಪೈರ್ವಿಮೋಹಿತಾಃ।
07018012c ಅನ್ಯೋನ್ಯಮರ್ಜುನಂ ಮತ್ವಾ ಸ್ವಮಾತ್ಮಾನಂ ಚ ಜಘ್ನಿರೇ।।

ಅರ್ಜುನನ ರೂಪದಂತೆಯೇ ಇದ್ದ ಸಾವಿರಾರು ಆಕೃತಿಗಳು ಆ ಸೈನಿಕರನ್ನು ಸೇರಿಕೊಳ್ಳಲು ಅವರು ಮೋಹಿತರಾಗಿ ಅನ್ಯೋನ್ಯರನ್ನೇ ಅರ್ಜುನನೆಂದು ತಿಳಿದುಕೊಂಡು ತಾವೇ ತಮ್ಮವರನ್ನು ಸಂಹರಿಸಿದರು.

07018013a ಅಯಮರ್ಜುನೋಽಯಂ ಗೋವಿಂದ ಇಮೌ ಯಾದವಪಾಂಡವೌ।
07018013c ಇತಿ ಬ್ರುವಾಣಾಃ ಸಮ್ಮೂಢಾ ಜಘ್ನುರನ್ಯೋನ್ಯಮಾಹವೇ।।

“ಇವನು ಅರ್ಜುನ! ಇವನು ಗೋವಿಂದ! ಇವರಿಬ್ಬರು ಯಾದವ-ಪಾಂಡವರು!” ಎಂದು ಹೇಳುತ್ತಾ, ಸಮ್ಮೂಢರಾಗಿ, ಆಹವದಲ್ಲಿ ಅವರು ಅನ್ಯೋನ್ಯರನ್ನು ಸಂಹರಿಸಿದರು.

07018014a ಮೋಹಿತಾಃ ಪರಮಾಸ್ತ್ರೇಣ ಕ್ಷಯಂ ಜಗ್ಮುಃ ಪರಸ್ಪರಂ।
07018014c ಅಶೋಭಂತ ರಣೇ ಯೋಧಾಃ ಪುಷ್ಪಿತಾ ಇವ ಕಿಂಶುಕಾಃ।।

ಪರಮಾಸ್ತ್ರದ ಪ್ರಭಾವದಿಂದ ಮೋಹಿತರಾದ ಅವರು ಪರಸ್ಪರರೊಂದಿಗೆ ಹೊಡೆದಾಡಿ ಕ್ಷಯವನ್ನು ಹೊಂದಿದರು. ರಣದಲ್ಲಿ ಆ ಯೋಧರು ಪುಷ್ಪಭರಿತ ಕಿಂಶುಕಗಳಂತೆ (ಮುತ್ತುಗದ ಮರಗಳಂತೆ) ಶೋಭಿಸಿದರು.

07018015a ತತಃ ಶರಸಹಸ್ರಾಣಿ ತೈರ್ವಿಮುಕ್ತಾನಿ ಭಸ್ಮಸಾತ್।
07018015c ಕೃತ್ವಾ ತದಸ್ತ್ರಂ ತಾನ್ವೀರಾನನಯದ್ಯಮಸಾದನಂ।।

ಆಗ ಆ ಅಸ್ತ್ರವು ಆ ವೀರರು ಬಿಟ್ಟ ಸಹಸ್ರಾರು ಬಾಣಗಳನ್ನು ಭಸ್ಮೀಭೂತವಾಗಿಸಿ ಅವರನ್ನು ಯಮಸದನಕ್ಕೆ ಕಳುಹಿಸಿತು.

07018016a ಅಥ ಪ್ರಹಸ್ಯ ಬೀಭತ್ಸುರ್ಲಲಿತ್ಥಾನ್ಮಾಲವಾನಪಿ।
07018016c ಮಾಚೇಲ್ಲಕಾಂಸ್ತ್ರಿಗರ್ತಾಂಶ್ಚ ಯೌಧೇಯಾಂಶ್ಚಾರ್ದಯಚ್ಚರೈಃ।।

ಆಗ ಬೀಭತ್ಸುವು ಜೋರಾಗಿ ನಕ್ಕು ಲಲಿತ್ಥ-ಮಾಲವ-ಮಾಚೇಲ್ಲ ಮತ್ತು ತ್ರಿಗರ್ತಯೋಧರನ್ನು ಶರಗಳಿಂದ ಹೊಡೆದು ಚದುರಿಸಿ ಬೇರೆ ಬೇರೆ ಮಾಡಿದನು.

07018017a ತೇ ವಧ್ಯಮಾನಾ ವೀರೇಣ ಕ್ಷತ್ರಿಯಾಃ ಕಾಲಚೋದಿತಾಃ।
07018017c ವ್ಯಸೃಜಂ ಶರವರ್ಷಾಣಿ ಪಾರ್ಥೇ ನಾನಾವಿಧಾನಿ ಚ।।

ಆ ವೀರನು ವಧಿಸುತ್ತಿದ್ದ ಕಾಲಚೋದಿತ ಆ ಕ್ಷತ್ರಿಯರು ಪಾರ್ಥನ ಮೇಲೆ ನಾನಾವಿಧದ ಬಾಣಗಳ ಮಳೆಯನ್ನು ಸುರಿಸಿದರು.

07018018a ತತೋ ನೈವಾರ್ಜುನಸ್ತತ್ರ ನ ರಥೋ ನ ಚ ಕೇಶವಃ।
07018018c ಪ್ರತ್ಯದೃಶ್ಯತ ಘೋರೇಣ ಶರವರ್ಷೇಣ ಸಂವೃತಃ।।

ಘೋರ ಶರವರ್ಷದಿಂದ ತುಂಬಿಹೋಗಿರಲು ಅಲ್ಲಿ ಅರ್ಜುನನಾಗಲೀ, ರಥವಾಗಲೀ, ಕೇಶವನಾಗಲೀ ಕಾಣಿಸಲಿಲ್ಲ.

07018019a ತತಸ್ತೇ ಲಬ್ಧಲಕ್ಷ್ಯತ್ವಾದನ್ಯೋನ್ಯಮಭಿಚುಕ್ರುಶುಃ।
07018019c ಹತೌ ಕೃಷ್ಣಾವಿತಿ ಪ್ರೀತಾ ವಾಸಾಂಸ್ಯಾದುಧುವುಸ್ತದಾ।।

ಆಗ ಅವರು ಅನ್ಯೋನ್ಯರಲ್ಲಿ “ಗುರಿಗೆ ಸಿಲುಕಿ ಇಬ್ಬರೂ ಕೃಷ್ಣರೂ ಹತರಾದರು!” ಎಂದು ಹೇಳಿಕೊಳ್ಳುತ್ತಾ ಸಂತೋಷದಿಂದ ಅಂಗವಸ್ತ್ರಗಳನ್ನು ಮೇಲಕ್ಕೆತ್ತಿ ಕೂಗಿದರು.

07018020a ಭೇರೀಮೃದಂಗಶಂಖಾಂಶ್ಚ ದಧ್ಮುರ್ವೀರಾಃ ಸಹಸ್ರಶಃ।
07018020c ಸಿಂಹನಾದರವಾಂಶ್ಚೋಗ್ರಾಂಶ್ಚಕ್ರಿರೇ ತತ್ರ ಮಾರಿಷ।।

ಮಾರಿಷ! ಅಲ್ಲಿ ಸಹಸ್ರಾರು ವೀರರು ಭೇರಿ-ಮೃದಂಗ-ಶಂಖಗಳನ್ನು ಮೊಳಗಿಸಿದರು ಮತ್ತು ಉಗ್ರವಾಗಿ ಸಿಂಹನಾದಗೈದರು.

07018021a ತತಃ ಪ್ರಸಿಷ್ವಿದೇ ಕೃಷ್ಣಃ ಖಿನ್ನಶ್ಚಾರ್ಜುನಮಬ್ರವೀತ್।
07018021c ಕ್ವಾಸಿ ಪಾರ್ಥ ನ ಪಶ್ಯೇ ತ್ವಾಂ ಕಚಿವಿಜ್ಜೀವಸಿ ಶತ್ರುಹನ್।।

ಆಗ ಬೆವತುಹೋದ ಕೃಷ್ಣನು ಖಿನ್ನನಾಗಿ ಅರ್ಜುನನಿಗೆ ಹೇಳಿದನು: “ಪಾರ್ಥ! ಎಲ್ಲಿರುವೆ? ನಿನ್ನನ್ನು ಕಾಣುತ್ತಿಲ್ಲವಲ್ಲ! ಶತ್ರುಹನ್! ಜೀವಂತವಿದ್ದೀಯೆ ತಾನೇ?”

07018022a ತಸ್ಯ ತಂ ಮಾನುಷಂ ಭಾವಂ ಭಾವಜ್ಞೋಽಽಜ್ಞಾಯ ಪಾಂಡವಃ।
07018022c ವಾಯವ್ಯಾಸ್ತ್ರೇಣ ತೈರಸ್ತಾಂ ಶರವೃಷ್ಟಿಮಪಾಹರತ್।।

ಅವನ ಆ ಮಾನುಷ ಭಾವವನ್ನು ಅರಿತ ಭಾವಜ್ಞ ಪಾಂಡವನು ಕೂಡಲೇ ವಾಯುವ್ಯಾಸ್ತ್ರದಿಂದ ಆ ಶರವೃಷ್ಠಿಯನ್ನು ಹೋಗಲಾಡಿಸಿದನು.

07018023a ತತಃ ಸಂಶಪ್ತಕವ್ರಾತಾನ್ಸಾಶ್ವದ್ವಿಪರಥಾಯುಧಾನ್।
07018023c ಉವಾಹ ಭಗವಾನ್ವಾಯುಃ ಶುಷ್ಕಪರ್ಣಚಯಾನಿವ।।

ಆಗ ಭಗವಾನ್ ವಾಯುವು ಒಣಗಿದ ತರಗೆಲೆಗಳನ್ನು ಹಾರಿಸಿಕೊಂಡು ಹೋಗುವಂತೆ ಆ ಸಂಶಪ್ತಕ ಸಮೂಹವನ್ನು ಕುದುರೆ-ಆನೆ-ರಥ-ಆಯುಧಗಳೊಂದಿಗೆ ಹಾರಿಸಿಕೊಂಡು ಹೋದನು.

07018024a ಉಹ್ಯಮಾನಾಸ್ತು ತೇ ರಾಜನ್ಬಹ್ವಶೋಭಂತ ವಾಯುನಾ।
07018024c ಪ್ರಡೀನಾಃ ಪಕ್ಷಿಣಃ ಕಾಲೇ ವೃಕ್ಷೇಭ್ಯ ಇವ ಮಾರಿಷ।।

ರಾಜನ್! ಮಾರಿಷ! ವಾಯುವಿನಿಂದ ಹಾರಿಸಿಕೊಂಡು ಹೋಗುತ್ತಿದ್ದ ಆ ಸೇನೆಯು ಮರದಲ್ಲಿರುವ ಪಕ್ಷಿಗಳು ಸಮಯಬಂದಾಗ ಒಟ್ಟಿಗೇ ಹಾರಿಹೋಗುತ್ತಿರುವಂತೆ ಕಂಡಿತು.

07018025a ತಾಂಸ್ತಥಾ ವ್ಯಾಕುಲೀಕೃತ್ಯ ತ್ವರಮಾಣೋ ಧನಂಜಯಃ।
07018025c ಜಘಾನ ನಿಶಿತೈರ್ಬಾಣೈಃ ಸಹಸ್ರಾಣಿ ಶತಾನಿ ಚ।।

ಅವರನ್ನು ಹೀಗೆ ವ್ಯಾಕುಲರನ್ನಾಗಿಸಿ ಧನಂಜಯನು ತ್ವರೆಮಾಡಿ ನಿಶಿತಬಾಣಗಳಿಂದ ನೂರಾರು ಸಹಸ್ರಾರು ಯೋಧರನ್ನು ಸಂಹರಿಸಿದನು.

07018026a ಶಿರಾಂಸಿ ಭಲ್ಲೈರಹರದ್ಬಾಹೂನಪಿ ಚ ಸಾಯುಧಾನ್।
07018026c ಹಸ್ತಿಹಸ್ತೋಪಮಾಂಶ್ಚೋರೂಂ ಶರೈರುರ್ವ್ಯಾಮಪಾತಯತ್।।

ನಿಶಿತ ಭಲ್ಲಗಳೆಂಬ ಶರಗಳಿಂದ ಶಿರಗಳನ್ನೂ, ಆಯುಧಗಳೊಂದಿಗೆ ಬಾಹುಗಳನ್ನೂ, ಆನೆಗಳ ಸೊಂಡಿಲುಗಳಂತಿದ್ದ ಯೋಧರ ತೊಡೆಗಳನ್ನೂ ಉರುಳಿಸಿದನು.

07018027a ಪೃಷ್ಠಚ್ಚಿನ್ನಾನ್ವಿಚರಣಾನ್ವಿಮಸ್ತಿಷ್ಕೇಕ್ಷಣಾಂಗುಲೀನ್।
07018027c ನಾನಾಂಗಾವಯವೈರ್ಹೀನಾಂಶ್ಚಕಾರಾರೀನ್ಧನಂಜಯಃ।।

ಕೆಲವರ ಪೃಷ್ಟಭಾಗವು ಕತ್ತರಿಸಿ ಹೋಗಿತ್ತು. ಕೆಲವರು ಕಾಲುಗಳನ್ನು ಕಳೆದುಕೊಂಡಿದ್ದರು. ತೋಳುಗಳನ್ನು ಕಳೆದುಕೊಂಡಿದ್ದರು. ಕೆಲವರ ದೇಹದ ಅರ್ಧಭಾಗವೇ ಕತ್ತರಿಸಿ ಹೋಗಿತ್ತು. ಹೀಗೆ ಧನಂಜಯನು ಅವರನ್ನು ನಾನಾ ಅಂಗಾಂಗಗಳಿಂದ ವಿಹೀನರನ್ನಾಗಿ ಮಾಡಿದನು.

07018028a ಗಂಧರ್ವನಗರಾಕಾರಾನ್ವಿಧಿವತ್ಕಲ್ಪಿತಾನ್ರಥಾನ್।
07018028c ಶರೈರ್ವಿಶಕಲೀಕುರ್ವಂಶ್ಚಕ್ರೇ ವ್ಯಶ್ವರಥದ್ವಿಪಾನ್।।

ಅವನು ಗಂಧರ್ವನಗರಗಳ ಆಕಾರದಲ್ಲಿ ವಿಧಿವತ್ತಾಗಿ ಕಲ್ಪಿಸಿದ್ದ ರಥಗಳನ್ನು ಶರಗಳಿಂದ ಛಿನ್ನ-ಭಿನ್ನಗಳನ್ನಾಗಿ ಮಾಡಿ ಅವರನ್ನು ಅಶ್ವ-ರಥ-ಗಜಗಳಿಂದ ವಿಹೀನರನ್ನಾಗಿ ಮಾಡಿದನು.

07018029a ಮುಂಡತಾಲವನಾನೀವ ತತ್ರ ತತ್ರ ಚಕಾಶಿರೇ।
07018029c ಚಿನ್ನಧ್ವಜರಥವ್ರಾತಾಃ ಕೇ ಚಿತ್ಕೇ ಚಿತ್ಕ್ವ ಚಿತ್ಕ್ವ ಚಿತ್।।

ಅಲ್ಲಲ್ಲಿ ಧ್ವಜಗಳು ತುಂಡಾಗಿದ್ದ ರಥಗಳ ಗುಂಪುಗಳು ತಲೆಯನ್ನು ಕತ್ತರಿಸಿದ ತಾಳೆಯ ಮರಗಳಂತೆ ಕಾಣುತ್ತಿದ್ದವು.

07018030a ಸೋತ್ತರಾಯುಧಿನೋ ನಾಗಾಃ ಸಪತಾಕಾಂಕುಶಾಯುಧಾಃ।
07018030c ಪೇತುಃ ಶಕ್ರಾಶನಿಹತಾ ದ್ರುಮವಂತ ಇವಾಚಲಾಃ।।

ಪತಾಕ-ಅಂಕುಶ-ಆಯುಧಗಳನ್ನು ಕಳೆದುಕೊಂಡ ಮಾವುತರನ್ನು ಕಳೆದುಕೊಂಡ ಆನೆಗಳು ಇಂದ್ರನ ವಜ್ರಾಯುಧದಿಂದ ಹೊಡೆಯಲ್ಪಟ್ಟ ಪರ್ವತಗಳು ವೃಕ್ಷಸಹಿತ ಕೆಳಗುರುಳಿರುವಂತೆ ಬಿದ್ದಿದ್ದವು.

07018031a ಚಾಮರಾಪೀಡಕವಚಾಃ ಸ್ರಸ್ತಾಂತ್ರನಯನಾಸವಃ।
07018031c ಸಾರೋಹಾಸ್ತುರಗಾಃ ಪೇತುಃ ಪಾರ್ಥಬಾಣಹತಾಃ ಕ್ಷಿತೌ।।

ಚಾಮರಗಳಿಂದಲೂ ಮಾಲೆಗಳಿಂದಲೂ, ಕವಚಗಳಿಂದಲೂ ಸವಾರರಿಂದಲೂ ಕೂಡಿದ್ದ ಅನೇಕ ಕುದುರೆಗಳು ಪಾರ್ಥನ ಬಾಣಗಳಿಂದ ಹತವಾಗಿ ಭೂಮಿಯ ಮೇಲೆ ಬಿದ್ದವು.

07018032a ವಿಪ್ರವಿದ್ಧಾಸಿನಖರಾಶ್ಚಿನ್ನವರ್ಮರ್ಷ್ಟಿಶಕ್ತಯಃ।
07018032c ಪತ್ತಯಶ್ಚಿನ್ನವರ್ಮಾಣಃ ಕೃಪಣಂ ಶೇರತೇ ಹತಾಃ।।

ತುಂಡಾದ ಖಡ್ಗಗಳು ಮತ್ತು ನಖರುಗಳು, ತುಂಡಾಗಿದ್ದ ಕವಚಗಳು, ಋಷ್ಟಿಗಳು ಮತ್ತು ಶಕ್ತಿಗಳೊಂದಿಗೆ ಪದಾತಿಗಳು ಕವಚಗಳು ಹರಿದುಹೋಗಿ ಬಡಪಾಯಿಗಳಂತೆ ಸತ್ತು ಮಲಗಿದರು.

07018033a ತೈರ್ಹತೈರ್ಹನ್ಯಮಾನೈಶ್ಚ ಪತದ್ಭಿಃ ಪತಿತೈರಪಿ।
07018033c ಭ್ರಮದ್ಭಿರ್ನಿಷ್ಟನದ್ಭಿಶ್ಚ ಘೋರಮಾಯೋಧನಂ ಬಭೌ।।

ಅವರಲ್ಲಿ ಸತ್ತುಹೋಗಿದ್ದ, ಸಾಯುತ್ತಿದ್ದ, ಬಿದ್ದಿದ್ದ, ಬೀಳುತ್ತಿದ್ದ, ಭ್ರಮೆಯಿಂದ ತಿರುಗುತ್ತಿದ್ದ, ಕೂಗಿಕೊಳ್ಳುತ್ತಿದ್ದವರಿಂದ ತುಂಬಿಹೋಗಿ ರಣಾಂಗಣವು ಬಹಳ ಭಯಂಕರವಾಗಿ ಕಾಣುತ್ತಿತ್ತು.

07018034a ರಜಶ್ಚ ಮಹದುದ್ಭೂತಂ ಶಾಂತಂ ರುಧಿರವೃಷ್ಟಿಭಿಃ।
07018034c ಮಹೀ ಚಾಪ್ಯಭವದ್ದುರ್ಗಾ ಕಬಂಧಶತಸಂಕುಲಾ।।

ಮೇಲೆದ್ದಿದ್ದ ಅತಿದೊಡ್ಡ ಧೂಳು ರಕ್ತದ ಮಳೆಸುರಿದು ಶಾಂತವಾದವು. ನೂರಾರು ಮುಂಡಗಳ ರಾಶಿಯಿಂದ ತುಂಬಿಹೋಗಿದ್ದ ರಣಾಂಗಣವು ಪ್ರವೇಶಕ್ಕೂ ಬಹಳ ದುರ್ಗಮವಾಗಿತ್ತು.

07018035a ತದ್ಬಭೌ ರೌದ್ರಬೀಭತ್ಸಂ ಬೀಭತ್ಸೋರ್ಯಾನಮಾಹವೇ।
07018035c ಆಕ್ರೀಡ ಇವ ರುದ್ರಸ್ಯ ಘ್ನತಃ ಕಾಲಾತ್ಯಯೇ ಪಶೂನ್।।

ಆಗ ಆಹವದಲ್ಲಿ ಬೀಭತ್ಸುವಿನ ರಥವು ರೌದ್ರವೂ ಬೀಭತ್ಸವೂ ಆಗಿತ್ತು. ಕಾಲಾಂತ್ಯದಲ್ಲಿ ಪ್ರಾಣಿಗಳನ್ನು ಕೊಲ್ಲುವ ರುದ್ರನ ಕ್ರೀಡಾಂಗಣದಂತೆ ತೋರಿತು.

07018036a ತೇ ವಧ್ಯಮಾನಾಃ ಪಾರ್ಥೇನ ವ್ಯಾಕುಲಾಶ್ವರಥದ್ವಿಪಾಃ।
07018036c ತಮೇವಾಭಿಮುಖಾಃ ಕ್ಷೀಣಾಃ ಶಕ್ರಸ್ಯಾತಿಥಿತಾಂ ಗತಾಃ।।

ಪಾರ್ಥನಿಂದ ವಧಿಸಲ್ಪಟ್ಟು ವ್ಯಾಕುಲಗೊಂಡ ಅಶ್ವ-ರಥ-ಗಜಗಳು ಅವನ ಎದುರಾಗಿಯೇ ಯುದ್ಧಮಾಡಿ ಶಕ್ರನ ಅತಿಥಿಗಳಾಗಿ ಹೋಗಿ ಕ್ಷೀಣವಾಗುತ್ತಿದ್ದವು.

07018037a ಸಾ ಭೂಮಿರ್ಭರತಶ್ರೇಷ್ಠ ನಿಹತೈಸ್ತೈರ್ಮಹಾರಥೈಃ।
07018037c ಆಸ್ತೀರ್ಣಾ ಸಂಬಭೌ ಸರ್ವಾ ಪ್ರೇತೀಭೂತೈಃ ಸಮಂತತಃ।।

ಭರತಶ್ರೇಷ್ಠ! ಆ ಮಹಾರಥರು ಹತರಾಗಿ ಬಿದ್ದಿದ್ದ ಭೂಮಿಯು ಎಲ್ಲ ಕಡೆ ಪ್ರೇತಗಳಿಂದ ತುಂಬಿಕೊಂಡಿದೆಯೋ ಎನ್ನುವಂತೆ ತೋರಿತು.

07018038a ಏತಸ್ಮಿನ್ನಂತರೇ ಚೈವ ಪ್ರಮತ್ತೇ ಸವ್ಯಸಾಚಿನಿ।
07018038c ವ್ಯೂಢಾನೀಕಸ್ತತೋ ದ್ರೋಣೋ ಯುಧಿಷ್ಠಿರಮುಪಾದ್ರವತ್।।

ಈ ರೀತಿ ಸವ್ಯಸಾಚಿಯು ಯುದ್ಧದಲ್ಲಿ ತಲ್ಲೀನನಾಗಿರಲು ದ್ರೋಣನು ವ್ಯೂಹದೊಂದಿಗೆ ಯುಧಿಷ್ಠಿರನನ್ನು ಆಕ್ರಮಣಿಸಿದನು.

07018039a ತಂ ಪ್ರತ್ಯಗೃಹ್ಣಂಸ್ತ್ವರಿತಾ ವ್ಯೂಢಾನೀಕಾಃ ಪ್ರಹಾರಿಣಃ।
07018039c ಯುಧಿಷ್ಠಿರಂ ಪರೀಪ್ಸಂತಸ್ತದಾಸೀತ್ತುಮುಲಂ ಮಹತ್।।

ಯುಧಿಷ್ಠಿರನನ್ನು ಬಂಧಿಸಲು ವ್ಯೂಹವನ್ನು ರಚಿಸಿಕೊಂಡು ಪ್ರಹಾರ ಮಾಡಲು ಆಗ ಮಹಾ ತುಮುಲಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಅರ್ಜುನಸಂಶಪ್ತಕಯುದ್ಧೇ ಅಷ್ಟಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಅರ್ಜುನಸಂಶಪ್ತಕಯುದ್ಧ ಎನ್ನುವ ಹದಿನೆಂಟನೇ ಅಧ್ಯಾಯವು.