014 ಶಲ್ಯಾಪಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣಾಭಿಷೇಕ ಪರ್ವ

ಅಧ್ಯಾಯ 14

ಸಾರ

ಭೀಮಸೇನ-ಶಲ್ಯರ ಗದಾಯುದ್ಧ; ಶಲ್ಯನ ಪಲಾಯನ (1-37).

07014001 ಧೃತರಾಷ್ಟ್ರ ಉವಾಚ।
07014001a ಬಹೂನಿ ಸುವಿಚಿತ್ರಾಣಿ ದ್ವಂದ್ವಯುದ್ಧಾನಿ ಸಂಜಯ।
07014001c ತ್ವಯೋಕ್ತಾನಿ ನಿಶಮ್ಯಾಹಂ ಸ್ಪೃಹಯಾಮಿ ಸಚಕ್ಷುಷಾಂ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ವಿಚಿತ್ರವಾಗಿರುವ ಅನೇಕ ದ್ವಂದ್ವ ಯುದ್ಧಗಳ ಕುರಿತು ನೀನು ಹೇಳಿದುದನ್ನು ಕೇಳಿ ಕಣ್ಣುಗಳಿರುವವರ ಸೌಭಾಗ್ಯವನ್ನು ಅಪೇಕ್ಷಿಸುತ್ತೇನೆ.

07014002a ಆಶ್ಚರ್ಯಭೂತಂ ಲೋಕೇಷು ಕಥಯಿಷ್ಯಂತಿ ಮಾನವಾಃ।
07014002c ಕುರೂಣಾಂ ಪಾಂಡವಾನಾಂ ಚ ಯುದ್ಧಂ ದೇವಾಸುರೋಪಮಂ।।

ದೇವಾಸುರರ ಯುದ್ಧಕ್ಕೆ ಸಮಾನ ಕುರು-ಪಾಂಡವರ ಯುದ್ಧವನ್ನು ಲೋಕಗಳಲ್ಲಿ ಮಾನವರು ಆಶ್ಚರ್ಯಭೂತವಾದುದೆಂದು ಹೇಳಿಕೊಳ್ಳುತ್ತಾರೆ.

07014003a ನ ಹಿ ಮೇ ತೃಪ್ತಿರಸ್ತೀಹ ಶೃಣ್ವತೋ ಯುದ್ಧಮುತ್ತಮಂ।
07014003c ತಸ್ಮಾದಾರ್ತಾಯನೇರ್ಯುದ್ಧಂ ಸೌಭದ್ರಸ್ಯ ಚ ಶಂಸ ಮೇ।।

ಈ ಉತ್ತಮ ಯುದ್ಧದ ಕುರಿತು ಕೇಳುತ್ತಿರುವ ನನಗೆ ತೃಪ್ತಿಯೆಂಬುದೇ ಇಲ್ಲ. ಆದುದರಿಂದ ಶಲ್ಯ ಮತ್ತು ಸೌಭದ್ರರ ಯುದ್ಧದ ಕುರಿತು ಹೇಳು.”

07014004 ಸಂಜಯ ಉವಾಚ।
07014004a ಸಾದಿತಂ ಪ್ರೇಕ್ಷ್ಯ ಯಂತಾರಂ ಶಲ್ಯಃ ಸರ್ವಾಯಷೀಂ ಗದಾಂ।
07014004c ಸಮುತ್ಕ್ಷಿಪ್ಯ ನದನ್ಕ್ರುದ್ಧಃ ಪ್ರಚಸ್ಕಂದ ರಥೋತ್ತಮಾತ್।।

ಸಂಜಯನು ಹೇಳಿದನು: “ತನ್ನ ಸೂತನು ಹತನಾದುದನ್ನು ನೋಡಿ ಶಲ್ಯನು ಕ್ರುದ್ಧನಾಗಿ ಉಕ್ಕಿನ ಗದೆಯನ್ನು ಮೇಲೆ ಎತ್ತಿ ಹಿಡಿದು ಗರ್ಜಿಸುತ್ತಾ ಉತ್ತಮ ರಥದಿಂದ ಧುಮುಕಿದನು.

07014005a ತಂ ದೀಪ್ತಮಿವ ಕಾಲಾಗ್ನಿಂ ದಂಡಹಸ್ತಮಿವಾಂತಕಂ।
07014005c ಜವೇನಾಭ್ಯಪತದ್ಭೀಮಃ ಪ್ರಗೃಹ್ಯ ಮಹತೀಂ ಗದಾಂ।।

ಕಾಲಾಗ್ನಿಯಂತೆ ಉರಿಯುತ್ತಿದ್ದ, ದಂಡವನ್ನು ಹಿಡಿದ ಅಂತಕನಂತಿದ್ದ ಅವನನ್ನು ನೋಡಿ ಭೀಮನು ಮಹಾ ಗದೆಯನ್ನು ಹಿಡಿದು ವೇಗದಿಂದ ಎದುರಿಸಿದನು.

07014006a ಸೌಭದ್ರೋಽಪ್ಯಶನಿಪ್ರಖ್ಯಾಂ ಪ್ರಗೃಹ್ಯ ಮಹತೀಂ ಗದಾಂ।
07014006c ಏಹ್ಯೇಹೀತ್ಯಬ್ರವೀಚ್ಚಲ್ಯಂ ಯತ್ನಾದ್ಭೀಮೇನ ವಾರಿತಃ।।

ಸೌಭದ್ರನೂ ಕೂಡ ವಜ್ರಾಯುಧದಂತಿದ್ದ ಮಹಾ ಗದೆಯನ್ನು ಹಿಡಿದು “ಬಾ! ಬಾ!” ಎಂದು ಶಲ್ಯನನ್ನು ಕರೆಯುತ್ತಿರಲು ಭೀಮನು ಅವನನ್ನು ಪ್ರಯತ್ನಪಟ್ಟು ತಡೆದನು.

07014007a ವಾರಯಿತ್ವಾ ತು ಸೌಭದ್ರಂ ಭೀಮಸೇನಃ ಪ್ರತಾಪವಾನ್।
07014007c ಶಲ್ಯಮಾಸಾದ್ಯ ಸಮರೇ ತಸ್ಥೌ ಗಿರಿರಿವಾಚಲಃ।।

ಸೌಭದ್ರನನ್ನು ತಡೆದು ಪ್ರತಾಪವಾನ್ ಭೀಮಸೇನನು ಶಲ್ಯನನ್ನು ಎದುರಿಸಿ ಸಮರದಲ್ಲಿ ಗಿರಿಯಂತೆ ಅಚಲನಾಗಿ ನಿಂತನು.

07014008a ತಥೈವ ಮದ್ರರಾಜೋಽಪಿ ಭೀಮಂ ದೃಷ್ಟ್ವಾ ಮಹಾಬಲಂ।
07014008c ಸಸಾರಾಭಿಮುಖಸ್ತೂರ್ಣಂ ಶಾರ್ದೂಲ ಇವ ಕುಂಜರಂ।।

ಆಗ ಮದ್ರರಾಜನೂ ಕೂಡ ಮಹಾಬಲ ಭೀಮನನ್ನು ನೋಡಿ ಹುಲಿಯು ಆನೆಯನ್ನು ಆಕ್ರಮಣಿಸುವಂತೆ ಅವನಿಗೆ ಎದುರಾಗಿ ಹೋಗಿ ಆಕ್ರಮಣಿಸಿದನು.

07014009a ತತಸ್ತೂರ್ಯನಿನಾದಾಶ್ಚ ಶಂಖಾನಾಂ ಚ ಸಹಸ್ರಶಃ।
07014009c ಸಿಂಹನಾದಾಶ್ಚ ಸಂಜಜ್ಞುರ್ಭೇರೀಣಾಂ ಚ ಮಹಾಸ್ವನಾಃ।।

ಆಗ ಕೂಡಲೇ ಸಹಸ್ರಾರು ಶಂಖಗಳ ನಿನಾದಗಳು, ಸಿಂಹನಾದಗಳು ಮತ್ತು ಭೇರಿಗಳ ಮಹಾಶಬ್ಧವು ಉಂಟಾಯಿತು.

07014010a ಪಶ್ಯತಾಂ ಶತಶೋ ಹ್ಯಾಸೀದನ್ಯೋನ್ಯಸಮಚೇತಸಾಂ।
07014010c ಪಾಂಡವಾನಾಂ ಕುರೂಣಾಂ ಚ ಸಾಧು ಸಾಧ್ವಿತಿ ನಿಸ್ವನಃ।।

ನೋಡುತ್ತಿರುವ ನೂರಾರು ಪಾಂಡವ-ಕೌರವರ ಕಡೆಯವರು ಸಮಚೇತಸರಾದ ಅನ್ಯೋನ್ಯರನ್ನು “ಸಾಧು! ಸಾಧು!” ಎಂದು ಹುರಿದುಂಬಿಸುತ್ತಿದ್ದರು.

07014011a ನ ಹಿ ಮದ್ರಾಧಿಪಾದನ್ಯಃ ಸರ್ವರಾಜಸು ಭಾರತ।
07014011c ಸೋಢುಮುತ್ಸಹತೇ ವೇಗಂ ಭೀಮಸೇನಸ್ಯ ಸಂಯುಗೇ।।

ಭಾರತ! ಸಂಯುಗದಲ್ಲಿ ಭೀಮಸೇನನ ವೇಗವನ್ನು ಸಹಿಸಿಕೊಳ್ಳುವವರು ಸರ್ವರಾಜರಲ್ಲಿ ಮದ್ರಾಧಿಪನನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ.

07014012a ತಥಾ ಮದ್ರಾಧಿಪಸ್ಯಾಪಿ ಗದಾವೇಗಂ ಮಹಾತ್ಮನಃ।
07014012c ಸೋಢುಮುತ್ಸಹತೇ ಲೋಕೇ ಕೋಽನ್ಯೋ ಯುಧಿ ವೃಕೋದರಾತ್।।

ಹಾಗೆಯೇ ಮಹಾತ್ಮ ಮದ್ರಾಧಿಪನ ಗದಾವೇಗವನ್ನು ಯುದ್ಧದಲ್ಲಿ ವೃಕೋದರನನ್ನು ಬಿಟ್ಟು ಬೇರೆ ಯಾರೂ ಸಹಿಸಿಕೊಳ್ಳಲು ಉತ್ಸುಕರಿರಲಿಲ್ಲ.

07014013a ಪಟ್ಟೈರ್ಜಾಂಬೂನದೈರ್ಬದ್ಧಾ ಬಭೂವ ಜನಹರ್ಷಿಣೀ।
07014013c ಪ್ರಜಜ್ವಾಲ ತಥಾವಿದ್ಧಾ ಭೀಮೇನ ಮಹತೀ ಗದಾ।।

ಬಂಗಾರದ ಪಟ್ಟಿಯಿಂದ ಕಟ್ಟಲ್ಪಟ್ಟಿದ್ದ ಭೀಮನು ಹಿಡಿದಿದ್ದ ಜನಹರ್ಷಿಣೀ ಮಹಾಗದೆಯು ಉರಿಯುವ ಬೆಂಕಿಯಂತೆ ಹೊಳೆಯುತ್ತಿತ್ತು.

07014014a ತಥೈವ ಚರತೋ ಮಾರ್ಗಾನ್ಮಂಡಲಾನಿ ಚ ಭಾಗಶಃ।
07014014c ಮಹಾವಿದ್ಯುತ್ಪ್ರತೀಕಾಶಾ ಶಲ್ಯಸ್ಯ ಶುಶುಭೇ ಗದಾ।।

ಹಾಗೆಯೇ ಮಂಡಲಾಕಾರ ಮಾರ್ಗದಲ್ಲಿ ಚಲಿಸುತ್ತಿದ್ದ ಶಲ್ಯನ ಗದೆಯೂ ಕೂಡ ಭಾಗಶಃ ಆಕಾಶದಲ್ಲಿರುವ ಮಹಾಮಿಂಚಿನಂತೆ ಹೊಳೆಯತ್ತಿತ್ತು.

07014015a ತೌ ವೃಷಾವಿವ ನರ್ದಂತೌ ಮಂಡಲಾನಿ ವಿಚೇರತುಃ।
07014015c ಆವರ್ಜಿತಗದಾಶೃಂಗಾವುಭೌ ಶಲ್ಯವೃಕೋದರೌ।।

ಗೂಳಿಗಳಂತೆ ಕೂಗುತ್ತಾ, ಮಂಡಲಾಕಾರಗಳಲ್ಲಿ ಚಲಿಸುತ್ತಾ ಆ ಶಲ್ಯ-ವೃಕೋದರರಿಬ್ಬರು ಶೃಂಗಗಳಂತಿರುವ ಗದೆಗಳಿಂದ ಹೊಡೆದಾಡಿದರು.

07014016a ಮಂಡಲಾವರ್ತಮಾರ್ಗೇಷು ಗದಾವಿಹರಣೇಷು ಚ।
07014016c ನಿರ್ವಿಶೇಷಮಭೂದ್ಯುದ್ಧಂ ತಯೋಃ ಪುರುಷಸಿಂಹಯೋಃ।।

ಮಂಡಲಾಕಾರವಾಗಿ ತಿರುಗುವುದರಲ್ಲಿ, ಗದೆಯನ್ನು ತಿರುಗಿಸುವುದರಲ್ಲಿ ಆ ಪುರುಷಸಿಂಹರ ಯುದ್ಧದಲ್ಲಿ ವ್ಯತ್ಯಾಸವೇ ಇರಲಿಲ್ಲ.

07014017a ತಾಡಿತಾ ಭೀಮಸೇನೇನ ಶಲ್ಯಸ್ಯ ಮಹತೀ ಗದಾ।
07014017c ಸಾಗ್ನಿಜ್ವಾಲಾ ಮಹಾರೌದ್ರಾ ಗದಾಚೂರ್ಣಮಶೀರ್ಯತ।।

ಭೀಮಸೇನನಿಂದ ಹೊಡೆಯಲ್ಪಟ್ಟ ಶಲ್ಯನ ಮಹಾಗದೆಯು ಅಗ್ನಿಜ್ವಾಲೆಯೊಂದಿಗೆ ಮಹಾರೌದ್ರವಾಗಿ ಚೂರು ಚೂರಾಯಿತು.

07014018a ತಥೈವ ಭೀಮಸೇನಸ್ಯ ದ್ವಿಷತಾಭಿಹತಾ ಗದಾ।
07014018c ವರ್ಷಾಪ್ರದೋಷೇ ಖದ್ಯೋತೈರ್ವೃತೋ ವೃಕ್ಷ ಇವಾಬಭೌ।।

ಹಾಗೆಯೇ ಭೀಮಸೇನನ ದ್ವೇಷಿಯಿಂದ ಹೊಡೆಯಲ್ಪಟ್ಟ ಗದೆಯು ಮಳೆಗಾಲದ ಪ್ರದೋಷಕಾಲದಲ್ಲಿ ಮಿಂಚಿನ ಹುಳುಗಳು ಮುತ್ತಿರುವ ವೃಕ್ಷದಂತೆ ತೋರಿತು.

07014019a ಗದಾ ಕ್ಷಿಪ್ತಾ ತು ಸಮರೇ ಮದ್ರರಾಜೇನ ಭಾರತ।
07014019c ವ್ಯೋಮ ಸಂದೀಪಯಾನಾ ಸಾ ಸಸೃಜೇ ಪಾವಕಂ ಬಹು।।

ಭಾರತ! ಮದ್ರರಾಜನು ಸಮರದಲ್ಲಿ ಎಸೆದ ಗದೆಯು ಆಕಾಶವನ್ನೇ ಬೆಳಗಿಸುತ್ತಾ ಅನೇಕ ಬೆಂಕಿಯ ಕಿಡಿಗಳನ್ನುಂಟುಮಾಡಿತು.

07014020a ತಥೈವ ಭೀಮಸೇನೇನ ದ್ವಿಷತೇ ಪ್ರೇಷಿತಾ ಗದಾ।
07014020c ತಾಪಯಾಮಾಸ ತತ್ಸೈನ್ಯಂ ಮಹೋಲ್ಕಾ ಪತತೀ ಯಥಾ।।

ಹಾಗೆಯೇ ಭೀಮಸೇನನು ಕೋಪದಿಂದ ಎಸೆದ ಗದೆಯು ಬೀಳುತ್ತಿರುವ ಮಹಾ ಉಲ್ಕೆಯ‌ಂತೆ ಆ ಸೈನ್ಯವನ್ನು ಸುಟ್ಟಿತು.

07014021a ತೇ ಚೈವೋಭೇ ಗದೇ ಶ್ರೇಷ್ಠೇ ಸಮಾಸಾದ್ಯ ಪರಸ್ಪರಂ।
07014021c ಶ್ವಸಂತ್ಯೌ ನಾಗಕನ್ಯೇವ ಸಸೃಜಾತೇ ವಿಭಾವಸುಂ।।

ಗದೆಯಲ್ಲಿ ಶ್ರೇಷ್ಠರಾದ ಅವರಿಬ್ಬರೂ ಪರಸ್ಪರರನ್ನು ಎದುರಿಸಿ ನಾಗಕನ್ಯೆಯರಂತೆ ಭುಸುಗುಟ್ಟುತ್ತಾ ಬೆಂಕಿಯ ಕಿಡಿಗಳನ್ನು ಹೊರಹೊಮ್ಮಿದರು.

07014022a ನಖೈರಿವ ಮಹಾವ್ಯಾಘ್ರೌ ದಂತೈರಿವ ಮಹಾಗಜೌ।
07014022c ತೌ ವಿಚೇರತುರಾಸಾದ್ಯ ಗದಾಭ್ಯಾಂ ಚ ಪರಸ್ಪರಂ।।

ಮಹಾವ್ಯಾಘ್ರಗಳು ಉಗುರುಗಳಿಂದ ಹೇಗೋ ಹಾಗೆ ಮತ್ತು ಮಹಾಗಜಗಳೆರಡು ದಂತಗಳಿಂದ ಹೇಗೋ ಹಾಗೆ ಅವರಿಬ್ಬರೂ ಗದೆಗಳಿಂದ ಪರಸ್ಪರರನ್ನು ತಾಗಿಸಿ ಹೊಡೆದರು.

07014023a ತತೋ ಗದಾಗ್ರಾಭಿಹತೌ ಕ್ಷಣೇನ ರುಧಿರೋಕ್ಷಿತೌ।
07014023c ದದೃಶಾತೇ ಮಹಾತ್ಮಾನೌ ಪುಷ್ಪಿತಾವಿವ ಕಿಂಶುಕೌ।।

ಆಗ ಕ್ಷಣದಲ್ಲಿಯೇ ಗದೆಯಿಂದ ಪೆಟ್ಟುತಿಂದು ರಕ್ತದಿಂದ ತೋಯ್ದುಹೋಗಿದ್ದ ಆ ಇಬ್ಬರು ಮಹಾತ್ಮರು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಕಂಡರು.

07014024a ಶುಶ್ರುವೇ ದಿಕ್ಷು ಸರ್ವಾಸು ತಯೋಃ ಪುರುಷಸಿಂಹಯೋಃ।
07014024c ಗದಾಭಿಘಾತಸಂಹ್ರಾದಃ ಶಕ್ರಾಶನಿರಿವೋಪಮಃ।।

ಆ ಪುರುಷಸಿಂಹರ ಗದಾಪ್ರಹಾರದ ಶಬ್ಧವು ಸಿಡುಲಿನ ಗರ್ಜನೆಯಂತೆ ಎಲ್ಲ ದಿಕ್ಕುಗಳಲ್ಲಿ ಕೇಳಿಬರುತ್ತಿತ್ತು.

07014025a ಗದಯಾ ಮದ್ರರಾಜೇನ ಸವ್ಯದಕ್ಷಿಣಮಾಹತಃ।
07014025c ನಾಕಂಪತ ತದಾ ಭೀಮೋ ಭಿದ್ಯಮಾನ ಇವಾಚಲಃ।।

ಮದ್ರರಾಜನು ಗದೆಯಿಂದ ಎಡ ಮತ್ತು ಬಲಭಾಗಗಳೆರಡಕ್ಕೆ ಹೊಡೆದರೂ ಭೀಮನು ಪರ್ವತದಂತೆ ಅಲುಗಾಡಲಿಲ್ಲ.

07014026a ತಥಾ ಭೀಮಗದಾವೇಗೈಸ್ತಾಡ್ಯಮಾನೋ ಮಹಾಬಲಃ।
07014026c ಧೈರ್ಯಾನ್ಮದ್ರಾಧಿಪಸ್ತಸ್ಥೌ ವಜ್ರೈರ್ಗಿರಿರಿವಾಹತಃ।।

ಹಾಗೆಯೇ ಭೀಮನ ಗದಾವೇಗದಿಂದ ಹೊಡೆಯಲ್ಪಟ್ಟ ಮಹಾಬಲ ಮದ್ರಾಧಿಪನು ಧೈರ್ಯದಿಂದ ವಜ್ರದಿಂದ ಹೊಡೆಯಲಟ್ಟ ಪರ್ವತದಂತೆ ನಿಂತಿದ್ದನು.

07014027a ಆಪೇತತುರ್ಮಹಾವೇಗೌ ಸಮುಚ್ಚ್ರಿತಮಹಾಗದೌ।
07014027c ಪುನರಂತರಮಾರ್ಗಸ್ಥೌ ಮಂಡಲಾನಿ ವಿಚೇರತುಃ।।

ಪುನಃ ಮಹಾವೇಗಯುಕ್ತರಾಗಿದ್ದ ಅವರು ಮಹಾಗದೆಗಳನ್ನು ಎತ್ತಿಕೊಂಡು ಅಂತರ ಮಾರ್ಗಸ್ಥರಾಗಿ ಮಂಡಲಾಕರದ ಗತಿಯಿಂದ ಚಲಿಸತೊಡಗಿದರು.

07014028a ಅಥಾಪ್ಲುತ್ಯ ಪದಾನ್ಯಷ್ಟೌ ಸನ್ನಿಪತ್ಯ ಗಜಾವಿವ।
07014028c ಸಹಸಾ ಲೋಹದಂಡಾಭ್ಯಾಮನ್ಯೋನ್ಯಮಭಿಜಘ್ನತುಃ।।

ಎಂಟು ಹೆಜ್ಜೆಗಳಷ್ಟು ದೂರ ಕುಪ್ಪಳಿಸಿ ಎರಡು ಆನೆಗಳೋಪಾದಿಯಲ್ಲಿ ಹೋರಾಡುತ್ತಾ ಒಡನೆಯೇ ಆ ಲೋಹದಂಡಗಳಿಂದ ಪರಸ್ಪರರನ್ನು ಹೊಡೆದರು.

07014029a ತೌ ಪರಸ್ಪರವೇಗಾಚ್ಚ ಗದಾಭ್ಯಾಂ ಚ ಭೃಶಾಹತೌ।
07014029c ಯುಗಪತ್ಪೇತತುರ್ವೀರೌ ಕ್ಷಿತಾವಿಂದ್ರಧ್ವಜಾವಿವ।।

ಪರಸ್ಪರರ ಗದೆಗಳ ವೇಗ ಪ್ರಹಾರಗಳಿಂದ ತುಂಬಾ ಗಾಯಗೊಂಡ ಆ ಇಬ್ಬರೂ ವೀರರೂ ಒಟ್ಟಿಗೇ ಇಂದ್ರಧ್ವಜಗಳಂತೆ ಭೂಮಿಯ ಮೇಲೆ ಬಿದ್ದರು.

07014030a ತತೋ ವಿಹ್ವಲಮಾನಂ ತಂ ನಿಃಶ್ವಸಂತಂ ಪುನಃ ಪುನಃ।
07014030c ಶಲ್ಯಮಭ್ಯಪತತ್ತೂರ್ಣಂ ಕೃತವರ್ಮಾ ಮಹಾರಥಃ।।

ಆಗ ಶಲ್ಯನು ವಿಹ್ವಲಮಾನನಾಗಿ ಪುನಃ ಪುನಃ ಭುಸುಗುಟ್ಟುತ್ತಾ ಬಿದ್ದಿರಲು ಒಡನೆಯೇ ಅಲ್ಲಿಗೆ ಮಹಾರಥ ಕೃತವರ್ಮನು ಆಗಮಿಸಿದನು.

07014031a ದೃಷ್ಟ್ವಾ ಚೈನಂ ಮಹಾರಾಜ ಗದಯಾಭಿನಿಪೀಡಿತಂ।
07014031c ವಿಚೇಷ್ಟಂತಂ ಯಥಾ ನಾಗಂ ಮೂರ್ಚಯಾಭಿಪರಿಪ್ಲುತಂ।।

ಮಹಾರಾಜ! ಗದೆಯಿಂದ ಪೀಡಿತನಾಗಿ ಸರ್ಪದಂತೆ ಮೂರ್ಛೆತಪ್ಪಿ ಹೊರಳಾಡುತ್ತಿದ್ದ ಅವನನ್ನು ನೋಡಿದನು.

07014032a ತತಃ ಸಗದಮಾರೋಪ್ಯ ಮದ್ರಾಣಾಮಧಿಪಂ ರಥಂ।
07014032c ಅಪೋವಾಹ ರಣಾತ್ತೂರ್ಣಂ ಕೃತವರ್ಮಾ ಮಹಾರಥಃ।।

ಆಗ ಗದೆಯೊಂದಿಗೆ ಮದ್ರಾಧಿಪನನ್ನು ರಥದಲ್ಲಿ ಏರಿಸಿಕೊಂಡು ಮಹಾರಥ ಕೃತವರ್ಮನು ರಣದಿಂದ ವೇಗವಾಗಿ ಹೊರಟುಹೋದನು.

07014033a ಕ್ಷೀಬವದ್ವಿಹ್ವಲೋ ವೀರೋ ನಿಮೇಷಾತ್ಪುನರುತ್ಥಿತಃ।
07014033c ಭೀಮೋಽಪಿ ಸುಮಹಾಬಾಹುರ್ಗದಾಪಾಣಿರದೃಶ್ಯತ।।

ವಿಹ್ವಲನಾಗಿದ್ದ ಆಯಾಸಗೊಂಡಿದ್ದ ಸುಮಹಾಬಾಹು ವೀರ ಭೀಮನಾದರೋ ನಿಮಿಷದಲ್ಲಿಯೇ ಗದೆಯನ್ನು ಹಿಡಿದು ನಿಂತನು.

07014034a ತತೋ ಮದ್ರಾಧಿಪಂ ದೃಷ್ಟ್ವಾ ತವ ಪುತ್ರಾಃ ಪರಾಙ್ಮುಖಂ।
07014034c ಸನಾಗರಥಪತ್ತ್ಯಶ್ವಾಃ ಸಮಕಂಪಂತ ಮಾರಿಷ।।

ಮಾರಿಷ! ಆಗ ಮದ್ರಾಧಿಪನು ಪರಾಙ್ಮುಖನಾದುದನ್ನು ನೋಡಿ ನಿನ್ನ ಪುತ್ರನು ಗಜ-ರಥ-ಅಶ್ವ-ಪದಾತಿಗಳನ್ನು ನಡುಗಿಸಿದನು.

07014035a ತೇ ಪಾಂಡವೈರರ್ದ್ಯಮಾನಾಸ್ತಾವಕಾ ಜಿತಕಾಶಿಭಿಃ।
07014035c ಭೀತಾ ದಿಶೋಽನ್ವಪದ್ಯಂತ ವಾತನುನ್ನಾ ಘನಾ ಇವ।।

ಗೆಲುವಿನಿಂದ ಸೊಕ್ಕಿದ್ದ ಪಾಂಡವರಿಂದ ಮರ್ದಿಸಲ್ಪಡುತ್ತಿದ್ದ ನಿನ್ನವರು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ಭೀತರಾಗಿ ದಿಕ್ಕಾಪಾಲಾಗಿ ಓಡಿದರು.

07014036a ನಿರ್ಜಿತ್ಯ ಧಾರ್ತರಾಷ್ಟ್ರಾಂಸ್ತು ಪಾಂಡವೇಯಾ ಮಹಾರಥಾಃ।
07014036c ವ್ಯರೋಚಂತ ರಣೇ ರಾಜನ್ದೀಪ್ಯಮಾನಾ ಯಶಸ್ವಿನಃ।।

ರಾಜನ್! ಧಾರ್ತರಾಷ್ಟ್ರರನ್ನು ಸೋಲಿಸಿ ಮಹಾರಥ ಯಶಸ್ವಿ ಪಾಂಡವರು ರಣದಲ್ಲಿ ಬೆಳಗುತ್ತಾ ರಾರಾಜಿಸಿದರು.

07014037a ಸಿಂಹನಾದಾನ್ಭೃಶಂ ಚಕ್ರುಃ ಶಂಖಾನ್ದಧ್ಮುಶ್ಚ ಹರ್ಷಿತಾಃ।
07014037c ಭೇರೀಶ್ಚ ವಾದಯಾಮಾಸುರ್ಮೃದಂಗಾಂಶ್ಚಾನಕೈಃ ಸಹ।।

ಗಟ್ಟಿಯಾಗಿ ಸಿಂಹನಾದಗೈದರು. ಹರ್ಷಿತರಾಗಿ ಶಂಖಗಳನ್ನು ಊದಿದರು. ಅನಕಗಳೊಂದಿಗೆ ಭೇರಿಗಳನ್ನೂ ಮೃದಂಗಗಳನ್ನೂ ಬಾರಿಸತೊಡಗಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಶಲ್ಯಾಪಯಾನೇ ಚತುರ್ದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಶಲ್ಯಾಪಯಾನ ಎನ್ನುವ ಹದಿನಾಲ್ಕನೇ ಅಧ್ಯಾಯವು.