ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ದ್ರೋಣಾಭಿಷೇಕ ಪರ್ವ
ಅಧ್ಯಾಯ 13
ಸಾರ
ದ್ರೋಣನ ಪರಾಕ್ರಮ; ಯುದ್ಧಭೂಮಿ ವರ್ಣನೆ (1-18). ದ್ವಂದ್ವ ಯುದ್ಧಗಳು (19-44). ಅಭಿಮನ್ಯು ಪರಾಕ್ರಮ (45-80).
07013001 ಸಂಜಯ ಉವಾಚ।
07013001a ತತಃ ಸ ಪಾಂಡವಾನೀಕೇ ಜನಯಂಸ್ತುಮುಲಂ ಮಹತ್।
07013001c ವ್ಯಚರತ್ಪಾಂಡವಾನ್ದ್ರೋಣೋ ದಹನ್ಕಕ್ಷಮಿವಾನಲಃ।।
ಸಂಜಯನು ಹೇಳಿದನು: “ಆಗ ಪಾಂಡವರ ಸೇನೆಯಲ್ಲಿ ಮಹಾ ತುಮುಲವುಂಟಾಯಿತು. ದ್ರೋಣನು ಸಂಚರಿಸುತ್ತಾ ಪಾಂಡವರನ್ನು ಹುಲ್ಲುಮೆದೆಯಂತೆ ಸುಡುತ್ತಿದ್ದನು.
07013002a ನಿರ್ದಹಂತಮನೀಕಾನಿ ಸಾಕ್ಷಾದಗ್ನಿಮಿವೋತ್ಥಿತಂ।
07013002c ದೃಷ್ಟ್ವಾ ರುಕ್ಮರಥಂ ಯುದ್ಧೇ ಸಮಕಂಪಂತ ಸೃಂಜಯಾಃ।।
ಭುಗಿಲೆದ್ದ ಸಾಕ್ಷಾತ್ ಅಗ್ನಿಯಂತೆ ಸೇನೆಯನ್ನು ದಹಿಸುತ್ತಿದ್ದ ರುಕ್ಮರಥನನ್ನು ನೋಡಿ ಸೃಂಜಯರು ನಡುಗಿದರು.
07013003a ಪ್ರತತಂ ಚಾಸ್ಯಮಾನಸ್ಯ ಧನುಷೋಽಸ್ಯಾಶುಕಾರಿಣಃ।
07013003c ಜ್ಯಾಘೋಷಃ ಶ್ರೂಯತೇಽತ್ಯರ್ಥಂ ವಿಸ್ಫೂರ್ಜಿತಮಿವಾಶನೇಃ।।
ಸತತವಾಗಿ ಸೆಳೆಯಲ್ಪಟ್ಟು ಬಾಣಗಳನ್ನು ಬಿಡುತ್ತಿದ್ದ ಧನುಸ್ಸಿನ ಟೇಂಕಾರ ಶಬ್ಧವು ಸಿಡಿಲಿನ ಶಬ್ಧದಂತೆ ಕೇಳಿಬರುತ್ತಿತ್ತು.
07013004a ರಥಿನಃ ಸಾದಿನಶ್ಚೈವ ನಾಗಾನಶ್ವಾನ್ಪದಾತಿನಃ।
07013004c ರೌದ್ರಾ ಹಸ್ತವತಾ ಮುಕ್ತಾಃ ಪ್ರಮಥ್ನಂತಿ ಸ್ಮ ಸಾಯಕಾಃ।।
ಆ ಕೈಚಳಕಿನವನು ಬಿಟ್ಟ ರೌದ್ರ ಸಾಯಕಗಳು ರಥಿಗಳನ್ನೂ, ಅಶ್ವಾರೋಹಿಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಗಳನ್ನೂ ಹೊಡೆದುರುಳಿಸುತ್ತಿದ್ದವು.
07013005a ನಾನದ್ಯಮಾನಃ ಪರ್ಜನ್ಯಃ ಸಾನಿಲಃ ಶುಚಿಸಂಕ್ಷಯೇ।
07013005c ಅಶ್ಮವರ್ಷಮಿವಾವರ್ಷತ್ಪರೇಷಾಮಾವಹದ್ಭಯಂ।।
ಮಳೆಗಾಲದ ಆರಂಭದಲ್ಲಿ ಮೋಡಗಳು ಭಿರುಗಾಳಿಯೊಡಗೂಡಿ ಗುಡುಗುತ್ತಾ ಆನೆಕಲ್ಲಿನ ಮಳೆಕರೆಯುವಂತೆ ಬಾಣಗಳ ಮಳೆಗರೆದು ಅವನು ಶತ್ರುಗಳಲ್ಲಿ ಯುದ್ಧದ ಭಯವನ್ನು ಹುಟ್ಟಿಸಿದನು.
07013006a ವ್ಯಚರತ್ಸ ತದಾ ರಾಜನ್ಸೇನಾಂ ವಿಕ್ಷೋಭಯನ್ಪ್ರಭುಃ।
07013006c ವರ್ಧಯಾಮಾಸ ಸಂತ್ರಾಸಂ ಶಾತ್ರವಾಣಾಮಮಾನುಷಂ।।
ರಾಜನ್! ಆ ಪ್ರಭುವು ಸಂಚರಿಸುತ್ತಾ ಸೇನೆಗಳನ್ನು ಅಲ್ಲೋಲಕಲ್ಲೋಲಗೊಳಿಸಿ ಶತ್ರುಗಳ ಮನಸ್ಸಿನಲ್ಲಿ ಅಮಾನುಷ ಭಯವನ್ನು ಹೆಚ್ಚಿಸಿದನು.
07013007a ತಸ್ಯ ವಿದ್ಯುದಿವಾಭ್ರೇಷು ಚಾಪಂ ಹೇಮಪರಿಷ್ಕೃತಂ।
07013007c ಭ್ರಮದ್ರಥಾಂಬುದೇ ತಸ್ಮಿನ್ದೃಶ್ಯತೇ ಸ್ಮ ಪುನಃ ಪುನಃ।।
ಮೋಡದಂತೆ ಚಲಿಸುತ್ತಿರುವ ಅವನ ರಥದಿಂದ ಹೇಮಪರಿಷ್ಕೃತ ಧನುಸ್ಸು ಮೋಡದಲ್ಲಿನ ಮಿಂಚಿನಂತೆ ಫಳ ಫಳನೆ ಪುನಃ ಪುನಃ ಹೊಳೆಯುತ್ತಿರುವುದು ಕಂಡುಬಂದಿತು.
07013008a ಸ ವೀರಃ ಸತ್ಯವಾನ್ಪ್ರಾಜ್ಞೋ ಧರ್ಮನಿತ್ಯಃ ಸುದಾರುಣಃ।
07013008c ಯುಗಾಂತಕಾಲೇ ಯಂತೇವ ರೌದ್ರಾಂ ಪ್ರಾಸ್ಕಂದಯನ್ನದೀಂ।।
ಆ ವೀರ, ಸತ್ಯವಾನ್, ಪ್ರಾಜ್ಞ, ಧರ್ಮನಿತ್ಯನು ಪ್ರಲಯಕಾಲದಂತೆಯೇ ರೌದ್ರವೂ ದಾರುಣವೂ ಆದ ರಕ್ತದ ನದಿಯನ್ನೇ ಸೃಷ್ಟಿಸಿದನು.
07013009a ಅಮರ್ಷವೇಗಪ್ರಭವಾಂ ಕ್ರವ್ಯಾದಗಣಸಂಕುಲಾಂ।
07013009c ಬಲೌಘೈಃ ಸರ್ವತಃ ಪೂರ್ಣಾಂ ವೀರವೃಕ್ಷಾಪಹಾರಿಣೀಂ।।
ಕೋಪದ ಆವೇಗದಿಂದ ಹುಟ್ಟಿದ ಆ ನದಿಯು ಮಾಂಸಾಹಾರಿ ಪ್ರಾಣಿಸಂಕುಲಗಳಿಂದ ಕೂಡಿದ್ದು ಸೈನ್ಯಸಮೂಹದ ಪ್ರವಾಹದಿಂದ ಪೂರ್ಣವಾಗಿ, ವೀರರನ್ನೇ ವೃಕ್ಷಗಳನ್ನಾಗಿ ತೇಲಿಸಿಕೊಂಡು ಹೋಗುತ್ತಿತ್ತು.
07013010a ಶೋಣಿತೋದಾಂ ರಥಾವರ್ತಾಂ ಹಸ್ತ್ಯಶ್ವಕೃತರೋಧಸಂ।
07013010c ಕವಚೋಡುಪಸಮ್ಯುಕ್ತಾಂ ಮಾಂಸಪಂಕಸಮಾಕುಲಾಂ।।
ರಕ್ತವೇ ನೀರಾಗಿತ್ತು, ರಥಗಳೇ ಸುರುಳಿಗಳಾಗಿದ್ದವು, ಆನೆ-ಕುದುರೆಗಳೇ ಅದರ ದಡಗಳಾಗಿದ್ದವು, ವೀರರ ಕವಚಗಳೇ ದೋಣಿಗಳಂತಿದ್ದವು ಮತ್ತು ಮಾಂಸರೂಪದ ಕೆಸರಿನಿಂದ ತುಂಬಿಕೊಂಡಿತ್ತು.
07013011a ಮೇದೋಮಜ್ಜಾಸ್ಥಿಸಿಕತಾಮುಷ್ಣೀಷವರಫೇನಿಲಾಂ।
07013011c ಸಂಗ್ರಾಮಜಲದಾಪೂರ್ಣಾಂ ಪ್ರಾಸಮತ್ಸ್ಯಸಮಾಕುಲಾಂ।।
ಮೇಧಸ್ಸು-ಮಜ್ಜೆ-ಮೂಳೆಗಳೇ ಮರಳಿನ ರಾಶಿಯಾಗಿದ್ದವು, ಶಿರಸ್ತ್ರಾಣಗಳು ನೊರೆಯ ರೂಪದಲ್ಲಿದ್ದವು, ಸಂಗ್ರಾಮವೆಂಬ ಮೋಡಗಳಿಂದ ಸುರಿದ ರಕ್ತದಿಂದ ತುಂಬಿಹೋಗಿತ್ತು ಮತ್ತು ಪ್ರಾಸಾಯುಧಗಳೇ ಮೀನುಗಳ ಸಮಾಕುಲದಂತಿದ್ದವು.
07013012a ನರನಾಗಾಶ್ವಸಂಭೂತಾಂ ಶರವೇಗೌಘವಾಹಿನೀಂ।
07013012c ಶರೀರದಾರುಶೃಂಗಾಟಾಂ ಭುಜನಾಗಸಮಾಕುಲಾಂ।।
ನರ-ಗಜ-ಅಶ್ವಗಳಿಂದ ತುಂಬಿದ್ದ ಆ ನದಿಗೆ ಶರವೇಗಗಳೇ ಪ್ರವಾಹಗಳಾಗಿದ್ದವು. ಶರೀರಗಳು ಅದರ ಗಟ್ಟಗಳಾಗಿದ್ದರೆ ರಥಗಳೇ ಆಮೆಗಳಾಗಿದ್ದವು.
07013013a ಉತ್ತಮಾಂಗೋಪಲತಲಾಂ ನಿಸ್ತ್ರಿಂಶಝಷಸೇವಿತಾಂ।
07013013c ರಥನಾಗಹ್ರದೋಪೇತಾಂ ನಾನಾಭರಣನೀರಜಾಂ।।
ತಲೆಗಳು ಕಮಲದ ಪುಷ್ಪಗಳಂತಿದ್ದವು. ಖಡ್ಗಗಳೇ ಮೀನುಗಳಾಗಿ ತುಂಬಿಹೋಗಿದ್ದವು. ರಥಗಳು ಮತ್ತು ಆನೆಗಳ ಅದರ ಮಡುವಿನಂತಿದ್ದವು. ನಾನಾಭರಣಗಳೇ ನೀರಜ ಪುಷ್ಪಗಳಾಗಿದ್ದವು.
07013014a ಮಹಾರಥಶತಾವರ್ತಾಂ ಭೂಮಿರೇಣೂರ್ಮಿಮಾಲಿನೀಂ।
07013014c ಮಹಾವೀರ್ಯವತಾಂ ಸಂಖ್ಯೇ ಸುತರಾಂ ಭೀರುದುಸ್ತರಾಂ।।
ನೂರಾರು ಮಹಾರಥಗಳು ಸುಳಿಗಳಿಂತಿದ್ದವು. ಭೂಮಿಯಿಂದ ಹುಟ್ಟಿದ ಧೂಳೇ ಅದರ ಅಲೆಗಳ ಮಾಲೆಗಳಾಗಿದ್ದವು. ಯುದ್ಧದಲ್ಲಿ ಮಹಾವೀರರಿಗೆ ಅದು ಸುಲಭವೂ ರಣಹೇಡಿಗಳಿಗೂ ದುಸ್ತರವೂ ಆಗಿದ್ದಿತು.
07013015a ಶೂರವ್ಯಾಲಸಮಾಕೀರ್ಣಾಂ ಪ್ರಾಣಿವಾಣಿಜಸೇವಿತಾಂ।
07013015c ಚಿನ್ನಚ್ಚತ್ರಮಹಾಹಂಸಾಂ ಮುಕುಟಾಂಡಜಸಂಕುಲಾಂ।।
ಶೂರರ ಶರೀರಗಳಿಂದ ತುಂಬಿದ್ದ ಅದಕ್ಕೆ ಪ್ರಾಣಿಗಳ ಗುಂಪುಗಳು ಮುತ್ತಿದ್ದವು. ಹರಿದುಹೋದ ಚತ್ರಗಳು ಹಂಸಗಳಂತೆ ತೇಲುತ್ತಿದ್ದವು. ಮುಕುಟಗಳು ಪಕ್ಷಿಸಂಕುಲಗಳಂತೆ ತೋರುತ್ತಿದ್ದವು.
07013016a ಚಕ್ರಕೂರ್ಮಾಂ ಗದಾನಕ್ರಾಂ ಶರಕ್ಷುದ್ರಝಷಾಕುಲಾಂ।
07013016c ಬಡಗೃಧ್ರಸೃಗಾಲಾನಾಂ ಘೋರಸಂಘೈರ್ನಿಷೇವಿತಾಂ।।
ಚಕ್ರಗಳು ಆಮೆಗಳಂತಿದ್ದವು, ಗದೆಗಳು ಮೊಸಳೆಗಳಂತಿದ್ದವು, ಶರಗಳೆಂಬ ಸಣ್ಣ ಸಣ್ಣ ಮೀನುಗಳಿಂದ ತುಂಬಿಹೋಗಿತ್ತು. ಘೋರವಾದ ಹದ್ದು, ಬಕ ಮತ್ತು ಗುಳ್ಳೇನರಿಗಳ ಗುಂಪುಗಳಿಂದ ಕೂಡಿತ್ತು.
07013017a ನಿಹತಾನ್ಪ್ರಾಣಿನಃ ಸಂಖ್ಯೇ ದ್ರೋಣೇನ ಬಲಿನಾ ಶರೈಃ।
07013017c ವಹಂತೀಂ ಪಿತೃಲೋಕಾಯ ಶತಶೋ ರಾಜಸತ್ತಮ।।
ದ್ರೋಣನ ಬಲಶಾಲಿ ಶರಗಳು ಯುದ್ಧದಲ್ಲಿ ಪ್ರಾಣಿಗಳನ್ನು ಕೊಂದು ನೂರಾರು ರಾಜಸತ್ತಮರನ್ನು ಪಿತೃಲೋಕಕ್ಕೆ ತೇಲಿಸಿಕೊಂಡು ಹೋಗುತ್ತಿದ್ದವು.
07013018a ಶರೀರಶತಸಂಬಾಧಾಂ ಕೇಶಶೈವಲಶಾದ್ವಲಾಂ।
07013018c ನದೀಂ ಪ್ರಾವರ್ತಯದ್ರಾಜನ್ಭೀರೂಣಾಂ ಭಯವರ್ಧಿನೀಂ।।
ರಾಜನ್! ನೂರಾರು ಶರೀರಗಳಿಂದ ಸಮಾಕುಲವಾಗಿದ್ದ ಕೂದಲುಗಳೆಂಬ ಹುಲ್ಲಿನಿಂದಲೂ ಪಾಚಿಯಿಂದಲೂ ಕೂಡಿದ್ದ ಭೀರುಗಳಿಗೆ ಭಯವನ್ನು ಹೆಚಿವಿಸುತ್ತಿದ್ದ ಆ ರಕ್ತನದಿಯು ಹರಿಯುತ್ತಿತ್ತು.
07013019a ತಂ ಜಯಂತಮನೀಕಾನಿ ತಾನಿ ತಾನ್ಯೇವ ಭಾರತ।
07013019c ಸರ್ವತೋಽಭ್ಯದ್ರವನ್ದ್ರೋಣಂ ಯುಧಿಷ್ಠಿರಪುರೋಗಮಾಃ।।
ಭಾರತ! ಅಲ್ಲಲ್ಲಿ ಸೇನೆಗಳನ್ನು ಜಯಿಸುತ್ತಿದ್ದ ದ್ರೋಣನನ್ನು ಯುಧಿಷ್ಠಿರನೇ ಮೊದಲಾದವರು ಎಲ್ಲಕಡೆಗಳಿಂದ ಆಕ್ರಮಣಿಸಿದರು.
07013020a ತಾನಭಿದ್ರವತಃ ಶೂರಾಂಸ್ತಾವಕಾ ದೃಢಕಾರ್ಮುಕಾಃ।
07013020c ಸರ್ವತಃ ಪ್ರತ್ಯಗೃಹ್ಣಂತ ತದಭೂಲ್ಲೋಮಹರ್ಷಣಂ।।
ಧಾವಿಸಿ ಬರುತ್ತಿದ್ದ ಆ ಶೂರರನ್ನು ನಿನ್ನವರಾದ ದೃಢಕಾರ್ಮುಕರು ಎಲ್ಲ ಕಡೆಯಿಂದ ತಡೆದು ನಿಲ್ಲಿಸಿದರು. ಆಗ ರೋಮಾಂಚಕಾರೀ ಯುದ್ಧವು ನಡೆಯಿತು.
07013021a ಶತಮಾಯಸ್ತು ಶಕುನಿಃ ಸಹದೇವಂ ಸಮಾದ್ರವತ್।
07013021c ಸನಿಯಂತೃಧ್ವಜರಥಂ ವಿವ್ಯಾಧ ನಿಶಿತೈಃ ಶರೈಃ।।
ನೂರಾರು ಮಾಯಾವಿದ್ಯೆಗಳನ್ನು ತಿಳಿದಿದ್ದ ಶಕುನಿಯು ಸಹದೇವನನ್ನು ಆಕ್ರಮಣಿಸಿ, ಅವನನ್ನೂ, ಸಾರಥಿಯನ್ನೂ, ಧ್ವಜವನ್ನೂ, ರಥವನ್ನು ನಿಶಿತ ಶರಗಳಿಂದ ಹೊಡೆದನು.
07013022a ತಸ್ಯ ಮಾದ್ರೀಸುತಃ ಕೇತುಂ ಧನುಃ ಸೂತಂ ಹಯಾನಪಿ।
07013022c ನಾತಿಕ್ರುದ್ಧಃ ಶರೈಶ್ಚಿತ್ತ್ವಾ ಷಷ್ಟ್ಯಾ ವಿವ್ಯಾಧ ಮಾತುಲಂ।।
ಆಗ ಮಾದ್ರೀ ಸುತನು ಅತಿ ಕ್ರುದ್ಧನಾಗಿ ಅವನ ಧ್ವಜ, ಧನುಸ್ಸು, ಸೂತ ಮತ್ತು ಕುದುರೆಗಳನ್ನೂ ಶರಗಳಿಂದ ತುಂಡುಮಾಡಿ ಅರವತ್ತರಿಂದ ಸೋದರ ಮಾವನನ್ನು ಹೊಡೆದನು.
07013023a ಸೌಬಲಸ್ತು ಗದಾಂ ಗೃಹ್ಯ ಪ್ರಚಸ್ಕಂದ ರಥೋತ್ತಮಾತ್।
07013023c ಸ ತಸ್ಯ ಗದಯಾ ರಾಜನ್ರಥಾತ್ಸೂತಮಪಾತಯತ್।।
ರಾಜನ್! ಸೌಬಲನಾದರೋ ಗದೆಯನ್ನು ಹಿಡಿದು ಉತ್ತಮ ರಥದಿಂದ ಕೆಳಗೆ ಹಾರಿ ಆ ಗದೆಯಿಂದ ಅವನ ರಥದಿಂದ ಸೂತನನ್ನು ಕೆಳಗೆ ಬೀಳಿಸಿದನು.
07013024a ತತಸ್ತೌ ವಿರಥೌ ರಾಜನ್ಗದಾಹಸ್ತೌ ಮಹಾಬಲೌ।
07013024c ಚಿಕ್ರೀಡತೂ ರಣೇ ಶೂರೌ ಸಶೃಂಗಾವಿವ ಪರ್ವತೌ।।
ರಾಜನ್! ಆಗ ಅವರಿಬ್ಬರು ಮಹಾರಥ ಶೂರರೂ ರಥಗಳನ್ನು ಕಳೆದುಕೊಂಡು ಗದೆಗಳನ್ನು ಹಿಡಿದು ರಣದಿಂದ ಶಿಖರಗಳಿರುವ ಪರ್ವತಗಳಂತೆ ಹೋರಾಡಿದರು.
07013025a ದ್ರೋಣಃ ಪಾಂಚಾಲರಾಜಾನಂ ವಿದ್ಧ್ವಾ ದಶಭಿರಾಶುಗೈಃ।
07013025c ಬಹುಭಿಸ್ತೇನ ಚಾಭ್ಯಸ್ತಸ್ತಂ ವಿವ್ಯಾಧ ಶತಾಧಿಕೈಃ।।
ದ್ರೋಣನು ಪಾಂಚಾಲರಾಜನನ್ನು ಹತ್ತು ಆಶುಗಗಳಿಂದ ಗಾಯಗೊಳಿಸಿದನು. ಆಗ ಅವನೂ ಕೂಡ ದ್ರೋಣನನ್ನು ಅನೇಕ ನೂರಕ್ಕೂ ಹೆಚ್ಚು ಬಾಣಗಳಿಂದ ಹೊಡೆದನು.
07013026a ವಿವಿಂಶತಿಂ ಭೀಮಸೇನೋ ವಿಂಶತ್ಯಾ ನಿಶಿತೈಃ ಶರೈಃ।
07013026c ವಿದ್ಧ್ವಾ ನಾಕಂಪಯದ್ವೀರಸ್ತದದ್ಭುತಮಿವಾಭವತ್।।
ಭೀಮಸೇನನು ವಿವಿಂಶತಿಯನ್ನು ಇಪ್ಪತ್ತು ನಿಶಿತ ಶರಗಳಿಂದ ಹೊಡೆಯಲು ಆ ವೀರನು ಅಲುಗಾಡಲಿಲ್ಲ. ಅದು ನಮಗೆ ಪರಮ ಅದ್ಭುತವೆನಿಸಿತು.
07013027a ವಿವಿಂಶತಿಸ್ತು ಸಹಸಾ ವ್ಯಶ್ವಕೇತುಶರಾಸನಂ।
07013027c ಭೀಮಂ ಚಕ್ರೇ ಮಹಾರಾಜ ತತಃ ಸೈನ್ಯಾನ್ಯಪೂಜಯನ್।।
ಒಡನೆಯೇ ವಿವಿಂಶತಿಯು ಭೀಮನನ್ನು ಕುದುರೆ-ಧ್ವಜ-ಬಿಲ್ಲುಗಳು ಇಲ್ಲದಂತೆ ಮಾಡಿಬಿಟ್ಟನು. ಮಹಾರಾಜ! ಆಗ ಸೈನ್ಯಗಳು ಅವನನ್ನು ಗೌರವಿಸಿದವು.
07013028a ಸ ತನ್ನ ಮಮೃಷೇ ವೀರಃ ಶತ್ರೋರ್ವಿಜಯಮಾಹವೇ।
07013028c ತತೋಽಸ್ಯ ಗದಯಾ ದಾಂತಾನ್ ಹಯಾನ್ಸರ್ವಾನಪಾತಯತ್।।
ಆಹವದಲ್ಲಿ ಶತ್ರುವಿನ ವಿಜಯವನ್ನು ಸಹಿಸಿಕೊಳ್ಳಲಾಗದ ಆ ವೀರನು ಗದೆಯಿಂದ ಅವನ ಆನೆ-ಕುದುರೆಗಳೆಲ್ಲವನ್ನೂ ಅಪ್ಪಳಿಸಿ ಉರುಳಿಸಿದನು.
07013029a ಶಲ್ಯಸ್ತು ನಕುಲಂ ವೀರಃ ಸ್ವಸ್ರೀಯಂ ಪ್ರಿಯಮಾತ್ಮನಃ।
07013029c ವಿವ್ಯಾಧ ಪ್ರಹಸನ್ಬಾಣೈರ್ಲಾಡಯನ್ಕೋಪಯನ್ನಿವ।।
ವೀರ ಶಲ್ಯನಾದರೋ ತನ್ನ ಪ್ರಿತಿಯ ಅಳಿಯ ನಕುಲನನ್ನು ನಗುತ್ತಾ ಆಟವಾಡುತ್ತಿದ್ದಂತೆ ಮತ್ತು ಕೋಪದಲ್ಲಿರುವಂತೆ ಬಾಣಗಳಿಂದ ಹೊಡೆದನು.
07013030a ತಸ್ಯಾಶ್ವಾನಾತಪತ್ರಂ ಚ ಧ್ವಜಂ ಸೂತಮಥೋ ಧನುಃ।
07013030c ನಿಪಾತ್ಯ ನಕುಲಃ ಸಂಖ್ಯೇ ಶಂಖಂ ದಧ್ಮೌ ಪ್ರತಾಪವಾನ್।।
ಆಗ ಪ್ರತಾಪವಾನ್ ನಕುಲನು ಯುದ್ಧದಲ್ಲಿ ಅವನ ಕುದುರೆಗಳನ್ನೂ, ಧ್ವಜವನ್ನೂ, ಸೂತನನ್ನೂ, ಧನುಸ್ಸನ್ನೂ ಕೆಳಗುರುಳಿಸಿ ಶಂಖವನ್ನು ಊದಿದನು.
07013031a ಧೃಷ್ಟಕೇತುಃ ಕೃಪೇನಾಸ್ತಾಂ ಚಿತ್ತ್ವಾ ಬಹುವಿಧಾಂ ಶರಾನ್।
07013031c ಕೃಪಂ ವಿವ್ಯಾಧ ಸಪ್ತತ್ಯಾ ಲಕ್ಷ್ಮ ಚಾಸ್ಯಾಹರತ್ತ್ರಿಭಿಃ।।
ಧೃಷ್ಟಕೇತುವು ಕೃಪನು ಪ್ರಯೋಗಿಸಿದ ಬಹುವಿಧದ ಶರಗಳನ್ನು ಕತ್ತರಿಸಿ, ಮೂರು ಬಾಣಗಳಿಂದ ಅವನ ಧ್ವಜವನ್ನು ತುಂಡರಿಸಿ ಕೃಪನನ್ನು ಎಪ್ಪತ್ತು ಬಾಣಗಳಿಂದ ಗಾಯಗೊಳಿಸಿದನು.
07013032a ತಂ ಕೃಪಃ ಶರವರ್ಷೇಣ ಮಹತಾ ಸಮವಾಕಿರತ್।
07013032c ನಿವಾರ್ಯ ಚ ರಣೇ ವಿಪ್ರೋ ಧೃಷ್ಟಕೇತುಮಯೋಧಯತ್।।
ಅವನನ್ನು ಕೃಪನು ಮಹಾ ಶರವರ್ಷದಿಂದ ಮುಚ್ಚಿದನು. ರಣದಲ್ಲಿ ವಿಪ್ರನು ಧೃಷ್ಟಕೇತುವನ್ನು ತಡೆದು ಯುದ್ಧ ಮಾಡಿದನು.
07013033a ಸಾತ್ಯಕಿಃ ಕೃತವರ್ಮಾಣಂ ನಾರಾಚೇನ ಸ್ತನಾಂತರೇ।
07013033c ವಿದ್ಧ್ವಾ ವಿವ್ಯಾಧ ಸಪ್ತತ್ಯಾ ಪುನರನ್ಯೈಃ ಸ್ಮಯನ್ನಿವ।।
ಸಾತ್ಯಕಿಯು ಕೃತವರ್ಮನನ್ನು ನಾರಾಚದಿಂದ ಎದೆಗೆ ಹೊಡೆದು ಪುನಃ ನಗುತ್ತಾ ಇತರ ಎಪ್ಪತ್ತರಿಂದ ಹೊಡೆದನು.
07013034a ಸಪ್ತಸಪ್ತತಿಭಿರ್ಭೋಜಸ್ತಂ ವಿದ್ಧ್ವಾ ನಿಶಿತೈಃ ಶರೈಃ।
07013034c ನಾಕಂಪಯತ ಶೈನೇಯಂ ಶೀಘ್ರೋ ವಾಯುರಿವಾಚಲಂ।।
ಆಗ ಭೋಜನು ಅವನನ್ನು ಎಪ್ಪತ್ತೇಳು ನಿಶಿತ ಶರಗಳಿಂದ ಹೊಡೆಯಲು ಶೈನೇಯನು ಭಿರುಗಾಳಿಗೂ ಅಲುಗಾಡದ ಪರ್ವತದಂತೆ ಕಂಪಿಸಲಿಲ್ಲ.
07013035a ಸೇನಾಪತಿಃ ಸುಶರ್ಮಾಣಂ ಶೀಘ್ರಂ ಮರ್ಮಸ್ವತಾಡಯತ್।
07013035c ಸ ಚಾಪಿ ತಂ ತೋಮರೇಣ ಜತ್ರುದೇಶೇ ಅತಾಡಯತ್।।
ಸೇನಾಪತಿ ಧೃಷ್ಟದ್ಯುಮ್ನನು ಸುಶರ್ಮನನ್ನು ಶೀಘ್ರವಾಗಿ ಮರ್ಮಗಳಲ್ಲಿ ಹೊಡೆದನು. ಅವನೂ ಕೂಡ ಅವನನ್ನು ಜತ್ರುದೇಶದಲ್ಲಿ ತೋಮರದಿಂದ ಹೊಡೆದನು.
07013036a ವೈಕರ್ತನಂ ತು ಸಮರೇ ವಿರಾಟಃ ಪ್ರತ್ಯವಾರಯತ್।
07013036c ಸಹ ಮತ್ಸ್ಯೈರ್ಮಹಾವೀರ್ಯೈಸ್ತದದ್ಭುತಮಿವಾಭವತ್।।
ಸಮರದಲ್ಲಿ ವೈಕರ್ತನನ್ನು ವಿರಾಟನು ಮತ್ಸ್ಯ ಮಹಾವೀರರೊಂದಿಗೆ ಎದುರಿಸಿ ತಡೆದನು. ಆಗ ಈ ಅದ್ಭುತವು ನಡೆಯಿತು.
07013037a ತತ್ಪೌರುಷಮಭೂತ್ತತ್ರ ಸೂತಪುತ್ರಸ್ಯ ದಾರುಣಂ।
07013037c ಯತ್ಸೈನ್ಯಂ ವಾರಯಾಮಾಸ ಶರೈಃ ಸನ್ನತಪರ್ವಭಿಃ।।
ಸನ್ನತಪರ್ವ ಶರಗಳಿಂದ ಸೈನ್ಯವನ್ನು ತಡೆಹಿಡಿದ ಸೂತಪುತ್ರನ ದಾರುಣ ಪೌರುಷವನ್ನು ಅಲ್ಲಿ ನೋಡಲಿಕ್ಕೆ ಸಿಕ್ಕಿತು.
07013038a ದ್ರುಪದಸ್ತು ಸ್ವಯಂ ರಾಜಾ ಭಗದತ್ತೇನ ಸಂಗತಃ।
07013038c ತಯೋರ್ಯುದ್ಧಂ ಮಹಾರಾಜ ಚಿತ್ರರೂಪಮಿವಾಭವತ್।
07013038e ಭೂತಾನಾಂ ತ್ರಾಸಜನನಂ ಚಕ್ರಾತೇಽಸ್ತ್ರವಿಶಾರದೌ।।
ರಾಜಾ ದ್ರುಪದನು ಸ್ವಯಂ ಭಗದತ್ತನೊಡನೆ ಯುದ್ಧಮಾಡಿದನು. ಮಹಾರಾಜ! ಅವರಿಬ್ಬರ ಯುದ್ಧವು ವಿಚಿತ್ರವಾಗಿ ಕಾಣುತ್ತಿತ್ತು. ಅವರಿಬ್ಬರು ಅಸ್ತ್ರವಿಶಾರದರೂ ಭೂತಗಳಿಗೆ ಭಯವನ್ನುಂಟುಮಾಡತೊಡಗಿದರು.
07013039a ಭೂರಿಶ್ರವಾ ರಣೇ ರಾಜನ್ಯಾಜ್ಞಸೇನಿಂ ಮಹಾರಥಂ।
07013039c ಮಹತಾ ಸಾಯಕೌಘೇನ ಚಾದಯಾಮಾಸ ವೀರ್ಯವಾನ್।।
ರಾಜನ್! ರಣದಲ್ಲಿ ವೀರ್ಯವಾನ್ ಭೂರಿಶ್ರವನು ಮಹಾರಥ ಯಾಜ್ಞಸೇನಿಯನ್ನು ಮಹಾ ಸಾಯಕಗಳ ರಾಶಿಯಿಂದ ಹೊಡೆದನು.
07013040a ಶಿಖಂಡೀ ತು ತತಃ ಕ್ರುದ್ಧಃ ಸೌಮದತ್ತಿಂ ವಿಶಾಂ ಪತೇ।
07013040c ನವತ್ಯಾ ಸಾಯಕಾನಾಂ ತು ಕಂಪಯಾಮಾಸ ಭಾರತ।।
ವಿಶಾಂಪತೇ! ಭಾರತ! ಆಗ ಶಿಖಂಡಿಯಾದರೋ ಕ್ರುದ್ಧನಾಗಿ ಸೌಮದತ್ತಿಯನ್ನು ತೊಂಭತ್ತು ಸಾಯಕಗಲಿಂದ ನಡುಗಿಸಿದನು.
07013041a ರಾಕ್ಷಸೌ ಭೀಮಕರ್ಮಾಣೌ ಹೈಡಿಂಬಾಲಂಬುಸಾವುಭೌ।
07013041c ಚಕ್ರಾತೇಽತ್ಯದ್ಭುತಂ ಯುದ್ಧಂ ಪರಸ್ಪರವಧೈಷಿಣೌ।।
ಭೀಮಕರ್ಮಿ ರಾಕ್ಷಸರಿಬ್ಬರು ಹೈಡಿಂಬಿ-ಅಲಂಬುಸರು ಪರಸ್ಪರರನ್ನು ವಧಿಸಲು ಬಯಸಿ ಅತ್ಯದ್ಭುತವಾದ ಯುದ್ಧದಲ್ಲಿ ತೊಡಗಿದರು.
07013042a ಮಾಯಾಶತಸೃಜೌ ದೃಪ್ತೌ ಮಾಯಾಭಿರಿತರೇತರಂ।
07013042c ಅಂತರ್ಹಿತೌ ಚೇರತುಸ್ತೌ ಭೃಶಂ ವಿಸ್ಮಯಕಾರಿಣೌ।।
ದೃಪ್ತರಾದ ಅವರಿಬ್ಬರೂ ನೂರಾರು ಮಾಯೆಗಳನ್ನು ಸೃಷ್ಟಿಸಿ ಒಬ್ಬರನ್ನೊಬ್ಬರ ಮಾಯೆಗಳಿಂದ ಅಂತರ್ಧಾನರಾಗಿ ತುಂಬಾ ವಿಸ್ಮಯಗಳನ್ನುಂಟುಮಾಡುತ್ತಾ ಸಂಚರಿಸುತ್ತಿದ್ದರು.
07013043a ಚೇಕಿತಾನೋಽನುವಿಂದೇನ ಯುಯುಧೇ ತ್ವತಿಭೈರವಂ।
07013043c ಯಥಾ ದೇವಾಸುರೇ ಯುದ್ಧೇ ಬಲಶಕ್ರೌ ಮಹಾಬಲೌ।।
ದೇವಾಸುರರ ಯುದ್ಧದಲ್ಲಿ ಮಹಾಬಲಶಾಲಿಗಳಾದ ಬಲ ಮತ್ತು ಶಕ್ರರಂತೆ ಚೇಕಿತಾನ-ಅನುವಿಂದರು ಅತಿ ಭೈರವ ಯುದ್ಧದಲ್ಲಿ ತೊಡಗಿದರು.
07013044a ಲಕ್ಷ್ಮಣಃ ಕ್ಷತ್ರದೇವೇನ ವಿಮರ್ದಮಕರೋದ್ಭೃಶಂ।
07013044c ಯಥಾ ವಿಷ್ಣುಃ ಪುರಾ ರಾಜನ್ ಹಿರಣ್ಯಾಕ್ಷೇಣ ಸಂಯುಗೇ।।
ರಾಜನ್! ಹಿಂದು ವಿಷ್ಣುವು ಸಂಯುಗದಲ್ಲಿ ಹಿರಣ್ಯಾಕ್ಷನೊಂದಿಗೆ ಹೇಗೋ ಹಾಗೆ ಲಕ್ಷ್ಮಣನು ಕ್ಷತ್ರದೇವನ ಸೇನೆಯನ್ನು ಚೆನ್ನಾಗಿ ಮರ್ದಿಸಿದನು.
07013045a ತತಃ ಪ್ರಜವಿತಾಶ್ವೇನ ವಿಧಿವತ್ಕಲ್ಪಿತೇನ ಚ।
07013045c ರಥೇನಾಭ್ಯಪತದ್ರಾಜನ್ಸೌಭದ್ರಂ ಪೌರವೋ ನದನ್।।
ರಾಜನ್! ಆಗ ಚಂಚಲಸ್ವಭಾವದ ಕುದುರೆಗಳಿಂದ ವಿಧಿವತ್ತಾಗಿ ಕಲ್ಪಿತವಾಗಿದ್ದ ರಥದಲ್ಲಿ ಪೌರವನು ನಿನಾದಿಸುತ್ತಾ ಸೌಭದ್ರನನ್ನು ಆಕ್ರಮಣಿಸಿದನು.
07013046a ತತೋಽಭಿಯಾಯ ತ್ವರಿತೋ ಯುದ್ಧಾಕಾಂಕ್ಷೀ ಮಹಾಬಲಃ।
07013046c ತೇನ ಚಕ್ರೇ ಮಹದ್ಯುದ್ಧಮಭಿಮನ್ಯುರರಿಂದಮಃ।।
ಆಗ ಯುದ್ಧಾಕಾಂಕ್ಷಿಯಾಗಿದ್ದ ಮಹಾಬಲ ಅರಿಂದಮ ಅಭಿಮನ್ಯುವು ತ್ವರೆಮಾಡಿ ಅವನೊಂದಿಗೆ ಮಹಾಯುದ್ಧದಲ್ಲಿ ತೊಡಗಿದನು.
07013047a ಪೌರವಸ್ತ್ವಥ ಸೌಭದ್ರಂ ಶರವ್ರಾತೈರವಾಕಿರತ್।
07013047c ತಸ್ಯಾರ್ಜುನಿರ್ಧ್ವಜಂ ಚತ್ರಂ ಧನುಶ್ಚೋರ್ವ್ಯಾಮಪಾತಯತ್।।
ಪೌರವನು ಸೌಭದ್ರನನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು. ಆರ್ಜುನಿಯು ಅವನ ಧ್ವಜ, ಚತ್ರ, ಧನುಸ್ಸುಗಳನ್ನು ಕತ್ತರಿಸಿ ಬೀಳಿಸಿದನು.
07013048a ಸೌಭದ್ರಃ ಪೌರವಂ ತ್ವನ್ಯೈರ್ವಿದ್ಧ್ವಾ ಸಪ್ತಭಿರಾಶುಗೈಃ।
07013048c ಪಂಚಭಿಸ್ತಸ್ಯ ವಿವ್ಯಾಧ ಹಯಾನ್ಸೂತಂ ಚ ಸಾಯಕೈಃ।।
ಸೌಭದ್ರನು ಪೌರವನನ್ನು ಅನ್ಯ ಏಳು ಆಶುಗಗಳಿಂದ ಹೊಡೆದು ಐದು ಸಾಯಕಗಳಿಂದ ಅವನ ಕುದುರೆಗಳನ್ನೂ ಸೂತನನ್ನೂ ಹೊಡೆದನು.
07013049a ತತಃ ಸಂಹರ್ಷಯನ್ಸೇನಾಂ ಸಿಂಹವದ್ವಿನದನ್ಮುಹುಃ।
07013049c ಸಮಾದತ್ತಾರ್ಜುನಿಸ್ತೂರ್ಣಂ ಪೌರವಾಂತಕರಂ ಶರಂ।।
ಆಗ ಆರ್ಜುನಿಯು ಸೇನೆಗಳನ್ನು ಹರ್ಷಗೊಳಿಸುತ್ತಾ ಪುನಃ ಪುನಃ ಸಿಂಹದಂತೆ ಗರ್ಜಿಸಿದನು ಮತ್ತು ತಕ್ಷಣವೇ ಪೌರವನನ್ನು ಅಂತ್ಯಗೊಳಿಸಲು ಶರವನ್ನು ತೆಗೆದುಕೊಂಡನು.
07013050a ದ್ವಾಭ್ಯಾಂ ಶರಾಭ್ಯಾಂ ಹಾರ್ದಿಕ್ಯಶ್ಚಕರ್ತ ಸಶರಂ ಧನುಃ।
07013050c ತದುತ್ಸೃಜ್ಯ ಧನುಶ್ಚಿನ್ನಂ ಸೌಭದ್ರಃ ಪರವೀರಹಾ।
07013050e ಉದ್ಬಬರ್ಹ ಸಿತಂ ಖಡ್ಗಮಾದದಾನಃ ಶರಾವರಂ।।
ಆಗ ಹಾರ್ದಿಕ್ಯನು ಎರಡು ಬಾಣಗಳಿಂದ ಅವನ ಬಿಲ್ಲು-ಬಾಣಗಳನ್ನು ಕತ್ತರಿಸಿದನು. ಪರವೀರಹ ಸೌಭದ್ರನು ಆ ತುಂಡಾದ ಧನುಸ್ಸನ್ನು ಎಸೆದು ಥಳಥಳಿಸುವ ಖಡ್ಗವನ್ನು ವರಸೆಯಿಂದ ತೆಗೆದು ಗುರಾಣಿಯನ್ನೂ ಹಿಡಿದನು.
07013051a ಸ ತೇನಾನೇಕತಾರೇಣ ಚರ್ಮಣಾ ಕೃತಹಸ್ತವತ್।
07013051c ಭ್ರಾಂತಾಸಿರಚರನ್ಮಾರ್ಗಾನ್ದರ್ಶಯನ್ವೀರ್ಯಮಾತ್ಮನಃ।।
ಅವನು ಅನೇಕ ನಕ್ಷತ್ರಗಳ ಚಿಹ್ನೆಗಳನ್ನು ಹೊಂದಿದ ಗುರಾಣಿಯನ್ನು ಹಿಡಿದು, ಅದರಲ್ಲಿ ತನ್ನ ಕೈಚಳಕವನ್ನು ಮತ್ತು ವೀರ್ಯವನ್ನು ತೋರಿಸುತ್ತಾ ರಣಾಂಗಣದ ಸುತ್ತಲೂ ತಿರುಗುತ್ತಿದ್ದನು.
07013052a ಭ್ರಾಮಿತಂ ಪುನರುದ್ಭ್ರಾಂತಮಾಧೂತಂ ಪುನರುಚ್ಚ್ರಿತಂ।
07013052c ಚರ್ಮನಿಸ್ತ್ರಿಂಶಯೋ ರಾಜನ್ನಿರ್ವಿಶೇಷಮದೃಶ್ಯತ।।
ರಾಜನ್! ಭ್ರಾಮಿತ (ಕತ್ತಿ-ಗುರಾಣಿಗಳನ್ನು ಕೆಳಕ್ಕೆ ತಿರುಗಿಸುವುದು), ಉದ್ಭ್ರಾಂತ (ಕತ್ತಿಯನ್ನು ಮೇಲೆ ತಿರುಗಿಸುವುದು), ಅಧೂತ (ಸುತ್ತಲೂ ತಿರುಗಿಸುವುದು), ಉತ್ಥಿತ (ಮೇಲಕ್ಕೆ ಹಾರಿ ತಿರುಗಿಸುವುದು) – ಇತ್ಯಾದಿ ವರಸೆಗಳಿಂದ ಅವನು ಖಡ್ಗ ಗುರಾಣಿಗಳನ್ನು ತಿರುಗಿಸುತ್ತಿದ್ದು ವಿಶೇಷವಾಗಿ ಕಂಡಿತು.
07013053a ಸ ಪೌರವರಥಸ್ಯೇಷಾಮಾಪ್ಲುತ್ಯ ಸಹಸಾ ನದನ್।
07013053c ಪೌರವಂ ರಥಮಾಸ್ಥಾಯ ಕೇಶಪಕ್ಷೇ ಪರಾಮೃಶತ್।।
ಅವನು ಒಮ್ಮೆಲೇ ಜೋರಾಗಿ ಗರ್ಜಿಸಿ ಪೌರವನ ರಥದ ಮೂಕಿನ ಮೇಲೆ ಹಾರಿ ರಥದಲ್ಲಿ ಕುಳಿತಿದ್ದ ಪೌರವನ ತಲೆಗೂದಲನ್ನು ಹಿಡಿದನು.
07013054a ಜಘಾನಾಸ್ಯ ಪದಾ ಸೂತಮಸಿನಾಪಾತಯದ್ಧ್ವಜಂ।
07013054c ವಿಕ್ಷೋಭ್ಯಾಂಭೋನಿಧಿಂ ತಾರ್ಕ್ಷ್ಯಸ್ತಂ ನಾಗಮಿವ ಚಾಕ್ಷಿಪತ್।।
ಕಾಲಿನಿಂದ ಅವನನ್ನು ಒದೆದು, ಖಡ್ಗದಿಂದ ಸೂತ ಮತ್ತು ಧ್ವಜಗಳನ್ನು ಉರುಳಿಸಿದನು. ಅಲ್ಲೋಲಕಲ್ಲೋಲಗೊಂಡಿದ್ದ ಸಮುದ್ರದಿಂದ ಗರುಡನು ಸರ್ಪಗಳನ್ನು ಎಳೆದುಕೊಳ್ಳುವಂತೆ ಅವನನ್ನು ಸೆಳೆದುಕೊಂಡನು.
07013055a ತಮಾಕಲಿತಕೇಶಾಂತಂ ದದೃಶುಃ ಸರ್ವಪಾರ್ಥಿವಾಃ।
07013055c ಉಕ್ಷಾಣಮಿವ ಸಿಂಹೇನ ಪಾತ್ಯಮಾನಮಚೇತನಂ।।
ಸಿಂಹದಿಂದ ಬೀಳಿಸಲ್ಪಟ್ಟ ಹೋರಿಯಂತೆ ಕೆಳಗೆ ಅಚೇತನನಾಗಿ ಬಿದ್ದ ಬಿಚ್ಚಿದ ಕೂದಲಿನ ಅವನನ್ನು ಸರ್ವಪಾರ್ಥಿವರೂ ನೋಡಿದರು.
07013056a ತಮಾರ್ಜುನಿವಶಂ ಪ್ರಾಪ್ತಂ ಕೃಷ್ಯಮಾಣಮನಾಥವತ್।
07013056c ಪೌರವಂ ಪತಿತಂ ದೃಷ್ಟ್ವಾ ನಾಮೃಷ್ಯತ ಜಯದ್ರಥಃ।।
ಆರ್ಜುನಿಯ ವಶದಲ್ಲಿ ಬಂದು ಅನಾಥನಂತೆ ಎಳೆದಾಡಲ್ಪಟ್ಟು ಬಿದ್ದಿದ್ದ ಪೌರವನನ್ನು ನೋಡಿ ಜಯದ್ರಥನು ಸಹಿಸಿಕೊಳ್ಳಲಿಲ್ಲ.
07013057a ಸ ಬರ್ಹಿಣಮಹಾವಾಜಂ ಕಿಂಕಿಣೀಶತಜಾಲವತ್।
07013057c ಚರ್ಮ ಚಾದಾಯ ಖಡ್ಗಂ ಚ ನದನ್ಪರ್ಯಪತದ್ರಥಾತ್।।
ನವಿಲುಗರಿಗಳಿಂದ ಮತ್ತು ಸಣ್ಣಸಣ್ಣ ಗಂಟೆಗಳಿಂದ ಅಲಂಕೃತಗೊಂಡಿದ್ದ ಗುರಾಣಿಯನ್ನೂ ಖಡ್ಗವನ್ನೂ ಹಿಡಿದು ಗರ್ಜಿಸುತ್ತಾ ರಥದಿಂದ ಧುಮುಕಿದನು.
07013058a ತತಃ ಸೈಂಧವಮಾಲೋಕ್ಯ ಕಾರ್ಷ್ಣಿರುತ್ಸೃಜ್ಯ ಪೌರವಂ।
07013058c ಉತ್ಪಪಾತ ರಥಾತ್ತೂರ್ಣಂ ಶ್ಯೇನವನ್ನಿಪಪಾತ ಚ।।
ಆಗ ಸೈಂಧವನನ್ನು ನೋಡಿ ಕಾರ್ಷ್ಣಿಯು ಪೌರವನನ್ನು ಅಲ್ಲಿಯೇ ಬಿಟ್ಟು ತಕ್ಷಣವೇ ರಥದಿಂದ ಧುಮುಕಿ ಗಿಡುಗದಂತೆ ಮೇಲೆ ಬಿದ್ದನು.
07013059a ಪ್ರಾಸಪಟ್ಟಿಶನಿಸ್ತ್ರಿಂಶಾಂ ಶತ್ರುಭಿಃ ಸಂಪ್ರವೇರಿತಾನ್।
07013059c ಚಿಚ್ಚೇದಾಥಾಸಿನಾ ಕಾರ್ಷ್ಣಿಶ್ಚರ್ಮಣಾ ಸಂರುರೋಧ ಚ।।
ಶತ್ರುಗಳು ತನ್ನ ಮೇಲೆ ಪ್ರಹರಿಸುತ್ತಿದ್ದ ಪ್ರಾಸ-ಪಟ್ಟಿಶ-ಖಡ್ಗಗಳನ್ನು ಕಾರ್ಷ್ಣಿಯು ಗುರಾಣಿಯಿಂದ ತಡೆಯುತ್ತಾ ಖಡ್ಗದಿಂದ ಅವುಗಳನ್ನು ತುಂಡರಿಸಿದನು.
07013060a ಸ ದರ್ಶಯಿತ್ವಾ ಸೈನ್ಯಾನಾಂ ಸ್ವಬಾಹುಬಲಮಾತ್ಮನಃ।
07013060c ತಮುದ್ಯಮ್ಯ ಮಹಾಖಡ್ಗಂ ಚರ್ಮ ಚಾಥ ಪುನರ್ಬಲೀ।।
07013061a ವೃದ್ಧಕ್ಷತ್ರಸ್ಯ ದಾಯಾದಂ ಪಿತುರತ್ಯಂತವೈರಿಣಂ।
07013061c ಸಸಾರಾಭಿಮುಖಃ ಶೂರಃ ಶಾರ್ದೂಲ ಇವ ಕುಂಜರಂ।।
ತನ್ನ ಬಾಹುಬಲವನ್ನು ಸೇನೆಗಳಿಗೆ ತೋರಿಸುತ್ತಾ ಆ ಬಲಿ ಶೂರನು ಪುನಃ ಮಹಾಖಡ್ಗವನ್ನೂ ಗುರಾಣಿಯನ್ನು ಮೇಲೆತ್ತಿ ವೃದ್ಧಕ್ಷತ್ರನ ಮಗ, ತನ್ನ ತಂದೆಯ ಅತ್ಯಂತ ವೈರಿಯಾಗಿದ್ದ ಜಯದ್ರಥನನ್ನು ಆನೆಯನ್ನು ಸಿಂಹವು ಹೇಗೋ ಹಾಗೆ ಸಲಿಲವಾಗಿ ಎದುರಿಸಿದನು.
07013062a ತೌ ಪರಸ್ಪರಮಾಸಾದ್ಯ ಖಡ್ಗದಂತನಖಾಯುಧೌ।
07013062c ಹೃಷ್ಟವತ್ಸಂಪ್ರಜಹ್ರಾತೇ ವ್ಯಾಘ್ರಕೇಸರಿಣಾವಿವ।।
ಖಡ್ಗ, ಹಲ್ಲು ಮತ್ತು ಉಗುರುಗಳೇ ಆಯುಧಗಳಾಗಿದ್ದ ಅವರಿಬ್ಬರೂ ಪರಸ್ಪರರನ್ನು ಎದುರಿಸಿ ಸಂತೋಷಗೊಂಡು ಸಿಂಹ ಮತ್ತು ಹುಲಿಗಳಂತೆ ಹೊಡೆದಾಡಿದರು.
07013063a ಸಂಪಾತೇಷ್ವಭಿಪಾತೇಷು ನಿಪಾತೇಷ್ವಸಿಚರ್ಮಣೋಃ।
07013063c ನ ತಯೋರಂತರಂ ಕಶ್ಚಿದ್ದದರ್ಶ ನರಸಿಂಹಯೋಃ।।
ಆ ಇಬ್ಬರು ನರಸಿಂಹರ ನಡುವೆ ಖಡ್ಗ-ಗುರಾಣಿಗಳ ಸಂಪಾತ-ಅಭಿಪಾತ-ನಿಪಾತಗಳಲ್ಲಿ ಯಾವ ಅಂತರವೂ ಕಾಣಲಿಲ್ಲ.
07013064a ಅವಕ್ಷೇಪೋಽಸಿನಿರ್ಹ್ರಾದಃ ಶಸ್ತ್ರಾಂತರನಿದರ್ಶನಂ।
07013064c ಬಾಹ್ಯಾಂತರನಿಪಾತಶ್ಚ ನಿರ್ವಿಶೇಷಮದೃಶ್ಯತ।।
ಖಡ್ಗಪ್ರಹಾರ, ಖಡ್ಗಸಂಚಾಲನದ ಶಬ್ಧ, ಅನೇಕ ವಿಧವಾದ ವರಸೆಗಳ ಪ್ರದರ್ಶನ, ಶರೀರದ ಮುಂಬಾಗ-ಹಿಂಬಾಗಗಳಲ್ಲಿ ಸಮಯವರಿತು ಪ್ರಹರಿಸುವಿಕೆ ಇವುಗಳಲ್ಲಿ ಅವರಿಬ್ಬರ ನಡುವೆ ಅಂತರವೇ ಕಾಣಲಿಲ್ಲ.
07013065a ಬಾಹ್ಯಮಾಭ್ಯಂತರಂ ಚೈವ ಚರಂತೌ ಮಾರ್ಗಮುತ್ತಮಂ।
07013065c ದದೃಶಾತೇ ಮಹಾತ್ಮಾನೌ ಸಪಕ್ಷಾವಿವ ಪರ್ವತೌ।।
ಶರೀರದ ಮುಂದೆ ಮತ್ತು ಹಿಂದೆ ತಿರುಗಿಸುತ್ತಾ, ಉತ್ತಮ ಮಾರ್ಗದಲ್ಲಿ ತಿರುಗುತ್ತಿರುವ ಆ ಇಬ್ಬರು ಮಹಾತ್ಮರು ರೆಕ್ಕೆಗಳಿರುವ ಪರ್ವತಗಳಂತೆ ಕಂಡರು.
07013066a ತತೋ ವಿಕ್ಷಿಪತಃ ಖಡ್ಗಂ ಸೌಭದ್ರಸ್ಯ ಯಶಸ್ವಿನಃ।
07013066c ಶರಾವರಣಪಕ್ಷಾಂತೇ ಪ್ರಜಹಾರ ಜಯದ್ರಥಃ।।
ಆಗ ಖಡ್ಗವನ್ನು ತಿರುಗಿಸುತ್ತಿದ್ದ ಸೌಭದ್ರನ ಗುರಾಣಿಯ ಒಂದು ಭಾಗವನ್ನು ಯಶಸ್ವಿ ಜಯದ್ರಥನು ಹೊಡೆದನು.
07013067a ರುಕ್ಮಪಕ್ಷಾಂತರೇ ಸಕ್ತಸ್ತಸ್ಮಿಂಶ್ಚರ್ಮಣಿ ಭಾಸ್ವರೇ।
07013067c ಸಿಂಧುರಾಜಬಲೋದ್ಧೂತಃ ಸೋಽಭಜ್ಯತ ಮಹಾನಸಿಃ।।
ಬಂಗಾರದ ತಗುಡಿನಿಂದ ಮಾಡಿದ್ದ ಗುರಾಣಿಯಲ್ಲಿ ಚುಚ್ಚಿಕೊಂಡಿದ್ದ ತನ್ನ ಮಹಾ ಖಡ್ಗವನ್ನು ಸಿಂಧುರಾಜನು ಬಲವನ್ನುಪಯೋಗಿಸಿ ಅಲ್ಲಾಡಿಸಿ ಕೀಳಲು ಹೋದಾಗ ಅದು ಅಲ್ಲಿಯೇ ತುಂಡಾಯಿತು.
07013068a ಭಗ್ನಮಾಜ್ಞಾಯ ನಿಸ್ತ್ರಿಂಶಮವಪ್ಲುತ್ಯ ಪದಾನಿ ಷಟ್।
07013068c ಸೋಽದೃಶ್ಯತ ನಿಮೇಷೇಣ ಸ್ವರಥಂ ಪುನರಾಸ್ಥಿತಃ।।
ತನ್ನ ಖಡ್ಗವು ತುಂಡಾದುದನ್ನು ಗಮನಿಸಿದ ಜಯದ್ರಥನು ಒಡನೆಯೇ ಆರು ಅಡಿಗಳಷ್ಟು ಹಾರಿ ನಿಮಿಷದಲ್ಲಿ ತನ್ನ ರಥದಲ್ಲಿ ಕುಳಿತಿದ್ದುದು ಪ್ರೇಕ್ಷಣೀಯವಾಗಿತ್ತು.
07013069a ತಂ ಕಾರ್ಷ್ಣಿಂ ಸಮರಾನ್ಮುಕ್ತಮಾಸ್ಥಿತಂ ರಥಮುತ್ತಮಂ।
07013069c ಸಹಿತಾಃ ಸರ್ವರಾಜಾನಃ ಪರಿವವ್ರುಃ ಸಮಂತತಃ।।
ಕಾರ್ಷ್ಣಿ ಅಭಿಮನ್ಯುವೂ ಕೂಡ ಯುದ್ಧವನ್ನು ನಿಲ್ಲಿಸಿ ತನ್ನ ಉತ್ತಮ ರಥದಲ್ಲಿ ಕುಳಿತುಕೊಂಡನು. ಆಗ ಸರ್ವ ರಾಜರೂ ಒಟ್ಟಿಗೇ ಎಲ್ಲ ಕಡೆಗಳಿಂದ ಅವನನ್ನು ಸುತ್ತುವರೆದರು.
07013070a ತತಶ್ಚರ್ಮ ಚ ಖಡ್ಗಂ ಚ ಸಮುತ್ಕ್ಷಿಪ್ಯ ಮಹಾಬಲಃ।
07013070c ನನಾದಾರ್ಜುನದಾಯಾದಃ ಪ್ರೇಕ್ಷಮಾಣೋ ಜಯದ್ರಥಂ।।
ಆಗ ಖಡ್ಗವನ್ನೂ ಗುರಾಣಿಯನ್ನೂ ಮೇಲೆತ್ತಿ ಮಹಾಬಲ ಅರ್ಜುನನ ಮಗನು ಜಯದ್ರಥನನ್ನು ನೋಡುತ್ತಾ ಗರ್ಜಿಸಿದನು.
07013071a ಸಿಂಧುರಾಜಂ ಪರಿತ್ಯಜ್ಯ ಸೌಭದ್ರಃ ಪರವೀರಹಾ।
07013071c ತಾಪಯಾಮಾಸ ತತ್ಸೈನ್ಯಂ ಭುವನಂ ಭಾಸ್ಕರೋ ಯಥಾ।।
ಸಿಂಧುರಾಜನನ್ನು ಬಿಟ್ಟು ಪರವೀರಹ ಸೌಭದ್ರನು ಆ ಸೈನ್ಯವನ್ನು ಭುವನವನ್ನು ಭಾಸ್ಕರನು ಹೇಗೋ ಹಾಗೆ ಸುಡತೊಡಗಿದನು.
07013072a ತಸ್ಯ ಸರ್ವಾಯಸೀಂ ಶಕ್ತಿಂ ಶಲ್ಯಃ ಕನಕಭೂಷಣಾಂ।
07013072c ಚಿಕ್ಷೇಪ ಸಮರೇ ಘೋರಾಂ ದೀಪ್ತಾಮಗ್ನಿಶಿಖಾಮಿವ।।
ಆಗ ಶಲ್ಯನು ಅಗ್ನಿಯ ಜ್ವಾಲೆಯಂತೆ ಪ್ರದೀಪ್ತವಾಗಿದ್ದ ಕನಭೂಷಣ ಲೋಹಮಯ ಘೋರ ಶಕ್ತಿಯನ್ನು ಅವನ ಮೇಲೆ ಎಸೆದನು.
07013073a ತಾಮವಪ್ಲುತ್ಯ ಜಗ್ರಾಹ ಸಕೋಶಂ ಚಾಕರೋದಸಿಂ।
07013073c ವೈನತೇಯೋ ಯಥಾ ಕಾರ್ಷ್ಣಿಃ ಪತಂತಮುರಗೋತ್ತಮಂ।।
ಬೀಳುತ್ತಿರುವ ಉತ್ತಮ ನಾಗವನ್ನು ವೈನತೇಯನು ಹೇಗೋ ಹಾಗೆ ಕಾರ್ಷ್ಣಿಯು ಅದನ್ನು ಹಾರಿ ಹಿಡಿದು, ತನ್ನ ಒರಸೆಯಿಂದ ಖಡ್ಗವನ್ನು ಎಳೆದು ತೆಗೆದನು.
07013074a ತಸ್ಯ ಲಾಘವಮಾಜ್ಞಾಯ ಸತ್ತ್ವಂ ಚಾಮಿತತೇಜಸಃ।
07013074c ಸಹಿತಾಃ ಸರ್ವರಾಜಾನಃ ಸಿಂಹನಾದಮಥಾನದನ್।।
ಆ ಅಮಿತತೇಜಸ್ವಿಯ ಸತ್ತ್ವವನ್ನೂ ಹಸ್ತಲಾಘವವನ್ನೂ ತಿಳಿದ ಸರ್ವ ರಾಜರೂ ಒಟ್ಟಿಗೇ ಸಿಂಹನಾದಗೈದರು.
07013075a ತತಸ್ತಾಮೇವ ಶಲ್ಯಸ್ಯ ಸೌಭದ್ರಃ ಪರವೀರಹಾ।
07013075c ಮುಮೋಚ ಭುಜವೀರ್ಯೇಣ ವೈಡೂರ್ಯವಿಕೃತಾಜಿರಾಂ।।
ಆಗ ಶಲ್ಯನ ಅದೇ ವೈಡೂರ್ಯ ಸಮಲಂಕೃತ ಶಕ್ತಿಯನ್ನು ಪರವೀರಹ ಸೌಭದ್ರನು ತನ್ನ ಭುಜವೀರ್ಯದಿಂದ ಎಸೆದನು.
07013076a ಸಾ ತಸ್ಯ ರಥಮಾಸಾದ್ಯ ನಿರ್ಮುಕ್ತಭುಜಗೋಪಮಾ।
07013076c ಜಘಾನ ಸೂತಂ ಶಲ್ಯಸ್ಯ ರಥಾಚ್ಚೈನಮಪಾತಯತ್।।
ಪೊರೆಯನ್ನು ಬಿಟ್ಟ ಸರ್ಪದಂತಿದ್ದ ಅದು ಅವನ ರಥವನ್ನು ತಲುಪಿ ಶಲ್ಯನ ಸೂತನನ್ನು ಕೊಂದು ಅವನನ್ನು ರಥದಿಂದ ಕೆಳಗೆ ಉರುಳಿಸಿತು.
07013077a ತತೋ ವಿರಾಟದ್ರುಪದೌ ಧೃಷ್ಟಕೇತುರ್ಯುಧಿಷ್ಠಿರಃ।
07013077c ಸಾತ್ಯಕಿಃ ಕೇಕಯಾ ಭೀಮೋ ಧೃಷ್ಟದ್ಯುಮ್ನಶಿಖಂಡಿನೌ।
07013077e ಯಮೌ ಚ ದ್ರೌಪದೇಯಾಶ್ಚ ಸಾಧು ಸಾಧ್ವಿತಿ ಚುಕ್ರುಶುಃ।।
ಆಗ ವಿರಾಟ-ದ್ರುಪದರು, ಧೃಷ್ಟಕೇತು-ಯುಧಿಷ್ಠಿರರು, ಸಾತ್ಯಕಿ, ಕೇಕಯರು, ಭೀಮ, ಧೃಷ್ಟದ್ಯುಮ್ನ-ಶಿಖಂಡಿಯರು, ಯಮಳರು ಮತ್ತು ದ್ರೌಪದೇಯರು “ಸಾಧು! ಸಾಧು!” ಎಂದು ಕೂಗಿದರು.
07013078a ಬಾಣಶಬ್ದಾಶ್ಚ ವಿವಿಧಾಃ ಸಿಂಹನಾದಾಶ್ಚ ಪುಷ್ಕಲಾಃ।
07013078c ಪ್ರಾದುರಾಸನ್ ಹರ್ಷಯಂತಃ ಸೌಭದ್ರಮಪಲಾಯಿನಂ।
07013078e ತನ್ನಾಮೃಷ್ಯಂತ ಪುತ್ರಾಸ್ತೇ ಶತ್ರೋರ್ವಿಜಯಲಕ್ಷಣಂ।।
ಯುದ್ಧದಲ್ಲಿ ಪಲಾಯನವನ್ನರಿಯದ ಸೌಭದ್ರನನ್ನು ಹರ್ಷಗೊಳಿಸುತ್ತಾ ವಿವಿಧ ಬಾಣ ಪ್ರಹಾರದ ಶಬ್ಧಗಳೂ ಪುಷ್ಕಲ ಸಿಂಹನಾದಗಳೂ ಕೇಳಿ ಬಂದವು. ಶತ್ರುಗಳ ವಿಜಯಸೂಚಕವಾದ ಅದನ್ನು ನಿನ್ನ ಪುತ್ರರು ಸಹಿಸಿಕೊಳ್ಳಲಿಲ್ಲ.
07013079a ಅಥೈನಂ ಸಹಸಾ ಸರ್ವೇ ಸಮಂತಾನ್ನಿಶಿತೈಃ ಶರೈಃ।
07013079c ಅಭ್ಯಾಕಿರನ್ಮಹಾರಾಜ ಜಲದಾ ಇವ ಪರ್ವತಂ।।
ಮಹಾರಾಜ! ಆಗ ಅವರೆಲ್ಲರೂ ಅವನನ್ನು ನಿಶಿತ ಶರಗಳಿಂದ ಎಲ್ಲಕಡೆಗಳಿಂದ ಪರ್ವತವನ್ನು ಮೋಡಗಳು ಹೇಗೋ ಹಾಗೆ ಮುಸುಕಿದರು.
07013080a ತೇಷಾಂ ಚ ಪ್ರಿಯಮನ್ವಿಚ್ಚನ್ಸೂತಸ್ಯ ಚ ಪರಾಭವಾತ್।
07013080c ಆರ್ತಾಯನಿರಮಿತ್ರಘ್ನಃ ಕ್ರುದ್ಧಃ ಸೌಭದ್ರಮಭ್ಯಯಾತ್।।
ತನ್ನ ಸೂತನ ಪರಾಭವದಿಂದ ಮತ್ತು ನಿನ್ನವರಿಗೆ ಪ್ರಿಯವಾದುದನ್ನು ಮಾಡಲು ಅಮಿತ್ರಘ್ನ ಶಲ್ಯನು ಕ್ರುದ್ಧನಾಗಿ ಸೌಭದ್ರನನ್ನು ಪುನಃ ಆಕ್ರಮಣಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಅಭಿಮನ್ಯುಪರಾಕ್ರಮೇ ತ್ರಯೋದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ಹದಿಮೂರನೇ ಅಧ್ಯಾಯವು.