ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ದ್ರೋಣಾಭಿಷೇಕ ಪರ್ವ
ಅಧ್ಯಾಯ 12
ಸಾರ
ಅರ್ಜುನನಿಂದ ಯುಧಿಷ್ಠಿರನಿಗೆ ಆಶ್ವಾಸನೆ (1-13). ಹನ್ನೊಂದನೆಯ ದಿನದ ಯುದ್ಧಾರಂಭ (14-28).
07012001 ಸಂಜಯ ಉವಾಚ।
07012001a ತತಸ್ತೇ ಸೈನಿಕಾಃ ಶ್ರುತ್ವಾ ತಂ ಯುಧಿಷ್ಠಿರನಿಗ್ರಹಂ।
07012001c ಸಿಂಹನಾದರವಾಂಶ್ಚಕ್ರುರ್ಬಾಣಶಂಖರವೈಃ ಸಹ।।
ಸಂಜಯನು ಹೇಳಿದನು: “ಯುಧಿಷ್ಠಿರನ ಸೆರೆಹಿಡಿಯುವುದರ ಕುರಿತು ಅದನ್ನು ಕೇಳಿದ ಸೈನಿಕರು ಸಿಂಹನಾದಗೈದರು. ಬಾಣ ಶಂಖಗಳಿಂದ ತುಮುಲ ಶಬ್ಧಮಾಡಿದರು.
07012002a ತತ್ತು ಸರ್ವಂ ಯಥಾವೃತ್ತಂ ಧರ್ಮರಾಜೇನ ಭಾರತ।
07012002c ಆಪ್ತೈರಾಶು ಪರಿಜ್ಞಾತಂ ಭಾರದ್ವಾಜಚಿಕೀರ್ಷಿತಂ।।
ಭಾರತ! ಭಾರದ್ವಾಜನು ಮಾಡಿದ ಪ್ರತಿಜ್ಞೆಯನ್ನು ಸಂಪೂರ್ಣವಾಗಿ ನಡೆದಂತೆ ಆಪ್ತರಿಂದ ಧರ್ಮರಾಜನು ತಿಳಿದುಕೊಂಡನು.
07012003a ತತಃ ಸರ್ವಾನ್ಸಮಾನಾಯ್ಯ ಭ್ರಾತೄನ್ಸೈನ್ಯಾಂಶ್ಚ ಸರ್ವಶಃ।
07012003c ಅಬ್ರವೀದ್ಧರ್ಮರಾಜಸ್ತು ಧನಂಜಯಮಿದಂ ವಚಃ।।
ಆಗ ಎಲ್ಲಕಡೆಗಳಿಂದ ತಮ್ಮಂದಿರನ್ನೂ ಸೇನೆಗಳನ್ನೂ ಕರೆಯಿಸಿಕೊಂಡು ಧರ್ಮರಾಜನು ಧನಂಜಯನಿಗೆ ಈ ಮಾತುಗಳನ್ನಾಡಿದನು.
07012004a ಶ್ರುತಂ ತೇ ಪುರುಷವ್ಯಾಘ್ರ ದ್ರೋಣಸ್ಯಾದ್ಯ ಚಿಕೀರ್ಷಿತಂ।
07012004c ಯಥಾ ತನ್ನ ಭವೇತ್ಸತ್ಯಂ ತಥಾ ನೀತಿರ್ವಿಧೀಯತಾಂ।।
“ಪುರುಷವ್ಯಾಘ್ರ! ಇಂದು ದ್ರೋಣನು ಮಾಡಿದ ಪ್ರತಿಜ್ಞೆಯನ್ನು ನೀನೂ ಕೇಳಿದೆಯಲ್ಲವೇ? ಅದು ಸತ್ಯವಾಗದ ಹಾಗೆ ನೀತಿಯನ್ನು ರೂಪಿಸಬೇಕಾಗಿದೆ.
07012005a ಸಾಂತರಂ ಹಿ ಪ್ರತಿಜ್ಞಾತಂ ದ್ರೋಣೇನಾಮಿತ್ರಕರ್ಶನ।
07012005c ತಚ್ಚಾಂತರಮಮೋಘೇಷೌ ತ್ವಯಿ ತೇನ ಸಮಾಹಿತಂ।।
ಅಮಿತ್ರಕರ್ಶನ! ದ್ರೋಣನ ಪ್ರತಿಜ್ಞೆಯಲ್ಲಿ ಒಂದು ಛಿದ್ರವನ್ನಿಟ್ಟಿದ್ದಾರೆಂದು ತಿಳಿದಿದೆ. ಆ ಛಿದ್ರವು ಯಶಸ್ವಿಯಾಗದೇ ಇರುವುದು ನಿನ್ನ ಮೇಲೆ ಅವಲಂಬಿಸಿದೆ.
07012006a ಸ ತ್ವಮದ್ಯ ಮಹಾಬಾಹೋ ಯುಧ್ಯಸ್ವ ಮದನಂತರಂ।
07012006c ಯಥಾ ದುರ್ಯೋಧನಃ ಕಾಮಂ ನೇಮಂ ದ್ರೋಣಾದವಾಪ್ನುಯಾತ್।।
ಮಹಾಬಾಹೋ! ದ್ರೋಣನ ಪ್ರತಿಜ್ಞೆಯ ಮೂಲಕವಾಗಿ ದುರ್ಯೋಧನನು ತನ್ನ ಇಚ್ಛೆಯನ್ನು ಪೂರೈಸಿಕೊಳ್ಳದ ಹಾಗೆ ಇಂದು ನೀನು ನನ್ನ ಹತ್ತಿರವಿದ್ದೇ ಯುದ್ಧಮಾಡಬೇಕು!”
07012007 ಅರ್ಜುನ ಉವಾಚ।
07012007a ಯಥಾ ಮೇ ನ ವಧಃ ಕಾರ್ಯ ಆಚಾರ್ಯಸ್ಯ ಕಥಂ ಚನ।
07012007c ತಥಾ ತವ ಪರಿತ್ಯಾಗೋ ನ ಮೇ ರಾಜಂಶ್ಚಿಕೀರ್ಷಿತಃ।।
ಅರ್ಜುನನು ಹೇಳಿದನು: “ರಾಜನ್! ಆಚಾರ್ಯರ ವಧೆಯು ಎಂದೂ ಹೇಗೆ ನನ್ನ ಕೆಲಸವಲ್ಲವೋ ಹಾಗೆ ನಿನ್ನನ್ನು ಪರಿತ್ಯಜಿಸುವುದೂ ನಾನು ಇಚ್ಛಿಸುವ ಕೆಲಸವಲ್ಲ.
07012008a ಅಪ್ಯೇವಂ ಪಾಂಡವ ಪ್ರಾಣಾನುತ್ಸೃಜೇಯಮಹಂ ಯುಧಿ।
07012008c ಪ್ರತೀಯಾಂ ನಾಹಮಾಚಾರ್ಯಂ ತ್ವಾಂ ನ ಜಹ್ಯಾಂ ಕಥಂ ಚನ।।
ಪಾಂಡವ! ಯುದ್ಧದಲ್ಲಿ ನಾನು ಪ್ರಾಣಗಳನ್ನು ತ್ಯಜಿಸಿಯೇನು. ಆದರೆ ಆಚಾರ್ಯರ ಕುರಿತು ವಿರೋಧಭಾವನೆಯನ್ನು ಮಾತ್ರ ಖಂಡಿತವಾಗಿಯೂ ಇಟ್ಟುಕೊಳ್ಳುವುಲ್ಲ.
07012009a ತ್ವಾಂ ನಿಗೃಹ್ಯಾಹವೇ ರಾಜನ್ಧಾರ್ತರಾಷ್ಟ್ರೋ ಯಮಿಚ್ಚತಿ।
07012009c ನ ಸ ತಂ ಜೀವಲೋಕೇಽಸ್ಮಿನ್ಕಾಮಂ ಪ್ರಾಪ್ತಃ ಕಥಂ ಚನ।।
ರಾಜನ್! ನಿನ್ನನ್ನು ಸಮರದಲ್ಲಿ ಬಂಧಿಸಲು ಧಾರ್ತರಾಷ್ಟ್ರನು ಏನು ಇಚ್ಛಿಸಿರುವನೋ ಆ ಬಯಕೆಯನ್ನು ಅವನು ಈ ಜೀವಲೋಕದಲ್ಲಿ ಎಂದೂ ಪೂರೈಸಿಕೊಳ್ಳಲಾರ.
07012010a ಪ್ರಪತೇದ್ದೌಃ ಸನಕ್ಷತ್ರಾ ಪೃಥಿವೀ ಶಕಲೀಭವೇತ್।
07012010c ನ ತ್ವಾಂ ದ್ರೋಣೋ ನಿಗೃಹ್ಣೀಯಾಜ್ಜೀವಮಾನೇ ಮಯಿ ಧ್ರುವಂ।।
ನಕ್ಷತ್ರಸಹಿತವಾಗಿ ಆಕಾಶವೇ ಕೆಳಗೆ ಬೀಳಬಹುದು. ಭೂಮಿಯು ಚೂರುಚೂರಾಗಬಹುದು. ಆದರೆ ನಾನು ಜೀವಿಸಿರುವಾಗ ದ್ರೋಣರು ನಿನ್ನನ್ನು ಸೆರೆಹಿಡಿಯಲಾರರು. ಇದು ಖಂಡಿತ.
07012011a ಯದಿ ತಸ್ಯ ರಣೇ ಸಾಹ್ಯಂ ಕುರುತೇ ವಜ್ರಭೃತ್ಸ್ವಯಂ।
07012011c ದೇವೈರ್ವಾ ಸಹಿತೋ ದೈತ್ಯೈರ್ನ ತ್ವಾಂ ಪ್ರಾಪ್ಸ್ಯತ್ಯಸೌ ಮೃಧೇ।।
ಒಂದುವೇಳೆ ಅವನಿಗೆ ರಣದಲ್ಲಿ ಸಹಾಯವಾಗಿ ಸ್ವಯಂ ವಜ್ರಭೃತುವು ದೇವ ಅಥವಾ ದೈತ್ಯರೊಂದಿಗೆ ಬಂದರೂ ಕೂಡ ಅವನು ನಿನ್ನನ್ನು ಯುದ್ಧದಲ್ಲಿ ಬಂಧಿಸಲಾರನು.
07012012a ಮಯಿ ಜೀವತಿ ರಾಜೇಂದ್ರ ನ ಭಯಂ ಕರ್ತುಮರ್ಹಸಿ।
07012012c ದ್ರೋಣಾದಸ್ತ್ರಭೃತಾಂ ಶ್ರೇಷ್ಠಾತ್ಸರ್ವಶಸ್ತ್ರಭೃತಾಮಪಿ।।
ರಾಜೇಂದ್ರ! ನಾನು ಜೀವಿಸಿರುವಾಗ ನೀನು ಅಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣರಿಗಾಗಲೀ ಸರ್ವ ಶಸ್ತ್ರಭೃತರಿಗಾಗಲೀ ಭಯಪಡಬಾರದು.
07012013a ನ ಸ್ಮರಾಮ್ಯನೃತಾಂ ವಾಚಂ ನ ಸ್ಮರಾಮಿ ಪರಾಜಯಂ।
07012013c ನ ಸ್ಮರಾಮಿ ಪ್ರತಿಶ್ರುತ್ಯ ಕಿಂ ಚಿದಪ್ಯನಪಾಕೃತಂ।।
ಸುಳ್ಳುಹೇಳಿರುವುದು ನೆನಪಿಲ್ಲ. ಪರಾಜಯಗೊಂಡಿದುದು ನೆನಪಿಲ್ಲ. ಎಂದಾದರೂ ಪ್ರತಿಜ್ಞೆಯನ್ನು ಸುಳ್ಳಾಗಿಸಿ ನಡೆದುಕೊಂಡಿದುದರ ನೆನಪಿಲ್ಲ.””
07012014 ಸಂಜಯ ಉವಾಚ।
07012014a ತತಃ ಶಂಖಾಶ್ಚ ಭೇರ್ಯಶ್ಚ ಮೃದಂಗಾಶ್ಚಾನಕೈಃ ಸಹ।
07012014c ಪ್ರಾವಾದ್ಯಂತ ಮಹಾರಾಜ ಪಾಂಡವಾನಾಂ ನಿವೇಶನೇ।।
ಸಂಜಯನು ಹೇಳಿದನು: “ಮಹಾರಾಜ! ಆಗ ಪಾಂಡವರ ಶಿಬಿರದಲ್ಲಿ ಶಂಖ, ಭೇರಿ, ಮೃದಂಗ, ಅನಕಗಳನ್ನು ಒಟ್ಟಿಗೇ ಬಾರಿಸಲಾಯಿತು.
07012015a ಸಿಂಹನಾದಶ್ಚ ಸಂಜಜ್ಞೇ ಪಾಂಡವಾನಾಂ ಮಹಾತ್ಮನಾಂ।
07012015c ಧನುರ್ಜ್ಯಾತಲಶಬ್ದಶ್ಚ ಗಗನಸ್ಪೃಕ್ಸುಭೈರವಃ।।
ಮಹಾತ್ಮ ಪಾಂಡವರ ಸಿಂಹನಾದವೂ ಸೇರಿಕೊಂಡು ಕೇಳಿಬಂದಿತು. ಧನುಸ್ಸಿನ ಭಯಂಕರ ಟೇಂಕಾರ ಶಬ್ಧವು ಗಗನದಲ್ಲಿ ಮೊಳಗಿತು.
07012016a ತಂ ಶ್ರುತ್ವಾ ಶಂಖನಿರ್ಘೋಷಂ ಪಾಂಡವಸ್ಯ ಮಹಾತ್ಮನಃ।
07012016c ತ್ವದೀಯೇಷ್ವಪ್ಯನೀಕೇಷು ವಾದಿತ್ರಾಣ್ಯಭಿಜಘ್ನಿರೇ।।
ಮಹಾತ್ಮ ಪಾಂಡವರ ಶಂಖನಿರ್ಘೋಷವನ್ನು ಕೇಳಿ ನಿನ್ನವರ ಸೇನೆಗಳಲ್ಲಿಯೂ ಕೂಡ ವಾದಿತ್ರಾದಿ ವಾದ್ಯಗಳನ್ನು ಬಾರಿಸಲಾಯಿತು.
07012017a ತತೋ ವ್ಯೂಢಾನ್ಯನೀಕಾನಿ ತವ ತೇಷಾಂ ಚ ಭಾರತ।
07012017c ಶನೈರುಪೇಯುರನ್ಯೋನ್ಯಂ ಯೋತ್ಸ್ಯಮಾನಾನಿ ಸಂಯುಗೇ।।
ಭಾರತ! ಆಗ ನಿನ್ನ ಮತ್ತು ಅವರ ಸೇನೆಗಳನ್ನು ವ್ಯೂಹಗಳಲ್ಲಿ ರಚಿಸಲಾಯಿತು. ಮೆಲ್ಲ ಮೆಲ್ಲನೆ ರಣರಂಗದಲ್ಲಿ ಅನ್ಯೋನ್ಯರೊಡನೆ ಯುದ್ಧಮಾಡತೊಡಗಿದರು.
07012018a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣಂ।
07012018c ಪಾಂಡವಾನಾಂ ಕುರೂಣಾಂ ಚ ದ್ರೋಣಪಾಂಚಾಲ್ಯಯೋರಪಿ।।
ಆಗ ಪಾಂಡವ-ಕೌರವರ ಮತ್ತು ದ್ರೋಣ-ಪಾಂಚಾಲ್ಯರ ರೋಮಾಂಚಕಾರಿ ತುಮುಲ ಯುದ್ಧವು ನಡೆಯಿತು.
07012019a ಯತಮಾನಾಃ ಪ್ರಯತ್ನೇನ ದ್ರೋಣಾನೀಕವಿಶಾತನೇ।
07012019c ನ ಶೇಕುಃ ಸೃಂಜಯಾ ರಾಜಂಸ್ತದ್ಧಿ ದ್ರೋಣೇನ ಪಾಲಿತಂ।।
ರಾಜನ್! ದ್ರೋಣನ ಸೇನೆಯನ್ನು ನಾಶಗೊಳಿಸಲು ಪ್ರಯತ್ನಿಸಿದರೂ ದ್ರೋಣನಿಂದ ಪಾಲಿತವಾದ ಸೇನೆಯನ್ನು ವಿನಾಶಗೊಳಿಸಲು ಸೃಂಜಯರು ಶಕ್ಯರಾಗಲಿಲ್ಲ.
07012020a ತಥೈವ ತವ ಪುತ್ರಸ್ಯ ರಥೋದಾರಾಃ ಪ್ರಹಾರಿಣಃ।
07012020c ನ ಶೇಕುಃ ಪಾಂಡವೀಂ ಸೇನಾಂ ಪಾಲ್ಯಮಾನಾಂ ಕಿರೀಟಿನಾ।।
ಹಾಗೆಯೇ ನಿನ್ನ ಮಗನ ರಥೋದಾರ ಪ್ರಹಾರಿಗಳೂ ಕೂಡ ಕಿರೀಟಿಯಿಂದ ಪಾಲಿತಗೊಂಡ ಪಾಂಡವರ ಸೇನೆಯನ್ನು ನಾಶಗೊಳಿಸಲು ಶಕ್ಯರಾಗಲಿಲ್ಲ.
07012021a ಆಸ್ತಾಂ ತೇ ಸ್ತಿಮಿತೇ ಸೇನೇ ರಕ್ಷ್ಯಮಾಣೇ ಪರಸ್ಪರಂ।
07012021c ಸಂಪ್ರಸುಪ್ತೇ ಯಥಾ ನಕ್ತಂ ವನರಾಜ್ಯೌ ಸುಪುಷ್ಪಿತೇ।।
ರಾತ್ರಿವೇಳೆ ಸುಪುಷ್ಪಿತ ವನರಾಜಿಗಳು ಹಂದಾಡದೇ ನಿದ್ರಿಸುತ್ತಿರುವಂತೆ ಪರಸ್ಪರರಿಂದ ರಕ್ಷಿಸಲ್ಪಟ್ಟ ಆ ಸೇನೆಗಳು ಸ್ತಿಮಿತವಾಗಿಬಿಟ್ಟಿದ್ದವು.
07012022a ತತೋ ರುಕ್ಮರಥೋ ರಾಜನ್ನರ್ಕೇಣೇವ ವಿರಾಜತಾ।
07012022c ವರೂಥಿನಾ ವಿನಿಷ್ಪತ್ಯ ವ್ಯಚರತ್ಪೃತನಾಂತರೇ।।
ಆಗ ರಾಜನ್! ರುಕ್ಮರಥ ದ್ರೋಣನು ಸೂರ್ಯನಂತೆ ವಿರಾಜಿಸುತ್ತಾ ಸೈನ್ಯದ ಗುಂಪಿನಿಂದ ಹೊರಬಂದು ಸೇನಾವಿಭಾಗಗಳ ಮುಂಭಾಗದಲ್ಲಿ ಸಂಚರಿಸತೊಡಗಿದನು.
07012023a ತಮುದ್ಯತಂ ರಥೇನೈಕಮಾಶುಕಾರಿಣಮಾಹವೇ।
07012023c ಅನೇಕಮಿವ ಸಂತ್ರಾಸಾನ್ಮೇನಿರೇ ಪಾಂಡುಸೃಂಜಯಾಃ।।
ಆಹವದಲ್ಲಿ ಒಂದೇರಥದಲ್ಲಿ ಕುಳಿತು ಬಾಣಗಳ ಮಳೆಯನ್ನು ಅವ್ಯಾಹತವಾಗಿ ಸುರಿಸಲು ಅನೇಕ ದ್ರೋಣರು ತಮ್ಮೊಡನೆ ಹೋರಾಡುತ್ತಿರುವರೋ ಏನೋ ಎಂದು ಪಾಂಡು-ಸೃಂಜಯರು ಅಂದುಕೊಂಡರು.
07012024a ತೇನ ಮುಕ್ತಾಃ ಶರಾ ಘೋರಾ ವಿಚೇರುಃ ಸರ್ವತೋದಿಶಂ।
07012024c ತ್ರಾಸಯಂತೋ ಮಹಾರಾಜ ಪಾಂಡವೇಯಸ್ಯ ವಾಹಿನೀಂ।।
ಮಹಾರಾಜ! ಅವನು ಬಿಟ್ಟ ಘೋರ ಶರಗಳು ಎಲ್ಲ ದಿಕ್ಕುಗಳಲ್ಲಿ ಹರಡಿ ಪಾಂಡವೇಯನ ಸೇನೆಯನ್ನು ಬಹುವಾಗಿ ಭಯಪಡಿಸಿದವು.
07012025a ಮಧ್ಯಂ ದಿನಮನುಪ್ರಾಪ್ತೋ ಗಭಸ್ತಿಶತಸಂವೃತಃ।
07012025c ಯಥಾದೃಶ್ಯತ ಘರ್ಮಾಂಶುಸ್ತಥಾ ದ್ರೋಣೋಽಪ್ಯದೃಶ್ಯತ।।
ನೂರಾರು ಕಿರಣಗಳ ಸೂರ್ಯನು ಮಧ್ಯಾಹ್ನದ ಹೊತ್ತು ತನ್ನ ಉಷ್ಣತೆಯಿಂದ ಸುಡುವಂತೆ ದ್ರೋಣನು ಕಂಡನು.
07012026a ನ ಚೈನಂ ಪಾಂಡವೇಯಾನಾಂ ಕಶ್ಚಿಚ್ಚಕ್ನೋತಿ ಮಾರಿಷ।
07012026c ವೀಕ್ಷಿತುಂ ಸಮರೇ ಕ್ರುದ್ಧಂ ಮಹೇಂದ್ರಮಿವ ದಾನವಾಃ।।
ಮಾರಿಷ! ಸಮರದಲ್ಲಿ ಕ್ರುದ್ಧನಾದ ಮಹೇಂದ್ರನನ್ನು ದಾನವರು ಹೇಗೋ ಹಾಗೆ ಅವನನ್ನು ನೋಡಲು ಪಾಂಡವರು ಯಾರೂ ಶಕ್ಯರಾಗಿರಲಿಲ್ಲ.
07012027a ಮೋಹಯಿತ್ವಾ ತತಃ ಸೈನ್ಯಂ ಭಾರದ್ವಾಜಃ ಪ್ರತಾಪವಾನ್।
07012027c ಧೃಷ್ಟದ್ಯುಮ್ನಬಲಂ ತೂರ್ಣಂ ವ್ಯಧಮನ್ನಿಶಿತೈಃ ಶರೈಃ।।
ಪ್ರತಾಪವಾನ್ ಭಾರದ್ವಾಜನು ಬೇಗನೇ ಸೇನೆಗಳನ್ನು ಮೂರ್ಛೆಗೊಳಿಸಿ ಧೃಷ್ಟದ್ಯುಮ್ನನ ಸೇನೆಯನ್ನು ನಿಶಿತ ಶರಗಳಿಂದ ವಧಿಸಿದನು.
07012028a ಸ ದಿಶಃ ಸರ್ವತೋ ರುದ್ಧ್ವಾ ಸಂವೃತ್ಯ ಖಮಜಿಹ್ಮಗೈಃ।
07012028c ಪಾರ್ಷತೋ ಯತ್ರ ತತ್ರೈವ ಮಮೃದೇ ಪಾಂಡುವಾಹಿನೀಂ।।
ಜಿಹ್ಮಗಗಳಿಂದ ಅವನು ಎಲ್ಲ ದಿಕ್ಕುಗಳನ್ನೂ ಆಕಾಶವನ್ನೂ ತುಂಬಿಸಿಬಿಟ್ಟನು. ಪಾರ್ಷತನು ಎಲ್ಲಿದ್ದನೋ ಅಲ್ಲಲ್ಲಿಯೇ ಪಾಂಡವ ವಾಹಿನಿಯನ್ನು ಮರ್ದಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಅರ್ಜುನಕೃತಯುಧಿಷ್ಠಿರಾಶ್ವಾಸನೇ ದ್ವಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಅರ್ಜುನಕೃತಯುಧಿಷ್ಠಿರಾಶ್ವಾಸನ ಎನ್ನುವ ಹನ್ನೆರಡನೇ ಅಧ್ಯಾಯವು.