ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ದ್ರೋಣಾಭಿಷೇಕ ಪರ್ವ
ಅಧ್ಯಾಯ 11
ಸಾರ
ದ್ರೋಣನ ಪ್ರತಿಜ್ಞೆ (1-31).
07011001 ಸಂಜಯ ಉವಾಚ।
07011001a ಹಂತ ತೇ ವರ್ಣಯಿಷ್ಯಾಮಿ ಸರ್ವಂ ಪ್ರತ್ಯಕ್ಷದರ್ಶಿವಾನ್।
07011001c ಯಥಾ ಸ ನ್ಯಪತದ್ದ್ರೋಣಃ ಸಾದಿತಃ ಪಾಂಡುಸೃಂಜಯೈಃ।।
ಸಂಜಯನು ಹೇಳಿದನು: “ಪ್ರತ್ಯಕ್ಷವಾಗಿ ಎಲ್ಲವನ್ನೂ ಕಂಡ ನಾನು ನಿನಗೆ ಹೇಗೆ ಪಾಡವ-ಸೃಂಜಯರು ದ್ರೋಣನನ್ನು ಕೊಂದು ಕೆಳಗುರುಳಿಸಿದರು ಎನ್ನುವುದನ್ನು ಹೇಳುತ್ತೇನೆ.
07011002a ಸೇನಾಪತಿತ್ವಂ ಸಂಪ್ರಾಪ್ಯ ಭಾರದ್ವಾಜೋ ಮಹಾರಥಃ।
07011002c ಮಧ್ಯೇ ಸರ್ವಸ್ಯ ಸೈನ್ಯಸ್ಯ ಪುತ್ರಂ ತೇ ವಾಕ್ಯಮಬ್ರವೀತ್।।
ಸೇನಾಪತಿತ್ವವನ್ನು ಪಡೆದು ಮಹಾರಥ ಭಾರದ್ವಾಜನು ಸರ್ವ ಸೇನೆಗಳ ಮಧ್ಯೆ ನಿನ್ನ ಮಗನಿಗೆ ಈ ಮಾತನ್ನಾಡಿದನು:
07011003a ಯತ್ಕೌರವಾಣಾಂ ಋಷಭಾದಾಪಗೇಯಾದನಂತರಂ।
07011003c ಸೇನಾಪತ್ಯೇನ ಮಾಂ ರಾಜನ್ನದ್ಯ ಸತ್ಕೃತವಾನಸಿ।।
“ರಾಜನ್! ಕೌರವರ ಋಷಭ ಆಪಗೇಯನ ನಂತರ ನನ್ನನ್ನು ಸೇನಾಪತ್ಯದಿಂದ ಗೌರವಿಸಿದ್ದೀಯೆ.
07011004a ಸದೃಶಂ ಕರ್ಮಣಸ್ತಸ್ಯ ಫಲಂ ಪ್ರಾಪ್ನುಹಿ ಪಾರ್ಥಿವ।
07011004c ಕರೋಮಿ ಕಾಮಂ ಕಂ ತೇಽದ್ಯ ಪ್ರವೃಣೀಷ್ವ ಯಮಿಚ್ಚಸಿ।।
ಈ ಕರ್ಮಕ್ಕೆ ತಕ್ಕುದಾದ ಫಲವನ್ನು ಪಡೆಯುತ್ತೀಯೆ. ಪಾರ್ಥಿವ! ನಿನ್ನ ಆಸೆ ಏನಿದೆ ಹೇಳು. ಅದನ್ನು ನಾನು ಇಂದು ಮಾಡುತ್ತೇನೆ. ಬೇಕಾದ ವರವನ್ನು ಕೇಳಿಕೋ!”
07011005a ತತೋ ದುರ್ಯೋಧನಶ್ಚಿಂತ್ಯ ಕರ್ಣದುಃಶಾಸನಾದಿಭಿಃ।
07011005c ತಮಥೋವಾಚ ದುರ್ಧರ್ಷಮಾಚಾರ್ಯಂ ಜಯತಾಂ ವರಂ।।
ಆಗ ದುರ್ಯೋಧನನು ಕರ್ಣ-ದುಃಶಾಸನಾದಿಗಳೊಂದಿಗೆ ಚರ್ಚಿಸಿ ಆ ವಿಜಯಿಗಳಲ್ಲಿ ಶ್ರೇಷ್ಠ, ದುರ್ಧರ್ಷ ಆಚಾರ್ಯನಿಗೆ ಹೇಳಿದನು:
07011006a ದದಾಸಿ ಚೇದ್ವರಂ ಮಹ್ಯಂ ಜೀವಗ್ರಾಹಂ ಯುಧಿಷ್ಠಿರಂ।
07011006c ಗೃಹೀತ್ವಾ ರಥಿನಾಂ ಶ್ರೇಷ್ಠಂ ಮತ್ಸಮೀಪಮಿಹಾನಯ।।
“ನನಗೆ ವರವನ್ನು ಕೊಡುವಿರಾದರೆ ಯುಧಿಷ್ಠಿರನನ್ನು ಜೀವಂತವಾಗಿ ಸೆರೆಹಿಡಿಯಿರಿ. ಆ ರಥಿಗಳಲ್ಲಿ ಶ್ರೇಷ್ಠನನ್ನು ಹಿಡಿದು ನನ್ನ ಬಳಿ ಕರೆದುಕೊಂಡು ಬನ್ನಿ.”
07011007a ತತಃ ಕುರೂಣಾಮಾಚಾರ್ಯಃ ಶ್ರುತ್ವಾ ಪುತ್ರಸ್ಯ ತೇ ವಚಃ।
07011007c ಸೇನಾಂ ಪ್ರಹರ್ಷಯನ್ಸರ್ವಾಮಿದಂ ವಚನಮಬ್ರವೀತ್।।
ಆಗ ಕುರುಗಳ ಆಚಾರ್ಯನು ನಿನ್ನ ಮಗನ ಮಾತನ್ನು ಕೇಳಿ ಸರ್ವ ಸೇನೆಗಳನ್ನೂ ಹರ್ಷಗೊಳಿಸುತ್ತಾ ಈ ಮಾತನ್ನಾಡಿದನು:
07011008a ಧನ್ಯಃ ಕುಂತೀಸುತೋ ರಾಜಾ ಯಸ್ಯ ಗ್ರಹಣಮಿಚ್ಚಸಿ।
07011008c ನ ವಧಾರ್ಥಂ ಸುದುರ್ಧರ್ಷ ವರಮದ್ಯ ಪ್ರಯಾಚಸಿ।।
“ಯಾರನ್ನು ಸೆರೆಹಿಡಿಯಲು ಬಯಸುತ್ತೀಯೋ ಆ ರಾಜಾ ಕುಂತೀಪುತ್ರನು ಧನ್ಯ. ಸುದುರ್ಧರ್ಷ! ಅವನ ವಧೆಯನ್ನು ಇಂದು ವರವನ್ನಾಗಿ ಕೇಳುತ್ತಿಲ್ಲವಲ್ಲ!
07011009a ಕಿಮರ್ಥಂ ಚ ನರವ್ಯಾಘ್ರ ನ ವಧಂ ತಸ್ಯ ಕಾಂಕ್ಷಸಿ।
07011009c ನಾಶಂಸಸಿ ಕ್ರಿಯಾಮೇತಾಂ ಮತ್ತೋ ದುರ್ಯೋಧನ ಧ್ರುವಂ।।
ನರವ್ಯಾಘ್ರ! ಯಾವ ಕಾರಣಕ್ಕಾಗಿ ನೀನು ಅವನ ವಧೆಯನ್ನು ಬಯಸುತ್ತಿಲ್ಲ? ನಿಶ್ಚಯವಾಗಿ ದುರ್ಯೋಧನನು ಮತ್ತನಾಗಿ ಈ ಕೆಲಸವನ್ನು ಹೇಳುತ್ತಿಲ್ಲ ತಾನೇ?
07011010a ಆಹೋ ಸ್ವಿದ್ಧರ್ಮಪುತ್ರಸ್ಯ ದ್ವೇಷ್ಟಾ ತಸ್ಯ ನ ವಿದ್ಯತೇ।
07011010c ಯದಿಚ್ಚಸಿ ತ್ವಂ ಜೀವಂತಂ ಕುಲಂ ರಕ್ಷಸಿ ಚಾತ್ಮನಿ।।
ಆಹಾ! ಧರ್ಮಪುತ್ರನ ವಧೆಯನ್ನು ಬಯಸುವವನು ಯಾರೂ ಇಲ್ಲವೆಂದರೆ ಅದೊಂದು ಅದ್ಭುತವೇ ಸರಿ. ಅವನನ್ನು ಜೀವಂತವಿರಿಸಿ ನೀನು ನಿನ್ನನ್ನೂ ನಿನ್ನ ಕುಲವನ್ನೂ ರಕ್ಷಿಸಲು ಬಯಸುತ್ತಿದ್ದೀಯಾ?
07011011a ಅಥ ವಾ ಭರತಶ್ರೇಷ್ಠ ನಿರ್ಜಿತ್ಯ ಯುಧಿ ಪಾಂಡವಾನ್।
07011011c ರಾಜ್ಯಾಂಶಂ ಪ್ರತಿದತ್ತ್ವಾ ಚ ಸೌಭ್ರಾತ್ರಂ ಕರ್ತುಮಿಚ್ಚಸಿ।।
ಅಥವಾ ಭರತಶ್ರೇಷ್ಠ! ಯುದ್ಧದಲ್ಲಿ ಪಾಂಡವರನ್ನು ಸೋಲಿಸಿ ಅವರ ರಾಜ್ಯಾಂಶವನ್ನು ಅವರಿಗೆ ಹಿಂದಿರುಗಿಸಿ ಉತ್ತಮ ಸಹೋದರತ್ವವನ್ನು ಕಲ್ಪಿಸಲು ಬಯಸುತ್ತಿರುವೆಯಾ?
07011012a ಧನ್ಯಃ ಕುಂತೀಸುತೋ ರಾಜಾ ಸುಜಾತಾ ಚಾಸ್ಯ ಧೀಮತಃ।
07011012c ಅಜಾತಶತ್ರುತಾ ಸತ್ಯಾ ತಸ್ಯ ಯತ್ಸ್ನಿಹ್ಯತೇ ಭವಾನ್।।
ಉತ್ತಮ ಕುಲದಲ್ಲಿ ಜನಿಸಿದ ಧೀಮತ ರಾಜಾ ಕುಂತೀಸುತನೇ ಧನ್ಯ. ನೀನೂ ಕೂಡ ಅವನಲ್ಲಿ ಸ್ನೇಹಭಾವವನ್ನು ತೋರಿಸುತ್ತಿರುವೆಯೆಂದರೆ ಅವನ ಅಜಾತಶತ್ರುತ್ವವು ಸತ್ಯವಾದಂತಾಯಿತು.”
07011013a ದ್ರೋಣೇನ ತ್ವೇವಮುಕ್ತಸ್ಯ ತವ ಪುತ್ರಸ್ಯ ಭಾರತ।
07011013c ಸಹಸಾ ನಿಃಸೃತೋ ಭಾವೋ ಯೋಽಸ್ಯ ನಿತ್ಯಂ ಪ್ರವರ್ತತೇ।।
ಭಾರತ! ದ್ರೋಣನು ಹೀಗೆ ಹೇಳಲು ನಿತ್ಯವೂ ನಿನ್ನ ಪುತ್ರನಲ್ಲಿ ಮಲಗಿದ್ದ ನಿಜಭಾವನೆಯು ಒಮ್ಮಿಂದೊಮ್ಮೆಲೇ ಪ್ರಕಟವಾಯಿತು.
07011014a ನಾಕಾರೋ ಗೂಹಿತುಂ ಶಕ್ಯೋ ಬೃಹಸ್ಪತಿಸಮೈರಪಿ।
07011014c ತಸ್ಮಾತ್ತವ ಸುತೋ ರಾಜನ್ಪ್ರಹೃಷ್ಟೋ ವಾಕ್ಯಮಬ್ರವೀತ್।।
ಬೃಹಸ್ಪತಿಯಂತಿರುವವನೂ ಕೂಡ ಅವನ ಆಕಾರವನ್ನು ಊಹಿಸಲು ಶಕ್ಯರಾಗಿರಲಿಲ್ಲ. ರಾಜನ್! ಅದಕ್ಕೆ ನಿನ್ನ ಮಗನು ಪ್ರಹೃಷ್ಟನಾಗಿ ಹೀಗೆ ಹೇಳಿದನು:
07011015a ವಧೇ ಕುಂತೀಸುತಸ್ಯಾಜೌ ನಾಚಾರ್ಯ ವಿಜಯೋ ಮಮ।
07011015c ಹತೇ ಯುಧಿಷ್ಠಿರೇ ಪಾರ್ಥೋ ಹನ್ಯಾತ್ಸರ್ವಾನ್ ಹಿ ನೋ ಧ್ರುವಂ।।
“ಆಚಾರ್ಯ! ಕುಂತೀಸುತನ ವಧೆಯಲ್ಲಿ ನನ್ನ ವಿಜಯವಿಲ್ಲ. ಯುಧಿಷ್ಠಿರನು ಹತನಾದರೆ ಪಾರ್ಥನು ಸರ್ವರನ್ನೂ ಸಂಹರಿಸುತ್ತಾನೆ ಎನ್ನುವುದು ಖಂಡಿತ.
07011016a ನ ಚ ಶಕ್ಯೋ ರಣೇ ಸರ್ವೈರ್ನಿಹಂತುಮಮರೈರಪಿ।
07011016c ಯ ಏವ ಚೈಷಾಂ ಶೇಷಃ ಸ್ಯಾತ್ಸ ಏವಾಸ್ಮಾನ್ನ ಶೇಷಯೇತ್।।
ರಣದಲ್ಲಿ ಅವರೆಲ್ಲರನ್ನು ಸಂಹರಿಸಲು ಅಮರರಿಂದಲೂ ಸಾಧ್ಯವಿಲ್ಲ. ಅವರಲ್ಲಿ ಯಾರು ಉಳಿದರೂ ಅವರು ನಮ್ಮೆಲ್ಲರನ್ನೂ ಉಳಿಯಗೊಡುವುದಿಲ್ಲ.
07011017a ಸತ್ಯಪ್ರತಿಜ್ಞೇ ತ್ವಾನೀತೇ ಪುನರ್ದ್ಯೂತೇನ ನಿರ್ಜಿತೇ।
07011017c ಪುನರ್ಯಾಸ್ಯಂತ್ಯರಣ್ಯಾಯ ಕೌಂತೇಯಾಸ್ತಮನುವ್ರತಾಃ।।
ಆ ಸತ್ಯಪ್ರತಿಜ್ಞನನ್ನು ನೀನು ಕರೆದುಕೊಂಡು ಬಂದರೆ ಪುನಃ ದ್ಯೂತದಲ್ಲಿ ಅವನನ್ನು ಸೋಲಿಸಿ, ಪುನಃ ಅರಣ್ಯಕ್ಕೆ ಕಳುಹಿಸುತ್ತೇನೆ. ಕೌಂತೇಯರು ಅವನನ್ನು ಹಿಂಬಾಲಿಸಿ ಹೋಗುತ್ತಾರೆ.
07011018a ಸೋಽಯಂ ಮಮ ಜಯೋ ವ್ಯಕ್ತಂ ದೀರ್ಘಕಾಲಂ ಭವಿಷ್ಯತಿ।
07011018c ಅತೋ ನ ವಧಮಿಚ್ಚಾಮಿ ಧರ್ಮರಾಜಸ್ಯ ಕರ್ಹಿ ಚಿತ್।।
ಅಂಥಹ ಜಯವು ನನಗೆ ದೀರ್ಘಕಾಲವುಳಿಯುತ್ತದೆ ಎಂದು ವ್ಯಕ್ತವಾಗುತ್ತಿದೆ. ಇದರಿಂದಾಗಿ ನಾನು ಎಂದೂ ಧರ್ಮರಾಜನ ವಧೆಯನ್ನು ಬಯಸುವುದಿಲ್ಲ.”
07011019a ತಸ್ಯ ಜಿಹ್ಮಮಭಿಪ್ರಾಯಂ ಜ್ಞಾತ್ವಾ ದ್ರೋಣೋಽರ್ಥತತ್ತ್ವವಿತ್।
07011019c ತಂ ವರಂ ಸಾಂತರಂ ತಸ್ಮೈ ದದೌ ಸಂಚಿಂತ್ಯ ಬುದ್ಧಿಮಾನ್।।
ಅವನ ನಾಲಿಗೆಯಿಂದ ಅವನ ಅಭಿಪ್ರಾಯವನ್ನು ತಿಳಿದ ಅರ್ಥತತ್ವಗಳನ್ನು ತಿಳಿದಿದ್ದ ಬುದ್ಧಿಮಾನ್ ದ್ರೋಣನು ಕೂಡಲೇ ಯೋಚಿಸಿ ಅವನಿಗೆ ವರವನ್ನಿತ್ತನು.
07011020 ದ್ರೋಣ ಉವಾಚ।
07011020a ನ ಚೇದ್ಯುಧಿಷ್ಠಿರಂ ವೀರ ಪಾಲಯೇದರ್ಜುನೋ ಯುಧಿ।
07011020c ಮನ್ಯಸ್ವ ಪಾಂಡವಂ ಜ್ಯೇಷ್ಠಮಾನೀತಂ ವಶಮಾತ್ಮನಃ।।
ದ್ರೋಣನು ಹೇಳಿದನು: “ವೀರ ಒಂದುವೇಳೆ ಅರ್ಜುನನು ಯುದ್ಧದಲ್ಲಿ ಯುಧಿಷ್ಠಿರನನ್ನು ರಕ್ಷಿಸುತ್ತಿಲ್ಲವಾದರೆ ಜ್ಯೇಷ್ಠ ಪಾಂಡವನನ್ನು ನಾನು ಸೆರೆಹಿಡಿದು ತರುತ್ತೇನೆ ಎಂದು ತಿಳಿ.
07011021a ನ ಹಿ ಪಾರ್ಥೋ ರಣೇ ಶಕ್ಯಃ ಸೇಂದ್ರೈರ್ದೇವಾಸುರೈರಪಿ।
07011021c ಪ್ರತ್ಯುದ್ಯಾತುಮತಸ್ತಾತ ನೈತದಾಮರ್ಷಯಾಮ್ಯಹಂ।।
ರಣದಲ್ಲಿ ಪಾರ್ಥನನ್ನು ಜಯಿಸಲು ಇಂದ್ರಸಮೇತರಾದ ದೇವಾಸುರರಿಂದಲೂ ಶಕ್ಯವಾಗುವುದಿಲ್ಲ. ಆದುದರಿಂದ ಅವನ ಮೇಲೆ ಆಕ್ರಮಣಿಸಲಾಗಲೀ ಜಯಿಸಲಾಗಲೀ ನಾನು ಯಾವಾಗಲೂ ಯೋಚಿಸುವುದೇ ಇಲ್ಲ.
07011022a ಅಸಂಶಯಂ ಸ ಶಿಷ್ಯೋ ಮೇ ಮತ್ಪೂರ್ವಶ್ಚಾಸ್ತ್ರಕರ್ಮಣಿ।
07011022c ತರುಣಃ ಕೀರ್ತಿಯುಕ್ತಶ್ಚ ಏಕಾಯನಗತಶ್ಚ ಸಃ।।
ಅವನು ನನ್ನ ಶಿಷ್ಯನೆಂಬುವುದರಲ್ಲಿ ಸಂಶಯವಿಲ್ಲ. ಅಸ್ತ್ರಗಳನ್ನು ಬೋಧಿಸಿದವರಲ್ಲಿ ಅವನಿಗೆ ನಾನೇ ಮೊದಲಿಗನು. ಅವನಿನ್ನೂ ತರುಣನು. ಅನೇಕ ಪುಣ್ಯಕಾರ್ಯಗಳನ್ನು ಮಾಡಿದ ಸುಕೃತನು.
07011023a ಅಸ್ತ್ರಾಣೀಂದ್ರಾಚ್ಚ ರುದ್ರಾಚ್ಚ ಭೂಯಾಂಸಿ ಸಮವಾಪ್ತವಾನ್।
07011023c ಅಮರ್ಷಿತಶ್ಚ ತೇ ರಾಜಂಸ್ತೇನ ನಾಮರ್ಷಯಾಮ್ಯಹಂ।।
ಇನ್ನು ಹೆಚ್ಚಾಗಿ ಇಂದ್ರ ಮತ್ತು ರುದ್ರರಿಂದ ಅಸ್ತ್ರಗಳನ್ನು ಸಂಪಾದಿಸಿದ್ದಾನೆ. ರಾಜನ್! ನಿನ್ನ ಮೇಲೆ ಕುಪಿತನಾಗಿದ್ದಾನೆ. ನಾನು ಅವನ ಮೇಲೆ ಸಿಟ್ಟಾಗುವುದಿಲ್ಲ.
07011024a ಸ ಚಾಪಕ್ರಮ್ಯತಾಂ ಯುದ್ಧಾದ್ಯೇನೋಪಾಯೇನ ಶಕ್ಯತೇ।
07011024c ಅಪನೀತೇ ತತಃ ಪಾರ್ಥೇ ಧರ್ಮರಾಜೋ ಜಿತಸ್ತ್ವಯಾ।।
ಯಾವುದಾದರೂ ಉಪಾಯವನ್ನು ಹೂಡಿ ಯುದ್ಧದಿಂದ ನೀನು ಪಾರ್ಥನನ್ನು ದೂರಕಳುಹಿಸಲು ಶಕ್ಯನಾದರೆ ನೀನು ಧರ್ಮರಾಜನನ್ನು ಗೆದ್ದಂತೆಯೇ.
07011025a ಗ್ರಹಣಂ ಚೇಜ್ಜಯಂ ತಸ್ಯ ಮನ್ಯಸೇ ಪುರುಷರ್ಷಭ।
07011025c ಏತೇನ ಚಾಭ್ಯುಪಾಯೇನ ಧ್ರುವಂ ಗ್ರಹಣಮೇಷ್ಯತಿ।।
ಪುರುಷರ್ಷಭ! ಅವನನ್ನು ಹಿಡಿಯುವುದರಿಂದಲೇ ಜಯವೆಂದು ನೀನು ಅಭಿಪ್ರಾಯ ಪಟ್ಟಿದ್ದೀಯೇ. ಈ ಉಪಾಯದಿಂದ ಅವನನ್ನು ಹಿಡಿಯುವುದು ಖಂಡಿತ ಸಾಧ್ಯವಾಗುತ್ತದೆ.
07011026a ಅಹಂ ಗೃಹೀತ್ವಾ ರಾಜಾನಂ ಸತ್ಯಧರ್ಮಪರಾಯಣಂ।
07011026c ಆನಯಿಷ್ಯಾಮಿ ತೇ ರಾಜನ್ವಶಮದ್ಯ ನ ಸಂಶಯಃ।।
07011027a ಯದಿ ಸ್ಥಾಸ್ಯತಿ ಸಂಗ್ರಾಮೇ ಮುಹೂರ್ತಮಪಿ ಮೇಽಗ್ರತಃ।
07011027c ಅಪನೀತೇ ನರವ್ಯಾಘ್ರೇ ಕುಂತೀಪುತ್ರೇ ಧನಂಜಯೇ।।
ರಾಜನ್! ನರವ್ಯಾಘ್ರ ಕುಂತೀಪುತ್ರ ಧನಂಜಯನನ್ನು ದೂರಕ್ಕೆ ಒಯ್ದ ನಂತರ ಒಂದು ಕ್ಷಣಕಾಲವೂ ಅವನು ನನ್ನ ಎದಿರು ನಿಂತರೆ ಆ ಸತ್ಯಧರ್ಮಪರಾಯಣ ರಾಜನನ್ನು ಹಿಡಿದು ನಿನ್ನ ವಶದಲ್ಲಿ ಇಂದು ತರುತ್ತೇನೆ. ಅದರಲ್ಲಿ ಸಂಶಯ ಬೇಡ.
07011028a ಫಲ್ಗುನಸ್ಯ ಸಮಕ್ಷಂ ತು ನ ಹಿ ಪಾರ್ಥೋ ಯುಧಿಷ್ಠಿರಃ।
07011028c ಗ್ರಹೀತುಂ ಸಮರೇ ಶಕ್ಯಃ ಸೇಂದ್ರೈರಪಿ ಸುರಾಸುರೈಃ।।
ಪಾರ್ಥ ಫಲ್ಗುನನು ನೋಡುತ್ತಿರುವಾಗಲೇ ಸಮರದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯಲು ಇಂದ್ರನೊಂದಿಗೆ ಸುರಾಸುರರಿಗೂ ಸಾಧ್ಯವಿಲ್ಲ.””
07011029 ಸಂಜಯ ಉವಾಚ।
07011029a ಸಾಂತರಂ ತು ಪ್ರತಿಜ್ಞಾತೇ ರಾಜ್ಞೋ ದ್ರೋಣೇನ ನಿಗ್ರಹೇ।
07011029c ಗೃಹೀತಂ ತಮಮನ್ಯಂತ ತವ ಪುತ್ರಾಃ ಸುಬಾಲಿಶಾಃ।।
ಸಂಜಯನು ಹೇಳಿದನು: “ರಾಜನನ್ನು ಸೆರೆಹಿಡಿಯಲು ದ್ರೋಣನು ಈ ರೀತಿ ನಿಬಂಧನೆಗಳೊಂದಿಗೆ ಪ್ರತಿಜ್ಞೆ ಮಾಡಲು ನಿನ್ನ ಪುತ್ರರು ಬಾಲಕರಂತೆ ಅವನು ಸೆರೆಹಿಡಿಯಲ್ಪಟ್ಟನೆಂದೇ ಭಾವಿಸಿದರು.
07011030a ಪಾಂಡವೇಷು ಹಿ ಸಾಪೇಕ್ಷಂ ದ್ರೋಣಂ ಜಾನಾತಿ ತೇ ಸುತಃ।
07011030c ತತಃ ಪ್ರತಿಜ್ಞಾಸ್ಥೈರ್ಯಾರ್ಥಂ ಸ ಮಂತ್ರೋ ಬಹುಲೀಕೃತಃ।।
ಪಾಂಡವರೊಂದಿಗೆ ದ್ರೋಣನ ಪಕ್ಷಪಾತವಿದೆಯೆಂದು ನಿನ್ನ ಮಗನು ತಿಳಿದಿದ್ದನು. ಆದುದರಿಂದ ರಹಸ್ಯದಲ್ಲಿ ಮಾಡಿದ್ದ ಪ್ರತಿಜ್ಞೆಯನ್ನು ಬಹಿರಂಗಗೊಳಿಸಿದನು.
07011031a ತತೋ ದುರ್ಯೋಧನೇನಾಪಿ ಗ್ರಹಣಂ ಪಾಂಡವಸ್ಯ ತತ್।
07011031c ಸೈನ್ಯಸ್ಥಾನೇಷು ಸರ್ವೇಷು ವ್ಯಾಘೋಷಿತಮರಿಂದಮ।।
ಅರಿಂದಮ! ಆಗ ದುರ್ಯೋಧನನು ಪಾಂಡವನ ಸೆರೆಹಿಡಿಯುವುದರ ಕುರಿತು ಎಲ್ಲ ಸೈನ್ಯ ಸ್ಥಾನಗಳಲ್ಲಿ ಘೋಷಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ದ್ರೋಣಪ್ರತಿಜ್ಞಾಯಾಂ ಏಕಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ದ್ರೋಣಪ್ರತಿಜ್ಞೆ ಎನ್ನುವ ಹನ್ನೊಂದನೇ ಅಧ್ಯಾಯವು.