009 ಧೃತರಾಷ್ಟ್ರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣಾಭಿಷೇಕ ಪರ್ವ

ಅಧ್ಯಾಯ 9

ಸಾರ

ಧೃತರಾಷ್ಟ್ರನ ಪ್ರಶ್ನೆಗಳು (1-73).

07009001 ವೈಶಂಪಾಯನ ಉವಾಚ।
07009001a ಏವಂ ಪೃಷ್ಟ್ವಾ ಸೂತಪುತ್ರಂ ಹೃಚ್ಚೋಕೇನಾರ್ದಿತೋ ಭೃಶಂ।
07009001c ಜಯೇ ನಿರಾಶಃ ಪುತ್ರಾಣಾಂ ಧೃತರಾಷ್ಟ್ರೋಽಪತತ್ ಕ್ಷಿತೌ।।

ವೈಶಂಪಾಯನನು ಹೇಳಿದನು: “ಹೀಗೆ ಸೂತಪುತ್ರನನ್ನು ಕೇಳಿ ಶೋಕದಿಂದ ತುಂಬಾ ಪೀಡಿತನಾಗಿ ಪುತ್ರರ ಜಯದ ಕುರಿತು ನಿರಾಶನಾಗಿ ಧೃತರಾಷ್ಟ್ರನು ನೆಲದ ಮೇಲೆ ಬಿದ್ದನು.

07009002a ತಂ ವಿಸಂಜ್ಞಂ ನಿಪತಿತಂ ಸಿಷಿಚುಃ ಪರಿಚಾರಕಾಃ।
07009002c ಜಲೇನಾತ್ಯರ್ಥಶೀತೇನ ವೀಜಂತಃ ಪುಣ್ಯಗಂಧಿನಾ।।

ಹೀಗೆ ಮೂರ್ಛಿತಾಗಿ ಬಿದ್ದ ಅವನನ್ನು ಪರಿಚಾರಿಕೆಯರು ಬೀಸಣಿಗೆಯಿಂದ ಗಾಳಿಬೀಸಿದರು ಮತ್ತು ಸುಗಂಧಯುಕ್ತ ಶೀತಲ ನೀರನ್ನು ಚುಮುಕಿಸಿದರು.

07009003a ಪತಿತಂ ಚೈನಮಾಜ್ಞಾಯ ಸಮಂತಾದ್ಭರತಸ್ತ್ರಿಯಃ।
07009003c ಪರಿವವ್ರುರ್ಮಹಾರಾಜಮಸ್ಪೃಶಂಶ್ಚೈವ ಪಾಣಿಭಿಃ।।

ಅವನು ಬಿದ್ದುದನ್ನು ತಿಳಿದು ಅಂತಃಪುರದ ಸ್ತ್ರೀಯರು ಎಲ್ಲಕಡೆಗಳಿಂದ ಬಂದು ಮಹಾರಾಜನನ್ನು ಸುತ್ತುವರೆದು ಕೈಗಳಿಂದ ಸವರಿದರು.

07009004a ಉತ್ಥಾಪ್ಯ ಚೈನಂ ಶನಕೈ ರಾಜಾನಂ ಪೃಥಿವೀತಲಾತ್।
07009004c ಆಸನಂ ಪ್ರಾಪಯಾಮಾಸುರ್ಬಾಷ್ಪಕಂಠ್ಯೋ ವರಾಂಗನಾಃ।।

ಕಂಬನಿತುಂಬಿದ ಕಣ್ಣುಗಳಿಂದಲೂ ಗದ್ಗದ ಕಂಠಗಳಿಂದಲೂ ಕೂಡಿದ ಆ ವರಾಂಗನೆಯರು ರಾಜನನ್ನು ನೆಲದಿಂದ ಮೇಲಕ್ಕೆತ್ತಿ ಸುಖಾಸದನ ಮೇಲೆ ಕುಳ್ಳಿರಿಸಿದರು.

07009005a ಆಸನಂ ಪ್ರಾಪ್ಯ ರಾಜಾ ತು ಮೂರ್ಚಯಾಭಿಪರಿಪ್ಲುತಃ।
07009005c ನಿಶ್ಚೇಷ್ಟೋಽತಿಷ್ಠತ ತದಾ ವೀಜ್ಯಮಾನಃ ಸಮಂತತಃ।।

ಆಸನದಲ್ಲಿ ಕುಳಿತುಕೊಂಡ ನಂತರವೂ ರಾಜನು ಮೂರ್ಛೆಯಿಂದ ಎಚ್ಚೆತ್ತುಕೊಳ್ಳಲಿಲ್ಲ. ಹಂದಾಡದೇ ಕುಳಿತಿದ್ದನು. ಸುತ್ತಲೂ ಗಾಳಿ ಬೀಸುತ್ತಿದ್ದರು.

07009006a ಸ ಲಬ್ಧ್ವಾ ಶನಕೈಃ ಸಂಜ್ಞಾಂ ವೇಪಮಾನೋ ಮಹೀಪತಿಃ।
07009006c ಪುನರ್ಗಾವಲ್ಗಣಿಂ ಸೂತಂ ಪರ್ಯಪೃಚ್ಚದ್ಯಥಾತಥಂ।।

ಮೆಲ್ಲನೆ ಸಂಜ್ಞೆಗಳನ್ನು ಪಡೆದ ಮಹೀಪತಿಯು ನಡುಗುತ್ತಾ ಪುನಃ ಗಾವಲ್ಗಣಿ ಸೂತನನ್ನು ನಡೆದುದರ ಕುರಿತು ಕೇಳಿದನು:

07009007a ಯತ್ತದುದ್ಯನ್ನಿವಾದಿತ್ಯೋ ಜ್ಯೋತಿಷಾ ಪ್ರಣುದಂಸ್ತಮಃ।
07009007c ಆಯಾದಜಾತಶತ್ರುರ್ವೈ ಕಸ್ತಂ ದ್ರೋಣಾದವಾರಯತ್।।

“ಕತ್ತಲೆಯನ್ನು ಕಳೆಯಲು ಉದಯಿಸುವ ಆದಿತ್ಯನಂತಿದ್ದ ದ್ರೋಣನ ಸಮೀಪಕ್ಕೆ ಬರುತ್ತಿದ್ದ ಅಜಾತಶತ್ರುವನ್ನು ಯಾರು ತಡೆದರು?

07009008a ಪ್ರಭಿನ್ನಮಿವ ಮಾತಂಗಂ ತಥಾ ಕ್ರುದ್ಧಂ ತರಸ್ವಿನಂ।
07009008c ಆಸಕ್ತಮನಸಂ ದೀಪ್ತಂ ಪ್ರತಿದ್ವಿರದಘಾತಿನಂ।
07009008e ವಾಶಿತಾಸಂಗಮೇ ಯದ್ವದಜಯ್ಯಂ ಪ್ರತಿಯೂಥಪೈಃ।।

ಸಮಾಗಮದಲ್ಲಿ ಆಸಕ್ತಿಯಿರುವಾಗ ಇನ್ನೊಂದು ಗಂಡಾನೆಯು ಬಂದು ಗಾಯಗೊಳಿಸಿದರೆ ಸಿಟ್ಟಾಗುವ ಮದೋದಕವನ್ನು ಸುರಿಸುತ್ತಿದ್ದ ಆನೆಯಂತೆ ಕ್ರುದ್ಧನೂ, ವೇಗವಂತನೂ ಆದ ಆ ಅಜೇಯನನ್ನು ಯಾರು ತಡೆದರು?

07009009a ಅತಿ ಚಾನ್ಯಾನ್ರಣೇ ಯೋಧಾನ್ವೀರಃ ಪುರುಷಸತ್ತಮಃ।
07009009c ಯೋ ಹ್ಯೇಕೋ ಹಿ ಮಹಾಬಾಹುರ್ನಿರ್ದಹೇದ್ಘೋರಚಕ್ಷುಷಾ।
07009009e ಕೃತ್ಸ್ನಂ ದುರ್ಯೋಧನಬಲಂ ಧೃತಿಮಾನ್ಸತ್ಯಸಂಗರಃ।।

ಅನೇಕ ಯೋಧರನ್ನು ರಣದಲ್ಲಿ ಸಂಹರಿಸಿದ, ತನ್ನ ಘೋರದೃಷ್ಟಿ ಮಾತ್ರದಿಂದಲೇ ದುರ್ಯೋಧನನ ಇಡೀ ಸೇನೆಯನ್ನು ದಹಿಸಿಬಿಡಬಲ್ಲ, ವೀರ ಪುರುಷಸತ್ತಮ, ಧೃತಿಮಾನ್ ಸತ್ಯಸಂಗರನನ್ನು ಯಾರು ತಡೆದರು?

07009010a ಚಕ್ಷುರ್ಹಣಂ ಜಯೇ ಸಕ್ತಮಿಷ್ವಾಸವರರಕ್ಷಿತಂ।
07009010c ದಾಂತಂ ಬಹುಮತಂ ಲೋಕೇ ಕೇ ಶೂರಾಃ ಪರ್ಯವಾರಯನ್।।

ಕಣ್ಣುಗಳಿಂದಲೇ ಕೊಲ್ಲಬಲ್ಲ, ಜಯದಲ್ಲಿ ಆಸಕ್ತಿಯುಳ್ಳ, ಧನುರ್ಧರರಿಂದ ರಕ್ಷಿತನಾಗಿರುವ, ದಾಂತ ಮತ್ತು ಲೋಕದಲ್ಲಿ ಬಹುಮತವುಳ್ಳ ಅವನನ್ನು ಯಾವ ಶೂರರು ಸುತ್ತುವರೆದರು?

07009011a ಕೇ ದುಷ್ಪ್ರಧರ್ಷಂ ರಾಜಾನಮಿಷ್ವಾಸವರಮಚ್ಯುತಂ।
07009011c ಸಮಾಸೇದುರ್ನರವ್ಯಾಘ್ರಂ ಕೌಂತೇಯಂ ತತ್ರ ಮಾಮಕಾಃ।।

ಎದುರಿಸಲಸಾದ್ಯನಾದ ಧನುರ್ಧರ, ಅಚ್ಯುತ, ರಾಜ, ನರವ್ಯಾಘ್ರ ಕೌಂತೇಯನನ್ನು ಅಲ್ಲಿ ನನ್ನವರು ಯಾರು ಎದುರಿಸಿದರು?

07009012a ತರಸೈವಾಭಿಪತ್ಯಾಥ ಯೋ ವೈ ದ್ರೋಣಮುಪಾದ್ರವತ್।
07009012c ತಂ ಭೀಮಸೇನಮಾಯಾಂತಂ ಕೇ ಶೂರಾಃ ಪರ್ಯವಾರಯನ್।।

ವೇಗದಿಂದ ದ್ರೋಣನನ್ನು ಆಕ್ರಮಣಿಸಲು ಬರುತ್ತಿದ್ದ ಭೀಮಸೇನನನ್ನು ಯಾವ ಶೂರರು ಸುತ್ತುವರೆದು ತಡೆದರು?

07009013a ಯದಾಯಾಜ್ಜಲದಪ್ರಖ್ಯೋ ರಥಃ ಪರಮವೀರ್ಯವಾನ್।
07009013c ಪರ್ಜನ್ಯ ಇವ ಬೀಭತ್ಸುಸ್ತುಮುಲಾಮಶನಿಂ ಸೃಜನ್।।

ಗುಡುಗಿನಂತೆ ಮೊಳಗುವ ರಥದಲ್ಲಿದ್ದ ಪರಮವೀರ್ಯವಾನ್ ಬೀಭತ್ಸುವು ಪರ್ಜ್ಯನ್ಯನಂತೆ ವಜ್ರಾಯುಧಕ್ಕೆ ಸಮಾನ ಮಹಾಸ್ತ್ರಗಳನ್ನು ಸೃಷ್ಟಿಸುವವನು.

07009014a ವವರ್ಷ ಶರವರ್ಷಾಣಿ ವರ್ಷಾಣಿ ಮಘವಾನಿವ।
07009014c ಇಷುಸಂಬಾಧಮಾಕಾಶಂ ಕುರ್ವನ್ಕಪಿವರಧ್ವಜಃ।
07009014e ಅವಸ್ಫೂರ್ಜನ್ದಿಶಃ ಸರ್ವಾಸ್ತಲನೇಮಿಸ್ವನೇನ ಚ।।

ಮಘವತನಂತೆ ಬಾಣಗಳ ಮಳೆಯನ್ನು ಸುರಿಸುತ್ತಿದ್ದ. ಧನುಸ್ಸಿನ ಟೇಂಕಾರದಿಂದಲೂ, ರಥಚಕ್ರಗಳ ಧ್ವನಿಯಿಂದಲೂ ದಿಕ್ಕುಗಳನ್ನು ಶಬ್ಧಾಯಗೊಳಿಸುತ್ತಾ ಕಪಿಧ್ವಜನು ಭಯಂಕರ ಮೇಘದಂತೆಯೇ ಕಾಣುತ್ತಿದ್ದಿರಬಹುದು.

07009015a ಚಾಪವಿದ್ಯುತ್ಪ್ರಭೋ ಘೋರೋ ರಥಗುಲ್ಮಬಲಾಹಕಃ।
07009015c ರಥನೇಮಿಘೋಷಸ್ತನಿತಃ ಶರಶಬ್ದಾತಿಬಂಧುರಃ।।

ಅವನ ಧನುಸ್ಸು ವಿದ್ಯುತ್ತಿನಂತೆ ಹೊಳೆಯುತ್ತಿದ್ದಿರಬಹುದು. ರಥಗಳ ಸಮೂಹವೇ ಕಾರ್ಮುಗಿಲಿನಂತಿದ್ದು ರಥಗಳ ಚಕ್ರಗಳ ಧ್ವನಿಯು ಬಾಣಗಳ ಮಳೆಯ ಧ್ವನಿಯನ್ನು ಅನುಕರಿಸುತ್ತಿದ್ದಿರಬಹುದು.

07009016a ರೋಷನಿರ್ಜಿತಜೀಮೂತೋ ಮನೋಽಭಿಪ್ರಾಯಶೀಘ್ರಗಃ।
07009016c ಮರ್ಮಾತಿಗೋ ಬಾಣಧಾರಸ್ತುಮುಲಃ ಶೋಣಿತೋದಕಃ।।

ಅವನು ರೋಷದಿಂದ ಹುಟ್ಟಿದ ಮೋಡ, ಮನೋಭಿಪ್ರಾಯದಂತೆ ಶೀಘ್ರವಾಗಿ ಹೋಗಬಲ್ಲವನು, ಮರ್ಮಗಳನ್ನು ಹೊಡೆಯುವ ಬಾಣಗಳ ಮಳೆಯನ್ನು ಸುರಿಸುವವನು ಮತ್ತು ರಕ್ತವೇ ಅವನು ಸುರಿಸುವ ನೀರು.

07009017a ಸಂಪ್ಲಾವಯನ್ಮಹೀಂ ಸರ್ವಾನ್ಮಾನವೈರಾಸ್ತರಂಸ್ತದಾ।
07009017c ಗದಾನಿಷ್ಟನಿತೋ ರೌದ್ರೋ ದುರ್ಯೋಧನಕೃತೋದ್ಯಮಃ।।
07009018a ಯುದ್ಧೇಽಭ್ಯಷಿಂಚದ್ವಿಜಯೋ ಗಾರ್ಧ್ರಪತ್ರೈಃ ಶಿಲಾಶಿತೈಃ।
07009018c ಗಾಂಡೀವಂ ಧಾರಯನ್ಧೀಮಾನ್ಕೀದೃಶಂ ವೋ ಮನಸ್ತದಾ।।

ಭೂಮಿಯಲ್ಲೆಲ್ಲಾ ಮಾನವರನ್ನು ಹರಡಿ, ಭಯಂಕರ ಗರ್ಜನೆಯನ್ನು ಮಾಡುವ ಆ ಧೀಮಾನ್ ರೌದ್ರನು ಯುದ್ಧದಲ್ಲಿ ಶಿಲಾಶಿತ ಗಾರ್ಧ್ರಪತ್ರಗಳಿಂದ ದುರ್ಯೋಧನಾದಿಗಳನ್ನು ತೋಯಿಸುವಾಗ ನಿಮ್ಮ ಮನಸ್ಸು ಹೇಗಿದ್ದಿತು?

07009019a ಕಚ್ಚಿದ್ಗಾಂಡೀವಶಬ್ದೇನ ನ ಪ್ರಣಶ್ಯತ ವೈ ಬಲಂ।
07009019c ಯದ್ವಃ ಸ ಭೈರವಂ ಕುರ್ವನ್ನರ್ಜುನೋ ಭೃಶಮಭ್ಯಗಾತ್।।
07009020a ಕಚ್ಚಿನ್ನಾಪಾನುದದ್ದ್ರೋಣಾದಿಷುಭಿರ್ವೋ ಧನಂಜಯಃ।
07009020c ವಾತೋ ಮೇಘಾನಿವಾವಿಧ್ಯನ್ಪ್ರವಾಂ ಶರವನಾನಿಲಃ।
07009020e ಕೋ ಹಿ ಗಾಂಡೀವಧನ್ವಾನಂ ನರಃ ಸೋಢುಂ ರಣೇಽರ್ಹತಿ।।
07009021a ಯತ್ಸೇನಾಃ ಸಮಕಂಪಂತ ಯದ್ವೀರಾನಸ್ಪೃಶದ್ಭಯಂ।
07009021c ಕೇ ತತ್ರ ನಾಜಹುರ್ದ್ರೋಣಂ ಕೇ ಕ್ಷುದ್ರಾಃ ಪ್ರಾದ್ರವನ್ಭಯಾತ್।।

ಯಾವ ಸೇನೆಗಳು ಕಂಪಿಸಿದವು? ಯಾವ ವೀರರನ್ನು ಭಯವು ಆವರಿಸಿತು? ಅಲ್ಲಿ ಯಾರು ದ್ರೋಣನನ್ನು ಬಿಟ್ಟುಹೋಗಲಿಲ್ಲ? ಯಾವ ಕ್ಷುದ್ರರು ಭಯದಿಂದ ಓಡಿಹೋದರು?

07009022a ಕೇ ವಾ ತತ್ರ ತನೂಸ್ತ್ಯಕ್ತ್ವಾ ಪ್ರತೀಪಂ ಮೃತ್ಯುಮಾವ್ರಜನ್।
07009022c ಅಮಾನುಷಾಣಾಂ ಜೇತಾರಂ ಯುದ್ಧೇಷ್ವಪಿ ಧನಂಜಯಂ।।

ಯುದ್ಧದಲ್ಲಿ ಅಮಾನುಷರಿಂದಲೂ ಜಯವನ್ನು ಪಡೆಯುವ ಧನಂಜಯನೆಂಬ ಬೆಳಗುವ ಮೃತ್ಯುವನ್ನು ಯಾರ್ಯಾರು ತಮ್ಮ ದೇಹಗಳನ್ನು ತ್ಯಜಿಸಿ ಅಪ್ಪಿಕೊಂಡರು?

07009023a ನ ಚ ವೇಗಂ ಸಿತಾಶ್ವಸ್ಯ ವಿಶಕ್ಷ್ಯಂತೀಹ ಮಾಮಕಾಃ।
07009023c ಗಾಂಡೀವಸ್ಯ ಚ ನಿರ್ಘೋಷಂ ಪ್ರಾವೃಡ್ಜಲದನಿಸ್ವನಂ।।

ನನ್ನವರು ಶ್ವೇತಾಶ್ವನ ವೇಗವನ್ನೂ, ವರ್ಷಾಕಾಲದ ಮೇಘಗಳ ಧ್ವನಿಯಂತಿರುವ ಗಾಂಡೀವದ ಟೇಂಕಾರವನ್ನೂ ಸಹಿಸಿಕೊಳ್ಳಲಾರರು.

07009024a ವಿಷ್ವಕ್ಸೇನೋ ಯಸ್ಯ ಯಂತಾ ಯೋದ್ಧಾ ಚೈವ ಧನಂಜಯಃ।
07009024c ಅಶಕ್ಯಃ ಸ ರಥೋ ಜೇತುಂ ಮನ್ಯೇ ದೇವಾಸುರೈರಪಿ।।

ಯಾವುದರ ಸಾರಥಿಯು ವಿಶ್ವಕ್ಸೇನನೋ ಯಾವುದರಲ್ಲಿರುವ ಯೋಧನು ಧನಂಜಯನೋ ಆ ರಥವನ್ನು ದೇವಾಸುರರಿಂದಲೂ ಜಯಿಸಲು ಅಶಕ್ಯವೆಂದು ನನಗನ್ನಿಸುತ್ತದೆ.

07009025a ಸುಕುಮಾರೋ ಯುವಾ ಶೂರೋ ದರ್ಶನೀಯಶ್ಚ ಪಾಂಡವಃ।
07009025c ಮೇಧಾವೀ ನಿಪುಣೋ ಧೀಮಾನ್ಯುಧಿ ಸತ್ಯಪರಾಕ್ರಮಃ।।
07009026a ಆರಾವನ್ವಿಪುಲಂ ಕುರ್ವನ್ವ್ಯಥಯನ್ಸರ್ವಕೌರವಾನ್।
07009026c ಯದಾಯಾನ್ನಕುಲೋ ಧೀಮಾನ್ಕೇ ಶೂರಾಃ ಪರ್ಯವಾರಯನ್।।

ಸುಕುಮಾರ, ಯುವಕ, ಶೂರ, ಸುಂದರ ಪಾಂಡವ, ನಿಪುಣ, ಧೀಮಾನ್, ಯುದ್ಧದಲ್ಲಿ ಸತ್ಯಪರಾಕ್ರಮಿ, ಜೋರಾಗಿ ಗರ್ಜಿಸುತ್ತಾ ಸರ್ವ ಕೌರವರನ್ನು ವ್ಯಥೆಗೊಳಿಸುತ್ತಾ ಬರುತ್ತಿದ್ದ ನಕುಲನನ್ನು ಯಾವ ಶೂರರು ಸುತ್ತುವರೆದರು?

07009027a ಆಶೀವಿಷ ಇವ ಕ್ರುದ್ಧಃ ಸಹದೇವೋ ಯದಾಭ್ಯಯಾತ್।
07009027c ಶತ್ರೂಣಾಂ ಕದನಂ ಕುರ್ವನ್ಜೇತಾಸೌ ದುರ್ಜಯೋ ಯುಧಿ।।
07009028a ಆರ್ಯವ್ರತಮಮೋಘೇಷುಂ ಹ್ರೀಮಂತಮಪರಾಜಿತಂ।
07009028c ದ್ರೋಣಾಯಾಭಿಮುಖಂ ಯಾಂತಂ ಕೇ ಶೂರಾಃ ಪರ್ಯವಾರಯನ್।।

ಸರ್ಪದ ವಿಷದಂತೆ ಕ್ರುದ್ಧನಾಗಿದ್ದ ಸಹದೇವನು ಆಕ್ರಮಣಿಸಿ ಶತ್ರುಗಳೊಡನೆ ಕದನವನ್ನು ಕಾದು ಯುದ್ಧದಲ್ಲಿ ಗೆಲ್ಲುತ್ತಾ ಮುಂದೆ ದ್ರೋಣಾಭಿಮುಖನಾಗಿ ಬರುವಾಗ ಆರ್ಯವ್ರತನೂ, ಅಮೋಘ ಬಾಣಗಳುಳ್ಳವನೂ, ಹ್ರೀಮಂತನೂ ಅಪರಾಜಿತನೂ ಆದ ಅವನನ್ನು ಯಾವ ಶೂರರು ಸುತ್ತುವರೆದರು?

07009029a ಯಃ ಸ ಸೌವೀರರಾಜಸ್ಯ ಪ್ರಮಥ್ಯ ಮಹತೀಂ ಚಮೂಂ।
07009029c ಆದತ್ತ ಮಹಿಷೀಂ ಭೋಜ್ಯಾಂ ಕಾಮ್ಯಾಂ ಸರ್ವಾಂಗಶೋಭನಾಂ।।
07009030a ಸತ್ಯಂ ಧೃತಿಶ್ಚ ಶೌರ್ಯಂ ಚ ಬ್ರಹ್ಮಚರ್ಯಂ ಚ ಕೇವಲಂ।
07009030c ಸರ್ವಾಣಿ ಯುಯುಧಾನೇಽಸ್ಮಿನ್ನಿತ್ಯಾನಿ ಪುರುಷರ್ಷಭೇ।।
07009031a ಬಲಿನಂ ಸತ್ಯಕರ್ಮಾಣಮದೀನಮಪರಾಜಿತಂ।
07009031c ವಾಸುದೇವಸಮಂ ಯುದ್ಧೇ ವಾಸುದೇವಾದನಂತರಂ।।
07009032a ಯುಕ್ತಂ ಧನಂಜಯಪ್ರೇಷ್ಯೇ ಶೂರಮಾಚಾರ್ಯಕರ್ಮಣಿ।
07009032c ಪಾರ್ಥೇನ ಸಮಮಸ್ತ್ರೇಷು ಕಸ್ತಂ ದ್ರೋಣಾದವಾರಯತ್।।

ಯಾರು ಸೌವೀರರಾಜನ ಮಹಾ ಸೇನೆಯನ್ನು ಸದೆಬಡಿದು ಸರ್ವಾಂಗಶೋಭನೆ, ಕಾಮಿನೀ, ಭೋಜಳನ್ನು ರಾಣಿಯಾಗಿ ಮಾಡಿಕೊಂಡನೋ, ಯಾರಲ್ಲಿ ಸತ್ಯ- ಧೃತಿ-ಶೌರ್ಯ-ಕೈವಲ್ಯ ಬ್ರಹ್ಮಚರ್ಯಗಳು ಎಲ್ಲವೂ ನಿತ್ಯವಾಗಿ ಇವೆಯೋ ಆ ಬಲಿಷ್ಟನಾದ, ಸತ್ಯಪರಾಕ್ರಮಿಯಾದ, ಅದೀನನಾದ, ಅಪರಾಜಿತನಾದ, ಯುದ್ಧದಲ್ಲಿ ವಾಸುದೇವನಿಗೆ ಸಮಾನನಾದ, ವಾಸುದೇವನಿಗಿಂತ ಕಿರಿಯವನಾದ, ಶೂರ ಧನಂಜಯನನ್ನು ಆಚಾರ್ಯನಾಗಿ ಪಡೆದ, ಅಸ್ತ್ರಗಳಲ್ಲಿ ಪಾರ್ಥನಿಗೆ ಸಮನಾದ ಪುರುಷರ್ಷಭ ಯುಯುಧಾನನು ದ್ರೋಣನನ್ನು ಸಮೀಪಿಸಲು ಯಾರು ತಡೆದರು?

07009033a ವೃಷ್ಣೀನಾಂ ಪ್ರವರಂ ವೀರಂ ಶೂರಂ ಸರ್ವಧನುಷ್ಮತಾಂ।
07009033c ರಾಮೇಣ ಸಮಮಸ್ತ್ರೇಷು ಯಶಸಾ ವಿಕ್ರಮೇಣ ಚ।।
07009034a ಸತ್ಯಂ ಧೃತಿರ್ದಮಃ ಶೌರ್ಯಂ ಬ್ರಹ್ಮಚರ್ಯಮನುತ್ತಮಂ।
07009034c ಸಾತ್ವತೇ ತಾನಿ ಸರ್ವಾಣಿ ತ್ರೈಲೋಕ್ಯಮಿವ ಕೇಶವೇ।।
07009035a ತಮೇವಂಗುಣಸಂಪನ್ನಂ ದುರ್ವಾರಮಪಿ ದೈವತೈಃ।
07009035c ಸಮಾಸಾದ್ಯ ಮಹೇಷ್ವಾಸಂ ಕೇ ವೀರಾಃ ಪರ್ಯವಾರಯನ್।।

ವೃಷ್ಣಿವಂಶೀಯರಲ್ಲಿ ಶ್ರೇಷ್ಠನಾದ, ಸರ್ವಧನುಷ್ಮತರಲ್ಲಿಯೇ ವೀರನೂ ಶೂರನೂ ಆದ, ಅಸ್ತ್ರ-ಯಶಸ್ಸು ಮತ್ತು ವಿಕ್ರಮಗಳಲ್ಲಿ ರಾಮನ ಸಮನಾದ, ಮೂರುಲೋಕಗಳು ಕೇಶವನಲ್ಲಿರುವಂತೆ ಸತ್ಯ-ಧೃತಿ-ಧರ್ಮ-ಶೌರ್ಯ-ಮತ್ತು ಅನುತ್ತಮ ಬ್ರಹ್ಮಚರ್ಯ ಇವೆಲ್ಲ ಗುಣಗಳಿಂದ ಸಂಪನ್ನನಾದ, ದೇವತೆಗಳಿಂದಲೂ ಸೋಲಿಸಲಸಾಧ್ಯನಾದ ಸಾತ್ವತ ಮಹೇಷ್ವಾಸನನ್ನು ಯಾವ ವೀರರು ಸಮೀಪಿಸಿ ತಡೆದರು?

07009036a ಪಾಂಚಾಲೇಷೂತ್ತಮಂ ಶೂರಮುತ್ತಮಾಭಿಜನಪ್ರಿಯಂ।
07009036c ನಿತ್ಯಮುತ್ತಮಕರ್ಮಾಣಮುತ್ತಮೌಜಸಮಾಹವೇ।।
07009037a ಯುಕ್ತಂ ಧನಂಜಯಹಿತೇ ಮಮಾನರ್ಥಾಯ ಚೋತ್ತಮಂ।
07009037c ಯಮವೈಶ್ರವಣಾದಿತ್ಯಮಹೇಂದ್ರವರುಣೋಪಮಂ।।
07009038a ಮಹಾರಥಸಮಾಖ್ಯಾತಂ ದ್ರೋಣಾಯೋದ್ಯಂತಮಾಹವೇ।
07009038c ತ್ಯಜಂತಂ ತುಮುಲೇ ಪ್ರಾಣಾನ್ಕೇ ಶೂರಾಃ ಪರ್ಯವಾರಯನ್।।

ಪಾಂಚಲರಲ್ಲಿಯೇ ಉತ್ತಮನಾದ, ಶೂರ, ಉತ್ತಮ ಕುಲದ, ಹಿರಿಯವರಿಗೆ ಪ್ರಿಯನಾದ, ನಿತ್ಯವೂ ಉತ್ತಮ ಕರ್ಮಗಳನ್ನು ಮಾಡುವ, ಆಹವದಲ್ಲಿ ತೇಜಸ್ವಿಯಾದ, ಧನಂಜಯನ ಹಿತದಲ್ಲಿಯೇ ನಿರತನಾಗಿರುವ, ನನ್ನ ಅರ್ಥಕ್ಕಾಗಿಯೇ ಹುಟ್ಟಿರುವ, ಯಮ-ವೈಶ್ರವಣ-ಆದಿತ್ಯ-ಮಹೇಂದ್ರ-ವರುಣರಂತಿರುವ, ಮಹಾರಥನೆಂದು ಪ್ರಸಿದ್ಧನಾಗಿರುವ, ಯುದ್ಧದಲ್ಲಿ ಪ್ರಾಣಗಳನ್ನು ತೊರೆದು ದ್ರೋಣನೊಂದಿಗೆ ಹೋರಾಡುವ ಆ ಧೃಷ್ಟದ್ಯುಮ್ನನನ್ನು ಯಾವ ಶೂರರು ತಡೆದರು?

07009039a ಏಕೋಽಪಸೃತ್ಯ ಚೇದಿಭ್ಯಃ ಪಾಂಡವಾನ್ಯಃ ಸಮಾಶ್ರಿತಃ।
07009039c ಧೃಷ್ಟಕೇತುಂ ತಮಾಯಾಂತಂ ದ್ರೋಣಾತ್ಕಃ ಸಮವಾರಯತ್।।

ಚೇದಿಗಳಲ್ಲಿ ಒಬ್ಬನೇ ಪಾಂಡವರನ್ನು ಸಮಾಶ್ರಯಿಸಿ ಬಂದಿರುವ ಧೃಷ್ಟಕೇತುವು ದ್ರೋಣನನ್ನು ಸಮೀಪಿಸಿದಾಗ ಯಾರು ತಡೆದರು?

07009040a ಯೋಽವಧೀತ್ಕೇತುಮಾನ್ಶೂರೋ ರಾಜಪುತ್ರಂ ಸುದರ್ಶನಂ।
07009040c ಅಪರಾಂತಗಿರಿದ್ವಾರೇ ಕಸ್ತಂ ದ್ರೋಣಾದವಾರಯತ್।।

ಅಪರಾಂತ ಗಿರಿದ್ವಾರದಲ್ಲಿ ರಾಜಪುತ್ರ ಸುದರ್ಶನನನ್ನು ಸಂಹರಿಸಿದ್ದ ಶೂರ ಕೇತುಮಾನನು ದ್ರೋಣನನ್ನು ಸಮೀಪಿಸಿದಾಗ ಯಾರು ತಡೆದರು?

07009041a ಸ್ತ್ರೀಪೂರ್ವೋ ಯೋ ನರವ್ಯಾಘ್ರೋ ಯಃ ಸ ವೇದ ಗುಣಾಗುಣಾನ್।
07009041c ಶಿಖಂಡಿನಂ ಯಾಜ್ಞಸೇನಿಮಂಲಾನಮನಸಂ ಯುಧಿ।।
07009042a ದೇವವ್ರತಸ್ಯ ಸಮರೇ ಹೇತುಂ ಮೃತ್ಯೋರ್ಮಹಾತ್ಮನಃ।
07009042c ದ್ರೋಣಾಯಾಭಿಮುಖಂ ಯಾಂತಂ ಕೇ ವೀರಾಃ ಪರ್ಯವಾರಯನ್।।

ಯಾವ ನರವ್ಯಾಘ್ರನು ಮೊದಲು ಸ್ತ್ರೀ ದೇಹದ ಗುಣಾಗುಣಗಳನ್ನು ಸ್ವಾನುಭವದಿಂದ ತಿಳಿದುಕೊಂಡಿದ್ದನೋ, ಯುದ್ಧದಲ್ಲಿ ಉತ್ಸಾಹಿಯಾಗಿರುವ, ಸಮರದಲ್ಲಿ ಮಹಾತ್ಮ ದೇವವ್ರತನ ಮೃತ್ಯುವಿಗೆ ಕಾರಣನಾದ ಯಾಜ್ಞಸೇನಿ ಶಿಖಂಡಿಯನ್ನು ದ್ರೋಣನ ಕಡೆ ಹೋಗುತ್ತಿರುವಾಗ ಯಾವ ವೀರರು ತಡೆದರು?

07009043a ಯಸ್ಮಿನ್ನಭ್ಯಧಿಕಾ ವೀರೇ ಗುಣಾಃ ಸರ್ವೇ ಧನಂಜಯಾತ್।
07009043c ಯಸ್ಮಿನ್ನಸ್ತ್ರಾಣಿ ಸತ್ಯಂ ಚ ಬ್ರಹ್ಮಚರ್ಯಂ ಚ ನಿತ್ಯದಾ।।
07009044a ವಾಸುದೇವಸಮಂ ವೀರ್ಯೇ ಧನಂಜಯಸಮಂ ಬಲೇ।
07009044c ತೇಜಸಾದಿತ್ಯಸದೃಶಂ ಬೃಹಸ್ಪತಿಸಮಂ ಮತೌ।।
07009045a ಅಭಿಮನ್ಯುಂ ಮಹಾತ್ಮಾನಂ ವ್ಯಾತ್ತಾನನಮಿವಾಂತಕಂ।
07009045c ದ್ರೋಣಾಯಾಭಿಮುಖಂ ಯಾಂತಂ ಕೇ ವೀರಾಃ ಪರ್ಯವಾರಯನ್।।

ಯಾವ ವೀರನಲ್ಲಿ ಸರ್ವ ಗುಣಗಳೂ ಧನಂಜಯನಿಗಿಂತ ಅಧಿಕವಾಗಿವೆಯೋ, ಯಾರಲ್ಲಿ ಅಸ್ತ್ರಗಳು, ಸತ್ಯ ಮತ್ತು ಬ್ರಹ್ಮಚರ್ಯಗಳು ನಿತ್ಯವೂ ನೆಲೆಸಿವೆಯೋ, ವೀರ್ಯದಲ್ಲಿ ವಾಸುದೇವನ ಸಮನಾಗಿರುವ, ಬಲದಲ್ಲಿ ಧನಂಜಯನ ಸಮನಾಗಿರುವ, ತೇಜಸ್ಸಿನಲ್ಲಿ ಆದಿತ್ಯನ ಸದೃಶನಾಗಿರುವ, ಬುದ್ಧಿಯಲ್ಲಿ ಬೃಹಸ್ಪತಿಯ ಸಮನಾಗಿರುವ ಮಹಾತ್ಮ ಅಭಿಮನ್ಯುವು ಬಾಯಿಕಳೆದ ಅಂತಕನಂತೆ ದ್ರೋಣನ ಕಡೆ ಬರುತ್ತಿರುವಾಗ ಯಾವ ವೀರರು ತಡೆದರು?

07009046a ತರುಣಸ್ತ್ವರುಣಪ್ರಖ್ಯಃ ಸೌಭದ್ರಃ ಪರವೀರಹಾ।
07009046c ಯದಾಭ್ಯಾದ್ರವತ ದ್ರೋಣಂ ತದಾಸೀದ್ವೋ ಮನಃ ಕಥಂ।।

ತರುಣನೂ ತರುಣಪ್ರಜ್ಞನೂ ಆದ ಪರವೀರಹ ಸೌಭದ್ರನು ದ್ರೋಣನನ್ನು ಆಕ್ರಮಣಿಸಿದಾಗ ನಮ್ಮವರ ಮನಸ್ಸು ಹೇಗಿದ್ದಿತು?

07009047a ದ್ರೌಪದೇಯಾ ನರವ್ಯಾಘ್ರಾಃ ಸಮುದ್ರಮಿವ ಸಿಂಧವಃ।
07009047c ಯದ್ದ್ರೋಣಮಾದ್ರವನ್ಸಂಖ್ಯೇ ಕೇ ವೀರಾಸ್ತಾನವಾರಯನ್।।

ನರವ್ಯಾಘ್ರ ದ್ರೌಪದೇಯರು ಸಮುದ್ರವನ್ನು ಸೇರುವ ನದಿಗಳಂತೆ ಯುದ್ಧದಲ್ಲಿ ದ್ರೋಣನನ್ನು ಆಕ್ರಮಣಿಸಿದಾಗ ಯಾವ ವೀರರು ಅವರನ್ನು ತಡೆದರು?

07009048a ಯೇ ತೇ ದ್ವಾದಶ ವರ್ಷಾಣಿ ಕ್ರೀಡಾಮುತ್ಸೃಜ್ಯ ಬಾಲಕಾಃ।
07009048c ಅಸ್ತ್ರಾರ್ಥಮವಸನ್ಭೀಷ್ಮೇ ಬಿಭ್ರತೋ ವ್ರತಮುತ್ತಮಂ।।
07009049a ಕ್ಷತ್ರಂಜಯಃ ಕ್ಷತ್ರದೇವಃ ಕ್ಷತ್ರಧರ್ಮಾ ಚ ಮಾನಿನಃ।
07009049c ಧೃಷ್ಟದ್ಯುಮ್ನಾತ್ಮಜಾ ವೀರಾಃ ಕೇ ತಾನ್ದ್ರೋಣಾದವಾರಯನ್।।

ಬಾಲಕರಾಗಿರುವಾಗ ಯಾರು ಹನ್ನೆರಡು ವರ್ಷಗಳು ಆಟಪಾಟಗಳನ್ನು ತೊರೆದು ಅಸ್ತ್ರಗಳನ್ನು ಕಲಿಯಲು ಭೀಷ್ಮನಲ್ಲಿಯೇ ಉತ್ತಮ ಬ್ರಹ್ಮಚರ್ಯವ್ರತವನ್ನು ಪಾಲಿಸಿಕೊಂಡು ಉಳಿದುಕೊಂಡಿದ್ದರೋ ಆ ಧೃಷ್ಟದ್ಯುಮ್ನನ ವೀರ ಮಕ್ಕಳಾದ ಕ್ಷತ್ರಂಜಯ, ಕ್ಷತ್ರದೇವ, ಮತ್ತು ಮಾನಿನಿ ಕ್ಷತ್ರಧರ್ಮರು ದ್ರೋಣನ ಮೇಲೆ ಆಕ್ರಮಣ ಮಾಡುವಾಗ ಅವರನ್ನು ಯಾವ ವೀರರು ತಡೆದರು?

07009050a ಶತಾದ್ವಿಶಿಷ್ಟಂ ಯಂ ಯುದ್ಧೇ ಸಮಪಶ್ಯಂತ ವೃಷ್ಣಯಃ।
07009050c ಚೇಕಿತಾನಂ ಮಹೇಷ್ವಾಸಂ ಕಸ್ತಂ ದ್ರೋಣಾದವಾರಯತ್।।

ಯಾರನ್ನು ವೃಷ್ಣಿಗಳು ನೂರು ಯೋಧರಿಗಿಂತಲೂ ಅಧಿಕನೆಂದು ಕಾಣುತ್ತಾರೋ ಆ ಮಹೇಷ್ವಾಸ ಚೇಕಿತಾನನು ದ್ರೋಣನ ಸಮೀಪ ಹೋಗದಂತೆ ಯಾರು ತಡೆದರು?

07009051a ವಾರ್ಧಕ್ಷೇಮಿಃ ಕಲಿಂಗಾನಾಂ ಯಃ ಕನ್ಯಾಮಾಹರದ್ಯುಧಿ।
07009051c ಅನಾಧೃಷ್ಟಿರದೀನಾತ್ಮಾ ಕಸ್ತಂ ದ್ರೋಣಾದವಾರಯತ್।।

ಕಲಿಂಗರನ್ನು ಯುದ್ಧದಲ್ಲಿ ಸೋಲಿಸಿ ಕುಮಾರಿಯನ್ನು ಸೆಳೆದುತಂದ ಅದೀನಾತ್ಮ ಅನಾಧೃಷ್ಟಿಯು ದ್ರೋಣನ ಸಮೀಪ ಹೋಗದಂತೆ ಯಾರು ತಡೆದರು?

07009052a ಭ್ರಾತರಃ ಪಂಚ ಕೈಕೇಯಾ ಧಾರ್ಮಿಕಾಃ ಸತ್ಯವಿಕ್ರಮಾಃ।
07009052c ಇಂದ್ರಗೋಪಕವರ್ಣಾಶ್ಚ ರಕ್ತವರ್ಮಾಯುಧಧ್ವಜಾಃ।।
07009053a ಮಾತೃಷ್ವಸುಃ ಸುತಾ ವೀರಾಃ ಪಾಂಡವಾನಾಂ ಜಯಾರ್ಥಿನಃ।
07009053c ತಾನ್ದ್ರೋಣಂ ಹಂತುಮಾಯಾತಾನ್ಕೇ ವೀರಾಃ ಪರ್ಯವಾರಯನ್।।

ಐವರು ಕೈಕೇಯ ಸಹೋದರರು ಧಾರ್ಮಿಕರು ಮತ್ತು ಸತ್ಯವಿಕ್ರಮಿಗಳು. ಚಿಟ್ಟೆಯ ಬಣ್ಣದವರು. ಕೆಂಪು ಬಣ್ಣದ ಕವಚ ಮತ್ತು ಧ್ವಜವನ್ನುಳ್ಳವರು. ಆ ವೀರರು ಪಾಂಡವರ ಚಿಕ್ಕಮ್ಮನ (ಕುಂತಿಯ ತಂಗಿಯ) ಮಕ್ಕಳು. ಆ ಜಯಾರ್ಥಿಗಳು ದ್ರೋಣನನ್ನು ಸಂಹರಿಸಲು ಬರುತ್ತಿರುವಾಗ ಯಾವ ವೀರರು ತಡೆದರು?

07009054a ಯಂ ಯೋಧಯಂತೋ ರಾಜಾನೋ ನಾಜಯನ್ವಾರಣಾವತೇ।
07009054c ಷಣ್ಮಾಸಾನಭಿಸಂರಬ್ಧಾ ಜಿಘಾಂಸಂತೋ ಯುಧಾಂ ಪತಿಂ।।
07009055a ಧನುಷ್ಮತಾಂ ವರಂ ಶೂರಂ ಸತ್ಯಸಂಧಂ ಮಹಾಬಲಂ।
07009055c ದ್ರೋಣಾತ್ಕಸ್ತಂ ನರವ್ಯಾಘ್ರಂ ಯುಯುತ್ಸುಂ ಪ್ರತ್ಯವಾರಯತ್।।

ವಾರಣಾವತದಲ್ಲಿ ಆರು ತಿಂಗಳ ಕಾಲ ಸಂರಬ್ಧರಾಗಿ ಯುದ್ಧಮಾಡಿದರೂ ಯಾರನ್ನು ರಾಜರು ಗೆಲ್ಲಲಿಕ್ಕಾಗಲಿಲ್ಲವೋ ಆ ಯುಧಾಂಪತಿ ಧನುಷ್ಮತರಲ್ಲಿ ಶ್ರೇಷ್ಠ, ಶೂರ, ಸತ್ಯಸಂಧ, ಮಹಾಬಲ ನರವ್ಯಾಘ್ರ ಯುಯುತ್ಸುವನ್ನು ದ್ರೋಣನಿಂದ ಯಾರು ತಡೆಹಿಡಿದರು?

07009056a ಯಃ ಪುತ್ರಂ ಕಾಶಿರಾಜಸ್ಯ ವಾರಾಣಸ್ಯಾಂ ಮಹಾರಥಂ।
07009056c ಸಮರೇ ಸ್ತ್ರೀಷು ಗೃಧ್ಯಂತಂ ಭಲ್ಲೇನಾಪಹರದ್ರಥಾತ್।।
07009057a ಧೃಷ್ಟದ್ಯುಮ್ನಂ ಮಹೇಷ್ವಾಸಂ ಪಾರ್ಥಾನಾಂ ಮಂತ್ರಧಾರಿಣಂ।
07009057c ಯುಕ್ತಂ ದುರ್ಯೋಧನಾನರ್ಥೇ ಸೃಷ್ಟಂ ದ್ರೋಣವಧಾಯ ಚ।।
07009058a ನಿರ್ದಹಂತಂ ರಣೇ ಯೋಧಾನ್ದಾರಯಂತಂ ಚ ಸರ್ವಶಃ।
07009058c ದ್ರೋಣಾಯಾಭಿಮುಖಂ ಯಾಂತಂ ಕೇ ವೀರಾಃ ಪರ್ಯವಾರಯನ್।।

ಸ್ತ್ರೀಯರಲ್ಲಿ ಆಸಕ್ತಿ ಹೊಂದಿದ್ದ ವಾರಣಾಸಿಯ ಕಾಶಿರಾಜನ ಮಗ ಮಹಾರಥನನ್ನು ಸಮರದಲ್ಲಿ ಭಲ್ಲದಿಂದ ಸಂಹರಿಸಿದ್ದ, ಮಹೇಷ್ವಾಸ, ಪಾರ್ಥರ ಮಂತ್ರಧರಿಣಿ, ದುರ್ಯೋಧನನ ಅನರ್ಥದಲ್ಲಿ ತೊಡಗಿರುವ, ದ್ರೋಣನ ವಧೆಗಾಗಿಯೇ ಸೃಷ್ಟನಾಗಿರುವ, ರಥದಲ್ಲಿ ಎಲ್ಲಕಡೆಗಳಿಂದ ಯೋಧರನ್ನು ಸೀಳಿ ದಹಿಸುತ್ತಿರುವ ಧೃಷ್ಟದ್ಯುಮ್ನನು ದ್ರೋಣಾಭಿಮುಖನಾಗಿ ಬರುತ್ತಿರುವಾಗ ಅವನನ್ನು ಯಾವ ವೀರರು ತಡೆದರು?

07009059a ಉತ್ಸಂಗ ಇವ ಸಂವೃದ್ಧಂ ದ್ರುಪದಸ್ಯಾಸ್ತ್ರವಿತ್ತಮಂ।
07009059c ಶೈಖಂಡಿನಂ ಕ್ಷತ್ರದೇವಂ ಕೇ ತಂ ದ್ರೋಣಾದವಾರಯನ್।।

ಅಜ್ಜ ದ್ರುಪದನ ತೊಡೆಯಮೇಲೆಯೇ ಬೆಳೆದ ಅಸ್ತ್ರವಿದರಲ್ಲಿ ಶ್ರೇಷ್ಠನಾದ, ಶಿಖಂಡಿಯ ಮಗ ಕ್ಷತ್ರದೇವನನ್ನು ದ್ರೋಣನ ಸಮೀಪ ಹೋಗದಂತೆ ಯಾರು ತಡೆದರು?

07009060a ಯ ಇಮಾಂ ಪೃಥಿವೀಂ ಕೃತ್ಸ್ನಾಂ ಚರ್ಮವತ್ಸಮವೇಷ್ಟಯತ್।
07009060c ಮಹತಾ ರಥವಂಶೇನ ಮುಖ್ಯಾರಿಘ್ನೋ ಮಹಾರಥಃ।।
07009061a ದಶಾಶ್ವಮೇಧಾನಾಜಹ್ರೇ ಸ್ವನ್ನಪಾನಾಪ್ತದಕ್ಷಿಣಾನ್।
07009061c ನಿರರ್ಗಲಾನ್ಸರ್ವಮೇಧಾನ್ಪುತ್ರವತ್ಪಾಲಯನ್ಪ್ರಜಾಃ।।
07009062a ಪಿಬಂತ್ಯೋ ದಕ್ಷಿಣಾಂ ಯಸ್ಯ ಗಂಗಾಸ್ರೋತಃ ಸಮಾಪಿಬನ್।
07009062c ತಾವತೀರ್ಗಾ ದದೌ ವೀರ ಉಶೀನರಸುತೋಽಧ್ವರೇ।।
07009063a ನ ಪೂರ್ವೇ ನಾಪರೇ ಚಕ್ರುರಿದಂ ಕೇ ಚನ ಮಾನವಾಃ।
07009063c ಇತಿ ಸಂಚುಕ್ರುಶುರ್ದೇವಾಃ ಕೃತೇ ಕರ್ಮಣಿ ದುಷ್ಕರೇ।।
07009064a ಪಶ್ಯಾಮಸ್ತ್ರಿಷು ಲೋಕೇಷು ನ ತಂ ಸಂಸ್ಥಾಸ್ನುಚಾರಿಷು।
07009064c ಜಾತಂ ವಾಪಿ ಜನಿಷ್ಯಂ ವಾ ದ್ವಿತೀಯಂ ವಾಪಿ ಸಂಪ್ರತಿ।।
07009065a ಅನ್ಯಮೌಶೀನರಾಚ್ಚೈಬ್ಯಾದ್ಧುರೋ ವೋಢಾರಮಿತ್ಯುತ।
07009065c ಗತಿಂ ಯಸ್ಯ ನ ಯಾಸ್ಯಂತಿ ಮಾನುಷಾ ಲೋಕವಾಸಿನಃ।।
07009066a ತಸ್ಯ ನಪ್ತಾರಮಾಯಾಂತಂ ಶೈಬ್ಯಂ ಕಃ ಸಮವಾರಯತ್।
07009066c ದ್ರೋಣಾಯಾಭಿಮುಖಂ ಯಾಂತಂ ವ್ಯಾತ್ತಾನನಮಿವಾಂತಕಂ।।

ಚರ್ಮವು ದೇಹವನ್ನು ಆವರಿಸಿರುವಂತೆ ಯಾವ ಮಹಾರಥನು ತನ್ನ ಮುಖ್ಯ ಶತ್ರುಗಳನ್ನು ಸಂಹರಿಸಿ ಮಹಾ ರಥಘೋಷದಿಂದ ಇಡೀ ಪೃಥ್ವಿಯನ್ನು ತುಂಬಿಸಿದನೋ, ಯಾರು ಸಮೃದ್ಧ ಅನ್ನ-ಪಾನೀಯ-ಆಪ್ತದಕ್ಷಿಣೆಗಳಿಂದ ಹತ್ತು ಅಶ್ವಮೇಧಗಳನ್ನು ನಡೆಸಿದನೋ, ಯಾರು ಇತರ ಎಲ್ಲ ಮೇಧಗಳನ್ನೂ ನಿರರ್ಗಲವಾಗಿ ನೆರವೇರಿಸಿ ಪ್ರಜೆಗಳನ್ನು ಪುತ್ರರಂತೆ ಪಾಲಿಸಿದನೋ, ಗಂಗಾ ತೀರದಲ್ಲಿ ಎಷ್ಟು ಮರಳಿನ ಕಣಗಳಿವೆಯೋ ಅಷ್ಟು ಸಂಖ್ಯೆಯ ಗೋವುಗಳನ್ನು ಯಾಗದಲ್ಲಿ ಯಾರು ದಕ್ಷಿಣೆಯನ್ನಾಗಿ ನೀಡಿದನೋ ಆ ಉಶೀನರನ ಮಗನು ದುಷ್ಕರ ಕರ್ಮಗಳನ್ನು ಮಾಡಿದ ಬಳಿಕ ದೇವತೆಗಳು “ಈ ಹಿಂದೆ ಮತ್ತು ಮುಂದೆ ಇದನ್ನು ಯಾವ ಮಾನವನೂ ಮಾಡಿರಲಿಲ್ಲ ಮಾಡುವುದಿಲ್ಲ” ಎಂದು ಉದ್ಗರಿಸಿದ್ದರು. ಔಶೀನರನನ್ನು ಬಿಟ್ಟು ಮೂರು ಲೋಕಗಳಲ್ಲಿಯೂ ಇಂತಹ ಮಹಾಯಾಗಗಳ ಭಾರವನ್ನು ವಹಿಸಿಕೊಳ್ಳಬಲ್ಲ ಎರಡನೆಯವನು ಈ ಮೊದಲು ಹೊಟ್ಟಿರಲಿಲ್ಲ ಮತ್ತು ಹುಟ್ಟುವುದಿಲ್ಲ. ಲೋಕವಾಸಿ ಮನುಷ್ಯರಲ್ಲಿ ಯಾರೂ ಶೈಬ್ಯನು ಹೊಂದಿದ ಗತಿಯನ್ನು ಹೊಂದಲಾರರು. ಅಂತಹ ಶೈಬ್ಯನ ಮಗನು ಬಾಯ್ತೆರೆದ ಅಂತಕನಂತೆ ದ್ರೋಣನ ಕಡೆ ಬರುತ್ತಿರುವಾಗ ಯಾರು ತಡೆದರು?

07009067a ವಿರಾಟಸ್ಯ ರಥಾನೀಕಂ ಮತ್ಸ್ಯಸ್ಯಾಮಿತ್ರಘಾತಿನಃ।
07009067c ಪ್ರೇಪ್ಸಂತಂ ಸಮರೇ ದ್ರೋಣಂ ಕೇ ವೀರಾಃ ಪರ್ಯವಾರಯನ್।।

ಅಮಿತ್ರಘಾತಿ ವಿರಾಟ ಮತ್ಸ್ಯನ ರಥಸೇನೆಯು ಸಮರದಲ್ಲಿ ದ್ರೋಣನ ಬಳಿ ಬಂದಾಗ ಅದನ್ನು ಯಾವ ವೀರರು ತಡೆದರು?

07009068a ಸದ್ಯೋ ವೃಕೋದರಾಜ್ಜಾತೋ ಮಹಾಬಲಪರಾಕ್ರಮಃ।
07009068c ಮಾಯಾವೀ ರಾಕ್ಷಸೋ ಘೋರೋ ಯಸ್ಮಾನ್ಮಮ ಮಹದ್ಭಯಂ।।
07009069a ಪಾರ್ಥಾನಾಂ ಜಯಕಾಮಂ ತಂ ಪುತ್ರಾಣಾಂ ಮಮ ಕಂಟಕಂ।
07009069c ಘಟೋತ್ಕಚಂ ಮಹಾಬಾಹುಂ ಕಸ್ತಂ ದ್ರೋಣಾದವಾರಯತ್।।

ವೃಕೋದರನ ಮಗ ಮಹಾಬಲಪರಾಕ್ರಮಿ, ಘೋರ ರಾಕ್ಷಸ, ನನಗೆ ಮಹಾಭಯವನ್ನುಂಟುಮಾಡುವವನು, ಪಾರ್ಥರ ಜಯವನ್ನು ಬಯಸುವ ಆದರೆ ನನ್ನ ಮಕ್ಕಳಿಗೆ ಕಂಟಕನಾಗಿರುವ, ಮಹಾಬಾಹು ಘಟೋತ್ಕಚನು ದ್ರೋಣನ ಸಮೀಪ ಹೋಗದಂತೆ ಯಾರು ತಡೆದರು?

07009070a ಏತೇ ಚಾನ್ಯೇ ಚ ಬಹವೋ ಯೇಷಾಮರ್ಥಾಯ ಸಂಜಯ।
07009070c ತ್ಯಕ್ತಾರಃ ಸಮ್ಯುಗೇ ಪ್ರಾಣಾನ್ಕಿಂ ತೇಷಾಮಜಿತಂ ಯುಧಿ।।

ಸಂಜಯ! ಇವರು ಮತ್ತು ಇನ್ನೂ ಅನೇಕ ಯೋಧರು ಅವರಿಗಾಗಿ ರಣದಲ್ಲಿ ಪ್ರಾಣಗಳನ್ನು ತ್ಯಜಿಸಲು ಸಿದ್ಧರಾಗಿರುವಾಗ ಅವರನ್ನು ಯಾರು ತಾನೇ ಸೋಲಿಸಿಯಾರು?

07009071a ಯೇಷಾಂ ಚ ಪುರುಷವ್ಯಾಘ್ರಃ ಶಾಂರ್ಙ್ಗಧನ್ವಾ ವ್ಯಪಾಶ್ರಯಃ।
07009071c ಹಿತಾರ್ಥೀ ಚಾಪಿ ಪಾರ್ಥಾನಾಂ ಕಥಂ ತೇಷಾಂ ಪರಾಜಯಃ।।

ಯಾರ ಆಶ್ರಯನಾಗಿ ಹಿತಾರ್ಥಿಯಾಗಿ ಪುರುಷವ್ಯಾಘ್ರ ಶಾಂರ್ಙ್ರಧನ್ವಿಯಿರುವನೋ ಅಂತಹ ಪಾರ್ಥರಿಗೆ ಹೇಗಿನ ಪರಾಜಯ?

07009072a ಲೋಕಾನಾಂ ಗುರುರತ್ಯಂತಂ ಲೋಕನಾಥಃ ಸನಾತನಃ।
07009072c ನಾರಾಯಣೋ ರಣೇ ನಾಥೋ ದಿವ್ಯೋ ದಿವ್ಯಾತ್ಮವಾನ್ಪ್ರಭುಃ।।
07009073a ಯಸ್ಯ ದಿವ್ಯಾನಿ ಕರ್ಮಾಣಿ ಪ್ರವದಂತಿ ಮನೀಷಿಣಃ।
07009073c ತಾನ್ಯಹಂ ಕೀರ್ತಯಿಷ್ಯಾಮಿ ಭಕ್ತ್ಯಾ ಸ್ಥೈರ್ಯಾರ್ಥಮಾತ್ಮನಃ।।

ಲೋಕಗಳ ಅತ್ಯಂತ ಗುರುವಾಗಿರುವ ಯಾರ ದಿವ್ಯ ಕರ್ಮಗಳ ಕುರಿತು ಮನೀಷಿಗಳು ಹೇಳಿಕೊಳ್ಳುತ್ತಿರುತ್ತಾರೋ ಆ ಸನಾತನ, ಲೋಕನಾಥ, ನಾರಾಯಣ, ರಣದಲ್ಲಿ ನಾಥ, ದಿವ್ಯ, ದಿವ್ಯಾತ್ಮವಾನ್, ಪ್ರಭುವನ್ನು ಭಕ್ತಿಯಿಂದ ಆತ್ಮಕ್ಕೆ ಸ್ಥೈರ್ಯವನ್ನು ಪಡೆದುಕೊಳ್ಳಲು ನಾನು ಕೀರ್ತನೆಮಾಡುತ್ತೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಧೃತರಾಷ್ಟ್ರವಾಕ್ಯೇ ನವಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಧೃತರಾಷ್ಟ್ರವಾಕ್ಯ ಎನ್ನುವ ಒಂಭತ್ತನೇ ಅಧ್ಯಾಯವು.