008 ಧೃತರಾಷ್ಟ್ರಶೋಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣಾಭಿಷೇಕ ಪರ್ವ

ಅಧ್ಯಾಯ 8

ಸಾರ

ಧೃತರಾಷ್ಟ್ರಶೋಕ (1-39).

07008001 ಧೃತರಾಷ್ಟ್ರ ಉವಾಚ।
07008001a ಕಿಂ ಕುರ್ವಾಣಂ ರಣೇ ದ್ರೋಣಂ ಜಘ್ನುಃ ಪಾಂಡವಸೃಂಜಯಾಃ।
07008001c ತಥಾ ನಿಪುಣಮಸ್ತ್ರೇಷು ಸರ್ವಶಸ್ತ್ರಭೃತಾಮಪಿ।।

ಧೃತರಾಷ್ಟ್ರನು ಹೇಳಿದನು: “ಪಾಂಡವ-ಸೃಂಜಯರು ಕೊಲ್ಲುವಾಗ ರಣದಲ್ಲಿ ದ್ರೋಣನು ಏನು ಮಾಡುತ್ತಿದ್ದನು? ಅವನು ಎಲ್ಲ ಶಸ್ತ್ರಭೃತರಿಗಿಂತಲೂ ಅಸ್ತ್ರಗಳಲ್ಲಿ ನಿಪುಣನಾಗಿದ್ದನು.

07008002a ರಥಭಂಗೋ ಬಭೂವಾಸ್ಯ ಧನುರ್ವಾಶೀರ್ಯತಾಸ್ಯತಃ।
07008002c ಪ್ರಮತ್ತೋ ವಾಭವದ್ದ್ರೋಣಸ್ತತೋ ಮೃತ್ಯುಮುಪೇಯಿವಾನ್।।

ಅವನ ರಥವು ಮುರಿದುಹೋಗಿದ್ದಿರಬಹುದು. ಧನುಸ್ಸಿಗೆ ಬಾಣಗಳನ್ನು ಹೂಡುವಾಗ ಅದು ಮುರಿದುಹೋಗಿದ್ದಿರಬಹುದು. ಅಥವಾ ಆಗ ದ್ರೋಣನು ಪ್ರಮತ್ತನಾಗಿ ಮೃತ್ಯುವನ್ನು ಹೊಂದಿದನೇ?

07008003a ಕಥಂ ನು ಪಾರ್ಷತಸ್ತಾತ ಶತ್ರುಭಿರ್ದುಷ್ಪ್ರಧರ್ಷಣಂ।
07008003c ಕಿರಂತಮಿಷುಸಂಘಾತಾನ್ರುಕ್ಮಪುಂಖಾನನೇಕಶಃ।।
07008004a ಕ್ಷಿಪ್ರಹಸ್ತಂ ದ್ವಿಜಶ್ರೇಷ್ಠಂ ಕೃತಿನಂ ಚಿತ್ರಯೋಧಿನಂ।
07008004c ದೂರೇಷುಪಾತಿನಂ ದಾಂತಮಸ್ತ್ರಯುದ್ಧೇ ಚ ಪಾರಗಂ।।
07008005a ಪಾಂಚಾಲಪುತ್ರೋ ನ್ಯವಧೀದ್ದಿಷ್ಟ್ಯಾ ಸ ವರಮಚ್ಯುತಂ।
07008005c ಕುರ್ವಾಣಂ ದಾರುಣಂ ಕರ್ಮ ರಣೇ ಯತ್ತಂ ಮಹಾರಥಂ।।

ಶತ್ರುಗಳಿಂದ ಎದುರಿಸಲು ಅಸಾಧ್ಯನಾದ, ಕ್ಷಿಪ್ರಹಸ್ತ, ದ್ವಿಜಶ್ರೇಷ್ಠ, ಪಂಡಿತ, ಚಿತ್ರಯೋಧೀ, ಬಹಳದೂರದವರೆಗೂ ಪ್ರಹರಿಸಬಲ್ಲ, ಜಿತೇಂದ್ರಿಯ, ಅಸ್ತ್ರಯುದ್ಧದಲ್ಲಿ ಪಾರಂಗತನಾದ, ರಣದಲ್ಲಿ ಪ್ರಯತ್ನಮಾಡಿ ದಾರುಣ ಕರ್ಮಗಳನ್ನೆಸಗಿದ ಆ ಮಹಾರಥ, ಶ್ರೇಷ್ಠ, ಅಚ್ಯುತನನ್ನು ಪಾಂಚಾಲಪುತ್ರ ಪಾರ್ಷತನು ಹೇಗೆ ಅನೇಕ ರುಕ್ಮಪುಂಖ ಶರಗಳಿಂದ ಮುಸುಕಿ ಕೊಂದನು?

07008006a ವ್ಯಕ್ತಂ ದಿಷ್ಟಂ ಹಿ ಬಲವತ್ಪೌರುಷಾದಿತಿ ಮೇ ಮತಿಃ।
07008006c ಯದ್ದ್ರೋಣೋ ನಿಹತಃ ಶೂರಃ ಪಾರ್ಷತೇನ ಮಹಾತ್ಮನಾ।।

ಮಹಾತ್ಮ ಶೂರ ಪಾರ್ಷತನಿಂದ ದ್ರೋಣನು ಹತನಾದನೆಂದರೆ ಪೌರುಷಕ್ಕಿಂತ ದೈವವೇ ಬಲವಾದುದು ಎನ್ನುವುದು ವ್ಯಕ್ತವಾಯಿತು ಎಂದು ನನಗನ್ನಿಸುತ್ತದೆ.

07008007a ಅಸ್ತ್ರಂ ಚತುರ್ವಿಧಂ ವೀರೇ ಯಸ್ಮಿನ್ನಾಸೀತ್ಪ್ರತಿಷ್ಠಿತಂ।
07008007c ತಮಿಷ್ವಸ್ತ್ರವರಾಚಾರ್ಯಂ ದ್ರೋಣಂ ಶಂಸಸಿ ಮೇ ಹತಂ।।

ಯಾವ ವೀರನಲ್ಲಿ ನಾಲ್ಕೂ ವಿಧದ ಅಸ್ತ್ರಗಳು ನೆಲಸಿದ್ದವೋ ಆ ಧನುಷ್ಮಂತರಿಗೆಲ್ಲ ಆಚಾರ್ಯನಾಗಿದ್ದ ದ್ರೋಣನು ಸತ್ತನೆಂದು ನನಗೆ ನೀನು ಹೇಳುತ್ತಿರುವೆಯಲ್ಲ!

07008008a ಶ್ರುತ್ವಾ ಹತಂ ರುಕ್ಮರಥಂ ವೈಯಾಘ್ರಪರಿವಾರಣಂ।
07008008c ಜಾತರೂಪಪರಿಷ್ಕಾರಂ ನಾದ್ಯ ಶೋಕಮಪಾನುದೇ।।

ವ್ಯಾಘ್ರದ ಚರ್ಮವನ್ನು ಹೊದಿಸಿದ್ದ ಬಂಗಾರದ ರಥದಲ್ಲಿ ಕುಳಿತಿದ್ದ ಅವನು ಹತನಾದನೆಂದು ಕೇಳಿ ನನಗಿಂದು ದುಃಖವಾಗುತ್ತಿದೆ.

07008009a ನ ನೂನಂ ಪರದುಃಖೇನ ಕಶ್ಚಿನ್ಮ್ರಿಯತಿ ಸಂಜಯ।
07008009c ಯತ್ರ ದ್ರೋಣಮಹಂ ಶ್ರುತ್ವಾ ಹತಂ ಜೀವಾಮಿ ನ ಮ್ರಿಯೇ।।

ಸಂಜಯ! ಪರಮ ದುಃಖದಿಂದ ಯಾರೂ ಸಾಯುವುದಿಲ್ಲವಲ್ಲವೇ? ದ್ರೋಣನು ಹತನಾದನೆಂದು ಕೇಳಿಯೂ ನಾನು ಸಾಯದೇ ಜೀವಿಸಿರುವೆನಲ್ಲಾ!

07008010a ಅಶ್ಮಸಾರಮಯಂ ನೂನಂ ಹೃದಯಂ ಸುದೃಢಂ ಮಮ।
07008010c ಯಚ್ಚ್ರುತ್ವಾ ನಿಹತಂ ದ್ರೋಣಂ ಶತಧಾ ನ ವಿದೀರ್ಯತೇ।।

ದ್ರೋಣನ ಸಾವಿನ ಕುರಿತು ಕೇಳಿಯೂ ನೂರು ಚೂರುಗಳಾಗಿ ಒಡೆಯುದೇ ಇರುವ ನನ್ನ ಈ ಹೃದಯವು ಸುದೃಢ ಕಲ್ಲಿನಿಂದ ಮಾಡಲ್ಪಟ್ಟಿರಬಹುದು.

07008011a ಬ್ರಾಹ್ಮೇ ವೇದೇ ತಥೇಷ್ವಸ್ತ್ರೇ ಯಮುಪಾಸನ್ಗುಣಾರ್ಥಿನಃ।
07008011c ಬ್ರಾಹ್ಮಣಾ ರಾಜಪುತ್ರಾಶ್ಚ ಸ ಕಥಂ ಮೃತ್ಯುನಾ ಹತಃ।।

ಬ್ರಾಹ್ಮೀ ವೇದಗಳು ಮತ್ತು ಅಸ್ತ್ರಗಳನ್ನು ತಿಳಿದುಕೊಳ್ಳಲು ಗುಣಾರ್ಥಿಗಳಾದ ಬ್ರಾಹ್ಮಣರು ಮತ್ತು ರಾಜಪುತ್ರರು ಯಾರನ್ನು ಉಪಾಸಿಸುತ್ತಿದ್ದರೋ ಅವನೇ ಹೇಗೆ ಮೃತ್ಯುವಿನಿಂದ ಕೊಂಡೊಯ್ಯಲ್ಪಟ್ಟನು?

07008012a ಶೋಷಣಂ ಸಾಗರಸ್ಯೇವ ಮೇರೋರಿವ ವಿಸರ್ಪಣಂ।
07008012c ಪತನಂ ಭಾಸ್ಕರಸ್ಯೇವ ನ ಮೃಷ್ಯೇ ದ್ರೋಣಪಾತನಂ।।

ಸಾಗರವನ್ನೇ ಒಣಗಿಸಬಹುದು. ಮೇರುಪರ್ವತವನ್ನೇ ಕಿತ್ತಿಡಬಹುದು. ಭಾಸ್ಕರನು ಬೀಳಬಹುದು. ಆದರೆ ದ್ರೋಣನ ಪತನವಾಯಿತೆಂದರೆ ನಂಬಲಸಾಧ್ಯ.

07008013a ದೃಪ್ತಾನಾಂ ಪ್ರತಿಷೇದ್ಧಾಸೀದ್ಧಾರ್ಮಿಕಾನಾಂ ಚ ರಕ್ಷಿತಾ।
07008013c ಯೋಽತ್ಯಾಕ್ಷೀತ್ಕೃಪಣಸ್ಯಾರ್ಥೇ ಪ್ರಾಣಾನಪಿ ಪರಂತಪಃ।।

ಅವನು ದುಷ್ಟರನ್ನು ನಿಯಂತ್ರಿಸುತ್ತಿದ್ದನು. ಧಾರ್ಮಿಕರನ್ನು ರಕ್ಷಿಸುತ್ತಿದ್ದನು. ಅಂಥಹ ಪರಂತಪನು ಕೃಪಣನಾಗಿ ಪ್ರಾಣಗಳನ್ನೇ ಒತ್ತೆಯಿಟ್ಟಿದ್ದನು.

07008014a ಮಂದಾನಾಂ ಮಮ ಪುತ್ರಾಣಾಂ ಜಯಾಶಾ ಯಸ್ಯ ವಿಕ್ರಮೇ।
07008014c ಬೃಹಸ್ಪತ್ಯುಶನಸ್ತುಲ್ಯೋ ಬುದ್ಧ್ಯಾ ಸ ನಿಹತಃ ಕಥಂ।।

ಅವನ ವಿಕ್ರಮದಿಂದ ನನ್ನ ಮಂದ ಮಕ್ಕಳು ಜಯವನ್ನು ಆಶಿಸಿದ್ದರು. ಬುದ್ಧಿಯಲ್ಲಿ ಬೃಹಸ್ಪತಿ-ಉಶಸನರ ಸಮನಾಗಿದ್ದ ಅವನು ಹೇಗೆ ಹತನಾದನು?

07008015a ತೇ ಚ ಶೋಣಾ ಬೃಹಂತೋಽಶ್ವಾಃ ಸೈಂಧವಾ ಹೇಮಮಾಲಿನಃ।
07008015c ರಥೇ ವಾತಜವಾ ಯುಕ್ತಾಃ ಸರ್ವಶಬ್ದಾತಿಗಾ ರಣೇ।।
07008016a ಬಲಿನೋ ಘೋಷಿಣೋ ದಾಂತಾಃ ಸೈಂಧವಾಃ ಸಾಧುವಾಹಿನಃ।
07008016c ದೃಢಾಃ ಸಂಗ್ರಾಮಮಧ್ಯೇಷು ಕಚ್ಚಿದಾಸನ್ನ ವಿಹ್ವಲಾಃ।।

ಅವನ ರಥಕ್ಕೆ ಕಟ್ಟಿದ್ದ ಕೆಂಪುಬಣ್ಣದ ಹೇಮಮಾಲಿನೀ ಗಾಳಿಯ ವೇಗವುಳ್ಳ, ರಣದಲ್ಲಿ ಎಲ್ಲ ಶಸ್ತ್ರಗಳಿಗೂ ಅತೀತವಾದ, ಜೋರಾಗಿ ಕೂಗುವ, ಸೈಂಧವರಿಂದ ತರಬೇತಿಹೊಂದಿದ ಸಾಧುವಾಹಿನಿಗಳಾದ ದೃಢವಾಗಿದ್ದ ಅತಿದೊಡ್ಡ ಸೈಂಧವ ಕುದುರೆಗಳು ಸಂಗ್ರಾಮದ ಮಧ್ಯದಲ್ಲಿ ಏನಾದರೂ ವಿಹ್ವಲಗೊಂಡವೇ?

07008017a ಕರಿಣಾಂ ಬೃಂಹತಾಂ ಯುದ್ಧೇ ಶಂಖದುಂದುಭಿನಿಸ್ವನಂ।
07008017c ಜ್ಯಾಕ್ಷೇಪಶರವರ್ಷಾಣಾಂ ಶಸ್ತ್ರಾಣಾಂ ಚ ಸಹಿಷ್ಣವಃ।।
07008018a ಆಶಂಸಂತಃ ಪರಾಂ ಜೇತುಂ ಜಿತಶ್ವಾಸಾ ಜಿತವ್ಯಥಾಃ।
07008018c ಹಯಾಃ ಪ್ರಜವಿತಾಃ ಶೀಘ್ರಾ ಭಾರದ್ವಾಜರಥೋದ್ವಹಾಃ।।
07008019a ತೇ ಸ್ಮ ರುಕ್ಮರಥೇ ಯುಕ್ತಾ ನರವೀರಸಮಾಹಿತಾಃ।
07008019c ಕಥಂ ನಾಭ್ಯತರಂಸ್ತಾತ ಪಾಂಡವಾನಾಮನೀಕಿನೀಂ।।

ನರವೀರ ಭಾರದ್ವಾಜನನ್ನು ಹೊತ್ತಿದ್ದ ಆ ರುಕ್ಮರಥಕ್ಕೆ ಕಟ್ಟಿದ್ದ ಯುದ್ಧದಲ್ಲಿ ಶಂಖ-ದುಂದುಭಿ ನಿಸ್ವನಗಳನ್ನೂ, ಆನೆಗಳ ಘೀಳನ್ನೂ, ಬಿಲ್ಲಿನಿಂದ ಹೊರಟ ಶರವರ್ಷ-ಶಸ್ತ್ರಗಳನ್ನೂ ಸಹಿಸಿಕೊಳ್ಳಬಲ್ಲವಾಗಿದ್ದ, ಶತ್ರುಗಳನ್ನು ಗೆಲ್ಲಲು ಬಯಸಿ ಆಯಾಸವನ್ನು ಗೆದ್ದಿದ್ದ, ವ್ಯಥೆಯನ್ನು ಗೆದ್ದಿದ್ದ, ಅತಿ ಶೀಘ್ರವಾಗಿ ಚಲಿಸಬಲ್ಲವಾಗಿದ್ದ ಆ ಕುದುರೆಗಳು ಹೇಗೆ ತಾನೇ ಪಾಂಡವರ ಸೇನೆಗಳಿಂದ ಹಿಂದೆಸರಿದವು?

07008020a ಜಾತರೂಪಪರಿಷ್ಕಾರಮಾಸ್ಥಾಯ ರಥಮುತ್ತಮಂ।
07008020c ಭಾರದ್ವಾಜಃ ಕಿಮಕರೋಚ್ಚೂರಃ ಸಂಕ್ರಂದನೋ ಯುಧಿ।।

ಬಂಗಾರದಿಂದ ಪರಿಷ್ಕೃತ ಉತ್ತಮ ರಥವನ್ನೇರಿ ಶೂರ ಭಾರದ್ವಾಜನು ಯುದ್ಧದಲ್ಲಿ ಪಾರಾಗಲು ಏನು ಮಾಡಿದನು?

07008021a ವಿದ್ಯಾಂ ಯಸ್ಯೋಪಜೀವಂತಿ ಸರ್ವಲೋಕಧನುರ್ಭೃತಃ।
07008021c ಸ ಸತ್ಯಸಂಧೋ ಬಲವಾನ್ದ್ರೋಣಃ ಕಿಮಕರೋದ್ಯುಧಿ।।

ಲೋಕದ ಸರ್ವ ಧನುಭೃತರ ವಿದ್ಯೆಯು ಯಾರ ಉಪಜೀವನವೋ ಆ ಸತ್ಯಸಂಧ, ಬಲವಾನ ದ್ರೋಣನು ಯುದ್ಧದಲ್ಲಿ ಏನು ಮಾಡಿದನು?

07008022a ದಿವಿ ಶಕ್ರಮಿವ ಶ್ರೇಷ್ಠಂ ಮಹಾಮಾತ್ರಂ ಧನುರ್ಭೃತಾಂ।
07008022c ಕೇ ನು ತಂ ರೌದ್ರಕರ್ಮಾಣಂ ಯುದ್ಧೇ ಪ್ರತ್ಯುದ್ಯಯೂ ರಥಾಃ।।

ದಿವಿಯಲ್ಲಿ ಶಕ್ರನಂತೆ ಧನುಭೃತ ಮಹಾಮಾತ್ರರಲ್ಲಿ ಶ್ರೇಷ್ಠನಾದ ಆ ರೌದ್ರಕರ್ಮಿಯನ್ನು ಯುದ್ಧದಲ್ಲಿ ಯಾವ್ಯಾವ ರಥರು ಎದುರಿಸಿ ಯುದ್ಧಮಾಡಿದರು?

07008023a ನನು ರುಕ್ಮರಥಂ ದೃಷ್ಟ್ವಾ ಪ್ರದ್ರವಂತಿ ಸ್ಮ ಪಾಂಡವಾಃ।
07008023c ದಿವ್ಯಮಸ್ತ್ರಂ ವಿಕುರ್ವಾಣಂ ಸೇನಾಂ ಕ್ಷಿಣ್ವಂತಮವ್ಯಯಂ।।

ದಿವ್ಯಾಸ್ತ್ರಗಳನ್ನು ಎರಚುತ್ತಿದ್ದ ಆ ರುಕ್ಮರಥನನ್ನು ನೋಡಿ ಪಾಂಡವ ಸೇನೆಗಳು ಓಡಿಹೋಗಲಿಲ್ಲವೇ?

07008024a ಉತಾಹೋ ಸರ್ವಸೈನ್ಯೇನ ಧರ್ಮರಾಜಃ ಸಹಾನುಜಃ।
07008024c ಪಾಂಚಾಲ್ಯಪ್ರಗ್ರಹೋ ದ್ರೋಣಂ ಸರ್ವತಃ ಸಮವಾರಯತ್।।

ಧರ್ಮರಾಜನು ಅನುಜರು ಮತ್ತು ಪಾಂಚಾಲ್ಯರೊಡಗೂಡಿ ದ್ರೋಣನನ್ನು ಎಲ್ಲ ಕಡೆಗಳಿಂದ ಸುತ್ತುವರೆದು ಹಿಡಿದನೋ ಹೇಳು!

07008025a ನೂನಮಾವಾರಯತ್ಪಾರ್ಥೋ ರಥಿನೋಽನ್ಯಾನಜಿಹ್ಮಗೈಃ।
07008025c ತತೋ ದ್ರೋಣಂ ಸಮಾರೋಹತ್ಪಾರ್ಷತಃ ಪಾಪಕರ್ಮಕೃತ್।।

ಪಾರ್ಥನು ತನ್ನ ಜಿಹ್ಮಗಗಳಿಂದ ಅನ್ಯ ರಥಿಗಳನ್ನು ತಡೆದಿರಬಹುದು. ಆಗ ಪಾರ್ಷತನು ದ್ರೋಣನನ್ನು ಆಕ್ರಮಣಿಸುವ ಪಾಪಕರ್ಮವನ್ನು ಮಾಡಿರಬಹುದು.

07008026a ನ ಹ್ಯನ್ಯಂ ಪರಿಪಶ್ಯಾಮಿ ವಧೇ ಕಂ ಚನ ಶುಷ್ಮಿಣಃ।
07008026c ಧೃಷ್ಟದ್ಯುಮ್ನಾದೃತೇ ರೌದ್ರಾತ್ಪಾಲ್ಯಮಾನಾತ್ಕಿರೀಟಿನಾ।।

ಕಿರೀಟಿಯಿಂದ ರಕ್ಷಿಸಲ್ಪಟ್ಟ ಧೃಷ್ಟದ್ಯುಮ್ನನಲ್ಲದೇ ಬೇರೆ ಯಾವ ಯೋಧನೂ ಅವನನ್ನು ವಧಿಸುವವನೆಂದು ನನಗೆ ತೋಚುತ್ತಿಲ್ಲ.

07008027a ತೈರ್ವೃತಃ ಸರ್ವತಃ ಶೂರೈಃ ಪಾಂಚಾಲ್ಯಾಪಸದಸ್ತತಃ।
07008027c ಕೇಕಯೈಶ್ಚೇದಿಕಾರೂಷೈರ್ಮತ್ಸ್ಯೈರನ್ಯೈಶ್ಚ ಭೂಮಿಪೈಃ।।
07008028a ವ್ಯಾಕುಲೀಕೃತಮಾಚಾರ್ಯಂ ಪಿಪೀಲೈರುರಗಂ ಯಥಾ।
07008028c ಕರ್ಮಣ್ಯಸುಕರೇ ಸಕ್ತಂ ಜಘಾನೇತಿ ಮತಿರ್ಮಮ।।

ಬಹುಷಃ ಕೇಕಯ-ಚೇದಿ-ಕರೂಷ-ಮತ್ಸ್ಯ ಶೂರರು ಮತ್ತು ಅನ್ಯ ಭೂಮಿಪರು ಆಚಾರ್ಯನನ್ನು ಸುತ್ತವರೆದು ಇರುವೆಗಳು ಸರ್ಪವನ್ನು ಹೇಗೋ ಹಾಗೆ ವ್ಯಾಕುಲಪಡಿಸುತ್ತಿರುವಾಗ ಆ ಪಾಂಚಾಲ್ಯನು ಅವನನ್ನು ಕೊಲ್ಲುವ ಕೆಟ್ಟ ಕೆಲಸವನ್ನು ಮಾಡಿರಬಹುದೆಂದು ನನ್ನ ಅಭಿಪ್ರಾಯ.

07008029a ಯೋಽಧೀತ್ಯ ಚತುರೋ ವೇದಾನ್ಸರ್ವಾನಾಖ್ಯಾನಪಂಚಮಾನ್।
07008029c ಬ್ರಾಹ್ಮಣಾನಾಂ ಪ್ರತಿಷ್ಠಾಸೀತ್ಸ್ರೋತಸಾಮಿವ ಸಾಗರಃ।
07008029e ಸ ಕಥಂ ಬ್ರಾಹ್ಮಣೋ ವೃದ್ಧಃ ಶಸ್ತ್ರೇಣ ವಧಮಾಪ್ತವಾನ್।।

ನಾಲ್ಕು ವೇದಗಳನ್ನೂ ಪಂಚಮವಾದ ಸರ್ವ ಆಖ್ಯಾನಗಳನ್ನೂ ಪಳಗಿಸಿಕೊಂಡಿದ್ದ, ನದಿಗಳಿಗೆ ಸಾಗರವು ಹೇಗೋ ಹಾಗೆ ಬ್ರಾಹ್ಮಣರಿಗೆ ಪ್ರತಿಷ್ಠನಾಗಿದ್ದ ಆ ಬ್ರಾಹ್ಮಣ ವೃದ್ಧನು ಹೇಗೆ ತಾನೇ ಶಸ್ತ್ರದಿಂದ ವಧಿಸಲ್ಪಟ್ಟನು?

07008030a ಅಮರ್ಷಣೋ ಮರ್ಷಿತವಾನ್ ಕ್ಲಿಶ್ಯಮಾನಃ ಸದಾ ಮಯಾ।
07008030c ಅನರ್ಹಮಾಣಃ ಕೌಂತೇಯಃ ಕರ್ಮಣಸ್ತಸ್ಯ ತತ್ಫಲಂ।।

ಯಾವಾಗಲೂ ನನ್ನ ಕಾರಣದಿಂದಾಗಿ ಆ ಅಮರ್ಷಣನು ದುಃಖವನ್ನೂ ಕಷ್ಟಗಳನ್ನೂ ಅನುಭವಿಸಿ, ಕೊನೆಯಲ್ಲಿ ಅನರ್ಹನಾಗಿದ್ದರೂ ಕೌಂತೇಯನು ಅವನ ಕರ್ಮಗಳ ಫಲವನ್ನು ನೀಡಿದನು.

07008031a ಯಸ್ಯ ಕರ್ಮಾನುಜೀವಂತಿ ಲೋಕೇ ಸರ್ವಧನುರ್ಭೃತಃ।
07008031c ಸ ಸತ್ಯಸಂಧಃ ಸುಕೃತೀ ಶ್ರೀಕಾಮೈರ್ನಿಹತಃ ಕಥಂ।।

ಯಾರ ಕರ್ಮಗಳನ್ನು ಆಧರಿಸಿ ಲೋಕಗಳು ಜೀವಿಸುತ್ತವೆಯೋ ಆ ಸರ್ವಧನುಭೃತ, ಸತ್ಯಸಂಧ, ಸುಕೃತೀ, ಶ್ರೀಕಾಮನು ಹೇಗೆ ತಾನೇ ಹತನಾದನು?

07008032a ದಿವಿ ಶಕ್ರ ಇವ ಶ್ರೇಷ್ಠೋ ಮಹಾಸತ್ತ್ವೋ ಮಹಾಬಲಃ।
07008032c ಸ ಕಥಂ ನಿಹತಃ ಪಾರ್ಥೈಃ ಕ್ಷುದ್ರಮತ್ಸ್ಯೈರ್ಯಥಾ ತಿಮಿಃ।।

ದಿವಿಯಲ್ಲಿ ಶಕ್ರನಂತೆ ಶ್ರೇಷ್ಠನಾಗಿದ್ದ, ಮಹಾಸತ್ತ್ವ, ಮಹಾಬಲನು ಕ್ಷುದ್ರಮೀನುಗಳಿಂದ ತಿಮಿಂಗಿಲದಂತೆ ಹೇಗೆ ಪಾರ್ಥರಿಂದ ಹತನಾದನು?

07008033a ಕ್ಷಿಪ್ರಹಸ್ತಶ್ಚ ಬಲವಾನ್ದೃಢಧನ್ವಾರಿಮರ್ದನಃ।
07008033c ನ ಯಸ್ಯ ಜೀವಿತಾಕಾಂಕ್ಷೀ ವಿಷಯಂ ಪ್ರಾಪ್ಯ ಜೀವತಿ।।
07008034a ಯಂ ದ್ವೌ ನ ಜಹತಃ ಶಬ್ದೌ ಜೀವಮಾನಂ ಕದಾ ಚನ।
07008034c ಬ್ರಾಹ್ಮಶ್ಚ ವೇದಕಾಮಾನಾಂ ಜ್ಯಾಘೋಷಶ್ಚ ಧನುರ್ಭೃತಾಂ।।
07008035a ನಾಹಂ ಮೃಷ್ಯೇ ಹತಂ ದ್ರೋಣಂ ಸಿಂಹದ್ವಿರದವಿಕ್ರಮಂ।
07008035c ಕಥಂ ಸಂಜಯ ದುರ್ಧರ್ಷಮನಾಧೃಷ್ಯಯಶೋಬಲಂ।।

ಸಂಜಯ! ಜೀವಿತಾಕಾಂಕ್ಷಿಯಾದವನು ಯಾರ ಹತ್ತಿರ ಹೋಗಿ ಜೀವಿತವಾಗಿರುವುದಿಲ್ಲವೋ, ಯಾರ ಜೀವಮಾನದಲ್ಲಿ ಎಂದೂ ಈ ಎರಡು ಶಬ್ಧಗಳು - ಬ್ರಾಹ್ಮಣರು ಇಷ್ಟಪಡುವ ವೇದಗಳು ಮತ್ತು ಧನುಭೃತರು ಇಷ್ಟಪಡುವ ಧನುಸ್ಸಿನ ಟೇಂಕಾರ- ಮಾತ್ರ ಕೇಳಿಬರುತ್ತಿದ್ದವೋ ಆ ಕ್ಷಿಪ್ರಹಸ್ತ, ಬಲವಾನ್, ದೃಢಧನ್ವಿ, ಅರಿಮರ್ದನ, ಸಿಂಹದ ವಿಕ್ರಮವುಳ್ಳ ಆ ದುರ್ಧರ್ಷ ಅನಾದೃಷ್ಯ ಯಶೋಬಲನು ಹೇಗೆ ಹತನಾದನೆಂದೇ ತಿಳಿಯದಾಗಿದೆ.

07008036a ಕೇಽರಕ್ಷನ್ದಕ್ಷಿಣಂ ಚಕ್ರಂ ಸವ್ಯಂ ಕೇ ಚ ಮಹಾತ್ಮನಃ।
07008036c ಪುರಸ್ತಾತ್ಕೇ ಚ ವೀರಸ್ಯ ಯುಧ್ಯಮಾನಸ್ಯ ಸಂಯುಗೇ।।

ರಣರಂಗದಲ್ಲಿ ಯುದ್ಧಮಾಡುತ್ತಿರುವಾಗ ಆ ವೀರ ಮಹಾತ್ಮನ ಬಲ ಮತ್ತು ಎಡ ಚಕ್ರಗಳನ್ನು, ಎದುರಿನಿಂದ ಯಾರು ರಕ್ಷಿಸಿದರು?

07008037a ಕೇ ಚ ತತ್ರ ತನುಂ ತ್ಯಕ್ತ್ವಾ ಪ್ರತೀಪಂ ಮೃತ್ಯುಮಾವ್ರಜನ್।
07008037c ದ್ರೋಣಸ್ಯ ಸಮರೇ ವೀರಾಃ ಕೇಽಕುರ್ವಂತ ಪರಾಂ ಧೃತಿಂ।।

ಅಲ್ಲಿ ಯಾರ್ಯಾರು ಎದಿರು ನಿಂತಿದ್ದ ಮೃತ್ಯುವನ್ನು ಅಪ್ಪಿಕೊಂಡು ತನುವನ್ನು ತ್ಯಜಿಸಿದರು? ಯಾವ ವೀರರು ಸಮರದಲ್ಲಿ ದ್ರೋಣನನ್ನು ಅವನ ಕೊನೆಯ ಪಯಣದಲ್ಲಿ ಅನುಸರಿಸಿದರು?

07008038a ಏತದಾರ್ಯೇಣ ಕರ್ತವ್ಯಂ ಕೃಚ್ಚ್ರಾಸ್ವಾಪತ್ಸು ಸಂಜಯ।
07008038c ಪರಾಕ್ರಮೇದ್ಯಥಾಶಕ್ತ್ಯಾ ತಚ್ಚ ತಸ್ಮಿನ್ಪ್ರತಿಷ್ಠಿತಂ।।

ಸಂಜಯ! ಕಷ್ಟ ಆಪತ್ತುಗಳಲ್ಲಿಯೂ ಆರ್ಯ ಕರ್ತವ್ಯವನ್ನು ತಳ್ಳದಿದ್ದ ಅವನು ಪರಾಕ್ರಮದಿಂದ ಯಥಾಶಕ್ತಿ ಹೋರಾಡಿ ಅಲ್ಲಿ ನಿಂತಿದ್ದನು.

07008039a ಮುಹ್ಯತೇ ಮೇ ಮನಸ್ತಾತ ಕಥಾ ತಾವನ್ನಿವರ್ತ್ಯತಾಂ।
07008039c ಭೂಯಸ್ತು ಲಬ್ಧಸಂಜ್ಞಸ್ತ್ವಾ ಪರಿಪ್ರಕ್ಷ್ಯಾಮಿ ಸಂಜಯ।।

ಸಂಜಯ! ಅಯ್ಯಾ! ನನ್ನ ಮನಸ್ಸು ಮೂರ್ಛೆ ಹೋಗುತ್ತಿದೆ. ಇದನ್ನು ಇಲ್ಲಿಯೇ ನಿಲ್ಲಿಸು. ಸಂಜ್ಞೆಗಳನ್ನು ಪಡೆದ ನಂತರ ಪುನಃ ಕೇಳುತ್ತೇನೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಧೃತರಾಷ್ಟ್ರಶೋಕೇ ಅಷ್ಟಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಧೃತರಾಷ್ಟ್ರಶೋಕ ಎನ್ನುವ ಎಂಟನೇ ಅಧ್ಯಾಯವು.