007 ದ್ರೋಣವಧಶ್ರವಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣಾಭಿಷೇಕ ಪರ್ವ

ಅಧ್ಯಾಯ 7

ಸಾರ

ದ್ರೋಣಪರಾಕ್ರಮ ವರ್ಣನೆ (1-28). ದ್ರೋಣವಧಶ್ರವಣ (29-36).

07007001 ಸಂಜಯ ಉವಾಚ।
07007001a ತಥಾ ದ್ರೋಣಮಭಿಘ್ನಂತಂ ಸಾಶ್ವಸೂತರಥದ್ವಿಪಾನ್।
07007001c ವ್ಯಥಿತಾಃ ಪಾಂಡವಾ ದೃಷ್ಟ್ವಾ ನ ಚೈನಂ ಪರ್ಯವಾರಯನ್।।

ಸಂಜಯನು ಹೇಳಿದನು: “ಹಾಗೆ ದ್ರೋಣನು ಅಶ್ವ-ಸೂತ-ರಥ-ಗಜಗಳೊಡನೆ ಸಂಹರಿಸುತ್ತಾ ಅವರನ್ನು ಸುತ್ತುವರೆದುದನ್ನು ನೋಡಿ ಪಾಂಡವರು ವ್ಯಥಿತರಾದರು.

07007002a ತತೋ ಯುಧಿಷ್ಠಿರೋ ರಾಜಾ ಧೃಷ್ಟದ್ಯುಮ್ನಧನಂಜಯೌ।
07007002c ಅಬ್ರವೀತ್ಸರ್ವತೋ ಯತ್ತೈಃ ಕುಂಭಯೋನಿರ್ನಿವಾರ್ಯತಾಂ।।

ಆಗ ರಾಜಾ ಯುಧಿಷ್ಠಿರನು ಧೃಷ್ಟದ್ಯುಮ್ನ ಧನಂಜಯರಿಗೆ “ಕುಂಭಯೋನಿಜನನ್ನು ತಡೆಯುವ ಸರ್ವ ಯತ್ನಗಳೂ ನಡೆಯಲಿ!” ಎಂದನು.

07007003a ತತ್ರೈನಮರ್ಜುನಶ್ಚೈವ ಪಾರ್ಷತಶ್ಚ ಸಹಾನುಗಃ।
07007003c ಪರ್ಯಗೃಹ್ಣಂಸ್ತತಃ ಸರ್ವೇ ಸಮಾಯಾಂತಂ ಮಹಾರಥಾಃ।।

ಆಗ ಅರ್ಜುನ ಮತ್ತು ಪಾರ್ಷತರು ಎಲ್ಲ ಮಹಾರಥ ಅನುಯಾಯಿಗಳೊಂದಿಗೆ ದ್ರೋಣನನ್ನು ಮುತ್ತಿದರು.

07007004a ಕೇಕಯಾ ಭೀಮಸೇನಶ್ಚ ಸೌಭದ್ರೋಽಥ ಘಟೋತ್ಕಚಃ।
07007004c ಯುಧಿಷ್ಠಿರೋ ಯಮೌ ಮತ್ಸ್ಯಾ ದ್ರುಪದಸ್ಯಾತ್ಮಜಾಸ್ತಥಾ।।
07007005a ದ್ರೌಪದೇಯಾಶ್ಚ ಸಂಹೃಷ್ಟಾ ಧೃಷ್ಟಕೇತುಃ ಸಸಾತ್ಯಕಿಃ।
07007005c ಚೇಕಿತಾನಶ್ಚ ಸಂಕ್ರುದ್ಧೋ ಯುಯುತ್ಸುಶ್ಚ ಮಹಾರಥಃ।।
07007006a ಯೇ ಚಾನ್ಯೇ ಪಾರ್ಥಿವಾ ರಾಜನ್ಪಾಂಡವಸ್ಯಾನುಯಾಯಿನಃ।
07007006c ಕುಲವೀರ್ಯಾನುರೂಪಾಣಿ ಚಕ್ರುಃ ಕರ್ಮಾಣ್ಯನೇಕಶಃ।।

ರಾಜನ್! ಕೇಕಯರು, ಭೀಮಸೇನ, ಸೌಭದ್ರ, ಘಟೋತ್ಕಚ, ಯುಧಿಷ್ಠಿರ, ಯಮಳರು, ಮತ್ಸ್ಯರು, ದ್ರುಪದನ ಮಕ್ಕಳು, ದ್ರೌಪದಿಯ ಮಕ್ಕಳು, ಸಂಹೃಷ್ಟನಾಗಿದ್ದ ಧೃಷ್ಟಕೇತು ಸಾತ್ಯಕಿಯರು, ಚೇಕಿತಾನ, ಸಂಕ್ರುದ್ಧನಾಗಿದ್ದ ಮಹಾರಥಿ ಯುಯುತ್ಸು ಇವರು ಮತ್ತು ಪಾಂಡವರನ್ನು ಬೆಂಬಲಿಸಿದ ಅನ್ಯ ಪಾರ್ಥಿವರು ಅವರವರ ಕುಲ ವೀರ್ಯಗಳಿಗನುಗುಣವಾಗಿ ಅನೇಕ ಕರ್ಮಗಳನ್ನೆಸಗಿದರು.

07007007a ಸಂಗೃಹ್ಯಮಾಣಾಂ ತಾಂ ದೃಷ್ಟ್ವಾ ಪಾಂಡವೈರ್ವಾಹಿನೀಂ ರಣೇ।
07007007c ವ್ಯಾವೃತ್ಯ ಚಕ್ಷುಷೀ ಕೋಪಾದ್ಭಾರದ್ವಾಜೋಽನ್ವವೈಕ್ಷತ।।

ರಣದಲ್ಲಿ ಪಾಂಡವರು ಸಂಗ್ರಹಿಸಿ ಸಂರಕ್ಷಿಸಿದ್ದ ಆ ಸೇನೆಯನ್ನು ನೋಡಿ ಭಾರದ್ವಾಜನು ಕೋಪದಿಂದ ಕಣ್ಣುಗಳನ್ನರಳಿಸಿ ನೋಡಿದನು.

07007008a ಸ ತೀವ್ರಂ ಕೋಪಮಾಸ್ಥಾಯ ರಥೇ ಸಮರದುರ್ಮದಃ।
07007008c ವ್ಯಧಮತ್ ಪಾಂಡವಾನೀಕಮಭ್ರಾಣೀವ ಸದಾಗತಿಃ।।

ಆ ಸಮರದುರ್ಮದನು ತೀವ್ರವಾಗಿ ಕೋಪಗೊಂಡು ಪಾಂಡವರ ಸೇನೆಯನ್ನು ಮೋಡಗಳನ್ನು ಚದುರಿಸುವಂತೆ ಭೇದಿಸಿದನು.

07007009a ರಥಾನಶ್ವಾನ್ನರಾನ್ನಾಗಾನಭಿಧಾವಂಸ್ತತಸ್ತತಃ।
07007009c ಚಚಾರೋನ್ಮತ್ತವದ್ದ್ರೋಣೋ ವೃದ್ಧೋಽಪಿ ತರುಣೋ ಯಥಾ।।

ವೃದ್ಧನಾಗಿದ್ದರೂ ತರುಣನಂತೆ ಉನ್ಮತ್ತನಾಗಿರುವನೋ ಎನ್ನುವಂತೆ ದ್ರೋಣನು ಅಲ್ಲಿಂದಿಲ್ಲಿಗೆ ಧಾವಿಸುತ್ತಾ ಅವರ ರಥಗಳನ್ನೂ, ಕುದುರೆಗಳನ್ನೂ, ಸೈನಿಕರನ್ನೂ, ಆನೆಗಳನ್ನೂ ವಧಿಸುತ್ತಿದ್ದರು.

07007010a ತಸ್ಯ ಶೋಣಿತದಿಗ್ಧಾಂಗಾಃ ಶೋಣಾಸ್ತೇ ವಾತರಂಹಸಃ।
07007010c ಆಜಾನೇಯಾ ಹಯಾ ರಾಜನ್ನವಿಭ್ರಾಂತಾಃ ಶ್ರಿಯಂ ದಧುಃ।।

ರಾಜನ್! ಸ್ವಭಾವತಃ ಕೆಂಪಾಗಿದ್ದ ಅವನ ಕುದುರೆಗಳು ರಕ್ತದಿಂದ ತೋಯ್ದ ಶರೀರಗಳಿಂದ ಇನ್ನೂ ಹೆಚ್ಚು ಕೆಂಪಾಗಿ ಕಾಣುತ್ತಿದ್ದವು. ವಾಯುವೇಗದ ಅವು ಅವಿಭ್ರಾಂತರಾಗಿ ಅವನನ್ನು ಕೊಂಡೊಯ್ಯುತ್ತಿದ್ದವು.

07007011a ತಮಂತಕಮಿವ ಕ್ರುದ್ಧಮಾಪತಂತಂ ಯತವ್ರತಂ।
07007011c ದೃಷ್ಟ್ವಾ ಸಂಪ್ರಾದ್ರವನ್ಯೋಧಾಃ ಪಾಂಡವಸ್ಯ ತತಸ್ತತಃ।।

ಅಂತಕನಂತೆ ಕ್ರುದ್ಧನಾಗಿ ಮೇಲೆ ಬೀಳುತ್ತಿದ್ದ ಆ ಯತವ್ರತನನ್ನು ನೋಡಿ ಪಾಂಡವರ ಯೋಧರು ಎಲ್ಲ ಕಡೆಗಳಲ್ಲಿ ಓಡಿ ಹೋಗುತ್ತಿದ್ದರು.

07007012a ತೇಷಾಂ ಪ್ರದ್ರವತಾಂ ಭೀಮಃ ಪುನರಾವರ್ತತಾಮಪಿ।
07007012c ವೀಕ್ಷತಾಂ ತಿಷ್ಠತಾಂ ಚಾಸೀಚ್ಚಬ್ದಃ ಪರಮದಾರುಣಃ।।

ಹೀಗೆ ಓಡಿಹೋಗುತ್ತಿರುವವರ, ಪುನಃ ಹಿಂದಿರುಗುತ್ತಿರುವವರ, ಸುಮ್ಮನೆ ನಿಂತು ನೋಡುತ್ತಿದ್ದವರ, ನಿಂತು ಕೂಗಿಕೊಳ್ಳುತ್ತಿದ್ದವರ ಭೀಕರ ಶಬ್ಧವು ಪರಮ ದಾರುಣವಾಗಿತ್ತು.

07007013a ಶೂರಾಣಾಂ ಹರ್ಷಜನನೋ ಭೀರೂಣಾಂ ಭಯವರ್ಧನಃ।
07007013c ದ್ಯಾವಾಪೃಥಿವ್ಯೋರ್ವಿವರಂ ಪೂರಯಾಮಾಸ ಸರ್ವತಃ।।

ಆಕಾಶ-ಭೂಮಿಗಳನ್ನು ಎಲ್ಲ ಕಡೆಯಿಂದಲೂ ತುಂಬಿಬಿಟ್ಟಿದ್ದ ಆ ತುಮುಲವು ಶೂರರಿಗೆ ಹರ್ಷವನ್ನಿತ್ತರೆ ದುರ್ಬಲಹೃದಯದವರ ಭಯವನ್ನು ಹೆಚ್ಚಿಸುತ್ತಿತ್ತು.

07007014a ತತಃ ಪುನರಪಿ ದ್ರೋಣೋ ನಾಮ ವಿಶ್ರಾವಯನ್ಯುಧಿ।
07007014c ಅಕರೋದ್ರೌದ್ರಮಾತ್ಮಾನಂ ಕಿರಂ ಶರಶತೈಃ ಪರಾನ್।।

ಆಗ ಪುನಃ ದ್ರೋಣನು ಯುದ್ಧದಲ್ಲಿ ತನ್ನ ಹೆಸರನ್ನು ಕೇಳಿಸುತ್ತಾ ತನ್ನ ರೂಪವನ್ನು ರೌದ್ರವಾಗಿಸಿಕೊಂಡು ಶತ್ರುಗಳ ಮೇಲೆ ನೂರಾರು ಬಾಣಗಳನ್ನು ಎರಚಿದನು.

07007015a ಸ ತಥಾ ತಾನ್ಯನೀಕಾನಿ ಪಾಂಡವೇಯಸ್ಯ ಧೀಮತಃ।
07007015c ಕಾಲವನ್ನ್ಯವಧೀದ್ದ್ರೋಣೋ ಯುವೇವ ಸ್ಥವಿರೋ ಬಲೀ।।

ವೃದ್ಧನಾಗಿದ್ದರೂ ಬಲಶಾಲಿ ಯುವಕನಂತಿದ್ದ ಧೀಮತ ದ್ರೋಣನು ಪಾಂಡವನ ಸೇನೆಗಳ ಮಧ್ಯೆ ಅಂತಕನಂತೆ ಸಂಚರಿಸುತ್ತಿದ್ದನು.

07007016a ಉತ್ಕೃತ್ಯ ಚ ಶಿರಾಂಸ್ಯುಗ್ರೋ ಬಾಹೂನಪಿ ಸಭೂಷಣಾನ್।
07007016c ಕೃತ್ವಾ ಶೂನ್ಯಾನ್ರಥೋಪಸ್ಥಾನುದಕ್ರೋಶನ್ಮಹಾರಥಃ।।

ಆ ಮಹಾರಥನು ಉಗ್ರನಾಗಿ ರಥದಲ್ಲಿದ್ದವರ ಶಿರಗಳನ್ನು ಮತ್ತು ಸುಭೂಷಣ ಬಾಹುಗಳನ್ನೂ ಕತ್ತರಿಸಿ ರಥಗಳನ್ನು ಬರಿದುಮಾಡಿ ಗರ್ಜಿಸುತ್ತಿದ್ದನು.

07007017a ತಸ್ಯ ಹರ್ಷಪ್ರಣಾದೇನ ಬಾಣವೇಗೇನ ಚಾಭಿಭೋ।
07007017c ಪ್ರಾಕಂಪಂತ ರಣೇ ಯೋಧಾ ಗಾವಃ ಶೀತಾರ್ದಿತಾ ಇವ।।

ವಿಭೋ! ಅವನ ಹರ್ಷಗರ್ಜನೆಯಿಂದ ಮತ್ತು ಬಾಣಗಳ ವೇಗದಿಂದ ರಣದಲ್ಲಿ ಯೋಧರು ಛಳಿಯಿಂದ ನಡುಗುವ ಗೋವುಗಳಂತೆ ನಡುಗುತ್ತಿದ್ದರು.

07007018a ದ್ರೋಣಸ್ಯ ರಥಘೋಷೇಣ ಮೌರ್ವೀನಿಷ್ಪೇಷಣೇನ ಚ।
07007018c ಧನುಃಶಬ್ದೇನ ಚಾಕಾಶೇ ಶಬ್ದಃ ಸಮಭವನ್ಮಹಾನ್।।

ದ್ರೋಣನ ರಥ ಘೋಷದಿಂದ, ಶಿಂಜನಿಯನ್ನು ಉಜ್ಜುವುದರಿಂದಲೂ, ಧನುಸ್ಸಿನ ಟೇಂಕಾರದಿಂದ ಉಂಟಾದ ಶಬ್ಧವು ಆಕಾಶವನ್ನು ತಲುಪಿ ಅತಿ ಜೋರಾಯಿತು.

07007019a ಅಥಾಸ್ಯ ಬಹುಶೋ ಬಾಣಾ ನಿಶ್ಚರಂತಃ ಸಹಸ್ರಶಃ।
07007019c ವ್ಯಾಪ್ಯ ಸರ್ವಾ ದಿಶಃ ಪೇತುರ್ಗಜಾಶ್ವರಥಪತ್ತಿಷು।।

ಅವನು ಬಿಟ್ಟ ಸಹಸ್ರಾರು ಬಾಣಗಳು ಹೆಚ್ಚಾಗಿ ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿ ಆನೆ-ಕುದುರೆ-ರಥ-ಪದಾತಿಗಳ ಮೇಲೆ ಬೀಳುತ್ತಿದ್ದವು.

07007020a ತಂ ಕಾರ್ಮುಕಮಹಾವೇಗಮಸ್ತ್ರಜ್ವಲಿತಪಾವಕಂ।
07007020c ದ್ರೋಣಮಾಸಾದಯಾಂ ಚಕ್ರುಃ ಪಾಂಚಾಲಾಃ ಪಾಂಡವೈಃ ಸಹ।।

ಆ ಮಹಾಧನ್ವಿ, ಮಹಾವೇಗಿ, ಅಸ್ತ್ರಗಳನ್ನು ಹೊಂದಿದ್ದ, ಪಾವಕನಂತೆ ಪ್ರಜ್ವಲಿಸುತ್ತಿದ್ದ ದ್ರೋಣನನ್ನು ಆಕ್ರಮಣಿಸಲು ಪಾಂಡವರೊಂದಿಗೆ ಪಾಂಚಾಲರು ಪ್ರಯತ್ನಿಸಿದರು.

07007021a ತಾನ್ವೈ ಸರಥಹಸ್ತ್ಯಶ್ವಾನ್ಪ್ರಾಹಿಣೋದ್ಯಮಸಾದನಂ।
07007021c ದ್ರೋಣೋಽಚಿರೇಣಾಕರೋಚ್ಚ ಮಹೀಂ ಶೋಣಿತಕರ್ದಮಾಂ।।

ಅವರನ್ನು ರಥ-ಆನೆ-ಕುದುರೆಗಳೊಂದಿಗೆ ಯಮಸಾದನಕ್ಕೆ ಕಳುಹಿಸಿ ದ್ರೋಣನು ಕ್ಷಣಮಾತ್ರದಲ್ಲಿ ಭೂಮಿಯನ್ನು ರಕ್ತದ ಕೆಸರಿನಿಂದ ತುಂಬಿಸಿದನು.

07007022a ತನ್ವತಾ ಪರಮಾಸ್ತ್ರಾಣಿ ಶರಾನ್ಸತತಮಸ್ಯತಾ।
07007022c ದ್ರೋಣೇನ ವಿಹಿತಂ ದಿಕ್ಷು ಬಾಣಜಾಲಮದೃಶ್ಯತ।।

ದ್ರೋಣನಿಂದ ಸತತವಾಗಿ ಪ್ರಯೋಗಿಸಲ್ಪಟ್ಟ ಪರಮಾಸ್ತ್ರಗಳೂ ಶರಗಳೂ ದಿಕ್ಕುಗಳನ್ನು ಬಾಣಗಳ ಜಾಲದಂತೆ ಮುಚ್ಚಿರುವುದು ಕಂಡುಬಂದಿತು.

07007023a ಪದಾತಿಷು ರಥಾಶ್ವೇಷು ವಾರಣೇಷು ಚ ಸರ್ವಶಃ।
07007023c ತಸ್ಯ ವಿದ್ಯುದಿವಾಭ್ರೇಷು ಚರನ್ಕೇತುರದೃಶ್ಯತ।।

ಪದಾತಿಗಳ, ರಥ-ಕುದುರೆಗಳ, ಆನೆಗಳ ಮಧ್ಯೆ ಎಲ್ಲೆಡೆಯಲ್ಲಿ ಮೋಡಗಳ ಮಧ್ಯೆ ಕಾಣುವ ಮಿಂಚಿನಂತೆ ಅವನ ಧ್ವಜವು ಕಾಣುತ್ತಿತ್ತು.

07007024a ಸ ಕೇಕಯಾನಾಂ ಪ್ರವರಾಂಶ್ಚ ಪಂಚ ಪಾಂಚಾಲರಾಜಂ ಚ ಶರೈಃ ಪ್ರಮೃದ್ಯ।
07007024c ಯುಧಿಷ್ಠಿರಾನೀಕಮದೀನಯೋಧೀ ದ್ರೋಣೋಽಭ್ಯಯಾತ್ಕಾರ್ಮುಕಬಾಣಪಾಣಿಃ।।

ದ್ರೋಣನು ಬಿಲ್ಲು ಬಾಣಗಳನ್ನು ಹಿಡಿದು ಕೇಕಯರ ಐವರು ಮುಖ್ಯರನ್ನೂ ಪಾಂಚಾಲರಾಜನನ್ನೂ ಶರಗಳಿಂದ ಹೊಡೆದು ಯುಧಿಷ್ಠಿರನ ಸೇನೆಯನ್ನು ಆಕ್ರಮಣಿಸಿದನು.

07007025a ತಂ ಭೀಮಸೇನಶ್ಚ ಧನಂಜಯಶ್ಚ ಶಿನೇಶ್ಚ ನಪ್ತಾ ದ್ರುಪದಾತ್ಮಜಶ್ಚ।
07007025c ಶೈಬ್ಯಾತ್ಮಜಃ ಕಾಶಿಪತಿಃ ಶಿಬಿಶ್ಚ ಹೃಷ್ಟಾ ನದಂತೋ ವ್ಯಕಿರಂ ಶರೌಘೈಃ।।

ಭೀಮಸೇನ-ಧನಂಜಯರು, ಸಾತ್ಯಕಿ, ಧೃಷ್ಟದ್ಯುಮ್ನ, ಶೈಬ್ಯನ ಮಗ, ಕಾಶಿರಾಜ, ಶಿಬಿ ಮೊದಲಾದವರು ಹೃಷ್ಟರಾಗಿ ಕೂಗುತ್ತಾ ಶರಸಮೂಹಗಳಿಂದ ಅವನನ್ನು ಮುಚ್ಚಿದರು.

07007026a ತೇಷಾಮಥೋ ದ್ರೋಣಧನುರ್ವಿಮುಕ್ತಾಃ ಪತತ್ರಿಣಃ ಕಾಂಚನಚಿತ್ರಪುಂಖಾಃ।
07007026c ಭಿತ್ತ್ವಾ ಶರೀರಾಣಿ ಗಜಾಶ್ವಯೂನಾಂ ಜಗ್ಮುರ್ಮಹೀಂ ಶೋಣಿತದಿಗ್ಧವಾಜಾಃ।।

ಆಗ ದ್ರೋಣನ ಧನುಸ್ಸಿನಿಂದ ಹೊರಟ ಕಾಂಚನದ ಬಣ್ಣದ ರೆಕ್ಕೆಗಳುಳ್ಳ ಪತತ್ರಿಗಳು ಆನೆ ಕುದುರೆಗಳ ಶರೀರಗಳನ್ನು ಭೇದಿಸಿ ರಕ್ತದಲ್ಲಿ ತೋಯ್ದು ಭೂಮಿಯನ್ನು ಹೊಕ್ಕವು.

07007027a ಸಾ ಯೋಧಸಂಘೈಶ್ಚ ರಥೈಶ್ಚ ಭೂಮಿಃ ಶರೈರ್ವಿಭಿನ್ನೈರ್ಗಜವಾಜಿಭಿಶ್ಚ।
07007027c ಪ್ರಚ್ಚಾದ್ಯಮಾನಾ ಪತಿತೈರ್ಬಭೂವ ಸಮಂತತೋ ದ್ಯೌರಿವ ಕಾಲಮೇಘೈಃ।।

ಎಲ್ಲ ಕಡೆ ಬಿದ್ದಿದ್ದ ಆ ಯೋಧರ ಗುಂಪುಗಳಿಂದ ಮತ್ತು ರಥಗಳಿಂದ, ಶರಗಳಿಂದ ತುಂಡಾದ ಆನೆ-ಕುದುರೆಗಳಿಂದ ರಣಭೂಮಿಯು ಕಪ್ಪು ಮೋಡಗಳಿಂದ ಕೂಡಿದ ಆಕಾಶದಂತೆ ತೋರಿತು.

07007028a ಶೈನೇಯಭೀಮಾರ್ಜುನವಾಹಿನೀಪಾಂ ಶೈಬ್ಯಾಭಿಮನ್ಯೂ ಸಹ ಕಾಶಿರಾಜ್ಞಾ।
07007028c ಅನ್ಯಾಂಶ್ಚ ವೀರಾನ್ಸಮರೇ ಪ್ರಮೃದ್ನಾದ್ ದ್ರೋಣಃ ಸುತಾನಾಂ ತವ ಭೂತಿಕಾಮಃ।।

ನಿನ್ನ ಸುತರಿಗೆ ಒಳಿತನ್ನು ಮಾಡಬಯಸಿ ದ್ರೋಣನು ಶೈನೇಯ-ಭೀಮ-ಅರ್ಜುನರಿಂದ ಪಾಲಿತವಾದ ವಾಹಿನಿಯನ್ನೂ, ಶೈಬ್ಯ, ಅಭಿಮನ್ಯು, ಕಾಶಿರಾಜ, ಮತ್ತು ಇತರ ವೀರರನ್ನು ಸಮರದಲ್ಲಿ ಮರ್ದಿಸುತ್ತಿದ್ದನು.

07007029a ಏತಾನಿ ಚಾನ್ಯಾನಿ ಚ ಕೌರವೇಂದ್ರ ಕರ್ಮಾಣಿ ಕೃತ್ವಾ ಸಮರೇ ಮಹಾತ್ಮಾ।
07007029c ಪ್ರತಾಪ್ಯ ಲೋಕಾನಿವ ಕಾಲಸೂರ್ಯೋ ದ್ರೋಣೋ ಗತಃ ಸ್ವರ್ಗಮಿತೋ ಹಿ ರಾಜನ್।।

ಕೌರವೇಂದ್ರ! ರಾಜನ್! ಈ ಮತ್ತು ಅನ್ಯ ಕರ್ಮಗಳನ್ನೆಸಗಿ ಆ ಮಹಾತ್ಮ ದ್ರೋಣನು ಕಾಲಾಂತದ ಸೂರ್ಯನಂತೆ ಲೋಕವನ್ನು ಸುಟ್ಟು ಸ್ವರ್ಗಕ್ಕೆ ಹೋದನು.

07007030a ಏವಂ ರುಕ್ಮರಥಃ ಶೂರೋ ಹತ್ವಾ ಶತಸಹಸ್ರಶಃ।
07007030c ಪಾಂಡವಾನಾಂ ರಣೇ ಯೋಧಾನ್ಪಾರ್ಷತೇನ ನಿಪಾತಿತಃ।।

ಹೀಗೆ ನೂರಾರು ಸಹಸ್ರಾರು ಪಾಂಡವ ಯೋಧರನ್ನು ರಣದಲ್ಲಿ ಸಂಹರಿಸಿ ಆ ರುಕ್ಮರಥ ಶೂರನು ಪಾರ್ಷತನಿಂದ ಬೀಳಿಸಲ್ಪಟ್ಟನು.

07007031a ಅಕ್ಷೌಹಿಣೀಮಭ್ಯಧಿಕಾಂ ಶೂರಾಣಾಮನಿವರ್ತಿನಾಂ।
07007031c ನಿಹತ್ಯ ಪಶ್ಚಾದ್ಧೃತಿಮಾನಗಚ್ಚತ್ಪರಮಾಂ ಗತಿಂ।।

ಯುದ್ಧದಿಂದ ಪಲಾಯನ ಮಾಡದೇ ಇದ್ದ ಒಂದು ಅಕ್ಷೌಹಿಣಿಗಿಂತಲೂ ಅಧಿಕ ಶೂರರನ್ನು ಸಂಹರಿಸಿ ನಂತರ ಆ ಧೃತಿಮಾನನು ಪರಮ ಗತಿಯನ್ನು ಹೊಂದಿದನು.

07007032a ಪಾಂಡವೈಃ ಸಹ ಪಾಂಚಾಲೈರಶಿವೈಃ ಕ್ರೂರಕರ್ಮಭಿಃ।
07007032c ಹತೋ ರುಕ್ಮರಥೋ ರಾಜನ್ಕೃತ್ವಾ ಕರ್ಮ ಸುದುಷ್ಕರಂ।।

ರಾಜನ್! ಪಾಂಡವರೊಂದಿಗೆ ಪಾಂಚಾಲರ ಅಮಂಗಳಕರ ಕ್ರೂರ ಕೃತ್ಯದಿಂದ ಆ ರುಕ್ಮರಥನು ಸುದುಷ್ಕರ ಕರ್ಮಗಳನ್ನೆಸಗಿ ಹತನಾದನು.

07007033a ತತೋ ನಿನಾದೋ ಭೂತಾನಾಮಾಕಾಶೇ ಸಮಜಾಯತ।
07007033c ಸೈನ್ಯಾನಾಂ ಚ ತತೋ ರಾಜನ್ನಾಚಾಚಾರ್ಯೇ ನಿಹತೇ ಯುಧಿ।।

ರಾಜನ್! ಯುದ್ಧದಲ್ಲಿ ಆಚಾರ್ಯನು ನಿಹತನಾಗಲು ಆಕಾಶದಲ್ಲಿ ಭೂತಗಳ ನಿನಾದವುಂಟಾಯಿತು.

07007034a ದ್ಯಾಂ ಧರಾಂ ಖಂ ದಿಶೋ ವಾರಿ ಪ್ರದಿಶಶ್ಚಾನುನಾದಯನ್।
07007034c ಅಹೋ ಧಿಗಿತಿ ಭೂತಾನಾಂ ಶಬ್ದಃ ಸಮಭವನ್ಮಹಾನ್।।

ಸ್ವರ್ಗ, ಭೂಮಿ, ಆಕಾಶ ಮತ್ತು ದಿಕ್ಕುಗಳಲ್ಲಿ “ಅಯ್ಯೋ! ಧಿಕ್ಕಾರ!” ಎಂಬ ಮಹಾ ಆರ್ತನಾದವು ಕೇಳಿಬಂದಿತು.

07007035a ದೇವತಾಃ ಪಿತರಶ್ಚೈವ ಪೂರ್ವೇ ಯೇ ಚಾಸ್ಯ ಬಾಂಧವಾಃ।
07007035c ದದೃಶುರ್ನಿಹತಂ ತತ್ರ ಭಾರದ್ವಾಜಂ ಮಹಾರಥಂ।।

ದೇವತೆಗಳು, ಪಿತೃಗಳು ಮತ್ತು ಅವನಿಗೆ ಹಿಂದೆ ಬಂಧುಗಳಾಗಿದ್ದವರು ಅಲ್ಲಿ ಮಹಾರಥ ಭಾರದ್ವಾಜನು ನಿಹತನಾದುದನ್ನು ನೋಡಿದರು.

07007036a ಪಾಂಡವಾಸ್ತು ಜಯಂ ಲಬ್ಧ್ವಾ ಸಿಂಹನಾದಾನ್ಪ್ರಚಕ್ರಿರೇ।
07007036c ತೇನ ನಾದೇನ ಮಹತಾ ಸಮಕಂಪತ ಮೇದಿನೀ।।

ಪಾಂಡವರಾದರೋ ಜಯವನ್ನು ಪಡೆದು ಸಿಂಹನಾದಗೈದರು. ಅವರ ಆ ನಾದದಿಂದ ಮೇದಿನಿಯೇ ಕಂಪಿಸಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ದ್ರೋಣವಧಶ್ರವಣೇ ಸಪ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ದ್ರೋಣವಧಶ್ರವಣ ಎನ್ನುವ ಏಳನೇ ಅಧ್ಯಾಯವು.