005 ದ್ರೋಣಪ್ರೋತ್ಸಾಹನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣಾಭಿಷೇಕ ಪರ್ವ

ಅಧ್ಯಾಯ 5

ಸಾರ

ಭೀಷ್ಮನ ನಂತರ ಕೌರವ ಸೇನಾಪತಿಯು ಯಾರಾಗಬೇಕೆಂದು ದುರ್ಯೋಧನನು ಕರ್ಣನನ್ನು ಕೇಳಲು, ಕರ್ಣನು ದ್ರೋಣನ ಹೆಸರನ್ನು ಸೂಚಿಸುವುದು (1-20). ದುರ್ಯೋಧನನು ದ್ರೋಣನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದುದು (21-40).

07005001 ಸಂಜಯ ಉವಾಚ।
07005001a ರಥಸ್ಥಂ ಪುರುಷವ್ಯಾಘ್ರಂ ದೃಷ್ಟ್ವಾ ಕರ್ಣಮವಸ್ಥಿತಂ।
07005001c ಹೃಷ್ಟೋ ದುರ್ಯೋಧನೋ ರಾಜನ್ನಿದಂ ವಚನಮಬ್ರವೀತ್।।

ಸಂಜಯನು ಹೇಳಿದನು: “ರಾಜನ್! ರಥದಲ್ಲಿ ನಿಂತಿದ್ದ ಪುರುಷವ್ಯಾಘ್ರ ಕರ್ಣನನ್ನು ನೋಡಿ ಹೃಷ್ಟನಾದ ದುರ್ಯೋಧನನು ಈ ಮಾತನ್ನಾಡಿನು:

07005002a ಸನಾಥಮಿದಮತ್ಯರ್ಥಂ ಭವತಾ ಪಾಲಿತಂ ಬಲಂ।
07005002c ಮನ್ಯೇ ಕಿಂ ತು ಸಮರ್ಥಂ ಯದ್ಧಿತಂ ತತ್ಸಂಪ್ರಧಾರ್ಯತಾಂ।।

“ನಿನ್ನಿಂದ ಪಾಲಿತವಾದ ಈ ಸೇನೆಯು ಈಗ ನಾಯಕನನ್ನು ಪಡೆದಿದೆ. ಈಗ ನೀನು ಏನು ಮಾಡುವುದು ಒಳ್ಳೆಯದೆಂದು ಅಭಿಪ್ರಾಯ ಪಡುತ್ತೀಯೋ ಅದರಂತೆಯೇ ಆಗಲಿ!”

07005003 ಕರ್ಣ ಉವಾಚ।
07005003a ಬ್ರೂಹಿ ತತ್ಪುರುಷವ್ಯಾಘ್ರ ತ್ವಂ ಹಿ ಪ್ರಾಜ್ಞತಮೋ ನೃಪ।
07005003c ಯಥಾ ಚಾರ್ಥಪತಿಃ ಕೃತ್ಯಂ ಪಶ್ಯತೇ ನ ತಥೇತರಃ।।

ಕರ್ಣನು ಹೇಳಿದನು: “ಪುರುಷವ್ಯಾಘ್ರ! ನೃಪ! ನಿನಗೆ ಎಲ್ಲರಿಗಿಂತ ಹೆಚ್ಚು ತಿಳಿದಿದೆ. ನೀನೇ ಹೇಳು. ರಾಜನು ಏನು ಮಾಡಬೇಕೆಂದು ಯೋಚಿಸಿರುತ್ತಾನೋ ಅದನ್ನು ಇನ್ನೊಬ್ಬರು ಯೋಚಿಸಿ ಹೇಳಲಿಕ್ಕಾಗುವುದಿಲ್ಲ.

07005004a ತೇ ಸ್ಮ ಸರ್ವೇ ತವ ವಚಃ ಶ್ರೋತುಕಾಮಾ ನರೇಶ್ವರ।
07005004c ನಾನ್ಯಾಯ್ಯಂ ಹಿ ಭವಾನ್ವಾಕ್ಯಂ ಬ್ರೂಯಾದಿತಿ ಮತಿರ್ಮಮ।।

ನರೇಶ್ವರ! ಇಲ್ಲಿ ನಾವೆಲ್ಲರೂ ನಿನ್ನ ಮಾತುಗಳನ್ನು ಕೇಳಲು ಬಯಸಿದ್ದೇವೆ. ನೀನು ಅನ್ಯಾಯದ ಮಾತುಗಳನ್ನು ಹೇಳುವುದೇ ಇಲ್ಲವೆಂದು ನನ್ನ ಅಭಿಪ್ರಾಯ.”

07005005 ದುರ್ಯೋಧನ ಉವಾಚ।
07005005a ಭೀಷ್ಮಃ ಸೇನಾಪ್ರಣೇತಾಸೀದ್ವಯಸಾ ವಿಕ್ರಮೇಣ ಚ।
07005005c ಶ್ರುತೇನ ಚ ಸುಸಂಪನ್ನಃ ಸರ್ವೈರ್ಯೋಧಗುಣೈಸ್ತಥಾ।।

ದುರ್ಯೋಧನನು ಹೇಳಿದನು: “ವಯಸ್ಸು, ವಿಕ್ರಮ, ವಿದ್ಯೆ ಮತ್ತು ಯೋಧನಲ್ಲಿರಬೇಕಾದ ಎಲ್ಲ ಗುಣಗಳಿಂದ ಸುಸಂಪನ್ನನಾಗಿದ್ದ ಭೀಷ್ಮನು ನಮ್ಮ ಸೇನಾಪತಿಯಾಗಿದ್ದನು.

07005006a ತೇನಾತಿಯಶಸಾ ಕರ್ಣ ಘ್ನತಾ ಶತ್ರುಗಣಾನ್ಮಮ।
07005006c ಸುಯುದ್ಧೇನ ದಶಾಹಾನಿ ಪಾಲಿತಾಃ ಸ್ಮೋ ಮಹಾತ್ಮನಾ।।

ಕರ್ಣ! ಅತಿ ಯಶಸ್ವಿಯಾಗಿದ್ದ ಆ ಮಹಾತ್ಮನು ನನ್ನ ಶತ್ರುಗಣಗಳನ್ನು ಸಂಹರಿಸುತ್ತ ಉತ್ತಮವಾಗಿ ಯುದ್ಧಮಾಡಿ ಹತ್ತು ದಿನಗಳು ನಮ್ಮನ್ನು ಪಾಲಿಸಿದನು.

07005007a ತಸ್ಮಿನ್ನಸುಕರಂ ಕರ್ಮ ಕೃತವತ್ಯಾಸ್ಥಿತೇ ದಿವಂ।
07005007c ಕಂ ನು ಸೇನಾಪ್ರಣೇತಾರಂ ಮನ್ಯಸೇ ತದನಂತರಂ।।

ಅವನು ಸಾಧಿಸಲಸಾದ್ಯವಾದುದನ್ನು ಸಾಧಿಸಿ ಸ್ವರ್ಗದ ದಾರಿಯನ್ನು ಹಿಡಿದಿದ್ದಾನೆ. ಅವನ ನಂತರ ಯಾರನ್ನು ಸೇನಾಪತಿಯನ್ನಾಗಿ ಮಾಡಬೇಕೆಂದು ನಿನ್ನ ಅಭಿಪ್ರಾಯ?

07005008a ನ ಋತೇ ನಾಯಕಂ ಸೇನಾ ಮುಹೂರ್ತಮಪಿ ತಿಷ್ಠತಿ।
07005008c ಆಹವೇಷ್ವಾಹವಶ್ರೇಷ್ಠ ನೇತೃಹೀನೇವ ನೌರ್ಜಲೇ।।

ಆಹವಶ್ರೇಷ್ಠ! ನಾಯಕನಿಲ್ಲದೇ ಯುದ್ಧದಲ್ಲಿ ಸೇನೆಯು ನೀರಿನಲ್ಲಿ ನಾಯಕನಿಲ್ಲದ ದೋಣಿಯಂತೆ ಮುಹೂರ್ತಕಾಲವೂ ನಿಲ್ಲಲಾರದು.

07005009a ಯಥಾ ಹ್ಯಕರ್ಣಧಾರಾ ನೌ ರಥಶ್ಚಾಸಾರಥಿರ್ಯಥಾ।
07005009c ದ್ರವೇದ್ಯಥೇಷ್ಟಂ ತದ್ವತ್ದೃತೇ ಸೇನಾಪತಿಂ ಬಲಂ।।

ನಡೆಸುವವನಿಲ್ಲದ ದೋಣಿಯಂತೆ, ಸಾರಥಿಯಿಲ್ಲದ ರಥದಂತೆ ಸೇನಾಪತಿಯಿಲ್ಲದ ಸೇನೆಯು ಇಷ್ಟಬಂದಲ್ಲಿ ಓಡಿ ಹೋಗುವುದಿಲ್ಲವೇ?

07005010a ಸ ಭವಾನ್ವೀಕ್ಷ್ಯ ಸರ್ವೇಷು ಮಾಮಕೇಷು ಮಹಾತ್ಮಸು।
07005010c ಪಶ್ಯ ಸೇನಾಪತಿಂ ಯುಕ್ತಮನು ಶಾಂತನವಾದಿಹ।।

ಈಗ ನೀನು ನನ್ನವರಾದ ಮಹಾತ್ಮರಲ್ಲಿ ಶಾಂತನವನಂತೆ ಸೇನಾಪತಿಯಾಗಲು ಯುಕ್ತನಾರೆಂದು ನೋಡು!

07005011a ಯಂ ಹಿ ಸೇನಾಪ್ರಣೇತಾರಂ ಭವಾನ್ವಕ್ಷ್ಯತಿ ಸಂಯುಗೇ।
07005011c ತಂ ವಯಂ ಸಹಿತಾಃ ಸರ್ವೇ ಪ್ರಕರಿಷ್ಯಾಮ ಮಾರಿಷ।।

ಮಾರಿಷ! ಯಾರನ್ನು ನೀನು ಸಂಯುಗದಲ್ಲಿ ಸೇನಾಪತಿಯೆಂದು ಆರಿಸುತ್ತೀಯೋ ಅವನನ್ನೇ ನಾವೆಲ್ಲರೂ ಸೇರಿ ಸೇನಾಪತಿಯೆಂದು ಮಾಡೋಣ!”

07005012 ಕರ್ಣ ಉವಾಚ।
07005012a ಸರ್ವ ಏವ ಮಹಾತ್ಮಾನ ಇಮೇ ಪುರುಷಸತ್ತಮಾಃ।
07005012c ಸೇನಾಪತಿತ್ವಮರ್ಹಂತಿ ನಾತ್ರ ಕಾರ್ಯಾ ವಿಚಾರಣಾ।।

ಕರ್ಣನು ಹೇಳಿದನು: “ಈ ಎಲ್ಲ ಮಹಾತ್ಮ ಪುರುಷಸತ್ತಮರೂ ಸೇನಾಪತಿಯಾಗಲು ಅರ್ಹರಾಗಿದ್ದಾರೆ. ಅದರಲ್ಲಿ ವಿಚಾರಣೆ ಮಾಡುವುದೇನೂ ಇಲ್ಲ.

07005013a ಕುಲಸಂಹನನಜ್ಞಾನೈರ್ಬಲವಿಕ್ರಮಬುದ್ಧಿಭಿಃ।
07005013c ಯುಕ್ತಾಃ ಕೃತಜ್ಞಾ ಹ್ರೀಮಂತ ಆಹವೇಷ್ವನಿವರ್ತಿನಃ।।

ಎಲ್ಲರೂ ಕುಲೀನರು. ಯುದ್ಧದ ಜ್ಞಾನವುಳ್ಳವರು. ವಿಕ್ರಮ ಬುದ್ಧಿಯುಳ್ಳವರು. ಕೃತಜ್ಞರು. ನಾಚಿಕೆಯಿದ್ದವರು. ಮತ್ತು ಯುದ್ಧದಿಂದ ಪಲಾಯನ ಮಾಡದವರು.

07005014a ಯುಗಪನ್ನ ತು ತೇ ಶಕ್ಯಾಃ ಕರ್ತುಂ ಸರ್ವೇ ಪುರಃಸರಾಃ।
07005014c ಏಕ ಏವಾತ್ರ ಕರ್ತವ್ಯೋ ಯಸ್ಮಿನ್ವೈಶೇಷಿಕಾ ಗುಣಾಃ।।

ಆದರೆ ಅವರೆಲ್ಲರೂ ಏಕ ಕಾಲದಲ್ಲಿ ನಾಯಕರಾಗಲಾರರು. ವಿಶೇಷ ಗುಣಗಳಿರುವ ಒಬ್ಬನನ್ನೇ ನಾಯಕನನ್ನಾಗಿ ಮಾಡಬೇಕು.

07005015a ಅನ್ಯೋನ್ಯಸ್ಪರ್ಧಿನಾಂ ತೇಷಾಂ ಯದ್ಯೇಕಂ ಸತ್ಕರಿಷ್ಯಸಿ।
07005015c ಶೇಷಾ ವಿಮನಸೋ ವ್ಯಕ್ತಂ ನ ಯೋತ್ಸ್ಯಂತೇ ಹಿ ಭಾರತ।।

ಭಾರತ! ಅನ್ಯೋನ್ಯರೊಡನೆ ಸ್ಪರ್ಧಿಸುವ ಅವರಲ್ಲಿ ಯಾರೊಬ್ಬನನ್ನು ನೀನು ಸತ್ಕರಿಸಿದರೂ ಉಳಿದವರು ಬೇಸರ ಪಟ್ಟುಕೊಂಡು ಯುದ್ಧಮಾಡದೇ ಇರಬಹುದು.

07005016a ಅಯಂ ತು ಸರ್ವಯೋಧಾನಾಮಾಚಾರ್ಯಃ ಸ್ಥವಿರೋ ಗುರುಃ।
07005016c ಯುಕ್ತಃ ಸೇನಾಪತಿಃ ಕರ್ತುಂ ದ್ರೋಣಃ ಶಸ್ತ್ರಭೃತಾಂ ವರಃ।।

ಈ ಸರ್ವಯೋಧರ ಆಚಾರ್ಯ, ವೃದ್ಧ ಗುರು, ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನನ್ನು ಸೇನಾಪತಿಯನ್ನಾಗಿ ಮಾಡುವುದು ಯುಕ್ತವಾಗಿದೆ.

07005017a ಕೋ ಹಿ ತಿಷ್ಠತಿ ದುರ್ಧರ್ಷೇ ದ್ರೋಣೇ ಬ್ರಹ್ಮವಿದುತ್ತಮೇ।
07005017c ಸೇನಾಪತಿಃ ಸ್ಯಾದನ್ಯೋಽಸ್ಮಾಚ್ಚುಕ್ರಾಂಗಿರಸದರ್ಶನಾತ್।।

ಶುಕ್ರ ಮತ್ತು ಅಂಗಿರಸರಂತೆ ತೋರುವ ಈ ಬ್ರಹ್ಮವಿದುತ್ತಮ ದುರ್ಧರ್ಷ ದ್ರೋಣನನ್ನು ಬಿಟ್ಟು ಬೇರೆ ಯಾರುತಾನೇ ಸೇನಾಪತಿಯಾಗಲು ನಿಲ್ಲುತ್ತಾರೆ?

07005018a ನ ಚ ಸ ಹ್ಯಸ್ತಿ ತೇ ಯೋಧಃ ಸರ್ವರಾಜಸು ಭಾರತ।
07005018c ಯೋ ದ್ರೋಣಂ ಸಮರೇ ಯಾಂತಂ ನಾನುಯಾಸ್ಯತಿ ಸಂಯುಗೇ।।

ಭಾರತ! ಈ ಸರ್ವ ರಾಜರಲ್ಲಿ ಸಮರದಲ್ಲಿ ಹೋಗುತ್ತಿರುವ ದ್ರೋಣನನ್ನು ಅನುಸರಿಸದೇ ಇರುವವರು ಯಾರೂ ಇಲ್ಲ.

07005019a ಏಷ ಸೇನಾಪ್ರಣೇತಾರಂ ಏಷ ಶಸ್ತ್ರಭೃತಾಮಪಿ।
07005019c ಏಷ ಬುದ್ಧಿಮತಾಂ ಚೈವ ಶ್ರೇಷ್ಠೋ ರಾಜನ್ಗುರುಶ್ಚ ತೇ।।

ರಾಜನ್! ಇವನು ಸೇನಾ ಪ್ರಣೇತಾರ. ಇವನು ಶಸ್ತ್ರಭೃತರಲ್ಲಿ ಶ್ರೇಷ್ಠನೂ ಕೂಡ. ಇವನು ಬುದ್ಧಿವಂತರಲ್ಲಿ ಕೂಡ ಶ್ರೇಷ್ಠ. ಮತ್ತು ಇವನು ನಿನ್ನ ಗುರುವೂ ಹೌದು.

07005020a ಏವಂ ದುರ್ಯೋಧನಾಚಾರ್ಯಮಾಶು ಸೇನಾಪತಿಂ ಕುರು।
07005020c ಜಿಗೀಷಂತೋಽಸುರಾನ್ಸಂಖ್ಯೇ ಕಾರ್ತ್ತಿಕೇಯಮಿವಾಮರಾಃ।।

ದುರ್ಯೋಧನ! ಹೀಗಿರುವ ಆಚಾರ್ಯನನ್ನು ಸೇನಾಪತಿಯನ್ನಾಗಿ ಮಾಡು. ಅವನು ಕಾರ್ತಿಕೇಯನು ಅಮರರಿಗೆ ಅಸುರರನ್ನು ಗೆದ್ದುಕೊಟ್ಟಂತೆ ನಿನಗೆ ಜಯವನ್ನು ನೀಡುತ್ತಾನೆ.””

07005021 ಸಂಜಯ ಉವಾಚ।
07005021a ಕರ್ಣಸ್ಯ ವಚನಂ ಶ್ರುತ್ವಾ ರಾಜಾ ದುರ್ಯೋಧನಸ್ತದಾ।
07005021c ಸೇನಾಮಧ್ಯಗತಂ ದ್ರೋಣಮಿದಂ ವಚನಮಬ್ರವೀತ್।।

ಸಂಜಯನು ಹೇಳಿದನು: “ಕರ್ಣನ ಮಾತನ್ನು ಕೇಳಿ ರಾಜಾ ದುರ್ಯೋಧನನು ಸೇನೆಯ ಮಧ್ಯ ಹೋಗಿ ದ್ರೋಣನಿಗೆ ಈ ಮಾತನ್ನಾಡಿದನು:

07005022a ವರ್ಣಶ್ರೈಷ್ಠ್ಯಾತ್ಕುಲೋತ್ಪತ್ತ್ಯಾ ಶ್ರುತೇನ ವಯಸಾ ಧಿಯಾ।
07005022c ವೀರ್ಯಾದ್ದಾಕ್ಷ್ಯಾದಧೃಷ್ಯತ್ವಾದರ್ಥಜ್ಞಾನಾನ್ನಯಾಜ್ಜಯಾತ್।।
07005023a ತಪಸಾ ಚ ಕೃತಜ್ಞತ್ವಾದ್ವೃದ್ಧಃ ಸರ್ವಗುಣೈರಪಿ।
07005023c ಯುಕ್ತೋ ಭವತ್ಸಮೋ ಗೋಪ್ತಾ ರಾಜ್ಞಾಮನ್ಯೋ ನ ವಿದ್ಯತೇ।।

“ವರ್ಣದ ಶ್ರೇಷ್ಠತೆಯಲ್ಲಿ, ಜನ್ಮತಾಳಿದ ಕುಲದಲ್ಲಿ, ಶಸ್ತ್ರಜ್ಞಾನದಲ್ಲಿ, ವಯಸ್ಸಿನಲ್ಲಿ, ಬುದ್ಧಿಯಲ್ಲಿ, ವೀರ್ಯದಲ್ಲಿ, ದಕ್ಷತೆಯಲ್ಲಿ, ಅಜೇಯತ್ವದಲ್ಲಿ, ಅರ್ಥಜ್ಞಾನದಲ್ಲಿ, ಜಯದಲ್ಲಿ, ತಪಸ್ಸಿನಲ್ಲಿ, ಕೃತಜ್ಞತೆಯಲ್ಲಿ ಮತ್ತು ಇತರ ಸರ್ವ ಗುಣಗಳಲ್ಲಿ ನಿಮಗೆ ಸಮನಾಗಿರುವವರು ಮತ್ತು ರಕ್ಷಕರು ಯಾರೂ ಇಲ್ಲವೆಂದು ರಾಜನಿಗೆ ತಿಳಿದಿದೆ.

07005024a ಸ ಭವಾನ್ಪಾತು ನಃ ಸರ್ವಾನ್ವಿಬುಧಾನಿವ ವಾಸವಃ।
07005024c ಭವನ್ನೇತ್ರಾಃ ಪರಾಂ ಜೇತುಮಿಚ್ಚಾಮೋ ದ್ವಿಜಸತ್ತಮ।।

ದ್ವಿಜಸತ್ತಮ! ವಾಸವನು ದೇವತೆಗಳನ್ನು ಹೇಗೋ ಹಾಗೆ ನೀವು ನಮ್ಮೆಲ್ಲರನ್ನೂ ರಕ್ಷಿಸಬೇಕು. ನಿಮ್ಮ ನೇತೃತ್ವದಲ್ಲಿ ಶತ್ರುಗಳನ್ನು ಜಯಿಸಲು ಇಚ್ಛಿಸುತ್ತೇನೆ.

07005025a ರುದ್ರಾಣಾಮಿವ ಕಾಪಾಲೀ ವಸೂನಾಮಿವ ಪಾವಕಃ।
07005025c ಕುಬೇರ ಇವ ಯಕ್ಷಾಣಾಂ ಮರುತಾಮಿವ ವಾಸವಃ।।
07005026a ವಸಿಷ್ಠ ಇವ ವಿಪ್ರಾಣಾಂ ತೇಜಸಾಮಿವ ಭಾಸ್ಕರಃ।
07005026c ಪಿತೄಣಾಮಿವ ಧರ್ಮೋಽಥ ಆದಿತ್ಯಾನಾಮಿವಾಂಬುರಾಟ್।।
07005027a ನಕ್ಷತ್ರಾಣಾಮಿವ ಶಶೀ ದಿತಿಜಾನಾಮಿವೋಶನಾಃ।
07005027c ಶ್ರೇಷ್ಠಃ ಸೇನಾಪ್ರಣೇತೄಣಾಂ ಸ ನಃ ಸೇನಾಪತಿರ್ಭವ।।

ರುದ್ರರಲ್ಲಿ ಕಪಾಲಿಯಂತೆ, ವಸುಗಳಲ್ಲಿ ಪಾವಕನಂತೆ, ಯಕ್ಷರಲ್ಲಿ ಕುಬೇರನಂತೆ, ಮರುತರಲ್ಲಿ ವಾಸವನಂತೆ, ವಿಪ್ರರಲ್ಲಿ ವಸಿಷ್ಠನಂತೆ, ತೇಜಸ್ವಿಗಳಲ್ಲಿ ಭಾಸ್ಕರನಂತೆ, ಪಿತೃಗಳಲ್ಲಿ ಧರ್ಮನಂತೆ, ಆದಿತ್ಯರಲ್ಲಿ ಸೂರ್ಯನಂತೆ, ನಕ್ಷತ್ರಗಳಲ್ಲಿ ಶಶಿಯಂತೆ, ದೈತ್ಯರಲ್ಲಿ ಶುಕ್ರನಂತೆ ಸೇನಾಪತಿಗಳಲ್ಲಿ ಶ್ರೇಷ್ಠನಾಗಿ ನನ್ನ ಸೇನಾಪತಿಯಾಗು.

07005028a ಅಕ್ಷೌಹಿಣ್ಯೋ ದಶೈಕಾ ಚ ವಶಗಾಃ ಸಂತು ತೇಽನಘ।
07005028c ತಾಭಿಃ ಶತ್ರೂನ್ಪ್ರತಿವ್ಯೂಹ್ಯ ಜಹೀಂದ್ರೋ ದಾನವಾನಿವ।।

ಅನಘ! ಈ ಹನ್ನೊಂದು ಅಕ್ಷೌಹಿಣಿಗಳು ನಿನ್ನ ವಶದಲ್ಲಿ ಬಂದಿವೆ. ನೀನೂ ಶತ್ರುಗಳ ಪ್ರತಿಯಾಗಿ ವ್ಯೂಹವನ್ನು ರಚಿಸಿ ದಾನವರನ್ನು ಇಂದ್ರನು ಹೇಗೋ ಹಾಗೆ ಶತ್ರುಗಳನ್ನ್ನು ಸಂಹರಿಸು.

07005029a ಪ್ರಯಾತು ನೋ ಭವಾನಗ್ರೇ ದೇವಾನಾಮಿವ ಪಾವಕಿಃ।
07005029c ಅನುಯಾಸ್ಯಾಮಹೇ ತ್ವಾಜೌ ಸೌರಭೇಯಾ ಇವರ್ಷಭಂ।।

ಪಾವಕೀ ಕಾರ್ತಿಕೇಯನು ದೇವಸೇನೆಯ ಅಗ್ರಭಾಗದಲ್ಲಿ ಹೋಗುವಂತೆ ನಿವು ನಮ್ಮ ಮುಂಭಾಗದಲ್ಲಿ ನಡೆಯಿರಿ. ಹಸುಗಳು ಹೋರಿಯನ್ನು ಅನುಸರಿಸುವಂತೆ ನಾವು ನಿಮ್ಮನ್ನು ಹಿಂಬಾಲಿಸಿ ಬರುತ್ತೇವೆ.

07005030a ಉಗ್ರಧನ್ವಾ ಮಹೇಷ್ವಾಸೋ ದಿವ್ಯಂ ವಿಸ್ಫಾರಯನ್ಧನುಃ।
07005030c ಅಗ್ರೇ ಭವಂತಂ ದೃಷ್ಟ್ವಾ ನೋ ನಾರ್ಜುನಃ ಪ್ರಸಹಿಷ್ಯತೇ।।

ದಿವ್ಯ ಧನುಸ್ಸನ್ನು ಟೇಂಕರಿಸಿ ಮುಂದಿರುವ ಮಹೇಷ್ವಾಸ ಉಗ್ರಧನ್ವಿ ನಿಮ್ಮನ್ನು ನೋಡಿ ಅರ್ಜುನನು ಪ್ರಹರಿಸುವುದಿಲ್ಲ.

07005031a ಧ್ರುವಂ ಯುಧಿಷ್ಠಿರಂ ಸಂಖ್ಯೇ ಸಾನುಬಂಧಂ ಸಬಾಂಧವಂ।
07005031c ಜೇಷ್ಯಾಮಿ ಪುರುಷವ್ಯಾಘ್ರ ಭವಾನ್ಸೇನಾಪತಿರ್ಯದಿ।।

ಪುರುಷವ್ಯಾಘ್ರ! ಒಂದುವೇಳೆ ನೀವು ನನ್ನ ಸೇನಾಪತಿಯಾದರೆ ಯುದ್ಧದಲ್ಲಿ ಬಾಂಧವರು ಮತ್ತು ಅನುಯಾಯಿಗಳೊಂದಿಗೆ ಯುಧಿಷ್ಠಿರನನ್ನು ಗೆಲ್ಲುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”

07005032a ಏವಮುಕ್ತೇ ತತೋ ದ್ರೋಣೇ ಜಯೇತ್ಯೂಚುರ್ನರಾಧಿಪಾಃ।
07005032c ಸಿಂಹನಾದೇನ ಮಹತಾ ಹರ್ಷಯಂತಸ್ತವಾತ್ಮಜಂ।।

ದ್ರೋಣನಿಗೆ ಹೀಗೆ ಹೇಳಲು ಜಯುವಾಗಲೆಂದು ನರಾಧಿಪರು ಕೂಗಿ ಹೇಳಿ, ಮಹಾ ಸಿಂಹನಾದದಿಂದ ನಿನ್ನ ಮಗನನ್ನು ಹರ್ಷಿಸಿದರು.

07005033a ಸೈನಿಕಾಶ್ಚ ಮುದಾ ಯುಕ್ತಾ ವರ್ಧಯಂತಿ ದ್ವಿಜೋತ್ತಮಂ।
07005033c ದುರ್ಯೋಧನಂ ಪುರಸ್ಕೃತ್ಯ ಪ್ರಾರ್ಥಯಂತೋ ಮಹದ್ಯಶಃ।।

ಸಂತೋಷದಿಂದ ಸೈನಿಕರು ದ್ವಿಜೋತ್ತಮನಿಗೆ ಜಯಕಾರ ಹಾಕಿದರು. ದುರ್ಯೋಧನನನ್ನು ಮುಂದಿರಿಸಿಕೊಂಡು ಮಹದ್ಯಶನನ್ನು ಬೇಡಿಕೊಂಡರು.

07005034 ದ್ರೋಣ ಉವಾಚ।
07005034a ವೇದಂ ಷಡಂಗಂ ವೇದಾಹಮರ್ಥವಿದ್ಯಾಂ ಚ ಮಾನವೀಂ।
07005034c ತ್ರೈಯಂಬಕಮಥೇಷ್ವಸ್ತ್ರಮಸ್ತ್ರಾಣಿ ವಿವಿಧಾನಿ ಚ।।

ದ್ರೋಣನು ಹೇಳಿದನು: “ಆರೂ ಅಂಗಗಳೊಂದಿಗೆ ವೇದವನ್ನು ತಿಳಿದಿದ್ದೇನೆ. ಮನುವಿನ ಅರ್ಥವಿದ್ಯೆಯನ್ನೂ ನಾನು ತಿಳಿದುಕೊಂಡಿದ್ದೇನೆ. ತ್ರೈಯಂಬಕನ ವಿವಿಧ ಇಷ್ವಸ್ತ್ರಗಳನ್ನೂ ಅರಿತಿದ್ದೇನೆ.

07005035a ಯೇ ಚಾಪ್ಯುಕ್ತಾ ಮಯಿ ಗುಣಾ ಭವದ್ಭಿರ್ಜಯಕಾಂಕ್ಷಿಭಿಃ।
07005035c ಚಿಕೀರ್ಷುಸ್ತಾನಹಂ ಸತ್ಯಾನ್ಯೋಧಯಿಷ್ಯಾಮಿ ಪಾಂಡವಾನ್।।

ವಿಜಯಕಾಂಕ್ಷಿಗಳಾದ ನೀವು ನನ್ನ ಏನೆಲ್ಲ ಗುಣಗಳಿವೆಯೆಂದು ಹೇಳಿದಿರೋ ಅವೆಲ್ಲವನ್ನೂ ಸತ್ಯವಾಗಿಸಲು ಪಾಂಡವರೊಡನೆ ಹೋರಾಡುತ್ತೇನೆ.””

07005036 ಸಂಜಯ ಉವಾಚ।
07005036a ಸ ಏವಮಭ್ಯನುಜ್ಞಾತಶ್ಚಕ್ರೇ ಸೇನಾಪತಿಂ ತತಃ।
07005036c ದ್ರೋಣಂ ತವ ಸುತೋ ರಾಜನ್ವಿಧಿದೃಷ್ಟೇನ ಕರ್ಮಣಾ।।

ಸಂಜಯನು ಹೇಳಿದನು: “ಹೀಗೆ ಅವನು ಅನುಜ್ಞೆಯನ್ನು ನೀಡಲು ರಾಜನ್! ನಿನ್ನ ಮಗನು ದ್ರೋಣನನ್ನು ವಿಧಿವತ್ತಾದ ಕರ್ಮಗಳಿಂದ ಸೇನಾಪತಿಯನ್ನಾಗಿ ಮಾಡಿದನು.

07005037a ಅಥಾಭಿಷಿಷಿಚುರ್ದ್ರೋಣಂ ದುರ್ಯೋಧನಮುಖಾ ನೃಪಾಃ।
07005037c ಸೇನಾಪತ್ಯೇ ಯಥಾ ಸ್ಕಂದಂ ಪುರಾ ಶಕ್ರಮುಖಾಃ ಸುರಾಃ।।

ಆಗ ದುರ್ಯೋಧನಪ್ರಮುಖರಾದ ನೃಪರು ಹಿಂದೆ ಶಕ್ರನ ನಾಯಕತ್ವದಲ್ಲಿ ಸುರರು ಹೇಗೆ ಸ್ಕಂದನನ್ನು ಹೇಗೋ ಹಾಗೆ ದ್ರೋಣನನ್ನು ಸೇನಾಪತಿಯನಗಿ ಅಭಿಷೇಕಿಸಿದರು.

07005038a ತತೋ ವಾದಿತ್ರಘೋಷೇಣ ಸಹ ಪುಂಸಾಂ ಮಹಾಸ್ವನೈಃ।
07005038c ಪ್ರಾದುರಾಸೀತ್ಕೃತೇ ದ್ರೋಣೇ ಹರ್ಷಃ ಸೇನಾಪತೌ ತದಾ।।

ಆಗ ಮಂಗಳ ವಾದ್ಯಗಳ ಘೋಷಗಳಿಂದ ಪುರುಷರ ಮಹಾಕೂಗುಗಳೊಡನೆ ಹರ್ಷದಿಂದ ದ್ರೋಣನನ್ನು ಸೇನಾಪತಿಯನ್ನಾಗಿ ಮಾಡಲಾಯಿತು.

07005039a ತತಃ ಪುಣ್ಯಾಹಘೋಷೇಣ ಸ್ವಸ್ತಿವಾದಸ್ವನೇನ ಚ।
07005039c ಸಂಸ್ತವೈರ್ಗೀತಶಬ್ದೈಶ್ಚ ಸೂತಮಾಗಧಬಂದಿನಾಂ।।
07005040a ಜಯಶಬ್ದೈರ್ದ್ವಿಜಾಗ್ರ್ಯಾಣಾಂ ಸುಭಗಾನರ್ತಿತೈಸ್ತಥಾ।
07005040c ಸತ್ಕೃತ್ಯ ವಿಧಿವದ್ರೋಣಂ ಜಿತಾನ್ಮನ್ಯಂತ ಪಾಂಡವಾನ್।।

ಪುಣ್ಯಾಹಘೋಷ, ಸ್ವಸ್ತಿವಾಚನ, ಸೂತ-ವಂದಿ-ಮಾಗಧರ ಹೊಗಳಿಕೆ, ಸಂಗೀತ, ಶ್ರೇಷ್ಠ ಬ್ರಾಹ್ಮಣರಿಂದ ಜಯಾಶಿಷಗಳು, ನೃತ್ಯಗಾತಿಯರಿಂದ ನರ್ತನ ಇತ್ಯಾದಿಗಳಿಂದ ದ್ರೋಣನನ್ನು ಯಥಾವಿಧಿಯಾಗಿ ಸತ್ಕರಿಸಿದ ಕೌರವರು ಪಾಂಡವರನ್ನು ಗೆದ್ದೆವೆಂದೇ ಭಾವಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ದ್ರೋಣಪ್ರೋತ್ಸಾಹನೇ ಪಂಚಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ದ್ರೋಣಪ್ರೋತ್ಸಾಹನ ಎನ್ನುವ ಐದನೇ ಅಧ್ಯಾಯವು.