004 ಕರ್ಣಾಶ್ವಾಸಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ದ್ರೋಣಾಭಿಷೇಕ ಪರ್ವ

ಅಧ್ಯಾಯ 4

ಸಾರ

ಭೀಷ್ಮನು ಕರ್ಣನನ್ನು ಯುದ್ಧಕ್ಕೆ ಬೀಳ್ಕೊಟ್ಟಿದುದು (1-15).

07004001 ಸಂಜಯ ಉವಾಚ।
07004001a ತಸ್ಯ ಲಾಲಪ್ಯತಃ ಶ್ರುತ್ವಾ ವೃದ್ಧಃ ಕುರುಪಿತಾಮಹಃ।
07004001c ದೇಶಕಾಲೋಚಿತಂ ವಾಕ್ಯಮಬ್ರವೀತ್ ಪ್ರೀತಮಾನಸಃ।।

ಸಂಜಯನು ಹೇಳಿದನು: “ಅವನ ಆ ಲಲಾಪಗಳನ್ನು ಕೇಳಿದ ಪ್ರೀತಮನಸ್ಕ ವೃದ್ಧ ಕುರುಪಿತಾಮಹನು ದೇಶ ಕಾಲೋಚಿತವಾದ ಮಾತನ್ನಾಡಿದನು.

07004002a ಸಮುದ್ರ ಇವ ಸಿಂಧೂನಾಂ ಜ್ಯೋತಿಷಾಮಿವ ಭಾಸ್ಕರಃ।
07004002c ಸತ್ಯಸ್ಯ ಚ ಯಥಾ ಸಂತೋ ಬೀಜಾನಾಮಿವ ಚೋರ್ವರಾ।।
07004003a ಪರ್ಜನ್ಯ ಇವ ಭೂತಾನಾಂ ಪ್ರತಿಷ್ಠಾ ಸುಹೃದಾಂ ಭವ।
07004003c ಬಾಂಧವಾಸ್ತ್ವಾನುಜೀವಂತು ಸಹಸ್ರಾಕ್ಷಮಿವಾಮರಾಃ।।

“ನದಿಗಳಿಗೆ ಸಮುದ್ರದಂತೆ, ಬೆಳಗುತ್ತಿರುವವರಲ್ಲಿ ಭಾಸ್ಕರನಂತೆ, ಸಂತರಿಗೆ ಸತ್ಯದಂತೆ, ಫಲವತ್ತಾದ ಭೂಮಿಗೆ ಬೀಜದಂತೆ, ಜೀವಿಗಳಿಗೆ ಮಳೆಯಂತೆ ನಿನ್ನ ಸುಹೃದಯರಲ್ಲಿ ನೆಲೆಸಿರು. ಸಹಸ್ರಾಕ್ಷನನ್ನು ಅವಲಂಬಿಸಿ ಅಮರರು ಇರುವಂತೆ ಬಾಂಧವರು ನಿನ್ನನ್ನು ಅವಲಂಬಿಸಿರಲಿ.

07004004a ಸ್ವಬಾಹುಬಲವೀರ್ಯೇಣ ಧಾರ್ತರಾಷ್ಟ್ರಪ್ರಿಯೈಷಿಣಾ।
07004004c ಕರ್ಣ ರಾಜಪುರಂ ಗತ್ವಾ ಕಾಂಬೋಜಾ ನಿಹತಾಸ್ತ್ವಯಾ।।

ಕರ್ಣ! ಧಾರ್ತರಾಷ್ಟ್ರನಿಗೆ ಪ್ರಿಯವಾದುದನ್ನು ಮಾಡಲಿಚ್ಛಿಸಿ ನೀನು ರಾಜಪುರಕ್ಕೆ ಹೋಗಿ ಕಾಂಬೋಜರನ್ನು ಸಂಹರಿಸಿದೆ.

07004005a ಗಿರಿವ್ರಜಗತಾಶ್ಚಾಪಿ ನಗ್ನಜಿತ್ಪ್ರಮುಖಾ ನೃಪಾಃ।
07004005c ಅಂಬಷ್ಠಾಶ್ಚ ವಿದೇಹಾಶ್ಚ ಗಾಂಧಾರಾಶ್ಚ ಜಿತಾಸ್ತ್ವಯಾ।।
07004006a ಹಿಮವದ್ದುರ್ಗನಿಲಯಾಃ ಕಿರಾತಾ ರಣಕರ್ಕಶಾಃ।
07004006c ದುರ್ಯೋಧನಸ್ಯ ವಶಗಾಃ ಕೃತಾಃ ಕರ್ಣ ತ್ವಯಾ ಪುರಾ।।

ಗಿರಿವ್ರಜಕ್ಕೆ ಹೋಗಿ ನಗ್ನಜಿತನೇ ಮೊದಲಾದ ಪ್ರಮುಖ ನೃಪರನ್ನೂ, ಅಂಬಷ್ಠ, ವಿದೇಹ, ಗಾಂಧಾರರನ್ನು ನೀನು ಗೆದ್ದೆ. ಕರ್ಣ! ಹಿಂದೆ ನೀನು ಹಿಮವತ್ಪರ್ವತದ ಕಣಿವೆಗಳಲ್ಲಿ ವಾಸಿಸುವ ರಣಕರ್ಕಶ ಕಿರಾತರು ದುರ್ಯೋಧನನ ವಶದಲ್ಲಿ ಬರುವಂತೆ ಮಾಡಿದೆ.

07004007a ತತ್ರ ತತ್ರ ಚ ಸಂಗ್ರಾಮೇ ದುರ್ಯೋಧನಹಿತೈಷಿಣಾ।
07004007c ಬಹವಶ್ಚ ಜಿತಾ ವೀರಾಸ್ತ್ವಯಾ ಕರ್ಣ ಮಹೌಜಸಾ।।

ಕರ್ಣ! ದುರ್ಯೋಧನನಿಗೆ ಹಿತವನ್ನು ಮಾಡಲು ಬಯಸಿ ನಿನ್ನ ವೀರ್ಯ ಮತ್ತು ಮಹಾ ಓಜಸ್ಸಿನಿಂದ ನೀನು ಅಲ್ಲಲ್ಲಿ ಅನೇಕರನ್ನು ಗೆದ್ದೆ.

07004008a ಯಥಾ ದುರ್ಯೋಧನಸ್ತಾತ ಸಜ್ಞಾತಿಕುಲಬಾಂಧವಃ।
07004008c ತಥಾ ತ್ವಮಪಿ ಸರ್ವೇಷಾಂ ಕೌರವಾಣಾಂ ಗತಿರ್ಭವ।।

ಮಗೂ! ದುರ್ಯೋಧನನು ಜ್ಞಾತಿಕುಲಬಾಂಧವರಿಗೆ ಹೇಗೋ ಹಾಗೆ ನೀನೂ ಕೂಡ ಸರ್ವ ಕೌರವರಿಗೆ ಗತಿಯಾಗಿರು.

07004009a ಶಿವೇನಾಭಿವದಾಮಿ ತ್ವಾಂ ಗಚ್ಚ ಯುಧ್ಯಸ್ವ ಶತ್ರುಭಿಃ।
07004009c ಅನುಶಾಧಿ ಕುರೂನ್ಸಂಖ್ಯೇ ಧತ್ಸ್ವ ದುರ್ಯೋಧನೇ ಜಯಂ।।

ಮಂಗಳಕರವಾಗಿ ನಿನಗೆ ಹೇಳುತ್ತಿದ್ದೇನೆ. ಹೋಗು! ಶತ್ರುಗಳೊಂದಿಗೆ ಯುದ್ಧಮಾಡು! ಯುದ್ಧದಲ್ಲಿ ಕುರುಗಳನ್ನು ನಡೆಸಿ ದುರ್ಯೋಧನನಿಗೆ ಜಯವನ್ನು ಕೊಡು.

07004010a ಭವಾನ್ಪೌತ್ರಸಮೋಽಸ್ಮಾಕಂ ಯಥಾ ದುರ್ಯೋಧನಸ್ತಥಾ।
07004010c ತವಾಪಿ ಧರ್ಮತಃ ಸರ್ವೇ ಯಥಾ ತಸ್ಯ ವಯಂ ತಥಾ।।

ದುರ್ಯೋಧನನು ಹೇಗೋ ಹಾಗೆ ನೀನೂ ಕೂಡ ನಮಗೆ ಮೊಮ್ಮಗನ ಸಮನಾಗಿರುವೆ. ಆದುದರಿಂದ ಧರ್ಮತಃ ನಮ್ಮದೆಲ್ಲವೂ ನಿನ್ನದೂ ಕೂಡ.

07004011a ಯೌನಾತ್ಸಂಬಂಧಕಾಲ್ಲೋಕೇ ವಿಶಿಷ್ಟಂ ಸಂಗತಂ ಸತಾಂ।
07004011c ಸದ್ಭಿಃ ಸಹ ನರಶ್ರೇಷ್ಠ ಪ್ರವದಂತಿ ಮನೀಷಿಣಃ।।

ನರಶ್ರೇಷ್ಠ! ಒಂದೇ ತಾಯಿಯಲ್ಲಿ ಹುಟ್ಟಿದವರಿಗಿಂತ ಸಜ್ಜನರ ಸಂಗವು ವಿಶಿಷ್ಟವಾದುದೆಂದು ತಿಳಿದವರು ಹೇಳುತ್ತಾರೆ.

07004012a ಸ ಸತ್ಯಸಂಗರೋ ಭೂತ್ವಾ ಮಮೇದಮಿತಿ ನಿಶ್ಚಿತಂ।
07004012c ಕುರೂಣಾಂ ಪಾಲಯ ಬಲಂ ಯಥಾ ದುರ್ಯೋಧನಸ್ತಥಾ।।

ಆದುದರಿಂದ ಸತ್ಯಸಂಗರನಾಗಿದ್ದುಕೊಂಡು ದುರ್ಯೋಧನನ ಸೇನೆಯನ್ನು ನನ್ನದೇ ಎಂದು ನಿಶ್ಚಯಿಸಿ ಕುರುಗಳನ್ನು ಪಾಲಿಸು!”

07004013a ಇತಿ ಶ್ರುತ್ವಾ ವಚಃ ಸೋಽಥ ಚರಣಾವಾಭಿವಾದ್ಯ ಚ।
07004013c ಯಯೌ ವೈಕರ್ತನಃ ಕರ್ಣಸ್ತೂರ್ಣಮಾಯೋಧನಂ ಪ್ರತಿ।।

ಅವನ ಆ ಮಾತನ್ನು ಕೇಳಿ ವೈಕರ್ತನ ಕರ್ಣನು ಅವನ ಚರಣಗಳಿಗೆ ನಮಸ್ಕರಿಸಿ ಬೇಗನೇ ದುರ್ಯೋಧನನ ಕಡೆ ಹೋದನು.

07004014a ಸೋಽಭಿವೀಕ್ಷ್ಯ ನರೌಘಾಣಾಂ ಸ್ಥಾನಮಪ್ರತಿಮಂ ಮಹತ್।
07004014c ವ್ಯೂಢಪ್ರಹರಣೋರಸ್ಕಂ ಸೈನ್ಯಂ ತತ್ಸಮಬೃಂಹಯತ್।।

ಅವನು ಆ ಅಪ್ರತಿಮ ಸ್ಥಾನದ ಮಹಾ ಸೇನೆಯನ್ನು ನೋಡಿ ವ್ಯೂಹವನ್ನು ವಿಶಾಲ ಎದೆಯ ಅವನು ಉತ್ತೇಜಿಸಿದನು.

07004015a ಕರ್ಣಂ ದೃಷ್ಟ್ವಾ ಮಹೇಷ್ವಾಸಂ ಯುದ್ಧಾಯ ಸಮವಸ್ಥಿತಂ।
07004015c ಕ್ಷ್ವೇಡಿತಾಸ್ಫೋಟಿತರವೈಃ ಸಿಂಹನಾದರವೈರಪಿ।
07004015e ಧನುಃಶಬ್ದೈಶ್ಚ ವಿವಿಧೈಃ ಕುರವಃ ಸಮಪೂಜಯನ್।।

ಯುದ್ಧಕ್ಕೆ ಬಂದೊದಗಿದ ಮಹೇಷ್ವಾಸ ಕರ್ಣನನ್ನು ನೋಡಿ ಕೌರವರು ಅವನನ್ನು ಭುಜಗಳನ್ನು ತಟ್ಟುವುದರ ಮೂಲಕ, ಸಿಂಹನಾದದೊಂದಿಗೆ ವಿವಿಧ ಧನುಸ್ಸುಗಳ ಶಬ್ಧಗಳೊಂದಿಗೆ ಗೌರವಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಕರ್ಣಾಶ್ವಾಸೇ ಚತುರ್ಥೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಕರ್ಣಾಶ್ವಾಸ ಎನ್ನುವ ನಾಲ್ಕನೇ ಅಧ್ಯಾಯವು.