ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ದ್ರೋಣಾಭಿಷೇಕ ಪರ್ವ
ಅಧ್ಯಾಯ 2
ಸಾರ
ಕರ್ಣನ ರಣಯಾತ್ರೆ (1-37).
07002001 ಸಂಜಯ ಉವಾಚ।
07002001a ಹತಂ ಭೀಷ್ಮಮಾಧಿರಥಿರ್ವಿದಿತ್ವಾ ಭಿನ್ನಾಂ ನಾವಮಿವಾತ್ಯಗಾಧೇ ಕುರೂಣಾಂ।
07002001c ಸೋದರ್ಯವದ್ವ್ಯಸನಾತ್ಸೂತಪುತ್ರಃ ಸಂತಾರಯಿಷ್ಯಂಸ್ತವ ಪುತ್ರಸ್ಯ ಸೇನಾಂ।।
ಸಂಜಯನು ಹೇಳಿದನು: “ಕುರುಗಳ ಸೇನೆಯು ತುಂಡಾದ ನಾವೆಯಂತೆ ಅಗಾಧ ಸಮುದ್ರದಲ್ಲಿ ಮುಳುಗಿರಲು ಭೀಷ್ಮನು ಹತನಾದನೆಂದು ತಿಳಿದು ಆಧಿರಥಿ ಸೂತಪುತ್ರನು ಸಹೋದರನಂತಿದ್ದ ನಿನ್ನ ಪುತ್ರನ ಸೇನೆಯನ್ನು ಉಳಿಸಲು ಬಯಸಿದನು.
07002002a ಶ್ರುತ್ವಾ ತು ಕರ್ಣಃ ಪುರುಷೇಂದ್ರಮಚ್ಯುತಂ ನಿಪಾತಿತಂ ಶಾಂತನವಂ ಮಹಾರಥಂ।
07002002c ಅಥೋಪಾಯಾತ್ತೂರ್ಣಮಮಿತ್ರಕರ್ಶನೋ ಧನುರ್ಧರಾಣಾಂ ಪ್ರವರಸ್ತದಾ ವೃಷಃ।।
ಆ ಪುರುಷೇಂದ್ರ ಅಚ್ಯುತ ಮಹಾರಥ ಶಾಂತನವನು ಬಿದ್ದನೆಂದು ಕೇಳಿ ತಕ್ಷಣವೇ ಧನುರ್ಧರಶ್ರೇಷ್ಠ ಅಮಿತ್ರಕರ್ಷನ ವೃಷಸೇನ ಕರ್ಣನು ಹೊರಟನು.
07002003a ಹತೇ ತು ಭೀಷ್ಮೇ ರಥಸತ್ತಮೇ ಪರೈರ್ ನಿಮಜ್ಜತೀಂ ನಾವಮಿವಾರ್ಣವೇ ಕುರೂನ್।
07002003c ಪಿತೇವ ಪುತ್ರಾಂಸ್ತ್ವರಿತೋಽಭ್ಯಯಾತ್ತತಃ ಸಂತಾರಯಿಷ್ಯಂಸ್ತವ ಪುತ್ರಸ್ಯ ಸೇನಾಂ।।
ಶತ್ರುಗಳಿಂದ ರಥಸತ್ತಮ ಭೀಷ್ಮನು ಹತನಾಗಿ ಕುರುಗಳ ನಾವೆಯು ಮಹಾಸಾಗರದಲ್ಲಿ ಮುಳುಗುತ್ತಿರಲು ತಂದೆಯು ಮಕ್ಕಳ ಬಳಿ ಬರುವಂತೆ ತ್ವರೆಮಾಡಿ ನಿನ್ನ ಪುತ್ರನ ಸೇನೆಯನ್ನು ಉಳಿಸಲೋಸುಗ ಕರ್ಣನು ಅಲ್ಲಿಗೆ ಧಾವಿಸಿ ಬಂದನು.
07002004 ಕರ್ಣ ಉವಾಚ।
07002004a ಯಸ್ಮಿನ್ಧೃತಿರ್ಬುದ್ಧಿಪರಾಕ್ರಮೌಜೋ ದಮಃ ಸತ್ಯಂ ವೀರಗುಣಾಶ್ಚ ಸರ್ವೇ।
07002004c ಅಸ್ತ್ರಾಣಿ ದಿವ್ಯಾನ್ಯಥ ಸನ್ನತಿರ್ಹ್ರೀಃ ಪ್ರಿಯಾ ಚ ವಾಗನಪಾಯೀನಿ ಭೀಷ್ಮೇ।।
07002005a ಬ್ರಹ್ಮದ್ವಿಷಘ್ನೇ ಸತತಂ ಕೃತಜ್ಞೇ ಸನಾತನಂ ಚಂದ್ರಮಸೀವ ಲಕ್ಷ್ಮ।
07002005c ಸ ಚೇತ್ಪ್ರಶಾಂತಃ ಪರವೀರಹಂತಾ ಮನ್ಯೇ ಹತಾನೇವ ಹಿ ಸರ್ವಯೋಧಾನ್।।
ಕರ್ಣನು ಹೇಳಿದನು: “ಯಾರಲ್ಲಿ ಧೃತಿ, ಬುದ್ಧಿ, ಪರಾಕ್ರಮ, ಓಜಸ್ಸು, ದಮ, ವಿನಯ, ಸಂಕೋಚ, ಸತ್ಯ, ಮತ್ತು ವೀರಗುಣಗಳೆಲ್ಲವೂ, ದಿವ್ಯ ಅಸ್ತ್ರಗಳು ಮತ್ತು ಪ್ರೀತಿಯ ಮಾತುಗಳು ಇದ್ದವೋ, ಯಾರು ಬ್ರಹ್ಮದ್ವೇಷಿಗಳನ್ನು ಸಂಹರಿಸುವವನಾಗಿದ್ದನೋ ಆ ಸತತವೂ ಕೃತಜ್ಞನಾಗಿದ್ದ, ಚಂದ್ರನಲ್ಲಿರುವ ಲಕ್ಷ್ಮಿಯಂತೆ ಸನಾತನನಾಗಿದ್ದ, ಪ್ರಶಾಂತ, ಪರವೀರಹಂತ ಭೀಷ್ಮನೇ ಹತನಾದನೆಂದರೆ ಎಲ್ಲ ಯೋಧರೂ ಹತರಾದರಂತೆಯೇ!
07002006a ನೇಹ ಧ್ರುವಂ ಕಿಂ ಚನ ಜಾತು ವಿದ್ಯತೇ ಅಸ್ಮಿಽಲ್ಲೋಕೇ ಕರ್ಮಣೋಽನಿತ್ಯಯೋಗಾತ್।
07002006c ಸೂರ್ಯೋದಯೇ ಕೋ ಹಿ ವಿಮುಕ್ತಸಂಶಯೋ ಭಾವಂ ಕುರ್ವೀತಾದ್ಯ ಮಹಾವ್ರತೇ ಹತೇ।।
ಕರ್ಮಯೋಗದಿಂದ ಹುಟ್ಟಿದ ಯಾವುದೂ ಈ ಲೋಕದಲ್ಲಿ ನಿತ್ಯವೂ ಇರುವುದಿಲ್ಲವೆಂದು ತಿಳಿದುಕೊಳ್ಳಬೇಕು. ಏಕೆಂದರೆ ಇಂದು ಮಹಾವ್ರತನು ಹತನಾಗಲು ಯಾರುತಾನೇ ಸಂಶಯವಿಲ್ಲದೇ ನಾಳೆ ಸೂರ್ಯೋದಯವಾಗುತ್ತದೆಯೆಂದು ಹೇಳಬಹುದು?
07002007a ವಸುಪ್ರಭಾವೇ ವಸುವೀರ್ಯಸಂಭವೇ ಗತೇ ವಸೂನೇವ ವಸುಂಧರಾಧಿಪೇ।
07002007c ವಸೂನಿ ಪುತ್ರಾಂಶ್ಚ ವಸುಂಧರಾಂ ತಥಾ ಕುರೂಂಶ್ಚ ಶೋಚಧ್ವಮಿಮಾಂ ಚ ವಾಹಿನೀಂ।।
ಆ ವಸುಪ್ರಭಾವ ವಸುವೀರ್ಯಸಂಭವನು ವಸುಂಧರೆಯಲ್ಲಿ ವಸುವಾಗಿಯೇ ಹೋಗಲು ಇಂದು ಈ ಸೇನೆಯು ಸಂಪತ್ತು, ಮಕ್ಕಳು, ಭೂಮಿ ಮತ್ತು ಕುರುಗಳ ಕುರಿತು ಶೋಕಿಸುತ್ತಿದೆ!””
07002008 ಸಂಜಯ ಉವಾಚ।
07002008a ಮಹಾಪ್ರಭಾವೇ ವರದೇ ನಿಪಾತಿತೇ ಲೋಕಶ್ರೇಷ್ಠೇ ಶಾಂತನವೇ ಮಹೌಜಸಿ।
07002008c ಪರಾಜಿತೇಷು ಭರತೇಷು ದುರ್ಮನಾಃ ಕರ್ಣೋ ಭೃಶಂ ನ್ಯಶ್ವಸದಶ್ರು ವರ್ತಯನ್।।
ಸಂಜಯನು ಹೇಳಿದನು: “ಆ ಮಹಾ ಪ್ರಭಾವ ವರದ ಲೋಕಶ್ರೇಷ್ಠ ಮಹಾ ತೇಜಸ್ವಿ ಶಾಂತನವನು ಬೀಳಲು ಪರಾಜಿತರಾಗಿ ದುಃಖಿತ ಭರತರನ್ನು ಕರ್ಣನು ಜೋರಾಗಿ ಅಳುತ್ತಾ ಸಂತವಿಸತೊಡಗಿದನು.
07002009a ಇದಂ ತು ರಾಧೇಯವಚೋ ನಿಶಮ್ಯ ತೇ ಸುತಾಶ್ಚ ರಾಜಂಸ್ತವ ಸೈನಿಕಾಶ್ಚ ಹ।
07002009c ಪರಸ್ಪರಂ ಚುಕ್ರುಶುರಾರ್ತಿಜಂ ಭೃಶಂ ತದಾಶ್ರು ನೇತ್ರೈರ್ಮುಮುಚುರ್ಹಿ ಶಬ್ದವತ್।।
ರಾಜನ್! ರಾಧೇಯನ ಈ ಮಾತನ್ನು ಕೇಳಿ ನಿನ್ನ ಮಕ್ಕಳು ಮತ್ತು ಸೈನಿಕರು ಪರಸ್ಪರರನ್ನು ನೋಡಿ ತುಂಬಾ ಜೋರಾಗಿ ಕೂಗಿ ಅತ್ತರು. ಕೂಗುತ್ತಾ ಪುನಃ ಪುನಃ ಕಣ್ಣೀರನ್ನು ಸುರಿಸಿದರು.
07002010a ಪ್ರವರ್ತಮಾನೇ ತು ಪುನರ್ಮಹಾಹವೇ ವಿಗಾಹ್ಯಮಾನಾಸು ಚಮೂಷು ಪಾರ್ಥಿವೈಃ।
07002010c ಅಥಾಬ್ರವೀದ್ಧರ್ಷಕರಂ ವಚಸ್ತದಾ ರಥರ್ಷಭಾನ್ಸರ್ವಮಹಾರಥರ್ಷಭಃ।।
ಆದರೆ ಪುನಃ ಮಹಾಯುದ್ಧವು ಪ್ರಾರಂಭವಾಗಿ ಪಾರ್ಥಿವರು ಸೇನೆಗಳನ್ನು ಪ್ರಚೋದಿಸಲು ಸರ್ವಮಹಾರಥ ಋಷಭ ಕರ್ಣನು ರಥರ್ಷಭರಿಗೆ ಈ ಪ್ರೋತ್ಸಾಹಕರ ಮಾತುಗಳನ್ನಾಡಿದನು:
07002011 ಕರ್ಣ ಉವಾಚ।
07002011a ಜಗತ್ಯನಿತ್ಯೇ ಸತತಂ ಪ್ರಧಾವತಿ ಪ್ರಚಿಂತಯನ್ನಸ್ಥಿರಮದ್ಯ ಲಕ್ಷಯೇ।
07002011c ಭವತ್ಸು ತಿಷ್ಠತ್ಸ್ವಿಹ ಪಾತಿತೋ ರಣೇ ಗಿರಿಪ್ರಕಾಶಃ ಕುರುಪುಂಗವಃ ಕಥಂ।।
ಕರ್ಣನು ಹೇಳಿದನು: “ಅನಿತ್ಯವಾದ ಈ ಜಗತ್ತು ಸತತವೂ ಓಡುತ್ತಿರುತ್ತವೆ. ಇದನ್ನು ಲಕ್ಷಿಸಿ ಎಲ್ಲವೂ ಅಸ್ಥಿರವೆಂದು ಯೋಚಿಸುತ್ತೇನೆ. ನೀವೆಲ್ಲ ಇರುವಾಗ ಹೇಗೆ ತಾನೇ ಗಿರಿಪ್ರಕಾಶ ಕುರುಪುಂಗವನು ರಣದಲ್ಲಿ ಬಿದ್ದನು?
07002012a ನಿಪಾತಿತೇ ಶಾಂತನವೇ ಮಹಾರಥೇ ದಿವಾಕರೇ ಭೂತಲಮಾಸ್ಥಿತೇ ಯಥಾ।
07002012c ನ ಪಾರ್ಥಿವಾಃ ಸೋಢುಮಲಂ ಧನಂಜಯಂ ಗಿರಿಪ್ರವೋಢಾರಮಿವಾನಿಲಂ ದ್ರುಮಾಃ।।
ಆಕಾಶದಿಂದ ಬಿದ್ದ ಸೂರ್ಯನಂತೆ ಮಹಾರಥ ಶಾಂತನವನು ಭೂಮಿಯ ಮೇಲೆ ಮಲಗಿರಲು ಭಿರುಗಾಳಿಯನ್ನು ಎದುರಿಸಲಾರದ ಪರ್ವತದ ಮರಗಳಂತೆ ಧನಂಜಯನನ್ನು ಎದುರಿಸಲು ಪಾರ್ಥಿವರು ಅಶಕ್ಯರಾಗಿದ್ದಾರೆ.
07002013a ಹತಪ್ರಧಾನಂ ತ್ವಿದಮಾರ್ತರೂಪಂ ಪರೈರ್ಹತೋತ್ಸಾಹಮನಾಥಮದ್ಯ ವೈ।
07002013c ಮಯಾ ಕುರೂಣಾಂ ಪರಿಪಾಲ್ಯಮಾಹವೇ ಬಲಂ ಯಥಾ ತೇನ ಮಹಾತ್ಮನಾ ತಥಾ।।
ಆ ಮಹಾತ್ಮನಂತೆ ನಾನು ಇಂದು ಪ್ರಧಾನನನ್ನು ಕಳೆದುಕೊಂಡು ಪರರಿಂದ ನಾಶಗೊಂಡು ಉತ್ಸಾಹವನ್ನು ಕಳೆದುಕೊಂಡು ಅನಾಥವಾಗಿರುವ ಈ ಕುರುಸೇನೆಯನ್ನು ಯುದ್ಧದಲ್ಲಿ ರಕ್ಷಿಸುತ್ತೇನೆ.
07002014a ಸಮಾಹಿತಂ ಚಾತ್ಮನಿ ಭಾರಮೀದೃಶಂ ಜಗತ್ತಥಾನಿತ್ಯಮಿದಂ ಚ ಲಕ್ಷಯೇ।
07002014c ನಿಪಾತಿತಂ ಚಾಹವಶೌಂಡಮಾಹವೇ ಕಥಂ ನು ಕುರ್ಯಾಮಹಮಾಹವೇ ಭಯಂ।।
ಈ ಭಾರವನ್ನು ನನ್ನ ಮೇಲೆ ತೆಗೆದುಕೊಳ್ಳುತ್ತೇನೆ. ಈ ಜಗತ್ತು ಅನಿತ್ಯವೆಂದು ತಿಳಿದುಕೊಂಡು, ಯುದ್ಧನಾಯಕನೇ ಯುದ್ಧದಲ್ಲಿ ಬಿದ್ದಿರುವುದನ್ನು ಲಕ್ಷದಲ್ಲಿಟ್ಟುಕೊಂಡ ನನಗೆ ಯುದ್ಧದಲ್ಲಿ ಭಯವೇನಿದೆ?
07002015a ಅಹಂ ತು ತಾನ್ಕುರುವೃಷಭಾನಜಿಹ್ಮಗೈಃ ಪ್ರವೇರಯನ್ಯಮಸದನಂ ರಣೇ ಚರನ್।
07002015c ಯಶಃ ಪರಂ ಜಗತಿ ವಿಭಾವ್ಯ ವರ್ತಿತಾ ಪರೈರ್ಹತೋ ಯುಧಿ ಶಯಿತಾಥ ವಾ ಪುನಃ।।
ಆದುದರಿಂದ ನಾನು ರಣದಲ್ಲಿ ಸಂಚರಿಸಿ ಜಿಹ್ಮಗಗಳಿಂದ ಆ ಕುರುವೃಷಭರನ್ನು ಯಮಸದನಕ್ಕೆ ಕಳುಹಿಸುತ್ತೇನೆ. ಜಗತ್ತಿನಲ್ಲಿ ಯಶಸ್ಸೇ ಹೆಚ್ಚಿನದು ಎಂದು ತಿಳಿದುಕೊಂಡು ಯುದ್ಧದಲ್ಲಿ ಶತ್ರುಗಳಿಂದ ಹತನಾಗುತ್ತೇನೆ ಅಥವಾ ಅವರಿಂದ ಹತನಾಗಿ ಮಲಗುತ್ತೇನೆ.
07002016a ಯುಧಿಷ್ಠಿರೋ ಧೃತಿಮತಿಧರ್ಮತತ್ತ್ವವಾನ್ ವೃಕೋದರೋ ಗಜಶತತುಲ್ಯವಿಕ್ರಮಃ।
07002016c ತಥಾರ್ಜುನಸ್ತ್ರಿದಶವರಾತ್ಮಜೋ ಯತೋ ನ ತದ್ಬಲಂ ಸುಜಯಮಥಾಮರೈರಪಿ।।
ಯುಧಿಷ್ಠಿರನಲ್ಲಿ ಧೃತಿ, ಮತಿ ಮತ್ತು ಧರ್ಮತತ್ವಗಳಿವೆ. ವೃಕೋದರನ ವಿಕ್ರಮವು ನೂರು ಆನೆಗಳಿಗೆ ಸಮನಾದುದು. ಹಾಗೆಯೇ ಅರ್ಜುನನು ಯುವಕ ಮತ್ತು ತ್ರಿದಶರಲ್ಲಿ ಶ್ರೇಷ್ಠನಾದವನ ಮಗ. ಅವರ ಸೇನೆಯನ್ನು ಅಮರರೂ ಕೂಡ ಸುಲಭವಾಗಿ ಗೆಲ್ಲಲಾರರು.
07002017a ಯಮೌ ರಣೇ ಯತ್ರ ಯಮೋಪಮೌ ಬಲೇ ಸಸಾತ್ಯಕಿರ್ಯತ್ರ ಚ ದೇವಕೀಸುತಃ।
07002017c ನ ತದ್ಬಲಂ ಕಾಪುರುಷೋಽಭ್ಯುಪೇಯಿವಾನ್ ನಿವರ್ತತೇ ಮೃತ್ಯುಮುಖಾದಿವಾಸಕೃತ್।।
ಯಾವ ಸೇನೆಯಲ್ಲಿ ಯಮರಂತಿರುವ ಯಮಳರಿದ್ದಾರೋ, ಸಾತ್ಯಕಿ, ದೇವಕೀ ಸುತರಿದ್ದಾರೋ ಅದು ಮೃತ್ಯುವಿನ ಬಾಯಿಯಿದ್ದಂತೆ. ಅದನ್ನು ಎದುರಿಸಿದ ಯಾವ ಕಾಪುರುಷನೂ ಜೀವಂತ ಹಿಂದಿರುಗಲಾರ.
07002018a ತಪೋಽಭ್ಯುದೀರ್ಣಂ ತಪಸೈವ ಗಮ್ಯತೇ ಬಲಂ ಬಲೇನಾಪಿ ತಥಾ ಮನಸ್ವಿಭಿಃ।
07002018c ಮನಶ್ಚ ಮೇ ಶತ್ರುನಿವಾರಣೇ ಧ್ರುವಂ ಸ್ವರಕ್ಷಣೇ ಚಾಚಲವದ್ವ್ಯವಸ್ಥಿತಂ।।
ಬುದ್ಧಿವಂತರು ತಪಸ್ಸನ್ನು ತಪಸ್ಸಿನಿಂದಲೇ ಮತ್ತು ಬಲವನ್ನು ಬಲದಿಂದಲೇ ಎದುರಿಸುತ್ತಾರೆ. ನಾನೂ ಕೂಡ ಶತ್ರುನಿವಾರಣೆಯ ಮತ್ತು ಸ್ವ-ರಕ್ಷಣೆಯ ಅಚಲವಾದ ನಿಶ್ಚಯವನ್ನು ಮಾಡಿದ್ದೇನೆ.
07002019a ಏವಂ ಚೈಷಾಂ ಬುಧ್ಯಮಾನಃ ಪ್ರಭಾವಂ ಗತ್ವೈವಾಹಂ ತಾಂ ಜಯಾಮ್ಯದ್ಯ ಸೂತ।
07002019c ಮಿತ್ರದ್ರೋಹೋ ಮರ್ಷಣೀಯೋ ನ ಮೇಽಯಂ ಭಗ್ನೇ ಸೈನ್ಯೇ ಯಃ ಸಹಾಯಃ ಸ ಮಿತ್ರಂ।।
ಸೂತ! ನಾನೀಗಲೇ ಯುದ್ಧಕ್ಕೆ ಹೋಗಿ ಶತ್ರುಗಳ ಪ್ರಭಾವವನ್ನು ಕುಗ್ಗಿಸುತ್ತೇನೆ. ಮಿತ್ರನಿಗೆ ದ್ರೋಹವನ್ನೆಸುವುದು ನನಗೆ ಸಹ್ಯವಾಗುವುದಿಲ್ಲ. ಸೈನ್ಯವು ಭಗ್ನವಾಗಿರುವಾಗ ಸಹಾಯ ಮಾಡುವವನೇ ಮಿತ್ರನು.
07002020a ಕರ್ತಾಸ್ಮ್ಯೇತತ್ಸತ್ಪುರುಷಾರ್ಯಕರ್ಮ ತ್ಯಕ್ತ್ವಾ ಪ್ರಾಣಾನನುಯಾಸ್ಯಾಮಿ ಭೀಷ್ಮಂ।
07002020c ಸರ್ವಾನ್ಸಂಖ್ಯೇ ಶತ್ರುಸಂಘಾನ್ ಹನಿಷ್ಯೇ ಹತಸ್ತೈರ್ವಾ ವೀರಲೋಕಂ ಗಮಿಷ್ಯೇ।।
ಸತ್ಪುರುಷರಿಗೆ ಯೋಗ್ಯವಾದ ಈ ಕಾರ್ಯವನ್ನು ನಾನು ಮಾಡುತ್ತೇನೆ. ಪ್ರಾಣಗಳನ್ನು ತ್ಯಜಿಸಿ ಭೀಷ್ಮನನ್ನು ಅನುಸರಿಸಿ ಹೋಗುತ್ತೇನೆ. ಯುದ್ಧದಲ್ಲಿ ಸರ್ವ ಶತ್ರುಸಂಘಗಳನ್ನು ಸಂಹರಿಸುತ್ತೇನೆ ಅಥವಾ ಹತನಾಗಿ ವೀರಲೋಕಕ್ಕೆ ಹೋಗುತ್ತೇನೆ.
07002021a ಸಂಪ್ರಾಕ್ರುಷ್ಟೇ ರುದಿತಸ್ತ್ರೀಕುಮಾರೇ ಪರಾಭೂತೇ ಪೌರುಷೇ ಧಾರ್ತರಾಷ್ಟ್ರೇ।
07002021c ಮಯಾ ಕೃತ್ಯಮಿತಿ ಜಾನಾಮಿ ಸೂತ ತಸ್ಮಾಚ್ಚತ್ರೂನ್ಧಾರ್ತರಾಷ್ಟ್ರಸ್ಯ ಜೇಷ್ಯೇ।।
ಧಾರ್ತರಾಷ್ಟ್ರನ ಪೌರುಷವು ಉಡುಗಿಹೋಗಿದೆ. ಹೆಂಗಸರು-ಮಕ್ಕಳು ಮೊರೆಯಿಟ್ಟು ರೋದಿಸುತ್ತಿದ್ದಾರೆ. ಸೂತ! ಇಂತಹ ಸಮಯದಲ್ಲಿ ನಾನು ಏನು ಮಾಡಬೇಕೆಂದು ತಿಳಿದುಕೊಂಡಿದ್ದೇನೆ. ಆದುದರಿಂದ ಧಾರ್ತರಾಷ್ಟ್ರನ ಶತ್ರುಗಳನ್ನು ಜಯಿಸುತ್ತೇನೆ.
07002022a ಕುರೂನ್ರಕ್ಷನ್ಪಾಂಡುಪುತ್ರಾಂ ಜಿಘಾಂಸಂಸ್ ತ್ಯಕ್ತ್ವಾ ಪ್ರಾಣಾನ್ಘೋರರೂಪೇ ರಣೇಽಸ್ಮಿನ್।
07002022c ಸರ್ವಾನ್ಸಂಖ್ಯೇ ಶತ್ರುಸಂಘಾನ್ನಿಹತ್ಯ ದಾಸ್ಯಾಮ್ಯಹಂ ಧಾರ್ತರಾಷ್ಟ್ರಾಯ ರಾಜ್ಯಂ।।
ಕುರುಗಳನ್ನು ರಕ್ಷಿಸಿ, ಪಾಂಡುಪುತ್ರರನ್ನು ಸಂಹರಿಸಿ, ಘೋರರೂಪದ ಈ ರಣದಲ್ಲಿ ಪ್ರಾಣಗಳನ್ನು ತ್ಯಜಿಸಿ, ಯುದ್ಧದಲ್ಲಿ ಎಲ್ಲ ಶತ್ರುಪಡೆಗಳನ್ನು ಸಂಹರಿಸಿ ನಾನು ರಾಜ್ಯವನ್ನು ಧಾರ್ತರಾಷ್ಟ್ರನಿಗೆ ಕೊಡುತ್ತೇನೆ.
07002023a ನಿಬಧ್ಯತಾಂ ಮೇ ಕವಚಂ ವಿಚಿತ್ರಂ ಹೈಮಂ ಶುಭ್ರಂ ಮಣಿರತ್ನಾವಭಾಸಿ।
07002023c ಶಿರಸ್ತ್ರಾಣಂ ಚಾರ್ಕಸಮಾನಭಾಸಂ ಧನುಃ ಶರಾಂಶ್ಚಾಪಿ ವಿಷಾಹಿಕಲ್ಪಾನ್।।
ಮಣಿರತ್ನಗಳಿಂದ ಹೊಳೆಯುವ, ಶುಭ್ರ ವಿಚಿತ್ರ ಬಂಗಾರದ ಕವಚವನ್ನು ನನಗೆ ತೊಡಿಸು. ಸೂರ್ಯನಂತೆ ಹೊಳೆಯುತ್ತಿರುವ ಶಿರಸ್ತ್ರಾಣವನ್ನೂ, ಸರ್ಪಗಳಂತಿರುವ ಧನುಸ್ಸು-ಬಾಣಗಳನ್ನೂ ಕೊಡು.
07002024a ಉಪಾಸಂಗಾನ್ಷೋಡಶ ಯೋಜಯಂತು ಧನೂಂಷಿ ದಿವ್ಯಾನಿ ತಥಾಹರಂತು।
07002024c ಅಸೀಂಶ್ಚ ಶಕ್ತೀಶ್ಚ ಗದಾಶ್ಚ ಗುರ್ವೀಃ ಶಂಖಂ ಚ ಜಾಂಬೂನದಚಿತ್ರಭಾಸಂ।।
ಹದಿನಾರು ಭತ್ತಳಿಕೆಗಳ ವ್ಯವಸ್ಥೆಯಾಗಲಿ. ದಿವ್ಯವಾದ ಧನುಸ್ಸುಗಳನ್ನೂ, ಖಡ್ಗಗಳನ್ನೂ, ಶಕ್ತಿಗಳನ್ನೂ, ಭಾರ ಗದೆಗಳನ್ನೂ, ಬಂಗಾರದ ಚಿತ್ರಗಳಿಂದ ಹೊಳೆಯುವ ಶಂಖವನ್ನೂ ತರಲಿ.
07002025a ಏತಾಂ ರೌಕ್ಮೀಂ ನಾಗಕಕ್ಷ್ಯಾಂ ಚ ಜೈತ್ರೀಂ ಜೈತ್ರಂ ಚ ಮೇ ಧ್ವಜಮಿಂದೀವರಾಭಂ।
07002025c ಶ್ಲಕ್ಷ್ಣೈರ್ವಸ್ತ್ರೈರ್ವಿಪ್ರಮೃಜ್ಯಾನಯಸ್ವ ಚಿತ್ರಾಂ ಮಾಲಾಂ ಚಾತ್ರ ಬದ್ಧ್ವಾ ಸಜಾಲಾಂ।।
ಆನೆಗೆ ಕಟ್ಟುವ ಸುವರ್ಣಮಯ ವಿಚಿತ್ರ ಸರಪಣಿಯನ್ನೂ, ಜಯವನ್ನು ಗಳಿಸುವ ಕಮಲದ ಚಿಹ್ನೆಯಿರುವ ಹೊಳೆಯುವ ಧ್ವಜವನ್ನೂ, ನವಿರಾದ ಮತ್ತು ಸುಂದರ ಬಟ್ಟೆಗಳಿಂದ ಒರೆಸಲ್ಪಟ್ಟು, ಮಂಗಳಕರ ಅರಳಿನಿಂದ ಕಟ್ಟಿದ ಚಿತ್ರ-ವಿಚಿತ್ರ ಪುಷ್ಪಮಾಲಿಕೆಯನ್ನೂ ತರಲಿ.
07002026a ಅಶ್ವಾನಗ್ರ್ಯಾನ್ಪಾಂಡುರಾಭ್ರಪ್ರಕಾಶಾನ್ ಪುಷ್ಟಾನ್ಸ್ನಾತಾನ್ಮಂತ್ರಪೂತಾಭಿರದ್ಭಿಃ।
07002026c ತಪ್ತೈರ್ಭಾಂಡೈಃ ಕಾಂಚನೈರಭ್ಯುಪೇತಾಂ ಶೀಘ್ರಾಂ ಶೀಘ್ರಂ ಸೂತಪುತ್ರಾನಯಸ್ವ।।
ಸೂತಪುತ್ರ! ಶ್ರೀಘ್ರಗಾಮಿಗಳಾದ, ಬಿಳಿಯ ಮೋಡದಂತೆ ಪ್ರಕಾಶಮಾನವಾದ, ಪುಷ್ಟವಾದ, ಮಂತ್ರಪೂತ ನೀರಿನಿಂದ ಸ್ನಾನಮಾಡಿರುವ, ಪುಟಕ್ಕೆ ಹಾಕಿದ ಚಿನ್ನದ ಆಭರಣಗಳಿಂದ ಸಮಲಂಕೃತವಾದ ಕುದುರೆಗಳನ್ನು ಶೀಘ್ರವಾಗಿ ಕರೆತಾ.
07002027a ರಥಂ ಚಾಗ್ರ್ಯಂ ಹೇಮಜಾಲಾವನದ್ಧಂ ರತ್ನೈಶ್ಚಿತ್ರಂ ಚಂದ್ರಸೂರ್ಯಪ್ರಕಾಶೈಃ।
07002027c ದ್ರವ್ಯೈರ್ಯುಕ್ತಂ ಸಂಪ್ರಹಾರೋಪಪನ್ನೈರ್ ವಾಹೈರ್ಯುಕ್ತಂ ತೂರ್ಣಮಾವರ್ತಯಸ್ವ।।
ಸುವರ್ಣಮಾಲೆಗಳಿಂದ ಅಲಂಕೃತವಾದ, ಸೂರ್ಯಚಂದ್ರರ ಪ್ರಕಾಶವುಳ್ಳ, ರತ್ನಗಳಿಂದ ಚಿತ್ರಿತವಾದ, ಯುದ್ದೋಪಯೋಗೀ ಸಾಮಗ್ರಿಗಳಿಂದ ಸಂಪನ್ನವಾದ, ಉಪಪನ್ನ ಕುದುರೆಗಳನ್ನು ಕಟ್ಟಲ್ಪಟ್ಟ ರಥವನ್ನು ಶೀಘ್ರವಾಗಿ ಸಿದ್ಧಗೊಳಿಸು.
07002028a ಚಿತ್ರಾಣಿ ಚಾಪಾನಿ ಚ ವೇಗವಂತಿ ಜ್ಯಾಶ್ಚೋತ್ತಮಾಃ ಸಂಹನನೋಪಪನ್ನಾಃ।
07002028c ತೂಣಾಂಶ್ಚ ಪೂರ್ಣಾನ್ಮಹತಃ ಶರಾಣಾಂ ಆಸಜ್ಯ ಗಾತ್ರಾವರಣಾನಿ ಚೈವ।।
ವೇಗಯುಕ್ತವಾದ ಮತ್ತು ಚಿತ್ರಿತವಾದ ಧನುಸ್ಸುಗಳನ್ನೂ, ಗಟ್ಟಿಯಾದ ಶಿಂಜಿನಿಗಳನ್ನೂ, ಕವಚಗಳನ್ನೂ, ಬಾಣಗಳಿಂದ ತುಂಬಿದ ಭತ್ತಳಿಕೆಗಳನ್ನೂ, ಶರೀರದ ಆವರಣಗಳನ್ನೂ ಕೂಡಲೇ ಸಜ್ಜುಗೊಳಿಸು.
07002029a ಪ್ರಾಯಾತ್ರಿಕಂ ಚಾನಯತಾಶು ಸರ್ವಂ ಕನ್ಯಾಃ ಪೂರ್ಣಂ ವೀರಕಾಂಸ್ಯಂ ಚ ಹೈಮಂ।
07002029c ಆನೀಯ ಮಾಲಾಮವಬಧ್ಯ ಚಾಂಗೇ ಪ್ರವಾದಯಂತ್ವಾಶು ಜಯಾಯ ಭೇರೀಃ।।
ರಣಯಾತ್ರೆಗೆ ಅವಶ್ಯವಾದ ಎಲ್ಲ ಸಾಮಗ್ರಿಗಳನ್ನೂ ತನ್ನಿ. ಮೊಸರಿನಿಂದ ತುಂಬಿದ ಕಂಚಿನ ಮತ್ತು ಚಿನ್ನದ ಪಾತ್ರೆಗಳನ್ನು ಹಿಡಿದು ಕನ್ಯೆಯರು ಬಂದು ವಿಜಯ ಮಾಲೆಯನ್ನು ತೊಡಿಸಲಿ. ವಿಜಯಕ್ಕಾಗಿ ಭೇರಿಗಳನ್ನು ಮೊಳಗಿಸಿ.
07002030a ಪ್ರಯಾಹಿ ಸೂತಾಶು ಯತಃ ಕಿರೀಟೀ ವೃಕೋದರೋ ಧರ್ಮಸುತೋ ಯಮೌ ಚ।
07002030c ತಾನ್ವಾ ಹನಿಷ್ಯಾಮಿ ಸಮೇತ್ಯ ಸಂಖ್ಯೇ ಭೀಷ್ಮಾಯ ವೈಷ್ಯಾಮಿ ಹತೋ ದ್ವಿಷದ್ಭಿಃ।।
ಸೂತ! ಅನಂತರ ಎಲ್ಲಿ ಕಿರೀಟೀ, ವೃಕೋದರ, ಧರ್ಮಸುತ ಮತ್ತು ಯಮಳರು ಇರುವರೋ ಅಲ್ಲಿಗೆ ಕರೆದುಕೊಂಡು ಹೋಗು. ಅವರನ್ನು ಒಟ್ಟಿಗೇ ಯುದ್ಧದಲ್ಲಿ ಸಂಹರಿಸುತ್ತೇನೆ ಅಥವಾ ಶತ್ರುಗಳಿಂದ ಹತನಾಗಿ ಭೀಷ್ಮನನ್ನು ಅನುಸರಿಸಿ ಹೋಗುತ್ತೇನೆ.
07002031a ಯಸ್ಮಿನ್ರಾಜಾ ಸತ್ಯಧೃತಿರ್ಯುಧಿಷ್ಠಿರಃ ಸಮಾಸ್ಥಿತೋ ಭೀಮಸೇನಾರ್ಜುನೌ ಚ।
07002031c ವಾಸುದೇವಃ ಸಾತ್ಯಕಿಃ ಸೃಂಜಯಾಶ್ಚ ಮನ್ಯೇ ಬಲಂ ತದಜಯ್ಯಂ ಮಹೀಪೈಃ।।
ಯಾರ ರಾಜನು ಸತ್ಯಧೃತಿ ಯುಧಿಷ್ಠಿರನೋ, ಯಾರಲ್ಲಿ ಭೀಮಸೇನ-ಅರ್ಜುನರು, ವಾಸುದೇವ-ಸಾತ್ಯಕಿಯರು ಮತ್ತು ಸೃಂಜಯರಿದ್ದಾರೋ ಆ ಸೇನೆಯು ಮಹೀಪರಿಂದ ಅಜಯ್ಯವೆಂದು ಅನ್ನಿಸುತ್ತದೆ.
07002032a ತಂ ಚೇನ್ಮೃತ್ಯುಃ ಸರ್ವಹರೋಽಭಿರಕ್ಷೇತ್ ಸದಾಪ್ರಮತ್ತಃ ಸಮರೇ ಕಿರೀಟಿನಂ।
07002032c ತಥಾಪಿ ಹಂತಾಸ್ಮಿ ಸಮೇತ್ಯ ಸಂಖ್ಯೇ ಯಾಸ್ಯಾಮಿ ವಾ ಭೀಷ್ಮಪಥಾ ಯಮಾಯ।।
ಎಲ್ಲವನ್ನೂ ನಾಶಪಡಿಸುವ ಮೃತ್ಯುವೇ ಒಂದುವೇಳೆ ಅವನನ್ನು ರಕ್ಷಿಸಿದರೂ ಸದಾ ಅಪ್ರಮತ್ತನಾಗಿರುವ ಕಿರೀಟಿಯನ್ನು ಸಮರದಲ್ಲಿ ಸೇನೆಗಳೊಂದಿಗೆ ಸಂಹರಿಸುತ್ತೇನೆ ಅಥವಾ ಭೀಷ್ಮನ ದಾರಿಯಲ್ಲಿ ಯಮನಲ್ಲಿಗೆ ಹೋಗುತ್ತೇನೆ.
07002033a ನ ತ್ವೇವಾಹಂ ನ ಗಮಿಷ್ಯಾಮಿ ತೇಷಾಂ ಮಧ್ಯೇ ಶೂರಾಣಾಂ ತತ್ತಥಾಹಂ ಬ್ರವೀಮಿ।
07002033c ಮಿತ್ರದ್ರುಹೋ ದುರ್ಬಲಭಕ್ತಯೋ ಯೇ ಪಾಪಾತ್ಮಾನೋ ನ ಮಮೈತೇ ಸಹಾಯಾಃ।।
ನಾನು ಈಗ ಹೇಳುತ್ತಿದ್ದೇನೆ. ಆ ಶೂರರ ಮಧ್ಯೆ ನುಗ್ಗಿ ಹೋಗುತ್ತೇನೆ. ಮಿತ್ರದ್ರೋಹಿಗಳು, ದುರ್ಬಲ ಭಕ್ತರು, ಪಾಪಾತ್ಮರು ನನ್ನ ಸಹಾಯಕ್ಕೆ ಬರುವವರಲ್ಲ.”
07002034 ಸಂಜಯ ಉವಾಚ।
07002034a ಸ ಸಿದ್ಧಿಮಂತಂ ರಥಮುತ್ತಮಂ ದೃಢಂ ಸಕೂಬರಂ ಹೇಮಪರಿಷ್ಕೃತಂ ಶುಭಂ।
07002034c ಪತಾಕಿನಂ ವಾತಜವೈರ್ಹಯೋತ್ತಮೈರ್ ಯುಕ್ತಂ ಸಮಾಸ್ಥಾಯ ಯಯೌ ಜಯಾಯ।।
ಸಂಜಯನು ಹೇಳಿದನು: “ಅವನು ಉತ್ತಮ ದೃಢ ನೊಗವನ್ನುಳ್ಳ, ಬಂಗಾರದಿಂದ ಸಮಲಂಕೃತವಾದ ಶುಭವಾದ ಪಾತಕಗಳನ್ನುಳ್ಳ, ಗಾಳಿಯ ವೇಗವುಳ್ಳ ಉತ್ತಮ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ಜಯಕ್ಕಾಗಿ ಹೊರಟನು.
07002035a ಸಂಪೂಜ್ಯಮಾನಃ ಕುರುಭಿರ್ಮಹಾತ್ಮಾ ರಥರ್ಷಭಃ ಪಾಂಡುರವಾಜಿಯಾತಾ।
07002035c ಯಯೌ ತದಾಯೋಧನಮುಗ್ರಧನ್ವಾ ಯತ್ರಾವಸಾನಂ ಭರತರ್ಷಭಸ್ಯ।।
ಕುರುಗಳಿಂದ ಗೌರವಿಸಿಕೊಳ್ಳುತ್ತಾ ಆ ಮಹಾತ್ಮಾ ರಥರ್ಷಭ ಉಗ್ರಧನ್ವಿ ಯೋಧನು ಬಿಳಿಯ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಭರತರ್ಷಭ ಭೀಷ್ಮನು ಅವಸಾನಹೊಂದಿದಲ್ಲಿಗೆ ಹೋದನು.
07002036a ವರೂಥಿನಾ ಮಹತಾ ಸಧ್ವಜೇನ ಸುವರ್ಣಮುಕ್ತಾಮಣಿವಜ್ರಶಾಲಿನಾ।
07002036c ಸದಶ್ವಯುಕ್ತೇನ ರಥೇನ ಕರ್ಣೋ ಮೇಘಸ್ವನೇನಾರ್ಕ ಇವಾಮಿತೌಜಾಃ।।
ಮಹಾ ವರೂಥವನ್ನೇರಿ, ಧ್ವಜದಿಂದ ಕೂಡಿದ, ಸುವರ್ಣ-ಮುತ್ತು-ಮಣಿ-ವಜ್ರಗಳಿಂದ ಅಲಂಕೃತವಾದ, ಮೇಘದ ಧ್ವನಿಯುಳ್ಳ, ಸೂರ್ಯನ ತೇಜಸ್ಸುಳ್ಳ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕರ್ಣನು ಹೊರಟನು.
07002037a ಹುತಾಶನಾಭಃ ಸ ಹುತಾಶನಪ್ರಭೇ ಶುಭಃ ಶುಭೇ ವೈ ಸ್ವರಥೇ ಧನುರ್ಧರಃ।
07002037c ಸ್ಥಿತೋ ರರಾಜಾಧಿರಥಿರ್ಮಹಾರಥಃ ಸ್ವಯಂ ವಿಮಾನೇ ಸುರರಾಡಿವ ಸ್ಥಿತಃ।।
ಹುತಾಶನನಂತೆ ಹೊಳೆಯುತ್ತಿದ್ದ, ಹುತಾಶನನ ಪ್ರಭೆಯಿದ್ದ, ಶುಭನಾಗಿದ್ದ ಆ ಧನುರ್ಧರ ಅಧಿರಥಿ ಮಹಾರಥಿಯು ಶುಭ ರಥದಲ್ಲಿ, ಸ್ವಯಂ ವಿಮಾನದಲ್ಲಿ ನಿಂತ ಸುರರಾಜನಂತೆ ನಿಂತು ರಾರಾಜಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಕರ್ಣನಿರ್ಯಾಣೇ ದ್ವಿತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಕರ್ಣನಿರ್ಯಾಣ ಎನ್ನುವ ಎರಡನೇ ಅಧ್ಯಾಯವು.