ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 117
ಸಾರ
ಭೀಷ್ಮ-ಕರ್ಣರ ಸಂವಾದ (1-34).
06117001 ಸಂಜಯ ಉವಾಚ।
06117001a ತತಸ್ತೇ ಪಾರ್ಥಿವಾಃ ಸರ್ವೇ ಜಗ್ಮುಃ ಸ್ವಾನಾಲಯಾನ್ಪುನಃ।
06117001c ತೂಷ್ಣೀಂಭೂತೇ ಮಹಾರಾಜ ಭೀಷ್ಮೇ ಶಂತನುನಂದನೇ।।
ಸಂಜಯನು ಹೇಳಿದನು: “ಮಹಾರಾಜ! ಶಂತನುನಂದನ ಭೀಷ್ಮನು ಸುಮ್ಮನಾಗಲು ಅಲ್ಲಿದ್ದ ಪಾರ್ಥಿವರೆಲ್ಲರೂ ತಮ್ಮ ತಮ್ಮ ಡೇರೆಗಳಿಗೆ ಪುನಃ ತೆರಳಿದರು.
06117002a ಶ್ರುತ್ವಾ ತು ನಿಹತಂ ಭೀಷ್ಮಂ ರಾಧೇಯಃ ಪುರುಷರ್ಷಭಃ।
06117002c ಈಷದಾಗತಸಂತ್ರಾಸಃ ತ್ವರಯೋಪಜಗಾಮ ಹ।।
ಭೀಷ್ಮನು ಹತನಾದನೆಂದು ಕೇಳಿದ ಪುರುಷರ್ಷಭ ರಾಧೇಯನು ಸಂತ್ರಾತನಾಗಿ ತ್ವರೆಮಾಡಿ ಅವನಿರುವಲ್ಲಿಗೆ ಆಗಮಿಸಿದನು.
06117003a ಸ ದದರ್ಶ ಮಹಾತ್ಮಾನಂ ಶರತಲ್ಪಗತಂ ತದಾ।
06117003c ಜನ್ಮಶಯ್ಯಾಗತಂ ದೇವಂ ಕಾರ್ತ್ತಿಕೇಯಮಿವ ಪ್ರಭುಂ।।
ಅಲ್ಲಿ ಅವನು ದೇವ ಕಾರ್ತ್ತಿಕೇಯನು ಹುಟ್ಟಿದಾಗ ದರ್ಬೆಯ ಹಾಸಿನ ಮೇಲೆ ಮಲಗಿದ್ದಂತೆ ಶರ ಶಯ್ಯೆಯ ಮೇಲೆ ಮಲಗಿದ್ದ ಆ ಪ್ರಭು ಮಹಾತ್ಮನನ್ನು ನೋಡಿದನು.
06117004a ನಿಮೀಲಿತಾಕ್ಷಂ ತಂ ವೀರಂ ಸಾಶ್ರುಕಂಠಸ್ತದಾ ವೃಷಃ।
06117004c ಅಭ್ಯೇತ್ಯ ಪಾದಯೋಸ್ತಸ್ಯ ನಿಪಪಾತ ಮಹಾದ್ಯುತಿಃ।।
ಅಶ್ರುಕಂಠನಾಗಿದ್ದ ಮಹಾದ್ಯುತಿ ವೃಷಸೇನನು ಕಣ್ಣು ಮುಚ್ಚಿ ಮಲಗಿದ್ದ ಆ ವೀರನ ಪಾದಗಳ ಮೇಲೆ ಬಿದ್ದನು.
06117005a ರಾಧೇಯೋಽಹಂ ಕುರುಶ್ರೇಷ್ಠ ನಿತ್ಯಂ ಚಾಷ್ಕಿಗತಸ್ತವ।
06117005c ದ್ವೇಷ್ಯೋಽತ್ಯಂತಮನಾಗಾಃ ಸನ್ನಿತಿ ಚೈನಮುವಾಚ ಹ।।
“ಕುರುಶ್ರೇಷ್ಠ! ನಾನು ರಾಧೇಯ! ನೋಡಿದಾಗಲೆಲ್ಲಾ ನೀನು ನನ್ನನ್ನು ಅತ್ಯಂತ ಕೀಳುಮಾಡಿ ದ್ವೇಷಿಸುತ್ತಿದ್ದವನು.” ಎಂದು ಅವನಲ್ಲಿ ಮಾತನಾಡಿದನು.
06117006a ತಚ್ಚ್ರುತ್ವಾ ಕುರುವೃದ್ಧಃ ಸ ಬಲಾತ್ಸಂವೃತ್ತಲೋಚನಃ।
06117006c ಶನೈರುದ್ವೀಕ್ಷ್ಯ ಸಸ್ನೇಹಮಿದಂ ವಚನಮಬ್ರವೀತ್।।
ಅದನ್ನು ಕೇಳಿ ಕುರುವೃದ್ಧನು ಪ್ರಯತ್ನಪಟ್ಟು ಕಣ್ಣುಗಳನ್ನು ತೆರೆದು, ಮೆಲ್ಲನೇ ಅವನನ್ನು ನೋಡಿ ಸ್ನೇಹಭಾವದಿಂದ ಈ ಮಾತನ್ನಾಡಿದನು.
06117007a ರಹಿತಂ ಧಿಷ್ಣ್ಯಮಾಲೋಕ್ಯ ಸಮುತ್ಸಾರ್ಯ ಚ ರಕ್ಷಿಣಃ।
06117007c ಪಿತೇವ ಪುತ್ರಂ ಗಾಂಗೇಯಃ ಪರಿಷ್ವಜ್ಯೈಕಬಾಹುನಾ।।
ತನ್ನ ರಕ್ಷಕರನ್ನು ಕಳುಹಿಸಿ ಏಕಾಂತವಾಗಿದೆಯೆಂದು ಖಚಿತಪಡಿಸಿಕೊಂಡು, ತಂದೆಯು ಮಗನನ್ನು ಹೇಗೋ ಹಾಗೆ ಗಾಂಗೇಯನು ಒಂದೇ ತೋಳಿನಿಂದ ಅವನನ್ನು ಆಲಂಗಿಸಿದನು.
06117008a ಏಹ್ಯೇಹಿ ಮೇ ವಿಪ್ರತೀಪ ಸ್ಪರ್ಧಸೇ ತ್ವಂ ಮಯಾ ಸಹ।
06117008c ಯದಿ ಮಾಂ ನಾಭಿಗಚ್ಛೇಥಾ ನ ತೇ ಶ್ರೇಯೋ ಭವೇದ್ಧ್ರುವಂ।।
“ಬಾ! ಬಾ! ನೀನು ಯಾವಾಗಲೂ ನನ್ನೊಡನೆ ಸ್ಪರ್ಧಿಸುತ್ತಿದ್ದೆ. ಇಲ್ಲಿಗೆ ನೀನು ಬಾರದೇ ಇದ್ದಿದ್ದರೆ ನಿನಗೆ ಖಂಡಿತವಾಗಿಯೂ ಶ್ರೇಯಸ್ಸಾಗುತ್ತಿರಲಿಲ್ಲ.
06117009a ಕೌಂತೇಯಸ್ತ್ವಂ ನ ರಾಧೇಯೋ ವಿದಿತೋ ನಾರದಾನ್ಮಮ।
06117009c ಕೃಷ್ಣದ್ವೈಪಾಯನಾಚ್ಚೈವ ಕೇಶವಾಚ್ಚ ನ ಸಂಶಯಃ।।
ನೀನು ಕೌಂತೇಯ. ರಾಧೇಯನಲ್ಲವೆಂದು ನನಗೆ ನಾರದನಿಂದ ತಿಳಿದಿತ್ತು. ಕೃಷ್ಣದ್ವೈಪಾಯನ ಮತ್ತು ಕೇಶವನಿಗೂ ಇದು ತಿಳಿದಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.
06117010a ನ ಚ ದ್ವೇಷೋಽಸ್ತಿ ಮೇ ತಾತ ತ್ವಯಿ ಸತ್ಯಂ ಬ್ರವೀಮಿ ತೇ।
06117010c ತೇಜೋವಧನಿಮಿತ್ತಂ ತು ಪರುಷಾಣ್ಯಹಮುಕ್ತವಾನ್।।
ಮಗೂ! ನಿನ್ನ ಮೇಲೆ ನನಗೆ ದ್ವೇಷವೇನೂ ಇಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಿನ್ನ ತೇಜೋವಧೆಗೋಸ್ಕರ ಕಠೋರ ಮಾತುಗಳನ್ನಾಡುತ್ತಿದ್ದೆ.
06117011a ಅಕಸ್ಮಾತ್ಪಾಂಡವಾನ್ ಹಿ ತ್ವಂ ದ್ವಿಷಸೀತಿ ಮತಿರ್ಮಮ।
06117011c ಯೇನಾಸಿ ಬಹುಶೋ ರೂಕ್ಷಂ ಚೋದಿತಃ ಸೂರ್ಯನಂದನ।।
ಏಕೆಂದರೆ ನೀನು ಅಕಸ್ಮಾತ್ತಾಗಿ (ವಿನಾಕಾರಣ) ಪಾಂಡವರನ್ನು ದ್ವೇಷಿಸುತ್ತಿರುವೆ ಎಂದು ನನ್ನ ಅಭಿಪ್ರಾಯವಾಗಿತ್ತು. ಸೂರ್ಯನಂದನ! ಇದರಿಂದಾಗಿ ನಾನು ನಿನ್ನ ಮೇಲೆ ಬಹಳಷ್ಟು ಬಾರಿ ಕಠೋರನಾಗಿದ್ದೆ.
06117012a ಜಾನಾಮಿ ಸಮರೇ ವೀರ್ಯಂ ಶತ್ರುಭಿರ್ದುಃಸಹಂ ತವ।
06117012c ಬ್ರಹ್ಮಣ್ಯತಾಂ ಚ ಶೌರ್ಯಂ ಚ ದಾನೇ ಚ ಪರಮಾಂ ಗತಿಂ।।
ಸಮರದಲ್ಲಿ ನಿನ್ನ ವೀರ್ಯವನ್ನು, ಶತ್ರುಗಳಿಗೆ ನೀನು ದುಃಸಹನೆನ್ನುವುದನ್ನು, ಬ್ರಹ್ಮಣ್ಯತ್ವವನ್ನೂ, ಶೌರ್ಯವನ್ನೂ, ದಾನವನ್ನೂ, ಪರಮ ಗತಿಯನ್ನೂ ನಾನು ತಿಳಿದುಕೊಂಡಿದ್ದೇನೆ.
06117013a ನ ತ್ವಯಾ ಸದೃಶಃ ಕಶ್ಚಿತ್ಪುರುಷೇಷ್ವಮರೋಪಮ।
06117013c ಕುಲಭೇದಂ ಚ ಮತ್ವಾಹಂ ಸದಾ ಪರುಷಮುಕ್ತವಾನ್।।
ಅಮರೋಪಮನಾಗಿರುವ ನಿನ್ನಂತಹ ಪುರುಷರು ಯಾರೂ ಇಲ್ಲ. ಕುಲಭೇದವನ್ನು ನೀನು ತರುತ್ತಿರುವೆಯೆಂದು ತಿಳಿದು ಸದಾ ಕಠೋರವಾಗಿ ಮಾತನಾಡುತ್ತಿದ್ದೆ.
06117014a ಇಷ್ವಸ್ತ್ರೇ ಭಾರಸಂಧಾನೇ ಲಾಘವೇಽಸ್ತ್ರಬಲೇ ತಥಾ।
06117014c ಸದೃಶಃ ಫಲ್ಗುನೇನಾಸಿ ಕೃಷ್ಣೇನ ಚ ಮಹಾತ್ಮನಾ।।
ಧನುರ್ವಿದ್ಯೆಯಲ್ಲಿ, ಬಿಲ್ಲನ್ನು ಸಂಧಾನಮಾಡುವುದರಲ್ಲಿ, ಲಾಘವದಲ್ಲಿ ಮತ್ತು ಅಸ್ತ್ರಬಲದಲ್ಲಿ ನೀನು ಫಲ್ಗುನ ಮತ್ತು ಮಹಾತ್ಮ ಕೃಷ್ಣನ ಸದೃಶನಾಗಿದ್ದೀಯೆ.
06117015a ಕರ್ಣ ರಾಜಪುರಂ ಗತ್ವಾ ತ್ವಯೈಕೇನ ಧನುಷ್ಮತಾ।
06117015c ತಸ್ಯಾರ್ಥೇ ಕುರುರಾಜಸ್ಯ ರಾಜಾನೋ ಮೃದಿತಾ ಯುಧಿ।।
ಕರ್ಣ! ರಾಜಪುರಕ್ಕೆ ಹೋಗಿ ನೀನು ಧನುಷ್ಮತನು ಒಬ್ಬನೇ ಕುರುರಾಜನಿಗೋಸ್ಕರ ರಾಜರನ್ನು ಅಪಮಾನಗೊಳಿಸಿದೆ.
06117016a ತಥಾ ಚ ಬಲವಾನ್ರಾಜಾ ಜರಾಸಂಧೋ ದುರಾಸದಃ।
06117016c ಸಮರೇ ಸಮರಶ್ಲಾಘೀ ತ್ವಯಾ ನ ಸದೃಶೋಽಭವತ್।।
ಹಾಗೆಯೇ ದುರಾಸದ ಬಲವಾನ್ ಜರಾಸಂಧನು ಸಮರದಲ್ಲಿ ಸಮರಶ್ಲಾಘಿಯಾದ ನಿನ್ನ ಸರಿಸಮನಾಗಿರಲಿಲ್ಲ.
06117017a ಬ್ರಹ್ಮಣ್ಯಃ ಸತ್ಯವಾದೀ ಚ ತೇಜಸಾರ್ಕ ಇವಾಪರಃ।
06117017c ದೇವಗರ್ಭೋಽಜಿತಃ ಸಂಖ್ಯೇ ಮನುಷ್ಯೈರಧಿಕೋ ಭುವಿ।।
ಬ್ರಹ್ಮಣ್ಯನಾಗಿರುವೆ. ಸತ್ಯವಾದಿಯಾಗಿರುವೆ. ತೇಜಸ್ಸಿನಲ್ಲಿ ಸೂರ್ಯನಂತಿರುವೆ. ದೇವಗರ್ಭನಾಗಿರುವೆ. ಸಮರಲ್ಲಿ ಅಜಿತನಾಗಿರುವೆ. ಭೂಮಿಯಲ್ಲಿ ಮನುಷ್ಯರಿಗಿಂತ ಅಧಿಕನಾಗಿರುವೆ.
06117018a ವ್ಯಪನೀತೋಽದ್ಯ ಮನ್ಯುರ್ಮೇ ಯಸ್ತ್ವಾಂ ಪ್ರತಿ ಪುರಾ ಕೃತಃ।
06117018c ದೈವಂ ಪುರುಷಕಾರೇಣ ನ ಶಕ್ಯಮತಿವರ್ತಿತುಂ।।
ಹಿಂದೆ ನಿನ್ನ ಮೇಲೆ ಇರಿಸಿಕೊಂಡಿದ್ದ ಕೋಪವನ್ನು ಇಂದು ನಾನು ತ್ಯಜಿಸುತ್ತಿದ್ದೇನೆ. ಪುರುಷ ಕೃತ್ಯದಿಂದ ದೈವವನ್ನು ಬದಲಾಯಿಸಲು ಶಕ್ಯವಿಲ್ಲ.
06117019a ಸೋದರ್ಯಾಃ ಪಾಂಡವಾ ವೀರಾ ಭ್ರಾತರಸ್ತೇಽರಿಸೂದನ।
06117019c ಸಂಗಚ್ಛ ತೈರ್ಮಹಾಬಾಹೋ ಮಮ ಚೇದಿಚ್ಛಸಿ ಪ್ರಿಯಂ।।
ಅರಿಸೂದನ! ವೀರ ಪಾಂಡವರು ನಿನ್ನ ಸೋದರರು. ನೀನು ಅವರ ಅಣ್ಣ. ಮಹಾಬಾಹೋ! ನನಗೆ ಪ್ರಿಯವಾದುದನ್ನು ಮಾಡಬೇಕೆಂದು ನೀನು ಬಯಸುವೆಯಾದರೆ ಅವರೊಂದಿಗೆ ಸೇರು.
06117020a ಮಯಾ ಭವತು ನಿರ್ವೃತ್ತಂ ವೈರಮಾದಿತ್ಯನಂದನ।
06117020c ಪೃಥಿವ್ಯಾಂ ಸರ್ವರಾಜಾನೋ ಭವಂತ್ವದ್ಯ ನಿರಾಮಯಾಃ।।
ಆದಿತ್ಯನಂದನ! ನನ್ನ ಪತನದೊಂದಿಗೆ ವೈರತ್ವವು ಕೊನೆಗೊಳ್ಳಲಿ. ಪೃಥ್ವಿಯ ಸರ್ವ ರಾಜರೂ ಇಂದು ನಿರಾಮಯರಾಗಲಿ.”
06117021 ಕರ್ಣ ಉವಾಚ।
06117021a ಜಾನಾಮ್ಯಹಂ ಮಹಾಪ್ರಾಜ್ಞ ಸರ್ವಮೇತನ್ನ ಸಂಶಯಃ।
06117021c ಯಥಾ ವದಸಿ ದುರ್ಧರ್ಷ ಕೌಂತೇಯೋಽಹಂ ನ ಸೂತಜಃ।।
ಕರ್ಣನು ಹೇಳಿದನು: “ಮಹಾಪ್ರಾಜ್ಞ! ಈ ಎಲ್ಲವೂ ನನಗೆ ತಿಳಿದಿದೆ. ದುರ್ಧರ್ಷ! ನೀನು ಹೇಳಿದುದರಲ್ಲಿ ಸಂಶಯವಿಲ್ಲ. ನಾನು ಕೌಂತೇಯ. ಸೂತಜನಲ್ಲ.
06117022a ಅವಕೀರ್ಣಸ್ತ್ವಹಂ ಕುಂತ್ಯಾ ಸೂತೇನ ಚ ವಿವರ್ಧಿತಃ।
06117022c ಭುಕ್ತ್ವಾ ದುರ್ಯೋಧನೈಶ್ವರ್ಯಂ ನ ಮಿಥ್ಯಾ ಕರ್ತುಮುತ್ಸಹೇ।।
ಆದರೆ ನಾನು ಕುಂತಿಯಿಂದ ತಿರಸ್ಕರಿಸಲ್ಪಟ್ಟು ಸೂತನಿಂದ ವರ್ಧಿತನಾದೆ. ದುರ್ಯೋಧನನ ಐಶ್ವರ್ಯವನ್ನು ಭೋಗಿಸಿ ಅದನ್ನು ಸುಳ್ಳಾಗಿಸಲು ಮನಸ್ಸಿಲ್ಲ.
06117023a ವಸು ಚೈವ ಶರೀರಂ ಚ ಯದುದಾರಂ ತಥಾ ಯಶಃ।
06117023c ಸರ್ವಂ ದುರ್ಯೋಧನಸ್ಯಾರ್ಥೇ ತ್ಯಕ್ತಂ ಮೇ ಭೂರಿದಕ್ಷಿಣ।
06117023e ಕೋಪಿತಾಃ ಪಾಂಡವಾ ನಿತ್ಯಂ ಮಯಾಶ್ರಿತ್ಯ ಸುಯೋಧನಂ।।
ಭೂರಿದಕ್ಷಿಣ! ಸಂಪತ್ತು, ಶರೀರ, ಮಕ್ಕಳು, ಪತ್ನಿಯರು, ಯಶಸ್ಸು ಎಲ್ಲವನ್ನೂ ದುರ್ಯೋಧನನಿಗಾಗಿ ತ್ಯಜಿಸಿದ್ದೇನೆ. ಸುಯೋಧನನನ್ನು ಆಶ್ರಯಿಸಿ ನಾನು ನಿತ್ಯವೂ ಪಾಂಡವರನ್ನು ಕುಪಿತರನ್ನಾಗಿ ಮಾಡಿದ್ದೇನೆ.
06117024a ಅವಶ್ಯಭಾವೀ ವೈ ಯೋಽರ್ಥೋ ನ ಸ ಶಕ್ಯೋ ನಿವರ್ತಿತುಂ।
06117024c ದೈವಂ ಪುರುಷಕಾರೇಣ ಕೋ ನಿವರ್ತಿತುಮುತ್ಸಹೇತ್।।
ಆಗುವಂಥಹುದು ಬಹುಷಃ ಅವಶ್ಯಕವಾಗಿದೆ ಮತ್ತು ತಡೆಯಲು ಸಾಧ್ಯವಿಲ್ಲ. ಪುರುಷ ಪ್ರಯತ್ನದಿಂದ ದೈವವನ್ನು ಬದಲಾಯಿಸಲು ಯಾರಿಗೆ ಉತ್ಸಾಹವಿದೆ?
06117025a ಪೃಥಿವೀಕ್ಷಯಶಂಸೀನಿ ನಿಮಿತ್ತಾನಿ ಪಿತಾಮಹ।
06117025c ಭವದ್ಭಿರುಪಲಬ್ಧಾನಿ ಕಥಿತಾನಿ ಚ ಸಂಸದಿ।।
ಪಿತಾಮಹ! ನಿಮಿತ್ತಗಳು ಪೃಥ್ವಿಯ ಕ್ಷಯವನ್ನು ಸೂಚಿಸುತ್ತಿವೆ. ಸಂಸದಿಯಲ್ಲಿ ನೀನು ಇವುಗಳ ಕುರಿತು ತೋರಿಸಿದ್ದೀಯೆ, ಮಾತನಾಡಿದ್ದೀಯೆ.
06117026a ಪಾಂಡವಾ ವಾಸುದೇವಶ್ಚ ವಿದಿತಾ ಮಮ ಸರ್ವಶಃ।
06117026c ಅಜೇಯಾಃ ಪುರುಷೈರನ್ಯೈರಿತಿ ತಾಂಶ್ಚೋತ್ಸಹಾಮಹೇ।।
ಪಾಂಡವರು ಮತ್ತು ವಾಸುದೇವ ಇವರು ಅಜೇಯ ಪುರುಷರೆಂದು ನನಗೆ ಎಲ್ಲವೂ ತಿಳಿದಿದೆ. ಅವರೊಂದಿಗೆ ಯುದ್ಧಮಾಡಲು ಬಯಸುತ್ತೇನೆ.
06117027a ಅನುಜಾನೀಷ್ವ ಮಾಂ ತಾತ ಯುದ್ಧೇ ಪ್ರೀತಮನಾಃ ಸದಾ।
06117027c ಅನುಜ್ಞಾತಸ್ತ್ವಯಾ ವೀರ ಯುಧ್ಯೇಯಮಿತಿ ಮೇ ಮತಿಃ।।
ತಾತ! ಪ್ರೀತಿಮನಸ್ಕನಾಗಿ ನನಗೆ ಸದಾ ಯುದ್ಧಮಾಡಲು ಅನುಮತಿಯನ್ನು ನೀಡು. ವೀರ! ನಿನ್ನ ಅನುಮತಿಯಂತೆ ನಾನು ಯುದ್ಧಮಾಡಬಲ್ಲೆ ಎಂದು ನನ್ನ ಅಭಿಪ್ರಾಯ.
06117028a ದುರುಕ್ತಂ ವಿಪ್ರತೀಪಂ ವಾ ಸಂರಂಭಾಚ್ಚಾಪಲಾತ್ತಥಾ।
06117028c ಯನ್ಮಯಾಪಕೃತಂ ಕಿಂ ಚಿತ್ತದನುಕ್ಷಂತುಮರ್ಹಸಿ।।
ನಾನು ಏನೆಲ್ಲ ಕೆಟ್ಟ ಮಾತುಗಳನ್ನು ಆಡಿದ್ದೆನೋ, ಅಪಮಾನಗೊಳಿಸಿದ್ದೆನೋ, ಚಪಲತೆಯಿಂದ ಜಗಳವಾಡಿದ್ದೆನೋ ನನ್ನಿಂದಾದ ಅವೆಲ್ಲವನ್ನು ನೀನು ಕ್ಷಮಿಸಬೇಕು.”
06117029 ಭೀಷ್ಮ ಉವಾಚ।
06117029a ನ ಚೇಚ್ಚಕ್ಯಮಥೋತ್ಸ್ರಷ್ಟುಂ ವೈರಮೇತತ್ಸುದಾರುಣಂ।
06117029c ಅನುಜಾನಾಮಿ ಕರ್ಣ ತ್ವಾಂ ಯುಧ್ಯಸ್ವ ಸ್ವರ್ಗಕಾಮ್ಯಯಾ।।
ಭೀಷ್ಮನು ಹೇಳಿದನು: “ಕರ್ಣ! ಈ ಸುದಾರುಣ ವೈರವನ್ನು ಕೊಡವಿ ಹಾಕಲು ಶಕ್ಯವಿಲ್ಲವೆಂದಾದರೆ ನಿನಗೆ ಅನುಮತಿಯನ್ನು ಕೊಡುತ್ತೇನೆ. ಸ್ವರ್ಗವನ್ನು ಬಯಸಿ ಯುದ್ಧಮಾಡು.
06117030a ವಿಮನ್ಯುರ್ಗತಸಂರಂಭಃ ಕುರು ಕರ್ಮ ನೃಪಸ್ಯ ಹಿ।
06117030c ಯಥಾಶಕ್ತಿ ಯಥೋತ್ಸಾಹಂ ಸತಾಂ ವೃತ್ತೇಷು ವೃತ್ತವಾನ್।।
ಉತ್ತಮರ ನಡತೆಯಲ್ಲಿ ನಡೆದುಕೊಂಡು ಯಥಾ ಶಕ್ತಿಯಾಗಿ, ಉತ್ಸಾಹವಿದ್ದಷ್ಟು, ಸಿಟ್ಟನ್ನು ಬಿಟ್ಟು, ದುಡುಕದೇ ನೃಪನ ಕೆಲಸವನ್ನು ಮಾಡು.
06117031a ಅಹಂ ತ್ವಾಮನುಜಾನಾಮಿ ಯದಿಚ್ಛಸಿ ತದಾಪ್ನುಹಿ।
06117031c ಕ್ಷತ್ರಧರ್ಮಜಿತಾಽಲ್ಲೋಕಾನ್ಸಂಪ್ರಾಪ್ಸ್ಯಸಿ ನ ಸಂಶಯಃ।।
ನಾನು ನಿನಗೆ ಅನುಜ್ಞೆಯನ್ನು ನೀಡುತ್ತೇನೆ. ಏನು ಇಚ್ಛಿಸಿದ್ದೀಯೋ ಅದನ್ನು ಪಡೆ. ಕ್ಷತ್ರಧರ್ಮದಿಂದ ಲೋಕಗಳನ್ನು ಜಯಿಸುತ್ತೀಯೆ. ಸಂಶಯವಿಲ್ಲ.
06117032a ಯುಧ್ಯಸ್ವ ನಿರಹಂಕಾರೋ ಬಲವೀರ್ಯವ್ಯಪಾಶ್ರಯಃ।
06117032c ಧರ್ಮೋ ಹಿ ಯುದ್ಧಾಚ್ಚ್ರೇಯೋಽನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ।।
ಬಲವೀರ್ಯಗಳನ್ನು ಆಶ್ರಯಿಸಿ ನಿರಹಂಕಾರನಾಗಿ ಯುದ್ಧಮಾಡು. ಏಕೆಂದರೆ ಧರ್ಮಯುದ್ಧವೇ ಕ್ಷತ್ರಿಯನಿಗೆ ಶ್ರೇಯಸ್ಕರವು. ಬೇರೆ ಏನೂ ತಿಳಿದಿಲ್ಲ.
06117033a ಪ್ರಶಮೇ ಹಿ ಕೃತೋ ಯತ್ನಃ ಸುಚಿರಾತ್ಸುಚಿರಂ ಮಯಾ।
06117033c ನ ಚೈವ ಶಕಿತಃ ಕರ್ತುಂ ಯತೋ ಧರ್ಮಸ್ತತೋ ಜಯಃ।।
ಶಾಂತಿಯನ್ನು ತರಲು ನಾನು ದೀರ್ಘಕಾಲ ಬಹಳಷ್ಟು ಪ್ರಯತ್ನ ಮಾಡಿದೆ. ಆದರೆ ಅದನ್ನು ಮಾಡಲು ಶಕ್ಯನಾಗಲಿಲ್ಲ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.””
06117034 ಸಂಜಯ ಉವಾಚ।
06117034a ಏವಂ ಬ್ರುವಂತಂ ಗಾಂಗೇಯಮಭಿವಾದ್ಯ ಪ್ರಸಾದ್ಯ ಚ।
06117034c ರಾಧೇಯೋ ರಥಮಾರುಹ್ಯ ಪ್ರಾಯಾತ್ತವ ಸುತಂ ಪ್ರತಿ।।
ಸಂಜಯನು ಹೇಳಿದನು: “ಹೀಗೆ ಹೇಳಿದ ಗಾಂಗೇಯನನ್ನು ವಂದಿಸಿ, ಪ್ರಸನ್ನಗೊಳಿಸಿ ರಾಧೇಯನು ರಥವನ್ನೇರಿ ನಿನ್ನ ಮಗನ ಬಳಿಗೆ ಹೊರಟನು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಕರ್ಣಸಂವಾದೇ ಸಪ್ತದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಕರ್ಣಸಂವಾದ ಎನ್ನುವ ನೂರಾಹದಿನೇಳನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವವು.
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-6/18, ಉಪಪರ್ವಗಳು-64/100, ಅಧ್ಯಾಯಗಳು-977/1995, ಶ್ಲೋಕಗಳು-33170/73784.