116 ದುರ್ಯೋಧನಂಪ್ರತಿ ಭೀಷ್ಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 116

ಸಾರ

ಅರ್ಜುನನು ಗಾಂಗೇಯನಿಗೆ ಪಾನೀಯವನ್ನಿತ್ತಿದುದು (1-35). ದುರ್ಯೋಧನನಿಗೆ ಭೀಷ್ಮನ ಉಪದೇಶ (36-51).

06116001 ಸಂಜಯ ಉವಾಚ।
06116001a ವ್ಯುಷ್ಟಾಯಾಂ ತು ಮಹಾರಾಜ ರಜನ್ಯಾಂ ಸರ್ವಪಾರ್ಥಿವಾಃ।
06116001c ಪಾಂಡವಾ ಧಾರ್ತರಾಷ್ಟ್ರಾಶ್ಚ ಅಭಿಜಗ್ಮುಃ ಪಿತಾಮಹಂ।।

ಸಂಜಯನು ಹೇಳಿದನು: “ಮಹಾರಾಜ! ರಾತ್ರಿಯು ಕಳೆಯಲು ಸರ್ವ ಪಾರ್ಥಿವರೂ, ಪಾಂಡವ-ಧಾರ್ತರಾಷ್ಟ್ರರು ಪಿತಾಮಹನಲ್ಲಿಗೆ ಆಗಮಿಸಿದರು.

06116002a ತಂ ವೀರಶಯನೇ ವೀರಂ ಶಯಾನಂ ಕುರುಸತ್ತಮಂ।
06116002c ಅಭಿವಾದ್ಯೋಪತಸ್ಥುರ್ವೈ ಕ್ಷತ್ರಿಯಾಃ ಕ್ಷತ್ರಿಯರ್ಷಭಂ।।

ಆ ವೀರಶಯನದಲ್ಲಿ ಮಲಗಿದ್ದ ವೀರ ಕ್ಷತ್ರಿಯರ್ಷಭ ಕುರುಸತ್ತಮನನ್ನು ಅಭಿವಾದಿಸಲು ಕ್ಷತ್ರಿಯರು ಉಪಸ್ಥಿತರಾದರು.

06116003a ಕನ್ಯಾಶ್ಚಂದನಚೂರ್ಣೈಶ್ಚ ಲಾಜೈಮಾಲ್ಯೈಶ್ಚ ಸರ್ವಶಃ।
06116003c ಸ್ತ್ರಿಯೋ ಬಾಲಾಸ್ತಥಾ ವೃದ್ಧಾಃ ಪ್ರೇಕ್ಷಕಾಶ್ಚ ಪೃಥಗ್ಜನಾಃ।
06116003e ಸಮಭ್ಯಯುಃ ಶಾಂತನವಂ ಭೂತಾನೀವ ತಮೋನುದಂ।।

ಕನ್ಯೆಯರು ಚಂದನ-ಚೂರ್ಣ-ಲಾಜ-ಮಾಲೆಗಳೆಲ್ಲವನ್ನು ತಂದು, ಸ್ತ್ರೀಯರು, ಬಾಲರು, ವೃದ್ಧರು, ಅನೇಕ ಪ್ರೇಕ್ಷಕ ಜನರೂ ಉದಯಿಸುತ್ತಿರುವ ಸೂರ್ಯನ ಬಳಿ ಭೂತಗಳು ಸಾಗುವಂತೆ ಶಾಂತನವನ ಬಳಿ ಬಂದರು.

06116004a ತೂರ್ಯಾಣಿ ಗಣಿಕಾ ವಾರಾಸ್ತಥೈವ ನಟನರ್ತಕಾಃ।
06116004c ಉಪಾನೃತ್ಯಂ ಜಗುಶ್ಚೈವ ವೃದ್ಧಂ ಕುರುಪಿತಾಮಹಂ।।

ವಾದ್ಯಗಾರರು, ವರ್ತಕರು, ವೇಶ್ಯೆಯರು, ನಟನರ್ತಕರು, ಶಿಲ್ಪಿಗಳು ವೃದ್ಧ ಕುರುಪಿತಾಮಹನಲ್ಲಿಗೆ ಬಂದರು.

06116005a ಉಪಾರಮ್ಯ ಚ ಯುದ್ಧೇಭ್ಯಃ ಸನ್ನಾಹಾನ್ವಿಪ್ರಮುಚ್ಯ ಚ।
06116005c ಆಯುಧಾನಿ ಚ ನಿಕ್ಷಿಪ್ಯ ಸಹಿತಾಃ ಕುರುಪಾಂಡವಾಃ।।
06116006a ಅನ್ವಾಸತ ದುರಾಧರ್ಷಂ ದೇವವ್ರತಮರಿಂದಮಂ।
06116006c ಅನ್ಯೋನ್ಯಂ ಪ್ರೀತಿಮಂತಸ್ತೇ ಯಥಾಪೂರ್ವಂ ಯಥಾವಯಃ।।

ಕೌರವಪಾಂಡವರು ಇಬ್ಬರೂ ಯುದ್ಧವನ್ನು ನಿಲ್ಲಿಸಿ, ಸನ್ನಾಹಗಳನ್ನು ಕಳಚಿ, ಆಯುಧಗಳನ್ನು ಬದಿಗಿಟ್ಟು ಒಟ್ಟಿಗೇ ಯಥಾಪೂರ್ವವಾಗಿ ವಯಸ್ಸಿಗೆ ತಕ್ಕಂತೆ ಅನ್ಯೋನ್ಯರಿಗೆ ಪ್ರೀತಿ ತೋರಿಸಿ ಆ ದುರಾಧರ್ಷ, ಅರಿಂದಮ ದೇವವ್ರತನ ಬಳಿ ಕುಳಿತುಕೊಂಡರು.

06116007a ಸಾ ಪಾರ್ಥಿವಶತಾಕೀರ್ಣಾ ಸಮಿತಿರ್ಭೀಷ್ಮಶೋಭಿತಾ।
06116007c ಶುಶುಭೇ ಭಾರತೀ ದೀಪ್ತಾ ದಿವೀವಾದಿತ್ಯಮಂಡಲಂ।।

ನೂರಾರು ಪಾರ್ಥಿವರಿಂದ ಕೂಡಿದ ಭೀಷ್ಮನಿಂದ ಶೋಭಿತವಾದ ಆ ಭಾರತೀ ಸಮಿತಿಯು ದಿವಿಯಲ್ಲಿನ ಆದಿತ್ಯಮಂಡಲದಂತೆ ಬೆಳಗಿ ಶೋಭಿಸಿತು.

06116008a ವಿಬಭೌ ಚ ನೃಪಾಣಾಂ ಸಾ ಪಿತಾಮಹಮುಪಾಸತಾಂ।
06116008c ದೇವಾನಾಮಿವ ದೇವೇಶಂ ಪಿತಾಮಹಮುಪಾಸತಾಂ।।

ಪಿತಾಮಹನನ್ನು ಉಪಾಸಿಸುತ್ತಿದ್ದ ಆ ನೃಪರು ದೇವೇಶ ಪಿತಾಮಹನನ್ನು ಉಪಾಸಿಸುವ ದೇವತೆಗಳಂತೆ ಶೋಭಿಸಿದರು.

06116009a ಭೀಷ್ಮಸ್ತು ವೇದನಾಂ ಧೈರ್ಯಾನ್ನಿಗೃಹ್ಯ ಭರತರ್ಷಭ।
06116009c ಅಭಿತಪ್ತಃ ಶರೈಶ್ಚೈವ ನಾತಿಹೃಷ್ಟಮನಾಬ್ರವೀತ್।।

ಭರತರ್ಷಭ! ಭೀಷ್ಮನಾದರೋ ಧೈರ್ಯದಿಂದ ವೇದನೆಗಳನ್ನು ನಿಗ್ರಹಿಸಿಕೊಂಡು, ಶರಗಳಿಂದ ಅಭಿತಪ್ತನಾಗಿ, ಅಷ್ಟೊಂದು ಸಂತೋಷವಿಲ್ಲದೇ ಹೇಳಿದನು:

06116010a ಶರಾಭಿತಪ್ತಕಾಯೋಽಹಂ ಶರಸಂತಾಪಮೂರ್ಚಿತಃ।
06116010c ಪಾನೀಯಮಭಿಕಾಂಕ್ಷೇಽಹಂ ರಾಜ್ಞಸ್ತಾನ್ಪ್ರತ್ಯಭಾಷತ।।

“ಶರಗಳಿಂದ ಗಾಯಗೊಂಡು ನನ್ನ ದೇಹವು ಸುಡುತ್ತಿದೆ. ಶರಗಳ ಸಂತಾಪದಿಂದ ಮೂರ್ಛಿತನಾಗಿದ್ದೇನೆ. ಪಾನೀಯವನ್ನು ಬಯಸುತ್ತಿದ್ದೇನೆ” ಎಂದು ಆ ರಾಜರಿಗೆ ಹೇಳಿದನು.

06116011a ತತಸ್ತೇ ಕ್ಷತ್ರಿಯಾ ರಾಜನ್ಸಮಾಜಹ್ರುಃ ಸಮಂತತಃ।
06116011c ಭಕ್ಷ್ಯಾನುಚ್ಚಾವಚಾಂಸ್ತತ್ರ ವಾರಿಕುಂಭಾಂಶ್ಚ ಶೀತಲಾನ್।।

ಆಗ ರಾಜನ್! ಅಲ್ಲಿದ್ದ ಕ್ಷತ್ರಿಯರು ಬೇಗನೇ ಶುಚಿರುಚಿಯಾದ ಭಕ್ಷ್ಯಗಳನ್ನು ಶೀತಲ ಸಿಹಿನೀರಿನ ಬಿಂದಿಗೆಗಳನ್ನೂ ತರಿಸಿದರು.

06116012a ಉಪನೀತಂ ಚ ತದ್ದೃಷ್ಟ್ವಾ ಭೀಷ್ಮಃ ಶಾಂತನವೋಽಬ್ರವೀತ್।
06116012c ನಾದ್ಯ ತಾತ ಮಯಾ ಶಕ್ಯಂ ಭೋಗಾನ್ಕಾಂಶ್ಚನ ಮಾನುಷಾನ್।।
06116013a ಉಪಭೋಕ್ತುಂ ಮನುಷ್ಯೇಭ್ಯಃ ಶರಶಯ್ಯಾಗತೋ ಹ್ಯಹಂ।
06116013c ಪ್ರತೀಕ್ಷಮಾಣಸ್ತಿಷ್ಠಾಮಿ ನಿವೃತ್ತಿಂ ಶಶಿಸೂರ್ಯಯೋಃ।।

ತಂದಿರುವ ಅವುಗಳನ್ನು ನೋಡಿ ಶಾಂತನವ ಭೀಷ್ಮನು ಹೇಳಿದನು: “ಅಯ್ಯಾ! ಇಂದು ನಾನು ಮನುಷ್ಯರ ಯಾವ ಭೋಗಗಳನ್ನೂ ಭೋಗಿಸಲು ಶಕ್ಯನಿಲ್ಲ. ಮನುಷ್ಯನಿಂದ ಬೇರೆಯಾಗಿ ಶರಶಯ್ಯಗತನಾಗಿದ್ದೇನೆ. ಶಶಿಸೂರ್ಯರು ಹಿಂದಿರುಗುವುದನ್ನು ಕಾಯುತ್ತಾ ಇದ್ದೇನೆ.”

06116014a ಏವಮುಕ್ತ್ವಾ ಶಾಂತನವೋ ದೀನವಾಕ್ಸರ್ವಪಾರ್ಥಿವಾನ್।
06116014c ಧನಂಜಯಂ ಮಹಾಬಾಹುಮಭ್ಯಭಾಷತ ಭಾರತ।।

ಹೀಗೆ ದೀನ ಮಾತುಗಳನ್ನು ಸರ್ವ ಪಾರ್ಥಿವರಿಗೆ ಹೇಳಿ ಭಾರತ! ಮಹಾಬಾಹು ಧನಂಜಯನಿಗೆ ಹೇಳಿದನು.

06116015a ಅಥೋಪೇತ್ಯ ಮಹಾಬಾಹುರಭಿವಾದ್ಯ ಪಿತಾಮಹಂ।
06116015c ಅತಿಷ್ಠತ್ಪ್ರಾಂಜಲಿಃ ಪ್ರಹ್ವಃ ಕಿಂ ಕರೋಮೀತಿ ಚಾಬ್ರವೀತ್।।

ಕೂಡಲೇ ಮಾಹಾಬಾಹುವು ಪಿತಾಮಹನಿಗೆ ಅಂಜಲೀಬದ್ಧನಾಗಿ ನಮಸ್ಕರಿಸಿ ನಿಂತು ಏನು ಮಾಡಲಿ? ಎಂದು ಕೇಳಿದನು.

06116016a ತಂ ದೃಷ್ಟ್ವಾ ಪಾಂಡವಂ ರಾಜನ್ನಭಿವಾದ್ಯಾಗ್ರತಃ ಸ್ಥಿತಂ।
06116016c ಅಭ್ಯಭಾಷತ ಧರ್ಮಾತ್ಮಾ ಭೀಷ್ಮಃ ಪ್ರೀತೋ ಧನಂಜಯಂ।।

ರಾಜನ್! ಕೈಮುಗಿದು ಮುಂದೆ ನಿಂತಿದ್ದ ಆ ಪಾಂಡವನನ್ನು ನೋಡಿ ಧರ್ಮಾತ್ಮ ಭೀಷ್ಮನು ಪ್ರೀತನಾಗಿ ಧನಂಜಯನಿಗೆ ಹೇಳಿದನು:

06116017a ದಹ್ಯತೇಽದಃ ಶರೀರಂ ಮೇ ಸಂಸ್ಯೂತೋಽಸ್ಮಿ ಮಹೇಷುಭಿಃ।
06116017c ಮರ್ಮಾಣಿ ಪರಿದೂಯಂತೇ ವದನಂ ಮಮ ಶುಷ್ಯತಿ।।

“ನನ್ನ ಈ ಶರೀರವು ಸುಡುತ್ತಿದೆ. ಈ ಮಹಾ ಶರಗಳು ಎಲ್ಲೆಲ್ಲಿಯೂ ನನ್ನನ್ನು ಚುಚ್ಚುತ್ತಿವೆ. ನನ್ನ ಮರ್ಮಸ್ಥಾನಗಳು ತುಂಬಾ ನೋಯುತ್ತಿವೆ. ನನ್ನ ಬಾಯಿಯು ಒಣಗಿದೆ.

06116018a ಹ್ಲಾದನಾರ್ಥಂ ಶರೀರಸ್ಯ ಪ್ರಯಚ್ಛಾಪೋ ಮಮಾರ್ಜುನ।
06116018c ತ್ವಂ ಹಿ ಶಕ್ತೋ ಮಹೇಷ್ವಾಸ ದಾತುಮಂಭೋ ಯಥಾವಿಧಿ।।

ಅರ್ಜುನ! ಶರೀರದ ಆಹ್ಲಾದಕ್ಕಾಗಿ ನನಗೆ ನೀರನ್ನು ಕೊಡು. ಮಹೇಷ್ವಾಸ! ಯಥಾವಿಧಿಯಾಗಿ ನೀರನ್ನು ಕೊಡಲು ನೀನೇ ಶಕ್ತ.”

06116019a ಅರ್ಜುನಸ್ತು ತಥೇತ್ಯುಕ್ತ್ವಾ ರಥಮಾರುಹ್ಯ ವೀರ್ಯವಾನ್।
06116019c ಅಧಿಜ್ಯಂ ಬಲವತ್ಕೃತ್ವಾ ಗಾಂಡೀವಂ ವ್ಯಾಕ್ಷಿಪದ್ಧನುಃ।।

ಹಾಗೆಯೇ ಆಗಲೆಂದು ವೀರ್ಯವಾನ್ ಅರ್ಜುನನು ರಥವನ್ನೇರಿ ಗಾಂಡೀವವನ್ನು ಬಲವನ್ನುಪಯೋಗಿಸಿ ಹೆದೆಯೇರಿಸಿ ಠೇಂಕರಿಸಿದನು.

06116020a ತಸ್ಯ ಜ್ಯಾತಲನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ।
06116020c ವಿತ್ರೇಸುಃ ಸರ್ವಭೂತಾನಿ ಶ್ರುತ್ವಾ ಸರ್ವೇ ಚ ಪಾರ್ಥಿವಾಃ।।

ಸಿಡಿಲಿನ ಧ್ವನಿಯಂತಿದ್ದ ಧನುಸ್ಸಿನ ಠೇಂಕಾರ ಶಬ್ಧವನ್ನು ಕೇಳಿ ಅಲ್ಲಿದ್ದ ಎಲ್ಲ ಭೂತಗಳೂ ಎಲ್ಲ ರಾಜರೂ ಭಯಗೊಂಡರು.

06116021a ತತಃ ಪ್ರದಕ್ಷಿಣಂ ಕೃತ್ವಾ ರಥೇನ ರಥಿನಾಂ ವರಃ।
06116021c ಶಯಾನಂ ಭರತಶ್ರೇಷ್ಠಂ ಸರ್ವಶಸ್ತ್ರಭೃತಾಂ ವರಂ।।
06116022a ಸಂಧಾಯ ಚ ಶರಂ ದೀಪ್ತಮಭಿಮಂತ್ರ್ಯ ಮಹಾಯಶಾಃ।
06116022c ಪರ್ಜನ್ಯಾಸ್ತ್ರೇಣ ಸಮ್ಯೋಜ್ಯ ಸರ್ವಲೋಕಸ್ಯ ಪಶ್ಯತಃ।
06116022e ಅವಿಧ್ಯತ್ಪೃಥಿವೀಂ ಪಾರ್ಥಃ ಪಾರ್ಶ್ವೇ ಭೀಷ್ಮಸ್ಯ ದಕ್ಷಿಣೇ।।

ಆಗ ಆ ರಥಿಗಳಲ್ಲಿ ಶ್ರೇಷ್ಠ ಮಹಾಯಶ ಪಾರ್ಥನು ರಥದಿಂದಲೇ ಮಲಗಿದ್ದ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಭರತಶ್ರೇಷ್ಠನಿಗೆ ಪ್ರದಕ್ಷಿಣೆ ಮಾಡಿ, ಉರಿಯುತ್ತಿರುವ ಶರವನ್ನು ಅಭಿಮಂತ್ರಿಸಿ ಪರ್ಜನ್ಯಾಸ್ತ್ರವನ್ನು ಸಂಯೋಜಿಸಿ ಸರ್ವಲೋಕಗಳೂ ನೋಡುತ್ತಿರಲು ಭೀಷ್ಮನ ಬಲಭಾಗದಲ್ಲಿ ಭೂಮಿಗೆ ಹೊಡೆದನು.

06116023a ಉತ್ಪಪಾತ ತತೋ ಧಾರಾ ವಿಮಲಾ ವಾರಿಣಃ ಶಿವಾ।
06116023c ಶೀತಸ್ಯಾಮೃತಕಲ್ಪಸ್ಯ ದಿವ್ಯಗಂಧರಸಸ್ಯ ಚ।।

ಆಗ ಒಡನೆಯೇ ಶುದ್ಧ, ಮಂಗಳ, ಶೀತಲ, ಅಮೃತಕಲ್ಪ, ದಿವ್ಯ ಗಂಧರಸಗಳಿಂದ ಕೂಡಿದ ನೀರು ಬುಗ್ಗೆಯಂತೆ ಹೊರಚಿಮ್ಮಿತು.

06116024a ಅತರ್ಪಯತ್ತತಃ ಪಾರ್ಥಃ ಶೀತಯಾ ವಾರಿಧಾರಯಾ।
06116024c ಭೀಷ್ಮಂ ಕುರೂಣಾಂ ಋಷಭಂ ದಿವ್ಯಕರ್ಮಪರಾಕ್ರಮಃ।।

ಆ ಶೀತಲ ನೀರ ಧಾರೆಯಿಂದ ದಿವ್ಯಪರಾಕ್ರಮಿ ಪಾರ್ಥನು ಕುರು‌ಋಷಭ ಭೀಷ್ಮನನ್ನು ತೃಪ್ತಿಗೊಳಿಸಿದನು.

06116025a ಕರ್ಮಣಾ ತೇನ ಪಾರ್ಥಸ್ಯ ಶಕ್ರಷ್ಯೇವ ವಿಕುರ್ವತಃ।
06116025c ವಿಸ್ಮಯಂ ಪರಮಂ ಜಗ್ಮುಸ್ತತಸ್ತೇ ವಸುಧಾಧಿಪಾಃ।।

ಶಕ್ರನಂತೆಯೇ ಮಾಡಿದ ಪಾರ್ಥನ ಆ ಕರ್ಮದಿಂದ ಅಲ್ಲಿದ್ದ ವಸುಧಾಧಿಪರು ಪರಮ ವಿಸ್ಮಿತರಾದರು.

06116026a ತತ್ಕರ್ಮ ಪ್ರೇಕ್ಷ್ಯ ಬೀಭತ್ಸೋರತಿಮಾನುಷಮದ್ಭುತಂ।
06116026c ಸಂಪ್ರಾವೇಪಂತ ಕುರವೋ ಗಾವಃ ಶೀತಾರ್ದಿತಾ ಇವ।।

ಬೀಭತ್ಸುವಿನ ಆ ಅತಿಮಾನುಷ ಅದ್ಭುತ ಕರ್ಮವನ್ನು ನೋಡಿ ಕುರುಗಳು ಶೀತದಿಂದ ಪೀಡಿತ ಹಸುಗಳಂತೆ ನಡುಗಿದರು.

06116027a ವಿಸ್ಮಯಾಚ್ಚೋತ್ತರೀಯಾಣಿ ವ್ಯಾವಿಧ್ಯನ್ಸರ್ವತೋ ನೃಪಾಃ।
06116027c ಶಂಖದುಂದುಭಿನಿರ್ಘೋಷೈಸ್ತುಮುಲಂ ಸರ್ವತೋಽಭವತ್।।

ವಿಸ್ಮಯದಿಂದ ಎಲ್ಲಕಡೆ ನೃಪರು ಉತ್ತರೀಯಗಳನ್ನು ಹಾರಿಸಿದರು. ಎಲ್ಲಕಡೆ ಶಂಖ ದುಂದುಭಿಗಳ ನಿರ್ಘೋಷದ ತುಮುಲವುಂಟಾಯಿತು.

06116028a ತೃಪ್ತಃ ಶಾಂತನವಶ್ಚಾಪಿ ರಾಜನ್ಬೀಭತ್ಸುಮಬ್ರವೀತ್।
06116028c ಸರ್ವಪಾರ್ಥಿವವೀರಾಣಾಂ ಸನ್ನಿಧೌ ಪೂಜಯನ್ನಿವ।।

ರಾಜನ್! ಶಾಂತನವನೂ ಕೂಡ ತೃಪ್ತನಾಗಿ ಬೀಭತ್ಸುವಿಗೆ ಸರ್ವಪಾರ್ಥಿವವೀರರ ಸನ್ನಿಧಿಯಲ್ಲಿ ಗೌರವಿಸುವಂತೆ ಹೇಳಿದನು:

06116029a ನೈತಚ್ಚಿತ್ರಂ ಮಹಾಬಾಹೋ ತ್ವಯಿ ಕೌರವನಂದನ।
06116029c ಕಥಿತೋ ನಾರದೇನಾಸಿ ಪೂರ್ವರ್ಷಿರಮಿತದ್ಯುತಿಃ।।

“ಮಹಾಬಾಹೋ! ಕೌರವನಂದನ! ನಿನ್ನಲ್ಲಿ ಇದು ಇದೆಯೆಂದರೆ ವಿಚಿತ್ರವೇನೂ ಅಲ್ಲ. ಹಿಂದೆ ಅಮಿತದ್ಯುತಿ ಋಷಿಯಾಗಿದ್ದೆ ಎಂದು ನಾರದನು ಹೇಳಿದ್ದನು.

06116030a ವಾಸುದೇವಸಹಾಯಸ್ತ್ವಂ ಮಹತ್ಕರ್ಮ ಕರಿಷ್ಯಸಿ।
06116030c ಯನ್ನೋತ್ಸಹತಿ ದೇವೇಂದ್ರಃ ಸಹ ದೇವೈರಪಿ ಧ್ರುವಂ।।

ದೇವತೆಗಳೊಂದಿಗೆ ದೇವೇಂದ್ರನೂ ಸಹ ಮಾಡಲಾಗದಂತಹ ಮಹಾ ಕಾರ್ಯವನ್ನು ವಾಸುದೇವನ ಸಹಾಯದಿಂದ ನೀನು ಮಾಡುತ್ತೀಯೆ.

06116031a ವಿದುಸ್ತ್ವಾಂ ನಿಧನಂ ಪಾರ್ಥ ಸರ್ವಕ್ಷತ್ರಸ್ಯ ತದ್ವಿದಃ।
06116031c ಧನುರ್ಧರಾಣಾಮೇಕಸ್ತ್ವಂ ಪೃಥಿವ್ಯಾಂ ಪ್ರವರೋ ನೃಷು।।

ಪಾರ್ಥ! ತಿಳಿದವರು ನಿನ್ನನ್ನು ಎಲ್ಲ ಕ್ಷತ್ರಿಯರಿಗೂ ಮೃತ್ಯುಸ್ವರೂಪನೆಂದು ಹೇಳುತ್ತಾರೆ. ಧನುರ್ಧರರಲ್ಲಿ ಪ್ರಧಾನನು ನೀನು. ಪೃಥ್ವಿಯಲ್ಲಿ ನರರಲ್ಲಿ ಪ್ರವರ.

06116032a ಮನುಷ್ಯಾ ಜಗತಿ ಶ್ರೇಷ್ಠಾಃ ಪಕ್ಷಿಣಾಂ ಗರುಡೋ ವರಃ।
06116032c ಸರಸಾಂ ಸಾಗರಃ ಶ್ರೇಷ್ಠೋ ಗೌರ್ವರಿಷ್ಠಾ ಚತುಷ್ಪದಾಂ।।
06116033a ಆದಿತ್ಯಸ್ತೇಜಸಾಂ ಶ್ರೇಷ್ಠೋ ಗಿರೀಣಾಂ ಹಿಮವಾನ್ವರಃ।
06116033c ಜಾತೀನಾಂ ಬ್ರಾಹ್ಮಣಃ ಶ್ರೇಷ್ಠಃ ಶ್ರೇಷ್ಠಸ್ತ್ವಮಸಿ ಧನ್ವಿನಾಂ।।

ಜಗತ್ತಿನಲ್ಲಿ ಮನುಷ್ಯನು ಶ್ರೇಷ್ಠ. ಪಕ್ಷಿಗಳಲ್ಲಿ ಗರುಡನು ಶ್ರೇಷ್ಠ. ಜಲಾಶಯಗಳಲ್ಲಿ ಸಾಗರವು ಶ್ರೇಷ್ಠ. ನಾಲ್ಕು ಪಾದಗಳಿರುವವುಗಳಲ್ಲಿ ಗೋವು ಶ್ರೇಷ್ಠ. ಆದಿತ್ಯನು ತೇಜಸ್ಸುಳ್ಳವುಗಳಲ್ಲಿ ಶ್ರೇಷ್ಠ. ಗಿರಿಗಳಲ್ಲಿ ಹಿಮವತನು ಶ್ರೇಷ್ಠ. ಜಾತಿಗಳಲ್ಲಿ ಬ್ರಾಹ್ಮಣನು ಶ್ರೇಷ್ಠ. ಧನ್ವಿಗಳಲ್ಲಿ ನೀನು ಶ್ರೇಷ್ಠ.

06116034a ನ ವೈ ಶ್ರುತಂ ಧಾರ್ತರಾಷ್ಟ್ರೇಣ ವಾಕ್ಯಂ ಸಂಬೋಧ್ಯಮಾನಂ ವಿದುರೇಣ ಚೈವ।
06116034c ದ್ರೋಣೇನ ರಾಮೇಣ ಜನಾರ್ದನೇನ ಮುಹುರ್ಮುಹುಃ ಸಂಜಯೇನಾಪಿ ಚೋಕ್ತಂ।।

ಧಾರ್ತರಾಷ್ಟ್ರನು ನಾನು ಹೇಳಿದ ಮಾತುಗಳನ್ನು, ವಿದುರ, ದ್ರೋಣ, ರಾಮ, ಜನಾರ್ದನ ಮತ್ತು ಸಂಜಯನೂ ಕೂಡ ಪುನಃ ಪುನಃ ಹೇಳಿದುದನ್ನು ಕೇಳಲಿಲ್ಲ.

06116035a ಪರೀತಬುದ್ಧಿರ್ಹಿ ವಿಸಂಜ್ಞಕಲ್ಪೋ ದುರ್ಯೋಧನೋ ನಾಭ್ಯನಂದದ್ವಚೋ ಮೇ।
06116035c ಸ ಶೇಷ್ಯತೇ ವೈ ನಿಹತಶ್ಚಿರಾಯ ಶಾಸ್ತ್ರಾತಿಗೋ ಭೀಮಬಲಾಭಿಭೂತಃ।।

ದುರ್ಯೋಧನನು ವಿಪರೀತ ಬುದ್ಧಿಯುಳ್ಳವ. ಮೂಢನಂತಿದ್ದಾನೆ. ನನ್ನ ಮಾತುಗಳನ್ನು ಗೌರವಿಸುವುದಿಲ್ಲ. ಶಾಸ್ತ್ರಗಳನ್ನು ಮೀರಿ ನಡೆಯುವ ಅವನು ಭೀಮನ ಬಲದಿಂದ ನಿಹತನಾಗಿ ಬಹುಕಾಲದ ವರೆಗೆ ಮಲಗುತ್ತಾನೆ.”

06116036a ತತಃ ಶ್ರುತ್ವಾ ತದ್ವಚಃ ಕೌರವೇಂದ್ರೋ ದುರ್ಯೋಧನೋ ದೀನಮನಾ ಬಭೂವ।
06116036c ತಮಬ್ರವೀಚ್ಚಾಂತನವೋಽಭಿವೀಕ್ಷ್ಯ ನಿಬೋಧ ರಾಜನ್ಭವ ವೀತಮನ್ಯುಃ।।

ಅವನ ಆ ಮಾತುಗಳನ್ನು ಕೇಳಿ ಕೌರವೇಂದ್ರ ದುರ್ಯೋಧನನು ದೀನ ಮನಸ್ಕನಾದನು. ಅದನ್ನು ತಿಳಿದ ಶಾಂತನವನು ಅವನ ಕಡೆ ತಿರುಗಿ ಹೇಳಿದನು: “ರಾಜನ್! ಕೇಳು. ಕೋಪವನ್ನು ದೂರಮಾಡು.

06116037a ದೃಷ್ಟಂ ದುರ್ಯೋಧನೇದಂ ತೇ ಯಥಾ ಪಾರ್ಥೇನ ಧೀಮತಾ।
06116037c ಜಲಸ್ಯ ಧಾರಾ ಜನಿತಾ ಶೀತಸ್ಯಾಮೃತಗಂಧಿನಃ।
06116037e ಏತಸ್ಯ ಕರ್ತಾ ಲೋಕೇಽಸ್ಮಿನ್ನಾನ್ಯಃ ಕಶ್ಚನ ವಿದ್ಯತೇ।।

ದುರ್ಯೋಧನ! ಧೀಮತ ಪಾರ್ಥನು ಶೀತಲ ಅಮೃತ ಗಂಧಿ ನೀರಿನ ಧಾರೆಯನ್ನು ಹುಟ್ಟಿಸಿದುದನ್ನು ನೀನೇ ನೋಡಿದೆ. ಇದನ್ನು ಮಾಡುವವರು ಈ ಲೋಕದಲ್ಲಿ ಬೇರೆ ಯಾರು ಇದ್ದುದೂ ತಿಳಿದಿಲ್ಲ.

06116038a ಆಗ್ನೇಯಂ ವಾರುಣಂ ಸೌಮ್ಯಂ ವಾಯವ್ಯಮಥ ವೈಷ್ಣವಂ।
06116038c ಐಂದ್ರಂ ಪಾಶುಪತಂ ಬ್ರಾಹ್ಮಂ ಪಾರಮೇಷ್ಠ್ಯಂ ಪ್ರಜಾಪತೇಃ।।
06116038e ಧಾತುಸ್ತ್ವಷ್ಟುಶ್ಚ ಸವಿತುರ್ದಿವ್ಯಾನ್ಯಸ್ತ್ರಾಣಿ ಸರ್ವಶಃ।।
06116039a ಸರ್ವಸ್ಮಿನ್ಮಾನುಷೇ ಲೋಕೇ ವೇತ್ತ್ಯೇಕೋ ಹಿ ಧನಂಜಯಃ।

ಆಗ್ನೇಯ, ವಾರುಣ, ಸೌಮ್ಯ, ವಾಯುವ್ಯ, ವೈಷ್ಣವ, ಐಂದ್ರ, ಪಾಶುಪದ, ಪಾರಮೇಷ್ಠ್ಯ, ಪ್ರಜಾಪದಿ, ಧಾತು, ತ್ವಷ್ಟು, ಸವಿತು ಎಲ್ಲ ದಿವ್ಯಾಸ್ತ್ರಗಳೂ ಮಾನುಷಲೋಕದಲ್ಲೆಲ್ಲಾ ಧನಂಜಯನಿಗೆ ಮಾತ್ರ ತಿಳಿದಿದೆ.

06116039c ಕೃಷ್ಣೋ ವಾ ದೇವಕೀಪುತ್ರೋ ನಾನ್ಯೋ ವೈ ವೇದ ಕಶ್ಚನ।
06116039e ನ ಶಕ್ಯಾಃ ಪಾಂಡವಾಸ್ತಾತ ಯುದ್ಧೇ ಜೇತುಂ ಕಥಂ ಚನ।।

ದೇವಕೀಪುತ್ರ ಕೃಷ್ಣನನ್ನು ಬಿಟ್ಟು ಇದು ಬೇರೆಯಾರಿಗೂ ತಿಳಿದಿಲ್ಲ. ಮಗೂ! ಪಾಂಡವರನ್ನು ಯುದ್ಧದಲ್ಲಿ ಗೆಲ್ಲಲು ಎಂದೂ ಶಕ್ಯವಿಲ್ಲ.

06116040a ಅಮಾನುಷಾಣಿ ಕರ್ಮಾಣಿ ಯಸ್ಯೈತಾನಿ ಮಹಾತ್ಮನಃ।
06116040c ತೇನ ಸತ್ತ್ವವತಾ ಸಂಖ್ಯೇ ಶೂರೇಣಾಹವಶೋಭಿನಾ।
06116040e ಕೃತಿನಾ ಸಮರೇ ರಾಜನ್ಸಂಧಿಸ್ತೇ ತಾತ ಯುಜ್ಯತಾಂ।।

ರಾಜನ್! ಮಗೂ ಯಾರು ಅಮಾನುಷ ಕರ್ಮಗಳನ್ನು ಮಾಡಿದ್ದಾನೋ ಆ ಮಹಾತ್ಮ, ಸತ್ತ್ವವತ, ಸಮರದಲ್ಲಿ ಶೂರ, ಆಹವಶೋಭಿ, ಸಮರ ಕೌಶಲನೊಡನೆ ಸಂಧಿಯನ್ನು ಮಾಡಿಕೋ.

06116041a ಯಾವತ್ಕೃಷ್ಣೋ ಮಹಾಬಾಹುಃ ಸ್ವಾಧೀನಃ ಕುರುಸಂಸದಿ।
06116041c ತಾವತ್ಪಾರ್ಥೇನ ಶೂರೇಣ ಸಂಧಿಸ್ತೇ ತಾತ ಯುಜ್ಯತಾಂ।।

ಮಗೂ! ಎಲ್ಲಿಯವರೆಗೆ ಮಹಾಬಾಹು ಕೃಷ್ಣನು ಕುರುಸಂಸದಿಯ ಸ್ವಧೀನದಲ್ಲಿರುತ್ತಾನೋ ಅಲ್ಲಿಯವರೆಗೆ ಶೂರ ಪಾರ್ಥನೊಂದಿಗೆ ಸಂಧಿಯನ್ನು ಮಾಡಿಕೋ.

06116042a ಯಾವಚ್ಚಮೂಂ ನ ತೇ ಶೇಷಾಂ ಶರೈಃ ಸನ್ನತಪರ್ವಭಿಃ।
06116042c ನಾಶಯತ್ಯರ್ಜುನಸ್ತಾವತ್ಸಂಧಿಸ್ತೇ ತಾತ ಯುಜ್ಯತಾಂ।।

ಮಗೂ! ಅರ್ಜುನನ ಸನ್ನತಪರ್ವ ಶರಗಳಿಂದ ನಿನ್ನ ಸೇನೆಯು ನಿಃಶೇಷವಾಗಿ ನಾಶವಾಗುವುದರೊಳಗೆ ನೀನು ಸಂಧಿಯನ್ನು ಮಾಡಿಕೋ.

06116043a ಯಾವತ್ತಿಷ್ಠಂತಿ ಸಮರೇ ಹತಶೇಷಾಃ ಸಹೋದರಾಃ।
06116043c ನೃಪಾಶ್ಚ ಬಹವೋ ರಾಜನ್‌ಸ್ತಾವತ್ಸಂಧಿಃ ಪ್ರಯುಜ್ಯತಾಂ।।

ರಾಜನ್! ಸಮರದಲ್ಲಿ ಸಹೋದರರು ಮತ್ತು ಬಹಳಷ್ಟು ನೃಪರು ಇನ್ನೂ ಹತಶೇಷರಾಗಿರುವಾಗಲೇ ಸಂಧಿಯನ್ನು ಮಾಡಿಕೋ.

06116044a ನ ನಿರ್ದಹತಿ ತೇ ಯಾವತ್ಕ್ರೋಧದೀಪ್ತೇಕ್ಷಣಶ್ಚಮೂಂ।
06116044c ಯುಧಿಷ್ಠಿರೋ ಹಿ ತಾವದ್ವೈ ಸಂಧಿಸ್ತೇ ತಾತ ಯುಜ್ಯತಾಂ।।

ಮಗೂ! ಯುಧಿಷ್ಠಿರನ ಕ್ರೋಧದಿಂದ ಉರಿಯುವ ದೃಷ್ಟಿಯು ನಿನ್ನ ಸೇನೆಯನ್ನು ಸುಡುವುದರೊಳಗೇ ನೀನು ಸಂಧಿಯನ್ನು ಮಾಡಿಕೋ.

06116045a ನಕುಲಃ ಸಹದೇವಶ್ಚ ಭೀಮಸೇನಶ್ಚ ಪಾಂಡವಃ।
06116045c ಯಾವಚ್ಚಮೂಂ ಮಹಾರಾಜ ನಾಶಯಂತಿ ನ ಸರ್ವಶಃ।
06116045e ತಾವತ್ತೇ ಪಾಂಡವೈಃ ಸಾರ್ಧಂ ಸೌಭ್ರಾತ್ರಂ ತಾತ ರೋಚತಾಂ।।

ಮಗೂ! ಮಹಾರಾಜ! ನಕುಲ, ಸಹದೇವ ಮತ್ತು ಪಾಂಡವ ಭೀಮಸೇನರು ನಿನ್ನ ಸೇನೆಯನ್ನು ಸಂಪೂರ್ಣವಾಗಿ ನಾಶಗೊಳಿಸುವ ಮೊದಲು ಪಾಂಡವರೊಡನೆ ಸೌಭ್ರಾತೃತ್ವವನ್ನು ಬಯಸು.

06116046a ಯುದ್ಧಂ ಮದಂತಮೇವಾಸ್ತು ತಾತ ಸಂಶಾಮ್ಯ ಪಾಂಡವೈಃ।
06116046c ಏತತ್ತೇ ರೋಚತಾಂ ವಾಕ್ಯಂ ಯದುಕ್ತೋಽಸಿ ಮಯಾನಘ।
06116046e ಏತತ್ ಕ್ಷೇಮಮಹಂ ಮನ್ಯೇ ತವ ಚೈವ ಕುಲಸ್ಯ ಚ।।

ಮಗೂ! ನನ್ನೊಂದಿಗೇ ಯುದ್ಧವು ಅಂತ್ಯಗೊಳ್ಳಲಿ. ಪಾಂಡವರೊಂದಿಗೆ ಸಂಧಿಮಾಡಿಕೋ. ಅನಘ! ನಾನು ಹೇಳಿದ ಈ ಮಾತುಗಳನ್ನು ನೀನು ಇಷ್ಟಪಡಬೇಕು. ಇದು ನಿನಗೂ ಕುಲಕ್ಕೂ ಕ್ಷೇಮವಾದುದೆಂದು ನನಗನ್ನಿಸುತ್ತದೆ.

06116047a ತ್ಯಕ್ತ್ವಾ ಮನ್ಯುಮುಪಶಾಮ್ಯಸ್ವ ಪಾರ್ಥೈಃ ಪರ್ಯಾಪ್ತಮೇತದ್ಯತ್ಕೃತಂ ಫಲ್ಗುನೇನ।
06116047c ಭೀಷ್ಮಸ್ಯಾಂತಾದಸ್ತು ವಃ ಸೌಹೃದಂ ವಾ ಸಂಪ್ರಶ್ಲೇಷಃ ಸಾಧು ರಾಜನ್ಪ್ರಸೀದ।।

ರಾಜನ್! ಕೋಪವನ್ನು ತೊರೆದು ಪಾರ್ಥರೊಂದಿಗೆ ಸಂಧಿ ಮಾಡಿಕೋ. ಫಲ್ಗುನನ ಕೃತಕರ್ಮಗಳು ಪರ್ಯಾಪ್ತವಾಗಲಿ. ಭೀಷ್ಮನ ಅಂತ್ಯದೊಡನೆ ನಿಮ್ಮಲ್ಲಿ ಸೌಹಾರ್ದತೆಯುಂಟಾಗಲಿ. ಉಳಿದವರಾದರೂ ಚೆನ್ನಾಗಿರಲಿ. ಪ್ರಸೀದನಾಗು.

06116048a ರಾಜ್ಯಸ್ಯಾರ್ಧಂ ದೀಯತಾಂ ಪಾಂಡವಾನಾಂ ಇಂದ್ರಪ್ರಸ್ಥಂ ಧರ್ಮರಾಜೋಽನುಶಾಸ್ತು।
06116048c ಮಾ ಮಿತ್ರಧ್ರುಕ್ಪಾರ್ಥಿವಾನಾಂ ಜಘನ್ಯಃ ಪಾಪಾಂ ಕೀರ್ತಿಂ ಪ್ರಾಪ್ಸ್ಯಸೇ ಕೌರವೇಂದ್ರ।।

ಪಾಂಡವರ ಅರ್ಧರಾಜ್ಯವನ್ನು ನೀಡು. ಇಂದ್ರಪ್ರಸ್ಥವನ್ನು ಧರ್ಮರಾಜನು ಆಳಲಿ. ಕೌರವೇಂದ್ರ! ಇದರಿಂದ ನೀನು ಪಾರ್ಥಿವರಲ್ಲಿ ಮಿತ್ರದ್ರೋಹೀ, ಪಾಪಿ ಎಂಬ ಕೀರ್ತಿಯನ್ನು ಪಡೆಯುವುಲ್ಲ.

06116049a ಮಮಾವಸಾನಾಚ್ಚಾಂತಿರಸ್ತು ಪ್ರಜಾನಾಂ ಸಂಗಚ್ಛಂತಾಂ ಪಾರ್ಥಿವಾಃ ಪ್ರೀತಿಮಂತಃ।
06116049c ಪಿತಾ ಪುತ್ರಂ ಮಾತುಲಂ ಭಾಗಿನೇಯೋ ಭ್ರಾತಾ ಚೈವ ಭ್ರಾತರಂ ಪ್ರೈತು ರಾಜನ್।।

ನನ್ನ ಅವಸಾನದಿಂದ ಪ್ರಜೆಗಳಲ್ಲಿ ಶಾಂತಿಯು ನೆಲೆಸಲಿ. ಪಾರ್ಥಿವರು ಪ್ರೀತಿಮಂತರಾಗಿ ತಮ್ಮ ತಮ್ಮಲ್ಲಿಗೆ ಹಿಂದಿರುಗಲಿ. ರಾಜನ್! ತಂದೆಯು ಮಗನನ್ನು, ಮಾವನು ಅಳಿಯನನ್ನು, ಅಣ್ಣನು ತಮ್ಮನನ್ನು ಸೇರಲಿ.

06116050a ನ ಚೇದೇವಂ ಪ್ರಾಪ್ತಕಾಲಂ ವಚೋ ಮೇ ಮೋಹಾವಿಷ್ಟಃ ಪ್ರತಿಪತ್ಸ್ಯಸ್ಯಬುದ್ಧ್ಯಾ।
06116050c ಭೀಷ್ಮಸ್ಯಾಂತಾದೇತದಂತಾಃ ಸ್ಥ ಸರ್ವೇ ಸತ್ಯಾಮೇತಾಂ ಭಾರತೀಮೀರಯಾಮಿ।।

ಕಾಲಕ್ಕೆ ತಕ್ಕುದಾದ ನನ್ನ ಈ ಮಾತುಗಳನ್ನು ನೀನು ಕೇಳದೆಯೇ ಹೋದರೆ ಮೋಹಾವಿಷ್ಟನಾಗಿ ಅಬುದ್ಧಿಯಿಂದ ಪರಿತಪಿಸುತ್ತೀಯೆ. ಭೀಷ್ಮನ ಈ ಅಂತ್ಯವು ನಿಮ್ಮೆಲ್ಲರಿಗೂ ಅಂತ್ಯವೆನಿಸುತ್ತದೆ. ಸತ್ಯವನ್ನೇ ಹೇಳುತ್ತಿದ್ದೇನೆ.”

06116051a ಏತದ್ವಾಕ್ಯಂ ಸೌಹೃದಾದಾಪಗೇಯೋ ಮಧ್ಯೇ ರಾಜ್ಞಾಂ ಭಾರತಂ ಶ್ರಾವಯಿತ್ವಾ।
06116051c ತೂಷ್ಣೀಮಾಸೀಚ್ಚಲ್ಯಸಂತಪ್ತಮರ್ಮಾ ಯತ್ವಾತ್ಮಾನಂ ವೇದನಾಂ ಸಂನ್ನಿಗೃಹ್ಯ।।

ಈ ಮಾತನ್ನು ಆಪಗೇಯನು ರಾಜರ ಮಧ್ಯದಲ್ಲಿ ಭಾರತನಿಗೆ ಕೇಳಿಸಿ, ಶರಗಳಿಂದ ಚುಚ್ಚಲ್ಪಟ್ಟು ಸಂತಪ್ತವಾದ ಮರ್ಮಗಳ ವೇದನೆಯನ್ನು ನಿಗ್ರಹಿಸಿಕೊಂಡು ಆತ್ಮನನ್ನು ಯೋಜಿಸಿ ಸುಮ್ಮನಾದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದುರ್ಯೋಧನಂಪ್ರತಿ ಭೀಷ್ಮವಾಕ್ಯೇ ಷೋಡಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದುರ್ಯೋಧನಂಪ್ರತಿಭೀಷ್ಮವಾಕ್ಯ ಎನ್ನುವ ನೂರಾಹದಿನಾರನೇ ಅಧ್ಯಾಯವು.