ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 115
ಸಾರ
ಯುದ್ಧನಿಲ್ಲಿಸಿ ಪಾಂಡವ-ಕೌರವ ಯೋಧರು ಬಿದ್ದಿದ್ದ ಭೀಷ್ಮನ ಬಳಿ ಬಂದುದು (1-29). ಅರ್ಜುನನು ಭೀಷ್ಮನಿಗೆ ತಲೆದಿಂಬನ್ನು ಒದಗಿಸಿದ್ದುದು (30-46). ಉತ್ತರಾಯಣದ ವರೆಗೆ ಕಾಯುತ್ತೇನೆಂದು ಹೇಳಿ ಭೀಷ್ಮನು ತನ್ನ ಗಾಯಗಳಿಗೆ ಚಿಕಿತ್ಸೆಮಾಡಲು ಬಂದ ವೈದ್ಯರನ್ನು ಹಿಂದೆ ಕಳುಹಿಸಿದುದು (47-56). ಕೃಷ್ಣ-ಯುಧಿಷ್ಠಿರರ ಸಂವಾದ (57-65).
06115001 ಧೃತರಾಷ್ಟ್ರ ಉವಾಚ।
06115001a ಕಥಮಾಸಂಸ್ತದಾ ಯೋಧಾ ಹೀನಾ ಭೀಷ್ಮೇಣ ಸಂಜಯ।
06115001c ಬಲಿನಾ ದೇವಕಲ್ಪೇನ ಗುರ್ವರ್ಥೇ ಬ್ರಹ್ಮಚಾರಿಣಾ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಬಲಿ, ದೇವಕಲ್ಪ, ಹಿರಿಯರಿಗಾಗಿ ಬ್ರಹ್ಮಚಾರಿಯಾಗಿದ್ದ ಭೀಷ್ಮನಿಲ್ಲದೇ ಯೋಧರು ಹೇಗಿದ್ದರು?
06115002a ತದೈವ ನಿಹತಾನ್ಮನ್ಯೇ ಕುರೂನನ್ಯಾಂಶ್ಚ ಪಾರ್ಥಿವಾನ್।
06115002c ನ ಪ್ರಾಹರದ್ಯದಾ ಭೀಷ್ಮೋ ಘೃಣಿತ್ವಾದ್ದ್ರುಪದಾತ್ಮಜೇ।।
ದ್ರುಪದಾತ್ಮಜನನ್ನು ಭೀಷ್ಮನು ದೀನನಾಗಿ ಹೊಡೆಯದೇ ಇದ್ದಾಗಲೇ ನಾನು ಕುರುಗಳು ಅನ್ಯ ಪಾರ್ಥಿವರೂ ಹತರಾದರೆಂದೇ ಭಾವಿಸಿದ್ದೆ.
06115003a ತತೋ ದುಃಖತರಂ ಮನ್ಯೇ ಕಿಮನ್ಯತ್ಪ್ರಭವಿಷ್ಯತಿ।
06115003c ಯದದ್ಯ ಪಿತರಂ ಶ್ರುತ್ವಾ ನಿಹತಂ ಮಮ ದುರ್ಮತೇಃ।।
ಇಂದು ನನ್ನ ತಂದೆಯು ಹತನಾದನೆಂದು ಕೇಳಿದುದಕ್ಕಿಂತ ಇನ್ನೂ ಹೆಚ್ಚಿನ ದುಃಖವಾದರೂ ಈ ದುರ್ಮತಿಗೆ ಆಗಲು ಹೇಗೆ ಸಾಧ್ಯ?
06115004a ಅಶ್ಮಸಾರಮಯಂ ನೂನಂ ಹೃದಯಂ ಮಮ ಸಂಜಯ।
06115004c ಶ್ರುತ್ವಾ ವಿನಿಹತಂ ಭೀಷ್ಮಂ ಶತಧಾ ಯನ್ನ ದೀರ್ಯತೇ।।
ಸಂಜಯ! ನನ್ನ ಈ ಹೃದಯವು ಉಕ್ಕಿನ ಸಾರದಿಂದೊಡಗೂಡಿರಬೇಕು. ಭೀಷ್ಮನು ಹತನಾದನೆಂದು ಕೇಳಿಯೂ ಇದು ನೂರಾಗಿ ಒಡೆದು ಹೋಗುತ್ತಿಲ್ಲವಲ್ಲ!
06115005a ಪುನಃ ಪುನರ್ನ ಮೃಷ್ಯಾಮಿ ಹತಂ ದೇವವ್ರತಂ ರಣೇ।
06115005c ನ ಹತೋ ಜಾಮದಗ್ನ್ಯೇನ ದಿವ್ಯೈರಸ್ತ್ರೈಃ ಸ್ಮ ಯಃ ಪುರಾ।।
ಹಿಂದೆ ಜಾಮದಗ್ನಿಯಿಂದ ದಿವ್ಯಾಸ್ತ್ರಗಳಿಗೂ ಹತನಾಗಿರದಿದ್ದ ದೇವವ್ರತನು ರಣದಲ್ಲಿ ಹತನಾದನೆಂದು ಕೇಳಿ ಪುನಃ ಪುನಃ ಸಹನೆಯನ್ನು ಕಳೆದುಕೊಳ್ಳುತ್ತಿದ್ದೇನೆ.
06115006a ಯದದ್ಯ ನಿಹತೇನಾಜೌ ಭೀಷ್ಮೇಣ ಜಯಮಿಚ್ಛತಾ।
06115006c ಚೇಷ್ಟಿತಂ ನರಸಿಂಹೇನ ತನ್ಮೇ ಕಥಯ ಸಂಜಯ।।
ಸಂಜಯ! ಇಂದು ಹತನಾದ ಜಯವನ್ನು ಇಚ್ಛಿಸಿದ್ದ ನರಸಿಂಹ ಭೀಷ್ಮನು ಏನೇನು ಮಾಡಿದನೆಂದು ನನಗೆ ಹೇಳು.”
06115007 ಸಂಜಯ ಉವಾಚ।
06115007a ಸಾಯಾಹ್ನೇ ನ್ಯಪತದ್ ಭೂಮೌ ಧಾರ್ತರಾಷ್ಟ್ರಾನ್ವಿಷಾದಯನ್।
06115007c ಪಾಂಚಾಲಾನಾಂ ದದದ್ಧರ್ಷಂ ಕುರುವೃದ್ಧಃ ಪಿತಾಮಹಃ।।
ಸಂಜಯನು ಹೇಳಿದನು: “ಕುರುವೃದ್ಧ ಪಿತಾಮಹನು ಆ ಸಾಯಂಕಾಲ ಧಾರ್ತರಾಷ್ಟ್ರರನ್ನು ವಿಷಾದಗೊಳಿಸಿ ಪಾಂಚಾಲರನ್ನು ಸಂತೋಷಗೊಳಿಸಿ ಭೂಮಿಯ ಮೇಲೆ ಬಿದ್ದನು.
06115008a ಸ ಶೇತೇ ಶರತಲ್ಪಸ್ಥೋ ಮೇದಿನೀಮಸ್ಪೃಶಂಸ್ತದಾ।
06115008c ಭೀಷ್ಮೋ ರಥಾತ್ಪ್ರಪತಿತಃ ಪ್ರಚ್ಯುತೋ ಧರಣೀತಲೇ।।
ರಥದಿಂದ ಜಾರಿ ಧರಣೀ ತಲದಲ್ಲಿ ಬಿದ್ದ ಭೀಷ್ಮನು ಮೇದಿನಿಗೆ ತಾಗದಹಾಗೆ ಶರತಲ್ಪದ ಮೇಲೆ ಮಲಗಿದನು.
06115009a ಹಾ ಹೇತಿ ತುಮುಲಃ ಶಬ್ದೋ ಭೂತಾನಾಂ ಸಮಪದ್ಯತ।
06115009c ಸೀಮಾವೃಕ್ಷೇ ನಿಪತಿತೇ ಕುರೂಣಾಂ ಸಮಿತಿಕ್ಷಯೇ।।
ಕುರುಗಳ ಸೀಮಾವೃಕ್ಷದಂತಿದ್ದ ಅವನು ಬೀಳಲು “ಹಾ! ಹಾ!” ಎಂದು ಭೂತಗಳ ತುಮುಲ ಶಬ್ಧವುಂಟಾಯಿತು.
06115010a ಉಭಯೋಃ ಸೇನಯೋ ರಾಜನ್ ಕ್ಷತ್ರಿಯಾನ್ಭಯಮಾವಿಶತ್।
06115010c ಭೀಷ್ಮಂ ಶಾಂತನವಂ ದೃಷ್ಟ್ವಾ ವಿಶೀರ್ಣಕವಚಧ್ವಜಂ।
06115010e ಕುರವಃ ಪರ್ಯವರ್ತಂತ ಪಾಂಡವಾಶ್ಚ ವಿಶಾಂ ಪತೇ।।
ವಿಶಾಂಪತೇ! ರಾಜನ್! ಎರಡೂ ಸೇನೆಗಳ ಕ್ಷತ್ರಿಯರನ್ನು ಭಯವು ಆವೇಶಗೊಂಡಿತು. ಹರಿದ ಕವಚ ಧ್ವಜಗಳ ಶಾಂತನವ ಭೀಷ್ಮನನ್ನು ನೋಡಿ ಕುರುಗಳೂ ಪಾಂಡವರೂ ಅವನನ್ನು ಸುತ್ತುವರೆದರು.
06115011a ಖಂ ತಮೋವೃತಮಾಸೀಚ್ಚ ನಾಸೀದ್ಭಾನುಮತಃ ಪ್ರಭಾ।
06115011c ರರಾಸ ಪೃಥಿವೀ ಚೈವ ಭೀಷ್ಮೇ ಶಾಂತನವೇ ಹತೇ।।
ಶಾಂತನವ ಭೀಷ್ಮನು ಹತನಾಗಲು ಆಕಾಶದಲ್ಲಿ ಅಂಧಕಾರವು ಕವಿಯಿತು. ಭಾನುಮತನು ಪ್ರಭಾಹೀನನಾದನು. ಭೂಮಿಯೂ ಕೂಡ ಭಯಂಕರ ಶಬ್ಧಮಾಡಿತು.
06115012a ಅಯಂ ಬ್ರಹ್ಮವಿದಾಂ ಶ್ರೇಷ್ಠೋ ಅಯಂ ಬ್ರಹ್ಮವಿದಾಂ ಗತಿಃ।
06115012c ಇತ್ಯಭಾಷಂತ ಭೂತಾನಿ ಶಯಾನಂ ಭರತರ್ಷಭಂ।।
“ಇವನು ಬ್ರಹ್ಮವಿದರಲ್ಲಿ ಶ್ರೇಷ್ಠನು. ಇವನು ಬ್ರಹ್ಮವಿದರ ಗತಿ.” ಎಂದು ಮಲಗಿದ್ದ ಭರತರ್ಷಭನ ಕುರಿತು ಭೂತಗಳು ಮಾತನಾಡಿಕೊಳ್ಳುತ್ತಿದ್ದವು.
06115013a ಅಯಂ ಪಿತರಮಾಜ್ಞಾಯ ಕಾಮಾರ್ತಂ ಶಂತನುಂ ಪುರಾ।
06115013c ಊರ್ಧ್ವರೇತಸಮಾತ್ಮಾನಂ ಚಕಾರ ಪುರುಷರ್ಷಭಃ।।
“ಹಿಂದೆ ಈ ಪುರುಷರ್ಷಭನು ತಂದೆ ಶಂತನುವು ಕಾಮಾರ್ತನಾಗಿದ್ದಾನೆಂದು ತಿಳಿದು ತನ್ನನ್ನು ಊರ್ಧ್ವರೇತಸನನ್ನಾಗಿ ಮಾಡಿಕೊಂಡನು.”
06115014a ಇತಿ ಸ್ಮ ಶರತಲ್ಪಸ್ಥಂ ಭರತಾನಾಮಮಧ್ಯಮಂ।
06115014c ಋಷಯಃ ಪರ್ಯಧಾವಂತ ಸಹಿತಾಃ ಸಿದ್ಧಚಾರಣೈಃ।।
ಹೀಗೆ ಹೇಳುತ್ತ ಶರತಲ್ಪಸ್ಥನಾಗಿದ್ದ ಆ ಭರತರ ಪ್ರಮುಖನ ಕುರಿತಾಗಿ ಸಿದ್ಧ-ಚಾರಣರ ಸಹಿತ ಋಷಿಗಳು ಧಾವಿಸಿ ಬಂದರು.
06115015a ಹತೇ ಶಾಂತನವೇ ಭೀಷ್ಮೇ ಭರತಾನಾಂ ಪಿತಾಮಹೇ।
06115015c ನ ಕಿಂ ಚಿತ್ಪ್ರತ್ಯಪದ್ಯಂತ ಪುತ್ರಾಸ್ತವ ಚ ಭಾರತ।।
ಭಾರತ! ಭರತರ ಪಿತಾಮಹ ಶಾಂತನವ ಭೀಷ್ಮನು ಹತನಾಗಲು ನಿನ್ನ ಪುತ್ರರು ಏನು ಮಾಡಲೂ ಕೂಡ ತಿಳಿಯದಾದರು.
06115016a ವಿವರ್ಣವದನಾಶ್ಚಾಸನ್ಗತಶ್ರೀಕಾಶ್ಚ ಭಾರತ।
06115016c ಅತಿಷ್ಠನ್ವ್ರೀಡಿತಾಶ್ಚೈವ ಹ್ರಿಯಾ ಯುಕ್ತಾ ಹ್ಯಧೋಮುಖಾಃ।।
ಭಾರತ! ಕಾಂತಿಯು ತೊಲಗಿ ವಿಷಣ್ಣವದನರಾದರು. ಲಜ್ಜಿತರಾಗಿ, ನಾಚಿಕೆಯಿಂದ ತಲೆಯನ್ನು ಕೆಳಮಾಡಿ ನಿಂತಿದ್ದರು.
06115017a ಪಾಂಡವಾಶ್ಚ ಜಯಂ ಲಬ್ಧ್ವಾ ಸಂಗ್ರಾಮಶಿರಸಿ ಸ್ಥಿತಾಃ।
06115017c ಸರ್ವೇ ದಧ್ಮುರ್ಮಹಾಶಂಖಾನ್ ಹೇಮಜಾಲಪರಿಷ್ಕೃತಾನ್।।
ಪಾಂಡವರಾದರೋ ಜಯವನ್ನು ಗಳಿಸಿ ಸಂಗ್ರಾಮದ ಅಗ್ರಭಾಗದಲ್ಲಿ ನಿಂತು ಎಲ್ಲರೂ ಸುವರ್ಣಮಯ ಜಾಲಗಳಿಂದ ಅಲಂಕೃತ ಮಹಾ ಶಂಖಗಳನ್ನು ಊದಿದರು.
06115018a ಭೃಶಂ ತೂರ್ಯನಿನಾದೇಷು ವಾದ್ಯಮಾನೇಷು ಚಾನಘ।
06115018c ಅಪಶ್ಯಾಮ ರಣೇ ರಾಜನ್ಭೀಮಸೇನಂ ಮಹಾಬಲಂ।
06115018e ಆಕ್ರೀಡಮಾನಂ ಕೌಂತೇಯಂ ಹರ್ಷೇಣ ಮಹತಾ ಯುತಂ।।
06115019a ನಿಹತ್ಯ ಸಮರೇ ಶತ್ರೂನ್ಮಹಾಬಲಸಮನ್ವಿತಾನ್।
ರಾಜನ್! ಅನಘ! ಸಮರದಲ್ಲಿ ಮಹಾಬಲಸಮನ್ವಿತ ಶತ್ರುಗಳನ್ನು ಹನನಗೊಳಿಸಿ ಅತಿಯಾದ ತೂರ್ಯನಿನಾದಗಳು ವಾದ್ಯಗಳು ಮೊಳಗಲು ರಣದಲ್ಲಿ ಮಹಾಬಲ ಕೌಂತೇಯ ಭೀಮಸೇನನು ಮಹಾ ಹರ್ಷದಿಂದ ಕೂಡಿದವನಾಗಿ ಆಟವಾಡುತ್ತಿರುವುದು ಕಂಡುಬಂದಿತು.
06115019c ಸಮ್ಮೋಹಶ್ಚಾಪಿ ತುಮುಲಃ ಕುರೂಣಾಮಭವತ್ತದಾ।।
06115020a ಕರ್ಣದುರ್ಯೋಧನೌ ಚಾಪಿ ನಿಃಶ್ವಸೇತಾಂ ಮುಹುರ್ಮುಹುಃ।
06115020c ತಥಾ ನಿಪತಿತೇ ಭೀಷ್ಮೇ ಕೌರವಾಣಾಂ ಧುರಂಧರೇ।
06115020e ಹಾಹಾಕಾರಮಭೂತ್ಸರ್ವಂ ನಿರ್ಮರ್ಯಾದಮವರ್ತತ।।
ಕುರುಗಳಲ್ಲಿಯೂ ಕೂಡ ಸಮ್ಮೋಹದ ತುಮುಲವುಂಟಾಯಿತು. ಕರ್ಣ-ದುರ್ಯೋಧನರೂ ಕೌರವರ ಧುರಂಧರರೂ ಭೀಷ್ಮನು ಬೀಳಲು ಪುನಃ ಪುನಃ ಸಿಟ್ಟುಸಿರು ಬಿಡುತ್ತಿದ್ದರು. ಎಲ್ಲಕಡೆ ಹಾಹಾಕಾರವೆದ್ದಿತು. ಎಲ್ಲರೂ ಲೋಕಮರ್ಯಾದೆಯನ್ನು ತೊರೆದು ವರ್ತಿಸತೊಡಗಿದರು.
06115021a ದೃಷ್ಟ್ವಾ ಚ ಪತಿತಂ ಭೀಷ್ಮಂ ಪುತ್ರೋ ದುಃಶಾಸನಸ್ತವ।
06115021c ಉತ್ತಮಂ ಜವಮಾಸ್ಥಾಯ ದ್ರೋಣಾನೀಕಂ ಸಮಾದ್ರವತ್।।
ಭೀಷ್ಮನು ಬಿದ್ದುದನ್ನು ನೋಡಿ ನಿನ್ನ ಪುತ್ರ ದುಃಶಾಸನನು ಉತ್ತಮ ವೇಗದಲ್ಲಿ ದ್ರೋಣನ ಸೇನೆಯತ್ತ ಧಾವಿಸಿ ಹೋದನು.
06115022a ಭ್ರಾತ್ರಾ ಪ್ರಸ್ಥಾಪಿತೋ ವೀರಃ ಸ್ವೇನಾನೀಕೇನ ದಂಶಿತಃ।
06115022c ಪ್ರಯಯೌ ಪುರುಷವ್ಯಾಘ್ರಃ ಸ್ವಸೈನ್ಯಮಭಿಚೋದಯನ್।।
ಅಣ್ಣನಿಂದ ಕಳುಹಿಸಲ್ಪಟ್ಟ ಆ ವೀರ ಪುರುಷವ್ಯಾಘ್ರನು ತನ್ನ ಸೇನೆಯು ದುಃಖಿಸುತ್ತಿರಲು ಅದನ್ನು ಪ್ರಚೋದಿಸುತ್ತಾ ಹೊರಟನು.
06115023a ತಮಾಯಾಂತಮಭಿಪ್ರೇಕ್ಷ್ಯ ಕುರವಃ ಪರ್ಯವಾರಯನ್।
06115023c ದುಃಶಾಸನಂ ಮಹಾರಾಜ ಕಿಮಯಂ ವಕ್ಷ್ಯತೀತಿ ವೈ।।
ಮಹಾರಾಜ! ಬರುತ್ತಿರುವ ದುಃಶಾಸನನನ್ನು ನೋಡಿ ಏನಾಯಿತು ಹೇಳು ಎಂದು ಕುರುಗಳು ಅವನನ್ನು ಸುತ್ತುವರೆದರು.
06115024a ತತೋ ದ್ರೋಣಾಯ ನಿಹತಂ ಭೀಷ್ಮಮಾಚಷ್ಟ ಕೌರವಃ।
06115024c ದ್ರೋಣಸ್ತದಪ್ರಿಯಂ ಶ್ರುತ್ವಾ ಸಹಸಾ ನ್ಯಪತದ್ರಥಾತ್।।
ಆಗ ಕೌರವನು ಭೀಷ್ಮನು ನಿಹತನಾದುದನ್ನು ದ್ರೋಣನಿಗೆ ಹೇಳಿದನು. ಆ ಅಪ್ರಿಯವಾದುದನ್ನು ಕೇಳಿದ ತಕ್ಷಣ ದ್ರೋಣನು ರಥದಿಂದ ಕೆಳಗೆ ಬಿದ್ದನು.
06115025a ಸ ಸಂಜ್ಞಾಮುಪಲಭ್ಯಾಥ ಭಾರದ್ವಾಜಃ ಪ್ರತಾಪವಾನ್।
06115025c ನಿವಾರಯಾಮಾಸ ತದಾ ಸ್ವಾನ್ಯನೀಕಾನಿ ಮಾರಿಷ।।
ಆಗ ಸಂಜ್ಞೆಗಳನ್ನು ಹಿಂದೆ ಪಡೆದು ಪ್ರತಾಪವಾನ ಭಾರದ್ವಾಜನು ತನ್ನ ಸೇನೆಗಳು ಯುದ್ಧವನ್ನು ನಿಲ್ಲಿಸುವಂತೆ ಮಾಡಿದನು.
06115026a ವಿನಿವೃತ್ತಾನ್ಕುರೂನ್ದೃಷ್ಟ್ವಾ ಪಾಂಡವಾಪಿ ಸ್ವಸೈನಿಕಾನ್।
06115026c ದೂತೈಃ ಶೀಘ್ರಾಶ್ವಸಮ್ಯುಕ್ತೈರವಹಾರಮಕಾರಯನ್।।
ಕುರುಗಳು ವಿನಿವೃತ್ತರಾದುದನ್ನು ಕಂಡು ಪಾಂಡವರು ಕೂಡ ಶೀಘ್ರಗ ದೂತರನ್ನು ಕಳುಹಿಸಿ ಎಲ್ಲ ವಲಯಗಳಲ್ಲಿಯೂ ಯುದ್ಧವನ್ನು ನಿಲ್ಲಿಸುವಂತೆ ಮಾಡಿದರು.
06115027a ವಿನಿವೃತ್ತೇಷು ಸೈನ್ಯೇಷು ಪಾರಂಪರ್ಯೇಣ ಸರ್ವಶಃ।
06115027c ವಿಮುಕ್ತಕವಚಾಃ ಸರ್ವೇ ಭೀಷ್ಮಮೀಯುರ್ನರಾಧಿಪಾಃ।।
ಎರಡು ಸೇನೆಗಳು ವಿನಿವೃತ್ತರಾದ ನಂತರ ಪರಂಪರೆಯಂತೆ ಎಲ್ಲ ನರಾಧಿಪರೂ ಕವಚಗಳನ್ನು ಬಿಚ್ಚಿಟ್ಟು ಭೀಷ್ಮನ ಬಳಿ ಬಂದರು.
06115028a ವ್ಯುಪಾರಮ್ಯ ತತೋ ಯುದ್ಧಾದ್ಯೋಧಾಃ ಶತಸಹಸ್ರಶಃ।
06115028c ಉಪತಸ್ಥುರ್ಮಹಾತ್ಮಾನಂ ಪ್ರಜಾಪತಿಮಿವಾಮರಾಃ।।
ಆಗ ನೂರಾರು ಸಹಸ್ರಾರು ಯೋಧರು ಯುದ್ಧದಿಂದ ಹಿಂದಿರುಗಿ ಅಮರರು ಪ್ರಜಾಪತಿಯನ್ನು ಹೇಗೋ ಹಾಗೆ ಆ ಮಹಾತ್ಮನ ಬಳಿಸಾರಿದರು.
06115029a ತೇ ತು ಭೀಷ್ಮಂ ಸಮಾಸಾದ್ಯ ಶಯಾನಂ ಭರತರ್ಷಭಂ।
06115029c ಅಭಿವಾದ್ಯ ವ್ಯತಿಷ್ಠಂತ ಪಾಂಡವಾಃ ಕುರುಭಿಃ ಸಹ।।
ಮಲಗಿದ್ದ ಆ ಭರತರ್ಷಭ ಭೀಷ್ಮನ ಬಳಿಬಂದು ಪಾಂಡವರೂ ಕುರುಗಳೂ ಒಟ್ಟಿಗೇ ಅಭಿವಂದಿಸಿ ನಿಂತುಕೊಂಡರು.
06115030a ಅಥ ಪಾಂಡೂನ್ಕುರೂಂಶ್ಚೈವ ಪ್ರಣಿಪತ್ಯಾಗ್ರತಃ ಸ್ಥಿತಾನ್।
06115030c ಅಭ್ಯಭಾಷತ ಧರ್ಮಾತ್ಮಾ ಭೀಷ್ಮಃ ಶಾಂತನವಸ್ತದಾ।।
ಕೈಮುಗಿದು ಮುಂದೆ ನಿಂತಿದ್ದ ಪಾಂಡವರನ್ನೂ ಕುರುಗಳನ್ನೂ ಉದ್ದೇಶಿಸಿ ಧರ್ಮಾತ್ಮ ಭೀಷ್ಮ ಶಾಂತನವನು ಹೀಗೆ ಹೇಳಿದನು:
06115031a ಸ್ವಾಗತಂ ವೋ ಮಹಾಭಾಗಾಃ ಸ್ವಾಗತಂ ವೋ ಮಹಾರಥಾಃ।
06115031c ತುಷ್ಯಾಮಿ ದರ್ಶನಾಚ್ಚಾಹಂ ಯುಷ್ಮಾಕಮಮರೋಪಮಾಃ।।
“ಮಹಾಭಾಗರೇ! ನಿಮಗೆ ಸ್ವಾಗತ! ಮಹಾರಥರೇ! ನಿಮಗೆ ಸ್ವಾಗತ! ಅಮರೋಪಮರಾಗಿರುವ ನಿಮ್ಮ ದರ್ಶನದಿಂದ ನಾನು ತೃಪ್ತನಾಗಿದ್ದೇನೆ.”
06115032a ಅಭಿನಂದ್ಯ ಸ ತಾನೇವಂ ಶಿರಸಾ ಲಂಬತಾಬ್ರವೀತ್।
06115032c ಶಿರೋ ಮೇ ಲಂಬತೇಽತ್ಯರ್ಥಂ ಉಪಧಾನಂ ಪ್ರದೀಯತಾಂ।।
ಈ ರೀತಿ ಅವರನ್ನು ಅಭಿನಂದಿಸಿ ಅವನು ತನ್ನ ತಲೆಯು ಜೋಲಾಡುತ್ತಿರಲು “ನನ್ನ ಶಿರವು ಜೋಲಾಡುತ್ತಿದೆ. ಇದಕ್ಕೆ ಉಪಧಾನವನ್ನು ನೀಡಿ!” ಎಂದು ಹೇಳಿದನು.
06115033a ತತೋ ನೃಪಾಃ ಸಮಾಜಹ್ರುಸ್ತನೂನಿ ಚ ಮೃದೂನಿ ಚ।
06115033c ಉಪಧಾನಾನಿ ಮುಖ್ಯಾನಿ ನೈಚ್ಛತ್ತಾನಿ ಪಿತಾಮಹಃ।।
ಆಗ ನೃಪರು ಕೋಮಲವೂ ಮೃದುವೂ ಆದ ಹಲವು ತಲೆದಿಂಬುಗಳನ್ನು ತಂದರು. ಆದರೆ ಪಿತಾಮಹನು ಅವುಗಳ್ಯಾವುದನ್ನೂ ಇಷ್ಟಪಡಲಿಲ್ಲ.
06115034a ಅಬ್ರವೀಚ್ಚ ನರವ್ಯಾಘ್ರಃ ಪ್ರಹಸನ್ನಿವ ತಾನ್ನೃಪಾನ್।
06115034c ನೈತಾನಿ ವೀರಶಯ್ಯಾಸು ಯುಕ್ತರೂಪಾಣಿ ಪಾರ್ಥಿವಾಃ।।
ನರವ್ಯಾಘ್ರನು ನಗುತ್ತಾ ಆ ನೃಪರಿಗೆ ಹೇಳಿದನು: “ಪಾರ್ಥಿವರೇ! ವೀರಶಯ್ಯೆಗೆ ಇವು ತಕ್ಕುದಾದವಲ್ಲ!”
06115035a ತತೋ ವೀಕ್ಷ್ಯ ನರಶ್ರೇಷ್ಠಮಭ್ಯಭಾಷತ ಪಾಂಡವಂ।
06115035c ಧನಂಜಯಂ ದೀರ್ಘಬಾಹುಂ ಸರ್ವಲೋಕಮಹಾರಥಂ।।
ಆಗ ಸರ್ವಲೋಕಮಹಾರಥ ದೀರ್ಘಬಾಹು ಪಾಂಡವ ನರಶ್ರೇಷ್ಠ ಧನಂಜಯನನ್ನು ವೀಕ್ಷಿಸಿ ಹೇಳಿದನು:
06115036a ಧನಂಜಯ ಮಹಾಬಾಹೋ ಶಿರಸೋ ಮೇಽಸ್ಯ ಲಂಬತಃ।
06115036c ದೀಯತಾಂ ಉಪಧಾನಂ ವೈ ಯದ್ಯುಕ್ತಮಿಹ ಮನ್ಯಸೇ।।
“ಧನಂಜಯ ಮಹಾಬಾಹೋ! ನನ್ನ ಈ ಶಿರಸ್ಸು ಜೋಲಾಡುತ್ತಿದೆ. ಇದಕ್ಕೆ ಯುಕ್ತವಾದುದು ಏನೆಂದು ನೀನು ಯೋಚಿಸುತ್ತೀಯೋ ಅಂತಹ ತಲೆದಿಂಬನ್ನು ನೀಡು!”
06115037a ಸ ಸಂನ್ಯಸ್ಯ ಮಹಚ್ಚಾಪಮಭಿವಾದ್ಯ ಪಿತಾಮಹಂ।
06115037c ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ಇದಂ ವಚನಮಬ್ರವೀತ್।।
ಅವನು ಮಹಾಚಾಪವನ್ನು ಕೆಳಗಿಟ್ಟು, ಪಿತಾಮಹನನ್ನು ನಮಸ್ಕರಿಸಿ, ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಸಿಕೊಂಡು ಈ ಮಾತನ್ನಾಡಿದನು:
06115038a ಆಜ್ಞಾಪಯ ಕುರುಶ್ರೇಷ್ಠ ಸರ್ವಶಸ್ತ್ರಭೃತಾಂ ವರ।
06115038c ಪ್ರೇಷ್ಯೋಽಹಂ ತವ ದುರ್ಧರ್ಷ ಕ್ರಿಯತಾಂ ಕಿಂ ಪಿತಾಮಹ।।
“ಕುರುಶ್ರೇಷ್ಠ! ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ! ಆಜ್ಞಾಪಿಸು! ದುರ್ಧರ್ಷ! ಪಿತಾಮಹ! ನಾನು ನಿನ್ನ ಸೇವಕ. ಏನು ಮಾಡಲಿ?”
06115039a ತಮಬ್ರವೀಚ್ಚಾಂತನವಃ ಶಿರೋ ಮೇ ತಾತ ಲಂಬತೇ।
06115039c ಉಪಧಾನಂ ಕುರುಶ್ರೇಷ್ಠ ಫಲ್ಗುನೋಪನಯಸ್ವ ಮೇ।
06115039e ಶಯನಸ್ಯಾನುರೂಪಂ ಹಿ ಶೀಘ್ರಂ ವೀರ ಪ್ರಯಚ್ಛ ಮೇ।।
ಶಾಂತನವನು ಅವನಿಗೆ ಹೇಳಿದನು: “ಮಗೂ! ನನ್ನ ಶಿರವು ಜೋಲಾಡುತ್ತಿದೆ. ಕುರುಶ್ರೇಷ್ಠ! ಫಲ್ಗುನ! ನನಗೆ ತಲೆದಿಂಬನ್ನು ಮಾಡಿಕೊಡು. ವೀರ! ಈ ಶಯನಕ್ಕೆ ಅನುರೂಪವಾದುದನ್ನು ಶೀಘ್ರವಾಗಿ ನೀಡು!
06115040a ತ್ವಂ ಹಿ ಪಾರ್ಥ ಮಹಾಬಾಹೋ ಶ್ರೇಷ್ಠಃ ಸರ್ವಧನುಷ್ಮತಾಂ।
06115040c ಕ್ಷತ್ರಧರ್ಮಸ್ಯ ವೇತ್ತಾ ಚ ಬುದ್ಧಿಸತ್ತ್ವಗುಣಾನ್ವಿತಃ।।
ಪಾರ್ಥ! ಮಹಾಬಾಹೋ! ಏಕೆಂದರೆ ನೀನು ಸರ್ವಧನುಷ್ಮತರಲ್ಲಿ ಶ್ರೇಷ್ಠ. ಕ್ಷತ್ರಧರ್ಮವನ್ನು ತಿಳಿದಿರುವೆ. ಬುದ್ಧಿಸತ್ತ್ವಗುಣಾನ್ವಿತನಾಗಿರುವೆ.”
06115041a ಫಲ್ಗುನಸ್ತು ತಥೇತ್ಯುಕ್ತ್ವಾ ವ್ಯವಸಾಯಪುರೋಜವಃ।
06115041c ಪ್ರಗೃಹ್ಯಾಮಂತ್ರ್ಯ ಗಾಂಡೀವಂ ಶರಾಂಶ್ಚ ನತಪರ್ವಣಃ।।
ಫಲ್ಗುನನಾದರೋ ಹಾಗೆಯೇ ಆಗಲೆಂದು ಹೇಳಿ ಅವನ ಹೇಳಿಕೆಯನ್ನು ಪೂರೈಸಲು ತೊಡಗಿದನು. ಗಾಂಡೀವವನ್ನು ಹಿಡಿದು ನತಪರ್ವಣ ಶರಗಳನ್ನು ಅಭಿಮಂತ್ರಿಸಿದನು.
06115042a ಅನುಮಾನ್ಯ ಮಹಾತ್ಮಾನಂ ಭರತಾನಾಮಮಧ್ಯಮಂ।
06115042c ತ್ರಿಭಿಸ್ತೀಕ್ಷ್ಣೈರ್ಮಹಾವೇಗೈರುದಗೃಹ್ಣಾಚ್ಚಿರಃ ಶರೈಃ।।
ಭರತರ ಪ್ರಮುಖ ಆ ಮಹಾತ್ಮನ ಅನುಮತಿಯನ್ನು ಪಡೆದು ಮಹಾವೇಗದ ಮೂರು ತೀಕ್ಷ್ಣ ಬಾಣಗಳಿಂದ ಅವನ ಶಿರವನ್ನು ಮೇಲಕ್ಕೆತ್ತಿಸಿದನು.
06115043a ಅಭಿಪ್ರಾಯೇ ತು ವಿದಿತೇ ಧರ್ಮಾತ್ಮಾ ಸವ್ಯಸಾಚಿನಾ।
06115043c ಅತುಷ್ಯದ್ಭರತಶ್ರೇಷ್ಠೋ ಭೀಷ್ಮೋ ಧರ್ಮಾರ್ಥತತ್ತ್ವವಿತ್।।
ಅಭಿಪ್ರಾಯವನ್ನು ತಿಳಿದುಕೊಂಡ ಧರ್ಮಾತ್ಮ ಸವ್ಯಸಾಚಿಯಿಂದ ಧರ್ಮಾರ್ಥತತ್ತ್ವವಿದು ಭರತಶ್ರೇಷ್ಠ ಭೀಷ್ಮನು ಸಂತುಷ್ಟನಾದನು.
06115044a ಉಪಧಾನೇನ ದತ್ತೇನ ಪ್ರತ್ಯನಂದದ್ಧನಂಜಯಂ।
06115044c ಕುಂತೀಪುತ್ರಂ ಯುಧಾಂ ಶ್ರೇಷ್ಠಂ ಸುಹೃದಾಂ ಪ್ರೀತಿವರ್ಧನಂ।।
ನೀಡಿದ ತಲೆದಿಂಬಿಗಾಗಿ ಕುಂತೀಪುತ್ರ ಯೋಧರಲ್ಲಿ ಶ್ರೇಷ್ಠ, ಸುಹೃದಯರ ಪ್ರೀತಿವರ್ಧಕ ಧನಂಜಯನನ್ನು ಪ್ರತಿನಂದಿಸಿದನು:
06115045a ಅನುರೂಪಂ ಶಯಾನಸ್ಯ ಪಾಂಡವೋಪಹಿತಂ ತ್ವಯಾ।
06115045c ಯದ್ಯನ್ಯಥಾ ಪ್ರವರ್ತೇಥಾಃ ಶಪೇಯಂ ತ್ವಾಮಹಂ ರುಷಾ।।
“ಪಾಂಡವ! ಹಾಸಿಗೆಗೆ ತಕ್ಕುದಾದ ತಲೆದಿಂಬನ್ನೇ ಒದಗಿಸಿಕೊಟ್ಟಿದ್ದೀಯೆ. ಬೇರೆ ಏನನ್ನಾದರೂ ಕೊಟ್ಟಿದ್ದರೆ ಸಿಟ್ಟಿನಿಂದ ನಾನು ನಿನ್ನನ್ನು ಶಪಿಸುತ್ತಿದ್ದೆ.
06115046a ಏವಮೇತನ್ಮಹಾಬಾಹೋ ಧರ್ಮೇಷು ಪರಿನಿಷ್ಠಿತಂ।
06115046c ಸ್ವಪ್ತವ್ಯಂ ಕ್ಷತ್ರಿಯೇಣಾಜೌ ಶರತಲ್ಪಗತೇನ ವೈ।।
ಮಹಾಬಾಹೋ! ಧರ್ಮದಲ್ಲಿ ನಿಷ್ಠೆಯನ್ನಿಟ್ಟಿರುವ ಕ್ಷತ್ರಿಯರು ಇದೇ ರೀತಿಯ ಶರತಲ್ಪದ ಮೇಲೆ ಮಲಗಬೇಕು.”
06115047a ಏವಮುಕ್ತ್ವಾ ತು ಬೀಭತ್ಸುಂ ಸರ್ವಾಂಸ್ತಾನಬ್ರವೀದ್ವಚಃ।
06115047c ರಾಜ್ಞಶ್ಚ ರಾಜಪುತ್ರಾಂಶ್ಚ ಪಾಂಡವೇನಾಭಿ ಸಂಸ್ಥಿತಾನ್।।
ಬೀಭತ್ಸುವಿಗೆ ಹೀಗೆ ಹೇಳಿ ಪಾಂಡವರ ಹತ್ತಿರ ನಿಂತಿದ್ದ ಎಲ್ಲ ರಾಜರು ಮತ್ತು ರಾಜಪುತ್ರರಿಗೆ ಹೇಳಿದನು:
06115048a ಶಯೇಯಮಸ್ಯಾಂ ಶಯ್ಯಾಯಾಂ ಯಾವದಾವರ್ತನಂ ರವೇಃ।
06115048c ಯೇ ತದಾ ಪಾರಯಿಷ್ಯಂತಿ ತೇ ಮಾಂ ದ್ರಕ್ಷ್ಯಂತಿ ವೈ ನೃಪಾಃ।।
“ನೃಪರೇ! ಈ ಹಾಸಿಗೆಯನ್ನು ನೋಡಿ. ಈ ಶಯ್ಯೆಯಲ್ಲಿಯೇ ನಾನು ರವಿಯ ಆವರ್ತನದವರೆಗೆ ಮಲಗಿರುತ್ತೇನೆ.
06115049a ದಿಶಂ ವೈಶ್ರವಣಾಕ್ರಾಂತಾಂ ಯದಾ ಗಂತಾ ದಿವಾಕರಃ।
06115049c ಅರ್ಚಿಷ್ಮಾನ್ಪ್ರತಪಽಲ್ಲೋಕಾನ್ರಥೇನೋತ್ತಮತೇಜಸಾ।
06115049e ವಿಮೋಕ್ಷ್ಯೇಽಹಂ ತದಾ ಪ್ರಾಣಾನ್ಸುಹೃದಃ ಸುಪ್ರಿಯಾನಪಿ।।
ಯಾವಾಗ ವೈಶ್ರವಣನಿರುವ ದಿಕ್ಕಿಗೆ ಉತ್ತಮ ತೇಜಸ್ಸಿನ ರಥದಲ್ಲಿ ಕಿರಣಗಳಿಂದ ಲೋಕಗಳನ್ನು ಸುಡುತ್ತಾ ದಿವಾಕರನು ಹೋಗುತ್ತಾನೋ ಆವಾಗ ನಾನು ಸುಹೃದವೂ ಸುಪ್ರಿಯವೂ ಆದ ಪ್ರಾಣಗಳನ್ನು ಬಿಡುತ್ತೇನೆ.
06115050a ಪರಿಖಾ ಖನ್ಯತಾಮತ್ರ ಮಮಾವಸದನೇ ನೃಪಾಃ।
06115050c ಉಪಾಸಿಷ್ಯೇ ವಿವಸ್ವಂತಮೇವಂ ಶರಶತಾಚಿತಃ।
06115050e ಉಪಾರಮಧ್ವಂ ಸಂಗ್ರಾಮಾದ್ವೈರಾಣ್ಯುತ್ಸೃಜ್ಯ ಪಾರ್ಥಿವಾಃ।।
ನೃಪರೇ! ನಾನಿರುವ ಇಲ್ಲಿ ಸುತ್ತಲೂ ಕಂದಕವನ್ನು ತೋಡಿರಿ. ನೂರಾರು ಶರಗಳಿಂದ ಚುಚ್ಚಲ್ಪಟ್ಟ ನಾನು ಇಲ್ಲಿಯೇ ವಿವಸ್ವತನನ್ನು ಧ್ಯಾನಿಸುತ್ತಿರುತ್ತೇನೆ. ಪಾರ್ಥಿವರೇ! ಈಗಲಾದರೂ ನೀವು ವೈರತ್ವವನ್ನು ಬಿಸುಟು ಯುದ್ಧದಿಂದ ವಿರತರಾಗಿರಿ!”
06115051a ಉಪಾತಿಷ್ಠನ್ನಥೋ ವೈದ್ಯಾಃ ಶಲ್ಯೋದ್ಧರಣಕೋವಿದಾಃ।
06115051c ಸರ್ವೋಪಕರಣೈರ್ಯುಕ್ತಾಃ ಕುಶಲಾಸ್ತೇ ಸುಶಿಕ್ಷಿತಾಃ।।
ಆಗ ಶರೀರದಲ್ಲಿ ಚುಚ್ಚುಕೊಂಡಿರುವ ಬಾಣಗಳನ್ನು ತೆಗೆಯುವುದರಲ್ಲಿ ಕುಶಲರಾದ ಸಕಲವಿಧದ ಉಪಕರಣಗಳಿಂದಲೂ ಯುಕ್ತರಾದ ಕುಶಲರೂ ಸುಶಿಕ್ಷಿತರೂ ಆದ ವೈದ್ಯರು ಬಂದರು.
06115052a ತಾನ್ದೃಷ್ಟ್ವಾ ಜಾಹ್ನವೀಪುತ್ರಃ ಪ್ರೋವಾಚ ವಚನಂ ತದಾ।
06115052c ದತ್ತದೇಯಾ ವಿಸೃಜ್ಯಂತಾಂ ಪೂಜಯಿತ್ವಾ ಚಿಕಿತ್ಸಕಾಃ।।
ಅವರನ್ನು ನೋಡಿ ಜಾಹ್ನವೀ ಪುತ್ರನು ಈ ಮಾತುಗಳನ್ನು ಹೇಳಿದನು: “ಈ ಚಿಕಿತ್ಸಕರಿಗೆ ಕೊಡಬೇಕಾದುದನ್ನು ಕೊಟ್ಟು ಗೌರವಿಸಿ ಕಳುಹಿಸಿಕೊಡಿ.
06115053a ಏವಂಗತೇ ನ ಹೀದಾನೀಂ ವೈದ್ಯೈಃ ಕಾರ್ಯಮಿಹಾಸ್ತಿ ಮೇ।
06115053c ಕ್ಷತ್ರಧರ್ಮಪ್ರಶಸ್ತಾಂ ಹಿ ಪ್ರಾಪ್ತೋಽಸ್ಮಿ ಪರಮಾಂ ಗತಿಂ।।
ನಾನು ಈ ಅವಸ್ಥೆಯಲ್ಲಿರುವಾಗ ವೈದ್ಯರಿಗೆ ಇಲ್ಲಿ ಯಾವ ಕೆಲಸವೂ ಇಲ್ಲ. ಕ್ಷತ್ರಧರ್ಮವು ಪ್ರಶಂಸೆಮಾಡುವ ಉತ್ತಮ ಗತಿಯನ್ನು ನಾನು ಹೊಂದಿದ್ದೇನೆ.
06115054a ನೈಷ ಧರ್ಮೋ ಮಹೀಪಾಲಾಃ ಶರತಲ್ಪಗತಸ್ಯ ಮೇ।
06115054c ಏತೈರೇವ ಶರೈಶ್ಚಾಹಂ ದಗ್ಧವ್ಯೋಽಂತೇ ನರಾಧಿಪಾಃ।।
ಮಹೀಪಾಲರೇ! ಶರತಲ್ಪಗತನಾಗಿರುವ ನನಗೆ ಇದು ಧರ್ಮವಾಗುವುದಿಲ್ಲ. ನರಾಧಿಪರೇ! ಈ ಬಾಣಗಳೊಂದಿಗೇ ಅಂತ್ಯದಲ್ಲಿ ದಗ್ಧನಾಗಬೇಕೆಂದು ಇಚ್ಚಿಸುತ್ತೇನೆ.”
06115055a ತಚ್ಚ್ರುತ್ವಾ ವಚನಂ ತಸ್ಯ ಪುತ್ರೋ ದುರ್ಯೋಧನಸ್ತವ।
06115055c ವೈದ್ಯಾನ್ವಿಸರ್ಜಯಾಮಾಸ ಪೂಜಯಿತ್ವಾ ಯಥಾರ್ಹತಃ।।
ಅವನ ಆ ಮಾತನ್ನು ಕೇಳಿ ನಿನ್ನ ಪುತ್ರ ದುರ್ಯೋಧನನು ಯಥಾರ್ಹವಾಗಿ ವೈದ್ಯರನ್ನು ಗೌರವಿಸಿ ಕಳುಹಿಸಿಕೊಟ್ಟನು.
06115056a ತತಸ್ತೇ ವಿಸ್ಮಯಂ ಜಗ್ಮುರ್ನಾನಾಜನಪದೇಶ್ವರಾಃ।
06115056c ಸ್ಥಿತಿಂ ಧರ್ಮೇ ಪರಾಂ ದೃಷ್ಟ್ವಾ ಭೀಷ್ಮಸ್ಯಾಮಿತತೇಜಸಃ।।
ಅಮಿತತೇಜಸ್ವಿ ಭೀಷ್ಮನ ಪರಮ ಧರ್ಮನಿಷ್ಠೆಯನ್ನು ನೋಡಿ ನಾನಾ ಜನಪದೇಶ್ವರರು ವಿಸ್ಮಯಗೊಂಡರು.
06115057a ಉಪಧಾನಂ ತತೋ ದತ್ತ್ವಾ ಪಿತುಸ್ತವ ಜನೇಶ್ವರ।
06115057c ಸಹಿತಾಃ ಪಾಂಡವಾಃ ಸರ್ವೇ ಕುರವಶ್ಚ ಮಹಾರಥಾಃ।।
06115058a ಉಪಗಮ್ಯ ಮಹಾತ್ಮಾನಂ ಶಯಾನಂ ಶಯನೇ ಶುಭೇ।
06115058c ತೇಽಭಿವಾದ್ಯ ತತೋ ಭೀಷ್ಮಂ ಕೃತ್ವಾ ಚಾಭಿಪ್ರದಕ್ಷಿಣಂ।।
ಜನೇಶ್ವರ! ನಿನ್ನ ತಂದೆಗೆ ತಲೆದಿಂಬನ್ನು ಮಾಡಿಕೊಟ್ಟು ಪಾಂಡವರು ಮತ್ತು ಕೌರವರ ಸಹಿತ ಎಲ್ಲ ಮಹಾರಥರೂ ಶುಭ ಶಯನದಲ್ಲಿ ಮಲಗಿದ್ದ ಮಹಾತ್ಮ ಭೀಷ್ಮನ ಬಳಿಸಾರಿ ಪ್ರದಕ್ಷಿಣೆಗಳನ್ನೂ ಮಾಡಿ ಅಭಿವಂದಿಸಿದರು.
06115059a ವಿಧಾಯ ರಕ್ಷಾಂ ಭೀಷ್ಮಸ್ಯ ಸರ್ವ ಏವ ಸಮಂತತಃ।
06115059c ವೀರಾಃ ಸ್ವಶಿಬಿರಾಣ್ಯೇವ ಧ್ಯಾಯಂತಃ ಪರಮಾತುರಾಃ।।
06115059e ನಿವೇಶಾಯಾಭ್ಯುಪಾಗಚ್ಛನ್ಸಾಯಾಹ್ನೇ ರುಧಿರೋಕ್ಷಿತಾಃ।।
ಭೀಷ್ಮನಿಗೆ ಎಲ್ಲ ಕಡೆಗಳಿಂದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಸಾಯಂಕಾಲ ರಕ್ತಸಿಕ್ತರಾದ ವೀರರು ತಮ್ಮ ತಮ್ಮ ಶಿಬಿರಗಳನ್ನು ಸ್ಮರಿಸಿಕೊಳ್ಳುತ್ತಾ ಪರಮ ಆತುರದಿಂದ ಬಿಡಾರಗಳಿಗೆ ತೆರಳಿದರು.
06115060a ನಿವಿಷ್ಟಾನ್ಪಾಂಡವಾಂಶ್ಚಾಪಿ ಪ್ರೀಯಮಾಣಾನ್ಮಹಾರಥಾನ್।
06115060c ಭೀಷ್ಮಸ್ಯ ಪತನಾದ್ಧೃಷ್ಟಾನುಪಗಮ್ಯ ಮಹಾರಥಾನ್।।
06115060e ಉವಾಚ ಯಾದವಃ ಕಾಲೇ ಧರ್ಮಪುತ್ರಂ ಯುಧಿಷ್ಠಿರಂ।।
ಭೀಷ್ಮನ ಪತನದಿಂದ ಹೃಷ್ಟರಾಗಿ, ಪರಮ ಪ್ರೀತರಾಗಿದ್ದ ಮಹಾರಥ ಪಾಂಡವರ ಬಳಿಬಂದು ಯಾದವನು ಕಾಲಕ್ಕೆ ತಕ್ಕಂತೆ ಧರ್ಮಪುತ್ರ ಯುಧಿಷ್ಠಿರನಿಗೆ ಹೇಳಿದನು:
06115061a ದಿಷ್ಟ್ಯಾ ಜಯಸಿ ಕೌರವ್ಯ ದಿಷ್ಟ್ಯಾ ಭೀಷ್ಮೋ ನಿಪಾತಿತಃ।
06115061c ಅವಧ್ಯೋ ಮಾನುಷೈರೇಷ ಸತ್ಯಸಂಧೋ ಮಹಾರಥಃ।।
06115062a ಅಥ ವಾ ದೈವತೈಃ ಪಾರ್ಥ ಸರ್ವಶಸ್ತ್ರಾಸ್ತ್ರಪಾರಗಃ।
06115062c ತ್ವಾಂ ತು ಚಕ್ಷುರ್ಹಣಂ ಪ್ರಾಪ್ಯ ದಗ್ಧೋ ಘೋರೇಣ ಚಕ್ಷುಷಾ।।
“ಕೌರವ್ಯ! ಅದೃಷ್ಟವಷಾತ್ ವಿಜಯಿಗಾಗಿರುವೆ. ಅದೃಷ್ಟವಷಾತ್ ಭೀಷ್ಮನು ಕೆಳಗುರುಳಿದನು. ಪಾರ್ಥ! ಈ ಸತ್ಯಸಂಧ ಮಹಾರಥನು, ಸರ್ವಶಸ್ತ್ರಪಾರಗನು ಮನುಷ್ಯರಿಂದ ಅಥವಾ ದೇವತೆಗಳಿಂದ ಅವಧ್ಯ. ಕೇವಲ ದೃಷ್ಟಿಪಾತದಿಂದಲೇ ಇತರರನ್ನು ಧ್ವಂಸಮಾಡಬಲ್ಲ ನಿನ್ನನ್ನು ಸಮೀಪಿಸಿದ ಅವನು ನಿನ್ನ ಘೋರ ದೃಷ್ಟಿಯಿಂದಲೇ ದಗ್ಧನಾದನು.”
06115063a ಏವಮುಕ್ತೋ ಧರ್ಮರಾಜಃ ಪ್ರತ್ಯುವಾಚ ಜನಾರ್ದನಂ।
06115063c ತವ ಪ್ರಸಾದಾದ್ವಿಜಯಃ ಕ್ರೋಧಾತ್ತವ ಪರಾಜಯಃ।।
06115063e ತ್ವಂ ಹಿ ನಃ ಶರಣಂ ಕೃಷ್ಣ ಭಕ್ತಾನಾಮಭಯಂಕರಃ।।
ಹೀಗೆ ಹೇಳಿದ ಜನಾರ್ದನನಿಗೆ ಧರ್ಮರಾಜನು ಉತ್ತರಿಸಿದನು: “ನಿನ್ನ ಪ್ರಸಾದದಿಂದ ಜಯ. ನಿನ್ನ ಕ್ರೋಧದಿಂದ ಪರಾಜಯ. ಭಕ್ತರಿಗೆ ಅಭಯಂಕರನಾಗಿರುವ ಕೃಷ್ಣ! ನೀನೇ ನಮಗೆ ಶರಣ್ಯ.
06115064a ಅನಾಶ್ಚರ್ಯೋ ಜಯಸ್ತೇಷಾಂ ಯೇಷಾಂ ತ್ವಮಸಿ ಕೇಶವ।
06115064c ರಷ್ಕಿತಾ ಸಮರೇ ನಿತ್ಯಂ ನಿತ್ಯಂ ಚಾಪಿ ಹಿತೇ ರತಃ।
06115064e ಸರ್ವಥಾ ತ್ವಾಂ ಸಮಾಸಾದ್ಯ ನಾಶ್ಚರ್ಯಮಿತಿ ಮೇ ಮತಿಃ।।
ಕೇಶವ! ನೀನು ಯಾರವನಾಗಿರುವೆಯೋ ಅವರಿಗೆ ಜಯವೊದಗಿದರೆ ಆಶ್ಚರ್ಯವೇನಿಲ್ಲ. ಸಮರದಲ್ಲಿ ನಿತ್ಯವೂ ನೀನು ನಮಗೆ ರಕ್ಷಕ. ನಿತ್ಯವೂ ನೀನು ನಮ್ಮ ಹಿತರತ. ಸರ್ವಥಾ ನಿನ್ನನ್ನು ಪಡೆದಿರುವಾಗ ಇದು ಆಶ್ಚರ್ಯವೇನಲ್ಲ ಎಂದು ನನಗನ್ನಿಸುತ್ತದೆ.”
06115065a ಏವಮುಕ್ತಃ ಪ್ರತ್ಯುವಾಚ ಸ್ಮಯಮಾನೋ ಜನಾರ್ದನಃ।
06115065c ತ್ವಯ್ಯೇವೈತದ್ಯುಕ್ತರೂಪಂ ವಚನಂ ಪಾರ್ಥಿವೋತ್ತಮ।।
ಹೀಗೆ ಹೇಳಿದುದಕ್ಕೆ ಮುಗುಳ್ನಕ್ಕು ಜನಾರ್ದನನು “ಪಾರ್ಥಿವೋತ್ತಮ! ಈ ಮಾತು ನಿನಗೆ ಯುಕ್ತರೂಪವೇ ಆಗಿದೆ” ಎಂದು ಉತ್ತರಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮೋಪಧಾನದಾನೇ ಪಂಚದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮೋಪಧಾನದಾನ ಎನ್ನುವ ನೂರಾಹದಿನೈದನೇ ಅಧ್ಯಾಯವು.