ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 114
ಸಾರ
ಶಿಖಂಡಿ-ಅರ್ಜುನರು ಒಂದೇ ಸಮನೆ ಬಾಣಪ್ರಯೋಗಿಸಿ ಆಕ್ರಮಣಿಸುತ್ತಿರಲು ಮೃತ್ಯುವಿನ ಕಾಲವು ತನಗೆ ಬಂದೊದಗಿದೆ ಎಂದು ಭೀಷ್ಮನು ಯೋಚಿಸಿದುದು, ಮತ್ತು ವಸುಗಳು ಅದನ್ನು ಅನುಮೋದಿಸಿದುದು (1-40). ಅರ್ಜುನನು ಭೀಷ್ಮನನ್ನು ಹೊಡೆದು ಶರಶಯ್ಯೆಯ ಮೇಲೆ ಮಲಗಿಸಿದುದು (41-112).
06114001 ಸಂಜಯ ಉವಾಚ।
06114001a ಏವಂ ತೇ ಪಾಂಡವಾಃ ಸರ್ವೇ ಪುರಸ್ಕೃತ್ಯ ಶಿಖಂಡಿನಂ।
06114001c ವಿವ್ಯಧುಃ ಸಮರೇ ಭೀಷ್ಮಂ ಪರಿವಾರ್ಯ ಸಮಂತತಃ।।
ಸಂಜಯನು ಹೇಳಿದನು: “ಹೀಗೆ ಆ ಪಾಂಡವರೆಲ್ಲರೂ ಸಮರದಲ್ಲಿ ಶಿಖಂಡಿಯನ್ನು ಮುಂದಿರಿಸಿಕೊಂಡು ಭೀಷ್ಮನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ಹೊಡೆಯತೊಡಗಿದರು.
06114002a ಶತಘ್ನೀಭಿಃ ಸುಘೋರಾಭಿಃ ಪಟ್ಟಿಶೈಃ ಸಪರಶ್ವಧೈಃ।
06114002c ಮುದ್ಗರೈರ್ಮುಸಲೈಃ ಪ್ರಾಸೈಃ ಕ್ಷೇಪಣೀಭಿಶ್ಚ ಸರ್ವಶಃ।।
06114003a ಶರೈಃ ಕನಕಪುಂಖೈಶ್ಚ ಶಕ್ತಿತೋಮರಕಂಪನೈಃ।
06114003c ನಾರಾಚೈರ್ವತ್ಸದಂತೈಶ್ಚ ಭುಶುಂಡೀಭಿಶ್ಚ ಭಾರತ।।
06114003e ಅತಾಡಯನ್ರಣೇ ಭೀಷ್ಮಂ ಸಹಿತಾಃ ಸರ್ವಸೃಂಜಯಾಃ।।
ಭಾರತ! ಸುಘೋರ ಶತಘ್ನಿ, ಪಟ್ಟಿಶ, ಪರಶು, ಮುದ್ಗರ, ಮುಸಲ, ಪ್ರಾಸ, ಕ್ಷಿಪಣಿಗಳಿಂದ, ಕನಕಪುಂಖಗಳ ಶರಗಳಿಂದ, ಕಂಪಿಸುತ್ತಿರುವ ಶಕ್ತಿ ತೋಮರಗಳಿಂದ, ನಾರಾಚ, ವತ್ಸದಂತ ಮತ್ತು ಭುಶುಂಡಿಗಳಿಂದ ಎಲ್ಲ ಕಡೆಗಳಿಂದ ಎಲ್ಲ ಸೃಂಜಯರೂ ಸೇರಿಕೊಂಡು ಭೀಷ್ಮನನ್ನು ಹೊಡೆದರು.
06114004a ಸ ವಿಶೀರ್ಣತನುತ್ರಾಣಃ ಪೀಡಿತೋ ಬಹುಭಿಸ್ತದಾ।
06114004c ವಿವ್ಯಥೇ ನೈವ ಗಾಂಗೇಯೋ ಭಿದ್ಯಮಾನೇಷು ಮರ್ಮಸು।।
ಅವು ದೇಹವನ್ನು ಹೊಕ್ಕು ಬಹುವಾಗಿ ತ್ರಾಣಪೀಡಿತನಾದರೂ ಮರ್ಮಗಳನ್ನು ಭೇದಿಸಿದರೂ ಗಾಂಗೇಯನು ವ್ಯಥೆಪಡಲಿಲ್ಲ.
06114005a ಸ ದೀಪ್ತಶರಚಾಪಾರ್ಚಿರಸ್ತ್ರಪ್ರಸೃತಮಾರುತಃ।
06114005c ನೇಮಿನಿರ್ಹ್ರಾದಸಂನಾದೋ ಮಹಾಸ್ತ್ರೋದಯಪಾವಕಃ।।
06114006a ಚಿತ್ರಚಾಪಮಹಾಜ್ವಾಲೋ ವೀರಕ್ಷಯಮಹೇಂಧನಃ।
06114006c ಯುಗಾಂತಾಗ್ನಿಸಮೋ ಭೀಷ್ಮಃ ಪರೇಷಾಂ ಸಮಪದ್ಯತ।।
ಆದರೆ ಭೀಷ್ಮನು ಶತ್ರುಗಳಿಗೆ ಯುಗಾಂತದ ಅಗ್ನಿಯ ಸಮನಾಗಿ ತೋರಿದನು. ಉರಿಯುತ್ತಿರುವ ಅವನ ಶರಚಾಪಗಳೇ ಶಿಖೆಗಳಾಗಿದ್ದವು, ಬಾಣ ಪ್ರಯೋಗದ ವೇಗವೇ ಅಗ್ನಿಯ ಸಖ ಮಾರುತದಂತಿತ್ತು. ಅವನ ರಥ ಚಕ್ರಗಳ ಸಂನಾದವು ಅಗ್ನಿಯಿಂದ ಹೊರಡುವ ಚಟ ಚಟ ಶಬ್ಧವಾಗಿತ್ತು. ಮಹಾಅಸ್ತ್ರಗಳಿಂದಲೇ ಅಗ್ನಿಯು ಉದಯಿಸುವಂತಿದ್ದವು. ಬಣ್ಣದ ಚಾಪವೇ ಮಹಾಜ್ವಾಲೆಯಾಗಿತ್ತು. ವೀರರ ಕ್ಷಯವೆಂಬುದೇ ಇಂಧನವಾಗಿತ್ತು.
06114007a ನಿಪತ್ಯ ರಥಸಂಘಾನಾಮಂತರೇಣ ವಿನಿಃಸೃತಃ।
06114007c ದೃಶ್ಯತೇ ಸ್ಮ ನರೇಂದ್ರಾಣಾಂ ಪುನರ್ಮಧ್ಯಗತಶ್ಚರನ್।।
ಆ ರಥಸಮೂಹಗಳ ನಡುವಿನಿಂದ ನುಸುಳಿ ಹೊರಬಂದು ಅವನು ಪುನಃ ನರೇಂದ್ರರ ಮಧ್ಯದಲ್ಲಿ ಚಲಿಸುವುದು ಕಾಣುತ್ತಿತ್ತು.
06114008a ತತಃ ಪಾಂಚಾಲರಾಜಂ ಚ ಧೃಷ್ಟಕೇತುಮತೀತ್ಯ ಚ।
06114008c ಪಾಂಡವಾನೀಕಿನೀಮಧ್ಯಮಾಸಸಾದ ಸ ವೇಗಿತಃ।।
ಆಗ ಅವನು ವೇಗವಾಗಿ ಪಾಂಚಾಲರಾಜನನ್ನೂ ಧೃಷ್ಟಕೇತುವನ್ನೂ ಲಕ್ಷಿಸದೇ ಪಾಂಡವರ ಸೇನೆಯ ಮಧ್ಯಕ್ಕೆ ಬಂದು ಧಾಳಿಯಿಟ್ಟನು.
06114009a ತತಃ ಸಾತ್ಯಕಿಭೀಮೌ ಚ ಪಾಂಡವಂ ಚ ಧನಂಜಯಂ।
06114009c ದ್ರುಪದಂ ಚ ವಿರಾಟಂ ಚ ಧೃಷ್ಟದ್ಯುಮ್ನಂ ಚ ಪಾರ್ಷತಂ।।
06114010a ಭೀಮಘೋಷೈರ್ಮಹಾವೇಗೈರ್ವೈರಿವಾರಣಭೇದಿಭಿಃ।
06114010c ಷಡೇತಾನ್ ಷಡ್ಭಿರಾನರ್ಚದ್ಭಾಸ್ಕರಪ್ರತಿಮೈಃ ಶರೈಃ।।
ಆಗ ಅವನು ಮಹಾವೇಗದಿಂದ, ಭೀಮಘೋಷದಿಂದ ವೈರಿಗಳ ಕವಚಗಳನ್ನೂ ಭೇದಿಸಬಲ್ಲ ಆರು ಭಾಸ್ಕರ ಪ್ರತಿಮ ಶರಗಳಿಂದ ಈ ಆರರನ್ನು – ಸಾತ್ಯಕಿ, ಭೀಮ, ಪಾಂಡವ ಧನಂಜಯ, ದ್ರುಪದ, ವಿರಾಟ ಮತ್ತು ಪಾರ್ಷತ ಧೃಷ್ಟದ್ಯುಮ್ನರನ್ನು ಹೊಡೆದನು.
06114011a ತಸ್ಯ ತೇ ನಿಶಿತಾನ್ಬಾಣಾನ್ಸಂನಿವಾರ್ಯ ಮಹಾರಥಾಃ।
06114011c ದಶಭಿರ್ದಶಭಿರ್ಭೀಷ್ಮಮರ್ದಯಾಮಾಸುರೋಜಸಾ।।
ಅವನ ಆ ನಿಶಿತ ಬಾಣಗಳಿಂದ ತಪ್ಪಿಸಿಕೊಂಡು ಮಹಾರಥರು ಹತ್ತು ಹತ್ತು ಬಾಣಗಳಿಂದ ಭೀಷ್ಮನನ್ನು ಹೊಡೆದರು.
06114012a ಶಿಖಂಡೀ ತು ರಣೇ ಬಾಣಾನ್ಯಾನ್ಮುಮೋಚ ಮಹಾವ್ರತೇ।
06114012c ತೇ ಭೀಷ್ಮಂ ವಿವಿಶುಸ್ತೂರ್ಣಂ ಸ್ವರ್ಣಪುಂಖಾಃ ಶಿಲಾಶಿತಾಃ।।
ರಣದಲ್ಲಿ ಮಹಾವ್ರತ ಶಿಖಂಡಿಯು ಪ್ರಯೋಗಿಸಿದ ಸ್ವರ್ಣಪುಂಖಗಳ ಶಿಲಾಶಿತ ಬಾಣಗಳು ಭೀಷ್ಮನ ದೇಹವನ್ನು ಪ್ರವೇಶಿಸಿದವು.
06114013a ತತಃ ಕಿರೀಟೀ ಸಂರಬ್ಧೋ ಭೀಷ್ಮಮೇವಾಭ್ಯವರ್ತತ।
06114013c ಶಿಖಂಡಿನಂ ಪುರಸ್ಕೃತ್ಯ ಧನುಶ್ಚಾಸ್ಯ ಸಮಾಚ್ಛಿನತ್।।
ಆಗ ಕಿರೀಟಿಯು ಸಂರಬ್ಧನಾಗಿ ಶಿಖಂಡಿಯನ್ನು ಮುಂದಿರಿಸಿಕೊಂಡು ಭೀಷ್ಮನನ್ನು ಎದುರಿಸಿ ಅವನ ಧನುಸ್ಸನ್ನು ಕತ್ತರಿಸಿದನು.
06114014a ಭೀಷ್ಮಸ್ಯ ಧನುಷಶ್ಚೇದಂ ನಾಮೃಷ್ಯಂತ ಮಹಾರಥಾಃ।
06114014c ದ್ರೋಣಶ್ಚ ಕೃತವರ್ಮಾ ಚ ಸೈಂಧವಶ್ಚ ಜಯದ್ರಥಃ।।
06114015a ಭೂರಿಶ್ರವಾಃ ಶಲಃ ಶಲ್ಯೋ ಭಗದತ್ತಸ್ತಥೈವ ಚ।
06114015c ಸಪ್ತೈತೇ ಪರಮಕ್ರುದ್ಧಾಃ ಕಿರೀಟಿನಮಭಿದ್ರುತಾಃ।।
ಭೀಷ್ಮನ ಧನುಶ್ಚೇದನವನ್ನು ಸಹಿಸಲಾರದೇ ಮಹಾರಥರಾದ ದ್ರೋಣ, ಕೃತವರ್ಮ, ಸೈಂಧವ ಜಯದ್ರಥ, ಭೂರಿಶ್ರವ, ಶಲ, ಶಲ್ಯ ಮತ್ತು ಭಗದತ್ತ ಈ ಏಳು ಮಂದಿ ಪರಮ ಕೃದ್ಧರಾಗಿ ಕಿರೀಟಿಯ ಮೇಲೆ ಆಕ್ರಮಣ ಮಾಡಿದರು.
06114016a ಉತ್ತಮಾಸ್ತ್ರಾಣಿ ದಿವ್ಯಾನಿ ದರ್ಶಯಂತೋ ಮಹಾರಥಾಃ।
06114016c ಅಭಿಪೇತುರ್ಭೃಶಂ ಕ್ರುದ್ಧಾಶ್ಚಾದಯಂತ ಸ್ಮ ಪಾಂಡವಾನ್।।
ಆ ಮಹಾರಥರು ಉತ್ತಮ ದಿವ್ಯ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಕ್ರುದ್ಧರಾಗಿ ಅವನ ಮೇಲೆ ಎರಗಿ ಪಾಂಡವನನ್ನು ಮುಸುಕು ಹಾಕಿದರು.
06114017a ತೇಷಾಮಾಪತತಾಂ ಶಬ್ದಃ ಶುಶ್ರುವೇ ಫಲ್ಗುನಂ ಪ್ರತಿ।
06114017c ಉದ್ವೃತ್ತಾನಾಂ ಯಥಾ ಶಬ್ದಃ ಸಮುದ್ರಾಣಾಂ ಯುಗಕ್ಷಯೇ।।
ಅವರು ಫಲ್ಗುನನ ಮೇಲೆರಗಿದುದರ ಶಬ್ಧವು ಯುಗಕ್ಷಯದಲ್ಲಿ ಮೇಲುಕ್ಕಿ ಬರುತ್ತಿದ್ದ ಸಮುದ್ರದ ಶಬ್ಧದಂತಿತ್ತು.
06114018a ಹತಾನಯತ ಗೃಹ್ಣೀತ ಯುಧ್ಯತಾಪಿ ಚ ಕೃಂತತ।
06114018c ಇತ್ಯಾಸೀತ್ತುಮುಲಃ ಶಬ್ದಃ ಫಲ್ಗುನಸ್ಯ ರಥಂ ಪ್ರತಿ।।
ಫಲ್ಗುನನ ರಥದ ಬಳಿ “ಸಂಹರಿಸಿ! ಸೆರೆಹಿಡಿಯಿರಿ! ಹೊಡೆಯಿರಿ! ಕತ್ತರಿಸಿ!” ಎಂಬ ಕೂಗಿನ ತುಮುಲ ಶಬ್ಧವು ಕೇಳಿಬಂದಿತು.
06114019a ತಂ ಶಬ್ದಂ ತುಮುಲಂ ಶ್ರುತ್ವಾ ಪಾಂಡವಾನಾಂ ಮಹಾರಥಾಃ।
06114019c ಅಭ್ಯಧಾವನ್ಪರೀಪ್ಸಂತಃ ಫಲ್ಗುನಂ ಭರತರ್ಷಭ।।
ಭರತರ್ಷಭ! ಆ ತುಮುಲ ಶಬ್ಧವನ್ನು ಕೇಳಿ ಪಾಂಡವರ ಮಹಾರಥಿಗಳು ಫಲ್ಗುನನನ್ನು ರಕ್ಷಿಸಲು ಧಾವಿಸಿಬಂದರು.
06114020a ಸಾತ್ಯಕಿರ್ಭೀಮಸೇನಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।
06114020c ವಿರಾಟದ್ರುಪದೌ ಚೋಭೌ ರಾಕ್ಷಸಶ್ಚ ಘಟೋತ್ಕಚಃ।।
06114021a ಅಭಿಮನ್ಯುಶ್ಚ ಸಂಕ್ರುದ್ಧಃ ಸಪ್ತೈತೇ ಕ್ರೋಧಮೂರ್ಚಿತಾಃ।
06114021c ಸಮಭ್ಯಧಾವಂಸ್ತ್ವರಿತಾಶ್ಚಿತ್ರಕಾರ್ಮುಕಧಾರಿಣಃ।।
ಚಿತ್ರಕಾರ್ಮುಕಗಳನ್ನು ಹಿಡಿದಿದ್ದ ಸಾತ್ಯಕಿ, ಭೀಮಸೇನ, ಪಾರ್ಷತ ಧೃಷ್ಟದ್ಯುಮ್ನ, ವಿರಾಟ-ದ್ರುಪದರಿಬ್ಬರೂ, ರಾಕ್ಷಸ ಘಟೋತ್ಕಚ, ಸಂಕ್ರುದ್ಧ ಅಭಿಮನ್ಯು ಈ ಏಳು ಮಂದಿ ಕ್ರೋಧಮೂರ್ಛಿತರು ತ್ವರೆಮಾಡಿ ಅಲ್ಲಿಗೆ ಧಾವಿಸಿದರು.
06114022a ತೇಷಾಂ ಸಮಭವದ್ಯುದ್ಧಂ ತುಮುಲಂ ಲೋಮಹರ್ಷಣಂ।
06114022c ಸಂಗ್ರಾಮೇ ಭರತಶ್ರೇಷ್ಠ ದೇವಾನಾಂ ದಾನವೈರಿವ।।
ಭರತಶ್ರೇಷ್ಠ! ಸಂಗ್ರಾಮದಲ್ಲಿ ದೇವತೆಗಳು ಮತ್ತು ದಾರವರ ಹಾಗೆ ಅವರ ಮಧ್ಯೆ ಲೋಮಹರ್ಣಣ ತುಮುಲ ಯುದ್ಧವು ನಡೆಯಿತು.
06114023a ಶಿಖಂಡೀ ತು ರಥಶ್ರೇಷ್ಠೋ ರಕ್ಷ್ಯಮಾಣಃ ಕಿರೀಟಿನಾ।
06114023c ಅವಿಧ್ಯದ್ದಶಭಿರ್ಭೀಷ್ಮಂ ಚಿನ್ನಧನ್ವಾನಮಾಹವೇ।।
06114023e ಸಾರಥಿಂ ದಶಭಿಶ್ಚಾಸ್ಯ ಧ್ವಜಂ ಚೈಕೇನ ಚಿಚ್ಛಿದೇ।।
ರಥಶ್ರೇಷ್ಠ ಶಿಖಂಡಿಯಾದರೋ ಕಿರೀಟಿಯಿಂದ ರಕ್ಷಿಸಲ್ಪಟ್ಟು ಆಹವದಲ್ಲಿ ಧನುಸ್ಸನ್ನು ಕತ್ತರಿಸಲ್ಪಟ್ಟಿದ್ದ ಭೀಷ್ಮನನ್ನು ಹತ್ತು ಬಾಣಗಳಿಂದಲೂ, ಸಾರಥಿಯನ್ನು ಹತ್ತು ಬಾಣಗಳಿಂದಲೂ ಹೊಡೆದು ಒಂದರಿಂದ ಧ್ವಜವನ್ನು ತುಂಡರಿಸಿದನು.
06114024a ಸೋಽನ್ಯತ್ಕಾರ್ಮುಕಮಾದಾಯ ಗಾಂಗೇಯೋ ವೇಗವತ್ತರಂ।
06114024c ತದಪ್ಯಸ್ಯ ಶಿತೈರ್ಭಲ್ಲೈಸ್ತ್ರಿಭಿಶ್ಚಿಚ್ಛೇದ ಫಲ್ಗುನಃ।।
ಆಗ ಗಾಂಗೇಯನು ಇನ್ನೊಂದು ವೇಗವತ್ತರ ಧನುಸ್ಸನ್ನು ತೆಗೆದುಕೊಂಡು ಶಿಂಜಿನಿಯನ್ನು ಬಿಗಿದು ಸಿದ್ಧಮಾಡುವುದರಲ್ಲಿ ಫಲ್ಗುನನು ಅದನ್ನೂ ಕೂಡ ಮೂರು ನಿಶಿತ ಬಾಣಗಳಿಂದ ಕತ್ತರಿಸಿಬಿಟ್ಟನು.
06114025a ಏವಂ ಸ ಪಾಂಡವಃ ಕ್ರುದ್ಧ ಆತ್ತಮಾತ್ತಂ ಪುನಃ ಪುನಃ।
06114025c ಧನುರ್ಭೀಷ್ಮಸ್ಯ ಚಿಚ್ಛೇದ ಸವ್ಯಸಾಚೀ ಪರಂತಪಃ।।
ಹೀಗೆ ಕ್ರುದ್ಧ ಪಾಂಡವ ಪರಂತಪ ಸವ್ಯಸಾಚಿಯು ಗಾಂಗೇಯನು ಹೊಸ ಹೊಸ ಧನುಸ್ಸನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಪುನಃ ಪುನಃ ಅವುಗಳನ್ನು ಕತ್ತರಿಸಿ ಹಾಕಿದನು.
06114026a ಸ ಚ್ಛಿನ್ನಧನ್ವಾ ಸಂಕ್ರುದ್ಧಃ ಸೃಕ್ಕಿಣೀ ಪರಿಸಂಲಿಹನ್।
06114026c ಶಕ್ತಿಂ ಜಗ್ರಾಹ ಸಂಕ್ರುದ್ಧೋ ಗಿರೀಣಾಮಪಿ ದಾರಣೀಂ।
06114026e ತಾಂ ಚ ಚಿಕ್ಷೇಪ ಸಂಕ್ರುದ್ಧಃ ಫಲ್ಗುನಸ್ಯ ರಥಂ ಪ್ರತಿ।।
ಧನುಸ್ಸನ್ನು ತುಂಡರಿಸಿಕೊಂಡು ಸಂಕ್ರುದ್ಧನಾದ ಅವನು ನಾಲಿಗೆಯಿಂದ ತನ್ನ ಕಟಬಾಯಿಯನ್ನು ನೆಕ್ಕುತ್ತಾ, ಪರ್ವತವನ್ನೂ ಸೀಳಬಲ್ಲ ಶಕ್ತಿಯನ್ನು ಹಿಡಿದು ಸಂಕ್ರುದ್ಧನಾಗಿ ಅದನ್ನು ಅರ್ಜುನನ ರಥದ ಮೇಲೆ ಎಸೆದನು.
06114027a ತಾಮಾಪತಂತೀಂ ಸಂಪ್ರೇಕ್ಷ್ಯ ಜ್ವಲಂತೀಮಶನೀಮಿವ।
06114027c ಸಮಾದತ್ತ ಶಿತಾನ್ಭಲ್ಲಾನ್ಪಂಚ ಪಾಂಡವನಂದನಃ।।
06114028a ತಸ್ಯ ಚಿಚ್ಛೇದ ತಾಂ ಶಕ್ತಿಂ ಪಂಚಧಾ ಪಂಚಭಿಃ ಶರೈಃ।
06114028c ಸಂಕ್ರುದ್ಧೋ ಭರತಶ್ರೇಷ್ಠ ಭೀಷ್ಮಬಾಹುಬಲೇರಿತಾಂ।।
ಭರತಶ್ರೇಷ್ಠ! ವಜ್ರಾಯುಧದಂತೆ ಪ್ರಜ್ವಲಿಸುತ್ತಿರುವ ಅದು ತನ್ನ ಮೇಲೆ ಬೀಳಲಿರುವುದನ್ನು ನೋಡಿ ಸಂಕ್ರುದ್ಧ ಪಾಂಡವನಂದನನು ಐದು ನಿಶಿತ ಭಲ್ಲಗಳನ್ನು ತೆಗೆದುಕೊಂಡು ಭೀಷ್ಮನ ಬಾಹುಗಳಿಂದ ಪ್ರಯೋಗಿಸಲ್ಪಟ್ಟ ಆ ಶಕ್ತಿಯನ್ನು ಐದು ಬಾಣಗಳಿಂದ ಐದು ಭಾಗಗಳಾಗಿ ತುಂಡರಿಸಿದನು.
06114029a ಸಾ ಪಪಾತ ಪರಿಚ್ಛಿನ್ನಾ ಸಂಕ್ರುದ್ಧೇನ ಕಿರೀಟಿನಾ।
06114029c ಮೇಘವೃಂದಪರಿಭ್ರಷ್ಟಾ ವಿಚ್ಛಿನ್ನೇವ ಶತಹ್ರದಾ।।
ಸಂಕ್ರುದ್ಧ ಕಿರೀಟಿಯಿಂದ ತುಂಡರಿಸಲ್ಪಟ್ಟ ಅದು ಮೇಘಮಂಡಲದಿಂದ ತುಂಡಾಗಿ ಕೆಳಗೆ ಬೀಳುವ ಮಿಂಚಿನಂತೆ ಬಿದ್ದಿತು.
06114030a ಚಿನ್ನಾಂ ತಾಂ ಶಕ್ತಿಮಾಲೋಕ್ಯ ಭೀಷ್ಮಃ ಕ್ರೋಧಸಮನ್ವಿತಃ।
06114030c ಅಚಿಂತಯದ್ರಣೇ ವೀರೋ ಬುದ್ಧ್ಯಾ ಪರಪುರಂಜಯಃ।।
ಆ ಶಕ್ತಿಯು ತುಂಡಾಗಿದ್ದುದನ್ನು ನೋಡಿ ಕ್ರೋಧಸಮನ್ವಿತನಾದ ವೀರ ಪರಪುರಂಜಯ ಭೀಷ್ಮನು ರಣದಲ್ಲಿ ಬುದ್ಧಿಯಿಂದ ಚಿಂತಿಸತೊಡಗಿದನು.
06114031a ಶಕ್ತೋಽಹಂ ಧನುಷೈಕೇನ ನಿಹಂತುಂ ಸರ್ವಪಾಂಡವಾನ್।
06114031c ಯದ್ಯೇಷಾಂ ನ ಭವೇದ್ಗೋಪ್ತಾ ವಿಷ್ವಕ್ಸೇನೋ ಮಹಾಬಲಃ।।
“ಒಂದುವೇಳೆ ಇವರ ರಕ್ಷಕನು ಮಹಾಬಲ ವಿಷ್ವಕ್ಸೇನನಾಗಿರದಿದ್ದರೆ ಈ ಪಾಂಡವರೆಲ್ಲರನ್ನೂ ಒಂದೇ ಒಂದು ಧನುಸ್ಸಿನಿಂದ ಸಂಹರಿಸಲು ನಾನು ಶಕ್ತನಿದ್ದೆ.
06114032a ಕಾರಣದ್ವಯಮಾಸ್ಥಾಯ ನಾಹಂ ಯೋತ್ಸ್ಯಾಮಿ ಪಾಂಡವೈಃ।
06114032c ಅವಧ್ಯತ್ವಾಚ್ಚ ಪಾಂಡೂನಾಂ ಸ್ತ್ರೀಭಾವಾಚ್ಚ ಶಿಖಂಡಿನಃ।।
ಈ ಎರಡು ಕಾರಣಗಳನ್ನಿಟ್ಟುಕೊಂಡು ನಾನು ಪಾಂಡವರೊಂದಿಗೆ ಹೋರಾಡುವುದಿಲ್ಲ – ಪಾಂಡವರು ಅವಧ್ಯರೆನ್ನುವುದು ಮತ್ತು ಶಿಖಂಡಿಯ ಸ್ತ್ರೀ ಭಾವತ್ವ.
06114033a ಪಿತ್ರಾ ತುಷ್ಟೇನ ಮೇ ಪೂರ್ವಂ ಯದಾ ಕಾಲೀಮುದಾವಹತ್।
06114033c ಸ್ವಚ್ಛಂದಮರಣಂ ದತ್ತಮವಧ್ಯತ್ವಂ ರಣೇ ತಥಾ।
06114033e ತಸ್ಮಾನ್ಮೃತ್ಯುಮಹಂ ಮನ್ಯೇ ಪ್ರಾಪ್ತಕಾಲಮಿವಾತ್ಮನಃ।।
ಹಿಂದೆ ಕಾಲೀ ಸತ್ಯವತಿಯನ್ನು ತಂದಿತ್ತಾಗ ಸಂತೋಷಗೊಂಡ ತಂದೆಯು ನನಗೆ ಸ್ಚಚ್ಛಂದ ಮರಣ ಮತ್ತು ರಣದಲ್ಲಿ ಅವಧ್ಯತ್ವವನ್ನು ಪಾಲಿಸಿದ್ದನು. ಆ ಮೃತ್ಯುವಿನ ಕಾಲವು ನನಗೆ ಬಂದೊದಗಿದೆ ಎಂದು ತಿಳಿದುಕೊಳ್ಳುತ್ತೇನೆ.”
06114034a ಏವಂ ಜ್ಞಾತ್ವಾ ವ್ಯವಸಿತಂ ಭೀಷ್ಮಸ್ಯಾಮಿತತೇಜಸಃ।
06114034c ಋಷಯೋ ವಸವಶ್ಚೈವ ವಿಯತ್ಸ್ಥಾ ಭೀಷ್ಮಮಬ್ರುವನ್।।
ಅಮಿತತೇಜಸ ಭೀಷ್ಮನ ಈ ಅಭಿಪ್ರಾಯವನ್ನು ತಿಳಿದ ಆಕಾಶದಲ್ಲಿದ್ದ ಋಷಿಗಳೂ ವಸುಗಳೂ ಭೀಷ್ಮನಿಗೆ ಹೇಳಿದರು:
06114035a ಯತ್ತೇ ವ್ಯವಸಿತಂ ವೀರ ಅಸ್ಮಾಕಂ ಸುಮಹತ್ಪ್ರಿಯಂ।
06114035c ತತ್ಕುರುಷ್ವ ಮಹೇಷ್ವಾಸ ಯುದ್ಧಾದ್ಬುದ್ಧಿಂ ನಿವರ್ತಯ।।
“ವೀರ! ನೀನು ಏನನ್ನು ನಿರ್ಧರಿಸಿದ್ದೀಯೋ ಅದು ನಮಗೂ ಬಹಳ ಪ್ರಿಯವಾಗಿದೆ. ಮಹೇಷ್ವಾಸ! ಹಾಗೆಯೇ ಮಾಡು. ಯುದ್ಧದಿಂದ ಬುದ್ಧಿಯನ್ನು ಹಿಂತೆಗೆದುಕೋ!”
06114036a ತಸ್ಯ ವಾಕ್ಯಸ್ಯ ನಿಧನೇ ಪ್ರಾದುರಾಸೀಚ್ಚಿವೋಽನಿಲಃ।
06114036c ಅನುಲೋಮಃ ಸುಗಂಧೀ ಚ ಪೃಷತೈಶ್ಚ ಸಮನ್ವಿತಃ।।
ಅವರ ಮಾತುಗಳು ಮುಗಿಯುತ್ತಿದ್ದಂತೆಯೇ ಮಂಗಳಕರವಾದ, ಅನುಕೂಲವಾದ, ಸುಗಂಧಯುಕ್ತವಾದ ಗಾಳಿಯು ತುಂತುರು ಹನಿಗಳೊಡನೆ ಬೀಸಿತು.
06114037a ದೇವದುಂದುಭಯಶ್ಚೈವ ಸಂಪ್ರಣೇದುರ್ಮಹಾಸ್ವನಾಃ।
06114037c ಪಪಾತ ಪುಷ್ಪವೃಷ್ಟಿಶ್ಚ ಭೀಷ್ಮಸ್ಯೋಪರಿ ಪಾರ್ಥಿವ।।
ಪಾರ್ಥಿವ! ದೇವದುಂದುಭಿಗಳೂ ಗಟ್ಟಿಯಾಗಿ ಮೊಳಗಿದವು. ಭೀಷ್ಮನ ಮೇಲೆ ಪುಷ್ಪವೃಷ್ಟಿಯೂ ಸುರಿಯಿತು.
06114038a ನ ಚ ತಚ್ಚುಶ್ರುವೇ ಕಶ್ಚಿತ್ತೇಷಾಂ ಸಂವದತಾಂ ನೃಪ।
06114038c ಋತೇ ಭೀಷ್ಮಂ ಮಹಾಬಾಹುಂ ಮಾಂ ಚಾಪಿ ಮುನಿತೇಜಸಾ।।
ನೃಪ! ಅವರ ಸಂವಾದವನ್ನು ಅಲ್ಲಿರುವ ಬೇರೆ ಯಾರೂ ಕೇಳಿಸಿಕೊಳ್ಳಲಿಲ್ಲ. ಮಹಾಬಾಹು ಭೀಷ್ಮನನ್ನು ಬಿಟ್ಟು ಮುನಿಯ ತೇಜಸ್ಸಿನಿಂದ ನಾನು ಮಾತ್ರ ಅದನ್ನು ಕೇಳಿಸಿಕೊಂಡೆನು.
06114039a ಸಂಭ್ರಮಶ್ಚ ಮಹಾನಾಸೀತ್ತ್ರಿದಶಾನಾಂ ವಿಶಾಂ ಪತೇ।
06114039c ಪತಿಷ್ಯತಿ ರಥಾದ್ಭೀಷ್ಮೇ ಸರ್ವಲೋಕಪ್ರಿಯೇ ತದಾ।।
ವಿಶಾಂಪತೇ! ಸರ್ವಲೋಕಪ್ರಿಯನಾದ ಭೀಷ್ಮನು ರಥದಿಂದ ಬೀಳುವವನಿದ್ದಾನೆ ಎಂದು ತ್ರಿದಶರಿಗೂ ಮಹಾ ಸಂಭ್ರಮವಾಯಿತು.
06114040a ಇತಿ ದೇವಗಣಾನಾಂ ಚ ಶ್ರುತ್ವಾ ವಾಕ್ಯಂ ಮಹಾಮನಾಃ।
06114040c ತತಃ ಶಾಂತನವೋ ಭೀಷ್ಮೋ ಬೀಭತ್ಸುಂ ನಾಭ್ಯವರ್ತತ।
06114040e ಭಿದ್ಯಮಾನಃ ಶಿತೈರ್ಬಾಣೈಃ ಸರ್ವಾವರಣಭೇದಿಭಿಃ।।
ಮಹಾಮನಸ್ಕರಾದ ದೇವಗಣಗಳ ಈ ಮಾತನ್ನು ಕೇಳಿ ಶಾಂತನವ ಭೀಷ್ಮನು ಸರ್ವಾವರಣಗಳನ್ನೂ ಭೇದಿಸುವ ಹರಿತ ಬಾಣಗಳಿಂದ ಚುಚ್ಚಲ್ಪಟ್ಟರೂ ಬೀಭತ್ಸುವನ್ನು ತಡೆಯಲಿಲ್ಲ.
06114041a ಶಿಖಂಡೀ ತು ಮಹಾರಾಜ ಭರತಾನಾಂ ಪಿತಾಮಹಂ।
06114041c ಆಜಘಾನೋರಸಿ ಕ್ರುದ್ಧೋ ನವಭಿರ್ನಿಶಿತೈಃ ಶರೈಃ।।
ಆಗ ಮಹಾರಾಜ! ಶಿಖಂಡಿಯು ಕ್ರುದ್ಧನಾಗಿ ಭರತರ ಪಿತಾಮಹನ ವಕ್ಷಸ್ಥಲಕ್ಕೆ ಒಂಭತ್ತು ನಿಶಿತ ಬಾಣಗಳಿಂದ ಹೊಡೆದನು.
06114042a ಸ ತೇನಾಭಿಹತಃ ಸಂಖ್ಯೇ ಭೀಷ್ಮಃ ಕುರುಪಿತಾಮಹಃ।
06114042c ನಾಕಂಪತ ಮಹಾರಾಜ ಕ್ಷಿತಿಕಂಪೇ ಯಥಾಚಲಃ।।
ಮಹಾರಾಜ! ಭೂಕಂಪವಾದರೂ ಚಲಿಸದ ಪರ್ವತದಂತೆ ಕುರು ಪಿತಾಮಹ ಭೀಷ್ಮನು ಯುದ್ಧದಲ್ಲಿ ಅವನಿಂದ ಹೊಡೆಯಲ್ಪಟ್ಟರೂ ವಿಚಲಿತನಾಗಲಿಲ್ಲ.
06114043a ತತಃ ಪ್ರಹಸ್ಯ ಬೀಭತ್ಸುರ್ವ್ಯಾಕ್ಷಿಪನ್ಗಾಂಡಿವಂ ಧನುಃ।
06114043c ಗಾಂಗೇಯಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮರ್ಪಯತ್।।
ಆಗ ನಸುನಕ್ಕು ಬೀಭತ್ಸುವು ತನ್ನ ಗಾಂಡೀವ ಧನುಸ್ಸನ್ನು ಠೇಂಕರಿಸಿ ಗಾಂಗೇಯನನ್ನು ಇಪ್ಪತ್ತೈದು ಕ್ಷುದ್ರಕಗಳಿಂದ ಪ್ರಹರಿಸಿದನು.
06114044a ಪುನಃ ಶರಶತೇನೈನಂ ತ್ವರಮಾಣೋ ಧನಂಜಯಃ।
06114044c ಸರ್ವಗಾತ್ರೇಷು ಸಂಕ್ರುದ್ಧಃ ಸರ್ವಮರ್ಮಸ್ವತಾಡಯತ್।।
ಪುನಃ ಸಂಕ್ರುದ್ಧನಾದ ಧನಂಜಯನು ತ್ವರೆಮಾಡಿ ನೂರು ಬಾಣಗಳನ್ನು ಪ್ರಯೋಗಿಸಿ ಅವನ ಶರೀರದ ಎಲ್ಲ ಭಾಗಗಳನ್ನೂ ಮರ್ಮಸ್ಥಾನಗಳನ್ನೂ ಗಾಯಗೊಳಿಸಿದನು.
06114045a ಏವಮನ್ಯೈರಪಿ ಭೃಶಂ ವಧ್ಯಮಾನೋ ಮಹಾರಣೇ।
06114045c ನ ಚಕ್ರುಸ್ತೇ ರುಜಂ ತಸ್ಯ ರುಕ್ಮಪುಂಖಾಃ ಶಿಲಾಶಿತಾಃ।।
ಈ ರೀತಿ ಮಹಾರಣದಲ್ಲಿದ್ದ ಅನ್ಯರೂ ಚೆನ್ನಾಗಿ ಅವನನ್ನು ಹೊಡೆಯುತ್ತಿರಲು ಅವೆಲ್ಲವನ್ನು ಅವನು ರುಕ್ಮಪುಂಖ ಶಿಲಾಶಿತ ಬಾಣಗಳಿಂದ ನಿರಸನಗೊಳಿಸಿದನು.
06114046a ತತಃ ಕಿರೀಟೀ ಸಂರಬ್ಧೋ ಭೀಷ್ಮಮೇವಾಭ್ಯವರ್ತತ।
06114046c ಶಿಖಂಡಿನಂ ಪುರಸ್ಕೃತ್ಯ ಧನುಶ್ಚಾಸ್ಯ ಸಮಾಚ್ಛಿನತ್।।
ಆಗ ಸಂರಬ್ಧನಾದ ಕಿರೀಟಿಯು ಶಿಖಂಡಿಯನ್ನು ಮುಂದಿಟ್ಟುಕೊಂಡು ಭೀಷ್ಮನ ಮೇಲೆ ಧಾಳಿಯಿಟ್ಟು ಅವನ ಧನುಸ್ಸನ್ನು ತುಂಡರಿಸಿದನು.
06114047a ಅಥೈನಂ ದಶಭಿರ್ವಿದ್ಧ್ವಾ ಧ್ವಜಮೇಕೇನ ಚಿಚ್ಛಿದೇ।
06114047c ಸಾರಥಿಂ ವಿಶಿಖೈಶ್ಚಾಸ್ಯ ದಶಭಿಃ ಸಮಕಂಪಯತ್।।
ಆಗ ಅವನು ಅವನನ್ನು ಹತ್ತು ಬಾಣಗಳಿಂದ ಹೊಡೆದು, ಒಂದರಿಂದ ಧ್ವಜವನ್ನು ಕತ್ತರಿಸಿ, ಹತ್ತು ಬಾಣಗಳಿಂದ ಸಾರಥಿಯನ್ನು ತತ್ತರಿಸಿದನು.
06114048a ಸೋಽನ್ಯತ್ಕಾರ್ಮುಕಮಾದತ್ತ ಗಾಂಗೇಯೋ ಬಲವತ್ತರಂ।
06114048c ತದಪ್ಯಸ್ಯ ಶಿತೈರ್ಭಲ್ಲೈಸ್ತ್ರಿಧಾ ತ್ರಿಭಿರುಪಾನುದತ್।
06114048e ನಿಮೇಷಾಂತರಮಾತ್ರೇಣ ಆತ್ತಮಾತ್ತಂ ಮಹಾರಣೇ।।
ಅನಂತರ ಗಾಂಗೇಯನು ಬಲವತ್ತರವಾದ ಇನ್ನೊಂದು ಧನುಸ್ಸನ್ನು ತೆಗೆದುಕೊಳ್ಳಲು ಅದನ್ನೂ ಸಹ ಮೂರು ನಿಶಿತ ಭಲ್ಲಗಳಿಂದ ಮೂರು ಭಾಗಗಳನ್ನಾಗಿ ತುಂಡರಿಸಿದನು. ಆ ಮಹಾರಣದಲ್ಲಿ ಬಿಲ್ಲುಗಳನ್ನು ತೆಗೆದುಕೊಂಡ ಹಾಗೆ ನಿಮಿಷಮಾತ್ರದಲ್ಲಿ ಅದನ್ನು ತುಂಡರಿಸುತ್ತಿದ್ದನು.
06114049a ಏವಮಸ್ಯ ಧನೂಂಷ್ಯಾಜೌ ಚಿಚ್ಛೇದ ಸುಬಹೂನ್ಯಪಿ।
06114049c ತತಃ ಶಾಂತನವೋ ಭೀಷ್ಮೋ ಬೀಭತ್ಸುಂ ನಾಭ್ಯವರ್ತತ।।
ಹೀಗೆ ಬಹಳಷ್ಟು ಧನುಸ್ಸುಗಳನ್ನೂ ಅವನು ತುಂಡರಿಸಿದನು. ಆಗ ಶಾಂತನವ ಭೀಷ್ಮನು ಬೀಭತ್ಸುವನ್ನು ವಿರೋಧಿಸಲಿಲ್ಲ.
06114050a ಅಥೈನಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮರ್ದಯತ್।
06114050c ಸೋಽತಿವಿದ್ಧೋ ಮಹೇಷ್ವಾಸೋ ದುಃಶಾಸನಮಭಾಷತ।।
ಆಗಲೂ ಕೂಡ ಅವನನ್ನು ಇಪ್ಪತ್ತೈದು ಕ್ಷುದ್ರಕಗಳಿಂದ ಹೊಡೆಯಲಾಯಿತು. ಆಗ ಅತಿಯಾಗಿ ಗಾಯಗೊಂಡ ಆ ಮಹೇಷ್ವಾಸನು ದುಃಶಾಸನನಿಗೆ ಹೇಳಿದನು:
06114051a ಏಷ ಪಾರ್ಥೋ ರಣೇ ಕ್ರುದ್ಧಃ ಪಾಂಡವಾನಾಂ ಮಹಾರಥಃ।
06114051c ಶರೈರನೇಕಸಾಹಸ್ರೈರ್ಮಾಮೇವಾಭ್ಯಸತೇ ರಣೇ।।
“ಈ ಪಾಂಡವರ ಮಹಾರಥಿ ಪಾರ್ಥನು ಕ್ರುದ್ಧನಾಗಿ ರಣದಲ್ಲಿ ಅನೇಕ ಸಹಸ್ರ ಬಾಣಗಳಿಂದ ನನ್ನನ್ನೇ ಹೊಡೆಯುತ್ತಿದ್ದಾನೆ.
06114052a ನ ಚೈಷ ಶಕ್ಯಃ ಸಮರೇ ಜೇತುಂ ವಜ್ರಭೃತಾ ಅಪಿ।
06114052c ನ ಚಾಪಿ ಸಹಿತಾ ವೀರಾ ದೇವದಾನವರಾಕ್ಷಸಾಃ।
06114052e ಮಾಂ ಚೈವ ಶಕ್ತಾ ನಿರ್ಜೇತುಂ ಕಿಮು ಮರ್ತ್ಯಾಃ ಸುದುರ್ಬಲಾಃ।।
ಸಮರದಲ್ಲಿ ಇವನನ್ನು ಗೆಲ್ಲಲು ವಜ್ರಭೃತನಿಗೂ ಶಕ್ಯವಿಲ್ಲ. ನನ್ನನ್ನು ಕೂಡ ವೀರ ದೇವ-ದಾನವ-ರಾಕ್ಷಸರು ಕೂಡಿದರೂ ಜಯಿಸಲು ಶಕ್ತರಿಲ್ಲ. ಇನ್ನು ದುರ್ಬಲರಾದ ಮನುಷ್ಯರು ಯಾವ ಲೆಕ್ಕಕ್ಕೆ?”
06114053a ಏವಂ ತಯೋಃ ಸಂವದತೋಃ ಫಲ್ಗುನೋ ನಿಶಿತೈಃ ಶರೈಃ।
06114053c ಶಿಖಂಡಿನಂ ಪುರಸ್ಕೃತ್ಯ ಭೀಷ್ಮಂ ವಿವ್ಯಾಧ ಸಂಯುಗೇ।।
ಹೀಗೆ ಅವರು ಮಾತನಾಡಿಕೊಳ್ಳುತ್ತಿರುವಾಗಲೇ ಫಲ್ಗುನನು ಸಂಯುಗದಲ್ಲಿ ಶಿಖಂಡಿಯನ್ನು ಮುಂದೆ ನಿಲ್ಲಿಸಿಕೊಂಡು ಭೀಷ್ಮನನ್ನು ನಿಶಿತ ಶರಗಳಿಂದ ಹೊಡೆದನು.
06114054a ತತೋ ದುಃಶಾಸನಂ ಭೂಯಃ ಸ್ಮಯಮಾನೋಽಭ್ಯಭಾಷತ।
06114054c ಅತಿವಿದ್ಧಃ ಶಿತೈರ್ಬಾಣೈರ್ಭೃಶಂ ಗಾಂಡೀವಧನ್ವನಾ।।
ಆಗ ಅವನು ಪುನಃ ನಸುನಗುತ್ತಾ ದುಃಶಾಸನನಿಗೆ ಹೇಳಿದನು: “ಗಾಂಡೀವಧನ್ವಿಯ ನಿಶಿತ ಬಾಣಗಳಿಂದ ತುಂಬಾ ವೇದನೆಯಾಗುತ್ತಿದೆ.
06114055a ವಜ್ರಾಶನಿಸಮಸ್ಪರ್ಶಾಃ ಶಿತಾಗ್ರಾಃ ಸಂಪ್ರವೇಶಿತಾಃ।
06114055c ವಿಮುಕ್ತಾ ಅವ್ಯವಚ್ಛಿನ್ನಾ ನೇಮೇ ಬಾಣಾಃ ಶಿಖಂಡಿನಃ।।
ವಜ್ರದ ಮೊನೆಯಂತೆ ತಾಗುತ್ತಿರುವ ಈ ಮೊನಚಾದ ಬಾಣಗಳು ದೇಹವನ್ನು ಪ್ರವೇಶಿಸುತ್ತಿವೆ. ಅವಿಚ್ಛಿನ್ನವಾಗಿ ಬಿಡಲ್ಪಡುವ ಈ ಬಾಣಗಳು ಶಿಖಂಡಿಯವಲ್ಲ!
06114056a ನಿಕೃಂತಮಾನಾ ಮರ್ಮಾಣಿ ದೃಢಾವರಣಭೇದಿನಃ।
06114056c ಮುಸಲಾನೀವ ಮೇ ಘ್ನಂತಿ ನೇಮೇ ಬಾಣಾಃ ಶಿಖಂಡಿನಃ।।
ಸುದೃಢವಾದ ಕವಚಗಳನ್ನು ಭೇದಿಸಿ ಇವು ದೇಹವನ್ನು ಹೊಗುತ್ತಿವೆ. ಮುಸಲದಂತೆ ನನ್ನನ್ನು ಗಾಯಗೊಳಿಸುತ್ತಿರುವ ಈ ಬಾಣಗಳು ಶಿಖಂಡಿಯವಲ್ಲ!
06114057a ಬ್ರಹ್ಮದಂಡಸಮಸ್ಪರ್ಶಾ ವಜ್ರವೇಗಾ ದುರಾಸದಾಃ।
06114057c ಮಮ ಪ್ರಾಣಾನಾರುಜಂತಿ ನೇಮೇ ಬಾಣಾಃ ಶಿಖಂಡಿನಃ।।
ಬ್ರಹ್ಮದಂಡದ ಸಮನಾಗಿ ತಾಗುವ, ವಜ್ರವೇಗದ, ದುರಾಸದ ಬಾಣಗಳು ನನ್ನ ಪ್ರಾಣಗಳನ್ನು ಕಾಡುತ್ತಿವೆ. ಇವು ಶಿಖಂಡಿಯವಲ್ಲ!
06114058a ಭುಜಗಾ ಇವ ಸಂಕ್ರುದ್ಧಾ ಲೇಲಿಹಾನಾ ವಿಷೋಲ್ಬಣಾಃ।
06114058c ಮಮಾವಿಶಂತಿ ಮರ್ಮಾಣಿ ನೇಮೇ ಬಾಣಾಃ ಶಿಖಂಡಿನಃ।।
ನಾಲಿಗೆಗಳನ್ನು ಹೊರಚಾಚಿದ ಸಂಕ್ರುದ್ಧ ಪ್ರಚಂಡವಿಷಸರ್ಪಗಳಂತೆ ನನ್ನ ಮರ್ಮಗಳನ್ನು ಪ್ರವೇಶಿಸುತ್ತಿವೆ. ಈ ಬಾಣಗಳು ಶಿಖಂಡಿಯವಲ್ಲ!
06114059a ನಾಶಯಂತೀವ ಮೇ ಪ್ರಾಣಾನ್ಯಮದೂತಾ ಇವಾಹಿತಾಃ।
06114059c ಗದಾಪರಿಘಸಂಸ್ಪರ್ಶಾ ನೇಮೇ ಬಾಣಾಃ ಶಿಖಂಡಿನಃ।।
ಇಲ್ಲಿಗೇ ಬಂದಿರುವ ಯಮದೂತರಂತೆ ನನ್ನ ಪ್ರಾಣಗಳನ್ನು ನಾಶಪಡಿಸುತ್ತಿವೆ. ಗದೆ-ಪರಿಘದಂತೆ ತಾಗುತ್ತಿರುವ ಈ ಬಾಣಗಳು ಶಿಖಂಡಿಯವಲ್ಲ!
06114060a ಕೃಂತಂತಿ ಮಮ ಗಾತ್ರಾಣಿ ಮಾಘಮಾಸೇ ಗವಾಮಿವ।
06114060c ಅರ್ಜುನಸ್ಯ ಇಮೇ ಬಾಣಾ ನೇಮೇ ಬಾಣಾಃ ಶಿಖಂಡಿನಃ।।
ಮಾಘಮಾಸದಲ್ಲಿ ಏಡಿಗಳಂತೆ ನನ್ನ ಅಂಗಾಂಗಗಳನ್ನು ಒಡೆಯುತ್ತಿವೆ. ಈ ಬಾಣಗಳು ಅರ್ಜುನನವು. ಈ ಬಾಣಗಳು ಶಿಖಂಡಿಯವಲ್ಲ!
06114061a ಸರ್ವೇ ಹ್ಯಪಿ ನ ಮೇ ದುಃಖಂ ಕುರ್ಯುರನ್ಯೇ ನರಾಧಿಪಾಃ।
06114061c ವೀರಂ ಗಾಂಡೀವಧನ್ವಾನಂ ಋತೇ ಜಿಷ್ಣುಂ ಕಪಿಧ್ವಜಂ।।
ವೀರ ಗಾಂಡೀವಧನ್ವಿ ಕಪಿಧ್ವಜ ಜಿಷ್ಣುವನ್ನು ಬಿಟ್ಟು ಈ ಸರ್ವರಲ್ಲಿ ಬೇರೆ ಯಾವ ನರಾಧಿಪನೂ ನನಗೆ ದುಃಖವನ್ನುಂಟುಮಾಡಲಾರನು.”
06114062a ಇತಿ ಬ್ರುವನ್ ಶಾಂತನವೋ ದಿಧಕ್ಷುರಿವ ಪಾಂಡವಂ।
06114062c ಸವಿಷ್ಫುಲಿಂಗಾಂ ದೀಪ್ತಾಗ್ರಾಂ ಶಕ್ತಿಂ ಚಿಕ್ಷೇಪ ಭಾರತ।।
ಭಾರತ ಹೀಗೆ ಹೇಳುತ್ತಿರುವ ಶಾಂತನವನು ಪಾಂಡವನನ್ನು ಸುಟ್ಟುಬಿಡುತ್ತಾನೋ ಎನ್ನುವಂತೆ ಪರಮಕ್ರುದ್ಧನಾಗಿ ಉರಿಯುತ್ತಿರುವ ಮೊನೆಯುಳ್ಳ ಶಕ್ತಿಯನ್ನು ಬಿಸುಟನು.
06114063a ತಾಮಸ್ಯ ವಿಶಿಖೈಶ್ಚಿತ್ತ್ವಾ ತ್ರಿಧಾ ತ್ರಿಭಿರಪಾತಯತ್।
06114063c ಪಶ್ಯತಾಂ ಕುರುವೀರಾಣಾಂ ಸರ್ವೇಷಾಂ ತತ್ರ ಭಾರತ।।
ಭಾರತ! ಕುರುವೀರರೆಲ್ಲರೂ ನೋಡುತ್ತಿದ್ದಂತೆಯೇ ಅದನ್ನು ಅರ್ಜುನನು ಅಲ್ಲಿ ಮೂರು ವಿಶಿಖೆಗಳಿಂದ ಮೂರು ಭಾಗಗಳನ್ನಾಗಿ ತುಂಡರಿಸಿ ಕೆಳಗೆ ಬೀಳಿಸಿದನು.
06114064a ಚರ್ಮಾಥಾದತ್ತ ಗಾಂಗೇಯೋ ಜಾತರೂಪಪರಿಷ್ಕೃತಂ।
06114064c ಖಡ್ಗಂ ಚಾನ್ಯತರಂ ಪ್ರೇಪ್ಸುರ್ಮೃತ್ಯೋರಗ್ರೇ ಜಯಾಯ ವಾ।।
ಆಗ ಗಾಂಗೇಯನ್ನು ಕಡೆಯದಾಗಿ ಮೃತ್ಯುವಾಗಲಿ ಅಥವಾ ಜಯವಾಗಲೆಂದು ಸುವರ್ಣಭೂಷಿತ ಖಡ್ಗವನ್ನು ಮತ್ತು ಗುರಾಣಿಯನ್ನು ಕೈಗೆ ತೆಗೆದುಕೊಂಡನು.
06114065a ತಸ್ಯ ತಚ್ಚತಧಾ ಚರ್ಮ ವ್ಯಧಮದ್ದಂಶಿತಾತ್ಮನಃ।
06114065c ರಥಾದನವರೂಢಸ್ಯ ತದದ್ಭುತಮಿವಾಭವತ್।।
ಆಗ ರಥದಿಂದ ಕೆಳಗಿಳಿದು ಬರುತ್ತಿದ್ದ ಅವನ ಗುರಾಣಿಯನ್ನು ಅರ್ಜುನನು ನೂರಾರು ಚೂರುಗಳನ್ನಾಗಿ ಮಾಡಿ ಹಾಕಿದನು. ಅದು ಒಂದು ಅದ್ಭುತವಾಗಿತ್ತು.
06114066a ವಿನದ್ಯೋಚ್ಚೈಃ ಸಿಂಹ ಇವ ಸ್ವಾನ್ಯನೀಕಾನ್ಯಚೋದಯತ್।
06114066c ಅಭಿದ್ರವತ ಗಾಂಗೇಯಂ ಮಾಂ ವೋಽಸ್ತು ಭಯಮಣ್ವಪಿ।।
ಆಗ ಯುಧಿಷ್ಠಿರನು ಸಿಂಹದಂತೆ ಗರ್ಜಿಸಿ ತನ್ನ ಸೇನೆಗಳನ್ನು ಪ್ರಚೋದಿಸಿದನು - “ಗಾಂಗೇಯನ ಬಳಿ ಧಾವಿಸಿ! ನೀವು ಅವನಿಗಾಗಿ ಸ್ವಲ್ಪವೂ ಭಯಪಡಕೂಡದು!”
06114067a ಅಥ ತೇ ತೋಮರೈಃ ಪ್ರಾಸೈರ್ಬಾಣೌಘೈಶ್ಚ ಸಮಂತತಃ।
06114067c ಪಟ್ಟಿಶೈಶ್ಚ ಸನಿಸ್ತ್ರಿಂಶೈರ್ನಾನಾಪ್ರಹರಣೈಸ್ತಥಾ।।
06114068a ವತ್ಸದಂತೈಶ್ಚ ಭಲ್ಲೈಶ್ಚ ತಮೇಕಮಭಿದುದ್ರುವುಃ।
06114068c ಸಿಂಹನಾದಸ್ತತೋ ಘೋರಃ ಪಾಂಡವಾನಾಮಜಾಯತ।।
ಆಗ ಅವರು ತೋಮರ, ಪ್ರಾಸ, ಬಾಣ, ಪಟ್ಟಿಶ, ಖಡ್ಗ, ನಿಶಿತ ನಾರಾಚ, ವತ್ಸದಂತ, ಭಲ್ಲ – ಇವೇ ಮೊದಲಾದ ಶಸ್ತ್ರಗಳನ್ನು ಹಿಡಿದು ಭೀಷ್ಮನೊಬ್ಬನನ್ನೇ ಆಕ್ರಮಣಿಸಿದರು. ಆಗ ಪಾಂಡವರ ಸೇನೆಯಲ್ಲಿ ಘೋರ ಸಿಂಹನಾದವು ಕೇಳಿಬಂದಿತು.
06114069a ತಥೈವ ತವ ಪುತ್ರಾಶ್ಚ ರಾಜನ್ಭೀಷ್ಮಜಯೈಷಿಣಃ।
06114069c ತಮೇಕಮಭ್ಯವರ್ತಂತ ಸಿಂಹನಾದಾಂಶ್ಚ ನೇದಿರೇ।।
ರಾಜನ್! ಭೀಷ್ಮನ ಜಯವನ್ನು ಬಯಸಿದ್ದ ನಿನ್ನ ಪುತ್ರರೂ ಕೂಡ ಅವನೊಬ್ಬನನ್ನೇ ಸುತ್ತುವರೆದು ಸಿಂಹನಾದಗೈದರು.
06114070a ತತ್ರಾಸೀತ್ತುಮುಲಂ ಯುದ್ಧಂ ತಾವಕಾನಾಂ ಪರೈಃ ಸಹ।
06114070c ದಶಮೇಽಹನಿ ರಾಜೇಂದ್ರ ಭೀಷ್ಮಾರ್ಜುನಸಮಾಗಮೇ।।
ರಾಜೇಂದ್ರ! ಆಗ ಹತ್ತನೇ ದಿನದ ಯುದ್ಧದಲ್ಲಿ, ಭೀಷ್ಮಾರ್ಜುನರ ಸಮಾಗಮದಲ್ಲಿ, ಶತ್ರುಗಳೊಂದಿಗೆ ನಿನ್ನವರ ತುಮುಲ ಯುದ್ಧವು ನಡೆಯಿತು.
06114071a ಆಸೀದ್ಗಾಂಗ ಇವಾವರ್ತೋ ಮುಹೂರ್ತಮುದಧೇರಿವ।
06114071c ಸೈನ್ಯಾನಾಂ ಯುಧ್ಯಮಾನಾನಾಂ ನಿಘ್ನತಾಮಿತರೇತರಂ।।
ಗಂಗೆಯು ಸಮುದ್ರವನ್ನು ಸೇರುವ ಸಮಯದಲ್ಲಿ ಮುಹೂರ್ತಕಾಲ ಸುಳಿಯುಂಟಾಗುವಂತೆ ನಡೆಯಿತು. ಯುದ್ಧಮಾಡುತ್ತಿರುವ ಸೈನಿಕರು ಪರಸ್ಪರರನ್ನು ಸಂಹರಿಸಿದರು.
06114072a ಅಗಮ್ಯರೂಪಾ ಪೃಥಿವೀ ಶೋಣಿತಾಕ್ತಾ ತದಾಭವತ್।
06114072c ಸಮಂ ಚ ವಿಷಮಂ ಚೈವ ನ ಪ್ರಾಜ್ಞಾಯತ ಕಿಂ ಚನ।।
ರಕ್ತದಿಂದ ತೋಯ್ದು ಹೋಗಿದ್ದ ಭೂಮಿಯು ಭಯಂಕರವಾಗಿ ತೋರಿತು. ಸಮಪ್ರದೇಶ, ತಗ್ಗು ಪ್ರದೇಶಗಳು ಯಾವುದೆಂದು ತಿಳಿಯಲಾರದೇ ಹೋದವು.
06114073a ಯೋಧಾನಾಮಯುತಂ ಹತ್ವಾ ತಸ್ಮಿನ್ಸ ದಶಮೇಽಹನಿ।
06114073c ಅತಿಷ್ಠದಾಹವೇ ಭೀಷ್ಮೋ ಭಿದ್ಯಮಾನೇಷು ಮರ್ಮಸು।।
ಆ ಹತ್ತನೆಯ ದಿವಸ ಮರ್ಮಗಳನ್ನು ಭೇದಿಸಿದ ನೋವುಗಳುಳ್ಳವನಾಗಿದ್ದರೂ ಭೀಷ್ಮನು ಹತ್ತು ಸಾವಿರ ಯೋಧರನ್ನು ಕೊಂದು ರಣದಲ್ಲಿ ನಿಂತಿದ್ದನು.
06114074a ತತಃ ಸೇನಾಮುಖೇ ತಸ್ಮಿನ್ಸ್ಥಿತಃ ಪಾರ್ಥೋ ಧನಂಜಯಃ।
06114074c ಮಧ್ಯೇನ ಕುರುಸೈನ್ಯಾನಾಂ ದ್ರಾವಯಾಮಾಸ ವಾಹಿನೀಂ।।
ಆಗ ಸೇನೆಯ ಮುಖದಲ್ಲಿ ನಿಂತಿದ್ದ ಪಾರ್ಥ ಧನಂಜಯನು ಕುರುಸೈನ್ಯವನ್ನು ಮಧ್ಯದಿಂದ ಓಡಿಸಲಾರಂಭಿಸಿದನು.
06114075a ವಯಂ ಶ್ವೇತಹಯಾದ್ಭೀತಾಃ ಕುಂತೀಪುತ್ರಾದ್ಧನಂಜಯಾತ್।
06114075c ಪೀಡ್ಯಮಾನಾಃ ಶಿತೈಃ ಶಸ್ತ್ರೈಃ ಪ್ರದ್ರವಾಮ ಮಹಾರಣಾತ್।।
ಆಗ ನಮ್ಮವರು ಕುಂತೀಪುತ್ರ ಧನಂಜಯನ ಶ್ವೇತಹಯಗಳು ಮತ್ತು ಪೀಡಿಸುತ್ತಿರುವ ನಿಶಿತ ಶಸ್ತ್ರಗಳಿಂದ ಮಹಾರಣದಿಂದ ಪಲಾಯನಮಾಡಿದರು.
06114076a ಸೌವೀರಾಃ ಕಿತವಾಃ ಪ್ರಾಚ್ಯಾಃ ಪ್ರತೀಚ್ಯೋದೀಚ್ಯಮಾಲವಾಃ।
06114076c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ।।
06114077a ಶಾಲ್ವಾಶ್ರಯಾಸ್ತ್ರಿಗರ್ತಾಶ್ಚ ಅಂಬಷ್ಠಾಃ ಕೇಕಯೈಃ ಸಹ।
06114077c ದ್ವಾದಶೈತೇ ಜನಪದಾಃ ಶರಾರ್ತಾ ವ್ರಣಪೀಡಿತಾಃ।।
06114077e ಸಂಗ್ರಾಮೇ ನ ಜಹುರ್ಭೀಷ್ಮಂ ಯುಧ್ಯಮಾನಂ ಕಿರೀಟಿನಾ।।
ಆದರೆ ಸೌವೀರರು, ಕಿತವರು, ಪ್ರಾಚ್ಯರು, ಪ್ರತೀಚ್ಯರು, ಔತ್ತರೇಯರು, ಮಾಲವರು, ಅಭೀಷಾಹರು, ಶೂರಸೇನರು, ಶಿಬಯರು, ವಸಾತಯರು, ಶಾಲ್ವಶ್ರಯರು, ತ್ರಿಗರ್ತರು, ಅಂಬಷ್ಠರು, ಮತ್ತು ಕೇಕಯರು ಈ ಹನ್ನೆರಡು ಜನಪದದವರು ಯುದ್ಧಮಾಡುತ್ತಿರುವ ಕಿರೀಟಿಯ ಶರಗಳಿಂದ ಪೀಡಿತರಾಗಿದ್ದರೂ ಕೂಡ ಸಂಗ್ರಾಮದಲ್ಲಿ ಭೀಷ್ಮನನ್ನು ಬಿಟ್ಟು ಓಡಲಿಲ್ಲ.
06114078a ತತಸ್ತಮೇಕಂ ಬಹವಃ ಪರಿವಾರ್ಯ ಸಮಂತತಃ।
06114078c ಪರಿಕಾಲ್ಯ ಕುರೂನ್ಸರ್ವಾನ್ ಶರವರ್ಷೈರವಾಕಿರನ್।।
ಆಗ ಅವರೆಲ್ಲರೂ ಬಹಳ ಜನರು ಅವನೊಬ್ಬನನ್ನೇ ಎಲ್ಲಕಡೆಗಳಿಂದ ಸುತ್ತುವರೆದು ಆಕ್ರಮಿಸಿ ಶರವರ್ಷದಿಂದ ಅವನನ್ನು ಮುಚ್ಚಿದರು.
06114079a ನಿಪಾತಯತ ಗೃಹ್ಣೀತ ವಿಧ್ಯತಾಥ ಚ ಕರ್ಷತ।
06114079c ಇತ್ಯಾಸೀತ್ತುಮುಲಃ ಶಬ್ದೋ ರಾಜನ್ಭೀಷ್ಮರಥಂ ಪ್ರತಿ।।
ರಾಜನ್! “ಬೀಳಿಸಿರಿ! ಸೆರೆಹಿಡಿಯಿರಿ! ಯುದ್ಧಮಾಡಿರಿ! ಕತ್ತರಿಸಿ!” ಇವೇ ಮುಂತಾದ ತುಮುಲ ಶಬ್ಧಗಳು ಭೀಷ್ಮನ ರಥದ ಬಳಿಯಿಂದ ಕೇಳಿಬಂದವು.
06114080a ಅಭಿಹತ್ಯ ಶರೌಘೈಸ್ತಂ ಶತಶೋಽಥ ಸಹಸ್ರಶಃ।
06114080c ನ ತಸ್ಯಾಸೀದನಿರ್ಭಿನ್ನಂ ಗಾತ್ರೇಷ್ವಂಗುಲಮಾತ್ರಕಂ।।
ನೂರಾರು ಸಹಸ್ರಾರು ಶರಗಳಿಂದ ಹೊಡೆಯಲ್ಪಟ್ಟ ಅವನ ದೇಹದಲ್ಲಿ ಹೊಡೆಯಲ್ಪಡದ ಒಂದು ಅಂಗುಲದಷ್ಟು ಜಾಗವೂ ಇರಲಿಲ್ಲ.
06114081a ಏವಂ ವಿಭೋ ತವ ಪಿತಾ ಶರೈರ್ವಿಶಕಲೀಕೃತಃ।
06114081c ಶಿತಾಗ್ರೈಃ ಫಲ್ಗುನೇನಾಜೌ ಪ್ರಾಕ್ಶಿರಾಃ ಪ್ರಾಪತದ್ರಥಾತ್।
06114081e ಕಿಂಚಿಚ್ಛೇಷೇ ದಿನಕರೇ ಪುತ್ರಾಣಾಂ ತವ ಪಶ್ಯತಾಂ।।
ಈ ವಿಧವಾಗಿ ನಿನ್ನ ತಂದೆಯು ಮೊನಚಾದ ಕೊನೆಗಳನ್ನುಳ್ಳ ಫಲ್ಗುನನ ಬಾಣಗಳಿಂದ ಚೂರ್ಣೀಕೃತನಾಗಿ, ದಿನಕರನು ಮುಳುಗುವುದಕ್ಕೆ ಸ್ವಲ್ಪಹೊತ್ತು ಮುಂಚೆ, ನಿನ್ನ ಮಕ್ಕಳು ನೋಡುತ್ತಿದ್ದಂತೆಯೇ, ತಲೆಯನ್ನು ಪೂರ್ವದಿಕ್ಕಿಗೆ ಹಾಕಿ ರಥದಿಂದ ಬಿದ್ದನು.
06114082a ಹಾ ಹೇತಿ ದಿವಿ ದೇವಾನಾಂ ಪಾರ್ಥಿವಾನಾಂ ಚ ಸರ್ವಶಃ।
06114082c ಪತಮಾನೇ ರಥಾದ್ಭೀಷ್ಮೇ ಬಭೂವ ಸುಮಹಾನ್ಸ್ವನಃ।।
ರಥದಿಂದ ಭೀಷ್ಮನು ಬೀಳುತ್ತಿರಲು “ಹಾ! ಹಾ!” ಎಂದು ದಿವಿಯಲ್ಲಿ ದೇವತೆಗಳ ಮತ್ತು ಎಲ್ಲ ಪಾರ್ಥಿವರ ಮಹಾ ಕೂಗು ಕೇಳಿಬಂದಿತು.
06114083a ತಂ ಪತಂತಮಭಿಪ್ರೇಕ್ಷ್ಯ ಮಹಾತ್ಮಾನಂ ಪಿತಾಮಹಂ।
06114083c ಸಹ ಭೀಷ್ಮೇಣ ಸರ್ವೇಷಾಂ ಪ್ರಾಪತನ್ ಹೃದಯಾನಿ ನಃ।।
ಮಹಾತ್ಮ ಪಿತಾಮಹನು ಬೀಳುತ್ತಿರುವುದನ್ನು ನೋಡಿ ಭೀಷ್ಮನೊಂದಿಗೆ ನಮ್ಮವರೆಲ್ಲರ ಹೃದಯಗಳೂ ಕುಸಿದು ಬಿದ್ದವು.
06114084a ಸ ಪಪಾತ ಮಹಾಬಾಹುರ್ವಸುಧಾಮನುನಾದಯನ್।
06114084c ಇಂದ್ರಧ್ವಜ ಇವೋತ್ಸೃಷ್ಟಃ ಕೇತುಃ ಸರ್ವಧನುಷ್ಮತಾಂ।
06114084e ಧರಣೀಂ ನಾಸ್ಪೃಶಚ್ಚಾಪಿ ಶರಸಂಘೈಃ ಸಮಾಚಿತಃ।।
ಎಲ್ಲ ಧನುಷ್ಮತರಿಗೂ ಕೇತುಪ್ರಾಯನಾಗಿದ್ದ ಆ ಮಹಾಬಾಹುವು ಇಂದ್ರಧ್ವಜವು ಕೆಳಗೆ ಬೀಳುವಂತೆ ಶಬ್ಧಮಾಡುತ್ತ ಕೆಳಗೆ ಬಿದ್ದನು. ಆದರೆ ಶರಸಮೂಹಗಳಿಂದ ಸಮಾವೃತನಾಗಿದ್ದ ಅವನ ಶರೀರವು ಧರಣಿಯನ್ನು ಸ್ಪರ್ಷಿಸಲಿಲ್ಲ.
06114085a ಶರತಲ್ಪೇ ಮಹೇಷ್ವಾಸಂ ಶಯಾನಂ ಪುರುಷರ್ಷಭಂ।
06114085c ರಥಾತ್ಪ್ರಪತಿತಂ ಚೈನಂ ದಿವ್ಯೋ ಭಾವಃ ಸಮಾವಿಶತ್।।
ರಥದಿಂದ ಬಿದ್ದು ಶರತಲ್ಪದಲ್ಲಿ ಮಲಗಿದ್ದ ಮಹೇಷ್ವಾಸ ಪುರುಷರ್ಷಭನನ್ನು ಯಾವುದೋ ಒಂದು ದಿವ್ಯ ಭಾವವು ಸಮಾವೇಶಗೊಂಡಿತು.
06114086a ಅಭ್ಯವರ್ಷತ ಪರ್ಜನ್ಯಃ ಪ್ರಾಕಂಪತ ಚ ಮೇದಿನೀ।
06114086c ಪತನ್ಸ ದದೃಶೇ ಚಾಪಿ ಖರ್ವಿತಂ ಚ ದಿವಾಕರಂ।।
ಪರ್ಜನ್ಯನು ಮಳೆಸುರಿಸಿದನು. ಮೇದಿನಿಯು ಕಂಪಿಸಿದಳು. ಅವನು ಬೀಳಲು ದಿವಾಕರನೂ ವಾಲಿದಂತೆ ಕಂಡುಬಂದಿತು.
06114087a ಸಂಜ್ಞಾಂ ಚೈವಾಲಭದ್ವೀರಃ ಕಾಲಂ ಸಂಚಿಂತ್ಯ ಭಾರತ।
06114087c ಅಂತರಿಕ್ಷೇ ಚ ಶುಶ್ರಾವ ದಿವ್ಯಾಂ ವಾಚಂ ಸಮಂತತಃ।।
ಭಾರತ! ಇನ್ನೂ ಸಂಜ್ಞೆಯಿದ್ದು ಕಾಲವನ್ನು ಚಿಂತಿಸುತ್ತಿದ್ದ ಆ ವೀರನು ಅಂತರಿಕ್ಷದಲ್ಲಿ ಎಲ್ಲಕಡೆ ನಡೆಯುತ್ತಿದ್ದ ದಿವ್ಯ ಮಾತುಗಳನ್ನು ಕೇಳಿದನು:
06114088a ಕಥಂ ಮಹಾತ್ಮಾ ಗಾಂಗೇಯಃ ಸರ್ವಶಸ್ತ್ರಭೃತಾಂ ವರಃ।
06114088c ಕಾಲಂ ಕರ್ತಾ ನರವ್ಯಾಘ್ರಃ ಸಂಪ್ರಾಪ್ತೇ ದಕ್ಷಿಣಾಯನೇ।।
“ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ, ನರವ್ಯಾಘ್ರ ಮಹಾತ್ಮ ಗಾಂಗೇಯನು ಹೇಗೆ ದಕ್ಷಿಣಾಯನವು ಪ್ರಾಪ್ತವಾಗಿರುವಾಗ ಕಾಲವಶನಾಗುತ್ತಾನೆ?”
06114089a ಸ್ಥಿತೋಽಸ್ಮೀತಿ ಚ ಗಾಂಗೇಯಸ್ತಚ್ಚ್ರುತ್ವಾ ವಾಕ್ಯಮಬ್ರವೀತ್।
06114089c ಧಾರಯಾಮಾಸ ಚ ಪ್ರಾಣಾನ್ಪತಿತೋಽಪಿ ಹಿ ಭೂತಲೇ।
06114089e ಉತ್ತರಾಯಣಮನ್ವಿಚ್ಛನ್ಭೀಷ್ಮಃ ಕುರುಪಿತಾಮಹಃ।।
ಅದನ್ನು ಕೇಳಿ ಗಾಂಗೇಯನು “ಇನ್ನೂ ಇದ್ದೇನೆ!” ಎಂದು ಹೇಳಿದನು. ಭೂತಲದ ಮೇಲೆ ಬಿದ್ದರೂ ಉತ್ತರಾಯಣವನ್ನು ಪ್ರತೀಕ್ಷಿಸುತ್ತಾ ಕುರುಪಿತಾಮಹ ಭೀಷ್ಮನು ಪ್ರಾಣಗಳನ್ನು ಹಿಡಿದಿಟ್ಟುಕೊಂಡಿದ್ದನು.
06114090a ತಸ್ಯ ತನ್ಮತಮಾಜ್ಞಾಯ ಗಂಗಾ ಹಿಮವತಃ ಸುತಾ।
06114090c ಮಹರ್ಷೀನ್ ಹಂಸರೂಪೇಣ ಪ್ರೇಷಯಾಮಾಸ ತತ್ರ ವೈ।।
ಅವನ ಆ ಮತವನ್ನು ತಿಳಿದ ಹಿಮವತನ ಸುತೆ ಗಂಗೆಯು ಹಂಸರೂಪದಲ್ಲಿ ಮಹರ್ಷಿಗಳನ್ನು ಅಲ್ಲಿಗೆ ಕಳುಹಿಸಿದಳು.
06114091a ತತಃ ಸಂಪಾತಿನೋ ಹಂಸಾಸ್ತ್ವರಿತಾ ಮಾನಸೌಕಸಃ।
06114091c ಆಜಗ್ಮುಃ ಸಹಿತಾ ದ್ರಷ್ಟುಂ ಭೀಷ್ಮಂ ಕುರುಪಿತಾಮಹಂ।
06114091e ಯತ್ರ ಶೇತೇ ನರಶ್ರೇಷ್ಠಃ ಶರತಲ್ಪೇ ಪಿತಾಮಹಃ।।
ಆಗ ಮಾನಸ ಸರೋವರದಲ್ಲಿ ವಾಸಿಸುತ್ತಿದ್ದ ಸಂಪಾತಿ ಹಂಸಗಳು ಒಟ್ಟುಗೂಡಿ ತ್ವರೆಮಾಡಿ ಕುರುಪಿತಾಮಹ ಭೀಷ್ಮನನ್ನು ನೋಡಲು ಎಲ್ಲಿ ನರಶ್ರೇಷ್ಠ ಪಿತಾಮಹನು ಶರತಲ್ಪದಲ್ಲಿ ಮಲಗಿದ್ದನೋ ಅಲ್ಲಿಗೆ ಆಗಮಿಸಿದವು.
06114092a ತೇ ತು ಭೀಷ್ಮಂ ಸಮಾಸಾದ್ಯ ಮುನಯೋ ಹಂಸರೂಪಿಣಃ।
06114092c ಅಪಶ್ಯಂ ಶರತಲ್ಪಸ್ಥಂ ಭೀಷ್ಮಂ ಕುರುಪಿತಾಮಹಂ।।
ಆ ಹಂಸರೂಪಿ ಮುನಿಗಳು ಭೀಷ್ಮನ ಬಳಿಸಾರಿ ಶರತಲ್ಪಸ್ಥನಾಗಿದ್ದ ಕುರುಪಿತಾಮಹ ಭೀಷ್ಮನನ್ನು ಕಂಡರು.
06114093a ತೇ ತಂ ದೃಷ್ಟ್ವಾ ಮಹಾತ್ಮಾನಂ ಕೃತ್ವಾ ಚಾಪಿ ಪ್ರದಕ್ಷಿಣಂ।
06114093c ಗಾಂಗೇಯಂ ಭರತಶ್ರೇಷ್ಠಂ ದಕ್ಷಿಣೇನ ಚ ಭಾಸ್ಕರಂ।।
06114094a ಇತರೇತರಮಾಮಂತ್ರ್ಯ ಪ್ರಾಹುಸ್ತತ್ರ ಮನೀಷಿಣಃ।
ಆ ಮಹಾತ್ಮನನ್ನು ನೋಡಿ ಮನೀಷಿಣರು ಪ್ರದಕ್ಷಿಣೆ ಮಾಡಿ ಭಾಸ್ಕರನ ದಕ್ಷಿಣಾಯನದ ಕುರಿತು ಪರಸ್ಪರರಲ್ಲಿ ಸಮಾಲೋಚಿಸಿ ಭರತಶ್ರೇಷ್ಠ ಗಾಂಗೇಯನಿಗೆ ಹೇಳಿದರು:
06114094c ಭೀಷ್ಮ ಏವ ಮಹಾತ್ಮಾ ಸನ್ಸಂಸ್ಥಾತಾ ದಕ್ಷಿಣಾಯನೇ।।
06114095a ಇತ್ಯುಕ್ತ್ವಾ ಪ್ರಸ್ಥಿತಾನ್ ಹಂಸಾನ್ದಕ್ಷಿಣಾಮಭಿತೋ ದಿಶಂ।
“ಭೀಷ್ಮನು ಮಹಾತ್ಮನಾಗಿದ್ದುಕೊಂಡು ದಕ್ಷಿಣಾಯನದಲ್ಲಿ ಹೇಗೆ ತಾನೇ ಮೃತ್ಯುವಶನಾಗುತ್ತಾನೆ?” ಎಂದು ಹೇಳಿಕೊಳ್ಳುತ್ತಾ ಹಂಸಗಳು ದಕ್ಷಿಣಾಭಿಮುಖವಾಗಿ ಹೋದವು.
06114095c ಸಂಪ್ರೇಕ್ಷ್ಯ ವೈ ಮಹಾಬುದ್ಧಿಶ್ಚಿಂತಯಿತ್ವಾ ಚ ಭಾರತ।।
06114096a ತಾನಬ್ರವೀಚ್ಚಾಂತನವೋ ನಾಹಂ ಗಂತಾ ಕಥಂ ಚನ।
06114096c ದಕ್ಷಿಣಾವೃತ್ತ ಆದಿತ್ಯೇ ಏತನ್ಮೇ ಮನಸಿ ಸ್ಥಿತಂ।।
ಭಾರತ! ಅವರನ್ನು ನೋಡಿ ಆ ಮಹಾಬುದ್ಧಿ ಶಾಂತನವನೂ ಕೂಡ ಯೋಚಿಸಿ ಅವರಿಗೆ ಹೇಳಿದನು: “ಆದಿತ್ಯನು ದಕ್ಷಿಣಾವೃತ್ತದಲ್ಲಿರುವಾಗ ನಾನು ಯಾವ ಕಾರಣಕ್ಕೂ ಹೋಗುವುದಿಲ್ಲ. ಇದು ನನ್ನ ಮನಸ್ಸಿನಲ್ಲಿದೆ.
06114097a ಗಮಿಷ್ಯಾಮಿ ಸ್ವಕಂ ಸ್ಥಾನಮಾಸೀದ್ಯನ್ಮೇ ಪುರಾತನಂ।
06114097c ಉದಗಾವೃತ್ತ ಆದಿತ್ಯೇ ಹಂಸಾಃ ಸತ್ಯಂ ಬ್ರವೀಮಿ ವಃ।।
ಆದಿತ್ಯನು ಉತ್ತರಾವೃತ್ತಕ್ಕೆ ಬಂದಾಗಲೇ ನಾನು ನನ್ನ ಪುರಾತನ ಸ್ಥಾನವ್ಯಾವುದೋ ಅಲ್ಲಿಗೆ ಹೋಗುತ್ತೇನೆ. ಹಂಸಗಳೇ! ನಾನು ಸತ್ಯವನ್ನೇ ಹೇಳುತ್ತಿದ್ದೇನೆ.
06114098a ಧಾರಯಿಷ್ಯಾಮ್ಯಹಂ ಪ್ರಾಣಾನುತ್ತರಾಯಣಕಾಂಕ್ಷಯಾ।
06114098c ಐಶ್ವರ್ಯಭೂತಃ ಪ್ರಾಣಾನಾಮುತ್ಸರ್ಗೇ ನಿಯತೋ ಹ್ಯಹಂ।।
06114098e ತಸ್ಮಾತ್ಪ್ರಾಣಾನ್ಧಾರಯಿಷ್ಯೇ ಮುಮೂರ್ಷುರುದಗಾಯನೇ।।
ಉತ್ತರಾಯಣದ ಪ್ರತೀಕ್ಷೆಯಿಂದ ಪ್ರಾಣಗಳನ್ನು ಧಾರಣೆಮಾಡಿಕೊಂಡಿರುತ್ತೇನೆ. ಏಕೆಂದರೆ ಪ್ರಾಣಗಳನ್ನು ಬಿಡುವುದನ್ನು ನಿಯಂತ್ರಿಸುವ ಶಕ್ತಿಯು ನನ್ನಲ್ಲಿದೆ. ಆದುದರಿಂದ ಉತ್ತರಾಯಣದ ವರೆಗೆ ಪ್ರಾಣಗಳನ್ನು ಧರಿಸಿಕೊಂಡಿರುತ್ತೇನೆ.
06114099a ಯಶ್ಚ ದತ್ತೋ ವರೋ ಮಹ್ಯಂ ಪಿತ್ರಾ ತೇನ ಮಹಾತ್ಮನಾ।
06114099c ಚಂದತೋ ಮೃತ್ಯುರಿತ್ಯೇವಂ ತಸ್ಯ ಚಾಸ್ತು ವರಸ್ತಥಾ।।
ಇಚ್ಛಂದ ಮರಣಿಯಾಗು ಎಂದು ನನಗೆ ನನ್ನ ಮಹಾತ್ಮ ಪಿತನು ವರವನ್ನಿತ್ತಿದ್ದನು. ಅದೇ ವರದಂತೆಯೇ ಆಗುತ್ತದೆ.
06114100a ಧಾರಯಿಷ್ಯೇ ತತಃ ಪ್ರಾಣಾನುತ್ಸರ್ಗೇ ನಿಯತೇ ಸತಿ।
06114100c ಇತ್ಯುಕ್ತ್ವಾ ತಾಂಸ್ತದಾ ಹಂಸಾನಶೇತ ಶರತಲ್ಪಗಃ।।
ಪ್ರಾಣವನ್ನು ಬಿಡಲು ಸರಿಯಾದ ಸಮಯದ ವರೆಗೆ ಪ್ರಾಣಗಳನ್ನು ಧಾರಣೆಮಾಡಿಕೊಂಡಿರುತ್ತೇನೆ.” ಹೀಗೆ ಆ ಹಂಸಗಳಿಗೆ ಹೇಳಿ ಶರತಲ್ಪದಲ್ಲಿ ಮಲಗಿದನು.
06114101a ಏವಂ ಕುರೂಣಾಂ ಪತಿತೇ ಶೃಂಗೇ ಭೀಷ್ಮೇ ಮಹೌಜಸಿ।
06114101c ಪಾಂಡವಾಃ ಸೃಂಜಯಾಶ್ಚೈವ ಸಿಂಹನಾದಂ ಪ್ರಚಕ್ರಿರೇ।।
ಈ ರೀತಿ ಮಹೌಜಸ ಶೃಂಗಪ್ರಾಯ ಭೀಷ್ಮನು ಬೀಳಲು ಪಾಂಡವರು ಮತ್ತು ಸೃಂಜಯರು ಸಿಂಹನಾದಗೈದರು.
06114102a ತಸ್ಮಿನ್ ಹತೇ ಮಹಾಸತ್ತ್ವೇ ಭರತಾನಾಮಮಧ್ಯಮೇ।
06114102c ನ ಕಿಂ ಚಿತ್ಪ್ರತ್ಯಪದ್ಯಂತ ಪುತ್ರಾಸ್ತೇ ಭರತರ್ಷಭ।
06114102e ಸಮ್ಮೋಹಶ್ಚೈವ ತುಮುಲಃ ಕುರೂಣಾಮಭವತ್ತದಾ।।
ಭರತರ್ಷಭ! ಭರತರ ಮಧ್ಯಗನಾಗಿದ್ದ ಆ ಮಹಾಸತ್ತ್ವನು ಹತನಾಗಲು ನಿನ್ನ ಪುತ್ರರಿಗೆ ಮುಂದೇನು ಮಾಡಬೇಕೆಂದು ತೋಚದಾಯಿತು. ಕುರುಗಳಲ್ಲಿ ಸಮ್ಮೋಹವೂ ತುಮುಲವೂ ಉಂಟಾಯಿತು.
06114103a ನೃಪಾ ದುರ್ಯೋಧನಮುಖಾ ನಿಃಶ್ವಸ್ಯ ರುರುದುಸ್ತತಃ।
06114103c ವಿಷಾದಾಚ್ಚ ಚಿರಂ ಕಾಲಮತಿಷ್ಠನ್ವಿಗತೇಂದ್ರಿಯಾಃ।।
ದುರ್ಯೋಧನನ ನಾಯಕತ್ವದಲ್ಲಿದ್ದ ನೃಪರು ನಿಟ್ಟುಸಿರು ಬಿಡುತ್ತಾ ಅಳತೊಡಗಿದರು. ವಿಷಾದರಾಗಿ, ಗರಬಡಿದವರಂತೆ, ಬಹುಕಾಲ ಹಾಗೆಯೇ ನಿಂತುಕೊಂಡರು.
06114104a ದಧ್ಯುಶ್ಚೈವ ಮಹಾರಾಜ ನ ಯುದ್ಧೇ ದಧಿರೇ ಮನಃ।
06114104c ಊರುಗ್ರಾಹಗೃಹೀತಾಶ್ಚ ನಾಭ್ಯಧಾವಂತ ಪಾಂಡವಾನ್।।
ಮಹಾರಾಜ! ಅವರಿಗೆ ಯುದ್ಧಮಾಡಲೂ ಕೂಡ ಮನಸ್ಸು ಬರಲಿಲ್ಲ. ಸಂಧಿವಾತ ಹಿಡಿದವರಂತೆ ಪಾಂಡವರನ್ನು ಆಕ್ರಮಣಿಸಲೂ ಇಲ್ಲ.
06114105a ಅವಧ್ಯೇ ಶಂತನೋಃ ಪುತ್ರೇ ಹತೇ ಭೀಷ್ಮೇ ಮಹೌಜಸಿ।
06114105c ಅಭಾವಃ ಸುಮಹಾನ್ರಾಜನ್ಕುರೂನಾಗಾದತಂದ್ರಿತಃ।।
ರಾಜನ್! ಅವಧ್ಯನಾದ ಮಹೌಜಸ ಶಂತನು ಪುತ್ರ ಭೀಷ್ಮನು ಹತನಾಗಲು ಕುರುಗಳಲ್ಲಿ ಅಗಾಧ ಅಭಾವವಾಯಿತೆಂದು ವಿಚಾರಿಸಿದರು.
06114106a ಹತಪ್ರವೀರಾಶ್ಚ ವಯಂ ನಿಕೃತ್ತಾಶ್ಚ ಶಿತೈಃ ಶರೈಃ।
06114106c ಕರ್ತವ್ಯಂ ನಾಭಿಜಾನೀಮೋ ನಿರ್ಜಿತಾಃ ಸವ್ಯಸಾಚಿನಾ।।
ನಾವು ಪ್ರವೀರರನ್ನು ಕಳೆದುಕೊಂಡೆವು. ನಿಶಿತ ಶರಗಳಿಂದ ತುಂಡರಿಸಲ್ಪಟ್ಟೆವು. ಸವ್ಯಸಾಚಿಯಿಂದ ನಿರ್ಜಿತರಾಗಿ ಏನು ಮಾಡಬೇಕೆಂದು ತಿಳಿಯದವರಾದೆವು.
06114107a ಪಾಂಡವಾಸ್ತು ಜಯಂ ಲಬ್ಧ್ವಾ ಪರತ್ರ ಚ ಪರಾಂ ಗತಿಂ।
06114107c ಸರ್ವೇ ದಧ್ಮುರ್ಮಹಾಶಂಖಾನ್ ಶೂರಾಃ ಪರಿಘಬಾಹವಃ।
06114107e ಸೋಮಕಾಶ್ಚ ಸಪಂಚಾಲಾಃ ಪ್ರಾಹೃಷ್ಯಂತ ಜನೇಶ್ವರ।।
ಪಾಂಡವರಾದರೋ ಜಯವನ್ನು ಪಡೆದು ಪರಲೋಕಗಳಲ್ಲಿಯೂ ಉತ್ತಮ ಗತಿಗಳನ್ನು ಪಡೆದರು. ಪರಿಘಬಾಹುಗಳಾದ ಎಲ್ಲರೂ ಮಹಾಶಂಖಗಳನ್ನು ಊದಿದರು. ಜನೇಶ್ವರ! ಪಾಂಚಾಲರೊಂದಿಗೆ ಸೋಮಕರೂ ಹರ್ಷಿಸಿದರು.
06114108a ತತಸ್ತೂರ್ಯಸಹಸ್ರೇಷು ನದತ್ಸು ಸುಮಹಾಬಲಃ।
06114108c ಆಸ್ಫೋಟಯಾಮಾಸ ಭೃಶಂ ಭೀಮಸೇನೋ ನನರ್ತ ಚ।।
ಸಹಸ್ರಾರು ಜಯಘೋಷಗಳಿಂದ ಆನಂದಿಸುತ್ತಿರಲು ಸುಮಹಾಬಲ ಭೀಮಸೇನನು ತೋಳುಗಳನ್ನು ಗಟ್ಟಿಯಾಗಿ ತಟ್ಟುತ್ತಾ ಕುಣಿದಾಡಿದನು.
06114109a ಸೇನಯೋರುಭಯೋಶ್ಚಾಪಿ ಗಾಂಗೇಯೇ ವಿನಿಪಾತಿತೇ।
06114109c ಸಂನ್ಯಸ್ಯ ವೀರಾಃ ಶಸ್ತ್ರಾಣಿ ಪ್ರಾಧ್ಯಾಯಂತ ಸಮಂತತಃ।।
ಗಾಂಗೇಯನು ಬೀಳಲು ಎರಡೂ ಸೇನೆಗಳಲ್ಲಿ ವೀರರು ಶಸ್ತ್ರಗಳನ್ನು ಕೆಳಗಿಟ್ಟು ಎಲ್ಲ ಕಡೆಗಳಿಂದ ಧಾವಿಸಿಬಂದರು.
06114110a ಪ್ರಾಕ್ರೋಶನ್ಪ್ರಾಪತಂಶ್ಚಾನ್ಯೇ ಜಗ್ಮುರ್ಮೋಹಂ ತಥಾಪರೇ।
06114110c ಕ್ಷತ್ರಂ ಚಾನ್ಯೇಽಭ್ಯನಿಂದಂತ ಭೀಷ್ಮಂ ಚೈಕೇಽಭ್ಯಪೂಜಯನ್।।
ಕೆಲವರು ಜೋರಾಗಿ ಅಳುತ್ತಿದ್ದರು. ಕೆಲವರು ಕೆಳಗೆ ಬಿದ್ದರು. ಇನ್ನು ಕೆಲವರು ಮೂರ್ಛೆಗೊಂಡರು. ಅನ್ಯರು ಕ್ಷತ್ರ ಧರ್ಮವನ್ನು ನಿಂದಿಸಿದರು. ಇನ್ನು ಕೆಲವರು ಭೀಷ್ಮನನ್ನು ಗೌರವಿಸಿದರು.
06114111a ಋಷಯಃ ಪಿತರಶ್ಚೈವ ಪ್ರಶಶಂಸುರ್ಮಹಾವ್ರತಂ।
06114111c ಭರತಾನಾಂ ಚ ಯೇ ಪೂರ್ವೇ ತೇ ಚೈನಂ ಪ್ರಶಶಂಸಿರೇ।।
ಋಷಿಗಳೂ ಪಿತೃಗಳೂ ಆ ಮಹಾವ್ರತನನ್ನು ಪ್ರಶಂಸಿಸಿದರು. ಭರತರ ಪೂರ್ವಜರೂ ಕೂಡ ಅವನನ್ನು ಪ್ರಶಂಸಿಸಿದರು.
06114112a ಮಹೋಪನಿಷದಂ ಚೈವ ಯೋಗಮಾಸ್ಥಾಯ ವೀರ್ಯವಾನ್।
06114112c ಜಪಂ ಶಾಂತನವೋ ಧೀಮಾನ್ಕಾಲಾಕಾಂಕ್ಷೀ ಸ್ಥಿತೋಽಭವತ್।।
ವೀರ್ಯವಾನ್ ಧೀಮಾನ್ ಶಾಂತನವನು ಮಹೋಪನಿಷದ ಯೋಗವನ್ನು ಆಶ್ರಯಿಸಿ ಜಪಿಸುತ್ತಾ ಕಾಲಾಕಾಂಕ್ಷಿಯಾಗಿ ಸ್ಥಿತನಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮ ವಧಪರ್ವಣಿ ಭೀಷ್ಮನಿಪಾತನೇ ಚತುರ್ದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮ ವಧಪರ್ವದಲ್ಲಿ ಭೀಷ್ಮನಿಪಾತನ ಎನ್ನುವ ನೂರಾಹದಿನಾಲ್ಕನೇ ಅಧ್ಯಾಯವು.