ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 112
ಸಾರ
ಅಭಿಮನ್ಯು-ದುರ್ಯೋಧನರ (1-8), ಸಾತ್ಯಕಿ-ಅಶ್ವತ್ಥಾಮರ (9-12), ಧೃಷ್ಟಕೇತು-ಪೌರವರ (13-26), ಸುಶರ್ಮ-ಚಿತ್ರಸೇನರ (27-29), ಅಭಿಮನ್ಯು-ಬೃಹದ್ಬಲರ (30-34), ಭೀಮ-ಗಜಸೇನೆಗಳ (35-37), ಯುಧಿಷ್ಠಿರ-ಶಲ್ಯರ (38-39), ವಿರಾಟ-ಜಯದ್ರಥರ (40-42), ದ್ರೋಣ-ಧೃಷ್ಟದ್ಯುಮ್ನರ (43-52), ಅರ್ಜುನ-ಭಗದತ್ತರ (53-59) ದ್ವಂದ್ವಯುದ್ಧಗಳು. ಭೀಷ್ಮನ ಪರಾಕ್ರಮ (60-77). ಶಿಖಂಡಿ-ಅರ್ಜುನರು ಭೀಷ್ಮನನ್ನು ಆಕ್ರಮಣಿಸಿದುದು (78-101). ಅರ್ಜುನಪರಾಕ್ರಮ (102-124). ರಣಭೂಮಿಯ ವರ್ಣನೆ (125-138).
06112001 ಸಂಜಯ ಉವಾಚ।
06112001a ಅಭಿಮನ್ಯುರ್ಮಹಾರಾಜ ತವ ಪುತ್ರಮಯೋಧಯತ್।
06112001c ಮಹತ್ಯಾ ಸೇನಯಾ ಯುಕ್ತೋ ಭೀಷ್ಮಹೇತೋಃ ಪರಾಕ್ರಮೀ।।
ಸಂಜಯನು ಹೇಳಿದನು: “ಮಹಾರಾಜ! ಭೀಷ್ಮನನ್ನು ರಕ್ಷಿಸಲು ಅಪಾರ ಸೇನಾ ಸಮೇತನಾಗಿ ಬಂದ ನಿನ್ನ ಮಗನನ್ನು ಪರಾಕ್ರಮಿ ಅಭಿಮನ್ಯುವು ಎದುರಿಸಿ ಯುದ್ಧಮಾಡಿದನು.
06112002a ದುರ್ಯೋಧನೋ ರಣೇ ಕಾರ್ಷ್ಣಿಂ ನವಭಿರ್ನತಪರ್ವಭಿಃ।
06112002c ಆಜಘಾನ ರಣೇ ಕ್ರುದ್ಧಃ ಪುನಶ್ಚೈನಂ ತ್ರಿಭಿಃ ಶರೈಃ।।
ರಣದಲ್ಲಿ ಕ್ರುದ್ಧನಾದ ದುರ್ಯೋಧನನು ಕಾರ್ಷ್ಣಿ ಅಭಿಮನ್ಯುವನ್ನು ಒಂಭತ್ತು ನತಪರ್ವ ಬಾಣಗಳಿಂದ ಮತ್ತು ಪುನಃ ಮೂರು ಶರಗಳಿಂದ ಹೊಡೆದನು.
06112003a ತಸ್ಯ ಶಕ್ತಿಂ ರಣೇ ಕಾರ್ಷ್ಣಿರ್ಮೃತ್ಯೋರ್ಘೋರಾಮಿವ ಸ್ವಸಾಂ।
06112003c ಪ್ರೇಷಯಾಮಾಸ ಸಂಕ್ರುದ್ಧೋ ದುರ್ಯೋಧನರಥಂ ಪ್ರತಿ।।
ಆಗ ಸಂಕ್ರುದ್ಧನಾದ ಕಾರ್ಷ್ಣಿಯು ರಣದಲ್ಲಿ ದುರ್ಯೋಧನನ ಮೇಲೆ ಮೃತ್ಯುವಿನ ಸೋದರಿಯಂತೆ ಘೋರವಾಗಿದ್ದ ಶಕ್ತಿಯನ್ನು ಪ್ರಯೋಗಿಸಿದನು.
06112004a ತಾಮಾಪತಂತೀಂ ಸಹಸಾ ಘೋರರೂಪಾಂ ವಿಶಾಂ ಪತೇ।
06112004c ದ್ವಿಧಾ ಚಿಚ್ಛೇದ ತೇ ಪುತ್ರಃ ಕ್ಷುರಪ್ರೇಣ ಮಹಾರಥಃ।।
ವಿಶಾಂಪತೇ! ವೇಗವಾಗಿ ಬೀಳುತ್ತಿದ್ದ ಆ ಘೋರರೂಪಿಯನ್ನು ನಿನ್ನ ಮಗ ಮಹಾರಥನು ಕ್ಷುರಪ್ರದಿಂದ ಎರಡಾಗಿ ತುಂಡರಿಸಿದನು.
06112005a ತಾಂ ಶಕ್ತಿಂ ಪತಿತಾಂ ದೃಷ್ಟ್ವಾ ಕಾರ್ಷ್ಣಿಃ ಪರಮಕೋಪನಃ।
06112005c ದುರ್ಯೋಧನಂ ತ್ರಿಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್।।
ಆ ಶಕ್ತಿಯು ಬಿದ್ದುದನ್ನು ನೋಡಿದ ಕಾರ್ಷ್ಣಿಯು ಪರಮಕುಪಿತನಾಗಿ ದುರ್ಯೋಧನನ ವಕ್ಷಸ್ಥಲ ಮತ್ತು ಬಾಹುಗಳನ್ನು ಮೂರು ಬಾಣಗಳಿಂದ ಪ್ರಹರಿಸಿದನು.
06112006a ಪುನಶ್ಚೈನಂ ಶರೈರ್ಘೋರೈರಾಜಘಾನ ಸ್ತನಾಂತರೇ।
06112006c ದಶಭಿರ್ಭರತಶ್ರೇಷ್ಠ ದುರ್ಯೋಧನಮಮರ್ಷಣಂ।।
ಭರತಶ್ರೇಷ್ಠ! ಪುನಃ ಅವನು ಹತ್ತು ಘೋರ ಶರಗಳಿಂದ ಅಮರ್ಷಣ ದುರ್ಯೋಧನನ ಎದೆಗೆ ಹೊಡೆದನು.
06112007a ತದ್ಯುದ್ಧಮಭವದ್ಘೋರಂ ಚಿತ್ರರೂಪಂ ಚ ಭಾರತ।
06112007c ಈಕ್ಷಿತೃಪ್ರೀತಿಜನನಂ ಸರ್ವಪಾರ್ಥಿವಪೂಜಿತಂ।।
ಭಾರತ! ಆ ಯುದ್ಧವು ಘೋರವೂ ಚಿತ್ರರೂಪವೂ ಆಗಿದ್ದು, ನೋಡುವವರಲ್ಲಿ ಪ್ರೀತಿಯನ್ನುಂಟುಮಾಡುತ್ತಿತ್ತು. ಸರ್ವ ಪಾರ್ಥಿವರೂ ಗೌರವಿಸುವಂತಿತ್ತು.
06112008a ಭೀಷ್ಮಸ್ಯ ನಿಧನಾರ್ಥಾಯ ಪಾರ್ಥಸ್ಯ ವಿಜಯಾಯ ಚ।
06112008c ಯುಯುಧಾತೇ ರಣೇ ವೀರೌ ಸೌಭದ್ರಕುರುಪುಂಗವೌ।।
ಭೀಷ್ಮನ ನಿಧನ ಮತ್ತು ಪಾರ್ಥನ ವಿಜಯಕ್ಕಾಗಿ ಆ ಸೌಭದ್ರ-ಕುರುಪುಂಗವ ವೀರರಿಬ್ಬರೂ ರಣದಲ್ಲಿ ಹೋರಾಡಿದರು.
06112009a ಸಾತ್ಯಕಿಂ ರಭಸಂ ಯುದ್ಧೇ ದ್ರೌಣಿರ್ಬ್ರಾಹ್ಮಣಪುಂಗವಃ।
06112009c ಆಜಘಾನೋರಸಿ ಕ್ರುದ್ಧೋ ನಾರಾಚೇನ ಪರಂತಪಃ।।
ಪರಂತಪ ಬ್ರಾಹ್ಮಣಪುಂಗವ ದ್ರೌಣಿಯು ಕ್ರುದ್ಧನಾಗಿ ಯುದ್ಧದಲ್ಲಿ ರಭಸದಿಂದ ನಾರಾಚಗಳಿಂದ ಸಾತ್ಯಕಿಯನ್ನು ಎದೆಯ ಮೇಲೆ ಹೊಡೆದನು.
06112010a ಶೈನೇಯೋಽಪಿ ಗುರೋಃ ಪುತ್ರಂ ಸರ್ವಮರ್ಮಸು ಭಾರತ।
06112010c ಅತಾಡಯದಮೇಯಾತ್ಮಾ ನವಭಿಃ ಕಂಕಪತ್ರಿಭಿಃ।।
ಭಾರತ! ಅಮೇಯಾತ್ಮ ಶೈನಿಯೂ ಕೂಡ ಒಂಭತ್ತು ಕಂಕಪತ್ರಿಗಳಿಂದ ಗುರುಪುತ್ರನ ಸರ್ವ ಮರ್ಮಾಂಗಗಳಿಗೂ ಹೊಡೆದನು.
06112011a ಅಶ್ವತ್ಥಾಮಾ ತು ಸಮರೇ ಸಾತ್ಯಕಿಂ ನವಭಿಃ ಶರೈಃ।
06112011c ತ್ರಿಂಶತಾ ಚ ಪುನಸ್ತೂರ್ಣಂ ಬಾಹ್ವೋರುರಸಿ ಚಾರ್ಪಯತ್।।
ಅಶ್ವತ್ಥಾಮನಾದರೋ ಸಮರದಲ್ಲಿ ವೇಗಶಾಲಿ ಸಾತ್ಯಕಿಯನ್ನು ಒಂಭತ್ತು ಬಾಣಗಳಿಂದ ಹೊಡೆದು ಪುನಃ ಮೂವತ್ತು ಬಾಣಗಳಿಂದ ಅವನ ಎದೆ-ಬಾಹುಗಳನ್ನು ಹೊಡೆದನು.
06112012a ಸೋಽತಿವಿದ್ಧೋ ಮಹೇಷ್ವಾಸೋ ದ್ರೋಣಪುತ್ರೇಣ ಸಾತ್ವತಃ।
06112012c ದ್ರೋಣಪುತ್ರಂ ತ್ರಿಭಿರ್ಬಾಣೈರಾಜಘಾನ ಮಹಾಯಶಾಃ।।
ದ್ರೋಣಪುತ್ರನಿಂದ ಈ ರೀತಿ ಪೆಟ್ಟುತಿಂದ ಮಹೇಷ್ವಾಸ ಮಹಾಯಶಸ್ವಿ ಸಾತ್ವತನು ದ್ರೋಣಪುತ್ರನನ್ನು ಮೂರು ಬಾಣಗಳಿಂದ ಗಾಯಗೊಳಿಸಿದನು.
06112013a ಪೌರವೋ ಧೃಷ್ಟಕೇತುಂ ಚ ಶರೈರಾಸಾದ್ಯ ಸಂಯುಗೇ।
06112013c ಬಹುಧಾ ದಾರಯಾಂ ಚಕ್ರೇ ಮಹೇಷ್ವಾಸಂ ಮಹಾರಥಂ।।
ಸಂಯುಗದಲ್ಲಿ ಪೌರವನು ಮಹಾರಥ ಮಹೇಷ್ವಾಸ ಧೃಷ್ಟಕೇತುವನ್ನು ಬಹಳ ಶರಗಳಿಂದ ಹೊಡೆದು ಗಾಯಗೊಳಿಸಿದನು.
06112014a ತಥೈವ ಪೌರವಂ ಯುದ್ಧೇ ಧೃಷ್ಟಕೇತುರ್ಮಹಾರಥಃ।
06112014c ತ್ರಿಂಶತಾ ನಿಶಿತೈರ್ಬಾಣೈರ್ವಿವ್ಯಾಧ ಸುಮಹಾಬಲಃ।।
ಹಾಗೆಯೇ ಯುದ್ಧದಲ್ಲಿ ಮಹಾರಥ ಸುಮಹಾಬಲ ಧೃಷ್ಟಕೇತುವು ಪೌರವನನ್ನು ಮೂವತ್ತು ನಿಶಿತ ಬಾಣಗಳಿಂದ ಹೊಡೆದನು.
06112015a ಪೌರವಸ್ತು ಧನುಶ್ಚಿತ್ತ್ವಾ ಧೃಷ್ಟಕೇತೋರ್ಮಹಾರಥಃ।
06112015c ನನಾದ ಬಲವನ್ನಾದಂ ವಿವ್ಯಾಧ ದಶಭಿಃ ಶರೈಃ।।
ಮಹಾರಥ ಪೌರವನಾದರೋ ಧೃಷ್ಟಕೇತುವಿನ ಧನುಸ್ಸನ್ನು ತುಂಡರಿಸಿ, ಬಲವತ್ತಾದ ಕೂಗನ್ನು ಕೂಗಿ, ಹತ್ತು ಶರಗಳಿಂದ ಅವನನ್ನು ಹೊಡೆದನು.
06112016a ಸೋಽನ್ಯತ್ಕಾರ್ಮುಕಮಾದಾಯ ಪೌರವಂ ನಿಶಿತೈಃ ಶರೈಃ।
06112016c ಆಜಘಾನ ಮಹಾರಾಜ ತ್ರಿಸಪ್ತತ್ಯಾ ಶಿಲೀಮುಖೈಃ।।
ಮಹಾರಾಜ! ಆಗ ಅವನು ಇನ್ನೊಂದು ಕಾರ್ಮುಕವನ್ನು ಎತ್ತಿಕೊಂಡು ಎಪ್ಪತ್ತ್ಮೂರು ಶಿಲೀಮುಖ ಶರಗಳಿಂದ ಪೌರವನನ್ನು ಗಾಯಗೊಳಿಸಿದನು.
06112017a ತೌ ತು ತತ್ರ ಮಹೇಷ್ವಾಸೌ ಮಹಾಮಾತ್ರೌ ಮಹಾರಥೌ।
06112017c ಮಹತಾ ಶರವರ್ಷೇಣ ಪರಸ್ಪರಮವರ್ಷತಾಂ।।
ಅಲ್ಲಿ ಅವರಿಬ್ಬರು ಮಹೇಷ್ವಾಸರೂ, ಮಹಾಬಲಿಷ್ಟರೂ, ಮಹಾರಥರು ಮಹಾ ಶರವರ್ಷಗಳನ್ನು ಪರಸ್ಪರರ ಮೇಲೆ ಸುರಿಸಿದರು.
06112018a ಅನ್ಯೋನ್ಯಸ್ಯ ಧನುಶ್ಚಿತ್ತ್ವಾ ಹಯಾನ್ ಹತ್ವಾ ಚ ಭಾರತ।
06112018c ವಿರಥಾವಸಿಯುದ್ಧಾಯ ಸಂಗತೌ ತೌ ಮಹಾರಥೌ।।
ಭಾರತ! ಅವರಿಬ್ಬರು ಮಹಾರಥರೂ ಅನ್ಯೋನ್ಯರ ಧನುಸ್ಸುಗಳನ್ನು ಕತ್ತರಿಸಿ, ಕುದುರೆಗಳನ್ನು ಕೊಂದು ವಿರಥರಾಗಿ ಖಡ್ಗಯುದ್ಧದಲ್ಲಿ ತೊಡಗಿದರು.
06112019a ಆರ್ಷಭೇ ಚರ್ಮಣೀ ಚಿತ್ರೇ ಶತಚಂದ್ರಪರಿಷ್ಕೃತೇ।
06112019c ತಾರಕಾಶತಚಿತ್ರೌ ಚ ನಿಸ್ತ್ರಿಂಶೌ ಸುಮಹಾಪ್ರಭೌ।।
ಅವರಿಬ್ಬರೂ ನೂರು ಚಂದ್ರರ ಮತ್ತು ನೂರು ನಕ್ಷತ್ರಗಳ ಚಿತ್ರಗಳಿಂದ ಕೂಡಿದ, ಎತ್ತಿನ ಚರ್ಮದಿಂದ ಮಾಡಿದ ಗುರಾಣಿಗಳನ್ನೂ ಮಹಾಪ್ರಭೆಯುಳ್ಳ ಖಡ್ಗಗಳನ್ನೂ ಹಿಡಿದಿದ್ದರು.
06112020a ಪ್ರಗೃಹ್ಯ ವಿಮಲೌ ರಾಜಂಸ್ತಾವನ್ಯೋನ್ಯಮಭಿದ್ರುತೌ।
06112020c ವಾಶಿತಾಸಂಗಮೇ ಯತ್ತೌ ಸಿಂಹಾವಿವ ಮಹಾವನೇ।।
ರಾಜನ್! ಮಹಾವನದಲ್ಲಿ ಸಿಂಹಿಯನ್ನು ಕೂಡಲು ಕಾದಾಡುವ ಎರಡು ಸಿಂಹಗಳಂತೆ ಅವರಿಬ್ಬರೂ ವಿಜಯವನ್ನು ಬಯಸಿ ಅನ್ಯೋನ್ಯರಮೇಲೆ ಖಡ್ಗದಿಂದ ಪ್ರಹರಿಸಿದರು.
06112021a ಮಂಡಲಾನಿ ವಿಚಿತ್ರಾಣಿ ಗತಪ್ರತ್ಯಾಗತಾನಿ ಚ।
06112021c ಚೇರತುರ್ದರ್ಶಯಂತೌ ಚ ಪ್ರಾರ್ಥಯಂತೌ ಪರಸ್ಪರಂ।।
ಮುಂದೆ ಹೋಗುವುದು, ಹಿಂದೆ ಸರಿಯುವುದು, ಮತ್ತು ಮಂಡಲಾಕಾರದಲ್ಲಿ ಸುತ್ತುವುದು ಹೀಗೆ ವಿಚಿತ್ರ ನಡಿಗೆಗಳಿಂದ ತಮ್ಮ ಕೌಶಲಗಳನ್ನು ಪ್ರದರ್ಶಿಸುತ್ತಿದ್ದರು ಮತ್ತು ಪರಸ್ಪರರನ್ನು ಆಹ್ವಾನಿಸುತ್ತಿದ್ದರು.
06112022a ಪೌರವೋ ಧೃಷ್ಟಕೇತುಂ ತು ಶಂಖದೇಶೇ ಮಹಾಸಿನಾ।
06112022c ತಾಡಯಾಮಾಸ ಸಂಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್।।
ಪೌರವನು ಸಂಕ್ರುದ್ಧನಾಗಿ ಮಹಾ ಖಡ್ಗದಿಂದ ಧೃಷ್ಟಕೇತುವಿನ ಕಿವಿಯ ಭಾಗಕ್ಕೆ ಹೊಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು.
06112023a ಚೇದಿರಾಜೋಽಪಿ ಸಮರೇ ಪೌರವಂ ಪುರುಷರ್ಷಭಂ।
06112023c ಆಜಘಾನ ಶಿತಾಗ್ರೇಣ ಜತ್ರುದೇಶೇ ಮಹಾಸಿನಾ।।
ಚೇದಿರಾಜನೂ ಕೂಡ ಸಮರದಲ್ಲಿ ಪುರುಷರ್ಷಭ ಪೌರವನನ್ನು ಮಹಾಖಡ್ಗದ ಹರಿತ ಭಾಗದಿಂದ ಕುತ್ತಿಗೆಯ ಮೇಲೆ ಹೊಡೆದನು.
06112024a ತಾವನ್ಯೋನ್ಯಂ ಮಹಾರಾಜ ಸಮಾಸಾದ್ಯ ಮಹಾಹವೇ।
06112024c ಅನ್ಯೋನ್ಯವೇಗಾಭಿಹತೌ ನಿಪೇತತುರರಿಂದಮೌ।।
ಮಹಾರಾಜ! ಆ ಮಹಾಹವದಲ್ಲಿ ಅವರಿಬ್ಬರು ಅರಿಂದಮರೂ ಅನ್ಯೋನ್ಯರನ್ನು ಎದುರಿಸಿ ಅನ್ಯೋನ್ಯರನ್ನು ವೇಗವಾಗಿ ಹೊಡೆದು ಕೆಳಗೆ ಬಿದ್ದರು.
06112025a ತತಃ ಸ್ವರಥಮಾರೋಪ್ಯ ಪೌರವಂ ತನಯಸ್ತವ।
06112025c ಜಯತ್ಸೇನೋ ರಥೇ ರಾಜನ್ನಪೋವಾಹ ರಣಾಜಿರಾತ್।।
ರಾಜನ್! ಆಗ ನಿನ್ನ ಮಗ ಜಯತ್ಸೇನನು ಪೌರವನನ್ನು ತನ್ನ ರಥದಮೇಲೆ ಕುಳ್ಳಿರಿಸಿಕೊಂಡು ರಣರಂಗದ ಆಚೆ ಕೊಂಡೊಯ್ದನು.
06112026a ಧೃಷ್ಟಕೇತುಂ ಚ ಸಮರೇ ಮಾದ್ರೀಪುತ್ರಃ ಪರಂತಪಃ।
06112026c ಅಪೋವಾಹ ರಣೇ ರಾಜನ್ಸಹದೇವಃ ಪ್ರತಾಪವಾನ್।।
ರಾಜನ್! ಧೃಷ್ಟಕೇತುವನ್ನು ಸಮರದಲ್ಲಿ ಪರಂತಪ, ಪ್ರತಾಪವಾನ್, ಮಾದ್ರೀಪುತ್ರ ಸಹದೇವನು ರಣದಿಂದ ಆಚೆ ಕರೆದುಕೊಂಡು ಹೋದನು.
06112027a ಚಿತ್ರಸೇನಃ ಸುಶರ್ಮಾಣಂ ವಿದ್ಧ್ವಾ ನವಭಿರಾಶುಗೈಃ।
06112027c ಪುನರ್ವಿವ್ಯಾಧ ತಂ ಷಷ್ಟ್ಯಾ ಪುನಶ್ಚ ನವಭಿಃ ಶರೈಃ।।
ಚಿತ್ರಸೇನನು ಸುಶರ್ಮನನ್ನು ಒಂಭತ್ತು ಆಶುಗಗಳಿಂದ ಹೊಡೆದು, ಪುನಃ ಅರವತ್ತು ಬಾಣಗಳಿಂದಲೂ ಮತ್ತೆ ಪುನಃ ಎಂಭತ್ತು ಬಾಣಗಳಿಂದಲೂ ಹೊಡೆದನು.
06112028a ಸುಶರ್ಮಾ ತು ರಣೇ ಕ್ರುದ್ಧಸ್ತವ ಪುತ್ರಂ ವಿಶಾಂ ಪತೇ।
06112028c ದಶಭಿರ್ದಶಭಿಶ್ಚೈವ ವಿವ್ಯಾಧ ನಿಶಿತೈಃ ಶರೈಃ।।
ವಿಶಾಂಪತೇ! ಆದರೆ ಸುಶರ್ಮನು ರಣದಲ್ಲಿ ಕ್ರುದ್ಧನಾಗಿ ನಿನ್ನ ಮಗನನ್ನು ಇಪ್ಪತ್ತು ನಿಶಿತ ಬಾಣಗಳಿಂದ ಹೊಡೆದನು.
06112029a ಚಿತ್ರಸೇನಶ್ಚ ತಂ ರಾಜಂಸ್ತ್ರಿಂಶತಾ ನತಪರ್ವಣಾಂ।
06112029c ಆಜಘಾನ ರಣೇ ಕ್ರುದ್ಧಃ ಸ ಚ ತಂ ಪ್ರತ್ಯವಿಧ್ಯತ।
06112029e ಭೀಷ್ಮಸ್ಯ ಸಮರೇ ರಾಜನ್ಯಶೋ ಮಾನಂ ಚ ವರ್ಧಯನ್।।
ರಾಜನ್! ಚಿತ್ರಸೇನನು ರಣದಲ್ಲಿ ಕ್ರುದ್ಧನಾಗಿ ಮೂವತ್ತು ನತಪರ್ವಗಳಿಂದ ಅವನನ್ನು ಹೊಡೆದನು. ರಾಜನ್! ಅವನೂ ಕೂಡ ಭೀಷ್ಮನ ಸಮರದಲ್ಲಿ ಯಶಸ್ಸು ಮಾನಗಳನ್ನು ಹೆಚ್ಚಿಸುತ್ತಾ ಅವನನ್ನು ತಿರುಗಿ ಹೊಡೆದನು.
06112030a ಸೌಭದ್ರೋ ರಾಜಪುತ್ರಂ ತು ಬೃಹದ್ಬಲಮಯೋಧಯತ್।
06112030c ಆರ್ಜುನಿಂ ಕೋಸಲೇಂದ್ರಸ್ತು ವಿದ್ಧ್ವಾ ಪಂಚಭಿರಾಯಸೈಃ।
06112030e ಪುನರ್ವಿವ್ಯಾಧ ವಿಂಶತ್ಯಾ ಶರೈಃ ಸಂನತಪರ್ವಭಿಃ।।
ರಾಜಪುತ್ರ ಸೌಭದ್ರಿಯು ಬೃಹದ್ಬಲನನ್ನು ಎದುರಿಸಿದನು. ಕೋಸಲೇಂದ್ರನು ಆರ್ಜುನಿಯನ್ನು ಐದು ಆಯಸಗಳಿಂದ ಗಾಯಗೊಳಿಸಿದನು. ಪುನಃ ಅವನನ್ನು ಇಪ್ಪತ್ತು ಸನ್ನತಪರ್ವ ಶರಗಳಿಂದ ಹೊಡೆದನು.
06112031a ಬೃಹದ್ಬಲಂ ಚ ಸೌಭದ್ರೋ ವಿದ್ಧ್ವಾ ನವಭಿರಾಯಸೈಃ।
06112031c ನಾಕಂಪಯತ ಸಂಗ್ರಾಮೇ ವಿವ್ಯಾಧ ಚ ಪುನಃ ಪುನಃ।।
ಸೌಭದ್ರಿಯು ಬೃಹದ್ಬಲನನ್ನು ಒಂಭತ್ತು ಆಯಸಗಳಿಂದ ಹೊಡೆದನು ಮತ್ತು ಸಂಗ್ರಾಮದಲ್ಲಿ ನಡುಗದೇ ಪುನಃ ಪುನಃ ಹೊಡೆದನು.
06112032a ಕೌಸಲ್ಯಸ್ಯ ಪುನಶ್ಚಾಪಿ ಧನುಶ್ಚಿಚ್ಛೇದ ಫಾಲ್ಗುಣಿಃ।
06112032c ಆಜಘಾನ ಶರೈಶ್ಚೈವ ತ್ರಿಂಶತಾ ಕಂಕಪತ್ರಿಭಿಃ।।
ಫಾಲ್ಗುಣಿಯು ಪುನಃ ಕೌಸಲ್ಯನ ಧನುವನ್ನು ತುಂಡುಮಾಡಿ ಮೂವತ್ತು ಕಂಕಪತ್ರಿ ಶರಗಳಿಂದ ಅವನನ್ನು ಗಾಯಗೊಳಿಸಿದನು.
06112033a ಸೋಽನ್ಯತ್ಕಾರ್ಮುಕಮಾದಾಯ ರಾಜಪುತ್ರೋ ಬೃಹದ್ಬಲಃ।
06112033c ಫಾಲ್ಗುನಿಂ ಸಮರೇ ಕ್ರುದ್ಧೋ ವಿವ್ಯಾಧ ಬಹುಭಿಃ ಶರೈಃ।।
ರಾಜಪುತ್ರ ಬೃಹದ್ಬಲನು ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡು ಸಮರದಲ್ಲಿ ಕ್ರುದ್ಧನಾಗಿ ಫಾಲ್ಗುನಿಯನ್ನು ಬಹಳ ಶರಗಳಿಂದ ಹೊಡೆದನು.
06112034a ತಯೋರ್ಯುದ್ಧಂ ಸಮಭವದ್ಭೀಷ್ಮಹೇತೋಃ ಪರಂತಪ।
06112034c ಸಂರಬ್ಧಯೋರ್ಮಹಾರಾಜ ಸಮರೇ ಚಿತ್ರಯೋಧಿನೋಃ।
06112034e ಯಥಾ ದೇವಾಸುರೇ ಯುದ್ಧೇ ಮಯವಾಸವಯೋರಭೂತ್।।
ಪರಂತಪ! ಮಹಾರಾಜ! ಭೀಷ್ಮನಿಗಾಗಿ ನಡೆದ ಆ ಕ್ರೋಧ ಚಿತ್ರಯೋಧಿಗಳ ಮಹಾಯುದ್ಧ ಸಮರವು ದೇವಾಸುರರ ಯುದ್ಧದಲ್ಲಿ ಮಯ-ವಾಸವರ ನಡುವೆ ನಡೆದಂತೆ ನಡೆಯಿತು.
06112035a ಭೀಮಸೇನೋ ಗಜಾನೀಕಂ ಯೋಧಯನ್ಬಹ್ವಶೋಭತ।
06112035c ಯಥಾ ಶಕ್ರೋ ವಜ್ರಪಾಣಿರ್ದಾರಯನ್ಪರ್ವತೋತ್ತಮಾನ್।।
ವಜ್ರಪಾಣಿ ಶಕ್ರನು ಉತ್ತಮ ಪರ್ವತಗಳನ್ನು ಸೀಳುತ್ತಿರುವಂತೆ ಭೀಮಸೇನನು ಗಜಸೇನೆಯೊಡನೆ ಯುದ್ಧಮಾಡುತ್ತಾ ಬಹುವಾಗಿ ಶೋಭಿಸಿದನು.
06112036a ತೇ ವಧ್ಯಮಾನಾ ಭೀಮೇನ ಮಾತಂಗಾ ಗಿರಿಸನ್ನಿಭಾಃ।
06112036c ನಿಪೇತುರುರ್ವ್ಯಾಂ ಸಹಿತಾ ನಾದಯಂತೋ ವಸುಂಧರಾಂ।।
ಭೀಮನಿಂದ ವಧಿಸಲ್ಪಟ್ಟ ಗಿರಿಸನ್ನಿಭ ಮಾತಂಗಗಳು ಚೀತ್ಕಾರಗಳಿಂದ ಭೂಮಿಯಲ್ಲಿ ಪ್ರತಿಧ್ವನಿಗಳನ್ನುಂಟುಮಾಡುತ್ತಾ ಕೆಳಗೆ ಬೀಳುತ್ತಿದ್ದವು.
06112037a ಗಿರಿಮಾತ್ರಾ ಹಿ ತೇ ನಾಗಾ ಭಿನ್ನಾಂಜನಚಯೋಪಮಾಃ।
06112037c ವಿರೇಜುರ್ವಸುಧಾಂ ಪ್ರಾಪ್ಯ ವಿಕೀರ್ಣಾ ಇವ ಪರ್ವತಾಃ।।
ದೊಡ್ಡದಾದ ಇದ್ದಲಿನ ರಾಶಿಯಂತಿದ್ದ ಪರ್ವತಾಕಾರದ ಆನೆಗಳು ಭೂಮಿಯ ಮೇಲೆ ಬಿದ್ದು ರಣರಂಗವು ಪರ್ವತಗಳಿಂದ ವ್ಯಾಪ್ಯವಾಗಿದೆಯೋ ಎಂಬಂತೆ ತೋರುತ್ತಿತ್ತು.
06112038a ಯುಧಿಷ್ಠಿರೋ ಮಹೇಷ್ವಾಸೋ ಮದ್ರರಾಜಾನಮಾಹವೇ।
06112038c ಮಹತ್ಯಾ ಸೇನಯಾ ಗುಪ್ತಂ ಪೀಡಯಾಮಾಸ ಸಂಗತಃ।।
ಮಹೇಷ್ವಾಸ ಯುಧಿಷ್ಠಿರನು ಮಹಾ ಸೇನೆಯಿಂದ ರಕ್ಷಿತನಾಗಿ ಆಹವದಲ್ಲಿ ಬಾಣಗಳಿಂದ ಮದ್ರರಾಜನನ್ನು ಪೀಡಿಸುತ್ತಿದ್ದನು.
06112039a ಮದ್ರೇಶ್ವರಶ್ಚ ಸಮರೇ ಧರ್ಮಪುತ್ರಂ ಮಹಾರಥಂ।
06112039c ಪೀಡಯಾಮಾಸ ಸಂರಬ್ಧೋ ಭೀಷ್ಮಹೇತೋಃ ಪರಾಕ್ರಮೀ।।
ಸಮರದಲ್ಲಿ ಭೀಷ್ಮನಿಗಾಗಿ ಸಂರಬ್ಧನಾಗಿ ಪರಾಕ್ರಮೀ ಮದ್ರೇಶ್ವರನು ಮಹಾರಥ ಧರ್ಮಪುತ್ರನನ್ನು ಪೀಡಿಸಿದನು.
06112040a ವಿರಾಟಂ ಸೈಂಧವೋ ರಾಜಾ ವಿದ್ಧ್ವಾ ಸನ್ನತಪರ್ವಭಿಃ।
06112040c ನವಭಿಃ ಸಾಯಕೈಸ್ತೀಕ್ಷ್ಣೈಸ್ತ್ರಿಂಶತಾ ಪುನರರ್ದಯತ್।।
ರಾಜಾ ಸೈಂಧವನು ವಿರಾಟನನ್ನು ಒಂಭತ್ತು ಸನ್ನತಪರ್ವಗಳಿಂದ ಹೊಡೆದು ಪುನಃ ಮೂರು ತೀಕ್ಷ್ಣ ಸಾಯಕಗಳಿಂದ ಗಾಯಗೊಳಿಸಿದನು.
06112041a ವಿರಾಟಶ್ಚ ಮಹಾರಾಜ ಸೈಂಧವಂ ವಾಹಿನೀಮುಖೇ।
06112041c ತ್ರಿಂಶತಾ ನಿಶಿತೈರ್ಬಾಣೈರಾಜಘಾನ ಸ್ತನಾಂತರೇ।।
ಮಹಾರಾಜ! ವಿರಾಟನೂ ಕೂಡ ವಾಹಿನೀಮುಖಲ್ಲಿ ಮೂವತ್ತು ನಿಶಿತಬಾಣಗಳಿಂದ ಸೈಂಧವನ ಎದೆಗೆ ಹೊಡೆದನು.
06112042a ಚಿತ್ರಕಾರ್ಮುಕನಿಸ್ತ್ರಿಂಶೌ ಚಿತ್ರವರ್ಮಾಯುಧಧ್ವಜೌ।
06112042c ರೇಜತುಶ್ಚಿತ್ರರೂಪೌ ತೌ ಸಂಗ್ರಾಮೇ ಮತ್ಸ್ಯಸೈಂಧವೌ।।
ಚಿತ್ರ ಧನುಸ್ಸುಗಳನ್ನೂ, ಚಿತ್ರ ಕವಚಗಳನ್ನೂ, ಚಿತ್ರ ಆಯುಧ ಧ್ವಜಗಳನ್ನೂ ಪಡೆದಿದ್ದ ಆ ಚಿತ್ರರೂಪೀ ಮತ್ಸ್ಯ-ಸೈಂಧವರು ಸಂಗ್ರಾಮದಲ್ಲಿ ರಾಜಿಸಿದರು.
06112043a ದ್ರೋಣಃ ಪಾಂಚಾಲಪುತ್ರೇಣ ಸಮಾಗಮ್ಯ ಮಹಾರಣೇ।
06112043c ಮಹಾಸಮುದಯಂ ಚಕ್ರೇ ಶರೈಃ ಸನ್ನತಪರ್ವಭಿಃ।।
ದ್ರೋಣನು ಮಹಾರಣದಲ್ಲಿ ಪಾಂಚಾಲಪುತ್ರನನ್ನು ಎದುರಿಸಿ ಸನ್ನತಪರ್ವ ಶರಗಳಿಂದ ಮಹಾಯುದ್ಧವನ್ನು ನಡೆಸಿದನು.
06112044a ತತೋ ದ್ರೋಣೋ ಮಹಾರಾಜ ಪಾರ್ಷತಸ್ಯ ಮಹದ್ಧನುಃ।
06112044c ಚಿತ್ತ್ವಾ ಪಂಚಾಶತೇಷೂಣಾಂ ಪಾರ್ಷತಂ ಸಮವಿಧ್ಯತ।।
ಮಹಾರಾಜ! ಆಗ ದ್ರೋಣನು ಪಾರ್ಷತನ ಮಹಾಧನುಸ್ಸನ್ನು ತುಂಡುಮಾಡಿ ಪಾರ್ಷತನ್ನು ಐವತ್ತು ಬಾಣಗಳಿಂದ ಹೊಡೆದನು.
06112045a ಸೋಽನ್ಯತ್ಕಾರ್ಮುಕಮಾದಾಯ ಪಾರ್ಷತಃ ಪರವೀರಹಾ।
06112045c ದ್ರೋಣಸ್ಯ ಮಿಷತೋ ಯುದ್ಧೇ ಪ್ರೇಷಯಾಮಾಸ ಸಾಯಕಾನ್।।
ಪರವೀರಹ ಪಾರ್ಷತನು ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡು ದ್ರೋಣನು ನೋಡುತ್ತಿದ್ದಂತೆಯೇ ಯುದ್ಧದಲ್ಲಿ ಹರಿತ ಸಾಯಕಗಳನ್ನು ಪ್ರಯೋಗಿಸಿದನು.
06112046a ತಾಂ ಶರಾಂ ಶರಸಂಘೈಸ್ತು ಸಂನಿವಾರ್ಯ ಮಹಾರಥಃ।
06112046c ದ್ರೋಣೋ ದ್ರುಪದಪುತ್ರಾಯ ಪ್ರಾಹಿಣೋತ್ಪಂಚ ಸಾಯಕಾನ್।।
ಆ ಶರಗಳನ್ನು ಶರಸಂಘಗಳಿಂದ ತಡೆದು ಮಹಾರಥ ದ್ರೋಣನು ದ್ರುಪದಪುತ್ರನನ್ನು ಐದು ಸಾಯಕಗಳಿಂದ ಹೊಡೆದನು.
06112047a ತಸ್ಯ ಕ್ರುದ್ಧೋ ಮಹಾರಾಜ ಪಾರ್ಷತಃ ಪರವೀರಹಾ।
06112047c ದ್ರೋಣಾಯ ಚಿಕ್ಷೇಪ ಗದಾಂ ಯಮದಂಡೋಪಮಾಂ ರಣೇ।।
ಮಹಾರಾಜ! ಅದರಿಂದ ಕ್ರುದ್ಧನಾದ ಪರವೀರಹ ಪಾರ್ಷತನು ರಣದಲ್ಲಿ ದ್ರೋಣನ ಮೇಲೆ ಯಮದಂಡದಂತಿರುವ ಗದೆಯನ್ನು ಎಸೆದನು.
06112048a ತಾಮಾಪತಂತೀಂ ಸಹಸಾ ಹೇಮಪಟ್ಟವಿಭೂಷಿತಾಂ।
06112048c ಶರೈಃ ಪಂಚಾಶತಾ ದ್ರೋಣೋ ವಾರಯಾಮಾಸ ಸಂಯುಗೇ।।
ಬೀಳುತ್ತಿರುವ ಆ ಹೇಮಪಟ್ಟವಿಭೂಷಿತ ಗದೆಯನ್ನು ಕೂಡಲೇ ದ್ರೋಣನು ಸಂಯುಗದಲ್ಲಿ ಐವತ್ತು ಬಾಣಗಳಿಂದ ತಡೆದನು.
06112049a ಸಾ ಚಿನ್ನಾ ಬಹುಧಾ ರಾಜನ್ದ್ರೋಣಚಾಪಚ್ಯುತೈಃ ಶರೈಃ।
06112049c ಚೂರ್ಣೀಕೃತಾ ವಿಶೀರ್ಯಂತೀ ಪಪಾತ ವಸುಧಾತಲೇ।।
ರಾಜನ್! ದ್ರೋಣದ ಚಾಪದಿಂದ ಹೊರಟ ಆ ಶರಗಳಿಂದ ಅದು ಅನೇಕ ಚೂರುಗಳಾಗಿ ಒಡೆದು ನೆಲದ ಮೇಲೆ ಉದುರಿ ಬಿದ್ದಿತು.
06112050a ಗದಾಂ ವಿನಿಹತಾಂ ದೃಷ್ಟ್ವಾ ಪಾರ್ಷತಃ ಶತ್ರುಸೂದನಃ।
06112050c ದ್ರೋಣಾಯ ಶಕ್ತಿಂ ಚಿಕ್ಷೇಪ ಸರ್ವಪಾರಶವೀಂ ಶುಭಾಂ।।
ಗದೆಯು ನಾಶವಾದುದನ್ನು ನೋಡಿ ಶತ್ರುಸೂದನ ಪಾರ್ಷತನು ದ್ರೋಣನ ಮೇಲೆ ಸರ್ವಪಾರಶವೀ ಶುಭ ಶಕ್ತಿಯನ್ನು ಎಸೆದನು.
06112051a ತಾಂ ದ್ರೋಣೋ ನವಭಿರ್ಬಾಣೈಶ್ಚಿಚ್ಛೇದ ಯುಧಿ ಭಾರತ।
06112051c ಪಾರ್ಷತಂ ಚ ಮಹೇಷ್ವಾಸಂ ಪೀಡಯಾಮಾಸ ಸಂಯುಗೇ।।
ಭಾರತ! ಅದನ್ನು ದ್ರೋಣನು ಒಂಭತ್ತು ಬಾಣಗಳಿಂದ ಯುದ್ಧದಲ್ಲಿ ತುಂಡರಿಸಿದನು ಮತ್ತು ಮಹೇಷ್ವಾಸ ಪಾರ್ಷತನ್ನು ಪೀಡಿಸಿದನು.
06112052a ಏವಮೇತನ್ಮಹದ್ಯುದ್ಧಂ ದ್ರೋಣಪಾರ್ಷತಯೋರಭೂತ್।
06112052c ಭೀಷ್ಮಂ ಪ್ರತಿ ಮಹಾರಾಜ ಘೋರರೂಪಂ ಭಯಾನಕಂ।।
ಈ ರೀತಿ ಮಹಾರಾಜ! ಭೀಷ್ಮನಿಗಾಗಿ ಘೋರರೂಪವೂ ಭಯಾನಕವೂ ಆದ ಮಹಾ ಯುದ್ಧವು ದ್ರೋಣ-ಪಾರ್ಷತರ ನಡುವೆ ನಡೆಯಿತು.
06112053a ಅರ್ಜುನಃ ಪ್ರಾಪ್ಯ ಗಾಂಗೇಯಂ ಪೀಡಯನ್ನಿಶಿತೈಃ ಶರೈಃ।
06112053c ಅಭ್ಯದ್ರವತ ಸಮ್ಯತ್ತಂ ವನೇ ಮತ್ತಮಿವ ದ್ವಿಪಂ।।
ಅರ್ಜುನನು ಗಾಂಗೇಯನನ್ನು ನಿಶಿತ ಶರಗಳಿಂದ ಪೀಡಿಸುತ್ತಾ ವನದಲ್ಲಿ ಮದಿಸಿದ ಸಲಗವು ಇನ್ನೊಂದನ್ನು ಎದುರಿಸುವಂತೆ ಎದುರಿಸಿದನು.
06112054a ಪ್ರತ್ಯುದ್ಯಯೌ ಚ ತಂ ಪಾರ್ಥಂ ಭಗದತ್ತಃ ಪ್ರತಾಪವಾನ್।
06112054c ತ್ರಿಧಾ ಭಿನ್ನೇನ ನಾಗೇನ ಮದಾಂಧೇನ ಮಹಾಬಲಃ।।
ಆಗ ಪ್ರತಾಪವಾನ್ ಭಗದತ್ತನು ಗಂಡಸ್ಥಳದ ಮೂರು ಕಡೆಗಳಿಂದ ಮದೋದಕವನ್ನು ಸುರಿಸುತ್ತಿದ್ದ ಕೊಬ್ಬಿದ ಆನೆಯ ಮೇಲೆ ಕುಳಿತು ಪಾರ್ಥನನ್ನು ಆಕ್ರಮಿಸಿದನು.
06112055a ತಮಾಪತಂತಂ ಸಹಸಾ ಮಹೇಂದ್ರಗಜಸನ್ನಿಭಂ।
06112055c ಪರಂ ಯತ್ನಂ ಸಮಾಸ್ಥಾಯ ಬೀಭತ್ಸುಃ ಪ್ರತ್ಯಪದ್ಯತ।।
ಒಮ್ಮೆಲೇ ತನ್ನ ಮೇಲೆ ಬೀಳುತ್ತಿರುವ ಆ ಮಹೇಂದ್ರನ ಐರವಾತದಂತಿರುವ ಆನೆಯನ್ನು ಬೀಭತ್ಸುವು ಪರಮ ಯತ್ನದಿಂದ ಎದುರಿಸಿದನು.
06112056a ತತೋ ಗಜಗತೋ ರಾಜಾ ಭಗದತ್ತಃ ಪ್ರತಾಪವಾನ್।
06112056c ಅರ್ಜುನಂ ಶರವರ್ಷೇಣ ವಾರಯಾಮಾಸ ಸಂಯುಗೇ।।
ಆಗ ಆನೆಯ ಮೇಲಿದ್ದ ಪ್ರತಾಪವಾನ್ ರಾಜಾ ಭಗದತ್ತನು ಸಂಯುಗದಲ್ಲಿ ಅರ್ಜುನನನ್ನು ಶರವರ್ಷಗಳಿಂದ ತಡೆದನು.
06112057a ಅರ್ಜುನಸ್ತು ರಣೇ ನಾಗಮಾಯಾಂತಂ ರಜತೋಪಮಂ।
06112057c ವಿಮಲೈರಾಯಸೈಸ್ತೀಕ್ಷ್ಣೈರವಿಧ್ಯತ ಮಹಾರಣೇ।।
ಅರ್ಜುನನಾದರೋ ರಣದಲ್ಲಿ ಬರುತ್ತಿದ್ದ ಆನೆಯನ್ನು ಬೆಳ್ಳಿಯಂತೆ ವಿಮಲವಾಗಿದ್ದ ತೀಕ್ಷ್ಣ ರಾಯಸಗಳಿಂದ ಮಹಾರಣದಲ್ಲಿ ಹೊಡೆದನು.
06112058a ಶಿಖಂಡಿನಂ ಚ ಕೌಂತೇಯೋ ಯಾಹಿ ಯಾಹೀತ್ಯಚೋದಯತ್।
06112058c ಭೀಷ್ಮಂ ಪ್ರತಿ ಮಹಾರಾಜ ಜಹ್ಯೇನಮಿತಿ ಚಾಬ್ರವೀತ್।।
ಮಹಾರಾಜ! ಕೌಂತೇಯನು ಶಿಖಂಡಿಯನ್ನು “ಭೀಷ್ಮನ ಹತ್ತಿರ ಬಾ! ಬಾ!” ಎಂದು ಪ್ರಚೋದಿಸುತ್ತ “ಅವನನ್ನು ಕೊಲ್ಲು!” ಎಂದನು.
06112059a ಪ್ರಾಗ್ಜ್ಯೋತಿಷಸ್ತತೋ ಹಿತ್ವಾ ಪಾಂಡವಂ ಪಾಂಡುಪೂರ್ವಜ।
06112059c ಪ್ರಯಯೌ ತ್ವರಿತೋ ರಾಜನ್ದ್ರುಪದಸ್ಯ ರಥಂ ಪ್ರತಿ।।
ರಾಜನ್! ಪಾಂಡುಪೂರ್ವಜ! ಆಗ ಪ್ರಾಗ್ಜ್ಯೋತಿಷದ ಭಗದತ್ತನು ಪಾಂಡವನನ್ನು ಬಿಟ್ಟು ಅವಸರದಲ್ಲಿ ದ್ರುಪದನ ರಥದ ಕಡೆ ನಡೆದನು.
06112060a ತತೋಽರ್ಜುನೋ ಮಹಾರಾಜ ಭೀಷ್ಮಮಭ್ಯದ್ರವದ್ದ್ರುತಂ।
06112060c ಶಿಖಂಡಿನಂ ಪುರಸ್ಕೃತ್ಯ ತತೋ ಯುದ್ಧಮವರ್ತತ।।
ಆಗ ಮಹಾರಾಜ! ಅರ್ಜುನನು ಶಿಖಂಡಿಯನ್ನು ಮುಂದಿರಿಸಿಕೊಂಡು ಭೀಷ್ಮನನ್ನು ಎದುರಿಸಿದನು. ಆಗ ಯುದ್ಧವು ನಡೆಯಿತು.
06112061a ತತಸ್ತೇ ತಾವಕಾಃ ಶೂರಾಃ ಪಾಂಡವಂ ರಭಸಂ ರಣೇ।
06112061c ಸರ್ವೇಽಭ್ಯಧಾವನ್ಕ್ರೋಶಂತಸ್ತದದ್ಭುತಮಿವಾಭವತ್।।
ಆಗ ನಿನ್ನವರ ಶೂರರು ಎಲ್ಲರೂ ಕೂಗುತ್ತಾ ರಭಸದಿಂದ ರಣದಲ್ಲಿ ಧಾವಿಸಿ ಪಾಂಡವನನ್ನು ಎದುರಿಸಿದರು. ಅದು ಅದ್ಭುತವಾಗಿತ್ತು.
06112062a ನಾನಾವಿಧಾನ್ಯನೀಕಾನಿ ಪುತ್ರಾಣಾಂ ತೇ ಜನಾಧಿಪ।
06112062c ಅರ್ಜುನೋ ವ್ಯಧಮತ್ಕಾಲೇ ದಿವೀವಾಭ್ರಾಣಿ ಮಾರುತಃ।।
ಜನಾಧಿಪ! ಆಗ ನಿನ್ನ ಪುತ್ರರ ನಾನಾವಿಧದ ಸೇನೆಗಳನ್ನು ಆಕಾಶದಲ್ಲಿರುವ ಮೋಡಗಳನ್ನು ಗಾಳಿಯು ಹೇಗೋ ಹಾಗೆ ಅರ್ಜುನನು ಚದುರಿಸಿದನು.
06112063a ಶಿಖಂಡೀ ತು ಸಮಾಸಾದ್ಯ ಭರತಾನಾಂ ಪಿತಾಮಹಂ।
06112063c ಇಷುಭಿಸ್ತೂರ್ಣಮವ್ಯಗ್ರೋ ಬಹುಭಿಃ ಸ ಸಮಾಚಿನೋತ್।।
ಶಿಖಂಡಿಯಾದರೋ ಅವ್ಯಗ್ರನಾಗಿ ಭರತರ ಪಿತಾಮನನನ್ನು ಬೇಗನೆ ಅನೇಕ ಬಾಣಗಳಿಂದ ಹೊಡೆದನು.
06112064a ಸೋಮಕಾಂಶ್ಚ ರಣೇ ಭೀಷ್ಮೋ ಜಘ್ನೇ ಪಾರ್ಥಪದಾನುಗಾನ್।
06112064c ನ್ಯವಾರಯತ ಸೈನ್ಯಂ ಚ ಪಾಂಡವಾನಾಂ ಮಹಾರಥಃ।।
ಪಾರ್ಥನನ್ನು ಅನುಸರಿಸಿ ಬಂದ ಸೋಮಕರನ್ನು ರಣದಲ್ಲಿ ಭೀಷ್ಮನು ಸಂಹರಿಸಿದನು ಮತ್ತು ಆ ಮಹಾರಥನು ಪಾಂಡವರ ಸೈನ್ಯವನ್ನು ತಡೆದನು.
06112065a ರಥಾಗ್ನ್ಯಗಾರಶ್ಚಾಪಾರ್ಚಿರಸಿಶಕ್ತಿಗದೇಂಧನಃ।
06112065c ಶರಸಂಘಮಹಾಜ್ವಾಲಃ ಕ್ಷತ್ರಿಯಾನ್ಸಮರೇಽದಹತ್।।
ಅವನ ರಥವೇ ಅಗ್ನಿಗಾರವಾಗಿತ್ತು. ಧನುಸ್ಸೇ ಅಗ್ನಿಯ ಜ್ವಾಲೆಯಾಗಿತ್ತು. ಖಡ್ಗ-ಶಕ್ತಿ-ಗದೆಗಳು ಇಂಧನವಾಗಿದ್ದವು. ಶರಸಂಘಗಳು ಮಹಾಜ್ವಾಲೆಯಾಗಿತ್ತು. ಕ್ಷತ್ರಿಯರು ಸಮರದಲ್ಲಿ ದಹಿಸುತ್ತಿದ್ದರು.
06112066a ಯಥಾ ಹಿ ಸುಮಹಾನಗ್ನಿಃ ಕಕ್ಷೇ ಚರತಿ ಸಾನಿಲಃ।
06112066c ತಥಾ ಜಜ್ವಾಲ ಭೀಷ್ಮೋಽಪಿ ದಿವ್ಯಾನ್ಯಸ್ತ್ರಾಣ್ಯುದೀರಯನ್।।
ಹೇಗೆ ಮಹಾ ಅಗ್ನಿಯು ಗಾಳಿಯೊಡಗೂಡಿ ಒಣಹುಲ್ಲನ್ನು ಸುಟ್ಟುಹಾಕುವುದೋ ಹಾಗೆ ಭೀಷ್ಮನೂ ಕೂಡ ದಿವ್ಯಾಸ್ತ್ರಗಳಿಂದ ಹೊಡೆಯುತ್ತಾ ಬೆಳಗಿದನು.
06112067a ಸುವರ್ಣಪುಂಖೈರಿಷುಭಿಃ ಶಿತೈಃ ಸನ್ನತಪರ್ವಭಿಃ।
06112067c ನಾದಯನ್ಸ ದಿಶೋ ಭೀಷ್ಮಃ ಪ್ರದಿಶಶ್ಚ ಮಹಾಯಶಾಃ।।
ಮಹಾಯಶ ಭೀಷ್ಮನು ಸಿಂಹಗರ್ಜನೆ ಮಾಡಿ ಸುವರ್ಣಪುಂಖಗಳ ನಿಶಿತ ಸನ್ನತಪರ್ವ ಶರಗಳಿಂದ ದಿಕ್ಕು-ಉಪದಿಕ್ಕುಗಳನ್ನೂ ತುಂಬಿಸಿದನು.
06112068a ಪಾತಯನ್ರಥಿನೋ ರಾಜನ್ಗಜಾಂಶ್ಚ ಸಹ ಸಾದಿಭಿಃ।
06112068c ಮುಂಡತಾಲವನಾನೀವ ಚಕಾರ ಸ ರಥವ್ರಜಾನ್।।
ರಾಜನ್! ರಥರನ್ನು, ಸವಾರರೊಂದಿಗೆ ಆನೆಗಳನ್ನೂ ಉರುಳಿಸಿ ಆ ರಥಸಮೂಹವನ್ನು ಬೋಳಾದ ತಾಳೆಯುಮರಗಳ ವನದಂತೆ ಮಾಡಿದನು.
06112069a ನಿರ್ಮನುಷ್ಯಾನ್ರಥಾನ್ರಾಜನ್ಗಜಾನಶ್ವಾಂಶ್ಚ ಸಂಯುಗೇ।
06112069c ಚಕಾರ ಸ ತದಾ ಭೀಷ್ಮಃ ಸರ್ವಶಸ್ತ್ರಭೃತಾಂ ವರಃ।।
ರಾಜನ್! ಆಗ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಭೀಷ್ಮನು ಸಂಯುಗದಲ್ಲಿ ಮನುಷ್ಯರು, ರಥಗಳು, ಆನೆಗಳು ಮತ್ತು ಕುದುರೆಗಳು ಇಲ್ಲದಂತೆಯೇ ಮಾಡಿದನು.
06112070a ತಸ್ಯ ಜ್ಯಾತಲನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ।
06112070c ನಿಶಮ್ಯ ಸರ್ವತೋ ರಾಜನ್ಸಮಕಂಪಂತ ಸೈನಿಕಾಃ।।
ರಾಜನ್! ಸಿಡಿಲಿನ ಶಬ್ಧದಂತಿದ್ದ ಅವನ ಧನುಸ್ಸಿನ ಶಿಂಜಿನಿಯ ಟೇಂಕಾರವನ್ನು ಕೇಳಿ ಎಲ್ಲೆಡೆಯೂ ಸೈನಿಕರು ಕಂಪಿಸಿದರು.
06112071a ಅಮೋಘಾ ಹ್ಯಪತನ್ಬಾಣಾಃ ಪಿತುಸ್ತೇ ಮನುಜೇಶ್ವರ।
06112071c ನಾಸಜ್ಜಂತ ಶರೀರೇಷು ಭೀಷ್ಮಚಾಪಚ್ಯುತಾಃ ಶರಾಃ।।
ಮನುಜೇಶ್ವರ! ನಿನ್ನ ಪಿತ ಭೀಷ್ಮನ ಚಾಪದಿಂದ ಹೊರಟ ಶರಗಳು ಶರೀರಗಳನ್ನು ಚುಚ್ಚದೇ ವ್ಯರ್ಥವಾಗಿ ಬೀಳುತ್ತಿರಲಿಲ್ಲ.
06112072a ನಿರ್ಮನುಷ್ಯಾನ್ರಥಾನ್ರಾಜನ್ಸುಯುಕ್ತಾಂ ಜವನೈರ್ಹಯೈಃ।
06112072c ವಾತಾಯಮಾನಾನ್ಪಶ್ಯಾಮ ಹ್ರಿಯಮಾಣಾನ್ವಿಶಾಂ ಪತೇ।।
ವಿಶಾಂಪತೇ! ರಾಜನ್! ಮನುಷ್ಯರೇ ಇಲ್ಲದಿದ್ದ ರಣದಲ್ಲಿ ವೇಗವಾಗಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ ರಥಗಳು ಓಡುತ್ತಿರುವುದನ್ನು ನೋಡಿದೆನು.
06112073a ಚೇದಿಕಾಶಿಕರೂಷಾಣಾಂ ಸಹಸ್ರಾಣಿ ಚತುರ್ದಶ।
06112073c ಮಹಾರಥಾಃ ಸಮಾಖ್ಯಾತಾಃ ಕುಲಪುತ್ರಾಸ್ತನುತ್ಯಜಃ।।
06112074a ಅಪರಾವರ್ತಿನಃ ಶೂರಾಃ ಸುವರ್ಣವಿಕೃತಧ್ವಜಾಃ।
06112074c ಸಂಗ್ರಾಮೇ ಭೀಷ್ಮಮಾಸಾದ್ಯ ಸವಾಜಿರಥಕುಂಜರಾಃ।
06112074e ಜಗ್ಮುಸ್ತೇ ಪರಲೋಕಾಯ ವ್ಯಾದಿತಾಸ್ಯಮಿವಾಂತಕಂ।।
ಬಾಯಿಕಳೆದ ಅಂತಕನಂತಿದ್ದ ಭೀಷ್ಮನನ್ನು ಸಂಗ್ರಾಮದಲ್ಲಿ ಎದುರಿಸಿ ಹದಿನಾಲ್ಕು ಸಾವಿರ ಮಹಾರಥ, ಸಮಾಖ್ಯಾತ, ಕುಲಪುತ್ರರು, ತನುವನ್ನೇ ತ್ಯಜಿಸಿ ಬಂದ ಚೇದಿ-ಕಾಶಿ-ಕರೂಷಣರು ಕುದುರೆ-ರಥ-ಆನೆಗಳೊಂದಿಗೆ ಪರಲೋಕಗಳಿಗೆ ತೆರಳಿದರು.
06112075a ನ ತತ್ರಾಸೀನ್ಮಹಾರಾಜ ಸೋಮಕಾನಾಂ ಮಹಾರಥಃ।
06112075c ಯಃ ಸಂಪ್ರಾಪ್ಯ ರಣೇ ಭೀಷ್ಮಂ ಜೀವಿತೇ ಸ್ಮ ಮನೋ ದಧೇ।।
ಮಹಾರಾಜ! ರಣದಲ್ಲಿ ಭೀಷ್ಮನನ್ನು ಎದುರಿಸಿಯೂ ಜೀವವನ್ನು ಉಳಿಸಿಕೊಳ್ಳುತ್ತೇನೆ ಎನ್ನುವ ಯಾವ ಸೋಮಕ ಮಹಾರಥನೂ ಅಲ್ಲಿರಲಿಲ್ಲ.
06112076a ತಾಂಶ್ಚ ಸರ್ವಾನ್ರಣೇ ಯೋಧಾನ್ಪ್ರೇತರಾಜಪುರಂ ಪ್ರತಿ।
06112076c ನೀತಾನಮನ್ಯಂತ ಜನಾ ದೃಷ್ಟ್ವಾ ಭೀಷ್ಮಸ್ಯ ವಿಕ್ರಮಂ।।
ಭೀಷ್ಮನ ವಿಕ್ರಮವನ್ನು ನೋಡಿ ರಣದಲ್ಲಿದ್ದ ಯೋಧರೆಲ್ಲರನ್ನೂ ಪ್ರೇತರಾಜನ ಪುರದ ಕಡೆಗೆ ಕಳುಹಿಸಿಯಾಯಿತೆಂದು ಜನರು ಅಂದುಕೊಳ್ಳುತ್ತಿದ್ದರು.
06112077a ನ ಕಶ್ಚಿದೇನಂ ಸಮರೇ ಪ್ರತ್ಯುದ್ಯಾತಿ ಮಹಾರಥಃ।
06112077c ಋತೇ ಪಾಂಡುಸುತಂ ವೀರಂ ಶ್ವೇತಾಶ್ವಂ ಕೃಷ್ಣಸಾರಥಿಂ।
06112077e ಶಿಖಂಡಿನಂ ಚ ಸಮರೇ ಪಾಂಚಾಲ್ಯಮಮಿತೌಜಸಂ।।
ಆ ಸಮಯದಲ್ಲಿ ವೀರ ಪಾಂಡುಸುತ ಕೃಷ್ಣಸಾರಥಿ ಶ್ವೇತಾಶ್ವನನ್ನು ಮತ್ತು ಸಮರದಲ್ಲಿ ಅವನಿಂದ ಪಾಲಿತಗೊಂಡ ಅಮಿತೌಜಸ ಪಾಂಚಾಲ್ಯ ಶಿಖಂಡಿಯನ್ನು ಬಿಟ್ಟು ಬೇರೆ ಯಾವ ಮಹಾರಥನೂ ಅವನನ್ನು ಎದುರಿಸಲು ಮುಂದೆ ಬರಲಿಲ್ಲ.
06112078a ಶಿಖಂಡೀ ತು ರಣೇ ಭೀಷ್ಮಮಾಸಾದ್ಯ ಭರತರ್ಷಭ।
06112078c ದಶಭಿರ್ದಶಭಿರ್ಬಾಣೈರಾಜಘಾನ ಮಹಾಹವೇ।।
ಭರತರ್ಷಭ! ಶಿಖಂಡಿಯಾದರೋ ರಣದ ಮಹಾಹವದಲ್ಲಿ ಭೀಷ್ಮನ ಬಳಿಹೋಗಿ ಇಪ್ಪತ್ತು ಬಾಣಗಳಿಂದ ಹೊಡೆದನು.
06112079a ಶಿಖಂಡಿನಂ ತು ಗಾಂಗೇಯಃ ಕ್ರೋಧದೀಪ್ತೇನ ಚಕ್ಷುಷಾ।
06112079c ಅವೈಕ್ಷತ ಕಟಾಕ್ಷೇಣ ನಿರ್ದಹನ್ನಿವ ಭಾರತ।।
ಭಾರತ! ಕೇವಲ ಕಣ್ಣುನೋಟದಿಂದಲೇ ದಹಿಸಿಬಿಡುವನೋ ಎನ್ನುವಂತೆ ಗಾಂಗೇಯನು ಸಿಟ್ಟಿನಿಂದ ಉರಿಯುವ ಕಣ್ಣುಗಳಿಂದ ಶಿಖಂಡಿಯನ್ನು ನೋಡಿದನು.
06112080a ಸ್ತ್ರೀತ್ವಂ ತತ್ಸಂಸ್ಮರನ್ರಾಜನ್ಸರ್ವಲೋಕಸ್ಯ ಪಶ್ಯತಃ।
06112080c ನ ಜಘಾನ ರಣೇ ಭೀಷ್ಮಃ ಸ ಚ ತಂ ನಾವಬುದ್ಧವಾನ್।।
ರಾಜನ್! ಅವನ ಸ್ತ್ರೀತ್ವವನ್ನು ನೆನಪಿಸಿಕೊಂಡು ಸರ್ವಲೋಕಗಳೂ ನೋಡುತ್ತಿರಲು ಭೀಷ್ಮನು ಅವನು ಹೊಡೆದರೂ ಅವನನ್ನು ತಿರುಗಿ ಹೊಡೆಯಲಿಲ್ಲ.
06112081a ಅರ್ಜುನಸ್ತು ಮಹಾರಾಜ ಶಿಖಂಡಿನಮಭಾಷತ।
06112081c ಅಭಿತ್ವರಸ್ವ ತ್ವರಿತೋ ಜಹಿ ಚೈನಂ ಪಿತಾಮಹಂ।।
ಮಹಾರಾಜ! ಅರ್ಜುನನಾದರೋ ಶಿಖಂಡಿಗೆ ಹೇಳಿದನು: “ತ್ವರೆಮಾಡು! ಪಿತಾಮಹನನ್ನು ಬೇಗನೇ ಕೊಲ್ಲು!
06112082a ಕಿಂ ತೇ ವಿವಕ್ಷಯಾ ವೀರ ಜಹಿ ಭೀಷ್ಮಂ ಮಹಾರಥಂ।
06112082c ನ ಹ್ಯನ್ಯಮನುಪಶ್ಯಾಮಿ ಕಂ ಚಿದ್ಯೌಧಿಷ್ಠಿರೇ ಬಲೇ।।
06112083a ಯಃ ಶಕ್ತಃ ಸಮರೇ ಭೀಷ್ಮಂ ಯೋಧಯೇತ ಪಿತಾಮಹಂ।
06112083c ಋತೇ ತ್ವಾಂ ಪುರುಷವ್ಯಾಘ್ರ ಸತ್ಯಮೇತದ್ಬ್ರವೀಮಿ ತೇ।।
ವೀರ! ಏನನ್ನು ನೋಡುತ್ತಿದ್ದೀಯೆ? ಮಹಾರಥ ಭೀಷ್ಮನನ್ನು ಕೊಲ್ಲು! ಏಕೆಂದರೆ ಪುರುಷವ್ಯಾಘ್ರ! ನೀನಲ್ಲದೇ ಯುಧಿಷ್ಠಿರನ ಸೇನೆಯಲ್ಲಿ ಸಮರದಲ್ಲಿ ಪಿತಾಮಹ ಭೀಷ್ಮನೊಡನೆ ಯುದ್ಧಮಾಡಬಲ್ಲ ಬೇರೆ ಅನ್ಯರನ್ನು ನಾನು ಕಾಣೆ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.”
06112084a ಏವಮುಕ್ತಸ್ತು ಪಾರ್ಥೇನ ಶಿಖಂಡೀ ಭರತರ್ಷಭ।
06112084c ಶರೈರ್ನಾನಾವಿಧೈಸ್ತೂರ್ಣಂ ಪಿತಾಮಹಮುಪಾದ್ರವತ್।।
ಭರತರ್ಷಭ! ಪಾರ್ಥನು ಹೀಗೆ ಹೇಳಲು ಶಿಖಂಡಿಯು ನಾನಾವಿಧದ ಶರಗಳಿಂದ ಬೇಗನೇ ಪಿತಾಮಹನನ್ನು ಹೊಡೆದನು.
06112085a ಅಚಿಂತಯಿತ್ವಾ ತಾನ್ಬಾಣಾನ್ಪಿತಾ ದೇವವ್ರತಸ್ತವ।
06112085c ಅರ್ಜುನಂ ಸಮರೇ ಕ್ರುದ್ಧಂ ವಾರಯಾಮಾಸ ಸಾಯಕೈಃ।।
ಆ ಬಾಣಗಳ ಕುರಿತು ಯೋಚಿಸದೇ ನಿನ್ನ ಪಿತ ದೇವವ್ರತನು ಸಮರದಲ್ಲಿ ಕ್ರುದ್ಧನಾದ ಅರ್ಜುನನನ್ನು ಸಾಯಕಗಳಿಂದ ತಡೆದನು.
06112086a ತಥೈವ ಚ ಚಮೂಂ ಸರ್ವಾನ್ಪಾಂಡವಾನಾಂ ಮಹಾರಥಃ।
06112086c ಅಪ್ರೈಷೀತ್ಸಮರೇ ತೀಕ್ಷ್ಣೈಃ ಪರಲೋಕಾಯ ಮಾರಿಷ।।
ಹಾಗೆಯೇ ಪಾಂಡವರ ಸೇನೆಗಳೆಲ್ಲವನ್ನೂ ಮಹಾರಥನು ಸಮರದಲ್ಲಿ ತೀಕ್ಷ್ಣ ಶರಗಳಿಂದ ಪರಲೋಕಕ್ಕೆ ಕಳುಹಿಸಿದನು.
06112087a ತಥೈವ ಪಾಂಡವಾ ರಾಜನ್ಸೈನ್ಯೇನ ಮಹತಾ ವೃತಾಃ।
06112087c ಭೀಷ್ಮಂ ಪ್ರಚ್ಛಾದಯಾಮಾಸುರ್ಮೇಘಾ ಇವ ದಿವಾಕರಂ।।
ರಾಜನ್! ಹಾಗೆಯೇ ಪಾಂಡವನೂ ಕೂಡ ಮಹಾ ಸೇನೆಯೊಂದಿಗೆ ಆವೃತನಾಗಿ ಭೀಷ್ಮನನ್ನು ಮೋಡಗಳು ದಿವಾಕರನನ್ನು ಹೇಗೋ ಹಾಗೆ ಮುಚ್ಚಿದನು.
06112088a ಸ ಸಮಂತಾತ್ಪರಿವೃತೋ ಭಾರತೋ ಭರತರ್ಷಭ।
06112088c ನಿರ್ದದಾಹ ರಣೇ ಶೂರಾನ್ವನಂ ವಹ್ನಿರಿವ ಜ್ವಲನ್।।
ಭರತರ್ಷಭ! ಎಲ್ಲಕಡೆಗಳಿಂದಲೂ ಸುತ್ತುವರೆದಿದ್ದ ಆ ಭಾರತನು ರಣದಲ್ಲಿ ಶೂರರನ್ನು ಬೆಂಕೆಯು ವನವನ್ನು ಸುಡುವಂತೆ ಸುಟ್ಟುಹಾಕಿದನು.
06112089a ತತ್ರಾದ್ಭುತಮಪಶ್ಯಾಮ ತವ ಪುತ್ರಸ್ಯ ಪೌರುಷಂ।
06112089c ಅಯೋಧಯತ ಯತ್ಪಾರ್ಥಂ ಜುಗೋಪ ಚ ಯತವ್ರತಂ।।
ಅಲ್ಲಿ ನಿನ್ನ ಪುತ್ರನ ಅದ್ಭುತ ಪೌರುಷವನ್ನು ನೋಡಿದೆವು. ಅವನು ಪಾರ್ಥನೊಂದಿಗೆ ಯುದ್ಧಮಾಡುತ್ತಿದ್ದನು ಮತ್ತು ಯತವ್ರತನನ್ನು ರಕ್ಷಿಸುತ್ತಿದ್ದನು.
06112090a ಕರ್ಮಣಾ ತೇನ ಸಮರೇ ತವ ಪುತ್ರಸ್ಯ ಧನ್ವಿನಃ।
06112090c ದುಃಶಾಸನಸ್ಯ ತುತುಷುಃ ಸರ್ವೇ ಲೋಕಾ ಮಹಾತ್ಮನಃ।।
ಸಮರದಲ್ಲಿ ನಿನ್ನ ಮಗ ಮಹಾತ್ಮ ಧನ್ವಿ ದುಃಶಾಸನನ ಕೃತ್ಯದಿಂದ ಸರ್ವ ಲೋಕಗಳೂ ಸಂತೋಷಗೊಂಡವು.
06112091a ಯದೇಕಃ ಸಮರೇ ಪಾರ್ಥಾನ್ಸಾನುಗಾನ್ಸಮಯೋಧಯತ್।
06112091c ನ ಚೈನಂ ಪಾಂಡವಾ ಯುದ್ಧೇ ವಾಯರಾಮಾಸುರುಲ್ಬಣಂ।।
ಅವನೊಬ್ಬನೇ ಅನುಯಾಯಿಗಳೊಂದಿಗೆ ಪಾರ್ಥರನ್ನು ಎದುರಿಸಿ ಯುದ್ಧ ಮಾಡುತ್ತಿದ್ದನು. ಯುದ್ಧದಲ್ಲಿ ಪ್ರಚಂಡಪರಾಕ್ರಮಿಯಾಗಿದ್ದ ಅವನನ್ನು ಪಾಂಡವರೂ ಕೂಡ ತಡೆಯಲು ಸಮರ್ಥರಾಗಲಿಲ್ಲ.
06112092a ದುಃಶಾಸನೇನ ಸಮರೇ ರಥಿನೋ ವಿರಥೀಕೃತಾಃ।
06112092c ಸಾದಿನಶ್ಚ ಮಹಾರಾಜ ದಂತಿನಶ್ಚ ಮಹಾಬಲಾಃ।।
06112093a ವಿನಿರ್ಭಿನ್ನಾಃ ಶರೈಸ್ತೀಕ್ಷ್ಣೈರ್ನಿಪೇತುರ್ಧರಣೀತಲೇ।
06112093c ಶರಾತುರಾಸ್ತಥೈವಾನ್ಯೇ ದಂತಿನೋ ವಿದ್ರುತಾ ದಿಶಃ।।
ಮಹಾರಾಜ! ಸಮರದಲ್ಲಿ ದುಃಶಾಸನನಿಂದ ರಥಿಗಳು ವಿರಥರಾದರು. ಬಹಾಬಲ ಆನೆಗಳೂ, ಅವುಗಳನ್ನು ಏರಿದವರೂ ತೀಕ್ಷ್ಣಶರಗಳಿಂದ ಒಡೆದು ನೆಲದ ಮೇಲೆ ಬಿದ್ದರು. ಹಾಗೆಯೇ ಅನ್ಯ ಆನೆಗಳು ಶರಗಳಿಂದ ಪೀಡಿತವಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋದವು.
06112094a ಯಥಾಗ್ನಿರಿಂಧನಂ ಪ್ರಾಪ್ಯ ಜ್ವಲೇದ್ದೀಪ್ತಾರ್ಚಿರುಲ್ಬಣಃ।
06112094c ತಥಾ ಜಜ್ವಾಲ ಪುತ್ರಸ್ತೇ ಪಾಂಡವಾನ್ ವೈ ವಿನಿರ್ದಹನ್।।
ಹೇಗೆ ಅಗ್ನಿಯು ಇಂಧನಕ್ಕೆ ತಾಗಿ ಇನ್ನೂ ಹೆಚ್ಚು ಹತ್ತಿ ಉರಿಯುವುದೋ ಹಾಗೆ ನಿನ್ನ ಪುತ್ರನು ಪಾಂಡವರನ್ನು ದಹಿಸುತ್ತಾ ಇನ್ನೂ ಹತ್ತಿ ಉರಿದನು.
06112095a ತಂ ಭಾರತಮಹಾಮಾತ್ರಂ ಪಾಂಡವಾನಾಂ ಮಹಾರಥಃ।
06112095c ಜೇತುಂ ನೋತ್ಸಹತೇ ಕಶ್ಚಿನ್ನಾಪ್ಯುದ್ಯಾತುಂ ಕಥಂ ಚನ।
06112095e ಋತೇ ಮಹೇಂದ್ರತನಯಂ ಶ್ವೇತಾಶ್ವಂ ಕೃಷ್ಣಸಾರಥಿಂ।।
ಮಹೇಂದ್ರತನಯ ಶ್ವೇತಾಶ್ವ ಕೃಷ್ಣಸಾರಥಿಯನ್ನು ಬಿಟ್ಟರೆ ಪಾಂಡವರಲ್ಲಿ ಬೇರೆ ಯಾವ ಮಹಾರಥನೂ ಆ ಭಾರತ ಮಹಾಮಾತ್ರನನ್ನು ಎದುರಿಸಿ ಯುದ್ಧಮಾಡಲು ಅಥವಾ ಜಯಿಸಲು ಉತ್ಸುಕರಾಗಿರಲಿಲ್ಲ.
06112096a ಸ ಹಿ ತಂ ಸಮರೇ ರಾಜನ್ವಿಜಿತ್ಯ ವಿಜಯೋಽರ್ಜುನಃ।
06112096c ಭೀಷ್ಮಮೇವಾಭಿದುದ್ರಾವ ಸರ್ವಸೈನ್ಯಸ್ಯ ಪಶ್ಯತಃ।।
ಸಮರದಲ್ಲಿ ಸರ್ವಸೈನ್ಯಗಳೂ ನೋಡುತ್ತಿದ್ದಂತೆಯೇ ವಿಜಯ ಅರ್ಜುನನು ಅವನನ್ನು ಗೆದ್ದು ಒಡನೆಯೇ ಭೀಷ್ಮನನ್ನು ಆಕ್ರಮಿಸಿದನು.
06112097a ವಿಜಿತಸ್ತವ ಪುತ್ರೋಽಪಿ ಭೀಷ್ಮಬಾಹುವ್ಯಪಾಶ್ರಯಃ।
06112097c ಪುನಃ ಪುನಃ ಸಮಾಶ್ವಸ್ಯ ಪ್ರಾಯುಧ್ಯತ ರಣೋತ್ಕಟಃ।
06112097e ಅರ್ಜುನಂ ಚ ರಣೇ ರಾಜನ್ಯೋಧಯನ್ಸ ವ್ಯರಾಜತ।।
ಸೋತಿದ್ದರೂ ನಿನ್ನ ಮಗ ರಣೋತ್ಕಟನು ಭೀಷ್ಮನ ಬಾಹುಗಳನ್ನು ಆಶ್ರಯಿಸಿ ಪುನಃ ಪುನಃ ದಣಿವಾರಿಸಿಕೊಂಡು ಯುದ್ಧಮಾಡುತ್ತಲೇ ಇದ್ದನು. ರಾಜನ್! ಅರ್ಜುನನೊಡನೆಯೂ ಯುದ್ಧಮಾಡುತ್ತಾ ಅವನು ರಣದಲ್ಲಿ ರಾಜಿಸಿದನು.
06112098a ಶಿಖಂಡೀ ತು ರಣೇ ರಾಜನ್ವಿವ್ಯಾಧೈವ ಪಿತಾಮಹಂ।
06112098c ಶರೈರಶನಿಸಂಸ್ಪರ್ಶೈಸ್ತಥಾ ಸರ್ಪವಿಷೋಪಮೈಃ।।
ರಾಜನ್! ಶಿಖಂಡಿಯಾದರೋ ರಣದಲ್ಲಿ ಸರ್ಪವಿಷಗಳಿಗೆ ಸಮವಾದ ತೀಕ್ಷ್ಣ ಶರಗಳಿಂದ ಒಂದೇ ಸಮನೆ ಪಿತಾಮಹನನ್ನು ಹೊಡೆಯುತ್ತಲೇ ಇದ್ದನು.
06112099a ನ ಚ ತೇಽಸ್ಯ ರುಜಂ ಚಕ್ರುಃ ಪಿತುಸ್ತವ ಜನೇಶ್ವರ।
06112099c ಸ್ಮಯಮಾನಶ್ಚ ಗಾಂಗೇಯಸ್ತಾನ್ಬಾಣಾಂ ಜಗೃಹೇ ತದಾ।।
ಜನೇಶ್ವರ! ಆದರೆ ಅವುಗಳು ನಿನ್ನ ತಂದೆಗೆ ನೋವನ್ನುಂಟುಮಾಡುತ್ತಿರಲಿಲ್ಲ. ಗಾಂಗೇಯನು ನಗುತ್ತಲೇ ಆ ಬಾಣಗಳನ್ನು ಸ್ವೀಕರಿಸುತ್ತಿದ್ದನು.
06112100a ಉಷ್ಣಾರ್ತೋ ಹಿ ನರೋ ಯದ್ವಜ್ಜಲಧಾರಾಃ ಪ್ರತೀಚ್ಛತಿ।
06112100c ತಥಾ ಜಗ್ರಾಹ ಗಾಂಗೇಯಃ ಶರಧಾರಾಃ ಶಿಖಂಡಿನಃ।।
ಬೇಸಗೆಯ ಬಿಸಿಲಿನಿಂದ ಬಳಲಿದವನು ಹೇಗೆ ನೀರಿನ ಮಳೆಯನ್ನು ಬಯಸುತ್ತಾನೋ ಹಾಗೆ ಗಾಂಗೇಯನು ಶಿಖಂಡಿಯ ಶರಧಾರೆಗಳನ್ನು ಸ್ವೀಕರಿಸಿದನು.
06112101a ತಂ ಕ್ಷತ್ರಿಯಾ ಮಹಾರಾಜ ದದೃಶುರ್ಘೋರಮಾಹವೇ।
06112101c ಭೀಷ್ಮಂ ದಹಂತಂ ಸೈನ್ಯಾನಿ ಪಾಂಡವಾನಾಂ ಮಹಾತ್ಮನಾಂ।।
ಮಹಾರಾಜ! ಘೋರ ಆಹವದಲ್ಲಿ ಭೀಷ್ಮನು ಮಹಾತ್ಮ ಪಾಂಡವರ ಸೇನೆಗಳನ್ನು ದಹಿಸುತ್ತಿರುವುದನ್ನು ಕ್ಷತ್ರಿಯರು ನೋಡಿದರು.
06112102a ತತೋಽಬ್ರವೀತ್ತವ ಸುತಃ ಸರ್ವಸೈನ್ಯಾನಿ ಮಾರಿಷ।
06112102c ಅಭಿದ್ರವತ ಸಂಗ್ರಾಮೇ ಫಲ್ಗುನಂ ಸರ್ವತೋ ರಥೈಃ।।
ಆಗ ನಿನ್ನ ಮಗನು ಎಲ್ಲ ಸೈನ್ಯಗಳಿಗೂ ಹೇಳಿದನು: “ಸಂಗ್ರಾಮದಲ್ಲಿ ಫಲ್ಗುನನನ್ನು ರಥಗಳಿಂದ ಎಲ್ಲ ಕಡೆಗಳಿಂದಲೂ ಆಕ್ರಮಿಸಿರಿ.
06112103a ಭೀಷ್ಮೋ ವಃ ಸಮರೇ ಸರ್ವಾನ್ಪಲಯಿಷ್ಯತಿ ಧರ್ಮವಿತ್।
06112103c ತೇ ಭಯಂ ಸುಮಹತ್ತ್ವಕ್ತ್ವಾ ಪಾಂಡವಾನ್ಪ್ರತಿಯುಧ್ಯತ।।
ಧರ್ಮವಿದು ಭೀಷ್ಮನು ಸಮರದಲ್ಲಿ ನಮ್ಮೆಲ್ಲರನ್ನೂ ಪಾಲಿಸುತ್ತಾನೆ. ಆದುದರಿಂದ ಪಾಂಡವನ ಭಯವನ್ನು ತೊರೆದು ಅವನೊಡನೆ ಯುದ್ಧಮಾಡಿ.
06112104a ಏಷ ತಾಲೇನ ದೀಪ್ತೇನ ಭೀಷ್ಮಸ್ತಿಷ್ಠತಿ ಪಾಲಯನ್।
06112104c ಸರ್ವೇಷಾಂ ಧಾರ್ತರಾಷ್ಟ್ರಾಣಾಂ ರಣೇ ಶರ್ಮ ಚ ವರ್ಮ ಚ।।
ಈ ತಾಲಧ್ವಜನು ಉರಿಯುತ್ತಾ ರಣದಲ್ಲಿ ಸರ್ವ ಧಾರ್ತರಾಷ್ಟ್ರರನ್ನು ಪಾಲಿಸುತ್ತಾ ಅವರ ಕವಚ-ರಕ್ಷಕನಾಗಿ ನಿಂತಿದ್ದಾನೆ.
06112105a ತ್ರಿದಶಾಪಿ ಸಮುದ್ಯುಕ್ತಾ ನಾಲಂ ಭೀಷ್ಮಂ ಸಮಾಸಿತುಂ।
06112105c ಕಿಮು ಪಾರ್ಥಾ ಮಹಾತ್ಮಾನಂ ಮರ್ತ್ಯಭೂತಾಸ್ತಥಾಬಲಾಃ।
06112105e ತಸ್ಮಾದ್ದ್ರವತ ಹೇ ಯೋಧಾಃ ಫಲ್ಗುನಂ ಪ್ರಾಪ್ಯ ಸಂಯುಗೇ।।
ತ್ರಿದಶರೂ ಕೂಡ ಪ್ರಯತ್ನಿಸಿದರೂ ಈ ಭೀಷ್ಮನನ್ನೆದುರಿಸಿ ಯುದ್ಧಮಾಡಲಾರರು. ಇನ್ನು ಬಲಶಾಲಿಗಳಾಗಿದ್ದರೂ ಸಾವಿರುವ ಮಹಾತ್ಮ ಪಾಂಡವರು ಯಾವ ಲೆಕ್ಕಕ್ಕೆ? ಆದುದರಿಂದ ಹೇ ಯೋಧರೇ! ಅರ್ಜುನನೊಡನೆ ಯುದ್ಧವು ಸನ್ನಿಹಿತವಾಗಿರುವಾಗ ಓಡಿ ಹೋಗಬೇಡಿ.
06112106a ಅಹಮದ್ಯ ರಣೇ ಯತ್ತೋ ಯೋಧಯಿಷ್ಯಾಮಿ ಫಲ್ಗುನಂ।
06112106c ಸಹಿತಃ ಸರ್ವತೋ ಯತ್ತೈರ್ಭವದ್ಭಿರ್ವಸುಧಾಧಿಪಾಃ।।
ಇಂದು ನಾನು ನೀವೆಲ್ಲ ವಸುಧಾಧಿಪರೊಡನೆ ಎಲ್ಲಕಡೆಗಳಿಂದ ಮುತ್ತಿಗೆ ಹಾಕಿ ಫಲ್ಗುನನೊಂದಿಗೆ ಯುದ್ಧಮಾಡುತ್ತೇನೆ.”
06112107a ತಚ್ಚ್ರುತ್ವಾ ತು ವಚೋ ರಾಜಂಸ್ತವ ಪುತ್ರಸ್ಯ ಧನ್ವಿನಃ।
06112107c ಅರ್ಜುನಂ ಪ್ರತಿ ಸಮ್ಯತ್ತಾ ಬಲವಂತೋ ಮಹಾರಥಾಃ।।
ರಾಜನ್! ನಿನ್ನ ಮಗನ ಆ ಮಾತನ್ನು ಕೇಳಿ ಬಲವಂತರಾದ ಮಹಾರಥ ಧನ್ವಿಗಳು ಅರ್ಜುನನ ಮೇಲೆ ಆಕ್ರಮಿಸಿದರು.
06112108a ತೇ ವಿದೇಹಾಃ ಕಲಿಂಗಾಶ್ಚ ದಾಶೇರಕಗಣೈಃ ಸಹ।
06112108c ಅಭಿಪೇತುರ್ನಿಷಾದಾಶ್ಚ ಸೌವೀರಾಶ್ಚ ಮಹಾರಣೇ।।
06112109a ಬಾಹ್ಲಿಕಾ ದರದಾಶ್ಚೈವ ಪ್ರಾಚ್ಯೋದೀಚ್ಯಾಶ್ಚ ಮಾಲವಾಃ।
06112109c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ।।
06112110a ಶಾಲ್ವಾಶ್ರಯಾಸ್ತ್ರಿಗರ್ತಾಶ್ಚ ಅಂಬಷ್ಠಾಃ ಕೇಕಯೈಃ ಸಹ।
06112110c ಅಭಿಪೇತೂ ರಣೇ ಪಾರ್ಥಂ ಪತಂಗಾ ಇವ ಪಾವಕಂ।।
ವಿದೇಹರು, ಕಲಿಂಗರು, ದಾಶೇರಕಗಣಗಳೊಂದಿಗೆ ನಿಷಾದರು ಮತ್ತು ಸೌವೀರರು ಮಹಾರಣದಲ್ಲಿ ಅವನ ಮೇಲೆರಗಿದರು. ಬಾಹ್ಲೀಕರು, ದರದರು, ಪೂರ್ವದವರು, ಉತ್ತರದವರು, ಮಾಲವರು, ಅಭೀಷಾಹರು, ಶೂರಸೇನರು, ಶಿಬಯರು, ವಸಾಯತರು, ಶಾಲ್ವರು, ತ್ರಿಗರ್ತರು, ಅಂಬಷ್ಠರು, ಕೇಕಯರು ಒಟ್ಟಿಗೇ ರಣದಲ್ಲಿ ಪತಂಗಗಳು ಬೆಂಕಿಯನ್ನು ಹೇಗೋ ಹಾಗೆ ಪಾರ್ಥನನ್ನು ಮುತ್ತಿದರು.
06112111a ಸ ತಾನ್ಸರ್ವಾನ್ಸಹಾನೀಕಾನ್ಮಹಾರಾಜ ಮಹಾರಥಾನ್।
06112111c ದಿವ್ಯಾನ್ಯಸ್ತ್ರಾಣಿ ಸಂಚಿಂತ್ಯ ಪ್ರಸಂಧಾಯ ಧನಂಜಯಃ।।
ಮಹಾರಾಜ! ಆಗ ಧನಂಜಯನು ದಿವ್ಯಾಸ್ತ್ರಗಳನ್ನು ಸ್ಮರಿಸಿ ಆ ಎಲ್ಲ ಮಹಾರಥರನ್ನೂ ಸೇನೆಗಳೊಂದಿಗೆ ನಾಶಪಡಿಸಿದನು.
06112112a ಸ ತೈರಸ್ತ್ರೈರ್ಮಹಾವೇಗೈರ್ದದಾಹಾಶು ಮಹಾಬಲಃ।
06112112c ಶರಪ್ರತಾಪೈರ್ಬೀಭತ್ಸುಃ ಪತಂಗಾನಿವ ಪಾವಕಃ।।
ತನ್ನ ಶರಪ್ರತಾಪದಿಂದ ಮಹಾಬಲ ಬೀಭತ್ಸುವು ಮಹಾವೇಗವುಳ್ಳ ಅಸ್ತ್ರಗಳಿಂದ ಅಗ್ನಿಯು ಪತಂಗಗಳನ್ನು ಸುಡುವಂತೆ ಸುಟ್ಟುಹಾಕಿದನು.
06112113a ತಸ್ಯ ಬಾಣಸಹಸ್ರಾಣಿ ಸೃಜತೋ ದೃಢಧನ್ವಿನಃ।
06112113c ದೀಪ್ಯಮಾನಮಿವಾಕಾಶೇ ಗಾಂಡೀವಂ ಸಮದೃಶ್ಯತ।।
ಆ ದೃಢಧನ್ವಿಯ ಗಾಂಡೀವವು ಸಹಸ್ರಬಾಣಗಳನ್ನು ಸೃಷ್ಟಿಸುತ್ತಾ ಆಕಾಶದಲ್ಲಿ ಮಿಂಚಿನಂತೆ ಹೊಳೆಯಿತು.
06112114a ತೇ ಶರಾರ್ತಾ ಮಹಾರಾಜ ವಿಪ್ರಕೀರ್ಣರಥಧ್ವಜಾಃ।
06112114c ನಾಬ್ಯವರ್ತಂತ ರಾಜಾನಃ ಸಹಿತಾ ವಾನರಧ್ವಜಂ।।
06112115a ಸಧ್ವಜಾ ರಥಿನಃ ಪೇತುರ್ಹಯಾರೋಹಾ ಹಯೈಃ ಸಹ।
06112115c ಗಜಾಃ ಸಹ ಗಜಾರೋಹೈಃ ಕಿರೀಟಿಶರತಾಡಿತಾಃ।।
ಮಹಾರಾಜ! ಶರಾರ್ತರಾದ ಆ ರಾಜರು ರಥಧ್ವಜಗಳು ಮುರಿದು ವಾನರಧ್ವಜನನ್ನು ಎದುರಿಸಲಾರದಂತಾದರು. ಕಿರೀಟಿಯ ಶರಗಳಿಂದ ಹೊಡೆಯಲ್ಪಟ್ಟು ರಥಿಗಳು ಧ್ವಜಗಳೊಂದಿಗೆ, ಅಶ್ವಾರೋಹಿಗಳು ಅಶ್ವಗಳೊಂದಿಗೆ, ಗಜಾರೋಹಿಗಳು ಆನೆಗಳೊಂದಿಗೆ ಬಿದ್ದರು.
06112116a ತತೋಽರ್ಜುನಭುಜೋತ್ಸೃಷ್ಟೈರಾವೃತಾಸೀದ್ವಸುಂಧರಾ।
06112116c ವಿದ್ರವದ್ಭಿಶ್ಚ ಬಹುಧಾ ಬಲೈ ರಾಜ್ಞಾಂ ಸಮಂತತಃ।।
ಆಗ ಅರ್ಜುನನ ಭುಜಗಳಿಂದ ಪ್ರಯೋಗಿಸಲ್ಪಟ್ಟ ಶರಗಳಿಂದ ಭೂಮಿಯು ತುಂಬಿಹೋಯಿತು. ಅನೇಕ ಸೇನೆಗಳೊಂದಿಗೆ ರಾಜರು ಎಲ್ಲಕಡೆ ಓಡಿ ಹೋದರು.
06112117a ಅಥ ಪಾರ್ಥೋ ಮಹಾಬಾಹುರ್ದ್ರಾವಯಿತ್ವಾ ವರೂಥಿನೀಂ।
06112117c ದುಃಶಾಸನಾಯ ಸಮರೇ ಪ್ರೇಷಯಾಮಾಸ ಸಾಯಕಾನ್।।
ಆಗ ಮಹಾಬಾಹು ಪಾರ್ಥನು ಸಮರದಲ್ಲಿ ಸೇನೆಗಳನ್ನು ಪಲಾಯನಗೊಳಿಸಿ ದುಃಶಾಸನನ ಮೇಲೆ ಸಾಯಕಗಳನ್ನು ಕಳುಹಿಸಿದನು.
06112118a ತೇ ತು ಭಿತ್ತ್ವಾ ತವ ಸುತಂ ದುಃಶಾಸನಮಯೋಮುಖಾಃ।
06112118c ಧರಣೀಂ ವಿವಿಶುಃ ಸರ್ವೇ ವಲ್ಮೀಕಮಿವ ಪನ್ನಗಾಃ।
06112118e ಹಯಾಂಶ್ಚಾಸ್ಯ ತತೋ ಜಘ್ನೇ ಸಾರಥಿಂ ಚ ನ್ಯಪಾತಯತ್।।
ಅವು ನಿನ್ನ ಮಗ ದುಃಶಾಸನನನ್ನು ಹೊಕ್ಕು ಬಿಲದೊಳಗೆ ಹೊಗುವ ಸರ್ಪಗಳಂತೆ ನೆಲವನ್ನು ಮುಕ್ಕಿದವು. ಅವನ ಕುದುರೆಗಳು ಮತ್ತು ಸಾರಥಿಯು ಸತ್ತು ಬಿದ್ದರು.
06112119a ವಿವಿಂಶತಿಂ ಚ ವಿಂಶತ್ಯಾ ವಿರಥಂ ಕೃತವಾನ್ಪ್ರಭೋ।
06112119c ಆಜಘಾನ ಭೃಶಂ ಚೈವ ಪಂಚಭಿರ್ನತಪರ್ವಭಿಃ।।
ಪ್ರಭುವು ವಿವಿಂಶತಿಯನ್ನು ಇಪ್ಪತ್ತು ಬಾಣಗಳಿಂದ ವಿರಥನನ್ನಾಗಿ ಮಾಡಿ ಪುನಃ ಐದು ನತಪರ್ವಗಳಿಂದ ತುಂಬಾ ಗಾಯಗೊಳಿಸಿದನು.
06112120a ಕೃಪಂ ಶಲ್ಯಂ ವಿಕರ್ಣಂ ಚ ವಿದ್ಧ್ವಾ ಬಹುಭಿರಾಯಸೈಃ।
06112120c ಚಕಾರ ವಿರಥಾಂಶ್ಚೈವ ಕೌಂತೇಯಃ ಶ್ವೇತವಾಹನಃ।।
ಕೃಪ, ಶಲ್ಯ, ವಿಕರ್ಣರನ್ನೂ ಅನೇಕ ಆಯಸಗಳಿಂದ ಹೊಡೆದು ಶ್ವೇತವಾಹನ ಕೌಂತೇಯನು ಅವರನ್ನೂ ಕೂಡ ವಿರಥರನ್ನಾಗಿ ಮಾಡಿದನು.
06112121a ಏವಂ ತೇ ವಿರಥಾಃ ಪಂಚ ಕೃಪಃ ಶಲ್ಯಶ್ಚ ಮಾರಿಷ।
06112121c ದುಃಶಾಸನೋ ವಿಕರ್ಣಶ್ಚ ತಥೈವ ಚ ವಿವಿಂಶತಿಃ।
06112121e ಸಂಪ್ರಾದ್ರವಂತ ಸಮರೇ ನಿರ್ಜಿತಾಃ ಸವ್ಯಸಾಚಿನಾ।।
ಹೀಗೆ ವಿರಥರಾದ ಐವರು - ಕೃಪ, ಶಲ್ಯ, ದುಃಶಾಸನ, ವಿಕರ್ಣ ಮತ್ತು ವಿವಿಂಶತಿ – ಸವ್ಯಸಾಚಿಯಿಂದ ಸೋಲಲ್ಪಟ್ಟು ಸಮರದಿಂದ ಪಲಾಯನಗೈದರು.
06112122a ಪೂರ್ವಾಹ್ಣೇ ತು ತಥಾ ರಾಜನ್ಪರಾಜಿತ್ಯ ಮಹಾರಥಾನ್।
06112122c ಪ್ರಜಜ್ವಾಲ ರಣೇ ಪಾರ್ಥೋ ವಿಧೂಮ ಇವ ಪಾವಕಃ।।
ರಾಜನ್! ಹಾಗೆ ಪೂರ್ವಾಹ್ಣದಲ್ಲಿ ಮಹಾರಥರನ್ನು ಪರಾಜಯಗೊಳಿಸಿ ರಣದಲ್ಲಿ ಪಾರ್ಥನು ಹೊಗೆಯಿಲ್ಲದ ಬೆಂಕಿಯಂತೆ ಪ್ರಜ್ವಲಿಸಿದನು.
06112123a ತಥೈವ ಶರವರ್ಷೇಣ ಭಾಸ್ಕರೋ ರಶ್ಮಿವಾನಿವ।
06112123c ಅನ್ಯಾನಪಿ ಮಹಾರಾಜ ಪಾತಯಾಮಾಸ ಪಾರ್ಥಿವಾನ್।।
ಮಹಾರಾಜ! ಹಾಗೆಯೋ ಭಾಸ್ಕರನ ಕಿರಣಗಳಂತಹ ಶರವರ್ಷಗಳಿಂದ ಅನ್ಯ ಪಾರ್ಥಿವರನ್ನೂ ಉರುಳಿಸಿದನು.
06112124a ಪರಾಙ್ಮುಖೀಕೃತ್ಯ ತದಾ ಶರವರ್ಷೈರ್ಮಹಾರಥಾನ್।
06112124c ಪ್ರಾವರ್ತಯತ ಸಂಗ್ರಾಮೇ ಶೋಣಿತೋದಾಂ ಮಹಾನದೀಂ।
06112124e ಮಧ್ಯೇನ ಕುರುಸೈನ್ಯಾನಾಂ ಪಾಂಡವಾನಾಂ ಚ ಭಾರತ।।
ಭಾರತ! ಆಗ ಶರವರ್ಷಗಳಿಂದ ಮಹಾರಥರನ್ನು ಪರಾಙ್ಮುಖಗೊಳಿಸಿ ಪಾಂಡವರ ಮತ್ತು ಕುರುಸೇನೆಗಳ ಮಧ್ಯೆ ಸಂಗ್ರಾವದಲ್ಲಿ ರಕ್ತವೇ ನೀರಾಗಿರುವ ಮಹಾನದಿಯನ್ನು ಹರಿಸಿದನು.
06112125a ಗಜಾಶ್ಚ ರಥಸಂಘಾಶ್ಚ ಬಹುಧಾ ರಥಿಭಿರ್ಹತಾಃ।
06112125c ರಥಾಶ್ಚ ನಿಹತಾ ನಾಗೈರ್ನಾಗಾ ಹಯಪದಾತಿಭಿಃ।।
ರಥಿಗಳು ಅನೇಕ ಆನೆಗಳನ್ನೂ ರಥ ಸಂಘಗಳನ್ನೂ ಸಂಹರಿಸುತ್ತಿದ್ದರು. ಆನೆಗಳು ರಥಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಗಳನ್ನೂ ಸಂಹರಿಸುತ್ತಿದ್ದವು.
06112126a ಅಂತರಾ ಚಿಧ್ಯಮಾನಾನಿ ಶರೀರಾಣಿ ಶಿರಾಂಸಿ ಚ।
06112126c ನಿಪೇತುರ್ದಿಕ್ಷು ಸರ್ವಾಸು ಗಜಾಶ್ವರಥಯೋಧಿನಾಂ।।
ಗಜ-ಅಶ್ವ-ರಥಯೋಧಿಗಳ ಶರೀರ ಮತ್ತು ಶಿರಗಳು ತುಂಡು ತುಂಡಾಗಿ ಎಲ್ಲಾಕಡೆ ಬಿದ್ದಿದ್ದವು.
06112127a ಚನ್ನಮಾಯೋಧನಂ ರೇಜೇ ಕುಂಡಲಾಂಗದಧಾರಿಭಿಃ।
06112127c ಪತಿತೈಃ ಪಾತ್ಯಮಾನೈಶ್ಚ ರಾಜಪುತ್ರೈರ್ಮಹಾರಥೈಃ।।
ಬಿದ್ದಿರುವ ಮತ್ತು ಬೀಳುತ್ತಿರುವ ಕುಂಡಲ-ಅಂಗದ ಧಾರಿ ಮಹಾರಥ ರಾಜಪುತ್ರರಿಂದ ರಣಭೂಮಿಯು ತುಂಬಿಹೋಗಿತ್ತು.
06112128a ರಥನೇಮಿನಿಕೃತ್ತಾಶ್ಚ ಗಜೈಶ್ಚೈವಾವಪೋಥಿತಾಃ।
06112128c ಪಾದಾತಾಶ್ಚಾಪ್ಯದೃಶ್ಯಂತ ಸಾಶ್ವಾಃ ಸಹಯಸಾದಿನಃ।।
ರಥಗಳ ಗಾಲಿಗೆ ಸಿಲುಕಿ ತುಂಡಾಗಿದ್ದರು. ಆನೆಗಳ ತುಳಿತಕ್ಕೆ ಸಿಲುಕಿ ನುಜ್ಜಾಗಿದ್ದರು. ಅಶ್ವಗಳು ಮತ್ತು ಅಶ್ವಾರೋಹಿಗಳೊಂದಿಗೆ ಪದಾತಿಗಳು ಕಂಡುಬಂದರು.
06112129a ಗಜಾಶ್ವರಥಸಂಘಾಶ್ಚ ಪರಿಪೇತುಃ ಸಮಂತತಃ।
06112129c ವಿಶೀರ್ಣಾಶ್ಚ ರಥಾ ಭೂಮೌ ಭಗ್ನಚಕ್ರಯುಗಧ್ವಜಾಃ।।
ಗಜ-ಅಶ್ವ-ರಥ ಸಂಘಗಳು ಎಲ್ಲಕಡೆ ಮುರಿದು ಬಿದ್ದಿದ್ದವು. ಭೂಮಿಯು ಮುರಿದ ರಥ, ಚಕ್ರ, ನೊಗ ಮತ್ತು ಧ್ವಜಗಳಿಂದ ಹರಡಿಹೋಗಿತ್ತು.
06112130a ತದ್ಗಜಾಶ್ವರಥೌಘಾನಾಂ ರುಧಿರೇಣ ಸಮುಕ್ಷಿತಂ।
06112130c ಚನ್ನಮಾಯೋಧನಂ ರೇಜೇ ರಕ್ತಾಭ್ರಮಿವ ಶಾರದಂ।।
ಅಶ್ವ-ರಥಿ ಸೇನೆಗಳ ರಕ್ತದಿಂದ ತೋಯ್ದು ಹೋಡಿದ್ದ ಆ ರಣಭೂಮಿಯು ಶರದೃತುವಿನ ಕೆಂಪುಬಣ್ಣದ ಆಕಾಶದಂತೆ ಶೋಭಿಸಿತು.
06112131a ಶ್ವಾನಃ ಕಾಕಾಶ್ಚ ಗೃಧ್ರಾಶ್ಚ ವೃಕಾ ಗೋಮಾಯುಭಿಃ ಸಹ।
06112131c ಪ್ರಣೇದುರ್ಭಕ್ಷ್ಯಮಾಸಾದ್ಯ ವಿಕೃತಾಶ್ಚ ಮೃಗದ್ವಿಜಾಃ।।
ನಾಯಿಗಳು, ಕಾಗೆಗಳು, ಹದ್ದುಗಳು, ತೋಳಗಳು, ನರಿಗಳು ಇವೇ ಮೊದಲಾದ ವಿಕಾಸ್ವರದ ಮೃಗಪಕ್ಷಿಗಳು ಭಕ್ಷಗಳನ್ನುಂಡು ಕೂಗಾಡಿದವು.
06112132a ವವುರ್ಬಹುವಿಧಾಶ್ಚೈವ ದಿಕ್ಷು ಸರ್ವಾಸು ಮಾರುತಾಃ।
06112132c ದೃಶ್ಯಮಾನೇಷು ರಕ್ಷಃಸು ಭೂತೇಷು ವಿನದತ್ಸು ಚ।।
ರಾಕ್ಷಸರು ಮತ್ತು ಭೂತಗಳು ಗರ್ಜಿಸುತ್ತಿರುವುದು ಕಂಡುಬರಲು ಎಲ್ಲ ದಿಕ್ಕುಗಳಲ್ಲಿ ನಾನಾ ವಿಧದ ಗಾಳಿಗಳು ಬೀಸಿದವು.
06112133a ಕಾಂಚನಾನಿ ಚ ದಾಮಾನಿ ಪತಾಕಾಶ್ಚ ಮಹಾಧನಾಃ।
06112133c ಧೂಮಾಯಮಾನಾ ದೃಶ್ಯಂತೇ ಸಹಸಾ ಮಾರುತೇರಿತಾಃ।।
ಕಾಂಚನದ ಮಾಲೆಗಳೂ, ಬೆಲೆಬಾಳುವ ಪತಾಕೆಗಳೂ ಗಾಳಿಯೊಂದಿಗೆ ಒಂದು ಕಡೆಯಿಂದ ಇನ್ನೊಂದು ಕಡೆ ಹಾರಾಡುತ್ತಿದ್ದು ಕಾಣುತ್ತಿತ್ತು.
06112134a ಶ್ವೇತಚ್ಛತ್ರಸಹಸ್ರಾಣಿ ಸಧ್ವಜಾಶ್ಚ ಮಹಾರಥಾಃ।
06112134c ವಿನಿಕೀರ್ಣಾಃ ಸ್ಮ ದೃಶ್ಯಂತೇ ಶತಶೋಽಥ ಸಹಸ್ರಶಃ।
06112134e ಸಪತಾಕಾಶ್ಚ ಮಾತಂಗಾ ದಿಶೋ ಜಗ್ಮುಃ ಶರಾತುರಾಃ।।
ಸಹಸ್ರಾರು ಬಿಳಿಯ ಛತ್ರಗಳೂ, ಧ್ವಜಗಳೊಂದಿಗೆ ಮಹಾರಥಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಹರಡಿ ಬಿದ್ದಿರುವುದು ಕಾಣುತ್ತಿತ್ತು. ಶರಗಳಿಂದ ಪೀಡಿತರಾಗಿ ಆನೆಗಳು ಪತಾಕೆಗಳೊಂದಿಗೆ ದಿಕ್ಕಾಪಾಲಾದವು.
06112135a ಕ್ಷತ್ರಿಯಾಶ್ಚ ಮನುಷ್ಯೇಂದ್ರ ಗದಾಶಕ್ತಿಧನುರ್ಧರಾಃ।
06112135c ಸಮಂತತೋ ವ್ಯದೃಶ್ಯಂತ ಪತಿತಾ ಧರಣೀತಲೇ।।
ಮನುಷ್ಯೇಂದ್ರ! ಗದ-ಶಕ್ತಿ-ಧನುಸ್ಸುಗಳನ್ನು ಹಿಡಿದಿದ್ದ ಕ್ಷತ್ರಿಯರು ಭೂಮಿಯ ಮೇಲೆ ಎಲ್ಲ ಕಡೆ ಬಿದ್ದಿರುವುದು ಕಾಣುತ್ತಿತ್ತು.
06112136a ತತೋ ಭೀಷ್ಮೋ ಮಹಾರಾಜ ದಿವ್ಯಮಸ್ತ್ರಮುದೀರಯನ್।
06112136c ಅಭ್ಯಧಾವತ ಕೌಂತೇಯಂ ಮಿಷತಾಂ ಸರ್ವಧನ್ವಿನಾಂ।।
ಆಗ ಮಹಾರಾಜ! ಭೀಷ್ಮನು ದಿವ್ಯ ಅಸ್ತ್ರವನ್ನು ಪ್ರಕಟಿಸುತ್ತ ಸರ್ವಧನ್ವಿಗಳೂ ನೋಡುತ್ತಿದ್ದಂತೆ, ಕೌಂತೇಯನನ್ನು ಆಕ್ರಮಿಸಿದನು.
06112137a ತಂ ಶಿಖಂಡೀ ರಣೇ ಯತ್ತಮಭ್ಯಧಾವತ ದಂಶಿತಃ।
06112137c ಸಂಜಹಾರ ತತೋ ಭೀಷ್ಮಸ್ತದಸ್ತ್ರಂ ಪಾವಕೋಪಮಂ।।
ಆದರೆ ರಣದಲ್ಲಿ ಅವನನ್ನು ಕವಚಧಾರಿಯಾದ ಶಿಖಂಡಿಯು ಎದುರಿಸಲು ಭೀಷ್ಮನು ಪಾವಕೋಪಮ ಅಸ್ತ್ರವನ್ನು ಹಿಂತೆಗೆದುಕೊಂಡನು.
06112138a ಏತಸ್ಮಿನ್ನೇವ ಕಾಲೇ ತು ಕೌಂತೇಯಃ ಶ್ವೇತವಾಹನಃ।
06112138c ನಿಜಘ್ನೇ ತಾವಕಂ ಸೈನ್ಯಂ ಮೋಹಯಿತ್ವಾ ಪಿತಾಮಹಂ।।
ಇದೇ ಸಮಯದಲ್ಲಿ ಕೌಂತೇಯ ಶ್ವೇತವಾಹನನು ಪಿತಾಮಹನನ್ನು ದಿಗ್ಭ್ರಮೆಗೊಳಿಸುತ್ತಾ ನಿನ್ನ ಸೇನೆಯನ್ನು ಸಂಹರಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ದ್ವಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ನೂರಾಹನ್ನೆರಡನೇ ಅಧ್ಯಾಯವು.