ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 111
ಸಾರ
ರಣದಲ್ಲಿ ಹೋರಾಡುತ್ತಿರುವಾಗ ಬೇಗನೆ ತನ್ನ ವಧೆಯಾಗಬೇಕೆಂದು ಇಚ್ಛಿಸಿ, ಸಂಗ್ರಾಮದಲ್ಲಿ ಮಾನವಶ್ರೇಷ್ಠರನ್ನು ಇನ್ನು ಕೊಲ್ಲಬಾರದೆಂದು ಆಲೋಚಿಸಿ ಭೀಷ್ಮನು ಯುಧಿಷ್ಠಿರನಿಗೆ ತನ್ನನ್ನು ವಧಿಸಲು ಆದೇಶವಿತ್ತುದುದು (1-15). ಶಿಖಂಡಿಯನ್ನೂ ಧನಂಜಯನನ್ನೂ ಮುಂದಿಟ್ಟುಕೊಂಡು ಭೀಷ್ಮನನ್ನು ಕೆಡುವಲು ಪರಮ ಯತ್ನದಲ್ಲಿ ತೊಡಗಿದುದು (16-43).
06111001 ಧೃತರಾಷ್ಟ್ರ ಉವಾಚ।
06111001a ಕಥಂ ಶಾಂತನವೋ ಭೀಷ್ಮೋ ದಶಮೇಽಹನಿ ಸಂಜಯ।
06111001c ಅಯುಧ್ಯತ ಮಹಾವೀರ್ಯೈಃ ಪಾಂಡವೈಃ ಸಹಸೃಂಜಯೈಃ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಹತ್ತನೆಯ ದಿನ ಶಾಂತನವ ಭೀಷ್ಮನು ಸೃಂಜಯರೊಂದಿಗಿದ್ದ ಮಾಹಾವೀರ ಪಾಂಡವರೊಂದಿಗೆ ಹೇಗೆ ಯುದ್ಧಮಾಡಿದನು?
06111002a ಕುರವಶ್ಚ ಕಥಂ ಯುದ್ಧೇ ಪಾಂಡವಾನ್ಪ್ರತ್ಯವಾರಯನ್।
06111002c ಆಚಕ್ಷ್ವ ಮೇ ಮಹಾಯುದ್ಧಂ ಭೀಷ್ಮಸ್ಯಾಹವಶೋಭಿನಃ।।
ಕುರುಗಳೂ ಕೂಡ ಪಾಂಡವರನ್ನು ತಡೆದು ಹೇಗೆ ಯುದ್ಧ ಮಾಡಿದರು? ಆಹವಶೋಭಿ ಭೀಷ್ಮನ ಮಹಾಯುದ್ಧದ ಕುರಿತು ನನಗೆ ಹೇಳು.”
06111003 ಸಂಜಯ ಉವಾಚ।
06111003a ಕುರವಃ ಪಾಂಡವೈಃ ಸಾರ್ಧಂ ಯಥಾಯುಧ್ಯಂತ ಭಾರತ।
06111003c ಯಥಾ ಚ ತದಭೂದ್ಯುದ್ಧಂ ತತ್ತೇ ವಕ್ಷ್ಯಾಮಿ ಶೃಣ್ವತಃ।।
ಸಂಜಯನು ಹೇಳಿದನು: “ಭಾರತ! ಪಾಂಡವರೊಂದಿಗೆ ಕೌರವರು ಹೇಗೆ ಯುದ್ಧಮಾಡಿದರು ಎನ್ನುವುದನ್ನು ಆ ಯುದ್ಧವು ನಡೆದಹಾಗೆ ನಿನಗೆ ಹೇಳುತ್ತೇನೆ. ಕೇಳಬೇಕು.
06111004a ಪ್ರೇಷಿತಾಃ ಪರಲೋಕಾಯ ಪರಮಾಸ್ತ್ರೈಃ ಕಿರೀಟಿನಾ।
06111004c ಅಹನ್ಯಹನಿ ಸಂಪ್ರಾಪ್ತಾಸ್ತಾವಕಾನಾಂ ರಥವ್ರಜಾಃ।।
ಅನುದಿನವೂ ಕಿರೀಟಿಯು ನಿನ್ನವರ ಮಹಾರಥರನ್ನು ಪರಮಾಸ್ತ್ರಗಳಿಂದ ಪರಲೋಕಕ್ಕೆ ಕಳುಹಿಸುತ್ತಿದ್ದನು.
06111005a ಯಥಾಪ್ರತಿಜ್ಞಂ ಕೌರವ್ಯಃ ಸ ಚಾಪಿ ಸಮಿತಿಂಜಯಃ।
06111005c ಪಾರ್ಥಾನಾಮಕರೋದ್ಭೀಷ್ಮಃ ಸತತಂ ಸಮಿತಿಕ್ಷಯಂ।।
ಕೌರವ್ಯ ಸಮಿತಿಂಜಯ ಭೀಷ್ಮನೂ ಕೂಡ ಪ್ರತಿಜ್ಞೆಮಾಡಿದಂತೆ ಸತತವಾಗಿ ಪಾಂಡವರ ಸೇನಾನಾಶವನ್ನು ಮಾಡಿದನು.
06111006a ಕುರುಭಿಃ ಸಹಿತಂ ಭೀಷ್ಮಂ ಯುಧ್ಯಮಾನಂ ಮಹಾರಥಂ।
06111006c ಅರ್ಜುನಂ ಚ ಸಪಾಂಚಾಲ್ಯಂ ದೃಷ್ಟ್ವಾ ಸಂಶಯಿತಾ ಜನಾಃ।।
ಕುರುಗಳ ಸಹಿತ ಯುದ್ಧಮಾಡುತ್ತಿರುವ ಮಹಾರಥ ಭೀಷ್ಮ ಮತ್ತು ಪಾಂಚಾಲರನ್ನು ಸೇರಿ ಯುದ್ಧಮಾಡುತ್ತಿರುವ ಅರ್ಜುನನ್ನು ನೋಡಿ ಜನರು ಸಂಶಯಪಟ್ಟರು.
06111007a ದಶಮೇಽಹನಿ ತಸ್ಮಿಂಸ್ತು ಭೀಷ್ಮಾರ್ಜುನಸಮಾಗಮೇ।
06111007c ಅವರ್ತತ ಮಹಾರೌದ್ರಃ ಸತತಂ ಸಮಿತಿಕ್ಷಯಃ।।
ಆ ಹತ್ತನೆಯ ದಿವಸವಾದರೋ ಭೀಷ್ಮಾರ್ಜುನರ ಸಮಾಗಮದಲ್ಲಿ ಸತತವಾದ ಮಹಾರೌದ್ರ ಸೇನೆಗಳ ವಿನಾಶವು ನಡೆಯಿತು.
06111008a ತಸ್ಮಿನ್ನಯುತಶೋ ರಾಜನ್ಭೂಯಶ್ಚ ಸ ಪರಂತಪಃ।
06111008c ಭೀಷ್ಮಃ ಶಾಂತನವೋ ಯೋಧಾಂ ಜಘಾನ ಪರಮಾಸ್ತ್ರವಿತ್।।
ರಾಜನ್! ಪರಂತಪ ಪರಮಾಸ್ತ್ರವಿದು ಭೀಷ್ಮ ಶಾಂತನವನು ಹತ್ತು ಸಾವಿರಕ್ಕೂ ಹೆಚ್ಚು ಯೋಧರನ್ನು ಸಂಹರಿಸಿದನು.
06111009a ಯೇಷಾಮಜ್ಞಾತಕಲ್ಪಾನಿ ನಾಮಗೋತ್ರಾಣಿ ಪಾರ್ಥಿವ।
06111009c ತೇ ಹತಾಸ್ತತ್ರ ಭೀಷ್ಮೇಣ ಶೂರಾಃ ಸರ್ವೇಽನಿವರ್ತಿನಃ।।
ಪಾರ್ಥಿವ! ಕೊನೆಯವರೆಗೂ ಅವರ ನಾಮ ಗೋತ್ರಗಳು ತಿಳಿಯದೇ ಇದ್ದ, ಪಲಾಯನ ಮಾಡದೇ ಇದ್ದ ಶೂರರು ಭೀಷ್ಮನಿಂದ ಅಲ್ಲಿ ಹತರಾದರು.
06111010a ದಶಾಹಾನಿ ತತಸ್ತಪ್ತ್ವಾ ಭೀಷ್ಮಃ ಪಾಂಡವವಾಹಿನೀಂ।
06111010c ನಿರವಿದ್ಯತ ಧರ್ಮಾತ್ಮಾ ಜೀವಿತೇನ ಪರಂತಪಃ।।
ಹತ್ತನೆಯ ದಿವಸ ಧರ್ಮಾತ್ಮಾ ಪರಂತಪ ಭೀಷ್ಮನು ಪಾಂಡವ ವಾಹಿನಿಯನ್ನು ಪರಿತಪಿಸಿ ಕೊನೆಗೆ ತನ್ನ ಜೀವಿತದಿಂದ ನಿರ್ವೇದಹೊಂದಿದನು.
06111011a ಸ ಕ್ಷಿಪ್ರಂ ವಧಮನ್ವಿಚ್ಛನ್ನಾತ್ಮನೋಽಭಿಮುಖಂ ರಣೇ।
06111011c ನ ಹನ್ಯಾಂ ಮಾನವಶ್ರೇಷ್ಠಾನ್ಸಂಗ್ರಾಮೇಽಭಿಮುಖಾನಿತಿ।।
06111012a ಚಿಂತಯಿತ್ವಾ ಮಹಾಬಾಹುಃ ಪಿತಾ ದೇವವ್ರತಸ್ತವ।
06111012c ಅಭ್ಯಾಶಸ್ಥಂ ಮಹಾರಾಜ ಪಾಂಡವಂ ವಾಕ್ಯಮಬ್ರವೀತ್।।
ಮಹಾರಾಜ! ರಣದಲ್ಲಿ ಹೋರಾಡುತ್ತಿರುವಾಗ ಬೇಗನೆ ತನ್ನ ವಧೆಯಾಗಬೇಕೆಂದು ಇಚ್ಛಿಸಿ, ಸಂಗ್ರಾಮದಲ್ಲಿ ಮಾನವಶ್ರೇಷ್ಠರನ್ನು ಇನ್ನು ಕೊಲ್ಲಬಾರದೆಂದು ಆಲೋಚಿಸಿ ನಿನ್ನ ಪಿತ ಮಹಾಬಾಹು ದೇವವ್ರತನು ಸಮೀಪದಲ್ಲಿದ್ದ ಪಾಂಡವನಿಗೆ ಹೇಳಿದನು:
06111013a ಯುಧಿಷ್ಠಿರ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ।
06111013c ಶೃಣು ಮೇ ವಚನಂ ತಾತ ಧರ್ಮ್ಯಂ ಸ್ವರ್ಗ್ಯಂ ಚ ಜಲ್ಪತಃ।।
“ಯುಧಿಷ್ಠಿರ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಮಗೂ! ಧರ್ಮವನ್ನೂ ಸ್ವರ್ಗವನ್ನೂ ನೀಡುವ ನನ್ನ ಮಾತುಗಳನ್ನು ಕೇಳು.
06111014a ನಿರ್ವಿಣ್ಣೋಽಸ್ಮಿ ಭೃಶಂ ತಾತ ದೇಹೇನಾನೇನ ಭಾರತ।
06111014c ಘ್ನತಶ್ಚ ಮೇ ಗತಃ ಕಾಲಃ ಸುಬಹೂನ್ಪ್ರಾಣಿನೋ ರಣೇ।।
ಮಗೂ! ಭಾರತ! ಈ ದೇಹದಿಂದ ತುಂಬಾ ನಿರ್ವಿಣ್ಣನಾಗಿದ್ದೇನೆ. ಅನೇಕ ಪ್ರಾಣಿಗಳನ್ನು ರಣದಲ್ಲಿ ಕೊಲ್ಲುವುದರಲ್ಲಿಯೇ ನನ್ನ ಕಾಲವು ಕಳೆದು ಹೋಯಿತು.
06111015a ತಸ್ಮಾತ್ಪಾರ್ಥಂ ಪುರೋಧಾಯ ಪಾಂಚಾಲಾನ್ಸೃಂಜಯಾಂಸ್ತಥಾ।
06111015c ಮದ್ವಧೇ ಕ್ರಿಯತಾಂ ಯತ್ನೋ ಮಮ ಚೇದಿಚ್ಛಸಿ ಪ್ರಿಯಂ।।
ಆದುದರಿಂದ ನನಗೆ ಪ್ರಿಯವಾದುದನ್ನು ಮಾಡಲು ಬಯಸಿದರೆ ಪಾರ್ಥನನ್ನು, ಪಾಂಚಾಲರನ್ನು ಮತ್ತು ಸೃಂಜಯರನ್ನು ಮುಂದಿಟ್ಟುಕೊಂಡು ನನ್ನ ವಧೆಗೆ ಪ್ರಯತ್ನ ಮಾಡು.”
06111016a ತಸ್ಯ ತನ್ಮತಮಾಜ್ಞಾಯ ಪಾಂಡವಃ ಸತ್ಯದರ್ಶನಃ।
06111016c ಭೀಷ್ಮಂ ಪ್ರತಿಯಯೌ ಯತ್ತಃ ಸಂಗ್ರಾಮೇ ಸಹ ಸೃಂಜಯೈಃ।।
ಅವನ ಆ ಅಭಿಪ್ರಾಯವನ್ನು ತಿಳಿದುಕೊಂಡು ಸತ್ಯದರ್ಶನ ಪಾಂಡವನು ಸೃಂಜಯರೊಡಗೂಡಿ ಸಂಗ್ರಾಮದಲ್ಲಿ ಭೀಷ್ಮನನ್ನು ಎದುರಿಸಿದನು.
06111017a ಧೃಷ್ಟದ್ಯುಮ್ನಸ್ತತೋ ರಾಜನ್ಪಾಂಡವಶ್ಚ ಯುಧಿಷ್ಠಿರಃ।
06111017c ಶ್ರುತ್ವಾ ಭೀಷ್ಮಸ್ಯ ತಾಂ ವಾಚಂ ಚೋದಯಾಮಾಸತುರ್ಬಲಂ।।
ರಾಜನ್! ಭೀಷ್ಮನ ಆ ಮಾತನ್ನು ಕೇಳಿ ಧೃಷ್ಟದ್ಯುಮ್ನ ಮತ್ತು ಪಾಂಡವ ಯುಧಿಷ್ಠಿರರು ತಮ್ಮ ಚತುರ್ಬಲವನ್ನು ಪ್ರಚೋದಿಸಿದರು.
06111018a ಅಭಿದ್ರವತ ಯುಧ್ಯಧ್ವಂ ಭೀಷ್ಮಂ ಜಯತ ಸಂಯುಗೇ।
06111018c ರಕ್ಷಿತಾಃ ಸತ್ಯಸಂಧೇನ ಜಿಷ್ಣುನಾ ರಿಪುಜಿಷ್ಣುನಾ।।
“ಮುನ್ನುಗ್ಗಿ ಭೀಷ್ಮನೊಂದಿಗೆ ಯುದ್ಧಮಾಡಿ! ಸತ್ಯಸಂಧ ರಿಪುಜಿಷ್ಣು ಜಿಷ್ಣುವಿನಿಂದ ರಕ್ಷಿತರಾಗಿ ಸಂಯುಗದಲ್ಲಿ ವಿಜಯಿಗಳಾಗಿ!
06111019a ಅಯಂ ಚಾಪಿ ಮಹೇಷ್ವಾಸಃ ಪಾರ್ಷತೋ ವಾಹಿನೀಪತಿಃ।
06111019c ಭೀಮಸೇನಶ್ಚ ಸಮರೇ ಪಾಲಯಿಷ್ಯತಿ ವೋ ಧ್ರುವಂ।।
ಈ ವಾಹಿನೀಪತಿ ಮಹೇಷ್ವಾಸ ಪಾರ್ಷತನೂ ಭೀಮಸೇನನೂ ಸಮರದಲ್ಲಿ ನಿಮ್ಮನ್ನು ನಿಶ್ಚಯವಾಗಿಯೂ ಪಾಲಿಸುತ್ತಾರೆ.
06111020a ನ ವೈ ಭೀಷ್ಮಾದ್ಭಯಂ ಕಿಂ ಚಿತ್ಕರ್ತವ್ಯಂ ಯುಧಿ ಸೃಂಜಯಾಃ।
06111020c ಧ್ರುವಂ ಭೀಷ್ಮಂ ವಿಜೇಷ್ಯಾಮಃ ಪುರಸ್ಕೃತ್ಯ ಶಿಖಂಡಿನಂ।।
ಸೃಂಜಯರೇ! ಭೀಷ್ಮನಿಗೆ ಸ್ವಲ್ಪವೂ ಹೆದರದೇ ಕರ್ತವ್ಯವೆಂದು ಯುದ್ಧಮಾಡಿ. ಶಿಖಂಡಿಯನ್ನು ಮುಂದಿಟ್ಟುಕೊಂಡು ಖಂಡಿತವಾಗಿಯೂ ಭೀಷ್ಮನನ್ನು ಜಯಿಸುತ್ತೇವೆ!”
06111021a ತಥಾ ತು ಸಮಯಂ ಕೃತ್ವಾ ದಶಮೇಽಹನಿ ಪಾಂಡವಾಃ।
06111021c ಬ್ರಹ್ಮಲೋಕಪರಾ ಭೂತ್ವಾ ಸಂಜಗ್ಮುಃ ಕ್ರೋಧಮೂರ್ಚಿತಾಃ।।
ಹೀಗೆ ಒಪ್ಪಂದವನ್ನು ಮಾಡಿಕೊಂಡು ಹತ್ತನೆಯ ದಿನ ಪಾಂಡವರು ಬ್ರಹ್ಮಲೋಕಪರರಾಗಿ ಕ್ರೋಧ ಮೂರ್ಛಿತರಾದರು.
06111022a ಶಿಖಂಡಿನಂ ಪುರಸ್ಕೃತ್ಯ ಪಾಂಡವಂ ಚ ಧನಂಜಯಂ।
06111022c ಭೀಷ್ಮಸ್ಯ ಪಾತನೇ ಯತ್ನಂ ಪರಮಂ ತೇ ಸಮಾಸ್ಥಿತಾಃ।।
ಶಿಖಂಡಿಯನ್ನೂ ಪಾಂಡವ ಧನಂಜಯನನ್ನೂ ಮುಂದಿಟ್ಟುಕೊಂಡು ಭೀಷ್ಮನನ್ನು ಕೆಡುವಲು ಪರಮ ಯತ್ನದಲ್ಲಿ ತೊಡಗಿದರು.
06111023a ತತಸ್ತವ ಸುತಾದಿಷ್ಟಾ ನಾನಾಜನಪದೇಶ್ವರಾಃ।
06111023c ದ್ರೋಣೇನ ಸಹಪುತ್ರೇಣ ಸಹಸೇನಾ ಮಹಾಬಲಾಃ।।
06111024a ದುಃಶಾಸನಶ್ಚ ಬಲವಾನ್ಸಹ ಸರ್ವೈಃ ಸಹೋದರೈಃ।
06111024c ಭೀಷ್ಮಂ ಸಮರಮಧ್ಯಸ್ಥಂ ಪಾಲಯಾಂ ಚಕ್ರಿರೇ ತದಾ।।
ಆಗ ನಿನ್ನ ಮಗನಿಂದ ನಿರ್ದೇಷಿಸಲ್ಪಟ್ಟ ನಾನಾ ಜನಪದೇಶ್ವರರು ದ್ರೋಣ ಪುತ್ರನ ಸಹಾಯದಿಂದ ಮಹಾಬಲಶಾಲಿ ಸೇನೆಗಳೊಂದಿಗೆ, ಬಲವಾನ್ ದುಃಶಾಸನ ಮತ್ತು ಎಲ್ಲ ಸಹೋದರರೊಂದಿಗೆ ಸಮರದ ಮಧ್ಯದಲ್ಲಿದ್ದ ಭೀಷ್ಮನನ್ನು ರಕ್ಷಿಸುವುದರಲ್ಲಿ ತೊಡಗಿದರು.
06111025a ತತಸ್ತು ತಾವಕಾಃ ಶೂರಾಃ ಪುರಸ್ಕೃತ್ಯ ಯತವ್ರತಂ।
06111025c ಶಿಖಂಡಿಪ್ರಮುಖಾನ್ಪಾರ್ಥಾನ್ಯೋಧಯಂತಿ ಸ್ಮ ಸಂಯುಗೇ।।
ಆಗ ನಿನ್ನವರ ಶೂರರು ಯತವ್ರತನನ್ನು ಮುಂದಿರಿಸಿಕೊಂಡು ಶಿಖಂಡಿಪ್ರಮುಖರಾದ ಪಾರ್ಥರನ್ನು ಸಂಯುಗದಲ್ಲಿ ಎದುರಿಸಿ ಯುದ್ಧಮಾಡಿದರು.
06111026a ಚೇದಿಭಿಶ್ಚ ಸಪಾಂಚಾಲೈಃ ಸಹಿತೋ ವಾನರಧ್ವಜಃ।
06111026c ಯಯೌ ಶಾಂತನವಂ ಭೀಷ್ಮಂ ಪುರಸ್ಕೃತ್ಯ ಶಿಖಂಡಿನಂ।।
ಚೇದಿ ಮತ್ತು ಪಾಂಚಾಲರನ್ನು ಒಡಗೂಡಿ, ಶಿಖಂಡಿಯನ್ನು ಮುಂದಿಟ್ಟುಕೊಂಡು ವಾನರಧ್ವಜನು ಶಾಂತನವ ಭೀಷ್ಮನಲ್ಲಿಗೆ ಬಂದನು.
06111027a ದ್ರೋಣಪುತ್ರಂ ಶಿನೇರ್ನಪ್ತಾ ಧೃಷ್ಟಕೇತುಸ್ತು ಪೌರವಂ।
06111027c ಯುಧಾಮನ್ಯುಃ ಸಹಾಮಾತ್ಯಂ ದುರ್ಯೋಧನಮಯೋಧಯತ್।।
ದ್ರೋಣಪುತ್ರನು ಶಿನಿಯನ್ನು, ಧೃಷ್ಟಕೇತುವು ಪೌರವನನ್ನು, ಅಮಾತ್ಯನೊಂದಿಗೆ ಯುಧಾಮನ್ಯುವು ದುರ್ಯೋಧನನೊಡನೆ ಯುದ್ಧಮಾಡಿದರು.
06111028a ವಿರಾಟಸ್ತು ಸಹಾನೀಕಃ ಸಹಸೇನಂ ಜಯದ್ರಥಂ।
06111028c ವೃದ್ಧಕ್ಷತ್ರಸ್ಯ ದಾಯಾದಮಾಸಸಾದ ಪರಂತಪಃ।।
ಸೇನೆಗಳೊಂದಿಗೆ ಪರಂತಪ ವಿರಾಟನು ಸೇನೆಗಳೊಂದಿಗೆ ವೃದ್ದಕ್ಷತ್ರನ ಮಗ ಜಯದ್ರಥನನ್ನು ಎದುರಿಸಿದನು.
06111029a ಮದ್ರರಾಜಂ ಮಹೇಷ್ವಾಸಂ ಸಹಸೈನ್ಯಂ ಯುಧಿಷ್ಠಿರಃ।
06111029c ಭೀಮಸೇನಾಭಿಗುಪ್ತಶ್ಚ ನಾಗಾನೀಕಮುಪಾದ್ರವತ್।।
ಸೇನೆಯೊಡನಿದ್ದ ಮಹೇಷ್ವಾಸ ಮದ್ರರಾಜನನ್ನು ಯುಧಿಷ್ಠಿರ ಮತ್ತು ಸುರಕ್ಷಿತ ಭೀಮಸೇನನು ಗಜಸೇನೆಗಳನ್ನು ಎದುರಿಸಿದರು.
06111030a ಅಪ್ರಧೃಷ್ಯಮನಾವಾರ್ಯಂ ಸರ್ವಶಸ್ತ್ರಭೃತಾಂ ವರಂ।
06111030c ದ್ರೋಣಂ ಪ್ರತಿ ಯಯೌ ಯತ್ತಃ ಪಾಂಚಾಲ್ಯಃ ಸಹ ಸೋಮಕೈಃ।।
ದೂರಸರಿಸಲು ಅಸಾಧ್ಯನಾದ, ತಡೆಯಲು ಅಸಾಧ್ಯನಾದ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನೊಂದಿಗೆ ಯದ್ಧಮಾಡಲು ಸೋಮಕರೊಂದಿಗೆ ಪಾಂಚಾಲ್ಯನು ಬಂದನು.
06111031a ಕರ್ಣಿಕಾರಧ್ವಜಂ ಚಾಪಿ ಸಿಂಹಕೇತುರರಿಂದಮಃ।
06111031c ಪ್ರತ್ಯುಜ್ಜಗಾಮ ಸೌಭದ್ರಂ ರಾಜಪುತ್ರೋ ಬೃಹದ್ಬಲಃ।।
ಸಿಂಹಕೇತು ಅರಿಂದಮ ಬೃಹದ್ಬಲನು ಕರ್ಣಿಕಾರಧ್ವಜ, ರಾಜಪುತ್ರ ಸೌಭದ್ರನನ್ನು ಎದುರಿಸಿದನು.
06111032a ಶಿಖಂಡಿನಂ ಚ ಪುತ್ರಾಸ್ತೇ ಪಾಂಡವಂ ಚ ಧನಂಜಯಂ।
06111032c ರಾಜಭಿಃ ಸಮರೇ ಸಾರ್ಧಮಭಿಪೇತುರ್ಜಿಘಾಂಸವಃ।।
ಶಿಖಂಡಿಯನ್ನು ಮತ್ತು ಪಾಂಡವ ಧನಂಜಯನನ್ನು ಕೊಲ್ಲಲು ನಿನ್ನ ಪುತ್ರರು ರಾಜರೊಂದಿಗೆ ಅವರ ಸಮೀಪ ಬಂದರು.
06111033a ತಸ್ಮಿನ್ನತಿಮಹಾಭೀಮೇ ಸೇನಯೋರ್ವೈ ಪರಾಕ್ರಮೇ।
06111033c ಸಂಪ್ರಧಾವತ್ಸ್ವನೀಕೇಷು ಮೇದಿನೀ ಸಮಕಂಪತ।।
ಆ ಅತಿ ಮಹಾಭಯಂಕರ ಯುದ್ಧದಲ್ಲಿ ಪರಾಕ್ರಮದಿಂದ ಮೇಲೆ ಬೀಳುತ್ತಿದ್ದ ಸೇನೆಗಳಿಂದ ಮೇದಿನಿಯು ಕಂಪಿಸಿತು.
06111034a ತಾನ್ಯನೀಕಾನ್ಯನೀಕೇಷು ಸಮಸಜ್ಜಂತ ಭಾರತ।
06111034c ತಾವಕಾನಾಂ ಪರೇಷಾಂ ಚ ದೃಷ್ಟ್ವಾ ಶಾಂತನವಂ ರಣೇ।।
ರಣದಲ್ಲಿ ಶಾಂತನವನನ್ನು ನೋಡಿ ನಿನ್ನವರ ಸೇನೆಗಳು ಮತ್ತು ಶತ್ರುಗಳ ಸೇನೆಗಳ ನಡುವೆ ಯುದ್ಧವು ನಡೆಯಿತು.
06111035a ತತಸ್ತೇಷಾಂ ಪ್ರಯತತಾಮನ್ಯೋನ್ಯಮಭಿಧಾವತಾಂ।
06111035c ಪ್ರಾದುರಾಸೀನ್ಮಹಾನ್ ಶಬ್ದೋ ದಿಕ್ಷು ಸರ್ವಾಸು ಭಾರತ।।
ಭಾರತ! ಆಗ ಅನ್ಯೋನ್ಯರ ಮೇಲೆ ಆಕ್ರಮಿಸಿ ಬರಲು ಪ್ರಯತ್ನಿಸುತ್ತಿದ್ದ ಅವರ ಮಹಾ ಶಬ್ಧವು ಎಲ್ಲ ದಿಕ್ಕುಗಳಲ್ಲಿಯೂ ಮೊಳಗಿತು.
06111036a ಶಂಖದುಂದುಭಿಘೋಷೈಶ್ಚ ವಾರಣಾನಾಂ ಚ ಬೃಂಹಿತೈಃ।
06111036c ಸಿಂಹನಾದೈಶ್ಚ ಸೈನ್ಯಾನಾಂ ದಾರುಣಃ ಸಮಪದ್ಯತ।।
ಶಂಖ-ದುಂದುಭಿಗಳ ಘೋಷ, ಆನೆಗಳ ಘೀಳಿಡುವಿಕೆ ಮತ್ತು ಸೈನ್ಯಗಳ ಸಿಂಹನಾದಗಳು ದಾರುಣವೆನಿಸಿದವು.
06111037a ಸಾ ಚ ಸರ್ವನರೇಂದ್ರಾಣಾಂ ಚಂದ್ರಾರ್ಕಸದೃಶೀ ಪ್ರಭಾ।
06111037c ವೀರಾಂಗದಕಿರೀಟೇಷು ನಿಷ್ಪ್ರಭಾ ಸಮಪದ್ಯತ।।
ಎಲ್ಲ ನರೇಂದ್ರರ ಚಂದ್ರಾರ್ಕಸದೃಶ ಪ್ರಭೆಯಿದ್ದ ವೀರ ಅಂಗದ ಕಿರೀಟಗಳು ನಿಷ್ಪ್ರಭೆಗೊಂಡವು.
06111038a ರಜೋಮೇಘಾಶ್ಚ ಸಂಜಜ್ಞುಃ ಶಸ್ತ್ರವಿದ್ಯುದ್ಭಿರಾವೃತಾಃ।
06111038c ಧನುಷಾಂ ಚೈವ ನಿರ್ಘೋಷೋ ದಾರುಣಃ ಸಮಪದ್ಯತ।।
ಮೇಲೆದ್ದ ಧೂಳು ಶಸ್ತ್ರಗಳ ವಿದ್ಯುತ್ತಿನಿಂದ ಆವೃತವಾಗಿ, ಧನುಸ್ಸುಗಳ ನಿರ್ಘೋಷಗಳೊಂದಿಗೆ ದಾರುಣವಾದವು.
06111039a ಬಾಣಶಂಖಪ್ರಣಾದಾಶ್ಚ ಭೇರೀಣಾಂ ಚ ಮಹಾಸ್ವನಾಃ।
06111039c ರಥಘೋಷಶ್ಚ ಸಂಜಗ್ಮುಃ ಸೇನಯೋರುಭಯೋರಪಿ।।
ಎರಡೂ ಸೇನೆಗಳಲ್ಲಿ ಬಾಣ, ಶಂಖ, ಪ್ರಣಾದ ಮತ್ತು ಭೇರಿಗಳ ಮಹಾಸ್ವನಗಳು ರಥಘೋಷದೊಂದಿಗೆ ಸೇರಿಕೊಂಡವು.
06111040a ಪ್ರಾಸಶಕ್ತ್ಯೃಷ್ಟಿಸಂಘೈಶ್ಚ ಬಾಣೌಘೈಶ್ಚ ಸಮಾಕುಲಂ।
06111040c ನಿಷ್ಪ್ರಕಾಶಮಿವಾಕಾಶಂ ಸೇನಯೋಃ ಸಮಪದ್ಯತ।।
ಪ್ರಾಸ-ಶಕ್ತಿ-ಋಷ್ಟಿ ಸಂಘಗಳಿಂದ ಮತ್ತು ಬಾಣಗಳ ರಾಶಿಯಿಂದ ಸೇರಿ ಸೇನೆಗಳಲ್ಲಿ ಆಕಾಶದಲ್ಲಿ ಬೆಳಕೇ ಇಲ್ಲದಂತಾಯಿತು.
06111041a ಅನ್ಯೋನ್ಯಂ ರಥಿನಃ ಪೇತುರ್ವಾಜಿನಶ್ಚ ಮಹಾಹವೇ।
06111041c ಕುಂಜರಾಃ ಕುಂಜರಾಂ ಜಘ್ನುಃ ಪದಾತೀಂಶ್ಚ ಪದಾತಯಃ।।
ಮಹಾಹವದಲ್ಲಿ ರಥಿಕರು ಮತ್ತು ಅಶ್ವಾರೋಹಿಗಳು ಅನ್ಯೋನ್ಯರನ್ನು ಯುದ್ಧಮಾಡುತ್ತಿದ್ದರು. ಆನೆಗಳು ಆನೆಗಳನ್ನು ಮತ್ತು ಪದಾತಿಗಳು ಪದಾತಿಗಳನ್ನು ಸಂಹರಿಸಿದರು.
06111042a ತದಾಸೀತ್ಸುಮಹದ್ಯುದ್ಧಂ ಕುರೂಣಾಂ ಪಾಂಡವೈಃ ಸಹ।
06111042c ಭೀಷ್ಮಹೇತೋರ್ನರವ್ಯಾಘ್ರ ಶ್ಯೇನಯೋರಾಮಿಷೇ ಯಥಾ।।
ನರವ್ಯಾಘ್ರ! ಮಾಂಸದ ತುಂಡಿಗಾಗಿ ಗಿಡುಗಗಳು ಹೋರಾಡುವಂತೆ ಭೀಷ್ಮನ ಸಲುವಾಗಿ ಪಾಂಡವರೊಂದಿಗೆ ಕುರುಗಳ ಆ ಮಹಾಯುದ್ಧವು ನಡೆಯಿತು.
06111043a ತಯೋಃ ಸಮಾಗಮೋ ಘೋರೋ ಬಭೂವ ಯುಧಿ ಭಾರತ।
06111043c ಅನ್ಯೋನ್ಯಸ್ಯ ವಧಾರ್ಥಾಯ ಜಿಗೀಷೂಣಾಂ ರಣಾಜಿರೇ।।
ಭಾರತ! ರಣರಂಗದಲ್ಲಿ ಅನ್ಯೋನ್ಯರನ್ನು ವಧಿಸಲು ಬಯಸಿದ ಅವರೀರ್ವರ ಸಮಾಗಮವು ಘೋರ ಯುದ್ಧವಾಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮೋಪದೇಶೇ ಏಕಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮೋಪದೇಶ ಎನ್ನುವ ನೂರಾಹನ್ನೊಂದನೇ ಅಧ್ಯಾಯವು.