103 ನವಮದಿವಸಾವಹಾರೋತ್ತರಮಂತ್ರಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 103

ಸಾರ

ಭೀಷ್ಮನ ಪರಾಕ್ರಮದ ಕುರಿತು ಶೋಕಿಸಿ ಯುಧಿಷ್ಠಿರನು ಕೃಷ್ಣನಲ್ಲಿ ಉಪಾಯವನ್ನು ಕೇಳಿದುದು (1-24). ಅರ್ಜುನನು ಒಪ್ಪಿದರೆ ತಾನು ಭೀಷ್ಮನನ್ನು ವಧಿಸುತ್ತೇನೆಂದೂ, “ಭೀಷ್ಮನು ಮಹಾವೀರ್ಯನಾದರೂ ಸತ್ತ್ವವನ್ನು ಕಳೆದುಕೊಂಡು ಅಲ್ಪಜೀವಿತನಾಗಿದ್ದಾನೆ. ಈ ಸಮಯದಲ್ಲಿ ತನ್ನ ಕರ್ತವ್ಯವೇನೆಂಬುದನ್ನು ತಿಳಿದುಕೊಂಡಿಲ್ಲ.” ಎಂದೂ ಕೃಷ್ಣನು ಉತ್ತರಿಸಿದುದು (25-39). “ಸ್ವಾರ್ಥವನ್ನು ಸಾಧಿಸುವುದಕ್ಕಾಗಿ ನಿನ್ನನ್ನು ಅಸತ್ಯವಾದಿಯನ್ನಾಗಿ ಮಾಡಲು ನನಗೆ ಮನಸ್ಸಿಲ್ಲ… ದೇವವ್ರತನ ವಧೋಪಾಯವನ್ನು ಅವನಿಂದಲೇ ನಾವೆಲ್ಲರೂ ಹೋಗಿ ಕೇಳೋಣ.” ಎಂದು ಯುಧಿಷ್ಠಿರನು ಹೇಳಿದುದು (40-49). ಪಾಂಡವರು ಭೀಷ್ಮನ ವಧೋಪಾಯವನ್ನು ತಿಳಿದುಕೊಂಡಿದುದು (50-83). ಕೃಷ್ಣಾರ್ಜುನ ಸಂವಾದ (84-101).

06103001 ಸಂಜಯ ಉವಾಚ।
06103001a ಯುಧ್ಯತಾಮೇವ ತೇಷಾಂ ತು ಭಾಸ್ಕರೇಽಸ್ತಮುಪಾಗತೇ।
06103001c ಸಂಧ್ಯಾ ಸಮಭವದ್ಘೋರಾ ನಾಪಶ್ಯಾಮ ತತೋ ರಣಂ।।

ಸಂಜಯನು ಹೇಳಿದನು: “ಅವರಿನ್ನೂ ಯುದ್ಧಮಾಡುತ್ತಿರುವಾಗಲೇ ಭಾಸ್ಕರನು ಅಸ್ತಂಗತನಾಗಿ ಘೋರ ಸಂಜೆಯಾಯಿತು. ಆಗ ರಣದಲ್ಲಿ ನಮಗೆ ಏನೂ ಕಾಣದಾಯಿತು.

06103002a ತತೋ ಯುಧಿಷ್ಠಿರೋ ರಾಜಾ ಸಂಧ್ಯಾಂ ಸಂದೃಶ್ಯ ಭಾರತ।
06103002c ವಧ್ಯಮಾನಂ ಬಲಂ ಚಾಪಿ ಭೀಷ್ಮೇಣಾಮಿತ್ರಘಾತಿನಾ।।
06103003a ಮುಕ್ತಶಸ್ತ್ರಂ ಪರಾವೃತ್ತಂ ಪಲಾಯನಪರಾಯಣಂ।
06103003c ಭೀಷ್ಮಂ ಚ ಯುಧಿ ಸಂರಬ್ಧಮನುಯಾಂತಂ ಮಹಾರಥಾನ್।।
06103004a ಸೋಮಕಾಂಶ್ಚ ಜಿತಾನ್ದೃಷ್ಟ್ವಾ ನಿರುತ್ಸಾಹಾನ್ಮಹಾರಥಾನ್।
06103004c ಚಿಂತಯಿತ್ವಾ ಚಿರಂ ಧ್ಯಾತ್ವಾ ಅವಹಾರಮರೋಚಯತ್।।

ಭಾರತ! ಆಗ ರಾಜಾ ಯುಧಿಷ್ಠಿರನು ಸಂಜೆಯಾದುದನ್ನೂ, ಅಮಿತ್ರಘಾತಿ ಭೀಷ್ಮನು ಸೇನೆಯನ್ನು ಸಂಹರಿಸುತ್ತಿರುವುದನ್ನೂ, ಶಸ್ತ್ರಗಳನ್ನು ಬಿಸುಟು ಹಿಮ್ಮೆಟ್ಟಿ ಪಲಯನಮಾಡುತ್ತಿರುವವರನ್ನೂ, ಯುದ್ಧದಲ್ಲಿ ಕ್ರುದ್ಧನಾದ ಭೀಷ್ಮನು ಮಹಾರಥರನ್ನು ಸಂಹರಿಸುತ್ತಿರುವುದನ್ನೂ, ಸೋಮಕರೂ ಪರಾಜಿತರಾದುದನ್ನೂ, ಮಹಾರಥರ ನಿರುತ್ಸಾಹವನ್ನೂ ನೋಡಿ ತತ್ಕಾಲದಲ್ಲಿ ಸೇನೆಯನ್ನು ಹಿಂದೆತೆಗೆದುಕೊಳ್ಳುವುದೇ ಸೂಕ್ತವೆಂದು ಯೋಚಿಸಿದನು.

06103005a ತತೋಽವಹಾರಂ ಸೈನ್ಯಾನಾಂ ಚಕ್ರೇ ರಾಜಾ ಯುಧಿಷ್ಠಿರಃ।
06103005c ತಥೈವ ತವ ಸೈನ್ಯಾನಾಮವಹಾರೋ ಹ್ಯಭೂತ್ತದಾ।।

ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡನು. ಹಾಗೆಯೇ ನಿನ್ನ ಸೇನೆಯೂ ಯುದ್ಧದಿಂದ ಹಿಂದೆ ಸರಿಯಿತು.

06103006a ತತೋಽವಹಾರಂ ಸೈನ್ಯಾನಾಂ ಕೃತ್ವಾ ತತ್ರ ಮಹಾರಥಾಃ।
06103006c ನ್ಯವಿಶಂತ ಕುರುಶ್ರೇಷ್ಠ ಸಂಗ್ರಾಮೇ ಕ್ಷತವಿಕ್ಷತಾಃ।।

ಅಲ್ಲಿ ಸೇನೆಗಳನ್ನು ಹಿಂದೆ ತೆಗೆದುಕೊಂಡು ಸಂಗ್ರಾಮದಲ್ಲಿ ಕ್ಷತ-ವಿಕ್ಷತರಾದ ಮಹಾರಥರು ಡೇರೆಗಳನ್ನು ಪ್ರವೇಶಿಸಿ ವಿಶ್ರಾಂತಿ ಪಡೆದರು.

06103007a ಭೀಷ್ಮಸ್ಯ ಸಮರೇ ಕರ್ಮ ಚಿಂತಯಾನಾಸ್ತು ಪಾಂಡವಾಃ।
06103007c ನಾಲಭಂತ ತದಾ ಶಾಂತಿಂ ಭೃಶಂ ಭೀಷ್ಮೇಣ ಪೀಡಿತಾಃ।।

ಭೀಷ್ಮನಿಂದ ತುಂಬಾ ಪೀಡಿತರಾದ ಪಾಂಡವರು ಸಮರದಲ್ಲಿ ಭೀಷ್ಮನ ಕರ್ಮಗಳ ಕುರಿತು ಯೋಚಿಸಿ ಶಾಂತಿಯನ್ನೇ ಪಡೆಯಲಿಲ್ಲ.

06103008a ಭೀಷ್ಮೋಽಪಿ ಸಮರೇ ಜಿತ್ವಾ ಪಾಂಡವಾನ್ಸಹ ಸೃಂಜಯೈಃ।
06103008c ಪೂಜ್ಯಮಾನಸ್ತವ ಸುತೈರ್ವಂದ್ಯಮಾನಶ್ಚ ಭಾರತ।।
06103009a ನ್ಯವಿಶತ್ಕುರುಭಿಃ ಸಾರ್ಧಂ ಹೃಷ್ಟರೂಪೈಃ ಸಮಂತತಃ।
06103009c ತತೋ ರಾತ್ರಿಃ ಸಮಭವತ್ಸರ್ವಭೂತಪ್ರಮೋಹಿನೀ।।

ಭಾರತ! ಭೀಷ್ಮನೂ ಕೂಡ ಸೃಂಜಯರೊಂದಿಗೆ ಪಾಂಡವರನ್ನು ಸಮರದಲ್ಲಿ ಗೆದ್ದು, ನಿನ್ನ ಸುತರಿಂದ ಪೂಜಿತನಾಗಿ, ವಂದಿಸಿಕೊಂಡು, ಸುತ್ತುವರೆದ ಹೃಷ್ಟರೂಪ ಕುರುಗಳೊಂದಿಗೆ ಡೇರೆಯನ್ನು ಪ್ರವೇಶಿಸಿದನು. ಆ ರಾತ್ರಿಯು ಸರ್ವಭೂತಗಳಿಗೂ ಪ್ರಮೋಹನಕಾರಿಯಾಗಿತ್ತು.

06103010a ತಸ್ಮಿನ್ರಾತ್ರಿಮುಖೇ ಘೋರೇ ಪಾಂಡವಾ ವೃಷ್ಣಿಭಿಃ ಸಹ।
06103010c ಸೃಂಜಯಾಶ್ಚ ದುರಾಧರ್ಷಾ ಮಂತ್ರಾಯ ಸಮುಪಾವಿಶನ್।।

ಆ ರಾತ್ರಿಯ ಮೊದಲನೆಯ ಜಾವದಲ್ಲಿ ದುರಾಧರ್ಷ ಪಾಂಡವರು ವೃಷ್ಣಿ-ಸೃಂಜಯರೊಂದಿಗೆ ಮಂತ್ರಾಲೋಚನೆಗೆ ಕುಳಿತುಕೊಂಡರು.

06103011a ಆತ್ಮನಿಃಶ್ರೇಯಸಂ ಸರ್ವೇ ಪ್ರಾಪ್ತಕಾಲಂ ಮಹಾಬಲಾಃ।
06103011c ಮಂತ್ರಯಾಮಾಸುರವ್ಯಗ್ರಾ ಮಂತ್ರನಿಶ್ಚಯಕೋವಿದಾಃ।।

ಮಂತ್ರನಿಶ್ಚಯಕೋವಿದರಾದ ಆ ಎಲ್ಲ ಮಹಾಬಲರೂ ಕಾಲಕ್ಕೆ ತಕ್ಕುದಾದ ತಮಗೆ ಶ್ರೇಯಸ್ಕರವಾದುದರ ಕುರಿತು ಅವ್ಯಗ್ರರಾಗಿ ಮಂತ್ರಾಲೋಚನೆ ಮಾಡಿದರು.

06103012a ತತೋ ಯುಧಿಷ್ಠಿರೋ ರಾಜಾ ಮಂತ್ರಯಿತ್ವಾ ಚಿರಂ ನೃಪ।
06103012c ವಾಸುದೇವಂ ಸಮುದ್ವೀಕ್ಷ್ಯ ವಾಕ್ಯಮೇತದುವಾಚ ಹ।।

ನೃಪ! ಬಹುಕಾಲ ಮಂತ್ರಾಲೋಚನೆ ಮಾಡಿದ ನಂತರ ರಾಜಾ ಯುಧಿಷ್ಠಿರನು ವಾಸುದೇವನ ಕಡೆ ತಿರುಗಿ ಈ ಮಾತುಗಳನ್ನಾಡಿದನು:

06103013a ಪಶ್ಯ ಕೃಷ್ಣ ಮಹಾತ್ಮಾನಂ ಭೀಷ್ಮಂ ಭೀಮಪರಾಕ್ರಮಂ।
06103013c ಗಜಂ ನಲವನಾನೀವ ವಿಮೃದ್ನಂತಂ ಬಲಂ ಮಮ।।

“ನೋಡು ಕೃಷ್ಣ! ಭೀಮಪರಾಕ್ರಮಿ ಮಹಾತ್ಮ ಭೀಷ್ಮನು ಆನೆಯೊಂದು ಬೆಂಡಿನ ವನವನ್ನು ಹೇಗೋ ಹಾಗೆ ನನ್ನ ಬಲವನ್ನು ಧ್ವಂಸಗೊಳಿಸುತ್ತಿದ್ದಾನೆ.

06103014a ನ ಚೈವೈನಂ ಮಹಾತ್ಮಾನಮುತ್ಸಹಾಮೋ ನಿರೀಕ್ಷಿತುಂ।
06103014c ಲೇಲಿಹ್ಯಮಾನಂ ಸೈನ್ಯೇಷು ಪ್ರವೃದ್ಧಮಿವ ಪಾವಕಂ।।

ಉರಿಯುತ್ತಿರುವ ಪಾವಕನಂತೆ ಸೇನೆಗಳನ್ನು ನೆಕ್ಕುತ್ತಿರುವ ಆ ಮಹಾತ್ಮನನ್ನು ನೋಡಲೂ ಕೂಡ ನಮಗೆ ಉತ್ಸಾಹವಿಲ್ಲ.

06103015a ಯಥಾ ಘೋರೋ ಮಹಾನಾಗಸ್ತಕ್ಷಕೋ ವೈ ವಿಷೋಲ್ಬಣಃ।
06103015c ತಥಾ ಭೀಷ್ಮೋ ರಣೇ ಕೃಷ್ಣ ತೀಕ್ಷ್ಣಶಸ್ತ್ರಃ ಪ್ರತಾಪವಾನ್।।

ಕೃಷ್ಣ! ರಣದಲ್ಲಿ ಪ್ರತಾಪಿ ಭೀಷ್ಮನ ತೀಕ್ಷ್ಣಶಸ್ತ್ರಗಳು ಘೋರ ವಿಷೋಲ್ಬಣ ಮಹಾನಾಗ ತಕ್ಷಕನಂತಿವೆ.

06103016a ಗೃಹೀತಚಾಪಃ ಸಮರೇ ವಿಮುಂಚಂಶ್ಚ ಶಿತಾಂ ಶರಾನ್।
06103016c ಶಕ್ಯೋ ಜೇತುಂ ಯಮಃ ಕ್ರುದ್ಧೋ ವಜ್ರಪಾಣಿಶ್ಚ ದೇವರಾಟ್।।
06103017a ವರುಣಃ ಪಾಶಭೃದ್ವಾಪಿ ಸಗದೋ ವಾ ಧನೇಶ್ವರಃ।
06103017c ನ ತು ಭೀಷ್ಮಃ ಸುಸಂಕ್ರುದ್ಧಃ ಶಕ್ಯೋ ಜೇತುಂ ಮಹಾಹವೇ।।

ಕ್ರುದ್ಧನಾದ ಯಮನನ್ನಾಗಲೀ, ವಜ್ರಪಾಣಿ ದೇವರಾಜನನ್ನಾಗಲೀ, ಪಾಶವನ್ನು ಹಿಡಿದ ವರುಣನನ್ನಾಗಲೀ, ಗದೆಯೊಂದಿಗಿರುವ ಧನೇಶ್ವರನನ್ನಾಗಲೀ ಗೆಲ್ಲಲು ಶಕ್ಯವಿದೆ. ಆದರೆ ಸಮರದ ಮಹಾಹವದಲ್ಲಿ ಸಂಕ್ರುದ್ಧನಾಗಿ ಚಾಪವನ್ನು ಹಿಡಿದು ನಿಶಿತ ಶರಗಳನ್ನು ಪ್ರಯೋಗಿಸುತ್ತಿರುವ ಭೀಷ್ಮನನ್ನು ಜಯಿಸಲು ಶಕ್ಯವಿಲ್ಲ.

06103018a ಸೋಽಹಮೇವಂ ಗತೇ ಕೃಷ್ಣ ನಿಮಗ್ನಃ ಶೋಕಸಾಗರೇ।
06103018c ಆತ್ಮನೋ ಬುದ್ಧಿದೌರ್ಬಲ್ಯಾದ್ಭೀಷ್ಮಮಾಸಾದ್ಯ ಸಂಯುಗೇ।।

ಕೃಷ್ಣ! ಹೀಗಿರುವಾಗ, ನನ್ನದೇ ಬುದ್ಧಿದೌರ್ಬಲ್ಯದಿಂದ ಸಮರದಲ್ಲಿ ಭೀಷ್ಮನನ್ನು ಎದುರಿಸಿ ನಾನು ಶೋಕಸಾಗರದಲ್ಲಿ ಮುಳುಗಿಹೋಗಿದ್ದೇನೆ.

06103019a ವನಂ ಯಾಸ್ಯಾಮಿ ದುರ್ಧರ್ಷ ಶ್ರೇಯೋ ಮೇ ತತ್ರ ವೈ ಗತಂ।
06103019c ನ ಯುದ್ಧಂ ರೋಚಯೇ ಕೃಷ್ಣ ಹಂತಿ ಭೀಷ್ಮೋ ಹಿ ನಃ ಸದಾ।।

ದುರ್ಧರ್ಷ! ವನಕ್ಕೆ ಹೋಗುತ್ತೇನೆ. ಅಲ್ಲಿ ಹೋಗುವುದೇ ನನಗೆ ಶ್ರೇಯಸ್ಕರವಾದುದು. ಕೃಷ್ಣ! ಯುದ್ಧವು ಇಷ್ಟವಾಗುತ್ತಿಲ್ಲ. ಏಕೆಂದರೆ ನಾವು ಎಂದೂ ಭೀಷ್ಮನನ್ನು ಕೊಲ್ಲಲಾರೆವು.

06103020a ಯಥಾ ಪ್ರಜ್ವಲಿತಂ ವಹ್ನಿಂ ಪತಂಗಃ ಸಮಭಿದ್ರವನ್।
06103020c ಏಕತೋ ಮೃತ್ಯುಮಭ್ಯೇತಿ ತಥಾಹಂ ಭೀಷ್ಮಮೀಯಿವಾನ್।।

ಹೇಗೆ ಪತಂಗಗಳು ಪ್ರಜ್ವಲಿಸುವ ಬೆಂಕಿಯ ಮೇಲೆರಗಿ ಒಮ್ಮೆಗೇ ಮೃತ್ಯುವನ್ನುಪ್ಪವವೋ ಹಾಗೆ ನಾವೂ ಕೂಡ ಭೀಷ್ಮನನ್ನು ಎದುರಿಸುತ್ತಿದ್ದೇವೆ.

06103021a ಕ್ಷಯಂ ನೀತೋಽಸ್ಮಿ ವಾರ್ಷ್ಣೇಯ ರಾಜ್ಯಹೇತೋಃ ಪರಾಕ್ರಮೀ।
06103021c ಭ್ರಾತರಶ್ಚೈವ ಮೇ ಶೂರಾಃ ಸಾಯಕೈರ್ಭೃಶಪೀಡಿತಾಃ।।

ವಾರ್ಷ್ಣೇಯ! ರಾಜ್ಯದ ಕಾರಣಕ್ಕಾಗಿ ಪರಾಕ್ರಮದಿಂದ ಕ್ಷಯವನ್ನು ತಂದುಕೊಂಡಿದ್ದೇನೆ. ನನ್ನ ಶೂರ ಸಹೋದರರು ಸಾಯಕಗಳಿಂದ ತುಂಬಾ ಪೀಡಿತರಾಗಿದ್ದಾರೆ.

06103022a ಮತ್ಕೃತೇ ಭ್ರಾತೃಸೌಹಾರ್ದಾದ್ರಾಜ್ಯಾತ್ಪ್ರಭ್ರಂಶನಂ ಗತಾಃ।
06103022c ಪರಿಕ್ಲಿಷ್ಟಾ ತಥಾ ಕೃಷ್ಣಾ ಮತ್ಕೃತೇ ಮಧುಸೂದನ।।

ಮಧುಸೂದನ! ನನ್ನದೇ ಕಾರಣದಿಂದಾಗಿ ರಾಜ್ಯಭ್ರಷ್ಟರಾಗಿ ಕೇವಲ ಭಾತೃಸೌಹಾರ್ದತೆಯಿಂದ ಅರಣ್ಯಕ್ಕೆ ಬಂದರು. ಕೃಷ್ಣೆಯೂ ಕೂಡ ನನ್ನಿಂದಾಗಿಯೇ ಕಷ್ಟಗಳನ್ನು ಅನುಭವಿಸಿದಳು.

06103023a ಜೀವಿತಂ ಬಹು ಮನ್ಯೇಽಹಂ ಜೀವಿತಂ ಹ್ಯದ್ಯ ದುರ್ಲಭಂ।
06103023c ಜೀವಿತಸ್ಯಾದ್ಯ ಶೇಷೇಣ ಚರಿಷ್ಯೇ ಧರ್ಮಮುತ್ತಮಂ।।

ಜೀವಿತವನ್ನು ನಾನು ಬಹಳ ಮನ್ನಿಸುತ್ತೇನೆ. ಆದರೆ ಇಂದು ಜೀವಿತವಾಗಿರುವುದೇ ದುರ್ಲಭವಾಗಿಬಿಟ್ಟಿದೆ. ಆದುದರಿಂದ ಇಂದು ಉಳಿದ ಜೀವಿತವನ್ನಾದರೂ ಉತ್ತಮ ಧರ್ಮಾಚರಣೆಯಲ್ಲಿ ಕಳೆಯುತ್ತೇನೆ.

06103024a ಯದಿ ತೇಽಹಮನುಗ್ರಾಹ್ಯೋ ಭ್ರಾತೃಭಿಃ ಸಹ ಕೇಶವ।
06103024c ಸ್ವಧರ್ಮಸ್ಯಾವಿರೋಧೇನ ತದುದಾಹರ ಕೇಶವ।।

ಕೇಶವ! ನಿನಗೆ ಭ್ರಾತೃಗಳ ಸಹಿತ ನನ್ನ ಮೇಲೆ ಅನುಗ್ರಹವಿದ್ದರೆ, ಸ್ವಧರ್ಮಕ್ಕೆ ವಿರೋಧವಾಗದಂತೆ ಏನಾದರೂ ಉಪಾಯವನ್ನು ಹೇಳು ಕೇಶವ!”

06103025a ಏತಚ್ಚ್ರುತ್ವಾ ವಚಸ್ತಸ್ಯ ಕಾರುಣ್ಯಾದ್ಬಹುವಿಸ್ತರಂ।
06103025c ಪ್ರತ್ಯುವಾಚ ತತಃ ಕೃಷ್ಣಃ ಸಾಂತ್ವಯಾನೋ ಯುಧಿಷ್ಠಿರಂ।।

ಅವನ ಈ ಬಹುವಿಸ್ತರವಾದ ಕಾರುಣ್ಯದ ಮಾತುಗಳನ್ನು ಕೇಳಿ ಕೃಷ್ಣನು ಯುಧಿಷ್ಠಿರನನ್ನು ಸಂತವಿಸುತ್ತಾ ಉತ್ತರಿಸಿದನು:

06103026a ಧರ್ಮಪುತ್ರ ವಿಷಾದಂ ತ್ವಂ ಮಾ ಕೃಥಾಃ ಸತ್ಯಸಂಗರ।
06103026c ಯಸ್ಯ ತೇ ಭ್ರಾತರಃ ಶೂರಾ ದುರ್ಜಯಾಃ ಶತ್ರುಸೂದನಾಃ।।

“ಧರ್ಮಪುತ್ರ! ಸತ್ಯಸಂಗರ! ನೀನು ವಿಷಾದಿಸಬೇಡ. ನಿನ್ನ ತಮ್ಮಂದಿರು ಶೂರರೂ, ದುರ್ಜಯರೂ, ಶತ್ರುಸೂದನರೂ ಆಗಿದ್ದಾರೆ.

06103027a ಅರ್ಜುನೋ ಭೀಮಸೇನಶ್ಚ ವಾಯ್ವಗ್ನಿಸಮತೇಜಸೌ।
06103027c ಮಾದ್ರೀಪುತ್ರೌ ಚ ವಿಕ್ರಾಂತೌ ತ್ರಿದಶಾನಾಂ ಇವೇಶ್ವರೌ।।

ಅರ್ಜುನ-ಭೀಮಸೇನರು ವಾಯು-ಅಗ್ನಿಯರ ಸಮತೇಜಸ್ವಿಗಳು. ಮಾದ್ರೀಪುತ್ರರೂ ಕೂಡ ತ್ರಿದಶರ ಈಶ್ವರರಂತೆ ವಿಕ್ರಾಂತರು.

06103028a ಮಾಂ ವಾ ನಿಯುಂಕ್ಷ್ವ ಸೌಹಾರ್ದಾದ್ಯೋತ್ಸ್ಯೇ ಭೀಷ್ಮೇಣ ಪಾಂಡವ।
06103028c ತ್ವತ್ಪ್ರಯುಕ್ತೋ ಹ್ಯಹಂ ರಾಜನ್ಕಿಂ ನ ಕುರ್ಯಾಂ ಮಹಾಹವೇ।।

ಅಥವಾ ಪಾಂಡವ! ಸೌಹಾರ್ದತೆಯಿಂದ ಭೀಷ್ಮನೊಂದಿಗೆ ಯುದ್ಧಮಾಡಲು ನನ್ನನ್ನು ನಿಯುಕ್ತಿಸು. ಏಕೆಂದರೆ ರಾಜನ್! ನಾನು ನಿನಗಾಗಿ ಮಹಾಹವದಲ್ಲಿ ಏನನ್ನೂ ಸಹ ಮಾಡುತ್ತೇನೆ.

06103029a ಹನಿಷ್ಯಾಮಿ ರಣೇ ಭೀಷ್ಮಮಾಹೂಯ ಪುರುಷರ್ಷಭಂ।
06103029c ಪಶ್ಯತಾಂ ಧಾರ್ತರಾಷ್ಟ್ರಾಣಾಂ ಯದಿ ನೇಚ್ಛತಿ ಫಲ್ಗುನಃ।।

ಒಂದು ವೇಳೆ ಫಲ್ಗುನನು ಇಚ್ಛಿಸಿದರೆ ಧಾರ್ತರಾಷ್ಟ್ರರು ನೋಡುತ್ತಿದ್ದಂತೆಯೇ ಪುರುಷರ್ಷಭ ಭೀಷ್ಮನನ್ನು ರಣದಲ್ಲಿ ಆಹ್ವಾನಿಸಿ ಕೊಲ್ಲುತ್ತೇನೆ.

06103030a ಯದಿ ಭೀಷ್ಮೇ ಹತೇ ರಾಜನ್ಜಯಂ ಪಶ್ಯಸಿ ಪಾಂಡವ।
06103030c ಹಂತಾಸ್ಮ್ಯೇಕರಥೇನಾದ್ಯ ಕುರುವೃದ್ಧಂ ಪಿತಾಮಹಂ।।

ಪಾಂಡವ! ರಾಜನ್! ಭೀಷ್ಮನು ಹತನಾದರೆ ಜಯವನ್ನು ಕಾಣುತ್ತೀಯೆ. ಇಂದೇ ಕುರುವೃದ್ಧ ಪಿತಾಮಹನನ್ನು ಒಂದೇ ರಥದಲ್ಲಿ ಕೊಲ್ಲುತ್ತೇನೆ.

06103031a ಪಶ್ಯ ಮೇ ವಿಕ್ರಮಂ ರಾಜನ್ಮಹೇಂದ್ರಸ್ಯೇವ ಸಂಯುಗೇ।
06103031c ವಿಮುಂಚಂತಂ ಮಹಾಸ್ತ್ರಾಣಿ ಪಾತಯಿಷ್ಯಾಮಿ ತಂ ರಥಾತ್।।

ರಾಜನ್! ಸಂಗ್ರಾಮದಲ್ಲಿ ಮಹೇಂದ್ರನಂತಿರುವ ನನ್ನ ವಿಕ್ರಮವನ್ನು ನೋಡು. ಮಹಾಸ್ತ್ರಗಳನ್ನು ಪ್ರಯೋಗಿಸಿ ಅವನನ್ನು ರಥದಿಂದ ಉರುಳಿಸುತ್ತೇನೆ.

06103032a ಯಃ ಶತ್ರುಃ ಪಾಂಡುಪುತ್ರಾಣಾಂ ಮಚ್ಛತ್ರುಃ ಸ ನ ಸಂಶಯಃ।
06103032c ಮದರ್ಥಾ ಭವದರ್ಥಾ ಯೇ ಯೇ ಮದೀಯಾಸ್ತವೈವ ತೇ।।

ಯಾರು ಪಾಂಡುಪುತ್ರರ ಶತ್ರುವೋ ಅವರು ನನ್ನ ಶತ್ರು ಎನ್ನುವುದರಲ್ಲಿ ಸಂಶಯವಿಲ್ಲ. ನನಗಾಗಿರುವವರು ನಿನಗಾಗಿಯೂ ಇರುವರು. ನನ್ನವರು ನಿನ್ನವರು ಕೂಡ.

06103033a ತವ ಭ್ರಾತಾ ಮಮ ಸಖಾ ಸಂಬಂಧೀ ಶಿಷ್ಯ ಏವ ಚ।
06103033c ಮಾಂಸಾನ್ಯುತ್ಕೃತ್ಯ ವೈ ದದ್ಯಾಮರ್ಜುನಾರ್ಥೇ ಮಹೀಪತೇ।।

ನಿನ್ನ ತಮ್ಮನು ನನ್ನ ಸಖ, ಸಂಬಂಧೀ ಮತ್ತು ಶಿಷ್ಯನು ಕೂಡ. ಮಹೀಪತೇ! ಅರ್ಜುನನಿಗಾಗಿ ನಾನು ನನ್ನ ಮಾಂಸಗಳನ್ನೂ ಕಿತ್ತು ಕೊಡುತ್ತೇನೆ.

06103034a ಏಷ ಚಾಪಿ ನರವ್ಯಾಘ್ರೋ ಮತ್ಕೃತೇ ಜೀವಿತಂ ತ್ಯಜೇತ್।
06103034c ಏಷ ನಃ ಸಮಯಸ್ತಾತ ತಾರಯೇಮ ಪರಸ್ಪರಂ।
06103034e ಸ ಮಾಂ ನಿಯುಂಕ್ಷ್ವ ರಾಜೇಂದ್ರ ಯಾವದ್ದ್ವೀಪೋ ಭವಾಮ್ಯಹಂ।।

ಈ ನರವ್ಯಾಘ್ರನೂ ಕೂಡ ನನಗಾಗಿ ಜೀವಿತವನ್ನೂ ತ್ಯಜಿಸುತ್ತಾನೆ. ಅಯ್ಯಾ! ಯಾವುದೇ ಸಮಯದಲ್ಲಿಯೂ ಪರಸ್ಪರರನ್ನು ದಾಟಿಸಬೇಕೆಂಬುದು ನಮ್ಮ ಒಪ್ಪಂದ. ರಾಜೇಂದ್ರ! ನನ್ನನ್ನು ನಿಯೋಜಿಸು. ನಾನು ನಿನಗೆ ಆಶ್ರಯವಾಗುತ್ತೇನೆ.

06103035a ಪ್ರತಿಜ್ಞಾತಂ ಉಪಪ್ಲವ್ಯೇ ಯತ್ತತ್ಪಾರ್ಥೇನ ಪೂರ್ವತಃ।
06103035c ಘಾತಯಿಷ್ಯಾಮಿ ಗಾಂಗೇಯಮಿತ್ಯುಲೂಕಸ್ಯ ಸನ್ನಿಧೌ।।

ಹಿಂದೆ ಉಪಪ್ಲವದಲ್ಲಿ ಉಲೂಕನ ಸನ್ನಿಧಿಯಲ್ಲಿ ಗಾಂಗೇಯನನ್ನು ಕೊಲ್ಲುತ್ತೇನೆ ಎಂದು ಪಾರ್ಥನು ಪ್ರತಿಜ್ಞೆ ಮಾಡಿದ್ದನು.

06103036a ಪರಿರಕ್ಷ್ಯಂ ಚ ಮಮ ತದ್ವಚಃ ಪಾರ್ಥಸ್ಯ ಧೀಮತಃ।
06103036c ಅನುಜ್ಞಾತಂ ತು ಪಾರ್ಥೇನ ಮಯಾ ಕಾರ್ಯಂ ನ ಸಂಶಯಃ।।

ಧೀಮತ ಪಾರ್ಥನ ಆ ಮಾತನ್ನು ನಾನು ರಕ್ಷಿಸಬೇಕಾಗಿದೆ. ಪಾರ್ಥನು ಅನುಜ್ಞೆಯಿತ್ತರೆ ಆ ಕಾರ್ಯವನ್ನು ನಾನು ಮಾಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

06103037a ಅಥ ವಾ ಫಲ್ಗುನಸ್ಯೈಷ ಭಾರಃ ಪರಿಮಿತೋ ರಣೇ।
06103037c ನಿಹನಿಷ್ಯತಿ ಸಂಗ್ರಾಮೇ ಭೀಷ್ಮಂ ಪರಪುರಂಜಯಂ।।

ಅಥವಾ ಫಲ್ಗುನನೇ ಅದನ್ನು ಮಾಡಬೇಕೆಂದರೂ ಅದು ಅವನಿಗೆ ಭಾರವೇನೂ ಅಲ್ಲ. ಸಂಗ್ರಾಮದಲ್ಲಿ ಅವನು ಪರಪುರಂಜಯ ಭೀಷ್ಮನನ್ನು ಸಂಹರಿಸಬಲ್ಲನು.

06103038a ಅಶಕ್ಯಮಪಿ ಕುರ್ಯಾದ್ಧಿ ರಣೇ ಪಾರ್ಥಃ ಸಮುದ್ಯತಃ।
06103038c ತ್ರಿದಶಾನ್ವಾ ಸಮುದ್ಯುಕ್ತಾನ್ಸಹಿತಾನ್ದೈತ್ಯದಾನವೈಃ।
06103038e ನಿಹನ್ಯಾದರ್ಜುನಃ ಸಂಖ್ಯೇ ಕಿಮು ಭೀಷ್ಮಂ ನರಾಧಿಪ।।

ಮನಸ್ಸುಮಾಡಿದರೆ ಪಾರ್ಥನು ರಣದಲ್ಲಿ ಅಶಕ್ಯವೆನಿಸಿದುದನ್ನೂ ಮಾಡಬಲ್ಲನು ಎಂದು ತಿಳಿ. ತ್ರಿದಶರು, ದೈತ್ಯದಾನವರ ಸಹಿತ ಯುದ್ಧಮಾಡಲು ಬಂದರೂ ಅರ್ಜುನನು ಅವರನ್ನು ಹತಗೊಳಿಸಬಲ್ಲನು. ನರಾಧಿಪ! ಇನ್ನು ಭೀಷ್ಮನು ಯಾವ ಲೆಕ್ಕಕ್ಕೆ?

06103039a ವಿಪರೀತೋ ಮಹಾವೀರ್ಯೋ ಗತಸತ್ತ್ವೋಽಲ್ಪಜೀವಿತಃ।
06103039c ಭೀಷ್ಮಃ ಶಾಂತನವೋ ನೂನಂ ಕರ್ತವ್ಯಂ ನಾವಬುಧ್ಯತೇ।।

ಭೀಷ್ಮ ಶಾಂತನವನು ಮಹಾವೀರ್ಯನಾದರೂ ಸತ್ತ್ವವನ್ನು ಕಳೆದುಕೊಂಡು ಅಲ್ಪಜೀವಿತನಾಗಿದ್ದಾನೆ. ಈ ಸಮಯದಲ್ಲಿ ತನ್ನ ಕರ್ತವ್ಯವೇನೆಂಬುದನ್ನು ತಿಳಿದುಕೊಂಡಿಲ್ಲ.”

06103040 ಯುಧಿಷ್ಠಿರ ಉವಾಚ।
06103040a ಏವಮೇತನ್ಮಹಾಬಾಹೋ ಯಥಾ ವದಸಿ ಮಾಧವ।
06103040c ಸರ್ವೇ ಹ್ಯೇತೇ ನ ಪರ್ಯಾಪ್ತಾಸ್ತವ ವೇಗನಿವಾರಣೇ।।

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಮಾಧವ! ಇದು ನೀನು ಹೇಳದಂತೆಯೇ ಇದೆ. ಅವರೆಲ್ಲರೂ ನಿನ್ನ ವೇಗವನ್ನು ತಡೆದುಕೊಳ್ಳಲಾರರು.

06103041a ನಿಯತಂ ಸಮವಾಪ್ಸ್ಯಾಮಿ ಸರ್ವಮೇವ ಯಥೇಪ್ಸಿತಂ।
06103041c ಯಸ್ಯ ಮೇ ಪುರುಷವ್ಯಾಘ್ರ ಭವಾನ್ನಾಥೋ ಮಹಾಬಲಃ।।

ಪುರುಷವ್ಯಾಘ್ರ! ಯಾರ ಮಹಾಬಲಕ್ಕೆ ನೀನು ನಾಥನಾಗಿದ್ದೀಯೋ ಆ ನಾನು ಬಯಸಿದ ಎಲ್ಲವನ್ನೂ ಪಡೆದೇ ಪಡೆಯುತ್ತೇನೆ.

06103042a ಸೇಂದ್ರಾನಪಿ ರಣೇ ದೇವಾನ್ಜಯೇಯಂ ಜಯತಾಂ ವರ।
06103042c ತ್ವಯಾ ನಾಥೇನ ಗೋವಿಂದ ಕಿಮು ಭೀಷ್ಮಂ ಮಹಾಹವೇ।।

ವಿಜಯಿಗಳಲ್ಲಿ ಶ್ರೇಷ್ಠ! ಗೋವಿಂದ! ನಿನ್ನನ್ನು ನಾಥನನ್ನಾಗಿ ಪಡೆದ ನಾನು ರಣದಲ್ಲಿ ಇಂದ್ರನೊಡನೆ ದೇವತೆಗಳನ್ನು ಕೂಡ ಜಯಿಸಬಲ್ಲೆ. ಇನ್ನು ಮಹಾಹವದಲ್ಲಿ ಭೀಷ್ಮನು ಯಾವ ಲೆಕ್ಕಕ್ಕೆ?

06103043a ನ ತು ತ್ವಾಮನೃತಂ ಕರ್ತುಮುತ್ಸಹೇ ಸ್ವಾರ್ಥಗೌರವಾತ್।
06103043c ಅಯುಧ್ಯಮಾನಃ ಸಾಹಾಯ್ಯಂ ಯಥೋಕ್ತಂ ಕುರು ಮಾಧವ।।

ಸ್ವಾರ್ಥವನ್ನು ಸಾಧಿಸುವುದಕ್ಕಾಗಿ ನಿನ್ನನ್ನು ಅಸತ್ಯವಾದಿಯನ್ನಾಗಿ ಮಾಡಲು ನನಗೆ ಮನಸ್ಸಿಲ್ಲ. ಮಾಧವ! ಮಾತುಕೊಟ್ಟಹಾಗೆ ಯುದ್ಧಮಾಡದೆಯೇ ಸಹಾಯಮಾಡು.

06103044a ಸಮಯಸ್ತು ಕೃತಃ ಕಶ್ಚಿದ್ಭೀಷ್ಮೇಣ ಮಮ ಮಾಧವ।
06103044c ಮಂತ್ರಯಿಷ್ಯೇ ತವಾರ್ಥಾಯ ನ ತು ಯೋತ್ಸ್ಯೇ ಕಥಂ ಚನ।
06103044e ದುರ್ಯೋಧನಾರ್ಥೇ ಯೋತ್ಸ್ಯಾಮಿ ಸತ್ಯಮೇತದಿತಿ ಪ್ರಭೋ।।

ಮಾಧವ! “ನಿನ್ನ ಹಿತದಲ್ಲಿ ಸಲಹೆಯನ್ನು ನೀಡುತ್ತೇನೆ. ಆದರೆ ನಿನ್ನ ಪರವಾಗಿ ಎಂದೂ ಯುದ್ಧಮಾಡುವುದಿಲ್ಲ. ಪ್ರಭೋ! ದುರ್ಯೋಧನನ ಸಲುವಾಗಿ ಯುದ್ಧಮಾಡುತ್ತೇನೆ. ಇದು ಸತ್ಯ” ಎಂದು ಒಮ್ಮೆ ಭೀಷ್ಮನು ನನ್ನೊಡನೆ ಒಪ್ಪಂದವನ್ನು ಮಾಡಿಕೊಂಡಿದ್ದನು.

06103045a ಸ ಹಿ ರಾಜ್ಯಸ್ಯ ಮೇ ದಾತಾ ಮಂತ್ರಸ್ಯೈವ ಚ ಮಾಧವ।
06103045c ತಸ್ಮಾದ್ದೇವವ್ರತಂ ಭೂಯೋ ವಧೋಪಾಯಾರ್ಥಮಾತ್ಮನಃ।
06103045e ಭವತಾ ಸಹಿತಾಃ ಸರ್ವೇ ಪೃಚ್ಛಾಮೋ ಮಧುಸೂದನ।।

ಮಾಧವ! ಏಕೆಂದರೆ ಅವನೇ ನನಗೆ ರಾಜ್ಯವನ್ನು ಕೊಡುವವನು ಮತ್ತು ರಾಜ್ಯವನ್ನು ಪಡೆಯುವುದರ ಕುರಿತು ಸಲಹೆ ನೀಡುವವನು. ಮಧುಸೂದನ! ಆದುದರಿಂದ ದೇವವ್ರತನ ವಧೋಪಾಯವನ್ನು ಅವನಿಂದಲೇ ನಿನ್ನನ್ನೂ ಕೂಡಿ ನಾವೆಲ್ಲರೂ ಹೋಗಿ ಕೇಳೋಣ.

06103046a ತದ್ವಯಂ ಸಹಿತಾ ಗತ್ವಾ ಭೀಷ್ಮಮಾಶು ನರೋತ್ತಮಂ।
06103046c ರುಚಿತೇ ತವ ವಾರ್ಷ್ಣೇಯ ಮಂತ್ರಂ ಪೃಚ್ಛಾಮ ಕೌರವಂ।।

ವಾರ್ಷ್ಣೇಯ! ನಿನಗೆ ಇಷ್ಟವಾದರೆ ಈಗಲೇ ಒಟ್ಟಿಗೇ ಹೋಗಿ ನರೋತ್ತಮ ಕೌರವ ಭೀಷ್ಮನ ಸಲಹೆಯನ್ನು ಕೇಳೋಣ.

06103047a ಸ ವಕ್ಷ್ಯತಿ ಹಿತಂ ವಾಕ್ಯಂ ತಥ್ಯಂ ಚೈವ ಜನಾರ್ದನ।
06103047c ಯಥಾ ಸ ವಕ್ಷ್ಯತೇ ಕೃಷ್ಣ ತಥಾ ಕರ್ತಾಸ್ಮಿ ಸಂಯುಗೇ।।

ಜನಾರ್ದನ! ಅವನು ನಮಗೆ ಹಿತವಾದ ಸತ್ಯ ಮಾತನ್ನೇ ಹೇಳುತ್ತಾನೆ. ಕೃಷ್ಣ! ಅವನು ಹೇಗೆ ಹೇಳುತ್ತಾನೋ ಹಾಗೇ ನಾನು ಸಂಗ್ರಾಮದಲ್ಲಿ ಮಾಡುತ್ತೇನೆ.

06103048a ಸ ನೋ ಜಯಸ್ಯ ದಾತಾ ಚ ಮಂತ್ರಸ್ಯ ಚ ಧೃತವ್ರತಃ।
06103048c ಬಾಲಾಃ ಪಿತ್ರಾ ವಿಹೀನಾಶ್ಚ ತೇನ ಸಂವರ್ಧಿತಾ ವಯಂ।।

ಆ ಧೃತವ್ರತನೇ ನಮಗೆ ಜಯವನ್ನು ಕೊಡುವವನು ಮತ್ತು ಜಯಗಳಿಸಲು ಸಲಹೆಯನ್ನು ನೀಡುವವನು. ತಂದೆಯನ್ನು ಕಳೆದುಕೊಂಡು ಬಾಲಕರಾಗಿದ್ದಾಗ ಅವನೇ ನಮ್ಮನ್ನು ಬೆಳೆಸಿದನು.

06103049a ತಂ ಚೇತ್ಪಿತಾಮಹಂ ವೃದ್ಧಂ ಹಂತುಮಿಚ್ಛಾಮಿ ಮಾಧವ।
06103049c ಪಿತುಃ ಪಿತರಮಿಷ್ಟಂ ವೈ ಧಿಗಸ್ತು ಕ್ಷತ್ರಜೀವಿಕಾಂ।।

ಮಾಧವ! ಆ ನನ್ನ ಪಿತಾಮಹ, ತಂದೆಗೆ ತಂದೆಯಂತಿದ್ದ, ವೃದ್ಧನನ್ನು ಕೊಲ್ಲಲು ಬಯಸುತ್ತಿದ್ದೇನಲ್ಲ! ಈ ಕ್ಷತ್ರಿಯ ಜೀವನಕ್ಕೆ ಧಿಕ್ಕಾರ!””

06103050 ಸಂಜಯ ಉವಾಚ।
06103050a ತತೋಽಬ್ರವೀನ್ಮಹಾರಾಜ ವಾರ್ಷ್ಣೇಯಃ ಕುರುನಂದನಂ।
06103050c ರೋಚತೇ ಮೇ ಮಹಾಬಾಹೋ ಸತತಂ ತವ ಭಾಷಿತಂ।।

ಸಂಜಯನು ಹೇಳಿದನು: “ಮಹಾರಾಜ! ಆಗ ವಾರ್ಷ್ಣೇಯನು ಕುರುನಂದನನಿಗೆ ಹೇಳಿದನು: “ಮಹಾಬಾಹೋ! ನನಗೆ ನೀನಾಡಿದುದು ಯಾವಾಗಲೂ ಇಷ್ಟವಾಗುತ್ತದೆ.

06103051a ದೇವವ್ರತಃ ಕೃತೀ ಭೀಷ್ಮಃ ಪ್ರೇಕ್ಷಿತೇನಾಪಿ ನಿರ್ದಹೇತ್।
06103051c ಗಮ್ಯತಾಂ ಸ ವಧೋಪಾಯಂ ಪ್ರಷ್ಟುಂ ಸಾಗರಗಾಸುತಃ।
06103051e ವಕ್ತುಮರ್ಹತಿ ಸತ್ಯಂ ಸ ತ್ವಯಾ ಪೃಷ್ಟೋ ವಿಶೇಷತಃ।।

ದೇವವ್ರತ ಭೀಷ್ಮನು ಪುಣ್ಯಕರ್ಮಿ. ದೃಷ್ಠಿಮಾತ್ರದಿಂದ ದಹಿಸಬಲ್ಲನು. ಅವನ ವಧೋಪಾಯವನ್ನು ಕೇಳಲು ಸಾಗರಗೆಯ ಮಗನ ಬಳಿ ಹೋಗೋಣ. ವಿಶೇಷವಾಗಿ ನೀನೇ ಇದನ್ನು ಕೇಳಿದರೆ ಅವನು ಸತ್ಯವನ್ನೇ ಹೇಳುತ್ತಾನೆ.

06103052a ತೇ ವಯಂ ತತ್ರ ಗಚ್ಛಾಮಃ ಪ್ರಷ್ಟುಂ ಕುರುಪಿತಾಮಹಂ।
06103052c ಪ್ರಣಮ್ಯ ಶಿರಸಾ ಚೈನಂ ಮಂತ್ರಂ ಪೃಚ್ಛಾಮ ಮಾಧವ।
06103052e ಸ ನೋ ದಾಸ್ಯತಿ ಯಂ ಮಂತ್ರಂ ತೇನ ಯೋತ್ಸ್ಯಾಮಹೇ ಪರಾನ್।।

ನಾವೆಲ್ಲರೂ ಈಗಲೇ ಕುರುಪಿತಾಮಹನನ್ನು ಕೇಳಲು ಅಲ್ಲಿಗೆ ಹೋಗೋಣ! ಶಿರಸಾ ನಮಸ್ಕರಿಸಿ ಸಲಹೆಯನ್ನು ಕೇಳೋಣ. ಅವನು ಏನು ಸಲಹೆಯನ್ನು ಕೊಡುತ್ತಾನೋ ಅದರಂತೆಯೇ ಶತ್ರುಗಳೊಡನೆ ಹೋರಾಡೋಣ.”

06103053a ಏವಂ ಸಮ್ಮಂತ್ರ್ಯ ವೈ ವೀರಾಃ ಪಾಂಡವಾಃ ಪಾಂಡುಪೂರ್ವಜ।
06103053c ಜಗ್ಮುಸ್ತೇ ಸಹಿತಾಃ ಸರ್ವೇ ವಾಸುದೇವಶ್ಚ ವೀರ್ಯವಾನ್।
06103053e ವಿಮುಕ್ತಶಸ್ತ್ರಕವಚಾ ಭೀಷ್ಮಸ್ಯ ಸದನಂ ಪ್ರತಿ।।

ಪಾಂಡುಪೂರ್ವಜ! ಹೀಗೆ ಮಂತ್ರಾಲೋಚನೆ ಮಾಡಿ ವೀರ ಪಾಂಡವರು ಎಲ್ಲರೂ ಶಸ್ತ್ರ-ಕವಚಗಳನ್ನು ಬಿಚ್ಚಿಟ್ಟು ವೀರ್ಯವಾನ್ ವಾಸುದೇವನನ್ನೊಡಗೂಡಿ ಭೀಷ್ಮನ ಬಿಡಾರದ ಕಡೆ ಹೊರಟರು.

06103054a ಪ್ರವಿಶ್ಯ ಚ ತದಾ ಭೀಷ್ಮಂ ಶಿರೋಭಿಃ ಪ್ರತಿಪೇದಿರೇ।
06103054c ಪೂಜಯಂತೋ ಮಹಾರಾಜ ಪಾಂಡವಾ ಭರತರ್ಷಭ।
06103054e ಪ್ರಣಮ್ಯ ಶಿರಸಾ ಚೈನಂ ಭೀಷ್ಮಂ ಶರಣಮನ್ವಯುಃ।।

ಮಹಾರಾಜ! ಭರತರ್ಷಭ! ಪ್ರವೇಶಿಸಿ ಭೀಷ್ಮನಿಗೆ ತಲೆಬಾಗಿ ನಮಸ್ಕರಿಸಿದರು. ಪಾಂಡವರು ಭೀಷ್ಮನನ್ನು ಶಿರಸಾ ವಂದಿಸಿ ಪೂಜಿಸಿ ಶರಣು ಹೋದರು.

06103055a ತಾನುವಾಚ ಮಹಾಬಾಹುರ್ಭೀಷ್ಮಃ ಕುರುಪಿತಾಮಹಃ।
06103055c ಸ್ವಾಗತಂ ತವ ವಾರ್ಷ್ಣೇಯ ಸ್ವಾಗತಂ ತೇ ಧನಂಜಯ।
06103055e ಸ್ವಾಗತಂ ಧರ್ಮಪುತ್ರಾಯ ಭೀಮಾಯ ಯಮಯೋಸ್ತಥಾ।।

ಮಹಾಬಾಹು ಭೀಷ್ಮ ಕುರುಪಿತಾಮಹನು ಅವರನ್ನುದ್ದೇಶಿಸಿ ಹೇಳಿದನು: “ವಾರ್ಷ್ಣೇಯ! ನಿನಗೆ ಸ್ವಾಗತ! ಧನಂಜಯ! ನಿನಗೆ ಸ್ವಾಗತ! ಧರ್ಮಪುತ್ರನಿಗೆ, ಭೀಮನಿಗೆ ಮತ್ತು ಯಮಳರಿಗೂ ಸ್ವಾಗತ!

06103056a ಕಿಂ ಕಾರ್ಯಂ ವಃ ಕರೋಮ್ಯದ್ಯ ಯುಷ್ಮತ್ಪ್ರೀತಿವಿವರ್ಧನಂ।
06103056c ಸರ್ವಾತ್ಮನಾ ಚ ಕರ್ತಾಸ್ಮಿ ಯದ್ಯಪಿ ಸ್ಯಾತ್ಸುದುಷ್ಕರಂ।।

ನಿಮ್ಮ ಪ್ರೀತಿಯನ್ನು ವೃದ್ಧಿಗೊಳಿಸಲು ಇಂದು ನಾನು ಯಾವ ಕಾರ್ಯವನ್ನು ಮಾಡಲಿ? ಅದು ಎಷ್ಟೇ ಸುದುಷ್ಕರವಾದರೂ ಸರ್ವಾತ್ಮನಾ ಅದನ್ನು ಮಾಡಿಕೊಡುತ್ತೇನೆ.”

06103057a ತಥಾ ಬ್ರುವಾಣಂ ಗಾಂಗೇಯಂ ಪ್ರೀತಿಯುಕ್ತಂ ಪುನಃ ಪುನಃ।
06103057c ಉವಾಚ ವಾಕ್ಯಂ ದೀನಾತ್ಮಾ ಧರ್ಮಪುತ್ರೋ ಯುಧಿಷ್ಠಿರಃ।।

ಹೀಗೆ ಗಾಂಗೇಯನು ಪ್ರೀತಿಯುಕ್ತನಾಗಿ ಪುನಃ ಪುನಃ ಹೇಳಲು ಧರ್ಮಪುತ್ರ ಯುಧಿಷ್ಠಿರನು ದೀನಾತ್ಮನಾಗಿ ಈ ಮಾತನ್ನಾಡಿದನು:

06103058a ಕಥಂ ಜಯೇಮ ಧರ್ಮಜ್ಞ ಕಥಂ ರಾಜ್ಯಂ ಲಭೇಮಹಿ।
06103058c ಪ್ರಜಾನಾಂ ಸಂಕ್ಷಯೋ ನ ಸ್ಯಾತ್ಕಥಂ ತನ್ಮೇ ವದಾಭಿಭೋ।।

“ಧರ್ಮಜ್ಞ! ನಾವು ಹೇಗೆ ಜಯಗಳಿಸಬಲ್ಲೆವು? ನಾವು ರಾಜ್ಯವನ್ನು ಹೇಗೆ ಪಡೆಯಬಹುದು? ಪ್ರಜೆಗಳು ನಾಶವಾಗದೇ ಇರುವುದು ಹೇಗೆ? ವಿಭೋ! ಅದನ್ನು ನನಗೆ ಹೇಳು.

06103059a ಭವಾನ್ ಹಿ ನೋ ವಧೋಪಾಯಂ ಬ್ರವೀತು ಸ್ವಯಮಾತ್ಮನಃ।
06103059c ಭವಂತಂ ಸಮರೇ ರಾಜನ್ವಿಷಹೇಮ ಕಥಂ ವಯಂ।।

ನೀನೇ ನಿನ್ನ ವಧೋಪಾಯವನ್ನೂ ನಮಗೆ ಹೇಳಬೇಕು. ರಾಜನ್! ಸಮರದಲ್ಲಿ ನಿನ್ನನ್ನು ಹೇಗೆ ಸೋಲಿಸಬಲ್ಲೆವು?

06103060a ನ ಹಿ ತೇ ಸೂಕ್ಷ್ಮಮಪ್ಯಸ್ತಿ ರಂಧ್ರಂ ಕುರುಪಿತಾಮಹ।
06103060c ಮಂಡಲೇನೈವ ಧನುಷಾ ಸದಾ ದೃಶ್ಯೋಽಸಿ ಸಂಯುಗೇ।।

ಕುರುಪಿತಾಮಹ! ನಿನ್ನಲ್ಲಿ ಸೂಕ್ಷ್ಮವಾದ ರಂಧ್ರವೂ ಕೂಡ ಕಾಣುವುದಕ್ಕೆ ಸಿಗುವುದಿಲ್ಲ. ಸಂಯುಗದಲ್ಲಿ ನೀನು ಸದಾ ವೃತ್ತಾಕಾರದಲ್ಲಿ ಧನುಸ್ಸನ್ನು ತಿರುಗಿಸುತ್ತಿರುವುದೇ ಕಂಡು ಬರುತ್ತದೆ.

06103061a ನಾದದಾನಂ ಸಂದಧಾನಂ ವಿಕರ್ಷಂತಂ ಧನುರ್ನ ಚ।
06103061c ಪಶ್ಯಾಮಸ್ತ್ವಾ ಮಹಾಬಾಹೋ ರಥೇ ಸೂರ್ಯಮಿವ ಸ್ಥಿತಂ।।

ಮಹಾಬಾಹೋ! ರವಿಯಂತೆ ರಥದಲ್ಲಿರುವ ನೀನು ಬಾಣಗಳನ್ನು ಭತ್ತಳಿಕೆಯಿಂದ ತೆಗೆದುಕೊಳ್ಳುವುದಾಗಲೀ, ಅದನ್ನು ಧನುಸ್ಸಿಗೆ ಅನುಸಂಧಾನಮಾಡುವುದಾಗಲೀ, ಮತ್ತು ಶಿಂಜಿನಿಯನ್ನು ಸೆಳೆದು ಬಿಡುವುದಾಗಲೀ ನಾವು ನೋಡಲಾರೆವು.

06103062a ನರಾಶ್ವರಥನಾಗಾನಾಂ ಹಂತಾರಂ ಪರವೀರಹನ್।
06103062c ಕ ಇವೋತ್ಸಹತೇ ಹಂತುಂ ತ್ವಾಂ ಪುಮಾನ್ಭರತರ್ಷಭ।।

ಭರತರ್ಷಭ! ಪರವೀರಹನ್! ರಥಾಶ್ವಗಜಪದಾತಿಗಳನ್ನು ಸಂಹರಿಸುವ ನಿನ್ನನ್ನು ಯಾವ ಪುರುಷನು ತಾನೇ ಕೊಲ್ಲಲು ಉತ್ಸಾಹಿತನಾಗುತ್ತಾನೆ?

06103063a ವರ್ಷತಾ ಶರವರ್ಷಾಣಿ ಮಹಾಂತಿ ಪುರುಷೋತ್ತಮ।
06103063c ಕ್ಷಯಂ ನೀತಾ ಹಿ ಪೃತನಾ ಭವತಾ ಮಹತೀ ಮಮ।।

ಪುರುಷೋತ್ತಮ! ಶರಗಳ ಮಹಾ ಮಳೆಯನ್ನು ಸುರಿಸಿ ನೀನು ನನ್ನ ಸೇನೆಗೆ ಮಹಾ ಕ್ಷಯವನ್ನು ತಂದಿದ್ದೀಯೆ.

06103064a ಯಥಾ ಯುಧಿ ಜಯೇಯಂ ತ್ವಾಂ ಯಥಾ ರಾಜ್ಯಂ ಭವೇನ್ಮಮ।
06103064c ಭವೇತ್ಸೈನ್ಯಸ್ಯ ವಾ ಶಾಂತಿಸ್ತನ್ಮೇ ಬ್ರೂಹಿ ಪಿತಾಮಹ।।

ಪಿತಾಮಹ! ನಾವು ಯುದ್ಧದಲ್ಲಿ ನಿನ್ನನ್ನು ಜಯಿಸುವುದು ಹೇಗೆ, ಹೇಗೆ ರಾಜ್ಯವು ನನ್ನದಾಗಬಲ್ಲದು, ಅಥವಾ ನನ್ನ ಸೈನ್ಯಕ್ಕೆ ಶಾಂತಿ ದೊರೆಯುವುದು ಅದನ್ನು ನನಗೆ ಹೇಳು.”

06103065a ತತೋಽಬ್ರವೀಚ್ಚಾಂತನವಃ ಪಾಂಡವಾನ್ಪಾಂಡುಪೂರ್ವಜ।
06103065c ನ ಕಥಂ ಚನ ಕೌಂತೇಯ ಮಯಿ ಜೀವತಿ ಸಂಯುಗೇ।
06103065e ಯುಷ್ಮಾಸು ದೃಶ್ಯತೇ ವೃದ್ಧಿಃ ಸತ್ಯಮೇತದ್ಬ್ರವೀಮಿ ವಃ।।

ಪಾಂಡುಪೂರ್ವಜ! ಆಗ ಪಾಂಡವನಿಗೆ ಶಾಂತನವನು ಹೇಳಿದನು: “ಕೌಂತೇಯ! ನಾನು ಬದುಕಿರುವವರೆಗೆ ಎಂದೂ ಸಂಯುಗದಲ್ಲಿ ನಿನ್ನ ಏಳ್ಗೆಯು ಕಾಣಿಸುವುದಿಲ್ಲ. ಸತ್ಯವನ್ನೇ ಹೇಳುತ್ತಿದ್ದೇನೆ.

06103066a ನಿರ್ಜಿತೇ ಮಯಿ ಯುದ್ಧೇ ತು ಧ್ರುವಂ ಜೇಷ್ಯಥ ಕೌರವಾನ್।
06103066c ಕ್ಷಿಪ್ರಂ ಮಯಿ ಪ್ರಹರತ ಯದೀಚ್ಛಥ ರಣೇ ಜಯಂ।
06103066e ಅನುಜಾನಾಮಿ ವಃ ಪಾರ್ಥಾಃ ಪ್ರಹರಧ್ವಂ ಯಥಾಸುಖಂ।।

ಆದರೆ ಯುದ್ಧದಲ್ಲಿ ನನ್ನನ್ನು ಸೋಲಿಸಿದರೆ ಖಂಡಿತವಾಗಿ ಕೌರವರನ್ನು ಗೆಲ್ಲುತ್ತೀಯೆ. ರಣದಲ್ಲಿ ಜಯವನ್ನು ಬಯಸುವೆಯಾದರೆ ಬೇಗನೆ ನನ್ನನ್ನು ಕೊಲ್ಲು. ಪಾರ್ಥರೇ! ಯಥಾಸುಖವಾಗಿ ನನ್ನನ್ನು ಹೊಡೆಯಿರಿ. ಅನುಜ್ಞೆಯನ್ನು ನೀಡುತ್ತೇನೆ.

06103067a ಏವಂ ಹಿ ಸುಕೃತಂ ಮನ್ಯೇ ಭವತಾಂ ವಿದಿತೋ ಹ್ಯಹಂ।
06103067c ಹತೇ ಮಯಿ ಹತಂ ಸರ್ವಂ ತಸ್ಮಾದೇವಂ ವಿಧೀಯತಾಂ।।

ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುವುದೆಂದು ನನಗೆ ತಿಳಿದಿದೆ. ನಾನು ಸತ್ತರೆ ಅವರೆಲ್ಲರೂ ಸತ್ತ ಹಾಗೆ ಎಂದು ತಿಳಿದುಕೋ.”

06103068 ಯುಧಿಷ್ಠಿರ ಉವಾಚ।
06103068a ಬ್ರೂಹಿ ತಸ್ಮಾದುಪಾಯಂ ನೋ ಯಥಾ ಯುದ್ಧೇ ಜಯೇಮಹಿ।
06103068c ಭವಂತಂ ಸಮರೇ ಕ್ರುದ್ಧಂ ದಂಡಪಾಣಿಮಿವಾಂತಕಂ।।

ಯುಧಿಷ್ಠಿರನು ಹೇಳಿದನು: “ಸಮರದಲ್ಲಿ ಕ್ರುದ್ಧನಾಗಿ ದಂಡಪಾಣಿ ಅಂತಕನಂತಿರುವ ನಿನ್ನನ್ನು ನಾವು ಯುದ್ಧದಲ್ಲಿ ಜಯಿಸಬಲ್ಲಂತಹ ಉಪಾಯವನ್ನು ಹೇಳು.

06103069a ಶಕ್ಯೋ ವಜ್ರಧರೋ ಜೇತುಂ ವರುಣೋಽಥ ಯಮಸ್ತಥಾ।
06103069c ನ ಭವಾನ್ಸಮರೇ ಶಕ್ಯಃ ಸೇಂದ್ರೈರಪಿ ಸುರಾಸುರೈಃ।।

ವಜ್ರಧರನನ್ನೂ, ವರುಣನನ್ನೂ, ಯಮನನ್ನೂ ಸಹ ಜಯಿಸಬಲ್ಲೆವು. ಆದರೆ ಸಮರದಲ್ಲಿ ನಿನ್ನನ್ನು ಗೆಲ್ಲಲು ಇಂದ್ರನೊಂದಿಗೆ ಸುರಾಸುರರಿಗೂ ಶಕ್ಯವಿಲ್ಲ.”

06103070 ಭೀಷ್ಮ ಉವಾಚ।
06103070a ಸತ್ಯಮೇತನ್ಮಹಾಬಾಹೋ ಯಥಾ ವದಸಿ ಪಾಂಡವ।
06103070c ನಾಹಂ ಶಕ್ಯೋ ರಣೇ ಜೇತುಂ ಸೇಂದ್ರೈರಪಿ ಸುರಾಸುರೈಃ।।
06103071a ಆತ್ತಶಸ್ತ್ರೋ ರಣೇ ಯತ್ತೋ ಗೃಹೀತವರಕಾರ್ಮುಕಃ।
06103071c ನ್ಯಸ್ತಶಸ್ತ್ರಂ ತು ಮಾಂ ರಾಜನ್ ಹನ್ಯುರ್ಯುಧಿ ಮಹಾರಥಾಃ।।

ಭೀಷ್ಮನು ಹೇಳಿದನು: “ಮಹಾಬಾಹೋ! ಪಾಂಡವ! ಸತ್ಯವನ್ನೇ ಮಾತನಾಡುತ್ತಿದ್ದೀಯೆ. ರಣದಲ್ಲಿ ಶ್ರೇಷ್ಠ ಕಾರ್ಮುಕವನ್ನು ನಾನು ಹಿಡಿದಿರುವವರೆಗೆ, ಶಸ್ತ್ರಾಸ್ತ್ರಗಳು ನನ್ನ ಕೈಯಲ್ಲಿರುವವರೆಗೆ ನನ್ನನ್ನು ಗೆಲ್ಲಲು ಇಂದ್ರನೊಂದಿಗೆ ಸುರಾಸುರರಿಗೂ ಶಕ್ಯವಿಲ್ಲ. ರಾಜನ್! ನಾನು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟಾಗ ಮಾತ್ರ ಈ ಮಹಾರಥರು ನನ್ನನ್ನು ಸಂಹರಿಸಬಲ್ಲರು.

06103072a ನಿಕ್ಷಿಪ್ತಶಸ್ತ್ರೇ ಪತಿತೇ ವಿಮುಕ್ತಕವಚಧ್ವಜೇ।
06103072c ದ್ರವಮಾಣೇ ಚ ಭೀತೇ ಚ ತವಾಸ್ಮೀತಿ ಚ ವಾದಿನಿ।।
06103073a ಸ್ತ್ರಿಯಾಂ ಸ್ತ್ರೀನಾಮಧೇಯೇ ಚ ವಿಕಲೇ ಚೈಕಪುತ್ರಕೇ।
06103073c ಅಪ್ರಸೂತೇ ಚ ದುಷ್ಪ್ರೇಕ್ಷ್ಯೇ ನ ಯುದ್ಧಂ ರೋಚತೇ ಮಮ।।

ಶಸ್ತ್ರವನ್ನು ಕೆಳಗಿಟ್ಟವನೊಡನೆ, ಕೆಳಕ್ಕೆ ಬಿದ್ದವನೊಡನೆ, ಕವಚ-ಧ್ವಜಗಳಿಲ್ಲದವನೊಡನೆ, ಓಡಿಹೋಗುತ್ತಿರುವವನೊಡನೆ, ಭೀತಿಗೊಂಡಿರುವವನೊಡನೆ, “ನಾನು ನಿನ್ನವನಾಗಿದ್ದೇನೆ” ಎಂದು ಹೇಳುವವನೊಡನೆ, ಸ್ತ್ರೀಯೊಂದಿಗೆ, ಸ್ತ್ರೀಯ ಹೆಸರಿನ್ನಿಟ್ಟುಕೊಂಡವನೊಂದಿಗೆ, ಅಂಗವಿಕಲರೊಡನೆ, ಏಕಮಾತ್ರ ಪುತ್ರನಾಗಿರುವವನೊಡನೆ, ಅಪ್ರಸೂತನೊಂದಿಗೆ, ದುಷ್ಪ್ರೇಕ್ಷನೊಂದಿಗೆ ಯುದ್ಧಮಾಡುವುದು ನನಗೆ ಇಷ್ಟವಿಲ್ಲ.

06103074a ಇಮಂ ಚ ಶೃಣು ಮೇ ಪಾರ್ಥ ಸಂಕಲ್ಪಂ ಪೂರ್ವಚಿಂತಿತಂ।
06103074c ಅಮಂಗಲ್ಯಧ್ವಜಂ ದೃಷ್ಟ್ವಾ ನ ಯುಧ್ಯೇಯಂ ಕಥಂ ಚನ।।

ಪಾರ್ಥ! ಹಿಂದೆ ನಾನು ಮಾಡಿದ್ದ ಮತ್ತೊಂದು ಸಂಕಲ್ಪದ ಕುರಿತೂ ಕೇಳು. ಅಮಂಗಲ ಸೂಚಕ ಚಿಹ್ನೆಯಿರುವ ಧ್ವಜವನ್ನು ನೋಡಿದರೂ ನಾನು ಖಂಡಿತವಾಗಿ ಯುದ್ಧ ಮಾಡುವುದಿಲ್ಲ.

06103075a ಯ ಏಷ ದ್ರೌಪದೋ ರಾಜಂಸ್ತವ ಸೈನ್ಯೇ ಮಹಾರಥಃ।
06103075c ಶಿಖಂಡೀ ಸಮರಾಕಾಂಕ್ಷೀ ಶೂರಶ್ಚ ಸಮಿತಿಂಜಯಃ।।

ರಾಜನ್! ನಿನ್ನ ಸೇನೆಯಲ್ಲಿ ದ್ರೌಪದ ಮಹಾರಥ ಸಮರಾಕಾಂಕ್ಷೀ ಸಮಿತಿಂಜಯ ಶೂರ ಶಿಖಂಡಿಯಿದ್ದಾನಲ್ಲ?

06103076a ಯಥಾಭವಚ್ಚ ಸ್ತ್ರೀ ಪೂರ್ವಂ ಪಶ್ಚಾತ್ಪುಂಸ್ತ್ವಮುಪಾಗತಃ।
06103076c ಜಾನಂತಿ ಚ ಭವಂತೋಽಪಿ ಸರ್ವಮೇತದ್ಯಥಾತಥಂ।।

ಅವನು ಮೊದಲು ಸ್ತ್ರೀಯಾಗಿದ್ದು ನಂತರ ಪುರುಷನಾದನು. ಇವೆಲ್ಲವನ್ನೂ ನಡೆದಂತೆ ನಿನಗೂ ತಿಳಿದೇ ಇದೆ.

06103077a ಅರ್ಜುನಃ ಸಮರೇ ಶೂರಃ ಪುರಸ್ಕೃತ್ಯ ಶಿಖಂಡಿನಂ।
06103077c ಮಾಮೇವ ವಿಶಿಖೈಸ್ತೂರ್ಣಮಭಿದ್ರವತು ದಂಶಿತಃ।।

ಸಮರದಲ್ಲಿ ಶೂರ ಅರ್ಜುನನು ಶಿಖಂಡಿಯನ್ನು ಮುಂದಿರಿಸಿಕೊಂಡು ಕವಚನ್ನು ಧರಿಸಿದವನಾಗಿ ತೀಕ್ಷ್ಣ ಬಾಣಗಳಿಂದ ನನ್ನನ್ನೇ ಹೊಡೆಯಲಿ.

06103078a ಅಮಂಗಲ್ಯಧ್ವಜೇ ತಸ್ಮಿನ್ಸ್ತ್ರೀಪೂರ್ವೇ ಚ ವಿಶೇಷತಃ।
06103078c ನ ಪ್ರಹರ್ತುಮಭೀಪ್ಸಾಮಿ ಗೃಹೀತೇಷುಂ ಕಥಂ ಚನ।।

ಅಮಂಗಲಧ್ವಜವಿರುವ ಮತ್ತು ವಿಶೇಷವಾಗಿ ಅವನು ಹಿಂದೆ ಸ್ತ್ರೀಯಾಗಿದ್ದುದರಿಂದ ಅವನನ್ನು ನಾನು ಧನುರ್ಬಾಣಗಳನ್ನು ಹಿಡಿದಿದ್ದರೂ ಹೊಡೆಯಲು ಎಂದೂ ಇಚ್ಛಿಸುವುದಿಲ್ಲ.

06103079a ತದಂತರಂ ಸಮಾಸಾದ್ಯ ಪಾಂಡವೋ ಮಾಂ ಧನಂಜಯಃ।
06103079c ಶರೈರ್ಘಾತಯತು ಕ್ಷಿಪ್ರಂ ಸಮಂತಾದ್ಭರತರ್ಷಭ।।

ಭರತರ್ಷಭ! ಆ ಅವಕಾಶದಲ್ಲಿ ಪಾಂಡವ ಧನಂಜಯನು ನನ್ನ ಬಳಿಸಾರಿ ಕ್ಷಿಪ್ರವಾಗಿ ಎಲ್ಲ ಕಡೆಗಳಿಂದ ನನ್ನನ್ನು ಶರಗಳಿಂದ ಹೊಡೆದು ಸಂಹರಿಸಲಿ.

06103080a ನ ತಂ ಪಶ್ಯಾಮಿ ಲೋಕೇಷು ಯೋ ಮಾಂ ಹನ್ಯಾತ್ಸಮುದ್ಯತಂ।
06103080c ಋತೇ ಕೃಷ್ಣಾನ್ಮಹಾಭಾಗಾತ್ಪಾಂಡವಾದ್ವಾ ಧನಂಜಯಾತ್।।

ಯುದ್ಧದಲ್ಲಿ ತೊಡಗಿರುವ ಈ ನನ್ನನ್ನು ಕೊಲ್ಲುವವರು, ಮಹಾಭಾಗ ಕೃಷ್ಣ ಮತ್ತು ಪಾಂಡವ ಧನಂಜಯನ ಹೊರತಾಗಿ ಈ ಲೋಕಗಳಲ್ಲಿ ಬೇರೆ ಯಾರನ್ನೂ ಕಾಣೆ.

06103081a ಏಷ ತಸ್ಮಾತ್ಪುರೋಧಾಯ ಕಂ ಚಿದನ್ಯಂ ಮಮಾಗ್ರತಃ।
06103081c ಮಾಂ ಪಾತಯತು ಬೀಭತ್ಸುರೇವಂ ತೇ ವಿಜಯೋ ಭವೇತ್।।

ಹೀಗೆ ಅವನನ್ನು ಅಥವಾ ಬೇರೆ ಯಾರಾದರೂ ಅಂಥವನನ್ನು ನನ್ನ ಮುಂದೆ ನಿಲ್ಲಿಸಿ ಬೀಭತ್ಸುವೇ ನನ್ನನ್ನು ಬೀಳಿಸಬೇಕು. ಇದರಿಂದಲೇ ನಿನಗೆ ವಿಜಯವಾಗುವುದು.

06103082a ಏತತ್ಕುರುಷ್ವ ಕೌಂತೇಯ ಯಥೋಕ್ತಂ ವಚನಂ ಮಮ।
06103082c ತತೋ ಜೇಷ್ಯಸಿ ಸಂಗ್ರಾಮೇ ಧಾರ್ತರಾಷ್ಟ್ರಾನ್ಸಮಾಗತಾನ್।।

ಕೌಂತೇಯ! ನಾನು ಹೇಳಿದ ಮಾತಿನಂತೆಯೇ ಮಾಡು. ಆಗ ಸಂಗ್ರಾಮದಲ್ಲಿ ಎದುರಾಗಿರುವ ಧಾರ್ತರಾಷ್ಟ್ರರನ್ನು ಜಯಿಸುತ್ತೀಯೆ.””

06103083 ಸಂಜಯ ಉವಾಚ।
06103083a ತೇಽನುಜ್ಞಾತಾಸ್ತತಃ ಪಾರ್ಥಾ ಜಗ್ಮುಃ ಸ್ವಶಿಬಿರಂ ಪ್ರತಿ।
06103083c ಅಭಿವಾದ್ಯ ಮಹಾತ್ಮಾನಂ ಭೀಷ್ಮಂ ಕುರುಪಿತಾಮಹಂ।।

ಸಂಜಯನು ಹೇಳಿದನು: “ಆಗ ಅವನಿಂದ ಅಪ್ಪಣೆಯನ್ನು ಪಡೆದು, ಕುರುಪಿತಾಮಹ ಮಹಾತ್ಮ ಭೀಷ್ಮನನ್ನು ನಮಸ್ಕರಿಸಿ ಪಾರ್ಥರು ತಮ್ಮ ಶಿಬಿರದ ಕಡೆ ನಡೆದರು.

06103084a ತಥೋಕ್ತವತಿ ಗಾಂಗೇಯೇ ಪರಲೋಕಾಯ ದೀಕ್ಷಿತೇ।
06103084c ಅರ್ಜುನೋ ದುಃಖಸಂತಪ್ತಃ ಸವ್ರೀಡಮಿದಮಬ್ರವೀತ್।।

ಹಾಗೆ ಪರಲೋಕದ ದೀಕ್ಷೆಯನ್ನು ತೆಗೆದುಕೊಂಡಿದ್ದ ಗಾಂಗೇಯನು ಹೇಳಿದಾಗಿನಿಂದ ಅರ್ಜುನನು ದುಃಖ ಸಂತಪ್ತನೂ ನಾಚಿಕೊಂಡವನೂ ಆಗಿ ಹೇಳಿದನು:

06103085a ಗುರುಣಾ ಕುಲವೃದ್ಧೇನ ಕೃತಪ್ರಜ್ಞೇನ ಧೀಮತಾ।
06103085c ಪಿತಾಮಹೇನ ಸಂಗ್ರಾಮೇ ಕಥಂ ಯೋತ್ಸ್ಯಾಮಿ ಮಾಧವ।।

“ಮಾಧವ! ಗುರು, ಕುಲವೃದ್ಧ, ಕೃತಪ್ರಜ್ಞ, ಧೀಮತ ಪಿತಾಮಹನೊಂದಿಗೆ ನಾನು ಸಂಗ್ರಾಮದಲ್ಲಿ ಹೇಗೆ ಯುದ್ಧಮಾಡಬಲ್ಲೆ?

06103086a ಕ್ರೀಡತಾ ಹಿ ಮಯಾ ಬಾಲ್ಯೇ ವಾಸುದೇವ ಮಹಾಮನಾಃ।
06103086c ಪಾಂಸುರೂಷಿತಗಾತ್ರೇಣ ಮಹಾತ್ಮಾ ಪರುಷೀಕೃತಃ।।

ವಾಸುದೇವ! ಬಾಲ್ಯದಲ್ಲಿ ನಾನು ಆಡಿ ಮೈಯೆಲ್ಲ ಧೂಳುತುಂಬಿ ಬಂದಾಗ ಈ ಮಹಾಮನ ಮಹಾತ್ಮನು ನನ್ನನ್ನೆತ್ತಿಕೊಂಡು ತಾನೂ ಧೂಳಿನಿಂದ ತುಂಬಿಕೊಳ್ಳುತ್ತಿದ್ದನು.

06103087a ಯಸ್ಯಾಹಮಧಿರುಹ್ಯಾಂಕಂ ಬಾಲಃ ಕಿಲ ಗದಾಗ್ರಜ।
06103087c ತಾತೇತ್ಯವೋಚಂ ಪಿತರಂ ಪಿತುಃ ಪಾಂಡೋರ್ಮಹಾತ್ಮನಃ।।
06103088a ನಾಹಂ ತಾತಸ್ತವ ಪಿತುಸ್ತಾತೋಽಸ್ಮಿ ತವ ಭಾರತ।
06103088c ಇತಿ ಮಾಮಬ್ರವೀದ್ಬಾಲ್ಯೇ ಯಃ ಸ ವಧ್ಯಃ ಕಥಂ ಮಯಾ।।

ಗದಾಗ್ರಜ! ಬಾಲಕನಾಗಿದ್ದಾಗ ನಾನು ಅವನ ತೊಡೆಯ ಮೇಲೆ ಕುಳಿತು ಮಹಾತ್ಮ ಪಾಂಡವನ ತಂದೆಯಾದ ಅವನನ್ನು ತಂದೆಯೆಂದು ಕರೆದಾಗ “ಭಾರತ! ನಾನು ನಿನ್ನ ತಂದೆಯಲ್ಲ. ನಿನ್ನ ತಂದೆಯ ತಂದೆ!” ಎಂದು ಬಾಲ್ಯದಲ್ಲಿ ನನಗೆ ಹೇಳುತ್ತಿದ್ದ ಅವನನ್ನು ಹೇಗೆ ತಾನೇ ನಾನು ವಧಿಸಬಲ್ಲೆ?

06103089a ಕಾಮಂ ವಧ್ಯತು ಮೇ ಸೈನ್ಯಂ ನಾಹಂ ಯೋತ್ಸ್ಯೇ ಮಹಾತ್ಮನಾ।
06103089c ಜಯೋ ವಾಸ್ತು ವಧೋ ವಾ ಮೇ ಕಥಂ ವಾ ಕೃಷ್ಣ ಮನ್ಯಸೇ।।

ಬೇಕಾದರೆ ಅವನು ನನ್ನ ಸೇನೆಯನ್ನು ವಧಿಸಲಿ. ಆದರೆ ನಾನು ಆ ಮಹಾತ್ಮನೊಂದಿಗೆ ಯುದ್ಧ ಮಾಡುವುದಿಲ್ಲ. ಕೃಷ್ಣ! ಜಯವಾಗಲಿ ಅಥವಾ ವಧೆಯಾಗಲಿ. ನಿನಗೆ ಹೇಗನ್ನಿಸುತ್ತದೆ?”

06103090 ಶ್ರೀಕೃಷ್ಣ ಉವಾಚ।
06103090a ಪ್ರತಿಜ್ಞಾಯ ವಧಂ ಜಿಷ್ಣೋ ಪುರಾ ಭೀಷ್ಮಸ್ಯ ಸಂಯುಗೇ।
06103090c ಕ್ಷತ್ರಧರ್ಮೇ ಸ್ಥಿತಃ ಪಾರ್ಥ ಕಥಂ ನೈನಂ ಹನಿಷ್ಯಸಿ।।

ಶ್ರೀಕೃಷ್ಣನು ಹೇಳಿದನು: “ಜಿಷ್ಣೋ! ಹಿಂದೆ ನೀನು ಸಂಯುಗದಲ್ಲಿ ಭೀಷ್ಮವಧೆಯ ಪ್ರತಿಜ್ಞೆಯನ್ನು ಮಾಡಿದ್ದೀಯೆ. ಪಾರ್ಥ! ಕ್ಷತ್ರಧರ್ಮದಲ್ಲಿರುವ ನೀನು ಈಗ ಏಕೆ ಸಂಹರಿಸುವುದಿಲ್ಲ?

06103091a ಪಾತಯೈನಂ ರಥಾತ್ಪಾರ್ಥ ವಜ್ರಾಹತಮಿವ ದ್ರುಮಂ।
06103091c ನಾಹತ್ವಾ ಯುಧಿ ಗಾಂಗೇಯಂ ವಿಜಯಸ್ತೇ ಭವಿಷ್ಯತಿ।।

ಪಾರ್ಥ! ಸಿಡಿಲು ಬಡಿದ ಮರದಂತೆ ಇವನನ್ನು ರಥದಿಂದ ಬೀಳಿಸು. ಗಾಂಗೇಯನನ್ನು ಕೊಲ್ಲದೇ ಯುದ್ಧದಲ್ಲಿ ನಿನಗೆ ವಿಜಯವಾಗುವುದಿಲ್ಲ.

06103092a ದಿಷ್ಟಮೇತತ್ಪುರಾ ದೇವೈರ್ಭವಿಷ್ಯತ್ಯವಶಸ್ಯ ತೇ।
06103092c ಹಂತಾ ಭೀಷ್ಮಸ್ಯ ಪೂರ್ವೇಂದ್ರ ಇತಿ ತನ್ನ ತದನ್ಯಥಾ।।

ಪೂರ್ವೇಂದ್ರನಾಗಿದ್ದ ನೀನೇ ಅವಶ್ಯವಾಗಿ ಭೀಷ್ಮನನ್ನು ಕೊಲ್ಲುತ್ತೀಯೆ ಎಂದು ಹಿಂದೆಯೇ ದೈವನಿರ್ಧರಿತವಾಗಿತ್ತು. ಇದಲ್ಲದೇ ಬೇರೆ ಆಗುವುದಿಲ್ಲ.

06103093a ನ ಹಿ ಭೀಷ್ಮಂ ದುರಾಧರ್ಷಂ ವ್ಯಾತ್ತಾನನಮಿವಾಂತಕಂ।
06103093c ತ್ವದನ್ಯಃ ಶಕ್ನುಯಾದ್ಧಂತುಮಪಿ ವಜ್ರಧರಃ ಸ್ವಯಂ।।

ಅಂತಕನಂತೆ ಬಾಯಿಕಳೆದಿರುವ ದುರಾಧರ್ಷ ಭೀಷ್ಮನನ್ನು ನಿನ್ನನ್ನು ಬಿಟ್ಟು ಸ್ವಯಂ ವಜ್ರಧರನೇ ಕೊಲ್ಲಲು ಶಕ್ಯವಿಲ್ಲ.

06103094a ಜಹಿ ಭೀಷ್ಮಂ ಮಹಾಬಾಹೋ ಶೃಣು ಚೇದಂ ವಚೋ ಮಮ।
06103094c ಯಥೋವಾಚ ಪುರಾ ಶಕ್ರಂ ಮಹಾಬುದ್ಧಿರ್ಬೃಹಸ್ಪತಿಃ।।

ಮಹಾಬಾಹೋ! ಭೀಷ್ಮನನ್ನು ಕೊಲ್ಲು. ಹಿಂದೆ ಮಹಾಬುದ್ಧಿ ಬೃಹಸ್ಪತಿಯು ಶಕ್ರನಿಗೆ ಹೇಳಿದಂತೆ ನನ್ನ ಈ ಮಾತನ್ನು ಕೇಳು.

06103095a ಜ್ಯಾಯಾಂಸಮಪಿ ಚೇಚ್ಚಕ್ರ ಗುಣೈರಪಿ ಸಮನ್ವಿತಂ।
06103095c ಆತತಾಯಿನಮಾಮಂತ್ರ್ಯ ಹನ್ಯಾದ್ಘಾತಕಮಾಗತಂ।।

ಅತ್ಯಂತ ಹಿರಿಯನಾದರೂ, ವೃದ್ಧನಾದರೂ, ಸಕಲ ಸದ್ಗುಣಗಳಿಂದ ಸಮನ್ವಿತನಾಗಿದ್ದರೂ ಶಸ್ತ್ರಹಿಡಿದು ಕೊಲ್ಲಲು ಬಂದರೆ ಅಂತಹ ಆತತಾಯಿಯನ್ನು ಕೊಲ್ಲಬೇಕು.

06103096a ಶಾಶ್ವತೋಽಯಂ ಸ್ಥಿತೋ ಧರ್ಮಃ ಕ್ಷತ್ರಿಯಾಣಾಂ ಧನಂಜಯ।
06103096c ಯೋದ್ಧವ್ಯಂ ರಕ್ಷಿತವ್ಯಂ ಚ ಯಷ್ಟವ್ಯಂ ಚಾನಸೂಯುಭಿಃ।।

ಧನಂಜಯ! ಇದು ಕ್ಷತ್ರಿಯರು ನೆಲೆಸಿರುವ ಶಾಶ್ವತ ಧರ್ಮ. ಅಸೂಯೆಯಿಲ್ಲದೇ ಯುದ್ಧಮಾಡಬೇಕು. ಶಿಷ್ಟರನ್ನು ರಕ್ಷಿಸಬೇಕು. ಯಜ್ಞ ಮಾಡಬೇಕು.”

06103097 ಅರ್ಜುನ ಉವಾಚ।
06103097a ಶಿಖಂಡೀ ನಿಧನಂ ಕೃಷ್ಣ ಭೀಷ್ಮಸ್ಯ ಭವಿತಾ ಧ್ರುವಂ।
06103097c ದೃಷ್ಟ್ವೈವ ಹಿ ಸದಾ ಭೀಷ್ಮಃ ಪಾಂಚಾಲ್ಯಂ ವಿನಿವರ್ತತೇ।।

ಅರ್ಜುನನು ಹೇಳಿದನು: “ಕೃಷ್ಣ! ನಿಜವಾಗಿಯೂ ಶಿಖಂಡಿಯೇ ಭೀಷ್ಮನ ನಿಧನಕ್ಕೆ ಕಾರಣನಾಗುತ್ತಾನೆ. ಪಾಂಚಾಲ್ಯನನ್ನು ನೋಡಿದೊಡನೆಯೇ ಸದಾ ಭೀಷ್ಮನು ಹಿಮ್ಮೆಟ್ಟುತ್ತಾನೆ.

06103098a ತೇ ವಯಂ ಪ್ರಮುಖೇ ತಸ್ಯ ಸ್ಥಾಪಯಿತ್ವಾ ಶಿಖಂಡಿನಂ।
06103098c ಗಾಂಗೇಯಂ ಪಾತಯಿಷ್ಯಾಮ ಉಪಾಯೇನೇತಿ ಮೇ ಮತಿಃ।।

ಆದುದರಿಂದ ನಾವು ಅವನ ಮುಂದೆ ಶಿಖಂಡಿಯನ್ನು ಇರಿಸಿ ಗಾಂಗೇಯನನ್ನು ಸಂಹರಿಸೋಣ. ಇದೇ ಉಪಾಯವೆಂದು ನನಗನ್ನಿಸುತ್ತದೆ.

06103099a ಅಹಮನ್ಯಾನ್ಮಹೇಷ್ವಾಸಾನ್ವಾರಯಿಷ್ಯಾಮಿ ಸಾಯಕೈಃ।
06103099c ಶಿಖಂಡ್ಯಪಿ ಯುಧಾಂ ಶ್ರೇಷ್ಠೋ ಭೀಷ್ಮಮೇವಾಭಿಯಾಸ್ಯತು।।

ನಾನು ಸಾಯಕಗಳಿಂದ ಅನ್ಯ ಮಹೇಷ್ವಾಸರನ್ನು ತಡೆಯುತ್ತೇನೆ. ಯೋಧಶ್ರೇಷ್ಠ ಶಿಖಂಡಿಯು ಭೀಷ್ಮನನ್ನೇ ಎದುರಿಸಲಿ.

06103100a ಶ್ರುತಂ ತೇ ಕುರುಮುಖ್ಯಸ್ಯ ನಾಹಂ ಹನ್ಯಾಂ ಶಿಖಂಡಿನಂ।
06103100c ಕನ್ಯಾ ಹ್ಯೇಷಾ ಪುರಾ ಜಾತಾ ಪುರುಷಃ ಸಮಪದ್ಯತ।।

“ಮೊದಲು ಕನ್ಯೆಯಾಗಿದ್ದು ನಂತರ ಪುರುಷನಾದ ಈ ಶಿಖಂಡಿಯನ್ನು ನಾನು ಕೊಲ್ಲುವುದಿಲ್ಲ” ಎಂದು ಕುರುಮುಖ್ಯನನ್ನು ನೀನು ಕೇಳಿದ್ದೀಯೆ.””

06103101 ಸಂಜಯ ಉವಾಚ।
06103101a ಇತ್ಯೇವಂ ನಿಶ್ಚಯಂ ಕೃತ್ವಾ ಪಾಂಡವಾಃ ಸಹಮಾಧವಾಃ।
06103101c ಶಯನಾನಿ ಯಥಾಸ್ವಾನಿ ಭೇಜಿರೇ ಪುರುಷರ್ಷಭಾಃ।।

ಸಂಜಯನು ಹೇಳಿದನು: “ಮಾಧವನೊಂದಿಗೆ ಹೀಗೆ ನಿಶ್ಚಯವನ್ನು ಮಾಡಿ ಪುರುಷರ್ಷಭ ಪಾಂಡವರು ತಮ್ಮ ತಮ್ಮ ಶಯನಗಳಲ್ಲಿ ಪವಡಿಸಿ ವಿಶ್ರಾಂತಿ ಪಡೆದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ನವಮದಿವಸಾವಹಾರೋತ್ತರಮಂತ್ರೇ ತ್ರ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ನವಮದಿವಸಾವಹಾರೋತ್ತರಮಂತ್ರ ಎನ್ನುವ ನೂರಾಮೂರನೇ ಅಧ್ಯಾಯವು.