102 ನವಮದಿವಸಯುದ್ಧಸಮಾಪ್ತಿ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 102

ಸಾರ

ಭೀಷ್ಮನ ಪರಾಕ್ರಮದ ವರ್ಣನೆ (1-29). ಕೃಷ್ಣಾರ್ಜುನರ ಸಂವಾದ (30-37). ಭೀಷ್ಮಾರ್ಜುನರ ಯುದ್ಧ (38-49). ಕೃಷ್ಣನು ಭೀಷ್ಮನನ್ನು ವಧಿಸಲು ಮುಂದಾದುದು; ಒಂಭತ್ತನೇ ದಿನದ ಯುದ್ಧ ಸಮಾಪ್ತಿ (50-78).

06102001 ಸಂಜಯ ಉವಾಚ।
06102001a ತತಃ ಪಿತಾ ತವ ಕ್ರುದ್ಧೋ ನಿಶಿತೈಃ ಸಾಯಕೋತ್ತಮೈಃ।
06102001c ಆಜಘಾನ ರಣೇ ಪಾರ್ಥಾನ್ಸಹಸೇನಾನ್ಸಮಂತತಃ।।

ಸಂಜಯನು ಹೇಳಿದನು: “ಆಗ ನಿನ್ನ ತಂದೆಯು ಕ್ರುದ್ಧನಾಗಿ ನಿಶಿತ ಉತ್ತಮ ಸಾಯಕಗಳಿಂದ ರಣದಲ್ಲಿ ಸೇನೆಗಳೊಂದಿಗೆ ಎಲ್ಲೆಡೆಯಿಂದಲೂ ಪಾರ್ಥರನ್ನು ಹೊಡೆದನು.

06102002a ಭೀಮಂ ದ್ವಾದಶಭಿರ್ವಿದ್ಧ್ವಾ ಸಾತ್ಯಕಿಂ ನವಭಿಃ ಶರೈಃ।
06102002c ನಕುಲಂ ಚ ತ್ರಿಭಿರ್ಬಾಣೈಃ ಸಹದೇವಂ ಚ ಸಪ್ತಭಿಃ।।
06102003a ಯುಧಿಷ್ಠಿರಂ ದ್ವಾದಶಭಿರ್ಬಾಹ್ವೋರುರಸಿ ಚಾರ್ಪಯತ್।
06102003c ಧೃಷ್ಟದ್ಯುಮ್ನಂ ತತೋ ವಿದ್ಧ್ವಾ ವಿನನಾದ ಮಹಾಬಲಃ।।

ಭೀಮನನ್ನು ಹನ್ನೆರಡರಿಂದ ಹೊಡೆದು ಸಾತ್ಯಕಿಯನ್ನು ಒಂಭತ್ತು ಶರಗಳಿಂದ, ಮತ್ತು ನಕುಲನನ್ನು ಮೂರು ಬಾಣಗಳಿಂದ, ಸಹದೇವನನ್ನು ಏಳರಿಂದ, ಮತ್ತು ಯುಧಿಷ್ಠಿರನನ್ನು ತೋಳು-ತೊಡೆಗಳಲ್ಲಿ ಹನ್ನೆರಡು ಬಾಣಗಳಿಂದ ಹೊಡೆದನು. ನಂತರ ಧೃಷ್ಟದ್ಯುಮ್ನನನ್ನು ಹೊಡೆದು ಆ ಮಹಾಬಲನು ಜೋರಾಗಿ ಕೂಗಿದನು.

06102004a ತಂ ದ್ವಾದಶಾರ್ಧೈರ್ನಕುಲೋ ಮಾಧವಶ್ಚ ತ್ರಿಭಿಃ ಶರೈಃ।
06102004c ಧೃಷ್ಟದ್ಯುಮ್ನಶ್ಚ ಸಪ್ತತ್ಯಾ ಭೀಮಸೇನಶ್ಚ ಪಂಚಭಿಃ।।
06102004e ಯುಧಿಷ್ಠಿರೋ ದ್ವಾದಶಭಿಃ ಪ್ರತ್ಯವಿಧ್ಯತ್ಪಿತಾಮಹಂ।।

ಅದಕ್ಕೆ ಪ್ರತಿಯಾಗಿ ಪಿತಾಮಹನನ್ನು ನಕುಲನು ಹನ್ನೆರಡು ಶರಗಳಿಂದ, ಮಾಧವನು ಮೂರರಿಂದ, ಧೃಷ್ಟದ್ಯುಮ್ನನು ಏಳರಿಂದ, ಭೀಮಸೇನನು ಐದರಿಂದ ಮತ್ತು ಯುಧಿಷ್ಠಿರನು ಹನ್ನೆರಡರಿಂದ ಹೊಡೆದರು.

06102005a ದ್ರೋಣಸ್ತು ಸಾತ್ಯಕಿಂ ವಿದ್ಧ್ವಾ ಭೀಮಸೇನಮವಿಧ್ಯತ।
06102005c ಏಕೈಕಂ ಪಂಚಭಿರ್ಬಾಣೈರ್ಯಮದಂಡೋಪಮೈಃ ಶಿತೈಃ।।

ದ್ರೋಣನಾದರೋ ಸಾತ್ಯಕಿಯನ್ನು ಹೊಡೆದು ಭೀಮಸೇನನನ್ನು ಹೊಡೆದನು. ಒಬ್ಬೊಬ್ಬರನ್ನೂ ಯಮದಂಡದಂತಿರುವ ನಿಶಿತ ಐದೈದು ಬಾಣಗಳಿಂದ ಹೊಡೆದನು.

06102006a ತೌ ಚ ತಂ ಪ್ರತ್ಯವಿಧ್ಯೇತಾಂ ತ್ರಿಭಿಸ್ತ್ರಿಭಿರಜಿಹ್ಮಗೈಃ।
06102006c ತೋತ್ತ್ರೈರಿವ ಮಹಾನಾಗಂ ದ್ರೋಣಂ ಬ್ರಾಹ್ಮಣಪುಂಗವಂ।।

ಮಾವಟಿಗನು ಮಹಾಗಜವನ್ನು ಅಂಕುಶದಿಂದ ತಿವಿಯುವಂತೆ ಬ್ರಾಹ್ಮಣಪುಂಗವ ದ್ರೋಣನನ್ನು ಅವರಿಬ್ಬರೂ ಮೂರು ನೇರ ಹೋಗುವ ಬಾಣಗಳಿಂದ ತಿರುಗಿ ಹೊಡೆದರು.

06102007a ಸೌವೀರಾಃ ಕಿತವಾಃ ಪ್ರಾಚ್ಯಾಃ ಪ್ರತೀಚ್ಯೋದೀಚ್ಯಮಾಲವಾಃ।
06102007c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ।
06102007e ಸಂಗ್ರಾಮೇ ನಾಜಹುರ್ಭೀಷ್ಮಂ ವಧ್ಯಮಾನಾಃ ಶಿತೈಃ ಶರೈಃ।।

ಸೌವೀರರು, ಕಿತವರು, ಪೂರ್ವದೇಶೀಯರು, ಪಶ್ಚಿಮ ದೇಶೀಯರು, ಉತ್ತರ ದೇಶೀಯರು, ಮಾಲವರು, ಅಭೀಷಾಹರು, ಶೂರಸೇನರು, ಶಿಬಿಗಳು ಮತ್ತು ವಸಾತಿಗಳು - ಇವರೆಲ್ಲರು ಸಂಗ್ರಾಮದಲ್ಲಿ ನಿಶಿತ ಶರಗಳಿಂದ ಪ್ರಹರಿತರಾದರೂ ಭೀಷ್ಮನನ್ನು ಬಿಟ್ಟು ಹೋಗಲಿಲ್ಲ.

06102008a ತಥೈವಾನ್ಯೇ ವಧ್ಯಮಾನಾಃ ಪಾಂಡವೇಯೈರ್ಮಹಾತ್ಮಭಿಃ।
06102008c ಪಾಂಡವಾನಭ್ಯವರ್ತಂತ ವಿವಿಧಾಯುಧಪಾಣಯಃ।
06102008e ತಥೈವ ಪಾಂಡವಾ ರಾಜನ್ಪರಿವವ್ರುಃ ಪಿತಾಮಹಂ।।

ಹೀಗೆ ವಿವಿಧಾಯುಧಗಳನ್ನು ಹಿಡಿದು ಪಾಂಡವರನ್ನು ಹೋರಾಡುತ್ತಿದ್ದ ಅನ್ಯರೂ ಕೂಡ ಮಹಾತ್ಮ ಪಾಂಡವೇಯರಿಂದ ವಧಿಸಲ್ಪಡುತ್ತಿದ್ದರು. ರಾಜನ್! ಹಾಗೆಯೇ ಪಾಂಡವರು ಪಿತಾಮಹನನ್ನು ಸುತ್ತುವರೆದರು.

06102009a ಸ ಸಮಂತಾತ್ಪರಿವೃತೋ ರಥೌಘೈರಪರಾಜಿತಃ।
06102009c ಗಹನೇಽಗ್ನಿರಿವೋತ್ಸೃಷ್ಟಃ ಪ್ರಜಜ್ವಾಲ ದಹನ್ಪರಾನ್।।

ಎಲ್ಲಕಡೆಗಳಿಂದ ರಥಗಳ ಗುಂಪುಗಳಿಂದ ಸುತ್ತುವರೆಯಲ್ಪಟ್ಟ ಆ ಅಪರಾಜಿತನಾದರೋ ಗಹನ ಅರಣ್ಯದಲ್ಲಿ ಹಬ್ಬಿದ ಬೆಂಕಿಯಂತೆ ಶತ್ರುಗಳನ್ನು ಸುಡುತ್ತಾ ಪ್ರಜ್ವಲಿಸಿದನು.

06102010a ರಥಾಗ್ನ್ಯಗಾರಶ್ಚಾಪಾರ್ಚಿರಸಿಶಕ್ತಿಗದೇಂಧನಃ।
06102010c ಶರಸ್ಫುಲಿಂಗೋ ಭೀಷ್ಮಾಗ್ನಿರ್ದದಾಹ ಕ್ಷತ್ರಿಯರ್ಷಭಾನ್।।

ಭೀಷ್ಮನ ರಥವೇ ಅಗ್ನಿಗಾರವಾಗಿತ್ತು. ಧನುಸ್ಸೇ ಜ್ವಾಲೆಯಾಗಿತ್ತು. ಖಡ್ಗ, ಶಕ್ತಿ ಮತ್ತು ಗದೆಗಳೇ ಇಂಧನಗಳಾಗಿದ್ದವು. ಶರಗಳು ಕಿಡಿಗಳಂತಿದ್ದವು. ಹೀಗೆ ಅವನು ಕ್ಷತ್ರಿಯರ್ಷಭರನ್ನು ಸುಟ್ಟು ಭಸ್ಮಮಾಡಿದನು.

06102011a ಸುವರ್ಣಪುಂಖೈರಿಷುಭಿರ್ಗಾರ್ಧ್ರಪಕ್ಷೈಃ ಸುತೇಜನೈಃ।
06102011c ಕರ್ಣಿನಾಲೀಕನಾರಾಚೈಶ್ಚಾದಯಾಮಾಸ ತದ್ಬಲಂ।।

ಹದ್ದಿನ ರೆಕ್ಕೆಗಳಿಂದ ಕೂಡಿದ ಸುವರ್ಣಭೂಷಿತ ನಿಶಿತ ಬಾಣಗಳಿಂದಲೂ, ಕರ್ಣಿ-ನಾಲೀಕ-ನಾರಾಚಗಳಿಂದಲೂ ಆ ಸೇನೆಯನ್ನು ಮುಚ್ಚಿಬಿಟ್ಟನು.

06102012a ಅಪಾತಯದ್ಧ್ವಜಾಂಶ್ಚೈವ ರಥಿನಶ್ಚ ಶಿತೈಃ ಶರೈಃ।
06102012c ಮುಂಡತಾಲವನಾನೀವ ಚಕಾರ ಸ ರಥವ್ರಜಾನ್।।

ನಿಶಿತ ಶರಗಳಿಂದ ಧ್ವಜಗಳನ್ನು ಮತ್ತು ರಥಿಗಳನ್ನು ಉರುಳಿಸಿದನು. ರಥ ಸೇನೆಯನ್ನು ತಲೆಯಿಲ್ಲದ ತಾಲದ ಮರದಂತೆ ಮಾಡಿದನು.

06102013a ನಿರ್ಮನುಷ್ಯಾನ್ರಥಾನ್ರಾಜನ್ಗಜಾನಶ್ವಾಂಶ್ಚ ಸಂಯುಗೇ।
06102013c ಅಕರೋತ್ಸ ಮಹಾಬಾಹುಃ ಸರ್ವಶಸ್ತ್ರಭೃತಾಂ ವರಃ।।

ರಾಜನ್! ಆ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಮಹಾಬಾಹುವು ಸಂಯುಗದಲ್ಲಿ ರಥ-ಆನೆ-ಕುದುರೆಗಳನ್ನು ನಿರ್ಮನುಷ್ಯರನ್ನಾಗಿ ಮಾಡಿದನು.

06102014a ತಸ್ಯ ಜ್ಯಾತಲನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ।
06102014c ನಿಶಮ್ಯ ಸರ್ವಭೂತಾನಿ ಸಮಕಂಪಂತ ಭಾರತ।।

ಭಾರತ! ಸಿಡಿಲಿನ ಗರ್ಜನೆಯಂತೆ ಕೇಳಿ ಬರುತ್ತಿದ್ದ ಅವನ ಬಿಲ್ಲಿನ ಟೇಂಕಾರಶಬ್ಧವನ್ನು ಕೇಳಿ ಸರ್ವಪ್ರಾಣಿಗಳೂ ನಡುಗಿದವು.

06102015a ಅಮೋಘಾ ಹ್ಯಪತನ್ಬಾಣಾಃ ಪಿತುಸ್ತೇ ಭರತರ್ಷಭ।
06102015c ನಾಸಜ್ಜಂತ ತನುತ್ರೇಷು ಭೀಷ್ಮಚಾಪಚ್ಯುತಾಃ ಶರಾಃ।।

ಭರತರ್ಷಭ! ನಿನ್ನ ತಂದೆಯು ಪ್ರಯೋಗಿಸುತ್ತಿದ್ದ ಬಾಣಗಳು ಒಮ್ಮೆಯೂ ವ್ಯರ್ಥವಾಗುತ್ತಿರಲಿಲ್ಲ. ಭೀಷ್ಮನಿಂದ ಹೊರಟ ಬಾಣಗಳು ಅವರ ದೇಹವನ್ನು ಭೇದಿಸಿ ಹೊರಬರುತ್ತಿದ್ದವು.

06102016a ಹತವೀರಾನ್ರಥಾನ್ರಾಜನ್ಸಂಯುಕ್ತಾಂ ಜವನೈರ್ಹಯೈಃ।
06102016c ಅಪಶ್ಯಾಮ ಮಹಾರಾಜ ಹ್ರಿಯಮಾಣಾನ್ರಣಾಜಿರೇ।।

ರಾಜನ್! ಮಹಾರಾಜ! ವೀರರನ್ನು ಕಳೆದುಕೊಂಡು ರಥಗಳನ್ನು ಕುದುರೆಗಳು ಮಾತ್ರ ಎಳೆದುಕೊಂಡು ರಣರಂಗದಲ್ಲಿ ಓಡಿಹೋಗುತ್ತಿರುವುದನ್ನು ಕಂಡೆವು.

06102017a ಚೇದಿಕಾಶಿಕರೂಷಾಣಾಂ ಸಹಸ್ರಾಣಿ ಚತುರ್ದಶ।
06102017c ಮಹಾರಥಾಃ ಸಮಾಖ್ಯಾತಾಃ ಕುಲಪುತ್ರಾಸ್ತನುತ್ಯಜಃ।
06102017e ಅಪರಾವರ್ತಿನಃ ಸರ್ವೇ ಸುವರ್ಣವಿಕೃತಧ್ವಜಾಃ।।
06102018a ಸಂಗ್ರಾಮೇ ಭೀಷ್ಮಮಾಸಾದ್ಯ ವ್ಯಾದಿತಾಸ್ಯಮಿವಾಂತಕಂ।
06102018c ನಿಮಗ್ನಾಃ ಪರಲೋಕಾಯ ಸವಾಜಿರಥಕುಂಜರಾಃ।।

ಹದಿನಾಲ್ಕು ಸಾವಿರ ಸತ್ಕುಲ ಪ್ರಸೂತ, ಪ್ರಾಣವನ್ನೇ ಮುಡುಪಾಗಿಟ್ಟಿದ್ದ, ವಿಖ್ಯಾತ, ಯುದ್ಧದಲ್ಲಿ ಹಿಮ್ಮೆಟ್ಟದೇ ಇದ್ದ, ಸುವರ್ಣಭೂಷಿತ ಧ್ವಜವಿದ್ದ ಚೇದಿ-ಕಾಶಿ-ಕರೂಷ ಮಹಾರಥರು ಬಾಯಿಕಳೆದ ಅಂತಕನಂತಿರುವ ಭೀಷ್ಮನೊಡನೆ ಯುದ್ಧಮಾಡಿ ಕುದುರೆ-ರಥ-ಆನೆಗಳೊಂದಿಗೆ ನಾಶರಾಗಿ ಪರಲೋಕವನ್ನು ಸೇರಿದರು.

06102019a ಭಗ್ನಾಕ್ಷೋಪಸ್ಕರಾನ್ಕಾಂಶ್ಚಿದ್ಭಗ್ನಚಕ್ರಾಂಶ್ಚ ಸರ್ವಶಃ।
06102019c ಅಪಶ್ಯಾಮ ರಥಾನ್ರಾಜನ್ಶತಶೋಽಥ ಸಹಸ್ರಶಃ।।

ರಾಜನ್! ಅಲ್ಲಿ ಭಗ್ನವಾಗಿದ್ದ ಧುರಿಗಳುಳ್ಳ, ಸಲಕರಣೆಗಳು ಹೊರಬಿದ್ದಿದ್ದ, ಗಾಲಿಗಳು ಮುರಿದಿದ್ದ ನೂರಾರು ಸಹಸ್ರಾರು ರಥಗಳನ್ನು ಎಲ್ಲ ಕಡೆ ನೋಡಿದೆವು.

06102020a ಸವರೂಥೈ ರಥೈರ್ಭಗ್ನೈ ರಥಿಭಿಶ್ಚ ನಿಪಾತಿತೈಃ।
06102020c ಶರೈಃ ಸುಕವಚೈಶ್ಚಿನ್ನೈಃ ಪಟ್ಟಿಶೈಶ್ಚ ವಿಶಾಂ ಪತೇ।।
06102021a ಗದಾಭಿರ್ಮುಸಲೈಶ್ಚೈವ ನಿಸ್ತ್ರಿಂಶೈಶ್ಚ ಶಿಲೀಮುಖೈಃ।
06102021c ಅನುಕರ್ಷೈರುಪಾಸಂಗೈಶ್ಚಕ್ರೈರ್ಭಗ್ನೈಶ್ಚ ಮಾರಿಷ।।
06102022a ಬಾಹುಭಿಃ ಕಾರ್ಮುಕೈಃ ಖಡ್ಗೈಃ ಶಿರೋಭಿಶ್ಚ ಸಕುಂಡಲೈಃ।
06102022c ತಲತ್ರೈರಂಗುಲಿತ್ರೈಶ್ಚ ಧ್ವಜೈಶ್ಚ ವಿನಿಪಾತಿತೈಃ।।
06102022e ಚಾಪೈಶ್ಚ ಬಹುಧಾ ಚಿನ್ನೈಃ ಸಮಾಸ್ತೀರ್ಯತ ಮೇದಿನೀ।।

ವಿಶಾಂಪತೇ! ಮಾರಿಷ! ನೊಗಗಳು ತುಂಡಾಗಿದ್ದ ರಥಗಳು, ಕೆಳಗೆ ಬಿದ್ದ ರಥಿಗಳು, ಬಾಣಗಳು, ಒಡೆದ ಕವಚಗಳು, ಪಟ್ಟಿಶ-ಗದೆ-ಮುಸಲಗಳು, ನಿಶಿತ ಶಿಲೀಮುಖಗಳು, ರಥದ ತೋಳುಮರಗಳು, ಮುರಿದಿದ್ದ ಚಕ್ರಗಳು, ಕೈಗಳು, ಬಿಲ್ಲುಗಳು, ಖಡ್ಗಗಳು, ಕುಂಡಲಗಳು, ತಲೆಗಳು, ಕೈಚೀಲಗಳು, ಬೆರಳಿಗೆ ಹಾಕಿಕೊಳ್ಳುವ ಚರ್ಮದ ಸಾಧನಳು, ಕೆಳಕ್ಕೆ ಬಿದ್ದ ಧ್ವಜಗಳು, ಮತ್ತು ತುಂಡಾಗಿದ್ದ ಅನೇಕ ಚಾಪಗಳಿಂದ ರಣಭೂಮಿಯು ತುಂಬಿಹೋಗಿತ್ತು.

06102023a ಹತಾರೋಹಾ ಗಜಾ ರಾಜನ್ ಹಯಾಶ್ಚ ಹತಸಾದಿನಃ।
06102023c ಪರಿಪೇತುರ್ದ್ರುತಂ ತತ್ರ ಶತಶೋಽಥ ಸಹಸ್ರಶಃ।।

ರಾಜನ್! ಏರಿದ್ದವರನ್ನು ಕಳೆದುಕೊಂಡ ಆನೆಗಳು, ಸವಾರರನ್ನು ಕಳೆದುಕೊಂಡ ಕುದುರೆಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಅಲ್ಲಿ ಸತ್ತು ಬಿದ್ದಿದ್ದವು.

06102024a ಯತಮಾನಾಶ್ಚ ತೇ ವೀರಾ ದ್ರವಮಾಣಾನ್ಮಹಾರಥಾನ್।
06102024c ನಾಶಕ್ನುವನ್ವಾರಯಿತುಂ ಭೀಷ್ಮಬಾಣಪ್ರಪೀಡಿತಾನ್।।

ಓಡುತ್ತಿರುವ ಮಹಾರಥರನ್ನು ತಡೆಯಲು ಅವರ ವೀರರು ಎಷ್ಟೇ ಪ್ರಯತ್ನಿಸಿದರೂ ಭೀಷ್ಮನ ಬಾಣಗಳಿಂದ ಪೀಡಿತರಾದ ಅವರನ್ನು ನಿಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ.

06102025a ಮಹೇಂದ್ರಸಮವೀರ್ಯೇಣ ವಧ್ಯಮಾನಾ ಮಹಾಚಮೂಃ।
06102025c ಅಭಜ್ಯತ ಮಹಾರಾಜ ನ ಚ ದ್ವೌ ಸಹ ಧಾವತಃ।।

ಮಹಾರಾಜ! ಮಹೇಂದ್ರನಿಗೆ ಸಮನಾದ ವೀರ್ಯದಿಂದ ವಧಿಸಲ್ಪಟ್ಟಿದ್ದ ಮಹಾಸೇನೆಯು ಸಂಪೂರ್ಣವಾಗಿ ನಾಶವಾಯಿತು. ಇಬ್ಬರು ಒಟ್ಟಾಗಿ ಓಡಿ ಹೋಗಲು ಸಾಧ್ಯವಾಗುತ್ತಿರಲಿಲ್ಲ.

06102026a ಆವಿದ್ಧರಥನಾಗಾಶ್ವಂ ಪತಿತಧ್ವಜಕೂಬರಂ।
06102026c ಅನೀಕಂ ಪಾಂಡುಪುತ್ರಾಣಾಂ ಹಾಹಾಭೂತಮಚೇತನಂ।।

ಹಾಹಾಕಾರ ಮಾಡಿಕೊಂಡು ಚೇತನವನ್ನೇ ಕಳೆದುಕೊಂಡ ಪಾಂಡುಪುತ್ರರ ಸೇನೆಯ ರಥ-ಆನೆ-ಕುದುರೆಗಳನ್ನು ಅವನು ಹೊಡೆದನು ಮತ್ತು ಧ್ವಜ ದಂಡಗಳನ್ನು ಉರುಳಿಸಿದನು.

06102027a ಜಘಾನಾತ್ರ ಪಿತಾ ಪುತ್ರಂ ಪುತ್ರಶ್ಚ ಪಿತರಂ ತಥಾ।
06102027c ಪ್ರಿಯಂ ಸಖಾಯಂ ಚಾಕ್ರಂದೇ ಸಖಾ ದೈವಬಲಾತ್ಕೃತಃ।।

ದೈವಬಲದಿಂದಲೇ ಪ್ರೇರಿತರಾಗಿ ಅಲ್ಲಿ ತಂದೆಯಂದಿರು ಮಕ್ಕಳನ್ನೂ, ಹಾಗೆಯೇ ಮಕ್ಕಳು ತಂದೆಯರನ್ನೂ, ಗೆಳೆಯರು ಗೆಳೆಯರನ್ನೂ ಕರೆದು ಕೊಲ್ಲುತ್ತಿದ್ದರು.

06102028a ವಿಮುಚ್ಯ ಕವಚಾನನ್ಯೇ ಪಾಂಡುಪುತ್ರಸ್ಯ ಸೈನಿಕಾಃ।
06102028c ಪ್ರಕೀರ್ಯ ಕೇಶಾನ್ಧಾವಂತಃ ಪ್ರತ್ಯದೃಶ್ಯಂತ ಭಾರತ।।

ಭಾರತ! ಪಾಂಡುಪುತ್ರನ ಕೆಲವು ಸೈನಿಕರು ಕವಚಗಳನ್ನು ಕಳಚಿ, ಕೂದಲು ಬಿಚ್ಚಿ ಹರಡಿಕೊಂಡು ಓಡಿ ಹೋಗುತ್ತಿರುವುದು ಕಂಡುಬಂದಿತು.

06102029a ತದ್ಗೋಕುಲಮಿವೋದ್ಭ್ರಾಂತಮುದ್ಭ್ರಾಂತರಥಕುಂಜರಂ।
06102029c ದದೃಶೇ ಪಾಂಡುಪುತ್ರಸ್ಯ ಸೈನ್ಯಮಾರ್ತಸ್ವರಂ ತದಾ।।

ಹುಲಿಯನ್ನು ಕಂಡ ಗೋವುಗಳ ಸಮೂಹದಂತೆ ಭ್ರಾಂತವಾಗಿದ್ದ, ತಲೆಕೆಳಗಾದ ಮೂಕಿಗಳ ರಥಗಳಿಂದ ಕೂಡಿದ್ದ ಪಾಂಡುಪುತ್ರನ ಸೈನ್ಯವು ಆರ್ತಸ್ವರದಿಂದ ಕೂಗುತ್ತಿದ್ದುದು ಕಂಡುಬಂದಿತು.

06102030a ಪ್ರಭಜ್ಯಮಾನಂ ಸೈನ್ಯಂ ತು ದೃಷ್ಟ್ವಾ ಯಾದವನಂದನಃ।
06102030c ಉವಾಚ ಪಾರ್ಥಂ ಬೀಭತ್ಸುಂ ನಿಗೃಹ್ಯ ರಥಮುತ್ತಮಂ।।

ಪುಡಿಪುಡಿಯಾದ ಆ ಸೈನ್ಯವನ್ನು ನೋಡಿ ಯಾದವನಂದನನು ಉತ್ತಮ ರಥವನ್ನು ನಿಲ್ಲಿಸಿ ಪಾರ್ಥ ಬೀಭತ್ಸುವಿಗೆ ನುಡಿದನು:

06102031a ಅಯಂ ಸ ಕಾಲಃ ಸಂಪ್ರಾಪ್ತಃ ಪಾರ್ಥ ಯಃ ಕಾಂಕ್ಷಿತಸ್ತವ।
06102031c ಪ್ರಹರಾಸ್ಮೈ ನರವ್ಯಾಘ್ರ ನ ಚೇನ್ಮೋಹಾತ್ಪ್ರಮುಹ್ಯಸೇ।।

“ಪಾರ್ಥ! ಯಾವ ಸಮಯವನ್ನು ನಾವೆಲ್ಲ ಬಯಸಿ ನಿರೀಕ್ಷಿಸಿದ್ದೆವೋ ಆ ಸಮಯವು ಬಂದೊದಗಿದೆ. ನರವ್ಯಾಘ್ರ! ನೀನೀಗ ವ್ಯಾಮೋಹದಿಂದ ಮೋಹಿತನಾಗಿರದೇ ಇದ್ದರೆ ಈಗಲೇ ಭೀಷ್ಮನನ್ನು ಪ್ರಹರಿಸು.

06102032a ಯತ್ಪುರಾ ಕಥಿತಂ ವೀರ ತ್ವಯಾ ರಾಜ್ಞಾಂ ಸಮಾಗಮೇ।
06102032c ವಿರಾಟನಗರೇ ಪಾರ್ಥ ಸಂಜಯಸ್ಯ ಸಮೀಪತಃ।।
06102033a ಭೀಷ್ಮದ್ರೋಣಮುಖಾನ್ಸರ್ವಾನ್ಧಾರ್ತರಾಷ್ಟ್ರಸ್ಯ ಸೈನಿಕಾನ್।
06102033c ಸಾನುಬಂಧಾನ್ ಹನಿಷ್ಯಾಮಿ ಯೇ ಮಾಂ ಯೋತ್ಸ್ಯಂತಿ ಸಂಯುಗೇ।।
06102034a ಇತಿ ತತ್ಕುರು ಕೌಂತೇಯ ಸತ್ಯಂ ವಾಕ್ಯಮರಿಂದಮ।
06102034c ಕ್ಷತ್ರಧರ್ಮಮನುಸ್ಮೃತ್ಯ ಯುಧ್ಯಸ್ವ ಭರತರ್ಷಭ।।

ಪಾರ್ಥ! ಹಿಂದೆ ವಿರಾಟನಗರದಲ್ಲಿ ರಾಜರ ಸಮಾಗಮದಲ್ಲಿ ಸಂಜಯನಿರುವಾಗ “ಭೀಷ್ಮ-ದ್ರೋಣ ಪ್ರಮುಖರಾದ ಧಾರ್ತರಾಷ್ಟ್ರನ ಸೈನಿಕರೆಲ್ಲರನ್ನೂ, ಅವರ ಅನುಯಾಯಿಗಳೊಂದಿಗೆ ಯಾರು ನನ್ನೊಂದಿಗೆ ಸಂಯುಗದಲ್ಲಿ ಯುದ್ಧಮಾಡುತ್ತಾರೋ ಅವರನ್ನು ಸಂಹರಿಸುತ್ತೇನೆ” ಎಂದು ಏನನ್ನು ನೀನು ಹೇಳಿದ್ದೆಯೋ ಆ ವಾಕ್ಯವನ್ನು ಸತ್ಯವನ್ನಾಗಿಸು. ಕೌಂತೇಯ! ಅರಿಂದಮ! ಭರತರ್ಷಭ! ಕ್ಷತ್ರಧರ್ಮವನ್ನು ನೆನಪಿಸಿಕೊಂಡು ಅದರಂತೆ ಯುದ್ಧಮಾಡು!”

06102035a ಇತ್ಯುಕ್ತೋ ವಾಸುದೇವೇನ ತಿರ್ಯಗ್ದೃಷ್ಟಿರಧೋಮುಖಃ।
06102035c ಅಕಾಮ ಇವ ಬೀಭತ್ಸುರಿದಂ ವಚನಮಬ್ರವೀತ್।।

ವಾಸುದೇವನು ಹೀಗೆ ಹೇಳಲು ಮುಖವನ್ನು ಕೆಳಗೆ ಮಾಡಿಕೊಂಡು ಓರೆನೋಟದಿಂದ ಇಚ್ಛೆಯೇ ಇಲ್ಲದವನಂತೆ ಬೀಭತ್ಸುವು ಈ ಮಾತನ್ನಾಡಿದನು:

06102036a ಅವಧ್ಯಾನಾಂ ವಧಂ ಕೃತ್ವಾ ರಾಜ್ಯಂ ವಾ ನರಕೋತ್ತರಂ।
06102036c ದುಃಖಾನಿ ವನವಾಸೇ ವಾ ಕಿಂ ನು ಮೇ ಸುಕೃತಂ ಭವೇತ್।।

“ಅವಧ್ಯರನ್ನು ವಧೆಮಾಡಿ ನರಕಕ್ಕಿಂತಲೂ ನಿಂದ್ಯವಾದ ರಾಜ್ಯವು ಉತ್ತಮವೇ? ವನವಾಸದಲ್ಲಿದ್ದು ದುಃಖವನ್ನು ಅನುಭವಿಸುವುದು ಒಳ್ಳೆಯದೇ?

06102037a ಚೋದಯಾಶ್ವಾನ್ಯತೋ ಭೀಷ್ಮಃ ಕರಿಷ್ಯೇ ವಚನಂ ತವ।
06102037c ಪಾತಯಿಷ್ಯಾಮಿ ದುರ್ಧರ್ಷಂ ವೃದ್ಧಂ ಕುರುಪಿತಾಮಹಂ।।

ಭೀಷ್ಮನೆಲ್ಲಿರುವನೋ ಅಲ್ಲಿಗೆ ಕುದುರೆಗಳನ್ನು ಓಡಿಸು. ನಿನ್ನ ಮಾತಿನಂತೆಯೇ ಮಾಡುತ್ತೇನೆ. ವೃದ್ಧ ಕುರುಪಿತಾಮಹ ದುರ್ಧರ್ಷನನ್ನು ಕೆಡವುತ್ತೇನೆ.”

06102038a ತತೋಽಶ್ವಾನ್ರಜತಪ್ರಖ್ಯಾಂಶ್ಚೋದಯಾಮಾಸ ಮಾಧವಃ।
06102038c ಯತೋ ಭೀಷ್ಮಸ್ತತೋ ರಾಜನ್ದುಷ್ಪ್ರೇಕ್ಷ್ಯೋ ರಶ್ಮಿವಾನಿವ।।

ರಾಜನ್! ಆಗ ಮಾಧವನು ಸೂರ್ಯನಂತೆ ನೋಡಲೂ ಕಷ್ಟನಾಗಿದ್ದ ಭೀಷ್ಮನು ಎಲ್ಲಿದ್ದನೋ ಅಲ್ಲಿಗೆ ಆ ಬೆಳ್ಳಿಯ ಬಣ್ಣದ ಕುದುರೆಗಳನ್ನು ಓಡಿಸಿದನು.

06102039a ತತಸ್ತತ್ಪುನರಾವೃತ್ತಂ ಯುಧಿಷ್ಠಿರಬಲಂ ಮಹತ್।
06102039c ದೃಷ್ಟ್ವಾ ಪಾರ್ಥಂ ಮಹಾಬಾಹುಂ ಭೀಷ್ಮಾಯೋದ್ಯಂತಮಾಹವೇ।।

ಮಹಾಬಾಹು ಪಾರ್ಥನು ಭೀಷ್ಮನನ್ನು ರಣದಲ್ಲಿ ಎದುರಿಸಿ ಬರಲು ಯುಧಿಷ್ಠಿರನ ಮಹಾಸೇನೆಯು ಹಿಂದಿರುಗಿತು.

06102040a ತತೋ ಭೀಷ್ಮಃ ಕುರುಶ್ರೇಷ್ಠಃ ಸಿಂಹವದ್ವಿನದನ್ಮುಹುಃ।
06102040c ಧನಂಜಯರಥಂ ಶೀಘ್ರಂ ಶರವರ್ಷೈರವಾಕಿರತ್।।

ಆಗ ಕುರುಶ್ರೇಷ್ಠ ಭೀಷ್ಮನು ಸಿಂಹದಂತೆ ಪದೇ ಪದೇ ಗರ್ಜಿಸುತ್ತಾ ಶೀಘ್ರದಲ್ಲಿಯೇ ಧನಂಜಯನ ರಥವನ್ನು ಬಾಣಗಳ ಮಳೆಯಿಂದ ಮುಚ್ಚಿದನು.

06102041a ಕ್ಷಣೇನ ಸ ರಥಸ್ತಸ್ಯ ಸಹಯಃ ಸಹಸಾರಥಿಃ।
06102041c ಶರವರ್ಷೇಣ ಮಹತಾ ನ ಪ್ರಾಜ್ಞಾಯತ ಕಿಂ ಚನ।।

ಕ್ಷಣದಲ್ಲಿಯೇ ಆ ಶರವರ್ಷದಿಂದಾಗಿ ಮಹಾ ರಥವಾಗಲೀ, ಸಾರಥಿಯಾಗಲೀ, ರಥದಲ್ಲಿದ್ದವನಾಗಲೀ ಕಾಣಲೇ ಇಲ್ಲ.

06102042a ವಾಸುದೇವಸ್ತ್ವಸಂಭ್ರಾಂತೋ ಧೈರ್ಯಮಾಸ್ಥಾಯ ಸಾತ್ವತಃ।
06102042c ಚೋದಯಾಮಾಸ ತಾನಶ್ವಾನ್ವಿತುನ್ನಾನ್ಭೀಷ್ಮಸಾಯಕೈಃ।।

ಸಾತ್ವತ ವಾಸುದೇವನೂ ಸ್ವಲ್ಪವೂ ಭ್ರಾಂತನಾಗದೇ ಧೈರ್ಯವನ್ನು ತಾಳಿ ಭೀಷ್ಮನ ಸಾಯಕಗಳಿಂದ ತತ್ತರಿಸಿದ ಆ ಕುದುರೆಗಳನ್ನು ಪ್ರಚೋದಿಸಿದನು.

06102043a ತತಃ ಪಾರ್ಥೋ ಧನುರ್ಗೃಹ್ಯ ದಿವ್ಯಂ ಜಲದನಿಸ್ವನಂ।
06102043c ಪಾತಯಾಮಾಸ ಭೀಷ್ಮಸ್ಯ ಧನುಶ್ಚಿತ್ತ್ವಾ ಶಿತೈಃ ಶರೈಃ।।

ಆಗ ಪಾರ್ಥನು ಮೇಘಕ್ಕೆ ಸಮನಾದ ಧ್ವನಿಯುಳ್ಳ ದಿವ್ಯ ಧನುಸ್ಸನ್ನು ಹಿಡಿದು ನಿಶಿತ ಬಾಣಗಳಿಂದ ಭೀಷ್ಮನ ಧನುಸ್ಸನ್ನು ಕತ್ತರಿಸಿ ಬೀಳಿಸಿದನು.

06102044a ಸ ಚ್ಛಿನ್ನಧನ್ವಾ ಕೌರವ್ಯಃ ಪುನರನ್ಯನ್ಮಹದ್ಧನುಃ।
06102044c ನಿಮೇಷಾಂತರಮಾತ್ರೇಣ ಸಜ್ಯಂ ಚಕ್ರೇ ಪಿತಾ ತವ।।

ಧನುಸ್ಸು ತುಂಡಾಗಲು ನಿನ್ನ ತಂದೆ ಕೌರವ್ಯನು ಪುನಃ ಇನ್ನೊಂದು ಮಹಾಧನುಸ್ಸನ್ನು ತೆಗೆದುಕೊಂಡು ನಿಮಿಷಮಾತ್ರದಲ್ಲಿ ಶಿಂಜಿನಿಯನ್ನು ಬಿಗಿದು ಸಜ್ಜು ಗೊಳಿಸಿದನು.

06102045a ವಿಚಕರ್ಷ ತತೋ ದೋರ್ಭ್ಯಾಂ ಧನುರ್ಜಲದನಿಸ್ವನಂ।
06102045c ಅಥಾಸ್ಯ ತದಪಿ ಕ್ರುದ್ಧಶ್ಚಿಚ್ಛೇದ ಧನುರರ್ಜುನಃ।।

ಆಗ ಮೇಘಕ್ಕೆ ಸಮನಾದ ಧ್ವನಿಯುಳ್ಳ ಆ ಧನುಸ್ಸನ್ನು ಎರಡೂ ಕೈಗಳಿಂದ ಸೆಳೆಯಲು ಆ ಧನುಸ್ಸನ್ನೂ ಕೂಡ ಅರ್ಜುನನು ಕ್ರುದ್ಧನಾಗಿ ತುಂಡರಿಸಿದನು.

06102046a ತಸ್ಯ ತತ್ಪೂಜಯಾಮಾಸ ಲಾಘವಂ ಶಂತನೋಃ ಸುತಃ।
06102046c ಸಾಧು ಪಾರ್ಥ ಮಹಾಬಾಹೋ ಸಾಧು ಕುಂತೀಸುತೇತಿ ಚ।।

ಅವನ ಆ ಲಾಘವವನ್ನು ಶಂತನುವಿನ ಮಗನು “ಸಾಧು ಪಾರ್ಥ ಮಹಾಬಾಹೋ! ಸಾಧು ಕುಂತೀಸುತ!” ಎಂದು ಗೌರವಿಸಿದನು.

06102047a ಸಮಾಭಾಷ್ಯೈನಮಪರಂ ಪ್ರಗೃಹ್ಯ ರುಚಿರಂ ಧನುಃ।
06102047c ಮುಮೋಚ ಸಮರೇ ಭೀಷ್ಮಃ ಶರಾನ್ಪಾರ್ಥರಥಂ ಪ್ರತಿ।।

ಹೀಗೆ ಹೇಳಿ ಇನ್ನೊಂದು ಸುಂದರ ಧನುಸ್ಸನ್ನು ತೆಗೆದುಕೊಂಡು ಭೀಷ್ಮನು ಪಾರ್ಥನ ರಥದ ಮೇಲೆ ಶರಗಳನ್ನು ಪ್ರಯೋಗಿಸಿದನು.

06102048a ಅದರ್ಶಯದ್ವಾಸುದೇವೋ ಹಯಯಾನೇ ಪರಂ ಬಲಂ।
06102048c ಮೋಘಾನ್ಕುರ್ವಂ ಶರಾಂಸ್ತಸ್ಯ ಮಂಡಲಾನಿ ವಿದರ್ಶಯನ್।।

ವಾಸುದೇವನು ಅನೇಕ ವಿಧದ ಮಂಡಲಕ್ರಮಗಳಲ್ಲಿ ಕುದುರೆಗಳನ್ನು ತಿರುಗಿಸಿ ಅವನ ಶರಗಳನ್ನು ವ್ಯರ್ಥಗೊಳಿಸಿ ಕುದುರೆ ಓಡಿಸುವುದರಲ್ಲಿ ತನಗಿದ್ದ ಅತ್ಯಂತ ಶಕ್ತಿಯನ್ನು ಪ್ರದರ್ಶಿಸಿದನು.

06102049a ಶುಶುಭಾತೇ ನರವ್ಯಾಘ್ರೌ ಭೀಷ್ಮಪಾರ್ಥೌ ಶರಕ್ಷತೌ।
06102049c ಗೋವೃಷಾವಿವ ಸಂರಬ್ಧೌ ವಿಷಾಣೋಲ್ಲಿಖಿತಾಂಕಿತೌ।।

ಎದುರಾದ ಗೂಳಿಯ ಕೊಂಬುಗಳ ತಿವಿತದಿಂದ ಗಾಯಗೊಂಡು ರೋಷಗೊಂಡ ಎರಡು ಎತ್ತುಗಳಂತೆ ಬಾಣಗಳಿಂದ ಗಾಯಗೊಂಡ ಭೀಷ್ಮ-ಪಾರ್ಥ ನರವ್ಯಾಘ್ರರಿಬ್ಬರೂ ಶೋಭಿಸಿದರು.

06102050a ವಾಸುದೇವಸ್ತು ಸಂಪ್ರೇಕ್ಷ್ಯ ಪಾರ್ಥಸ್ಯ ಮೃದುಯುದ್ಧತಾಂ।
06102050c ಭೀಷ್ಮಂ ಚ ಶರವರ್ಷಾಣಿ ಸೃಜಂತಮನಿಶಂ ಯುಧಿ।।
06102051a ಪ್ರತಪಂತಮಿವಾದಿತ್ಯಂ ಮಧ್ಯಮಾಸಾದ್ಯ ಸೇನಯೋಃ।
06102051c ವರಾನ್ವರಾನ್ವಿನಿಘ್ನಂತಂ ಪಾಂಡುಪುತ್ರಸ್ಯ ಸೈನಿಕಾನ್।।
06102052a ಯುಗಾಂತಮಿವ ಕುರ್ವಾಣಂ ಭೀಷ್ಮಂ ಯೌಧಿಷ್ಠಿರೇ ಬಲೇ।
06102052c ನಾಮೃಷ್ಯತ ಮಹಾಬಾಹುರ್ಮಾಧವಃ ಪರವೀರಹಾ।।

ಪಾರ್ಥನು ಮೃದುವಾಗಿ ಯುದ್ಧ ಮಾಡುತ್ತಿರುವುದನ್ನೂ, ಯುದ್ಧದಲ್ಲಿ ನಿಲುಗಡೆಯಿಲ್ಲದೇ ಬಾಣಗಳ ಮಳೆಯನ್ನು ಸುರಿಸುತ್ತಿರುವ ಭೀಷ್ಮನನ್ನೂ, ಎರಡೂ ಸೇನೆಗಳ ಮಧ್ಯೆ ಸುಡುತ್ತಿರುವ ಆದಿತ್ಯನಂತೆ ಪಾಂಡುಪುತ್ರರ ಸೈನಿಕರನ್ನು ಆಯ್ದು ಆಯ್ದು ಸಂಹರಿಸತ್ತಿದ್ದ, ಯುಧಿಷ್ಠಿರನ ಸೇನೆಯನ್ನು ಯುಗಾಂತನಂತೆ ಮಾಡುತ್ತಿದ್ದ ಭೀಷ್ಮನನ್ನು ನೋಡಿ ಮಹಾಬಾಹು, ಮಾಧವ, ಪರವೀರಹ ವಾಸುದೇವನು ಸಹಿಸಲಾರದೇ ಹೋದನು.

06102053a ಉತ್ಸೃಜ್ಯ ರಜತಪ್ರಖ್ಯಾನ್ ಹಯಾನ್ಪಾರ್ಥಸ್ಯ ಮಾರಿಷ।
06102053c ಕ್ರುದ್ಧೋ ನಾಮ ಮಹಾಯೋಗೀ ಪ್ರಚಸ್ಕಂದ ಮಹಾರಥಾತ್।
06102053e ಅಭಿದುದ್ರಾವ ಭೀಷ್ಮಂ ಸ ಭುಜಪ್ರಹರಣೋ ಬಲೀ।।
06102054a ಪ್ರತೋದಪಾಣಿಸ್ತೇಜಸ್ವೀ ಸಿಂಹವದ್ವಿನದನ್ಮುಹುಃ।
06102054c ದಾರಯನ್ನಿವ ಪದ್ಭ್ಯಾಂ ಸ ಜಗತೀಂ ಜಗತೀಶ್ವರಃ।।
06102055a ಕ್ರೋಧತಾಮ್ರೇಕ್ಷಣಃ ಕೃಷ್ಣೋ ಜಿಘಾಂಸುರಮಿತದ್ಯುತಿಃ।
06102055c ಗ್ರಸನ್ನಿವ ಚ ಚೇತಾಂಸಿ ತಾವಕಾನಾಂ ಮಹಾಹವೇ।।

ಮಾರಿಷ! ಆಗ ಪಾರ್ಥನ ಬೆಳ್ಳಿಯ ಬಣ್ಣದ ಕುದುರೆಗಳ ಕಡಿವಾಣಗಳನ್ನು ಬಿಸುಟು ಕ್ರುದ್ಧನಾದ ಆ ಮಹಾಯೋಗಿಯು ಮಹಾರಥದಿಂದ ದುಮುಕಿದನು. ಭುಜಗಳನ್ನೇ ಆಯುಧಗಳನ್ನಾಗಿರಿಸಿಕೊಂಡ ಆ ಬಲಶಾಲಿ ಜಗತೀಶ್ವರ ಅಮಿತದ್ಯುತಿ ಕೃಷ್ಣನು ಚಾವಟಿಯನ್ನೇ ಕೈಯಲ್ಲಿ ಹಿಡಿದು ಪುನಃ ಪುನಃ ಸಿಂಹನಾದ ಗೈಯುತ್ತಾ, ಹೆಜ್ಜೆಗಳಿಂದ ಜಗತ್ತನ್ನೇ ಸೀಳಿ ಬಿಡುವಂತೆ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು, ಮಹಾಹವದಲ್ಲಿ ನಿನ್ನವರ ಚೇತನಗಳನ್ನು ಸೆಳೆದುಕೊಳ್ಳುವನೋ ಎನ್ನುವಂತೆ ಕೊಲ್ಲಬೇಕೆಂದು ಭೀಷ್ಮನ ಕಡೆಗೆ ಓಡಿದನು.

06102056a ದೃಷ್ಟ್ವಾ ಮಾಧವಮಾಕ್ರಂದೇ ಭೀಷ್ಮಾಯೋದ್ಯಂತಮಾಹವೇ।
06102056c ಹತೋ ಭೀಷ್ಮೋ ಹತೋ ಭೀಷ್ಮ ಇತಿ ತತ್ರ ಸ್ಮ ಸೈನಿಕಾಃ।।
06102056e ಕ್ರೋಶಂತಃ ಪ್ರಾದ್ರವನ್ಸರ್ವೇ ವಾಸುದೇವಭಯಾನ್ನರಾಃ।।

ಗರ್ಜಿಸುತ್ತಾ ಭೀಷ್ಮನ ಕಡೆ ಬರುತ್ತಿದ್ದ ಮಾಧವನನ್ನು ನೋಡಿ “ಆಹವದಲ್ಲಿ ಭೀಷ್ಮನು ಹತನಾದನು! ಭೀಷ್ಮನು ಹತನಾದನು!” ಎಂದು ಅಲ್ಲಿದ್ದ ಸೈನಿಕರು ಕೂಗಿಕೊಂಡು ಎಲ್ಲರೂ ವಾಸುದೇವನ ಭಯದಿಂದ ಓಡಿಹೋದರು.

06102057a ಪೀತಕೌಶೇಯಸಂವೀತೋ ಮಣಿಶ್ಯಾಮೋ ಜನಾರ್ದನಃ।
06102057c ಶುಶುಭೇ ವಿದ್ರವನ್ಭೀಷ್ಮಂ ವಿದ್ಯುನ್ಮಾಲೀ ಯಥಾಂಬುದಃ।।

ಪೀತಕೌಶೇಯಗಳನ್ನು ಧರಿಸಿದ್ದ ಮಣಿಶ್ಯಾಮ ಜನಾರ್ದನನು ಭೀಷ್ಮನೆಡೆಗೆ ಓಡಿ ಬರುವಾಗ ಮಿಂಚಿನ ಮಾಲೆಯನ್ನು ಧರಿಸಿದ್ದ ಕಪ್ಪು ಮೋಡದಂತೆ ಶೋಭಿಸಿದನು.

06102058a ಸ ಸಿಂಹ ಇವ ಮಾತಂಗಂ ಯೂಥರ್ಷಭ ಇವರ್ಷಭಂ।
06102058c ಅಭಿದುದ್ರಾವ ತೇಜಸ್ವೀ ವಿನದನ್ಯಾದವರ್ಷಭಃ।।

ಸಿಂಹವು ಮದಗಜವನ್ನು ಅಟ್ಟಿಸಿಕೊಂಡು ಹೋಗುವಂತೆ, ಪಡೆಯ ಹೋರಿಯು ಗೂಳಿಯನ್ನು ಅಟ್ಟಿಸಿಕೊಂಡು ಹೋಗುವಂತೆ ಆ ತೇಜಸ್ವಿ ಯಾದವರ್ಷಭನು ಗರ್ಜಿಸುತ್ತಾ ಓಡಿ ಬಂದನು.

06102059a ತಮಾಪತಂತಂ ಸಂಪ್ರೇಕ್ಷ್ಯ ಪುಂಡರೀಕಾಕ್ಷಮಾಹವೇ।
06102059c ಅಸಂಭ್ರಮಂ ರಣೇ ಭೀಷ್ಮೋ ವಿಚಕರ್ಷ ಮಹದ್ಧನುಃ।
06102059e ಉವಾಚ ಚೈನಂ ಗೋವಿಂದಮಸಂಭ್ರಾಂತೇನ ಚೇತಸಾ।।

ಆಹವದಲ್ಲಿ ತನ್ನ ಕಡೆ ಧಾವಿಸಿ ಬರುತ್ತಿದ್ದ ಪುಂಡರೀಕಾಕ್ಷನನ್ನು ನೋಡಿ ರಣದಲ್ಲಿ ಭೀಷ್ಮನು ಗಾಬರಿ ಗೊಳ್ಳಲಿಲ್ಲ. ಮಹಾಧನುಸ್ಸನ್ನು ಸೆಳೆದು ಭ್ರಾಂತಿಗೊಂಡಿರದ ಚೇತಸ್ಸಿನಿಂದ ಗೋವಿಂದನಿಗೆ ಇದನ್ನು ನುಡಿದನು:

06102060a ಏಹ್ಯೇಹಿ ಪುಂಡರೀಕಾಕ್ಷ ದೇವದೇವ ನಮೋಽಸ್ತು ತೇ।
06102060c ಮಾಮದ್ಯ ಸಾತ್ವತಶ್ರೇಷ್ಠ ಪಾತಯಸ್ವ ಮಹಾಹವೇ।।

“ಬಾ! ಬಾ! ಪುಂಡರೀಕಾಕ್ಷ! ದೇವದೇವ! ನಿನಗೆ ವಂದನೆಗಳು. ಸಾತ್ವತಶ್ರೇಷ್ಠ! ಇಂದು ಈ ಮಹಾಹವದಲ್ಲಿ ನನ್ನನ್ನು ಸಂಹರಿಸು!

06102061a ತ್ವಯಾ ಹಿ ದೇವ ಸಂಗ್ರಾಮೇ ಹತಸ್ಯಾಪಿ ಮಮಾನಘ।
06102061c ಶ್ರೇಯ ಏವ ಪರಂ ಕೃಷ್ಣ ಲೋಕೇಽಮುಷ್ಮಿನ್ನಿಹೈವ ಚ।।
06102061e ಸಂಭಾವಿತೋಽಸ್ಮಿ ಗೋವಿಂದ ತ್ರೈಲೋಕ್ಯೇನಾದ್ಯ ಸಂಯುಗೇ।।

ದೇವ! ಅನಘ! ನಿನ್ನಿಂದ ನಾನು ಸಂಗ್ರಾಮದಲ್ಲಿ ಹತನಾದರೂ ನನಗೆ ಲೋಕದಲ್ಲಿ ಪರಮ ಕಲ್ಯಾಣವೇ ದೊರೆಯುತ್ತದೆ. ಗೋವಿಂದ! ಇಂದು ನಾನು ಸಂಯುಗಲ್ಲಿ ಮೂರು ಲೋಕಗಳಲ್ಲಿಯೂ ಸಂಭಾವಿತನಾಗಿದ್ದೇನೆ.”

06102062a ಅನ್ವಗೇವ ತತಃ ಪಾರ್ಥಸ್ತಮನುದ್ರುತ್ಯ ಕೇಶವಂ।
06102062c ನಿಜಗ್ರಾಹ ಮಹಾಬಾಹುರ್ಬಾಹುಭ್ಯಾಂ ಪರಿಗೃಹ್ಯ ವೈ।।

ಅವನ ಹಿಂದೆ ಓಡಿ ಬರುತ್ತಿದ್ದ ಮಹಾಬಾಹು ಪಾರ್ಥನು ಕೇಶವನನ್ನು ಎರಡೂ ಕೈಗಳಿಂದ ಹಿಡಿದುಕೊಂಡನು.

06102063a ನಿಗೃಹ್ಯಮಾಣಃ ಪಾರ್ಥೇನ ಕೃಷ್ಣೋ ರಾಜೀವಲೋಚನಃ।
06102063c ಜಗಾಮ ಚೈನಮಾದಾಯ ವೇಗೇನ ಪುರುಷೋತ್ತಮಃ।।

ಪಾರ್ಥನು ಹಿಡಿದುಕೊಂಡರೂ ಪುರುಷೋತ್ತಮ ರಾಜೀವಲೋಚನ ಕೃಷ್ಣನು ಅವನನ್ನೂ ಎಳೆದುಕೊಂಡು ವೇಗವಾಗಿ ಮುಂದಾದನು.

06102064a ಪಾರ್ಥಸ್ತು ವಿಷ್ಟಭ್ಯ ಬಲಾಚ್ಚರಣೌ ಪರವೀರಹಾ।
06102064c ನಿಜಘ್ರಾಹ ಹೃಷೀಕೇಶಂ ಕಥಂ ಚಿದ್ದಶಮೇ ಪದೇ।।

ಪರವೀರಹ ಪಾರ್ಥನು ಬಲವಾಗಿ ಅವನ ಚರಣಗಳನ್ನು ಹಿಡಿದುಕೊಂಡರೂ ಹೃಷೀಕೇಶನು ಸುಮಾರು ಹತ್ತು ಹೆಜ್ಜೆಗಳಷ್ಟು ಹೋಗಿಬಿಟ್ಟಿದ್ದನು.

06102065a ತತ ಏನಮುವಾಚಾರ್ತಃ ಕ್ರೋಧಪರ್ಯಾಕುಲೇಕ್ಷಣಂ।
06102065c ನಿಃಶ್ವಸಂತಂ ಯಥಾ ನಾಗಮರ್ಜುನಃ ಪರವೀರಹಾ।।

ಆಗ ಪರವೀರಹ ಅರ್ಜುನನು ಆರ್ತನಾಗಿ, ಕಣ್ಣುಗಳು ಕ್ರೋಧದಿಂದ ಕೂಡಿದವನಾಗಿ, ನಾಗರ ಹಾವಿನಂತೆ ದೀರ್ಘ ನಿಟ್ಟುಸಿರು ಬಿಡುತ್ತಾ ಈ ಮಾತನ್ನಾಡಿದನು:

06102066a ನಿವರ್ತಸ್ವ ಮಹಾಬಾಹೋ ನಾನೃತಂ ಕರ್ತುಮರ್ಹಸಿ।
06102066c ಯತ್ತ್ವಯಾ ಕಥಿತಂ ಪೂರ್ವಂ ನ ಯೋತ್ಸ್ಯಾಮೀತಿ ಕೇಶವ।।

“ಮಹಾಬಾಹೋ! ಹಿಂದಿರುಗು! ಕೇಶವ! ಹಿಂದೆ ನೀನು ಯುದ್ಧ ಮಾಡುವುದಿಲ್ಲವೆಂದು ಏನು ಹೇಳಿದ್ದೆಯೋ ಅದನ್ನು ಸುಳ್ಳಾಗಿಸಬಾರದು.

06102067a ಮಿಥ್ಯಾವಾದೀತಿ ಲೋಕಸ್ತ್ವಾಂ ಕಥಯಿಷ್ಯತಿ ಮಾಧವ।
06102067c ಮಮೈಷ ಭಾರಃ ಸರ್ವೋ ಹಿ ಹನಿಷ್ಯಾಮಿ ಯತವ್ರತಂ।।

ಮಾಧವ! ನಿನ್ನನ್ನು ಜನರು ಸುಳ್ಳುಬುರುಕ ಎಂದು ಕರೆಯುತ್ತಾರೆ. ಯುದ್ಧಮಾಡುವ ಸಂಪೂರ್ಣ ಭಾರವೂ ನನ್ನದು. ಈ ಯತವ್ರತನನ್ನು ನಾನು ಸಂಹರಿಸುತ್ತೇನೆ.

06102068a ಶಪೇ ಮಾಧವ ಸಖ್ಯೇನ ಸತ್ಯೇನ ಸುಕೃತೇನ ಚ।
06102068c ಅಂತಂ ಯಥಾ ಗಮಿಷ್ಯಾಮಿ ಶತ್ರೂಣಾಂ ಶತ್ರುಕರ್ಶನ।।

ಮಾಧವ! ಇದನ್ನು ನಾನು ಸಖ್ಯ, ಸತ್ಯ ಮತ್ತು ಸುಕೃತಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ಶತ್ರುಸೂದನ! ನಾನು ಎಲ್ಲ ಶತ್ರುಗಳನ್ನೂ ಕೊನೆಗಾಣಿಸುತ್ತೇನೆ.

06102069a ಅದ್ಯೈವ ಪಶ್ಯ ದುರ್ಧರ್ಷಂ ಪಾತ್ಯಮಾನಂ ಮಹಾವ್ರತಂ।
06102069c ತಾರಾಪತಿಮಿವಾಪೂರ್ಣಮಂತಕಾಲೇ ಯದೃಚ್ಛಯಾ।।

ಪೂರ್ಣಚಂದ್ರನಂತಿರುವ ಈ ದುರ್ಧರ್ಷ ಮಹಾವ್ರತನನ್ನು ಇಂದೇ ಅವನ ಇಚ್ಛೆಯಂತೆಯೇ ಸಂಹಾರಮಾಡುವುದನ್ನು ನೀನು ಕಾಣುವೆ.”

06102070a ಮಾಧವಸ್ತು ವಚಃ ಶ್ರುತ್ವಾ ಫಲ್ಗುನಸ್ಯ ಮಹಾತ್ಮನಃ।
06102070c ನಕಿಂಚಿದುಕ್ತ್ವಾ ಸಕ್ರೋಧ ಆರುರೋಹ ರಥಂ ಪುನಃ।।

ಮಹಾತ್ಮ ಮಾಧವನಾದರೋ ಫಲ್ಗುನನ ಮಾತನ್ನು ಕೇಳಿ ಏನನ್ನೂ ಹೇಳದೇ ಸಿಟ್ಟಿನಿಂದ ಪುನಃ ರಥವನ್ನೇರಿದನು.

06102071a ತೌ ರಥಸ್ಥೌ ನರವ್ಯಾಘ್ರೌ ಭೀಷ್ಮಃ ಶಾಂತನವಃ ಪುನಃ।
06102071c ವವರ್ಷ ಶರವರ್ಷೇಣ ಮೇಘೋ ವೃಷ್ಟ್ಯಾ ಯಥಾಚಲೌ।।

ಅವರಿಬ್ಬರೂ ನರವ್ಯಾಘ್ರರು ರಥದಲ್ಲಿ ಕುಳಿತುಕೊಳ್ಳಲು ಭೀಷ್ಮ ಶಾಂತನವನು ಪುನಃ ಅವರ ಮೇಲೆ ಮೋಡವು ಪರ್ವತದ ಮೇಲೆ ಸುರಿಸುವಂತೆ ಬಾಣಗಳ ಮಳೆಯನ್ನು ಸುರಿಸಿದನು.

06102072a ಪ್ರಾಣಾಂಶ್ಚಾದತ್ತ ಯೋಧಾನಾಂ ಪಿತಾ ದೇವವ್ರತಸ್ತವ।
06102072c ಗಭಸ್ತಿಭಿರಿವಾದಿತ್ಯಸ್ತೇಜಾಂಸಿ ಶಿಶಿರಾತ್ಯಯೇ।।

ಗಭಸ್ತಿ ಆದಿತ್ಯನು ಶಿಶಿರ ಋತುವಿನಲ್ಲಿ ತೇಜಸ್ಸುಗಳನ್ನು ಹೀರಿಕೊಳ್ಳುವಂತೆ ನಿನ್ನ ಪಿತ ದೇವವ್ರತನು ಯೋಧರ ಪ್ರಾಣಗಳನ್ನು ತೆಗೆದುಕೊಂಡನು.

06102073a ಯಥಾ ಕುರೂಣಾಂ ಸೈನ್ಯಾನಿ ಬಭಂಜ ಯುಧಿ ಪಾಂಡವಃ।
06102073c ತಥಾ ಪಾಂಡವಸೈನ್ಯಾನಿ ಬಭಂಜ ಯುಧಿ ತೇ ಪಿತಾ।।

ಯುದ್ಧದಲ್ಲಿ ಕುರುಗಳ ಸೇನೆಯನ್ನು ಪಾಂಡವ ಅರ್ಜುನನು ಹೇಗೆ ಸದೆಬಡಿದನೋ ಹಾಗೆ ನಿನ್ನ ತಂದೆಯೂ ಕೂಡ ಪಾಂಡವ ಸೇನೆಗಳನ್ನು ಯುದ್ಧದಲ್ಲಿ ಸದೆಬಡಿದನು.

06102074a ಹತವಿದ್ರುತಸೈನ್ಯಾಸ್ತು ನಿರುತ್ಸಾಹಾ ವಿಚೇತಸಃ।
06102074c ನಿರೀಕ್ಷಿತುಂ ನ ಶೇಕುಸ್ತೇ ಭೀಷ್ಮಮಪ್ರತಿಮಂ ರಣೇ।।
06102074e ಮಧ್ಯಂ ಗತಮಿವಾದಿತ್ಯಂ ಪ್ರತಪಂತಂ ಸ್ವತೇಜಸಾ।।

ಹತರಾಗಿ, ನಿರುತ್ಸಾಹರಾಗಿ, ವಿಚೇತಸರಾಗಿ ಸೇನೆಗಳು ರಣದಲ್ಲಿ ಮಧ್ಯಾಹ್ನದ ಸೂರ್ಯನಂತೆ ತನ್ನದೇ ತೇಜಸ್ಸಿನಿಂದ ಉರಿಯುತ್ತಿದ್ದ ಅಪ್ರತಿಮ ಭೀಷ್ಮನನ್ನು ನೋಡಲೂ ಶಕ್ಯರಾಗಲಿಲ್ಲ.

06102075a ತೇ ವಧ್ಯಮಾನಾ ಭೀಷ್ಮೇಣ ಕಾಲೇನೇವ ಯುಗಕ್ಷಯೇ।
06102075c ವೀಕ್ಷಾಂ ಚಕ್ರುರ್ಮಹಾರಾಜ ಪಾಂಡವಾ ಭಯಪೀಡಿತಾಃ।।

ಮಹಾರಾಜ! ಭೀಷ್ಮನು ಯುಗಕ್ಷಯದಲ್ಲಿನ ಕಾಲನಂತೆ ಅವರನ್ನು ವಧಿಸುತ್ತಿದ್ದುದನ್ನು ನೋಡಿ ಪಾಂಡವರು ಭಯಪೀಡಿತರಾದರು.

06102076a ತ್ರಾತಾರಂ ನಾಧ್ಯಗಚ್ಛಂತ ಗಾವಃ ಪಂಕಗತಾ ಇವ।
06102076c ಪಿಪೀಲಿಕಾ ಇವ ಕ್ಷುಣ್ಣಾ ದುರ್ಬಲಾ ಬಲಿನಾ ರಣೇ।।

ಕೆಸರಿನಲ್ಲಿ ಸಿಲುಕಿಕೊಂಡಿದ್ದ ಗೋವುಗಳಂತೆ ತ್ರಾತಾರರನ್ನು ಕಾಣದೇ ಆ ಬಲಿಗಳು ರಣದಲ್ಲಿ ಪಿಪೀಲಿಕಗಳಂತೆ ದುರ್ಬಲರೂ ಕ್ಷುಣ್ಣರೂ ಆದರು.

06102077a ಮಹಾರಥಂ ಭಾರತ ದುಷ್ಪ್ರಧರ್ಷಂ ಶರೌಘಿಣಂ ಪ್ರತಪಂತಂ ನರೇಂದ್ರಾನ್।
06102077c ಭೀಷ್ಮಂ ನ ಶೇಕುಃ ಪ್ರತಿವೀಕ್ಷಿತುಂ ತೇ ಶರಾರ್ಚಿಷಂ ಸೂರ್ಯಮಿವಾತಪಂತಂ।।

ಭಾರತ! ಮಹಾರಥ, ದುಷ್ಪ್ರಧರ್ಷ, ಶರೌಘಗಳಿಂದ ನರೇಂದ್ರರನ್ನು ಸುಡುತ್ತಿದ್ದ, ಶರಗಳೇ ಕಿರಣಗಳಾಗಿರುವ ಸೂರ್ಯನಂತೆ ಸುಡುತ್ತಿದ್ದ ಆ ಭೀಷ್ಮನನ್ನು ನೋಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.

06102078a ವಿಮೃದ್ನತಸ್ತಸ್ಯ ತು ಪಾಂಡುಸೇನಾಂ ಅಸ್ತಂ ಜಗಾಮಾಥ ಸಹಸ್ರರಶ್ಮಿಃ।
06102078c ತತೋ ಬಲಾನಾಂ ಶ್ರಮಕರ್ಶಿತಾನಾಂ ಮನೋಽವಹಾರಂ ಪ್ರತಿ ಸಂಬಭೂವ।।

ಅವನು ಹೀಗೆ ಪಾಂಡುಸೇನೆಯನ್ನು ಮರ್ದಿಸುತ್ತಿರಲು ಸಹಸ್ರರಶ್ಮಿ ಸೂರ್ಯನು ಅಸ್ತನಾದನು. ಆಗ ಆಯಾಸಗೊಂಡಿರುವ ಸೇನೆಗಳಿಗೆ ಹಿಂದೆಸರಿಯುವ ಕುರಿತು ಮನಸ್ಸು ಮಾಡಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ನವಮದಿವಸಯುದ್ಧಸಮಾಪ್ತೌ ದ್ವಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ನವಮದಿವಸಯುದ್ಧಸಮಾಪ್ತಿ ಎನ್ನುವ ನೂರಾಎರಡನೇ ಅಧ್ಯಾಯವು.