ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 101
ಸಾರ
ದುಃಶಾಸನನಿಗೆ ಭೀಷ್ಮನನ್ನು ರಕ್ಷಿಸಲು ಹೇಳಿ ದುರ್ಯೋಧನನು ಶಕುನಿಯ ಒಂದುಲಕ್ಷ ಕುದುರೆಗಳ ಅಶ್ವಸೇನೆಯಿಂದ ಪಾಂಡವರ ಮೇಲೆ ಆಕ್ರಮಣ ಮಾಡಿಸಿದುದು (1-15). ಯುಧಿಷ್ಠಿರ-ಮಾದ್ರೀಪುತ್ರರು ಆ ಅಶ್ವಸೇನೆಯನ್ನು ಧ್ವಂಸಗೊಳಿಸಿದುದು (16-24). ಯುಧಿಷ್ಠಿರ-ಮಾದ್ರೀಪುತ್ರರು ಶಲ್ಯನ ಸೇನೆಯೊಂದಿಗೆ ಯುದ್ಧಮಾಡಿದುದು (25-33).
06101001 ಸಂಜಯ ಉವಾಚ।
06101001a ದೃಷ್ಟ್ವಾ ಭೀಷ್ಮಂ ರಣೇ ಕ್ರುದ್ಧಂ ಪಾಂಡವೈರಭಿಸಂವೃತಂ।
06101001c ಯಥಾ ಮೇಘೈರ್ಮಹಾರಾಜ ತಪಾಂತೇ ದಿವಿ ಭಾಸ್ಕರಂ।।
06101002a ದುರ್ಯೋಧನೋ ಮಹಾರಾಜ ದುಃಶಾಸನಮಭಾಷತ।
06101002c ಏಷ ಶೂರೋ ಮಹೇಷ್ವಾಸೋ ಭೀಷ್ಮಃ ಶತ್ರುನಿಷೂದನಃ।।
06101003a ಚಾದಿತಃ ಪಾಂಡವೈಃ ಶೂರೈಃ ಸಮಂತಾದ್ಭರತರ್ಷಭ।
06101003c ತಸ್ಯ ಕಾರ್ಯಂ ತ್ವಯಾ ವೀರ ರಕ್ಷಣಂ ಸುಮಹಾತ್ಮನಃ।।
ಸಂಜಯನು ಹೇಳಿದನು: “ಮಹಾರಾಜ! ಆಕಾಶದಲ್ಲಿ ಬೇಸಗೆಯ ಕೊನೆಯಲ್ಲಿ ಮೋಡಗಳು ಭಾಸ್ಕರನನ್ನು ಹೇಗೋ ಹಾಗೆ ರಣದಲ್ಲಿ ಪಾಂಡವರು ಭೀಷ್ಮನನ್ನು ಮುತ್ತಿಕೊಂಡಿರುವುದನ್ನು ನೋಡಿ ಕ್ರುದ್ಧನಾದ ದುರ್ಯೋಧನನು ದುಃಶಾಸನನಿಗೆ ಹೇಳಿದನು: “ಭರತರ್ಷಭ! ಈ ಶೂರ ಮಹೇಷ್ವಾಸ ಶತ್ರುನಿಶೂದನ ಭೀಷ್ಮನನ್ನು ಶೂರ ಪಾಂಡವರು ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಿದ್ದಾರೆ. ವೀರ! ಆ ಸುಮಹಾತ್ಮನ ರಕ್ಷಣೆಯ ಕಾರ್ಯವು ನಿನ್ನದು.
06101004a ರಕ್ಷ್ಯಮಾಣೋ ಹಿ ಸಮರೇ ಭೀಷ್ಮೋಽಸ್ಮಾಕಂ ಪಿತಾಮಹಃ।
06101004c ನಿಹನ್ಯಾತ್ಸಮರೇ ಯತ್ತಾನ್ಪಾಂಚಾಲಾನ್ಪಾಂಡವೈಃ ಸಹ।।
ಏಕೆಂದರೆ ಸಮರದಲ್ಲಿ ನಮ್ಮನ್ನು ರಕ್ಷಿಸುತ್ತಿರುವ ಪಿತಾಮಹನನ್ನು ಸಂಹರಿಸಲು ಪಾಂಡವರೊಂದಿಗೆ ಪಾಂಚಾಲರು ಪ್ರಯತ್ನಿಸುತ್ತಿದ್ದಾರೆ.
06101005a ತತ್ರ ಕಾರ್ಯಮಹಂ ಮನ್ಯೇ ಭೀಷ್ಮಸ್ಯೈವಾಭಿರಕ್ಷಣಂ।
06101005c ಗೋಪ್ತಾ ಹ್ಯೇಷ ಮಹೇಷ್ವಾಸೋ ಭೀಷ್ಮೋಽಸ್ಮಾಕಂ ಪಿತಾಮಹಃ।।
ಅಲ್ಲಿ ಭೀಷ್ಮನನ್ನು ರಕ್ಷಿಸುವುದೇ ಕಾರ್ಯವೆಂದು ನನಗನ್ನಿಸುತ್ತಿದೆ. ಈ ಮಹೇಷ್ವಾಸ ಭೀಷ್ಮ ಪಿತಾಮಹನೇ ನಮ್ಮ ರಕ್ಷಕ.
06101006a ಸ ಭವಾನ್ಸರ್ವಸೈನ್ಯೇನ ಪರಿವಾರ್ಯ ಪಿತಾಮಹಂ।
06101006c ಸಮರೇ ದುಷ್ಕರಂ ಕರ್ಮ ಕುರ್ವಾಣಂ ಪರಿರಕ್ಷತು।।
ನೀನು ಸರ್ವಸೇನೆಗಳೊಂದಿಗೆ ಪಿತಾಮಹನನ್ನು ಸುತ್ತುವರೆದು ಸಮರದಲ್ಲಿ ಅವನನ್ನು ರಕ್ಷಿಸುವ ದುಷ್ಕರ ಕೆಲಸವನ್ನು ಮಾಡಬೇಕು.”
06101007a ಏವಮುಕ್ತಸ್ತು ಸಮರೇ ಪುತ್ರೋ ದುಃಶಾಸನಸ್ತವ।
06101007c ಪರಿವಾರ್ಯ ಸ್ಥಿತೋ ಭೀಷ್ಮಂ ಸೈನ್ಯೇನ ಮಹತಾ ವೃತಃ।।
ಸಮರದಲ್ಲಿ ಇದನ್ನು ಕೇಳಿ ನಿನ್ನ ಮಗ ದುಃಶಾಸನನು ಮಹಾ ಸೇನೆಯೊಂದಿಗೆ ಆವೃತನಾಗಿ ಭೀಷ್ಮನನ್ನು ಸುತ್ತುವರೆದು ನಿಂತನು.
06101008a ತತಃ ಶತಸಹಸ್ರೇಣ ಹಯಾನಾಂ ಸುಬಲಾತ್ಮಜಃ।
06101008c ವಿಮಲಪ್ರಾಸಹಸ್ತಾನಾಂ ಋಷ್ಟಿತೋಮರಧಾರಿಣಾಂ।।
06101009a ದರ್ಪಿತಾನಾಂ ಸುವೇಗಾನಾಂ ಬಲಸ್ಥಾನಾಂ ಪತಾಕಿನಾಂ।
06101009c ಶಿಕ್ಷಿತೈರ್ಯುದ್ಧಕುಶಲೈರುಪೇತಾನಾಂ ನರೋತ್ತಮೈಃ।।
06101010a ನಕುಲಂ ಸಹದೇವಂ ಚ ಧರ್ಮರಾಜಂ ಚ ಪಾಂಡವಂ।
06101010c ನ್ಯವಾರಯನ್ನರಶ್ರೇಷ್ಠಂ ಪರಿವಾರ್ಯ ಸಮಂತತಃ।।
ಆಗ ಸುಬಲಾತ್ಮಜನು ಒಂದು ಲಕ್ಷ ಕುದುರೆಗಳಿದ್ದ, ಹೊಳೆಯುತ್ತಿರುವ ಪ್ರಾಸಗಳನ್ನು ಹಿಡಿದಿದ್ದ, ಋಷ್ಟಿ-ತೋಮರ ಧಾರಿಗಳ, ದರ್ಪಿತರಾದ, ಒಳ್ಳೆಯ ವೇಗವುಳ್ಳ, ಪ್ರಬಲರಾಗಿರುವ, ಪತಾಕೆಗಳಿಂದ ಕೂಡಿದ, ಯುದ್ಧದಲ್ಲಿ ತರಬೇತಿ ಹೊಂದಿ ಕುಶಲರಾಗಿರುವ ನರೋತ್ತಮರೊಡಗೂಡಿ ನಕುಲ, ಸಹದೇವ, ಮತ್ತು ನರಶ್ರೇಷ್ಠ ಪಾಂಡವ ಧರ್ಮರಾಜನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ತಡೆದು ನಿಲ್ಲಿಸಿದನು.
06101011a ತತೋ ದುರ್ಯೋಧನೋ ರಾಜಾ ಶೂರಾಣಾಂ ಹಯಸಾದಿನಾಂ।
06101011c ಅಯುತಂ ಪ್ರೇಷಯಾಮಾಸ ಪಾಂಡವಾನಾಂ ನಿವಾರಣೇ।।
ಆಗ ರಾಜಾ ದುರ್ಯೋಧನನು ಪಾಂಡವರನ್ನು ನಿವಾರಿಸಲು ಹತ್ತುಸಾವಿರ ಶೂರ ಅಶ್ವಾರೋಹಿಗಳನ್ನು ಕಳುಹಿಸಿಕೊಟ್ಟನು.
06101012a ತೈಃ ಪ್ರವಿಷ್ಟೈರ್ಮಹಾವೇಗೈರ್ಗರುತ್ಮದ್ಭಿರಿವಾಹವೇ।
06101012c ಖುರಾಹತಾ ಧರಾ ರಾಜಂಶ್ಚಕಂಪೇ ಚ ನನಾದ ಚ।।
ರಾಜನ್! ಮಹಾವೇಗದಿಂದ ಒಂದೇ ಸಮನೆ ಅನೇಕ ಗರುಡಗಳಂತೆ ಆಹವದಲ್ಲಿ ಬಂದೆರಗಿದ ಅವುಗಳ ಖುರಪುಟಗಳಿಂದಾಗಿ ಭೂಮಿಯು ಕಂಪಿಸಿತು ಮತ್ತು ಕೂಗಿಕೊಂಡಿತು.
06101013a ಖುರಶಬ್ದಶ್ಚ ಸುಮಹಾನ್ವಾಜಿನಾಂ ಶುಶ್ರುವೇ ತದಾ।
06101013c ಮಹಾವಂಶವನಸ್ಯೇವ ದಹ್ಯಮಾನಸ್ಯ ಪರ್ವತೇ।।
ಪರ್ವತದ ಮೇಲೆ ಬಿದಿರಿನ ಮಹಾವನವು ಸುಡುತ್ತಿದೆಯೋ ಎನ್ನುವಂತೆ ಆ ಕುದುರೆಗಳ ಖುರಪುಟಗಳ ಮಹಾ ಶಬ್ಧವು ಕೇಳಿಬಂದಿತು.
06101014a ಉತ್ಪತದ್ಭಿಶ್ಚ ತೈಸ್ತತ್ರ ಸಮುದ್ಧೂತಂ ಮಹದ್ರಜಃ।
06101014c ದಿವಾಕರಪಥಂ ಪ್ರಾಪ್ಯ ಚಾದಯಾಮಾಸ ಭಾಸ್ಕರಂ।।
ಅವು ಭೂಮಿಯ ಮೇಲೆ ಹೋಗುತ್ತಿರಲು ಮೇಲೆದ್ದ ಮಹಾ ಧೂಳಿನ ರಾಶಿಯು ದಿವಾಕರ ಪಥವನ್ನು ತಲುಪಿ ಭಾಸ್ಕರನನ್ನು ಮುಸುಕಿದವು.
06101015a ವೇಗವದ್ಭಿರ್ಹಯೈಸ್ತೈಸ್ತು ಕ್ಷೋಭಿತಂ ಪಾಂಡವಂ ಬಲಂ।
06101015c ನಿಪತದ್ಭಿರ್ಮಹಾವೇಗೈರ್ಹಂಸೈರಿವ ಮಹತ್ಸರಃ।
06101015e ಹೇಷತಾಂ ಚೈವ ಶಬ್ದೇನ ನ ಪ್ರಾಜ್ಞಾಯತ ಕಿಂ ಚನ।।
ವೇಗದಿಂದ ಬಂದೆರಗಿದ ಆ ಕುದುರೆಗಳಿಂದ ಪಾಂಡವ ಸೇನೆಯು ಮಹಾ ವೇಗದಿಂದ ಹಂಸಗಳು ಬಂದು ಮಹಾ ಸರೋವರದಲ್ಲಿ ಬಿದ್ದರೆ ಹೇಗೋ ಹಾಗೆ ಕ್ಷೋಭೆಗೊಂಡಿತು. ಅವುಗಳ ಹೇಷಾವರ ಶಬ್ಧದಿಂದ ಬೇರೆ ಏನೂ ಕೇಳುತ್ತಿರಲಿಲ್ಲ
06101016a ತತೋ ಯುಧಿಷ್ಠಿರೋ ರಾಜಾ ಮಾದ್ರೀಪುತ್ರೌ ಚ ಪಾಂಡವೌ।
06101016c ಪ್ರತ್ಯಘ್ನಂಸ್ತರಸಾ ವೇಗಂ ಸಮರೇ ಹಯಸಾದಿನಾಂ।।
06101017a ಉದ್ವೃತ್ತಸ್ಯ ಮಹಾರಾಜ ಪ್ರಾವೃತ್ಕಾಲೇನ ಪೂರ್ಯತಃ।
06101017c ಪೌರ್ಣಮಾಸ್ಯಾಮಂಬುವೇಗಂ ಯಥಾ ವೇಲಾ ಮಹೋದಧೇಃ।।
ಮಹಾರಾಜ! ಆಗ ರಾಜ ಯುಧಿಷ್ಠಿರ ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ವೇಗವಾಗಿ ಸಮರದಲ್ಲಿ ಬಂದ ಅಶ್ವಾರೋಹಿಗಳನ್ನು ಮಳೆಗಾಲದ ಹುಣ್ಣಿಮೆಯಲ್ಲಿ ಉಕ್ಕಿ ಮೇಲೆ ಬರುವ ಮಹಾಸಾಗರವನ್ನು ದಡಗಳು ಹೇಗೋ ಹಾಗೆ ಬೇಗನೇ ತಡೆದರು.
06101018a ತತಸ್ತೇ ರಥಿನೋ ರಾಜನ್ ಶರೈಃ ಸನ್ನತಪರ್ವಭಿಃ।
06101018c ನ್ಯಕೃಂತನ್ನುತ್ತಮಾಂಗಾನಿ ಕಾಯೇಭ್ಯೋ ಹಯಸಾದಿನಾಂ।।
ರಾಜನ್! ಆಗ ಆ ರಥಿಗಳು ಸನ್ನತಪರ್ವ ಶರಗಳಿಂದ ಅಶ್ವಾರೋಹಿಗಳ ಶಿರಗಳನ್ನು ದೇಹದಿಂದ ಕತ್ತರಿಸಿದರು.
06101019a ತೇ ನಿಪೇತುರ್ಮಹಾರಾಜ ನಿಹತಾ ದೃಢಧನ್ವಿಭಿಃ।
06101019c ನಾಗೈರಿವ ಮಹಾನಾಗಾ ಯಥಾ ಸ್ಯುರ್ಗಿರಿಗಹ್ವರೇ।।
ಮಹಾರಾಜ! ದೃಢಧನ್ವಿಗಳಿಂದ ನಿಹತರಾದ ಅವರು ಮಹಾಗಜದಿಂದ ನೂಕಲ್ಪಟ್ಟು ಗಿರಿಗುಹ್ವರದಲ್ಲಿ ಬೀಳುವ ಆನೆಗಳಂತೆ ಬಿದ್ದರು.
06101020a ತೇಽಪಿ ಪ್ರಾಸೈಃ ಸುನಿಶಿತೈಃ ಶರೈಃ ಸನ್ನತಪರ್ವಭಿಃ।
06101020c ನ್ಯಕೃಂತನ್ನುತ್ತಮಾಂಗಾನಿ ವಿಚರಂತೋ ದಿಶೋ ದಶ।।
ಅವರು ಪ್ರಾಸಗಳಿಂದ ಮತ್ತು ನಿಶಿತ ಸನ್ನತಪರ್ವ ಶರಗಳಿಂದ ಶಿರಗಳನ್ನು ಕತ್ತರಿಸುತ್ತಾ ಹತ್ತೂ ದಿಕ್ಕುಗಳಲ್ಲಿ ಸಂಚರಿಸಿದರು.
06101021a ಅತ್ಯಾಸನ್ನಾ ಹಯಾರೋಹಾ ಋಷ್ಟಿಭಿರ್ಭರತರ್ಷಭ।
06101021c ಅಚ್ಛಿನನ್ನುತ್ತಮಾಂಗಾನಿ ಫಲಾನೀವ ಮಹಾದ್ರುಮಾತ್।।
ಭರತರ್ಷಭ! ಹೀಗೆ ಋಷ್ಟಿ ಮತ್ತು ಖಡ್ಗಗಳಿಂದ ಹೊಡೆಯಲ್ಪಟ್ಟ ಆ ಅಶ್ವಾರೋಹಿಗಳ ಶಿರಗಳು ದೊಡ್ಡ ಮರದಿಂದ ಹಣ್ಣುಗಳು ಉದುರುವಂತೆ ಉದುರಿ ಬಿದ್ದವು.
06101022a ಸಸಾದಿನೋ ಹಯಾ ರಾಜಂಸ್ತತ್ರ ತತ್ರ ನಿಷೂದಿತಾಃ।
06101022c ಪತಿತಾಃ ಪಾತ್ಯಮಾನಾಶ್ಚ ಶತಶೋಽಥ ಸಹಸ್ರಶಃ।।
ರಾಜನ್! ಅಲ್ಲಿ ನೂರಾರು ಸಹಸ್ರಾರು ಸವಾರರು ಸಂಹರಿಸಲ್ಪಟ್ಟು ಕುದುರೆಗಳ ಮೇಲಿನಿಂದ ಬಿದ್ದಿದ್ದರು ಮತ್ತು ಬೀಳುತ್ತಿದ್ದರು.
06101023a ವಧ್ಯಮಾನಾ ಹಯಾಸ್ತೇ ತು ಪ್ರಾದ್ರವಂತ ಭಯಾರ್ದಿತಾಃ।
06101023c ಯಥಾ ಸಿಂಹಾನ್ಸಮಾಸಾದ್ಯ ಮೃಗಾಃ ಪ್ರಾಣಪರಾಯಣಾಃ।।
ವಧಿಸಲ್ಪಡುತ್ತಿರುವ ಕುದುರೆಗಳು ಸಿಂಹವನ್ನು ಕಂಡ ಜಿಂಕೆಗಳು ಪ್ರಾಣಗಳನ್ನು ಉಳಿಸಿಕೊಳ್ಳಲು ಓಡಿಹೋಗುವಂತೆ ಭಯಾರ್ದಿತಗೊಂಡು ಓಡಿಹೋಗುತ್ತಿದ್ದವು.
06101024a ಪಾಂಡವಾಸ್ತು ಮಹಾರಾಜ ಜಿತ್ವಾ ಶತ್ರೂನ್ಮಹಾಹವೇ।
06101024c ದಧ್ಮುಃ ಶಂಖಾಂಶ್ಚ ಭೇರೀಶ್ಚ ತಾಡಯಾಮಾಸುರಾಹವೇ।।
ಮಹಾರಾಜ! ಪಾಂಡವರಾದರೋ ಮಹಾಹವದಲ್ಲಿ ಶತ್ರುಗಳನ್ನು ಗೆದ್ದು ಶಂಖಗಳನ್ನು ಮೊಳಗಿಸಿ ಭೇರಿಗಳನ್ನು ಬಾರಿಸಿದರು.
06101025a ತತೋ ದುರ್ಯೋಧನೋ ದೃಷ್ಟ್ವಾ ದೀನಂ ಸೈನ್ಯಮವಸ್ಥಿತಂ।
06101025c ಅಬ್ರವೀದ್ಭರತಶ್ರೇಷ್ಠ ಮದ್ರರಾಜಮಿದಂ ವಚಃ।।
ಭರತಶ್ರೇಷ್ಠ! ಆಗ ತನ್ನ ಸೈನ್ಯವು ನಾಶವಾದುದನ್ನು ನೋಡಿ ದೀನನಾಗಿ ಮದ್ರರಾಜನಿಗೆ ಈ ಮಾತನ್ನಾಡಿದನು:
06101026a ಏಷ ಪಾಂಡುಸುತೋ ಜ್ಯೇಷ್ಠೋ ಜಿತ್ವಾ ಮಾತುಲ ಮಾಮಕಾನ್।
06101026c ಪಶ್ಯತಾಂ ನೋ ಮಹಾಬಾಹೋ ಸೇನಾಂ ದ್ರಾವಯತೇ ಬಲೀ।।
“ಸೋದರಮಾವ! ಮಹಾಬಾಹೋ! ಈ ಜ್ಯೇಷ್ಠ ಪಾಂಡುಸುತನು ನನ್ನವರನ್ನು ಗೆದ್ದು ನೀನು ನೋಡುತ್ತಿರುವಂತೆಯೇ ಸೇನೆಗಳನ್ನು ಓಡಿಸುತ್ತಿದ್ದಾನೆ.
06101027a ತಂ ವಾರಯ ಮಹಾಬಾಹೋ ವೇಲೇವ ಮಕರಾಲಯಂ।
06101027c ತ್ವಂ ಹಿ ಸಂಶ್ರೂಯಸೇಽತ್ಯರ್ಥಮಸಹ್ಯಬಲವಿಕ್ರಮಃ।।
ಮಹಾಬಾಹೋ! ಸಮುದ್ರವನ್ನು ಭೂಮಿಯು ತಡೆಯುವಂತೆ ನೀನು ಅವರನ್ನು ತಡೆದು ನಿಲ್ಲಿಸು. ನೀನು ಅಸಹ್ಯ ಬಲ ವಿಕ್ರಮನೆಂದು ಪ್ರಸಿದ್ಧನಾಗಿದ್ದೀಯೆ.”
06101028a ಪುತ್ರಸ್ಯ ತವ ತದ್ವಾಕ್ಯಂ ಶ್ರುತ್ವಾ ಶಲ್ಯಃ ಪ್ರತಾಪವಾನ್।
06101028c ಪ್ರಯಯೌ ರಥವಂಶೇನ ಯತ್ರ ರಾಜಾ ಯುಧಿಷ್ಠಿರಃ।।
ನಿನ್ನ ಮಗನ ಆ ಮಾತನ್ನು ಕೇಳಿ ಪ್ರತಾಪವಾನ್ ಶಲ್ಯನು ರಥಸಮೂಹಗಳೊಂದಿಗೆ ರಾಜಾ ಯುಧಿಷ್ಠಿರನಿದ್ದಲ್ಲಿಗೆ ಹೊರಟನು.
06101029a ತದಾಪತದ್ವೈ ಸಹಸಾ ಶಲ್ಯಸ್ಯ ಸುಮಹದ್ಬಲಂ।
06101029c ಮಹೌಘವೇಗಂ ಸಮರೇ ವಾರಯಾಮಾಸ ಪಾಂಡವಃ।।
ಸಮರದಲ್ಲಿ ತನ್ನ ಮೇಲೆ ಒಮ್ಮಿಂದೊಮ್ಮೆಲೇ ಬಂದು ಎರಗಿದ ಮಹಾವೇಗವುಳ್ಳ ಶಲ್ಯನ ಮಹಾಸೇನೆಯನ್ನು ಪಾಂಡವನು ತಡೆದನು.
06101030a ಮದ್ರರಾಜಂ ಚ ಸಮರೇ ಧರ್ಮರಾಜೋ ಮಹಾರಥಃ।
06101030c ದಶಭಿಃ ಸಾಯಕೈಸ್ತೂರ್ಣಮಾಜಘಾನ ಸ್ತನಾಂತರೇ।
06101030e ನಕುಲಃ ಸಹದೇವಶ್ಚ ತ್ರಿಭಿಸ್ತ್ರಿಭಿರಜಿಹ್ಮಗೈಃ।।
ತಕ್ಷಣವೇ ಮಹಾರಥ ಧರ್ಮರಾಜನು ಸಮರದಲ್ಲಿ ಮದ್ರರಾಜನ ಎದೆಗೆ ಹತ್ತು ಸಾಯಕಗಳಿಂದ ಮತ್ತು ನಕುಲ ಸಹದೇವರು ಮೂರು ಮೂರು ಜಿಹ್ಮಗಗಳಿಂದ ಹೊಡೆದರು.
06101031a ಮದ್ರರಾಜೋಽಪಿ ತಾನ್ಸರ್ವಾನಾಜಘಾನ ತ್ರಿಭಿಸ್ತ್ರಿಭಿಃ।
06101031c ಯುಧಿಷ್ಠಿರಂ ಪುನಃ ಷಷ್ಟ್ಯಾ ವಿವ್ಯಾಧ ನಿಶಿತೈಃ ಶರೈಃ।
06101031e ಮಾದ್ರೀಪುತ್ರೌ ಚ ಸಂರಬ್ಧೌ ದ್ವಾಭ್ಯಾಂ ದ್ವಾಭ್ಯಾಮತಾಡಯತ್।।
ಮದ್ರರಾಜನೂ ಕೂಡ ಅವರೆಲ್ಲರನ್ನು ಮೂರು ಮೂರು ಬಾಣಗಳಿಂದ ಹೊಡೆದನು. ಪುನಃ ಯುಧಿಷ್ಠಿರನನ್ನು ಅರವತ್ತು ನಿಶಿತ ಬಾಣಗಳಿಂದ ಹೊಡೆದನು. ಸಂರಬ್ಧರಾಗಿ ಮಾದ್ರೀಪುತ್ರರಿಬ್ಬರನ್ನು ಎರೆಡೆರಡು ಬಾಣಗಳಿಂದ ಹೊಡೆದನು.
06101032a ತತೋ ಭೀಮೋ ಮಹಾಬಾಹುರ್ದೃಷ್ಟ್ವಾ ರಾಜಾನಮಾಹವೇ।
06101032c ಮದ್ರರಾಜವಶಂ ಪ್ರಾಪ್ತಂ ಮೃತ್ಯೋರಾಸ್ಯಗತಂ ಯಥಾ।
06101032e ಅಭ್ಯದ್ರವತ ಸಂಗ್ರಾಮೇ ಯುಧಿಷ್ಠಿರಮಮಿತ್ರಜಿತ್।।
ಆಗ ಮಹಾಬಾಹು ಭೀಮನು ಆಹವದಲ್ಲಿ ರಾಜನು ಮೃತ್ಯುವಿನ ಬಾಯಿಯ ಬಳಿಯಂತೆ ಮದ್ರರಾಜನ ವಶದಲ್ಲಿದ್ದುದನ್ನು ನೋಡಿ ಸಂಗ್ರಾಮದಲ್ಲಿ ಅಮಿತ್ರಜಿತು ಯುಧಿಷ್ಠಿರನ ಬಳಿ ಧಾವಿಸಿ ಬಂದನು.
06101033a ತತೋ ಯುದ್ಧಂ ಮಹಾಘೋರಂ ಪ್ರಾವರ್ತತ ಸುದಾರುಣಂ।
06101033c ಅಪರಾಂ ದಿಶಮಾಸ್ಥಾಯ ದ್ಯೋತಮಾನೇ ದಿವಾಕರೇ।।
ಸೂರ್ಯನು ಇಳಿಮುಖದಲ್ಲಿ ಬೆಳಗುತ್ತಿರುವಾಗ ಸುದಾರುಣ ಮಹಾಘೋರ ಯುದ್ಧವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭೀಷ್ಮವಧಪರ್ವಣಿ ಏಕಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೀಷ್ಮವಧಪರ್ವದಲ್ಲಿ ನೂರಾಒಂದನೇ ಅಧ್ಯಾಯವು.