ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 100
ಸಾರ
ಅರ್ಜುನ-ಸುಶರ್ಮರ ಯುದ್ಧ (1-15). ದ್ವಂದ್ವಯುದ್ಧಗಳು (16-26). ಸಾತ್ಯಕಿ-ಭೀಷ್ಮರ ಯುದ್ಧ (27-37).
06100001 ಸಂಜಯ ಉವಾಚ।
06100001a ಅರ್ಜುನಸ್ತು ನರವ್ಯಾಘ್ರ ಸುಶರ್ಮಪ್ರಮುಖಾನ್ನೃಪಾನ್।
06100001c ಅನಯತ್ಪ್ರೇತರಾಜಸ್ಯ ಭವನಂ ಸಾಯಕೈಃ ಶಿತೈಃ।।
ಸಂಜಯನು ಹೇಳಿದನು: “ನರವ್ಯಾಘ್ರ! ಅರ್ಜುನನಾದರೋ ಸುಶರ್ಮನ ನಾಯಕತ್ವದಲ್ಲಿದ್ದ ನೃಪರನ್ನು ನಿಶಿತ ಸಾಯಕಗಳಿಂದ ಪ್ರೇತರಾಜನ ಭವನಕ್ಕೆ ಕಳುಹಿಸಿದನು.
06100002a ಸುಶರ್ಮಾಪಿ ತತೋ ಬಾಣೈಃ ಪಾರ್ಥಂ ವಿವ್ಯಾಧ ಸಂಯುಗೇ।
06100002c ವಾಸುದೇವಂ ಚ ಸಪ್ತತ್ಯಾ ಪಾರ್ಥಂ ಚ ನವಭಿಃ ಪುನಃ।।
ಸುಶರ್ಮನೂ ಕೂಡ ಸಂಯುಗದಲ್ಲಿ ಬಾಣಗಳಿಂದ ಪಾರ್ಥನನ್ನು ಮತ್ತು ಪುನಃ ಏಳರಿಂದ ವಾಸುದೇವನನ್ನು ಹಾಗೂ ಎಂಭತ್ತರಿಂದ ಪಾರ್ಥನನ್ನು ಹೊಡೆದನು.
06100003a ತಾನ್ನಿವಾರ್ಯ ಶರೌಘೇಣ ಶಕ್ರಸೂನುರ್ಮಹಾರಥಃ।
06100003c ಸುಶರ್ಮಣೋ ರಣೇ ಯೋಧಾನ್ಪ್ರಾಹಿಣೋದ್ಯಮಸಾದನಂ।।
ಅವನನ್ನು ಶರೌಘಗಳಿಂದ ತಡೆದು ಮಹಾರಥ ಶಕ್ರಸೂನುವು ರಣದಲ್ಲಿ ಸುಶರ್ಮನ ಯೋಧರನ್ನು ಯಮಸಾದನಕ್ಕೆ ಕಳುಹಿಸಿದನು.
06100004a ತೇ ವಧ್ಯಮಾನಾಃ ಪಾರ್ಥೇನ ಕಾಲೇನೇವ ಯುಗಕ್ಷಯೇ।
06100004c ವ್ಯದ್ರವಂತ ರಣೇ ರಾಜನ್ಭಯೇ ಜಾತೇ ಮಹಾರಥಾಃ।।
ರಾಜನ್! ಯುಗಕ್ಷಯದಲ್ಲಿ ಕಾಲನಂತೆ ಪಾರ್ಥನಿಂದ ವಧಿಸಲ್ಪಟ್ಟ ಆ ಮಹಾರಥರಿಗೆ ಭಯವು ಹುಟ್ಟಿ ಪಲಾಯನ ಮಾಡಿದರು.
06100005a ಉತ್ಸೃಜ್ಯ ತುರಗಾನ್ಕೇ ಚಿದ್ರಥಾನ್ಕೇ ಚಿಚ್ಚ ಮಾರಿಷ।
06100005c ಗಜಾನನ್ಯೇ ಸಮುತ್ಸೃಜ್ಯ ಪ್ರಾದ್ರವಂತ ದಿಶೋ ದಶ।।
ಮಾರಿಷ! ಕೆಲವರು ಕುದುರೆಗಳನ್ನು ಬಿಟ್ಟು, ಕೆಲವರು ರಥಗಳನ್ನು ಬಿಟ್ಟು, ಇನ್ನು ಕೆಲವರು ಆನೆಗಳನ್ನು ಬಿಟ್ಟು ಹತ್ತೂ ಕಡೆಗಳಲ್ಲಿ ಓಡತೊಡಗಿದರು.
06100006a ಅಪರೇ ತುದ್ಯಮಾನಾಸ್ತು ವಾಜಿನಾಗರಥಾ ರಣಾತ್।
06100006c ತ್ವರಯಾ ಪರಯಾ ಯುಕ್ತಾಃ ಪ್ರಾದ್ರವಂತ ವಿಶಾಂ ಪತೇ।।
ವಿಶಾಂಪತೇ! ಇನ್ನು ಕೆಲವರು ತಮ್ಮೊಂದಿಗೆ ಕುದುರೆ, ರಥ, ಆನೆಗಳನ್ನು ಕರೆದುಕೊಂಡು ತ್ವರೆಮಾಡಿ ರಣದಿಂದ ಪಲಾಯನ ಮಾಡುತ್ತಿದ್ದರು.
06100007a ಪಾದಾತಾಶ್ಚಾಪಿ ಶಸ್ತ್ರಾಣಿ ಸಮುತ್ಸೃಜ್ಯ ಮಹಾರಣೇ।
06100007c ನಿರಪೇಕ್ಷಾ ವ್ಯಧಾವಂತ ತೇನ ತೇನ ಸ್ಮ ಭಾರತ।।
ಭಾರತ! ಪದಾತಿಗಳು ಕೂಡ ಮಹಾರಣದಲ್ಲಿ ಶಸ್ತ್ರಗಳನ್ನು ಬಿಸುಟು ಇತರರ ಮೇಲೆ ಅನುಕಂಪವಿಲ್ಲದೇ ಅಲ್ಲಲ್ಲಿ ಓಡಿ ಹೋಗುತ್ತಿದ್ದರು.
06100008a ವಾರ್ಯಮಾಣಾಃ ಸ್ಮ ಬಹುಶಸ್ತ್ರೈಗರ್ತೇನ ಸುಶರ್ಮಣಾ।
06100008c ತಥಾನ್ಯೈಃ ಪಾರ್ಥಿವಶ್ರೇಷ್ಠೈರ್ನ ವ್ಯತಿಷ್ಠಂತ ಸಂಯುಗೇ।।
ತ್ರೈಗರ್ತ ಸುಶರ್ಮ ಮತ್ತು ಇತರ ಪಾರ್ಥಿವಶ್ರೇಷ್ಠರು ಅವರನ್ನು ಬಹಳವಾಗಿ ತಡೆದರೂ ಸಂಯುಗದಲ್ಲಿ ಅವರು ನಿಲ್ಲಲಿಲ್ಲ.
06100009a ತದ್ಬಲಂ ಪ್ರದ್ರುತಂ ದೃಷ್ಟ್ವಾ ಪುತ್ರೋ ದುರ್ಯೋಧನಸ್ತವ।
06100009c ಪುರಸ್ಕೃತ್ಯ ರಣೇ ಭೀಷ್ಮಂ ಸರ್ವಸೈನ್ಯಪುರಸ್ಕೃತಂ।।
06100010a ಸರ್ವೋದ್ಯೋಗೇನ ಮಹತಾ ಧನಂಜಯಮುಪಾದ್ರವತ್।
06100010c ತ್ರಿಗರ್ತಾಧಿಪತೇರರ್ಥೇ ಜೀವಿತಸ್ಯ ವಿಶಾಂ ಪತೇ।।
ವಿಶಾಂಪತೇ! ಆ ಸೇನೆಯು ಪಲಾಯನ ಮಾಡುತ್ತಿರುವುದನ್ನು ನೋಡಿ ನಿನ್ನ ಮಗ ದುರ್ಯೋಧನನು ರಣದಲ್ಲಿ ಭೀಷ್ಮನನ್ನು ಮುಂದಿಟ್ಟುಕೊಂಡು, ಸರ್ವಸೇನೆಗಳನ್ನು ಕರೆದುಕೊಂಡು ಎಲ್ಲರನ್ನೂ ಒಟ್ಟುಗೂಡಿಕೊಂಡು ತ್ರಿಗರ್ತರಾಜನ ಜೀವವನ್ನುಳಿಸಲು ಧನಂಜಯನ ಮೇಲೆರಗಿದನು.
06100011a ಸ ಏಕಃ ಸಮರೇ ತಸ್ಥೌ ಕಿರನ್ಬಹುವಿಧಾಂ ಶರಾನ್।
06100011c ಭ್ರಾತೃಭಿಃ ಸಹಿತಃ ಸರ್ವೈಃ ಶೇಷಾ ವಿಪ್ರದ್ರುತಾ ನರಾಃ।।
ಅವನೊಬ್ಬನೇ ಬಹವಿಧದ ಬಾಣಗಳನ್ನು ಬೀರುತ್ತಾ ತನ್ನ ಸಹೋದರರೊಂದಿಗೆ ಸಮರದಲ್ಲಿ ನಿಂತಿದ್ದನು. ಉಳಿದವರೆಲ್ಲರೂ ಪಲಾಯನ ಮಾಡಿದ್ದರು.
06100012a ತಥೈವ ಪಾಂಡವಾ ರಾಜನ್ಸರ್ವೋದ್ಯೋಗೇನ ದಂಶಿತಾಃ।
06100012c ಪ್ರಯಯುಃ ಫಲ್ಗುನಾರ್ಥಾಯ ಯತ್ರ ಭೀಷ್ಮೋ ವ್ಯವಸ್ಥಿತಃ।।
ರಾಜನ್! ಹಾಗೆಯೇ ಪಾಂಡವರೂ ಕೂಡ ಸರ್ವಸೇನೆಗಳಿಂದೊಡಗೂಡಿ ಕವಚಗಳನ್ನು ಧರಿಸಿ ಫಲ್ಗುನನಿಗಾಗಿ ಭೀಷ್ಮನಿದ್ದಲ್ಲಿಗೆ ಬಂದರು.
06100013a ಜಾನಂತೋಽಪಿ ರಣೇ ಶೌರ್ಯಂ ಘೋರಂ ಗಾಂಡೀವಧನ್ವನಃ।
06100013c ಹಾಹಾಕಾರಕೃತೋತ್ಸಾಹಾ ಭೀಷ್ಮಂ ಜಗ್ಮುಃ ಸಮಂತತಃ।।
ಗಾಂಡೀವಧನ್ವಿಯ ಘೋರ ಶೌರ್ಯವನ್ನು ತಿಳಿದಿದ್ದರೂ ಅವರು ಹಾಹಾಕಾರಗೈಯುತ್ತಾ ಉತ್ಸಾಹದಿಂದ ಹೋಗಿ ಭೀಷ್ಮನನ್ನು ಸುತ್ತುವರೆದರು.
06100014a ತತಸ್ತಾಲಧ್ವಜಃ ಶೂರಃ ಪಾಂಡವಾನಾಮನೀಕಿನೀಂ।
06100014c ಚಾದಯಾಮಾಸ ಸಮರೇ ಶರೈಃ ಸನ್ನತಪರ್ವಭಿಃ।।
ಆಗ ಶೂರ ತಾಲದ್ವಜನು ಸಮರದಲ್ಲಿ ಪಾಂಡವರ ಸೇನೆಯನ್ನು ಸನ್ನತಪರ್ವ ಶರಗಳಿಂದ ಮುಚ್ಚಿಬಿಟ್ಟನು.
06100015a ಏಕೀಭೂತಾಸ್ತತಃ ಸರ್ವೇ ಕುರವಃ ಪಾಂಡವೈಃ ಸಹ।
06100015c ಅಯುಧ್ಯಂತ ಮಹಾರಾಜ ಮಧ್ಯಂ ಪ್ರಾಪ್ತೇ ದಿವಾಕರೇ।।
ಮಹಾರಾಜ! ಸೂರ್ಯನು ನಡುನೆತ್ತಿಯ ಮೇಲೆ ಬರಲು ಕುರುಗಳು ಎಲ್ಲರೂ ಒಂದಾಗಿ ಪಾಂಡವರೊಂದಿಗೆ ಯುದ್ಧಮಾಡುತ್ತಿದ್ದರು.
06100016a ಸಾತ್ಯಕಿಃ ಕೃತವರ್ಮಾಣಂ ವಿದ್ಧ್ವಾ ಪಂಚಭಿರಾಯಸೈಃ।
06100016c ಅತಿಷ್ಠದಾಹವೇ ಶೂರಃ ಕಿರನ್ ಬಾಣಾನ್ ಸಹಸ್ರಶಃ।।
ಶೂರ ಸಾತ್ಯಕಿಯು ಕೃತವರ್ಮನನ್ನು ಐದು ಆಯಸಗಳಿಂದ ಹೊಡೆದು ಸಹಸ್ರಾರು ಬಾಣಗಳನ್ನು ಹರಡಿ ಯುದ್ಧದಲ್ಲಿ ತೊಡಗಿದನು.
06100017a ತಥೈವ ದ್ರುಪದೋ ರಾಜಾ ದ್ರೋಣಂ ವಿದ್ಧ್ವಾ ಶಿತೈಃ ಶರೈಃ।
06100017c ಪುನರ್ವಿವ್ಯಾಧ ಸಪ್ತತ್ಯಾ ಸಾರಥಿಂ ಚಾಸ್ಯ ಸಪ್ತಭಿಃ।।
ಹಾಗೆಯೇ ರಾಜ ದ್ರುಪದನು ದ್ರೋಣನನ್ನು ನಿಶಿತ ಶರಗಳಿಂದ ಹೊಡೆದು ಪುನಃ ಅವನನ್ನು ಏಳರಿಂದ ಮತ್ತು ಸಾರಥಿಯನ್ನು ಏಳರಿಂದ ಹೊಡೆದನು.
06100018a ಭೀಮಸೇನಸ್ತು ರಾಜಾನಂ ಬಾಹ್ಲಿಕಂ ಪ್ರಪಿತಾಮಹಂ।
06100018c ವಿದ್ಧ್ವಾನದನ್ಮಹಾನಾದಂ ಶಾರ್ದೂಲ ಇವ ಕಾನನೇ।।
ಭೀಮಸೇನನಾದರೋ ಪ್ರಪಿತಾಮಹ ರಾಜಾ ಬಾಹ್ಲೀಕನನ್ನು ಹೊಡೆದು ಕಾನನದಲ್ಲಿ ಸಿಂಹದಂತೆ ಮಹಾನಾದಗೈದನು.
06100019a ಆರ್ಜುನಿಶ್ಚಿತ್ರಸೇನೇನ ವಿದ್ಧೋ ಬಹುಭಿರಾಶುಗೈಃ।
06100019c ಚಿತ್ರಸೇನಂ ತ್ರಿಭಿರ್ಬಾಣೈರ್ವಿವ್ಯಾಧ ಹೃದಯೇ ಭೃಶಂ।।
ಚಿತ್ರಸೇನನಿಂದ ಅನೇಕ ಆಶುಗಗಳಿಂದ ಹೊಡೆಯಲ್ಪಟ್ಟ ಆರ್ಜುನಿಯು ಚಿತ್ರಸೇನನ ಹೃದಯವನ್ನು ಮೂರು ಬಾಣಗಳಿಂದ ಚೆನ್ನಾಗಿ ಹೊಡೆದನು.
06100020a ಸಮಾಗತೌ ತೌ ತು ರಣೇ ಮಹಾಮಾತ್ರೌ ವ್ಯರೋಚತಾಂ।
06100020c ಯಥಾ ದಿವಿ ಮಹಾಘೋರೌ ರಾಜನ್ಬುಧಶನೈಶ್ಚರೌ।।
ರಾಜನ್! ದಿವಿಯಲ್ಲಿ ಮಹಾಘೋರರಾದ ಬುಧ-ಶನೈಶ್ಚರರಂತೆ ರಣದಲ್ಲಿ ಸೇರಿದ್ದ ಆ ಮಹಾಕಾಯರಿಬ್ಬರೂ ಬೆಳಗಿದರು.
06100021a ತಸ್ಯಾಶ್ವಾಂಶ್ಚತುರೋ ಹತ್ವಾ ಸೂತಂ ಚ ನವಭಿಃ ಶರೈಃ।
06100021c ನನಾದ ಬಲವನ್ನಾದಂ ಸೌಭದ್ರಃ ಪರವೀರಹಾ।।
ಪರವೀರಹ ಸೌಭದ್ರನು ಅವನ ನಾಲ್ಕೂ ಕುದುರೆಗಳನ್ನೂ ಸೂತನನ್ನೂ ಒಂಭತ್ತು ಶರಗಳಿಂದ ಸಂಹರಿಸಿ ಜೋರಾಗಿ ಕೂಗಿದನು.
06100022a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಮಹಾರಥಃ।
06100022c ಆರುರೋಹ ರಥಂ ತೂರ್ಣಂ ದುರ್ಮುಖಸ್ಯ ವಿಶಾಂ ಪತೇ।।
ವಿಶಾಂಪತೇ! ಅಶ್ವಗಳು ಹತರಾಗಲು ಆ ಮಹಾರಥನು ತಕ್ಷಣವೇ ರಥದಿಂದ ಧುಮುಕಿ ದುರ್ಮುಖನ ರಥವನ್ನೇರಿದರು.
06100023a ದ್ರೋಣಶ್ಚ ದ್ರುಪದಂ ವಿದ್ಧ್ವಾ ಶರೈಃ ಸನ್ನತಪರ್ವಭಿಃ।
06100023c ಸಾರಥಿಂ ಚಾಸ್ಯ ವಿವ್ಯಾಧ ತ್ವರಮಾಣಃ ಪರಾಕ್ರಮೀ।।
ಪರಾಕ್ರಮೀ ದ್ರೋಣನು ದ್ರುಪದನನ್ನು ಸನ್ನತಪರ್ವ ಶರಗಳಿಂದ ಹೊಡೆದು ತಕ್ಷಣವೇ ಅವನ ಸಾರಥಿಯನ್ನೂ ಹೊಡೆದನು.
06100024a ಪೀಡ್ಯಮಾನಸ್ತತೋ ರಾಜಾ ದ್ರುಪದೋ ವಾಹಿನೀಮುಖೇ।
06100024c ಅಪಾಯಾಜ್ಜವನೈರಶ್ವೈಃ ಪೂರ್ವವೈರಮನುಸ್ಮರನ್।।
ಸೇನಾಮುಖದಲ್ಲಿ ಹಾಗೆ ಪೀಡೆಗೊಳಗಾದ ರಾಜಾ ದ್ರುಪದನು ಹಿಂದಿನ ವೈರವನ್ನು ಸ್ಮರಿಸಿಕೊಂಡು ವೇಗಶಾಲಿ ಕುದುರೆಗಳ ಮೇಲೇರಿ ಪಲಾಯನ ಮಾಡಿದನು.
06100025a ಭೀಮಸೇನಸ್ತು ರಾಜಾನಂ ಮುಹೂರ್ತಾದಿವ ಬಾಹ್ಲಿಕಂ।
06100025c ವ್ಯಶ್ವಸೂತರಥಂ ಚಕ್ರೇ ಸರ್ವಸೈನ್ಯಸ್ಯ ಪಶ್ಯತಃ।।
ಭೀಮಸೇನನಾದರೋ ಮುಹೂರ್ತದಲ್ಲಿಯೇ ಎಲ್ಲ ಸೇನೆಗಳೂ ನೋಡುತ್ತಿರುವಂತೆ ರಾಜ ಬಾಹ್ಲೀಕನ ಕುದುರೆಗಳು, ಸಾರಥಿ ಮತ್ತು ರಥವನ್ನು ಧ್ವಂಸ ಮಾಡಿದನು.
06100026a ಸಸಂಭ್ರಮೋ ಮಹಾರಾಜ ಸಂಶಯಂ ಪರಮಂ ಗತಃ।
06100026c ಅವಪ್ಲುತ್ಯ ತತೋ ವಾಹಾದ್ಬಾಹ್ಲಿಕಃ ಪುರುಷೋತ್ತಮಃ।
06100026e ಆರುರೋಹ ರಥಂ ತೂರ್ಣಂ ಲಕ್ಷ್ಮಣಸ್ಯ ಮಹಾರಥಃ।।
ಮಹಾರಾಜ! ಆಗ ಗಾಭರಿಗೊಂಡು ಅತೀವ ಸಂಶಯದಿಂದ ಪುರುಷೋತ್ತಮ ಬಾಹ್ಲೀಕನು ವಾಹನದಿಂದ ಕೆಳಗೆ ಹಾರಿ ತಕ್ಷಣವೇ ಮಹಾರಥ ಲಕ್ಷ್ಮಣನ ರಥವನ್ನೇರಿದನು.
06100027a ಸಾತ್ಯಕಿಃ ಕೃತವರ್ಮಾಣಂ ವಾರಯಿತ್ವಾ ಮಹಾರಥಃ।
06100027c ಶರೈರ್ಬಹುವಿಧೈ ರಾಜನ್ನಾಸಸಾದ ಪಿತಾಮಹಂ।।
ರಾಜನ್! ಕೃತವರ್ಮನನ್ನು ತಡೆಹಿದಿದು ಮಹಾರಥ ಸಾತ್ಯಕಿಯು ಬಹುವಿಧದ ಶರಗಳಿಂದ ಪಿತಾಮಹನನ್ನು ಎದುರಿಸಿದನು.
06100028a ಸ ವಿದ್ಧ್ವಾ ಭಾರತಂ ಷಷ್ಟ್ಯಾ ನಿಶಿತೈರ್ಲೋಮವಾಹಿಭಿಃ।
06100028c ನನರ್ತೇವ ರಥೋಪಸ್ಥೇ ವಿಧುನ್ವಾನೋ ಮಹದ್ಧನುಃ।।
ಅವನು ಭಾರತನನ್ನು ಅರವತ್ತು ನಿಶಿತ ಲೋಮವಾಹಿಗಳಿಂದ ಹೊಡೆದನು. ಅವನು ಮಹಾಧನುಸ್ಸನ್ನು ಅಲುಗಾಡಿಸುತ್ತಾ ರಥದಲ್ಲಿ ನಿಂತು ನರ್ತಿಸುವಂತಿದ್ದನು.
06100029a ತಸ್ಯಾಯಸೀಂ ಮಹಾಶಕ್ತಿಂ ಚಿಕ್ಷೇಪಾಥ ಪಿತಾಮಹಃ।
06100029c ಹೇಮಚಿತ್ರಾಂ ಮಹಾವೇಗಾಂ ನಾಗಕನ್ಯೋಪಮಾಂ ಶುಭಾಂ।।
ಅವನ ಮೇಲೆ ಪಿತಾಮಹನು ಹೇಮಚಿತ್ರದ, ಮಹಾವೇಗದ, ನಾಗಕನ್ಯೆಯಂತೆ ಶುಭವಾಗಿದ್ದ ಮಹಾ ಶಕ್ತಿಯನ್ನು ಎಸೆದನು.
06100030a ತಾಮಾಪತಂತೀಂ ಸಹಸಾ ಮೃತ್ಯುಕಲ್ಪಾಂ ಸುತೇಜನಾಂ।
06100030c ಧ್ವಂಸಯಾಮಾಸ ವಾರ್ಷ್ಣೇಯೋ ಲಾಘವೇನ ಮಹಾಯಶಾಃ।।
ತನ್ನ ಮೇಲೆ ಬೀಳಲು ಬರುತ್ತಿದ್ದ ಮೃತ್ಯುವನಂತಿದ್ದ ಆ ತೇಜಸ್ಸುಳ್ಳದ್ದನ್ನು ವಾರ್ಷ್ಣೇಯನು ತಕ್ಷಣವೇ ಕೈಚಳಕದಿಂದ ಧ್ವಂಸಮಾಡಿದನು.
06100031a ಅನಾಸಾದ್ಯ ತು ವಾರ್ಷ್ಣೇಯಂ ಶಕ್ತಿಃ ಪರಮದಾರುಣಾ।
06100031c ನ್ಯಪತದ್ಧರಣೀಪೃಷ್ಠೇ ಮಹೋಲ್ಕೇವ ಗತಪ್ರಭಾ।।
ವಾರ್ಷ್ಣೇಯನನ್ನು ತಲುಪದಿದ್ದ ಆ ಪರಮದಾರುಣ ಶಕ್ತಿಯು ಪ್ರಭೆಯನ್ನು ಕಳೆದುಕೊಂಡು ಮಹಾಉಲ್ಕದಂತೆ ಭೂಮಿಯ ಮೇಲೆ ಬಿದ್ದಿತು.
06100032a ವಾರ್ಷ್ಣೇಯಸ್ತು ತತೋ ರಾಜನ್ಸ್ವಾಂ ಶಕ್ತಿಂ ಘೋರದರ್ಶನಾಂ।
06100032c ವೇಗವದ್ಗೃಹ್ಯ ಚಿಕ್ಷೇಪ ಪಿತಾಮಹರಥಂ ಪ್ರತಿ।।
ರಾಜನ್! ಆಗ ವಾರ್ಷ್ಣೇಯನಾದರೋ ನೋಡಲು ಘೋರವಾಗಿದ್ದ ತನ್ನದೇ ಶಕ್ತಿಯನ್ನು ಹಿಡಿದು ವೇಗದಿಂದ ಪಿತಾಮಹನ ರಥದ ಮೇಲೆ ಎಸೆದನು.
06100033a ವಾರ್ಷ್ಣೇಯಭುಜವೇಗೇನ ಪ್ರಣುನ್ನಾ ಸಾ ಮಹಾಹವೇ।
06100033c ಅಭಿದುದ್ರಾವ ವೇಗೇನ ಕಾಲರಾತ್ರಿರ್ಯಥಾ ನರಂ।।
ವಾರ್ಷ್ಣೇಯನ ಭುಜವೇಗದಿಂದ ಪ್ರಯಾಣಿಸಿದ ಅದು ಮಹಾಹವದಲ್ಲಿ ಕಾಲರಾತ್ರಿಯಂತೆ ಧಾವಿಸಿ ಬಂದಿತು.
06100034a ತಾಮಾಪತಂತೀಂ ಸಹಸಾ ದ್ವಿಧಾ ಚಿಚ್ಛೇದ ಭಾರತ।
06100034c ಕ್ಷುರಪ್ರಾಭ್ಯಾಂ ಸುತೀಕ್ಷ್ಣಾಭ್ಯಾಂ ಸಾನ್ವಕೀರ್ಯತ ಭೂತಲೇ।।
ಬರುತ್ತಿದ್ದ ಅದನ್ನು ಭಾರತನು ಎರಡು ತೀಕ್ಷ್ಣ ಕ್ಷುರಪ್ರಗಳಿಂದ ತಕ್ಷಣವೇ ಎರಡಾಗಿ ಕತ್ತರಿಸಿ, ನೆಲದ ಮೇಲೆ ಬೀಳಿಸಿದನು.
06100035a ಚಿತ್ತ್ವಾ ತು ಶಕ್ತಿಂ ಗಾಂಗೇಯಃ ಸಾತ್ಯಕಿಂ ನವಭಿಃ ಶರೈಃ।
06100035c ಆಜಘಾನೋರಸಿ ಕ್ರುದ್ಧಃ ಪ್ರಹಸನ್ ಶತ್ರುಕರ್ಶನಃ।।
ಶಕ್ತಿಯನ್ನು ಗೆದ್ದು ಶತ್ರುಕರ್ಶನ ಗಾಂಗೇಯನು ಜೋರಾಗಿ ನಕ್ಕು ಸಾತ್ಯಕಿಯನ್ನು ಎದೆಯಲ್ಲಿ ಒಂಭತ್ತು ಶರಗಳಿಂದ ಹೊಡೆದನು.
06100036a ತತಃ ಸರಥನಾಗಾಶ್ವಾಃ ಪಾಂಡವಾಃ ಪಾಂಡುಪೂರ್ವಜ।
06100036c ಪರಿವವ್ರೂ ರಣೇ ಭೀಷ್ಮಂ ಮಾಧವತ್ರಾಣಕಾರಣಾತ್।।
ಪಾಂಡುಪೂರ್ವಜ! ಆಗ ಮಾಧವನು ಕಷ್ಟದಲ್ಲಿದ್ದುದರಿಂದ ಪಾಂಡವರು ರಥ-ಆನೆ-ಕುದುರೆಗಳೊಂದಿಗೆ ರಣದಲ್ಲಿ ಭೀಷ್ಮನನ್ನು ಸುತ್ತುವರೆದರು.
06100037a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣಂ।
06100037c ಪಾಂಡವಾನಾಂ ಕುರೂಣಾಂ ಚ ಸಮರೇ ವಿಜಯೈಷಿಣಾಂ।।
ಆಗ ಸಮರದಲ್ಲಿ ವಿಜಯವನ್ನು ಬಯಸಿದ ಪಾಂಡವರ ಮತ್ತು ಕುರುಗಳ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ವಾರ್ಷ್ಣೇಯಯುದ್ಧೇ ಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ವಾರ್ಷ್ಣೇಯಯುದ್ಧ ಎನ್ನುವ ನೂರನೇ ಅಧ್ಯಾಯವು.