098 ಭೀಮಪರಾಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 98

ಸಾರ

ದ್ರೋಣ-ಅರ್ಜುನರ ಯುದ್ಧ (1-27). ಭೀಮನು ಪದಾತಿಯಾಗಿಯೇ ಕೌರವ ಗಜಸೇನೆಯನ್ನು ನಾಶಗೊಳಿಸಿದುದು (28-38).

06098001 ಧೃತರಾಷ್ಟ್ರ ಉವಾಚ।
06098001a ಕಥಂ ದ್ರೋಣೋ ಮಹೇಷ್ವಾಸಃ ಪಾಂಡವಶ್ಚ ಧನಂಜಯಃ।
06098001c ಸಮೀಯತೂ ರಣೇ ಶೂರೌ ತನ್ಮಮಾಚಕ್ಷ್ವ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ದ್ರೋಣ ಮತ್ತು ಮಹೇಷ್ವಾಸ ಪಾಂಡವ ಧನಂಜಯ ಇವರಿಬ್ಬರು ಶೂರರೂ ರಣದಲ್ಲಿ ಹೇಗೆ ಎದುರಾದರು ಎನ್ನುವುದನ್ನು ನನಗೆ ಹೇಳು.

06098002a ಪ್ರಿಯೋ ಹಿ ಪಾಂಡವೋ ನಿತ್ಯಂ ಭಾರದ್ವಾಜಸ್ಯ ಧೀಮತಃ।
06098002c ಆಚಾರ್ಯಶ್ಚ ರಣೇ ನಿತ್ಯಂ ಪ್ರಿಯಃ ಪಾರ್ಥಸ್ಯ ಸಂಜಯ।।

ಸಂಜಯ! ಧೀಮತ ಭಾರದ್ವಾಜನಿಗೆ ಪಾಂಡವನು ಯಾವಾಗಲೂ ಪ್ರಿಯನಾದವನು. ಆಚಾರ್ಯನೂ ಕೂಡ ರಣದಲ್ಲಿ ನಿತ್ಯವೂ ಪಾರ್ಥನ ಪ್ರಿಯನು.

06098003a ತಾವುಭೌ ರಥಿನೌ ಸಂಖ್ಯೇ ದೃಪ್ತೌ ಸಿಂಹಾವಿವೋತ್ಕಟೌ।
06098003c ಕಥಂ ಸಮೀಯತುರ್ಯುದ್ಧೇ ಭಾರದ್ವಾಜಧನಂಜಯೌ।।

ಎರಡು ಸಿಂಹಗಳಂತೆ ಉತ್ಕಟರಾದ, ದರ್ಪಿಗಳಾದ, ರಥಿಗಳಾದ ಭಾರದ್ವಾಜ-ಧನಂಜಯರಿಬ್ಬರೂ ಹೇಗೆ ಯುದ್ಧದಲ್ಲಿ ಸೇರಿದರು?”

06098004 ಸಂಜಯ ಉವಾಚ।
06098004a ನ ದ್ರೋಣಃ ಸಮರೇ ಪಾರ್ಥಂ ಜಾನೀತೇ ಪ್ರಿಯಮಾತ್ಮನಃ।
06098004c ಕ್ಷತ್ರಧರ್ಮಂ ಪುರಸ್ಕೃತ್ಯ ಪಾರ್ಥೋ ವಾ ಗುರುಮಾಹವೇ।।

ಸಂಜಯನು ಹೇಳಿದನು: “ಯುದ್ಧದಲ್ಲಿ ದ್ರೋಣನು ಪಾರ್ಥನನ್ನು ತನಗೆ ಪ್ರಿಯನಾದವನೆಂದು ಗುರುತಿಸುವುದಿಲ್ಲ. ಅಥವಾ ಪಾರ್ಥನೂ ಕ್ಷತ್ರಧರ್ಮವನ್ನು ಗೌರವಿಸಿ ಯುದ್ಧದಲ್ಲಿ ಅವನನ್ನು ಗುರುವೆಂದು ಗುರುತಿಸುವುದಿಲ್ಲ.

06098005a ನ ಕ್ಷತ್ರಿಯಾ ರಣೇ ರಾಜನ್ವರ್ಜಯಂತಿ ಪರಸ್ಪರಂ।
06098005c ನಿರ್ಮರ್ಯಾದಂ ಹಿ ಯುಧ್ಯಂತೇ ಪಿತೃಭಿರ್ಭ್ರಾತೃಭಿಃ ಸಹ।।

ರಾಜನ್! ಕ್ಷತ್ರಿಯರು ರಣದಲ್ಲಿ ಎಂದೂ ಒಬ್ಬರನ್ನೊಬ್ಬರು ತಿರಸ್ಕರಿಸುವುದಿಲ್ಲ. ನಿರ್ಮರ್ಯಾದೆಯಿಂದ ತಂದೆ-ಸಹೋದರರೊಡನೆಯೂ ಯುದ್ಧ ಮಾಡುತ್ತಾರೆ.

06098006a ರಣೇ ಭಾರತ ಪಾರ್ಥೇನ ದ್ರೋಣೋ ವಿದ್ಧಸ್ತ್ರಿಭಿಃ ಶರೈಃ।
06098006c ನಾಚಿಂತಯತ ತಾನ್ಬಾಣಾನ್ಪಾರ್ಥಚಾಪಚ್ಯುತಾನ್ಯುಧಿ।।

ಭಾರತ! ರಣದಲ್ಲಿ ದ್ರೋಣನು ಪಾರ್ಥನಿಂದ ಮೂರು ಬಾಣಗಳಿಂದ ಹೊಡೆಯಲ್ಪಟ್ಟನು. ಆದರೆ ಅವನು ಪಾರ್ಥನ ಚಾಪದಿಂದ ಹೊರಟುಬಂದ ಆ ಬಾಣಗಳನ್ನು ಪರಿಗಣಿಸಲೇ ಇಲ್ಲ.

06098007a ಶರವೃಷ್ಟ್ಯಾ ಪುನಃ ಪಾರ್ಥಶ್ಚಾದಯಾಮಾಸ ತಂ ರಣೇ।
06098007c ಪ್ರಜಜ್ವಾಲ ಚ ರೋಷೇಣ ಗಹನೇಽಗ್ನಿರಿವೋತ್ಥಿತಃ।।

ರಣದಲ್ಲಿ ಪುನಃ ಪಾರ್ಥನನ್ನು ಶರವೃಷ್ಟಿಯಿಂದ ಮುಚ್ಚಿದನು ಮತ್ತು ರೋಷದಿಂದ ಗಹನವಾದ ವನವು ಸುಡುತ್ತಿದೆಯೋ ಎನ್ನುವಂತೆ ಉರಿದನು.

06098008a ತತೋಽರ್ಜುನಂ ರಣೇ ದ್ರೋಣಃ ಶರೈಃ ಸನ್ನತಪರ್ವಭಿಃ।
06098008c ವಾರಯಾಮಾಸ ರಾಜೇಂದ್ರ ನಚಿರಾದಿವ ಭಾರತ।।

ರಾಜೇಂದ್ರ! ಭಾರತ! ಆಗ ರಣದಲ್ಲಿ ತಡಮಾಡದೇ ದ್ರೋಣನು ಸನ್ನತಪರ್ವ ಶರಗಳಿಂದ ಅರ್ಜುನನನ್ನು ನಿಲ್ಲಿಸಿದನು.

06098009a ತತೋ ದುರ್ಯೋಧನೋ ರಾಜಾ ಸುಶರ್ಮಾಣಮಚೋದಯತ್।
06098009c ದ್ರೋಣಸ್ಯ ಸಮರೇ ರಾಜನ್ಪಾರ್ಷ್ಣಿಗ್ರಹಣಕಾರಣಾತ್।।

ರಾಜನ್! ಆಗ ಸಮರದಲ್ಲಿ ರಾಜಾ ದುರ್ಯೋಧನನು ದ್ರೋಣನ ರಥದ ಹಿಂಬಾಗದ ರಕ್ಷಕನಾಗಿರುವಂತೆ ಸುಶರ್ಮನಿಗೆ ನಿರ್ದೇಶಿಸಿದನು.

06098010a ತ್ರಿಗರ್ತರಾಡಪಿ ಕ್ರುದ್ಧೋ ಭೃಶಮಾಯಮ್ಯ ಕಾರ್ಮುಕಂ।
06098010c ಚಾದಯಾಮಾಸ ಸಮರೇ ಪಾರ್ಥಂ ಬಾಣೈರಯೋಮುಖೈಃ।।

ತ್ರಿಗರ್ತರಾಜನೂ ಕೂಡ ಕ್ರುದ್ಧನಾಗಿ ಸಮರದಲ್ಲಿ ಕಾರ್ಮುಕವನ್ನು ಚೆನ್ನಾಗಿ ಎಳೆದು ಪಾರ್ಥನನ್ನು ಬಾಣಗಳಿಂದ ಮುಚ್ಚಿದನು.

06098011a ತಾಭ್ಯಾಂ ಮುಕ್ತಾಃ ಶರಾ ರಾಜನ್ನಂತರಿಕ್ಷೇ ವಿರೇಜಿರೇ।
06098011c ಹಂಸಾ ಇವ ಮಹಾರಾಜ ಶರತ್ಕಾಲೇ ನಭಸ್ತಲೇ।।

ಅವರಿಬ್ಬರು ಬಿಟ್ಟ ಆ ಬಾಣಗಳು ಶರತ್ಕಾಲದಲ್ಲಿ ಆಕಾಶದಲ್ಲಿ ಹಾರಾಡುವ ಹಂಸಗಳಂತೆ ಪ್ರಕಾಶಿಸಿದವು.

06098012a ತೇ ಶರಾಃ ಪ್ರಾಪ್ಯ ಕೌಂತೇಯಂ ಸಮಸ್ತಾ ವಿವಿಶುಃ ಪ್ರಭೋ।
06098012c ಫಲಭಾರನತಂ ಯದ್ವತ್ಸ್ವಾದುವೃಕ್ಷಂ ವಿಹಂಗಮಾಃ।।

ಪ್ರಭೋ! ರುಚಿಕರ ಹಣ್ಣುಗಳ ಭಾರದಿಂದ ಬಗ್ಗಿರುವ ವೃಕ್ಷಕ್ಕೆ ಹಕ್ಕಿಗಳು ಮುತ್ತಿಕೊಳ್ಳುವಂತೆ ಅವರ ಶರಗಳು ಅರ್ಜುನನ ಶರೀರದ ಸುತ್ತಲೂ ಚುಚ್ಚಿಕೊಂಡವು.

06098013a ಅರ್ಜುನಸ್ತು ರಣೇ ನಾದಂ ವಿನದ್ಯ ರಥಿನಾಂ ವರಃ।
06098013c ತ್ರಿಗರ್ತರಾಜಂ ಸಮರೇ ಸಪುತ್ರಂ ವಿವ್ಯಧೇ ಶರೈಃ।।

ರಥಿಗಳಲ್ಲಿ ಶ್ರೇಷ್ಠ ಅರ್ಜುನನಾದರೋ ರಣದಲ್ಲಿ ಸಿಂಹನಾದ ಮಾಡಿ ಸಮರದಲ್ಲಿ ಪುತ್ರನೊಂದಿಗೆ ತ್ರಿಗರ್ತರಾಜನನ್ನು ಶರಗಳಿಂದ ಹೊಡೆದನು.

06098014a ತೇ ವಧ್ಯಮಾನಾಃ ಪಾರ್ಥೇನ ಕಾಲೇನೇವ ಯುಗಕ್ಷಯೇ।
06098014c ಪಾರ್ಥಮೇವಾಭ್ಯವರ್ತಂತ ಮರಣೇ ಕೃತನಿಶ್ಚಯಾಃ।
06098014e ಮುಮುಚುಃ ಶರವೃಷ್ಟಿಂ ಚ ಪಾಂಡವಸ್ಯ ರಥಂ ಪ್ರತಿ।।

ಪ್ರಲಯಕಾಲದಲ್ಲಿ ಕಾಲಪುರುಷನಂತೆ ಪಾರ್ಥನಿಂದ ಪ್ರಹೃತರಾದ ಅವರು ಮರಣದ ನಿಶ್ಚಯವನ್ನು ಮಾಡಿ ಪಾರ್ಥನನ್ನೇ ಎದುರಿಸಿ, ಪಾಂಡವನ ರಥದ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು.

06098015a ಶರವೃಷ್ಟಿಂ ತತಸ್ತಾಂ ತು ಶರವರ್ಷೇಣ ಪಾಂಡವಃ।
06098015c ಪ್ರತಿಜಗ್ರಾಹ ರಾಜೇಂದ್ರ ತೋಯವೃಷ್ಟಿಂ ಇವಾಚಲಃ।।

ರಾಜೇಂದ್ರ! ಅಚಲವಾಗಿದ್ದು ಪರ್ವತವು ನೀರಿನ ಮಳೆಯನ್ನು ಸ್ವೀಕರಿಸುವಂತೆ ಅವರು ಸುರಿಸಿದ ಬಾಣಗಳ ಮಳೆಯನ್ನು ಪಾಂಡವನು ತಡೆದುಕೊಂಡನು.

06098016a ತತ್ರಾದ್ಭುತಮಪಶ್ಯಾಮ ಬೀಭತ್ಸೋರ್ಹಸ್ತಲಾಘವಂ।
06098016c ವಿಮುಕ್ತಾಂ ಬಹುಭಿಃ ಶೂರೈಃ ಶಸ್ತ್ರವೃಷ್ಟಿಂ ದುರಾಸದಾಂ।।
06098017a ಯದೇಕೋ ವಾರಯಾಮಾಸ ಮಾರುತೋಽಭ್ರಗಣಾನಿವ।
06098017c ಕರ್ಮಣಾ ತೇನ ಪಾರ್ಥಸ್ಯ ತುತುಷುರ್ದೇವದಾನವಾಃ।।

ಅಲ್ಲಿ ನಾವು ಬೀಭತ್ಸುವಿನ ಕೈಚಳಕದ ಅದ್ಭುತವನ್ನು ನೋಡಿದೆವು. ಅನೇಕ ಶೂರರು ಸುರಿಸಿದ ಸಹಿಸಲಸಾದ್ಯ ಬಾಣಗಳ ಮಳೆಯನ್ನು ಅವನೊಬ್ಬನೇ ಭಿರುಗಾಳಿಯು ಮೋಡಗಳ ಸಮೂಹವನ್ನು ಹೇಗೋ ಹಾಗೆ ಚದುರಿಸಿ ತಡೆದನು. ಪಾರ್ಥನ ಆ ಕೆಲಸದಿಂದ ದೇವ-ದಾನವರು ಸಂತುಷ್ಟರಾದರು.

06098018a ಅಥ ಕ್ರುದ್ಧೋ ರಣೇ ಪಾರ್ಥಸ್ತ್ರಿಗರ್ತಾನ್ಪ್ರತಿ ಭಾರತ।
06098018c ಮುಮೋಚಾಸ್ತ್ರಂ ಮಹಾರಾಜ ವಾಯವ್ಯಂ ಪೃತನಾಮುಖೇ।।

ಭಾರತ! ಮಹಾರಾಜ! ಆಗ ಕ್ರುದ್ಧನಾಗಿ ರಣದಲ್ಲಿ ಪಾರ್ಥನು ತ್ರಿಗರ್ತರ ಮೇಲೆ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು.

06098019a ಪ್ರಾದುರಾಸೀತ್ತತೋ ವಾಯುಃ ಕ್ಷೋಭಯಾಣೋ ನಭಸ್ತಲಂ।
06098019c ಪಾತಯನ್ವೈ ತರುಗಣಾನ್ವಿನಿಘ್ನಂಶ್ಚೈವ ಸೈನಿಕಾನ್।।

ಅದರಿಂದ ಭಿರುಗಾಳಿಯು ಹುಟ್ಟಿ ನಭಸ್ತಲವೇ ಅಲ್ಲೋಲಕಲ್ಲೋಲವಾಯಿತು. ಅನೇಕ ವೃಕ್ಷಗಳನ್ನು ಕೆಡವಿ ಸೈನಿಕರನ್ನೂ ಧ್ವಂಸಮಾಡಿತು.

06098020a ತತೋ ದ್ರೋಣೋಽಭಿವೀಕ್ಷ್ಯೈವ ವಾಯವ್ಯಾಸ್ತ್ರಂ ಸುದಾರುಣಂ।
06098020c ಶೈಲಮನ್ಯನ್ಮಹಾರಾಜ ಘೋರಮಸ್ತ್ರಂ ಮುಮೋಚ ಹ।।

ಆಗ ದ್ರೋಣನು ಸುದಾರುಣ ವಾಯವ್ಯಾಸ್ತ್ರವನ್ನು ನೋಡಿ ಬೇರೆ ಘೋರ ಶೈಲಾಸ್ತ್ರವನ್ನು ಪ್ರಯೋಗಿಸಿದನು.

06098021a ದ್ರೋಣೇನ ಯುಧಿ ನಿರ್ಮುಕ್ತೇ ತಸ್ಮಿನ್ನಸ್ತ್ರೇ ಮಹಾಮೃಧೇ।
06098021c ಪ್ರಶಶಾಮ ತತೋ ವಾಯುಃ ಪ್ರಸನ್ನಾಶ್ಚಾಭವನ್ದಿಶಃ।।

ಯುದ್ಧದ ಮಹಾರಣದಲ್ಲಿ ದ್ರೋಣನು ಬಿಟ್ಟ ಆ ಅಸ್ತ್ರವು ಭಿರುಗಾಳಿಯನ್ನು ಪ್ರಶಮನಗೊಳಿಸಿತು. ದಿಕ್ಕುಗಳು ಪ್ರಸನ್ನವಾದವು.

06098022a ತತಃ ಪಾಂಡುಸುತೋ ವೀರಸ್ತ್ರಿಗರ್ತಸ್ಯ ರಥವ್ರಜಾನ್।
06098022c ನಿರುತ್ಸಾಹಾನ್ರಣೇ ಚಕ್ರೇ ವಿಮುಖಾನ್ವಿಪರಾಕ್ರಮಾನ್।।

ಆಗ ವೀರ ಪಾಂಡುಸುತನು ತ್ರಿಗರ್ತನ ರಥಸೇನೆಯನ್ನು ರಣದಲ್ಲಿ ನಿರುತ್ಸಾಹಿಗಳನ್ನಾಗಿಯೂ, ವಿಮುಖರನ್ನಾಗಿಯೂ, ಪರಾಕ್ರಮ ಹೀನರನ್ನಾಗಿಯೂ ಮಾಡಿದನು.

06098023a ತತೋ ದುರ್ಯೋಧನೋ ರಾಜಾ ಕೃಪಶ್ಚ ರಥಿನಾಂ ವರಃ।
06098023c ಅಶ್ವತ್ಥಾಮಾ ತತಃ ಶಲ್ಯಃ ಕಾಂಬೋಜಶ್ಚ ಸುದಕ್ಷಿಣಃ।।
06098024a ವಿಂದಾನುವಿಂದಾವಾವಂತ್ಯೌ ಬಾಹ್ಲಿಕಶ್ಚ ಸಬಾಹ್ಲಿಕಃ।
06098024c ಮಹತಾ ರಥವಂಶೇನ ಪಾರ್ಥಸ್ಯಾವಾರಯನ್ದಿಶಃ।।

ಆಗ ರಾಜಾ ದುರ್ಯೋಧನ, ರಥಿಗಳಲ್ಲಿ ಶ್ರೇಷ್ಠ ಕೃಪ, ಅಶ್ವತ್ಥಾಮ, ಶಲ್ಯ, ಕಾಂಬೋಜದ ಸುದಕ್ಷಿಣ, ಅವಂತಿಯ ವಿಂದಾನುವಿಂದರು ಮತ್ತು ಬಾಹ್ಲಿಕರೊಂದಿಗೆ ಬಾಹ್ಲೀಕ ಇವರುಗಳು ಮಹಾ ರಥಸೇನೆಯಿಂದ ಪಾರ್ಥನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

06098025a ತಥೈವ ಭಗದತ್ತಶ್ಚ ಶ್ರುತಾಯುಶ್ಚ ಮಹಾಬಲಃ।
06098025c ಗಜಾನೀಕೇನ ಭೀಮಸ್ಯ ತಾವವಾರಯತಾಂ ದಿಶಃ।।

ಹಾಗೆಯೇ ಭಗದತ್ತ ಮತ್ತು ಮಹಾಬಲ ಶ್ರುತಾಯು ಇವರು ಗಜಸೇನೆಗಳಿಂದ ಭೀಮನನ್ನು ಎಲ್ಲ ಕಡೆಗಳಿಂದಲೂ ತಡೆದರು.

06098026a ಭೂರಿಶ್ರವಾಃ ಶಲಶ್ಚೈವ ಸೌಬಲಶ್ಚ ವಿಶಾಂ ಪತೇ।
06098026c ಶರೌಘೈರ್ವಿವಿಧೈಸ್ತೂರ್ಣಂ ಮಾದ್ರೀಪುತ್ರಾವವಾರಯನ್।।

ವಿಶಾಂಪತೇ! ಭೂರಿಶ್ರವ, ಶಲ, ಮತ್ತು ಸೌಬಲರು ತಕ್ಷಣವೇ ವಿವಿಧ ಶರಜಾಲಗಳಿಂದ ಮಾದ್ರೀಪುತ್ರರನ್ನು ತಡೆದರು.

06098027a ಭೀಷ್ಮಸ್ತು ಸಹಿತಃ ಸರ್ವೈರ್ಧಾರ್ತರಾಷ್ಟ್ರಸ್ಯ ಸೈನಿಕೈಃ।
06098027c ಯುಧಿಷ್ಠಿರಂ ಸಮಾಸಾದ್ಯ ಸರ್ವತಃ ಪರ್ಯವಾರಯತ್।।

ಭೀಷ್ಮನಾದರೋ ಎಲ್ಲ ಧಾರ್ತರಾಷ್ಟ್ರರ ಎಲ್ಲ ಸೈನಿಕರೊಂದಿಗೆ ಯುಧಿಷ್ಠಿರನನ್ನು ಎದುರಿಸಿ ಎಲ್ಲ ಕಡೆಗಳಿಂದ ಸುತ್ತುವರೆದರು.

06098028a ಆಪತಂತಂ ಗಜಾನೀಕಂ ದೃಷ್ಟ್ವಾ ಪಾರ್ಥೋ ವೃಕೋದರಃ।
06098028c ಲೇಲಿಹನ್ಸೃಕ್ಕಿಣೀ ವೀರೋ ಮೃಗರಾಡಿವ ಕಾನನೇ।।

ಮೇಲೆ ಬೀಳುತ್ತಿದ್ದ ಗಜಸೇನೆಯನ್ನು ನೋಡಿ ಪಾರ್ಥ ವೃಕೋದರ ವೀರನು ಕಾನನದಲ್ಲಿರುವ ಮೃಗರಾಜನಂತೆ ತನ್ನ ಕಟವಾಯಿಗಳನ್ನು ನೆಕ್ಕಿದನು.

06098029a ತತಸ್ತು ರಥಿನಾಂ ಶ್ರೇಷ್ಠೋ ಗದಾಂ ಗೃಹ್ಯ ಮಹಾಹವೇ।
06098029c ಅವಪ್ಲುತ್ಯ ರಥಾತ್ತೂರ್ಣಂ ತವ ಸೈನ್ಯಮಭೀಷಯತ್।।

ಆಗ ರಥಿಗಳಲ್ಲಿ ಶ್ರೇಷ್ಠನು ಮಹಾಹವದಲ್ಲಿ ಗದೆಯನ್ನು ಹಿಡಿದು ತಕ್ಷಣವೇ ರಥದಿಂದ ಕೆಳಗೆ ಹಾರಿ ನಿನ್ನ ಸೈನ್ಯವನ್ನು ಹೆದರಿಸಿದನು.

06098030a ತಮುದ್ವೀಕ್ಷ್ಯ ಗದಾಹಸ್ತಂ ತತಸ್ತೇ ಗಜಸಾದಿನಃ।
06098030c ಪರಿವವ್ರೂ ರಣೇ ಯತ್ತಾ ಭೀಮಸೇನಂ ಸಮಂತತಃ।।

ಗದಾಪಾಣಿಯಾಗಿ ನಿಂತಿದ್ದ ಭೀಮಸೇನನನ್ನು ನೋಡಿ ಗಜಾರೋಹಿಗಳೂ ರಣದಲ್ಲಿ ಪ್ರಯತ್ನಟ್ಟು ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

06098031a ಗಜಮಧ್ಯಮನುಪ್ರಾಪ್ತಃ ಪಾಂಡವಶ್ಚ ವ್ಯರಾಜತ।
06098031c ಮೇಘಜಾಲಸ್ಯ ಮಹತೋ ಯಥಾ ಮಧ್ಯಗತೋ ರವಿಃ।।

ಆನೆಗಳ ಮಧ್ಯವನ್ನು ಸೇರಿ ಪಾಂಡವನು ಮಹಾ ಮೇಘ ಜಾಲಗಳ ನಡುವೆ ಕಾಣುವ ರವಿಯಂತೆ ವಿರಾಜಿಸಿದನು.

06098032a ವ್ಯಧಮತ್ಸ ಗಜಾನೀಕಂ ಗದಯಾ ಪಾಂಡವರ್ಷಭಃ।
06098032c ಮಹಾಭ್ರಜಾಲಮತುಲಂ ಮಾತರಿಶ್ವೇವ ಸಂತತಂ।।

ಪಾಂಡವರ್ಷಭನು ಆ ಗಜಸೇನೆಯನ್ನು ಭಿರುಗಾಳಿಯು ಮಹಾ ಮೋಡಗಳ ಜಾಲವನ್ನು ಹೇಗೋ ಹಾಗೆ ಎಲ್ಲಕಡೆ ಚದುರಿಸಿದನು.

06098033a ತೇ ವಧ್ಯಮಾನಾ ಬಲಿನಾ ಭೀಮಸೇನೇನ ದಂತಿನಃ।
06098033c ಆರ್ತನಾದಂ ರಣೇ ಚಕ್ರುರ್ಗರ್ಜಂತೋ ಜಲದಾ ಇವ।।

ಬಲಶಾಲಿ ಭೀಮಸೇನನಿಂದ ವಧಿಸಲ್ಪಡುತ್ತಿದ್ದ ಆ ಆನೆಗಳು ರಣದಲ್ಲಿ ಮೋಡಗಳು ಗುಡುಗುವಂತೆ ಗರ್ಜಿಸಿದವು.

06098034a ಬಹುಧಾ ದಾರಿತಶ್ಚೈವ ವಿಷಾಣೈಸ್ತತ್ರ ದಂತಿಭಿಃ।
06098034c ಫುಲ್ಲಾಶೋಕನಿಭಃ ಪಾರ್ಥಃ ಶುಶುಭೇ ರಣಮೂರ್ಧನಿ।।

ರಣಮೂರ್ಧನಿಯಲ್ಲಿ ಅನೇಕ ಆನೆಗಳಿಂದ ಸೀಳಲ್ಪಟ್ಟ ಮತ್ತು ಗಾಯಗೊಂಡ ಪಾರ್ಥನು ಹೂಬಿಟ್ಟ ಅಶೋಕವೃಕ್ಷದಂತೆ ಶೋಭಿಸಿದನು.

06098035a ವಿಷಾಣೇ ದಂತಿನಂ ಗೃಹ್ಯ ನಿರ್ವಿಷಾಣಮಥಾಕರೋತ್।
06098035c ವಿಷಾಣೇನ ಚ ತೇನೈವ ಕುಂಭೇಽಭ್ಯಾಹತ್ಯ ದಂತಿನಂ।
06098035e ಪಾತಯಾಮಾಸ ಸಮರೇ ದಂಡಹಸ್ತ ಇವಾಂತಕಃ।।

ತಿವಿಯಲು ಬಂದ ದಂತವನ್ನೇ ಹಿಡಿದು ಜಗ್ಗಾಡಿ ಕಿತ್ತು ಅವುಗಳಿಂದಲೇ ದಂಡವನ್ನು ಹಿಡಿದ ಅಂತಕನಂತೆ ಆನೆಗಳ ಕುಂಭಸ್ಥಳಗಳನ್ನು ತಿವಿದು ಸಾಯಿಸುತ್ತಿದ್ದನು.

06098036a ಶೋಣಿತಾಕ್ತಾಂ ಗದಾಂ ಬಿಭ್ರನ್ಮೇದೋಮಜ್ಜಾಕೃತಚ್ಛವಿಃ।
06098036c ಕೃತಾಂಗದಃ ಶೋಣಿತೇನ ರುದ್ರವತ್ಪ್ರತ್ಯದೃಶ್ಯತ।।

ರಕ್ತದಿಂದ ನೆನೆದಿದ್ದ ಗದೆಯನ್ನು ಹಿಡಿದು, ಮೇಡಸ್ಸು, ಮಜ್ಜೆಗಳು ಶರೀರದ ಮೇಲೆ ಹಾರಿ ಪ್ರಕಾಶಿಸುತ್ತಿದ್ದ ಅವನು ರಕ್ತದಿಂದ ಅಭ್ಯಂಜನ ಮಾಡಿದ ರುದ್ರನಂತೆ ತೋರಿದನು.

06098037a ಏವಂ ತೇ ವಧ್ಯಮಾನಾಸ್ತು ಹತಶೇಷಾ ಮಹಾಗಜಾಃ।
06098037c ಪ್ರಾದ್ರವಂತ ದಿಶೋ ರಾಜನ್ವಿಮೃದ್ನಂತಃ ಸ್ವಕಂ ಬಲಂ।।

ರಾಜನ್! ಹೀಗೆ ವಧಿಸಲ್ಪಟ್ಟು ಉಳಿದಿದ್ದ ಮಹಾಗಜಗಳು ತಮ್ಮದೇ ಸೇನೆಯನ್ನು ಧ್ವಂಸಮಾಡುತ್ತಾ ಎಲ್ಲಾಕಡೆ ಓಡಿಹೋದವು.

06098038a ದ್ರವದ್ಭಿಸ್ತೈರ್ಮಹಾನಾಗೈಃ ಸಮಂತಾದ್ಭರತರ್ಷಭ।
06098038c ದುರ್ಯೋಧನಬಲಂ ಸರ್ವಂ ಪುನರಾಸೀತ್ಪರಾಙ್ಮುಖಂ।।

ಭರತರ್ಷಭ! ಎಲ್ಲ ಕಡೆಗಳಿಂದಲೂ ಗಜಸೈನ್ಯಗಳು ಪಲಾಯನ ಮಾಡುತ್ತಿದ್ದುದರಿಂದ ಉಳಿದ ದುರ್ಯೋಧನನ ಸೇನೆಯೆಲ್ಲವೂ ಪರಾಙ್ಮುಖವಾಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಮಪರಾಕ್ರಮೇ ಅಷ್ಟನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಮಪರಾಕ್ರಮ ಎನ್ನುವ ತೊಂಭತ್ತೆಂಟನೇ ಅಧ್ಯಾಯವು.