097 ಅಲಂಬುಷಾಭಿಮನ್ಯುಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 97

ಸಾರ

ಅಭಿಮನ್ಯು-ಅಲಂಬುಸರ ಯುದ್ಧ (1-27). ಅಶ್ವತ್ಥಾಮ-ಸಾತ್ಯಕಿಯರ ಯುದ್ಧ (28-57).

06097001 ಧೃತರಾಷ್ಟ್ರ ಉವಾಚ।
06097001a ಆರ್ಜುನಿಂ ಸಮರೇ ಶೂರಂ ವಿನಿಘ್ನಂತಂ ಮಹಾರಥಂ।
06097001c ಅಲಂಬುಸಃ ಕಥಂ ಯುದ್ಧೇ ಪ್ರತ್ಯಯುಧ್ಯತ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಸಮರದಲ್ಲಿ ಸಂಹರಿಸುತ್ತಿದ್ದ ಶೂರ ಮಹಾರಥ ಆರ್ಜುನಿಯೊಂದಿಗೆ ಅಲಂಬುಸನು ಹೇಗೆ ಯುದ್ಧಮಾಡಿದನು?

06097002a ಆರ್ಶ್ಯಶೃಂಗಿಂ ಕಥಂ ಚಾಪಿ ಸೌಭದ್ರಃ ಪರವೀರಹಾ।
06097002c ತನ್ಮಮಾಚಕ್ಷ್ವ ತತ್ತ್ವೇನ ಯಥಾ ವೃತ್ತಂ ಸ್ಮ ಸಂಯುಗೇ।।

ಆರ್ಶ್ಯಶೃಂಗಿಯೊಡನೆ ಪರವೀರಹ ಸೌಭದ್ರನು ಕೂಡ ಹೇಗೆ ಯುದ್ಧ ಮಾಡಿದನು? ಸಂಯುಗದಲ್ಲಿ ನಡೆದ ಹಾಗೆ ನನಗೆ ಎಲ್ಲವನ್ನೂ ಹೇಳು.

06097003a ಧನಂಜಯಶ್ಚ ಕಿಂ ಚಕ್ರೇ ಮಮ ಸೈನ್ಯೇಷು ಸಂಜಯ।
06097003c ಭೀಮೋ ವಾ ಬಲಿನಾಂ ಶ್ರೇಷ್ಠೋ ರಾಕ್ಷಸೋ ವಾ ಘಟೋತ್ಕಚಃ।।
06097004a ನಕುಲಃ ಸಹದೇವೋ ವಾ ಸಾತ್ಯಕಿರ್ವಾ ಮಹಾರಥಃ।
06097004c ಏತದಾಚಕ್ಷ್ವ ಮೇ ಸರ್ವಂ ಕುಶಲೋ ಹ್ಯಸಿ ಸಂಜಯ।।

ಸಂಜಯ! ನನ್ನ ಸೈನ್ಯಗಳ ಕುರಿತು ಧನಂಜಯನು ಏನು ಮಾಡಿದನು? ಬಲಿಗಳಲ್ಲಿ ಶ್ರೇಷ್ಠ ಭೀಮ, ಅಥವಾ ರಾಕ್ಷಸ ಘಟೋತ್ಕಚ, ನಕುಲ, ಸಹದೇವ, ಅಥವಾ ಮಹಾರಥ ಸಾತ್ಯಕಿಯರು ಏನು ಮಾಡಿದರು? ಇವೆಲ್ಲವನ್ನೂ ನನಗೆ ಹೇಳು. ಅದರಲ್ಲಿ ನೀನು ಕುಶಲನಾಗಿದ್ದೀಯೆ.”

06097005 ಸಂಜಯ ಉವಾಚ।
06097005a ಹಂತ ತೇಽಹಂ ಪ್ರವಕ್ಷ್ಯಾಮಿ ಸಂಗ್ರಾಮಂ ಲೋಮಹರ್ಷಣಂ।
06097005c ಯಥಾಭೂದ್ರಾಕ್ಷಸೇಂದ್ರಸ್ಯ ಸೌಭದ್ರಸ್ಯ ಚ ಮಾರಿಷ।।

ಸಂಜಯನು ಹೇಳಿದನು: “ಮಾರಿಷ! ನಿಲ್ಲು! ನಿನಗೆ ರಾಕ್ಷಸೇಂದ್ರ ಮತ್ತು ಸೌಭದ್ರರ ನಡುವೆ ನಡೆದ ಸಂಗ್ರಾಮದ ಕುರಿತು ನಡೆದಂತೆ ಹೇಳುತ್ತೇನೆ.

06097006a ಅರ್ಜುನಶ್ಚ ಯಥಾ ಸಂಖ್ಯೇ ಭೀಮಸೇನಶ್ಚ ಪಾಂಡವಃ।
06097006c ನಕುಲಃ ಸಹದೇವಶ್ಚ ರಣೇ ಚಕ್ರುಃ ಪರಾಕ್ರಮಂ।।
06097007a ತಥೈವ ತಾವಕಾಃ ಸರ್ವೇ ಭೀಷ್ಮದ್ರೋಣಪುರೋಗಮಾಃ।
06097007c ಅದ್ಭುತಾನಿ ವಿಚಿತ್ರಾಣಿ ಚಕ್ರುಃ ಕರ್ಮಾಣ್ಯಭೀತವತ್।।

ಮತ್ತು ಯುದ್ಧದಲ್ಲಿ ಅರ್ಜುನ, ಪಾಂಡವ ಭೀಮಸೇನ, ನಕುಲ ಸಹದೇವರು ರಣದಲ್ಲಿ ಮಾಡಿದ ಪರಾಕ್ರಮದ ಕುರಿತು ಮತ್ತು ಭೀಷ್ಮ-ದ್ರೋಣ ಮೊದಲಾದ ನಿನ್ನವರೆಲ್ಲರೂ ಭಯಗೊಳ್ಳದೇ ಮಾಡಿದ ಅದ್ಭುತ ವಿಚಿತ್ರಗಳ ಕುರಿತೂ ಹೇಳುತ್ತೇನೆ.

06097008a ಅಲಂಬುಸಸ್ತು ಸಮರೇ ಅಭಿಮನ್ಯುಂ ಮಹಾರಥಂ।
06097008c ವಿನದ್ಯ ಸುಮಹಾನಾದಂ ತರ್ಜಯಿತ್ವಾ ಮುಹುರ್ಮುಹುಃ।
06097008e ಅಭಿದುದ್ರಾವ ವೇಗೇನ ತಿಷ್ಠ ತಿಷ್ಠೇತಿ ಚಾಬ್ರವೀತ್।।

ಅಲಂಬುಸನಾದರೋ ಸಮರದಲ್ಲಿ ಮಹಾರಥ ಅಭಿಮನ್ಯುವನ್ನು ಪುನಃ ಪುನಃ ಮಹಾನಾದಗೈದು ಬೆದರಿಸುತ್ತಾ ವೇಗದಿಂದ ಧಾವಿಸಿ ಬಂದು “ನಿಲ್ಲು! ನಿಲ್ಲು!” ಎಂದನು.

06097009a ಸೌಭದ್ರೋಽಪಿ ರಣೇ ರಾಜನ್ಸಿಂಹವದ್ವಿನದನ್ಮುಹುಃ।
06097009c ಆರ್ಶ್ಯಶೃಂಗಿಂ ಮಹೇಷ್ವಾಸಂ ಪಿತುರತ್ಯಂತವೈರಿಣಂ।।

ರಾಜನ್! ಸೌಭದ್ರನೂ ಕೂಡ ರಣದಲ್ಲಿ ಮತ್ತೆ ಮತ್ತೆ ಸಿಂಹದಂತೆ ಗರ್ಜಿಸಿ ತನ್ನ ತಂದೆಯ ಅತ್ಯಂತ ವೈರಿ ಮಹೇಷ್ವಾಸ ಆರ್ಶ್ಯಶೃಂಗಿಯನ್ನು ಎದುರಿಸಿದನು.

06097010a ತತಃ ಸಮೇಯತುಃ ಸಂಖ್ಯೇ ತ್ವರಿತೌ ನರರಾಕ್ಷಸೌ।
06097010c ರಥಾಭ್ಯಾಂ ರಥಿನಾಂ ಶ್ರೇಷ್ಠೌ ಯಥಾ ವೈ ದೇವದಾನವೌ।
06097010e ಮಾಯಾವೀ ರಾಕ್ಷಸಶ್ರೇಷ್ಠೋ ದಿವ್ಯಾಸ್ತ್ರಜ್ಞಶ್ಚ ಫಾಲ್ಗುನಿಃ।।

ಆಗ ಯುದ್ಧದಲ್ಲಿ ತ್ವರೆಮಾಡಿ ರಥಿಗಳಲ್ಲಿ ಶ್ರೇಷ್ಠರಾದ ರಥಿಗಳಿಬ್ಬರೂ, ಮಾಯಾವೀ ರಾಕ್ಷಸಶ್ರೇಷ್ಠ ಮತ್ತು ದಿವ್ಯಾಸ್ತ್ರಜ್ಞ ಫಾಲ್ಗುನಿ ನರ-ರಾಕ್ಷಸರಿಬ್ಬರೂ ದೇವ-ದಾನವರಂತೆ ಹೋರಾಡಿದರು.

06097011a ತತಃ ಕಾರ್ಷ್ಣಿರ್ಮಹಾರಾಜ ನಿಶಿತೈಃ ಸಾಯಕೈಸ್ತ್ರಿಭಿಃ।
06097011c ಆರ್ಶ್ಯಶೃಂಗಿಂ ರಣೇ ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ।।

ಮಹಾರಾಜ! ಆಗ ಕಾರ್ಷ್ಣಿಯು ಮೂರು ನಿಶಿತ ಸಾಯಕಗಳಿಂದ ಆರ್ಶ್ಯಶೃಂಗಿಯನ್ನು ರಣದಲ್ಲಿ ಹೊಡೆದು ಪುನಃ ಐದರಿಂದ ಹೊಡೆದನು.

06097012a ಅಲಂಬುಸೋಽಪಿ ಸಂಕ್ರುದ್ಧಃ ಕಾರ್ಷ್ಣಿಂ ನವಭಿರಾಶುಗೈಃ।
06097012c ಹೃದಿ ವಿವ್ಯಾಧ ವೇಗೇನ ತೋತ್ತ್ರೈರಿವ ಮಹಾದ್ವಿಪಂ।।

ಅಲಂಬುಸನೂ ಕೂಡ ಸಂಕ್ರುದ್ಧನಾಗಿ ಮಹಾಗಜವನ್ನು ಅಂಕುಶದಿಂದ ತಿವಿಯುವಂತೆ ಕಾರ್ಷ್ಣಿಯ ಎದೆಗೆ ಒಂಭತ್ತು ಆಶುಗಗಳಿಂದ ಹೊಡೆದನು.

06097013a ತತಃ ಶರಸಹಸ್ರೇಣ ಕ್ಷಿಪ್ರಕಾರೀ ನಿಶಾಚರಃ।
06097013c ಅರ್ಜುನಸ್ಯ ಸುತಂ ಸಂಖ್ಯೇ ಪೀಡಯಾಮಾಸ ಭಾರತ।।

ಭಾರತ! ಆಗ ಕ್ಷಿಪ್ರಕಾರೀ ನಿಶಾಚರನು ರಣದಲ್ಲಿ ಸಹಸ್ರಾರು ಶರಗಳಿಂದ ಅರ್ಜುನನ ಮಗನನ್ನು ಪೀಡಿಸಿದನು.

06097014a ಅಭಿಮನ್ಯುಸ್ತತಃ ಕ್ರುದ್ಧೋ ನವತಿಂ ನತಪರ್ವಣಾಂ।
06097014c ಚಿಕ್ಷೇಪ ನಿಶಿತಾನ್ಬಾಣಾನ್ರಾಕ್ಷಸಸ್ಯ ಮಹೋರಸಿ।।

ಆಗ ಅಭಿಮನ್ಯುವು ಕ್ರುದ್ಧನಾಗಿ ತೊಂಭತ್ತು ನಿಶಿತ ನತಪರ್ವಣ ಶರಗಳನ್ನು ರಾಕ್ಷಸನ ವಿಶಾಲ ಎದೆಯಮೇಲೆ ಪ್ರಯೋಗಿಸಿದನು.

06097015a ತೇ ತಸ್ಯ ವಿವಿಶುಸ್ತೂರ್ಣಂ ಕಾಯಂ ನಿರ್ಭಿದ್ಯ ಮರ್ಮಣಿ।
06097015c ಸ ತೈರ್ವಿಭಿನ್ನಸರ್ವಾಂಗಃ ಶುಶುಭೇ ರಾಕ್ಷಸೋತ್ತಮಃ।
06097015e ಪುಷ್ಪಿತೈಃ ಕಿಂಶುಕೈ ರಾಜನ್ಸಂಸ್ತೀರ್ಣ ಇವ ಪರ್ವತಃ।।

ಅವು ತಕ್ಷಣವೇ ಅವನ ಶರೀರವನ್ನು ಹೊಕ್ಕು ಮರ್ಮಗಳನ್ನು ಚುಚ್ಚಿದವು. ರಾಜನ್! ಅವುಗಳಿಂದ ಸರ್ವಾಂಗಗಳಲ್ಲಿ ಗಾಯಗೊಂಡ ಆ ರಕ್ಷಸೋತ್ತಮನು ಪುಷ್ಪಭರಿತ ಕಿಂಶುಕಗಳಿಂದ ತುಂಬಿದ ಪರ್ವತದಂತೆ ಶೋಭಿಸಿದನು.

06097016a ಸ ಧಾರಯನ್ ಶರಾನ್ ಹೇಮಪುಂಖಾನಪಿ ಮಹಾಬಲಃ।
06097016c ವಿಬಭೌ ರಾಕ್ಷಸಶ್ರೇಷ್ಠಃ ಸಜ್ವಾಲ ಇವ ಪರ್ವತಃ।।

ಬಂಗಾರದ ರೆಕ್ಕೆಗಳಿದ್ದ ಆ ಬಾಣಗಳನ್ನು ಧರಿಸಿದ ಮಹಾಬಲ ರಾಕ್ಷಸಶ್ರೇಷ್ಠನು ಹತ್ತಿ ಉರಿಯುತ್ತಿರುವ ಪರ್ವತದಂತೆ ಕಂಡನು.

06097017a ತತಃ ಕ್ರುದ್ಧೋ ಮಹಾರಾಜ ಆರ್ಶ್ಯಶೃಂಗಿರ್ಮಹಾಬಲಃ।
06097017c ಮಹೇಂದ್ರಪ್ರತಿಮಂ ಕಾರ್ಷ್ಣಿಂ ಚಾದಯಾಮಾಸ ಪತ್ರಿಭಿಃ।।

ಮಹಾರಾಜ! ಆಗ ಕ್ರುದ್ಧ ಮಹಾಬಲ ಆರ್ಶ್ಯಶೃಂಗಿಯು ಮಹೇಂದ್ರನಂತಿದ್ದ ಕಾರ್ಷ್ಣಿಯನ್ನು ಪತ್ರಿಗಳಿಂದ ಮುಚ್ಚಿದನು.

06097018a ತೇನ ತೇ ವಿಶಿಖಾ ಮುಕ್ತಾ ಯಮದಂಡೋಪಮಾಃ ಶಿತಾಃ।
06097018c ಅಭಿಮನ್ಯುಂ ವಿನಿರ್ಭಿದ್ಯ ಪ್ರಾವಿಶನ್ಧರಣೀತಲಂ।।

ಅವನು ಪ್ರಯೋಗಿಸಿದ ಯಮದಂಡದಂತಿರುವ ನಿಶಿತ ವಿಶಿಖಗಳು ಅಭಿಮನ್ಯುವನ್ನು ಹೊಕ್ಕು ಗಾಯಗೊಳಿಸಿ ಭೂಮಿಯನ್ನು ಪ್ರವೇಶಿಸಿದವು.

06097019a ತಥೈವಾರ್ಜುನಿನಿರ್ಮುಕ್ತಾಃ ಶರಾಃ ಕಾಂಚನಭೂಷಣಾಃ।
06097019c ಅಲಂಬುಸಂ ವಿನಿರ್ಭಿದ್ಯ ಪ್ರಾವಿಶಂತ ಧರಾತಲಂ।।

ಹಾಗೆಯೇ ಆರ್ಜುನಿಯು ಬಿಟ್ಟ ಕಾಂಚನಭೂಷಣ ಶರಗಳು ಅಲಂಬುಸನನ್ನು ಹೊಕ್ಕು ಗಾಯಗೊಳಿಸಿ ಭೂಮಿಯನ್ನು ಪ್ರವೇಶಿಸಿದವು.

06097020a ಸೌಭದ್ರಸ್ತು ರಣೇ ರಕ್ಷಃ ಶರೈಃ ಸನ್ನತಪರ್ವಭಿಃ।
06097020c ಚಕ್ರೇ ವಿಮುಖಮಾಸಾದ್ಯ ಮಯಂ ಶಕ್ರ ಇವಾಹವೇ।।

ಆಹವದಲ್ಲಿ ಶಕ್ರನು ಮಯನನ್ನು ಹೇಗೋ ಹಾಗೆ ರಣದಲ್ಲಿ ಸೌಭದ್ರನು ರಾಕ್ಷಸನನ್ನು ಸನ್ನತಪರ್ವಗಳಿಂದ ಹೊಡೆದು ಹಿಂದೆ ಸರಿಯುವಂತೆ ಮಾಡಿದನು.

06097021a ವಿಮುಖಂ ಚ ತತೋ ರಕ್ಷೋ ವಧ್ಯಮಾನಂ ರಣೇಽರಿಣಾ।
06097021c ಪ್ರಾದುಶ್ಚಕ್ರೇ ಮಹಾಮಾಯಾಂ ತಾಮಸೀಂ ಪರತಾಪನಃ।।

ಹೀಗೆ ಶತ್ರುವಿನಿಂದ ಪೆಟ್ಟುತಿಂದ ರಣದಿಂದ ಹಿಂದೆಸರಿದ ಪರತಾಪನ ರಾಕ್ಷಸನು ಮಹಾಮಾಯೆಯಿಂದ ಕತ್ತಲೆಯನ್ನು ಆವರಿಸುವಂತೆ ಮಾಡಿದನು.

06097022a ತತಸ್ತೇ ತಮಸಾ ಸರ್ವೇ ಹೃತಾ ಹ್ಯಾಸನ್ಮಹೀತಲೇ।
06097022c ನಾಭಿಮನ್ಯುಮಪಶ್ಯಂತ ನೈವ ಸ್ವಾನ್ನ ಪರಾನ್ರಣೇ।।

ಆಗ ಅವನ ಆ ಕತ್ತಲೆಯಿಂದ ಭೂಮಿಯ ಮೇಲೆ ಎಲ್ಲವೂ ಕಳೆದು ಹೋದಂತಾಯಿತು. ರಣದಲ್ಲಿ ನಮಗೆ ಅಭಿಮನ್ಯುವೂ ಕಾಣಲಿಲ್ಲ. ನಮ್ಮವರು ಶತ್ರುಗಳು ಯಾರೂ ಕಾಣಲಿಲ್ಲ.

06097023a ಅಭಿಮನ್ಯುಶ್ಚ ತದ್ದೃಷ್ಟ್ವಾ ಘೋರರೂಪಂ ಮಹತ್ತಮಃ।
06097023c ಪ್ರಾದುಶ್ಚಕ್ರೇಽಸ್ತ್ರಮತ್ಯುಗ್ರಂ ಭಾಸ್ಕರಂ ಕುರುನಂದನಃ।।

ಆ ಘೋರರೂಪ ಮಹಾ ಕತ್ತಲೆಯನ್ನು ನೋಡಿ ಕುರುನಂದನ ಅಭಿಮನ್ಯುವು ಅತಿ ಉಗ್ರ ಭಾಸ್ಕರ ಅಸ್ತ್ರವನ್ನು ಪ್ರಯೋಗಿಸಿದನು.

06097024a ತತಃ ಪ್ರಕಾಶಮಭವಜ್ಜಗತ್ಸರ್ವಂ ಮಹೀಪತೇ।
06097024c ತಾಂ ಚಾಪಿ ಜಘ್ನಿವಾನ್ಮಾಯಾಂ ರಾಕ್ಷಸಸ್ಯ ದುರಾತ್ಮನಃ।।

ಮಹೀಪತೇ! ಆಗ ಜಗತ್ತಿನ ಎಲ್ಲ ಕಡೆ ಪ್ರಕಾಶವಾಯಿತು. ಆ ದುರಾತ್ಮ ರಾಕ್ಷಸನ ಮಾಯೆಯೂ ಕೂಡ ನಾಶವಾಯಿತು.

06097025a ಸಂಕ್ರುದ್ಧಶ್ಚ ಮಹಾವೀರ್ಯೋ ರಾಕ್ಷಸೇಂದ್ರಂ ನರೋತ್ತಮಃ।
06097025c ಚಾದಯಾಮಾಸ ಸಮರೇ ಶರೈಃ ಸನ್ನತಪರ್ವಭಿಃ।।

ಮಹಾವೀರ್ಯ ನರೋತ್ತಮನು ಸಂಕ್ರುದ್ಧನಾಗಿ ರಾಕ್ಷಸೇಂದ್ರನನ್ನು ಸಮರದಲ್ಲಿ ಸನ್ನತಪರ್ವಗಳಿಂದ ಮುಚ್ಚಿದನು.

06097026a ಬಹ್ವೀಸ್ತಥಾನ್ಯಾ ಮಾಯಾಶ್ಚ ಪ್ರಯುಕ್ತಾಸ್ತೇನ ರಕ್ಷಸಾ।
06097026c ಸರ್ವಾಸ್ತ್ರವಿದಮೇಯಾತ್ಮಾ ವಾರಯಾಮಾಸ ಫಾಲ್ಗುನಿಃ।।

ಆ ರಾಕ್ಷಸನು ಇನ್ನೂ ಇತರ ಅನೇಕ ಮಾಯೆಗಳನ್ನು ಬಳಸಿದನು. ಸರ್ವಾಸ್ತ್ರಗಳನ್ನು ತಿಳಿದುಕೊಂಡಿದ್ದ ಅಮೇಯಾತ್ಮ ಫಾಲ್ಗುನಿಯು ಅವುಗಳನ್ನೂ ನಿಲ್ಲಿಸಿದನು.

06097027a ಹತಮಾಯಂ ತತೋ ರಕ್ಷೋ ವಧ್ಯಮಾನಂ ಚ ಸಾಯಕೈಃ।
06097027c ರಥಂ ತತ್ರೈವ ಸಂತ್ಯಜ್ಯ ಪ್ರಾದ್ರವನ್ಮಹತೋ ಭಯಾತ್।।

ತನ್ನ ಮಾಯೆಯನ್ನು ಕಳೆದುಕೊಂಡು ಮತ್ತು ಸಾಯಕಗಳಿಂದ ಹೊಡೆಯಲ್ಪಟ್ಟು ರಾಕ್ಷಸನು ಅಲ್ಲಿಯೇ ರಥವನ್ನು ಬಿಟ್ಟು ಮಹಾ ಭಯದಿಂದ ಓಡಿ ಹೋದನು.

06097028a ತಸ್ಮಿನ್ವಿನಿರ್ಜಿತೇ ತೂರ್ಣಂ ಕೂಟಯೋಧಿನಿ ರಾಕ್ಷಸೇ।
06097028c ಆರ್ಜುನಿಃ ಸಮರೇ ಸೈನ್ಯಂ ತಾವಕಂ ಸಮ್ಮಮರ್ದ ಹ।
06097028e ಮದಾಂಧೋ ವನ್ಯನಾಗೇಂದ್ರಃ ಸಪದ್ಮಾಂ ಪದ್ಮಿನೀಂ ಇವ।।

ಆ ಕೂಟಯೋಧಿನಿ ರಾಕ್ಷಸನನ್ನು ಕಳುಹಿಸಿ ತಕ್ಷಣವೇ ಆರ್ಜುನಿಯು ನಿನ್ನವರ ಸೇನೆಯನ್ನು ಸಮರದಲ್ಲಿ ಕಾಡಿನ ಮದಾಂಧ ಆನೆಯು ಪದ್ಮಗಳಿರುವ ಸರೋವರವನ್ನು ಹೇಗೋ ಹಾಗೆ ಮರ್ದಿಸಿದನು.

06097029a ತತಃ ಶಾಂತನವೋ ಭೀಷ್ಮಃ ಸೈನ್ಯಂ ದೃಷ್ಟ್ವಾಭಿವಿದ್ರುತಂ।
06097029c ಮಹತಾ ರಥವಂಶೇನ ಸೌಭದ್ರಂ ಪರ್ಯವಾರಯತ್।।

ಆಗ ಶಾಂತನವ ಭೀಷ್ಮನು ಸೈನ್ಯವು ಓಡಿ ಹೋಗುತ್ತಿರುವುದನ್ನು ನೋಡಿ ಮಹಾ ರಥಸೇನೆಯಿಂದ ಸೌಭದ್ರನನ್ನು ಸುತ್ತುವರೆದನು.

06097030a ಕೋಷ್ಠಕೀಕೃತ್ಯ ತಂ ವೀರಂ ಧಾರ್ತರಾಷ್ಟ್ರಾ ಮಹಾರಥಾಃ।
06097030c ಏಕಂ ಸುಬಹವೋ ಯುದ್ಧೇ ತತಕ್ಷುಃ ಸಾಯಕೈರ್ದೃಢಂ।।

ಆಗ ಧಾರ್ತರಾಷ್ಟ್ರ ಮಹಾರಥರು ಆ ಶೂರನ ಸುತ್ತಲೂ ಮಂಡಲಾಕಾರದಲ್ಲಿದ್ದುಕೊಂಡು ಯುದ್ಧದಲ್ಲಿ ಅನೇಕರು ಒಬ್ಬನನ್ನು ದೃಢ ಸಾಯಕಗಳಿಂದ ಹೊಡೆಯತೊಡಗಿದರು.

06097031a ಸ ತೇಷಾಂ ರಥಿನಾಂ ವೀರಃ ಪಿತುಸ್ತುಲ್ಯಪರಾಕ್ರಮಃ।
06097031c ಸದೃಶೋ ವಾಸುದೇವಸ್ಯ ವಿಕ್ರಮೇಣ ಬಲೇನ ಚ।।
06097032a ಉಭಯೋಃ ಸದೃಶಂ ಕರ್ಮ ಸ ಪಿತುರ್ಮಾತುಲಸ್ಯ ಚ।
06097032c ರಣೇ ಬಹುವಿಧಂ ಚಕ್ರೇ ಸರ್ವಶಸ್ತ್ರಭೃತಾಂ ವರಃ।।

ತಂದೆಗೆ ಸಮನಾಗಿ ಪರಾಕ್ರಮಿಯಾಗಿದ್ದ, ವಿಕ್ರಮ ಮತ್ತು ಬಲಗಳಲ್ಲಿ ವಾಸುದೇವನಂತಿದ್ದ, ಎಲ್ಲ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ಆ ವೀರನು ನಿನ್ನವರ ರಥಿಗಳಿಗೆ ತನ್ನ ತಂದೆ ಮತ್ತು ಸೋದರ ಮಾವ ಇಬ್ಬರಿಗೂ ಸದೃಶವಾದ ಬಹುವಿಧದ ಕೆಲಸಗಳನ್ನು ಮಾಡಿದನು.

06097033a ತತೋ ಧನಂಜಯೋ ರಾಜನ್ವಿನಿಘ್ನಂಸ್ತವ ಸೈನಿಕಾನ್।
06097033c ಆಸಸಾದ ರಣೇ ಭೀಷ್ಮಂ ಪುತ್ರಪ್ರೇಪ್ಸುರಮರ್ಷಣಃ।।

ರಾಜನ್! ಆಗ ಅಮರ್ಷಣ ಧನಂಜಯನು ನಿನ್ನ ಸೈನಿಕರನ್ನು ಸಂಹರಿಸುತ್ತ ಪುತ್ರನಿಗಾಗಿ ರಣದಲ್ಲಿ ಭೀಷ್ಮನಲ್ಲಿಗೆ ತಲುಪಿದನು.

06097034a ತಥೈವ ಸಮರೇ ರಾಜನ್ಪಿತಾ ದೇವವ್ರತಸ್ತವ।
06097034c ಆಸಸಾದ ರಣೇ ಪಾರ್ಥಂ ಸ್ವರ್ಭಾನುರಿವ ಭಾಸ್ಕರಂ।।

ರಾಜನ್! ಹಾಗೆಯೇ ಸಮರದಲ್ಲಿ ನಿನ್ನ ತಂದೆ ದೇವವ್ರತನೂ ಕೂಡ ಸ್ವಯಂ ಭಾನುವು ಇನ್ನೊಬ್ಬ ಭಾಸ್ಕರನನ್ನು ಹೇಗೋ ಹಾಗೆ ರಣದಲ್ಲಿ ಪಾರ್ಥನನ್ನು ತಲುಪಿದನು.

06097035a ತತಃ ಸರಥನಾಗಾಶ್ವಾಃ ಪುತ್ರಾಸ್ತವ ವಿಶಾಂ ಪತೇ।
06097035c ಪರಿವವ್ರೂ ರಣೇ ಭೀಷ್ಮಂ ಜುಗುಪುಶ್ಚ ಸಮಂತತಃ।।

ವಿಶಾಂಪತೇ! ಆಗ ರಥ-ಆನೆ-ಕುದುರೆಗಳಿಂದೊಡಗೂಡಿ ನಿನ್ನ ಪುತ್ರರು ರಣದಲ್ಲಿ ಗುಂಪುಗುಂಪಾಗಿ ಭೀಷ್ಮನನ್ನು ಎಲ್ಲಕಡೆಗಳಿಂದ ಸುತ್ತುವರೆದರು.

06097036a ತಥೈವ ಪಾಂಡವಾ ರಾಜನ್ಪರಿವಾರ್ಯ ಧನಂಜಯಂ।
06097036c ರಣಾಯ ಮಹತೇ ಯುಕ್ತಾ ದಂಶಿತಾ ಭರತರ್ಷಭ।।

ರಾಜನ್! ಭರತರ್ಷಭ! ಹಾಗೆಯೇ ಪಾಂಡವರು ಧನಂಜಯನನ್ನು ಮಹಾಸೇನೆಯಿಂದ ಕೂಡಿ, ಕವಚಗಳನ್ನು ಧರಿಸಿ ಸುತ್ತುವರೆದರು.

06097037a ಶಾರದ್ವತಸ್ತತೋ ರಾಜನ್ಭೀಷ್ಮಸ್ಯ ಪ್ರಮುಖೇ ಸ್ಥಿತಂ।
06097037c ಅರ್ಜುನಂ ಪಂಚವಿಂಶತ್ಯಾ ಸಾಯಕಾನಾಂ ಸಮಾಚಿನೋತ್।।

ರಾಜನ್! ಆಗ ಭೀಷ್ಮನ ಮುಂದೆ ನಿಂತಿದ್ದ ಶಾರದ್ವತನು ಅರ್ಜುನನನ್ನು ಇಪ್ಪತ್ತೈದು ಸಾಯಕಗಳಿಂದ ಚುಚ್ಚಿದನು.

06097038a ಪತ್ಯುದ್ಗಮ್ಯಾಥ ವಿವ್ಯಾಧ ಸಾತ್ಯಕಿಸ್ತಂ ಶಿತೈಃ ಶರೈಃ।
06097038c ಪಾಂಡವಪ್ರಿಯಕಾಮಾರ್ಥಂ ಶಾರ್ದೂಲ ಇವ ಕುಂಜರಂ।।

ಪಾಂಡವರಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಸಾತ್ಯಕಿಯು ಸಿಂಹವೊಂದು ಆನೆಯನ್ನು ಹೇಗೋ ಹಾಗೆ, ಮುಂದೆಬಂದು ಅವನನ್ನು ನಿಶಿತ ಶರಗಳಿಂದ ಹೊಡೆದನು.

06097039a ಗೌತಮೋಽಪಿ ತ್ವರಾಯುಕ್ತೋ ಮಾಧವಂ ನವಭಿಃ ಶರೈಃ।
06097039c ಹೃದಿ ವಿವ್ಯಾಧ ಸಂಕ್ರುದ್ಧಃ ಕಂಕಪತ್ರಪರಿಚ್ಛದೈಃ।।

ಗೌತಮನೂ ಕೂಡ ತ್ವರೆಮಾಡಿ ಸಂಕ್ರುದ್ಧನಾಗಿ ಮಾಧವ ಸಾತ್ಯಕಿಯನ್ನು ಒಂಭತ್ತು ಕಂಕಪತ್ರಗಳಿಂದ ಕೂಡಿದ್ದ ಶರಗಳಿಂದ ಹೃದಯಕ್ಕೆ ಗುರಿಯಿಟ್ಟು ಹೊಡೆದನು.

06097040a ಶೈನೇಯೋಽಪಿ ತತಃ ಕ್ರುದ್ಧೋ ಭೃಶಂ ವಿದ್ಧೋ ಮಹಾರಥಃ।
06097040c ಗೌತಮಾಂತಕರಂ ಘೋರಂ ಸಮಾದತ್ತ ಶಿಲೀಮುಖಂ।।

ಮಹಾರಥ ಶೈನೇಯನೂ ಕೂಡ ತುಂಬಾ ಕ್ರುದ್ಧನಾಗಿ ಗೌತಮನನ್ನು ಕೊನೆಗೊಳಿಸಬಲ್ಲ ಘೋರ ಶಿಲೀಮುಖವನ್ನು ತೆಗೆದುಕೊಂಡು ಹೊಡೆದನು.

06097041a ತಮಾಪತಂತಂ ವೇಗೇನ ಶಕ್ರಾಶನಿಸಮದ್ಯುತಿಂ।
06097041c ದ್ವಿಧಾ ಚಿಚ್ಛೇದ ಸಂಕ್ರುದ್ಧೋ ದ್ರೌಣಿಃ ಪರಮಕೋಪನಃ।।

ಶಕ್ರನ ವಜ್ರದಂತೆ ಬೆಳಗುತ್ತಾ ವೇಗದಿಂದ ಬಂದು ಬೀಳುತ್ತಿದ್ದ ಅದನ್ನು ಪರಮ ಕೋಪಿ ದ್ರೌಣಿಯು ಸಂಕ್ರುದ್ಧನಾಗಿ ಎರಡಾಗಿ ತುಂಡರಿಸಿದನು.

06097042a ಸಮುತ್ಸೃಜ್ಯಾಥ ಶೈನೇಯೋ ಗೌತಮಂ ರಥಿನಾಂ ವರಂ।
06097042c ಅಭ್ಯದ್ರವದ್ರಣೇ ದ್ರೌಣಿಂ ರಾಹುಃ ಖೇ ಶಶಿನಂ ಯಥಾ।।

ಆಗ ಶೈನೇಯನು ರಥಿಗಳಲ್ಲಿ ಶ್ರೇಷ್ಠ ಗೌತಮನನ್ನು ಅಲ್ಲಿಯೇ ಬಿಟ್ಟು ರಾಹುವು ಶಶಿಯನ್ನು ಹೇಗೋ ಹಾಗೆ ದ್ರೌಣಿಯ ಮೇಲೆ ಎರಗಿದನು.

06097043a ತಸ್ಯ ದ್ರೋಣಸುತಶ್ಚಾಪಂ ದ್ವಿಧಾ ಚಿಚ್ಛೇದ ಭಾರತ।
06097043c ಅಥೈನಂ ಚಿನ್ನಧನ್ವಾನಂ ತಾಡಯಾಮಾಸ ಸಾಯಕೈಃ।।

ಭಾರತ! ದ್ರೋಣನ ಮಗನು ಅವನ ಧನುಸ್ಸನ್ನು ಎರಡಾಗಿ ಕತ್ತರಿಸಿದನು ಮತ್ತು ಧನುಸ್ಸು ತುಂಡಾದ ಅವನನ್ನು ಸಾಯಕಗಳಿಂದ ಹೊಡೆದನು.

06097044a ಸೋಽನ್ಯತ್ಕಾರ್ಮುಕಮಾದಾಯ ಶತ್ರುಘ್ನಂ ಭಾರಸಾಧನಂ।
06097044c ದ್ರೌಣಿಂ ಷಷ್ಟ್ಯಾ ಮಹಾರಾಜ ಬಾಹ್ವೋರುರಸಿ ಚಾರ್ಪಯತ್।।

ಆಗ ಸಾತ್ಯಕಿಯು ಇನ್ನೊಂದು ಶತ್ರುಗಳನ್ನು ಸಂಹರಿಸುವ, ಭಾರ ಬಿಲ್ಲನ್ನು ತೆಗೆದುಕೊಂಡು ದ್ರೌಣಿಯ ಬಾಹುಗಳು ಮತ್ತು ಎದೆಗೆ ಅರವತ್ತು ಬಾಣಗಳನ್ನು ತಾಗಿಸಿದನು.

06097045a ಸ ವಿದ್ಧೋ ವ್ಯಥಿತಶ್ಚೈವ ಮುಹೂರ್ತಂ ಕಶ್ಮಲಾಯುತಃ।
06097045c ನಿಷಸಾದ ರಥೋಪಸ್ಥೇ ಧ್ವಜಯಷ್ಟಿಂ ಉಪಾಶ್ರಿತಃ।।

ಗಾಯಗೊಂಡ ಅವನು ವ್ಯಥಿತನಾಗಿ ಒಂದು ಕ್ಷಣ ಮೂರ್ಛಿತನಾಗಿ, ಧ್ವಜದ ದಂಡವನ್ನು ಹಿಡಿದು ರಥದಲ್ಲಿಯೇ ಕುಸಿದು ಬಿದ್ದನು.

06097046a ಪ್ರತಿಲಭ್ಯ ತತಃ ಸಂಜ್ಞಾಂ ದ್ರೋಣಪುತ್ರಃ ಪ್ರತಾಪವಾನ್।
06097046c ವಾರ್ಷ್ಣೇಯಂ ಸಮರೇ ಕ್ರುದ್ಧೋ ನಾರಾಚೇನ ಸಮರ್ದಯತ್।।

ಆಗ ಸಂಜ್ಞೆಯನ್ನು ಪಡೆದು ಪ್ರತಾಪವಾನ್ ದ್ರೋಣಪುತ್ರನು ಸಮರದಲ್ಲಿ ಕ್ರುದ್ಧನಾಗಿ ವಾರ್ಷ್ಣೇಯನನ್ನು ನಾರಾಚಗಳಿಂದ ಹೊಡೆದನು.

06097047a ಶೈನೇಯಂ ಸ ತು ನಿರ್ಭಿದ್ಯ ಪ್ರಾವಿಶದ್ಧರಣೀತಲಂ।
06097047c ವಸಂತಕಾಲೇ ಬಲವಾನ್ಬಿಲಂ ಸರ್ಪಶಿಶುರ್ಯಥಾ।।

ಅದು ಶೈನೇಯನನ್ನು ಒಳಹೊಕ್ಕು ಹೊರಬಂದು ವಸಂತಕಾಲದಲ್ಲಿ ಬಲವಾನ್ ಸರ್ಪಶಿಶುವು ಬಿಲವನ್ನು ಹೊಗುವಂತೆ ಭೂಮಿಯನ್ನು ಹೊಕ್ಕಿತು.

06097048a ತತೋಽಪರೇಣ ಭಲ್ಲೇನ ಮಾಧವಸ್ಯ ಧ್ವಜೋತ್ತಮಂ।
06097048c ಚಿಚ್ಛೇದ ಸಮರೇ ದ್ರೌಣಿಃ ಸಿಂಹನಾದಂ ನನಾದ ಚ।।

ಅನಂತರ ಇನ್ನೊಂದು ಭಲ್ಲದಿಂದ ಮಾಧವನ ಉತ್ತಮ ಧ್ವಜವನ್ನು ಸಮರದಲ್ಲಿ ಕತ್ತರಿಸಿ ದ್ರೌಣಿಯು ಸಿಂಹನಾದಗೈದನು.

06097049a ಪುನಶ್ಚೈನಂ ಶರೈರ್ಘೋರೈಶ್ಚಾದಯಾಮಾಸ ಭಾರತ।
06097049c ನಿದಾಘಾಂತೇ ಮಹಾರಾಜ ಯಥಾ ಮೇಘೋ ದಿವಾಕರಂ।।

ಭಾರತ! ಮಹಾರಾಜ! ಪುನಃ ಘೋರ ಶರಗಳಿಂದ ಇವನನ್ನು, ಬೇಸಗೆಯ ಕೊನೆಯಲ್ಲಿ ಮೋಡಗಳು ಸೂರ್ಯನನ್ನು ಹೇಗೋ ಹಾಗೆ, ಮುಚ್ಚಿದನು.

06097050a ಸಾತ್ಯಕಿಶ್ಚ ಮಹಾರಾಜ ಶರಜಾಲಂ ನಿಹತ್ಯ ತತ್।
06097050c ದ್ರೌಣಿಮಭ್ಯಪತತ್ತೂರ್ಣಂ ಶರಜಾಲೈರನೇಕಧಾ।।

ಮಹಾರಾಜ! ಸಾತ್ಯಕಿಯೂ ಕೂಡ ಆ ಶರಜಾಲವನ್ನು ನಾಶಪಡಿಸಿ ತಕ್ಷಣವೇ ದ್ರೌಣಿಯನ್ನು ಅನೇಕ ಶರಜಾಲಗಳಿಂದ ಆಕ್ರಮಣಿಸಿದನು.

06097051a ತಾಪಯಾಮಾಸ ಚ ದ್ರೌಣಿಂ ಶೈನೇಯಃ ಪರವೀರಹಾ।
06097051c ವಿಮುಕ್ತೋ ಮೇಘಜಾಲೇನ ಯಥೈವ ತಪನಸ್ತಥಾ।।

ಪರವೀರಹ ಶೈನೇಯನು ದ್ರೌಣಿಯನ್ನು, ಮೇಘಜಾಲಗಳಿಂದ ವಿಮುಕ್ತನಾದ ಸೂರ್ಯನು ಹೇಗೋ ಹಾಗೆ ಸುಡತೊಡಗಿದನು.

06097052a ಶರಾಣಾಂ ಚ ಸಹಸ್ರೇಣ ಪುನರೇನಂ ಸಮುದ್ಯತಂ।
06097052c ಸಾತ್ಯಕಿಶ್ಚಾದಯಾಮಾಸ ನನಾದ ಚ ಮಹಾಬಲಃ।।

ಪುನಃ ಅವನನ್ನು ಸಹಸ್ರಾರು ಬಾಣಗಳಿಂದ ಹೊಡೆದು ಮುಚ್ಚಿಸಿ ಮಹಾಬಲ ಸಾತ್ಯಕಿಯು ಗರ್ಜಿಸಿದನು.

06097053a ದೃಷ್ಟ್ವಾ ಪುತ್ರಂ ತಥಾ ಗ್ರಸ್ತಂ ರಾಹುಣೇವ ನಿಶಾಕರಂ।
06097053c ಅಭ್ಯದ್ರವತ ಶೈನೇಯಂ ಭಾರದ್ವಾಜಃ ಪ್ರತಾಪವಾನ್।।

ರಾಹುವಿನಿಂದ ನಿಶಾಕರನು ಗ್ರಸ್ತನಾದಂತಿದ್ದ ಮಗನನ್ನು ನೋಡಿ ಪ್ರತಾಪವಾನ್ ಭಾರದ್ವಾಜನು ಧಾವಿಸಿ ಬಂದು ಶೈನೇಯನ ಮೇಲೆ ಎರಗಿದನು.

06097054a ವಿವ್ಯಾಧ ಚ ಪೃಷತ್ಕೇನ ಸುತೀಕ್ಷ್ಣೇನ ಮಹಾಮೃಧೇ।
06097054c ಪರೀಪ್ಸನ್ಸ್ವಸುತಂ ರಾಜನ್ವಾರ್ಷ್ಣೇಯೇನಾಭಿತಾಪಿತಂ।।

ಅವನು ಮಹಾಯುದ್ಧದಲ್ಲಿ ಸುತೀಕ್ಷ್ಣ ಪೃಷತ್ಕದಿಂದ ವಾರ್ಷ್ಣೇಯನನ್ನು ಹೊಡೆದು ಅವನಿಂದ ಪರಿತಪ್ತನಾದ ಮಗನನ್ನು ಬಿಡಿಸಿದನು.

06097055a ಸಾತ್ಯಕಿಸ್ತು ರಣೇ ಜಿತ್ವಾ ಗುರುಪುತ್ರಂ ಮಹಾರಥಂ।
06097055c ದ್ರೋಣಂ ವಿವ್ಯಾಧ ವಿಂಶತ್ಯಾ ಸರ್ವಪಾರಶವೈಃ ಶರೈಃ।।

ಸಾತ್ಯಕಿಯಾದರೋ ರಣದಲ್ಲಿ ಮಹಾರಥ ಗುರುಪುತ್ರನನ್ನು ಗೆದ್ದು, ದ್ರೋಣನನ್ನು ಇಪ್ಪತ್ತು ಸರ್ವಪಾರಶ ಶರಗಳಿಂದ ಹೊಡೆದನು.

06097056a ತದಂತರಮಮೇಯಾತ್ಮಾ ಕೌಂತೇಯಃ ಶ್ವೇತವಾಹನಃ।
06097056c ಅಭ್ಯದ್ರವದ್ರಣೇ ಕ್ರುದ್ಧೋ ದ್ರೋಣಂ ಪ್ರತಿ ಮಹಾರಥಃ।।

ಅದರ ನಂತರ ಅಮೇಯಾತ್ಮ ಶ್ವೇತವಾಹನ ಮಹಾರಥ ಕೌಂತೇಯನು ಕ್ರುದ್ಧನಾಗಿ ದ್ರೋಣನೊಡನೆ ಯುದ್ಧಮಾಡತೊಡಗಿದನು.

06097057a ತತೋ ದ್ರೋಣಶ್ಚ ಪಾರ್ಥಶ್ಚ ಸಮೇಯಾತಾಂ ಮಹಾಮೃಧೇ।
06097057c ಯಥಾ ಬುಧಶ್ಚ ಶುಕ್ರಶ್ಚ ಮಹಾರಾಜ ನಭಸ್ತಲೇ।।

ಮಹಾರಾಜ! ಆಗ ನಭಸ್ತಲದಲ್ಲಿ ಬುಧ ಮತ್ತು ಶುಕ್ರರ ನಡುವಿನಂತೆ ದ್ರೋಣ ಮತ್ತು ಪಾರ್ಥರೊಡನೆ ಮಹಾ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಲಂಬುಷಾಭಿಮನ್ಯುಯುದ್ಧೇ ಸಪ್ತನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಲಂಬುಷಾಭಿಮನ್ಯುಯುದ್ಧ ಎನ್ನುವ ತೊಂಭತ್ತೇಳನೇ ಅಧ್ಯಾಯವು.