ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 96
ಸಾರ
ಅಭಿಮನ್ಯುವಿನ ಪರಾಕ್ರಮ (1-20). ಆರ್ಶ್ಯಶೃಂಗಿ ಅಲಂಬುಷ ಮತ್ತು ದ್ರೌಪದೇಯರ ಯುದ್ಧ; ಅಭಿಮನ್ಯುವಿನೊಡನೆ ಅಲಂಬುಷನ ಸಮಾಗಮ (21-51).
06096001 ಸಂಜಯ ಉವಾಚ।
06096001a ಅಭಿಮನ್ಯೂ ರಥೋದಾರಃ ಪಿಶಂಗೈಸ್ತುರಗೋತ್ತಮೈಃ।
06096001c ಅಭಿದುದ್ರಾವ ತೇಜಸ್ವೀ ದುರ್ಯೋಧನಬಲಂ ಮಹತ್।
06096001e ವಿಕಿರಂ ಶರವರ್ಷಾಣಿ ವಾರಿಧಾರಾ ಇವಾಂಬುದಃ।।
ಸಂಜಯನು ಹೇಳಿದನು: “ರಥೋದಾರ ತೇಜಸ್ವಿ ಅಭಿಮನ್ಯುವು ಪಿಂಗಳವರ್ಣದ ಉತ್ತಮ ಕುದುರೆಗಳಿಂದ ಕೂಡಿದ ರಥದಲ್ಲಿ ಕುಳಿತು ಮೋಡಗಳು ಮಳೆಯನ್ನು ಸುರಿಸುವಂತೆ ಬಾಣಗಳ ಮಳೆಯನ್ನು ಸುರಿಸುತ್ತಾ ದುರ್ಯೋಧನನ ಮಹಾ ಸೇನೆಯ ಮೇಲೆ ದಾಳಿಮಾಡಿದನು.
06096002a ನ ಶೇಕುಃ ಸಮರೇ ಕ್ರುದ್ಧಂ ಸೌಭದ್ರಮರಿಸೂದನಂ।
06096002c ಶಸ್ತ್ರೌಘಿಣಂ ಗಾಹಮಾನಂ ಸೇನಾಸಾಗರಮಕ್ಷಯಂ।
06096002e ನಿವಾರಯಿತುಮಪ್ಯಾಜೌ ತ್ವದೀಯಾಃ ಕುರುಪುಂಗವಾಃ।।
ರಾಶಿ ರಾಶಿ ಶಸ್ತ್ರಗಳಿಂದ ಕೂಡಿದ್ದ ಅಕ್ಷಯ ಸೇನಾಸಾಗರವನ್ನು ಒಳಹೊಗುತ್ತಿದ್ದ ಕ್ರುದ್ಧ ಅರಿಸೂದನ ಸೌಭದ್ರನನ್ನು ತಡೆಯಲು ನಿನ್ನ ಕಡೆಯ ಕುರುಪುಂಗವರಿಗೆ ಸಾಧ್ಯವಾಗಲಿಲ್ಲ.
06096003a ತೇನ ಮುಕ್ತಾ ರಣೇ ರಾಜನ್ ಶರಾಃ ಶತ್ರುನಿಬರ್ಹಣಾಃ।
06096003c ಕ್ಷತ್ರಿಯಾನನಯಂ ಶೂರಾನ್ಪ್ರೇತರಾಜನಿವೇಶನಂ।।
ರಾಜನ್! ಅವನು ಬಿಟ್ಟ ಶತ್ರುಗಳನ್ನು ನಾಶಪಡಿಸಬಲ್ಲ ಬಾಣಗಳು ಶೂರ ಕ್ಷತ್ರಿಯರನ್ನು ಪ್ರೇತರಾಜನ ಮನೆಗೆ ಕೊಂಡೊಯ್ಯುತ್ತಿದ್ದವು.
06096004a ಯಮದಂಡೋಪಮಾನ್ಘೋರಾಂ ಜ್ವಲನಾಶೀವಿಷೋಪಮಾನ್।
06096004c ಸೌಭದ್ರಃ ಸಮರೇ ಕ್ರುದ್ಧಃ ಪ್ರೇಷಯಾಮಾಸ ಸಾಯಕಾನ್।।
ಸಮರದಲ್ಲಿ ಸೌಭದ್ರನು ಕ್ರುದ್ಧನಾಗಿ ಯಮದಂಡಕ್ಕೆ ಸಮಾನವಾದ ಪ್ರಜ್ವಲಿತ ಮುಖವುಳ್ಳ ಸರ್ಪಗಳಂತಿದ್ದ ಸಾಯಕಗಳನ್ನು ಪ್ರಯೋಗಿಸುತ್ತಿದ್ದನು.
06096005a ರಥಿನಂ ಚ ರಥಾತ್ತೂರ್ಣಂ ಹಯಪೃಷ್ಠಾಚ್ಚ ಸಾದಿನಂ।
06096005c ಗಜಾರೋಹಾಂಶ್ಚ ಸಗಜಾನ್ಪಾತಯಾಮಾಸ ಫಾಲ್ಗುನಿಃ।।
ಪಾಲ್ಗುನಿಯು ತಕ್ಷಣವೇ ರಥಗಳಲ್ಲಿದ್ದ ರಥಿಗಳನ್ನೂ, ಕುದುರೆಯನ್ನೇರಿದ್ದ ಸವಾರರನ್ನೂ, ಆನೆಗಳೊಂದಿಗೆ ಗಜಾರೋಹಿಗಳನ್ನೂ ಕೆಳಗುರುಳಿಸಿದನು.
06096006a ತಸ್ಯ ತತ್ಕುರ್ವತಃ ಕರ್ಮ ಮಹತ್ಸಂಖ್ಯೇಽದ್ಭುತಂ ನೃಪಾಃ।
06096006c ಪೂಜಯಾಂ ಚಕ್ರಿರೇ ಹೃಷ್ಟಾಃ ಪ್ರಶಶಂಸುಶ್ಚ ಫಾಲ್ಗುನಿಂ।।
ಯುದ್ಧದಲ್ಲಿ ಅವನು ಮಾಡುತ್ತಿರುವ ಮಹಾ ಕಾರ್ಯಗಳನ್ನು ನೋಡಿ ರಾಜರು ಸಂತೋಷಗೊಂಡು ಫಾಲ್ಗುನಿಯನ್ನು ಬಹಳವಾಗಿ ಹೊಗಳಿದರು ಮತ್ತು ಗೌರವಿಸಿದರು.
06096007a ತಾನ್ಯನೀಕಾನಿ ಸೌಭದ್ರೋ ದ್ರಾವಯನ್ಬಹ್ವಶೋಭತ।
06096007c ತೂಲರಾಶಿಮಿವಾಧೂಯ ಮಾರುತಃ ಸರ್ವತೋದಿಶಂ।।
ಭಿರುಗಾಳಿಯ ಹತ್ತಿಯ ರಾಶಿಯನ್ನು ಎಲ್ಲ ದಿಕ್ಕುಗಳಲ್ಲಿಯೂ ಹಾರಿಸಿಬಿಡುವಂತೆ ಸೌಭದ್ರನು ಆ ಸೇನೆಗಳನ್ನು ಓಡಿಸಿ ಬಹುವಾಗಿ ಶೋಭಿಸಿದನು.
06096008a ತೇನ ವಿದ್ರಾವ್ಯಮಾಣಾನಿ ತವ ಸೈನ್ಯಾನಿ ಭಾರತ।
06096008c ತ್ರಾತಾರಂ ನಾಧ್ಯಗಚ್ಛಂತ ಪಂಕೇ ಮಗ್ನಾ ಇವ ದ್ವಿಪಾಃ।।
ಭಾರತ! ಆಳವಾದ ಕೆಸರಿನಲ್ಲಿ ಸಿಲುಕಿಕೊಂಡ ಆನೆಗಳಿಗೆ ರಕ್ಷಕರೇ ಇಲ್ಲದಿರುವಂತೆ ಅವನಿಂದ ಓಡಿಸಲ್ಪಟ್ಟ ನಿನ್ನ ಸೇನೆಗಳಿಗೆ ಯಾರೂ ಇಲ್ಲದಂತಾಯಿತು.
06096009a ವಿದ್ರಾವ್ಯ ಸರ್ವಸೈನ್ಯಾನಿ ತಾವಕಾನಿ ನರೋತ್ತಮಃ।
06096009c ಅಭಿಮನ್ಯುಃ ಸ್ಥಿತೋ ರಾಜನ್ವಿಧೂಮೋಽಗ್ನಿರಿವ ಜ್ವಲನ್।।
ರಾಜನ್! ನಿನ್ನ ಸರ್ವ ಸೇನೆಗಳನ್ನು ಓಡಿಸಿ ನರೋತ್ತಮ ಅಭಿಮನ್ಯುವು ಹೊಗೆಯಿಲ್ಲದ ಬೆಂಕಿಯಂತೆ ಉರಿಯುತ್ತಾ ನಿಂತನು.
06096010a ನ ಚೈನಂ ತಾವಕಾಃ ಸರ್ವೇ ವಿಷೇಹುರರಿಘಾತಿನಂ।
06096010c ಪ್ರದೀಪ್ತಂ ಪಾವಕಂ ಯದ್ವತ್ ಪತಂಗಾಃ ಕಾಲಚೋದಿತಾಃ।।
ಕಾಲಚೋದಿತ ಪತಂಗಗಳು ಉರಿಯುತ್ತಿರುವ ಪಾವಕನನ್ನು ಸಹಿಸಿಕೊಳ್ಳಲಾರದಂತೆ ಅರಿಘಾತಿಯ ಪ್ರಹಾರವನ್ನು ನಿನ್ನವರಲ್ಲಿ ಯಾರಿಗೂ ಸಹಿಸಿಕೊಳ್ಳಲಾಗಲಿಲ್ಲ.
06096011a ಪ್ರಹರನ್ಸರ್ವಶತ್ರುಭ್ಯಃ ಪಾಂಡವಾನಾಂ ಮಹಾರಥಃ।
06096011c ಅದೃಶ್ಯತ ಮಹೇಷ್ವಾಸಃ ಸವಜ್ರ ಇವ ವಜ್ರಭೃತ್।।
ಸರ್ವಶತ್ರುಗಳ ಪ್ರಹಾರ ಮಾಡಿ ಪಾಂಡವರ ಮಹಾರಥ ಮಹೇಷ್ವಾಸನು ವಜ್ರದೊಂದಿಗೆ ವರ್ಜಭೃತುವಿನಂತೆ ಅದೃಶ್ಯನಾಗುತ್ತಿದ್ದನು.
06096012a ಹೇಮಪೃಷ್ಠಂ ಧನುಶ್ಚಾಸ್ಯ ದದೃಶೇ ಚರತೋ ದಿಶಃ।
06096012c ತೋಯದೇಷು ಯಥಾ ರಾಜನ್ಭ್ರಾಜಮಾನಾಃ ಶತಃವದಾಃ।।
ರಾಜನ್! ದಿಕ್ಕು ದಿಕ್ಕುಗಳಲ್ಲಿ ತಿರುಗುತ್ತಿದ್ದ ಅವನ ಬಂಗಾರದ ಬೆನ್ನಿನ ಬಿಲ್ಲು ಮೋಡಗಳಲ್ಲಿ ಹೊಳೆಯುವ ಮಿಂಚುಗಳಂತೆ ಕಾಣುತ್ತಿತ್ತು.
06096013a ಶರಾಶ್ಚ ನಿಶಿತಾಃ ಪೀತಾ ನಿಶ್ಚರಂತಿ ಸ್ಮ ಸಂಯುಗೇ।
06096013c ವನಾತ್ಫುಲ್ಲದ್ರುಮಾದ್ರಾಜನ್ಭ್ರಮರಾಣಾಮಿವ ವ್ರಜಾಃ।।
ವನದಲ್ಲಿ ಹೂಬಿಟ್ಟ ಮರಗಳನ್ನು ಹುಡುಕಿಕೊಂಡು ಹಾರಿ ಹೋಗುವ ದುಂಬಿಗಳಂತೆ ಅವನ ಹೊಂಬಣ್ಣದ ನಿಶಿತ ಶರಗಳು ಸಂಗ್ರಾಮದಲ್ಲಿ ಸುಯ್ಯನೆ ಹೋಗುತ್ತಿದ್ದವು.
06096014a ತಥೈವ ಚರತಸ್ತಸ್ಯ ಸೌಭದ್ರಸ್ಯ ಮಹಾತ್ಮನಃ।
06096014c ರಥೇನ ಮೇಘಘೋಷೇಣ ದದೃಶುರ್ನಾಂತರಂ ಜನಾಃ।।
ಹಾಗೆಯೇ ಮೇಘಘೋಷದಿಂದ ರಥದಲ್ಲಿ ಸಂಚರಿಸುತ್ತಿದ್ದ ಮಹಾತ್ಮ ಸೌಭದ್ರನ ಗತಿಯಲ್ಲಿಯೂ ಜನರು ಯಾವ ಅಂತರವನ್ನೂ ಕಾಣುತ್ತಿರಲಿಲ್ಲ.
06096015a ಮೋಹಯಿತ್ವಾ ಕೃಪಂ ದ್ರೋಣಂ ದ್ರೌಣಿಂ ಚ ಸ ಬೃಹದ್ಬಲಂ।
06096015c ಸೈಂಧವಂ ಚ ಮಹೇಷ್ವಾಸಂ ವ್ಯಚರಲ್ಲಘು ಸುಷ್ಠು ಚ।।
ಕೃಪ, ದ್ರೋಣ, ದ್ರೌಣಿ, ಬೃಹದ್ಬಲ ಮತ್ತು ಮಹೇಷ್ವಾಸ ಸೈಂಧವನನ್ನು ಮೋಹಗೊಳಿಸುತ್ತಾ ಅವನು ಶೀಘ್ರವಾಗಿ ಸಂಚರಿಸುತ್ತಿದ್ದನು.
06096016a ಮಂಡಲೀಕೃತಮೇವಾಸ್ಯ ಧನುಃ ಪಶ್ಯಾಮ ಮಾರಿಷ।
06096016c ಸೂರ್ಯಮಂಡಲಸಂಕಾಶಂ ತಪತಸ್ತವ ವಾಹಿನೀಂ।।
ಮಾರಿಷ! ನಿನ್ನ ಸೇನೆಯನ್ನು ಸುಡುತ್ತಿದ್ದ ಅವನ ಧನುಸ್ಸು ಯಾವಾಗಲೂ ಸೂರ್ಯಮಂಡಲದಂತೆ ಮಂಡಲಾಕಾರದಲ್ಲಿರುವುದನ್ನೇ ನಾವು ಕಾಣುತ್ತಿದ್ದೆವು.
06096017a ತಂ ದೃಷ್ಟ್ವಾ ಕ್ಷತ್ರಿಯಾಃ ಶೂರಾಃ ಪ್ರತಪಂತಂ ಶರಾರ್ಚಿಭಿಃ।
06096017c ದ್ವಿಫಲ್ಗುನಮಿಮಂ ಲೋಕಂ ಮೇನಿರೇ ತಸ್ಯ ಕರ್ಮಭಿಃ।।
ಶರಗಳೆಂಬ ಕಿರಣಗಳಿಂದ ಸುಡುತ್ತಿದ್ದ ಅವನ ಕರ್ಮಗಳನ್ನು ನೋಡಿ ಶೂರ ಕ್ಷತ್ರಿಯರು ಅವನು ಲೋಕದಲ್ಲಿ ಎರಡನೆಯ ಫಲ್ಗುನನನೆಂದು ಭಾವಿಸಿದರು.
06096018a ತೇನಾರ್ದಿತಾ ಮಹಾರಾಜ ಭಾರತೀ ಸಾ ಮಹಾಚಮೂಃ।
06096018c ಬಭ್ರಾಮ ತತ್ರ ತತ್ರೈವ ಯೋಷಿನ್ಮದವಶಾದಿವ।।
ಮಹಾರಾಜ! ಅವನಿಂದ ಆರ್ದಿತವಾದ ಆ ಭಾರತರ ಮಹಾ ಸೇನೆಯು ಕಾಮಪರವಶ ಸ್ತ್ರೀಯಂತೆ ಮತಿಗೆಟ್ಟು ತೂರಾಡುತ್ತಿತ್ತು.
06096019a ದ್ರಾವಯಿತ್ವಾ ಚ ತತ್ಸೈನ್ಯಂ ಕಂಪಯಿತ್ವಾ ಮಹಾರಥಾನ್।
06096019c ನಂದಯಾಮಾಸ ಸುಹೃದೋ ಮಯಂ ಜಿತ್ವೇವ ವಾಸವಃ।।
ಆ ಸೈನ್ಯವನ್ನು ಓಡಿಸುತ್ತಾ, ಮಹಾರಥರನ್ನು ಕಂಪಿಸುತ್ತಾ, ಮಯನನ್ನು ಜಯಿಸಿದ ವಾಸವನಂತೆ ಸುಹೃದಯರನ್ನು ಹರ್ಷಗೊಳಿಸಿದನು.
06096020a ತೇನ ವಿದ್ರಾವ್ಯಮಾಣಾನಿ ತವ ಸೈನ್ಯಾನಿ ಸಂಯುಗೇ।
06096020c ಚಕ್ರುರಾರ್ತಸ್ವರಂ ಘೋರಂ ಪರ್ಜನ್ಯನಿನದೋಪಮಂ।।
ಅವನಿಂದ ಹೊಡೆದೋಡಿಸಲ್ಪಟ್ಟ ನಿನ್ನ ಸೈನ್ಯಗಳು ಸಂಯುಗದಲ್ಲಿ ಮೋಡಗಳ ಗುಡುಗಿನಂತೆ ಘೋರ ಆರ್ತಸ್ವರದಲ್ಲಿ ಕೂಗಿಕೊಳ್ಳುತ್ತಿದ್ದವು.
06096021a ತಂ ಶ್ರುತ್ವಾ ನಿನದಂ ಘೋರಂ ತವ ಸೈನ್ಯಸ್ಯ ಮಾರಿಷ।
06096021c ಮಾರುತೋದ್ಧೂತವೇಗಸ್ಯ ಸಮುದ್ರಸ್ಯೇವ ಪರ್ವಣಿ।
06096021e ದುರ್ಯೋಧನಸ್ತದಾ ರಾಜಾ ಆರ್ಶ್ಯಶೃಂಗಿಮಭಾಷತ।।
ಮಾರಿಷ! ಪರ್ವಕಾಲದಲ್ಲಿ ಭಿರುಗಾಳಿಗೆ ಸಿಲುಕಿದ ಸಮುದ್ರದಂತಿದ್ದ ನಿನ್ನ ಸೈನ್ಯದ ಆ ಘೋರ ನಿನಾದವನ್ನು ಕೇಳಿ ರಾಜಾ ದುರ್ಯೋಧನನು ಆರ್ಶ್ಯಶೃಂಗಿಗೆ ಹೇಳಿದನು:
06096022a ಏಷ ಕಾರ್ಷ್ಣಿರ್ಮಹೇಷ್ವಾಸೋ ದ್ವಿತೀಯ ಇವ ಫಲ್ಗುನಃ।
06096022c ಚಮೂಂ ದ್ರಾವಯತೇ ಕ್ರೋಧಾದ್ವೃತ್ರೋ ದೇವಚಮೂಮಿವ।।
“ಈ ಮಹೇಷ್ವಾಸ ಕಾರ್ಷ್ಣಿಯು ಎರಡನೆಯ ಅರ್ಜುನನೋ ಎನ್ನುವಂತೆ ಕ್ರೋಧದಿಂದ ವೃತ್ರನು ದೇವಸಮೂಹದಂತೆ ನಮ್ಮ ಸೇನೆಗಳನ್ನು ಓಡಿಸುತ್ತಿದ್ದಾನೆ.
06096023a ತಸ್ಯ ನಾನ್ಯಂ ಪ್ರಪಶ್ಯಾಮಿ ಸಂಯುಗೇ ಭೇಷಜಂ ಮಹತ್।
06096023c ಋತೇ ತ್ವಾಂ ರಾಕ್ಷಸಶ್ರೇಷ್ಠ ಸರ್ವವಿದ್ಯಾಸು ಪಾರಗಂ।।
ರಾಕ್ಷಸಶ್ರೇಷ್ಠ! ಸರ್ವ ವಿದ್ಯೆಗಳಲ್ಲಿ ಪಾರಂಗತನಾದ ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಸಂಯುಗದಲ್ಲಿ ಅವನ ಚಿಕಿತ್ಸಕನನ್ನು ನಾನು ಕಾಣಲಾರೆನು.
06096024a ಸ ಗತ್ವಾ ತ್ವರಿತಂ ವೀರಂ ಜಹಿ ಸೌಭದ್ರಮಾಹವೇ।
06096024c ವಯಂ ಪಾರ್ಥಾನ್ ಹನಿಷ್ಯಾಮೋ ಭೀಷ್ಮದ್ರೋಣಪುರಃಸರಾಃ।।
ಬೇಗನೇ ನೀನು ಹೋಗಿ ಆಹವದಲ್ಲಿ ಸೌಭದ್ರನನ್ನು ಕೊಲ್ಲು. ನಾವು ಭೀಷ್ಮ-ದ್ರೋಣರ ನೇತೃತ್ವದಲ್ಲಿ ಪಾರ್ಥರನ್ನು ಕೊಲ್ಲುತ್ತೇವೆ.”
06096025a ಸ ಏವಮುಕ್ತೋ ಬಲವಾನ್ರಾಕ್ಷಸೇಂದ್ರಃ ಪ್ರತಾಪವಾನ್।
06096025c ಪ್ರಯಯೌ ಸಮರೇ ತೂರ್ಣಂ ತವ ಪುತ್ರಸ್ಯ ಶಾಸನಾತ್।
06096025e ನರ್ದಮಾನೋ ಮಹಾನಾದಂ ಪ್ರಾವೃಷೀವ ಬಲಾಹಕಃ।।
ಹೀಗೆ ಹೇಳಲು ಬಲವಾನ್ ಪ್ರತಾಪವಾನ್ ರಾಕ್ಷಸೇಂದ್ರನು ತಕ್ಷಣವೇ ನಿನ್ನ ಮಗನ ಶಾಸನದಂತೆ ಮಳೆಗಾಲದಲ್ಲಿ ಮೋಡಗಳು ಗರ್ಜಿಸುವಂತೆ ಜೋರಾಗಿ ಗರ್ಜಿಸುತ್ತ ಸಮರಕ್ಕೆ ಹೊರಟನು.
06096026a ತಸ್ಯ ಶಬ್ದೇನ ಮಹತಾ ಪಾಂಡವಾನಾಂ ಮಹದ್ಬಲಂ।
06096026c ಪ್ರಾಚಲತ್ಸರ್ವತೋ ರಾಜನ್ಪೂರ್ಯಮಾಣ ಇವಾರ್ಣವಃ।।
ರಾಜನ್! ಅವನ ಆ ಜೋರಿನ ಕೂಗಿನಿಂದ ಪಾಂಡವರ ಮಹಾ ಸೇನೆಯು ತುಂಬಿ ಉಕ್ಕುವ ಸಮುದ್ರದಂತೆ ಎಲ್ಲಕಡೆಗಳಿಂದ ಕ್ಷೋಭೆಗೊಂಡಿತು.
06096027a ಬಹವಶ್ಚ ನರಾ ರಾಜಂಸ್ತಸ್ಯ ನಾದೇನ ಭೀಷಿತಾಃ।
06096027c ಪ್ರಿಯಾನ್ಪ್ರಾಣಾನ್ಪರಿತ್ಯಜ್ಯ ನಿಪೇತುರ್ಧರಣೀತಲೇ।।
ರಾಜನ್! ಅವನ ಕೂಗಿಗೆ ಹೆದರಿ ಎಷ್ಟೋ ಜನರು ಪ್ರಿಯ ಪ್ರಾಣಗಳನ್ನು ತೊರೆದು ನೆಲದ ಮೇಲೆ ಬಿದ್ದರು.
06096028a ಕಾರ್ಷ್ಣಿಶ್ಚಾಪಿ ಮುದಾ ಯುಕ್ತಃ ಪ್ರಗೃಹೀತಶರಾಸನಃ।
06096028c ನೃತ್ಯನ್ನಿವ ರಥೋಪಸ್ಥೇ ತದ್ರಕ್ಷಃ ಸಮುಪಾದ್ರವತ್।।
ಕಾರ್ಷ್ಣಿಯಾದರೋ ಸಂತೋಷದಿಂದ ರಥದಲ್ಲಿ ನಿಂತು ನರ್ತಿಸುತ್ತಿರುವನೋ ಎನ್ನುವಂತೆ ಧನುಸ್ಸನ್ನು ಹಿಡಿದು ಆ ರಾಕ್ಷಸನ ಮೇಲೆ ಆಕ್ರಮಣಿಸಿದನು.
06096029a ತತಃ ಸ ರಾಕ್ಷಸಃ ಕ್ರುದ್ಧಃ ಸಂಪ್ರಾಪ್ಯೈವಾರ್ಜುನಿಂ ರಣೇ।
06096029c ನಾತಿದೂರೇ ಸ್ಥಿತಸ್ತಸ್ಯ ದ್ರಾವಯಾಮಾಸ ವೈ ಚಮೂಂ।।
ಆಗ ಆ ರಾಕ್ಷಸನು ರಣದಲ್ಲಿ ಆರ್ಜುನಿಯ ಸಮೀಪಕ್ಕೆ ಬಂದು ಕ್ರುದ್ಧನಾಗಿ ಅನತಿದೂರದಲ್ಲಿಯೇ ನಿಂತು ಅವನ ಸೇನೆಯನ್ನು ಓಡಿಸತೊಡಗಿದನು.
06096030a ಸಾ ವಧ್ಯಮಾನಾ ಸಮರೇ ಪಾಂಡವಾನಾಂ ಮಹಾಚಮೂಃ।
06096030c ಪ್ರತ್ಯುದ್ಯಯೌ ರಣೇ ರಕ್ಷೋ ದೇವಸೇನಾ ಯಥಾ ಬಲಿಂ।।
ಬಲಿಯಿಂದ ದೇವಸೇನೆಯು ಹೇಗೋ ಹಾಗೆ ರಣದಲ್ಲಿ ಆ ರಾಕ್ಷಸನಿಂದ ವಧಿಸಲ್ಪಡುತ್ತಿದ್ದ ಪಾಂಡವರ ಮಹಾಸೇನೆಯು ಸಮರದಿಂದ ಪಲಾಯನ ಮಾಡಿತು.
06096031a ವಿಮರ್ದಃ ಸುಮಹಾನಾಸೀತ್ತಸ್ಯ ಸೈನ್ಯಸ್ಯ ಮಾರಿಷ।
06096031c ರಕ್ಷಸಾ ಘೋರರೂಪೇಣ ವಧ್ಯಮಾನಸ್ಯ ಸಂಯುಗೇ।।
ಮಾರಿಷ! ಸಂಯುಗದಲ್ಲಿ ಘೋರರೂಪದ ಆ ರಾಕ್ಷಸನಿಂದ ವಧಿಸಲ್ಪಡುತ್ತಿದ್ದ ಅವನ ಸೈನ್ಯದಲ್ಲಿ ಮಹಾನಾಶವುಂಟಾಯಿತು.
06096032a ತತಃ ಶರಸಹಸ್ರೈಸ್ತಾಂ ಪಾಂಡವಾನಾಂ ಮಹಾಚಮೂಂ।
06096032c ವ್ಯದ್ರಾವಯದ್ರಣೇ ರಕ್ಷೋ ದರ್ಶಯದ್ವೈ ಪರಾಕ್ರಮಂ।।
ಆಗ ರಾಕ್ಷಸನು ತನ್ನ ಪರಾಕ್ರಮವನ್ನು ಪ್ರದರ್ಶಿಸುತ್ತಾ ಸಹಸ್ರಾರು ಬಾಣಗಳಿಂದ ಪಾಂಡವರ ಮಹಾಸೇನೆಯನ್ನು ರಣದಿಂದ ಓಡಿಸಿದನು.
06096033a ಸಾ ವಧ್ಯಮಾನಾ ಚ ತಥಾ ಪಾಂಡವಾನಾಮನೀಕಿನೀ।
06096033c ರಕ್ಷಸಾ ಘೋರರೂಪೇಣ ಪ್ರದುದ್ರಾವ ರಣೇ ಭಯಾತ್।।
ಹಾಗೆ ಘೋರರೂಪದ ರಾಕ್ಷಸನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಯು ಭಯಪಟ್ಟು ರಣದಿಂದ ಪಲಾಯನ ಮಾಡಿತು.
06096034a ತಾಂ ಪ್ರಮೃದ್ಯ ತತಃ ಸೇನಾಂ ಪದ್ಮಿನೀಂ ವಾರಣೋ ಯಥಾ।
06096034c ತತೋಽಭಿದುದ್ರಾವ ರಣೇ ದ್ರೌಪದೇಯಾನ್ಮಹಾಬಲಾನ್।।
ಕಮಲ ಪುಷ್ಪಗಳಿಂದ ತುಂಬಿದ ಸರೋವರವನ್ನು ಆನೆಯು ಹೇಗೆ ಧ್ವಂಸಿಸುತ್ತದೆಯೋ ಹಾಗೆ ಆ ಸೇನೆಯನ್ನು ಧ್ವಂಸಿಸಿ ಅವನು ರಣದಲ್ಲಿ ಮಹಾಬಲ ದ್ರೌಪದೇಯರನ್ನು ಆಕ್ರಮಣಿಸಿದನು.
06096035a ತೇ ತು ಕ್ರುದ್ಧಾ ಮಹೇಷ್ವಾಸಾ ದ್ರೌಪದೇಯಾಃ ಪ್ರಹಾರಿಣಃ।
06096035c ರಾಕ್ಷಸಂ ದುದ್ರುವುಃ ಸರ್ವೇ ಗ್ರಹಾಃ ಪಂಚ ಯಥಾ ರವಿಂ।।
ಪ್ರಹಾರಿಗಳಾದ ಆ ಮಹೇಷ್ವಾಸ ದ್ರೌಪದೇಯರು ಎಲ್ಲರೂ ಕ್ರುದ್ಧರಾಗಿ ಐದು ಗ್ರಹಗಳು ರವಿಯನ್ನು ಹೇಗೋ ಹಾಗೆ ರಾಕ್ಷಸನ ಮೇಲೆ ಎರಗಿದರು.
06096036a ವೀರ್ಯವದ್ಭಿಸ್ತತಸ್ತೈಸ್ತು ಪೀಡಿತೋ ರಾಕ್ಷಸೋತ್ತಮಃ।
06096036c ಯಥಾ ಯುಗಕ್ಷಯೇ ಘೋರೇ ಚಂದ್ರಮಾಃ ಪಂಚಭಿರ್ಗ್ರಹೈಃ।।
ಯುಗಕ್ಷಯದಲ್ಲಿ ಚಂದ್ರಮನು ಐದು ಘೋರ ಗ್ರಹಗಳಿಂದ ಪೀಡಿಸಲ್ಪಡುವಂತೆ ಆ ರಾಕ್ಷಸೋತ್ತಮನು ವೀರರಾದ ಅವರಿಂದ ಪೀಡಿತನಾದನು.
06096037a ಪ್ರತಿವಿಂಧ್ಯಸ್ತತೋ ರಕ್ಷೋ ಬಿಭೇದ ನಿಶಿತೈಃ ಶರೈಃ।
06096037c ಸರ್ವಪಾರಶವೈಸ್ತೂರ್ಣಮಕುಣ್ಠಾಗ್ರೈರ್ಮಹಾಬಲಃ।।
ಆಗ ಮಹಾಬಲ ಪ್ರತಿವಿಂಧ್ಯನು ಉಕ್ಕಿನಿಂದಲೇ ಮಾಡಲ್ಪಟ್ಟ ನೇರ ಮುಂಬಾಗವನ್ನು ಹೊಂದಿದ್ದ ನಿಶಿತ ಶರಗಳಿಂದ ರಾಕ್ಷಸನನ್ನು ಭೇದಿಸಿದನು.
06096038a ಸ ತೈರ್ಭಿನ್ನತನುತ್ರಾಣಃ ಶುಶುಭೇ ರಾಕ್ಷಸೋತ್ತಮಃ।
06096038c ಮರೀಚಿಭಿರಿವಾರ್ಕಸ್ಯ ಸಂಸ್ಯೂತೋ ಜಲದೋ ಮಹಾನ್।।
ಅವುಗಳಿಂದ ಒಡೆದ ಕವಚದಿಂದ ಆ ರಾಕ್ಷಸೋತ್ತಮನು ಸೂರ್ಯನ ಕಿರಣಗಳಿಂದ ಸಮ್ಮಿಶ್ರವಾದ ದೊಡ್ಡ ಕಪ್ಪು ಮೋಡದೋಪಾದಿಯಲ್ಲಿ ಶೋಭಿಸಿದನು.
06096039a ವಿಷಕ್ತೈಃ ಸ ಶರೈಶ್ಚಾಪಿ ತಪನೀಯಪರಿಚ್ಛದೈಃ।
06096039c ಆರ್ಶ್ಯಶೃಂಗಿರ್ಬಭೌ ರಾಜನ್ದೀಪ್ತಶೃಂಗ ಇವಾಚಲಃ।।
ರಾಜನ್! ಸುವರ್ಣದ ರೆಕ್ಕೆಗಳುಳ್ಳ ಆ ಬಾಣಗಳು ಆರ್ಶ್ಯಶೃಂಗಿಯ ಶರೀರದೊಳಕ್ಕೆ ನೆಟ್ಟಿಕೊಂಡು ಅವನು ಬೆಳಗುತ್ತಿರುವ ಶಿಖರಗಳುಳ್ಳ ಪರ್ವತದಂತೆ ಕಂಡನು.
06096040a ತತಸ್ತೇ ಭ್ರಾತರಃ ಪಂಚ ರಾಕ್ಷಸೇಂದ್ರಂ ಮಹಾಹವೇ।
06096040c ವಿವ್ಯಧುರ್ನಿಶಿತೈರ್ಬಾಣೈಸ್ತಪನೀಯವಿಭೂಷಿತೈಃ।।
ಆಗ ಆ ಇವರು ಸಹೋದರರೂ ಮಹಾಹವದಲ್ಲಿ ರಾಕ್ಷಸೇಂದ್ರನನ್ನು ಸುವರ್ಣ ಭೂಷಿತ ನಿಶಿತ ಬಾಣಗಳಿಂದ ಹೊಡೆದರು.
06096041a ಸ ನಿರ್ಭಿನ್ನಃ ಶರೈರ್ಘೋರೈರ್ಭುಜಗೈಃ ಕೋಪಿತೈರಿವ।
06096041c ಅಲಂಬುಸೋ ಭೃಶಂ ರಾಜನ್ನಾಗೇಂದ್ರ ಇವ ಚುಕ್ರುಧೇ।।
ರಾಜನ್! ಕುಪಿತಸರ್ಪಗಳಂತಿದ್ದ ಘೋರ ಶರಗಳಿಂದ ಗಾಯಗೊಂಡ ಅಲಂಬುಸನು ಅಂಕುಶದಿಂದ ಚುಚ್ಚಲ್ಪಟ್ಟ ಗಜರಾಜನಂತೆ ತುಂಬಾ ಕ್ರುದ್ಧನಾದನು.
06096042a ಸೋಽತಿವಿದ್ಧೋ ಮಹಾರಾಜ ಮುಹೂರ್ತಮಥ ಮಾರಿಷ।
06096042c ಪ್ರವಿವೇಶ ತಮೋ ದೀರ್ಘಂ ಪೀಡಿತಸ್ತೈರ್ಮಹಾರಥೈಃ।।
ಮಹಾರಾಜ! ಮಾರಿಷ! ಆ ಮಹಾರಥರಿಂದ ಅತಿಯಾಗಿ ಪೀಡಿತನಾಗಿ ಗಾಯಗೊಂಡ ಅವನು ಮುಹೂರ್ತಕಾಲ ದೀರ್ಘ ತಮಸ್ಸಿನ ಮೂರ್ಛೆಯನ್ನು ಹೊಂದಿದನು.
06096043a ಪ್ರತಿಲಭ್ಯ ತತಃ ಸಂಜ್ಞಾಂ ಕ್ರೋಧೇನ ದ್ವಿಗುಣೀಕೃತಃ।
06096043c ಚಿಚ್ಛೇದ ಸಾಯಕೈಸ್ತೇಷಾಂ ಧ್ವಜಾಂಶ್ಚೈವ ಧನೂಂಷಿ ಚ।।
ಆಗ ಸಂಜ್ಞೆಯನ್ನು ಹಿಂದೆ ಪಡೆದುಕೊಂಡು ಎರಡು ಪಟ್ಟು ಕ್ರೋಧಾನ್ವಿತನಾಗಿ ಸಾಯಕಗಳಿಂದ ಅವರ ಧ್ವಜಗಳನ್ನೂ ಧನುಸ್ಸುಗಳನ್ನೂ ತುಂಡರಿಸಿದನು.
06096044a ಏಕೈಕಂ ಚ ತ್ರಿಭಿರ್ಬಾಣೈರಾಜಘಾನ ಸ್ಮಯನ್ನಿವ।
06096044c ಅಲಂಬುಸೋ ರಥೋಪಸ್ಥೇ ನೃತ್ಯನ್ನಿವ ಮಹಾರಥಃ।।
ಮಹಾರಥ ಅಲಂಬುಸನು ನಗುತ್ತಾ ರಥದಲ್ಲಿಯೇ ನಿಂತು ನರ್ತಿಸುತ್ತಿರುವಂತೆ ಅವರೊಬ್ಬೊಬ್ಬರನ್ನೂ ಮೂರು ಮೂರು ಬಾಣಗಳಿಂದ ಹೊಡೆದನು.
06096045a ತ್ವರಮಾಣಶ್ಚ ಸಂಕ್ರುದ್ಧೋ ಹಯಾಂಸ್ತೇಷಾಂ ಮಹಾತ್ಮನಾಂ।
06096045c ಜಘಾನ ರಾಕ್ಷಸಃ ಕ್ರುದ್ಧಃ ಸಾರಥೀಂಶ್ಚ ಮಹಾಬಲಃ।।
ತ್ವರೆಮಾಡಿ ಸಂಕ್ರುದ್ಧನಾದ ಮಹಾಬಲ ರಾಕ್ಷಸನು ಆ ಮಹಾತ್ಮರ ಕುದುರೆಗಳನ್ನೂ ಸಾರಥಿಗಳನ್ನೂ ಸಂಹರಿಸಿದನು.
06096046a ಬಿಭೇದ ಚ ಸುಸಂಹೃಷ್ಟಃ ಪುನಶ್ಚೈನಾನ್ಸುಸಂಶಿತೈಃ।
06096046c ಶರೈರ್ಬಹುವಿಧಾಕಾರೈಃ ಶತಶೋಽಥ ಸಹಸ್ರಶಃ।।
ಪುನಃ ಸಂಹೃಷ್ಟನಾಗಿ ಅವರನ್ನು ಸುಸಂಶಿತ ಬಹವಿಧದ ಆಕಾರದ ನೂರಾರು ಸಹಸ್ರಾರು ಶರಗಳಿಂದ ಗಾಯಗೊಳಿಸಿದನು.
06096047a ವಿರಥಾಂಶ್ಚ ಮಹೇಷ್ವಾಸಾನ್ಕೃತ್ವಾ ತತ್ರ ಸ ರಾಕ್ಷಸಃ।
06096047c ಅಭಿದುದ್ರಾವ ವೇಗೇನ ಹಂತುಕಾಮೋ ನಿಶಾಚರಃ।।
ಆ ಮಹೇಷ್ವಾಸರನ್ನು ವಿರಥರನ್ನಾಗಿ ಮಾಡಿ ಆ ನಿಶಾಚರ ರಾಕ್ಷಸನು ಅವರನ್ನು ಕೊಲ್ಲಲು ಬಯಸಿ ವೇಗದಿಂದ ಅವರ ಮೇಲೆ ಎರಗಿದನು.
06096048a ತಾನರ್ದಿತಾನ್ರಣೇ ತೇನ ರಾಕ್ಷಸೇನ ದುರಾತ್ಮನಾ।
06096048c ದೃಷ್ಟ್ವಾರ್ಜುನಸುತಃ ಸಂಖ್ಯೇ ರಾಕ್ಷಸಂ ಸಮುಪಾದ್ರವತ್।।
ಆ ದುರಾತ್ಮ ರಾಕ್ಷಸನಿಂದ ಅವರು ಆರ್ದಿತರಾದುದನ್ನು ನೋಡಿ ಅರ್ಜುನನ ಮಗನು ಯುದ್ಧದಲ್ಲಿ ರಾಕ್ಷಸನನ್ನು ಎದುರಿಸಿದನು.
06096049a ತಯೋಃ ಸಮಭವದ್ಯುದ್ಧಂ ವೃತ್ರವಾಸವಯೋರಿವ।
06096049c ದದೃಶುಸ್ತಾವಕಾಃ ಸರ್ವೇ ಪಾಂಡವಾಶ್ಚ ಮಹಾರಥಾಃ।।
ವೃತ್ರ-ವಾಸವರ ನಡುವಿನಂತೆ ಅವರಿಬ್ಬರ ನಡುವೆ ಯುದ್ಧವು ನಡೆಯಿತು. ಅದನ್ನು ಮಹಾರಥರಾದ ನಿನ್ನವರು ಮತ್ತು ಪಾಂಡವರು ಎಲ್ಲರೂ ನೋಡಿದರು.
06096050a ತೌ ಸಮೇತೌ ಮಹಾಯುದ್ಧೇ ಕ್ರೋಧದೀಪ್ತೌ ಪರಸ್ಪರಂ।
06096050c ಮಹಾಬಲೌ ಮಹಾರಾಜ ಕ್ರೋಧಸಂರಕ್ತಲೋಚನೌ।
06096050e ಪರಸ್ಪರಮವೇಕ್ಷೇತಾಂ ಕಾಲಾನಲಸಮೌ ಯುಧಿ।।
ಮಹಾರಾಜ! ಮಹಾ ಯುದ್ದದಲ್ಲಿ ತೊಡಗಿದ್ದ ಅವರಿಬ್ಬರು ಮಹಾಬಲರೂ ಕ್ರೋಧದಿಂದ ಉರಿಯುತ್ತಿದ್ದು, ಕ್ರೋಧದಿಂದ ಕಣ್ಣುಗಳನ್ನು ಕೆಂಪು ಮಾಡಿಕೊಂಡು, ಪರಸ್ಪರರನ್ನು ಕಾಲಾನಲರಂತೆ ನೋಡುತ್ತಿದ್ದರು.
06096051a ತಯೋಃ ಸಮಾಗಮೋ ಘೋರೋ ಬಭೂವ ಕಟುಕೋದಯಃ।
06096051c ಯಥಾ ದೇವಾಸುರೇ ಯುದ್ಧೇ ಶಕ್ರಶಂಬರಯೋರಿವ।।
ದೇವಾಸುರರ ಯುದ್ಧದಲ್ಲಿ ಶಕ್ರ-ಶಂಬರರ ನಡುವೆ ನಡೆದಂತೆ ಅವಬ್ಬರ ನಡುವೆ ಘೋರ ಅಪ್ರಿಯ ಯುದ್ಧವಾಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಲಂಬುಷಾಭಿಮನ್ಯುಸಮಾಗಮೇ ಷಟ್ನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಲಂಬುಷಾಭಿಮನ್ಯುಸಮಾಗಮ ಎನ್ನುವ ತೊಂಭತ್ತಾರನೇ ಅಧ್ಯಾಯವು.