ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 95
ಸಾರ
ಭೀಷ್ಮನನ್ನು ಶಿಖಂಡಿಯಿಂದ ರಕ್ಷಿಸಬೇಕೆಂದು ದುರ್ಯೋಧನನು ದುಃಶಾಸನನಿಗೆ ಆದೇಶವನ್ನಿತ್ತುದುದು (1-23). ಪರಸ್ಪರ ವ್ಯೂಹರಚನೆ (24-44). ಉತ್ಪಾತ ದರ್ಶನ (45-53).
06095001 ಸಂಜಯ ಉವಾಚ।
06095001a ಪ್ರಭಾತಾಯಾಂ ತು ಶರ್ವರ್ಯಾಂ ಪ್ರಾತರುತ್ಥಾಯ ವೈ ನೃಪಃ।
06095001c ರಾಜ್ಞಃ ಸಮಾಜ್ಞಾಪಯತ ಸೇನಾಂ ಯೋಜಯತೇತಿ ಹ।
06095001e ಅದ್ಯ ಭೀಷ್ಮೋ ರಣೇ ಕ್ರುದ್ಧೋ ನಿಹನಿಷ್ಯತಿ ಸೋಮಕಾನ್।।
ಸಂಜಯನು ಹೇಳಿದನು: “ರಾತ್ರಿಯು ಕಳೆದು ಬೆಳಗಾಗುತ್ತಲೇ ಎದ್ದು ನೃಪನು ರಾಜರನ್ನು ಕರೆಯಿಸಿ ಆಜ್ಞಾಪಿಸಿದನು: “ಸೇನೆಯನ್ನು ಸಿದ್ಧಗೊಳಿಸಿ. ಇಂದು ಭೀಷ್ಮನು ರಣದಲ್ಲಿ ಕ್ರುದ್ಧನಾಗಿ ಸೋಮಕರನ್ನು ಸಂಹರಿಸುತ್ತಾನೆ.”
06095002a ದುರ್ಯೋಧನಸ್ಯ ತಚ್ಚ್ರುತ್ವಾ ರಾತ್ರೌ ವಿಲಪಿತಂ ಬಹು।
06095002c ಮನ್ಯಮಾನಃ ಸ ತಂ ರಾಜನ್ಪ್ರತ್ಯಾದೇಶಮಿವಾತ್ಮನಃ।।
06095003a ನಿರ್ವೇದಂ ಪರಮಂ ಗತ್ವಾ ವಿನಿಂದ್ಯ ಪರವಾಚ್ಯತಾಂ।
06095003c ದೀರ್ಘಂ ದಧ್ಯೌ ಶಾಂತನವೋ ಯೋದ್ಧುಕಾಮೋಽರ್ಜುನಂ ರಣೇ।।
ರಾತ್ರಿಯಲ್ಲಿ ದುರ್ಯೋಧನನು ಬಹಳವಾಗಿ ಅಳುತ್ತಾ ಹೇಳಿದನ್ನು ಕೇಳಿ, ಅದು ತನ್ನನ್ನು ಯುದ್ಧದಿಂದ ಹಿಂದೆಸರಿಯಲು ಹೇಳಿದುದೆಂದು ಮನಗಂಡು ಬಹಳ ಖಿನ್ನನಾಗಿ ಪರಾಧೀನತೆಯನ್ನು ನಿಂದಿಸಿ ಶಾಂತನವನು ರಣದಲ್ಲಿ ಅರ್ಜುನನೊಡನೆ ಯುದ್ಧ ಮಾಡಲು ಬಯಸಿ ದೀರ್ಘ ಯೋಚನೆಯಲ್ಲಿ ಮುಳುಗಿದನು.
06095004a ಇಂಗಿತೇನ ತು ತಜ್ಞಾತ್ವಾ ಗಾಂಗೇಯೇನ ವಿಚಿಂತಿತಂ।
06095004c ದುರ್ಯೋಧನೋ ಮಹಾರಾಜ ದುಃಶಾಸನಮಚೋದಯತ್।।
ಮಹಾರಾಜ! ಗಾಂಗೇಯನು ಚಿಂತಿಸುತ್ತಿರುವುದನ್ನು ಅವನ ಮುಖಭಾವದಿಂದಲೇ ಅರ್ಥಮಾಡಿಕೊಂಡ ದುರ್ಯೋಧನನು ದುಃಶಾಸನನನ್ನು ಕರೆದು ಆಜ್ಞಾಪಿಸಿದನು:
06095005a ದುಃಶಾಸನ ರಥಾಸ್ತೂರ್ಣಂ ಯುಜ್ಯಂತಾಂ ಭೀಷ್ಮರಕ್ಷಿಣಃ।
06095005c ದ್ವಾತ್ರಿಂಶತ್ತ್ವಮನೀಕಾನಿ ಸರ್ವಾಣ್ಯೇವಾಭಿಚೋದಯ।।
“ದುಃಶಾಸನ! ಭೀಷ್ಮನನ್ನು ರಕ್ಷಿಸಲು ಸಮರ್ಥ ರಥಗಳನ್ನು ಕೂಡಲೇ ಸಿದ್ಧಗೊಳಿಸು. ನಮ್ಮಲ್ಲಿರುವ ಇಪ್ಪತ್ತೆರಡು ಅನೀಕಗಳನ್ನೂ ಇದಕ್ಕಾಗಿಯೇ ಮೀಸಲಿಡು.
06095006a ಇದಂ ಹಿ ಸಮನುಪ್ರಾಪ್ತಂ ವರ್ಷಪೂಗಾಭಿಚಿಂತಿತಂ।
06095006c ಪಾಂಡವಾನಾಂ ಸಸೈನ್ಯಾನಾಂ ವಧೋ ರಾಜ್ಯಸ್ಯ ಚಾಗಮಃ।।
ಬಹಳ ವರ್ಷಗಳಿಂದ ಯೋಚಿಸಿಕೊಂಡು ಬಂದಿದ್ದ ಸಮಯವು ಈಗ ಬಂದೊದಗಿದೆ. ಸೈನ್ಯದೊಂದಿಗೆ ಪಾಂಡವರ ವಧೆ ಮತ್ತು ರಾಜ್ಯಪ್ರಾಪ್ತಿ ಇವೆರಡೂ ಆಗಲಿವೆ.
06095007a ತತ್ರ ಕಾರ್ಯಮಹಂ ಮನ್ಯೇ ಭೀಷ್ಮಸ್ಯೈವಾಭಿರಕ್ಷಣಂ।
06095007c ಸ ನೋ ಗುಪ್ತಃ ಸುಖಾಯ ಸ್ಯಾದ್ಧನ್ಯಾತ್ಪಾರ್ಥಾಂಶ್ಚ ಸಂಯುಗೇ।।
ಅದರಲ್ಲಿ ಭೀಷ್ಮನ ಅಭಿರಕ್ಷಣೆಯೇ ಮಾಡಬೇಕಾದ್ದು ಎಂದು ನನ್ನ ಅಭಿಪ್ರಾಯ. ಅವನನ್ನು ನಾವು ರಕ್ಷಿಸಿದರೆ ಅವನು ನಮ್ಮ ಸಹಾಯಕನಾಗಿ ಪಾರ್ಥರನ್ನು ಯುದ್ಧದಲ್ಲಿ ಸಂಹರಿಸಬಲ್ಲನು.
06095008a ಅಬ್ರವೀಚ್ಚ ವಿಶುದ್ಧಾತ್ಮಾ ನಾಹಂ ಹನ್ಯಾಂ ಶಿಖಂಡಿನಂ।
06095008c ಸ್ತ್ರೀಪೂರ್ವಕೋ ಹ್ಯಸೌ ಜಾತಸ್ತಸ್ಮಾದ್ವರ್ಜ್ಯೋ ರಣೇ ಮಯಾ।।
ಆದರೆ ಆ ವಿಶುದ್ಧಾತ್ಮನು ನನಗೆ ಹೇಳಿದ್ದನು - “ನಾನು ಶಿಖಂಡಿಯನ್ನು ಕೊಲ್ಲುವುದಿಲ್ಲ. ಮೊದಲು ಅವನು ಹೆಣ್ಣಾಗಿ ಹುಟ್ಟಿದ್ದನು. ಆದುದರಿಂದ ಅವನು ರಣದಲ್ಲಿ ನನಗೆ ವರ್ಜ್ಯ.
06095009a ಲೋಕಸ್ತದ್ವೇದ ಯದಹಂ ಪಿತುಃ ಪ್ರಿಯಚಿಕೀರ್ಷಯಾ।
06095009c ರಾಜ್ಯಂ ಸ್ಫೀತಂ ಮಹಾಬಾಹೋ ಸ್ತ್ರಿಯಶ್ಚ ತ್ಯಕ್ತವಾನ್ಪುರಾ।।
ನಾನು ತಂದೆಗೆ ಇಷ್ಟವಾದುದನ್ನು ಮಾಡಲು ಏನು ಮಾಡಿದೆನೆಂದು ಲೋಕವೇ ತಿಳಿದಿದೆ. ಮಹಾಬಾಹೋ! ಹಿಂದೆಯೇ ನಾನು ಸಂಪದ್ಭರಿತ ರಾಜ್ಯ ಮತ್ತು ಸ್ತ್ರೀಯನ್ನು ತ್ಯಜಿಸಿದ್ದೇನೆ.
06095010a ನೈವ ಚಾಹಂ ಸ್ತ್ರಿಯಂ ಜಾತು ನ ಸ್ತ್ರೀಪೂರ್ವಂ ಕಥಂ ಚನ।
06095010c ಹನ್ಯಾಂ ಯುಧಿ ನರಶ್ರೇಷ್ಠ ಸತ್ಯಮೇತದ್ಬ್ರವೀಮಿ ತೇ।।
ನರಶೇಷ್ಠ! ನಾನು ಸ್ತ್ರೀಯನ್ನು, ಮೊದಲು ಸ್ತ್ರೀಯಾಗಿ ಹುಟ್ಟಿದವರನ್ನು ಎಂದೂ ಯುದ್ಧದಲ್ಲಿ ಕೊಲ್ಲುವುದಿಲ್ಲ. ನಿನಗೆ ಈ ಸತ್ಯವನ್ನು ಹೇಳುತ್ತಿದ್ದೇನೆ.
06095011a ಅಯಂ ಸ್ತ್ರೀಪೂರ್ವಕೋ ರಾಜನ್ಶಿಖಂಡೀ ಯದಿ ತೇ ಶ್ರುತಃ।
06095011c ಉದ್ಯೋಗೇ ಕಥಿತಂ ಯತ್ತತ್ತಥಾ ಜಾತಾ ಶಿಖಂಡಿನೀ।।
ರಾಜನ್! ಈ ಶಿಖಂಡಿಯು ಮೊದಲು ಸ್ತ್ರೀಯಾಗಿದ್ದನು ಎಂದು ನೀನೂ ಕೇಳಿರಬಹುದು. ಯುದ್ಧದ ತಯಾರಿಯಲ್ಲಿಯೇ ನಿನಗೆ ಹೇಳಿದಂತೆ ಇವನು ಶಿಖಂಡಿನಿಯಾಗಿ ಹುಟ್ಟಿದ್ದನು.
06095012a ಕನ್ಯಾ ಭೂತ್ವಾ ಪುಮಾಂ ಜಾತಃ ಸ ಚ ಯೋತ್ಸ್ಯತಿ ಭಾರತ।
06095012c ತಸ್ಯಾಹಂ ಪ್ರಮುಖೇ ಬಾಣಾನ್ನ ಮುಂಚೇಯಂ ಕಥಂ ಚನ।।
ಭಾರತ! ಕನ್ಯೆಯಾಗಿ ಹುಟ್ಟಿ ಪುರುಷನಾದ ಅವನೂ ಯುದ್ಧಮಾಡುತ್ತಿದ್ದಾನೆ. ಅವನ ಮೇಲೆ ನಾನು ಎಂದೂ ಬಾಣಗಳನ್ನು ಪ್ರಯೋಗಿಸುವುದಿಲ್ಲ.
06095013a ಯುದ್ಧೇ ತು ಕ್ಷತ್ರಿಯಾಂಸ್ತಾತ ಪಾಂಡವಾನಾಂ ಜಯೈಷಿಣಃ।
06095013c ಸರ್ವಾನನ್ಯಾನ್ ಹನಿಷ್ಯಾಮಿ ಸಂಪ್ರಾಪ್ತಾನ್ಬಾಣಗೋಚರಾನ್।।
ಆದರೆ ಮಗೂ! ಯುದ್ಧದಲ್ಲಿ ಪಾಂಡವರ ಜಯವನ್ನು ಬಯಸಿ ನನ್ನೊಡನೆ ಯುದ್ಧಮಾಡಬರುವ ಕ್ಷತ್ರಿಯರೆಲ್ಲರನ್ನೂ ಸಂಹರಿಸುತ್ತೇನೆ.”
06095014a ಏವಂ ಮಾಂ ಭರತಶ್ರೇಷ್ಠೋ ಗಾಂಗೇಯಃ ಪ್ರಾಹ ಶಾಸ್ತ್ರವಿತ್।
06095014c ತತ್ರ ಸರ್ವಾತ್ಮನಾ ಮನ್ಯೇ ಭೀಷ್ಮಸ್ಯೈವಾಭಿಪಾಲನಂ।।
ಹೀಗೆ ನನಗೆ ಶಾಸ್ತ್ರವಿದು ಭರತಶ್ರೇಷ್ಠ ಗಾಂಗೇಯನು ಹೇಳಿದ್ದನು. ಆದುದರಿಂದ ಸರ್ವಪ್ರಕಾರದಿಂದಲೂ ಭೀಷ್ಮನನ್ನು ರಕ್ಷಿಸಬೇಕೆಂಬ ಅಭಿಪ್ರಾಯ.
06095015a ಅರಕ್ಷ್ಯಮಾಣಂ ಹಿ ವೃಕೋ ಹನ್ಯಾತ್ಸಿಂಹಂ ಮಹಾವನೇ।
06095015c ಮಾ ವೃಕೇಣೇವ ಶಾರ್ದೂಲಂ ಘಾತಯೇಮ ಶಿಖಂಡಿನಾ।।
ಮಹಾವನದಲ್ಲಿ ರಕ್ಷಣೆಯಿಲ್ಲದ ಸಿಂಹವನ್ನು ತೋಳವೇ ಕೊಲ್ಲಬಹುದು. ಶಿಖಂಡಿಯೆಂಬ ತೋಳವು ಈ ಸಿಂಹವನ್ನು ಕೊಲ್ಲಬಾರದು.
06095016a ಮಾತುಲಃ ಶಕುನಿಃ ಶಲ್ಯಃ ಕೃಪೋ ದ್ರೋಣೋ ವಿವಿಂಶತಿಃ।
06095016c ಯತ್ತಾ ರಕ್ಷಂತು ಗಾಂಗೇಯಂ ತಸ್ಮಿನ್ಗುಪ್ತೇ ಧ್ರುವೋ ಜಯಃ।।
ಸೋದರಮಾವ ಶಕುನಿ, ಶಲ್ಯ, ಕೃಪ, ದ್ರೋಣ, ವಿವಿಂಶತಿ ಇವರು ಪ್ರಯತ್ನಪಟ್ಟು ಗಾಂಗೇಯನನ್ನು ರಕ್ಷಿಸಲಿ. ಇವನನ್ನು ರಕ್ಷಿಸಿದರೆ ಜಯವು ಖಂಡಿತ.”
06095017a ಏತಚ್ಚ್ರುತ್ವಾ ತು ರಾಜಾನೋ ದುರ್ಯೋಧನವಚಸ್ತದಾ।
06095017c ಸರ್ವತೋ ರಥವಂಶೇನ ಗಾಂಗೇಯಂ ಪರ್ಯವಾರಯನ್।।
ದುರ್ಯೋಧನನ ಮಾತನ್ನು ಕೇಳಿ ರಾಜರು ರಥಸೇನೆಗಳಿಂದ ಗಾಂಗೇಯನನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದರು.
06095018a ಪುತ್ರಾಶ್ಚ ತವ ಗಾಂಗೇಯಂ ಪರಿವಾರ್ಯ ಯಯುರ್ಮುದಾ।
06095018c ಕಂಪಯಂತೋ ಭುವಂ ದ್ಯಾಂ ಚ ಕ್ಷೋಭಯಂತಶ್ಚ ಪಾಂಡವಾನ್।।
ನಿನ್ನ ಪುತ್ರರೂ ಕೂಡ ಗಾಂಗೇಯನನ್ನು ಸುತ್ತುವರೆದು ತಮ್ಮ ನಡುಗೆಯಿಂದ ಭೂಮಿಯನ್ನು ನಡುಗಿಸುತ್ತಾ ಪಾಂಡವರನ್ನು ಕ್ಷೋಭಿಸುತ್ತಾ ಸಂತೋಷದಿಂದ ಮುಂದುವರೆದರು.
06095019a ತೈ ರಥೈಶ್ಚ ಸುಸಮ್ಯುಕ್ತೈರ್ದಂತಿಭಿಶ್ಚ ಮಹಾರಥಾಃ।
06095019c ಪರಿವಾರ್ಯ ರಣೇ ಭೀಷ್ಮಂ ದಂಶಿತಾಃ ಸಮವಸ್ಥಿತಾಃ।।
06095020a ಯಥಾ ದೇವಾಸುರೇ ಯುದ್ಧೇ ತ್ರಿದಶಾ ವಜ್ರಧಾರಿಣಂ।
06095020c ಸರ್ವೇ ತೇ ಸ್ಮ ವ್ಯತಿಷ್ಠಂತ ರಕ್ಷಂತಸ್ತಂ ಮಹಾರಥಂ।।
ಉತ್ತಮವಾಗಿ ಸುಸಜ್ಜಿತವಾದ ರಥಗಳಿಂದ ಮತ್ತು ಆನೆಗಳಿಂದ ಕೂಡಿ, ಕವಚಗಳನ್ನು ಧರಿಸಿ ಸಮವಸ್ಥಿತರಾಗಿ ಮಹಾರಥರು ರಣದಲ್ಲಿ ಭೀಷ್ಮನನ್ನು ಸುತ್ತುವರೆದರು. ದೇವಾಸುರರ ಯುದ್ಧದಲ್ಲಿ ತ್ರಿದಶರು ವಜ್ರಧಾರಿಣಿಯ ಹೇಗೋ ಹಾಗೆ ಅವರು ಆ ಮಹಾರಥನನ್ನು ರಕ್ಷಿಸುತ್ತಾ ನಿಂತಿದ್ದರು.
06095021a ತತೋ ದುರ್ಯೋಧನೋ ರಾಜಾ ಪುನರ್ಭ್ರಾತರಮಬ್ರವೀತ್।
06095021c ಸವ್ಯಂ ಚಕ್ರಂ ಯುಧಾಮನ್ಯುರುತ್ತಮೌಜಾಶ್ಚ ದಕ್ಷಿಣಂ।
06095021e ಗೋಪ್ತಾರಾವರ್ಜುನಸ್ಯೈತಾವರ್ಜುನೋಽಪಿ ಶಿಖಂಡಿನಃ।।
ಆಗ ರಾಜಾ ದುರ್ಯೋಧನನು ಪುನಃ ಸಹೋದರನಿಗೆ ಹೇಳಿದನು: “ಅರ್ಜುನನ ರಥದ ಬಲಚಕ್ರವನ್ನು ಯುಧಾಮನ್ಯುವೂ ಎಡಚಕ್ರವನ್ನು ಉತ್ತಮೌಜಸನೂ ಕಾಯುತ್ತಿದ್ದಾರೆ. ಅರ್ಜುನನು ಶಿಖಂಡಿಯನ್ನು ರಕ್ಷಿಸುತ್ತಿದ್ದಾನೆ.
06095022a ಸ ರಕ್ಷ್ಯಮಾಣಃ ಪಾರ್ಥೇನ ತಥಾಸ್ಮಾಭಿರ್ವಿವರ್ಜಿತಃ।
06095022c ಯಥಾ ಭೀಷ್ಮಂ ನ ನೋ ಹನ್ಯಾದ್ದುಃಶಾಸನ ತಥಾ ಕುರು।।
ದುಃಶಾಸನ! ಪಾರ್ಥನ ರಕ್ಷಣೆಯಲ್ಲಿದ್ದ ಅವನು ನಮ್ಮಿಂದ ತಪ್ಪಿಸಿಕೊಂಡು ಭೀಷ್ಮನನ್ನು ಕೊಲ್ಲದಂತೆ ಮಾಡು!”
06095023a ಭ್ರಾತುಸ್ತದ್ವಚನಂ ಶ್ರುತ್ವಾ ಪುತ್ರೋ ದುಃಶಾಸನಸ್ತವ।
06095023c ಭೀಷ್ಮಂ ಪ್ರಮುಖತಃ ಕೃತ್ವಾ ಪ್ರಯಯೌ ಸೇನಯಾ ಸಹ।।
ಅಣ್ಣನ ಆ ಮಾತನ್ನು ಕೇಳಿ ನಿನ್ನ ಮಗ ದುಃಶಾಸನನು ಭೀಷ್ಮನನ್ನು ಮುಂದಾಳುವಾಗಿ ಮಾಡಿಕೊಂಡು ಸೇನೆಯೊಂದಿಗೆ ಹೊರಟನು.
06095024a ಭೀಷ್ಮಂ ತು ರಥವಂಶೇನ ದೃಷ್ಟ್ವಾ ತಮಭಿಸಂವೃತಂ।
06095024c ಅರ್ಜುನೋ ರಥಿನಾಂ ಶ್ರೇಷ್ಠೋ ಧೃಷ್ಟದ್ಯುಮ್ನಮುವಾಚ ಹ।।
ರಥಸೇನೆಗಳಿಂದ ಪರಿವೃತನಾಗಿರುವ ಭೀಷ್ಮನನ್ನು ನೋಡಿ ರಥಿಗಳಲ್ಲಿ ಶ್ರೇಷ್ಠ ಅರ್ಜುನನು ಧೃಷ್ಟದ್ಯುಮ್ನನಿಗೆ ಹೇಳಿದನು:
06095025a ಶಿಖಂಡಿನಂ ನರವ್ಯಾಘ್ರ ಭೀಷ್ಮಸ್ಯ ಪ್ರಮುಖೇಽನಘ।
06095025c ಸ್ಥಾಪಯಸ್ವಾದ್ಯ ಪಾಂಚಾಲ್ಯ ತಸ್ಯ ಗೋಪ್ತಾಹಮಪ್ಯುತ।।
“ನರವ್ಯಾಘ್ರ! ಅನಘ! ಪಾಂಚಾಲ್ಯ! ಇಂದು ಭೀಷ್ಮನ ಎದುರಿಗೆ ಅವನಿಗೆ ರಕ್ಷಣೆಯನ್ನಿತ್ತು ಶಿಖಂಡಿಯನ್ನು ನಿಲ್ಲಿಸು.”
06095026a ತತಃ ಶಾಂತನವೋ ಭೀಷ್ಮೋ ನಿರ್ಯಯೌ ಸೇನಯಾ ಸಹ।
06095026c ವ್ಯೂಹಂ ಚಾವ್ಯೂಹತ ಮಹತ್ಸರ್ವತೋಭದ್ರಮಾಹವೇ।।
ಆಗ ಶಾಂತನವ ಭೀಷ್ಮನು ಸೇನೆಯೊಂದಿಗೆ ಹೊರಟನು. ಅವನು ಆಹವದಲ್ಲಿ ಸರ್ವತೋಭದ್ರ ಮಹಾ ವ್ಯೂಹವನ್ನು ರಚಿಸಿದನು.
06095027a ಕೃಪಶ್ಚ ಕೃತವರ್ಮಾ ಚ ಶೈಬ್ಯಶ್ಚೈವ ಮಹಾರಥಃ।
06095027c ಶಕುನಿಃ ಸೈಂಧವಶ್ಚೈವ ಕಾಂಬೋಜಶ್ಚ ಸುದಕ್ಷಿಣಃ।।
06095028a ಭೀಷ್ಮೇಣ ಸಹಿತಾಃ ಸರ್ವೇ ಪುತ್ರೈಶ್ಚ ತವ ಭಾರತ।
06095028c ಅಗ್ರತಃ ಸರ್ವಸೈನ್ಯಾನಾಂ ವ್ಯೂಹಸ್ಯ ಪ್ರಮುಖೇ ಸ್ಥಿತಾಃ।।
ಭಾರತ! ಕೃಪ, ಕೃತವರ್ಮ, ಮಹಾರಥ ಶೈಬ್ಯ, ಶಕುನಿ, ಸೈಂಧವ, ಕಾಂಬೋಜದ ಸುದಕ್ಷಿಣ, ಮತ್ತು ನಿನ್ನ ಪುತ್ರರೆಲ್ಲರೂ ಭೀಷ್ಮನೊಂದಿಗೆ ವ್ಯೂಹದ ಅಗ್ರಭಾಗದಲ್ಲಿ ಸರ್ವ ಸೇನೆಗಳ ಪ್ರಮುಖರಾಗಿ ನಿಂತರು.
06095029a ದ್ರೋಣೋ ಭೂರಿಶ್ರವಾಃ ಶಲ್ಯೋ ಭಗದತ್ತಶ್ಚ ಮಾರಿಷ।
06095029c ದಕ್ಷಿಣಂ ಪಕ್ಷಮಾಶ್ರಿತ್ಯ ಸ್ಥಿತಾ ವ್ಯೂಹಸ್ಯ ದಂಶಿತಾಃ।।
ಮಾರಿಷ! ದ್ರೋಣ, ಭೂರಿಶ್ರವ, ಶಲ್ಯ, ಭಗದತ್ತ ಇವರು ಕವಚಗಳನ್ನು ಧರಿಸಿ ವ್ಯೂಹದ ಎಡಭಾಗದಲ್ಲಿದ್ದರು.
06095030a ಅಶ್ವತ್ಥಾಮಾ ಸೋಮದತ್ತ ಆವಂತ್ಯೌ ಚ ಮಹಾರಥೌ।
06095030c ಮಹತ್ಯಾ ಸೇನಯಾ ಯುಕ್ತಾ ವಾಮಂ ಪಕ್ಷಮಪಾಲಯನ್।।
ಅಶ್ವತ್ಥಾಮ, ಸೋಮದತ್ತ ಮತ್ತು ಅವಂತಿಯ ಮಹಾರಥರಿಬ್ಬರೂ ಮಹಾಸೇನೆಯಿಂದೊಡಗೂಡಿ ಬಲಭಾಗವನ್ನು ರಕ್ಷಿಸಿದರು.
06095031a ದುರ್ಯೋಧನೋ ಮಹಾರಾಜ ತ್ರಿಗರ್ತೈಃ ಸರ್ವತೋ ವೃತಃ।
06095031c ವ್ಯೂಹಮಧ್ಯೇ ಸ್ಥಿತೋ ರಾಜನ್ಪಾಂಡವಾನ್ಪ್ರತಿ ಭಾರತ।।
ಮಹಾರಾಜ! ರಾಜನ್! ದುರ್ಯೋಧನನು ತ್ರಿಗರ್ತರಿಂದ ಎಲ್ಲಕಡೆಗಳಿಂದಲೂ ಆವೃತನಾಗಿ ಪಾಂಡವರನ್ನು ಎದುರಿಸಿ ವ್ಯೂಹಮಧ್ಯದಲ್ಲಿ ನಿಂತಿದ್ದನು.
06095032a ಅಲಂಬುಸೋ ರಥಶ್ರೇಷ್ಠಃ ಶ್ರುತಾಯುಶ್ಚ ಮಹಾರಥಃ।
06095032c ಪೃಷ್ಠತಃ ಸರ್ವಸೈನ್ಯಾನಾಂ ಸ್ಥಿತೌ ವ್ಯೂಹಸ್ಯ ದಂಶಿತೌ।।
ರಥಶ್ರೇಷ್ಠ ಅಲಂಬುಸ ಮತ್ತು ಮಹಾರಥ ಶ್ರುತಾಯು ಇಬ್ಬರೂ ಕವಚಧಾರಿಗಳಾಗಿ ಸರ್ವಸೇನೆಗಳ ವ್ಯೂಹದ ಹಿಂಭಾಗದಲ್ಲಿ ನಿಂತಿದ್ದರು.
06095033a ಏವಮೇತೇ ತದಾ ವ್ಯೂಹಂ ಕೃತ್ವಾ ಭಾರತ ತಾವಕಾಃ।
06095033c ಸನ್ನದ್ಧಾಃ ಸಮದೃಶ್ಯಂತ ಪ್ರತಪಂತ ಇವಾಗ್ನಯಃ।।
ಭಾರತ! ಹೀಗೆ ವ್ಯೂಹವನ್ನು ಮಾಡಿಕೊಂಡು ನಿನ್ನವರು ಸನ್ನದ್ಧರಾಗಿ ಅಗ್ನಿಯಂತೆ ಉರಿಯುತ್ತಿದ್ದರು.
06095034a ತಥಾ ಯುಧಿಷ್ಠಿರೋ ರಾಜಾ ಭೀಮಸೇನಶ್ಚ ಪಾಂಡವಃ।
06095034c ನಕುಲಃ ಸಹದೇವಶ್ಚ ಮಾದ್ರೀಪುತ್ರಾವುಭಾವಪಿ।।
06095034e ಅಗ್ರತಃ ಸರ್ವಸೈನ್ಯಾನಾಂ ಸ್ಥಿತಾ ವ್ಯೂಹಸ್ಯ ದಂಶಿತಾಃ।।
ಆಗ ರಾಜಾ ಯುಧಿಷ್ಠಿರ, ಪಾಂಡವ ಭೀಮಸೇನ, ಮಾದ್ರೀಪುತ್ರ ನಕುಲ-ಸಹದೇವರಿಬ್ಬರೂ ಕವಚಧಾರಿಗಳಾಗಿ ಸರ್ವಸೇನೆಗಳ ವ್ಯೂಹದ ಅಗ್ರಭಾಗದಲ್ಲಿ ನಿಂತಿದ್ದರು.
06095035a ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚ ಮಹಾರಥಃ।
06095035c ಸ್ಥಿತಾಃ ಸೈನ್ಯೇನ ಮಹತಾ ಪರಾನೀಕವಿನಾಶನಾಃ।।
ಶತ್ರುಸೇನವಿನಾಶಿಗಳಾದ ಧೃಷ್ಟದ್ಯುಮ್ನ, ವಿರಾಟ, ಮಹಾರಥಿ ಸಾತ್ಯಕಿ ಇವರು ಮಹಾ ಸೇನೆಗಳೊಂದಿಗೆ ನಿಂತಿದ್ದರು.
06095036a ಶಿಖಂಡೀ ವಿಜಯಶ್ಚೈವ ರಾಕ್ಷಸಶ್ಚ ಘಟೋತ್ಕಚಃ।
06095036c ಚೇಕಿತಾನೋ ಮಹಾಬಾಹುಃ ಕುಂತಿಭೋಜಶ್ಚ ವೀರ್ಯವಾನ್।
06095036e ಸ್ಥಿತಾ ರಣೇ ಮಹಾರಾಜ ಮಹತ್ಯಾ ಸೇನಯಾ ವೃತಾಃ।।
ಮಹಾರಾಜ! ಶಿಖಂಡೀ, ವಿಜಯ, ರಾಕ್ಷಸ ಘಟೋತ್ಕಚ, ಮಹಾಬಾಹು ಚೇಕಿತಾನ, ವೀರ್ಯವಾನ್ ಕುಂತಿಭೋಜ ಇವರು ಮಹಾ ಸೇನೆಗಳಿಂದ ಆವೃತರಾಗಿ ರಣದಲ್ಲಿ ನಿಂತಿದ್ದರು.
06095037a ಅಭಿಮನ್ಯುರ್ಮಹೇಷ್ವಾಸೋ ದ್ರುಪದಶ್ಚ ಮಹಾರಥಃ।
06095037c ಕೇಕಯಾ ಭ್ರಾತರಃ ಪಂಚ ಸ್ಥಿತಾ ಯುದ್ಧಾಯ ದಂಶಿತಾಃ।।
ಮಹೇಷ್ವಾಸ ಅಭಿಮನ್ಯು, ಮಹಾರಥ ದ್ರುಪದ, ಐವರು ಕೇಕಯ ಸಹೋದರರು ಕವಚಧಾರಿಗಳಾಗಿ ಯುದ್ಧಕ್ಕೆ ನಿಂತಿದ್ದರು.
06095038a ಏವಂ ತೇಽಪಿ ಮಹಾವ್ಯೂಹಂ ಪ್ರತಿವ್ಯೂಹ್ಯ ಸುದುರ್ಜಯಂ।
06095038c ಪಾಂಡವಾಃ ಸಮರೇ ಶೂರಾಃ ಸ್ಥಿತಾ ಯುದ್ಧಾಯ ಮಾರಿಷ।।
ಮಾರಿಷ! ಹೀಗೆ ಪಾಂಡವ ಶೂರರೂ ಕೂಡ ಸುದುರ್ಜಯವೆಂಬ ಪ್ರತಿವ್ಯೂಹವನ್ನು ರಚಿಸಿಕೊಂಡು ಸಮರದಲ್ಲಿ ಯುದ್ಧಕ್ಕಾಗಿ ನಿಂತರು.
06095039a ತಾವಕಾಸ್ತು ರಣೇ ಯತ್ತಾಃ ಸಹಸೇನಾ ನರಾಧಿಪಾಃ।
06095039c ಅಭ್ಯುದ್ಯಯೂ ರಣೇ ಪಾರ್ಥಾನ್ಭೀಷ್ಮಂ ಕೃತ್ವಾಗ್ರತೋ ನೃಪ।।
ನೃಪ! ರಣದಲ್ಲಿ ನಿನ್ನವರ ನರಾಧಿಪರು ಭೀಷ್ಮನನ್ನು ಅಗ್ರನನ್ನಾಗಿ ಮಾಡಿಕೊಂಡು ಪಾರ್ಥರನ್ನು ಎದುರಿಸಿ ಯುದ್ಧಮಾಡಿದರು.
06095040a ತಥೈವ ಪಾಂಡವಾ ರಾಜನ್ಭೀಮಸೇನಪುರೋಗಮಾಃ।
06095040c ಭೀಷ್ಮಂ ಯುದ್ಧಪರಿಪ್ರೇಪ್ಸುಂ ಸಂಗ್ರಾಮೇ ವಿಜಿಗೀಷವಃ।।
ರಾಜನ್! ಹಾಗೆಯೇ ಪಾಂಡವರು ಭೀಮಸೇನನನ್ನು ಮುಂದಿರಿಸಿಕೊಂಡು ಸಂಗ್ರಾಮದಲ್ಲಿ ಜಯವನ್ನು ಬಯಸಿ ಭೀಷ್ಮನನ್ನು ಎದುರಿಸಿ ಯುದ್ಧಮಾಡಿದರು.
06095041a ಕ್ಷ್ವೇಡಾಃ ಕಿಲಿಕಿಲಾಶಬ್ದಾನ್ಕ್ರಕಚಾನ್ಗೋವಿಷಾಣಿಕಾಃ।
06095041c ಭೇರೀಮೃದಂಗಪಣವಾನ್ನಾದಯಂತಶ್ಚ ಪುಷ್ಕರಾನ್।
06095041e ಪಾಂಡವಾ ಅಭ್ಯಧಾವಂತ ನದಂತೋ ಭೈರವಾನ್ರವಾನ್।।
ಗರ್ಜನೆ ಮತ್ತು ಕಿಲಕಿಲ ಶಬ್ಧಗಳಿಂದ, ಕ್ರಕಚ-ಗೋವಿಷಾಣಿಕಗಳನ್ನು ಊದುತ್ತಾ, ಭೇರಿ-ಮೃದಂಗ-ಪಣವಗಳನ್ನು ಬಾರಿಸುತ್ತಾ, ಶಂಖಗಳನ್ನು ಊದುತ್ತಾ, ಭೈರವ ಕೂಗುಗಳನ್ನು ಕೂಗುತ್ತಾ ಪಾಂಡವರು ಧಾವಿಸಿ ಬಂದರು.
06095042a ಭೇರೀಮೃದಂಗಶಂಖಾನಾಂ ದುಂದುಭೀನಾಂ ಚ ನಿಸ್ವನೈಃ।
06095042c ಉತ್ಕ್ರುಷ್ಟಸಿಂಹನಾದೈಶ್ಚ ವಲ್ಗಿತೈಶ್ಚ ಪೃಥಗ್ವಿಧೈಃ।।
06095043a ವಯಂ ಪ್ರತಿನದಂತಸ್ತಾನಭ್ಯಗಚ್ಛಾಮ ಸತ್ವರಾಃ।
06095043c ಸಹಸೈವಾಭಿಸಂಕ್ರುದ್ಧಾಸ್ತದಾಸೀತ್ತುಮುಲಂ ಮಹತ್।।
ಭೇರೀ-ಮೃದಂಗ-ಶಂಖಗಳ ಮತ್ತು ದುಂದುಭಿಗಳ ನಿಸ್ವನಗಳಿಂದ, ಜೋರಾದ ಸಿಂಹನಾದಗಳಿಂದ, ವಿವಿಧ ಕೂಗುಗಳಿಂದ ನಾವುಕೂಡ ಅವರಿಗೆ ಪ್ರತಿಸ್ಪಂದಿಸಿ ಕೂಗುತ್ತಾ ಅವರ ಮೇಲೆ ಒಮ್ಮಿಂದೊಮ್ಮೆಲೇ ಕ್ರುದ್ಧರಾಗಿ ಎರಗಿದೆವು. ಆಗ ಮಹಾ ತುಮುಲವುಂಟಾಯಿತು.
06095044a ತತೋಽನ್ಯೋನ್ಯಂ ಪ್ರಧಾವಂತಃ ಸಂಪ್ರಹಾರಂ ಪ್ರಚಕ್ರಿರೇ।
06095044c ತತಃ ಶಬ್ದೇನ ಮಹತಾ ಪ್ರಚಕಂಪೇ ವಸುಂಧರಾ।।
ಆಗ ಓಡಿಹೋಗಿ ಅನ್ಯೋನ್ಯರನ್ನು ಕೊಲ್ಲುವುದನ್ನು ಮಾಡತೊಡಗಿದರು. ಆಗ ಮಹಾ ಶಬ್ಧದಿಂದ ವಸುಂಧರೆಯು ನಡುಗಿದಳು.
06095045a ಪಕ್ಷಿಣಶ್ಚ ಮಹಾಘೋರಂ ವ್ಯಾಹರಂತೋ ವಿಬಭ್ರಮುಃ।
06095045c ಸಪ್ರಭಶ್ಚೋದಿತಃ ಸೂರ್ಯೋ ನಿಷ್ಪ್ರಭಃ ಸಮಪದ್ಯತ।।
ಮಹಾಘೋರ ಪಕ್ಷಿಗಳು ಆಕಾಶದಲ್ಲಿ ಹಾರಡತೊಡಗಿದವು. ಉತ್ತಮ ಪ್ರಭೆಯಿಂದ ಉದಿಸಿದ ಸೂರ್ಯನು ತನ್ನ ಪ್ರಭೆಯನ್ನು ಕಳೆದುಕೊಳ್ಳತೊಡಗಿದನು.
06095046a ವವುಶ್ಚ ತುಮುಲಾ ವಾತಾಃ ಶಂಸಂತಃ ಸುಮಹದ್ಭಯಂ।
06095046c ಘೋರಾಶ್ಚ ಘೋರನಿರ್ಹ್ರಾದಾಃ ಶಿವಾಸ್ತತ್ರ ವವಾಶಿರೇ।
06095046e ವೇದಯಂತ್ಯೋ ಮಹಾರಾಜ ಮಹದ್ವೈಶಸಮಾಗತಂ।।
ಮಹಾರಾಜ! ಮಹಾ ಭಯವನ್ನು ಸೂಚಿಸುತ್ತಾ ಭಿರುಗಾಳಿಯು ಬೀಸತೊಡಗಿತು. ಬರಲಿರುವ ಮಹಾ ಕಷ್ಟವನ್ನು ತಿಳಿಸುತ್ತಾ ಅಲ್ಲಿ ತೋಳಗಳು ಘೋರವಾಗಿ ಅಮಂಗಳವಾಗಿ ಕೂಗಿಕೊಂಡವು.
06095047a ದಿಶಃ ಪ್ರಜ್ವಲಿತಾ ರಾಜನ್ಪಾಂಸುವರ್ಷಂ ಪಪಾತ ಚ।
06095047c ರುಧಿರೇಣ ಸಮುನ್ಮಿಶ್ರಮಸ್ಥಿವರ್ಷಂ ತಥೈವ ಚ।।
ರಾಜನ್! ದಿಕ್ಕುಗಳನ್ನು ಪ್ರಜ್ವಲಿಸುತ್ತಾ ರಕ್ತ ಮತ್ತು ಮೂಳೆಗಳ ಸಮ್ಮಿಶ್ರ ಮಾಂಸದ ಮಳೆಯು ಬಿದ್ದಿತು.
06095048a ರುದತಾಂ ವಾಹನಾನಾಂ ಚ ನೇತ್ರೇಭ್ಯಃ ಪ್ರಾಪತಜ್ಜಲಂ।
06095048c ಸುಸ್ರುವುಶ್ಚ ಶಕೃನ್ಮೂತ್ರಂ ಪ್ರಧ್ಯಾಯಂತೋ ವಿಶಾಂ ಪತೇ।।
ವಿಶಾಂಪತೇ! ಅಳುತ್ತಿದ್ದ ವಾಹನ-ಪ್ರಾಣಿಗಳ ಕಣ್ಣುಗಳಲ್ಲಿ ಕಣ್ಣೀರು ಹರಿಯಿತು. ಬೆದರಿ ಮಲ-ಮೂತ್ರಗಳನ್ನು ವಿಸರ್ಜಿಸಿದವು.
06095049a ಅಂತರ್ಹಿತಾ ಮಹಾನಾದಾಃ ಶ್ರೂಯಂತೇ ಭರತರ್ಷಭ।
06095049c ರಕ್ಷಸಾಂ ಪುರುಷಾದಾನಾಂ ನದತಾಂ ಭೈರವಾನ್ರವಾನ್।।
ಭರತರ್ಷಭ! ಅಡಗಿದ್ದ ನರಭಕ್ಷ ರಾಕ್ಷಸರು ಕೂಗುತ್ತಿದ್ದ ಭೈರವ ರವ ಮಹಾನಾದವು ಕೇಳಿಬಂದಿತು.
06095050a ಸಂಪತಂತಃ ಸ್ಮ ದೃಶ್ಯಂತೇ ಗೋಮಾಯುಬಕವಾಯಸಾಃ।
06095050c ಶ್ವಾನಶ್ಚ ವಿವಿಧೈರ್ನಾದೈರ್ಭಷಂತಸ್ತತ್ರ ತಸ್ಥಿರೇ।।
ನರಿಗಳು, ಹದ್ದುಗಳು, ಕಾಗೆಗಳು ಮತ್ತು ನಾಯಿಗಳು ಅಲ್ಲಿ ಬಹುವಿಧದಲ್ಲಿ ಕೂಗುತ್ತಾ ಬೀಳುತ್ತಿದ್ದವು.
06095051a ಜ್ವಲಿತಾಶ್ಚ ಮಹೋಲ್ಕಾ ವೈ ಸಮಾಹತ್ಯ ದಿವಾಕರಂ।
06095051c ನಿಪೇತುಃ ಸಹಸಾ ಭೂಮೌ ವೇದಯಾನಾ ಮಹದ್ಭಯಂ।।
ಉರಿಯುತ್ತಿರುವ ಮಹಾ ಉಲ್ಕೆಗಳು ದಿವಾಕರನ ಮಂಡಲಕ್ಕೆ ತಾಗಿ ತಕ್ಷಣವೇ ಭೂಮಿಯ ಮೇಲೆ ಬಿದ್ದು ಮಹಾ ಭಯವನ್ನು ಸೂಚಿಸಿದವು.
06095052a ಮಹಾಂತ್ಯನೀಕಾನಿ ಮಹಾಸಮುಚ್ಛ್ರಯೇ ಸಮಾಗಮೇ ಪಾಂಡವಧಾರ್ತರಾಷ್ಟ್ರಯೋಃ।
06095052c ಪ್ರಕಾಶಿರೇ ಶಂಖಮೃದಂಗನಿಸ್ವನೈಃ ಪ್ರಕಂಪಿತಾನೀವ ವನಾನಿ ವಾಯುನಾ।।
ಆಗ ಅಲ್ಲಿ ಸೇರಿದ್ದ ಪಾಂಡವ-ಧಾರ್ತರಾಷ್ಟ್ರರ ಮಹಾ ಸೇನೆಗಳು ಶಂಖ-ಮೃದಂಗ ನಿಸ್ವನಗಳಿಂದ ಭಿರುಗಾಳಿಯಿಂದ ವನಗಳು ಅಲ್ಲಾಡುವಂತೆ ಕಂಪಿಸಿದವು.
06095053a ನರೇಂದ್ರನಾಗಾಶ್ವಸಮಾಕುಲಾನಾಂ ಅಭ್ಯಾಯತೀನಾಮಶಿವೇ ಮುಹೂರ್ತೇ।
06095053c ಬಭೂವ ಘೋಷಸ್ತುಮುಲಶ್ಚಮೂನಾಂ ವಾತೋದ್ಧುತಾನಾಮಿವ ಸಾಗರಾಣಾಂ।।
ನರೇಂದ್ರರಿಂದಲೂ, ಗಜ-ಅಶ್ವ ಸಮಾಕುಲಗಳಿಂದ ಕೂಡಿದ, ಅಶುಭ ಮುಹೂರ್ತದಲ್ಲಿ ಹೊರಟಿದ್ದ ಸೈನ್ಯಗಳ ಭಯಂಕರ ಶಬ್ಧವು ಭಿರುಗಾಳಿಯಿಂದ ಅಲ್ಲೋಲ-ಕಲ್ಲೋಲವಾದ ಸಮುದ್ರಗಳ ಭೋರ್ಗರೆಗೆ ಸಮಾನವಾಗಿತ್ತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಪರಸ್ಪರವ್ಯೂಹರಚನಾಯಾಮುತ್ಪಾತದರ್ಶನೇ ಪಂಚನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಪರಸ್ಪರವ್ಯೂಹರಚನೆ ಮತ್ತು ಉತ್ಪಾತದರ್ಶನ ಎನ್ನುವ ತೊಂಭತ್ತೈದನೇ ಅಧ್ಯಾಯವು.