ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 94
ಸಾರ
ಅರ್ಜುನನ ಪರಾಕ್ರಮಗಳನ್ನು ನೆನಪಿಸಿಕೊಡುತ್ತಾ “ಯುದ್ಧದಲ್ಲಿ ಅವರಿಂದಲಾದರೂ ಹತನಾಗಿ ಯಮಸಾದನಕ್ಕೆ ಹೋಗುತ್ತೇನೆ. ಅಥವಾ ಅವರನ್ನು ಸಂಗ್ರಾಮದಲ್ಲಿ ಸಂಹರಿಸಿ ನಿನಗೆ ಪ್ರೀತಿಯಾದುದನ್ನು ಕೊಡುತ್ತೇನೆ.” ಎಂದು ಭೀಷ್ಮನು ದುರ್ಯೋಧನನನ್ನು ಕಳುಹಿಸಿದುದು (1-20).
06094001 ಸಂಜಯ ಉವಾಚ।
06094001a ವಾಕ್ಶಲ್ಯೈಸ್ತವ ಪುತ್ರೇಣ ಸೋಽತಿವಿದ್ಧಃ ಪಿತಾಮಹಃ।
06094001c ದುಃಖೇನ ಮಹತಾವಿಷ್ಟೋ ನೋವಾಚಾಪ್ರಿಯಮಣ್ವಪಿ।।
ಸಂಜಯನು ಹೇಳಿದನು: “ನಿನ್ನ ಮಗನ ಮಾತೆಂಬ ಮುಳ್ಳುಗಳಿಂದ ಬಹಳ ಆಳದವರೆಗೂ ಚುಚ್ಚಲ್ಪಟ್ಟ ಪಿತಾಮಹನು ಮಹಾ ದುಃಖದಿಂದ ಆವಿಷ್ಟನಾದರೂ ಅಪ್ರಿಯವಾದುದೇನನ್ನೂ ಹೇಳಲಿಲ್ಲ.
06094002a ಸ ಧ್ಯಾತ್ವಾ ಸುಚಿರಂ ಕಾಲಂ ದುಃಖರೋಷಸಮನ್ವಿತಃ।
06094002c ಶ್ವಸಮಾನೋ ಯಥಾ ನಾಗಃ ಪ್ರಣುನ್ನೋ ವೈ ಶಲಾಕಯಾ।।
06094003a ಉದ್ವೃತ್ಯ ಚಕ್ಷುಷೀ ಕೋಪಾನ್ನಿರ್ದಹನ್ನಿವ ಭಾರತ।
06094003c ಸದೇವಾಸುರಗಂಧರ್ವಂ ಲೋಕಂ ಲೋಕವಿದಾಂ ವರಃ।
06094003e ಅಬ್ರವೀತ್ತವ ಪುತ್ರಂ ತು ಸಾಮಪೂರ್ವಮಿದಂ ವಚಃ।।
ದುಃಖರೋಷಸಮನ್ವಿತನಾದ ಲೋಕವಿದರಲ್ಲಿ ಶ್ರೇಷ್ಠನು ಅಂಕುಶದಿಂದ ನೋಯಿಸಲ್ಪಟ್ಟ ಆನೆಯಂತೆ ನಿಟ್ಟುಸಿರು ಬಿಡುತ್ತಾ, ಕೋಪದಿಂದ ದೇವಾಸುರಗಂಧರ್ವರೊಡನೆ ಲೋಕಗಳನ್ನು ಸುಟ್ಟುಬಿಡುವನೋ ಎನ್ನುವಂತೆ ಕಣ್ಣುಗಳನ್ನು ಮೇಲೆತ್ತಿ ಬಹಳ ಹೊತ್ತು ಆಲೋಚಿಸಿ ನಿನ್ನ ಮಗನಿಗೆ ಸಾಮದಿಂದ ಕೂಡಿದ ಈ ಮಾತನ್ನಾಡಿದನು:
06094004a ಕಿಂ ನು ದುರ್ಯೋಧನೈವಂ ಮಾಂ ವಾಕ್ಶಲ್ಯೈರುಪವಿಧ್ಯಸಿ।
06094004c ಘಟಮಾನಂ ಯಥಾಶಕ್ತಿ ಕುರ್ವಾಣಂ ಚ ತವ ಪ್ರಿಯಂ।
06094004e ಜುಹ್ವಾನಂ ಸಮರೇ ಪ್ರಾಣಾಂಸ್ತವೈವ ಹಿತಕಾಮ್ಯಯಾ।।
“ದುರ್ಯೋಧನ! ಏಕೆ ಹೀಗೆ ನನ್ನನ್ನು ಮಾತೆಂಬ ಶಲ್ಯಗಳಿಂದ ನೋಯಿಸುತ್ತಿರುವೆ? ನಿನಗೆ ಪ್ರಿಯವಾದುದನ್ನು ಮಾಡಲು ಯಥಶಕ್ತಿಯಾಗಿ ಪ್ರಯತ್ನಿಸುತ್ತಿದ್ದೇನೆ. ನಿನ್ನ ಹಿತವನ್ನೇ ಬಯಸಿ ಸಮರಾಗ್ನಿಯಲ್ಲಿ ಪ್ರಾಣಗಳನ್ನು ಅರ್ಪಿಸುತ್ತಿದ್ದೇನೆ.
06094005a ಯದಾ ತು ಪಾಂಡವಃ ಶೂರಃ ಖಾಂಡವೇಽಗ್ನಿಮತರ್ಪಯತ್।
06094005c ಪರಾಜಿತ್ಯ ರಣೇ ಶಕ್ರಂ ಪರ್ಯಾಪ್ತಂ ತನ್ನಿದರ್ಶನಂ।।
ಶೂರ ಪಾಂಡವನು ರಣದಲ್ಲಿ ಶಕ್ರನನ್ನು ಪರಾಜಯಗೊಳಿಸಿ ಖಾಂಡವವನ್ನಿತ್ತು ಅಗ್ನಿಯನ್ನು ಎಂದು ತೃಪ್ತಿಪಡಿಸಿದನೋ ಅದೇ ಪರ್ಯಾಪ್ತವಾದ ನಿದರ್ಶನವಾಗಿತ್ತು.
06094006a ಯದಾ ಚ ತ್ವಾಂ ಮಹಾಬಾಹೋ ಗಂಧರ್ವೈರ್ಹೃತಮೋಜಸಾ।
06094006c ಅಮೋಚಯತ್ಪಾಂಡುಸುತಃ ಪರ್ಯಾಪ್ತಂ ತನ್ನಿದರ್ಶನಂ।।
ಮಹಾಬಾಹೋ! ಎಂದು ಅಪಹರಿಸಲ್ಪಟ್ಟ ನಿನ್ನನ್ನು ಗಂಧರ್ವರಿಂದ ಪಾಂಡವನು ಬಿಡುಗಡೆ ಮಾಡಿದನೋ ಅದೇ ಪರ್ಯಾಪ್ತ ನಿದರ್ಶನವು.
06094007a ದ್ರವಮಾಣೇಷು ಶೂರೇಷು ಸೋದರೇಷು ತಥಾಭಿಭೋ।
06094007c ಸೂತಪುತ್ರೇ ಚ ರಾಧೇಯೇ ಪರ್ಯಾಪ್ತಂ ತನ್ನಿದರ್ಶನಂ।।
ವಿಭೋ! ನಿನ್ನ ಶೂರ ಸೋದರರು ಮತ್ತು ಸೂತಪುತ್ರ ರಾಧೇಯನು ಓಡಿಹೋದದ್ದೇ ಪರ್ಯಾಪ್ತ ನಿದರ್ಶನವು.
06094008a ಯಚ್ಚ ನಃ ಸಹಿತಾನ್ಸರ್ವಾನ್ವಿರಾಟನಗರೇ ತದಾ।
06094008c ಏಕ ಏವ ಸಮುದ್ಯಾತಃ ಪರ್ಯಾಪ್ತಂ ತನ್ನಿದರ್ಶನಂ।।
ನಾವೆಲ್ಲರೂ ವಿರಾಟನಗರದಲ್ಲಿ ಒಟ್ಟಿಗೇ ಇದ್ದಾಗ ಅವನು ಒಬ್ಬನೇ ನಮ್ಮೊಡನೆ ಯುದ್ಧಮಾಡಿ ಜಯಿಸಿದುದೇ ಪರ್ಯಾಪ್ತ ನಿದರ್ಶನವು.
06094009a ದ್ರೋಣಂ ಚ ಯುಧಿ ಸಂರಬ್ಧಂ ಮಾಂ ಚ ನಿರ್ಜಿತ್ಯ ಸಂಯುಗೇ।
06094009c ಕರ್ಣಂ ಚ ತ್ವಾಂ ಚ ದ್ರೌಣಿಂ ಚ ಕೃಪಂ ಚ ಸುಮಹಾರಥಂ।
06094009e ವಾಸಾಂಸಿ ಸ ಸಮಾದತ್ತ ಪರ್ಯಾಪ್ತಂ ತನ್ನಿದರ್ಶನಂ।।
ಯುದ್ಧದಲ್ಲಿ ದ್ರೋಣನನ್ನೂ ದಿಗ್ಭ್ರಮೆಗೊಳಿಸಿ, ನನ್ನನ್ನೂ, ಕರ್ಣನನ್ನೂ, ದ್ರೌಣಿಯನ್ನೂ, ಸುಮಹಾರಥ ಕೃಪನನ್ನೂ ಸಂಯುಗದಲ್ಲಿ ಸೋಲಿಸಿ, ವಸ್ತ್ರಗಳನ್ನು ತೆಗೆದುಕೊಂಡು ಹೋದ ಅದೇ ಪರ್ಯಾಪ್ತ ನಿದರ್ಶನವು.
06094010a ನಿವಾತಕವಚಾನ್ಯುದ್ಧೇ ವಾಸವೇನಾಪಿ ದುರ್ಜಯಾನ್।
06094010c ಜಿತವಾನ್ಸಮರೇ ಪಾರ್ಥಃ ಪರ್ಯಾಪ್ತಂ ತನ್ನಿದರ್ಶನಂ।।
ಯುದ್ಧದಲ್ಲಿ ವಾಸವನಿಗೂ ಜಯಿಸಲಸಾದ್ಯರಾದ ನಿವಾತಕವಚರನ್ನು ಸಮರದಲ್ಲಿ ಗೆದ್ದ ಪಾರ್ಥನೇ ಪರ್ಯಾಪ್ತ ನಿದರ್ಶನವು.
06094011a ಕೋ ಹಿ ಶಕ್ತೋ ರಣೇ ಜೇತುಂ ಪಾಂಡವಂ ರಭಸಂ ರಣೇ।
06094011c ತ್ವಂ ತು ಮೋಹಾನ್ನ ಜಾನೀಷೇ ವಾಚ್ಯಾವಾಚ್ಯಂ ಸುಯೋಧನ।।
ರಣದಲ್ಲಿ ರಭಸನಾಗಿರುವ ಪಾಂಡವನನ್ನು ರಣದಲ್ಲಿ ಗೆಲ್ಲಲು ಯಾರುತಾನೇ ಶಕ್ತರು? ಮೋಹದಿಂದ ನೀನು ಏನನ್ನು ಹೇಳಬೇಕು ಏನನ್ನು ಹೇಳಬಾರದು ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ.
06094012a ಮುಮೂರ್ಷುರ್ಹಿ ನರಃ ಸರ್ವಾನ್ವೃಕ್ಷಾನ್ಪಶ್ಯತಿ ಕಾಂಚನಾನ್।
06094012c ತಥಾ ತ್ವಮಪಿ ಗಾಂಧಾರೇ ವಿಪರೀತಾನಿ ಪಶ್ಯಸಿ।।
ಗಾಂಧಾರೇ! ಮರಣವು ಸನ್ನಿಹಿತವಾದಾಗ ಮನುಷ್ಯನು ಎಲ್ಲ ವೃಕ್ಷಗಳನ್ನೂ ಕಾಂಚನದವುಗಳೆಂದೇ ಕಾಣುತ್ತಾನೆ. ಹಾಗೆ ನೀನೂ ಕೂಡ ವಿಪರೀತಗಳನ್ನು ಕಾಣುತ್ತಿದ್ದೀಯೆ.
06094013a ಸ್ವಯಂ ವೈರಂ ಮಹತ್ಕೃತ್ವಾ ಪಾಂಡವೈಃ ಸಹಸೃಂಜಯೈಃ।
06094013c ಯುಧ್ಯಸ್ವ ತಾನದ್ಯ ರಣೇ ಪಶ್ಯಾಮಃ ಪುರುಷೋ ಭವ।।
ಸ್ವಯಂ ನೀನೇ ಸೃಂಜಯರು ಮತ್ತು ಪಾಂಡವರೊಂದಿಗೆ ಮಹಾ ವೈರವನ್ನು ಕಟ್ಟಿಕೊಂಡಿರುವೆ. ಇಂದು ನೀನೇ ರಣದಲ್ಲಿ ಯುದ್ಧಮಾಡು. ಪುರುಷನಾಗು. ನೋಡುತ್ತೇವೆ.
06094014a ಅಹಂ ತು ಸೋಮಕಾನ್ಸರ್ವಾನ್ಸಪಾಂಚಾಲಾನ್ಸಮಾಗತಾನ್।
06094014c ನಿಹನಿಷ್ಯೇ ನರವ್ಯಾಘ್ರ ವರ್ಜಯಿತ್ವಾ ಶಿಖಂಡಿನಂ।।
ನರವ್ಯಾಘ್ರ! ನಾನಾದರೋ ಶಿಖಂಡಿಯನ್ನು ಬಿಟ್ಟು ಸೇರಿರುವ ಸರ್ವ ಸೋಮಕರನ್ನೂ ಪಾಂಚಾಲರನ್ನೂ ಸಂಹರಿಸುತ್ತೇನೆ.
06094015a ತೈರ್ವಾಹಂ ನಿಹತಃ ಸಂಖ್ಯೇ ಗಮಿಷ್ಯೇ ಯಮಸಾದನಂ।
06094015c ತಾನ್ವಾ ನಿಹತ್ಯ ಸಂಗ್ರಾಮೇ ಪ್ರೀತಿಂ ದಾಸ್ಯಾಮಿ ವೈ ತವ।।
ಯುದ್ಧದಲ್ಲಿ ಅವರಿಂದಲಾದರೂ ಹತನಾಗಿ ಯಮಸಾದನಕ್ಕೆ ಹೋಗುತ್ತೇನೆ. ಅಥವಾ ಅವರನ್ನು ಸಂಗ್ರಾಮದಲ್ಲಿ ಸಂಹರಿಸಿ ನಿನಗೆ ಪ್ರೀತಿಯಾದುದನ್ನು ಕೊಡುತ್ತೇನೆ.
06094016a ಪೂರ್ವಂ ಹಿ ಸ್ತ್ರೀ ಸಮುತ್ಪನ್ನಾ ಶಿಖಂಡೀ ರಾಜವೇಶ್ಮನಿ।
06094016c ವರದಾನಾತ್ಪುಮಾಂ ಜಾತಃ ಸೈಷಾ ವೈ ಸ್ತ್ರೀ ಶಿಖಂಡಿನೀ।।
ಶಿಖಂಡಿಯು ಹಿಂದೆ ರಾಜಮನೆಯಲ್ಲಿ ಸ್ತ್ರೀಯಾಗಿಯೇ ಹುಟ್ಟಿದ್ದನು. ಸ್ತ್ರೀಯಾಗಿದ್ದ ಶಿಖಂಡಿನಿಯು ವರದಾನದಿಂದ ಪುರುಷನಾದನು.
06094017a ತಾಮಹಂ ನ ಹನಿಷ್ಯಾಮಿ ಪ್ರಾಣತ್ಯಾಗೇಽಪಿ ಭಾರತ।
06094017c ಯಾಸೌ ಪ್ರಾಮ್ನಿರ್ಮಿತಾ ಧಾತ್ರಾ ಸೈಷಾ ವೈ ಸ್ತ್ರೀ ಶಿಖಂಡಿನೀ।।
ಭಾರತ! ಪ್ರಾಣತ್ಯಾಗ ಮಾಡಬೇಕಾಗಿ ಬಂದರೂ ನಾನು ಅವನನ್ನು ಸಂಹರಿಸುವುದಿಲ್ಲ. ಧಾತ್ರನಿಂದ ನಿರ್ಮಿತಳಾಗಿದ್ದ ಶಿಖಂಡಿನಿಯು ಈಗಲೂ ಸ್ತ್ರೀಯೆಂದೇ ಮನ್ನಿಸುತ್ತೇನೆ.
06094018a ಸುಖಂ ಸ್ವಪಿಹಿ ಗಾಂಧಾರೇ ಶ್ವೋಽಸ್ಮಿ ಕರ್ತಾ ಮಹಾರಣಂ।
06094018c ಯಜ್ಜನಾಃ ಕಥಯಿಷ್ಯಂತಿ ಯಾವತ್ಸ್ಥಾಸ್ಯತಿ ಮೇದಿನೀ।।
ಗಾಂಧಾರೇ! ಸುಖವಾಗಿ ನಿದ್ದೆಮಾಡು. ಎಲ್ಲಿಯವರೆಗೆ ಮೇದಿನಿಯಿರುವಳೋ ಅಲ್ಲಿಯವರೆಗೆ ಜನರು ಮಾತನಾಡಿಕೊಳ್ಳುವಂಥಹ ಮಹಾರಣವನ್ನು ನಾನು ನಾಳೆ ನಿರ್ಮಿಸುತ್ತೇನೆ.”
06094019a ಏವಮುಕ್ತಸ್ತವ ಸುತೋ ನಿರ್ಜಗಾಮ ಜನೇಶ್ವರ।
06094019c ಅಭಿವಾದ್ಯ ಗುರುಂ ಮೂರ್ಧ್ನಾ ಪ್ರಯಯೌ ಸ್ವಂ ನಿವೇಶನಂ।।
ಜನೇಶ್ವರ! ಹೀಗೆ ಹೇಳಲು ನಿನ್ನ ಮಗನು ಗುರುವಿಗೆ ತಲೆಬಾಗಿ ನಮಸ್ಕರಿಸಿ ತನ್ನ ಬಿಡಾರಕ್ಕೆ ತೆರಳಿದನು.
06094020a ಆಗಮ್ಯ ತು ತತೋ ರಾಜಾ ವಿಸೃಜ್ಯ ಚ ಮಹಾಜನಂ।
06094020c ಪ್ರವಿವೇಶ ತತಸ್ತೂರ್ಣಂ ಕ್ಷಯಂ ಶತ್ರುಕ್ಷಯಂಕರಃ।
06094020e ಪ್ರವಿಷ್ಟಃ ಸ ನಿಶಾಂ ತಾಂ ಚ ಗಮಯಾಮಾಸ ಪಾರ್ಥಿವಃ।।
ಆಗಮಿಸಿ ರಾಜನು ಮಹಾಜನರನ್ನು ಕಳುಹಿಸಿದನು. ಆ ಶತ್ರುಕ್ಷಯಂಕರ ಪಾರ್ಥಿವನು ತಕ್ಷಣವೇ ಡೇರೆಯನ್ನು ಪ್ರವೇಶಿಸಿ ರಾತ್ರಿಯನ್ನು ಕಳೆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮದುರ್ಯೋಧನಸಂವಾದೇ ಚತುನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮದುರ್ಯೋಧನಸಂವಾದ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.