092 ಅಷ್ಟಮದಿವಸಯುದ್ಧಾವಹಾರಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 92

ಸಾರ

ಇರಾವತನ ಮರಣವನ್ನು ಕೇಳಿ ಅರ್ಜುನನು ಕೃಷ್ಣನಿಗೆ ತನ್ನ ದುಃಖವನ್ನು ತೋಡಿಕೊಂಡು, ಕೌರವ ಸೇನೆಯನ್ನು ಆಕ್ರಮಣಿಸಿದುದು (1-12). ಭೀಮಸೇನನಿಂದ ಧೃತರಾಷ್ಟ್ರನ ಒಂಭತ್ತು ಮಕ್ಕಳ - ವ್ಯೂಢೋರಸ್ಕ, ಕುಂಡಲಿನಿ, ಅನಾಧೃಷ್ಟಿ, ಕುಂಡಭೇದ, ವೈರಾಟ, ದೀರ್ಘಲೋಚನ, ದೀರ್ಘಬಾಹು, ಸುಬಾಹು, ಮತ್ತು ಕನಕಧ್ವಜರ ವಧೆ (13-34). ಯುದ್ಧ-ರಣಭೂಮಿಯ ವರ್ಣನೆ; ಎಂಟನೇ ದಿನದ ಯುದ್ಧ ಸಮಾಪ್ತಿ (35-79).

06092001 ಸಂಜಯ ಉವಾಚ।
06092001a ಪುತ್ರಂ ತು ನಿಹತಂ ಶ್ರುತ್ವಾ ಇರಾವಂತಂ ಧನಂಜಯಃ।
06092001c ದುಃಖೇನ ಮಹತಾವಿಷ್ಟೋ ನಿಃಶ್ವಸನ್ಪನ್ನಗೋ ಯಥಾ।।
06092002a ಅಬ್ರವೀತ್ಸಮರೇ ರಾಜನ್ವಾಸುದೇವಮಿದಂ ವಚಃ।

ಸಂಜಯನು ಹೇಳಿದನು: “ರಾಜನ್! ಮಗ ಇರಾವತನ ಮರಣವನ್ನು ಕೇಳಿ ದುಃಖದಿಂದ ಮಹಾ ಆವಿಷ್ಟನಾಗಿ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಸಮರದಲ್ಲಿ ವಾಸುದೇವನಿಗೆ ಇದನ್ನು ಹೇಳಿದನು:

06092002c ಇದಂ ನೂನಂ ಮಹಾಪ್ರಾಜ್ಞೋ ವಿದುರೋ ದೃಷ್ಟವಾನ್ಪುರಾ।।
06092003a ಕುರೂಣಾಂ ಪಾಂಡವಾನಾಂ ಚ ಕ್ಷಯಂ ಘೋರಂ ಮಹಾಮತಿಃ।
06092003c ತತೋ ನಿವಾರಯಿತವಾನ್ಧೃತರಾಷ್ಟ್ರಂ ಜನೇಶ್ವರಂ।।

“ಇದನ್ನೇ ಮಹಾಪ್ರಾಜ್ಞ ವಿದುರನು ಹಿಂದೆ ನೋಡಿದ್ದನು. ಕುರುಗಳ ಮತ್ತು ಪಾಂಡವರ ಘೋರಕ್ಷಯವಾಗುತ್ತದೆಯೆಂದು ಆ ಮಹಾಮತಿಯು ಜನೇಶ್ವರ ಧೃತರಾಷ್ಟ್ರನನ್ನು ತಡೆಯುತ್ತಿದ್ದನು.

06092004a ಅವಧ್ಯಾ ಬಹವೋ ವೀರಾಃ ಸಂಗ್ರಾಮೇ ಮಧುಸೂದನ।
06092004c ನಿಹತಾಃ ಕೌರವೈಃ ಸಂಖ್ಯೇ ತಥಾಸ್ಮಾಭಿಶ್ಚ ತೇ ಹತಾಃ।।

ಮಧುಸೂದನ! ಸಂಗ್ರಾಮದಲ್ಲಿ ಅವಧ್ಯರಾದ ಅನೇಕ ವೀರರು ಹೋರಾಡುವಾಗ ಕೌರವರಿಂದ ಮತ್ತು ನಮ್ಮಿಂದ ಹತರಾಗಿದ್ದಾರೆ.

06092005a ಅರ್ಥಹೇತೋರ್ನರಶ್ರೇಷ್ಠ ಕ್ರಿಯತೇ ಕರ್ಮ ಕುತ್ಸಿತಂ।
06092005c ಧಿಗರ್ಥಾನ್ಯತ್ಕೃತೇ ಹ್ಯೇವಂ ಕ್ರಿಯತೇ ಜ್ಞಾತಿಸಂಕ್ಷಯಃ।।

ನರಶ್ರೇಷ್ಠ! ಧನಕ್ಕಾಗಿ ಕುತ್ಸಿತ ಕರ್ಮಗಳನ್ನು ಮಾಡಲಾಗುತ್ತದೆ. ಯಾವುದಕ್ಕಾಗಿ ಈ ಜ್ಞಾತಿಸಂಕ್ಷಯವು ನಡೆಯುತ್ತಿದೆಯೋ ಆ ಧನಕ್ಕೆ ಧಿಕ್ಕಾರ.

06092006a ಅಧನಸ್ಯ ಮೃತಂ ಶ್ರೇಯೋ ನ ಚ ಜ್ಞಾತಿವಧಾದ್ಧನಂ।
06092006c ಕಿಂ ನು ಪ್ರಾಪ್ಸ್ಯಾಮಹೇ ಕೃಷ್ಣ ಹತ್ವಾ ಜ್ಞಾತೀನ್ಸಮಾಗತಾನ್।।

ಜ್ಞಾತಿವಧೆಯಿಂದ ಗಳಿಸಿದ ಧನಕ್ಕಿಂತಲೂ ಅಧನನ ಮೃತ್ಯುವು ಶ್ರೇಯಸ್ಕರವಾದುದು. ಕೃಷ್ಣ! ಇಲ್ಲಿ ಸೇರಿರುವ ಬಾಂಧವರನ್ನು ಕೊಂದು ನಾವು ಏನನ್ನು ಪಡೆಯಲಿದ್ದೇವೆ?

06092007a ದುರ್ಯೋಧನಾಪರಾಧೇನ ಶಕುನೇಃ ಸೌಬಲಸ್ಯ ಚ।
06092007c ಕ್ಷತ್ರಿಯಾ ನಿಧನಂ ಯಾಂತಿ ಕರ್ಣದುರ್ಮಂತ್ರಿತೇನ ಚ।।

ದುರ್ಯೋಧನ ಮತ್ತು ಸೌಬಲ ಶಕುನಿಯರ ಅಪರಾಧದಿಂದ ಮತ್ತು ಕರ್ಣನ ದುರ್ಮಂತ್ರದಿಂದ ಕ್ಷತ್ರಿಯರು ಸಾಯುತ್ತಿದ್ದಾರೆ.

06092008a ಇದಾನೀಂ ಚ ವಿಜಾನಾಮಿ ಸುಕೃತಂ ಮಧುಸೂದನ।
06092008c ಕೃತಂ ರಾಜ್ಞಾ ಮಹಾಬಾಹೋ ಯಾಚತಾ ಸ್ಮ ಸುಯೋಧನಂ।
06092008e ರಾಜ್ಯಾರ್ಧಂ ಪಂಚ ವಾ ಗ್ರಾಮಾನ್ನಾಕಾರ್ಷೀತ್ಸ ಚ ದುರ್ಮತಿಃ।।

ಮಧುಸೂದನ! ಮಹಾಬಾಹೋ! ಅಂದು ರಾಜನು ಅರ್ಧ ರಾಜ್ಯವನ್ನಾಗಲೀ ಅಥವಾ ಐದು ಗ್ರಾಮಗಳನ್ನಾಗಲೀ ಬೇಡಿದ ಸುಕೃತವು ಇಂದು ನನಗೆ ಅರ್ಥವಾಗುತ್ತಿದೆ. ಆದರೆ ದುರ್ಮತಿ ದುರ್ಯೋಧನನು ಅದಕ್ಕೂ ಒಪ್ಪಿಕೊಳ್ಳಲಿಲ್ಲ.

06092009a ದೃಷ್ಟ್ವಾ ಹಿ ಕ್ಷತ್ರಿಯಾನ್ಶೂರಾನ್ ಶಯಾನಾನ್ಧರಣೀತಲೇ।
06092009c ನಿಂದಾಮಿ ಭೃಶಮಾತ್ಮಾನಂ ಧಿಗಸ್ತು ಕ್ಷತ್ರಜೀವಿಕಾಂ।।

ಧರಣೀತಲದಲ್ಲಿ ಮಲಗಿರುವ ಕ್ಷತ್ರಿಯ ಶೂರರನ್ನು ನೋಡಿ ನನ್ನನ್ನೇ ನಿಂದಿಸಿಕೊಳ್ಳುತ್ತೇನೆ. ಈ ಕ್ಷತ್ರಿಯ ಜೀವನಕ್ಕೆ ಧಿಕ್ಕಾರ!

06092010a ಅಶಕ್ತಮಿತಿ ಮಾಮೇತೇ ಜ್ಞಾಸ್ಯಂತಿ ಕ್ಷತ್ರಿಯಾ ರಣೇ।
06092010c ಯುದ್ಧಂ ಮಮೈಭಿರುಚಿತಂ ಜ್ಞಾತಿಭಿರ್ಮಧುಸೂದನ।।

ಮಧುಸೂದನ! ರಣದಲ್ಲಿ ಕ್ಷತ್ರಿಯರು ನನ್ನನ್ನು ಅಶಕ್ತನೆಂದೇ ತಿಳಿದುಕೊಳ್ಳಬಹುದು. ಬಾಂಧವರೊಡನೆ ಯುದ್ಧಮಾಡುವುದು ನನಗೆ ಇಷ್ಟವಾಗುವುದಿಲ್ಲ.

06092011a ಸಂಚೋದಯ ಹಯಾನ್ ಕ್ಷಿಪ್ರಂ ಧಾರ್ತರಾಷ್ಟ್ರಚಮೂಂ ಪ್ರತಿ।
06092011c ಪ್ರತರಿಷ್ಯೇ ಮಹಾಪಾರಂ ಭುಜಾಭ್ಯಾಂ ಸಮರೋದಧಿಂ।
06092011e ನಾಯಂ ಕ್ಲೀಬಯಿತುಂ ಕಾಲೋ ವಿದ್ಯತೇ ಮಾಧವ ಕ್ವ ಚಿತ್।।

ಬೇಗನೆ ಕುದುರೆಗಳನ್ನು ಧಾರ್ತರಾಷ್ಟ್ರರ ಸೇನೆಯ ಕಡೆ ಓಡಿಸು. ಸಮರವೆಂಬ ಈ ಮಹಾಸಾಗರವನ್ನು ಭುಜಗಳೆರಡರಿಂದ ಈಸಿ ದಾಟುತ್ತೇನೆ. ಮಾಧವ! ಇದು ವ್ಯರ್ಥವಾಗಿ ಕಾಲಕಳೆಯುವ ಸಮಯವಲ್ಲ.”

06092012a ಏವಮುಕ್ತಸ್ತು ಪಾರ್ಥೇನ ಕೇಶವಃ ಪರವೀರಹಾ।
06092012c ಚೋದಯಾಮಾಸ ತಾನಶ್ವಾನ್ಪಾಂಡುರಾನ್ವಾತರಂಹಸಃ।।

ಪಾರ್ಥನು ಹೀಗೆ ಹೇಳಲು ಪರವೀರಹ ಕೇಶವನು ಗಾಳಿಯ ವೇಗವುಳ್ಳ ಆ ಬಿಳೀ ಕುದುರೆಗಳನ್ನು ಓಡಿಸಿದನು.

06092013a ಅಥ ಶಬ್ದೋ ಮಹಾನಾಸೀತ್ತವ ಸೈನ್ಯಸ್ಯ ಭಾರತ।
06092013c ಮಾರುತೋದ್ಧೂತವೇಗಸ್ಯ ಸಾಗರಸ್ಯೇವ ಪರ್ವಣಿ।।

ಭಾರತ! ಆಗ ಹುಣ್ಣಿಮೆಯ ದಿನ ಗಾಳಿಯು ಬೀಸುವುದರಿಂದ ವೇಗವಾಗಿ ಉಕ್ಕಿಬರುವ ಸಮುದ್ರದಂತೆ ನಿನ್ನ ಸೇನೆಯಲ್ಲಿ ಮಹಾ ಕೋಲಾಹಲ ಶಬ್ಧವುಂಟಾಯಿತು.

06092014a ಅಪರಾಹ್ಣೇ ಮಹಾರಾಜ ಸಂಗ್ರಾಮಃ ಸಮಪದ್ಯತ।
06092014c ಪರ್ಜನ್ಯಸಮನಿರ್ಘೋಷೋ ಭೀಷ್ಮಸ್ಯ ಸಹ ಪಾಂಡವೈಃ।।

ಮಹಾರಾಜ! ಅಪರಾಹ್ಣದಲ್ಲಿ ಮೇಘಗರ್ಜನೆಗೆ ಸಮಾನವಾದ ಬೀಷ್ಮ-ಪಾಂಡವರ ನಡುವಿನ ಯುದ್ಧವು ಪ್ರರಂಭವಾಯಿತು.

06092015a ತತೋ ರಾಜಂಸ್ತವ ಸುತಾ ಭೀಮಸೇನಮುಪಾದ್ರವನ್।
06092015c ಪರಿವಾರ್ಯ ರಣೇ ದ್ರೋಣಂ ವಸವೋ ವಾಸವಂ ಯಥಾ।।

ಆಗ ರಾಜನ್! ವಾಸವನನ್ನು ವಸುಗಳಂತೆ ನಿನ್ನ ಸುತರು ದ್ರೋಣನನ್ನು ಸುತ್ತುವರೆದುಕೊಂಡು ಭೀಮಸೇನನನ್ನು ಎದುರಿಸಿದರು.

06092016a ತತಃ ಶಾಂತನವೋ ಭೀಷ್ಮಃ ಕೃಪಶ್ಚ ರಥಿನಾಂ ವರಃ।
06092016c ಭಗದತ್ತಃ ಸುಶರ್ಮಾ ಚ ಧನಂಜಯಮುಪಾದ್ರವನ್।।

ಆಗ ಶಾಂತನವ ಭೀಷ್ಮ, ರಥಿಗಳಲ್ಲಿ ಶ್ರೇಷ್ಠ ಕೃಪ, ಭಗದತ್ತ ಮತ್ತು ಸುಶರ್ಮರು ಅರ್ಜುನನ ಮೇಲೆ ಎರಗಿದರು.

06092017a ಹಾರ್ದಿಕ್ಯೋ ಬಾಹ್ಲಿಕಶ್ಚೈವ ಸಾತ್ಯಕಿಂ ಸಮಭಿದ್ರುತೌ।
06092017c ಅಂಬಷ್ಠಕಸ್ತು ನೃಪತಿರಭಿಮನ್ಯುಮವಾರಯತ್।।

ಹಾರ್ದಿಕ್ಯ-ಬಾಹ್ಲೀಕರು ಸಾತ್ಯಕಿಯನ್ನು ಎದುರಿಸಿದರು. ನೃಪತಿ ಅಂಬಷ್ಠಕನು ಅಭಿಮನ್ಯುವನ್ನು ತಡೆದನು.

06092018a ಶೇಷಾಸ್ತ್ವನ್ಯೇ ಮಹಾರಾಜ ಶೇಷಾನೇವ ಮಹಾರಥಾನ್।
06092018c ತತಃ ಪ್ರವವೃತೇ ಯುದ್ಧಂ ಘೋರರೂಪಂ ಭಯಾವಹಂ।।

ಮಹಾರಾಜ! ಉಳಿದವರು ಅನ್ಯ ಮಹಾರಥರನ್ನು ಎದುರಿಸಲು ಆಗ ಘೋರರೂಪದ ಭಯಾವಹ ಯುದ್ಧವು ನಡೆಯಿತು.

06092019a ಭೀಮಸೇನಸ್ತು ಸಂಪ್ರೇಕ್ಷ್ಯ ಪುತ್ರಾಂಸ್ತವ ಜನೇಶ್ವರ।
06092019c ಪ್ರಜಜ್ವಾಲ ರಣೇ ಕ್ರುದ್ಧೋ ಹವಿಷಾ ಹವ್ಯವಾಡಿವ।।

ಜನೇಶ್ವರ! ನಿನ್ನ ಪುತ್ರರನ್ನು ನೋಡಿ ಭೀಮಸೇನನು ರಣದಲ್ಲಿ ಆಹುತಿಪಡೆದ ಯಜ್ಞೇಶ್ವರನಂತೆ ಕ್ರುದ್ಧನಾಗಿ ಭುಗಿಲೆದ್ದನು.

06092020a ಪುತ್ರಾಸ್ತು ತವ ಕೌಂತೇಯಂ ಚಾದಯಾಂ ಚಕ್ರಿರೇ ಶರೈಃ।
06092020c ಪ್ರಾವೃಷೀವ ಮಹಾರಾಜ ಜಲದಾಃ ಪರ್ವತಂ ಯಥಾ।।

ಮಹಾರಾಜ! ನಿನ್ನ ಪುತ್ರರಾದರೋ ಮೋಡಗಳು ಪರ್ವತವನ್ನು ಹೇಗೋ ಹಾಗೆ ಕೌಂತೇಯನನ್ನು ಶರಗಳ ಮಳೆಯಿಂದ ಮುಚ್ಚಿದರು.

06092021a ಸ ಚ್ಛಾದ್ಯಮಾನೋ ಬಹುಧಾ ಪುತ್ರೈಸ್ತವ ವಿಶಾಂ ಪತೇ।
06092021c ಸೃಕ್ಕಿಣೀ ವಿಲಿಹನ್ವೀರಃ ಶಾರ್ದೂಲ ಇವ ದರ್ಪಿತಃ।।

ವಿಶಾಂಪತೇ! ನಿನ್ನ ಪುತ್ರರಿಂದ ಬಹಳವಾಗಿ ಮುಚ್ಚಲ್ಪಟ್ಟ ಆ ವೀರ ದರ್ಪಿತನು ಹುಲಿಯಂತೆ ಕಟವಾಯಿಗಳನ್ನು ನೆಕ್ಕಿದನು.

06092022a ವ್ಯೂಢೋರಸ್ಕಂ ತತೋ ಭೀಮಃ ಪಾತಯಾಮಾಸ ಪಾರ್ಥಿವ।
06092022c ಕ್ಷುರಪ್ರೇಣ ಸುತೀಕ್ಷ್ಣೇನ ಸೋಽಭವದ್ಗತಜೀವಿತಃ।।

ಪಾರ್ಥಿವ! ಆಗ ಭೀಮನು ತೀಕ್ಷ್ಣ ಕ್ಷುರಪ್ರದಿಂದ ವ್ಯೂಢೋರಸ್ಕನನ್ನು ಉರುಳಿಸಲು ಅವನು ಗತಜೀವಿತನಾದನು.

06092023a ಅಪರೇಣ ತು ಭಲ್ಲೇನ ಪೀತೇನ ನಿಶಿತೇನ ಚ।
06092023c ಅಪಾತಯತ್ಕುಂಡಲಿನಂ ಸಿಂಹಃ ಕ್ಷುದ್ರಮೃಗಂ ಯಥಾ।।

ಇನ್ನೊಂದು ಹಳದಿ ಬಣ್ಣದ ನಿಶಿತ ಭಲ್ಲದಿಂದ ಕ್ಷುದ್ರಮೃಗವನ್ನು ಸಿಂಹವು ಹೇಗೋ ಹಾಗೆ ಕುಂಡಲಿನಿಯನ್ನು ಬೀಳಿಸಿದನು.

06092024a ತತಃ ಸುನಿಶಿತಾನ್ಪೀತಾನ್ಸಮಾದತ್ತ ಶಿಲೀಮುಖಾನ್।
06092024c ಸ ಸಪ್ತ ತ್ವರಯಾ ಯುಕ್ತಃ ಪುತ್ರಾಂಸ್ತೇ ಪ್ರಾಪ್ಯ ಮಾರಿಷ।।

ತಕ್ಷಣವೇ ನಿಶಿತವಾದ ಹಳದೀ ಬಣ್ಣದ ಶಿಲೀಮುಖಗಳನ್ನು ತೆಗೆದುಕೊಂಡು ಅವನು ನಿನ್ನ ಏಳು ಮಕ್ಕಳಿಗೆ ಗುರಿಯಿಟ್ಟು ಹೊಡೆದನು.

06092025a ಪ್ರೇಷಿತಾ ಭೀಮಸೇನೇನ ಶರಾಸ್ತೇ ದೃಢಧನ್ವನಾ।
06092025c ಅಪಾತಯಂತ ಪುತ್ರಾಂಸ್ತೇ ರಥೇಭ್ಯಃ ಸುಮಹಾರಥಾನ್।।
06092026a ಅನಾಧೃಷ್ಟಿಂ ಕುಂಡಭೇದಂ ವೈರಾಟಂ ದೀರ್ಘಲೋಚನಂ।
06092026c ದೀರ್ಘಬಾಹುಂ ಸುಬಾಹುಂ ಚ ತಥೈವ ಕನಕಧ್ವಜಂ।।
06092027a ಪ್ರಪತಂತ ಸ್ಮ ತೇ ವೀರಾ ವಿರೇಜುರ್ಭರತರ್ಷಭ।
06092027c ವಸಂತೇ ಪುಷ್ಪಶಬಲಾಶ್ಚೂತಾಃ ಪ್ರಪತಿತಾ ಇವ।।

ಆ ದೃಢಧನ್ವಿ ಭೀಮಸೇನನು ಪ್ರಯೋಗಿಸಿದ ಶರಗಳು ತಾಗಿ ನಿನ್ನ ಸುಮಹಾರಥ ಮಕ್ಕಳು - ಅನಾಧೃಷ್ಟಿ, ಕುಂಡಭೇದ, ವೈರಾಟ, ದೀರ್ಘಲೋಚನ, ದೀರ್ಘಬಾಹು, ಸುಬಾಹು, ಮತ್ತು ಕನಕಧ್ವಜ - ರಥಗಳಿಂದ ಬಿದ್ದರು. ಭರತರ್ಷಭ! ಬೀಳುವಾಗ ನಿನ್ನ ಆ ವೀರರು ವಸಂತಕಾಲದಲ್ಲಿ ಗಳಿದ ಶಬಲಪುಷ್ಪಗಳಂತೆ ಶೋಭಿಸುತ್ತಿದ್ದರು.

06092028a ತತಃ ಪ್ರದುದ್ರುವುಃ ಶೇಷಾಃ ಪುತ್ರಾಸ್ತವ ವಿಶಾಂ ಪತೇ।
06092028c ತಂ ಕಾಲಂ ಇವ ಮನ್ಯಂತೋ ಭೀಮಸೇನಂ ಮಹಾಬಲಂ।।

ವಿಶಾಂಪತೇ! ಆಗ ಮಹಾಬಲ ಭೀಮಸೇನನನ್ನು ಕಾಲನೆಂದು ಅಭಿಪ್ರಾಯಪಟ್ಟು ಉಳಿದ ನಿನ್ನ ಮಕ್ಕಳು ಪಲಾಯನಗೈದರು.

06092029a ದ್ರೋಣಸ್ತು ಸಮರೇ ವೀರಂ ನಿರ್ದಹಂತಂ ಸುತಾಂಸ್ತವ।
06092029c ಯಥಾದ್ರಿಂ ವಾರಿಧಾರಾಭಿಃ ಸಮಂತಾದ್ವ್ಯಕಿರಚ್ಚರೈಃ।।

ನಿನ್ನ ಮಕ್ಕಳನ್ನು ದಹಿಸುತ್ತಿದ್ದ ಆ ವೀರನನ್ನು ದ್ರೋಣನು ನೀರಿನ ಮಳೆಯಿಂದ ಗಿರಿಯನ್ನು ಹೇಗೋ ಹಾಗೆ ಎಲ್ಲ ಕಡೆಗಳಿಂದ ಶರಗಳಿಂದ ಮುಚ್ಚಿದನು.

06092030a ತತ್ರಾದ್ಭುತಮಪಶ್ಯಾಮ ಕುಂತೀಪುತ್ರಸ್ಯ ಪೌರುಷಂ।
06092030c ದ್ರೋಣೇನ ವಾರ್ಯಮಾಣೋಽಪಿ ನಿಜಘ್ನೇ ಯತ್ಸುತಾಂಸ್ತವ।।

ದ್ರೋಣನು ತಡೆಯುತ್ತಿದ್ದರೂ ನಿನ್ನ ಪುತ್ರರೊಂದಿಗೆ ಹೋರಾಡುತ್ತಿದ್ದ ಕುಂತೀಪುತ್ರನ ಅದ್ಭುತ ಪೌರುಷವನ್ನು ಅಲ್ಲಿ ನೋಡಿದೆವು.

06092031a ಯಥಾ ಹಿ ಗೋವೃಷೋ ವರ್ಷಂ ಸಂಧಾರಯತಿ ಖಾತ್ಪತತ್।
06092031c ಭೀಮಸ್ತಥಾ ದ್ರೋಣಮುಕ್ತಂ ಶರವರ್ಷಮದೀಧರತ್।।

ಮಳೆಯು ಸುರಿಯುತ್ತಿದ್ದರೂ ಗೂಳಿಯೊಂದು ಹೇಗೆ ಅದನ್ನು ಸಹಿಸಿಕೊಳ್ಳುತ್ತದೆಯೋ ಹಾಗೆ ದ್ರೋಣನು ಪ್ರಯೋಗಿಸಿದ ಶರವರ್ಷವನ್ನು ಭೀಮನು ತಡೆದುಕೊಂಡನು.

06092032a ಅದ್ಭುತಂ ಚ ಮಹಾರಾಜ ತತ್ರ ಚಕ್ರೇ ವೃಕೋದರಃ।
06092032c ಯತ್ಪುತ್ರಾಂಸ್ತೇಽವಧೀತ್ಸಂಖ್ಯೇ ದ್ರೋಣಂ ಚೈವ ನ್ಯಯೋಧಯತ್।।

ಮಹಾರಾಜ! ಯುದ್ಧದಲ್ಲಿ ನಿನ್ನ ಪುತ್ರರನ್ನು ವಧಿಸಿದ್ದುದು ಮತ್ತು ದ್ರೋಣನು ಮುಂದುವರೆಯದಂತೆ ತಡೆಗಟ್ಟಿದುದು - ಇದು ಅಲ್ಲಿ ವೃಕೋದರನು ನಡೆಸಿದ ಅದ್ಭುತವಾಗಿತ್ತು.

06092033a ಪುತ್ರೇಷು ತವ ವೀರೇಷು ಚಿಕ್ರೀಡಾರ್ಜುನಪೂರ್ವಜಃ।
06092033c ಮೃಗೇಷ್ವಿವ ಮಹಾರಾಜ ಚರನ್ವ್ಯಾಘ್ರೋ ಮಹಾಬಲಃ।।

ಮಹಾರಾಜ! ಮಹಾಬಲಿಷ್ಟ ವ್ಯಾಘ್ರವು ಮೃಗಗಳ ಹಿಂಡುಗಳ ಮಧ್ಯೆ ಸಂಚರಿಸುವಂತೆ ಅರ್ಜುನಪೂರ್ವಜನು ವೀರರಾದ ನಿನ್ನ ಮಕ್ಕಳ ನಡುವೆ ಆಟವಾಡುತ್ತಿದ್ದನು.

06092034a ಯಥಾ ವಾ ಪಶುಮಧ್ಯಸ್ಥೋ ದ್ರಾವಯೇತ ಪಶೂನ್ವೃಕಃ।
06092034c ವೃಕೋದರಸ್ತವ ಸುತಾಂಸ್ತಥಾ ವ್ಯದ್ರಾವಯದ್ರಣೇ।।

ಪಶುಗಳ ಮಧ್ಯೆ ನಿಂತು ತೋಳವು ಹೇಗೆ ಪಶುಗಳನ್ನು ಓಡಿಸುತ್ತದೆಯೋ ಹಾಗಿ ವೃಕೋದರನು ನಿನ್ನ ಸುತರನ್ನು ರಣದಿಂದ ಓಡಿಸಿದನು.

06092035a ಗಾಂಗೇಯೋ ಭಗದತ್ತಶ್ಚ ಗೌತಮಶ್ಚ ಮಹಾರಥಃ।
06092035c ಪಾಂಡವಂ ರಭಸಂ ಯುದ್ಧೇ ವಾರಯಾಮಾಸುರರ್ಜುನಂ।।

ಗಾಂಗೇಯ, ಭಗದತ್ತ ಮತ್ತು ಮಹಾರಥ ಗೌತಮರು ರಭಸದಿಂದ ಯುದ್ಧಮಾಡುತ್ತಿದ್ದ ಅರ್ಜುನ ಪಾಂಡವನನ್ನು ತಡೆದರು.

06092036a ಅಸ್ತ್ರೈರಸ್ತ್ರಾಣಿ ಸಂವಾರ್ಯ ತೇಷಾಂ ಸೋಽತಿರಥೋ ರಣೇ।
06092036c ಪ್ರವೀರಾಂಸ್ತವ ಸೈನ್ಯೇಷು ಪ್ರೇಷಯಾಮಾಸ ಮೃತ್ಯವೇ।।

ಅವರ ಅಸ್ತ್ರಗಳನ್ನು ಅಸ್ತ್ರಗಳಿಂದ ನಿವಾರಣೆಗೊಳಿಸುತ್ತಾ ಆ ಅತಿರಥನು ರಣದಲ್ಲಿ ನಿನ್ನ ಸೇನೆಯ ಪ್ರವೀರರನ್ನು ಮೃತ್ಯುವಿಗೆ ಕಳುಹಿಸಿದನು.

06092037a ಅಭಿಮನ್ಯುಶ್ಚ ರಾಜಾನಮಂಬಷ್ಠಂ ಲೋಕವಿಶ್ರುತಂ।
06092037c ವಿರಥಂ ರಥಿನಾಂ ಶ್ರೇಷ್ಠಂ ಕಾರಯಾಮಾಸ ಸಾಯಕೈಃ।।

ಅಭಿಮನ್ಯುವಾದರೋ ಲೋಕವಿಶ್ರುತನಾದ ರಥಿಗಳಲ್ಲಿ ಶ್ರೇಷ್ಠ ರಾಜಾ ಅಂಬಷ್ಠನನ್ನು ಸಾಯಕಗಳಿಂದ ವಿರಥನನ್ನಾಗಿ ಮಾಡಿದನು.

06092038a ವಿರಥೋ ವಧ್ಯಮಾನಃ ಸ ಸೌಭದ್ರೇಣ ಯಶಸ್ವಿನಾ।
06092038c ಅವಪ್ಲುತ್ಯ ರಥಾತ್ತೂರ್ಣಂ ಸವ್ರೀಡೋ ಮನುಜಾಧಿಪಃ।।
06092039a ಅಸಿಂ ಚಿಕ್ಷೇಪ ಸಮರೇ ಸೌಭದ್ರಸ್ಯ ಮಹಾತ್ಮನಃ।
06092039c ಆರುರೋಹ ರಥಂ ಚೈವ ಹಾರ್ದಿಕ್ಯಸ್ಯ ಮಹಾತ್ಮನಃ।।

ವಿರಥನಾಗಿ ಯಶಸ್ವಿ ಸೌಭದ್ರನಿಂದ ವಧಿಸಲ್ಪಡುತ್ತಿದ್ದ ಮನುಜಾಧಿಪನು ನಾಚಿ ತಕ್ಷಣವೇ ರಥದಿಂದ ಕೆಳಗೆ ಹಾರಿ, ಸಮರದಲ್ಲಿ ಮಹಾತ್ಮ ಸೌಭದ್ರನ ಮೇಲೆ ಖಡ್ಗವನ್ನು ಎಸೆದನು. ಮತ್ತು ಮಹಾತ್ಮ ಹಾರ್ದಿಕ್ಯನ ರಥವನ್ನೇರಿದನು.

06092040a ಆಪತಂತಂ ತು ನಿಸ್ತ್ರಿಂಶಂ ಯುದ್ಧಮಾರ್ಗವಿಶಾರದಃ।
06092040c ಲಾಘವಾದ್ ವ್ಯಂಸಯಾಮಾಸ ಸೌಭದ್ರಃ ಪರವೀರಹಾ।।

ಯುದ್ಧ ಮಾರ್ಗವಿಶಾರದನಾದ ಪರವೀರಹ ಸೌಭದ್ರನು ಚಳಕದಿಂದ ಬೀಳುತ್ತಿದ್ದ ಆ ಖಡ್ಗದ ಮಾರ್ಗವನ್ನೇ ಬದಲಾಯಿಸಿದನು.

06092041a ವ್ಯಂಸಿತಂ ವೀಕ್ಷ್ಯ ನಿಸ್ತ್ರಿಂಶಂ ಸೌಭದ್ರೇಣ ರಣೇ ತದಾ।
06092041c ಸಾಧು ಸಾಧ್ವಿತಿ ಸೈನ್ಯಾನಾಂ ಪ್ರಣಾದೋಽಭೂದ್ವಿಶಾಂ ಪತೇ।।

ವಿಶಾಂಪತೇ! ರಣದಲ್ಲಿ ಆ ಖಡ್ಗವನ್ನು ತಪ್ಪಿಸಿದುದನ್ನು ನೋಡಿ ಸೈನ್ಯಗಳಲ್ಲಿ ಸೌಭದ್ರನನ್ನು ಹೊಗಳಿ “ಸಾಧು! ಸಾಧು!” ಎಂಬ ಕೂಗು ಕೇಳಿಬಂದಿತು.

06092042a ಧೃಷ್ಟದ್ಯುಮ್ನಮುಖಾಸ್ತ್ವನ್ಯೇ ತವ ಸೈನ್ಯಮಯೋಧಯನ್।
06092042c ತಥೈವ ತಾವಕಾಃ ಸರ್ವೇ ಪಾಂಡುಸೈನ್ಯಮಯೋಧಯನ್।।

ಧೃಷ್ಟದ್ಯುಮ್ನನನ್ನು ಮುಂದಿಟ್ಟುಕೊಂಡು ಅನ್ಯರು ನಿನ್ನ ಸೇನೆಯೊಡನೆ ಯುದ್ಧ ಮಾಡಿದರು. ಹಾಗೆಯೇ ನಿನ್ನವರು ಎಲ್ಲರೂ ಪಾಂಡವ ಸೇನೆಯೊಂದಿಗೆ ಯುದ್ಧ ಮಾಡಿದರು.

06092043a ತತ್ರಾಕ್ರಂದೋ ಮಹಾನಾಸೀತ್ತವ ತೇಷಾಂ ಚ ಭಾರತ।
06092043c ನಿಘ್ನತಾಂ ಭೃಶಮನ್ಯೋನ್ಯಂ ಕುರ್ವತಾಂ ಕರ್ಮ ದುಷ್ಕರಂ।।

ಭಾರತ! ಅನ್ಯೋನ್ಯರನ್ನು ಕೊಲ್ಲುವ ದುಷ್ಕರ ಕರ್ಮವನ್ನು ಮಾಡುತ್ತಿದ್ದ ನಿನ್ನವರು ಮತ್ತು ಅವರಲ್ಲಿ ಮಹಾ ಆಕ್ರಂದನವುಂಟಾಯಿತು.

06092044a ಅನ್ಯೋನ್ಯಂ ಹಿ ರಣೇ ಶೂರಾಃ ಕೇಶೇಷ್ವಾಕ್ಷಿಪ್ಯ ಮಾರಿಷ।
06092044c ನಖೈರ್ದಂತೈರಯುಧ್ಯಂತ ಮುಷ್ಟಿಭಿರ್ಜಾನುಭಿಸ್ತಥಾ।।
06092045a ಬಾಹುಭಿಶ್ಚ ತಲೈಶ್ಚೈವ ನಿಸ್ತ್ರಿಂಶೈಶ್ಚ ಸುಸಂಶಿತೈಃ।
06092045c ವಿವರಂ ಪ್ರಾಪ್ಯ ಚಾನ್ಯೋನ್ಯಮನಯನ್ಯಮಸಾದನಂ।।

ಮಾರಿಷ! ರಣದಲ್ಲಿ ಶೂರರು ಅನ್ಯೋನ್ಯರ ಕೂದಲನ್ನು ಎಳೆದು, ಉಗುರು, ಹಲ್ಲು, ಆಯುಧ, ಮುಷ್ಟಿ, ತೊಡೆ, ತೋಳು, ಅಂಗೈ ಮತ್ತು ಹರಿತ ಖಡ್ಗಗಳಿಂದ ಸಮಯ ನೋಡಿ ಅನ್ಯೋನ್ಯರನ್ನು ಯಮಸಾದನಕ್ಕೆ ಕಳುಹಿಸುತ್ತಿದ್ದರು.

06092046a ನ್ಯಹನಚ್ಚ ಪಿತಾ ಪುತ್ರಂ ಪುತ್ರಶ್ಚ ಪಿತರಂ ರಣೇ।
06092046c ವ್ಯಾಕುಲೀಕೃತಸಂಕಲ್ಪಾ ಯುಯುಧುಸ್ತತ್ರ ಮಾನವಾಃ।।

ರಣದಲ್ಲಿ ತಂದೆಯು ಮಗನನ್ನೂ ಮಗನು ತಂದೆಯನ್ನೂ ಕೊಲ್ಲುತ್ತಿದ್ದರು. ವ್ಯಾಕುಲರಾಗಿದ್ದರೂ ಅಲ್ಲಿ ಜನರು ಕೊನೆಯವರೆಗೂ ಹೋರಾಡುತ್ತಿದ್ದರು.

06092047a ರಣೇ ಚಾರೂಣಿ ಚಾಪಾನಿ ಹೇಮಪೃಷ್ಠಾನಿ ಭಾರತ।
06092047c ಹತಾನಾಮಪವಿದ್ಧಾನಿ ಕಲಾಪಾಶ್ಚ ಮಹಾಧನಾಃ।।
06092048a ಜಾತರೂಪಮಯೈಃ ಪುಂಖೈ ರಾಜತೈಶ್ಚ ಶಿತಾಃ ಶರಾಃ।
06092048c ತೈಲಧೌತಾ ವ್ಯರಾಜಂತ ನಿರ್ಮುಕ್ತಭುಜಗೋಪಮಾಃ।।

ಹತರಾದವರಿಂದ ಕೆಳಗೆ ಬಿದ್ದಿದ್ದ ಸುಂದರವಾದ ಬಂಗಾರದ ಬೆನ್ನುಳ್ಳ ಧನುಸ್ಸುಗಳು, ಅಮೂಲ್ಯವಾದ ಬತ್ತಳಿಕೆಗಳೂ, ಸುವರ್ಣಮಯವಾದ, ರಜತಮಯವಾದ, ರೆಕ್ಕೆಗಳಿಂದ ಕೂಡಿದ್ದ ಎಣ್ಣೆಯಲ್ಲಿ ನೆನೆಸಿದ್ದ ನಿಶಿತ ಬಾಣಗಳು ರಣದಲ್ಲಿ ಬಿದ್ದಿದ್ದು ಪೊರೆಯನ್ನು ಬಿಟ್ಟ ಸರ್ಪಗಳಂತೆ ಪ್ರಕಾಶಿಸುತ್ತಿದ್ದವು.

06092049a ಹಸ್ತಿದಂತತ್ಸರೂನ್ಖಡ್ಗಾಂ ಜಾತರೂಪಪರಿಷ್ಕೃತಾನ್।
06092049c ಚರ್ಮಾಣಿ ಚಾಪವಿದ್ಧಾನಿ ರುಕ್ಮಪೃಷ್ಠಾನಿ ಧನ್ವಿನಾಂ।।
06092050a ಸುವರ್ಣವಿಕೃತಪ್ರಾಸಾನ್ಪಟ್ಟಿಶಾನ್ ಹೇಮಭೂಷಿತಾನ್।
06092050c ಜಾತರೂಪಮಯಾಶ್ಚರ್ಷ್ಟೀಃ ಶಕ್ತ್ಯಶ್ಚ ಕನಕೋಜ್ಜ್ವಲಾಃ।।
06092051a ಅಪಕೃತ್ತಾಶ್ಚ ಪತಿತಾ ಮುಸಲಾನಿ ಗುರೂಣಿ ಚ।
06092051c ಪರಿಘಾನ್ಪಟ್ಟಿಶಾಂಶ್ಚೈವ ಭಿಂಡಿಪಾಲಾಂಶ್ಚ ಮಾರಿಷ।।
06092052a ಪತಿತಾಂಸ್ತೋಮರಾಂಶ್ಚಾಪಿ ಚಿತ್ರಾ ಹೇಮಪರಿಷ್ಕೃತಾಃ।
06092052c ಕುಥಾಶ್ಚ ಬಹುಧಾಕಾರಾಶ್ಚಾಮರವ್ಯಜನಾನಿ ಚ।।

ಆನೆಯ ದಂತದ ಹಿಡಿಯುಳ್ಳ ಬಂಗಾರದಿಂದ ಅಲಂಕರಿಸಲ್ಪಟ್ಟ ಖಡ್ಗಗಳನ್ನು, ಧನುಷ್ಮಂತರ ಬಂಗಾರದ ಹಿಡಿಯುಳ್ಳ ಅನೇಕ ಗುರಾಣಿಗಳನ್ನೂ, ಚಾಪಗಳನ್ನೂ, ಬಂಗಾರದಿಂದ ಮಾಡಲ್ಪಟ್ಟಿದ್ದ ಪ್ರಾಸಗಳನ್ನೂ, ಹೇಮಭೂಷಿತ ಪಟ್ಟಿಶಗಳನ್ನೂ, ಬಂಗಾರಮಯ ಋಷ್ಟಿಗಳನ್ನೂ, ಕನಕೋಜ್ವಲ ಶಕ್ತಿಗಳನ್ನೂ, ಮುರಿದು ಬಿದ್ದಿರುವ ಭಾರ ಮುಸಲಗಳನ್ನೂ, ಪರಿಘಗಳನ್ನೂ, ಪಟ್ಟಿಶಗಳನ್ನೂ, ಬಿಂಡಿಪಾಲಗಳನ್ನೂ, ಬಿದ್ದಿರುವ ಬಂಗಾರದಿಂದ ಮಾಡಲ್ಪಟ್ಟಿದ್ದ ಬಣ್ಣ ಬಣ್ಣದ ತೋಮರಗಳನ್ನೂ, ನಾನಾ ಅಳತೆಯ ಆನೆಯ ಮೇಲೆ ಹೊದಿಸುವ ಚಿತ್ರಗಂಬಳಿಗಳನ್ನೂ, ಚಾಮರ-ವ್ಯಜನಗಳನ್ನೂ ರಣದಲ್ಲಿ ನೋಡಿದೆವು.

06092053a ನಾನಾವಿಧಾನಿ ಶಸ್ತ್ರಾಣಿ ವಿಸೃಜ್ಯ ಪತಿತಾ ನರಾಃ।
06092053c ಜೀವಂತ ಇವ ದೃಶ್ಯಂತೇ ಗತಸತ್ತ್ವಾ ಮಹಾರಥಾಃ।।

ನಾನಾ ವಿಧದ ಶಸ್ತ್ರಗಳನ್ನು ಬಿಸುಟು ಬಿದ್ದಿದ್ದ ಮಹಾರಥ ನರರು ಗತಾಸುಗಳಾಗಿದ್ದರೂ ಜೀವಂತರಾಗಿರುವಂತೆ ಕಾಣುತ್ತಿದ್ದರು.

06092054a ಗದಾವಿಮಥಿತೈರ್ಗಾತ್ರೈರ್ಮುಸಲೈರ್ಭಿನ್ನಮಸ್ತಕಾಃ।
06092054c ಗಜವಾಜಿರಥಕ್ಷುಣ್ಣಾಃ ಶೇರತೇ ಸ್ಮ ನರಾಃ ಕ್ಷಿತೌ।।

ಭೂಮಿಯ ಮೇಲೆ ಬಿದ್ದಿದ್ದ ಯೋಧರಲ್ಲಿ ಕೆಲವರು ಗದೆಯಿಂದ ಜಜ್ಜಿಹೋಗಿದ್ದರು. ಕೆಲವರ ತಲೆಗಳು ಮುಸಲಗಳಿಂದ ಒಡೆಯಲ್ಪಟ್ಟಿದ್ದವು. ಕೆಲವರು ರಥ, ಆನೆ, ಕುದುರೆಗಳಿಂದ ತುಳಿಯಲ್ಪಟ್ಟಿದ್ದರು.

06092055a ತಥೈವಾಶ್ವನೃನಾಗಾನಾಂ ಶರೀರೈರಾಬಭೌ ತದಾ।
06092055c ಸಂಚನ್ನಾ ವಸುಧಾ ರಾಜನ್ಪರ್ವತೈರಿವ ಸರ್ವತಃ।।

ರಾಜನ್! ಹಾಗೆಯೇ ಅಶ್ವ-ಪದಾತಿ-ಗಜಗಳ ಶರೀರಗಳಿಂದ ತುಂಬಿಹೋಗಿದ್ದ ರಣಾಂಗಣವು ಪರ್ವತಗಳಿಂದ ತುಂಬಿದೆಯೋ ಎನ್ನುವಂತೆ ತೋರುತ್ತಿತ್ತು.

06092056a ಸಮರೇ ಪತಿತೈಶ್ಚೈವ ಶಕ್ತ್ಯೃಷ್ಟಿಶರತೋಮರೈಃ।
06092056c ನಿಸ್ತ್ರಿಂಶೈಃ ಪಟ್ಟಿಶೈಃ ಪ್ರಾಸೈರಯಸ್ಕುಂತೈಃ ಪರಶ್ವಧೈಃ।।
06092057a ಪರಿಘೈರ್ಭಿಂಡಿಪಾಲೈಶ್ಚ ಶತಘ್ನೀಭಿಸ್ತಥೈವ ಚ।
06092057c ಶರೀರೈಃ ಶಸ್ತ್ರಭಿನ್ನೈಶ್ಚ ಸಮಾಸ್ತೀರ್ಯತ ಮೇದಿನೀ।।

ಸಮರದಲ್ಲಿ ಬಿದ್ದ ಶಕ್ತಿ, ಋಷ್ಟಿ, ಶರ, ತೋಮರ, ಖಡ್ಗ, ಪಟ್ಟಿಶ, ಪ್ರಾಸ, ಅಯಸ್ಕುಂತ (ಲೋಹದಂಡ, ಹಾರೆ), ಪರಶು, ಪರಿಘ, ಭಿಂಡಿಪಾಲ, ಶತಘ್ನೀ ಮತ್ತು ಹಾಗೆಯೇ ಶಸ್ತ್ರಗಳಿಂದ ತುಂಡಾದ ಶರೀರಗಳಿಂದ ರಣಭೂಮಿಯು ತುಂಬಿಹೋಗಿತ್ತು.

06092058a ನಿಃಶಬ್ದೈರಲ್ಪಶಬ್ದೈಶ್ಚ ಶೋಣಿತೌಘಪರಿಪ್ಲುತೈಃ।
06092058c ಗತಾಸುಭಿರಮಿತ್ರಘ್ನ ವಿಬಭೌ ಸಂವೃತಾ ಮಹೀ।।

ಅಮಿತ್ರಘ್ನ! ದೇಹವು ರಕ್ತದಿಂದ ತೋಯ್ದುಹೋಗಿದ್ದ, ನಿಃಶಬ್ಧ, ಅಲ್ಪ ಶಬ್ದಮಾಡುತ್ತಿರುವವರ, ಸತ್ತವರ ಶರೀರಗಳಿಂದ ಭೂಮಿಯು ತುಂಬಿಹೋಗಿತ್ತು.

06092059a ಸತಲತ್ರೈಃ ಸಕೇಯೂರೈರ್ಬಾಹುಭಿಶ್ಚಂದನೋಕ್ಷಿತೈಃ।
06092059c ಹಸ್ತಿಹಸ್ತೋಪಮೈಶ್ಚಿನ್ನೈರೂರುಭಿಶ್ಚ ತರಸ್ವಿನಾಂ।।
06092060a ಬದ್ಧಚೂಡಾಮಣಿಧರೈಃ ಶಿರೋಭಿಶ್ಚ ಸಕುಂಡಲೈಃ।
06092060c ಪತಿತೈರ್ವೃಷಭಾಕ್ಷಾಣಾಂ ಬಭೌ ಭಾರತ ಮೇದಿನೀ।।

ಭಾರತ! ಕೈಚೀಲಗಳೊಡನೆ, ಕೇಯೂರಗಳಿಂದ ಅಲಂಕೃತವಾದ ಚಂದನವನ್ನು ಬಳಿದುಕೊಂಡಿರುರುವ ತೋಳುಗಳೊಡನೆ, ಆನೆಯ ಸೊಂಡಿಲುಗಳಂತಿರುವ ತೊಡೆಗಳ ತರಸ್ವಿಗಳ, ಚೂಡಾಮಣಿಗಳನ್ನು ಕಟ್ಟಿ ಧರಿಸಿರುವ ಕುಂಡಲಗಳೊಂದಿರುವ ಕೆಳಗೆ ಬಿದ್ದಿರುವ ವೃಷಭಾಕ್ಷರ ಶಿರಗಳು ಮೇದಿನಿಯನ್ನು ತುಂಬಿದ್ದವು.

06092061a ಕವಚೈಃ ಶೋಣಿತಾದಿಗ್ಧೈರ್ವಿಪ್ರಕೀರ್ಣೈಶ್ಚ ಕಾಂಚನೈಃ।
06092061c ರರಾಜ ಸುಭೃಶಂ ಭೂಮಿಃ ಶಾಂತಾರ್ಚಿಭಿರಿವಾನಲೈಃ।।

ಅಲ್ಲಲ್ಲಿ ಹರಡಿದ್ದ ರಕ್ತದಿಂದ ತೋಯ್ದ ಕಾಂಚನ ಕವಚಗಳಿಂದ ಭೂಮಿಯು ಜ್ವಾಲೆಯಿಲ್ಲದೇ ಬರೀ ಕೆಂಡಗಳೇ ಉಳಿದಿರುವ ಅಗ್ನಿಗಳಂತೆ ಶೋಭಿಸಿತು.

06092062a ವಿಪ್ರವಿದ್ಧೈಃ ಕಲಾಪೈಶ್ಚ ಪತಿತೈಶ್ಚ ಶರಾಸನೈಃ।
06092062c ವಿಪ್ರಕೀರ್ಣೈಃ ಶರೈಶ್ಚಾಪಿ ರುಕ್ಮಪುಂಖೈಃ ಸಮಂತತಃ।।
06092063a ರಥೈಶ್ಚ ಬಹುಭಿರ್ಭಗ್ನೈಃ ಕಿಂಕಿಣೀಜಾಲಮಾಲಿಭಿಃ।
06092063c ವಾಜಿಭಿಶ್ಚ ಹತೈಃ ಕೀರ್ಣೈಃ ಸ್ರಸ್ತಜಿಹ್ವೈಃ ಸಶೋಣಿತೈಃ।।
06092064a ಅನುಕರ್ಷೈಃ ಪತಾಕಾಭಿರುಪಾಸಂಗೈರ್ಧ್ವಜೈರಪಿ।
06092064c ಪ್ರವೀರಾಣಾಂ ಮಹಾಶಂಖೈರ್ವಿಪ್ರಕೀರ್ಣೈಶ್ಚ ಪಾಂಡುರೈಃ।।
06092065a ಸ್ರಸ್ತಹಸ್ತೈಶ್ಚ ಮಾತಂಗೈಃ ಶಯಾನೈರ್ವಿಬಭೌ ಮಹೀ।
06092065c ನಾನಾರೂಪೈರಲಂಕಾರೈಃ ಪ್ರಮದೇವಾಭ್ಯಲಂಕೃತಾ।।

ಎಸೆಯಲ್ಪಟ್ಟಿದ್ದ ಬತ್ತಳಿಕೆಗಳಿಂದಲೂ, ಬಿದ್ದಿದ್ದ ಧನುಸ್ಸುಗಳಿಂದಲೂ, ಎಲ್ಲಕಡೆ ಹರಡಿದ್ದ ರುಕ್ಮಪುಂಖ ಶರಗಳಿಂದಲೂ, ಭಗ್ನಗೊಂಡಿದ್ದ ಹಲವಾರು ಕಿಂಕಿಣೀಮಾಲೆಗಳಿಂದ ಕೂಡಿದ ರಥಗಳಿಂದಲೂ, ನಾಲಿಗೆಯನ್ನು ಹೊರಚಾಚಿ ರಕ್ತದ ಮಡುವಿನಲ್ಲಿ ಸತ್ತುಬಿದ್ದಿದ್ದ ಕುದುರೆಗಳಿಂದಲೂ, ಪಾತಕೆಗಳಿಂದಲೂ, ಉಪಾಸಾಂಗಗಳಿಂದಲೂ, ಧ್ವಜಗಳಿಂದಲೂ, ಹರಡಿದ್ದ ಪ್ರವೀರರ ಬಿಳೀ ಮಹಾಶಂಖಗಳಿಂದಲೂ, ಸೊಂಡಿಲುಗಳು ಕತ್ತರಿಸಿ ಮಲಗಿದ್ದ ಆನೆಗಳಿಂದಲೂ ಆ ರಣಭೂಮಿಯು ನಾನಾರೂಪಗಳ ಅಲಂಕಾರಗಳಿಂದ ಅಲಂಕರಿಸಿಕೊಂಡ ನಾರಿಯಂತೆ ತೋರಿತು.

06092066a ದಂತಿಭಿಶ್ಚಾಪರೈಸ್ತತ್ರ ಸಪ್ರಾಸೈರ್ಗಾಢವೇದನೈಃ।
06092066c ಕರೈಃ ಶಬ್ದಂ ವಿಮುಂಚದ್ಭಿಃ ಶೀಕರಂ ಚ ಮುಹುರ್ಮುಹುಃ।
06092066e ವಿಬಭೌ ತದ್ರಣಸ್ಥಾನಂ ಧಮ್ಯಮಾನೈರಿವಾಚಲೈಃ।।

ಕೆಲವು ಆನೆಗಳು ಅಲ್ಲಿ ಪ್ರಾಸಗಳು ಆಳವಾಗಿ ನೆಟ್ಟಿರುವುದರಿಂದ ವೇದನೆಯನ್ನು ತಾಳಲಾರದೇ ಸೊಂಡಿಲುಗಳ ಮೂಲಕ ಘೀಳಿಡುತ್ತಿದ್ದವು ಮತ್ತು ಸೊಂಡಿಲಿನ ಹೊಳ್ಳೆಗಳಿಂದ ಹೊರಬರುತ್ತಿದ್ದ ನೀರಿನ ತುಂತುರುಗಳಿಂದ ಆ ರಣಭೂಮಿಯು ನೀರನ್ನು ಸ್ರವಿಸುತ್ತಿರುವ ಪರ್ವತಗಳಿಂದ ಕೂಡಿದೆಯೋ ಎಂದು ತೋರಿತು.

06092067a ನಾನಾರಾಗೈಃ ಕಂಬಲೈಶ್ಚ ಪರಿಸ್ತೋಮೈಶ್ಚ ದಂತಿನಾಂ।
06092067c ವೈಡೂರ್ಯಮಣಿದಂಡೈಶ್ಚ ಪತಿತೈರಂಕುಶೈಃ ಶುಭೈಃ।।
06092068a ಘಂಟಾಭಿಶ್ಚ ಗಜೇಂದ್ರಾಣಾಂ ಪತಿತಾಭಿಃ ಸಮಂತತಃ।
06092068c ವಿಘಾಟಿತವಿಚಿತ್ರಾಭಿಃ ಕುಥಾಭೀ ರಾಂಕವೈಸ್ತಥಾ।।
06092069a ಗ್ರೈವೇಯೈಶ್ಚಿತ್ರರೂಪೈಶ್ಚ ರುಕ್ಮಕಕ್ಷ್ಯಾಭಿರೇವ ಚ।
06092069c ಯಂತ್ರೈಶ್ಚ ಬಹುಧಾ ಚಿನ್ನೈಸ್ತೋಮರೈಶ್ಚ ಸಕಂಪನೈಃ।।
06092070a ಅಶ್ವಾನಾಂ ರೇಣುಕಪಿಲೈ ರುಕ್ಮಚ್ಛನ್ನೈರುರಶ್ಚದೈಃ।
06092070c ಸಾದಿನಾಂ ಚ ಭುಜೈಶ್ಚಿನ್ನೈಃ ಪತಿತೈಃ ಸಾಂಗದೈಸ್ತಥಾ।।
06092071a ಪ್ರಾಸೈಶ್ಚ ವಿಮಲೈಸ್ತೀಕ್ಷ್ಣೈರ್ವಿಮಲಾಭಿಸ್ತಥರ್ಷ್ಟಿಭಿಃ।
06092071c ಉಷ್ಣೀಷೈಶ್ಚ ತಥಾ ಚಿನ್ನೈಃ ಪ್ರವಿದ್ಧೈಶ್ಚ ತತಸ್ತತಃ।।
06092072a ವಿಚಿತ್ರೈರರ್ಧಚಂದ್ರೈಶ್ಚ ಜಾತರೂಪಪರಿಷ್ಕೃತೈಃ।
06092072c ಅಶ್ವಾಸ್ತರಪರಿಸ್ತೋಮೈ ರಾಂಕವೈರ್ಮೃದಿತೈಸ್ತಥಾ।।
06092073a ನರೇಂದ್ರಚೂಡಾಮಣಿಭಿರ್ವಿಚಿತ್ರೈಶ್ಚ ಮಹಾಧನೈಃ।
06092073c ಚತ್ರೈಸ್ತಥಾಪವಿದ್ಧೈಶ್ಚ ಚಾಮರವ್ಯಜನೈರಪಿ।।
06092074a ಪದ್ಮೇಂದುದ್ಯುತಿಭಿಶ್ಚೈವ ವದನೈಶ್ಚಾರುಕುಂಡಲೈಃ।
06092074c ಕ್ಲಪ್ತಶ್ಮಶ್ರುಭಿರತ್ಯರ್ಥಂ ವೀರಾಣಾಂ ಸಮಲಂಕೃತೈಃ।।
06092075a ಅಪವಿದ್ಧೈರ್ಮಹಾರಾಜ ಸುವರ್ಣೋಜ್ಜ್ವಲಕುಂಡಲೈಃ।
06092075c ಗ್ರಹನಕ್ಷತ್ರಶಬಲಾ ದ್ಯೌರಿವಾಸೀದ್ವಸುಂಧರಾ।।

ಮಹಾರಾಜ! ಆನೆಗಳಿಗೆ ಹೊದಿಸಿದ್ದ ನಾನಾಬಣ್ಣದ ಕಂಬಳಿಗಳಿಂದಲೂ, ಕೆಳಗೆ ಬಿದ್ದ ವೈಡೂರ್ಯಮಣಿದಂಡಗಳನ್ನು ಹೊಂದಿರುವ ಸುಂದರ ಅಂಕುಶಗಳಿಂದಲೂ, ಎಲ್ಲಾಕಡೆ ಬಿದ್ದಿರುವ ಗಜೇಂದ್ರಗಳ ಘಂಟೆಗಳಿಂದಲೂ, ಹರಿದುಹೋದ ಬಣ್ಣಬಣ್ಣದ ಕಂಬಳಿಗಳಿಗಳಿಂದಲೂ, ವಿಚಿತ್ರ ಕಂಠಾಭರಣಗಳಿಂದಲೂ, ಸುವರ್ಣಮಯ ಹಗ್ಗಗಳಿಂದಲೂ, ಮುರಿದಿದ್ದ ಅನೇಕ ಯಂತ್ರಗಳಿಂದ, ಸುವರ್ಣಮಯ ತೋಮರಗಳಿಂದಲೂ, ಧೂಳಿನಿಂದ ಮಸುಕಾಗಿದ್ದ ಕುದುರೆಗಳ ಎದೆಗೆ ತೊಡಿಸುವ ಸುವರ್ಣಮಯ ಕವಚಗಳಿಂದಲೂ, ಅಂಗದಗಳೂ ಕೂಡಿ ಕತ್ತರಿಸಲ್ಪಟ್ಟು ಬಿದ್ದಿದ್ದ ಕುದುರೆಸವಾರರ ತೋಳುಗಳಿಂದ, ಹೊಳೆಯುತ್ತಿರುವ ಪಸಗಳಿಂದಲೂ, ತೀಕ್ಷ್ಣವಾಗಿ ಮಿಂಚುತ್ತಿದ್ದ ಅರ್ಷ್ಟಿಗಳಿಂದಲೂ, ಅಲ್ಲಲ್ಲಿ ಬಿದಿದ್ದ ಶಿರಸ್ತ್ರಾಣಗಳಿಂದಲೂ, ಬಂಗಾರದಿಂದ ಮಾಡಲ್ಪಟ್ಟ ವಿಚಿತ್ರ ಅರ್ಧಚಂದ್ರದ ಬಾಣಗಳಿಂದಲೂ, ಕುದುರೆಯ ಮೇಲೆ ಹಾಕುವ ಜೀನು ಮೊದಲಾದ ಹೊದಿಕೆಗಳಿಂದಲೂ, ನರೇಂದ್ರರ ಬೆಲೆಬಾಳುವ ಬಣ್ಣಬಣ್ಣದ ಚೂಡಾಮಣಿಗಳಿಂದಲೂ, ಬಿದ್ದಿದ್ದ ಚತ್ರ-ಚಾಮರ-ವ್ಯಜನಗಳಿಂದಲೂ, ಸುಂದರ ಕುಂಡಲಗಳಿಂದ ಪದ್ಮೇಂದುವಂತೆ ಹೊಳೆಯುತ್ತಿರುವ ವದನಗಳಿಂದ, ವೀರಯೋಧರ ಕಿವಿಗಳಿಂದ ಕಳಚಿ ಬಿದ್ದಿದ್ದ ಸುವರ್ಣದಿಂದ ಪ್ರಜ್ವಲಿಸುತ್ತಿದ್ದ ಕರ್ಣಕುಂಡಲಗಳಿಂದಲೂ ಅಚ್ಛಾದಿತವಾದ ಆ ರಣಭೂಮಿಯು ಗ್ರಹ-ನಕ್ಷತ್ರಗಳಿಂದ ಅಚ್ಛಾದಿತವಾದ ಆಕಾಶದಂತೆ ಕಾಣುತ್ತಿತ್ತು.

06092076a ಏವಮೇತೇ ಮಹಾಸೇನೇ ಮೃದಿತೇ ತತ್ರ ಭಾರತ।
06092076c ಪರಸ್ಪರಂ ಸಮಾಸಾದ್ಯ ತವ ತೇಷಾಂ ಚ ಸಮ್ಯುಗೇ।।

ಭಾರತ! ಈ ರೀತಿಯಲ್ಲಿ ಅಲ್ಲಿ ನಿನ್ನ ಮತ್ತು ಅವರ ಮಹಾಸೇನೆಯು ಪರಸ್ಪರರನ್ನು ಎದುರಿಸಿ ವಿನಾಶಗೊಂಡಿತು.

06092077a ತೇಷು ಶ್ರಾಂತೇಷು ಭಗ್ನೇಷು ಮೃದಿತೇಷು ಚ ಭಾರತ।
06092077c ರಾತ್ರಿಃ ಸಮಭವದ್ಘೋರಾ ನಾಪಶ್ಯಾಮ ತತೋ ರಣಂ।।

ಭಾರತ! ಅವರು ಆಯಾಸಗೊಂಡಿರಲು, ಭಗ್ನಗೊಂಡಿರಲು, ಮರ್ದಿತರಾಗಿರಲು ಘೋರ ರಾತ್ರಿಯಾಯಿತು ಮತ್ತು ರಣದಲ್ಲಿ ಕಾಣದಂತಾದೆವು.

06092078a ತತೋಽವಹಾರಂ ಸೈನ್ಯಾನಾಂ ಪ್ರಚಕ್ರುಃ ಕುರುಪಾಂಡವಾಃ।
06092078c ಘೋರೇ ನಿಶಾಮುಖೇ ರೌದ್ರೇ ವರ್ತಮಾನೇ ಸುದಾರುಣೇ।।

ಆಗ ಆ ಘೋರ ನಿಶಾಮುಖದಲ್ಲಿ ರೌದ್ರವಾಗಿ ಸುದಾರುಣವಾಗಿ ನಡೆಯುತ್ತಿದ್ದ ಯುದ್ಧದಿಂದ ಕುರುಪಾಂಡವರು ಸೈನ್ಯಗಳನ್ನು ಹಿಂದೆ ತೆಗೆದುಕೊಂಡರು.

06092079a ಅವಹಾರಂ ತತಃ ಕೃತ್ವಾ ಸಹಿತಾಃ ಕುರುಪಾಂಡವಾಃ।
06092079c ನ್ಯವಿಶಂತ ಯಥಾಕಾಲಂ ಗತ್ವಾ ಸ್ವಶಿಬಿರಂ ತದಾ।।

ಕುರುಪಾಂಡವರು ಒಟ್ಟಿಗೇ ಹಿಂದೆಸರಿದು ತಮ್ಮ ತಮ್ಮ ಶಿಬಿರಗಳಿಗೆ ತೆರಳಿ ಕಾಲಾವಕಾಶವಿದ್ದಂತೆ ವಿಶ್ರಮಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಷ್ಟಮದಿವಸಯುದ್ಧಾವಹಾರೇ ದ್ವಿನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಷ್ಟಮದಿವಸಯುದ್ಧಾವಹಾರ ಎನ್ನುವ ತೊಂಭತ್ತೆರಡನೇ ಅಧ್ಯಾಯವು.