091 ಭಗದತ್ತಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 91

ಸಾರ

ಘಟೋಟ್ಕಚನಿಂದ ಪರಾಜಿತನಾದ ದುರ್ಯೋಧನ ಮತ್ತು ಭೀಷ್ಮರ ಸಂವಾದ (1-15). ಭೀಷ್ಮನು ಘಟೋತ್ಕಚನೊಡನೆ ಯುದ್ಧಮಾಡಲು ಭಗದತ್ತನನ್ನು ಕಳುಹಿಸಿದುದು (16-20). ಭೀಮ-ಘಟೋತ್ಕಚರೊಡನೆ ಭಗದತ್ತನ ಯುದ್ಧ (21-81).

06091001 ಸಂಜಯ ಉವಾಚ।
06091001a ತಸ್ಮಿನ್ಮಹತಿ ಸಂಕ್ರಂದೇ ರಾಜಾ ದುರ್ಯೋಧನಸ್ತದಾ।
06091001c ಗಾಂಗೇಯಮುಪಸಂಗಮ್ಯ ವಿನಯೇನಾಭಿವಾದ್ಯ ಚ।।
06091002a ತಸ್ಯ ಸರ್ವಂ ಯಥಾವೃತ್ತಮಾಖ್ಯಾತುಮುಪಚಕ್ರಮೇ।
06091002c ಘಟೋತ್ಕಚಸ್ಯ ವಿಜಯಮಾತ್ಮನಶ್ಚ ಪರಾಜಯಂ।।

ಸಂಜಯನು ಹೇಳಿದನು: “ಆ ಮಹಾ ಸಂಕ್ರಂದಲ್ಲಿ ರಾಜಾ ದುರ್ಯೋಧನನು ಗಾಂಗೇಯನ ಬಳಿಸಾರಿ, ವಿನಯದಿಂದ ನಮಸ್ಕರಿಸಿ ಅವನಿಗೆ ಘಟೋತ್ಕಚನ ವಿಜಯವನ್ನೂ ತನ್ನವರ ಪರಾಜಯವೆಲ್ಲವನ್ನೂ ನಡೆದಂತೆ ಹೇಳಲು ಪ್ರಾರಂಭಿಸಿದನು.

06091003a ಕಥಯಾಮಾಸ ದುರ್ಧರ್ಷೋ ವಿನಿಃಶ್ವಸ್ಯ ಪುನಃ ಪುನಃ।
06091003c ಅಬ್ರವೀಚ್ಚ ತದಾ ರಾಜನ್ಭೀಷ್ಮಂ ಕುರುಪಿತಾಮಹಂ।।

ರಾಜನ್! ಆ ದುರ್ಧರ್ಷನು ಪುನಃ ಪುನಃ ನಿಟ್ಟುಸಿರು ಬಿಡುತ್ತಾ ವರದಿಮಾಡಿದ ನಂತರ ಕುರುಪಿತಾಮಹ ಭೀಷ್ಮನಿಗೆ ಹೇಳಿದನು:

06091004a ಭವಂತಂ ಸಮುಪಾಶ್ರಿತ್ಯ ವಾಸುದೇವಂ ಯಥಾ ಪರೈಃ।
06091004c ಪಾಂಡವೈರ್ವಿಗ್ರಹೋ ಘೋರಃ ಸಮಾರಬ್ಧೋ ಮಯಾ ಪ್ರಭೋ।।

“ಪ್ರಭು! ಶತ್ರುಗಳು ವಾಸುದೇವನನ್ನು ಹೇಗೋ ಹಾಗೆ ನಾನು ನಿನ್ನನ್ನು ಆಶ್ರಯಿಸಿ ಪಾಂಡವರೊಂದಿಗೆ ಈ ಘೋರ ಯುದ್ಧವನ್ನು ಕೈಗೊಂಡೆನು.

06091005a ಏಕಾದಶ ಸಮಾಖ್ಯಾತಾ ಅಕ್ಷೌಹಿಣ್ಯಶ್ಚ ಯಾ ಮಮ।
06091005c ನಿದೇಶೇ ತವ ತಿಷ್ಠಂತಿ ಮಯಾ ಸಾರ್ಧಂ ಪರಂತಪ।।

ಪರಂತಪ! ನನಗಾಗಿ ಹನ್ನೊಂದು ಅಕ್ಷೌಹಿಣಿ ಸೇನೆಗಳು ಸೇರಿ ನಿನ್ನ ನಿರ್ದೇಶನಕ್ಕೆ ಕಾದು ನಿಂತಿವೆ.

06091006a ಸೋಽಹಂ ಭರತಶಾರ್ದೂಲ ಭೀಮಸೇನಪುರೋಗಮೈಃ।
06091006c ಘಟೋತ್ಕಚಂ ಸಮಾಶ್ರಿತ್ಯ ಪಾಂಡವೈರ್ಯುಧಿ ನಿರ್ಜಿತಃ।।

ಭರತಶಾರ್ದೂಲ! ಆದರೆ ಘಟೋತ್ಕಚನನ್ನು ಆಶ್ರಯಿಸಿ ಭೀಮಸೇನನೇ ಮೊದಲಾದ ಪಾಂಡವರು ಯುದ್ಧದಲ್ಲಿ ನನ್ನನ್ನು ಸೋಲಿಸಿದರು.

06091007a ತನ್ಮೇ ದಹತಿ ಗಾತ್ರಾಣಿ ಶುಷ್ಕವೃಕ್ಷಮಿವಾನಲಃ।
06091007c ತದಿಚ್ಛಾಮಿ ಮಹಾಭಾಗ ತ್ವತ್ಪ್ರಸಾದಾತ್ಪರಂತಪ।।
06091008a ರಾಕ್ಷಸಾಪಸದಂ ಹಂತುಂ ಸ್ವಯಮೇವ ಪಿತಾಮಹ।
06091008c ತ್ವಾಂ ಸಮಾಶ್ರಿತ್ಯ ದುರ್ಧರ್ಷಂ ತನ್ಮೇ ಕರ್ತುಂ ತ್ವಮರ್ಹಸಿ।।

ಅದು ನನ್ನ ದೇಹವನ್ನು ಒಣಗಿದ ಮರವನ್ನು ಬೆಂಕಿಯು ಸುಡುವಂತೆ ಸುಡುತ್ತಿದೆ. ಮಹಾಭಾಗ! ಪರಂತಪ! ಆದುದರಿಂದ ನಿನ್ನ ಪ್ರಸಾದದಿಂದ ಆಪತ್ತನ್ನು ತರುತ್ತಿರುವ ಆ ರಾಕ್ಷಸನನ್ನು ಸ್ವಯಂ ನಾನೇ ಕೊಲ್ಲಲು ಬಯಸುತ್ತೇನೆ. ನಿನ್ನನ್ನು ಆಶ್ರಯಿಸಿದ ನನಗೆ ಆ ದುರ್ಧರ್ಷವಾದುದನ್ನು ಮಾಡಲು ಬಿಡಬೇಕು.”

06091009a ಏತಚ್ಚ್ರುತ್ವಾ ತು ವಚನಂ ರಾಜ್ಞೋ ಭರತಸತ್ತಮ।
06091009c ದುರ್ಯೋಧನಮಿದಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್।।

ಭರತಸತ್ತಮ! ರಾಜನ ಆ ಮಾತನ್ನು ಕೇಳಿ ಭೀಷ್ಮ ಶಾಂತನವನು ದುರ್ಯೋಧನನಿಗೆ ಈ ಮಾತನ್ನಾಡಿದನು:

06091010a ಶೃಣು ರಾಜನ್ಮಮ ವಚೋ ಯತ್ತ್ವಾ ವಕ್ಷ್ಯಾಮಿ ಕೌರವ।
06091010c ಯಥಾ ತ್ವಯಾ ಮಹಾರಾಜ ವರ್ತಿತವ್ಯಂ ಪರಂತಪ।।

“ರಾಜನ್! ಕೌರವ! ಪರಂತಪ! ನಾನು ಏನು ಹೇಳುತ್ತೇನೋ ಅದನ್ನು ಕೇಳು. ಮಹಾರಾಜ! ಅದರಂತೆಯೇ ನೀನು ನಡೆದುಕೊಳ್ಳಬೇಕು.

06091011a ಆತ್ಮಾ ರಕ್ಷ್ಯೋ ರಣೇ ತಾತ ಸರ್ವಾವಸ್ಥಾಸ್ವರಿಂದಮ।
06091011c ಧರ್ಮರಾಜೇನ ಸಂಗ್ರಾಮಸ್ತ್ವಯಾ ಕಾರ್ಯಃ ಸದಾನಘ।।
06091012a ಅರ್ಜುನೇನ ಯಮಾಭ್ಯಾಂ ವಾ ಭೀಮಸೇನೇನ ವಾ ಪುನಃ।
06091012c ರಾಜಧರ್ಮಂ ಪುರಸ್ಕೃತ್ಯ ರಾಜಾ ರಾಜಾನಂ ಋಚ್ಛತಿ।।

ಮಗೂ! ಅರಿಂದಮ! ಅನಘ! ಸರ್ವಾವಸ್ಥೆಯಲ್ಲಿ ನಿನ್ನನ್ನು ನೀನು ಸದಾ ರಕ್ಷಿಸಿಕೊಳ್ಳಬೇಕು. ಸಂಗ್ರಾಮದಲ್ಲಿ ಸದಾ ಧರ್ಮರಾಜನೊಂದಿಗೆ ಅಥವಾ ಅರ್ಜುನ, ಯಮಳರು ಅಥವಾ ಪುನಃ ಭೀಮಸೇನನೊಂದಿಗೆ ಯುದ್ಧಮಾಡುವುದು ನಿನ್ನ ಕಾರ್ಯ. ರಾಜಧರ್ಮವನ್ನು ಗೌರವಿಸಿ ರಾಜನು ರಾಜನೊಂದಿಗೆ ಯುದ್ಧಮಾಡುತ್ತಾನೆ.

06091013a ಅಹಂ ದ್ರೋಣಃ ಕೃಪೋ ದ್ರೌಣಿಃ ಕೃತವರ್ಮಾ ಚ ಸಾತ್ವತಃ।
06091013c ಶಲ್ಯಶ್ಚ ಸೌಮದತ್ತಿಶ್ಚ ವಿಕರ್ಣಶ್ಚ ಮಹಾರಥಃ।।
06091014a ತವ ಚ ಭ್ರಾತರಃ ಶೂರಾ ದುಃಶಾಸನಪುರೋಗಮಾಃ।
06091014c ತ್ವದರ್ಥಂ ಪ್ರತಿಯೋತ್ಸ್ಯಾಮೋ ರಾಕ್ಷಸಂ ತಂ ಮಹಾಬಲಂ।।

ನಿನಗೋಸ್ಕರವಾಗಿ ಆ ಮಹಾಬಲ ರಾಕ್ಷಸನೊಂದಿಗೆ ನಾನು, ದ್ರೋಣ, ಕೃಪ, ದ್ರೌಣಿ, ಸಾತ್ವತ ಕೃತವರ್ಮ, ಶಲ್ಯ, ಸೌಮದತ್ತಿ, ಮಹಾರಥ ವಿಕರ್ಣ, ಮತ್ತು ದುಃಶಾಸನನೇ ಮೊದಲಾದ ನಿನ್ನ ಭ್ರಾತರರು ಎದುರಿಸಿ ಯುದ್ಧಮಾಡುತ್ತೇವೆ.

06091015a ತಸ್ಮಿನ್ರೌದ್ರೇ ರಾಕ್ಷಸೇಂದ್ರೇ ಯದಿ ತೇ ಹೃಚ್ಛಯೋ ಮಹಾನ್।
06091015c ಅಯಂ ವಾ ಗಚ್ಛತು ರಣೇ ತಸ್ಯ ಯುದ್ಧಾಯ ದುರ್ಮತೇಃ।
06091015e ಭಗದತ್ತೋ ಮಹೀಪಾಲಃ ಪುರಂದರಸಮೋ ಯುಧಿ।।

ಆ ರೌದ್ರ ರಾಕ್ಷಸೇಂದ್ರನ ಮೇಲೆ ಹೆಚ್ಚಿನ ಕೋಪವಿದ್ದರೆ, ಆ ದುರ್ಮತಿಯೊಂದಿಗೆ ಯುದ್ಧಮಾಡಲು ಯುದ್ಧದಲ್ಲಿ ಪುರಂದರನ ಸಮನಾದ ಈ ಮಹೀಪಾಲ ಭಗದತ್ತನಾದರೂ ಹೋಗಲಿ.”

06091016a ಏತಾವದುಕ್ತ್ವಾ ರಾಜಾನಂ ಭಗದತ್ತಮಥಾಬ್ರವೀತ್।
06091016c ಸಮಕ್ಷಂ ಪಾರ್ಥಿವೇಂದ್ರಸ್ಯ ವಾಕ್ಯಂ ವಾಕ್ಯವಿಶಾರದಃ।।

ರಾಜನಿಗೆ ಹೀಗೆ ಹೇಳಿ, ಪಾರ್ಥಿವೇಂದ್ರನ ಸಮಕ್ಷಮದಲ್ಲಿಯೇ ಆ ವಾಕ್ಯವಿಶಾರದನು ಭಗದತ್ತನಿಗೆ ಈ ಮಾತನ್ನಾಡಿದನು:

06091017a ಗಚ್ಛ ಶೀಘ್ರಂ ಮಹಾರಾಜ ಹೈಡಿಂಬಂ ಯುದ್ಧದುರ್ಮದಂ।
06091017c ವಾರಯಸ್ವ ರಣೇ ಯತ್ತೋ ಮಿಷತಾಂ ಸರ್ವಧನ್ವಿನಾಂ।
06091017e ರಾಕ್ಷಸಂ ಕ್ರೂರಕರ್ಮಾಣಂ ಯಥೇಂದ್ರಸ್ತಾರಕಂ ಪುರಾ।।

“ಮಹಾರಾಜ! ಶೀಘ್ರದಲ್ಲಿಯೇ ಹೋಗು! ಯುದ್ಧ ದುರ್ಮದ ಹೈಡಿಂಬನನ್ನು ರಣದಲ್ಲಿ ಸರ್ವಧನ್ವಿಗಳೂ ನೋಡುತ್ತಿರಲು, ಹಿಂದೆ ಇಂದ್ರನು ಕ್ರೂರಕರ್ಮಿ ರಾಕ್ಷಸ ತಾರಕನನ್ನು ಹೇಗೋ ಹಾಗೆ ತಡೆದು ನಿಲ್ಲಿಸು.

06091018a ತವ ದಿವ್ಯಾನಿ ಚಾಸ್ತ್ರಾಣಿ ವಿಕ್ರಮಶ್ಚ ಪರಂತಪ।
06091018c ಸಮಾಗಮಶ್ಚ ಬಹುಭಿಃ ಪುರಾಭೂದಸುರೈಃ ಸಹ।।

ಪರಂತಪ! ನಿನ್ನಲ್ಲಿ ದಿವ್ಯಾಸ್ತ್ರಗಳಿವೆ. ವಿಕ್ರಮವಿದೆ. ಈ ಮೊದಲೇ ನೀನು ಅನೇಕ ಅಸುರರೊಂದಿಗೆ ಯುದ್ಧಮಾಡಿರುವೆ.

06091019a ತ್ವಂ ತಸ್ಯ ರಾಜಶಾರ್ದೂಲ ಪ್ರತಿಯೋದ್ಧಾ ಮಹಾಹವೇ।
06091019c ಸ್ವಬಲೇನ ವೃತೋ ರಾಜನ್ಜಹಿ ರಾಕ್ಷಸಪುಂಗವಂ।।

ರಾಜಶಾರ್ದೂಲ! ಮಹಾಹವದಲ್ಲಿ ನೀನು ಅವನೊಂದಿಗೆ ಪ್ರತಿಯುದ್ಧಮಾಡಬಲ್ಲೆ. ರಾಜನ್! ಸ್ವಬಲದಿಂದ ಪರಿವೃತನಾಗಿ ರಾಕ್ಷಸಪುಂಗವನನ್ನು ಸಂಹರಿಸು!”

06091020a ಏತಚ್ಚ್ರುತ್ವಾ ತು ವಚನಂ ಭೀಷ್ಮಸ್ಯ ಪೃತನಾಪತೇಃ।
06091020c ಪ್ರಯಯೌ ಸಿಂಹನಾದೇನ ಪರಾನಭಿಮುಖೋ ದ್ರುತಂ।।

ಸೇನಾಪತಿ ಭೀಷ್ಮನ ಈ ಮಾತನ್ನು ಕೇಳಿ ಅವನು ಸಿಂಹನಾದ ಗೈಯುತ್ತಾ ಶೀಘ್ರವಾಗಿ ಶತ್ರುಗಳನ್ನು ಎದುರಿಸಲು ಹೊರಟನು.

06091021a ತಮಾದ್ರವಂತಂ ಸಂಪ್ರೇಕ್ಷ್ಯ ಗರ್ಜಂತಮಿವ ತೋಯದಂ।
06091021c ಅಭ್ಯವರ್ತಂತ ಸಂಕ್ರುದ್ಧಾಃ ಪಾಂಡವಾನಾಂ ಮಹಾರಥಾಃ।।

ಮಳೆಗಾಲದ ಮೋಡದಂತೆ ಗರ್ಜಿಸುತ್ತಾ ಬರುತ್ತಿದ್ದ ಅವನನ್ನು ನೋಡಿ ಸಂಕ್ರುದ್ಧರಾದ ಮಹಾರಥ ಪಾಂಡವರು ಎದುರಿಸಿದರು.

06091022a ಭಿಮಸೇನೋಽಭಿಮನ್ಯುಶ್ಚ ರಾಕ್ಷಸಶ್ಚ ಘಟೋತ್ಕಚಃ।
06091022c ದ್ರೌಪದೇಯಾಃ ಸತ್ಯಧೃತಿಃ ಕ್ಷತ್ರದೇವಶ್ಚ ಮಾರಿಷ।।
06091023a ಚೇದಿಪೋ ವಸುದಾನಶ್ಚ ದಶಾರ್ಣಾಧಿಪತಿಸ್ತಥಾ।
06091023c ಸುಪ್ರತೀಕೇನ ತಾಂಶ್ಚಾಪಿ ಭಗದತ್ತೋಽಪ್ಯುಪಾದ್ರವತ್।।

ಸುಪ್ರತೀಕದ ಮೇಲೆ ಬರುತ್ತಿದ್ದ ಭಗದತ್ತನನ್ನು ಭೀಮಸೇನ, ಅಭಿಮನ್ಯು, ರಾಕ್ಷಸ ಘಟೋತ್ಕಚ, ದ್ರೌಪದೇಯರು, ಸತ್ಯಧೃತಿ, ಕ್ಷತ್ರದೇವ, ಚೇದಿಪತಿ, ವಸುದಾನ ಮತ್ತು ದಶಾರ್ಣಾಧಿಪತಿ ಇವರು ಎದುರಿಸಿ ಯುದ್ಧ ಮಾಡಿದರು.

06091024a ತತಃ ಸಮಭವದ್ಯುದ್ಧಂ ಘೋರರೂಪಂ ಭಯಾನಕಂ।
06091024c ಪಾಂಡೂನಾಂ ಭಗದತ್ತೇನ ಯಮರಾಷ್ಟ್ರವಿವರ್ಧನಂ।।

ಆಗ ಪಾಂಡವರು ಮತ್ತು ಭಗದತ್ತನ ನಡುವೆ ಯಮರಾಷ್ಟ್ರವನ್ನು ಹೆಚ್ಚಿಸುವ ಘೋರರೂಪದ ಭಯಾನಕ ಯುದ್ಧವು ನಡೆಯಿತು.

06091025a ಪ್ರಮುಕ್ತಾ ರಥಿಭಿರ್ಬಾಣಾ ಭೀಮವೇಗಾಃ ಸುತೇಜನಾಃ।
06091025c ತೇ ನಿಪೇತುರ್ಮಹಾರಾಜ ನಾಗೇಷು ಚ ರಥೇಷು ಚ।।

ಮಹಾರಾಜ! ರಥಿಗಳು ಪ್ರಯೋಗಿಸಿದ ಭೀಮವೇಗದ ಸುತೇಜಸ ಬಾಣಗಳು ಆನೆಗಳ ಮೇಲೂ ರಥಗಳ ಮೇಲೂ ಬಿದ್ದವು.

06091026a ಪ್ರಭಿನ್ನಾಶ್ಚ ಮಹಾನಾಗಾ ವಿನೀತಾ ಹಸ್ತಿಸಾದಿಭಿಃ।
06091026c ಪರಸ್ಪರಂ ಸಮಾಸಾದ್ಯ ಸನ್ನಿಪೇತುರಭೀತವತ್।।

ಮಾವುತರಿಂದ ನಿರ್ದೇಶಿಸಲ್ಪಟ್ಟ ಮದಿಸಿದ ಮಹಾಗಜಗಳು ಪರಸ್ಪರರೊಡನೆ ನಿರ್ಭೀತಿಯಿಂದ ಕಾದಾಡಿದವು.

06091027a ಮದಾಂಧಾ ರೋಷಸಂರಬ್ಧಾ ವಿಷಾಣಾಗ್ರೈರ್ಮಹಾಹವೇ।
06091027c ಬಿಭಿದುರ್ದಂತಮುಸಲೈಃ ಸಮಾಸಾದ್ಯ ಪರಸ್ಪರಂ।।

ಮದಾಂಧರಾಗಿ, ರೋಷಸಂರಬ್ಧರಾಗಿ ಆ ಮಹಾಹವದಲ್ಲಿ ಒನಕೆಗಳಂತಿದ್ದ ಕೋರೆದಾಡೆಗಳಿಂದ ಪರಸ್ಪರರನ್ನು ಇರಿದು ಸೀಳುತ್ತಿದ್ದವು.

06091028a ಹಯಾಶ್ಚ ಚಾಮರಾಪೀಡಾಃ ಪ್ರಾಸಪಾಣಿಭಿರಾಸ್ಥಿತಾಃ।
06091028c ಚೋದಿತಾಃ ಸಾದಿಭಿಃ ಕ್ಷಿಪ್ರಂ ನಿಪೇತುರಿತರೇತರಂ।।

ಚಾಮರಗಳನ್ನು ಕಟ್ಟಿದ್ದ, ಮೇಲೆ ಪ್ರಾಸಗಳನ್ನು ಹಿಡಿದು ಕುಳಿತಿದ್ದ ಸವಾರರಿಂದ ಪ್ರಚೋದಿತರಾಗಿ ಕುದುರೆಗಳು ಕ್ಷಿಪ್ರವಾಗಿ ಇತರ ಕುದುರೆಗಳ ಮೇಳೆ ಬೀಳುತ್ತಿದ್ದವು.

06091029a ಪಾದಾತಾಶ್ಚ ಪದಾತ್ಯೋಘೈಸ್ತಾಡಿತಾಃ ಶಕ್ತಿತೋಮರೈಃ।
06091029c ನ್ಯಪತಂತ ತದಾ ಭೂಮೌ ಶತಶೋಽಥ ಸಹಸ್ರಶಃ।।

ಪದಾತಿಗಳು ಶತ್ರು ಪದಾತಿಗಳ ಶಕ್ತಿ-ತೋಮರಗಳಿಂದ ಹೊಡೆಯಲ್ಪಟ್ಟು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಭೂಮಿಯಮೇಲೆ ಬಿದ್ದರು.

06091030a ರಥಿನಶ್ಚ ತಥಾ ರಾಜನ್ಕರ್ಣಿನಾಲೀಕಸಾಯಕೈಃ।
06091030c ನಿಹತ್ಯ ಸಮರೇ ವೀರಾನ್ಸಿಂಹನಾದಾನ್ವಿನೇದಿರೇ।।

ರಾಜನ್! ಹಾಗೆಯೇ ರಥಿಗಳೂ ಕೂಡ ಕರ್ಣಿ, ನಾಲೀಕ ಮತ್ತು ಸಾಯಕಗಳಿಂದ ಸಮರದಲ್ಲಿ ವೀರರನ್ನು ಸಂಹರಿಸಿ ಸಿಂಹನಾದ ಮಾಡಿ ವಿನೋದಿಸುತ್ತಿದ್ದರು.

06091031a ತಸ್ಮಿಂಸ್ತಥಾ ವರ್ತಮಾನೇ ಸಂಗ್ರಾಮೇ ಲೋಮಹರ್ಷಣೇ।
06091031c ಭಗದತ್ತೋ ಮಹೇಷ್ವಾಸೋ ಭೀಮಸೇನಮಥಾದ್ರವತ್।।

ಹೀಗೆ ಅಲ್ಲಿ ಲೋಮಹರ್ಷಣ ಸಂಗ್ರಾಮವು ನಡೆಯುತ್ತಿರಲು, ಮಹೇಷ್ವಾಸ ಭಗದತ್ತನು ಭೀಮಸೇನನ ಮೇಲೆ ಧಾಳಿಮಾಡಿದನು.

06091032a ಕುಂಜರೇಣ ಪ್ರಭಿನ್ನೇನ ಸಪ್ತಧಾ ಸ್ರವತಾ ಮದಂ।
06091032c ಪರ್ವತೇನ ಯಥಾ ತೋಯಂ ಸ್ರವಮಾಣೇನ ಸರ್ವತಃ।।
06091033a ಕಿರಂ ಶರಸಹಸ್ರಾಣಿ ಸುಪ್ರತೀಕಶಿರೋಗತಃ।
06091033c ಐರಾವತಸ್ಥೋ ಮಘವಾನ್ವಾರಿಧಾರಾ ಇವಾನಘ।।

ಅನಘ! ಎಲ್ಲ ಕಡೆಗಳಿಂದ ನೀರನ್ನು ಸುರಿಸುತ್ತಿರುವ ಪರ್ವತದಂತೆ ಏಳು ಕಡೆಗಳಲ್ಲಿ ಮದೋದಕವನ್ನು ಸುರಿಸುತ್ತಿದ್ದ ಮದಿಸಿದ ಆನೆ ಸುಪ್ರತೀಕನ ಶಿರದ ಮೇಲೆ ಕುಳಿತು ಐರಾವತದ ಮೇಲೆ ಕುಳಿತ ಇಂದ್ರನಂತೆ ಸಹಸ್ರಾರು ಶರಗಳ ಮಳೆಯನ್ನು ಸುರಿಸಿದನು.

06091034a ಸ ಭೀಮಂ ಶರಧಾರಾಭಿಸ್ತಾಡಯಾಮಾಸ ಪಾರ್ಥಿವಃ।
06091034c ಪರ್ವತಂ ವಾರಿಧಾರಾಭಿಃ ಪ್ರಾವೃಷೀವ ಬಲಾಹಕಃ।।

ವರ್ಷ‌ಋತುವಿನಲ್ಲಿ ಮೇಘವು ಪರ್ವತವನ್ನು ಜಲಧಾರೆಗಳಿಂದ ಮುಚ್ಚುವಂತೆ ಆ ಪಾರ್ಥಿವನು ಭೀಮನನ್ನು ಶರಧಾರೆಗಳಿಂದ ಪ್ರಹರಿಸಿದನು.

06091035a ಭೀಮಸೇನಸ್ತು ಸಂಕ್ರುದ್ಧಃ ಪಾದರಕ್ಷಾನ್ಪರಃಶತಾನ್।
06091035c ನಿಜಘಾನ ಮಹೇಷ್ವಾಸಃ ಸಂಕ್ರುದ್ಧಃ ಶರವೃಷ್ಟಿಭಿಃ।।

ಮಹೇಷ್ವಾಸ ಭೀಮಸೇನನಾದರೂ ಸಂಕ್ರುದ್ಧನಾಗಿ ಶರವೃಷ್ಟಿಯಿಂದ ಶತ್ರುಗಳ ನೂರಾರು ಪಾದರಕ್ಷಕರನ್ನು ಸಂಹರಿಸಿದನು.

06091036a ತಾನ್ದೃಷ್ಟ್ವಾ ನಿಹತಾನ್ಕ್ರುದ್ಧೋ ಭಗದತ್ತಃ ಪ್ರತಾಪವಾನ್।
06091036c ಚೋದಯಾಮಾಸ ನಾಗೇಂದ್ರಂ ಭೀಮಸೇನರಥಂ ಪ್ರತಿ।।

ಸಂಹರಿಸುತ್ತಿದ್ದ ಅವನನ್ನು ನೋಡಿ ಪ್ರತಾಪವಾನ್ ಭಗದತ್ತನು ಗಜೇಂದ್ರನನ್ನು ಭೀಮಸೇನನ ಕಡೆ ನಡೆಸಿದನು.

06091037a ಸ ನಾಗಃ ಪ್ರೇಷಿತಸ್ತೇನ ಬಾಣೋ ಜ್ಯಾಚೋದಿತೋ ಯಥಾ।
06091037c ಅಭ್ಯಧಾವತ ವೇಗೇನ ಭೀಮಸೇನಮರಿಂದಮಂ।।

ಶಿಂಜಿನಿಯಿಂದ ಪ್ರಯೋಗಿಸಲ್ಪಟ್ಟ ಬಾಣದಂತೆ ಅವನಿಂದ ನಡೆಸಲ್ಪಟ್ಟ ಆ ಆನೆಯು ವೇಗದಿಂದ ಅರಿಂದಮ ಭೀಮಸೇನನ ಕಡೆ ಓಡಿಬಂದಿತು.

06091038a ತಮಾಪತಂತಂ ಸಂಪ್ರೇಕ್ಷ್ಯ ಪಾಂಡವಾನಾಂ ಮಹಾರಥಾಃ।
06091038c ಅಭ್ಯವರ್ತಂತ ವೇಗೇನ ಭೀಮಸೇನಪುರೋಗಮಾಃ।।
06091039a ಕೇಕಯಾಶ್ಚಾಭಿಮನ್ಯುಶ್ಚ ದ್ರೌಪದೇಯಾಶ್ಚ ಸರ್ವಶಃ।
06091039c ದಶಾರ್ಣಾಧಿಪತಿಃ ಶೂರಃ ಕ್ಷತ್ರದೇವಶ್ಚ ಮಾರಿಷ।
06091039e ಚೇದಿಪಶ್ಚಿತ್ರಕೇತುಶ್ಚ ಸಂಕ್ರುದ್ಧಾಃ ಸರ್ವ ಏವ ತೇ।।

ವೇಗದಿಂದ ಮುಂದುವರೆದು ಬರುತ್ತಿದ್ದ ಅದನ್ನು ನೋಡಿ ಪಾಂಡವ ಮಹಾರಥರು - ಕೇಕಯರು, ಅಭಿಮನ್ಯು, ದ್ರೌಪದೇಯರೆಲ್ಲರು, ದಶಾರ್ಣಾಧಿಪತಿ, ಶೂರ ಕ್ಷತ್ರದೇವ, ಚೇದಿಪತಿ, ಚಿತ್ರಕೇತು ಇವರೆಲ್ಲರೂ ಕ್ರುದ್ಧರಾಗಿ ಭೀಮಸೇನನನ್ನು ಮುಂದಿರಿಸಿಕೊಂಡು ಅದರ ಮೇಲೆ ಆಕ್ರಮಣ ಮಾಡಿದರು.

06091040a ಉತ್ತಮಾಸ್ತ್ರಾಣಿ ದಿವ್ಯಾನಿ ದರ್ಶಯಂತೋ ಮಹಾಬಲಾಃ।
06091040c ತಮೇಕಂ ಕುಂಜರಂ ಕ್ರುದ್ಧಾಃ ಸಮಂತಾತ್ಪರ್ಯವಾರಯನ್।।

ಉತ್ತಮ ದಿವ್ಯಾಸ್ತ್ರಗಳನ್ನು ಪ್ರದರ್ಶಿಸುತ್ತಾ ಕ್ರುದ್ಧರಾದ ಆ ಮಹಾಬಲರು ಅದೇ ಒಂದು ಆನೆಯನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

06091041a ಸ ವಿದ್ಧೋ ಬಹುಭಿರ್ಬಾಣೈರ್ವ್ಯರೋಚತ ಮಹಾದ್ವಿಪಃ।
06091041c ಸಂಜಾತರುಧಿರೋತ್ಪೀಡೋ ಧಾತುಚಿತ್ರ ಇವಾದ್ರಿರಾಟ್।।

ಅನೇಕ ಬಾಣಗಳಿಂದ ಗಾಯಗೊಂಡು ಪೀಡಿತವಾದ ಆ ಮಹಾಗಜವು ಬಣ್ಣ ಬಣ್ಣದ ಧಾತುಗಳನ್ನು ಸುರಿಸುವ ಪರ್ವತದಂತೆ ರಕ್ತವನ್ನು ಸುರಿಸಿತು.

06091042a ದಶಾರ್ಣಾಧಿಪತಿಶ್ಚಾಪಿ ಗಜಂ ಭೂಮಿಧರೋಪಮಂ।
06091042c ಸಮಾಸ್ಥಿತೋಽಭಿದುದ್ರಾವ ಭಗದತ್ತಸ್ಯ ವಾರಣಂ।।

ಆಗ ದಶಾರ್ಣಾಧಿಪತಿಯೂ ಕೂಡ ಪರ್ವತೋಪಮ ಆನೆಯ ಮೇಲೆ ಕುಳಿತು ಭಗದತ್ತನ ಆನೆಯ ಕಡೆ ಧಾವಿಸಿದನು.

06091043a ತಮಾಪತಂತಂ ಸಮರೇ ಗಜಂ ಗಜಪತಿಃ ಸ ಚ।
06091043c ದಧಾರ ಸುಪ್ರತೀಕೋಽಪಿ ವೇಲೇವ ಮಕರಾಲಯಂ।।

ಸಮರದಲ್ಲಿ ಮೇಲೆ ಬೀಳಲು ಬರುತ್ತಿದ್ದ ಆ ಗಜವನ್ನು ಗಜಪತಿ ಸುಪ್ರತೀಕವು ತೀರವು ಸಮುದ್ರವನ್ನು ತಡೆಯುವಂತೆ ತಡೆಯಿತು.

06091044a ವಾರಿತಂ ಪ್ರೇಕ್ಷ್ಯ ನಾಗೇಂದ್ರಂ ದಶಾರ್ಣಸ್ಯ ಮಹಾತ್ಮನಃ।
06091044c ಸಾಧು ಸಾಧ್ವಿತಿ ಸೈನ್ಯಾನಿ ಪಾಂಡವೇಯಾನ್ಯಪೂಜಯನ್।।

ಮಹಾತ್ಮ ದಶಾರ್ಣನ ಗಜೇಂದ್ರನನ್ನು ತಡೆದುದನ್ನು ನೋಡಿ ಸಾಧು ಸಾಧು ಎಂದು ಪಾಂಡವ ಸೈನ್ಯಗಳು ಅದನ್ನು ಗೌರವಿಸಿದರು.

06091045a ತತಃ ಪ್ರಾಗ್ಜ್ಯೋತಿಷಃ ಕ್ರುದ್ಧಸ್ತೋಮರಾನ್ವೈ ಚತುರ್ದಶ।
06091045c ಪ್ರಾಹಿಣೋತ್ತಸ್ಯ ನಾಗಸ್ಯ ಪ್ರಮುಖೇ ನೃಪಸತ್ತಮ।।

ನೃಪಸತ್ತಮ! ಆಗ ಕ್ರುದ್ಧನಾದ ಪ್ರಾಗ್ಜೋತಿಷನು ಮುಂದೆ ನಿಂತಿದ್ದ ಆನೆಯ ಮುಖಕ್ಕೆ ಹದಿನಾಲ್ಕು ತೋಮರಗಳಿಂದ ಹೊಡೆದನು.

06091046a ತಸ್ಯ ವರ್ಮ ಮುಖತ್ರಾಣಂ ಶಾತಕುಂಭಪರಿಷ್ಕೃತಂ।
06091046c ವಿದಾರ್ಯ ಪ್ರಾವಿಶನ್ ಕ್ಷಿಪ್ರಂ ವಲ್ಮೀಕಮಿವ ಪನ್ನಗಾಃ।।

ಹಾವುಗಳು ಹುತ್ತವನ್ನು ಪ್ರವೇಶಿಸುವಂತೆ ಅವನು ಬಿಟ್ಟ ತೋಮರಗಳು ಶ್ರೇಷ್ಠ ಆನೆಯ ಸುವರ್ಣಮಯ ಕವಚವನ್ನು ಭೇದಿಸಿ ಅದರ ದೇಹದ ಒಳಹೊಕ್ಕವು.

06091047a ಸ ಗಾಢವಿದ್ಧೋ ವ್ಯಥಿತೋ ನಾಗೋ ಭರತಸತ್ತಮ।
06091047c ಉಪಾವೃತ್ತಮದಃ ಕ್ಷಿಪ್ರಂ ಸ ನ್ಯವರ್ತತ ವೇಗತಃ।।

ಭರತಸತ್ತಮ! ಆಳವಾಗಿ ಚುಚ್ಚಲ್ಪಟ್ಟು ವ್ಯಥಿತವಾದ ಆ ಆನೆಯು ಬೇಗನೇ ವೇಗವಾಗಿ ಹಿಂದೆ ಓಡಿಹೋಯಿತು.

06091048a ಪ್ರದುದ್ರಾವ ಚ ವೇಗೇನ ಪ್ರಣದನ್ಭೈರವಂ ಸ್ವನಂ।
06091048c ಸ ಮರ್ದಮಾನಃ ಸ್ವಬಲಂ ವಾಯುರ್ವೃಕ್ಷಾನಿವೌಜಸಾ।।

ಭಿರುಗಾಳಿಯು ಮರಗಳನ್ನು ಉರುಳಿಸುವಂತೆ ವೇಗದಿಂದ ಭೈರವವಾದ ಕೂಗನ್ನು ಕೂಗುತ್ತಾ ತನ್ನ ಸೇನೆಯವರನ್ನೇ ತುಳಿದು ಉರುಳಿಸುತ್ತಾ ಓಡಿ ಹೋಯಿತು.

06091049a ತಸ್ಮಿನ್ಪರಾಜಿತೇ ನಾಗೇ ಪಾಂಡವಾನಾಂ ಮಹಾರಥಾಃ।
06091049c ಸಿಂಹನಾದಂ ವಿನದ್ಯೋಚ್ಚೈರ್ಯುದ್ಧಾಯೈವೋಪತಸ್ಥಿರೇ।।

ಆ ಆನೆಯು ಪರಾಜಿತವಾದರೂ ಪಾಂಡವರ ಮಹಾರಥರು ವಿಚಲಿತರಾಗದೇ ಯುದ್ಧದಲ್ಲಿ ನಿರತರಾಗಿದ್ದರು.

06091050a ತತೋ ಭೀಮಂ ಪುರಸ್ಕೃತ್ಯ ಭಗದತ್ತಮುಪಾದ್ರವನ್।
06091050c ಕಿರಂತೋ ವಿವಿಧಾನ್ಬಾಣಾನ್ ಶಸ್ತ್ರಾಣಿ ವಿವಿಧಾನಿ ಚ।।

ಆಗ ಭೀಮನನ್ನು ಮುಂದೆಮಾಡಿಕೊಂಡು ನಾನಾ ವಿಧಧ ಬಾಣಗಳನ್ನೂ ವಿವಿಧ ಶಸ್ತ್ರಗಳನ್ನೂ ಪ್ರಯೋಗಿಸುತ್ತಾ ಭಗದತ್ತನನ್ನು ಮುತ್ತಿದರು.

06091051a ತೇಷಾಮಾಪತತಾಂ ರಾಜನ್ಸಂಕ್ರುದ್ಧಾನಾಮಮರ್ಷಿಣಾಂ।
06091051c ಶ್ರುತ್ವಾ ಸ ನಿನದಂ ಘೋರಮಮರ್ಷಾದ್ಗತಸಾಧ್ವಸಃ।
06091051e ಭಗದತ್ತೋ ಮಹೇಷ್ವಾಸಃ ಸ್ವನಾಗಂ ಪ್ರತ್ಯಚೋದಯತ್।।

ರಾಜನ್! ಮೇಲೆ ಬೀಳುತ್ತಿರುವ ಆ ಸಂಕ್ರುದ್ಧ ಅಮರ್ಷಿಗಳ ಘೋರ ನಿನಾದವನ್ನು ಕೇಳಿ ಭಯವನ್ನಿರಿಯದ ಮಹೇಷ್ವಾಸ ಭಗದತ್ತನು ತನ್ನ ಆನೆಯನ್ನು ಪ್ರಚೋದಿಸಿದನು.

06091052a ಅಂಕುಶಾಂಗುಷ್ಠನುದಿತಃ ಸ ಗಜಪ್ರವರೋ ಯುಧಿ।
06091052c ತಸ್ಮಿನ್ ಕ್ಷಣೇ ಸಮಭವತ್ಸಂವರ್ತಕ ಇವಾನಲಃ।।

ಅಂಕುಶದ ಅಂಗುಷ್ಠದಿಂದ ಒತ್ತಲ್ಪಟ್ಟ ಆ ಗಜಪ್ರವರವು ಯುದ್ಧದಲ್ಲಿ ಆ ಕ್ಷಣದಲ್ಲಿ ಸಂವರ್ತಕ ಅಗ್ನಿಯಂತಾಯಿತು.

06091053a ರಥಸಂಘಾಂಸ್ತಥಾ ನಾಗಾನ್ ಹಯಾಂಶ್ಚ ಸಹ ಸಾದಿಭಿಃ।
06091053c ಪಾದಾತಾಂಶ್ಚ ಸುಸಂಕ್ರುದ್ಧಃ ಶತಶೋಽಥ ಸಹಸ್ರಶಃ।
06091053e ಅಮೃದ್ನಾತ್ಸಮರೇ ರಾಜನ್ಸಂಪ್ರಧಾವಂಸ್ತತಸ್ತತಃ।।

ರಾಜನ್! ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡುತ್ತಾ ಸಂಕ್ರುದ್ಧವಾದ ಆ ಅನೆಯು ನೂರಾರು ಸಹಸ್ರಾರು ರಥಸಂಘಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ, ಪದಾತಿಗಳನ್ನೂ ತುಳಿದು ಹಾಕಿತು.

06091054a ತೇನ ಸಂಲೋಡ್ಯಮಾನಂ ತು ಪಾಂಡೂನಾಂ ತದ್ಬಲಂ ಮಹತ್।
06091054c ಸಂಚುಕೋಚ ಮಹಾರಾಜ ಚರ್ಮೇವಾಗ್ನೌ ಸಮಾಹಿತಂ।।

ಮಹಾರಾಜ! ಅದರಿಂದ ವಿನಾಶಗೊಂಡ ಪಾಂಡವರ ಆ ಮಹಾ ಸೇನೆಯು ಬೆಂಕಿಯಿಂದ ಸುಡಲ್ಪಟ್ಟ ಚರ್ಮದಲ್ಲಿ ಸಂಕೋಚಗೊಂಡಿತು.

06091055a ಭಗ್ನಂ ತು ಸ್ವಬಲಂ ದೃಷ್ಟ್ವಾ ಭಗದತ್ತೇನ ಧೀಮತಾ।
06091055c ಘಟೋತ್ಕಚೋಽಥ ಸಂಕ್ರುದ್ಧೋ ಭಗದತ್ತಮುಪಾದ್ರವತ್।।

ಧೀಮತ ಭಗದತ್ತನಿಂದ ತನ್ನ ಸೇನೆಯು ಭಗ್ನವಾದುದನ್ನು ನೋಡಿ ಸಂಕ್ರುದ್ಧನಾದ ಘಟೋತ್ಕಚನು ಭಗದತ್ತನನ್ನು ಆಕ್ರಮಣಿಸಿದನು.

06091056a ವಿಕಟಃ ಪುರುಷೋ ರಾಜನ್ದೀಪ್ತಾಸ್ಯೋ ದೀಪ್ತಲೋಚನಃ।
06091056c ರೂಪಂ ವಿಭೀಷಣಂ ಕೃತ್ವಾ ರೋಷೇಣ ಪ್ರಜ್ವಲನ್ನಿವ।।
06091057a ಜಗ್ರಾಹ ವಿಪುಲಂ ಶೂಲಂ ಗಿರೀಣಾಮಪಿ ದಾರಣಂ।
06091057c ನಾಗಂ ಜಿಘಾಂಸುಃ ಸಹಸಾ ಚಿಕ್ಷೇಪ ಚ ಮಹಾಬಲಃ।।

ರಾಜನ್! ವಿಕಟ ಪುರುಷನಾಗಿ, ದೀಪ್ತ ಮುಖವುಳ್ಳವನಾಗಿ, ದೀಪ್ತಲೋಚನನಾಗಿ, ರೋಷದಿಂದ ಪ್ರಜ್ವಲಿಸುತ್ತಿರುವಂತಹ ವಿಭೀಷಣ ರೂಪವನ್ನು ತಾಳಿ ಆ ಮಹಾಬಲನು ಗಿರಿಗಳನ್ನೂ ಸೀಳಬಲ್ಲಂತಹ ವಿಪುಲ ಶೂಲವನ್ನು ಹಿಡಿದು ಆ ಆನೆಯನ್ನು ಕೊಲ್ಲಲು ವೇಗವಾಗಿ ಅದರ ಮೇಲೆ ಎಸೆದನು.

06091057e ಸವಿಷ್ಫುಲಿಂಗಜ್ವಾಲಾಭಿಃ ಸಮಂತಾತ್ಪರಿವೇಷ್ಟಿತಂ।।
06091058a ತಮಾಪತಂತಂ ಸಹಸಾ ದೃಷ್ಟ್ವಾ ಜ್ವಾಲಾಕುಲಂ ರಣೇ।
06091058c ಚಿಕ್ಷೇಪ ರುಚಿರಂ ತೀಕ್ಷ್ಣಮರ್ಧಚಂದ್ರಂ ಸ ಪಾರ್ಥಿವಃ।।
06091058e ಚಿಚ್ಛೇದ ಸುಮಹಚ್ಚೂಲಂ ತೇನ ಬಾಣೇನ ವೇಗವತ್।।

ಎಲ್ಲ ಕಡೆಗಳಿಂದಲೂ ಬೆಂಕಿಯ ಕಿಡಿಗಳಿಂದ ಸುತ್ತುವರೆದು ವೇಗವಾಗಿ ಬೀಳುತ್ತಿದ್ದ ಆ ಜ್ವಾಲಾರಾಶಿಯನ್ನು ರಣದಲ್ಲಿ ನೋಡಿ ಪಾರ್ಥಿವನು ತೀಕ್ಷ್ಣ ಸುಂದರ ಅರ್ಧಚಂದ್ರವನ್ನು ಪ್ರಯೋಗಿಸಿ ವೇಗವಾದ ಬಾಣದಿಂದ ಆ ಮಹಾಶೂಲವನ್ನು ತುಂಡರಿಸಿದನು.

06091059a ನಿಪಪಾತ ದ್ವಿಧಾ ಚಿನ್ನಂ ಶೂಲಂ ಹೇಮಪರಿಷ್ಕೃತಂ।
06091059c ಮಹಾಶನಿರ್ಯಥಾ ಭ್ರಷ್ಟಾ ಶಕ್ರಮುಕ್ತಾ ನಭೋಗತಾ।।

ಆ ಹೇಮಪರಿಷ್ಕೃತ ಶೂಲವು ಎರಡಾಗಿ ಆಕಾಶದಲ್ಲಿ ಶಕ್ರನು ಬಿಟ್ಟ ವಜ್ರವು ವ್ಯರ್ಥವಾಗಿ ಹೋಗುವಂತೆ ಕೆಳಗೆ ಬಿದ್ದಿತು.

06091060a ಶೂಲಂ ನಿಪತಿತಂ ದೃಷ್ಟ್ವಾ ದ್ವಿಧಾ ಕೃತ್ತಂ ಸ ಪಾರ್ಥಿವಃ।
06091060c ರುಕ್ಮದಂಡಾಂ ಮಹಾಶಕ್ತಿಂ ಜಗ್ರಾಹಾಗ್ನಿಶಿಖೋಪಮಾಂ।
06091060e ಚಿಕ್ಷೇಪ ತಾಂ ರಾಕ್ಷಸಸ್ಯ ತಿಷ್ಠ ತಿಷ್ಠೇತಿ ಚಾಬ್ರವೀತ್।।

ಕತ್ತರಿಸಲ್ಪಟ್ಟ ಆ ಶೂಲವು ಎರಡಾಗಿ ಬಿದ್ದುದನ್ನು ನೋಡಿ ಪಾರ್ಥಿವನು ಬಂಗಾರದ ದಂಡವುಳ್ಳ ಅಗ್ನಿಶಿಖೆಯಂತಿರುವ ಮಹಾಶಕ್ತಿಯನ್ನು ಹಿಡಿದು ಅದನ್ನು ರಾಕ್ಷಸನ ಮೇಲೆ ಎಸೆದು “ನಿಲ್ಲು! ನಿಲ್ಲು!” ಎಂದನು.

06091061a ತಾಮಾಪತಂತೀಂ ಸಂಪ್ರೇಕ್ಷ್ಯ ವಿಯತ್ಸ್ಥಾಮಶನೀಮಿವ।
06091061c ಉತ್ಪತ್ಯ ರಾಕ್ಷಸಸ್ತೂರ್ಣಂ ಜಗ್ರಾಹ ಚ ನನಾದ ಚ।।
06091062a ಬಭಂಜ ಚೈನಾಂ ತ್ವರಿತೋ ಜಾನುನ್ಯಾರೋಪ್ಯ ಭಾರತ।
06091062c ಪಶ್ಯತಃ ಪಾರ್ಥಿವೇಂದ್ರಸ್ಯ ತದದ್ಭುತಮಿವಾಭವತ್।।

ವಜ್ರಾಯುಧದಂತೆ ತನ್ನ ಮೇಲೆ ಬೀಳುತ್ತಿರುವ ಅದನ್ನು ನೋಡಿ ರಾಕ್ಷಸನು ತಕ್ಷಣವೇ ಹಾರಿ ಅದನ್ನು ಹಿಡಿದು ನಕ್ಕನು. ಭಾರತ! ಬೇಗನೇ ಅದನ್ನು ತೊಡೆಯಮೇಲಿರಿಸಿ ಒತ್ತಿ ಮುರಿದನು ಕೂಡ. ನೋಡುತ್ತಿದ್ದ ಪಾರ್ಥಿವೇಂದ್ರರಿಗೆ ಅದೊಂದು ಅದ್ಭುತವೆನಿಸಿತು.

06091063a ತದವೇಕ್ಷ್ಯ ಕೃತಂ ಕರ್ಮ ರಾಕ್ಷಸೇನ ಬಲೀಯಸಾ।
06091063c ದಿವಿ ದೇವಾಃ ಸಗಂಧರ್ವಾ ಮುನಯಶ್ಚಾಪಿ ವಿಸ್ಮಿತಾಃ।।

ರಾಕ್ಷಸನು ಆ ಬಲಶಾಲಿ ಕರ್ಮವನ್ನು ಮಾಡಿದುದನ್ನು ನೋಡಿ ದಿವಿಯಲ್ಲಿ ಗಂಧರ್ವರೊಂದಿಗೆ ದೇವತೆಗಳೂ, ಮುನಿಗಳೂ ವಿಸ್ಮಿತರಾದರು.

06091064a ಪಾಂಡವಾಶ್ಚ ಮಹೇಷ್ವಾಸಾ ಭೀಮಸೇನಪುರೋಗಮಾಃ।
06091064c ಸಾಧು ಸಾಧ್ವಿತಿ ನಾದೇನ ಪೃಥಿವೀಮನುನಾದಯನ್।।

ಭೀಮಸೇನನೇ ಮೊದಲಾದ ಪಾಂಡವ ಮಹೇಷ್ವಾಸರು ಸಾಧು ಸಾಧು ಎಂಬ ಕೂಗಿನಿಂದ ಭೂಮಿಯನ್ನೇ ಮೊಳಗಿಸಿದರು.

06091065a ತಂ ತು ಶ್ರುತ್ವಾ ಮಹಾನಾದಂ ಪ್ರಹೃಷ್ಟಾನಾಂ ಮಹಾತ್ಮನಾಂ।
06091065c ನಾಮೃಷ್ಯತ ಮಹೇಷ್ವಾಸೋ ಭಗದತ್ತಃ ಪ್ರತಾಪವಾನ್।।

ಪ್ರಹೃಷ್ಟ ಮಹಾತ್ಮರ ಆ ಮಹಾನಾದವನ್ನು ಕೇಳಿದ ಪ್ರತಾಪವಾನ್ ಮಹೇಷ್ವಾಸ ಭಗದತ್ತನು ಸಹಿಸಲಾರದೇ ಹೋದನು.

06091066a ಸ ವಿಸ್ಫಾರ್ಯ ಮಹಚ್ಚಾಪಂ ಇಂದ್ರಾಶನಿಸಮಸ್ವನಂ।
06091066c ಅಭಿದುದ್ರಾವ ವೇಗೇನ ಪಾಂಡವಾನಾಂ ಮಹಾರಥಾನ್।
06091066e ವಿಸೃಜನ್ವಿಮಲಾಂಸ್ತೀಕ್ಷ್ಣಾನ್ನಾರಾಚಾಂ ಜ್ವಲನಪ್ರಭಾನ್।।

ಇಂದ್ರನ ವಜ್ರಾಯುಧದಂತೆ ಮೊಳಗುತ್ತಿದ್ದ ಮಹಾಚಾಪವನ್ನು ಟೇಂಕರಿಸಿ ಅವನು ವಿಮಲ ತೀಕ್ಷ್ಣ ಜ್ವಲನಪ್ರಭೆಗಳುಳ್ಳ ನಾರಾಚಗಳನ್ನು ಪ್ರಯೋಗಿಸುತ್ತಾ ವೇಗದಿಂದ ಪಾಂಡವ ಮಹಾರಥರ ಮೇಲೆ ಎರಗಿದನು.

06091067a ಭೀಮಮೇಕೇನ ವಿವ್ಯಾಧ ರಾಕ್ಷಸಂ ನವಭಿಃ ಶರೈಃ।
06091067c ಅಭಿಮನ್ಯುಂ ತ್ರಿಭಿಶ್ಚೈವ ಕೇಕಯಾನ್ಪಂಚಭಿಸ್ತಥಾ।।

ಭೀಮನನ್ನು ಒಂದರಿಂದ, ರಾಕ್ಷಸನನ್ನು ಒಂಭತ್ತು ಶರಗಳಿಂದ, ಅಭಿಮನ್ಯುವನ್ನು ಮೂರರಿಂದ ಮತ್ತು ಕೇಕಯರನ್ನು ಐದರಿಂದ ಹೊಡೆದನು.

06091068a ಪೂರ್ಣಾಯತವಿಸೃಷ್ಟೇನ ಸ್ವರ್ಣಪುಂಖೇನ ಪತ್ರಿಣಾ।
06091068c ಬಿಭೇದ ದಕ್ಷಿಣಂ ಬಾಹುಂ ಕ್ಷತ್ರದೇವಸ್ಯ ಚಾಹವೇ।
06091068e ಪಪಾತ ಸಹಸಾ ತಸ್ಯ ಸಶರಂ ಧನುರುತ್ತಮಂ।।

ಶಿಂಜಿನಿಯನ್ನು ಕರ್ಣಪರ್ಯಂತವಾಗಿ ಎಳೆದು ಸ್ವರ್ಣಪುಂಖಗಳಿರುವ ಪತ್ರಿಯಿಂದ ಆಹವದಲ್ಲಿ ಕ್ಷತ್ರದೇವನ ಬಲತೋಳನ್ನು ಕತ್ತರಿಸಿದನು. ಕೂಡಲೇ ಅವನ ಉತ್ತಮ ಧನುವು ಬಾಣದೊಂದಿಗೆ ಕೆಳಗೆ ಬಿದ್ದಿತು.

06091069a ದ್ರೌಪದೇಯಾಂಸ್ತತಃ ಪಂಚ ಪಂಚಭಿಃ ಸಮತಾಡಯತ್।
06091069c ಭೀಮಸೇನಸ್ಯ ಚ ಕ್ರೋಧಾನ್ನಿಜಘಾನ ತುರಂಗಮಾನ್।।

ಅನಂತರ ಐದು ಬಾಣಗಳಿಂದ ಐವರು ದ್ರೌಪದೇಯರನ್ನು ಹೊಡೆದು ಕ್ರೋಧದಿಂದ ಭೀಮಸೇನನ ಕುದುರೆಗಳನ್ನು ಸಂಹರಿಸಿದನು.

06091070a ಧ್ವಜಂ ಕೇಸರಿಣಂ ಚಾಸ್ಯ ಚಿಚ್ಛೇದ ವಿಶಿಖೈಸ್ತ್ರಿಭಿಃ।
06091070c ನಿರ್ಬಿಭೇದ ತ್ರಿಭಿಶ್ಚಾನ್ಯೈಃ ಸಾರಥಿಂ ಚಾಸ್ಯ ಪತ್ರಿಭಿಃ।।

ಅವನ ಕೇಸರಿ ಧ್ವಜವನ್ನು ಮೂರು ವಿಶಿಖಗಳಿಂದ ತುಂಡರಿಸಿದನು ಮತ್ತು ಅನ್ಯ ಮೂರು ಪತ್ರಿಗಳಿಂದ ಅವನ ಸಾರಥಿಯನ್ನು ಹೊಡೆದನು.

06091071a ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್।
06091071c ವಿಶೋಕೋ ಭರತಶ್ರೇಷ್ಠ ಭಗದತ್ತೇನ ಸಂಯುಗೇ।।

ಭರತಶ್ರೇಷ್ಠ! ಭಗದತ್ತನಿಂದ ಸಂಯುಗದಲ್ಲಿ ಗಾಢವಾದ ಪೆಟ್ಟುತಿಂದು ವ್ಯಥಿತನಾದ ವಿಶೋಕನು ರಥದಲ್ಲಿಯೇ ಕುಳಿತುಕೊಂಡನು.

06091072a ತತೋ ಭೀಮೋ ಮಹಾರಾಜ ವಿರಥೋ ರಥಿನಾಂ ವರಃ।
06091072c ಗದಾಂ ಪ್ರಗೃಹ್ಯ ವೇಗೇನ ಪ್ರಚಸ್ಕಂದ ಮಹಾರಥಾತ್।।

ಮಹಾರಾಜ! ಆಗ ರಥಿಗಳಲ್ಲಿ ಶ್ರೇಷ್ಠ ಭೀಮನು ರಥವಿಲ್ಲದವನಾಗಿ ಗದೆಯನ್ನು ಹಿಡಿದು ವೇಗದಿಂದ ಆ ಮಹಾರಥದಿಂದ ಕೆಳಗೆ ಧುಮುಕಿದನು.

06091073a ತಮುದ್ಯತಗದಂ ದೃಷ್ಟ್ವಾ ಸಶೃಂಗಮಿವ ಪರ್ವತಂ।
06091073c ತಾವಕಾನಾಂ ಭಯಂ ಘೋರಂ ಸಮಪದ್ಯತ ಭಾರತ।।

ಭಾರತ! ಶೃಂಗದಿಂದೊಡಗೂಡಿದ ಪರ್ವತದಂತಿರುವ ಅವನು ಧಾವಿಸಿ ಬರುತ್ತಿರುವುದನ್ನು ನೋಡಿ ನಿನ್ನವರಲ್ಲಿ ಘೋರ ಭಯವುಂಟಾಯಿತು.

06091074a ಏತಸ್ಮಿನ್ನೇವ ಕಾಲೇ ತು ಪಾಂಡವಃ ಕೃಷ್ಣಸಾರಥಿಃ।
06091074c ಆಜಗಾಮ ಮಹಾರಾಜ ನಿಘ್ನಂ ಶತ್ರೂನ್ಸಹಸ್ರಶಃ।।
06091075a ಯತ್ರ ತೌ ಪುರುಷವ್ಯಾಘ್ರೌ ಪಿತಾಪುತ್ರೌ ಪರಂತಪೌ।
06091075c ಪ್ರಾಗ್ಜ್ಯೋತಿಷೇಣ ಸಂಸಕ್ತೌ ಭೀಮಸೇನಘಟೋತ್ಕಚೌ।।

ಮಹಾರಾಜ! ಇದೇ ಸಮಯದಲ್ಲಿ ಕೃಷ್ಣಸಾರಥಿ ಪಾಂಡವನು ಸಹಸ್ರಾರು ಶತ್ರುಗಳನ್ನು ಸಂಹರಿಸಿ, ಪ್ರಾಗ್ಜ್ಯೋತಿಷನೊಂದಿಗೆ ಎಲ್ಲಿ ಪುರುಷವ್ಯಾಘ್ರ, ಪರಂತಪ, ತಂದೆ-ಮಗ ಭೀಮಸೇನ-ಘಟೋತ್ಕಚರು ಯುದ್ಧದಲ್ಲಿ ತೊಡಗಿದ್ದರೋ ಅಲ್ಲಿಗೆ ಆಗಮಿಸಿದನು.

06091076a ದೃಷ್ಟ್ವಾ ತು ಪಾಂಡವೋ ರಾಜನ್ಯುಧ್ಯಮಾನಾನ್ಮಹಾರಥಾನ್।
06091076c ತ್ವರಿತೋ ಭರತಶ್ರೇಷ್ಠ ತತ್ರಾಯಾದ್ವಿಕಿರಂ ಶರಾನ್।।

ಭರತಶ್ರೇಷ್ಠ! ರಾಜನ್! ಯುದ್ಧಮಾಡುತ್ತಿರುವ ಆ ಮಹಾರಥರನ್ನು ನೋಡಿ ಪಾಂಡವನು ತ್ವರೆಮಾಡಿ ಅಲ್ಲಿ ಶರಗಳನ್ನು ತೂರಿದನು.

06091077a ತತೋ ದುರ್ಯೋಧನೋ ರಾಜಾ ತ್ವರಮಾಣೋ ಮಹಾರಥಃ।
06091077c ಸೇನಾಮಚೋದಯತ್ ಕ್ಷಿಪ್ರಂ ರಥನಾಗಾಶ್ವಸಂಕುಲಾಂ।।

ಆಗ ಮಹಾರಥ ರಾಜಾ ದುರ್ಯೋಧನನು ತ್ವರೆಮಾಡಿ ತನ್ನ ರಥ-ಆನೆ-ಅಶ್ವಸಂಕುಲಗಳ ಸೇನೆಯನ್ನು ಕ್ಷಿಪ್ರವಾಗಿ ಪ್ರೇರೇಪಿಸಿದನು.

06091078a ತಾಮಾಪತಂತೀಂ ಸಹಸಾ ಕೌರವಾಣಾಂ ಮಹಾಚಮೂಂ।
06091078c ಅಭಿದುದ್ರಾವ ವೇಗೇನ ಪಾಂಡವಃ ಶ್ವೇತವಾಹನಃ।।

ತನ್ನ ಮೇಲೆ ಒಮ್ಮೆಲೇ ಬೀಳುತ್ತಿದ್ದ ಕೌರವರ ಆ ಮಹಾಸೇನೆಯನ್ನು ವೇಗದಿಂದ ಶ್ವೇತವಾಹನ ಪಾಂಡವನು ಎದುರಿಸಿದನು.

06091079a ಭಗದತ್ತೋಽಪಿ ಸಮರೇ ತೇನ ನಾಗೇನ ಭಾರತ।
06091079c ವಿಮೃದ್ನನ್ಪಾಂಡವಬಲಂ ಯುಧಿಷ್ಠಿರಮುಪಾದ್ರವತ್।।

ಭಾರತ! ಸಮರದಲ್ಲಿ ಭಗದತ್ತನೂ ಕೂಡ ತನ್ನ ಆನೆಯಿಂದ ಪಾಂಡವ ಸೇನೆಯನ್ನು ಧ್ವಂಸಮಾಡಿ ಯುಧಿಷ್ಠಿರನ ಸಮೀಪಕ್ಕೆ ಹೋದನು.

06091080a ತದಾಸೀತ್ತುಮುಲಂ ಯುದ್ಧಂ ಭಗದತ್ತಸ್ಯ ಮಾರಿಷ।
06091080c ಪಾಂಚಾಲೈಃ ಸೃಂಜಯೈಶ್ಚೈವ ಕೇಕಯೈಶ್ಚೋದ್ಯತಾಯುಧೈಃ।।

ಮಾರಿಷ! ಆಗ ಆಯುಧಗಳನ್ನು ಎತ್ತಿ ಹಿಡಿದಿದ್ದ ಪಾಂಚಾಲ-ಸೃಂಜಯ-ಕೇಕಯರೊಡನೆ ಭಗದತ್ತನ ತುಮುಲ ಯುದ್ಧವು ನಡೆಯಿತು.

06091081a ಭೀಮಸೇನೋಽಪಿ ಸಮರೇ ತಾವುಭೌ ಕೇಶವಾರ್ಜುನೌ।
06091081c ಆಶ್ರಾವಯದ್ಯಥಾವೃತ್ತಮಿರಾವದ್ವಧಮುತ್ತಮಂ।।

ಸಮರದಲ್ಲಿ ಭೀಮಸೇನನೂ ಕೂಡ ಕೇಶವಾರ್ಜುನರಿಬ್ಬರಿಗೂ ಉತ್ತಮ ಇರಾವತನ ವಧೆಯ ವೃತ್ತಾಂತವನ್ನು ಕೇಳಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭಗದತ್ತಯುದ್ಧೇ ಏಕನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭಗದತ್ತಯುದ್ಧ ಎನ್ನುವ ತೊಂಭತ್ತೊಂದನೇ ಅಧ್ಯಾಯವು.