ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 90
ಸಾರ
ಭೀಮ-ಘಟೋತ್ಕಚರ ಪರಾಕ್ರಮ (1-46).
06090001 ಸಂಜಯ ಉವಾಚ।
06090001a ಸ್ವಸೈನ್ಯಂ ನಿಹತಂ ದೃಷ್ಟ್ವಾ ರಾಜಾ ದುರ್ಯೋಧನಃ ಸ್ವಯಂ।
06090001c ಅಭ್ಯಧಾವತ ಸಂಕ್ರುದ್ಧೋ ಭೀಮಸೇನಮರಿಂದಮಂ।।
ಸಂಜಯನು ಹೇಳಿದನು: “ತನ್ನ ಸೈನ್ಯವು ನಾಶವಾಗುತ್ತಿರುವುದನ್ನು ನೋಡಿ ರಾಜಾ ದುರ್ಯೋಧನನು ಸಂಕೃದ್ಧನಾಗಿ ಸ್ವಯಂ ತಾನೇ ಅರಿಂದಮ ಭೀಮಸೇನನನ್ನು ಎದುರಿಸಿದನು.
06090002a ಪ್ರಗೃಹ್ಯ ಸುಮಹಚ್ಚಾಪಮಿಂದ್ರಾಶನಿಸಮಸ್ವನಂ।
06090002c ಮಹತಾ ಶರವರ್ಷೇಣ ಪಾಂಡವಂ ಸಮವಾಕಿರತ್।।
ಇಂದ್ರನ ವಜ್ರಾಯುಧಕ್ಕೆ ಸಮನಾದ ಅತಿದೊಡ್ಡ ಧನುಸ್ಸನ್ನು ತೆಗೆದುಕೊಂಡು ಮಹಾ ಶರವರ್ಷದಿಂದ ಪಾಂಡವನನ್ನು ಮುಚ್ಚಿದನು.
06090003a ಅರ್ಧಚಂದ್ರಂ ಚ ಸಂಧಾಯ ಸುತೀಕ್ಷ್ಣಂ ಲೋಮವಾಹಿನಂ।
06090003c ಭೀಮಸೇನಸ್ಯ ಚಿಚ್ಛೇದ ಚಾಪಂ ಕ್ರೋಧಸಮನ್ವಿತಃ।।
ತೀಕ್ಷ್ಣವಾದ ಲೋಮವಾಹಿನಿ ಅರ್ಧಚಂದ್ರವನ್ನು ಹೂಡಿ ಕ್ರೋಧಸಮನ್ವಿತನಾದ ಅವನು ಭೀಮಸೇನನ ಚಾಪವನ್ನು ಕತ್ತರಿಸಿದನು.
06090004a ತದಂತರಂ ಚ ಸಂಪ್ರೇಕ್ಷ್ಯ ತ್ವರಮಾಣೋ ಮಹಾರಥಃ।
06090004c ಸಂದಧೇ ನಿಶಿತಂ ಬಾಣಂ ಗಿರೀಣಾಮಪಿ ದಾರಣಂ।
06090004e ತೇನೋರಸಿ ಮಹಾಬಾಹುರ್ಭೀಮಸೇನಮತಾಡಯತ್।।
ಅನಂತರ ಅದೇ ಸರಿಯಾದ ಸಮಯವೆಂದು ಭಾವಿಸಿ ಅತ್ಯವಸರದಿಂದ ಆ ಮಹಾರಥನು ಪರ್ವತವನ್ನೂ ಸೀಳಬಲ್ಲ ನಿಶಿತ ಬಾಣವನ್ನು ಹೂಡಿ ಅದರಿಂದ ಮಹಾಬಾಹು ಭೀಮನ ಎದೆಗೆ ಹೊಡೆದನು.
06090005a ಸ ಗಾಢವಿದ್ಧೋ ವ್ಯಥಿತಃ ಸೃಕ್ಕಿಣೀ ಪರಿಸಂಲಿಹನ್।
06090005c ಸಮಾಲಲಂಬೇ ತೇಜಸ್ವೀ ಧ್ವಜಂ ಹೇಮಪರಿಷ್ಕೃತಂ।।
ಆಳವಾಗಿ ಗಾಯಗೊಂಡು ನೋವಿನಿಂದ ನೊಂದ ತೇಜಸ್ವಿ ಭೀಮನು ಕಟವಾಯಿಗಳನ್ನು ನೆಕ್ಕುತ್ತಾ ಸುವರ್ಣಭೂಷಿತ ಧ್ವಜದಂಡವನ್ನೇ ಅವಲಂಬನೆಯನ್ನಾಗಿ ಹಿಡಿದು ಕುಳಿತುಕೊಂಡನು.
06090006a ತಥಾ ವಿಮನಸಂ ದೃಷ್ಟ್ವಾ ಭೀಮಸೇನಂ ಘಟೋತ್ಕಚಃ।
06090006c ಕ್ರೋಧೇನಾಭಿಪ್ರಜಜ್ವಾಲ ದಿಧಕ್ಷನ್ನಿವ ಪಾವಕಃ।।
ಭೀಮಸೇನನು ಹಾಗೆ ವಿಮನಸ್ಕನಾಗಿದುದನ್ನು ನೋಡಿ ಘಟೋತ್ಕಚನು ಕ್ರೋಧದಿಂದ ವಿಶ್ವವನ್ನೇ ಸುಡಲಿಚ್ಛಿಸುವ ಅಗ್ನಿಯಂತೆ ಪ್ರಜ್ವಲಿಸಿದನು.
06090007a ಅಭಿಮನ್ಯುಮುಖಾಶ್ಚೈವ ಪಾಂಡವಾನಾಂ ಮಹಾರಥಾಃ।
06090007c ಸಮಭ್ಯಧಾವನ್ಕ್ರೋಶಂತೋ ರಾಜಾನಂ ಜಾತಸಂಭ್ರಮಾಃ।।
ಅಭಿಮನ್ಯುವಿನ ನಾಯಕತ್ವದಲ್ಲಿದ್ದ ಪಾಂಡವರ ಮಹಾರಥರೂ ಕೂಡ ಕೂಗುತ್ತಾ ಸಂಭ್ರಮದಿಂದ ಅಲ್ಲಿಗೆ ಧಾವಿಸಿದರು.
06090008a ಸಂಪ್ರೇಕ್ಷ್ಯ ತಾನಾಪತತಃ ಸಂಕ್ರುದ್ಧಾಂ ಜಾತಸಂಭ್ರಮಾನ್।
06090008c ಭಾರದ್ವಾಜೋಽಬ್ರವೀದ್ವಾಕ್ಯಂ ತಾವಕಾನಾಂ ಮಹಾರಥಾನ್।।
ಸಂಭ್ರಮದಿಂದ ಸಂಕ್ರುದ್ಧರಾಗಿ ಮೇಲೆ ಎರಗುತ್ತಿರುವ ಅವರನ್ನು ನೋಡಿ ಭಾರದ್ವಾಜನು ನಿನ್ನವರ ಮಹಾರಥರಿಗೆ ಹೇಳಿದನು:
06090009a ಕ್ಷಿಪ್ರಂ ಗಚ್ಛತ ಭದ್ರಂ ವೋ ರಾಜಾನಂ ಪರಿರಕ್ಷತ।
06090009c ಸಂಶಯಂ ಪರಮಂ ಪ್ರಾಪ್ತಂ ಮಜ್ಜಂತಂ ವ್ಯಸನಾರ್ಣವೇ।।
“ನಿಮಗೆ ಮಂಗಳವಾಗಲಿ! ಬೇಗನೆ ಹೋಗಿ! ರಾಜನನ್ನು ಪರಿರಕ್ಷಿಸಿ. ಚಿಂತೆಯೆಂಬ ಸಾಗರದಲ್ಲಿ ಮುಳುಗಿರುವ ಅವನು ಉಳಿಯುತ್ತಾನೋ ಇಲ್ಲವೋ ಎಂಬ ಪರಮ ಸಂಶಯವು ಹುಟ್ಟಿದೆ!
06090010a ಏತೇ ಕ್ರುದ್ಧಾ ಮಹೇಷ್ವಾಸಾಃ ಪಾಂಡವಾನಾಂ ಮಹಾರಥಾಃ।
06090010c ಭೀಮಸೇನಂ ಪುರಸ್ಕೃತ್ಯ ದುರ್ಯೋಧನಮುಪದ್ರುತಾಃ।।
06090011a ನಾನಾವಿಧಾನಿ ಶಸ್ತ್ರಾಣಿ ವಿಸೃಜಂತೋ ಜಯೇ ರತಾಃ।
06090011c ನದಂತೋ ಭೈರವಾನ್ನಾದಾಂಸ್ತ್ರಾಸಯಂತಶ್ಚ ಭೂಮಿಮಾಂ।।
ಪಾಂಡವರ ಮಹೇಷ್ವಾಸ ಮಹಾರಥರು ಕ್ರುದ್ಧರಾಗಿ ಭೀಮಸೇನನನ್ನು ಮುಂದಿರಿಸಿಕೊಂಡು, ವಿಜಯವನ್ನೇ ಉದ್ದೇಶವನ್ನಾಗಿಟ್ಟುಕೊಂಡು, ನಾನಾವಿಧದ ಶಸ್ತ್ರಗಳನ್ನು ಪ್ರಯೋಗಿಸುತ್ತಾ, ಭೈರವ ಕೂಗುಗಳನ್ನು ಕೂಗಿ ಈ ಭೂಮಿಯನ್ನು ನಡುಗಿಸುತ್ತಾ ದುರ್ಯೋಧನನನ್ನು ಆಕ್ರಮಣಿಸಿದ್ದಾರೆ.”
06090012a ತದಾಚಾರ್ಯವಚಃ ಶ್ರುತ್ವಾ ಸೋಮದತ್ತಪುರೋಗಮಾಃ।
06090012c ತಾವಕಾಃ ಸಮವರ್ತಂತ ಪಾಂಡವಾನಾಮನೀಕಿನೀಂ।।
ಆಚಾರ್ಯನ ಆ ಮಾತನ್ನು ಕೇಳಿ ಸೋಮದತ್ತನೇ ಮೊದಲಾದ ನಿನ್ನವರು ಪಾಂಡವರ ಸೇನೆಯನ್ನು ಎದುರಿಸಿದರು.
06090013a ಕೃಪೋ ಭೂರಿಶ್ರವಾಃ ಶಲ್ಯೋ ದ್ರೋಣಪುತ್ರೋ ವಿವಿಂಶತಿಃ।
06090013c ಚಿತ್ರಸೇನೋ ವಿಕರ್ಣಶ್ಚ ಸೈಂಧವೋಽಥ ಬೃಹದ್ಬಲಃ।
06090013e ಆವಂತ್ಯೌ ಚ ಮಹೇಷ್ವಾಸೌ ಕೌರವಂ ಪರ್ಯವಾರಯನ್।।
ಕೃಪ, ಭೂರಿಶ್ರವ, ಶಲ್ಯ, ದ್ರೋಣಪುತ್ರ, ವಿವಿಂಶತಿ, ಚಿತ್ರಸೇನ, ವಿಕರ್ಣ, ಸೈಂಧವ, ಬೃಹದ್ಬಲ, ಮತ್ತು ಅವಂತಿಯ ಮಹೇಷ್ವಾಸರಿಬ್ಬರು ಕೌರವನನ್ನು ಸುತ್ತುವರೆದರು.
06090014a ತೇ ವಿಂಶತಿಪದಂ ಗತ್ವಾ ಸಂಪ್ರಹಾರಂ ಪ್ರಚಕ್ರಿರೇ।
06090014c ಪಾಂಡವಾ ಧಾರ್ತರಾಷ್ಟ್ರಾಶ್ಚ ಪರಸ್ಪರಜಿಘಾಂಸವಃ।।
ಪಾಂಡವರು ಮತ್ತು ಧಾರ್ತರಾಷ್ಟ್ರರು ಇಪ್ಪತ್ತು ಹೆಜ್ಜೆಗಳಷ್ಟು ಮುಂದೆ ಹೋಗಿ ಪರಸ್ಪರರನ್ನು ಸಂಹರಿಸಲು ಬಯಸಿ ಯುದ್ಧವನ್ನು ಪ್ರಾರಂಭಿಸಿದರು.
06090015a ಏವಮುಕ್ತ್ವಾ ಮಹಾಬಾಹುರ್ಮಹದ್ವಿಸ್ಫಾರ್ಯ ಕಾರ್ಮುಕಂ।
06090015c ಭಾರದ್ವಾಜಸ್ತತೋ ಭೀಮಂ ಷಡ್ವಿಂಶತ್ಯಾ ಸಮಾರ್ಪಯತ್।।
ಹೀಗೆ ಹೇಳಿ ಮಹಾಬಾಹು ಭಾರದ್ವಾಜನು ಧನುಸ್ಸನ್ನು ಜೋರಾಗಿ ಟೇಂಕರಿಸಿ ಭೀಮನನ್ನು ಇಪ್ಪತ್ತಾರು ಬಾಣಗಳಿಂದ ಪ್ರಹರಿಸಿದನು.
06090016a ಭೂಯಶ್ಚೈನಂ ಮಹಾಬಾಹುಃ ಶರೈಃ ಶೀಘ್ರಮವಾಕಿರತ್।
06090016c ಪರ್ವತಂ ವಾರಿಧಾರಾಭಿಃ ಶರದೀವ ಬಲಾಹಕಃ।।
ಪುನಃ ಆ ಮಹಾಬಾಹುವು ಶೀಘ್ರವಾಗಿ ಮಳೆಗಾಲದಲ್ಲಿ ಮೋಡವು ಮಳೆನೀರನ್ನು ಪರ್ವತದ ಮೇಲೆ ಸುರಿಸುವಂತೆ ಅವನ ಮೇಲೆ ಬಾಣಗಳನ್ನು ಸುರಿದು ಮುಚ್ಚಿದನು.
06090017a ತಂ ಪ್ರತ್ಯವಿಧ್ಯದ್ದಶಭಿರ್ಭೀಮಸೇನಃ ಶಿಲೀಮುಖೈಃ।
06090017c ತ್ವರಮಾಣೋ ಮಹೇಷ್ವಾಸಃ ಸವ್ಯೇ ಪಾರ್ಶ್ವೇ ಮಹಾಬಲಃ।।
ಆಗ ಮಹೇಷ್ವಾಸ ಮಹಾಬಲ ಭೀಮಸೇನನು ಅವುಗಳಿಗೆ ಪ್ರತಿಯಾಗಿ ತ್ವರೆಮಾಡಿ ಹತ್ತು ಶಿಲೀಮುಖಗಳಿಂದ ಅವನ ಎಡ ಪಾರ್ಶ್ವಕ್ಕೆ ಹೊಡೆದನು.
06090018a ಸ ಗಾಢವಿದ್ಧೋ ವ್ಯಥಿತೋ ವಯೋವೃದ್ಧಶ್ಚ ಭಾರತ।
06090018c ಪ್ರನಷ್ಟಸಂಜ್ಞಃ ಸಹಸಾ ರಥೋಪಸ್ಥ ಉಪಾವಿಶತ್।।
ಭಾರತ! ಗಾಢವಾಗಿ ಪೆಟ್ಟುತಿಂದು ವ್ಯತಿಥನಾದ ಆ ವಯೋವೃದ್ಧನು ಸಂಜ್ಞೆಗಳನ್ನು ಕಳೆದುಕೊಂಡು ರಥದಲ್ಲಿ ಕುಸಿದು ಕುಳಿತುಕೊಂಡನು.
06090019a ಗುರುಂ ಪ್ರವ್ಯಥಿತಂ ದೃಷ್ಟ್ವಾ ರಾಜಾ ದುರ್ಯೋಧನಃ ಸ್ವಯಂ।
06090019c ದ್ರೌಣಾಯನಿಶ್ಚ ಸಂಕ್ರುದ್ಧೌ ಭೀಮಸೇನಮಭಿದ್ರುತೌ।।
ಗುರುವನ್ನು ನೋಯಿಸಿದುದನ್ನು ನೋಡಿ ಸ್ವಯಂ ರಾಜಾ ದುರ್ಯೋಧನ ಮತ್ತು ದ್ರೌಣಿ ಇಬ್ಬರೂ ಸಂಕ್ರುದ್ಧರಾಗಿ ಭೀಮಸೇನನ ಮೇಲೆ ಎರಗಿದರು.
06090020a ತಾವಾಪತಂತೌ ಸಂಪ್ರೇಕ್ಷ್ಯ ಕಾಲಾಂತಕಯಮೋಪಮೌ।
06090020c ಭೀಮಸೇನೋ ಮಹಾಬಾಹುರ್ಗದಾಮಾದಾಯ ಸತ್ವರಃ।।
06090021a ಅವಪ್ಲುತ್ಯ ರಥಾತ್ತೂರ್ಣಂ ತಸ್ಥೌ ಗಿರಿರಿವಾಚಲಃ।
06090021c ಸಮುದ್ಯಮ್ಯ ಗದಾಂ ಗುರ್ವೀಂ ಯಮದಂಡೋಪಮಾಂ ರಣೇ।।
ಕಾಲಾಂತಕ ಯಮರಂತಿರುವ ಅವರಿಬ್ಬರೂ ಮೇಲೆ ಬೀಳುತ್ತಿರುವುದನ್ನು ನೋಡಿ ಮಹಾಬಾಹು ಭೀಮಸೇನನು ಭಾರ ಗದೆಯನ್ನು ತೆಗೆದುಕೊಂಡು ತಕ್ಷಣವೇ ರಥದಿಂದ ಕೆಳಗೆ ಹಾರಿ, ಯಮದಂಡದಂತಿರುವ ಆ ಭಾರ ಗದೆಯನ್ನು ಎತ್ತಿ ಹಿಡಿದು ರಣದಲ್ಲಿ ಪರ್ವತದಂತೆ ಅಚಲನಾಗಿ ನಿಂತನು.
06090022a ತಮುದ್ಯತಗದಂ ದೃಷ್ಟ್ವಾ ಕೈಲಾಸಮಿವ ಶೃಂಗಿಣಂ।
06090022c ಕೌರವೋ ದ್ರೋಣಪುತ್ರಶ್ಚ ಸಹಿತಾವಭ್ಯಧಾವತಾಂ।।
ಶಿಖರದಿಂದ ಕೂಡಿದ ಕೈಲಾಸಪರ್ವತದಂತೆ ಗದೆಯನ್ನೆತ್ತಿ ನಿಂತಿದ್ದ ಅವನನ್ನು ನೋಡಿ ಕೌರವ ಮತ್ತು ದ್ರೋಣಪುತ್ರರು ಒಟ್ಟಿಗೇ ಆಕ್ರಮಣಿಸಿದರು.
06090023a ತಾವಾಪತಂತೌ ಸಹಿತೌ ತ್ವರಿತೌ ಬಲಿನಾಂ ವರೌ।
06090023c ಅಭ್ಯಧಾವತ ವೇಗೇನ ತ್ವರಮಾಣೋ ವೃಕೋದರಃ।।
ಅವರಿಬ್ಬರು ಬಲಿಗಳಲ್ಲಿ ಶ್ರೇಷ್ಠರು ಒಟ್ಟಿಗೇ ತ್ವರೆಮಾಡಿ ಮೇಲೆ ಬೀಳುತ್ತಿರಲು ವೃಕೋದರನೂ ಕೂಡ ತ್ವರೆಮಾಡಿ ವೇಗದಿಂದ ಅವರ ಮೇಲೆ ಎರಗಿದನು.
06090024a ತಮಾಪತಂತಂ ಸಂಪ್ರೇಕ್ಷ್ಯ ಸಂಕ್ರುದ್ಧಂ ಭೀಮದರ್ಶನಂ।
06090024c ಸಮಭ್ಯಧಾವಂಸ್ತ್ವರಿತಾಃ ಕೌರವಾಣಾಂ ಮಹಾರಥಾಃ।।
ಸಂಕ್ರುದ್ಧನಾದ, ನೋಡಲು ಭಯಂಕರನಾಗಿದ್ದ ಅವನನ್ನು ನೋಡಿ ಕೌರವ ಮಹಾರಥರು ತ್ವರೆಮಾಡಿ ಮುಂದೆ ಬಂದರು.
06090025a ಭಾರದ್ವಾಜಮುಖಾಃ ಸರ್ವೇ ಭೀಮಸೇನಜಿಘಾಂಸಯಾ।
06090025c ನಾನಾವಿಧಾನಿ ಶಸ್ತ್ರಾಣಿ ಭೀಮಸ್ಯೋರಸ್ಯಪಾತಯನ್।
06090025e ಸಹಿತಾಃ ಪಾಂಡವಂ ಸರ್ವೇ ಪೀಡಯಂತಃ ಸಮಂತತಃ।।
ಭಾರದ್ವಾಜಪ್ರಮುಖರೆಲ್ಲರೂ ಭೀಮಸೇನನನ್ನು ಕೊಲ್ಲಲು ಬಯಸಿ ನಾನಾವಿಧದ ಶಸ್ತ್ರಗಳನ್ನು ಭೀಮಸೇನನ ಎದೆಯ ಮೇಲೆ ಪ್ರಯೋಗಿಸಿ, ಎಲ್ಲರೂ ಒಟ್ಟಿಗೇ ಎಲ್ಲ ಕಡೆಗಳಿಂದ ಪಾಂಡವನನ್ನು ಪೀಡಿಸಿದರು.
06090026a ತಂ ದೃಷ್ಟ್ವಾ ಸಂಶಯಂ ಪ್ರಾಪ್ತಂ ಪೀಡ್ಯಮಾನಂ ಮಹಾರಥಂ।
06090026c ಅಭಿಮನ್ಯುಪ್ರಭೃತಯಃ ಪಾಂಡವಾನಾಂ ಮಹಾರಥಾಃ।
06090026e ಅಭ್ಯಧಾವನ್ಪರೀಪ್ಸಂತಃ ಪ್ರಾಣಾಂಸ್ತ್ಯಕ್ತ್ವಾ ಸುದುಸ್ತ್ಯಜಾನ್।।
ಪೀಡಿತನಾಗಿದ್ದ ಆ ಮಹಾರಥನನ್ನು ನೋಡಿ ಸಂಶಯವನ್ನು ತಾಳಿ ಅಭಿಮನ್ಯುವೇ ಮೊದಲಾದ ಪಾಂಡವ ಮಹಾರಥರು ತಮ್ಮ ಪ್ರಾಣಗಳನ್ನು ತ್ಯಜಿಸಿ ಅವನನ್ನು ಪರಿರಕ್ಷಿಸಲು ಅವನ ಬಳಿ ಧಾವಿಸಿ ಬಂದರು.
06090027a ಅನೂಪಾಧಿಪತಿಃ ಶೂರೋ ಭೀಮಸ್ಯ ದಯಿತಃ ಸಖಾ।
06090027c ನೀಲೋ ನೀಲಾಂಬುದಪ್ರಖ್ಯಃ ಸಂಕ್ರುದ್ಧೋ ದ್ರೌಣಿಮಭ್ಯಯಾತ್।
06090027e ಸ್ಪರ್ಧತೇ ಹಿ ಮಹೇಷ್ವಾಸೋ ನಿತ್ಯಂ ದ್ರೋಣಸುತೇನ ಯಃ।।
ಆಗ ಅನೂಪಾಧಿಪತಿ, ಶೂರ, ಭೀಮನ ಪ್ರಿಯ ಮಿತ್ರ, ನಿತ್ಯವೂ ದ್ರೋಣಸುತನೊಡನೆ ಸ್ಪರ್ಧಿಸುವ ನೀಲಾಂಬುದನೆಂದು ಪ್ರಖ್ಯಾತನಾದ ನೀಲನು ಸಂಕ್ರುದ್ಧನಾಗಿ ದ್ರೌಣಿಯನ್ನು ಆಕ್ರಮಣಿಸಿದನು.
06090028a ಸ ವಿಸ್ಫಾರ್ಯ ಮಹಚ್ಚಾಪಂ ದ್ರೌಣಿಂ ವಿವ್ಯಾಧ ಪತ್ರಿಣಾ।
06090028c ಯಥಾ ಶಕ್ರೋ ಮಹಾರಾಜ ಪುರಾ ವಿವ್ಯಾಧ ದಾನವಂ।।
06090029a ವಿಪ್ರಚಿತ್ತಿಂ ದುರಾಧರ್ಷಂ ದೇವತಾನಾಂ ಭಯಂಕರಂ।
06090029c ಯೇನ ಲೋಕತ್ರಯಂ ಕ್ರೋಧಾತ್ತ್ರಾಸಿತಂ ಸ್ವೇನ ತೇಜಸಾ।।
ಮಹಾರಾಜ! ಅವನು ಮಹಾಚಾಪವನ್ನು ಟೇಂಕರಿಸಿ ದ್ರೌಣಿಯನ್ನು ಹಿಂದೆ ಹೇಗೆ ಶಕ್ರನು ತನ್ನ ತೇಜಸ್ಸು ಮತ್ತು ಕ್ರೋಧದಿಂದ ಮೂರು ಲೋಕಗಳನ್ನೂ ನಡುಗಿಸುತ್ತಿದ್ದ ದಾನವ, ದೇವತೆಗಳ ಭಯಂಕರ, ದುರಾಧರ್ಷ, ವಿಪ್ರಚಿತ್ತಿಯನ್ನು ಹೇಗೋ ಹಾಗೆ ಪತ್ರಿಗಳಿಂದ ಹೊಡೆದನು.
06090030a ತಥಾ ನೀಲೇನ ನಿರ್ಭಿನ್ನಃ ಸುಮುಖೇನ ಪತತ್ರಿಣಾ।
06090030c ಸಂಜಾತರುಧಿರೋತ್ಪೀಡೋ ದ್ರೌಣಿಃ ಕ್ರೋಧಸಮನ್ವಿತಃ।।
ಹಾಗೆ ನೀಲನ ಸುಮುಖ ಪತತ್ರಿಗಳಿಂದ ಗಾಯಗೊಂಡು ರಕ್ತ ಸುರಿಸಿ ಪೀಡಿತನಾದ ದ್ರೌಣಿಯು ಕ್ರೋಧಸಮನ್ವಿತನಾದನು.
06090031a ಸ ವಿಸ್ಫಾರ್ಯ ಧನುಶ್ಚಿತ್ರಮಿಂದ್ರಾಶನಿಸಮಸ್ವನಂ।
06090031c ದಧ್ರೇ ನೀಲವಿನಾಶಾಯ ಮತಿಂ ಮತಿಮತಾಂ ವರಃ।।
ಆ ಮತಿಮತರಲ್ಲಿ ಶ್ರೇಷ್ಠನು ಇಂದ್ರನ ವಜ್ರಾಯುಧದ ನಿಸ್ವನಕ್ಕೆ ಸಮನಾದ ಚಿತ್ರ ಧನುಸ್ಸನ್ನು ಟೇಂಕರಿಸಿ ನೀಲನ ವಿನಾಶಮಾಡಲು ನಿಶ್ಚಯಿಸಿದನು.
06090032a ತತಃ ಸಂಧಾಯ ವಿಮಲಾನ್ಭಲ್ಲಾನ್ಕರ್ಮಾರಪಾಯಿತಾನ್।
06090032c ಜಘಾನ ಚತುರೋ ವಾಹಾನ್ಪಾತಯಾಮಾಸ ಚ ಧ್ವಜಂ।।
ಆಗ ಕಮ್ಮಾರನಿಂದ ಪರಿಸ್ಕರಿಸಲ್ಪಟ್ಟ ವಿಮಲ ಭಲ್ಲಗಳನ್ನು ಹೂಡಿ ಅವನ ನಾಲ್ಕು ಕದುರೆಗಳನ್ನು ಕೊಂದನು ಮತ್ತು ಧ್ವಜವನ್ನು ಬೀಳಿಸಿದನು.
06090033a ಸಪ್ತಮೇನ ಚ ಭಲ್ಲೇನ ನೀಲಂ ವಿವ್ಯಾಧ ವಕ್ಷಸಿ।
06090033c ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್।।
ಏಳನೆಯ ಭಲ್ಲದಿಂದ ನೀಲನ ಎದೆಗೆ ಹೊಡೆದನು. ಅದು ಗಾಢವಾಗಿ ಒಳಹೊಕ್ಕಿದುದರಿಂದ ವ್ಯಥಿತನಾಗಿ ಅವನು ರಥದಲ್ಲಿಯೇ ಕುಳಿತುಕೊಂಡನು.
06090034a ಮೋಹಿತಂ ವೀಕ್ಷ್ಯ ರಾಜಾನಂ ನೀಲಮಭ್ರಚಯೋಪಮಂ।
06090034c ಘಟೋತ್ಕಚೋಽಪಿ ಸಂಕ್ರುದ್ಧೋ ಭ್ರಾತೃಭಿಃ ಪರಿವಾರಿತಃ।।
06090035a ಅಭಿದುದ್ರಾವ ವೇಗೇನ ದ್ರೌಣಿಮಾಹವಶೋಭಿನಂ।
06090035c ತಥೇತರೇ ಅಭ್ಯಧಾವನ್ರಾಕ್ಷಸಾ ಯುದ್ಧದುರ್ಮದಾಃ।।
ಮೋಡಗಳ ಸಮೂಹದಂತಿದ್ದ ರಾಜಾ ನೀಲನು ಮೂರ್ಛಿತನಾದುದನ್ನು ನೋಡಿ ಸಂಕೃದ್ಧನಾದ ಘಟೋತ್ಕಚನೂ ಕೂಡ ಸಹೋದರರನ್ನು ಕೂಡಿಕೊಂಡು ವೇಗದಿಂದ ಆಹವಶೋಭಿ ದ್ರೌಣಿಯನ್ನು ಎದುರಿಸಿದನು. ಆಗ ಇತರ ಯುದ್ಧದುರ್ಮದ ರಾಕ್ಷಸರೂ ಅವನನ್ನು ಅನುಸರಿಸಿ ಬಂದರು.
06090036a ತಮಾಪತಂತಂ ಸಂಪ್ರೇಕ್ಷ್ಯ ರಾಕ್ಷಸಂ ಘೋರದರ್ಶನಂ।
06090036c ಅಭ್ಯಧಾವತ ತೇಜಸ್ವೀ ಭಾರದ್ವಾಜಾತ್ಮಜಸ್ತ್ವರನ್।।
ತನ್ನ ಮೇಲೆ ಬೀಳುತ್ತಿದ್ದ ಘೋರದರ್ಶನ ರಾಕ್ಷಸನನ್ನು ನೋಡಿ ತೇಜಸ್ವೀ ಭಾರದ್ವಾಜನ ಮಗನು ತ್ವರೆಮಾಡಿ ಅವನನ್ನು ಎದುರಿಸಿದನು.
06090037a ನಿಜಘಾನ ಚ ಸಂಕ್ರುದ್ಧೋ ರಾಕ್ಷಸಾನ್ಭೀಮದರ್ಶನಾನ್।
06090037c ಯೋಽಭವನ್ನಗ್ರತಃ ಕ್ರುದ್ಧಾ ರಾಕ್ಷಸಸ್ಯ ಪುರಃಸರಾಃ।।
ಆ ರಾಕ್ಷಸನ ಮುಂದೆನಿಂತು ಯುದ್ಧಮಾಡುತ್ತಿದ್ದ ಕ್ರುದ್ಧರಾದ ಭೀಮದರ್ಶನ ರಾಕ್ಷಸರನ್ನು ಅವನು ಸಂಕ್ರುದ್ಧನಾಗಿ ಸಂಹರಿಸಿದನು.
06090038a ವಿಮುಖಾಂಶ್ಚೈವ ತಾನ್ದೃಷ್ಟ್ವಾ ದ್ರೌಣಿಚಾಪಚ್ಯುತೈಃ ಶರೈಃ।
06090038c ಅಕ್ರುಧ್ಯತ ಮಹಾಕಾಯೋ ಭೈಮಸೇನಿರ್ಘಟೋತ್ಕಚಃ।।
ದ್ರೌಣಿಯ ಬಿಲ್ಲಿನಿಂದ ಹೊರಟ ಬಾಣಗಳಿಂದ ಅವರು ವಿಮುಖರಾದುದನ್ನು ನೋಡಿ ಮಹಾಯಾಕ ಭೈಮಸೇನಿ ಘಟೋತ್ಕಚನು ಅತ್ಯಂತ ಕುಪಿತನಾದನು.
06090039a ಪ್ರಾದುಶ್ಚಕ್ರೇ ಮಹಾಮಾಯಾಂ ಘೋರರೂಪಾಂ ಸುದಾರುಣಾಂ।
06090039c ಮೋಹಯನ್ಸಮರೇ ದ್ರೌಣಿಂ ಮಾಯಾವೀ ರಾಕ್ಷಸಾಧಿಪಃ।।
ಮಾಯಾವಿ ರಾಕ್ಷಸಾಧಿಪನು ಸಮರದಲ್ಲಿ ದ್ರೌಣಿಯನ್ನು ಮೋಹಗೊಳಿಸುತ್ತಾ ಘೋರರೂಪವಾದ, ಸುದಾರುಣವಾದ ಮಹಾಮಾಯೆಯನ್ನು ನಿರ್ಮಿಸಿದನು.
06090040a ತತಸ್ತೇ ತಾವಕಾಃ ಸರ್ವೇ ಮಾಯಯಾ ವಿಮುಖೀಕೃತಾಃ।
06090040c ಅನ್ಯೋನ್ಯಂ ಸಮಪಶ್ಯಂತ ನಿಕೃತ್ತಾನ್ಮೇದಿನೀತಲೇ।
06090040e ವಿಚೇಷ್ಟಮಾನಾನ್ಕೃಪಣಾಂ ಶೋಣಿತೇನ ಸಮುಕ್ಷಿತಾನ್।।
06090041a ದ್ರೋಣಂ ದುರ್ಯೋಧನಂ ಶಲ್ಯಮಶ್ವತ್ಥಾಮಾನಮೇವ ಚ।
06090041c ಪ್ರಾಯಶಶ್ಚ ಮಹೇಷ್ವಾಸಾ ಯೇ ಪ್ರಧಾನಾಶ್ಚ ಕೌರವಾಃ।।
06090042a ವಿಧ್ವಸ್ತಾ ರಥಿನಃ ಸರ್ವೇ ಗಜಾಶ್ಚ ವಿನಿಪಾತಿತಾಃ।
06090042c ಹಯಾಶ್ಚ ಸಹಯಾರೋಹಾ ವಿನಿಕೃತ್ತಾಃ ಸಹಸ್ರಶಃ।।
ಆಗ ನಿನ್ನವರೆಲ್ಲರೂ ಆ ಮಾಯೆಯಿಂದ ಹಿಮ್ಮೆಟ್ಟಿದರು. ಅನ್ಯೋನ್ಯರು ಕತ್ತರಿಸಲ್ಪಟ್ಟು, ರಕ್ತದಿಂದ ತೋಯ್ದು ಕೃಪಣರಾಗಿ ಅವರು ಭೂಮಿಯ ಮೇಲೆ ಹೊರಳಾಡುತ್ತಿರುವಂತೆ, ದ್ರೋಣ-ದುರ್ಯೋಧನ-ಶಲ್ಯ-ಅಶ್ವತ್ಥಾಮ ಮೊದಲಾದ ಪ್ರಧಾನ ಕೌರವ ಮಹೇಷ್ವಾಸರು ಪ್ರಾಯಶಃ ವಿಧ್ವಂಸರಾದಂತೆಯೂ, ಎಲ್ಲ ರಥ-ಆನೆ-ಕುದುರೆಗಳೂ ವಿನಾಶಗೊಂಡು ಬಿದ್ದಂತೆಯೂ, ಸಾವಿರಾರು ಕುದುರೆಗಳು ಆರೋಹಿಗಳೊಂದಿಗೆ ತುಂಡಾಗಿ ಬಿದ್ದುರುವಂತೆಯೂ ಅವರಿಗೆ ಕಾಣಿಸಿತು.
06090043a ತದ್ದೃಷ್ಟ್ವಾ ತಾವಕಂ ಸೈನ್ಯಂ ವಿದ್ರುತಂ ಶಿಬಿರಂ ಪ್ರತಿ।
06090043c ಮಮ ಪ್ರಾಕ್ರೋಶತೋ ರಾಜಂಸ್ತಥಾ ದೇವವ್ರತಸ್ಯ ಚ।।
06090044a ಯುಧ್ಯಧ್ವಂ ಮಾ ಪಲಾಯಧ್ವಂ ಮಾಯೈಷಾ ರಾಕ್ಷಸೀ ರಣೇ।
06090044c ಘಟೋತ್ಕಚಪ್ರಯುಕ್ತೇತಿ ನಾತಿಷ್ಠಂತ ವಿಮೋಹಿತಾಃ।
06090044e ನೈವ ತೇ ಶ್ರದ್ದಧುರ್ಭೀತಾ ವದತೋರಾವಯೋರ್ವಚಃ।।
ರಾಜನ್! ಅದನ್ನು ಕಂಡು ಶಿಬಿರದ ಕಡೆ ಓಡಿ ಹೋಗುತ್ತಿದ್ದ ನಿನ್ನ ಸೇನೆಯನ್ನು ನಾನು ಮತ್ತು ದೇವವ್ರತ ಇಬ್ಬರೂ ಕೂಗಿ ಕರೆದೆವು: “ಯುದ್ಧಮಾಡಿ! ಓಡಿಹೋಗಬೇಡಿ! ಇದು ರಣದಲ್ಲಿಯ ರಾಕ್ಷಸೀ ಮಾಯೆ. ಇದು ಘಟೋತ್ಕಚನ ಕೆಲಸ. ಇದರಿಂದ ಮೋಹಿತರಾಗಬೇಡಿ. ನಿಲ್ಲಿ!” ಆದರೂ ಭಯದಿಂದ ಅವರು ನಮ್ಮ ಮಾತಿನಲ್ಲಿ ನಂಬಿಕೆಯನ್ನಿಡಲಿಲ್ಲ.
06090045a ತಾಂಶ್ಚ ಪ್ರದ್ರವತೋ ದೃಷ್ಟ್ವಾ ಜಯಂ ಪ್ರಾಪ್ತಾಶ್ಚ ಪಾಂಡವಾಃ।
06090045c ಘಟೋತ್ಕಚೇನ ಸಹಿತಾಃ ಸಿಂಹನಾದಾನ್ಪ್ರಚಕ್ರಿರೇ।
06090045e ಶಂಖದುಂದುಭಿಘೋಷಾಶ್ಚ ಸಮಂತಾತ್ಸಸ್ವನುರ್ಭೃಶಂ।।
ಅವರು ಪಲಾಯನ ಮಾಡುತ್ತಿರುವುದನ್ನು ನೋಡಿ ಜಯಗಳಿಸಿದ ಪಾಂಡವರು ಘಟೋತ್ಕಚನನ್ನೊಡಗೂಡಿ ಸಿಂಹನಾದಗೈದರು. ಶಂಖ-ದುಂದುಭಿಗಳ ಘೋಷದಿಂದ ನಾಲ್ಕೂ ದಿಕ್ಕುಗಳನ್ನು ಮೊಳಗಿಸಿದರು.
06090046a ಏವಂ ತವ ಬಲಂ ಸರ್ವಂ ಹೈಡಿಂಬೇನ ದುರಾತ್ಮನಾ।
06090046c ಸೂರ್ಯಾಸ್ತಮನವೇಲಾಯಾಂ ಪ್ರಭಗ್ನಂ ವಿದ್ರುತಂ ದಿಶಃ।।
ಹೀಗೆ ಸೂರ್ಯಾಸ್ತಮನದ ವೇಳೆಯಲ್ಲಿ ದುರಾತ್ಮ ಹೈಡಿಂಬಿಯಿಂದ ಭಗ್ನಗೊಳಿಸಲ್ಪಟ್ಟು ನಿನ್ನ ಸೇನೆಯು ದಿಕ್ಕಾಪಾಲಾಗಿ ಓಡಿ ಹೋಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಷ್ಟಮಯುದ್ಧದಿವಸೇ ಘಟೋತ್ಕಚಯುದ್ಧೇ ನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಎಂಟನೇ ಯುದ್ಧದಿವಸದಲ್ಲಿ ಘಟೋತ್ಕಚಯುದ್ಧ ಎನ್ನುವ ತೊಂಭತ್ತನೇ ಅಧ್ಯಾಯವು.