088 ಹೈಡಿಂಬಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 88

ಸಾರ

ಘಟೋತ್ಕಚನ ಯುದ್ಧಪರಾಕ್ರಮ (1-38).

06088001 ಸಂಜಯ ಉವಾಚ।
06088001a ತತಸ್ತದ್ಬಾಣವರ್ಷಂ ತು ದುಃಸಹಂ ದಾನವೈರಪಿ।
06088001c ದಧಾರ ಯುಧಿ ರಾಜೇಂದ್ರೋ ಯಥಾ ವರ್ಷಂ ಮಹಾದ್ವಿಪಃ।।

ಸಂಜಯನು ಹೇಳಿದನು: “ರಾಜೇಂದ್ರನು ದಾನವರಿಗೂ ಸಹಿಸಲಸಾಧ್ಯವಾದ ಅವನ ಆ ಬಾಣಗಳ ಮಳೆಯನ್ನು ಆನೆಯು ಹೇಗೆ ಮಳೆಯನ್ನು ಸಹಿಸಿಕೊಳ್ಳುತ್ತದೆಯೋ ಹಾಗೆ ಸಹಿಸಿಕೊಂಡನು.

06088002a ತತಃ ಕ್ರೋಧಸಮಾವಿಷ್ಟೋ ನಿಃಶ್ವಸನ್ನಿವ ಪನ್ನಗಃ।
06088002c ಸಂಶಯಂ ಪರಮಂ ಪ್ರಾಪ್ತಃ ಪುತ್ರಸ್ತೇ ಭರತರ್ಷಭ।।

ಭರತರ್ಷಭ! ಆಗ ಕ್ರೋಧಸಮಾವಿಷ್ಟನಾಗಿ, ಹಾವಿನಂತೆ ನಿಟ್ಟುಸಿರುಬಿಡುತ್ತಾ ನಿನ್ನ ಮಗನು ಪರಮ ಸಂಶಯವನ್ನು ತಾಳಿದನು.

06088003a ಮುಮೋಚ ನಿಶಿತಾಂಸ್ತೀಕ್ಷ್ಣಾನ್ನಾರಾಚಾನ್ಪಂಚವಿಂಶತಿಂ।
06088003c ತೇಽಪತನ್ಸಹಸಾ ರಾಜಂಸ್ತಸ್ಮಿನ್ರಾಕ್ಷಸಪುಂಗವೇ।
06088003e ಆಶೀವಿಷಾ ಇವ ಕ್ರುದ್ಧಾಃ ಪರ್ವತೇ ಗಂಧಮಾದನೇ।।

ರಾಜನ್! ಅವನು ಇಪ್ಪತ್ತೈದು ನಿಶಿತ ತೀಕ್ಷ್ಣ ನಾರಾಚಗಳನ್ನು ಪ್ರಯೋಗಿಸಿದನು. ತಕ್ಷಣವೇ ಅವು ಕೋಪಗೊಂಡ ಸರ್ಪಗಳು ಗಂಧಮಾದನ ಪರ್ವತವನ್ನು ಹೇಗೋ ಹಾಗೆ ಆ ರಾಕ್ಷಸ ಪುಂಗವನ ಮೇಲೆ ಬಿದ್ದವು.

06088004a ಸ ತೈರ್ವಿದ್ಧಃ ಸ್ರವನ್ರಕ್ತಂ ಪ್ರಭಿನ್ನ ಇವ ಕುಂಜರಃ।
06088004c ದಧ್ರೇ ಮತಿಂ ವಿನಾಶಾಯ ರಾಜ್ಞಃ ಸ ಪಿಶಿತಾಶನಃ।
06088004e ಜಗ್ರಾಹ ಚ ಮಹಾಶಕ್ತಿಂ ಗಿರೀಣಾಮಪಿ ದಾರಣೀಂ।।

ಅವುಗಳಿಂದ ಗಾಯಗೊಂಡು ಕುಂಭಸ್ಥಳವು ಒಡೆದು ಆನೆಯಂತೆ ರಕ್ತವನ್ನು ಸುರಿಸುತ್ತಾ ಅವನು ರಾಜನ ವಿನಾಶವನ್ನು ನಿಶ್ಚಯಿಸಿದನು. ಆಗ ಪರ್ವತವನ್ನೂ ಸೀಳಬಲ್ಲ, ರಕ್ತವನ್ನು ಕುಡಿಯುವ ಮಹಾ ಶಕ್ತಿಯನ್ನು ಹಿಡಿದುಕೊಂಡನು.

06088005a ಸಂಪ್ರದೀಪ್ತಾಂ ಮಹೋಲ್ಕಾಭಾಮಶನೀಂ ಮಘವಾನಿವ।
06088005c ಸಮುದ್ಯಚ್ಛನ್ಮಹಾಬಾಹುರ್ಜಿಘಾಂಸುಸ್ತನಯಂ ತವ।।

ಮಹಾ‌ಉಲ್ಕೆಯಂತೆ ಉರಿಯುತ್ತಿದ್ದ, ಮಘವತನ ವಜ್ರದಂತಿದ್ದ ಅದನ್ನು ಮಹಾಬಾಹುವು ನಿನ್ನ ಮಗನನ್ನು ಕೊಲ್ಲಲೋಸುಗ ಪ್ರಯೋಗಿಸಿದನು.

06088006a ತಾಮುದ್ಯತಾಮಭಿಪ್ರೇಕ್ಷ್ಯ ವಂಗಾನಾಮಧಿಪಸ್ತ್ವರನ್।
06088006c ಕುಂಜರಂ ಗಿರಿಸಂಕಾಶಂ ರಾಕ್ಷಸಂ ಪ್ರತ್ಯಚೋದಯತ್।।

ಅದು ಬೀಳುತ್ತಿರುವುದನ್ನು ನೋಡಿ ವಂಗದ ಅಧಿಪತಿಯು ತ್ವರೆಮಾಡಿ ಪರ್ವತದಂತಿರುವ ಆನೆಯೊಂದನ್ನು ರಾಕ್ಷಸನ ಕಡೆ ಓಡಿಸಿದನು.

06088007a ಸ ನಾಗಪ್ರವರೇಣಾಜೌ ಬಲಿನಾ ಶೀಘ್ರಗಾಮಿನಾ।
06088007c ಯತೋ ದುರ್ಯೋಧನರಥಸ್ತಂ ಮಾರ್ಗಂ ಪ್ರತ್ಯಪದ್ಯತ।
06088007e ರಥಂ ಚ ವಾರಯಾಮಾಸ ಕುಂಜರೇಣ ಸುತಸ್ಯ ತೇ।।

ಅವನು ವೇಗವಾಗಿ ಹೋಗಬಲ್ಲ ಶ್ರೇಷ್ಠ ಬಲಶಾಲಿ ಆನೆಯ ಮೇಲೆ ಕುಳಿತು ದುರ್ಯೋಧನನ ರಥದ ಮಾರ್ಗಕ್ಕೆ ಅಡ್ಡಬಂದು ಆ ಆನೆಯಿಂದ ನಿನ್ನ ಮಗನ ರಥವನ್ನು ತಡೆದನು.

06088008a ಮಾರ್ಗಮಾವಾರಿತಂ ದೃಷ್ಟ್ವಾ ರಾಜ್ಞಾ ವಂಗೇನ ಧೀಮತಾ।
06088008c ಘಟೋತ್ಕಚೋ ಮಹಾರಾಜ ಕ್ರೋಧಸಂರಕ್ತಲೋಚನಃ।
06088008e ಉದ್ಯತಾಂ ತಾಂ ಮಹಾಶಕ್ತಿಂ ತಸ್ಮಿಂಶ್ಚಿಕ್ಷೇಪ ವಾರಣೇ।।

ಮಹಾರಾಜ! ಧೀಮತ ವಂಗರಾಜನು ಮಾರ್ಗವನ್ನು ತಡೆದುದನ್ನು ನೋಡಿ ಕ್ರೋಧದಿಂದ ಕಣ್ಣುಗಳನ್ನು ಕೆಂಪಾಗಿಸಿಕೊಂಡು ಘಟೋತ್ಕಚನು ಎತ್ತಿ ಹಿಡಿದಿದ್ದ ಆ ಮಹಾಶಕ್ತಿಯನ್ನು ಆ ಆನೆಯ ಮೇಲೆ ಎಸೆದನು.

06088009a ಸ ತಯಾಭಿಹತೋ ರಾಜಂಸ್ತೇನ ಬಾಹುವಿಮುಕ್ತಯಾ।
06088009c ಸಂಜಾತರುಧಿರೋತ್ಪೀಡಃ ಪಪಾತ ಚ ಮಮಾರ ಚ।।

ರಾಜನ್! ಅವನ ಬಾಹುಗಳಿಂದ ಹೊರಟ ಅದರಿಂದ ಹತವಾದ ಆನೆಯು ರಕ್ತವನ್ನು ಸುರಿಸಿ ನೋವಿನಿಂದ ಬಿದ್ದು ಸತ್ತುಹೋಯಿತು.

06088010a ಪತತ್ಯಥ ಗಜೇ ಚಾಪಿ ವಂಗಾನಾಮೀಶ್ವರೋ ಬಲೀ।
06088010c ಜವೇನ ಸಮಭಿದ್ರುತ್ಯ ಜಗಾಮ ಧರಣೀತಲಂ।।

ಆನೆಯು ಕೆಳಗೆ ಬೀಳುತ್ತಿದ್ದರೂ ಬಲಶಾಲೀ ವಂಗರಾಜನು ವೇಗದಿಂದ ಭೂಮಿಯ ಮೇಲೆ ಹಾರಿ ಇಳಿದನು.

06088011a ದುರ್ಯೋಧನೋಽಪಿ ಸಂಪ್ರೇಕ್ಷ್ಯ ಪಾತಿತಂ ವರವಾರಣಂ।
06088011c ಪ್ರಭಗ್ನಂ ಚ ಬಲಂ ದೃಷ್ಟ್ವಾ ಜಗಾಮ ಪರಮಾಂ ವ್ಯಥಾಂ।।

ದುರ್ಯೋಧನನೂ ಕೂಡ ಶ್ರೇಷ್ಠ ಆನೆಯು ಬಿದ್ದುದನ್ನು ನೋಡಿ ಮತ್ತು ತನ್ನ ಸೇನೆಯು ಭಗ್ನವಾದುದನ್ನು ನೋಡಿ ಪರಮ ವ್ಯಥಿತನಾದನು.

06088012a ಕ್ಷತ್ರಧರ್ಮಂ ಪುರಸ್ಕೃತ್ಯ ಆತ್ಮನಶ್ಚಾಭಿಮಾನಿತಾಂ।
06088012c ಪ್ರಾಪ್ತೇಽಪಕ್ರಮಣೇ ರಾಜಾ ತಸ್ಥೌ ಗಿರಿರಿವಾಚಲಃ।।

ಕ್ಷತ್ರಧರ್ಮವನ್ನು ಗೌರವಿಸಿ, ಆತ್ಮಾಭಿಮಾನದಿಂದ ಪಲಾಯನಕ್ಕೆ ಸಂದರ್ಭವಾಗಿದ್ದರೂ ರಾಜನು ಪರ್ವತದಂತೆ ಅಚಲವಾಗಿದ್ದನು.

06088013a ಸಂಧಾಯ ಚ ಶಿತಂ ಬಾಣಂ ಕಾಲಾಗ್ನಿಸಮತೇಜಸಂ।
06088013c ಮುಮೋಚ ಪರಮಕ್ರುದ್ಧಸ್ತಸ್ಮಿನ್ಘೋರೇ ನಿಶಾಚರೇ।।

ಪರಮ ಕ್ರುದ್ಧನಾಗಿ ಕಾಲಾಗ್ನಿತೇಜಸ್ಸಿನಿಂದ ಕೂಡಿದ್ದ ಹರಿತ ಬಾಣವನ್ನು ಹೂಡಿ ಅದನ್ನು ಘೋರ ನಿಶಾಚರನ ಮೇಲೆ ಪ್ರಯೋಗಿಸಿದನು.

06088014a ತಮಾಪತಂತಂ ಸಂಪ್ರೇಕ್ಷ್ಯ ಬಾಣಮಿಂದ್ರಾಶನಿಪ್ರಭಂ।
06088014c ಲಾಘವಾದ್ವಂಚಯಾಮಾಸ ಮಹಾಕಾಯೋ ಘಟೋತ್ಕಚಃ।।

ಇಂದ್ರನ ವಜ್ರದ ಪ್ರಭೆಯುಳ್ಳ ಆ ಬಾಣವು ಬೀಳುತ್ತಿರುವುದನ್ನು ನೋಡಿ ಮಹಾಕಾಯ ಘಟೋತ್ಕಚನು ಲಾಘವದಿಂದ ಅದನ್ನು ತಪ್ಪಿಸಿಕೊಂಡನು.

06088015a ಭೂಯ ಏವ ನನಾದೋಗ್ರಃ ಕ್ರೋಧಸಂರಕ್ತಲೋಚನಃ।
06088015c ತ್ರಾಸಯನ್ಸರ್ವಭೂತಾನಿ ಯುಗಾಂತೇ ಜಲದೋ ಯಥಾ।।

ಇನ್ನೊಮ್ಮೆ ಅವನು ಕ್ರೋಧಸಂರಕ್ತಲೋಚನನಾಗಿ ಯುಗಾಂತದಲ್ಲಿ ಮೋಡಗಳು ಹೇಗೋ ಹಾಗೆ ಸರ್ವಭೂತಗಳನ್ನೂ ನಡುಗಿಸುತ್ತಾ ಜೋರಾಗಿ ಗರ್ಜಿಸಿದನು.

06088016a ತಂ ಶ್ರುತ್ವಾ ನಿನದಂ ಘೋರಂ ತಸ್ಯ ಭೀಷ್ಮಸ್ಯ ರಕ್ಷಸಃ।
06088016c ಆಚಾರ್ಯಮುಪಸಂಗಮ್ಯ ಭೀಷ್ಮಃ ಶಾಂತನವೋಽಬ್ರವೀತ್।।

ರಾಕ್ಷಸನ ಆ ಭಯಂಕರ ಘೋರ ಕೂಗನ್ನು ಕೇಳಿ ಭೀಷ್ಮ ಶಾಂತನವನು ಆಚಾರ್ಯನ ಬಳಿಬಂದು ಹೇಳಿದನು:

06088017a ಯಥೈಷ ನಿನದೋ ಘೋರಃ ಶ್ರೂಯತೇ ರಾಕ್ಷಸೇರಿತಃ।
06088017c ಹೈಡಿಂಬೋ ಯುಧ್ಯತೇ ನೂನಂ ರಾಜ್ಞಾ ದುರ್ಯೋಧನೇನ ಹ।।

“ರಾಕ್ಷಸನ ಈ ಘೋರ ಗರ್ಜನೆಯು ಕೇಳಿಬರುತ್ತಿದೆಯಲ್ಲವೇ? ಹೈಡಿಂಬಿಯು ರಾಜಾ ದುರ್ಯೋಧನನೊಡನೆ ನೇರ ಯುದ್ಧವನ್ನು ಮಾಡುತ್ತಿರುವಂತಿದೆ.

06088018a ನೈಷ ಶಕ್ಯೋ ಹಿ ಸಂಗ್ರಾಮೇ ಜೇತುಂ ಭೂತೇನ ಕೇನ ಚಿತ್।
06088018c ತತ್ರ ಗಚ್ಛತ ಭದ್ರಂ ವೋ ರಾಜಾನಂ ಪರಿರಕ್ಷತ।।

ಇವನನ್ನು ಸಂಗ್ರಾಮದಲ್ಲಿ ಯಾವ ಜೀವಿಯೂ ಗೆಲ್ಲಲು ಶಕ್ಯವಿಲ್ಲ. ನೀವು ಅಲ್ಲಿಗೆ ಹೋಗಿ ರಾಜನನ್ನು ರಕ್ಷಿಸಿರಿ!

06088019a ಅಭಿದ್ರುತಂ ಮಹಾಭಾಗಂ ರಾಕ್ಷಸೇನ ದುರಾತ್ಮನಾ।
06088019c ಏತದ್ಧಿ ಪರಮಂ ಕೃತ್ಯಂ ಸರ್ವೇಷಾಂ ನಃ ಪರಂತಪಾಃ।।

ದುರಾತ್ಮ ರಾಕ್ಷಸನು ಮಹಾಭಾಗನನ್ನು ಆಕ್ರಮಣಿಸಿದ್ದಾನೆ. ಪರಂತಪರೇ! ಅವನನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ!”

06088020a ಪಿತಾಮಹವಚಃ ಶ್ರುತ್ವಾ ತ್ವರಮಾಣಾ ಮಹಾರಥಾಃ।
06088020c ಉತ್ತಮಂ ಜವಮಾಸ್ಥಾಯ ಪ್ರಯಯುರ್ಯತ್ರ ಕೌರವಃ।।

ಪಿತಾಮಹನ ಮಾತನ್ನು ಕೇಳಿ ಮಹಾರಥರು ತ್ವರೆಮಾಡಿ ಉತ್ತಮ ವೇಗದಿಂದ ಕೌರವನಿದ್ದಲ್ಲಿಗೆ ಹೊರಟರು.

06088021a ದ್ರೋಣಶ್ಚ ಸೋಮದತ್ತಶ್ಚ ಬಾಹ್ಲಿಕಶ್ಚ ಜಯದ್ರಥಃ।
06088021c ಕೃಪೋ ಭೂರಿಶ್ರವಾಃ ಶಲ್ಯಶ್ಚಿತ್ರಸೇನೋ ವಿವಿಂಶತಿಃ।।
06088022a ಅಶ್ವತ್ಥಾಮಾ ವಿಕರ್ಣಶ್ಚ ಆವಂತ್ಯಶ್ಚ ಬೃಹದ್ಬಲಃ।
06088022c ರಥಾಶ್ಚಾನೇಕಸಾಹಸ್ರಾ ಯೇ ತೇಷಾಮನುಯಾಯಿನಃ।
06088022e ಅಭಿದ್ರುತಂ ಪರೀಪ್ಸಂತಃ ಪುತ್ರಂ ದುರ್ಯೋಧನಂ ತವ।।

ದ್ರೋಣ, ಸೋಮದತ್ತ, ಬಾಹ್ಲಿಕ, ಜಯದ್ರಥ, ಕೃಪ, ಭೂರಿಶ್ರವ, ಶಲ್ಯ, ಚಿತ್ರಸೇನ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಅವಂತಿಯವರು, ಬೃಹದ್ಬಲ, ಮತ್ತು ಅವರನ್ನು ಹಿಂಬಾಲಿಸಿ ಅನೇಕ ಸಹಸ್ರ ರಥಗಳು ನಿನ್ನ ಮಗ ದುರ್ಯೋಧನನನ್ನು ರಕ್ಷಿಸಲು ಧಾವಿಸಿ ಬಂದರು.

06088023a ತದನೀಕಮನಾಧೃಷ್ಯಂ ಪಾಲಿತಂ ಲೋಕಸತ್ತಮೈಃ।
06088023c ಆತತಾಯಿನಮಾಯಾಂತಂ ಪ್ರೇಕ್ಷ್ಯ ರಾಕ್ಷಸಸತ್ತಮಃ।
06088023e ನಾಕಂಪತ ಮಹಾಬಾಹುರ್ಮೈನಾಕ ಇವ ಪರ್ವತಃ।।

ಲೋಕ ಸತ್ತಮರಿಂದ ಪಾಲಿತವಾದ ಆ ಅನಾಧೃಷ್ಠ ಸೇನೆಯೊಂದಿಗೆ ಬರುತ್ತಿದ್ದ ಆ ಆತತಾಯಿಯನ್ನು ನೋಡಿ ರಾಕ್ಷಸ ಸತ್ತಮ ಮಹಾಬಾಹುವು ಮೈನಾಕ ಪರ್ವತದಂತೆ ಅಲುಗಾಡಲಿಲ್ಲ.

06088024a ಪ್ರಗೃಹ್ಯ ವಿಪುಲಂ ಚಾಪಂ ಜ್ಞಾತಿಭಿಃ ಪರಿವಾರಿತಃ।
06088024c ಶೂಲಮುದ್ಗರಹಸ್ತೈಶ್ಚ ನಾನಾಪ್ರಹರಣೈರಪಿ।।

ಶೂಲ-ಮುದ್ಗರಗಳನ್ನೂ ನಾನಾ ಪ್ರಹರಣಗಳನ್ನೂ ಹಿಡಿದ ಜ್ಞಾತಿಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವನು ವಿಪುಲ ಧನುಸ್ಸನ್ನು ಎತ್ತಿಕೊಂಡನು.

06088025a ತತಃ ಸಮಭವದ್ಯುದ್ಧಂ ತುಮುಲಂ ಲೋಮಹರ್ಷಣಂ।
06088025c ರಾಕ್ಷಸಾನಾಂ ಚ ಮುಖ್ಯಸ್ಯ ದುರ್ಯೋಧನಬಲಸ್ಯ ಚ।।

ಆಗ ರಾಕ್ಷಸ ಮುಖ್ಯ ಮತ್ತು ದುರ್ಯೋಧನನ ಸೇನೆಯ ನಡುವೆ ರೋಮಾಂಚಕಾರಿಯಾದ ತುಮುಲ ಯುದ್ಧವು ನಡೆಯಿತು.

06088026a ಧನುಷಾಂ ಕೂಜತಾಂ ಶಬ್ದಃ ಸರ್ವತಸ್ತುಮುಲೋಽಭವತ್।
06088026c ಅಶ್ರೂಯತ ಮಹಾರಾಜ ವಂಶಾನಾಂ ದಹ್ಯತಾಮಿವ।।

ಮಹಾರಾಜ! ಧನುಸ್ಸುಗಳ ಟೇಂಕಾರದ ಶಬ್ಧವು ಎಲ್ಲಕಡೆ ಜೋರಾಗಿ ಬಿದಿರು ಮೆಳೆಗಳು ಸುಡುತ್ತಿರುವಂತೆ ಕೇಳಿ ಬರುತ್ತಿತ್ತು.

06088027a ಶಸ್ತ್ರಾಣಾಂ ಪಾತ್ಯಮಾನಾನಾಂ ಕವಚೇಷು ಶರೀರಿಣಾಂ।
06088027c ಶಬ್ದಃ ಸಮಭವದ್ರಾಜನ್ನದ್ರೀಣಾಮಿವ ದೀರ್ಯತಾಂ।।

ರಾಜನ್! ಶರೀರಗಳ ಕವಚಗಳ ಮೇಲೆ ಬೀಳುತ್ತಿದ್ದ ಶಸ್ತ್ರಗಳ ಶಬ್ಧವು ಪರ್ವತಗಳು ಸೀಳುತ್ತಿವೆಯೋ ಎಂಬಂತೆ ಕೇಳಿಬರುತ್ತಿತ್ತು.

06088028a ವೀರಬಾಹುವಿಸೃಷ್ಟಾನಾಂ ತೋಮರಾಣಾಂ ವಿಶಾಂ ಪತೇ।
06088028c ರೂಪಮಾಸೀದ್ವಿಯತ್ಸ್ಥಾನಾಂ ಸರ್ಪಾಣಾಂ ಸರ್ಪತಾಮಿವ।।

ವಿಶಾಂಪತೇ! ವೀರಬಾಹುಗಳು ಪ್ರಯೋಗಿಸಿದ ತೋಮರಗಳು ಆಕಾಶದಲ್ಲಿ ತೀವ್ರಗತಿಯಲ್ಲಿ ಚಲಿಸುವ ಸರ್ಪಗಳಂತಿದ್ದವು.

06088029a ತತಃ ಪರಮಸಂಕ್ರುದ್ಧೋ ವಿಸ್ಫಾರ್ಯ ಸುಮಹದ್ಧನುಃ।
06088029c ರಾಕ್ಷಸೇಂದ್ರೋ ಮಹಾಬಾಹುರ್ವಿನದನ್ಭೈರವಂ ರವಂ।।

ಆಗ ಮಹಾಬಾಹು ರಾಕ್ಷಸೇಂದ್ರನು ಮಹಾ ಧನುಸ್ಸನ್ನು ಟೇಂಕರಿಸಿ ಭೈರವ ಕೂಗನ್ನು ಕೂಗಿದನು.

06088030a ಆಚಾರ್ಯಸ್ಯಾರ್ಧಚಂದ್ರೇಣ ಕ್ರುದ್ಧಶ್ಚಿಚ್ಛೇದ ಕಾರ್ಮುಕಂ।
06088030c ಸೋಮದತ್ತಸ್ಯ ಭಲ್ಲೇನ ಧ್ವಜಮುನ್ಮಥ್ಯ ಚಾನದತ್।।

ಅವನು ಕ್ರುದ್ಧನಾಗಿ ಆಚಾರ್ಯನ ಧನುಸ್ಸನ್ನು ಅರ್ಧಚಂದ್ರ ಬಾಣದಿಂದ ಕತ್ತರಿಸಿದನು. ಭಲ್ಲದಿಂದ ಸೋಮದತ್ತನ ಧ್ವಜವನ್ನು ಹಾರಿಸಿ ಗರ್ಜಿಸಿದನು.

06088031a ಬಾಹ್ಲಿಕಂ ಚ ತ್ರಿಭಿರ್ಬಾಣೈರಭ್ಯವಿಧ್ಯತ್ಸ್ತನಾಂತರೇ।
06088031c ಕೃಪಮೇಕೇನ ವಿವ್ಯಾಧ ಚಿತ್ರಸೇನಂ ತ್ರಿಭಿಃ ಶರೈಃ।।

ಮೂರು ಬಾಣಗಳಿಂದ ಬಾಹ್ಲಿಕನ ಎದೆಗೆ ಹೊಡೆದನು. ಒಂದರಿಂದ ಕೃಪನನ್ನೂ ಮೂರು ಶರಗಳಿಂದ ಚಿತ್ರಸೇನನನ್ನೂ ಹೊಡೆದನು.

06088032a ಪೂರ್ಣಾಯತವಿಸೃಷ್ಟೇನ ಸಮ್ಯಕ್ಪ್ರಣಿಹಿತೇನ ಚ।
06088032c ಜತ್ರುದೇಶೇ ಸಮಾಸಾದ್ಯ ವಿಕರ್ಣಂ ಸಮತಾಡಯತ್।
06088032e ನ್ಯಷೀದತ್ಸ ರಥೋಪಸ್ಥೇ ಶೋಣಿತೇನ ಪರಿಪ್ಲುತಃ।।

ಚೆನ್ನಾಗಿ ಸಂಪೂರ್ಣವಾಗಿ ಧನುಸ್ಸನ್ನು ಎಳೆದು ವಿಕರ್ಣನ ಜತ್ರುದೇಶಕ್ಕೆ ಗುರಿಯಿಟ್ಟು ಹೊಡೆದನು. ಅವನು ರಕ್ತದಿಂದ ರಥದಲ್ಲಿಯೇ ಕುಸಿದು ಬಿದ್ದನು.

06088033a ತತಃ ಪುನರಮೇಯಾತ್ಮಾ ನಾರಾಚಾನ್ದಶ ಪಂಚ ಚ।
06088033c ಭೂರಿಶ್ರವಸಿ ಸಂಕ್ರುದ್ಧಃ ಪ್ರಾಹಿಣೋದ್ಭರತರ್ಷಭ।।
06088033e ತೇ ವರ್ಮ ಭಿತ್ತ್ವಾ ತಸ್ಯಾಶು ಪ್ರಾವಿಶನ್ಮೇದಿನೀತಲಂ।।

ಭರತರ್ಷಭ! ಪುನಃ ಆ ಅಮೇಯಾತ್ಮನು ಸಂಕ್ರುದ್ಧನಾಗಿ ಹದಿನೈದು ಬಾಣಗಳನ್ನು ಭೂರಿಶ್ರವನ ಮೇಲೆ ಪ್ರಯೋಗಿಸಿದನು. ಅವು ಅವನ ಕವಚವನ್ನು ಭೇದಿಸಿ ಶೀಘ್ರವಾಗಿ ಭೂಮಿಯ ಒಳಹೊಕ್ಕವು.

06088034a ವಿವಿಂಶತೇಶ್ಚ ದ್ರೌಣೇಶ್ಚ ಯಂತಾರೌ ಸಮತಾಡಯತ್।
06088034c ತೌ ಪೇತತೂ ರಥೋಪಸ್ಥೇ ರಶ್ಮೀನುತ್ಸೃಜ್ಯ ವಾಜಿನಾಂ।।

ವಿವಿಂಶತಿ ಮತ್ತು ದ್ರೌಣಿಯರ ಸಾರಥಿಗಳನ್ನು ಹೊಡೆಯಲು ಅವರಿಬ್ಬರೂ ಕುದುರೆಗಳ ಕಡಿವಾಣಗಳನ್ನು ಬಿಟ್ಟು ರಥದಿಂದ ಕೆಳಕ್ಕೆ ಬಿದ್ದರು.

06088035a ಸಿಂಧುರಾಜ್ಞೋಽರ್ಧಚಂದ್ರೇಣ ವಾರಾಹಂ ಸ್ವರ್ಣಭೂಷಿತಂ।
06088035c ಉನ್ಮಮಾಥ ಮಹಾರಾಜ ದ್ವಿತೀಯೇನಾಚ್ಛಿನದ್ಧನುಃ।।

ಮಹಾರಾಜ! ಅರ್ಧಚಂದ್ರ ಬಾಣದಿಂದ ಸಿಂಧುರಾಜನ ವಾರಾಹ ಚಿಹ್ನೆಯ ಸ್ವರ್ಣಭೂಷಿತ ಧ್ವಜವನ್ನು ಕತ್ತರಿಸಿ ಕೆಡವಿದನು. ಎರಡನೆಯದರಿಂದ ಅವನ ಬಿಲ್ಲನ್ನು ತುಂಡರಿಸಿದನು.

06088036a ಚತುರ್ಭಿರಥ ನಾರಾಚೈರಾವಂತ್ಯಸ್ಯ ಮಹಾತ್ಮನಃ।
06088036c ಜಘಾನ ಚತುರೋ ವಾಹಾನ್ಕ್ರೋಧಸಂರಕ್ತಲೋಚನಃ।।

ಆಗ ಕ್ರೋಧಸಂರಕ್ತಲೋಚನನಾದ ಆ ಮಹಾತ್ಮನು ಅವಂತಿಯವನ ನಾಲ್ಕು ಕುದುರೆಗಳನ್ನು ನಾಲ್ಕು ನಾರಾಚಗಳಿಂದ ಸಂಹರಿಸಿದನು.

06088037a ಪೂರ್ಣಾಯತವಿಸೃಷ್ಟೇನ ಪೀತೇನ ನಿಶಿತೇನ ಚ।
06088037c ನಿರ್ಬಿಭೇದ ಮಹಾರಾಜ ರಾಜಪುತ್ರಂ ಬೃಹದ್ಬಲಂ।
06088037e ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್।।

ಮಹಾರಾಜ! ಸಂಪೂರ್ಣವಾಗಿ ಎಳೆದು ಬಿಟ್ಟ ನಿಶಿತ ಬಾಣದಿಂದ ರಾಜಪುತ್ರ ಬೃಹದ್ಬಲನನ್ನು ಹೊಡೆದನು. ಆಳವಾಗಿ ಗಾಯಗೊಂಡ ಅವನು ವ್ಯಥಿತನಾಗಿ ರಥದಲ್ಲಿಯೇ ಕುಳಿತುಕೊಂಡನು.

06088038a ಭೃಶಂ ಕ್ರೋಧೇನ ಚಾವಿಷ್ಟೋ ರಥಸ್ಥೋ ರಾಕ್ಷಸಾಧಿಪಃ।
06088038c ಚಿಕ್ಷೇಪ ನಿಶಿತಾಂಸ್ತೀಕ್ಷ್ಣಾಂ ಶರಾನಾಶೀವಿಷೋಪಮಾನ್।
06088038e ಬಿಭಿದುಸ್ತೇ ಮಹಾರಾಜ ಶಲ್ಯಂ ಯುದ್ಧವಿಶಾರದಂ।।

ಬಹಳ ಕೋಪದಿಂದ ಆವಿಷ್ಟನಾಗಿ ರಥದಲ್ಲಿ ನಿಂತಿದ್ದ ರಾಕ್ಷಸಾಧಿಪನು ಸರ್ಪಗಳ ವಿಷಕ್ಕೆ ಸಮಾನವಾದ ನಿಶಿತ ತೀಕ್ಷ್ಣ ಶರಗಳನ್ನು ಯುದ್ಧವಿಶಾರದ ಶಲ್ಯನ ಮೇಲೆ ಎಸೆಯಲು ಅವು ಅವನ ಶರೀರವನ್ನು ಭೇದಿಸಿದವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭೀಷ್ಮವಧಪರ್ವಣಿ ಹೈಡಿಂಬಯುದ್ಧೇ ಅಷ್ಟಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೀಷ್ಮವಧಪರ್ವದಲ್ಲಿ ಹೈಡಿಂಬಯುದ್ಧ ಎನ್ನುವ ಎಂಭತ್ತೆಂಟನೇ ಅಧ್ಯಾಯವು.