ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 86
ಸಾರ
ಉಲೂಪಿಯಲ್ಲಿ ಅರ್ಜುನನನಿಗೆ ಹುಟ್ಟಿದ್ದ ಇರಾವನನು ತನ್ನ ಅಶ್ವಸೇನೆಯೊಂದಿಗೆ ರಣವನ್ನು ಪ್ರವೇಶಿಸಿದುದು (1-15). ಇರಾವನನು ಶಕುನಿಯ ಐದು ಮಕ್ಕಳನ್ನು ವಧಿಸಿದುದು (16-42). ಆರ್ಶ್ಯಶೃಂಗಿ-ಇರಾವನರ ಮಾಯಾ ಯುದ್ಧ; ಇರಾವನನ ವಧೆ (43-71). ಸಂಕುಲಯುದ್ಧ (72-86).
06086001 ಸಂಜಯ ಉವಾಚ।
06086001a ವರ್ತಮಾನೇ ತಥಾ ರೌದ್ರೇ ರಾಜನ್ವೀರವರಕ್ಷಯೇ।
06086001c ಶಕುನಿಃ ಸೌಬಲಃ ಶ್ರೀಮಾನ್ಪಾಂಡವಾನ್ಸಮುಪಾದ್ರವತ್।।
ಸಂಜಯನು ಹೇಳಿದನು: “ರಾಜನ್! ಹಾಗೆ ನಡೆಯುತ್ತಿರುವ ವೀರವರಕ್ಷಯ ರೌದ್ರ ಯುದ್ದದಲ್ಲಿ ಶ್ರೀಮಾನ್ ಸೌಬಲ ಶಕುನಿಯು ಪಾಂಡವರನ್ನು ಎದುರಿಸಿದನು.
06086002a ತಥೈವ ಸಾತ್ವತೋ ರಾಜನ್ ಹಾರ್ದಿಕ್ಯಃ ಪರವೀರಹಾ।
06086002c ಅಭ್ಯದ್ರವತ ಸಂಗ್ರಾಮೇ ಪಾಂಡವಾನಾಮನೀಕಿನೀಂ।।
ರಾಜನ್! ಹಾಗೆಯೇ ಪರವೀರಹ ಸಾತ್ವತ ಹಾರ್ದಿಕ್ಯನೂ ಕೂಡ ಸಂಗ್ರಾಮದಲ್ಲಿ ಪಾಂಡವರ ಸೇನೆಯನ್ನು ಆಕ್ರಮಣಿಸಿದನು.
06086003a ತತಃ ಕಾಂಬೋಜಮುಖ್ಯಾನಾಂ ನದೀಜಾನಾಂ ಚ ವಾಜಿನಾಂ।
06086003c ಆರಟ್ಟಾನಾಂ ಮಹೀಜಾನಾಂ ಸಿಂಧುಜಾನಾಂ ಚ ಸರ್ವಶಃ।।
06086004a ವನಾಯುಜಾನಾಂ ಶುಭ್ರಾಣಾಂ ತಥಾ ಪರ್ವತವಾಸಿನಾಂ।
06086004c ಯೇ ಚಾಪರೇ ತಿತ್ತಿರಜಾ ಜವನಾ ವಾತರಂಹಸಃ।।
06086005a ಸುವರ್ಣಾಲಂಕೃತೈರೇತೈರ್ವರ್ಮವದ್ಭಿಃ ಸುಕಲ್ಪಿತೈಃ।
06086005c ಹಯೈರ್ವಾತಜವೈರ್ಮುಖ್ಯೈಃ ಪಾಂಡವಸ್ಯ ಸುತೋ ಬಲೀ।।
06086005e ಅಭ್ಯವರ್ತತ ತತ್ಸೈನ್ಯಂ ಹೃಷ್ಟರೂಪಃ ಪರಂತಪಃ।।
ಆಗ ಕಾಂಬೋಜಮುಖ್ಯ ಮತ್ತು ನದಿಗಳಲ್ಲಿ ಹುಟ್ಟಿದ ಕುದುರೆಗಳಿಂದ, ಅರಟ್ಟರು, ಮಹೀಜರು ಮತ್ತು ಸಿಂಧುಜರಿಂದ ಸುತ್ತುವರೆಯಲ್ಪಟ್ಟು, ವನಾಯುಜರು, ಶುಭ್ರರು ಮತ್ತು ಪರ್ವತವಾಸಿಗಳಿಂದ, ಮತ್ತು ಇತರ ತಿತ್ತಿರಜ ಮೊದಲಾದ ವಾಯುವೇಗವುಳ್ಳ ಸುವರ್ಣಾಲಂಕೃತಗೊಂಡ, ಕವಚಕಗಳನ್ನು ಧರಿಸಿದ್ದ ಸುಕಲ್ಪಿತವಾದ, ಹಯಗಳೊಡನೆ ಪಾಂಡವನ ಬಲಶಾಲೀ ಮಗ ಹೃಷ್ಟರೂಪ ಪರಂತಪನು ಆ ಸೈನ್ಯವನ್ನು ಎದುರಿಸಿದನು.
06086006a ಅರ್ಜುನಸ್ಯಾಥ ದಾಯಾದ ಇರಾವಾನ್ನಾಮ ವೀರ್ಯವಾನ್।
06086006c ಸುತಾಯಾಂ ನಾಗರಾಜಸ್ಯ ಜಾತಃ ಪಾರ್ಥೇನ ಧೀಮತಾ।।
ಇವನು ಇರಾವನ್ ಎಂಬ ಹೆಸರಿನ ಅರ್ಜುನನ ವೀರ್ಯವಾನ್ ಮಗ. ನಾಗರಾಜನ ಮಗಳಲ್ಲಿ ಧೀಮತ ಪಾರ್ಥನಿಂದ ಹುಟ್ಟಿದವನು.
06086007a ಐರಾವತೇನ ಸಾ ದತ್ತಾ ಅನಪತ್ಯಾ ಮಹಾತ್ಮನಾ।
06086007c ಪತ್ಯೌ ಹತೇ ಸುಪರ್ಣೇನ ಕೃಪಣಾ ದೀನಚೇತನಾ।।
ಗರುಡನಿಂದ ತನ್ನ ಪತಿಯನ್ನು ಕಳೆದುಕೊಂಡ ಮಕ್ಕಳಿರದ, ದೀನಚೇತನಳಾಗಿದ್ದ, ಕೃಪಣಳಾಗಿದ್ದ ಅವಳನ್ನು ಮಹಾತ್ಮ ಐರಾವತನು ಅವನಿಗೆ ಕೊಟ್ಟಿದ್ದನು.
06086008a ಭಾರ್ಯಾರ್ಥಂ ತಾಂ ಚ ಜಗ್ರಾಹ ಪಾರ್ಥಃ ಕಾಮವಶಾನುಗಾಂ।
06086008c ಏವಮೇಷ ಸಮುತ್ಪನ್ನಃ ಪರಕ್ಷೇತ್ರೇಽರ್ಜುನಾತ್ಮಜಃ।।
ಕಾಮವಶಾನುಗಳಾಗಿದ್ದ ಅವಳನ್ನು ಪಾರ್ಥನು ಪತ್ನಿಯನ್ನಾಗಿ ಸ್ವೀಕರಿಸಿದ್ದನು. ಇವನೇ ಇನ್ನೊಬ್ಬನ ಹೆಂಡತಿಯಲ್ಲಿ (ಪರಕ್ಷೇತ್ರದಲ್ಲಿ) ಹುಟ್ಟಿದ ಅರ್ಜುನನ ಮಗ1.
06086009a ಸ ನಾಗಲೋಕೇ ಸಂವೃದ್ಧೋ ಮಾತ್ರಾ ಚ ಪರಿರಕ್ಷಿತಃ।
06086009c ಪಿತೃವ್ಯೇಣ ಪರಿತ್ಯಕ್ತಃ ಪಾರ್ಥದ್ವೇಷಾದ್ದುರಾತ್ಮನಾ।।
ಪಾರ್ಥನ ದ್ವೇಷದಿಂದಾಗಿ ಚಿಕ್ಕಪ್ಪನಿಂದ ಪರಿತ್ಯಕ್ತನಾದ ಅವನು ನಾಗಲೋಕದಲ್ಲಿ ತಾಯಿಯಿಂದ ಪರಿರಕ್ಷಿತನಾಗಿ ಬೆಳೆದನು[^143].
06086010a ರೂಪವಾನ್ವೀರ್ಯಸಂಪನ್ನೋ ಗುಣವಾನ್ಸತ್ಯವಿಕ್ರಮಃ।
06086010c ಇಂದ್ರಲೋಕಂ ಜಗಾಮಾಶು ಶ್ರುತ್ವಾ ತತ್ರಾರ್ಜುನಂ ಗತಂ।।
ರೂಪವಂತನೂ, ಗುಣವಂತನೂ, ವೀರ್ಯಸಂಪನ್ನನೂ, ಸತ್ಯವಿಕ್ರಮಿಯೂ ಆದ ಅವನು ಅಲ್ಲಿಗೆ ಅರ್ಜುನನು ಹೋಗಿದ್ದುದನ್ನು ಕೇಳಿ ಇಂದ್ರಲೋಕಕ್ಕೆ ಹೋಗಿದ್ದನು.
06086011a ಸೋಽಭಿಗಮ್ಯ ಮಹಾತ್ಮಾನಂ ಪಿತರಂ ಸತ್ಯವಿಕ್ರಮಂ।
06086011c ಅಭ್ಯವಾದಯದವ್ಯಗ್ರೋ ವಿನಯೇನ ಕೃತಾಂಜಲಿಃ।
06086011e ಇರಾವಾನಸ್ಮಿ ಭದ್ರಂ ತೇ ಪುತ್ರಶ್ಚಾಹಂ ತವಾಭಿಭೋ।।
ಆ ಅವ್ಯಗ್ರನು ಅಲ್ಲಿಗೆ ಹೋಗಿ ತಂದೆ ಮಹಾತ್ಮ ಸತ್ಯವಿಕ್ರಮಿಗೆ ವಿನಯದಿಂದ ಕೈಮುಗಿದು ನಮಸ್ಕರಿಸಿ ಹೇಳಿದ್ದನು: “ಪ್ರಭೋ! ನಾನು ಇರಾವಾನ್. ನಿನ್ನ ಮಗ.”
06086012a ಮಾತುಃ ಸಮಾಗಮೋ ಯಶ್ಚ ತತ್ಸರ್ವಂ ಪ್ರತ್ಯವೇದಯತ್।
06086012c ತಚ್ಚ ಸರ್ವಂ ಯಥಾವೃತ್ತಮನುಸಸ್ಮಾರ ಪಾಂಡವಃ।।
ಅವನು ತಾಯಿಯನ್ನು ಎಂದು ಭೇಟಿಯಾಗಿದ್ದನು ಎಲ್ಲವನ್ನೂ ಹೇಳಿಕೊಂಡನು. ಅವೆಲ್ಲವನ್ನು ನಡೆದ ಹಾಗೆಯೇ ಪಾಂಡವನು ನೆನಪಿಸಿಕೊಂಡನು.
06086013a ಪರಿಷ್ವಜ್ಯ ಸುತಂ ಚಾಪಿ ಸೋಽಆತ್ಮನಃ ಸದೃಶಂ ಗುಣೈಃ।
06086013c ಪ್ರೀತಿಮಾನಭವತ್ಪಾರ್ಥೋ ದೇವರಾಜನಿವೇಶನೇ।।
ದೇವರಾಜ ನಿವೇಶನದಲ್ಲಿ ಪಾರ್ಥನು ತನ್ನದೇ ಸಮಾನ ಗುಣಗಳನ್ನು ಹೊಂದಿದ್ದ ಮಗನನ್ನು ಪ್ರೀತಿಯಿಂದ ಅಪ್ಪಿಕೊಂಡು ಸಂತೋಷಭರಿತನಾಗಿದ್ದನು.
06086014a ಸೋಽರ್ಜುನೇನ ಸಮಾಜ್ಞಪ್ತೋ ದೇವಲೋಕೇ ತದಾ ನೃಪ।
06086014c ಪ್ರೀತಿಪೂರ್ವಂ ಮಹಾಬಾಹುಃ ಸ್ವಕಾರ್ಯಂ ಪ್ರತಿ ಭಾರತ।
06086014e ಯುದ್ಧಕಾಲೇ ತ್ವಯಾಸ್ಮಾಕಂ ಸಾಹ್ಯಂ ದೇಯಮಿತಿ ಪ್ರಭೋ।।
ನೃಪ! ಪ್ರಭೋ! ಭಾರತ! ಆಗ ದೇವಲೋಕದಲ್ಲಿ ಮಹಾಬಾಹು ಅರ್ಜುನನು ಸ್ವಕಾರ್ಯಕ್ಕಾಗಿ ಪ್ರೀತಿಪೂರ್ವಕವಾಗಿ ಯುದ್ಧಕಾಲದಲ್ಲಿ ನಮಗೆ ನಿನ್ನ ಸಹಾಯವನ್ನು ನೀಡು ಎಂದು ಆಜ್ಞೆಯಿತ್ತಿದ್ದನು.
06086015a ಬಾಢಮಿತ್ಯೇವಮುಕ್ತ್ವಾ ಚ ಯುದ್ಧಕಾಲ ಉಪಾಗತಃ।
06086015c ಕಾಮವರ್ಣಜವೈರಶ್ವೈಃ ಸಂವೃತೋ ಬಹುಭಿರ್ನೃಪ।।
ಒಳ್ಳೆಯದು ಎಂದು ಹೇಳಿ ಅವನು ಯುದ್ಧಕಾಲದಲ್ಲಿ ಅನೇಕ ಕಾಮವರ್ಣಗಳ, ವೇಗಶಾಲೀ ಕುದುರೆಗಳಿಂದ ಸಂವೃತನಾಗಿ ಬಂದನು.
06086016a ತೇ ಹಯಾಃ ಕಾಂಚನಾಪೀಡಾ ನಾನಾವರ್ಣಾ ಮನೋಜವಾಃ।
06086016c ಉತ್ಪೇತುಃ ಸಹಸಾ ರಾಜನ್ ಹಂಸಾ ಇವ ಮಹೋದಧೌ।।
ರಾಜನ್! ಕಾಂಚನದೇಹದ, ನಾನಾವರ್ಣಗಳ, ಮನಸ್ಸಿನ ವೇಗವುಳ್ಳ ಆ ಕುದುರೆಗಳು ಒಮ್ಮಿಂದೊಮ್ಮೆಲೇ ಹಂಸಗಳಂತೆ ಮಹಾಸಾಗರದಿಂದ ಮೇಲೆದ್ದವು.
06086017a ತೇ ತ್ವದೀಯಾನ್ಸಮಾಸಾದ್ಯ ಹಯಸಂಘಾನ್ಮಹಾಜವಾನ್।
06086017c ಕ್ರೋಡೈಃ ಕ್ರೋಡಾನಭಿಘ್ನಂತೋ ಘೋಣಾಭಿಶ್ಚ ಪರಸ್ಪರಂ।
06086017e ನಿಪೇತುಃ ಸಹಸಾ ರಾಜನ್ಸುವೇಗಾಭಿಹತಾ ಭುವಿ।।
ಅವು ನಿನ್ನ ಸೇನೆಯ ಕುದುರೆಗಳ ಗುಂಪನ್ನು ತಲುಪಿ ಮೂಗಿನಿಂದ ಮೂಗುಗಳನ್ನು, ಕುತ್ತಿಗೆಗಳನ್ನು ಪರಸ್ಪರ ಹೊಡೆಯಲು ನಿನ್ನವರ ಕುದುರೆಗಳು ತಕ್ಷಣವೇ ಭೂಮಿಯ ಮೇಲೆ ಬಿದ್ದವು.
06086018a ನಿಪತದ್ಭಿಸ್ತಥಾ ತೈಶ್ಚ ಹಯಸಂಘೈಃ ಪರಸ್ಪರಂ।
06086018c ಶುಶ್ರುವೇ ದಾರುಣಃ ಶಬ್ದಃ ಸುಪರ್ಣಪತನೇ ಯಥಾ।।
ಆ ಕುದುರೆಗಳ ಸಮೂಹಗಳು ಪರಸ್ಪರರನ್ನು ಹೊಡೆದು ಬೀಳಿಸುವಾಗ ಗರುಡನು ಕೆಳಗಿಳಿಯುವಂತೆ ದಾರುಣ ಶಬ್ಧವು ಕೇಳಿಬಂದಿತು.
06086019a ತಥೈವ ಚ ಮಹಾರಾಜ ಸಮೇತ್ಯಾನ್ಯೋನ್ಯಮಾಹವೇ।
06086019c ಪರಸ್ಪರವಧಂ ಘೋರಂ ಚಕ್ರುಸ್ತೇ ಹಯಸಾದಿನಃ।।
ಮಹಾರಾಜ! ಹಾಗೆಯೇ ಯುದ್ಧದಲ್ಲಿ ಅನ್ಯೋನ್ಯರನ್ನು ತಾಗಿ ಆ ಅಶ್ವಾರೋಹಿಗಳು ಘೋರ ಪರಸ್ಪರವಧೆಯಲ್ಲಿ ತೊಡಗಿದರು.
06086020a ತಸ್ಮಿಂಸ್ತಥಾ ವರ್ತಮಾನೇ ಸಂಕುಲೇ ತುಮುಲೇ ಭೃಶಂ।
06086020c ಉಭಯೋರಪಿ ಸಂಶಾಂತಾ ಹಯಸಂಘಾಃ ಸಮಂತತಃ।।
ನಡೆಯುತ್ತಿದ್ದ ಆ ತುಮುಲ ಸಂಕುಲ ಯುದ್ಧದಲ್ಲಿ ಎರಡೂ ಕಡೆಯ ಕುದುರೆಗಳು ಗುಂಪು ಗುಂಪಾಗಿ ಎಲ್ಲ ಕಡೆ ಓಡುತ್ತಿದ್ದವು.
06086021a ಪ್ರಕ್ಷೀಣಸಾಯಕಾಃ ಶೂರಾ ನಿಹತಾಶ್ವಾಃ ಶ್ರಮಾತುರಾಃ।
06086021c ವಿಲಯಂ ಸಮನುಪ್ರಾಪ್ತಾಸ್ತಕ್ಷಮಾಣಾಃ ಪರಸ್ಪರಂ।।
ಸಾಯಕಗಳಿಂದ ಗಾಯಗೊಂಡು, ಅಶ್ವಗಳನ್ನು ಕಳೆದುಕೊಂಡು ಆಯಾಸಗೊಂಡ ಶೂರರು ಪರಸ್ಪರರನ್ನು ಎದುರಿಸಿ ನಾಶ ಹೊಂದಿದರು.
06086022a ತತಃ ಕ್ಷೀಣೇ ಹಯಾನೀಕೇ ಕಿಂಚಿಚ್ಛೇಷೇ ಚ ಭಾರತ।
06086022c ಸೌಬಲಸ್ಯಾತ್ಮಜಾಃ ಶೂರಾ ನಿರ್ಗತಾ ರಣಮೂರ್ಧನಿ।।
ಭಾರತ! ಕುದುರೆಗಳ ಸೇನೆಗಳು ನಾಶವಾಗಿ ಸ್ವಲ್ಪವೇ ಉಳಿದಿರಲು ಸೌಬಲನ ಶೂರ ಮಕ್ಕಳು ರಣಮೂರ್ಧನಿಗೆ ತೆರಳಿದರು.
06086023a ವಾಯುವೇಗಸಮಸ್ಪರ್ಶಾ ಜವೇ ವಾಯುಸಮಾಂಸ್ತಥಾ।
06086023c ಆರುಹ್ಯಯ ಶೀಲಸಂಪನ್ನಾನ್ವಯಃಸ್ಥಾಂಸ್ತುರಗೋತ್ತಮಾನ್।।
06086024a ಗಜೋ ಗವಾಕ್ಷೋ ವೃಷಕಶ್ಚರ್ಮವಾನಾರ್ಜವಃ ಶುಕಃ।
06086024c ಷಡೇತೇ ಬಲಸಂಪನ್ನಾ ನಿರ್ಯಯುರ್ಮಹತೋ ಬಲಾತ್।।
ಗಜ, ಗವಾಕ್ಷ, ವೃಷಕ, ಚರ್ಮವಾನ್, ಆರ್ಜವ ಮತ್ತು ಶುಕ ಈ ಆರು ಬಲಸಂಪನ್ನರು ಮುಟ್ಟಿದರೆ ವಾಯುವೇಗದಲ್ಲಿ ಹೋಗಬಲ್ಲ, ವೇಗದಲ್ಲಿ ವಾಯುವಿನ ಸಮನಾಗಿರುವ, ಶೀಲಸಂಪನ್ನ, ತರುಣ, ಉತ್ತಮ ಕುದುರೆಗಳನ್ನೇರಿ, ಮಹಾ ಸೇನೆಯೊಂದಿಗೆ ಬಂದರು.
06086025a ವಾರ್ಯಮಾಣಾಃ ಶಕುನಿನಾ ಸ್ವೈಶ್ಚ ಯೋಧೈರ್ಮಹಾಬಲೈಃ।
06086025c ಸನ್ನದ್ಧಾ ಯುದ್ಧಕುಶಲಾ ರೌದ್ರರೂಪಾ ಮಹಾಬಲಾಃ।।
ಸ್ವಯಂ ಶಕುನಿಯಿಂದ ಮತ್ತು ಮಹಾಬಲ ಯೋಧರಿಂದ ತಡೆಯಲ್ಪಟ್ಟರೂ ಕೂಡ ಆ ರೌದ್ರರೂಪೀ ಯುದ್ಧ ಕುಶಲ ಮಹಾಬಲರು ಸನ್ನದ್ಧರಾದರು.
06086026a ತದನೀಕಂ ಮಹಾಬಾಹೋ ಭಿತ್ತ್ವಾ ಪರಮದುರ್ಜಯಂ।
06086026c ಬಲೇನ ಮಹತಾ ಯುಕ್ತಾಃ ಸ್ವರ್ಗಾಯ ವಿಜಯೈಷಿಣಃ।
06086026e ವಿವಿಶುಸ್ತೇ ತದಾ ಹೃಷ್ಟಾ ಗಾಂಧಾರಾ ಯುದ್ಧದುರ್ಮದಾಃ।।
ಮಹಾಬಾಹೋ! ಯುದ್ಧ ದುರ್ಮದರಾಗಿದ್ದ ಹೃಷ್ಟರಾಗಿದ್ದ ಗಾಂಧಾರರು ಸ್ವರ್ಗ ಅಥವಾ ವಿಜಯವನ್ನು ಬಯಸಿ ಮಹಾ ಸೇನೆಯೊಡಗೂಡಿ ಆ ಪರಮ ದುರ್ಜಯ ಸೇನೆಯನ್ನು ಭೇದಿಸಿ ಒಳಹೊಕ್ಕರು.
06086027a ತಾನ್ಪ್ರವಿಷ್ಟಾಂಸ್ತದಾ ದೃಷ್ಟ್ವಾ ಇರಾವಾನಪಿ ವೀರ್ಯವಾನ್।
06086027c ಅಬ್ರವೀತ್ಸಮರೇ ಯೋಧಾನ್ವಿಚಿತ್ರಾಭರಣಾಯುಧಾನ್।।
ಅವರು ಹಾಗೆ ಪ್ರವೇಶಿಸಿದನ್ನು ನೋಡಿ ವೀರ್ಯವಾನ್ ಇರಾವಾನನೂ ಕೂಡ ಸಮರದಲ್ಲಿ ವಿಚಿತ್ರ ಆಭರಣ ಆಯುಧಗಳನ್ನು ಧರಿಸಿದ್ದ ಯೋಧರಿಗೆ ಹೇಳಿದನು:
06086028a ಯಥೈತೇ ಧಾರ್ತರಾಷ್ಟ್ರಸ್ಯ ಯೋಧಾಃ ಸಾನುಗವಾಹನಾಃ।
06086028c ಹನ್ಯಂತೇ ಸಮರೇ ಸರ್ವೇ ತಥಾ ನೀತಿರ್ವಿಧೀಯತಾಂ।।
“ಅನುಚರರು ಮತ್ತು ವಾಹನಗಳೊಂದಿಗೆ ಬಂದಿರುವ ಈ ಧಾರ್ತರಾಷ್ಟ್ರನ ಯೋಧರು ಎಲ್ಲರೂ ಸಮರದಲ್ಲಿ ಮೃತ್ಯುವನ್ನಪ್ಪುವಂಥಹ ನೀತಿಯನ್ನು ಕೈಗೊಳ್ಳಿರಿ!”
06086029a ಬಾಢಮಿತ್ಯೇವಮುಕ್ತ್ವಾ ತೇ ಸರ್ವೇ ಯೋಧಾ ಇರಾವತಃ।
06086029c ಜಘ್ನುಸ್ತೇ ವೈ ಪರಾನೀಕಂ ದುರ್ಜಯಂ ಸಮರೇ ಪರೈಃ।।
ಒಳ್ಳೆಯದು ಎಂದು ಹೇಳಿ ಇರಾವತನ ಎಲ್ಲ ಯೋಧರೂ ಸಮರದಲ್ಲಿ ಶತ್ರುಗಳಿಗೆ ದುರ್ಜಯರಾದ ಆ ಶತ್ರುಸೇನೆಯನ್ನು ಸಂಹರಿಸಿದರು.
06086030a ತದನೀಕಮನೀಕೇನ ಸಮರೇ ವೀಕ್ಷ್ಯ ಪಾತಿತಂ।
06086030c ಅಮೃಷ್ಯಮಾಣಾಸ್ತೇ ಸರ್ವೇ ಸುಬಲಸ್ಯಾತ್ಮಜಾ ರಣೇ।
06086030e ಇರಾವಂತಮಭಿದ್ರುತ್ಯ ಸರ್ವತಃ ಪರ್ಯವಾರಯನ್।।
ಅವನ ಸೇನೆಯಿಂದ ತಮ್ಮ ಸೇನೆಯು ಸಮರದಲ್ಲಿ ಬಿದ್ದುದನ್ನು ನೋಡಿ ರಣದಲ್ಲಿ ಉದ್ರಿಕ್ತರಾಗಿ ಸುಬಲನ ಮಕ್ಕಳೆಲ್ಲರೂ ಇರಾವಂತನನ್ನು ಎದುರಿಸಿ ಎಲ್ಲ ಕಡೆಗಳಿಂದ ಸುತ್ತುವರೆದರು.
06086031a ತಾಡಯಂತಃ ಶಿತೈಃ ಪ್ರಾಸೈಶ್ಚೋದಯಂತಃ ಪರಸ್ಪರಂ।
06086031c ತೇ ಶೂರಾಃ ಪರ್ಯಧಾವಂತ ಕುರ್ವಂತೋ ಮಹದಾಕುಲಂ।।
ಹರಿತ ಪ್ರಾಸಗಳಿಂದ ಹೊಡೆಯುತ್ತಾ, ಪರಸ್ಪರರನ್ನು ಪ್ರಚೋದನೆಗೊಳಿಸುತ್ತಾ ಆ ಶೂರರು ಅವನನ್ನು ಸುತ್ತುವರೆದು ಮಹಾ ವ್ಯಾಕುಲವನ್ನುಂಟುಮಾಡಿದರು.
06086032a ಇರಾವಾನಥ ನಿರ್ಭಿನ್ನಃ ಪ್ರಾಸೈಸ್ತೀಕ್ಷ್ಣೈರ್ಮಹಾತ್ಮಭಿಃ।
06086032c ಸ್ರವತಾ ರುಧಿರೇಣಾಕ್ತಸ್ತೋತ್ತ್ರೈರ್ವಿದ್ಧ ಇವ ದ್ವಿಪಃ।।
ಆ ಮಹಾತ್ಮರ ತೀಕ್ಷ್ಣ ಪ್ರಾಸಗಳಿಂದ ಗಾಯಗೊಂಡು ಇರಾವಾನನು ರಕ್ತದಿಂದ ತೋಯ್ದು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಾಕುಲಗೊಂಡನು.
06086033a ಉರಸ್ಯಪಿ ಚ ಪೃಷ್ಠೇ ಚ ಪಾರ್ಶ್ವಯೋಶ್ಚ ಭೃಶಾಹತಃ।
06086033c ಏಕೋ ಬಹುಭಿರತ್ಯರ್ಥಂ ಧೈರ್ಯಾದ್ರಾಜನ್ನ ವಿವ್ಯಥೇ।।
ರಾಜನ್! ಒಬ್ಬನಾಗಿದ್ದರೂ ಅನೇಕರು ಎದುರಿನಿಂದ, ಹಿಂದಿನಿಂದ ಮತ್ತು ಪಕ್ಕಗಳಿಂದ ಚೆನ್ನಾಗಿ ಪ್ರಹರಿಸುತ್ತಿದ್ದರೂ ಅವನು ಧೈರ್ಯವನ್ನು ಕಳೆದುಕೊಳ್ಳಲಿಲ್ಲ.
06086034a ಇರಾವಾನಥ ಸಂಕ್ರುದ್ಧಃ ಸರ್ವಾಂಸ್ತಾನ್ನಿಶಿತೈಃ ಶರೈಃ।
06086034c ಮೋಹಯಾಮಾಸ ಸಮರೇ ವಿದ್ಧ್ವಾ ಪರಪುರಂಜಯಃ।।
ಆಗ ಸಂಕ್ರುದ್ಧನಾದ ಪರಪುರಂಜಯ ಇರಾವಾನನು ಸಮರದಲ್ಲಿ ಅವರೆಲ್ಲರನ್ನೂ ನಿಶಿತ ಶರಗಳಿಂದ ಹೊಡೆದು ಮೂರ್ಛೆಗೊಳಿಸಿದನು.
06086035a ಪ್ರಾಸಾನುದ್ಧೃತ್ಯ ಸರ್ವಾಂಶ್ಚ ಸ್ವಶರೀರಾದರಿಂದಮಃ।
06086035c ತೈರೇವ ತಾಡಯಾಮಾಸ ಸುಬಲಸ್ಯಾತ್ಮಜಾನ್ರಣೇ।।
ತನ್ನ ಶರೀರರ ಸರ್ವಾಂಗಗಳಿಗೆ ಚುಚ್ಚಿಕೊಂಡಿದ್ದ ಪ್ರಾಸಗಳನ್ನು ಕಿತ್ತು ತೆಗೆದು ಅವುಗಳಿಂದಲೇ ರಣದಲ್ಲಿ ಸುಬಲನ ಮಕ್ಕಳನ್ನು ಪ್ರಹರಿಸಿದನು.
06086036a ನಿಕೃಷ್ಯ ನಿಶಿತಂ ಖಡ್ಗಂ ಗೃಹೀತ್ವಾ ಚ ಶರಾವರಂ।
06086036c ಪದಾತಿಸ್ತೂರ್ಣಮಾಗಚ್ಛಜ್ಜಿಘಾಂಸುಃ ಸೌಬಲಾನ್ಯುಧಿ।।
ಅನಂತರ ನಿಶಿತ ಖಡ್ಗವನ್ನು ಎಳೆದು ತೆಗೆದುಕೊಂಡು ಗುರಾಣಿಯನ್ನೂ ಹಿಡಿದು ತಕ್ಷಣವೇ ಆ ಸೌಬಲರನ್ನು ಯುದ್ಧದಲ್ಲಿ ಸಂಹರಿಸಲು ಪದಾತಿಯಾಗಿಯೇ ನಡೆದನು.
06086037a ತತಃ ಪ್ರತ್ಯಾಗತಪ್ರಾಣಾಃ ಸರ್ವೇ ತೇ ಸುಬಲಾತ್ಮಜಾಃ।
06086037c ಭೂಯಃ ಕ್ರೋಧಸಮಾವಿಷ್ಟಾ ಇರಾವಂತಮಥಾದ್ರವನ್।।
ಆಗ ಪುನಃ ಎಚ್ಚೆತ್ತಿದ್ದ ಆ ಎಲ್ಲ ಸುಬಲಾತ್ಮಜರು ಪುನಃ ಕ್ರೋಧಸಮಾವಿಷ್ಟರಾಗಿ ಇರವಂತನನ್ನು ಆಕ್ರಮಣಿಸಿದರು.
06086038a ಇರಾವಾನಪಿ ಖಡ್ಗೇನ ದರ್ಶಯನ್ಪಾಣಿಲಾಘವಂ।
06086038c ಅಭ್ಯವರ್ತತ ತಾನ್ಸರ್ವಾನ್ಸೌಬಲಾನ್ಬಲದರ್ಪಿತಃ।।
ಬಲದರ್ಪಿತ ಇರವಾನನೂ ಕೂಡ ಖಡ್ಗದಲ್ಲಿ ತನ್ನ ಕೈಚಳಕವನ್ನು ತೋರಿಸುತ್ತಾ ಅವರೆಲ್ಲ ಸೌಬಲರನ್ನೂ ಎದುರಿಸಿದನು.
06086039a ಲಾಘವೇನಾಥ ಚರತಃ ಸರ್ವೇ ತೇ ಸುಬಲಾತ್ಮಜಾಃ।
06086039c ಅಂತರಂ ನಾಧ್ಯಗಚ್ಛಂತ ಚರಂತಃ ಶೀಘ್ರಗಾಮಿನಃ।।
ಚಾಕಚಕ್ಯತೆಯಿಂದ ಓಡಾಡುತ್ತಿದ್ದ ಆ ಸುಬಲಾತ್ಮಜರೆಲ್ಲರೂ ಶೀಘ್ರವಾಗಿ ಚಲಿಸುತ್ತಿರುವ ಅವನನ್ನು ಹೊಡೆಯಲು ಅವಕಾಶವನ್ನೇ ಪಡೆಯಲಿಲ್ಲ.
06086040a ಭೂಮಿಷ್ಠಮಥ ತಂ ಸಂಖ್ಯೇ ಸಂಪ್ರದೃಶ್ಯ ತತಃ ಪುನಃ।
06086040c ಪರಿವಾರ್ಯ ಭೃಶಂ ಸರ್ವೇ ಗ್ರಹೀತುಮುಪಚಕ್ರಮುಃ।।
ಯುದ್ಧದಲ್ಲಿ ನೆಲದ ಮೇಲೆ ನಿಂತಿದ್ದ ಅವನನ್ನು ನೋಡಿ ಅವರೆಲ್ಲರೂ ಅವನನ್ನು ಸುತ್ತುವರೆದು ಪುನಃ ಪುನಃ ಸೆರೆಹಿಡಿಯಲು ಪ್ರಯತ್ನಿಸಿದರು.
06086041a ಅಥಾಭ್ಯಾಶಗತಾನಾಂ ಸ ಖಡ್ಗೇನಾಮಿತ್ರಕರ್ಶನಃ।
06086041c ಉಪಹಸ್ತಾವಹಸ್ತಾಭ್ಯಾಂ ತೇಷಾಂ ಗಾತ್ರಾಣ್ಯಕೃಂತತ।।
ಆಗ ಮೇಲೆ ಬೀಳುತ್ತಿದ್ದ ಆ ಅಮಿತ್ರಕರ್ಶನನು ಅವರ ಎರಡೂ ಹಸ್ತಗಳನ್ನು ಕತ್ತರಿಸಿ ಶರೀರಗಳನ್ನೂ ತುಂಡರಿಸಿದನು.
06086042a ಆಯುಧಾನಿ ಚ ಸರ್ವೇಷಾಂ ಬಾಹೂನಪಿ ಚ ಭೂಷಿತಾನ್।
06086042c ಅಪತಂತ ನಿಕೃತ್ತಾಂಗಾ ಗತಾ ಭೂಮಿಂ ಗತಾಸವಃ।।
ಅವರೆಲ್ಲರ ಆಯುಧಗಳು ಮತ್ತು ಭೂಷಿತ ಬಾಹುಗಳು ಬಿದ್ದು ಅಂಗಗಳು ತುಂಡಾಗಿ ಅಸುನೀಗಿ ಅವರು ಭೂಮಿಯ ಮೇಲೆ ಬಿದ್ದರು.
06086043a ವೃಷಕಸ್ತು ಮಹಾರಾಜ ಬಹುಧಾ ಪರಿವಿಕ್ಷತಃ।
06086043c ಅಮುಚ್ಯತ ಮಹಾರೌದ್ರಾತ್ತಸ್ಮಾದ್ವೀರಾವಕರ್ತನಾತ್।।
ಮಹಾರಾಜ! ವೃಷಕನು ಮಾತ್ರ ಹೆಚ್ಚಾಗಿ ಗಾಯಗೊಂಡು ವೀರರನ್ನು ತುಂಡರಿಸುವ ಆ ಮಹಾರೌದ್ರ ಯುದ್ಧದಿಂದ ತಪ್ಪಿಸಿಕೊಂಡನು.
06086044a ತಾನ್ಸರ್ವಾನ್ಪತಿತಾನ್ದೃಷ್ಟ್ವಾ ಭೀತೋ ದುರ್ಯೋಧನಸ್ತತಃ।
06086044c ಅಭ್ಯಭಾಷತ ಸಂಕ್ರುದ್ಧೋ ರಾಕ್ಷಸಂ ಘೋರದರ್ಶನಂ।।
06086045a ಆರ್ಶ್ಯಶೃಂಗಿಂ ಮಹೇಷ್ವಾಸಂ ಮಾಯಾವಿನಮರಿಂದಮಂ।
06086045c ವೈರಿಣಂ ಭೀಮಸೇನಸ್ಯ ಪೂರ್ವಂ ಬಕವಧೇನ ವೈ।।
ಅವರೆಲ್ಲರೂ ಬಿದ್ದುದನ್ನು ನೋಡಿ ಭೀತನಾದ ದುರ್ಯೋಧನನು ಸಂಕ್ರುದ್ಧನಾಗಿ ಘೋರದರ್ಶನ ಮಹೇಷ್ವಾಸ ಮಾಯಾವೀ ಅರಿಂದಮ ಬಕವಧದ ಕಾರಣದಿಂದ ಹಿಂದಿನಿಂದಲೇ ಭೀಮಸೇನನ ವೈರಿಯಾಗಿದ್ದ ರಾಕ್ಷಸ ಆರ್ಶ್ಯಶೃಂಗಿಗೆ ಹೇಳಿದನು:
06086046a ಪಶ್ಯ ವೀರ ಯಥಾ ಹ್ಯೇಷ ಫಲ್ಗುನಸ್ಯ ಸುತೋ ಬಲೀ।
06086046c ಮಾಯಾವೀ ವಿಪ್ರಿಯಂ ಘೋರಮಕಾರ್ಷೀನ್ಮೇ ಬಲಕ್ಷಯಂ।।
“ವೀರ! ಹೇಗೆ ಈ ಫಲ್ಗುನನ ಬಲಶಾಲೀ ಮಾಯಾವೀ ಮಗನು ನನ್ನ ಸೇನೆಯನ್ನು ನಾಶಗೊಳಿಸಿ ವಿಪ್ರಿಯವಾದ ಘೋರ ಕೃತ್ಯವನ್ನೆಸಗಿದ್ದಾನೆ ನೋಡು!
06086047a ತ್ವಂ ಚ ಕಾಮಗಮಸ್ತಾತ ಮಾಯಾಸ್ತ್ರೇ ಚ ವಿಶಾರದಃ।
06086047c ಕೃತವೈರಶ್ಚ ಪಾರ್ಥೇನ ತಸ್ಮಾದೇನಂ ರಣೇ ಜಹಿ।।
ಅಯ್ಯಾ! ನೀನೂ ಕೂಡ ಬಯಸಿದಲ್ಲಿಗೆ ಹೋಗಬಲ್ಲೆ. ಮಾಯಾಸ್ತ್ರಗಳಲ್ಲಿ ವಿಶಾರದನಾಗಿದ್ದೀಯೆ. ಪಾರ್ಥನೊಂದಿಗೆ ವೈರವನ್ನೂ ಸಾಧಿಸುತ್ತಿದ್ದೀಯೆ. ಆದುದರಿಂದ ರಣದಲ್ಲಿ ಇವನನ್ನು ಕೊಲ್ಲು!”
06086048a ಬಾಢಮಿತ್ಯೇವಮುಕ್ತ್ವಾ ತು ರಾಕ್ಷಸೋ ಘೋರದರ್ಶನಃ।
06086048c ಪ್ರಯಯೌ ಸಿಂಹನಾದೇನ ಯತ್ರಾರ್ಜುನಸುತೋ ಯುವಾ।।
ಆಗಲೆಂದು ಹೇಳಿ ಘೋರದರ್ಶನ ರಾಕ್ಷಸನು ಸಿಂಹನಾದದೊಂದಿಗೆ ಅರ್ಜುನನ ಯುವ ಮಗನಿರುವಲ್ಲಿಗೆ ಹೊರಟನು.
06086049a ಸ್ವಾರೂಢೈರ್ಯುದ್ಧಕುಶಲೈರ್ವಿಮಲಪ್ರಾಸಯೋಧಿಭಿಃ।
06086049c ವೀರೈಃ ಪ್ರಹಾರಿಭಿರ್ಯುಕ್ತಃ ಸ್ವೈರನೀಕೈಃ ಸಮಾವೃತಃ।
06086049e ನಿಹಂತುಕಾಮಃ ಸಮರೇ ಇರಾವಂತಂ ಮಹಾಬಲಂ।।
ಯುದ್ಧ ಕುಶಲರಾದ ಹರಿತ ಪ್ರಾಸಗಳನ್ನು ಹಿಡಿದ ಅಶ್ವಾರೋಹಿ ವೀರ ಯೋಧ ಪ್ರಹಾರೀ ತನ್ನದೇ ಸೈನಿಕರಿಂದ ಸುತ್ತುವರೆಯಲ್ಪಟ್ಟ ಅವನು ಸಮರದಲ್ಲಿ ಮಹಾಬಲ ಇರಾವಂತನನ್ನು ಸಂಹರಿಸಲು ಬಯಸಿದನು.
06086050a ಇರಾವಾನಪಿ ಸಂಕ್ರುದ್ಧಸ್ತ್ವರಮಾಣಃ ಪರಾಕ್ರಮೀ।
06086050c ಹಂತುಕಾಮಮಮಿತ್ರಘ್ನೋ ರಾಕ್ಷಸಂ ಪ್ರತ್ಯವಾರಯತ್।।
ಪರಾಕ್ರಮೀ ಅಮಿತ್ರಘ್ನ ಇರಾವನನೂ ಕೂಡ ಸಂಕ್ರುದ್ಧನಾಗಿ ಆ ರಾಕ್ಷಸನನ್ನು ಕೊಲ್ಲಲು ಬಯಸಿ ತ್ವರೆಮಾಡಿ ಆಕ್ರಮಣಿಸಿದನು.
06086051a ತಮಾಪತಂತಂ ಸಂಪ್ರೇಕ್ಷ್ಯ ರಾಕ್ಷಸಃ ಸುಮಹಾಬಲಃ।
06086051c ತ್ವರಮಾಣಸ್ತತೋ ಮಾಯಾಂ ಪ್ರಯೋಕ್ತುಮುಪಚಕ್ರಮೇ।।
ಮೇಲೆ ಬೀಳುತ್ತಿದ್ದ ಅವನನ್ನು ನೋಡಿ ಮಹಾಬಲ ರಾಕ್ಷಸನು ತ್ವರೆಮಾಡಿ ಮಾಯೆಯನ್ನುಪಯೋಗಿಸ ತೊಡಗಿದನು.
06086052a ತೇನ ಮಾಯಾಮಯಾಃ ಕ್ಲಪ್ತಾಹಯಾಸ್ತಾವಂತ ಏವ ಹಿ।
06086052c ಸ್ವಾರೂಢಾ ರಾಕ್ಷಸೈರ್ಘೋರೈಃ ಶೂಲಪಟ್ಟಿಶಪಾಣಿಭಿಃ।।
ಆಗ ಅವನು ಇರಾವಾನನ ಅಶ್ವಾರೋಹಿಗಳಿಗೆ ಪ್ರತಿಯಾಗಿ ಮಾಯೆಯಿಂದ ಕುದುರೆಗಳನ್ನೇರಿದ ಶೂಲ-ಪಟ್ಟಿಶಗಳನ್ನು ಹಿಡಿದಿದ್ದ ಘೋರ ರಾಕ್ಷಸರ ಪಡೆಯನ್ನು ನಿರ್ಮಿಸಿದನು.
06086053a ತೇ ಸಂರಬ್ಧಾಃ ಸಮಾಗಮ್ಯ ದ್ವಿಸಾಹಸ್ರಾಃ ಪ್ರಹಾರಿಣಃ।
06086053c ಅಚಿರಾದ್ಗಮಯಾಮಾಸುಃ ಪ್ರೇತಲೋಕಂ ಪರಸ್ಪರಂ।।
ಆ ಎರಡು ಸಾವಿರ ಪ್ರಹಾರಿಣರು ಎದುರಾಗಿ ಬೇಗನೇ ಪರಸ್ಪರರನ್ನು ಪ್ರೇತಲೋಕಗಳಿಗೆ ಕಳುಹಿಸಿದರು.
06086054a ತಸ್ಮಿಂಸ್ತು ನಿಹತೇ ಸೈನ್ಯೇ ತಾವುಭೌ ಯುದ್ಧದುರ್ಮದೌ।
06086054c ಸಂಗ್ರಾಮೇ ವ್ಯವತಿಷ್ಠೇತಾಂ ಯಥಾ ವೈ ವೃತ್ರವಾಸವೌ।।
ಆ ಸೇನೆಗಳು ಹಾಗೆ ನಾಶವಾಗಲು ಅವರಿಬ್ಬರು ಯುದ್ಧ ದುರ್ಮದರೂ ಸಂಗ್ರಾಮದಲ್ಲಿ ವೃತ್ರ-ವಾಸವರಂತೆ ಎದುರಾಗಿ ನಿಂತರು.
06086055a ಆದ್ರವಂತಮಭಿಪ್ರೇಕ್ಷ್ಯ ರಾಕ್ಷಸಂ ಯುದ್ಧದುರ್ಮದಂ।
06086055c ಇರಾವಾನ್ಕ್ರೋಧಸಂರಬ್ಧಃ ಪ್ರತ್ಯಧಾವನ್ಮಹಾಬಲಃ।।
ಯುದ್ಧದುರ್ಮದ ರಾಕ್ಷಸನು ಮುಂದೆ ಬಂದುದನ್ನು ನೋಡಿ ಕ್ರೋಧಸಂರಬ್ಧನಾದ ಮಹಾಬಲ ಇರಾವಾನನು ಎದುರಾದನು.
06086056a ಸಮಭ್ಯಾಶಗತಸ್ಯಾಜೌ ತಸ್ಯ ಖಡ್ಗೇನ ದುರ್ಮತೇಃ।
06086056c ಚಿಚ್ಛೇದ ಕಾರ್ಮುಕಂ ದೀಪ್ತಂ ಶರಾವಾಪಂ ಚ ಪಂಚಕಂ।।
ತುಂಬಾ ಹತ್ತಿರಕ್ಕೆ ಬಂದಿದ್ದ ಆ ದುರ್ಮತಿಯ ಬಿಲ್ಲು ಭತ್ತಳಿಕೆಗಳನ್ನು ಖಡ್ಗದಿಂದ ಕತ್ತರಿಸಿದನು.
06086057a ಸ ನಿಕೃತ್ತಂ ಧನುರ್ದೃಷ್ಟ್ವಾ ಖಂ ಜವೇನ ಸಮಾವಿಶತ್।
06086057c ಇರಾವಂತಮಭಿಕ್ರುದ್ಧಂ ಮೋಹಯನ್ನಿವ ಮಾಯಯಾ।।
ತನ್ನ ಧನುಸ್ಸು ತುಂಡಾಗಿದುದನ್ನು ನೋಡಿ ಅವನು ಕ್ರುದ್ಧನಾದ ಇರಾವಂತನನ್ನು ಮೋಹಗೊಳಿಸಲೋಸುಗ ಮಾಯೆಯಿಂದ ವೇಗದಿಂದ ಆಕಾಶವನ್ನು ಸೇರಿದನು.
06086058a ತತೋಽಂತರಿಕ್ಷಮುತ್ಪತ್ಯ ಇರಾವಾನಪಿ ರಾಕ್ಷಸಂ।
06086058c ವಿಮೋಹಯಿತ್ವಾ ಮಾಯಾಭಿಸ್ತಸ್ಯ ಗಾತ್ರಾಣಿ ಸಾಯಕೈಃ।
06086058e ಚಿಚ್ಛೇದ ಸರ್ವಮರ್ಮಜ್ಞಃ ಕಾಮರೂಪೋ ದುರಾಸದಃ।।
ಆಗ ಸರ್ವಮರ್ಮಗಳನ್ನೂ ತಿಳಿದಿದ್ದ, ಕಾಮರೂಪೀ, ದುರಾಸದ ಇರಾವಾನನೂ ಕೂಡ ಅಂತರಿಕ್ಷಕ್ಕೆ ಹಾರಿ ರಾಕ್ಷಸನನ್ನು ತನ್ನ ಮಾಯೆಯಿಂದ ಭ್ರಾಂತಗೊಳಿಸಿ ಅವನ ಶರೀರವನ್ನು ಸಾಯಕಗಳಿಂದ ಗಾಯಗೊಳಿಸಿದನು.
06086059a ತಥಾ ಸ ರಾಕ್ಷಸಶ್ರೇಷ್ಠಃ ಶರೈಃ ಕೃತ್ತಃ ಪುನಃ ಪುನಃ।
06086059c ಸಂಬಭೂವ ಮಹಾರಾಜ ಸಮವಾಪ ಚ ಯೌವನಂ।।
ಹಾಗೆ ಆ ರಾಕ್ಷಸ ಶ್ರೇಷ್ಠನನ್ನು ಪುನಃ ಪುನಃ ಶರಗಳಿಂದ ಗಾಯಗೊಳಿಸಿದ ಹಾಗೆಲ್ಲ ಅವನು ಹೊಸ ಹೊಸ ಶರೀರಗಳನ್ನು ಪಡೆಯುತ್ತಿದ್ದನು ಮತ್ತು ಯೌವನವನ್ನು ತಾಳುತ್ತಿದ್ದನು.
06086060a ಮಾಯಾ ಹಿ ಸಹಜಾ ತೇಷಾಂ ವಯೋ ರೂಪಂ ಚ ಕಾಮಜಂ।
06086060c ಏವಂ ತದ್ರಾಕ್ಷಸಸ್ಯಾಂಗಂ ಚಿನ್ನಂ ಚಿನ್ನಂ ವ್ಯರೋಹತ।।
ಮಾಯಾವಿಗಳಿಗೆ ಸಹಜವಾಗಿ ಬೇಕಾದ ರೂಪ ವಯಸ್ಸು ದೊರೆಯುತ್ತವೆ. ಹೀಗೆ ಆ ರಾಕ್ಷಸನ ಅಂಗಗಳು ಕತ್ತರಿಸಿದಂತೆಲ್ಲಾ ಪುನಃ ಪುನಃ ಬೆಳೆಯುತ್ತಿದ್ದವು.
06086061a ಇರಾವಾನಪಿ ಸಂಕ್ರುದ್ಧೋ ರಾಕ್ಷಸಂ ತಂ ಮಹಾಬಲಂ।
06086061c ಪರಶ್ವಧೇನ ತೀಕ್ಷ್ಣೇನ ಚಿಚ್ಛೇದ ಚ ಪುನಃ ಪುನಃ।।
ಇರಾವಾನನೂ ಕೂಡ ಸಂಕ್ರುದ್ಧನಾಗಿ ಆ ಮಹಾಬಲ ರಾಕ್ಷಸನನ್ನು ತೀಕ್ಷ್ಣ ಪರಶುವಿನಿಂದ ಪುನಃ ಪುನಃ ಕತ್ತರಿಸಿದನು.
06086062a ಸ ತೇನ ಬಲಿನಾ ವೀರಶ್ಚಿದ್ಯಮಾನ ಇವ ದ್ರುಮಃ।
06086062c ರಾಕ್ಷಸೋ ವ್ಯನದದ್ಘೋರಂ ಸ ಶಬ್ದಸ್ತುಮುಲೋಽಭವತ್।।
ಮರದಂತೆ ಆ ವೀರನನ್ನು ಬಲಶಾಲಿಯು ಕಡಿಯುತ್ತಿದ್ದಂತಲೆಲ್ಲಾ ರಾಕ್ಷಸನು ಘೋರವಾಗಿ ಕೂಗುತ್ತಿದ್ದನು. ತುಮುಲ ಶಬ್ಧವು ಉಂಟಾಯಿತು.
06086063a ಪರಶ್ವಧಕ್ಷತಂ ರಕ್ಷಃ ಸುಸ್ರಾವ ರುಧಿರಂ ಬಹು।
06086063c ತತಶ್ಚುಕ್ರೋಧ ಬಲವಾಂಶ್ಚಕ್ರೇ ವೇಗಂ ಚ ಸಂಯುಗೇ।।
ಪರಶುವಿನಿಂದ ಗಾಯಗೊಂಡ ರಾಕ್ಷಸನು ಬಹಳಷ್ಟು ರಕ್ತವನ್ನು ಸುರಿಸಿದನು. ಅದರಿಂದ ಕ್ರೋಧಗೊಂಡ ಬಲವಾನನು ವೇಗವಾಗಿ ಯುದ್ಧ ಮಾಡತೊಡಗಿದನು.
06086064a ಆರ್ಶ್ಯಶೃಂಗಿಸ್ತತೋ ದೃಷ್ಟ್ವಾ ಸಮರೇ ಶತ್ರುಮೂರ್ಜಿತಂ।
06086064c ಕೃತ್ವಾ ಘೋರಂ ಮಹದ್ರೂಪಂ ಗ್ರಹೀತುಮುಪಚಕ್ರಮೇ।
06086064e ಸಂಗ್ರಾಮಶಿರಸೋ ಮಧ್ಯೇ ಸರ್ವೇಷಾಂ ತತ್ರ ಪಶ್ಯತಾಂ।।
ಸಮರದಲ್ಲಿ ತನ್ನ ಶತ್ರುವು ವರ್ಧಿಸುತ್ತಿರುವುದನ್ನು ನೋಡಿ ಆರ್ಶ್ಯಶೃಂಗಿಯು ಮಹಾ ಘೋರ ರೂಪವನ್ನು ತಾಳಿ ಸಂಗ್ರಾಮದ ಮಧ್ಯೆ ಎಲ್ಲರೂ ನೋಡುತ್ತಿರುವಂತೆಯೇ ಅವನನ್ನು ಹಿಡಿಯಲು ಮುಂದಾದನು.
06086065a ತಾಂ ದೃಷ್ಟ್ವಾ ತಾದೃಶೀಂ ಮಾಯಾಂ ರಾಕ್ಷಸಸ್ಯ ಮಹಾತ್ಮನಃ।
06086065c ಇರಾವಾನಪಿ ಸಂಕ್ರುದ್ಧೋ ಮಾಯಾಂ ಸ್ರಷ್ಟುಂ ಪ್ರಚಕ್ರಮೇ।।
ಮಹಾತ್ಮ ರಾಕ್ಷಸನ ಆ ಮಾಯೆಯನ್ನು ನೋಡಿ ಇರಾವಾನನೂ ಕೂಡ ಸಂಕ್ರುದ್ಧನಾಗಿ ಅದರಂತಹ ಮಾಯೆಯನ್ನು ಸೃಷ್ಟಿಸಲು ತೊಡಗಿದನು.
06086066a ತಸ್ಯ ಕ್ರೋಧಾಭಿಭೂತಸ್ಯ ಸಂಯುಗೇಷ್ವನಿವರ್ತಿನಃ।
06086066c ಯೋಽನ್ವಯೋ ಮಾತೃಕಸ್ತಸ್ಯ ಸ ಏನಮಭಿಪೇದಿವಾನ್।।
ಯುದ್ಧದಿಂದ ಹಿಂದೆಸರಿಯದ ಕ್ರೋಧಾಭಿಭೂತನಾದ ಇರಾವಾನನಿಗೆ ಅವನ ತಾಯಿಯ ಕಡೆಯವರು ನೆರವಾಗಲು ಬಂದರು.
06086067a ಸ ನಾಗೈರ್ಬಹುಶೋ ರಾಜನ್ಸರ್ವತಃ ಸಂವೃತೋ ರಣೇ।
06086067c ದಧಾರ ಸುಮಹದ್ರೂಪಮನಂತ ಇವ ಭೋಗವಾನ್।
06086067e ತತೋ ಬಹುವಿಧೈರ್ನಾಗೈಶ್ಚಾದಯಾಮಾಸ ರಾಕ್ಷಸಂ।।
ರಾಜನ್! ಹೆಚ್ಚಾಗಿ ನಾಗಗಳಿಂದಲೇ ಎಲ್ಲಕಡೆಗಳಿಂದ ಸುತ್ತುವರೆಯಲ್ಪಟ್ಟಿದ್ದ ಅವನು ಹೆಡೆಯುಳ್ಳ ಅನಂತನ ಮಹಾ ರೂಪವನ್ನೇ ತಾಳಿದನು. ಆಗ ಅವನು ಬಹುವಿಧದ ನಾಗಗಳಿಂದ ರಾಕ್ಷಸನನ್ನು ಮುಚ್ಚಿದನು.
06086068a ಚಾದ್ಯಮಾನಸ್ತು ನಾಗೈಃ ಸ ಧ್ಯಾತ್ವಾ ರಾಕ್ಷಸಪುಂಗವಃ।
06086068c ಸೌಪರ್ಣಂ ರೂಪಮಾಸ್ಥಾಯ ಭಕ್ಷಯಾಮಾಸ ಪನ್ನಗಾನ್।।
ಸರ್ಪಗಳಿಂದ ಆಚ್ಛಾದಿತನಾದ ಆ ರಾಕ್ಷಸಪುಂಗವನು ಒಂದು ಕ್ಷಣ ಯೋಚಿಸಿ ಗರುಡನ ರೂಪವನ್ನು ತಾಳಿ ನಾಗಗಳನ್ನು ಭಕ್ಷಿಸತೊಡಗಿದನು.
06086069a ಮಾಯಯಾ ಭಕ್ಷಿತೇ ತಸ್ಮಿನ್ನನ್ವಯೇ ತಸ್ಯ ಮಾತೃಕೇ।
06086069c ವಿಮೋಹಿತಮಿರಾವಂತಮಸಿನಾ ರಾಕ್ಷಸೋಽವಧೀತ್।।
ಅವನನ್ನು ಅನುಸರಿಸಿ ಬಂದಿದ್ದ ಅವನ ತಾಯಿಯ ಕಡೆಯವರನ್ನು ಮಾಯೆಯಿಂದ ಭಕ್ಷಿಸಿ, ಇರಾವಂತನನ್ನು ಮೋಹಗೊಳಿಸಿ ರಾಕ್ಷಸನು ಖಡ್ಗದಿಂದ ಅವನನ್ನು ವಧಿಸಿದನು.
06086070a ಸಕುಂಡಲಂ ಸಮುಕುಟಂ ಪದ್ಮೇಂದುಸದೃಶಪ್ರಭಂ।
06086070c ಇರಾವತಃ ಶಿರೋ ರಕ್ಷಃ ಪಾತಯಾಮಾಸ ಭೂತಲೇ।।
ಕುಂಡಲ ಮುಕುಟಗಳಿಂದ ಕೂಡಿದ, ಪದ್ಮ ಮತ್ತು ಚಂದ್ರನ ಕಾಂತಿಯುಳ್ಳ ಇರಾವತನ ಶಿರವನ್ನು ರಾಕ್ಷಸನು ಭೂಮಿಯ ಮೇಲೆ ಕೆಡವಿದನು.
06086071a ತಸ್ಮಿಂಸ್ತು ನಿಹತೇ ವೀರೇ ರಾಕ್ಷಸೇನಾರ್ಜುನಾತ್ಮಜೇ।
06086071c ವಿಶೋಕಾಃ ಸಮಪದ್ಯಂತ ಧಾರ್ತರಾಷ್ಟ್ರಾಃ ಸರಾಜಕಾಃ।।
ರಾಕ್ಷಸನಿಂದ ಅರ್ಜುನನನ ಆ ವೀರ ಮಗನು ಹತನಾಗಲು ಧಾರ್ತರಾಷ್ಟ್ರರು ಇತರ ರಾಜರೊಂದಿಗೆ ಶೋಕ ರಹಿತರಾದರು.
06086072a ತಸ್ಮಿನ್ಮಹತಿ ಸಂಗ್ರಾಮೇ ತಾದೃಶೇ ಭೈರವೇ ಪುನಃ।
06086072c ಮಹಾನ್ವ್ಯತಿಕರೋ ಘೋರಃ ಸೇನಯೋಃ ಸಮಪದ್ಯತ।।
ಭಯಂಕರ ಸ್ವರೂಪವನ್ನು ತಾಳಿದ್ದ ಆ ಮಹಾ ಸಂಗ್ರಾಮದಲ್ಲಿ ಎರಡು ಸೇನೆಗಳ ನಡುವೆ ಪುನ ಮಹಾ ಘೋರ ಯುದ್ಧವು ಪ್ರಾರಂಭವಾಯಿತು.
06086073a ಹಯಾ ಗಜಾಃ ಪದಾತಾಶ್ಚ ವಿಮಿಶ್ರಾ ದಂತಿಭಿರ್ಹತಾಃ।
06086073c ರಥಾಶ್ಚ ದಂತಿನಶ್ಚೈವ ಪತ್ತಿಭಿಸ್ತತ್ರ ಸೂದಿತಾಃ।।
ಕುದುರೆ, ಆನೆ ಮತ್ತು ಪದಾತಿಗಳು ಮಿಶ್ರಿತವಾಗಿ ಆನೆಗಳಿಂದ ಹತವಾದರು. ರಥಿಗಳು ಮತ್ತು ಆನೆಗಳು ಪದಾತಿಗಳಿಂದ ಸಂಹರಿಸಲ್ಪಟ್ಟರು.
06086074a ತಥಾ ಪತ್ತಿರಥೌಘಾಶ್ಚ ಹಯಾಶ್ಚ ಬಹವೋ ರಣೇ।
06086074c ರಥಿಭಿರ್ನಿಹತಾ ರಾಜಂಸ್ತವ ತೇಷಾಂ ಚ ಸಂಕುಲೇ।।
ರಾಜನ್! ಹಾಗೆಯೇ ಪದಾತಿ-ರಥಸಮೂಹಗಳು ಮತ್ತು ಬಹಳಷ್ಟು ಕುದುರೆಗಳು ನಿನ್ನ ಮತ್ತು ಅವರ ಸಂಕುಲ ರಣದಲ್ಲಿ ರಥಿಗಳಿಂದ ಹತವಾದವು.
06086075a ಅಜಾನನ್ನರ್ಜುನಶ್ಚಾಪಿ ನಿಹತಂ ಪುತ್ರಮೌರಸಂ।
06086075c ಜಘಾನ ಸಮರೇ ಶೂರಾನ್ರಾಜ್ಞಸ್ತಾನ್ಭೀಷ್ಮರಕ್ಷಿಣಃ।।
ಅರ್ಜುನನಾದರೋ ತನ್ನ ಹಿರಿಯ ಮಗನ ಸಾವನ್ನು ತಿಳಿಯದೆಯೇ ಭೀಷ್ಮನಿಂದ ರಕ್ಷಿತವಾದ ಶೂರರಾಜರನ್ನು ಸಮರದಲ್ಲಿ ಸಂಹರಿಸಿದನು.
06086076a ತಥೈವ ತಾವಕಾ ರಾಜನ್ಸೃಂಜಯಾಶ್ಚ ಮಹಾಬಲಾಃ।
06086076c ಜುಹ್ವತಃ ಸಮರೇ ಪ್ರಾಣಾನ್ನಿಜಘ್ನುರಿತರೇತರಂ।।
ರಾಜನ್! ಹಾಗೆಯೇ ನಿನ್ನವರು ಮತ್ತು ಮಹಾಬಲ ಸೃಂಜಯರು ಸಮರವೆಂಬ ಅಗ್ನಿಯಲ್ಲಿ ಆಹುತಿಗಳನ್ನಾಗಿತ್ತು ಪರಸ್ಪರರ ಪ್ರಾಣಗಳನ್ನು ತೆಗೆದರು.
06086077a ಮುಕ್ತಕೇಶಾ ವಿಕವಚಾ ವಿರಥಾಶ್ಚಿನ್ನಕಾರ್ಮುಕಾಃ।
06086077c ಬಾಹುಭಿಃ ಸಮಯುಧ್ಯಂತ ಸಮವೇತಾಃ ಪರಸ್ಪರಂ।।
ಕೂದಲು ಕೆದರಿ, ಕವಚಗಳಿಲ್ಲದೇ, ರಥಗಳನ್ನು ಕಳೆದುಕೊಂಡು, ಧನುಸ್ಸುಗಳು ತುಂಡಾಗಿರಲು ಪರಸ್ಪರರನ್ನು ಸೇರಿ ಬಾಹುಗಳಿಂದಲೇ ಯುದ್ಧ ಮಾಡುತ್ತಿದ್ದರು.
06086078a ತಥಾ ಮರ್ಮಾತಿಗೈರ್ಭೀಷ್ಮೋ ನಿಜಘಾನ ಮಹಾರಥಾನ್।
06086078c ಕಂಪಯನ್ಸಮರೇ ಸೇನಾಂ ಪಾಂಡವಾನಾಂ ಮಹಾಬಲಃ।।
ಆಗ ಮಹಾಬಲ ಭೀಷ್ಮನು ಮರ್ಮಸ್ಥಳಗಳನ್ನು ಭೇದಿಸುವ ಬಾಣಗಳಿಂದ ಮಹಾರಥರನ್ನು ಸಂಹರಿಸಿ ಪಂಡವರ ಸೇನೆಯನ್ನು ಸಮರದಲ್ಲಿ ನಡುಗಿಸಿದನು.
06086079a ತೇನ ಯೌಧಿಷ್ಠಿರೇ ಸೈನ್ಯೇ ಬಹವೋ ಮಾನವಾ ಹತಾಃ।
06086079c ದಂತಿನಃ ಸಾದಿನಶ್ಚೈವ ರಥಿನೋಽಥ ಹಯಾಸ್ತಥಾ।।
ಅವನು ಯುಧಿಷ್ಠಿರನ ಸೇನೆಯ ಬಹಳಷ್ಟು ಮನುಷ್ಯರು, ಆನೆಗಳು, ಅಶ್ವಾರೋಹಿಗಳು, ರಥಿಗಳು ಮತ್ತು ಕುದುರೆಗಳನ್ನು ಸಂಹರಿಸಿದನು.
06086080a ತತ್ರ ಭಾರತ ಭೀಷ್ಮಸ್ಯ ರಣೇ ದೃಷ್ಟ್ವಾ ಪರಾಕ್ರಮಂ।
06086080c ಅತ್ಯದ್ಭುತಮಪಶ್ಯಾಮ ಶಕ್ರಸ್ಯೇವ ಪರಾಕ್ರಮಂ।।
ಭಾರತ! ಅಲ್ಲಿ ರಣದಲ್ಲಿ ಭೀಷ್ಮನ ಪರಾಕ್ರಮವನ್ನು ನೋಡಿ ಶಕ್ರನದೇ ಅತ್ಯದ್ಭುತ ಪರಾಕ್ರಮವನ್ನು ನೋಡಿದಂತಾಯಿತು.
06086081a ತಥೈವ ಭೀಮಸೇನಸ್ಯ ಪಾರ್ಷತಸ್ಯ ಚ ಭಾರತ।
06086081c ರೌದ್ರಮಾಸೀತ್ತದಾ ಯುದ್ಧಂ ಸಾತ್ವತಸ್ಯ ಚ ಧನ್ವಿನಃ।।
ಭಾರತ! ಹಾಗೆಯೇ ಧನ್ವಿಗಳಾದ ಭೀಮಸೇನ, ಪಾರ್ಷತ ಮತ್ತು ಸಾತ್ತ್ವತರ ಯುದ್ಧವೂ ರೌದ್ರವಾಗಿತ್ತು.
06086082a ದೃಷ್ಟ್ವಾ ದ್ರೋಣಸ್ಯ ವಿಕ್ರಾಂತಂ ಪಾಂಡವಾನ್ಭಯಮಾವಿಶತ್।
06086082c ಏಕ ಏವ ರಣೇ ಶಕ್ತೋ ಹಂತುಮಸ್ಮಾನ್ಸಸೈನಿಕಾನ್।।
06086083a ಕಿಂ ಪುನಃ ಪೃಥಿವೀಶೂರೈರ್ಯೋಧವ್ರಾತೈಃ ಸಮಾವೃತಃ।
06086083c ಇತ್ಯಬ್ರುವನ್ಮಹಾರಾಜ ರಣೇ ದ್ರೋಣೇನ ಪೀಡಿತಾಃ।।
ಮಹಾರಾಜ! ದ್ರೋಣನ ವಿಕ್ರಾಂತವನ್ನು ನೋಡಿ ಪಾಂಡವರಿಗೆ ಭಯವು ತುಂಬಿಕೊಂಡಿತು. “ರಣದಲ್ಲಿ ಅವನೊಬ್ಬನೇ ಸೈನಿಕರೊಂದಿಗೆ ನಮ್ಮನ್ನು ಸಂಹರಿಸಲು ಶಕ್ತ. ಇನ್ನು ಇಲ್ಲಿ ಸೇರಿರುವ ಪೃಥ್ವಿಯ ಶೂರರೆಲ್ಲರದ್ದೇನು?” ಎಂದು ರಣದಲ್ಲಿ ದ್ರೋಣನಿಂದ ಪೀಡಿತರಾದವರು ಹೇಳಿಕೊಂಡರು.
06086084a ವರ್ತಮಾನೇ ತಥಾ ರೌದ್ರೇ ಸಂಗ್ರಾಮೇ ಭರತರ್ಷಭ।
06086084c ಉಭಯೋಃ ಸೇನಯೋಃ ಶೂರಾ ನಾಮೃಷ್ಯಂತ ಪರಸ್ಪರಂ।।
ಭರತರ್ಷಭ! ಹಾಗೆ ನಡೆಯುತ್ತಿದ್ದ ರೌದ್ರ ಸಂಗ್ರಾಮದಲ್ಲಿ ಎರಡೂ ಸೇನೆಗಳ ಶೂರರು ಪರಸ್ಪರರನ್ನು ಸಹಿಸಿಕೊಳುತ್ತಿರಲಿಲ್ಲ.
06086085a ಆವಿಷ್ಟಾ ಇವ ಯುಧ್ಯಂತೇ ರಕ್ಷೋಭೂತಾ ಮಹಾಬಲಾಃ।
06086085c ತಾವಕಾಃ ಪಾಂಡವೇಯಾಶ್ಚ ಸಂರಬ್ಧಾಸ್ತಾತ ಧನ್ವಿನಃ।।
ಅಯ್ಯಾ! ಆ ಮಹಾಬಲ ಧನ್ವಿಗಳು - ನಿನ್ನವರು ಮತ್ತು ಪಾಂಡವೇಯರು - ರಾಕ್ಷಸ ಭೂತಗಳಿಂದ ಆವಿಷ್ಟರಾದವರಂತೆ ಸಂರಬ್ಧರಾಗಿ ಯುದ್ಧ ಮಾಡುತ್ತಿದ್ದರು.
06086086a ನ ಸ್ಮ ಪಶ್ಯಾಮಹೇ ಕಂ ಚಿದ್ಯಃ ಪ್ರಾಣಾನ್ಪರಿರಕ್ಷತಿ।
06086086c ಸಂಗ್ರಾಮೇ ದೈತ್ಯಸಂಕಾಶೇ ತಸ್ಮಿನ್ಯೋದ್ಧಾ ನರಾಧಿಪ।।
ನರಾಧಿಪ! ದೈತ್ಯರದ್ದಂತಿದ್ದ ಆ ಸಂಗ್ರಾಮದಲ್ಲಿ ಯಾವ ಯೋಧನೂ ತನ್ನ ಪ್ರಾಣಗಳನ್ನು ರಕ್ಷಿಸಿಕೊಳ್ಳುತ್ತಿರುವುದನ್ನು ನಾವು ನೋಡಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಇರಾವಾದ್ವಧೇ ಷಷ್ಠ್ಯಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಇರಾವಾದ್ವಧ ಎನ್ನುವ ಎಂಭತ್ತಾರನೇ ಅಧ್ಯಾಯವು.
-
ದ್ರೌಪದಿಯ ಕುರಿತು ಸಹೋದರರು ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುದಕ್ಕಾಗಿ ಅರ್ಜುನನು ವನವಾಸವನ್ನು ಕೈಗೊಂಡು ಗಂಗಾದ್ವಾರದಲ್ಲಿ ಸ್ನಾನಕ್ಕೆಂದು ಗಂಗೆಯಲ್ಲಿ ಇಳಿದಾಗ ಕಾಮ ಮೂರ್ಛಿತಳಾದ ಉಲೂಪಿಯು ಅವನನ್ನು ನಾಗಲೋಕಕ್ಕೆ ಕೊಂಡೊಯ್ದು ಅವನೊಂದಿಗೆ ರಾತ್ರಿಯನ್ನು ಕಳೆದ ವಿಷಯವು ಆದಿಪರ್ವದ ಅಧ್ಯಾಯ ೨೦೬ರಲ್ಲಿ ಬಂದಿದೆ. ಆದರೆ ಈ ಅಧ್ಯಾಯದಲ್ಲಿ ಉಲೂಪಿಯು ವಿಧವೆ ಎಂಬ ವಿಷಯವು ಬಂದಿರುವುದಿಲ್ಲ. ವಿಧವೆಯಾಗಿದ್ದ ಉಲೂಪಿಯಲ್ಲಿ ಹುಟ್ಟಿದವನಾದುದರಿಂದ ಇರಾವಾನನು ಅರ್ಜುನನಿಗೆ ಪರಕ್ಷೇತ್ರದಲ್ಲಿ ಹುಟ್ಟಿದ ಮಗನೆಂದು ತಿಳಿಯಬೇಕು. ↩︎