085 ಅಷ್ಟಮದಿವಸಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 85

ಸಾರ

ಧೃತರಾಷ್ಟ್ರನ ಪ್ರಶ್ನೆಗೆ ಉತ್ತಾರಿಸುತ್ತಾ ಸಂಜಯನು ಯುದ್ಧವರ್ಣನೆಯನ್ನು ಮುಂದುವರಿಸಿದುದು (1-14). ಸಂಕುಲಯುದ್ಧ (15-36).

06085001 ಧೃತರಾಷ್ಟ್ರ ಉವಾಚ।
06085001a ದೃಷ್ಟ್ವಾ ಮಮ ಹತಾನ್ಪುತ್ರಾನ್ಬಹೂನೇಕೇನ ಸಂಜಯ।
06085001c ಭೀಷ್ಮೋ ದ್ರೋಣಃ ಕೃಪಶ್ಚೈವ ಕಿಮಕುರ್ವತ ಸಂಯುಗೇ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಒಬ್ಬನಿಂದಲೇ ನನ್ನ ಅನೇಕ ಮಕ್ಕಳು ಹತರಾದುದನ್ನು ಕಂಡು ಭೀಷ್ಮ-ದ್ರೋಣ-ಕೃಪರು ಸಂಯುಗದಲ್ಲಿ ಏನು ಮಾಡಿದರು?

06085002a ಅಹನ್ಯಹನಿ ಮೇ ಪುತ್ರಾಃ ಕ್ಷಯಂ ಗಚ್ಛಂತಿ ಸಂಜಯ।
06085002c ಮನ್ಯೇಽಹಂ ಸರ್ವಥಾ ಸೂತ ದೈವೇನೋಪಹತಾ ಭೃಶಂ।।

ದಿನ ದಿನವೂ ನನ್ನ ಮಕ್ಕಳು ಕ್ಷೀಣವಾಗುತ್ತಿದ್ದಾರೆ ಸಂಜಯ! ಸೂತ! ಹೆಚ್ಚುಭಾಗ ಅವರು ದೈವದಿಂದಲೇ ಹತರಾಗುತ್ತಿದ್ದಾರೆ ಎಂದು ನನಗನ್ನಿಸುತ್ತದೆ.

06085003a ಯತ್ರ ಮೇ ತನಯಾಃ ಸರ್ವೇ ಜೀಯಂತೇ ನ ಜಯಂತ್ಯುತ।
06085003c ಯತ್ರ ಭೀಷ್ಮಸ್ಯ ದ್ರೋಣಸ್ಯ ಕೃಪಸ್ಯ ಚ ಮಹಾತ್ಮನಃ।।
06085004a ಸೌಮದತ್ತೇಶ್ಚ ವೀರಸ್ಯ ಭಗದತ್ತಸ್ಯ ಚೋಭಯೋಃ।
06085004c ಅಶ್ವತ್ಥಾಮ್ನಸ್ತಥಾ ತಾತ ಶೂರಾಣಾಂ ಸುಮಹಾತ್ಮನಾಂ।।
06085005a ಅನ್ಯೇಷಾಂ ಚೈವ ವೀರಾಣಾಂ ಮಧ್ಯಗಾಸ್ತನಯಾ ಮಮ।
06085005c ಯದಹನ್ಯಂತ ಸಂಗ್ರಾಮೇ ಕಿಮನ್ಯದ್ಭಾಗಧೇಯತಃ।।

ಅಯ್ಯಾ! ನನ್ನ ಮಕ್ಕಳೆಲ್ಲರೂ ಜಯಿಸಲ್ಪಡುತ್ತಿದ್ದಾರೆಯೇ ಹೊರತು ಜಯಿಸುತ್ತಿಲ್ಲ. ಭೀಷ್ಮ-ದ್ರೋಣ-ಮಹಾತ್ಮ ಕೃಪ-ಸೌಮದತ್ತ-ವೀರ ಭಗದತ್ತ-ಅಶ್ವತ್ಥಾಮ ಮೊದಲಾದ ಶೂರ ಮಹಾತ್ಮರು ಹಾಗೂ ಅನ್ಯ ವೀರರ ಮಧ್ಯದಲ್ಲಿದ್ದುಕೊಂಡೂ ನನ್ನ ಮಕ್ಕಳು ಸಂಗ್ರಾಮದಲ್ಲಿ ಸಾಯುತ್ತಿದ್ದಾರೆಂದರೆ ಇದು ಭಾಗ್ಯವು ಕೊಟ್ಟಿದ್ದಲ್ಲದೇ ಇನ್ನೇನು?

06085006a ನ ಹಿ ದುರ್ಯೋಧನೋ ಮಂದಃ ಪುರಾ ಪ್ರೋಕ್ತಮಬುಧ್ಯತ।
06085006c ವಾರ್ಯಮಾಣೋ ಮಯಾ ತಾತ ಭೀಷ್ಮೇಣ ವಿದುರೇಣ ಚ।।
06085007a ಗಾಂಧಾರ್ಯಾ ಚೈವ ದುರ್ಮೇಧಾಃ ಸತತಂ ಹಿತಕಾಮ್ಯಯಾ।
06085007c ನಾವಬುಧ್ಯತ್ಪುರಾ ಮೋಹಾತ್ತಸ್ಯ ಪ್ರಾಪ್ತಮಿದಂ ಫಲಂ।।

ಅಯ್ಯಾ! ದುರ್ಯೋಧನನು ದಡ್ಡ. ಹಿಂದೆ ಹೇಳಿದುದನ್ನು ತಿಳಿದುಕೊಳ್ಳಲಿಲ್ಲ. ನಾನು, ಭೀಷ್ಮ, ವಿದುರ ಮತ್ತು ಗಾಂಧಾರಿಯರು ಅವನ ಹಿತವನ್ನೇ ಬಯಸಿ ಆಗ ಯಾವಾಗಲೂ ತಡೆದರೂ ಅವನು ಮೋಹದಿಂದ ಅರ್ಥಮಾಡಿಕೊಳ್ಳದೇ ಇರುವುದರಿಂದಲೇ ಈ ಫಲವನ್ನು ಪಡೆಯುತ್ತಿದ್ದಾನೆ.

06085008a ಯದ್ಭೀಮಸೇನಃ ಸಮರೇ ಪುತ್ರಾನ್ಮಮ ವಿಚೇತಸಃ।
06085008c ಅಹನ್ಯಹನಿ ಸಂಕ್ರುದ್ಧೋ ನಯತೇ ಯಮಸಾದನಂ।।

ಸಮರದಲ್ಲಿ ಭೀಮಸೇನನು ದಿನ ದಿನವೂ ಸಂಕ್ರುದ್ಧನಾಗಿ ಮೂಢರಾದ ನನ್ನ ಮಕ್ಕಳನ್ನು ಯಮಸಾದನಕ್ಕೆ ಕಳುಹಿಸುತ್ತಿರುವುದೇ ಅದರ ಫಲ.”

06085009 ಸಂಜಯ ಉವಾಚ।
06085009a ಇದಂ ತತ್ಸಮನುಪ್ರಾಪ್ತಂ ಕ್ಷತ್ತುರ್ವಚನಮುತ್ತಮಂ।
06085009c ನ ಬುದ್ಧವಾನಸಿ ವಿಭೋ ಪ್ರೋಚ್ಯಮಾನಂ ಹಿತಂ ತದಾ।।

ಸಂಜಯನು ಹೇಳಿದನು: “ವಿಭೋ! ಅಂದು ಕ್ಷತ್ತನಾಡಿದ ಉತ್ತಮ ಹಿತವಚನಗಳನ್ನು ನೀನು ತಿಳಿದುಕೊಳ್ಳದೇ ಇದ್ದುದರಿಂದಲೇ ಈ ಪರಿಸ್ಥಿತಿಯು ಬಂದೊದಗಿದೆ.

06085010a ನಿವಾರಯ ಸುತಾನ್ದ್ಯೂತಾತ್ಪಾಂಡವಾನ್ಮಾ ದ್ರುಹೇತಿ ಚ।
06085010c ಸುಹೃದಾಂ ಹಿತಕಾಮಾನಾಂ ಬ್ರುವತಾಂ ತತ್ತದೇವ ಚ।।

“ಮಕ್ಕಳು ದ್ಯೂತವಾಡುವುದನ್ನು ತಡೆ. ಪಾಂಡವರನ್ನು ದ್ವೇಷಿಸಬೇಡ!” ಎಂದು ಸುಹೃದಯರು ಹೇಳಿದ ಹಿತಮಾತುಗಳನ್ನು ಆಗ ನೀನು ಸ್ವೀಕರಿಸಲಿಲ್ಲ.

06085011a ನ ಶುಶ್ರೂಷಸಿ ಯದ್ವಾಕ್ಯಂ ಮರ್ತ್ಯಃ ಪಥ್ಯಮಿವೌಷಧಂ।
06085011c ತದೇವ ತ್ವಾಮನುಪ್ರಾಪ್ತಂ ವಚನಂ ಸಾಧು ಭಾಷಿತಂ।।

ಸಾಯುವವನಿಗೆ ಔಷಧಿಯಂತೆ ಪಥ್ಯವಾಗಿರುವ ಆ ಮಾತನ್ನು ನೀನು ಕೇಳಲಿಲ್ಲ. ಒಳ್ಳೆಯವರು ಹೇಳಿದುದನ್ನೇ ಇಂದು ನೀನು ಅನುಭವಿಸುತ್ತಿದ್ದೀಯೆ.

06085012a ವಿದುರದ್ರೋಣಭೀಷ್ಮಾಣಾಂ ತಥಾನ್ಯೇಷಾಂ ಹಿತೈಷಿಣಾಂ।
06085012c ಅಕೃತ್ವಾ ವಚನಂ ಪಥ್ಯಂ ಕ್ಷಯಂ ಗಚ್ಛಂತಿ ಕೌರವಾಃ।।

ವಿದುರ-ದ್ರೋಣ-ಭೀಷ್ಮರ ಮತ್ತು ಅನ್ಯ ಹಿತೈಷಿಗಳ ಪಥ್ಯವಾದ ಮಾತಿನಂತೆ ನಡೆದುಕೊಳ್ಳದೇ ಕೌರವರು ಕ್ಷಯವನ್ನು ಹೋಗುತ್ತಾರೆ.

06085013a ತದೇತತ್ಸಮತಿಕ್ರಾಂತಂ ಪೂರ್ವಮೇವ ವಿಶಾಂ ಪತೇ।
06085013c ತಸ್ಮಾನ್ಮೇ ಶೃಣು ತತ್ತ್ವೇನ ಯಥಾ ಯುದ್ಧಮವರ್ತತ।।

ವಿಶಾಂಪತೇ! ಅದನ್ನು ಉಲ್ಲಂಘಿಸಿದರೆ ಹೀಗಾಗುತ್ತದೆಂದು ಮೊದಲೇ ಗೊತ್ತಿತ್ತು. ಆದರಿಂದಲೇ ಉಂಟಾದ ಯುದ್ಧವು ಹೇಗೆ ನಡೆಯಿತು ಎನ್ನುವುದನ್ನು ಯಥಾವತ್ತಾಗಿ ನನ್ನಿಂದ ಕೇಳು.

06085014a ಮಧ್ಯಾಹ್ನೇ ಸುಮಹಾರೌದ್ರಃ ಸಂಗ್ರಾಮಃ ಸಮಪದ್ಯತ।
06085014c ಲೋಕಕ್ಷಯಕರೋ ರಾಜಂಸ್ತನ್ಮೇ ನಿಗದತಃ ಶೃಣು।।

ರಾಜನ್! ಅಂದಿನ ಮದ್ಯಾಹ್ನ ಲೋಕಕ್ಷಯವನ್ನುಂಟುಮಾಡುವ ಮಹಾ ರೌದ್ರ ಸಂಗ್ರಾಮವು ನಡೆಯಿತು. ಅದನ್ನು ವರ್ಣಿಸುತ್ತೇನೆ. ಕೇಳು.

06085015a ತತಃ ಸರ್ವಾಣಿ ಸೈನ್ಯಾನಿ ಧರ್ಮಪುತ್ರಸ್ಯ ಶಾಸನಾತ್।
06085015c ಸಂರಬ್ಧಾನ್ಯಭ್ಯಧಾವಂತ ಭೀಷ್ಮಮೇವ ಜಿಘಾಂಸಯಾ।।

ಆಗ ಸೈನ್ಯಗಳೆಲ್ಲವೂ ಧರ್ಮಪುತ್ರನ ಶಾಸನದಂತೆ ಸಂರಬ್ಧಗೊಂಡು ಭೀಷ್ಮನನ್ನೇ ಕೊಲ್ಲಲು ಅವನನ್ನೇ ಆಕ್ರಮಣಿಸಿದವು.

06085016a ಧೃಷ್ಟದ್ಯುಮ್ನಃ ಶಿಖಂಡೀ ಚ ಸಾತ್ಯಕಿಶ್ಚ ಮಹಾರಥಃ।
06085016c ಯುಕ್ತಾನೀಕಾ ಮಹಾರಾಜ ಭೀಷ್ಮಮೇವ ಸಮಭ್ಯಯುಃ।।

ಮಹಾರಾಜ! ಧೃಷ್ಟದ್ಯುಮ್ನ, ಶಿಖಂಡೀ ಮತ್ತು ಮಹಾರಥ ಸಾತ್ಯಕಿಯರು ಸೇನೆಗಳನ್ನೊಡಗೂಡಿ ಭೀಷ್ಮನನ್ನೇ ಆಕ್ರಮಿಸಿದರು.

06085017a ಅರ್ಜುನೋ ದ್ರೌಪದೇಯಾಶ್ಚ ಚೇಕಿತಾನಶ್ಚ ಸಂಯುಗೇ।
06085017c ದುರ್ಯೋಧನಸಮಾದಿಷ್ಟಾನ್ರಾಜ್ಞಃ ಸರ್ವಾನ್ಸಮಭ್ಯಯುಃ।।

ಅರ್ಜುನ, ದ್ರೌಪದಿಯ ಮಕ್ಕಳು ಮತ್ತು ಚೇಕಿತಾನರು ಸಂಯುಗದಲ್ಲಿ ದುರ್ಯೋಧನನು ಕಳುಹಿಸಿದ್ದ ರಾಜರೆಲ್ಲರ ಮೇಲೆ ಧಾಳಿ ಮಾಡಿದರು.

06085018a ಅಭಿಮನ್ಯುಸ್ತಥಾ ವೀರೋ ಹೈಡಿಂಬಶ್ಚ ಮಹಾರಥಃ।
06085018c ಭೀಮಸೇನಶ್ಚ ಸಂಕ್ರುದ್ಧಸ್ತೇಽಭ್ಯಧಾವಂತ ಕೌರವಾನ್।।

ಹಾಗೆಯೇ ವೀರ ಅಭಿಮನ್ಯು, ಮಹಾರಥ ಹೈಡಿಂಬಿ ಮತ್ತು ಭೀಮಸೇನರು ಸಂಕ್ರುದ್ಧರಾಗಿ ಕೌರವರನ್ನು ಎದುರಿಸಿದರು.

06085019a ತ್ರಿಧಾಭೂತೈರವಧ್ಯಂತ ಪಾಂಡವೈಃ ಕೌರವಾ ಯುಧಿ।
06085019c ತಥೈವ ಕೌರವೇ ರಾಜನ್ನವಧ್ಯಂತ ಪರೇ ರಣೇ।।

ಪಾಂಡವರು ಯುದ್ಧದಲ್ಲಿ ಮೂರು ವಿಭಾಗಗಳಾಗಿ ಕೌರವರನ್ನು ವಧಿಸುತ್ತಿದ್ದರು. ರಾಜನ್! ಹಾಗೆಯೇ ರಣದಲ್ಲಿ ಕೌರವರೂ ಕೂಡ ಶತ್ರುಗಳನ್ನು ವಧಿಸುತ್ತಿದ್ದರು.

06085020a ದ್ರೋಣಸ್ತು ರಥಿನಾಂ ಶ್ರೇಷ್ಠಃ ಸೋಮಕಾನ್ಸೃಂಜಯೈಃ ಸಹ।
06085020c ಅಭ್ಯದ್ರವತ ಸಂಕ್ರುದ್ಧಃ ಪ್ರೇಷಯಿಷ್ಯನ್ಯಮಕ್ಷಯಂ।।

ರಥಿಗಳಲ್ಲಿ ಶ್ರೇಷ್ಠ ದ್ರೋಣನಾದರೋ ಸೃಂಜಯರೊಂದಿಗಿದ್ದ ಸೋಮಕರನ್ನು ಸಂಕ್ರುದ್ಧನಾಗಿ ಆಕ್ರಮಿಸಿ, ಯಮಲೋಕಕ್ಕೆ ಕಳುಹಿಸಿದನು.

06085021a ತತ್ರಾಕ್ರಂದೋ ಮಹಾನಾಸೀತ್ಸೃಂಜಯಾನಾಂ ಮಹಾತ್ಮನಾಂ।
06085021c ವಧ್ಯತಾಂ ಸಮರೇ ರಾಜನ್ಭಾರದ್ವಾಜೇನ ಧನ್ವಿನಾ।।

ರಾಜನ್! ಸಮರದಲ್ಲಿ ಧನ್ವಿ ಭಾರದ್ವಾಜನಿಂದ ವಧಿಸಲ್ಪಡುತ್ತಿದ್ದ ಮಹಾತ್ಮಾ ಸೃಂಜಯರಲ್ಲಿ ಮಹಾ ಆಕ್ರಂದನವು ಉಂಟಾಯಿತು.

06085022a ದ್ರೋಣೇನ ನಿಹತಾಸ್ತತ್ರ ಕ್ಷತ್ರಿಯಾ ಬಹವೋ ರಣೇ।
06085022c ವಿವೇಷ್ಟಂತಃ ಸ್ಮ ದೃಶ್ಯಂತೇ ವ್ಯಾಧಿಕ್ಲಿಷ್ಟಾ ನರಾ ಇವ।।

ಅಲ್ಲಿ ದ್ರೋಣನಿಂದ ನಿಹತರಾದ ಹಲವಾರು ಕ್ಷತ್ರಿಯರು ರಣದಲ್ಲಿ ವ್ಯಾಧಿಪೀಡಿತರಾದ ಮನುಷ್ಯರಂತೆ ಸಂಕಟದಿಂದ ಹೊರಳಾಡುತ್ತಿದ್ದುದನ್ನು ನೋಡಿದೆವು.

06085023a ಕೂಜತಾಂ ಕ್ರಂದತಾಂ ಚೈವ ಸ್ತನತಾಂ ಚೈವ ಸಂಯುಗೇ।
06085023c ಅನಿಶಂ ಶ್ರೂಯತೇ ಶಬ್ದಃ ಕ್ಷುತ್ಕೃಶಾನಾಂ ನೃಣಾಮಿವ।।

ಹಸಿವೆಯಿಂದ ಬಳಲಿದವರಂತೆ ಸಂಯುಗದಲ್ಲಿ ಗಾಯಗೊಂಡು ಬಿದ್ದಿರುವವರ ಕೂಗು, ಅಳು ಮತ್ತು ಕಿರುಚಾಟಗಳು ಕೇಳಿ ಬರುತ್ತಿದ್ದವು.

06085024a ತಥೈವ ಕೌರವೇಯಾಣಾಂ ಭೀಮಸೇನೋ ಮಹಾಬಲಃ।
06085024c ಚಕಾರ ಕದನಂ ಘೋರಂ ಕ್ರುದ್ಧಃ ಕಾಲ ಇವಾಪರಃ।।

ಹಾಗೆಯೇ ಕೌರವರೊಡನೆಯೂ ಮಹಾಬಲ ಭೀಮಸೇನನು ಇನ್ನೊಬ್ಬ ಕ್ರುದ್ಧ ಕಾಲನಂತೆ ಘೋರ ಕದನವನ್ನು ನಡೆಸಿದನು.

06085025a ವಧ್ಯತಾಂ ತತ್ರ ಸೈನ್ಯಾನಾಮನ್ಯೋನ್ಯೇನ ಮಹಾರಣೇ।
06085025c ಪ್ರಾವರ್ತತ ನದೀ ಘೋರಾ ರುಧಿರೌಘಪ್ರವಾಹಿನೀ।।

ಸೇನೆಗಳು ಅನ್ಯೋನ್ಯರನ್ನು ವಧಿಸುತ್ತಿರುವ ಆ ಮಹಾರಣದಲ್ಲಿ ರಕ್ತ-ಮಾಂಸಗಳೇ ಹರಿದಿದ್ದ ಘೋರ ನದಿಯು ಹುಟ್ಟಿತು.

06085026a ಸ ಸಂಗ್ರಾಮೋ ಮಹಾರಾಜ ಘೋರರೂಪೋಽಭವನ್ಮಹಾನ್।
06085026c ಕುರೂಣಾಂ ಪಾಂಡವಾನಾಂ ಚ ಯಮರಾಷ್ಟ್ರವಿವರ್ಧನಃ।।

ಮಹಾರಾಜ! ಯಮರಾಷ್ಟ್ರವನ್ನು ವೃದ್ಧಿಗೊಳಿಸುವ ಕುರು-ಪಾಂಡವರ ಆ ಮಹಾ ಸಂಗ್ರಾಮವು ಘೋರ ರೂಪವನ್ನು ತಾಳಿತು.

06085027a ತತೋ ಭೀಮೋ ರಣೇ ಕ್ರುದ್ಧೋ ರಭಸಶ್ಚ ವಿಶೇಷತಃ।
06085027c ಗಜಾನೀಕಂ ಸಮಾಸಾದ್ಯ ಪ್ರೇಷಯಾಮಾಸ ಮೃತ್ಯವೇ।।

ಆಗ ಭೀಮನು ರಣದಲ್ಲಿ ಕ್ರುದ್ಧನಾಗಿ ವಿಶೇಷ ರಭಸದಿಂದ ಗಜಸೇನೆಯ ಮೇಲೆ ಧಾಳಿ ನಡೆಸಿ ಅವುಗಳನ್ನು ಮೃತ್ಯುವಿಗೆ ಕಳುಹಿಸಿದನು.

06085028a ತತ್ರ ಭಾರತ ಭೀಮೇನ ನಾರಾಚಾಭಿಹತಾ ಗಜಾಃ।
06085028c ಪೇತುಃ ಸೇದುಶ್ಚ ನೇದುಶ್ಚ ದಿಶಶ್ಚ ಪರಿಬಭ್ರಮುಃ।।

ಭಾರತ! ಅಲ್ಲಿ ಭೀಮನ ನಾರಾಚಗಳಿಂದ ಹೊಡೆಯಲ್ಪಟ್ಟ ಆನೆಗಳು ಬೀಳುತ್ತಿದ್ದವು, ಕಿರುಚಿಕೊಳ್ಳುತ್ತಿದ್ದವು, ಮರಣಹೊಂದಿದ್ದವು ಮತ್ತು ದಿಕ್ಕಾಪಾಲಾಗಿ ತಿರುಗುತ್ತಿದ್ದವು.

06085029a ಚಿನ್ನಹಸ್ತಾ ಮಹಾನಾಗಾಶ್ಚಿನ್ನಪಾದಾಶ್ಚ ಮಾರಿಷ।
06085029c ಕ್ರೌಂಚವದ್ವ್ಯನದನ್ಭೀತಾಃ ಪೃಥಿವೀಮಧಿಶಿಶ್ಯಿರೇ।।

ಮಾರಿಷ! ಸೊಂಡಿಲುಗಳು ತುಂಡಾಗಿ ಅಥವಾ ಕಾಲು ತುಂಡಾಗಿ ಮಹಾ ಗಜಗಳು ಕ್ರೌಂಚಗಳಂತೆ ಕೂಗುತ್ತಾ ಭೀತಿಗೊಂಡು ಭೂಮಿಯ ಮೇಲೆ ಮಲಗಿದ್ದವು.

06085030a ನಕುಲಃ ಸಹದೇವಶ್ಚ ಹಯಾನೀಕಮಭಿದ್ರುತೌ।
06085030c ತೇ ಹಯಾಃ ಕಾಂಚನಾಪೀಡಾ ರುಕ್ಮಭಾಂಡಪರಿಚ್ಛದಾಃ।
06085030e ವಧ್ಯಮಾನಾ ವ್ಯದೃಶ್ಯಂತ ಶತಶೋಽಥ ಸಹಸ್ರಶಃ।।

ನಕುಲ-ಸಹದೇವರು ಕುದುರೆಗಳ ಸೇನೆಯನ್ನು ಆಕ್ರಮಿಸಿದರು. ಅವರು ಕಾಂಚನ ಆಭರಣಗಳಿಂದ ಮತ್ತು ಮೇಲು ಹೊದಿಕೆಗಳಿಂದ ಅಲಂಕೃತಗೊಂಡಿದ್ದ ನೂರಾರು ಸಹಸ್ರಾರು ಕುದುರೆಗಳನ್ನು ವಧಿಸುತ್ತಿರುವುದು ಕಂಡುಬಂದಿತು.

06085031a ಪತದ್ಭಿಶ್ಚ ಹಯೈ ರಾಜನ್ಸಮಾಸ್ತೀರ್ಯತ ಮೇದಿನೀ।
06085031c ನಿರ್ಜಿಹ್ವೈಶ್ಚ ಶ್ವಸದ್ಭಿಶ್ಚ ಕೂಜದ್ಭಿಶ್ಚ ಗತಾಸುಭಿಃ।
06085031e ಹಯೆರ್ಬಭೌ ನರಶ್ರೇಷ್ಠ ನಾನಾರೂಪಧರೈರ್ಧರಾ।।

ಕೆಳಗೆ ಬಿದ್ದಿದ್ದ ಕುದುರೆಗಳಿಂದ ಮೇದಿನಿಯು ತುಂಬಿ ಹೋಗಿತ್ತು. ನಾಲಿಗೆಗಳಿರಲಿಲ್ಲ, ದೀರ್ಘ ನಿಟ್ಟುಸಿರು ಬಿಡುತ್ತಿದ್ದವು, ಕೂಗುತ್ತಿದ್ದವು, ಮತ್ತು ತೀರಿಕೊಂಡಿದ್ದವು. ನರಶ್ರೇಷ್ಠ! ಹೀಗೆ ಕುದುರೆಗಳು ನಾನಾ ರೂಪಗಳನ್ನು ಧರಿಸಿದ್ದವು.

06085032a ಅರ್ಜುನೇನ ಹತೈಃ ಸಂಖ್ಯೇ ತಥಾ ಭಾರತ ವಾಜಿಭಿಃ।
06085032c ಪ್ರಬಭೌ ವಸುಧಾ ಘೋರಾ ತತ್ರ ತತ್ರ ವಿಶಾಂ ಪತೇ।।

ಭಾರತ! ವಿಶಾಂಪತೇ! ರಣದಲ್ಲಿ ಅರ್ಜುನನಿಂದ ಹತವಾದ ಕುದುರೆಗಳಿಂದ ವಸುಧೆಯು ಅಲ್ಲಲ್ಲಿ ಘೋರವಾಗಿ ಕಾಣುತ್ತಿತ್ತು.

06085033a ರಥೈರ್ಭಗ್ನೈರ್ಧ್ವಜೈಶ್ಚಿನ್ನೈಶ್ಚತ್ರೈಶ್ಚ ಸುಮಹಾಪ್ರಭೈಃ।
06085033c ಹಾರೈರ್ನಿಷ್ಕೈಃ ಸಕೇಯೂರೈಃ ಶಿರೋಭಿಶ್ಚ ಸಕುಂಡಲೈಃ।।
06085034a ಉಷ್ಣೀಷೈರಪವಿದ್ಧೈಶ್ಚ ಪತಾಕಾಭಿಶ್ಚ ಸರ್ವಷಃ।
06085034c ಅನುಕರ್ಷೈಃ ಶುಭೈ ರಾಜನ್ಯೋಕ್ತ್ರೈಶ್ಚವ್ಯಸುರಶ್ಮಿಭಿಃ।।
06085034e ಸಂಚನ್ನಾ ವಸುಧಾ ಭಾತಿ ವಸಂತೇ ಕುಸುಮೈರಿವ।।

ರಾಜನ್! ಭಗ್ನವಾಗಿದ್ದ ರಥಗಳಿಂದ, ತುಂಡಾದ ಮಹಾಪ್ರಭೆಯ ಧ್ವಜ-ಚತ್ರಗಳಿಂದ, ಸುವರ್ಣಮಯ ಹಾರಗಳಿಂದ, ಕೇಯೂರ-ಕುಂಡಲಗಳನ್ನು ಧರಿಸಿದ್ದ ಶಿರಗಳಿಂದ, ಬಿಚ್ಚಿಹೋದ ಶಿರಸ್ತ್ರಾಣಗಳಿಂದ, ತುಂಡಾದ ಪತಾಕೆಗಳಿಂದ, ಸುಂದರ ನೊಗದ ಕೆಳಭಾಗಗಳಿಂದಲೂ, ಕಡಿವಾಣಗಳಿಂದಲೂ ವ್ಯಾಪ್ತವಾಗಿದ್ದ ರಣಭೂಮಿಯು ವಸಂತ ಋತುವಿನಲ್ಲಿ ಕುಸುಮಗಳಿಂದ ಆಚ್ಛಾದಿತವಾದ ಭೂಪ್ರದೇಶದಂತೆ ಕಾಣುತ್ತಿತ್ತು.

06085035a ಏವಮೇಷ ಕ್ಷಯೋ ವೃತ್ತಃ ಪಾಂಡೂನಾಮಪಿ ಭಾರತ।
06085035c ಕ್ರುದ್ಧೇ ಶಾಂತನವೇ ಭೀಷ್ಮೇ ದ್ರೋಣೇ ಚ ರಥಸತ್ತಮೇ।।
06085036a ಅಶ್ವತ್ಥಾಮ್ನಿ ಕೃಪೇ ಚೈವ ತಥೈವ ಕೃತವರ್ಮಣಿ।
06085036c ತಥೇತರೇಷು ಕ್ರುದ್ಧೇಷು ತಾವಕಾನಾಮಪಿ ಕ್ಷಯಃ।।

ಹೀಗೆಯೇ ಭಾರತ! ಕ್ರುದ್ಧ ಶಾಂತನವ ಭೀಷ್ಮನಿಂದ, ರಥಸತ್ತಮ ದ್ರೋಣನಿಂದ, ಅಶ್ವತ್ಥಾಮನಿಂದ, ಕೃಪನಿಂದ ಮತ್ತು ಕೃತವರ್ಮನಿಂದ ಪಾಂಡವರ ನಾಶವೂ ನಡೆಯಿತು. ಹಾಗೆಯೇ ಕ್ರುದ್ಧರಾದ ಅವರಿಂದ ನಿನ್ನವರೂ ಹತರಾದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಷ್ಟಮದಿವಸಯುದ್ಧೇ ಪಂಚಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಷ್ಟಮದಿವಸಯುದ್ಧ ಎನ್ನುವ ಎಂಭತ್ತೈದನೇ ಅಧ್ಯಾಯವು.