084 ಸುನಾಭಾದಿಧೃತರಾಷ್ಟ್ರಪುತ್ರವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 84

ಸಾರ

ಭೀಷ್ಮ-ಭೀಮಸೇನರ ಯುದ್ಧ (1-11). ಭೀಮಸೇನನಿಂದ ಧೃತರಾಷ್ಟ್ರನ ಎಂಟು ಮಕ್ಕಳು – ಸುನಾಭ, ಆದಿತ್ಯಕೇತು, ಬಹ್ವಾಶೀ, ಕುಂಡಧಾರ, ಮಹೋದರ, ಅಪರಾಜಿತ, ಪಂಡಿತಕ ಮತ್ತು ವಿಶಾಲಾಕ್ಷರ ವಧೆ (12-28). ದುರ್ಯೋಧನ-ಭೀಷ್ಮರ ಸಂವಾದ (29-43).

06084001 ಸಂಜಯ ಉವಾಚ।
06084001a ಭೀಷ್ಮಂ ತು ಸಮರೇ ಕ್ರುದ್ಧಂ ಪ್ರತಪಂತಂ ಸಮಂತತಃ।
06084001c ನ ಶೇಕುಃ ಪಾಂಡವಾ ದ್ರಷ್ಟುಂ ತಪಂತಂ ಇವ ಭಾಸ್ಕರಂ।।

ಸಂಜಯನು ಹೇಳಿದನು: “ಸಮರದಲ್ಲಿ ಕ್ರುದ್ಧನಾಗಿ ಎಲ್ಲ ಕಡೆಗಳಲ್ಲಿ ದಹಿಸುತ್ತಿದ್ದ ಭೀಷ್ಮನನ್ನು ಸುಡುತ್ತಿರುವ ಭಾಸ್ಕರನನಂತೆ ಪಾಂಡವರು ನೋಡಲು ಅಶಕ್ಯರಾದರು.

06084002a ತತಃ ಸರ್ವಾಣಿ ಸೈನ್ಯಾನಿ ಧರ್ಮಪುತ್ರಸ್ಯ ಶಾಸನಾತ್।
06084002c ಅಭ್ಯದ್ರವಂತ ಗಾಂಗೇಯಂ ಮರ್ದಯಂತಂ ಶಿತೈಃ ಶರೈಃ।।

ಆಗ ಧರ್ಮಪುತ್ರನ ಶಾಸನದಂತೆ ಸೈನ್ಯಗಳೆಲ್ಲವೂ ಗಾಂಗೇಯನನ್ನು ಆಕ್ರಮಿಸಿ ನಿಶಿತ ಶರಗಳಿಂದ ಗಾಯಗೊಳಿಸಿದವು.

06084003a ಸ ತು ಭೀಷ್ಮೋ ರಣಶ್ಲಾಘೀ ಸೋಮಕಾನ್ಸಹಸೃಂಜಯಾನ್।
06084003c ಪಾಂಚಾಲಾಂಶ್ಚ ಮಹೇಷ್ವಾಸಾನ್ಪಾತಯಾಮಾಸ ಸಾಯಕೈಃ।।

ರಣಶ್ಲಾಘೀ ಭೀಷ್ಮನಾದರೋ ಸೃಂಜಯರೊಂದಿಗೆ ಸೋಮಕರನ್ನು ಮತ್ತು ಮಹೇಷ್ವಾಸ ಪಾಂಚಾಲರನ್ನು ಸಾಯಕಗಳಿಂದ ಉರುಳಿಸಿದನು.

06084004a ತೇ ವಧ್ಯಮಾನಾ ಭೀಷ್ಮೇಣ ಪಾಂಚಾಲಾಃ ಸೋಮಕೈಃ ಸಹ।
06084004c ಭೀಷ್ಮಮೇವಾಭ್ಯಯುಸ್ತೂರ್ಣಂ ತ್ಯಕ್ತ್ವಾ ಮೃತ್ಯುಕೃತಂ ಭಯಂ।।

ಭೀಷ್ಮನಿಂದ ವಧಿಸಲ್ಪಡುತ್ತಿದ್ದ ಸೋಮಕರೊಡನೆ ಪಾಂಚಾಲರು ಸಾವಿನ ಭಯವನ್ನು ತೊರೆದು ಭೀಷ್ಮನನ್ನೇ ಪುನಃ ಆಕ್ರಮಣಿಸಿದರು.

06084005a ಸ ತೇಷಾಂ ರಥಿನಾಂ ವೀರೋ ಭೀಷ್ಮಃ ಶಾಂತನವೋ ಯುಧಿ।
06084005c ಚಿಚ್ಛೇದ ಸಹಸಾ ರಾಜನ್ಬಾಹೂನಥ ಶಿರಾಂಸಿ ಚ।।

ಆದರೆ ರಾಜನ್! ಯುದ್ಧದಲ್ಲಿ ವೀರ ಭೀಷ್ಮ ಶಾಂತನವನು ಕೂಡಲೇ ಆ ರಥಿಗಳ ಬಾಹು-ಶಿರಸ್ಸುಗಳನ್ನು ತುಂಡರಿಸಿದನು.

06084006a ವಿರಥಾನ್ರಥಿನಶ್ಚಕ್ರೇ ಪಿತಾ ದೇವವ್ರತಸ್ತವ।
06084006c ಪತಿತಾನ್ಯುತ್ತಮಾಂಗಾನಿ ಹಯೇಭ್ಯೋ ಹಯಸಾದಿನಾಂ।।

ನಿನ್ನ ತಂದೆ ದೇವವ್ರತನು ರಥಿಗಳನ್ನು ವಿರಥರನ್ನಾಗಿ ಮಾಡಿದನು. ಅಶ್ವಾರೋಹಿಗಳ ಮತ್ತು ಕುದುರೆಗಳ ಶಿರಗಳನ್ನು ಉರುಳಿಸಿದನು.

06084007a ನಿರ್ಮನುಷ್ಯಾಂಶ್ಚ ಮಾತಂಗಾಂ ಶಯಾನಾನ್ಪರ್ವತೋಪಮಾನ್।
06084007c ಅಪಶ್ಯಾಮ ಮಹಾರಾಜ ಭೀಷ್ಮಾಸ್ತ್ರೇಣ ಪ್ರಮೋಹಿತಾನ್।।

ಮಹಾರಾಜ! ಭೀಷ್ಮನ ಅಸ್ತ್ರಗಳಿಂದ, ಮಾವುತರಿಲ್ಲದೇ ಪ್ರಮೋಹಿತಗೊಂಡು ಮಲಗಿದ್ದ ಪರ್ವತೋಪಮ ಆನೆಗಳನ್ನು ನೋಡಿದೆವು.

06084008a ನ ತತ್ರಾಸೀತ್ಪುಮಾನ್ಕಶ್ಚಿತ್ಪಾಂಡವಾನಾಂ ವಿಶಾಂ ಪತೇ।
06084008c ಅನ್ಯತ್ರ ರಥಿನಾಂ ಶ್ರೇಷ್ಠಾದ್ಭೀಮಸೇನಾನ್ಮಹಾಬಲಾತ್।।

ವಿಶಾಂಪತೇ! ರಥಿಗಳಲ್ಲಿ ಶ್ರೇಷ್ಠ ಮಹಾಬಲ ಭೀಮಸೇನನಲ್ಲದೇ ಪಾಂಡವ ಸೇನೆಯಲ್ಲಿ ಬೇರೆ ಯಾವ ಪುರುಷನೂ ಇರಲಿಲ್ಲ.

06084009a ಸ ಹಿ ಭೀಷ್ಮಂ ಸಮಾಸಾದ್ಯ ತಾಡಯಾಮಾಸ ಸಂಯುಗೇ।
06084009c ತತೋ ನಿಷ್ಟಾನಕೋ ಘೋರೋ ಭೀಷ್ಮಭೀಮಸಮಾಗಮೇ।।

ಅವನೇ ಸಂಯುಗದಲ್ಲಿ ಭೀಷ್ಮನನ್ನು ಎದುರಿಸಿ ಪ್ರಹರಿಸತೊಡಗಿದನು. ಆಗ ಭೀಷ್ಮ-ಭೀಮ ಸಮಾಗಮದ ಘೋರ ಯುದ್ಧವು ನಡೆಯಿತು.

06084010a ಬಭೂವ ಸರ್ವಸೈನ್ಯಾನಾಂ ಘೋರರೂಪೋ ಭಯಾನಕಃ।
06084010c ತಥೈವ ಪಾಂಡವಾ ಹೃಷ್ಟಾಃ ಸಿಂಹನಾದಮಥಾನದನ್।।

ಅವನು ಎಲ್ಲ ಸೇನೆಗಳಿಗೂ ಘೋರರೂಪಿ ಭಯಾನಕನಾಗಿ ಕಂಡನು. ಆಗ ಪಾಂಡವರು ಹೃಷ್ಟರಾಗಿ ಸಿಂಹನಾದಗೈದರು.

06084011a ತತೋ ದುರ್ಯೋಧನೋ ರಾಜಾ ಸೋದರ್ಯೈಃ ಪರಿವಾರಿತಃ।
06084011c ಭೀಷ್ಮಂ ಜುಗೋಪ ಸಮರೇ ವರ್ತಮಾನೇ ಜನಕ್ಷಯೇ।।

ಆಗ ರಾಜಾ ದುರ್ಯೋಧನನು ಸೋದರರಿಂದ ಸುತ್ತುವರೆಯಲ್ಪಟ್ಟು ಜನಕ್ಷಯವು ನಡೆಯುತ್ತಿರುವ ಸಮರದಲ್ಲಿ ಭೀಷ್ಮನನ್ನು ರಕ್ಷಿಸಿದನು.

06084012a ಭೀಮಸ್ತು ಸಾರಥಿಂ ಹತ್ವಾ ಭೀಷ್ಮಸ್ಯ ರಥಿನಾಂ ವರಃ।
06084012c ವಿದ್ರುತಾಶ್ವೇ ರಥೇ ತಸ್ಮಿನ್ದ್ರವಮಾಣೇ ಸಮಂತತಃ।
06084012e ಸುನಾಭಸ್ಯ ಶರೇಣಾಶು ಶಿರಶ್ಚಿಚ್ಛೇದ ಚಾರಿಹಾ।।

ರಥಿಗಳಲ್ಲಿ ಶ್ರೇಷ್ಠ ಅರಿಹ ಭೀಮನಾದರೋ ಭೀಷ್ಮನ ಸಾರಥಿಯನ್ನು ಕೊಂದು, ನಿಯಂತ್ರಣವಿಲ್ಲದೇ ಅವನ ರಥದ ಕುದುರೆಗಳು ಎಲ್ಲ ಕಡೆ ಓಡಿಹೋಗುತ್ತಿರಲು ಶರದಿಂದ ಸುನಾಭನ ತಲೆಯನ್ನು ಕತ್ತರಿಸಿದನು.

06084013a ಕ್ಷುರಪ್ರೇಣ ಸುತೀಕ್ಷ್ಣೇನ ಸ ಹತೋ ನ್ಯಪತದ್ಭುವಿ।
06084013c ಹತೇ ತಸ್ಮಿನ್ಮಹಾರಾಜ ತವ ಪುತ್ರೇ ಮಹಾರಥೇ।
06084013e ನಾಮೃಷ್ಯಂತ ರಣೇ ಶೂರಾಃ ಸೋದರ್ಯಾಃ ಸಪ್ತ ಸಂಯುಗೇ।।

ಸುತೀಕ್ಷ್ಣ ಕ್ಷುರಪ್ರದಿಂದ ಹತನಾಗಿ ಅವನು ಭೂಮಿಯ ಮೇಲೆ ಬಿದ್ದನು. ಮಹಾರಾಜ! ಅವನು ಹತನಾಗಲು ನಿನ್ನ ಪುತ್ರರು ಮಹಾರಥ ಶೂರರು ಏಳು ಮಂದಿ ಸೋದರರು ರಣದಲ್ಲಿ ಅದನ್ನು ಸಹಿಸಿಕೊಳ್ಳಲಿಲ್ಲ.

06084014a ಆದಿತ್ಯಕೇತುರ್ಬಹ್ವಾಶೀ ಕುಂಡಧಾರೋ ಮಹೋದರಃ।
06084014c ಅಪರಾಜಿತಃ ಪಂಡಿತಕೋ ವಿಶಾಲಾಕ್ಷಃ ಸುದುರ್ಜಯಃ।।
06084015a ಪಾಂಡವಂ ಚಿತ್ರಸಮ್ನಾಹಾ ವಿಚಿತ್ರಕವಚಧ್ವಜಾಃ।
06084015c ಅಭ್ಯದ್ರವಂತ ಸಂಗ್ರಾಮೇ ಯೋದ್ಧುಕಾಮಾರಿಮರ್ದನಾಃ।।

ಆದಿತ್ಯಕೇತು, ಬಹ್ವಾಶೀ, ಕುಂಡಧಾರ, ಮಹೋದರ, ಅಪರಾಜಿತ, ಪಂಡಿತಕ ಮತ್ತು ಸುದುರ್ಜಯ ವಿಶಾಲಾಕ್ಷ ಈ ಅರಿಮರ್ದನರು ವಿಚಿತ್ರವಾಗಿ ಸನ್ನದ್ಧರಾಗಿ, ವಿಚಿತ್ರ ಕವಚ-ಧ್ವಜಗಳೊಂದಿಗೆ ಯುದ್ಧಮಾಡಲು ಬಯಸಿ ಸಂಗ್ರಾಮದಲ್ಲಿ ಪಾಂಡವನನ್ನು ಆಕ್ರಮಣಿಸಿದರು.

06084016a ಮಹೋದರಸ್ತು ಸಮರೇ ಭೀಮಂ ವಿವ್ಯಾಧ ಪತ್ರಿಭಿಃ।
06084016c ನವಭಿರ್ವಜ್ರಸಂಕಾಶೈರ್ನಮುಚಿಂ ವೃತ್ರಹಾ ಯಥಾ।।

ಮಹೋದರನಾದರೋ ಸಮರದಲ್ಲಿ ವೃತ್ರಹನು ನಮುಚಿಯನ್ನು ಹೇಗೋ ಹಾಗೆ ಒಂಭತ್ತು ವಜ್ರಸಂಕಾಶ ಪತ್ರಿಗಳಿಂದ ಭೀಮನನ್ನು ಹೊಡೆದನು.

06084017a ಆದಿತ್ಯಕೇತುಃ ಸಪ್ತತ್ಯಾ ಬಹ್ವಾಶೀ ಚಾಪಿ ಪಂಚಭಿಃ।
06084017c ನವತ್ಯಾ ಕುಂಡಧಾರಸ್ತು ವಿಶಾಲಾಕ್ಷಶ್ಚ ಸಪ್ತಭಿಃ।।
06084018a ಅಪರಾಜಿತೋ ಮಹಾರಾಜ ಪರಾಜಿಷ್ಣುರ್ಮಹಾರಥಃ।
06084018c ಶರೈರ್ಬಹುಭಿರಾನರ್ಚದ್ಭೀಮಸೇನಂ ಮಹಾಬಲಂ।।

ಮಹಾರಾಜ! ಶತ್ರುವನ್ನು ಗೆಲ್ಲಲು ಆದಿತ್ಯಕೇತುವು ಏಳರಿಂದ, ಬಹ್ವಾಶಿಯು ಐದರಿಂದ, ಕುಂಡಧಾರನು ಒಂಭತ್ತರಿಂದ, ವಿಶಾಲಾಕ್ಷನು ಏಳರಿಂದ, ಮತ್ತು ಮಹಾರಥ ಅಪರಾಜಿತನು ಅನೇಕ ಶರಗಳಿಂದ ಮಹಾಬಲ ಭೀಮಸೇನನನ್ನು ಹೊಡೆದರು.

06084019a ರಣೇ ಪಂಡಿತಕಶ್ಚೈನಂ ತ್ರಿಭಿರ್ಬಾಣೈಃ ಸಮರ್ದಯತ್।
06084019c ಸ ತನ್ನ ಮಮೃಷೇ ಭೀಮಃ ಶತ್ರುಭಿರ್ವಧಮಾಹವೇ।।

ಪಂಡಿತಕನೂ ಕೂಡ ರಣದಲ್ಲಿ ಮೂರು ಬಾಣಗಳಿಂದ ಹೊಡೆದನು. ಆಹವದಲ್ಲಿ ಶತ್ರುಗಳ ಆ ಪ್ರಹಾರಗಳನ್ನು ಭೀಮನು ಸಹಿಸಿಕೊಳ್ಳಲಿಲ್ಲ.

06084020a ಧನುಃ ಪ್ರಪೀಡ್ಯ ವಾಮೇನ ಕರೇಣಾಮಿತ್ರಕರ್ಶನಃ।
06084020c ಶಿರಶ್ಚಿಚ್ಛೇದ ಸಮರೇ ಶರೇಣ ನತಪರ್ವಣಾ।।
06084021a ಅಪರಾಜಿತಸ್ಯ ಸುನಸಂ ತವ ಪುತ್ರಸ್ಯ ಸಂಯುಗೇ।
06084021c ಪರಾಜಿತಸ್ಯ ಭೀಮೇನ ನಿಪಪಾತ ಶಿರೋ ಮಹೀಂ।।

ಆ ಅಮಿತ್ರಕರ್ಶನನು ಧನುಸ್ಸನ್ನು ಎಡಗೈಯಿಂದ ಮೀಟಿ ನತಪರ್ವ ಶರದಿಂದ ಸಂಯುಗದಲ್ಲಿ ನಿನ್ನ ಮಗ ಅಪರಾಜಿತನ ಸುನಸ ಶಿರವನ್ನು ಕತ್ತರಿಸಿದನು. ಭೀಮನಿಂದ ಹೊಡೆಯಲ್ಪಟ್ಟ ಅಪರಾಜಿತನ ಶಿರವು ಭೂಮಿಯ ಮೇಲೆ ಬಿದ್ದಿತು.

06084022a ಅಥಾಪರೇಣ ಭಲ್ಲೇನ ಕುಂಡಧಾರಂ ಮಹಾರಥಂ।
06084022c ಪ್ರಾಹಿಣೋನ್ಮೃತ್ಯುಲೋಕಾಯ ಸರ್ವಲೋಕಸ್ಯ ಪಶ್ಯತಃ।।

ಆಗ ಇನ್ನೊಂದು ಭಲ್ಲದಿಂದ, ಸರ್ವಲೋಕವೂ ನೋಡುತ್ತಿದ್ದಂತೆ ಮಹಾರಥ ಕುಂಡಧಾರನನ್ನು ಮೃತ್ಯುಲೋಕಕ್ಕೆ ಕಳುಹಿಸಿದನು.

06084023a ತತಃ ಪುನರಮೇಯಾತ್ಮಾ ಪ್ರಸಂಧಾಯ ಶಿಲೀಮುಖಂ।
06084023c ಪ್ರೇಷಯಾಮಾಸ ಸಮರೇ ಪಂಡಿತಂ ಪ್ರತಿ ಭಾರತ।।

ಭಾರತ! ಆಗ ಪುನಃ ಆ ಅಮೇಯಾತ್ಮನು ಶಿಲೀಮುಖಿಯನ್ನು ಹೂಡಿ ಸಮರದಲ್ಲಿ ಪಂಡಿತಕನ ಮೇಲೆ ಪ್ರಯೋಗಿಸಿದನು.

06084024a ಸ ಶರಃ ಪಂಡಿತಂ ಹತ್ವಾ ವಿವೇಶ ಧರಣೀತಲಂ।
06084024c ಯಥಾ ನರಂ ನಿಹತ್ಯಾಶು ಭುಜಗಃ ಕಾಲಚೋದಿತಃ।।

ಕಾಲಚೋದಿತ ಸರ್ಪವು ಮನುಷ್ಯನನ್ನು ಕಚ್ಚಿ ಬಿಲವನ್ನು ಸೇರಿಕೊಳ್ಳುವಂತೆ ಆ ಶರವು ಪಂಡಿತಕನನ್ನು ಸಂಹರಿಸಿ ಧರಣೀತಲವನ್ನು ಪ್ರವೇಶಿಸಿತು.

06084025a ವಿಶಾಲಾಕ್ಷಶಿರಶ್ಚಿತ್ತ್ವಾ ಪಾತಯಾಮಾಸ ಭೂತಲೇ।
06084025c ತ್ರಿಭಿಃ ಶರೈರದೀನಾತ್ಮಾ ಸ್ಮರನ್ ಕ್ಲೇಶಂ ಪುರಾತನಂ।।

ಹಿಂದಿನ ಕ್ಲೇಶಗಳನ್ನು ಸ್ಮರಿಸಿಕೊಂಡು ಆ ಅದೀನಾತ್ಮನು ವಿಶಾಲಾಕ್ಷನ ಶಿರವನ್ನು ಕತ್ತರಿಸಿ ಭೂಮಿಯ ಮೇಲೆ ಬೀಳಿಸಿದನು.

06084026a ಮಹೋದರಂ ಮಹೇಷ್ವಾಸಂ ನಾರಾಚೇನ ಸ್ತನಾಂತರೇ।
06084026c ವಿವ್ಯಾಧ ಸಮರೇ ರಾಜನ್ಸ ಹತೋ ನ್ಯಪತದ್ಭುವಿ।।

ರಾಜನ್! ಮಹೇಷ್ವಾಸ ಮಹೋದರನ ಎದೆಗೆ ನಾರಾಚದಿಂದ ಹೊಡೆಯಲು ಅವನು ಹತನಾಗಿ ಭೂಮಿಯ ಮೇಲೆ ಬಿದ್ದನು.

06084027a ಆದಿತ್ಯಕೇತೋಃ ಕೇತುಂ ಚ ಚಿತ್ತ್ವಾ ಬಾಣೇನ ಸಂಯುಗೇ।
06084027c ಭಲ್ಲೇನ ಭೃಶತೀಕ್ಷ್ಣೇನ ಶಿರಶ್ಚಿಚ್ಛೇದ ಚಾರಿಹಾ।।

ಅರಿಹನು ಸಂಯುಗದಲ್ಲಿ ಬಾಣದಿಂದ ಆದಿತ್ಯಕೇತುವಿನ ಧ್ವಜವನ್ನು ಕತ್ತರಿಸಿ ಅತಿ ತೀಕ್ಷ್ಣ ಭಲ್ಲದಿಂದ ಅವನ ಶಿರಸ್ಸನ್ನು ತುಂಡರಿಸಿದನು.

06084028a ಬಹ್ವಾಶಿನಂ ತತೋ ಭೀಮಃ ಶರೇಣ ನತಪರ್ವಣಾ।
06084028c ಪ್ರೇಷಯಾಮಾಸ ಸಂಕ್ರುದ್ಧೋ ಯಮಸ್ಯ ಸದನಂ ಪ್ರತಿ।।

ಆಗ ಭೀಮನು ಸಂಕ್ರುದ್ಧನಾಗಿ ನತಪರ್ವ ಶರದಿಂದ ಬಹ್ವಾಶಿಯನ್ನೂ ಯಮಸದನಕ್ಕೆ ಕಳುಹಿಸಿದನು.

06084029a ಪ್ರದುದ್ರುವುಸ್ತತಸ್ತೇಽನ್ಯೇ ಪುತ್ರಾಸ್ತವ ವಿಶಾಂ ಪತೇ।
06084029c ಮನ್ಯಮಾನಾ ಹಿ ತತ್ಸತ್ಯಂ ಸಭಾಯಾಂ ತಸ್ಯ ಭಾಷಿತಂ।।

ವಿಶಾಂಪತೇ! ನಿನ್ನ ಇತರ ಮಕ್ಕಳು ಇವನು ಅಂದು ಸಭೆಯಲ್ಲಿ ಆಡಿದುದನ್ನು ಸತ್ಯವಾಗಿಸುತ್ತಾನೆ ಎಂದು ಅಂದುಕೊಂಡು ಅಲ್ಲಿಂದ ಪಲಾಯನಗೈದರು.

06084030a ತತೋ ದುರ್ಯೋಧನೋ ರಾಜಾ ಭ್ರಾತೃವ್ಯಸನಕರ್ಶಿತಃ।
06084030c ಅಬ್ರವೀತ್ತಾವಕಾನ್ಯೋಧಾನ್ಭೀಮೋಽಯಂ ಯುಧಿ ವಧ್ಯತಾಂ।।

ಆಗ ರಾಜಾ ದುರ್ಯೋಧನನು ತನ್ನ ಸಹೋದರ ವಧೆಯಿಂದಾದ ವ್ಯಸನದಿಂದ ಸಂಕಟಪಟ್ಟು ನಿನ್ನವರ ಯೋಧರಿಗೆ “ಯುದ್ಧದಲ್ಲಿ ಈ ಭೀಮನನ್ನು ಕೊಲ್ಲಿ!” ಎಂದು ಆಜ್ಞಾಪಿಸಿದನು.

06084031a ಏವಮೇತೇ ಮಹೇಷ್ವಾಸಾಃ ಪುತ್ರಾಸ್ತವ ವಿಶಾಂ ಪತೇ।
06084031c ಭ್ರಾತೄನ್ಸಂದೃಶ್ಯ ನಿಹತಾನ್ಪ್ರಾಸ್ಮರಂಸ್ತೇ ಹಿ ತದ್ವಚಃ।।
06084032a ಯದುಕ್ತವಾನ್ಮಹಾಪ್ರಾಜ್ಞಃ ಕ್ಷತ್ತಾ ಹಿತಮನಾಮಯಂ।
06084032c ತದಿದಂ ಸಮನುಪ್ರಾಪ್ತಂ ವಚನಂ ದಿವ್ಯದರ್ಶಿನಃ।।

ವಿಶಾಂಪತೇ! ಈ ರೀತಿ ತಮ್ಮ ಸಹೋದರರು ಹತರಾದುದನ್ನು ನೋಡಿ ನಿನ್ನ ಮಹೇಷ್ವಾಸ ಮಕ್ಕಳು ಮಹಾಪ್ರಾಜ್ಞ ಕ್ಷತ್ತನು ಹೇಳಿದ್ದ ಹಿತವೂ ಆನಾಮಯವೂ ಆದ ಆ ವಚನಗಳನ್ನು ಸ್ಮರಿಸಿಕೊಂಡು ಆ ದಿವ್ಯದರ್ಶಿಯ ಮಾತುಗಳು ಇಂದು ಪ್ರತ್ಯಕ್ಷವಾಗಿ ಕಾರ್ಯರೂಪಕ್ಕೆ ಬಂದಿದೆ ಎಂದುಕೊಂಡರು.

06084033a ಲೋಭಮೋಹಸಮಾವಿಷ್ಟಃ ಪುತ್ರಪ್ರೀತ್ಯಾ ಜನಾಧಿಪ।
06084033c ನ ಬುಧ್ಯಸೇ ಪುರಾ ಯತ್ತತ್ತಥ್ಯಮುಕ್ತಂ ವಚೋ ಮಹತ್।।

ಜನಾಧಿಪ! ನೀನಾದರೋ ಲೋಭಮೋಹಗಳಿಂದ ಕೂಡಿದವನಾಗಿ, ಪುತ್ರನ ಮೇಲಿನ ಪ್ರೀತಿಯಿಂದ ಹಿಂದೆ ಅವನು ನಿನ್ನ ಹಿತಕ್ಕಾಗಿ ಹೇಳಿದ ಸತ್ಯವೂ ಮಹತ್ವವುಳ್ಳದ್ದೂ ಆದ ಮಾತುಗಳನ್ನು ಅರ್ಥಮಾಡಿಕೊಳ್ಳಲಿಲ್ಲ.

06084034a ತಥೈವ ಹಿ ವಧಾರ್ಥಾಯ ಪುತ್ರಾಣಾಂ ಪಾಂಡವೋ ಬಲೀ।
06084034c ನೂನಂ ಜಾತೋ ಮಹಾಬಾಹುರ್ಯಥಾ ಹಂತಿ ಸ್ಮ ಕೌರವಾನ್।।

ನಿನ್ನ ಪುತ್ರರ ವಧೆಗೋಸ್ಕರವಾಗಿಯೇ ಬಲಶಾಲೀ ಪಾಂಡವನು ಹುಟ್ಟಿದ್ದಾನೋ ಎನ್ನುವಂತೆ ಆ ಮಹಾಬಾಹುವು ಕೌರವರನ್ನು ಸಂಹರಿಸುತ್ತಿದ್ದಾನೆ.

06084035a ತತೋ ದುರ್ಯೋಧನೋ ರಾಜಾ ಭೀಷ್ಮಮಾಸಾದ್ಯ ಮಾರಿಷ।
06084035c ದುಃಖೇನ ಮಹತಾವಿಷ್ಟೋ ವಿಲಲಾಪಾತಿಕರ್ಶಿತಃ।।

ಮಾರಿಷ! ಆಗ ರಾಜಾ ದುರ್ಯೋಧನನು ಭೀಷ್ಮನ ಬಳಿಸಾರಿ ಮಹಾ ದುಃಖದಿಂದ ಆವಿಷ್ಟನಾಗಿ ಸಂಕಟದಿಂದ ರೋದಿಸಿದನು.

06084036a ನಿಹತಾ ಭ್ರಾತರಃ ಶೂರಾ ಭೀಮಸೇನೇನ ಮೇ ಯುಧಿ।
06084036c ಯತಮಾನಾಸ್ತಥಾನ್ಯೇಽಪಿ ಹನ್ಯಂತೇ ಸರ್ವಸೈನಿಕಾಃ।।

“ನನ್ನ ಶೂರ ಸಹೋದರರು ಯುದ್ಧದಲ್ಲಿ ಭೀಮಸೇನನಿಂದ ಹತರಾಗಿದ್ದಾರೆ. ಪ್ರಯತ್ನಪಟ್ಟರೂ ಕೂಡ ನನ್ನ ಸೈನಿಕರೆಲ್ಲರೂ ಹತರಾಗುತ್ತಿದ್ದಾರೆ.

06084037a ಭವಾಂಶ್ಚ ಮಧ್ಯಸ್ಥತಯಾ ನಿತ್ಯಮಸ್ಮಾನುಪೇಕ್ಷತೇ।
06084037c ಸೋಽಹಂ ಕಾಪಥಮಾರೂಢಃ ಪಶ್ಯ ದೈವಮಿದಂ ಮಮ।।

ನೀನಾದರೋ ಮಧ್ಯಸ್ಥನಾಗಿದ್ದುಕೊಂಡು ನಿತ್ಯವೂ ನಮ್ಮನ್ನು ಉಪೇಕ್ಷಿಸುತ್ತಿರುವೆ. ನಾನಾದರೋ ವಿನಾಶದ ಮಾರ್ಗವನ್ನೇ ಹಿಡಿದುಬಿಟ್ಟಿದ್ದೇನೆ. ನನ್ನ ಈ ದೈವವನ್ನು ನೋಡು!”

06084038a ಏತಚ್ಚ್ರುತ್ವಾ ವಚಃ ಕ್ರೂರಂ ಪಿತಾ ದೇವವ್ರತಸ್ತವ।
06084038c ದುರ್ಯೋಧನಮಿದಂ ವಾಕ್ಯಮಬ್ರವೀತ್ಸಾಶ್ರುಲೋಚನಂ।।

ಕ್ರೂರವಾದ ಈ ಮಾತನ್ನು ಕೇಳಿ ನಿನ್ನ ತಂದೆ ದೇವವ್ರತನು ಕಣ್ಣೀರು ತುಂಬಿದ ದುರ್ಯೋಧನನಿಗೆ ಈ ಮಾತನ್ನಾಡಿದನು:

06084039a ಉಕ್ತಮೇತನ್ಮಯಾ ಪೂರ್ವಂ ದ್ರೋಣೇನ ವಿದುರೇಣ ಚ।
06084039c ಗಾಂಧಾರ್ಯಾ ಚ ಯಶಸ್ವಿನ್ಯಾ ತತ್ತ್ವಂ ತಾತ ನ ಬುದ್ಧವಾನ್।।

“ಹಿಂದೆಯೇ ನಾನು, ದ್ರೋಣ, ವಿದುರ, ಯಶಸ್ವಿನಿ ಗಾಂಧಾರಿಯರು ನಿನಗೆ ಇದನ್ನು ಹೇಳಿದ್ದೆವು. ಮಗೂ! ಆಗ ನೀನು ಅದರ ಅರ್ಥವನ್ನು ತಿಳಿದುಕೊಳ್ಳಲಿಲ್ಲ.

06084040a ಸಮಯಶ್ಚ ಮಯಾ ಪೂರ್ವಂ ಕೃತೋ ವಃ ಶತ್ರುಕರ್ಶನ।
06084040c ನಾಹಂ ಯುಧಿ ವಿಮೋಕ್ತವ್ಯೋ ನಾಪ್ಯಾಚಾರ್ಯಃ ಕಥಂ ಚನ।।

ಶತ್ರುಕರ್ಶನ! ಹಿಂದೆಯೇ ನಾನು ನಿನಗೆ ಸಲಹೆಯನ್ನು ನೀಡಿದ್ದೆನು - ನಿಮ್ಮಿಬ್ಬರ ನಡುವಿನ ಯುದ್ಧದಲ್ಲಿ ನನ್ನನ್ನೂ ಆಚಾರ್ಯ ದ್ರೋಣನನ್ನೂ ಎಂದೂ ನಿಯೋಜಿಸಕೂಡದೆಂದು.

06084041a ಯಂ ಯಂ ಹಿ ಧಾರ್ತರಾಷ್ಟ್ರಾಣಾಂ ಭೀಮೋ ದ್ರಕ್ಷ್ಯತಿ ಸಂಯುಗೇ।
06084041c ಹನಿಷ್ಯತಿ ರಣೇ ತಂ ತಂ ಸತ್ಯಮೇತದ್ಬ್ರವೀಮಿ ತೇ।।

ಸಂಯುಗದಲ್ಲಿ ಭೀಮನು ಯಾರ್ಯಾರು ಧಾರ್ತರಾಷ್ಟ್ರರನ್ನು ನೋಡುತ್ತಾನೋ ಅವರನ್ನೆಲ್ಲ ರಣದಲ್ಲಿ ಸಂಹರಿಸುತ್ತಾನೆ. ಸತ್ಯವನ್ನೇ ನಿನಗೆ ನಾನು ಹೇಳುತ್ತೇನೆ.

06084042a ಸ ತ್ವಂ ರಾಜನ್ಸ್ಥಿರೋ ಭೂತ್ವಾ ದೃಢಾಂ ಕೃತ್ವಾ ರಣೇ ಮತಿಂ।
06084042c ಯೋಧಯಸ್ವ ರಣೇ ಪಾರ್ಥಾನ್ಸ್ವರ್ಗಂ ಕೃತ್ವಾ ಪರಾಯಣಂ।।

ಆದುದರಿಂದ ರಾಜನ್! ನೀನು ಸ್ಥಿರನಾಗಿದ್ದುಕೊಂಡು, ರಣದಲ್ಲಿ ಬುದ್ಧಿಯನ್ನು ದೃಢವಾಗಿರಿಸಿಕೊಂಡು, ಸ್ವರ್ಗವನ್ನೇ ಅಂತಿಮಾಶ್ರವನ್ನಾಗಿರಿಸಿಕೊಂಡು ರಣದಲ್ಲಿ ಪಾರ್ಥರೊಂದಿಗೆ ಯುದ್ಧಮಾಡು.

06084043a ನ ಶಕ್ಯಾಃ ಪಾಂಡವಾ ಜೇತುಂ ಸೇಂದ್ರೈರಪಿ ಸುರಾಸುರೈಃ।
06084043c ತಸ್ಮಾದ್ಯುದ್ಧೇ ಮತಿಂ ಕೃತ್ವಾ ಸ್ಥಿರಾಂ ಯುಧ್ಯಸ್ವ ಭಾರತ।।

ಭಾರತ! ಇಂದ್ರನೊಂದಿಗೆ ಸುರಾಸುರರಿಗೂ ಪಾಂಡವರನ್ನು ಜಯಿಸಲು ಸಾಧ್ಯವಿಲ್ಲ. ಆದುದರಿಂದ ಯುದ್ಧದಲ್ಲಿ ಬುದ್ಧಿಯನ್ನು ಸ್ಥಿರವಾಗಿರಿಸಿಟ್ಟುಕೊಂಡು ಯುದ್ಧಮಾಡು!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸುನಾಭಾದಿಧೃತರಾಷ್ಟ್ರಪುತ್ರವಧೇ ಚತುರಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸುನಾಭಾದಿಧೃತರಾಷ್ಟ್ರಪುತ್ರವಧ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.