083 ಅಷ್ಟಮದಿವಸಯುದ್ಧಾರಂಭಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 83

ಸಾರ

ಕುರುಸೇನಾವ್ಯೂಹ (1-14). ಪಾಂಡವಸೇನಾವ್ಯೂಹ (15-22). ಯುದ್ಧಾರಂಭ (23-39).

06083001 ಸಂಜಯ ಉವಾಚ।
06083001a ಪರಿಣಾಮ್ಯ ನಿಶಾಂ ತಾಂ ತು ಸುಖಸುಪ್ತಾ ಜನೇಶ್ವರಾಃ।
06083001c ಕುರವಃ ಪಾಂಡವಾಶ್ಚೈವ ಪುನರ್ಯುದ್ಧಾಯ ನಿರ್ಯಯುಃ।।

ಸಂಜಯನು ಹೇಳಿದನು: “ಕೌರವರ ಮತ್ತು ಪಾಂಡವರ ಕಡೆಯ ಜನೇಶ್ವರರು ಆ ರಾತ್ರಿಯಲ್ಲಿ ಸುಖವಾಗಿ ಮಲಗಿ ಬೆಳಗಾಗುತ್ತಲೇ ಪುನಃ ಯುದ್ಧಕ್ಕೆ ತೆರಳಿದರು.

06083002a ತತಃ ಶಬ್ದೋ ಮಹಾನಾಸೀತ್ಸೇನಯೋರುಭಯೋರಪಿ।
06083002c ನಿರ್ಗಚ್ಛಮಾನಯೋಃ ಸಂಖ್ಯೇ ಸಾಗರಪ್ರತಿಮೋ ಮಹಾನ್।।

ಯುದ್ಧಕ್ಕೆ ಹೊರಡುವ ಆ ಎರಡೂ ಸೇನೆಗಳಲ್ಲಿ ಮಹಾಸಾಗರದ ಭೋರ್ಗರೆತದಂತೆ ಮಹಾ ಶಬ್ಧವುಂಟಾಯಿತು.

06083003a ತತೋ ದುರ್ಯೋಧನೋ ರಾಜಾ ಚಿತ್ರಸೇನೋ ವಿವಿಂಶತಿಃ।
06083003c ಭೀಷ್ಮಶ್ಚ ರಥಿನಾಂ ಶ್ರೇಷ್ಠೋ ಭಾರದ್ವಾಜಶ್ಚ ವೈ ದ್ವಿಜಃ।।
06083004a ಏಕೀಭೂತಾಃ ಸುಸಮ್ಯತ್ತಾಃ ಕೌರವಾಣಾಂ ಮಹಾಚಮೂಃ।
06083004c ವ್ಯೂಹಾಯ ವಿದಧೂ ರಾಜನ್ಪಾಂಡವಾನ್ಪ್ರತಿ ದಂಶಿತಾಃ।।

ರಾಜನ್! ಆಗ ಕೌರವರ ಮಹಾಸೇನೆಯ ರಾಜ ದುರ್ಯೋಧನ, ಚಿತ್ರಸೇನ, ವಿವಿಂಶತಿ, ರಥಿಗಳಲ್ಲಿ ಶ್ರೇಷ್ಠ ಭೀಷ್ಮ, ದ್ವಿಜ ಭಾರದ್ವಾಜ ಇವರೆಲ್ಲರೂ ಸಂಘಟಿತರಾಗಿ ಸುಸನ್ನದ್ಧರಾಗಿ ಪಾಂಡವರೊಂದಿಗೆ ಯುದ್ಧಮಾಡಲು ಕವಚಗಳನ್ನು ಧರಿಸಿ ವ್ಯೂಹವನ್ನು ರಚಿಸಿದರು.

06083005a ಭೀಷ್ಮಃ ಕೃತ್ವಾ ಮಹಾವ್ಯೂಹಂ ಪಿತಾ ತವ ವಿಶಾಂ ಪತೇ।
06083005c ಸಾಗರಪ್ರತಿಮಂ ಘೋರಂ ವಾಹನೋರ್ಮಿತರಂಗಿಣಂ।।

ವಿಶಾಂಪತೇ! ನಿನ್ನ ತಂದೆ ಭೀಷ್ಮನು ಸಾಗರದಂತೆ ಘೋರವಾಗಿರುವ ವಾಹನಗಳೇ ಅಲೆಗಳಾಗಿರುವ ಮಹಾವ್ಯೂಹವನ್ನು ರಚಿಸಿದನು.

06083006a ಅಗ್ರತಃ ಸರ್ವಸೈನ್ಯಾನಾಂ ಭೀಷ್ಮಃ ಶಾಂತನವೋ ಯಯೌ।
06083006c ಮಾಲವೈರ್ದಾಕ್ಷಿಣಾತ್ಯೈಶ್ಚ ಆವಂತ್ಯೈಶ್ಚ ಸಮನ್ವಿತಃ।।

ಸರ್ವ ಸೇನೆಗಳ ಅಗ್ರಭಾಗದಲ್ಲಿ ಭೀಷ್ಮ ಶಾಂತನವನು ಮಾಲವ, ದಾಕ್ಷಿಣಾತ್ಯರು, ಮತ್ತು ಅವಂತಿಯವರಿಂದ ಸುತ್ತುವರೆಯಲ್ಪಟ್ಟು ಹೊರಟನು.

06083007a ತತೋಽನಂತರಮೇವಾಸೀದ್ಭಾರದ್ವಾಜಃ ಪ್ರತಾಪವಾನ್।
06083007c ಪುಲಿಂದೈಃ ಪಾರದೈಶ್ಚೈವ ತಥಾ ಕ್ಷುದ್ರಕಮಾಲವೈಃ।।

ಅವನ ನಂತರದಲ್ಲಿ ಪುಲಿಂದರು, ಪಾರದರು ಮತ್ತು ಕ್ಷುದ್ರಕಮಾಲರೊಂದಿಗೆ ಪ್ರತಾಪವಾನ್ ಭಾರದ್ವಾಜನಿದ್ದನು.

06083008a ದ್ರೋಣಾದನಂತರಂ ಯತ್ತೋ ಭಗದತ್ತಃ ಪ್ರತಾಪವಾನ್।
06083008c ಮಾಗಧೈಶ್ಚ ಕಲಿಂಗೈಶ್ಚ ಪಿಶಾಚೈಶ್ಚ ವಿಶಾಂ ಪತೇ।।

ವಿಶಾಂಪತೇ! ದ್ರೋಣನ ನಂತರದಲ್ಲಿ ಪ್ರತಾಪವಾನ್ ಭಗದತ್ತನು ಮಾಗಧ, ಕಲಿಂಗ ಮತ್ತು ಪಿಶಾಚರೊಂದಿಗೆ ಹೊರಟನು.

06083009a ಪ್ರಾಗ್ಜ್ಯೋತಿಷಾದನು ನೃಪಃ ಕೌಸಲ್ಯೋಽಥ ಬೃಹದ್ಬಲಃ।
06083009c ಮೇಕಲೈಸ್ತ್ರೈಪುರೈಶ್ಚೈವ ಚಿಚ್ಛಿಲೈಶ್ಚ ಸಮನ್ವಿತಃ।।

ಪ್ರಾಗ್ಜ್ಯೋತಿಷರಾಜನನ್ನು ಅನುಸರಿಸಿ ಕೋಸಲದ ರಾಜ ಬೃಹದ್ಬಲನು ಮೇಕಲ, ತ್ರಿಪುರ ಮತ್ತು ಚಿಚ್ಛಿಲರಿಂದ ಕೂಡಿಕೊಂಡು ಹೋದನು.

06083010a ಬೃಹದ್ಬಲಾತ್ತತಃ ಶೂರಸ್ತ್ರಿಗರ್ತಃ ಪ್ರಸ್ಥಲಾಧಿಪಃ।
06083010c ಕಾಂಬೋಜೈರ್ಬಹುಭಿಃ ಸಾರ್ಧಂ ಯವನೈಶ್ಚ ಸಹಸ್ರಶಃ।।

ಬೃಹದ್ಬಲನ ನಂತರ ಪ್ರಸ್ಥಲಾಧಿಪ ಶೂರ ತ್ರಿಗರ್ತನು ಅನೇಕ ಕಾಂಬೋಜರಿಂದ ಮತ್ತು ಸಹಸ್ರಾರು ಯವನರಿಂದ ಕೂಡಿಕೊಂಡು ಹೊರಟನು.

06083011a ದ್ರೌಣಿಸ್ತು ರಭಸಃ ಶೂರಸ್ತ್ರಿಗರ್ತಾದನು ಭಾರತ।
06083011c ಪ್ರಯಯೌ ಸಿಂಹನಾದೇನ ನಾದಯಾನೋ ಧರಾತಲಂ।।

ಭಾರತ! ತ್ರಿಗರ್ತನನ್ನು ಅನುಸರಿಸಿ ಶೂರ ದ್ರೌಣಿಯು ರಭಸದಿಂದ ಸಿಂಹನಾದದಿಂದ ಧರಾತಲವನ್ನು ಮೊಳಗಿಸುತ್ತಾ ನಡೆದನು.

06083012a ತಥಾ ಸರ್ವೇಣ ಸೈನ್ಯೇನ ರಾಜಾ ದುರ್ಯೋಧನಸ್ತದಾ।
06083012c ದ್ರೌಣೇರನಂತರಂ ಪ್ರಾಯಾತ್ಸೋದರ್ಯೈಃ ಪರಿವಾರಿತಃ।।

ಹಾಗೆಯೇ ದ್ರೌಣಿಯ ನಂತರ ರಾಜಾ ದುರ್ಯೋಧನನು ಸೋದರರಿಂದ ಪರಿವಾರಿತನಾಗಿ ಸರ್ವ ಸೈನ್ಯದೊಂದಿಗೆ ಹೊರಟನು.

06083013a ದುರ್ಯೋಧನಾದನು ಕೃಪಸ್ತತಃ ಶಾರದ್ವತೋ ಯಯೌ।
06083013c ಏವಮೇಷ ಮಹಾವ್ಯೂಹಃ ಪ್ರಯಯೌ ಸಾಗರೋಪಮಃ।।

ದುರ್ಯೋಧನನನ್ನು ಅನುಸರಿಸಿ ಶಾರದ್ವತ ಕೃಪನು ಹೊರಟನು. ಹೀಗೆ ಸಾಗರೋಪಮವಾಗಿದ್ದ ಮಹಾವ್ಯೂಹವು ಹೊರಟಿತು.

06083014a ರೇಜುಸ್ತತ್ರ ಪತಾಕಾಶ್ಚ ಶ್ವೇತಚ್ಛತ್ರಾಣಿ ಚಾಭಿಭೋ।
06083014c ಅಂಗದಾನ್ಯಥ ಚಿತ್ರಾಣಿ ಮಹಾರ್ಹಾಣಿ ಧನೂಂಷಿ ಚ।।

ವಿಭೋ! ಅಲ್ಲಿ ಪತಾಕೆಗಳು ಶ್ವೇತ ಚತ್ರಗಳು, ಬಹುಮೂಲ್ಯದ ಚಿತ್ರ-ವಿಚಿತ್ರ ಭುಜಬಂದಿಗಳೂ, ಧನುಸ್ಸುಗಳೂ ಪ್ರಕಾಶಿಸಿದವು.

06083015a ತಂ ತು ದೃಷ್ಟ್ವಾ ಮಹಾವ್ಯೂಹಂ ತಾವಕಾನಾಂ ಮಹಾರಥಃ।
06083015c ಯುಧಿಷ್ಠಿರೋಽಬ್ರವೀತ್ತೂರ್ಣಂ ಪಾರ್ಷತಂ ಪೃತನಾಪತಿಂ।।

ನಿನ್ನವರ ಆ ಮಹಾವ್ಯೂಹವನ್ನು ನೋಡಿ ಮಹಾರಥ ಯುಧಿಷ್ಠಿರನು ತಕ್ಷಣವೇ ಪೃತನಾಪತಿ ಪಾರ್ಷತನಿಗೆ ಹೇಳಿದನು:

06083016a ಪಶ್ಯ ವ್ಯೂಹಂ ಮಹೇಷ್ವಾಸ ನಿರ್ಮಿತಂ ಸಾಗರೋಪಮಂ।
06083016c ಪ್ರತಿವ್ಯೂಹಂ ತ್ವಮಪಿ ಹಿ ಕುರು ಪಾರ್ಷತ ಮಾಚಿರಂ।।

“ಮಹೇಷ್ವಾಸ! ಸಾಗರದಂತೆ ನಿರ್ಮಿತವಾಗಿರುವ ವ್ಯೂಹವನ್ನು ನೋಡು! ಪಾರ್ಷತ! ತಡಮಾಡದೇ ನೀನೂ ಕೂಡ ಅದಕ್ಕೆ ಪ್ರತಿಯಾದ ವ್ಯೂಹವನ್ನು ರಚಿಸು.”

06083017a ತತಃ ಸ ಪಾರ್ಷತಃ ಶೂರೋ ವ್ಯೂಹಂ ಚಕ್ರೇ ಸುದಾರುಣಂ।
06083017c ಶೃಂಗಾಟಕಂ ಮಹಾರಾಜ ಪರವ್ಯೂಹವಿನಾಶನಂ।।

ಮಹಾರಾಜ! ಆಗ ಶೂರ ಪಾರ್ಷತನು ಪರವ್ಯೂಹವನ್ನು ನಾಶಪಡಿಸಬಲ್ಲ ಸುದಾರುಣ ಶೃಂಗಾಟಕ ವ್ಯೂಹವನ್ನು ರಚಿಸಿದನು.

06083018a ಶೃಂಗೇಭ್ಯೋ ಭೀಮಸೇನಶ್ಚ ಸಾತ್ಯಕಿಶ್ಚ ಮಹಾರಥಃ।
06083018c ರಥೈರನೇಕಸಾಹಸ್ರೈಸ್ತಥಾ ಹಯಪದಾತಿಭಿಃ।।

ಎರಡೂ ಶೃಂಗಗಳಲ್ಲಿ ಅನೇಕ ಸಹಸ್ರ ರಥಿಗಳಿಂದ ಮತ್ತು ಅಶ್ವಾರೋಹಿ-ಪದಾತಿಸೇನೆಗಳೊಂದಿಗೆ ಮಹಾರಥಿ ಭೀಮಸೇನ-ಸಾತ್ಯಕಿಯರಿದ್ದರು.

06083019a ನಾಭ್ಯಾಮಭೂನ್ನರಶ್ರೇಷ್ಠಃ ಶ್ವೇತಾಶ್ವೋ ವಾನರಧ್ವಜಃ।
06083019c ಮಧ್ಯೇ ಯುಧಿಷ್ಠಿರೋ ರಾಜಾ ಮಾದ್ರೀಪುತ್ರೌ ಚ ಪಾಂಡವೌ।।

ನಾಭಿಭಾಗದಲ್ಲಿ ನರಶ್ರೇಷ್ಠ ಶ್ವೇತಾಶ್ವ ವಾನರಧ್ವಜನಿದ್ದನು. ಮಧ್ಯದಲ್ಲಿ ರಾಜ ಯುಧಿಷ್ಠಿರ ಮತ್ತು ಇಬ್ಬರು ಮಾದ್ರೀಪುತ್ರ ಪಾಂಡವರಿದ್ದರು.

06083020a ಅಥೇತರೇ ಮಹೇಷ್ವಾಸಾಃ ಸಹಸೈನ್ಯಾ ನರಾಧಿಪಾಃ।
06083020c ವ್ಯೂಹಂ ತಂ ಪೂರಯಾಮಾಸುರ್ವ್ಯೂಹಶಾಸ್ತ್ರವಿಶಾರದಾಃ।।

ಇತರ ಮಹೇಷ್ವಾಸ ವ್ಯೂಹಶಾಸ್ತ್ರ ವಿಶಾರದ ನರಾಧಿಪರು ವ್ಯೂಹವನ್ನು ಪೂರೈಸಿದರು.

06083021a ಅಭಿಮನ್ಯುಸ್ತತಃ ಪಶ್ಚಾದ್ವಿರಾಟಶ್ಚ ಮಹಾರಥಃ।
06083021c ದ್ರೌಪದೇಯಾಶ್ಚ ಸಂಹೃಷ್ಟಾ ರಾಕ್ಷಸಶ್ಚ ಘಟೋತ್ಕಚಃ।।

ಅವರ ನಂತರ ಅಭಿಮನ್ಯು, ಮಹಾರಥ ವಿರಾಟ, ಸಂಹೃಷ್ಟರಾದ ದ್ರೌಪದೇಯರು ಮತ್ತು ರಾಕ್ಷಸ ಘಟೋತ್ಕಚರಿದ್ದರು.

06083022a ಏವಮೇತಂ ಮಹಾವ್ಯೂಹಂ ವ್ಯೂಹ್ಯ ಭಾರತ ಪಾಂಡವಾಃ।
06083022c ಅತಿಷ್ಠನ್ಸಮರೇ ಶೂರಾ ಯೋದ್ಧುಕಾಮಾ ಜಯೈಷಿಣಃ।।

ಭಾರತ! ಹೀಗೆ ಶೂರ ಪಾಂಡವರು ಮಹಾವ್ಯೂಹವನ್ನು ರಚಿಸಿಕೊಂಡು ಜಯವನ್ನು ಬಯಸಿ ಯುದ್ಧಮಾಡಲು ಇಚ್ಛಿಸಿ ಸಮರದಲ್ಲಿ ನಿಂತರು.

06083023a ಭೇರೀಶಬ್ದಾಶ್ಚ ತುಮುಲಾ ವಿಮಿಶ್ರಾಃ ಶಂಖನಿಸ್ವನೈಃ।
06083023c ಕ್ಷ್ವೇಡಿತಾಸ್ಫೋಟಿತೋತ್ಕ್ರುಷ್ಟೈಃ ಸುಭೀಮಾಃ ಸರ್ವತೋದಿಶಂ।।

ತುಮುಲ ಭೇರಿಶಬ್ಧವು ಶಂಖನಾದದಿಂದ ಮಿಶ್ರಿತವಾಗಿ, ಸಿಂಹನಾದ ಮತ್ತು ಭುಜಗಳನ್ನು ತಟ್ಟುವುದರಿಂದ ಎಲ್ಲ ಕಡೆಗಳಲ್ಲಿ ಭಯಂಕರ ಶಬ್ಧವುಂಟಾಯಿತು.

06083024a ತತಃ ಶೂರಾಃ ಸಮಾಸಾದ್ಯ ಸಮರೇ ತೇ ಪರಸ್ಪರಂ।
06083024c ನೇತ್ರೈರನಿಮಿಷೈ ರಾಜನ್ನವೈಕ್ಷಂತ ಪ್ರಕೋಪಿತಾಃ।।

ರಾಜನ್! ಆಗ ಶೂರರು ಸಮರದಲ್ಲಿ ಎದುರಿಸಿ ಕೋಪದಿಂದ ಪರಸ್ಪರರನ್ನು ಎವೆಯಿಕ್ಕದೇ ನೋಡತೊಡಗಿದರು.

06083025a ಮನೋಭಿಸ್ತೇ ಮನುಷ್ಯೇಂದ್ರ ಪೂರ್ವಂ ಯೋಧಾಃ ಪರಸ್ಪರಂ।
06083025c ಯುದ್ಧಾಯ ಸಮವರ್ತಂತ ಸಮಾಹೂಯೇತರೇತರಂ।।

ಮನುಷ್ಯೇಂದ್ರ! ಮೊದಲು ಆ ಯೋಧರು ತಮಗೆ ಅನುರೂಪರಾದವರನ್ನು ಪರಸ್ಪರ ಯುದ್ಧಕ್ಕೆ ಕರೆದು ಅವರೊಂದಿಗೆ ಯುದ್ಧಮಾಡುತ್ತಿದ್ದರು.

06083026a ತತಃ ಪ್ರವವೃತೇ ಯುದ್ಧಂ ಘೋರರೂಪಂ ಭಯಾವಹಂ।
06083026c ತಾವಕಾನಾಂ ಪರೇಷಾಂ ಚ ನಿಘ್ನತಾಮಿತರೇತರಂ।।

ಆಗ ಇತರೇತರನ್ನು ಸಂಹರಿಸುವ ನಿನ್ನವರ ಮತ್ತು ಶತ್ರುಗಳ ನಡುವೆ ಭಯವನ್ನುಂಟುಮಾಡುವ ಘೋರರೂಪದ ಯುದ್ಧವು ನಡೆಯಿತು.

06083027a ನಾರಾಚಾ ನಿಶಿತಾಃ ಸಂಖ್ಯೇ ಸಂಪತಂತಿ ಸ್ಮ ಭಾರತ।
06083027c ವ್ಯಾತ್ತಾನನಾ ಭಯಕರಾ ಉರಗಾ ಇವ ಸಂಘಶಃ।।

ಭಾರತ! ಬಾಯ್ದೆರೆದ ಭಯಂಕರ ಸರ್ಪಗಳ ಗುಂಪಿನಂತೆ ನಿಶಿತ ನಾರಾಚಗಳು ಗುಂಪುಗುಂಪಾಗಿ ರಣಾಂಗಣದಲ್ಲಿ ಬೀಳುತ್ತಿದ್ದವು.

06083028a ನಿಷ್ಪೇತುರ್ವಿಮಲಾಃ ಶಕ್ತ್ಯಸ್ತೈಲಧೌತಾಃ ಸುತೇಜನಾಃ।
06083028c ಅಂಬುದೇಭ್ಯೋ ಯಥಾ ರಾಜನ್ಭ್ರಾಜಮಾನಾಃ ಶತಹ್ರದಾಃ।।

ರಾಜನ್! ಮೋಡದಿಂದ ಹೊರಬರುವ ಹೊಳೆಯುತ್ತಿರುವ ಮಿಂಚುಗಳಂತೆ ತೈಲದಲ್ಲಿ ಅದ್ದಿದ್ದ ತೇಜಸ್ಸುಳ್ಳ ಹೊಳೆಯುವ ಶಕ್ತಿಗಳು ಬೀಳುತ್ತಿದ್ದವು.

06083029a ಗದಾಶ್ಚ ವಿಮಲೈಃ ಪಟ್ಟೈಃ ಪಿನದ್ಧಾಃ ಸ್ವರ್ಣಭೂಷಿತಾಃ।
06083029c ಪತಂತ್ಯಸ್ತತ್ರ ದೃಶ್ಯಂತೇ ಗಿರಿಶೃಂಗೋಪಮಾಃ ಶುಭಾಃ।
06083029e ನಿಸ್ತ್ರಿಂಶಾಶ್ಚ ವ್ಯರಾಜಂತ ವಿಮಲಾಂಬರಸನ್ನಿಭಾಃ।।

ಸುವರ್ಣಭೂಷಿತ, ವಿಮಲ ಪಟ್ಟಿಗಳಿಂದ ಕಟ್ಟಲ್ಪಟ್ಟಿದ್ದ, ಪರ್ವತಶಿಖರಗಳಂತೆ ಚೂಪಾಗಿದ್ದ, ಶುಭ ಗದೆಗಳು ಅಲ್ಲಲ್ಲಿ ಬೀಳುತ್ತಿದ್ದುದು ಕಾಣುತ್ತಿತ್ತು. ನಿರ್ಮಲ ಆಕಾಶದಂತಹ ಖಡ್ಗಗಳೂ ವಿರಾಜಿಸುತ್ತಿದ್ದವು.

06083030a ಆರ್ಷಭಾಣಿ ಚ ಚರ್ಮಾಣಿ ಶತಚಂದ್ರಾಣಿ ಭಾರತ।
06083030c ಅಶೋಭಂತ ರಣೇ ರಾಜನ್ಪತಮಾನಾನಿ ಸರ್ವಶಃ।।

ಭಾರತ! ರಾಜನ್! ಎತ್ತಿನ ಚರ್ಮಗಳಿಂದ ಮಾಡಲ್ಪಟ್ಟ ನೂರು ಚಂದ್ರರ ಕವಚಗಳು ರಣದಲ್ಲಿ ಎಲ್ಲಕಡೆ ಬಿದ್ದು ಶೋಭಿಸುತ್ತಿದ್ದವು.

06083031a ತೇಽನ್ಯೋನ್ಯಂ ಸಮರೇ ಸೇನೇ ಯುಧ್ಯಮಾನೇ ನರಾಧಿಪ।
06083031c ಅಶೋಭೇತಾಂ ಯಥಾ ದೈತ್ಯದೇವಸೇನೇ ಸಮುದ್ಯತೇ।
06083031e ಅಭ್ಯದ್ರವಂತ ಸಮರೇ ತೇಽನ್ಯೋನ್ಯಂ ವೈ ಸಮಂತತಃ।।

ನರಾಧಿಪ! ಸಮರದಲ್ಲಿ ಅನ್ಯೋನ್ಯರೊಡನೆ ಯುದ್ಧಮಾಡುತ್ತಿದ್ದ ಆ ಸೇನೆಗಳು ಹೋರಾಡುತ್ತಿರುವ ದೈತ್ಯ-ದೇವ ಸೇನೆಗಳಂತೆ ಶೋಭಿಸಿದವು. ಅವರು ಸಮರದಲ್ಲಿ ಅನ್ಯೋನ್ಯರನ್ನು ಸುತ್ತುವರೆದು ಆಕ್ರಮಣಿಸುತ್ತಿದ್ದರು.

06083032a ರಥಾಸ್ತು ರಥಿಭಿಸ್ತೂರ್ಣಂ ಪ್ರೇಷಿತಾಃ ಪರಮಾಹವೇ।
06083032c ಯುಗೈರ್ಯುಗಾನಿ ಸಂಶ್ಲಿಷ್ಯ ಯುಯುಧುಃ ಪಾರ್ಥಿವರ್ಷಭಾಃ।।

ಆ ಪರಮ ಯುದ್ಧದಲ್ಲಿ ರಥಿಗಳಿಂದ ಬೇಗನೇ ಕಳುಹಿಸಲ್ಪಟ್ಟ ಪಾರ್ಥಿವರ್ಷಭರು ನೂಕುಗಳಿಂದ ನೂಕುಗಳಿಗೆ ತಾಗಿಸಿ ಯುದ್ಧಮಾಡುತ್ತಿದ್ದರು.

06083033a ದಂತಿನಾಂ ಯುಧ್ಯಮಾನಾನಾಂ ಸಂಘರ್ಷಾತ್ಪಾವಕೋಽಭವತ್।
06083033c ದಂತೇಷು ಭರತಶ್ರೇಷ್ಠ ಸಧೂಮಃ ಸರ್ವತೋದಿಶಂ।।

ಭರತಶ್ರೇಷ್ಠ! ದಂತಗಳಿಂದ ಹೊಡೆದಾಡುತ್ತಿದ್ದ ಆನೆಗಳ ಸಂಘರ್ಷದಿಂದ ಬೆಂಕಿಯು ಹುಟ್ಟಿ ಹೊಗೆಯೊಂದಿಗೆ ಅದು ಎಲ್ಲೆಡೆ ಹರಡಿತು.

06083034a ಪ್ರಾಸೈರಭಿಹತಾಃ ಕೇ ಚಿದ್ಗಜಯೋಧಾಃ ಸಮಂತತಃ।
06083034c ಪತಮಾನಾಃ ಸ್ಮ ದೃಶ್ಯಂತೇ ಗಿರಿಶೃಂಗಾನ್ನಗಾ ಇವ।।

ಪ್ರಾಸಗಳಿಂದ ಹೊಡೆಯಲ್ಪಟ್ಟು ಕೆಲವು ಗಜಯೋಧರು ಗಿರಿಶೃಂಗಗಳಂತೆ ಆನೆಗಳ ಮೇಲಿಂದ ಬೀಳುತ್ತಿರುವುದು ಎಲ್ಲೆಡೆ ಕಂಡುಬಂದಿತು.

06083035a ಪಾದಾತಾಶ್ಚಾಪ್ಯದೃಶ್ಯಂತ ನಿಘ್ನಂತೋ ಹಿ ಪರಸ್ಪರಂ।
06083035c ಚಿತ್ರರೂಪಧರಾಃ ಶೂರಾ ನಖರಪ್ರಾಸಯೋಧಿನಃ।।

ವಿಚಿತ್ರರೂಪಗಳನ್ನು ಧರಿಸಿದ್ದ, ನಖ-ಪ್ರಾಸಾಯುಧಗಳಿಂದ ಯುದ್ಧಮಾಡುತ್ತಿದ್ದ ಶೂರ ಪದಾತಿಗಳು ಪರಸ್ಪರರನ್ನು ಕೊಲ್ಲುತ್ತಿದ್ದುದು ಕಂಡುಬಂದಿತು.

06083036a ಅನ್ಯೋನ್ಯಂ ತೇ ಸಮಾಸಾದ್ಯ ಕುರುಪಾಂಡವಸೈನಿಕಾಃ।
06083036c ಶಸ್ತ್ರೈರ್ನಾನಾವಿಧೈರ್ಘೋರೈ ರಣೇ ನಿನ್ಯುರ್ಯಮಕ್ಷಯಂ।।

ಆ ಕುರುಪಾಂಡವ ಸೈನಿಕರು ಅನ್ಯೋನ್ಯರನ್ನು ಎದುರಿಸಿ ನಾನಾವಿಧದ ಘೋರ ಶಸ್ತ್ರಗಳಿಂದ ರಣದಿಂದ ಯಮಾಲಯಕ್ಕೆ ಕಳುಹಿಸುತ್ತಿದ್ದರು.

06083037a ತತಃ ಶಾಂತನವೋ ಭೀಷ್ಮೋ ರಥಘೋಷೇಣ ನಾದಯನ್।
06083037c ಅಭ್ಯಾಗಮದ್ರಣೇ ಪಾಂಡೂನ್ಧನುಃಶಬ್ದೇನ ಮೋಹಯನ್।।

ಆಗ ಶಾಂತನವ ಭೀಷ್ಮನು ರಥಘೋಷದಿಂದ ಗರ್ಜಿಸುತ್ತಾ ಧನುಸ್ಸಿನ ಶಬ್ಧದಿಂದ ಪಾಂಡವರನ್ನು ಮೋಹಿಸುತ್ತಾ ರಣರಂಗದಲ್ಲಿ ಆಕ್ರಮಣಿಸಿದನು.

06083038a ಪಾಂಡವಾನಾಂ ರಥಾಶ್ಚಾಪಿ ನದಂತೋ ಭೈರವಸ್ವನಂ।
06083038c ಅಭ್ಯದ್ರವಂತ ಸಮ್ಯತ್ತಾ ಧೃಷ್ಟದ್ಯುಮ್ನಪುರೋಗಮಾಃ।।

ಪಾಂಡವರ ರಥರೂ ಕೂಡ ಭೈರವಸ್ವರದಲ್ಲಿ ಕೂಗುತ್ತಾ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಯುದ್ಧಸನ್ನದ್ಧರಾಗಿ ಆಕ್ರಮಣಿಸಿದರು.

06083039a ತತಃ ಪ್ರವವೃತೇ ಯುದ್ಧಂ ತವ ತೇಷಾಂ ಚ ಭಾರತ।
06083039c ನರಾಶ್ವರಥನಾಗಾನಾಂ ವ್ಯತಿಷಕ್ತಂ ಪರಸ್ಪರಂ।।

ಭಾರತ! ಆಗ ನಿನ್ನವರ ಮತ್ತು ಅವರ ನಡುವೆ ನರ-ಅಶ್ವ-ರಥ-ಆನೆಗಳ ಪರಸ್ಟರ ಘರ್ಷಣೆಯ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಷ್ಟಮದಿವಸಯುದ್ಧಾರಂಭೇ ತ್ರ್ಯಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಷ್ಟಮದಿವಸಯುದ್ಧಾರಂಭ ಎನ್ನುವ ಎಂಭತ್ಮೂರನೇ ಅಧ್ಯಾಯವು.