ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 82
ಸಾರ
ಯುಧಿಷ್ಠಿರ-ಭೀಷ್ಮರ ಯುದ್ಧ (1-14). ಸಂಕುಲ ಯುದ್ಧ (15-40). ಏಳನೆಯ ದಿವಸದ ಯುದ್ಧ ಸಮಾಪ್ತಿ (41-56).
06082001 ಸಂಜಯ ಉವಾಚ।
06082001a ವಿರಥಂ ತಂ ಸಮಾಸಾದ್ಯ ಚಿತ್ರಸೇನಂ ಮನಸ್ವಿನಂ।
06082001c ರಥಮಾರೋಪಯಾಮಾಸ ವಿಕರ್ಣಸ್ತನಯಸ್ತವ।।
ಸಂಜಯನು ಹೇಳಿದನು: “ವಿರಥನಾಗಿದ್ದ ಮನಸ್ವಿ ಚಿತ್ರಸೇನನ ಬಳಿಬಂದು ನಿನ್ನ ಮಗ ವಿಕರ್ಣನು ಅವನನ್ನು ತನ್ನ ರಥದ ಮೇಲೆ ಏರಿಸಿಕೊಂಡನು.
06082002a ತಸ್ಮಿಂಸ್ತಥಾ ವರ್ತಮಾನೇ ತುಮುಲೇ ಸಂಕುಲೇ ಭೃಶಂ।
06082002c ಭೀಷ್ಮಃ ಶಾಂತನವಸ್ತೂರ್ಣಂ ಯುಧಿಷ್ಠಿರಮುಪಾದ್ರವತ್।।
ಹೀಗೆ ತುಂಬಾ ತುಮುಲವಾಗಿದ್ದ ಸಂಕುಲ ಯುದ್ಧವು ನಡೆಯತ್ತಿರಲು ಶಾಂತನವ ಭೀಷ್ಮನು ಕೂಡಲೇ ಯುಧಿಷ್ಠಿರನ ಮೇಲೆ ಧಾಳಿ ಮಾಡಿದನು.
06082003a ತತಃ ಸರಥನಾಗಾಶ್ವಾಃ ಸಮಕಂಪಂತ ಸೃಂಜಯಾಃ।
06082003c ಮೃತ್ಯೋರಾಸ್ಯಮನುಪ್ರಾಪ್ತಂ ಮೇನಿರೇ ಚ ಯುಧಿಷ್ಠಿರಂ।।
ಆಗ ರಥ-ಆನೆ-ಕುದುರೆಗಳೊಂದಿಗೆ ಸೃಂಜಯರು ನಡುಗಿದರು. ಮತ್ತು ಯುಧಿಷ್ಠಿರನು ಮೃತ್ಯುವಿನ ದವಡೆಗೆ ಬಂದೇಬಿಟ್ಟನೆಂದು ಭಾವಿಸಿದರು.
06082004a ಯಿಧಿಷ್ಠಿರೋಽಪಿ ಕೌರವ್ಯೋ ಯಮಾಭ್ಯಾಂ ಸಹಿತಃ ಪ್ರಭುಃ।
06082004c ಮಹೇಷ್ವಾಸಂ ನರವ್ಯಾಘ್ರಂ ಭೀಷ್ಮಂ ಶಾಂತನವಂ ಯಯೌ।।
ಕೌರವ್ಯ ಪ್ರಭು ಯುಧಿಷ್ಠಿರನಾದರೋ ಯಮಳರಿಬ್ಬರನ್ನೊಡಗೂಡಿ ಮಹೇಷ್ವಾಸ ನರವ್ಯಾಘ್ರ ಭೀಷ್ಮ ಶಾಂತನವನನ್ನು ಎದುರಿಸಿದನು.
06082005a ತತಃ ಶರಸಹಸ್ರಾಣಿ ಪ್ರಮುಂಚನ್ಪಾಂಡವೋ ಯುಧಿ।
06082005c ಭೀಷ್ಮಂ ಸಂಚಾದಯಾಮಾಸ ಯಥಾ ಮೇಘೋ ದಿವಾಕರಂ।।
ಆಗ ಪಾಂಡವನು ಸಹಸ್ರಾರು ಬಾಣಗಳನ್ನು ಪ್ರಯೋಗಿಸಿ ಮೇಘಗಳು ದಿವಾಕರನನ್ನು ಹೇಗೋ ಹಾಗೆ ಭೀಷ್ಮನನ್ನು ಮರೆಮಾಡಿದನು.
06082006a ತೇನ ಸಮ್ಯಕ್ಪ್ರಣೀತಾನಿ ಶರಜಾಲಾನಿ ಭಾರತ।
06082006c ಪತಿಜಗ್ರಾಹ ಗಾಂಗೇಯಃ ಶತಶೋಽಥ ಸಹಸ್ರಶಃ।।
ಭಾರತ! ಅವನಿಂದ ಬೀಳುತ್ತಿರುವ ನೂರಾರು ಸಹಸ್ರಾರು ಶರಜಾಲಗಳೆಲ್ಲವನ್ನೂ ಗಾಂಗೇಯನು ಸ್ವೀಕರಿಸಿದನು.
06082007a ತಥೈವ ಶರಜಾಲಾನಿ ಭೀಷ್ಮೇಣಾಸ್ತಾನಿ ಮಾರಿಷ।
06082007c ಆಕಾಶೇ ಸಮದೃಶ್ಯಂತ ಖಗಮಾನಾಂ ವ್ರಜಾ ಇವ।।
ಮಾರಿಷ! ಹಾಗೆಯೇ ಭೀಷ್ಮನು ಬಿಟ್ಟ ಶರಶಾಲಗಳು ಆಕಾಶದಲ್ಲಿ ಹಾರಾಡುವ ಬೆಳ್ಳಕ್ಕಿಯ ಸಾಲುಗಳಂತೆ ಕಂಡವು.
06082008a ನಿಮೇಷಾರ್ಧಾಚ್ಚ ಕೌಂತೇಯಂ ಭೀಷ್ಮಃ ಶಾಂತನವೋ ಯುಧಿ।
06082008c ಅದೃಶ್ಯಂ ಸಮರೇ ಚಕ್ರೇ ಶರಜಾಲೇನ ಭಾಗಶಃ।।
ನಿಮಿಷಾರ್ಧದಲ್ಲಿ ಭೀಷ್ಮ ಶಾಂತನವನು ಯುದ್ಧದಲ್ಲಿ ಶರಜಾಲಗಳಿಂದ ಕೌಂತೇಯನು ಕಾಣದಂತಾಗಿಸಿದನು.
06082009a ತತೋ ಯುಧಿಷ್ಠಿರೋ ರಾಜಾ ಕೌರವ್ಯಸ್ಯ ಮಹಾತ್ಮನಃ।
06082009c ನಾರಾಚಂ ಪ್ರೇಷಯಾಮಾಸ ಕ್ರುದ್ಧ ಆಶೀವಿಷೋಪಮಂ।।
ಆಗ ಮಹಾತ್ಮ ರಾಜಾ ಯುಧಿಷ್ಠಿರನು ಕೌರವ್ಯನ ಮೇಲೆ ಕ್ರುದ್ಧ ಸರ್ಪಗಳ ವಿಷಗಳಂತಿರುವ ನಾರಾಚಗಳನ್ನು ಪ್ರಯೋಗಿಸಿದನು.
06082010a ಅಸಂಪ್ರಾಪ್ತಂ ತತಸ್ತಂ ತು ಕ್ಷುರಪ್ರೇಣ ಮಹಾರಥಃ।
06082010c ಚಿಚ್ಛೇದ ಸಮರೇ ರಾಜನ್ಭೀಷ್ಮಸ್ತಸ್ಯ ಧನುಶ್ಚ್ಯುತಂ।।
ರಾಜನ್! ಅವನ ಧನುಸ್ಸನ್ನು ಬಿಟ್ಟು ತಲುಪುವುದರೊಳಗೇ ಮಹಾರಥ ಭೀಷ್ಮನು ಸಮರದಲ್ಲಿ ಅದನ್ನು ಕ್ಷುರಪ್ರದಿಂದ ತುಂಡರಿಸಿದನು.
06082011a ತಂ ತು ಚಿತ್ತ್ವಾ ರಣೇ ಭೀಷ್ಮೋ ನಾರಾಚಂ ಕಾಲಸಮ್ಮಿತಂ।
06082011c ನಿಜಘ್ನೇ ಕೌರವೇಂದ್ರಸ್ಯ ಹಯಾನ್ಕಾಂಚನಭೂಷಣಾನ್।।
ರಣದಲ್ಲಿ ಅದನ್ನು ತುಂಡರಿಸಿ ಭೀಷ್ಮನು ಕಾಲಸಮ್ಮಿತ ನಾರಾಚದಿಂದ ಕೌರವೇಂದ್ರನ ಕಾಂಚನಭೂಷಿತ ಕುದುರೆಗಳನ್ನು ಸಂಹರಿಸಿದನು.
06082012a ಹತಾಶ್ವಂ ತು ರಥಂ ತ್ಯಕ್ತ್ವಾ ಧರ್ಮಪುತ್ರೋ ಯುಧಿಷ್ಠಿರಃ।
06082012c ಆರುರೋಹ ರಥಂ ತೂರ್ಣಂ ನಕುಲಸ್ಯ ಮಹಾತ್ಮನಃ।।
ಒಡನೆಯೇ ಕುದುರೆಗಳು ಹತವಾದ ರಥವನ್ನು ತ್ಯಜಿಸಿ ಧರ್ಮಪುತ್ರ ಯುಧಿಷ್ಠಿರನು ಮಹಾತ್ಮ ನಕುಲನ ರಥವನ್ನೇರಿದನು.
06082013a ಯಮಾವಪಿ ಸುಸಂಕ್ರುದ್ಧಃ ಸಮಾಸಾದ್ಯ ರಣೇ ತದಾ।
06082013c ಶರೈಃ ಸಂಚಾದಯಾಮಾಸ ಭೀಷ್ಮಃ ಪರಪುರಂಜಯಃ।।
ಆಗ ಪರಪುರಂಜಯ ಭೀಷ್ಮನು ರಣದಲ್ಲಿ ಎದುರಾದ ಯಮಳರನ್ನೂ ಕೂಡ ಸಂಕ್ರುದ್ಧನಾಗಿ ಶರಗಳಿಂದ ಮುಚ್ಚಿದನು.
06082014a ತೌ ತು ದೃಷ್ಟ್ವಾ ಮಹಾರಾಜ ಭೀಷ್ಮಬಾಣಪ್ರಪೀಡಿತೌ।
06082014c ಜಗಾಮಾಥ ಪರಾಂ ಚಿಂತಾಂ ಭೀಷ್ಮಸ್ಯ ವಧಕಾಂಕ್ಷಯಾ।।
ಮಹಾರಾಜ! ಅವರಿಬ್ಬರೂ ಭೀಷ್ಮನ ಬಾಣಗಳಿಂದ ಪೀಡಿತರಾದುದನ್ನು ನೋಡಿ ಭೀಷ್ಮನ ವಧೆಯನ್ನು ಬಯಸಿ ಯುಧಿಷ್ಠಿರನು ಪರಮ ಚಿಂತೆಗೊಳಗಾದನು.
06082015a ತತೋ ಯುಧಿಷ್ಠಿರೋ ವಶ್ಯಾನ್ರಾಜ್ಞಸ್ತಾನ್ಸಮಚೋದಯತ್।
06082015c ಭೀಷ್ಮಂ ಶಾಂತನವಂ ಸರ್ವೇ ನಿಹತೇತಿ ಸುಹೃದ್ಗಣಾನ್।।
ಆಗ ಯುಧಿಷ್ಠಿರನು ತನ್ನ ವಶದಲ್ಲಿದ್ದ ರಾಜರನ್ನು ಸ್ನೇಹಿತ ಗಣಗಳನ್ನು “ಎಲ್ಲರೂ ಭೀಷ್ಮ ಶಾಂತನವನನ್ನು ಸಂಹರಿಸಿರಿ!” ಎಂದು ಕೂಗಿ ಹುರಿದುಂಬಿಸಿದನು.
06082016a ತತಸ್ತೇ ಪಾರ್ಥಿವಾಃ ಸರ್ವೇ ಶ್ರುತ್ವಾ ಪಾರ್ಥಸ್ಯ ಭಾಷಿತಂ।
06082016c ಮಹತಾ ರಥವಂಶೇನ ಪರಿವವ್ರುಃ ಪಿತಾಮಹಂ।।
ಆಗ ಪಾರ್ಥನಾಡಿದುದನ್ನು ಕೇಳಿ ಸರ್ವ ಪಾರ್ಥಿವರೂ ಮಹಾ ರಥಸಮೂಹಗಳಿಂದ ಪಿತಾಮಹನನ್ನು ಸುತ್ತುವರೆದರು.
06082017a ಸ ಸಮಂತಾತ್ಪರಿವೃತಃ ಪಿತಾ ದೇವವ್ರತಸ್ತವ।
06082017c ಚಿಕ್ರೀದ ಧನುಷಾ ರಾಜನ್ಪಾತಯಾನೋ ಮಹಾರಥಾನ್।।
ರಾಜನ್! ಅವರಿಂದ ಎಲ್ಲಕಡೆಗಳಿಂದಲೂ ಸುತ್ತುವರೆಯಲ್ಪಟ್ಟಿದ್ದ ನಿನ್ನ ತಂದೆ ದೇವವ್ರತನು ಧನುಸ್ಸಿನೊಂದಿಗೆ ಆಟವಾಡುತ್ತಾ ಮಹಾರಥರನ್ನು ಉರುಳಿಸತೊಡಗಿದನು.
06082018a ತಂ ಚರಂತಂ ರಣೇ ಪಾರ್ಥಾ ದದೃಶುಃ ಕೌರವಂ ಯುಧಿ।
06082018c ಮೃಗಮಧ್ಯಂ ಪ್ರವಿಶ್ಯೇವ ಯಥಾ ಸಿಂಹಶಿಶುಂ ವನೇ।।
ವನದಲ್ಲಿ ಮೃಗಗಳ ಮಧ್ಯೆ ಪ್ರವೇಸಿಸಿದ ಸಿಂಹದ ಮರಿಯಂತೆ ರಣದಲ್ಲಿ ಸಂಚರಿಸಿ ಯುದ್ಧಮಾಡುತ್ತಿದ್ದ ಕೌರವನನ್ನು ಪಾರ್ಥರು ನೋಡಿದರು.
06082019a ತರ್ಜಯಾನಂ ರಣೇ ಶೂರಾಂಸ್ತ್ರಾಸಯಾನಂ ಚ ಸಾಯಕೈಃ।
06082019c ದೃಷ್ಟ್ವಾ ತ್ರೇಸುರ್ಮಹಾರಾಜ ಸಿಂಹಂ ಮೃಗಗಣಾ ಇವ।।
ಮಹಾರಾಜ! ಸಿಂಹವನ್ನು ನೋಡಿದ ಮೃಗಗಣವು ಭಯಪಡುವಂತೆ ಆ ಶೂರರು ರಣದಲ್ಲಿ ಅವನ ಸಾಯಕಗಳಿಂದ ಭಯಪಟ್ಟರು.
06082020a ರಣೇ ಭರತಸಿಂಹಸ್ಯ ದದೃಶುಃ ಕ್ಷತ್ರಿಯಾ ಗತಿಂ।
06082020c ಅಗ್ನೇರ್ವಾಯುಸಹಾಯಸ್ಯ ಯಥಾ ಕಕ್ಷಂ ದಿಧಕ್ಷತಃ।।
ವಾಯುವಿನ ಸಹಾಯದಿಂದ ಅಗ್ನಿಯು ಹೇಗೆ ಒಣಹುಲ್ಲನ್ನು ದಹಿಸುತ್ತದೆಯೋ ಹಾಗೆ ರಣದಲ್ಲಿ ಭರತಸಿಂಹನು ಮಾಡುತ್ತಿರುವುದನ್ನು ಕ್ಷತ್ರಿಯರು ನೋಡಿದರು.
06082021a ಶಿರಾಂಸಿ ರಥಿನಾಂ ಭೀಷ್ಮಃ ಪಾತಯಾಮಾಸ ಸಂಯುಗೇ।
06082021c ತಾಲೇಭ್ಯ ಇವ ಪಕ್ವಾನಿ ಫಲಾನಿ ಕುಶಲೋ ನರಃ।।
ಕುಶಲ ನರ ಭೀಷ್ಮನು ಗಳಿತ ಹಣ್ಣುಗಳನ್ನು ತಾಳೆ ಮರದಿಂದ ಉದುರಿಸುವಂತೆ ರಥಿಗಳ ಶಿರಗಳನ್ನು ರಣದಲ್ಲಿ ಬೀಳಿಸಿದನು.
06082022a ಪತದ್ಭಿಶ್ಚ ಮಹಾರಾಜ ಶಿರೋಭಿರ್ಧರಣೀತಲೇ।
06082022c ಬಭೂವ ತುಮುಲಃ ಶಬ್ದಃ ಪತತಾಮಶ್ಮನಾಮಿವ।।
ಮಹಾರಾಜ! ಭೂಮಿಯ ಮೇಲೆ ಶಿರಗಳು ಬೀಳುತ್ತಿರಲು ಕಲ್ಲುಗಳು ಉರುಳಿ ಬೀಳುವಂತೆ ತುಮುಲ ಶಬ್ಧವುಂಟಾಯಿತು.
06082023a ತಸ್ಮಿಂಸ್ತು ತುಮುಲೇ ಯುದ್ಧೇ ವರ್ತಮಾನೇ ಸುದಾರುಣೇ।
06082023c ಸರ್ವೇಷಾಮೇವ ಸೈನ್ಯಾನಾಮಾಸೀದ್ವ್ಯತಿಕರೋ ಮಹಾನ್।।
ಹೀಗೆ ಸುದಾರುಣ ತುಮುಲ ಯುದ್ಧವು ನಡೆಯುತ್ತಿರಲು ಎಲ್ಲ ಸೈನ್ಯಗಳಲ್ಲಿಯೂ ಮಹಾ ಸಂಘರ್ಷಣೆಯು ಪ್ರಾರಂಭವಾಯಿತು.
06082024a ಭಿನ್ನೇಷು ತೇಷು ವ್ಯೂಹೇಷು ಕ್ಷತ್ರಿಯಾ ಇತರೇತರಂ।
06082024c ಏಕಮೇಕಂ ಸಮಾಹೂಯ ಯುದ್ಧಾಯೈವೋಪತಸ್ಥಿರೇ।।
ಎರಡೂ ಪಕ್ಷಗಳ ವ್ಯೂಹಗಳು ಭಗ್ನವಾದ ನಂತರ ಕ್ಷತ್ರಿಯರು ಒಬ್ಬರನ್ನೊಬ್ಬರನ್ನು ಕರೆದು ಪರಸ್ಪರ ಯುದ್ಧಮಾಡತೊಡಗಿದರು.
06082025a ಶಿಖಂಡೀ ತು ಸಮಾಸಾದ್ಯ ಭರತಾನಾಂ ಪಿತಾಮಹಂ।
06082025c ಅಭಿದುದ್ರಾವ ವೇಗೇನ ತಿಷ್ಠ ತಿಷ್ಠೇತಿ ಚಾಬ್ರವೀತ್।।
ಶಿಖಂಡಿಯಾದರೋ ಭಾರತರ ಪಿತಾಮಹನ ಬಳಿಸಾರಿ ವೇಗದಿಂದ ಆಕ್ರಮಣಿಸಿ “ನಿಲ್ಲು! ನಿಲ್ಲು!” ಎಂದು ಹೇಳಿದನು.
06082026a ಅನಾದೃತ್ಯ ತತೋ ಭೀಷ್ಮಸ್ತಂ ಶಿಖಂಡಿನಮಾಹವೇ।
06082026c ಪ್ರಯಯೌ ಸೃಂಜಯಾನ್ಕ್ರುದ್ಧಃ ಸ್ತ್ರೀತ್ವಂ ಚಿಂತ್ಯ ಶಿಖಂಡಿನಃ।।
ಆಗ ಭೀಷ್ಮನು ಆಹವದಲ್ಲಿ ಶಿಖಂಡಿಯ ಸ್ತ್ರೀತ್ವವನ್ನು ಆಲೋಚಿಸಿ ಶಿಖಂಡಿಯನ್ನು ಅನಾದರಿಸಿ ಕ್ರುದ್ಧನಾಗಿ ಸೃಂಜಯರ ಮೇಲೆ ಯುದ್ಧಕ್ಕೆ ಹೋದನು.
06082027a ಸೃಂಜಯಾಸ್ತು ತತೋ ಹೃಷ್ಟಾ ದೃಷ್ಟ್ವಾ ಭೀಷ್ಮಂ ಮಹಾರಥಂ।
06082027c ಸಿಂಹನಾದಾನ್ಬಹುವಿಧಾಂಶ್ಚಕ್ರುಃ ಶಂಖವಿಮಿಶ್ರಿತಾನ್।।
ಆಗ ಮಹಾರಥ ಭೀಷ್ಮನನ್ನು ನೋಡಿ ಹೃಷ್ಟರಾದ ಸೃಂಜಯರು ಅನೇಕ ಶಂಖನಾದ ಮಿಶ್ರಿತ ವಿವಿಧ ಸಿಂಹನಾದಗೈದರು,
06082028a ತತಃ ಪ್ರವವೃತೇ ಯುದ್ಧಂ ವ್ಯತಿಷಕ್ತರಥದ್ವಿಪಂ।
06082028c ಅಪರಾಂ ದಿಶಮಾಸ್ಥಾಯ ಸ್ಥಿತೇ ಸವಿತರಿ ಪ್ರಭೋ।।
ಪ್ರಭೋ! ಸೂರ್ಯನು ಅಪರ ದಿಕ್ಕನ್ನನುಸರಿಸಿ ಹೋಗುತ್ತಿರಲು ರಥಸಮೂಹಗಳ ಸಮ್ಮಿಶ್ರಣ ಯುದ್ಧವು ಪ್ರಾರಂಭವಾಯಿತು.
06082029a ಧೃಷ್ಟದ್ಯುಮ್ನೋಽಥ ಪಾಂಚಾಲ್ಯಃ ಸಾತ್ಯಕಿಶ್ಚ ಮಹಾರಥಃ।
06082029c ಪೀಡಯಂತೌ ಭೃಶಂ ಸೈನ್ಯಂ ಶಕ್ತಿತೋಮರವೃಷ್ಟಿಭಿಃ।
06082029e ಶಸ್ತ್ರೈಶ್ಚ ಬಹುಭೀ ರಾಜಂ ಜಘ್ನತುಸ್ತಾವಕಾನ್ರಣೇ।।
ರಾಜನ್! ಆಗ ಪಾಂಚಾಲ್ಯ ಧೃಷ್ಟದ್ಯುಮ್ನ ಮತ್ತು ಮಹಾರಥ ಸಾತ್ಯಕಿಯರು ಶಕ್ತಿ-ತೋಮರ-ಋಷ್ಟಿಗಳಿಂದ ಸೈನ್ಯವನ್ನು ಬಹಳವಾಗಿ ಪೀಡಿಸುತ್ತಾ ಶಸ್ತ್ರಗಳಿಂದ ಅನೇಕ ನಿನ್ನವರನ್ನು ರಣದಲ್ಲಿ ಸಂಹರಿಸಿದರು.
06082030a ತೇ ಹನ್ಯಮಾನಾಃ ಸಮರೇ ತಾವಕಾಃ ಪುರುಷರ್ಷಭ।
06082030c ಆರ್ಯಾಂ ಯುದ್ಧೇ ಮತಿಂ ಕೃತ್ವಾ ನ ತ್ಯಜಂತಿ ಸ್ಮ ಸಂಯುಗಂ।
06082030e ಯಥೋತ್ಸಾಹಂ ಚ ಸಮರೇ ಜಘ್ನುರ್ಲೋಕಂ ಮಹಾರಥಾಃ।।
ಪುರುಷರ್ಷಭ! ಸಮರದಲ್ಲಿ ಅವರು ಸಂಹರಿಸುತ್ತಿದ್ದರೂ ಆರ್ಯರಾದ ನಿನ್ನವರು ಯುದ್ಧದಲ್ಲಿ ಮತಿಯನ್ನಿರಿಸಿ ರಣರಂಗವನ್ನು ಬಿಟ್ಟು ಹೋಗಲಿಲ್ಲ. ಆ ಮಹಾರಥರು ಉತ್ಸಾಹದಿಂದಲೇ ಸಮರದಲ್ಲಿ ಯೋಧರನ್ನು ಸಂಹರಿಸಿದರು.
06082031a ತತ್ರಾಕ್ರಂದೋ ಮಹಾನಾಸೀತ್ತಾವಕಾನಾಂ ಮಹಾತ್ಮನಾಂ।
06082031c ವಧ್ಯತಾಂ ಸಮರೇ ರಾಜನ್ಪಾರ್ಷತೇನ ಮಹಾತ್ಮನಾ।।
ರಾಜನ್! ಸಮರದಲ್ಲಿ ಮಹಾತ್ಮ ಪಾರ್ಷತನಿಂದ ವಧಿಸಲ್ಪಡುತ್ತಿದ್ದ ನಿನ್ನವರಾದ ಮಹಾತ್ಮರಿಂದ ಮಹಾ ಆಕ್ರಂದನವು ಕೇಳಿಬರುತ್ತಿತ್ತು.
06082032a ತಂ ಶ್ರುತ್ವಾ ನಿನದಂ ಘೋರಂ ತಾವಕಾನಾಂ ಮಹಾರಥೌ।
06082032c ವಿಂದಾನುವಿಂದಾವಾವಂತ್ಯೌ ಪಾರ್ಷತಂ ಪತ್ಯುಪಸ್ಥಿತೌ।।
ನಿನ್ನವರ ಆ ಘೋರ ನಿನಾದವನ್ನು ಕೇಳಿ ಮಹಾರಥರಾದ ಅವಂತಿಯ ವಿಂದಾನುವಿಂದರು ಪಾರ್ಷತನನ್ನು ಎದುರಿಸಿದರು.
06082033a ತೌ ತಸ್ಯ ತುರಗಾನ್ ಹತ್ವಾ ತ್ವರಮಾಣೌ ಮಹಾರಥೌ।
06082033c ಚಾದಯಾಮಾಸತುರುಭೌ ಶರವರ್ಷೇಣ ಪಾರ್ಷತಂ।।
ಆ ಮಹಾರಥರು ಅವನ ಕುದುರೆಗಳನ್ನು ಸಂಹರಿಸಿ ಒಡನೆಯೇ ಶರವರ್ಷದಿಂದ ಪಾರ್ಷತನನ್ನು ಮುಚ್ಚಿದರು.
06082034a ಅವಪ್ಲುತ್ಯಾಥ ಪಾಂಚಾಲ್ಯೋ ರಥಾತ್ತೂರ್ಣಂ ಮಹಾಬಲಃ।
06082034c ಆರುರೋಹ ರಥಂ ತೂರ್ಣಂ ಸಾತ್ಯಕೇಃ ಸುಮಹಾತ್ಮನಃ।।
ಕೂಡಲೇ ಮಹಾಬಲ ಪಾಂಚಾಲ್ಯನು ರಥದಿಂದ ಹಾರಿ ವೇಗವಾಗಿ ಮಹಾತ್ಮ ಸಾತ್ಯಕಿಯ ರಥವನ್ನೇರಿದನು.
06082035a ತತೋ ಯುಧಿಷ್ಠಿರೋ ರಾಜಾ ಮಹತ್ಯಾ ಸೇನಯಾ ವೃತಃ।
06082035c ಆವಂತ್ಯೌ ಸಮರೇ ಕ್ರುದ್ಧಾವಭ್ಯಯಾತ್ಸ ಪರಂತಪೌ।।
ಆಗ ರಾಜಾ ಯುಧಿಷ್ಠಿರನು ಮಹಾ ಸೇನೆಯಿಂದ ಆವೃತನಾಗಿ ಕ್ರುದ್ಧನಾಗಿ ಪರಂತಪರಾದ ಅವಂತಿಯವರ ಮೇಲೆ ಧಾಳಿನಡೆಸಿದನು.
06082036a ತಥೈವ ತವ ಪುತ್ರೋಽಪಿ ಸರ್ವೋದ್ಯೋಗೇನ ಮಾರಿಷ।
06082036c ವಿಂದಾನುವಿಂದಾವಾವಂತ್ಯೌ ಪರಿವಾರ್ಯೋಪತಸ್ಥಿವಾನ್।।
ಮಾರಿಷ! ಹಾಗೆಯೇ ನಿನ್ನ ಪುತ್ರರೂ ಕೂಡ ಎಲ್ಲರೂ ಒಟ್ಟಾಗಿ ಅವಂತಿಯ ವಿಂದಾನುವಿಂದರನ್ನು ಸುತ್ತುವರೆದು ನಿಂತರು.
06082037a ಅರ್ಜುನಶ್ಚಾಪಿ ಸಂಕ್ರುದ್ಧಃ ಕ್ಷತ್ರಿಯಾನ್ ಕ್ಷತ್ರಿಯರ್ಷಭ।
06082037c ಅಯೋಧಯತ ಸಂಗ್ರಾಮೇ ವಜ್ರಪಾಣಿರಿವಾಸುರಾನ್।।
ಕ್ಷತ್ರಿಯರ್ಷಭ! ಅರ್ಜುನನೂ ಕೂಡ ಸಂಕ್ರುದ್ಧನಾಗಿ ಸಮರದಲ್ಲಿ ವಜ್ರಪಾಣಿಯು ಅಸುರರೊಂದಿಗೆ ಹೇಗೋ ಹಾಗೆ ಕ್ಷತ್ರಿಯರೊಂದಿಗೆ ಯುದ್ಧಮಾಡಿದನು.
06082038a ದ್ರೋಣಶ್ಚ ಸಮರೇ ಕ್ರುದ್ಧಃ ಪುತ್ರಸ್ಯ ಪ್ರಿಯಕೃತ್ತವ।
06082038c ವ್ಯಧಮತ್ಸರ್ವಪಾಂಚಾಲಾಂಸ್ತೂಲರಾಶಿಮಿವಾನಲಃ।।
ನಿನ್ನ ಮಗನಿಗೆ ಪ್ರಿಯವಾದುದನ್ನು ಮಾಡುತ್ತಾ ಕ್ರುದ್ಧನಾದ ದ್ರೋಣನೂ ಕೂಡ ಸಮರದಲ್ಲಿ ಅಗ್ನಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಸರ್ವ ಪಾಂಚಾಲರನ್ನು ವಧಿಸುತ್ತಿದ್ದನು.
06082039a ದುರ್ಯೋಧನಪುರೋಗಾಸ್ತು ಪುತ್ರಾಸ್ತವ ವಿಶಾಂ ಪತೇ।
06082039c ಪರಿವಾರ್ಯ ರಣೇ ಭೀಷ್ಮಂ ಯುಯುಧುಃ ಪಾಂಡವೈಃ ಸಹ।।
ವಿಶಾಂಪತೇ! ದುರ್ಯೋಧನನನ್ನು ಮುಂದಿಟ್ಟುಕೊಂಡು ನಿನ್ನ ಪುತ್ರರು ರಣದಲ್ಲಿ ಭೀಷ್ಮನನ್ನು ಸುತ್ತುವರೆದು ಪಾಂಡವರೊಂದಿಗೆ ಯುದ್ಧಮಾಡಿದರು.
06082040a ತತೋ ದುರ್ಯೋಧನೋ ರಾಜಾ ಲೋಹಿತಾಯತಿ ಭಾಸ್ಕರೇ।
06082040c ಅಬ್ರವೀತ್ತಾವಕಾನ್ಸರ್ವಾಂಸ್ತ್ವರಧ್ವಮಿತಿ ಭಾರತ।।
ಭಾರತ! ಸೂರ್ಯನು ಕೆಂಪುಬಣ್ಣಕ್ಕೆ ತಿರುಗುತ್ತಿರಲಾಗಿ ರಾಜಾ ದುರ್ಯೋಧನನು ನಿನ್ನವರೆಲ್ಲರಿಗೆ “ಬೇಗ ಮುಗಿಸಿ!” ಎಂದು ಹೇಳಿದನು.
06082041a ಯುಧ್ಯತಾಂ ತು ತಥಾ ತೇಷಾಂ ಕುರ್ವತಾಂ ಕರ್ಮ ದುಷ್ಕರಂ।
06082041c ಅಸ್ತಂ ಗಿರಿಮಥಾರೂಢೇ ನಪ್ರಕಾಶತಿ ಭಾಸ್ಕರೇ।।
ಆಗ ಅವರು ದುಷ್ಕರ ಕರ್ಮಮಾಡುತ್ತಾ ಯುದ್ಧಮಾಡುತ್ತಿರಲು ಭಾಸ್ಕರನು ಗಿರಿಯನ್ನೇರಿ ಅಸ್ತನಾಗಲು ಬೆಳಕೇ ಇಲ್ಲದಾಯಿತು.
06082042a ಪ್ರಾವರ್ತತ ನದೀ ಘೋರಾ ಶೋಣಿತೌಘತರಂಗಿಣೀ।
06082042c ಗೋಮಾಯುಗಣಸಂಕೀರ್ಣಾ ಕ್ಷಣೇನ ರಜನೀಮುಖೇ।।
ಸಾಯಂಕಾಲದ ಹೊತ್ತಿಗೆ ಕ್ಷಣದಲ್ಲಿ ರಕ್ತವೇ ಪ್ರವಾಹವಾಗಿದ್ದ ನರಿಗಳ ಸಮೂದಿಂದ ಕೂಡಿದ್ದ ಘೋರ ನದಿಯೇ ಹರಿಯತೊಡಗಿತು.
06082043a ಶಿವಾಭಿರಶಿವಾಭಿಶ್ಚ ರುವದ್ಭಿರ್ಭೈರವಂ ರವಂ।
06082043c ಘೋರಮಾಯೋಧನಂ ಜಜ್ಞೇ ಭೂತಸಂಘಸಮಾಕುಲಂ।।
ಮಂಗಳಕರವಾಗಿ ಭೈರವ ಸ್ವರದಲ್ಲಿ ಕೂಗುತ್ತಿದ್ದ ನರಿಗಳಿಂದ ಮತ್ತು ಭೂತಸಮೂಗಳಿಂದ ತುಂಬಿಹೋಗಿದ್ದ ರಣರಂಗವು ಘೋರವಾಗಿತ್ತು.
06082044a ರಾಕ್ಷಸಾಶ್ಚ ಪಿಶಾಚಾಶ್ಚ ತಥಾನ್ಯೇ ಪಿಶಿತಾಶನಾಃ।
06082044c ಸಮಂತತೋ ವ್ಯದೃಶ್ಯಂತ ಶತಶೋಽಥ ಸಹಸ್ರಶಃ।।
ರಾಕ್ಷಸರು ಪಿಶಾಚಿಗಳು ಮತ್ತು ಇನ್ನೂ ಇತರ ಮಾಂಸಾಹಾರಿಗಳು ನೂರಾರು ಸಾವಿರಾರು ಸಂಖ್ಯೆಗಳಲ್ಲಿ ಎಲ್ಲಾಕಡೆ ಕಾಣಿಸಿಕೊಂಡವು.
06082045a ಅರ್ಜುನೋಽಥ ಸುಶರ್ಮಾದೀನ್ರಾಜ್ಞಸ್ತಾನ್ಸಪದಾನುಗಾನ್।
06082045c ವಿಜಿತ್ಯ ಪೃತನಾಮಧ್ಯೇ ಯಯೌ ಸ್ವಶಿಬಿರಂ ಪ್ರತಿ।।
ಆಗ ಅರ್ಜುನನು ಸಮರಮಧ್ಯದಲ್ಲಿ ಅನುಯಾಯಿ ರಾಜರೊಂqದಿಗೆ ಸುಶರ್ಮನನ್ನು ಸೋಲಿಸಿ ತನ್ನ ಶಿಬಿರದ ಕಡೆ ನಡೆದನು.
06082046a ಯುಧಿಷ್ಠಿರೋಽಪಿ ಕೌರವ್ಯೋ ಭ್ರಾತೃಭ್ಯಾಂ ಸಹಿತಸ್ತದಾ।
06082046c ಯಯೌ ಸ್ವಶಿಬಿರಂ ರಾಜಾ ನಿಶಾಯಾಂ ಸೇನಯಾ ವೃತಃ।।
ಕೌರವ್ಯ ರಾಜಾ ಯುಧಿಷ್ಠಿರನೂ ಕೂಡ ರಾತ್ರಿಯಾಗಲು ತನ್ನ ಸಹೋದರರೊಂದಿಗೆ ಸೇನೆಗಳಿಂದ ಆವೃತನಾಗಿ ತನ್ನ ಶಿಬಿರಕ್ಕೆ ತೆರಳಿದನು.
06082047a ಭೀಮಸೇನೋಽಪಿ ರಾಜೇಂದ್ರ ದುರ್ಯೋಧನಮುಖಾನ್ರಥಾನ್।
06082047c ಅವಜಿತ್ಯ ತತಃ ಸಂಖ್ಯೇ ಯಯೌ ಸ್ವಶಿಬಿರಂ ಪ್ರತಿ।।
ರಾಜೇಂದ್ರ! ಭೀಮಸೇನನೂ ಕೂಡ ದುರ್ಯೋಧನ ಪ್ರಮುಖ ರಥರನ್ನು ಯುದ್ಧದಲ್ಲಿ ಸೋಲಿಸಿ ತನ್ನ ಶಿಬಿರದ ಕಡೆ ನಡೆದನು.
06082048a ದುರ್ಯೋಧನೋಽಪಿ ನೃಪತಿಃ ಪರಿವಾರ್ಯ ಮಹಾರಣೇ।
06082048c ಭೀಷ್ಮಂ ಶಾಂತನವಂ ತೂರ್ಣಂ ಪ್ರಯಾತಃ ಶಿಬಿರಂ ಪ್ರತಿ।।
ನೃಪತಿ ದುರ್ಯೋಧನನೂ ಕೂಡ ಮಹಾರಣದಲ್ಲಿ ಶಾಂತನವ ಭೀಷ್ಮನನ್ನು ಸುತ್ತುವರೆದು ವೇಗವಾಗಿ ಶಿಬಿರದ ಕಡೆ ಹೊರಟನು.
06082049a ದ್ರೋಣೋ ದ್ರೌಣಿಃ ಕೃಪಃ ಶಲ್ಯಃ ಕೃತವರ್ಮಾ ಚ ಸಾತ್ವತಃ।
06082049c ಪರಿವಾರ್ಯ ಚಮೂಂ ಸರ್ವಾಂ ಪ್ರಯಯುಃ ಶಿಬಿರಂ ಪ್ರತಿ।।
ದ್ರೋಣ, ದ್ರೌಣಿ, ಕೃಪ, ಶಲ್ಯ ಮತ್ತು ಸಾತ್ವತ ಕೃತವರ್ಮ ಎಲ್ಲರೂ ಸೇನೆಗಳಿಂದ ಪರಿವೃತರಾಗಿ ಶಿಬಿರದ ಕಡೆ ತೆರಳಿದರು.
06082050a ತಥೈವ ಸಾತ್ಯಕೀ ರಾಜನ್ಧೃಷ್ಟದ್ಯುಮ್ನಶ್ಚ ಪಾರ್ಷತಃ।
06082050c ಪರಿವಾರ್ಯ ರಣೇ ಯೋಧಾನ್ಯಯತುಃ ಶಿಬಿರಂ ಪ್ರತಿ।।
ರಾಜನ್! ಅದೇ ರೀತಿ ಸಾತ್ಯಕಿ ಮತ್ತು ಪಾರ್ಷತ ಧೃಷ್ಟದ್ಯುಮ್ನರು ರಣದಲ್ಲಿ ಯೋಧರಿಂದೊಡಗೂಡಿ ಶಿಬಿರದ ಕಡೆ ನಡೆದರು.
06082051a ಏವಮೇತೇ ಮಹಾರಾಜ ತಾವಕಾಃ ಪಾಂಡವೈಃ ಸಹ।
06082051c ಪರ್ಯವರ್ತಂತ ಸಹಿತಾ ನಿಶಾಕಾಲೇ ಪರಂತಪಾಃ।।
ಮಹಾರಾಜ! ಹೀಗೆ ಪರಂತಪರಾದ ನಿನ್ನವರು ಮತ್ತು ಪಾಂಡವರು ಒಟ್ಟಿಗೇ ನಿಶಾಕಾಲದಲ್ಲಿ ಹಿಂದಿರುಗಿದರು.
06082052a ತತಃ ಸ್ವಶಿಬಿರಂ ಗತ್ವಾ ಪಾಂಡವಾಃ ಕುರವಸ್ತಥಾ।
06082052c ನ್ಯವಿಶಂತ ಮಹಾರಾಜ ಪೂಜಯಂತಃ ಪರಸ್ಪರಂ।।
ಮಹಾರಾಜ! ತಮ್ಮ ಶಿಬಿರಗಳಿಗೆ ತೆರಳಿ ಪಾಂಡವರು ಮತ್ತು ಕುರುಗಳು ಪರಸ್ಪರರನ್ನು ಹೊಗಳಿಕೊಳ್ಳುತ್ತಾ ವಿಶ್ರಾಂತಿಪಡೆದರು.
06082053a ರಕ್ಷಾಂ ಕೃತ್ವಾತ್ಮನಃ ಶೂರಾ ನ್ಯಸ್ಯ ಗುಲ್ಮಾನ್ಯಥಾವಿಧಿ।
06082053c ಅಪನೀಯ ಚ ಶಲ್ಯಾಂಸ್ತೇ ಸ್ನಾತ್ವಾ ಚ ವಿವಿಧೈರ್ಜಲೈಃ।।
ಆ ಶೂರರು ಯಥಾವಿಧಿಯಾಗಿ ತಮ್ಮ ತಮ್ಮ ಗುಲ್ಮಗಳನ್ನಿರಿಸಿ, ತಮಗೆ ಚುಚ್ಚಿಕೊಂಡಿದ್ದ ಬಾಣಗಳ ತುಂಡುಗಳನ್ನು ಕಿತ್ತು ತೆಗೆದುಹಾಕಿ ವಿವಿಧ ಜಲಗಳಿಂದ ಸ್ನಾನಮಾಡಿದರು.
06082054a ಕೃತಸ್ವಸ್ತ್ಯಯನಾಃ ಸರ್ವೇ ಸಂಸ್ತೂಯಂತಶ್ಚ ಬಂದಿಭಿಃ।
06082054c ಗೀತವಾದಿತ್ರಶಬ್ದೇನ ವ್ಯಕ್ರೀಡಂತ ಯಶಸ್ವಿನಃ।।
ಆಗ ಎಲ್ಲರೂ ಯಶಸ್ವಿಗಳು ಸ್ವಸ್ತಿಗಳನ್ನು ಮಾಡಿಸಿಕೊಂಡು, ವಂದಿಗಳು ಸ್ತುತಿಸಲು ಗೀತವಾದ್ಯಗಳ ಶಬ್ಧಗಳೊಂದಿಗೆ ರಮಿಸಿದರು.
06082055a ಮುಹೂರ್ತಮಿವ ತತ್ಸರ್ವಮಭವತ್ಸ್ವರ್ಗಸನ್ನಿಭಂ।
06082055c ನ ಹಿ ಯುದ್ಧಕಥಾಂ ಕಾಂ ಚಿತ್ತತ್ರ ಚಕ್ರುರ್ಮಹಾರಥಾಃ।।
ಮುಹೂರ್ತಕಾಲ ಅಲ್ಲಿ ಎಲ್ಲವೂ ಸ್ವರ್ಗಸನ್ನಿಭವಾಗಿತ್ತು. ಆಗ ಅಲ್ಲಿ ಮಹಾರಥರು ಯುದ್ಧದ ಕುರಿತು ಏನನ್ನೂ ಮಾತನಾಡಿಕೊಳ್ಳಲಿಲ್ಲ.
06082056a ತೇ ಪ್ರಸುಪ್ತೇ ಬಲೇ ತತ್ರ ಪರಿಶ್ರಾಂತಜನೇ ನೃಪ।
06082056c ಹಸ್ತ್ಯಶ್ವಬಹುಲೇ ರಾಜನ್ಪ್ರೇಕ್ಷಣೀಯೇ ಬಭೂವತುಃ।।
ನೃಪ! ರಾಜನ್! ಅನೇಕ ಆನೆ-ಕುದುರೆಗಳಿಂದ ಕೂಡಿದ್ದ ಆ ಸೇನೆಗಳಲ್ಲಿ ಆಯಾಸಗೊಂಡ ಜನರು ಅಲ್ಲಿ ಮಲಗಿರಲು ಅದು ಪ್ರೇಕ್ಷಣೀಯವಾಗಿ ಕಂಡಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಪ್ತಮದಿವಸಯುದ್ಧಾವಹಾರೇ ದ್ವಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಪ್ತಮದಿವಸಯುದ್ಧಾವಹಾರ ಎನ್ನುವ ಎಂಭತ್ತೆರಡನೇ ಅಧ್ಯಾಯವು.