080 ಸಪ್ತಮಯುದ್ಧದಿವಸೇ ಸುಶರ್ಮಾರ್ಜುನ ಸಮಾಗಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 80

ಸಾರ

ಶ್ರುತಾಯು-ಯುಧಿಷ್ಠಿರರ ಯುದ್ಧ (1-19). ಕೃಪ-ಚೇಕಿತಾನರ ಯುದ್ಧ (20-32). ಧೃಷ್ಟಕೇತು-ಭೂರಿಶ್ರವರ ಯುದ್ಧ (33-37). ಚಿತ್ರಸೇನ, ವಿಕರ್ಣ ಮತ್ತು ದುರ್ಮರ್ಷಣರೊಡನೆ ಅಭಿಮನ್ಯುವಿನ ಯುದ್ಧ; ಸುಶರ್ಮಾರ್ಜುನರ ಸಮಾಗಮ (38-51).

06080001 ಸಂಜಯ ಉವಾಚ।
06080001a ತತೋ ಯುಧಿಷ್ಠಿರೋ ರಾಜಾ ಮಧ್ಯಂ ಪ್ರಾಪ್ತೇ ದಿವಾಕರೇ।
06080001c ಶ್ರುತಾಯುಷಮಭಿಪ್ರೇಕ್ಷ್ಯ ಚೋದಯಾಮಾಸ ವಾಜಿನಃ।।

ಸಂಜಯನು ಹೇಳಿದನು: “ದಿವಾಕರನು ನಡುನೆತ್ತಿಯ ಮೇಲೆ ಬರಲು ರಾಜಾ ಯುಧಿಷ್ಠಿರನು ಶ್ರುತಾಯುಷನನ್ನು ನೋಡಿ ಕುದುರೆಗಳನ್ನು ಓಡಿಸಿದನು.

06080002a ಅಭ್ಯಧಾವತ್ತತೋ ರಾಜಾ ಶ್ರುತಾಯುಷಮರಿಂದಮಂ।
06080002c ವಿನಿಘ್ನನ್ಸಾಯಕೈಸ್ತೀಕ್ಷ್ಣೈರ್ನವಭಿರ್ನತಪರ್ವಭಿಃ।।

ರಾಜನು ಅರಿಂದಮ ಶ್ರುತಾಯುಷನನ್ನು ಎದುರಿಸಿ ಅವನನ್ನು ತೀಕ್ಷ್ಣ ಸಾಯಕಗಳಿಂದ ಮತ್ತು ಒಂಭತ್ತು ನತಪರ್ವಗಳಿಂದ ಹೊಡೆದನು.

06080003a ಸ ಸಂವಾರ್ಯ ರಣೇ ರಾಜಾ ಪ್ರೇಷಿತಾನ್ಧರ್ಮಸೂನುನಾ।
06080003c ಶರಾನ್ಸಪ್ತ ಮಹೇಷ್ವಾಸಃ ಕೌಂತೇಯಾಯ ಸಮರ್ಪಯತ್।।

ಆ ರಾಜ ಮಹೇಷ್ವಾಸನು ಧರ್ಮಸೂನುವು ಕಳುಹಿಸಿದ ಬಾಣಗಳನ್ನು ರಣದಲ್ಲಿ ತಡೆದು, ಏಳು ಶರಗಳನ್ನು ಕೌಂತೇಯನ ಮೇಲೆ ಪ್ರಯೋಗಿಸಿದನು.

06080004a ತೇ ತಸ್ಯ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ।
06080004c ಅಸೂನಿವ ವಿಚಿನ್ವಂತೋ ದೇಹೇ ತಸ್ಯ ಮಹಾತ್ಮನಃ।।

ಅವು ಆ ಮಹಾತ್ಮನ ಕವಚವನ್ನು ಸೀಳಿ ದೇಹದಲ್ಲಿ ಪ್ರಾಣಗಳನ್ನು ಹುಡುಕುತ್ತಿವೆಯೋ ಎನ್ನುವಂತೆ ಅವನ ರಕ್ತವನ್ನು ಹೀರಿದವು.

06080005a ಪಾಂಡವಸ್ತು ಭೃಶಂ ವಿದ್ಧಸ್ತೇನ ರಾಜ್ಞಾ ಮಹಾತ್ಮನಾ।
06080005c ರಣೇ ವರಾಹಕರ್ಣೇನ ರಾಜಾನಂ ಹೃದಿ ವಿವ್ಯಧೇ।।

ಮಹಾತ್ಮ ರಾಜನಿಂದ ಹೀಗೆ ತುಂಬಾ ಗಾಯಗೊಂಡ ಪಾಂಡವನಾದರೋ ರಣದಲ್ಲಿ ವರಾಹಕರ್ಣದಿಂದ ರಾಜನ ಹೃದಯವನ್ನು ಹೊಡೆದನು.

06080006a ಅಥಾಪರೇಣ ಭಲ್ಲೇನ ಕೇತುಂ ತಸ್ಯ ಮಹಾತ್ಮನಃ।
06080006c ರಥಶ್ರೇಷ್ಠೋ ರಥಾತ್ತೂರ್ಣಂ ಭೂಮೌ ಪಾರ್ಥೋ ನ್ಯಪಾತಯತ್।।

ರಥಶ್ರೇಷ್ಠ ಪಾರ್ಥನು ಇನ್ನೊಂದು ಭಲ್ಲದಿಂದ ಆ ಮಹಾತ್ಮನ ಧ್ವಜವನ್ನು ತಕ್ಷಣವೇ ರಥದಿಂದ ಭೂಮಿಯ ಮೇಲೆ ಉರುಳಿಸಿದನು.

06080007a ಕೇತುಂ ನಿಪತಿತಂ ದೃಷ್ಟ್ವಾ ಶ್ರುತಾಯುಃ ಸ ತು ಪಾರ್ಥಿವಃ।
06080007c ಪಾಂಡವಂ ವಿಶಿಖೈಸ್ತೀಕ್ಷ್ಣೈ ರಾಜನ್ವಿವ್ಯಾಧ ಸಪ್ತಭಿಃ।।

ರಾಜನ್! ಧ್ವಜವನ್ನು ಬೀಳಿಸಿದುದನ್ನು ನೋಡಿ ಪಾರ್ಥಿವ ಶ್ರುತಾಯುವು ಪಾಂಡವನನ್ನು ಏಳು ತೀಕ್ಷ್ಣ ವಿಶಿಖಗಳಿಂದ ಹೊಡೆದನು.

06080008a ತತಃ ಕ್ರೋಧಾತ್ಪ್ರಜಜ್ವಾಲ ಧರ್ಮಪುತ್ರೋ ಯುಧಿಷ್ಠಿರಃ।
06080008c ಯಥಾ ಯುಗಾಂತೇ ಭೂತಾನಿ ಧಕ್ಷ್ಯನ್ನಿವ ಹುತಾಶನಃ।।

ಆಗ ಧರ್ಮಪುತ್ರ ಯುಧಿಷ್ಠಿರನು ಯುಗಾಂತದಲ್ಲಿ ಇರುವವುಗಳನ್ನು ಸುಟ್ಟುಬಿಡುವ ಹುತಾಶನನಂತೆ ಕ್ರೋಧದಿಂದ ಪ್ರಜ್ವಲಿಸಿದನು.

06080009a ಕ್ರುದ್ಧಂ ತು ಪಾಂಡವಂ ದೃಷ್ಟ್ವಾ ದೇವಗಂಧರ್ವರಾಕ್ಷಸಾಃ।
06080009c ಪ್ರವಿವ್ಯಥುರ್ಮಹಾರಾಜ ವ್ಯಾಕುಲಂ ಚಾಪ್ಯಭೂಜ್ಜಗತ್।।

ಮಹಾರಾಜ! ಕ್ರುದ್ಧ ಪಾಂಡವನನ್ನು ನೋಡಿ ದೇವ-ಗಂಧರ್ವ-ರಾಕ್ಷಸರು ಬಹುವಾಗಿ ವ್ಯಥೆಪಟ್ಟರು. ಜಗತ್ತೇ ವ್ಯಾಕುಲಗೊಂಡಿತು.

06080010a ಸರ್ವೇಷಾಂ ಚೈವ ಭೂತಾನಾಮಿದಮಾಸೀನ್ಮನೋಗತಂ।
06080010c ತ್ರೀಽಲ್ಲೋಕಾನದ್ಯ ಸಂಕ್ರುದ್ಧೋ ನೃಪೋಽಯಂ ಧಕ್ಷ್ಯತೀತಿ ವೈ।।

“ಮೂರು ಲೋಕಗಳನ್ನೂ ಇಂದು ಸಂಕ್ರುದ್ಧನಾದ ಈ ನೃಪನು ಸುಟ್ಟುಬಿಡುತ್ತಾನೆ!” ಎನ್ನುವುದೇ ಸರ್ವಭೂತಗಳ ಮನೋಗತವಾಗಿತ್ತು.

06080011a ಋಷಯಶ್ಚೈವ ದೇವಾಶ್ಚ ಚಕ್ರುಃ ಸ್ವಸ್ತ್ಯಯನಂ ಮಹತ್।
06080011c ಲೋಕಾನಾಂ ನೃಪ ಶಾಂತ್ಯರ್ಥಂ ಕ್ರೋಧಿತೇ ಪಾಂಡವೇ ತದಾ।।

ನೃಪ! ಪಾಂಡವನು ಕ್ರೋಧಿತನಾಗಲು ಋಷಿಗಳೂ ದೇವತೆಗಳೂ ಲೋಕಗಳ ಶಾಂತಿಗಾಗಿ ಸ್ವಸ್ತಿವಾಚನ ಮಾಡಿದರು.

06080012a ಸ ಚ ಕ್ರೋಧಸಮಾವಿಷ್ಟಃ ಸೃಕ್ಕಿಣೀ ಪರಿಲೇಲಿಹನ್।
06080012c ದಧಾರಾತ್ಮವಪುರ್ಘೋರಂ ಯುಗಾಂತಾದಿತ್ಯಸಮ್ನಿಭಂ।।

ಅವನೂ ಕೂಡ ಕ್ರೋಧಸಮಾವಿಷ್ಟನಾಗಿ ಕಟವಾಯಿಯನ್ನು ನೆಕ್ಕುತ್ತಾ ಪ್ರಲಯ ಕಾಲದ ಆದಿತ್ಯನಂತೆ ಘೋರರೂಪವನ್ನು ತಾಳಿದನು.

06080013a ತತಃ ಸರ್ವಾಣಿ ಸೈನ್ಯಾನಿ ತಾವಕಾನಿ ವಿಶಾಂ ಪತೇ।
06080013c ನಿರಾಶಾನ್ಯಭವಂಸ್ತತ್ರ ಜೀವಿತಂ ಪ್ರತಿ ಭಾರತ।।

ವಿಶಾಂಪತೇ! ಭಾರತ! ಆಗ ನಿನ್ನ ಸೇನೆಗಳೆಲ್ಲವೂ ತಮ್ಮ ಜೀವಿತದ ಮೇಲಿದ್ದ ಆಸೆಯನ್ನು ಸಂಪೂರ್ಣವಾಗಿ ತೊರೆದುಬಿಟ್ಟವು.

06080014a ಸ ತು ಧೈರ್ಯೇಣ ತಂ ಕೋಪಂ ಸನ್ನಿವಾರ್ಯ ಮಹಾಯಶಾಃ।
06080014c ಶ್ರುತಾಯುಷಃ ಪ್ರಚಿಚ್ಛೇದ ಮುಷ್ಟಿದೇಶೇ ಮಹದ್ಧನುಃ।।

ಆಗ ಆ ಮಹಾಯಶನೇ ಧೈರ್ಯದಿಂದ ತನ್ನ ಕೋಪವನ್ನು ತಡೆದುಕೊಂಡು ಶ್ರುತಾಯುಷನ ಮಹಾಧನುಸ್ಸನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿದನು.

06080015a ಅಥೈನಂ ಚಿನ್ನಧನ್ವಾನಂ ನಾರಾಚೇನ ಸ್ತನಾಂತರೇ।
06080015c ನಿರ್ಬಿಭೇದ ರಣೇ ರಾಜಾ ಸರ್ವಸೈನ್ಯಸ್ಯ ಪಶ್ಯತಃ।।

ಧನುಸ್ಸು ತುಂಡಾದ ಅವನನ್ನು ರಾಜನು ರಣದಲ್ಲಿ ಎದೆಯ ಮೇಲೆ ಸರ್ವ ಸೈನ್ಯವೂ ನೋಡುತ್ತಿರುವಂತೆ ನಾರಾಚದಿಂದ ಹೊಡೆದನು.

06080016a ಸತ್ವರಂ ಚರಣೇ ರಾಜಂಸ್ತಸ್ಯ ವಾಹಾನ್ಮಹಾತ್ಮನಃ।
06080016c ನಿಜಘಾನ ಶರೈಃ ಕ್ಷಿಪ್ರಂ ಸೂತಂ ಚ ಸುಮಹಾಬಲಃ।।

ರಾಜನ್! ಇನ್ನೊಂದು ಕ್ಷಣದಲ್ಲಿ ಕ್ಷಿಪ್ರವಾಗಿ ಆ ಮಹಾಬಲ ಮಹಾತ್ಮನು ಶರಗಳಿಂದ ಅವನ ಕುದುರೆ-ಸೂತರನ್ನು ಸಂಹರಿಸಿದನು.

06080017a ಹತಾಶ್ವಂ ತು ರಥಂ ತ್ಯಕ್ತ್ವಾ ದೃಷ್ಟ್ವಾ ರಾಜ್ಞಸ್ತು ಪೌರುಷಂ।
06080017c ವಿಪ್ರದುದ್ರಾವ ವೇಗೇನ ಶ್ರುತಾಯುಃ ಸಮರೇ ತದಾ।।

ಹತವಾದ ಕುದುರೆ-ರಥಗಳನ್ನು ನೋಡಿ ಪೌರುಷವನ್ನು ತ್ಯಜಿಸಿ ರಾಜ ಶ್ರುತಾಯುವು ವೇಗದಿಂದ ಸಮರವನ್ನು ತ್ಯಜಿಸಿ ಪಲಾಯನಗೈದನು.

06080018a ತಸ್ಮಿನ್ಜಿತೇ ಮಹೇಷ್ವಾಸೇ ಧರ್ಮಪುತ್ರೇಣ ಸಂಯುಗೇ।
06080018c ದುರ್ಯೋಧನಬಲಂ ರಾಜನ್ಸರ್ವಮಾಸೀತ್ಪರಾಙ್ಮುಖಂ।।

ರಾಜನ್! ಸಂಯುಗದಲ್ಲಿ ಆ ಮಹೇಷ್ವಾಸನು ಧರ್ಮಪುತ್ರನಿಂದ ಗೆಲ್ಲಲ್ಪಡಲು ದುರ್ಯೋಧನನ ಸೇನೆಗಳೆಲ್ಲವೂ ಪರಾಙ್ಮುಖವಾದವು.

06080019a ಏತತ್ಕೃತ್ವಾ ಮಹಾರಾಜ ಧರ್ಮಪುತ್ರೋ ಯುಧಿಷ್ಠಿರಃ।
06080019c ವ್ಯಾತ್ತಾನನೋ ಯಥಾ ಕಾಲಸ್ತವ ಸೈನ್ಯಂ ಜಘಾನ ಹ।।

ಮಹಾರಾಜ! ಹೀಗೆ ಮಾಡಿ ಧರ್ಮಪುತ್ರ ಯುಧಿಷ್ಠಿರನು ಬಾಯಿಕಳೆದ ಕಾಲನಂತೆ ಸೈನ್ಯವನ್ನು ಸಂಹರಿಸಿದನು.

06080020a ಚೇಕಿತಾನಸ್ತು ವಾರ್ಷ್ಣೇಯೋ ಗೌತಮಂ ರಥಿನಾಂ ವರಂ।
06080020c ಪ್ರೇಕ್ಷತಾಂ ಸರ್ವಸೈನ್ಯಾನಾಂ ಚಾದಯಾಮಾಸ ಸಾಯಕೈಃ।।

ವಾರ್ಷ್ಣೇಯ ಚೇಕಿತಾನನಾದರೋ ರಥಿಗಳಲ್ಲಿ ಶ್ರೇಷ್ಠ ಗೌತಮನನ್ನು, ಸರ್ವ ಸೇನೆಗಳೂ ನೋಡುತ್ತಿರುವಂತೆ, ಸಾಯಕಗಳಿಂದ ಮುಚ್ಚಿಬಿಟ್ಟನು.

06080021a ಸನ್ನಿವಾರ್ಯ ಶರಾಂಸ್ತಾಂಸ್ತು ಕೃಪಃ ಶಾರದ್ವತೋ ಯುಧಿ।
06080021c ಚೇಕಿತಾನಂ ರಣೇ ಯತ್ತಂ ರಾಜನ್ವಿವ್ಯಾಧ ಪತ್ರಿಭಿಃ।।

ರಾಜನ್! ಆ ಶರಗಳನ್ನು ತಡೆದು ಶಾರದ್ವತ ಕೃಪನು ಯುದ್ಧದಲ್ಲಿ ಚೇಕಿತಾನನನ್ನು ಪತ್ರಿಗಳಿಂದ ಹೊಡೆದನು.

06080022a ಅಥಾಪರೇಣ ಭಲ್ಲೇನ ಧನುಶ್ಚಿಚ್ಛೇದ ಮಾರಿಷ।
06080022c ಸಾರಥಿಂ ಚಾಸ್ಯ ಸಮರೇ ಕ್ಷಿಪ್ರಹಸ್ತೋ ನ್ಯಪಾತಯತ್।
06080022e ಹಯಾಂಶ್ಚಾಸ್ಯಾವಧೀದ್ರಾಜನ್ನುಭೌ ಚ ಪಾರ್ಷ್ಣಿಸಾರಥೀ।।

ರಾಜನ್! ಅನಂತರ ಆ ಕ್ಷಿಪ್ರಹಸ್ತನು ಸಮರದಲ್ಲಿ ಇನ್ನೊಂದು ಭಲ್ಲದಿಂದ ಅವನ ಧನುಸ್ಸನ್ನು ತುಂಡರಿಸಿ, ಸಾರಥಿಯನ್ನೂ, ನಾಲ್ಕು ಕುದುರೆಗಳನ್ನೂ, ರಥದ ಬದಿಗಳನ್ನು ರಕ್ಷಿಸುತ್ತಿದ್ದ ಇಬ್ಬರು ಸಾರಥಿಗಳನ್ನೂ ಬೀಳಿಸಿದನು.

06080023a ಸೋಽವಪ್ಲುತ್ಯ ರಥಾತ್ತೂರ್ಣಂ ಗದಾಂ ಜಗ್ರಾಹ ಸಾತ್ವತಃ।
06080023c ಸ ತಯಾ ವೀರಘಾತಿನ್ಯಾ ಗದಯಾ ಗದಿನಾಂ ವರಃ।
06080023e ಗೌತಮಸ್ಯ ಹಯಾನ್ ಹತ್ವಾ ಸಾರಥಿಂ ಚ ನ್ಯಪಾತಯತ್।।

ಆಗ ಸಾತ್ವತನು ಒಡನೆಯೇ ರಥದಿಂದ ಧುಮುಕಿ ಗದೆಯನ್ನು ಹಿಡಿದನು. ಗದಾಧಾರಿಗಳಲ್ಲಿ ಶ್ರೇಷ್ಠನಾದ ಅವನು ವೀರರನ್ನು ಘಾತಿಗೊಳಿಸುವ ಗದೆಯಿಂದ ಗೌತಮನ ಕುದುರೆಗಳನ್ನು ಕೊಂದು ಸಾರಥಿಯನ್ನೂ ಬೀಳಿಸಿದನು.

06080024a ಭೂಮಿಷ್ಠೋ ಗೌತಮಸ್ತಸ್ಯ ಶರಾಂಶ್ಚಿಕ್ಷೇಪ ಷೋಡಶ।
06080024c ತೇ ಶರಾಃ ಸಾತ್ವತಂ ಭಿತ್ತ್ವಾ ಪ್ರಾವಿಶಂತ ಧರಾತಲಂ।।

ಭೂಮಿಗಿಳಿದ ಗೌತಮನು ಅವನ ಮೇಲೆ ಹದಿನಾರು ಬಾಣಗಳನ್ನು ಪ್ರಯೋಗಿಸಿದನು. ಆ ಶರಗಳು ಸಾತ್ವತನನ್ನು ಭೇದಿಸಿ ಧರಾತಲವನ್ನು ಪ್ರವೇಶಿಸಿದವು.

06080025a ಚೇಕಿತಾನಸ್ತತಃ ಕ್ರುದ್ಧಃ ಪುನಶ್ಚಿಕ್ಷೇಪ ತಾಂ ಗದಾಂ।
06080025c ಗೌತಮಸ್ಯ ವಧಾಕಾಂಕ್ಷೀ ವೃತ್ರಸ್ಯೇವ ಪುರಂದರಃ।।

ಆಗ ಚೇಕಿತಾನನು ಕ್ರುದ್ಧನಾಗಿ ಗೌತಮನನ್ನು ವಧಿಸಲು ಬಯಸಿ ವೃತ್ರನು ಪುರಂದರನ ಮೇಲೆ ಹೇಗೋ ಹಾಗೆ ಅವನ ಮೇಲೆ ಪುನಃ ಗದೆಯನ್ನು ಪ್ರಯೋಗಿಸಿದನು.

06080026a ತಾಮಾಪತಂತೀಂ ವಿಮಲಾಮಶ್ಮಗರ್ಭಾಂ ಮಹಾಗದಾಂ।
06080026c ಶರೈರನೇಕಸಾಹಸ್ರೈರ್ವಾರಯಾಮಾಸ ಗೌತಮಃ।।

ತನ್ನ ಮೇಲೆ ಬಂದು ಬೀಳುತ್ತಿದ್ದ ಆ ಪಚ್ಚೆಕಲ್ಲಿನಿಂದ ನಿರ್ಮಿತವಾಗಿದ್ದ ಮಹಾಗದೆಯನ್ನು ಅನೇಕ ಸಾವಿರ ಬಾಣಗಳಿಂದ ಗೌತಮನು ತಡೆದನು.

06080027a ಚೇಕಿತಾನಸ್ತತಃ ಖಡ್ಗಂ ಕೋಶಾದುದ್ಧೃತ್ಯ ಭಾರತ।
06080027c ಲಾಘವಂ ಪರಮಾಸ್ಥಾಯ ಗೌತಮಂ ಸಮುಪಾದ್ರವತ್।।

ಭಾರತ! ಆಗ ಚೇಕಿತಾನನು ಒರೆಯಿಂದ ಖಡ್ಗವನ್ನು ಸೆಳೆದು ಮೇಲೆತ್ತಿ ಅತಿ ವೇಗದಿಂದ ಗೌತಮನ ಸಮೀಪಕ್ಕೆ ಧಾವಿಸಿದನು.

06080028a ಗೌತಮೋಽಪಿ ಧನುಸ್ತ್ಯಕ್ತ್ವಾ ಪ್ರಗೃಹ್ಯಾಸಿಂ ಸುಸಂಶಿತಂ।
06080028c ವೇಗೇನ ಮಹತಾ ರಾಜಂಶ್ಚೇಕಿತಾನಮುಪಾದ್ರವತ್।।

ರಾಜನ್! ಗೌತಮನೂ ಕೂಡ ಧನುಸ್ಸನ್ನು ಬಿಸುಟು ಖಡ್ಗವನ್ನು ಹಿಡಿದು ಮಹಾವೇಗದಿಂದ ಚೇಕಿತಾನನನ್ನು ಎದುರಿಸಿದನು.

06080029a ತಾವುಭೌ ಬಲಸಂಪನ್ನೌ ನಿಸ್ತ್ರಿಂಶವರಧಾರಿಣೌ।
06080029c ನಿಸ್ತ್ರಿಂಶಾಭ್ಯಾಂ ಸುತೀಕ್ಷ್ಣಾಭ್ಯಾಮನ್ಯೋನ್ಯಂ ಸಂತತಕ್ಷತುಃ।।

ಅವರಿಬ್ಬರು ಬಲಸಂಪನ್ನರೂ ಶ್ರೇಷ್ಠ ಖಡ್ಗಗಳನ್ನು ಹಿಡಿದು ಸುತೀಕ್ಷ್ಣ ಖಡ್ಗಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಲು ಪ್ರಯತ್ನಿಸಿದರು.

06080030a ನಿಸ್ತ್ರಿಂಶವೇಗಾಭಿಹತೌ ತತಸ್ತೌ ಪುರುಷರ್ಷಭೌ।
06080030c ಧರಣೀಂ ಸಮನುಪ್ರಾಪ್ತೌ ಸರ್ವಭೂತನಿಷೇವಿತಾಂ।
06080030e ಮೂರ್ಚಯಾಭಿಪರೀತಾಂಗೌ ವ್ಯಾಯಾಮೇನ ಚ ಮೋಹಿತೌ।।

ವೇಗವಾಗಿ ಖಡ್ಗಗಳಿಂದ ಹೊಡೆಯಲ್ಪಟ್ಟ ಆ ಇಬ್ಬರು ಪುರುಷರ್ಷಭರೂ ಹೋರಾಟದಲ್ಲಿ ಗಾಯಗೊಂಡು ಮೋಹಿತರಾಗಿ ಸರ್ವಭೂತಗಳೂ ಪೂಜಿಸುವ ಭೂಮಿಯ ಮೇಲೆ ಬಿದ್ದು ಮೂರ್ಛಿತರಾದರು.

06080031a ತತೋಽಭ್ಯಧಾವದ್ವೇಗೇನ ಕರಕರ್ಷಃ ಸುಹೃತ್ತಯಾ।
06080031c ಚೇಕಿತಾನಂ ತಥಾಭೂತಂ ದೃಷ್ಟ್ವಾ ಸಮರದುರ್ಮದಂ।
06080031e ರಥಮಾರೋಪಯಚ್ಚೈನಂ ಸರ್ವಸೈನ್ಯಸ್ಯ ಪಶ್ಯತಃ।।

ಆಗ ವೇಗವಾಗಿ ಅಲ್ಲಿಗೆ ಬಂದ ಕರಕರ್ಷನು ಅವನ ಮೇಲಿನ ಸ್ನೇಹದಿಂದ ಹಾಗಿದ್ದ ಸಮರದುರ್ಮದ ಚೇಕಿತಾನನನ್ನು ನೋಡಿ, ಎಲ್ಲ ಸೇನೆಗಳೂ ನೋಡುತ್ತಿರಲು, ಅವನನ್ನು ತನ್ನ ರಥದ ಮೇಲೇರಿಸಿಕೊಂಡನು.

06080032a ತಥೈವ ಶಕುನಿಃ ಶೂರಃ ಸ್ಯಾಲಸ್ತವ ವಿಶಾಂ ಪತೇ।
06080032c ಆರೋಪಯದ್ರಥಂ ತೂರ್ಣಂ ಗೌತಮಂ ರಥಿನಾಂ ವರಂ।।

ವಿಶಾಂಪತೇ! ಹಾಗೆಯೇ ನಿನ್ನ ಬಾವ ಶೂರ ಶಕುನಿಯು ತಕ್ಷಣವೇ ರಥಿಗಳಲ್ಲಿ ಶ್ರೇಷ್ಠ ಗೌತಮನನ್ನು ತನ್ನ ರಥದ ಮೇಲೇರಿಸಿಕೊಂಡನು.

06080033a ಸೌಮದತ್ತಿಂ ತಥಾ ಕ್ರುದ್ಧೋ ಧೃಷ್ಟಕೇತುರ್ಮಹಾಬಲಃ।
06080033c ನವತ್ಯಾ ಸಾಯಕೈಃ ಕ್ಷಿಪ್ರಂ ರಾಜನ್ವಿವ್ಯಾಧ ವಕ್ಷಸಿ।।

ರಾಜನ್! ಹಾಗೆಯೇ ಮಹಾಬಲ ಧೃಷ್ಟಕೇತುವು ಸೌಮದತ್ತಿಯನ್ನು ನೋಡಿ ಕ್ರುದ್ಧನಾಗಿ ಅವನ ಎದೆಗೆ ತೊಂಬತ್ತು ಸಾಯಕಗಳನ್ನು ಕ್ಷಿಪ್ರವಾಗಿ ಹೊಡೆದನು.

06080034a ಸೌಮದತ್ತಿರುರಃಸ್ಥೈಸ್ತೈರ್ಭೃಶಂ ಬಾಣೈರಶೋಭತ।
06080034c ಮಧ್ಯಂದಿನೇ ಮಹಾರಾಜ ರಶ್ಮಿಭಿಸ್ತಪನೋ ಯಥಾ।।

ಮಹಾರಾಜ! ಮಧ್ಯಾಹ್ನದ ಸೂರ್ಯನು ಕಿರಣಗಳಿಂದ ಹೇಗೋ ಹಾಗೆ ಸೌಮದತ್ತಿಯು ಹೃದಯಕ್ಕೆ ಚುಚ್ಚಿದ್ದ ಆ ತೊಂಬತ್ತು ಬಾಣಗಳಿಂದ ಪರಿಶೋಭಿಸಿದನು.

06080035a ಭೂರಿಶ್ರವಾಸ್ತು ಸಮರೇ ಧೃಷ್ಟಕೇತುಂ ಮಹಾರಥಂ।
06080035c ಹತಸೂತಹಯಂ ಚಕ್ರೇ ವಿರಥಂ ಸಾಯಕೋತ್ತಮೈಃ।।

ಭೂರಿಶ್ರವನಾದರೋ ಸಮರದಲ್ಲಿ ಉತ್ತಮ ಸಾಯಕಗಳಿಂದ ಮಹಾರಥ ಧೃಷ್ಟಕೇತುವಿನ ಸಾರಥಿಯನ್ನೂ ಕುದುರೆಗಳನ್ನೂ ಸಂಹರಿಸಿ ಅವನನ್ನು ವಿರಥನನ್ನಾಗಿ ಮಾಡಿದನು.

06080036a ವಿರಥಂ ಚೈನಮಾಲೋಕ್ಯ ಹತಾಶ್ವಂ ಹತಸಾರಥಿಂ।
06080036c ಮಹತಾ ಶರವರ್ಷೇಣ ಚಾದಯಾಮಾಸ ಸಂಯುಗೇ।।

ಅವನು ಅಶ್ವ-ಸಾರಥಿಗಳನ್ನು ಕಳೆದುಕೊಂಡು ವಿರಥನಾದುದನ್ನು ನೋಡಿ ಅವನನ್ನು ಮಹಾ ಶರವರ್ಷಗಳಿಂದ ರಣದಲ್ಲಿ ಮುಚ್ಚಿದನು.

06080037a ಸ ಚ ತಂ ರಥಮುತ್ಸೃಜ್ಯ ಧೃಷ್ಟಕೇತುರ್ಮಹಾಮನಾಃ।
06080037c ಆರುರೋಹ ತತೋ ಯಾನಂ ಶತಾನೀಕಸ್ಯ ಮಾರಿಷ।।

ಮಾರಿಷ! ಮಹಾಮನ ಧೃಷ್ಟಕೇತುವಾದರೋ ತನ್ನ ರಥವನ್ನು ತೊರೆದು ಶತಾನೀಕನ ರಥವನ್ನೇರಿದನು.

06080038a ಚಿತ್ರಸೇನೋ ವಿಕರ್ಣಶ್ಚ ರಾಜನ್ದುರ್ಮರ್ಷಣಸ್ತಥಾ।
06080038c ರಥಿನೋ ಹೇಮಸನ್ನಾಹಾಃ ಸೌಭದ್ರಮಭಿದುದ್ರುವುಃ।।

ರಾಜನ್! ಚಿತ್ರಸೇನ, ವಿಕರ್ಣ ಮತ್ತು ದುರ್ಮರ್ಷಣರು ಬಂಗಾರದ ರಥಗಳಲ್ಲಿ ಸೌಭದ್ರನನ್ನು ಎದುರಿಸಿದರು.

06080039a ಅಭಿಮನ್ಯೋಸ್ತತಸ್ತೈಸ್ತು ಘೋರಂ ಯುದ್ಧಮವರ್ತತ।
06080039c ಶರೀರಸ್ಯ ಯಥಾ ರಾಜನ್ವಾತಪಿತ್ತಕಫೈಸ್ತ್ರಿಭಿಃ।।

ರಾಜನ್! ಶರೀರವು ವಾತ-ಪಿತ್ತ-ಕಫ ಈ ಮೂರರೊಡನೆ ಹೋರಾಡುವಂತೆ ಅಭಿಮನ್ಯುವು ಅವರೊಡನೆ ಘೋರ ಯುದ್ಧ ಮಾಡಿದನು.

06080040a ವಿರಥಾಂಸ್ತವ ಪುತ್ರಾಂಸ್ತು ಕೃತ್ವಾ ರಾಜನ್ಮಹಾಹವೇ।
06080040c ನ ಜಘಾನ ನರವ್ಯಾಘ್ರಃ ಸ್ಮರನ್ಭೀಮವಚಸ್ತದಾ।।

ರಾಜನ್! ಆ ನರವ್ಯಾಘ್ರನು ನಿನ್ನ ಪುತ್ರರನ್ನು ಮಹಾಹವದಲ್ಲಿ ವಿರಥರನ್ನಾಗಿ ಮಾಡಿ ಭೀಮನ ವಚನವನ್ನು ಸ್ಮರಿಸಿಕೊಂಡು ಅವರನ್ನು ಕೊಲ್ಲಲಿಲ್ಲ.

06080041a ತತೋ ರಾಜ್ಞಾಂ ಬಹುಶತೈರ್ಗಜಾಶ್ವರಥಯಾಯಿಭಿಃ।
06080041c ಸಂವೃತಂ ಸಮರೇ ಭೀಷ್ಮಂ ದೇವೈರಪಿ ದುರಾಸದಂ।।
06080042a ಪ್ರಯಾಂತಂ ಶೀಘ್ರಮುದ್ವೀಕ್ಷ್ಯ ಪರಿತ್ರಾತುಂ ಸುತಾಂಸ್ತವ।
06080042c ಅಭಿಮನ್ಯುಂ ಸಮುದ್ದಿಶ್ಯ ಬಾಲಮೇಕಂ ಮಹಾರಥಂ।
06080042e ವಾಸುದೇವಮುವಾಚೇದಂ ಕೌಂತೇಯಃ ಶ್ವೇತವಾಹನಃ।।

ಆಗ ಅನೇಕ ರಾಜರಿಂದ, ನೂರಾರು ಗಜಾಶ್ವರಥಸೇನೆಗಳಿಂದ ಸಂವೃತನಾಗಿ ಸಮರದಲ್ಲಿ ದೇವತೆಗಳಿಗೂ ದುರಾಸದನಾದ ಭೀಷ್ಮನು ನಿನ್ನ ಪುತ್ರರನ್ನು ರಕ್ಷಿಸಲು ಶೀಘ್ರವಾಗಿ ಮಹಾರಥ, ಬಾಲಕ, ಅಭಿಮನ್ಯುವೊಬ್ಬನನ್ನೇ ಗುರಿಯಾಗಿಟ್ಟುಕೊಂಡು ಹೋಗುತ್ತಿರಲು ಶ್ವೇತವಾಹನ ಕೌಂತೇಯನು ವಾಸುದೇವನಿಗೆ ಇದನ್ನು ಹೇಳಿದನು:

06080043a ಚೋದಯಾಶ್ವಾನ್ ಹೃಷೀಕೇಶ ಯತ್ರೈತೇ ಬಹುಲಾ ರಥಾಃ।
06080043c ಏತೇ ಹಿ ಬಹವಃ ಶೂರಾಃ ಕೃತಾಸ್ತ್ರಾ ಯುದ್ಧದುರ್ಮದಾಃ।
06080043e ಯಥಾ ನ ಹನ್ಯುರ್ನಃ ಸೇನಾಂ ತಥಾ ಮಾಧವ ಚೋದಯ।।

“ಹೃಷೀಕೇಶ! ಮಾಧವ! ಆ ಅನೇಕ ರಥಗಳು, ಅನೇಕ ಶೂರ, ಕೃತಾಸ್ತ್ರ, ಯುದ್ಧ ದುರ್ಮದರು ಎಲ್ಲಿದ್ದಾರೋ ಅಲ್ಲಿಗೆ, ಅವರು ಸೇನೆಗಳನ್ನು ಸಂಹರಿಸುವ ಮೊದಲೇ ಕುದುರೆಗಳನ್ನು ಓಡಿಸು!”

06080044a ಏವಮುಕ್ತಃ ಸ ವಾರ್ಷ್ಣೇಯಃ ಕೌಂತೇಯೇನಾಮಿತೌಜಸಾ।
06080044c ರಥಂ ಶ್ವೇತಹಯೈರ್ಯುಕ್ತಂ ಪ್ರೇಷಯಾಮಾಸ ಸಂಯುಗೇ।।
06080045a ನಿಷ್ಟಾನಕೋ ಮಹಾನಾಸೀತ್ತವ ಸೈನ್ಯಸ್ಯ ಮಾರಿಷ।
06080045c ಯದರ್ಜುನೋ ರಣೇ ಕ್ರುದ್ಧಃ ಸಮ್ಯಾತಸ್ತಾವಕಾನ್ಪ್ರತಿ।।

ಹೀಗೆ ಅಮಿತೌಜಸ ಕೌಂತೇಯನು ಹೇಳಲು ಸಂಯುಗದಲ್ಲಿ ವಾರ್ಷ್ಣೇಯನು ಶ್ವೇತಹಯಗಳನ್ನು ಕಟ್ಟಿದ್ದ ರಥವನ್ನು ನಿನ್ನ ಮಹಾಸೇನೆಯಿರುವಲ್ಲಿಗೆ ಕೊಂಡೊಯ್ದನು. ರಣದಲ್ಲಿ ಕ್ರುದ್ಧನಾಗಿರುವ ಅರ್ಜುನನು ನಿನ್ನವರನ್ನು ಸಮೀಪಿಸಿದನು.

06080046a ಸಮಾಸಾದ್ಯ ತು ಕೌಂತೇಯೋ ರಾಜ್ಞಸ್ತಾನ್ಭೀಷ್ಮರಕ್ಷಿಣಃ।
06080046c ಸುಶರ್ಮಾಣಮಥೋ ರಾಜನ್ನಿದಂ ವಚನಮಬ್ರವೀತ್।।

ರಾಜನ್! ಭೀಷ್ಮನನ್ನು ರಕ್ಷಿಸುತ್ತಿದ್ದ ಆ ರಾಜರ ಬಳಿ ಹೋಗಿ ಕೌಂತೇಯನು ಸುಶರ್ಮಣನಿಗೆ ಹೀಗೆ ಹೇಳಿದನು.

06080047a ಜಾನಾಮಿ ತ್ವಾಂ ಯುಧಿ ಶ್ರೇಷ್ಠಮತ್ಯಂತಂ ಪೂರ್ವವೈರಿಣಂ।
06080047c ಪರ್ಯಾಯಸ್ಯಾದ್ಯ ಸಂಪ್ರಾಪ್ತಂ ಫಲಂ ಪಶ್ಯ ಸುದಾರುಣಂ।
06080047e ಅದ್ಯ ತೇ ದರ್ಶಯಿಷ್ಯಾಮಿ ಪೂರ್ವಪ್ರೇತಾನ್ಪಿತಾಮಹಾನ್।।

“ನೀನು ಯುದ್ಧದಲ್ಲಿ ಅತ್ಯಂತ ಶ್ರೇಷ್ಠನೆಂದೂ ಬಹುಕಾಲದಿಂದ ನೀನು ನನಗೆ ವೈರಿಯೆಂದು ತಿಳಿದಿರುತ್ತೇನೆ. ನಮಗೆ ಮಾಡಿದ ಮೋಸಗಳ ಸುದಾರುಣ ಫಲವನ್ನು ಇಂದು ನೋಡು! ಇಂದು ನಿನಗೆ ನಿನ್ನ ಪೂರ್ವ ಪಿತಾಮಹರ ದರ್ಶನ ಮಾಡಿಸುತ್ತೇನೆ.”

06080048a ಏವಂ ಸಂಜಲ್ಪತಸ್ತಸ್ಯ ಬೀಭತ್ಸೋಃ ಶತ್ರುಘಾತಿನಃ।
06080048c ಶ್ರುತ್ವಾಪಿ ಪರುಷಂ ವಾಕ್ಯಂ ಸುಶರ್ಮಾ ರಥಯೂಥಪಃ।
06080048e ನ ಚೈನಮಬ್ರವೀತ್ಕಿಂ ಚಿಚ್ಚುಭಂ ವಾ ಯದಿ ವಾಶುಭಂ।।

ಹೀಗೆ ಶತ್ರುಘಾತಿ ಬೀಭತ್ಸುವು ಹೇಳುತ್ತಿದ್ದುದನ್ನು ಕೇಳಿಯೂ ರಥಯೂಥಪ ಸುಶರ್ಮನು ಪೌರುಷದ ಮಾತುಗಳನ್ನು ಏನನ್ನೂ ಶುಭವಾಗಲೀ ಅಶುಭವಾಗಲೀ ಆಡಲಿಲ್ಲ.

06080049a ಅಭಿ ಗತ್ವಾರ್ಜುನಂ ವೀರಂ ರಾಜಭಿರ್ಬಹುಭಿರ್ವೃತಃ।
06080049c ಪುರಸ್ತಾತ್ಪೃಷ್ಠತಶ್ಚೈವ ಪಾರ್ಶ್ವತಶ್ಚೈವ ಸರ್ವತಃ।।
06080050a ಪರಿವಾರ್ಯಾರ್ಜುನಂ ಸಂಖ್ಯೇ ತವ ಪುತ್ರೈಃ ಸಹಾನಘ।
06080050c ಶರೈಃ ಸಂಚಾದಯಾಮಾಸ ಮೇಘೈರಿವ ದಿವಾಕರಂ।।

ಅನಘ! ಅನೇಕ ರಾಜರಿಂದ ಆವೃತನಾಗಿ ವೀರ ಅರ್ಜುನನನ್ನು ಅವನು ಮುಂದಿನಿಂದ, ಹಿಂದಿನಿಂದ, ಬದಿಗಳಿಂದ ಮತ್ತು ಎಲ್ಲ ಕಡೆಗಳಿಂದ ಸುತ್ತುವರೆದು ಯುದ್ಧದಲ್ಲಿ ನಿನ್ನ ಪುತ್ರರೊಡನೆ ಅರ್ಜುನನನ್ನು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಶರಗಳಿಂದ ಮುಚ್ಚಿಬಿಟ್ಟನು.

06080051a ತತಃ ಪ್ರವೃತ್ತಃ ಸುಮಹಾನ್ಸಂಗ್ರಾಮಃ ಶೋಣಿತೋದಕಃ।
06080051c ತಾವಕಾನಾಂ ಚ ಸಮರೇ ಪಾಂಡವಾನಾಂ ಚ ಭಾರತ।।

ಆಗ ಭಾರತ! ನಿನ್ನವರ ಮತ್ತು ಪಾಂಡವರ ನಡುವೆ ಸಮರದಲ್ಲಿ ರಕ್ತದ ನೀರು ಹರಿದ ಮಹಾ ಸಂಗ್ರಾಮವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಪ್ತಮಯುದ್ಧದಿವಸೇ ಸುಶರ್ಮಾರ್ಜುನ ಸಮಾಗಮೇ ಅಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಪ್ತಮಯುದ್ಧದಿವಸದಲ್ಲಿ ಸುಶರ್ಮಾರ್ಜುನ ಸಮಾಗಮ ಎನ್ನುವ ಎಂಭತ್ತನೇ ಅಧ್ಯಾಯವು.