079 ದ್ವಂದ್ವಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 79

ಸಾರ

ಧೃತರಾಷ್ಟನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸಂಜಯನು ಯುದ್ಧದ ವರ್ಣನೆಯನ್ನು ಮುಂದುವರಿಸಿದುದು (1-11). ಅವಂತಿಯ ವಿಂದಾನುವಿಂದರು ಮತ್ತು ಇರಾವಾನನ ನಡುವೆ ಯುದ್ಧ (12-23). ಘಟೋತ್ಕಚ-ಭಗದತ್ತರ ಯುದ್ಧ (24-41). ಶಲ್ಯ ಮತ್ತು ನಕುಲ-ಸಹದೇವರ ಯುದ್ಧ (42-55).

06079001 ಧೃತರಾಷ್ಟ್ರ ಉವಾಚ।
06079001a ಬಹೂನೀಹ ವಿಚಿತ್ರಾಣಿ ದ್ವೈರಥಾನಿ ಸ್ಮ ಸಂಜಯ।
06079001c ಪಾಂಡೂನಾಂ ಮಾಮಕೈಃ ಸಾರ್ಧಮಶ್ರೌಷಂ ತವ ಜಲ್ಪತಃ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಪಾಂಡವರ ಮತ್ತು ನನ್ನವರ ನಡುವೆ ನಡೆದ ಅನೇಕ ವಿಚಿತ್ರ ದ್ವೈರಥಯುದ್ಧಗಳ ಕುರಿತು ನೀನು ಹೇಳಿದ ವಿವರಣೆಯನ್ನು ನಾನು ಕೇಳಿದೆ.

06079002a ನ ಚೈವ ಮಾಮಕಂ ಕಂ ಚಿದ್ಧೃಷ್ಟಂ ಶಂಸಸಿ ಸಂಜಯ।
06079002c ನಿತ್ಯಂ ಪಾಂಡುಸುತಾನ್ ಹೃಷ್ಟಾನಭಗ್ನಾಂಶ್ಚೈವ ಶಂಸಸಿ।।

ಸಂಜಯ! ಆದರೆ ನೀನು ನನಗೆ ಇದೂವರೆಗೆ ನನ್ನವರ ಒಳ್ಳೆಯದರ ಕುರಿತು ಏನನ್ನೂ ಹೇಳಿಲ್ಲ. ಯಾವಾಗಲೂ ಪಾಂಡುಸುತರು ಹೃಷ್ಟರಾಗಿದ್ದುದನ್ನೂ ಅವರು ಅಭಗ್ನರೆನ್ನುವುದನ್ನೂ ಹೇಳುತ್ತಿರುವೆ.

06079003a ಜೀಯಮಾನಾನ್ವಿಮನಸೋ ಮಾಮಕಾನ್ವಿಗತೌಜಸಃ।
06079003c ವದಸೇ ಸಂಯುಗೇ ಸೂತ ದಿಷ್ಟಮೇತದಸಂಶಯಂ।।

ನನ್ನವರು ವಿಮನಸ್ಕರಾಗಿದ್ದರು, ಪರಾಕ್ರಮ ಹೀನರಾಗಿದ್ದರು ಮತ್ತು ಸಂಯುಗದಲ್ಲಿ ಅವರಿಂದ ಪರಾಜಿತರಾದರು ಎಂದೇ ಹೇಳುತ್ತಿರುವೆ. ಸೂತ! ಇದು ದೈವವೇ ಎನ್ನುವುದರಲ್ಲಿ ಸಂಶಯವಿಲ್ಲ.”

06079004 ಸಂಜಯ ಉವಾಚ।
06079004a ಯಥಾಶಕ್ತಿ ಯಥೋತ್ಸಾಹಂ ಯುದ್ಧೇ ಚೇಷ್ಟಂತಿ ತಾವಕಾಃ।
06079004c ದರ್ಶಯಾನಾಃ ಪರಂ ಶಕ್ತ್ಯಾ ಪೌರುಷಂ ಪುರುಷರ್ಷಭ।।

ಸಂಜಯನು ಹೇಳಿದನು: “ಪುರುಷರ್ಷಭ! ನಿನ್ನವರು ಯಥಾಶಕ್ತಿಯಾಗಿ ಯಥೋತ್ಸಾಹದಿಂದ ಪರಮ ಶಕ್ತಿ ಪೌರುಷಗಳನ್ನು ತೋರಿಸುತ್ತಾ ಯುದ್ಧಮಾಡುತ್ತಿದ್ದರು.

06079005a ಗಂಗಾಯಾಃ ಸುರನದ್ಯಾ ವೈ ಸ್ವಾದುಭೂತಂ ಯಥೋದಕಂ।
06079005c ಮಹೋದಧಿಗುಣಾಭ್ಯಾಸಾಲ್ಲವಣತ್ವಂ ನಿಗಚ್ಛತಿ।।

ಸುರನದಿ ಗಂಗೆಯ ನೀರು ಸಿಹಿಯಾಗಿದ್ದರೂ ಸಮುದ್ರವನ್ನು ಸೇರಿದಾಗ ಅದರ ಗುಣವು ಲವಣತ್ವವನ್ನು ಹೊಂದುತ್ತದೆ.

06079006a ತಥಾ ತತ್ಪೌರುಷಂ ರಾಜಂಸ್ತಾವಕಾನಾಂ ಮಹಾತ್ಮನಾಂ।
06079006c ಪ್ರಾಪ್ಯ ಪಾಂಡುಸುತಾನ್ವೀರಾನ್ವ್ಯರ್ಥಂ ಭವತಿ ಸಂಯುಗೇ।।

ಹಾಗೆಯೇ ರಾಜನ್! ಮಹಾತ್ಮರಾದ ನಿನ್ನವರು ಪೌರುಷದಿಂದಿದ್ದರೂ ಸಂಯುಗದಲ್ಲಿ ವೀರ ಪಾಂಡುಸುತರನ್ನು ಎದುರಿಸಿದ ಕೂಡಲೇ ಅದು ವ್ಯರ್ಥವಾಗಿ ಬಿಡುತ್ತಿದೆ.

06079007a ಘಟಮಾನಾನ್ಯಥಾಶಕ್ತಿ ಕುರ್ವಾಣಾನ್ಕರ್ಮ ದುಷ್ಕರಂ।
06079007c ನ ದೋಷೇಣ ಕುರುಶ್ರೇಷ್ಠ ಕೌರವಾನ್ಗಂತುಮರ್ಹಸಿ।।

ಕುರುಶ್ರೇಷ್ಠ! ಅವರು ಸಂಘಟಿತರಾಗಿ ಯಥಾಶಕ್ತಿಯಾಗಿಯೇ ದುಷ್ಕರ ಕರ್ಮವನ್ನು ಮಾಡುತ್ತಿದ್ದಾರೆ. ಆದುದರಿಂದ ದೋಷವು ಆ ಕೌರವರಿಗೆ ಹೋಗಬಾರದು.

06079008a ತವಾಪರಾಧಾತ್ಸುಮಹಾನ್ಸಪುತ್ರಸ್ಯ ವಿಶಾಂ ಪತೇ।
06079008c ಪೃಥಿವ್ಯಾಃ ಪ್ರಕ್ಷಯೋ ಘೋರೋ ಯಮರಾಷ್ಟ್ರವಿವರ್ಧನಃ।।

ವಿಶಾಂಪತೇ! ನಿನ್ನ ಮತ್ತು ನಿನ್ನ ಮಗನ ಮಹಾ ಅಪರಾಧದಿಂದ ಯಮರಾಷ್ಟ್ರವನ್ನು ವರ್ಧಿಸುವ ಈ ಘೋರ ಪ್ರಕ್ಷಯವು ಭೂಮಿಯ ಮೇಲೆ ನಡೆಯುತ್ತಿದೆ.

06079009a ಆತ್ಮದೋಷಾತ್ಸಮುತ್ಪನ್ನಂ ಶೋಚಿತುಂ ನಾರ್ಹಸೇ ನೃಪ।
06079009c ನ ಹಿ ರಕ್ಷಂತಿ ರಾಜಾನಃ ಸರ್ವಾರ್ಥಾನ್ನಾಪಿ ಜೀವಿತಂ।।

ನೃಪ! ನಿನ್ನದೇ ದೋಷದಿಂದ ಉಂಟಾಗಿರುವುದರ ಕುರಿತು ಶೋಕಿಸಿ ಏನು ಪ್ರಯೋಜನ? ಏಕೆಂದರೆ ಈ ರಾಜರ ಜೀವಿತವನ್ನು ಈಗ ಏನೂ ರಕ್ಷಿಸಲಾರದು.

06079010a ಯುದ್ಧೇ ಸುಕೃತಿನಾಂ ಲೋಕಾನಿಚ್ಛಂತೋ ವಸುಧಾಧಿಪಾಃ।
06079010c ಚಮೂಂ ವಿಗಾಹ್ಯ ಯುಧ್ಯಂತೇ ನಿತ್ಯಂ ಸ್ವರ್ಗಪರಾಯಣಾಃ।।

ಈ ವಸುಧಾಧಿಪರು ಯುದ್ಧದಲ್ಲಿ ಪುಣ್ಯವಂತರ ಲೋಕಗಳನ್ನು ಇಚ್ಛಿಸುತ್ತಿದ್ದಾರೆ. ನಿತ್ಯವೂ ಸ್ವರ್ಗಪರಾಯಣರಾಗಿ ಶತ್ರುಸೇನೆಗಳನ್ನು ನುಗ್ಗಿ ಯುದ್ಧಮಾಡುತ್ತಿದ್ದಾರೆ.

06079011a ಪೂರ್ವಾಹ್ಣೇ ತು ಮಹಾರಾಜ ಪ್ರಾವರ್ತತ ಜನಕ್ಷಯಃ।
06079011c ತನ್ಮಮೈಕಮನಾ ಭೂತ್ವಾ ಶೃಣು ದೇವಾಸುರೋಪಮಂ।।

ಮಹಾರಾಜ! ಪೂರ್ವಾಹ್ಣದಲ್ಲಿ ಬಹಳ ಜನಕ್ಷಯವಾಯಿತು. ಏಕಾಗ್ರಚಿತ್ತನಾಗಿ ದೇವಾಸುರರ ನಡುವೆ ನಡೆದಂತಿದ್ದ ಅದರ ಕುರಿತು ಕೇಳು.

06079012a ಆವಂತ್ಯೌ ತು ಮಹೇಷ್ವಾಸೌ ಮಹಾತ್ಮಾನೌ ಮಹಾಬಲೌ।
06079012c ಇರಾವಂತಮಭಿಪ್ರೇಕ್ಷ್ಯ ಸಮೇಯಾತಾಂ ರಣೋತ್ಕಟೌ।
06079012e ತೇಷಾಂ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣಂ।।

ಅವಂತಿಯ ಮಹೇಷ್ವಾಸ ಮಹಾತ್ಮ ಮಹಾಬಲರಿಬ್ಬರೂ ಇರಾವಾನನನ್ನು ನೋಡಿ ರಣೋತ್ಕಟರಾಗಿ ಒಟ್ಟಿಗೇ ಎದುರಿಸಿದರು. ಅವರ ಮಧ್ಯೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.

06079013a ಇರಾವಾಂಸ್ತು ಸುಸಂಕ್ರುದ್ಧೋ ಭ್ರಾತರೌ ದೇವರೂಪಿಣೌ।
06079013c ವಿವ್ಯಾಧ ನಿಶಿತೈಸ್ತೂರ್ಣಂ ಶರೈಃ ಸನ್ನತಪರ್ವಭಿಃ।
06079013e ತಾವೇನಂ ಪ್ರತ್ಯವಿಧ್ಯೇತಾಂ ಸಮರೇ ಚಿತ್ರಯೋಧಿನೌ।।

ಸಂಕ್ರುದ್ಧ ಇರಾವಾನನು ದೇವರೂಪಿ ಸಹೋದರರನ್ನು ತಕ್ಷಣವೇ ನಿಶಿತ ಸನ್ನತಪರ್ವ ಶರಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಸಮರದಲ್ಲಿ ಚಿತ್ರಯೋಧಿಗಳು ಅವನನ್ನು ಹೊಡೆದರು.

06079014a ಯುಧ್ಯತಾಂ ಹಿ ತಥಾ ರಾಜನ್ವಿಶೇಷೋ ನ ವ್ಯದೃಶ್ಯತ।
06079014c ಯತತಾಂ ಶತ್ರುನಾಶಾಯ ಕೃತಪ್ರತಿಕೃತೈಷಿಣಾಂ।।

ರಾಜನ್! ಶತ್ರುನಾಶಕ್ಕೆ ಪ್ರಯತ್ನಿಸುತ್ತಾ, ಪ್ರಹಾರ ಪ್ರತಿಪ್ರಹಾರಗಳನ್ನು ಮಾಡುತ್ತಾ ಹಾಗೆ ಯುದ್ಧಮಾಡುತ್ತಿದ್ದ ಅವರಲ್ಲಿ ವಿಶೇಷ ಅಂತರವೇನೂ ಕಾಣಲಿಲ್ಲ.

06079015a ಇರಾವಾಂಸ್ತು ತತೋ ರಾಜನ್ನನುವಿಂದಸ್ಯ ಸಾಯಕೈಃ।
06079015c ಚತುರ್ಭಿಶ್ಚತುರೋ ವಾಹಾನನಯದ್ಯಮಸಾದನಂ।।

ರಾಜನ್! ಆಗ ಇರಾವಾನನು ನಾಲ್ಕು ಬಾಣಗಳಿಂದ ಅನುವಿಂದನ ರಥದ ನಾಲ್ಕೂ ಕುದುರೆಗಳನ್ನು ಯಮಾಲಯಕ್ಕೆ ಕಳುಹಿಸಿಕೊಟ್ಟನು.

06079016a ಭಲ್ಲಾಭ್ಯಾಂ ಚ ಸುತೀಕ್ಷ್ಣಾಭ್ಯಾಂ ಧನುಃ ಕೇತುಂ ಚ ಮಾರಿಷ।
06079016c ಚಿಚ್ಛೇದ ಸಮರೇ ರಾಜಂಸ್ತದದ್ಭುತಮಿವಾಭವತ್।।

ಮಾರಿಷ! ಎರಡು ಸುತೀಕ್ಷ್ಣ ಭಲ್ಲಗಳಿಂದ ಅವನ ಧನುಸ್ಸನ್ನೂ ಧ್ವಜವನ್ನೂ ಸಮರದಲ್ಲಿ ಕತ್ತರಿಸಿದನು. ರಾಜನ್! ಅದು ಅದ್ಭುತವಾಗಿತ್ತು.

06079017a ತ್ಯಕ್ತ್ವಾನುವಿಂದೋಽಥ ರಥಂ ವಿಂದಸ್ಯ ರಥಮಾಸ್ಥಿತಃ।
06079017c ಧನುರ್ಗೃಹೀತ್ವಾ ನವಮಂ ಭಾರಸಾಧನಮುತ್ತಮಂ।।

ಆಗ ಅನುವಿಂದನು ಹೊಸತಾದ ಭಾರಸಾಧನ ಉತ್ತಮ ಧನುಸ್ಸನ್ನು ಹಿಡಿದು ವಿಂದನ ರಥವನ್ನೇರಿದನು.

06079018a ತಾವೇಕಸ್ಥೌ ರಣೇ ವೀರಾವಾವಂತ್ಯೌ ರಥಿನಾಂ ವರೌ।
06079018c ಶರಾನ್ಮುಮುಚತುಸ್ತೂರ್ಣಮಿರಾವತಿ ಮಹಾತ್ಮನಿ।।

ಅವರಿಬ್ಬರು ಅವಂತಿಯ ವೀರರೂ ರಥಿಗಳಲ್ಲಿ ಶ್ರೇಷ್ಠರೂ ಒಂದೇ ರಥದಲ್ಲಿದ್ದುಕೊಂಡು ಮಹಾತ್ಮ ಇರಾವಂತನ ಮೇಲೆ ಬೇಗ ಶರಗಳನ್ನು ಪ್ರಯೋಗಿಸಿದರು.

06079019a ತಾಭ್ಯಾಂ ಮುಕ್ತಾ ಮಹಾವೇಗಾಃ ಶರಾಃ ಕಾಂಚನಭೂಷಣಾಃ।
06079019c ದಿವಾಕರಪಥಂ ಪ್ರಾಪ್ಯ ಚಾದಯಾಮಾಸುರಂಬರಂ।।

ಅವರು ಬಿಟ್ಟ ಮಹಾವೇಗದ ಕಾಂಚನಭೂಷಣ ಶರಗಳು ದಿವಾಕರನ ಪಥವನ್ನು ಅನುಸರಿಸಿ ಆಕಾಶವನ್ನೆಲ್ಲಾ ತುಂಬಿದವು.

06079020a ಇರಾವಾಂಸ್ತು ತತಃ ಕ್ರುದ್ಧೋ ಭ್ರಾತರೌ ತೌ ಮಹಾರಥೌ।
06079020c ವವರ್ಷ ಶರವರ್ಷೇಣ ಸಾರಥಿಂ ಚಾಪ್ಯಪಾತಯತ್।।

ಆಗ ಇರಾವಂತನು ಕ್ರುದ್ಧನಾಗಿ ಆ ಮಹಾರಥ ಸಹೋದರರಿಬ್ಬರ ಮೇಲೆ ಶರವರ್ಷವನ್ನು ಸುರಿಸಿ ಸಾರಥಿಯನ್ನು ಬೀಳಿಸಿದನು.

06079021a ತಸ್ಮಿನ್ನಿಪತಿತೇ ಭೂಮೌ ಗತಸತ್ತ್ವೇಽಥ ಸಾರಥೌ।
06079021c ರಥಃ ಪ್ರದುದ್ರಾವ ದಿಶಃ ಸಮುದ್ಭ್ರಾಂತಹಯಸ್ತತಃ।।

ಪ್ರಾಣಕಳೆದುಕೊಂಡು ಸಾರಥಿಗಳಿಬ್ಬರೂ ಭೂಮಿಯ ಮೇಲೆ ಬೀಳಲು ಭ್ರಾಂತಗೊಂಡ ಕುದುರೆಗಳು ರಥವನ್ನು ದಿಕ್ಕು ದಿಕ್ಕುಗಳಿಗೆ ಕೊಂಡೊಯ್ದವು.

06079022a ತೌ ಸ ಜಿತ್ವಾ ಮಹಾರಾಜ ನಾಗರಾಜಸುತಾಸುತಃ।
06079022c ಪೌರುಷಂ ಖ್ಯಾಪಯಂಸ್ತೂರ್ಣಂ ವ್ಯಧಮತ್ತವ ವಾಹಿನೀಂ।।

ಮಹಾರಾಜ! ನಾಗರಾಜನ ಮಗಳ ಮಗನಾದ ಅವನು ಅವರಿಬ್ಬರನ್ನು ಪರಾಜಯಗೊಳಿಸಿ ತನ್ನ ಪೌರುಷವನ್ನು ಪ್ರಕಟಪಡಿಸುತ್ತಾ ನಿನ್ನ ಸೇನೆಯನ್ನು ನಾಶಪಡಿಸತೊಡಗಿದನು.

06079023a ಸಾ ವಧ್ಯಮಾನಾ ಸಮರೇ ಧಾರ್ತರಾಷ್ಟ್ರೀ ಮಹಾಚಮೂಃ।
06079023c ವೇಗಾನ್ಬಹುವಿಧಾಂಶ್ಚಕ್ರೇ ವಿಷಂ ಪೀತ್ವೇವ ಮಾನವಃ।।

ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿದ್ದ ಧಾರ್ತರಾಷ್ಟ್ರನ ಮಹಾಸೇನೆಯು ವಿಷಪಾನಮಾಡಿದ ಮನುಷ್ಯನಂತೆ ಬಹುವಿಧವಾಗಿ ನಡೆದುಕೊಂಡಿತು.

06079024a ಹೈಡಿಂಬೋ ರಾಕ್ಷಸೇಂದ್ರಸ್ತು ಭಗದತ್ತಂ ಸಮಾದ್ರವತ್।
06079024c ರಥೇನಾದಿತ್ಯವರ್ಣೇನ ಸಧ್ವಜೇನ ಮಹಾಬಲಃ।।

ಆದಿತ್ಯವರ್ಣದ ರಥದಲ್ಲಿ, ಧ್ವಜದೊಂದಿಗೆ ಮಹಾಬಲ ರಾಕ್ಷಸೇಂದ್ರ ಹೈಡಿಂಬನು ಭಗದತ್ತನನ್ನು ಎದುರಿಸಿದನು.

06079025a ತತಃ ಪ್ರಾಗ್ಜ್ಯೋತಿಷೋ ರಾಜಾ ನಾಗರಾಜಂ ಸಮಾಸ್ಥಿತಃ।
06079025c ಯಥಾ ವಜ್ರಧರಃ ಪೂರ್ವಂ ಸಂಗ್ರಾಮೇ ತಾರಕಾಮಯೇ।।

ಆಗ ಹಿಂದೆ ತಾರಕಮಯಸಂಗ್ರಾಮದಲ್ಲಿ ವಜ್ರಧರನಂತೆ ಪ್ರಾಗ್ಜ್ಯೋತಿಷದ ರಾಜನು ಗಜರಾಜನನ್ನೇರಿದನು.

06079026a ತತ್ರ ದೇವಾಃ ಸಗಂಧರ್ವಾ ಋಷಯಶ್ಚ ಸಮಾಗತಾಃ।
06079026c ವಿಶೇಷಂ ನ ಸ್ಮ ವಿವಿದುರ್ಹೈಡಿಂಬಭಗದತ್ತಯೋಃ।।

ಅಲ್ಲಿ ಗಂಧರ್ವ-ಋಷಿಗಳೊಂದಿಗೆ ಸೇರಿದ್ದ ದೇವತೆಗಳು ಹೈಡಿಂಬ ಭಗದತ್ತರ ನಡುವೆ ಯಾವ ವ್ಯತ್ಯಾಸವನ್ನೂ ಕಾಣಲಿಲ್ಲ.

06079027a ಯಥಾ ಸುರಪತಿಃ ಶಕ್ರಸ್ತ್ರಾಸಯಾಮಾಸ ದಾನವಾನ್।
06079027c ತಥೈವ ಸಮರೇ ರಾಜಂಸ್ತ್ರಾಸಯಾಮಾಸ ಪಾಂಡವಾನ್।।

ಸುರಪತಿ ಶಕ್ರನು ಹೇಗೆ ದಾನವರನ್ನು ಕಾಡಿದನೋ ಹಾಗೆ ಸಮರದಲ್ಲಿ ರಾಜನು ಪಾಂಡವರನ್ನು ಪೀಡಿಸಿದನು.

06079028a ತೇನ ವಿದ್ರಾವ್ಯಮಾಣಾಸ್ತೇ ಪಾಂಡವಾಃ ಸರ್ವತೋದಿಶಂ।
06079028c ತ್ರಾತಾರಂ ನಾಭ್ಯವಿಂದಂತ ಸ್ವೇಷ್ವನೀಕೇಷು ಭಾರತ।।

ಭಾರತ! ಅವನಿಂದ ಗಾಯಗೊಂಡ ಪಾಂಡವರು ತ್ರಾತಾರನಿಲ್ಲದೇ ತಮ್ಮ ಸೇನೆಯಲ್ಲಿ ಸರ್ವದಿಶಗಳಲ್ಲಿ ಓಡತೊಡಗಿದರು.

06079029a ಭೈಮಸೇನಿಂ ರಥಸ್ಥಂ ತು ತತ್ರಾಪಶ್ಯಾಮ ಭಾರತ।
06079029c ಶೇಷಾ ವಿಮನಸೋ ಭೂತ್ವಾ ಪ್ರಾದ್ರವಂತ ಮಹಾರಥಾಃ।।

ಭಾರತ! ಅಲ್ಲಿ ರಥದಲ್ಲಿದ್ದ ಭೈಮಸೇನಿಯು ವಿಮನಸ್ಕರಾಗಿ ಓಡುತ್ತಿದ್ದ ಉಳಿದ ಮಹಾರಥರನ್ನು ನೋಡಿದನು.

06079030a ನಿವೃತ್ತೇಷು ತು ಪಾಂಡೂನಾಂ ಪುನಃ ಸೈನ್ಯೇಷು ಭಾರತ।
06079030c ಆಸೀನ್ನಿಷ್ಟಾನಕೋ ಘೋರಸ್ತವ ಸೈನ್ಯೇಷು ಸಂಯುಗೇ।।

ಭಾರತ! ಪುನಃ ಪಾಂಡವರ ಸೈನ್ಯವು ಮರಳಿ ಬರಲು ಅಲ್ಲಿ ಅವರು ಮತ್ತು ನಿಮ್ಮವರ ಸೇನೆಗಳ ಮಧ್ಯೆ ಘೋರ ಯುದ್ಧವು ನಡೆಯಿತು.

06079031a ಘಟೋತ್ಕಚಸ್ತತೋ ರಾಜನ್ಭಗದತ್ತಂ ಮಹಾರಣೇ।
06079031c ಶರೈಃ ಪ್ರಚ್ಛಾದಯಾಮಾಸ ಮೇರುಂ ಗಿರಿಮಿವಾಂಬುದಃ।।

ರಾಜನ್! ಆಗ ಘಟೋತ್ಕಚನು ಮಹಾರಣದಲ್ಲಿ ಭಗದತ್ತನನ್ನು ಮೋಡವು ಮೇರುಗಿರಿಯನ್ನು ಹೇಗೋ ಹಾಗೆ ಶರಗಳಿಂದ ಮುಚ್ಚತೊಡಗಿದನು.

06079032a ನಿಹತ್ಯ ತಾಂ ಶರಾನ್ರಾಜಾ ರಾಕ್ಷಸಸ್ಯ ಧನುಶ್ಚ್ಯುತಾನ್।
06079032c ಭೈಮಸೇನಿಂ ರಣೇ ತೂರ್ಣಂ ಸರ್ವಮರ್ಮಸ್ವತಾಡಯತ್।।

ತಕ್ಷಣವೇ ರಾಜನು ರಾಕ್ಷಸನ ಧನುಸ್ಸಿನಿಂದ ಬಂದ ಆ ಶರಗಳನ್ನು ನಾಶಪಡಿಸಿ ರಣದಲ್ಲಿ ಭೈಮಸೇನಿಯ ಎಲ್ಲ ಮರ್ಮಸ್ಥಾನಗಳಿಗೂ ಹೊಡೆದನು.

06079033a ಸ ತಾಡ್ಯಮಾನೋ ಬಹುಭಿಃ ಶರೈಃ ಸನ್ನತಪರ್ವಭಿಃ।
06079033c ನ ವಿವ್ಯಥೇ ರಾಕ್ಷಸೇಂದ್ರೋ ಭಿದ್ಯಮಾನ ಇವಾಚಲಃ।।

ಅನೇಕ ಸನ್ನತಪರ್ವ ಶರಗಳಿಂದ ಹೊಡೆಯುಲ್ಪಟ್ಟರೂ ಭೇದಿಸಲ್ಪಡುವ ಪರ್ವತದಂತೆ ರಾಕ್ಷಸೇಂದ್ರನು ನಿಂತಲ್ಲಿಂದ ಚಲಿಸಲಿಲ್ಲ.

06079034a ತಸ್ಯ ಪ್ರಾಗ್ಜ್ಯೋತಿಷಃ ಕ್ರುದ್ಧಸ್ತೋಮರಾನ್ಸ ಚತುರ್ದಶ।
06079034c ಪ್ರೇಷಯಾಮಾಸ ಸಮರೇ ತಾಂಶ್ಚ ಚಿಚ್ಛೇದ ರಾಕ್ಷಸಃ।।

ಆಗ ಕ್ರುದ್ಧ ಪ್ರಾಗ್ಜ್ಯೋತಿಷನು ಹದಿನಾಲ್ಕು ತೋಮರಗಳನ್ನು ಅವನ ಮೇಲೆ ಪ್ರಯೋಗಿಸಲು ಅವುಗಳನ್ನೂ ಸಮರದಲ್ಲಿ ರಾಕ್ಷಸನು ತುಂಡರಿಸಿದನು.

06079035a ಸ ತಾಂಶ್ಚಿತ್ತ್ವಾ ಮಹಾಬಾಹುಸ್ತೋಮರಾನ್ನಿಶಿತೈಃ ಶರೈಃ।
06079035c ಭಗದತ್ತಂ ಚ ವಿವ್ಯಾಧ ಸಪ್ತತ್ಯಾ ಕಂಕಪತ್ರಿಭಿಃ।।

ಆ ಮಹಾಬಾಹುವು ನಿಶಿತ ಶರಗಳಿಂದ ಆ ತೋಮರಗಳನ್ನು ಕತ್ತರಿಸಿ ಏಳು ಕಂಕಪತ್ರಿಗಳಿಂದ ಭಗದತ್ತನನ್ನೂ ಹೊಡೆದನು.

06079036a ತತಃ ಪ್ರಾಗ್ಜ್ಯೋತಿಷೋ ರಾಜನ್ಪ್ರಹಸನ್ನಿವ ಭಾರತ।
06079036c ತಸ್ಯಾಶ್ವಾಂಶ್ಚತುರಃ ಸಂಖ್ಯೇ ಪಾತಯಾಮಾಸ ಸಾಯಕೈಃ।।

ಆಗ ರಾಜನ್! ಭಾರತ! ಪ್ರಾಗ್ಜ್ಯೋತಿಷದ ರಾಜನು ನಕ್ಕು ಸಾಯಕಗಳಿಂದ ಯುದ್ಧದಲ್ಲಿ ಅವನ ನಾಲ್ಕೂ ಕುದುರೆಗಳನ್ನೂ ಸಂಹರಿಸಿದನು.

06079037a ಸ ಹತಾಶ್ವೇ ರಥೇ ತಿಷ್ಠನ್ರಾಕ್ಷಸೇಂದ್ರಃ ಪ್ರತಾಪವಾನ್।
06079037c ಶಕ್ತಿಂ ಚಿಕ್ಷೇಪ ವೇಗೇನ ಪ್ರಾಗ್ಜ್ಯೋತಿಷಗಜಂ ಪ್ರತಿ।।

ಕುದುರೆಗಳು ಹತವಾದರೂ ರಥದಲ್ಲಿಯೇ ನಿಂತು ಪ್ರತಾಪವಾನ್ ರಾಕ್ಷಸೇಂದ್ರನು ವೇಗದಿಂದ ಪ್ರಾಗ್ಜ್ಯೋತಿಷನ ಆನೆಯ ಮೇಲೆ ಶಕ್ತಿಯನ್ನು ಎಸೆದನು.

06079038a ತಾಮಾಪತಂತೀಂ ಸಹಸಾ ಹೇಮದಂಡಾಂ ಸುವೇಗಿತಾಂ।
06079038c ತ್ರಿಧಾ ಚಿಚ್ಛೇದ ನೃಪತಿಃ ಸಾ ವ್ಯಕೀರ್ಯತ ಮೇದಿನೀಂ।।

ಮೇಲೆ ಬೀಳುತ್ತಿದ್ದ ಸುವೇಗದ ಹೇಮದಂಡ ಶಕ್ತಿಯನ್ನು ನೃಪತಿಯು ಮೂರು ತುಂಡುಗಳನ್ನಾಗಿ ಮಾಡಿ ನೆಲದ ಮೇಲೆ ಹರಡಿದನು.

06079039a ಶಕ್ತಿಂ ವಿನಿಹತಾಂ ದೃಷ್ಟ್ವಾ ಹೈಡಿಂಬಃ ಪ್ರಾದ್ರವದ್ಭಯಾತ್।
06079039c ಯಥೇಂದ್ರಸ್ಯ ರಣಾತ್ಪೂರ್ವಂ ನಮುಚಿರ್ದೈತ್ಯಸತ್ತಮಃ।।

ಶಕ್ತಿಯು ನಾಶವಾದುದನ್ನು ನೋಡಿ ಹೈಡಿಂಬನು, ಹಿಂದೆ ಹೇಗೆ ದೈತ್ಯಸತ್ತಮ ನಮುಚಿಯು ಇಂದ್ರನಿಂದ ಓಡಿಹೋಗಿದ್ದನೋ ಹಾಗೆ ಭಯದಿಂದ ಪಲಾಯನಗೈದನು.

06079040a ತಂ ವಿಜಿತ್ಯ ರಣೇ ಶೂರಂ ವಿಕ್ರಾಂತಂ ಖ್ಯಾತಪೌರುಷಂ।
06079040c ಅಜೇಯಂ ಸಮರೇ ರಾಜನ್ಯಮೇನ ವರುಣೇನ ಚ।।
06079041a ಪಾಂಡವೀಂ ಸಮರೇ ಸೇನಾಂ ಸಮ್ಮಮರ್ದ ಸಕುಂಜರಃ।
06079041c ಯಥಾ ವನಗಜೋ ರಾಜನ್ಮೃದ್ನಂಶ್ಚರತಿ ಪದ್ಮಿನೀಂ।।

ರಣದಲ್ಲಿ ಆ ಶೂರ, ವಿಕ್ರಾಂತ, ಖ್ಯಾತಪೌರುಷ, ಸಮರದಲ್ಲಿ ಯಮ-ವರುಣರಿಂದಲೂ ಅಜೇಯನನ್ನು ಸೋಲಿಸಿ ಅವನು ವನಗಜವು ಪದ್ಮಗಳಿರುವ ಸರೋವರವನ್ನು ಧ್ವಂಸಮಾಡುವಂತೆ ತನ್ನ ಆನೆಯೊಂದಿಗೆ ಪಾಂಡವೀ ಸೇನೆಯನ್ನು ಮರ್ದಿಸಿದನು.

06079042a ಮದ್ರೇಶ್ವರಸ್ತು ಸಮರೇ ಯಮಾಭ್ಯಾಂ ಸಹ ಸಂಗತಃ।
06079042c ಸ್ವಸ್ರೀಯೌ ಚಾದಯಾಂ ಚಕ್ರೇ ಶರೌಘೈಃ ಪಾಂಡುನಂದನೌ।।

ಮದ್ರೇಶ್ವರನಾದರೋ ಸಮರದಲ್ಲಿ ತಂಗಿಯ ಮಕ್ಕಳಾದ ಪಾಂಡುನಂದನರು ಯಮಳರೊಂದಿಗೆ ಯುದ್ಧವನ್ನು ನಡೆಸಿದನು.

06079043a ಸಹದೇವಸ್ತು ಸಮರೇ ಮಾತುಲಂ ವೀಕ್ಷ್ಯ ಸಂಗತಂ।
06079043c ಅವಾರಯಚ್ಚರೌಘೇಣ ಮೇಘೋ ಯದ್ವದ್ದಿವಾಕರಂ।।

ಸಮರದಲ್ಲಿ ಸಹದೇವನಾದರೋ ಮಾವನನ್ನು ನೋಡಿ ಮೇಘಗಳು ದಿವಾಕರನನ್ನು ಹೇಗೋ ಹಾಗೆ ಶರಗಣಗಳಿಂದ ಅವನನ್ನು ಮುಚ್ಚಿದನು.

06079044a ಚಾದ್ಯಮಾನಃ ಶರೌಘೇಣ ಹೃಷ್ಟರೂಪತರೋಽಭವತ್।
06079044c ತಯೋಶ್ಚಾಪ್ಯಭವತ್ಪ್ರೀತಿರತುಲಾ ಮಾತೃಕಾರಣಾತ್।।

ಶರೌಘಗಳಿಂದ ಮುಚ್ಚಲ್ಪಟ್ಟಿದ್ದರೂ ಅವನು ಹೃಷ್ಟರೂಪನಾಗಿಯೇ ಇದ್ದನು. ತಾಯಿಯ ಕಾರಣದಿಂದ ಅವರಿಗೂ ತಮ್ಮ ಮಾವನ ಮೇಲೆ ಪ್ರೀತಿಯಿತ್ತು.

06079045a ತತಃ ಪ್ರಹಸ್ಯ ಸಮರೇ ನಕುಲಸ್ಯ ಮಹಾರಥಃ।
06079045c ಅಶ್ವಾನ್ವೈ ಚತುರೋ ರಾಜಂಶ್ಚತುರ್ಭಿಃ ಸಾಯಕೋತ್ತಮೈಃ।
06079045e ಪ್ರೇಷಯಾಮಾಸ ಸಮರೇ ಯಮಸ್ಯ ಸದನಂ ಪ್ರತಿ।।

ರಾಜನ್! ಆಗ ಸಮರದಲ್ಲಿ ಆ ಮಹಾರಥನು ನಕುಲನ ನಾಲ್ಕೂ ಕುದುರೆಗಳನ್ನು ನಾಲ್ಕು ಉತ್ತಮ ಸಾಯಕಗಳಿಂದ ಹೊಡೆದು ಯಮಸದನದ ಕಡೆ ಕಳುಹಿಸಿದನು.

06079046a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಮಹಾರಥಃ।
06079046c ಆರುರೋಹ ತತೋ ಯಾನಂ ಭ್ರಾತುರೇವ ಯಶಸ್ವಿನಃ।।

ಕುದುರೆಯು ಹತವಾಗಲು ತಕ್ಷಣವೇ ರಥದಿಂದ ಹಾರಿ ಮಹಾರಥ ಯಶಸ್ವಿಯು ಸಹೋದರನ ರಥವನ್ನೇ ಏರಿದನು.

06079047a ಏಕಸ್ಥೌ ತು ರಣೇ ಶೂರೌ ದೃಢೇ ವಿಕ್ಷಿಪ್ಯ ಕಾರ್ಮುಕೇ।
06079047c ಮದ್ರರಾಜರಥಂ ಕ್ರುದ್ಧೌ ಚಾದಯಾಮಾಸತುಃ ಕ್ಷಣಾತ್।।

ಒಂದೇ ಕಡೆ ನಿಂತು ಅವರಿಬ್ಬರು ಶೂರರೂ ದೃಢ ಧನುಸ್ಸನ್ನು ಎಳೆದು ಕ್ರುದ್ಧರಾಗಿ ಮದ್ರರಾಜನ ರಥವನ್ನು ಕ್ಷಣದಲ್ಲಿ ಮುಚ್ಚಿಬಿಟ್ಟರು.

06079048a ಸ ಚ್ಛಾದ್ಯಮಾನೋ ಬಹುಭಿಃ ಶರೈಃ ಸನ್ನತಪರ್ವಭಿಃ।
06079048c ಸ್ವಸ್ರೀಯಾಭ್ಯಾಂ ನರವ್ಯಾಘ್ರೋ ನಾಕಂಪತ ಯಥಾಚಲಃ।
06079048e ಪ್ರಹಸನ್ನಿವ ತಾಂ ಚಾಪಿ ಶರವೃಷ್ಟಿಂ ಜಘಾನ ಹ।।

ತಂಗಿಯ ಮಕ್ಕಳ ಅನೇಕ ಸನ್ನತಪರ್ವಗಳಿಂದ ಮುಚ್ಚಲ್ಪಟ್ಟಿರೂ ಪರ್ವತದಂತೆ ಆ ನರವ್ಯಾಘ್ರನು ಅಲುಗಾಡಲಿಲ್ಲ. ನಗುತ್ತಾ ಅವನೂ ಕೂಡ ಅವರ ಮೇಲೆ ಶರವೃಷ್ಟಿಯನ್ನು ಸುರಿಸಿದನು.

06079049a ಸಹದೇವಸ್ತತಃ ಕ್ರುದ್ಧಃ ಶರಮುದ್ಯಮ್ಯ ವೀರ್ಯವಾನ್।
06079049c ಮದ್ರರಾಜಮಭಿಪ್ರೇಕ್ಷ್ಯ ಪ್ರೇಷಯಾಮಾಸ ಭಾರತ।।

ಭಾರತ! ಆಗ ವೀರ್ಯವಾನ್ ಸಹದೇವನು ಕ್ರುದ್ಧನಾಗಿ ಶರವನ್ನು ಹೂಡಿ ಮದ್ರರಾಜನ ಮೇಲೆ ಪ್ರಯೋಗಿಸಿದನು.

06079050a ಸ ಶರಃ ಪ್ರೇಷಿತಸ್ತೇನ ಗರುತ್ಮಾನಿವ ವೇಗವಾನ್।
06079050c ಮದ್ರರಾಜಂ ವಿನಿರ್ಭಿದ್ಯ ನಿಪಪಾತ ಮಹೀತಲೇ।।

ಅವನಿಂದ ಬಿಡಲ್ಪಟ್ಟ ಆ ಶರವು ಗರುಡನಂತೆ ವೇಗವಾಗಿ ಹೋಗಿ ಮದ್ರರಾಜನನ್ನು ಭೇದಿಸಿ ಭೂಮಿಯ ಮೇಲೆ ಬಿದ್ದಿತು.

06079051a ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥೇ ಮಹಾರಥಃ।
06079051c ನಿಷಸಾದ ಮಹಾರಾಜ ಕಶ್ಮಲಂ ಚ ಜಗಾಮ ಹ।।

ಮಹಾರಾಜ! ಗಾಢವಾಗಿ ಗಾಯಗೊಂಡ ಆ ಮಹಾರಥನು ರಥದಲ್ಲಿಯೇ ಕುಳಿತುಕೊಂಡು, ಮೂರ್ಛಿತನಾದನು.

06079052a ತಂ ವಿಸಂಜ್ಞಂ ನಿಪತಿತಂ ಸೂತಃ ಸಂಪ್ರೇಕ್ಷ್ಯ ಸಂಯುಗೇ।
06079052c ಅಪೋವಾಹ ರಥೇನಾಜೌ ಯಮಾಭ್ಯಾಮಭಿಪೀಡಿತಂ।।

ಅವನು ಮೂರ್ಛಿತನಾಗಿ ಬಿದ್ದುದನ್ನು ಗಮನಿಸಿದ ಸೂತನು ಸಂಯುಗದಲ್ಲಿ ಯಮಳರಿಂದ ಪೀಡಿತನಾದ ಅವನ ರಥವನ್ನು ಆಚೆ ಕೊಂಡೊಯ್ದನು.

06079053a ದೃಷ್ಟ್ವಾ ಮದ್ರೇಶ್ವರರಥಂ ಧಾರ್ತರಾಷ್ಟ್ರಾಃ ಪರಾಙ್ಮುಖಂ।
06079053c ಸರ್ವೇ ವಿಮನಸೋ ಭೂತ್ವಾ ನೇದಮಸ್ತೀತ್ಯಚಿಂತಯನ್।।

ಹಿಂದೆ ಹೋಗುತ್ತಿದ್ದ ಮದ್ರೇಶ್ವರನ ರಥವನ್ನು ನೋಡಿ ಧಾರ್ತರಾಷ್ಟ್ರರೆಲ್ಲರೂ ವಿಮನಸ್ಕರಾಗಿ ಇವನು ಉಳಿಯುವುದಿಲ್ಲವೆಂದು ಚಿಂತಿಸಿದರು.

06079054a ನಿರ್ಜಿತ್ಯ ಮಾತುಲಂ ಸಂಖ್ಯೇ ಮಾದ್ರೀಪುತ್ರೌ ಮಹಾರಥೌ।
06079054c ದಧ್ಮತುರ್ಮುದಿತೌ ಶಂಖೌ ಸಿಂಹನಾದಂ ವಿನೇದತುಃ।।

ಯುದ್ಧದಲ್ಲಿ ಸೋದರ ಮಾವನನ್ನು ಸೋಲಿಸಿ ಮಹಾರಥ ಮಾದ್ರೀಪುತ್ರರು ಮುದಿತರಾಗಿ ಶಂಖಗಳನ್ನು ಊದಿದರು ಮತ್ತು ಸಿಂಹನಾದಗೈದರು.

06079055a ಅಭಿದುದ್ರುವತುರ್ಹೃಷ್ಟೌ ತವ ಸೈನ್ಯಂ ವಿಶಾಂ ಪತೇ।
06079055c ಯಥಾ ದೈತ್ಯಚಮೂಂ ರಾಜನ್ನಿಂದ್ರೋಪೇಂದ್ರಾವಿವಾಮರೌ।।

ವಿಶಾಂಪತೇ! ರಾಜನ್! ಅಮರರಾದ ಇಂದ್ರ-ಉಪೇಂದ್ರರು ದೈತ್ಯಸೇನೆಯನ್ನು ಹೇಗೋ ಹಾಗೆ ಅವರಿಬ್ಬರೂ ನಿನ್ನ ಸೈನ್ಯವನ್ನು ಹರ್ಷಿತರಾಗಿ ಬೆನ್ನಟ್ಟಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಂದ್ವಯುದ್ಧೇ ಏಕೋನಾಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ಎಪ್ಪತ್ತೊಂಭತ್ತನೇ ಅಧ್ಯಾಯವು.