076 ಭೀಷ್ಮದುರ್ಯೋಧನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 76

ಸಾರ

ದುರ್ಯೋಧನ-ಭೀಷ್ಮರ ಸಂವಾದ (1-12). ಕುರುಸೇನೆಯು ಪುನಃ ಯುದ್ಧಕ್ಕೆ ಹೊರಟಿದುದು (13-19).

06076001 ಸಂಜಯ ಉವಾಚ।
06076001a ಅಥ ಶೂರಾ ಮಹಾರಾಜ ಪರಸ್ಪರಕೃತಾಗಸಃ।
06076001c ಜಗ್ಮುಃ ಸ್ವಶಿಬಿರಾಣ್ಯೇವ ರುಧಿರೇಣ ಸಮುಕ್ಷಿತಾಃ।।

ಸಂಜಯನು ಹೇಳಿದನು: “ಮಹಾರಾಜ! ಪರಸ್ಪರರ ಅಪರಾಧಿಗಳಾಗಿ ಶೂರರು ರಕ್ತದಿಂದ ತೋಯ್ದು ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.

06076002a ವಿಶ್ರಮ್ಯ ಚ ಯಥಾನ್ಯಾಯಂ ಪೂಜಯಿತ್ವಾ ಪರಸ್ಪರಂ।
06076002c ಸನ್ನದ್ಧಾಃ ಸಮದೃಶ್ಯಂತ ಭೂಯೋ ಯುದ್ಧಚಿಕೀರ್ಷಯಾ।।

ಯಥಾನ್ಯಾಯವಾಗಿ ವಿಶ್ರಮಿಸಿ ಪರಸ್ಪರರನ್ನು ಗೌರವಿಸಿ ಪುನಃ ಯುದ್ಧಮಾಡಲು ಬಯಸಿ ಸನ್ನದ್ಧರಾಗುತ್ತಿರುವುದು ಕಂಡುಬಂದಿತು.

06076003a ತತಸ್ತವ ಸುತೋ ರಾಜಂಶ್ಚಿಂತಯಾಭಿಪರಿಪ್ಲುತಃ।
06076003c ವಿಸ್ರವಚ್ಚೋಣಿತಾಕ್ತಾಂಗಃ ಪಪ್ರಚ್ಛೇದಂ ಪಿತಾಮಹಂ।।

ರಾಜನ್! ಆಗ ಅಂಗಗಳಿಂದ ರಕ್ತವು ಸುರಿಯುತ್ತಿರಲು ನಿನ್ನ ಮಗನು ಚಿಂತೆಯಲ್ಲಿ ಮುಳುಗಿ ಪಿತಾಮಹನನ್ನು ಪ್ರಶ್ನಿಸಿದನು:

06076004a ಸೈನ್ಯಾನಿ ರೌದ್ರಾಣಿ ಭಯಾನಕಾನಿ ವ್ಯೂಢಾನಿ ಸಮ್ಯಗ್ಬಹುಲಧ್ವಜಾನಿ।
06076004c ವಿದಾರ್ಯ ಹತ್ವಾ ಚ ನಿಪೀಡ್ಯ ಶೂರಾಸ್ ತೇ ಪಾಂಡವಾನಾಂ ತ್ವರಿತಾ ರಥೌಘಾಃ।।

“ಅನೇಕ ಧ್ವಜಗಳಿರುವ, ಚೆನ್ನಾಗಿ ವ್ಯೂಹದಲ್ಲಿ ರಚಿತವಾಗಿರುವ ರೌದ್ರ ಭಯಾನಿಕ ಸೇನೆಯನ್ನೂ ಕೂಡ ಪಾಂಡವರು ಬೇಗನೇ ಭೇದಿಸಿ, ಪೀಡಿಸಿ, ರಥಗಳಲ್ಲಿ ಹೊರಟುಹೋಗುತ್ತಿದ್ದಾರೆ.

06076005a ಸಮ್ಮೋಹ್ಯ ಸರ್ವಾನ್ಯುಧಿ ಕೀರ್ತಿಮಂತೋ ವ್ಯೂಹಂ ಚ ತಂ ಮಕರಂ ವಜ್ರಕಲ್ಪಂ।
06076005c ಪ್ರವಿಶ್ಯ ಭೀಮೇನ ನಿಬರ್ಹಿತೋಽಸ್ಮಿ ಘೋರೈಃ ಶರೈರ್ಮೃತ್ಯುದಂಡಪ್ರಕಾಶೈಃ।।

ವಜ್ರದಂತಿರುವ ಮಕರವ್ಯೂಹವನ್ನು ಕೂಡ ಎಲ್ಲವನ್ನೂ ಸಮ್ಮೋಹಗೊಳಿಸಿ ಯುದ್ಧದಲ್ಲಿ ಕೀರ್ತಿಮಂತರಾಗಿದ್ದಾರೆ. ವ್ಯೂಹವನ್ನು ಪ್ರವೇಶಿಸಿದ ಭೀಮನ ಮೃತ್ಯುದಂಡದಂತೆ ಹೊಳೆಯುತ್ತಿದ್ದ ಘೋರ ಶರಗಳಿಂದ ಗಾಯಗೊಂಡಿದ್ದೇನೆ.

06076006a ಕ್ರುದ್ಧಂ ತಮುದ್ವೀಕ್ಷ್ಯ ಭಯೇನ ರಾಜನ್ ಸಮ್ಮೂರ್ಚಿತೋ ನಾಲಭಂ ಶಾಂತಿಮದ್ಯ।
06076006c ಇಚ್ಛೇ ಪ್ರಸಾದಾತ್ತವ ಸತ್ಯಸಂಧ ಪ್ರಾಪ್ತುಂ ಜಯಂ ಪಾಂಡವೇಯಾಂಶ್ಚ ಹಂತುಂ।।

ರಾಜನ್! ಕ್ರುದ್ಧನಾದ ಅವನನ್ನು ನೋಡಿಯೇ ಭಯದಿಂದ ನಾನು ಮೂರ್ಛಿತನಾಗುತ್ತೇನೆ. ಸತ್ಯಸಂಧ! ಇಂದು ನನಗೆ ಶಾಂತಿಯೇ ಇಲ್ಲದಾಗಿದೆ. ಕೇವಲ ನಿನ್ನ ಪ್ರಸಾದದಿಂದ ಪಾಂಡವೇಯರನ್ನು ಕೊಂದು ಜಯವನ್ನು ಗಳಿಸಲು ಶಕ್ಯನಾಗಿದ್ದೇನೆ.”

06076007a ತೇನೈವಮುಕ್ತಃ ಪ್ರಹಸನ್ಮಹಾತ್ಮಾ ದುರ್ಯೋಧನಂ ಜಾತಮನ್ಯುಂ ವಿದಿತ್ವಾ।
06076007c ತಂ ಪ್ರತ್ಯುವಾಚಾವಿಮನಾ ಮನಸ್ವೀ ಗಂಗಾಸುತಃ ಶಸ್ತ್ರಭೃತಾಂ ವರಿಷ್ಠಃ।।

ಅವನು ಹೀಗೆ ಹೇಳಲು ಮಹಾತ್ಮಾ ಮನಸ್ವೀ ಶಸ್ತ್ರಭೃತರಲ್ಲಿ ವರಿಷ್ಠ ಗಂಗಾಸುತನು ವಿನಯನಾಗಿ ಕೇಳಿಕೊಂಡರೂ ಅವನು ಕುಪಿತನಾಗಿದ್ದಾನೆಂದು ತಿಳಿದು ದುರ್ಯೋಧನನಿಗೆ ನಗುತ್ತಾ ಹೇಳಿದನು.

06076008a ಪರೇಣ ಯತ್ನೇನ ವಿಗಾಹ್ಯ ಸೇನಾಂ ಸರ್ವಾತ್ಮನಾಹಂ ತವ ರಾಜಪುತ್ರ।
06076008c ಇಚ್ಛಾಮಿ ದಾತುಂ ವಿಜಯಂ ಸುಖಂ ಚ ನ ಚಾತ್ಮಾನಂ ಚಾದಯೇಽಹಂ ತ್ವದರ್ಥೇ।।

“ರಾಜಪುತ್ರ! ಸೇನೆಯನ್ನು ಹೊಕ್ಕು ಸರ್ವಾತ್ಮದಿಂದ ನಿನಗೆ ವಿಜಯವನ್ನೂ ಸುಖವನ್ನೂ ಕೊಡಲು ಬಯಸಿ ಪರಮ ಪ್ರಯತ್ನವನ್ನು ಮಾಡುತ್ತಿದ್ದೇನೆ. ಅದರಿಂದಾಗಿ ನನ್ನ ರಕ್ಷಣೆಯ ಕುರಿತೂ ನಾನು ಯೋಚಿಸುತ್ತಿಲ್ಲ.

06076009a ಏತೇ ತು ರೌದ್ರಾ ಬಹವೋ ಮಹಾರಥಾ ಯಶಸ್ವಿನಃ ಶೂರತಮಾಃ ಕೃತಾಸ್ತ್ರಾಃ।
06076009c ಯೇ ಪಾಂಡವಾನಾಂ ಸಮರೇ ಸಹಾಯಾ ಜಿತಕ್ಲಮಾಃ ಕ್ರೋಧವಿಷಂ ವಮಂತಿ।।

ಸಮರದಲ್ಲಿ ಪಾಂಡವರ ಸಹಾಯಕ್ಕೆಂದು ಬಂದ ಅನೇಕ ಮಹಾರಥರು ರೌದ್ರರು, ಯಶಸ್ವಿಗಳು, ಶೂರತಮರು, ಕೃತಾಸ್ತ್ರರು, ಆಯಾಸವನ್ನು ಗೆದ್ದವರು ಮತ್ತು ಕ್ರೋಧವಿಷವನ್ನು ಕಾರುವವರು.

06076010a ತೇ ನೇಹ ಶಕ್ಯಾಃ ಸಹಸಾ ವಿಜೇತುಂ ವೀರ್ಯೋನ್ನದ್ಧಾಃ ಕೃತವೈರಾಸ್ತ್ವಯಾ ಚ।
06076010c ಅಹಂ ಹ್ಯೇತಾನ್ಪ್ರತಿಯೋತ್ಸ್ಯಾಮಿ ರಾಜನ್ ಸರ್ವಾತ್ಮನಾ ಜೀವಿತಂ ತ್ಯಜ್ಯ ವೀರ।।

ರಾಜನ್! ವೀರ! ನಿನ್ನೊಂದಿಗೆ ವೈರವನ್ನಿಟ್ಟುಕೊಂಡಿರುವ, ವೀರ್ಯದಿಂದ ಉನ್ಮತ್ತರಾಗಿರುವ ಅವರನ್ನು ಶೀಘ್ರವಾಗಿ ಸೋಲಿಸಲು ಶಕ್ಯವಿಲ್ಲ. ನಾನಾದರೋ ಮನಃಪೂರ್ವಕವಾಗಿ ಜೀವವನ್ನೇ ತೊರೆದು ಇವರೊಂದಿಗೆ ಯುದ್ಧ ಮಾಡುತ್ತಿದ್ದೇನೆ.

06076011a ರಣೇ ತವಾರ್ಥಾಯ ಮಹಾನುಭಾವ ನ ಜೀವಿತಂ ರಕ್ಷ್ಯತಮಂ ಮಮಾದ್ಯ।
06076011c ಸರ್ವಾಂಸ್ತವಾರ್ಥಾಯ ಸದೇವದೈತ್ಯಾಽಲ್ ಲೋಕಾನ್ದಹೇಯಂ ಕಿಮು ಶತ್ರೂಂಸ್ತವೇಹ।।

ಮಹಾನುಭಾವ! ನಿನಗೋಸ್ಕರವಾಗಿ ನಾನು ನನ್ನ ಜೀವವನ್ನು ರಕ್ಷಿಸಿಕೊಳ್ಳುವ ಆಸೆಯನ್ನಿಟ್ಟುಕೊಂಡಿಲ್ಲ. ನಿನಗೋಸ್ಕರವಾಗಿ ದೇವ-ದೈತ್ಯರೊಂದಿಗೆ ಸರ್ವಲೋಕಗಳನ್ನೂ ನಾನು ದಹಿಸಬಲ್ಲೆ. ಇನ್ನು ನಿನ್ನ ಈ ಶತ್ರುಗಳು ಯಾವ ಲೆಕ್ಕಕ್ಕೆ?

06076012a ತತ್ಪಾಂಡವಾನ್ಯೋಧಯಿಷ್ಯಾಮಿ ರಾಜನ್ ಪ್ರಿಯಂ ಚ ತೇ ಸರ್ವಮಹಂ ಕರಿಷ್ಯೇ।
06076012c ಶ್ರುತ್ವೈವ ಚೈತತ್ಪರಮಪ್ರತೀತೋ ದುರ್ಯೋಧನಃ ಪ್ರೀತಮನಾ ಬಭೂವ।।

ರಾಜನ್! ಆ ಪಾಂಡವರೊಡನೆಯೂ ಯುದ್ಧ ಮಾಡುತ್ತೇನೆ. ನಿನಗೆ ಪ್ರಿಯವಾದುದೆಲ್ಲವನ್ನೂ ನಾನು ಮಾಡುತ್ತೇನೆ.” ಅವನ ಆ ಮಾತುಗಳನ್ನು ಕೇಳಿ ದುರ್ಯೋಧನನು ಪರಮ ಪ್ರತೀತನಾದನು.

06076013a ಸರ್ವಾಣಿ ಸೈನ್ಯಾನಿ ತತಃ ಪ್ರಹೃಷ್ಟೋ ನಿರ್ಗಚ್ಛತೇತ್ಯಾಹ ನೃಪಾಂಶ್ಚ ಸರ್ವಾನ್।
06076013c ತದಾಜ್ಞಯಾ ತಾನಿ ವಿನಿರ್ಯಯುರ್ದ್ರುತಂ ರಥಾಶ್ವಪಾದಾತಗಜಾಯುತಾನಿ।।

ಆಗ ಪ್ರಹೃಷ್ಟನಾಗಿ ಎಲ್ಲ ಸೈನ್ಯಗಳಿಗೂ ಎಲ್ಲ ರಾಜರಿಗೂ “ಹೊರಡಿ!” ಎಂದು ಹೇಳಿದನು. ಅವನ ಆಜ್ಞಾನುಸಾರವಾಗಿ ಹತ್ತತ್ತು ಸಾವಿರ ರಥ-ಅಶ್ವ-ಪದಾತಿ-ಗಜಗಳಿಂದ ಕೂಡಿದ ಮಹಾಸೇನೆಯು ಹೊರಟಿತು.

06076014a ಪ್ರಹರ್ಷಯುಕ್ತಾನಿ ತು ತಾನಿ ರಾಜನ್ ಮಹಾಂತಿ ನಾನಾವಿಧಶಸ್ತ್ರವಂತಿ।
06076014c ಸ್ಥಿತಾನಿ ನಾಗಾಶ್ವಪದಾತಿಮಂತಿ ವಿರೇಜುರಾಜೌ ತವ ರಾಜನ್ಬಲಾನಿ।।

ರಾಜನ್! ನಾನಾವಿಧದ ಶಸ್ತ್ರಗಳನ್ನು ಹೊಂದಿದ್ದ, ನಾಗಾಶ್ವಪದಾತಿಗಳಿಂದ ತುಂಬಿದ್ದ ನಿನ್ನ ಸೇನೆಗಳು ಹರ್ಷಿತವಾಗಿದ್ದವು ಮತ್ತು ಬಹಳವಾಗಿ ರಾರಾಜಿಸುತ್ತಿದ್ದವು.

06076015a ವೃಂದೈಃ ಸ್ಥಿತಾಶ್ಚಾಪಿ ಸುಸಂಪ್ರಯುಕ್ತಾಶ್ ಚಕಾಶಿರೇ ದಂತಿಗಣಾಃ ಸಮಂತಾತ್।
06076015c ಶಸ್ತ್ರಾಸ್ತ್ರವಿದ್ಭಿರ್ನರದೇವ ಯೋಧೈರ್ ಅಧಿಷ್ಠಿತಾಃ ಸೈನ್ಯಗಣಾಸ್ತ್ವದೀಯಾಃ।।

ನರದೇವ! ನಿನ್ನ ಸೈನ್ಯಗಣಗಳು ಶಸ್ತ್ರಾಸ್ತ್ರಗಳನ್ನು ತಿಳಿದಿರುವ ಯೋಧರಿಂದ ನಿಯಂತ್ರಿಸಲ್ಪಟ್ಟಿದ್ದವು.

06076016a ರಥೈಶ್ಚ ಪಾದಾತಗಜಾಶ್ವಸಂಘೈಃ ಪ್ರಯಾದ್ಭಿರಾಜೌ ವಿಧಿವತ್ಪ್ರಣುನ್ನೈಃ।
06076016c ಸಮುದ್ಧತಂ ವೈ ತರುಣಾರ್ಕವರ್ಣಂ ರಜೋ ಬಭೌ ಚಾದಯತ್ಸೂರ್ಯರಶ್ಮೀನ್।।

ವಿಧಿವತ್ತಾಗಿ ಅನುಶಾಸಿತರಾಗಿ ರಣರಂಗಕ್ಕೆ ಪ್ರಯಾಣಮಾಡುತ್ತಿದ್ದ ರಥ-ಪದಾತಿ-ಗಜ-ಅಶ್ವ ಸಮೂಹಗಳಿಂದ ಮೇಲೆದ್ದ ಧೂಳು ಸೂರ್ಯನ ಕಿರಣಗಳನ್ನು ಮುಸುಕಿ ಬಾಲಸೂರ್ಯನ ರಶ್ಮಿಗಳಂತೆ ತೋರುತ್ತಿದ್ದವು.

06076017a ರೇಜುಃ ಪತಾಕಾ ರಥದಂತಿಸಂಸ್ಥಾ ವಾತೇರಿತಾ ಭ್ರಾಮ್ಯಮಾಣಾಃ ಸಮಂತಾತ್।
06076017c ನಾನಾರಂಗಾಃ ಸಮರೇ ತತ್ರ ರಾಜನ್ ಮೇಘೈರ್ಯುಕ್ತಾ ವಿದ್ಯುತಃ ಖೇ ಯಥೈವ।।

ರಾಜನ್! ರಥ ಮತ್ತು ಆನೆಗಳ ಮೇಲೆ ಕಟ್ಟಿದ್ದ ನಾನಾ ಬಣ್ಣದ ಪತಾಕೆಗಳು ಗಾಳಿಯಿಂದ ಬೀಸುತ್ತಾ ಎಲ್ಲ ಕಡೆಗಳಿಂದಲೂ ಸಮರದಲ್ಲಿ ಆಕಾಶದಲ್ಲಿ ಮೇಘಗಳಿಗೆ ತಾಗಿದ ಮಿಂಚುಗಳಂತೆ ಪ್ರಕಾಶಿಸುತ್ತಿದ್ದವು.

06076018a ಧನೂಂಷಿ ವಿಸ್ಫಾರಯತಾಂ ನೃಪಾಣಾಂ ಬಭೂವ ಶಬ್ದಸ್ತುಮುಲೋಽತಿಘೋರಃ।
06076018c ವಿಮಥ್ಯತೋ ದೇವಮಹಾಸುರೌಘೈರ್ ಯಥಾರ್ಣವಸ್ಯಾದಿಯುಗೇ ತದಾನೀಂ।।

ಟೇಂಕರಿಸುತ್ತಿದ್ದ ನೃಪರ ಧನುಸ್ಸುಗಳಿಂದ ಅತಿಘೋರ ತುಮುಲ ಶಬ್ಧವುಂಟಾಗುತ್ತಿತ್ತು. ಅದು ಆದಿಯುಗದಲ್ಲಿ ದೇವತೆಗಳೂ ಮಹಾಸುರರೂ ಸಾಗರವನ್ನು ಮಥಿಸುವಾಗ ಉಂಟಾದ ಶಬ್ಧದಂತಿತ್ತು.

06076019a ತದುಗ್ರನಾದಂ ಬಹುರೂಪವರ್ಣಂ ತವಾತ್ಮಜಾನಾಂ ಸಮುದೀರ್ಣಮೇವಂ।
06076019c ಬಭೂವ ಸೈನ್ಯಂ ರಿಪುಸೈನ್ಯಹಂತೃ ಯುಗಾಂತಮೇಘೌಘನಿಭಂ ತದಾನೀಂ।।

ಆ ಉಗ್ರನಾದದೊಂದಿಗೆ, ಬಹುಬಣ್ಣದ ರೂಪವುಳ್ಳ ನಿನ್ನ ಮಕ್ಕಳ ಆ ಸೇನೆಯು ರಿಪುಸೈನ್ಯಗಳನ್ನು ನಾಶಪಡಿಸುವ ಯುಗಾಂತದ ಘನ ಕಪ್ಪು ಮೋಡಗಳಂತೆ ಕಂಡಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮದುರ್ಯೋಧನಸಂವಾದೇ ಷಟ್ಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮದುರ್ಯೋಧನಸಂವಾದ ಎನ್ನುವ ಎಪ್ಪತ್ತಾರನೇ ಅಧ್ಯಾಯವು.