075 ಷಷ್ಠದಿವಸಾವಹಾರಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 75

ಸಾರ

ಭೀಮ-ದುರ್ಯೋಧನರ ಯುದ್ಧ (1-19). ಧೃತರಾಷ್ಟ್ರನ ಎಂಟು ಮಕ್ಕಳು ಮತ್ತು ಕೇಯಕರೊಂದಿಗೆ ಅಭಿಮನ್ಯು ಮತ್ತು ದ್ರೌಪದೇಯರ ಯುದ್ಧ (20-55). ಆರನೇ ದಿನದ ಯುದ್ಧ ಸಮಾಪ್ತಿ (56-59).

06075001 ಸಂಜಯ ಉವಾಚ।
06075001a ತತೋ ದುರ್ಯೋಧನೋ ರಾಜಾ ಲೋಹಿತಾಯತಿ ಭಾಸ್ಕರೇ।
06075001c ಸಂಗ್ರಾಮರಭಸೋ ಭೀಮಂ ಹಂತುಕಾಮೋಽಭ್ಯಧಾವತ।।

ಸಂಜಯನು ಹೇಳಿದನು: “ಆಗ ಭಾಸ್ಕರನು ಕೆಂಪಾಗುತ್ತಿರಲು ರಾಜಾ ದುರ್ಯೋಧನನು ಭೀಮನನ್ನು ಕೊಲ್ಲಲು ಬಯಸಿ ರಭಸದಿಂದ ಸಮರಕ್ಕೆ ಧಾವಿಸಿದನು.

06075002a ತಮಾಯಾಂತಮಭಿಪ್ರೇಕ್ಷ್ಯ ನೃವೀರಂ ದೃಢವೈರಿಣಂ।
06075002c ಭೀಮಸೇನಃ ಸುಸಂಕ್ರುದ್ಧ ಇದಂ ವಚನಮಬ್ರವೀತ್।।

ಆ ನರವೀರ ದೃಢವೈರಿಯು ಬರುತ್ತಿರುವುದನ್ನು ನೋಡಿ ತುಂಬಾ ಕ್ರುದ್ಧನಾದ ಭೀಮಸೇನನು ಈ ಮಾತುಗಳನ್ನಾಡಿದನು:

06075003a ಅಯಂ ಸ ಕಾಲಃ ಸಂಪ್ರಾಪ್ತೋ ವರ್ಷಪೂಗಾಭಿಕಾಂಕ್ಷಿತಃ।
06075003c ಅದ್ಯ ತ್ವಾಂ ನಿಹನಿಷ್ಯಾಮಿ ಯದಿ ನೋತ್ಸೃಜಸೇ ರಣಂ।।

“ಬಹಳ ವರ್ಷಗಳಿಂದ ಕಾಯುತ್ತಿದ್ದ ಸಮಯವು ಇಗೋ ಇಂದು ಬಂದೊದಗಿದೆ. ರಣವನ್ನು ಬಿಟ್ಟು ಓಡಿ ಹೋಗದೇ ಇದ್ದರೆ ಇಂದು ನಿನ್ನನ್ನು ಕೊಲ್ಲುತ್ತೇನೆ.

06075004a ಅದ್ಯ ಕುಂತ್ಯಾಃ ಪರಿಕ್ಲೇಶಂ ವನವಾಸಂ ಚ ಕೃತ್ಸ್ನಶಃ।
06075004c ದ್ರೌಪದ್ಯಾಶ್ಚ ಪರಿಕ್ಲೇಶಂ ಪ್ರಣೋತ್ಸ್ಯಾಮಿ ಹತೇ ತ್ವಯಿ।।

ಇಂದು ನಿನ್ನನ್ನು ಕೊಂದು ಕುಂತಿಯ ಪರಿಕ್ಲೇಶವನ್ನು, ಸಂಪೂರ್ಣ ವನವಾಸದ ಕಷ್ಟಗಳನ್ನು ಮತ್ತು ದ್ರೌಪದಿಯ ಪರಿಕ್ಲೇಶವನ್ನು ಕೊನೆಗೊಳಿಸುತ್ತೇನೆ.

06075005a ಯತ್ತ್ವಂ ದುರೋದರೋ ಭೂತ್ವಾ ಪಾಂಡವಾನವಮನ್ಯಸೇ।
06075005c ತಸ್ಯ ಪಾಪಸ್ಯ ಗಾಂಧಾರೇ ಪಶ್ಯ ವ್ಯಸನಮಾಗತಂ।।

ಗಾಂಧಾರೇ! ಅಸೂಯೆಗೊಳಗಾಗಿ ನೀನು ಪಾಂಡವರನ್ನು ಅಪಮಾನಿಸಿದ್ದೀಯೆ. ಆ ಪಾಪದಿಂದಲೇ ಬಂದಿರುವ ಈ ವ್ಯಸನವನ್ನು ನೋಡು.

06075006a ಕರ್ಣಸ್ಯ ಮತಮಾಜ್ಞಾಯ ಸೌಬಲಸ್ಯ ಚ ಯತ್ಪುರಾ।
06075006c ಅಚಿಂತ್ಯ ಪಾಂಡವಾನ್ಕಾಮಾದ್ಯಥೇಷ್ಟಂ ಕೃತವಾನಸಿ।।

ಕರ್ಣನ ಮತ್ತು ಸೌಬಲನ ಸಲಹೆಗಳಂತೆ ಹಿಂದೆ ನೀನು ಕಾಮದಿಂದ ಪಾಂಡವರ ಕುರಿತು ಯೋಚಿಸದೆಯೇ ಇಷ್ಟವಾದಂತೆ ಮಾಡಿದ್ದೆ.

06075007a ಯಾಚಮಾನಂ ಚ ಯನ್ಮೋಹಾದ್ದಾಶಾರ್ಹಮವಮನ್ಯಸೇ।
06075007c ಉಲೂಕಸ್ಯ ಸಮಾದೇಶಂ ಯದ್ದದಾಸಿ ಚ ಹೃಷ್ಟವತ್।।

ಬೇಡಿಕೊಂಡ ದಾಶಾರ್ಹನನ್ನು ಮೋಹದಿಂದ ಅಪಮಾನಿಸಿದ್ದೆ. ಉಲೂಕನ ಮೂಲಕ ಸಂದೇಶವನ್ನು ಕಳುಹಿಸಿ ಸಂತೋಷದಿಂದ ಯುದ್ಧವನ್ನು ಬಯಸಿ ಪ್ರಾರಂಭಿಸಿದೆ.

06075008a ಅದ್ಯ ತ್ವಾ ನಿಹನಿಷ್ಯಾಮಿ ಸಾನುಬಂಧಂ ಸಬಾಂಧವಂ।
06075008c ಸಮೀಕರಿಷ್ಯೇ ತತ್ಪಾಪಂ ಯತ್ಪುರಾ ಕೃತವಾನಸಿ।।

ಇಂದು ನಿನ್ನನ್ನು ಬಾಂಧವರು ಮತ್ತು ಅನುಯಾಯಿಗಳೊಂದಿಗೆ ಸಂಹರಿಸುತ್ತೇನೆ. ಹಿಂದೆ ನೀನು ಮಾಡಿದ ಪಾಪಕ್ಕೆ ಸುಡುತ್ತೇನೆ.”

06075009a ಏವಮುಕ್ತ್ವಾ ಧನುರ್ಘೋರಂ ವಿಕೃಷ್ಯೋದ್ಭ್ರಾಮ್ಯ ಚಾಸಕೃತ್।
06075009c ಸಮಾದಾಯ ಶರಾನ್ಘೋರಾನ್ಮಹಾಶನಿಸಮಪ್ರಭಾನ್।।

ಹೀಗೆ ಹೇಳಿ ಅವನು ಘೋರ ಧನುಸ್ಸನ್ನು ಎಳೆದು ಜೋರಾಗಿ ಟೇಂಕರಿಸಿ ಸೂರ್ಯನ ಕಿರಣಗಳಂತೆ ಹೊಳೆಯುತ್ತಿದ್ದ ಘೋರ ಶರಗಳನ್ನು ಹೂಡಿದನು.

06075010a ಷಡ್ವಿಂಶತ್ತರಸಾ ಕ್ರುದ್ಧೋ ಮುಮೋಚಾಶು ಸುಯೋಧನೇ।
06075010c ಜ್ವಲಿತಾಗ್ನಿಶಿಖಾಕಾರಾನ್ ವಜ್ರಕಲ್ಪಾನಜಿಹ್ಮಗಾನ್।।

ತಕ್ಷಣವೇ ಕ್ರುದ್ಧನಾಗಿ ಸುಯೋಧನನ ಮೇಲೆ ವಜ್ರಗಳಂತೆ ಮೊನಚಾಗಿದ್ದ, ಅಗ್ನಿಶಿಖರಗಳಂತೆ ಉರಿಯುತ್ತಿದ್ದ ಇಪ್ಪತ್ತಾರು ಬಾಣಗಳನ್ನು ಪ್ರಯೋಗಿಸಿದನು.

06075011a ತತೋಽಸ್ಯ ಕಾರ್ಮುಕಂ ದ್ವಾಭ್ಯಾಂ ಸೂತಂ ದ್ವಾಭ್ಯಾಂ ಚ ವಿವ್ಯಧೇ।
06075011c ಚತುರ್ಭಿರಶ್ವಾಂ ಜವನಾನನಯದ್ಯಮಸಾದನಂ।।

ಆಗ ಎರಡರಿಂದ ಅವನ ಬಿಲ್ಲನ್ನೂ ಎರಡರಿಂದ ಸೂತನನ್ನೂ ಹೊಡೆದು ನಾಲ್ಕರಿಂದ ಅವನ ಕುದುರೆಗಳನ್ನು ಯಮಸಾದನಕ್ಕೆ ಕಳುಹಿಸಿದನು.

06075012a ದ್ವಾಭ್ಯಾಂ ಚ ಸುವಿಕೃಷ್ಟಾಭ್ಯಾಂ ಶರಾಭ್ಯಾಮರಿಮರ್ದನಃ।
06075012c ಚತ್ರಂ ಚಿಚ್ಛೇದ ಸಮರೇ ರಾಜ್ಞಸ್ತಸ್ಯ ರಥೋತ್ತಮಾತ್।।

ಆ ಅರಿಮರ್ದನನು ತನ್ನ ಉತ್ತಮ ರಥದಿಂದ ಎರಡು ಶರಗಳನ್ನು ಪ್ರಯೋಗಿಸಿ ಸಮರದಲ್ಲಿ ರಾಜನ ಚತ್ರವನ್ನು ತುಂಡರಿಸಿದನು.

06075013a ತ್ರಿಭಿಶ್ಚ ತಸ್ಯ ಚಿಚ್ಛೇದ ಜ್ವಲಂತಂ ಧ್ವಜಮುತ್ತಮಂ।
06075013c ಚಿತ್ತ್ವಾ ತಂ ಚ ನನಾದೋಚ್ಚೈಸ್ತವ ಪುತ್ರಸ್ಯ ಪಶ್ಯತಃ।।

ಮತ್ತು ಮೂರು ಬಾಣಗಳಿಂದ ಪ್ರಜ್ವಲಿಸುತ್ತಿರುವ ಅವನ ಉತ್ತಮ ಧ್ವಜವನ್ನು ಕತ್ತರಿಸಿದನು. ಅದನ್ನು ಕತ್ತರಿಸಿ ನಿನ್ನ ಮಗನು ನೋಡುತ್ತಿದ್ದಂತೆಯೇ ಜೋರಾಗಿ ಗರ್ಜಿಸಿದನು.

06075014a ರಥಾಚ್ಚ ಸ ಧ್ವಜಃ ಶ್ರೀಮಾನ್ನಾನಾರತ್ನವಿಭೂಷಿತಃ।
06075014c ಪಪಾತ ಸಹಸಾ ಭೂಮಿಂ ವಿದ್ಯುಜ್ಜಲಧರಾದಿವ।।

ನಾನಾ ರತ್ನವಿಭೂಷಿತ ಆ ಶ್ರೀಮಾನ್ ಧ್ವಜವು ತಕ್ಷಣವೇ ರಥದಿಂದ ಮಿಂಚಿನಿಂದೊಡಗೂಡಿದ ಮೋಡದಂತೆ ನೆಲದ ಮೇಲೆ ಬಿದ್ದಿತು.

06075015a ಜ್ವಲಂತಂ ಸೂರ್ಯಸಂಕಾಶಂ ನಾಗಂ ಮಣಿಮಯಂ ಶುಭಂ।
06075015c ಧ್ವಜಂ ಕುರುಪತೇಶ್ಚಿನ್ನಂ ದದೃಶುಃ ಸರ್ವಪಾರ್ಥಿವಾಃ।।

ಕುರುಪತಿಯ ಆ ಸೂರ್ಯನಂತೆ ಬೆಳಗುತ್ತಿದ್ದ, ಆನೆಯ ಚಿಹ್ನೆಯಿದ್ದ ಮಣಿಮಯ ಶುಭ ಧ್ವಜವು ತುಂಡಾದುದನ್ನು ಸರ್ವ ಪಾರ್ಥಿವರೂ ನೋಡಿದರು.

06075016a ಅಥೈನಂ ದಶಭಿರ್ಬಾಣೈಸ್ತೋತ್ತ್ರೈರಿವ ಮಹಾಗಜಂ।
06075016c ಆಜಘಾನ ರಣೇ ಭೀಮಃ ಸ್ಮಯನ್ನಿವ ಮಹಾರಥಃ।।

ಆಗ ಆ ಮಹಾರಥ ಭೀಮನು ರಣದಲ್ಲಿ ನಗುತ್ತಾ ಹತ್ತು ಬಾಣಗಳಿಂದ ಮಹಾಗಜವನ್ನು ಅಂಕುಶದಿಂದ ಚುಚ್ಚುವಂತೆ ಅವನನ್ನು ಹೊಡೆದನು.

06075017a ತತಸ್ತು ರಾಜಾ ಸಿಂಧೂನಾಂ ರಥಶ್ರೇಷ್ಠೋ ಜಯದ್ರಥಃ।
06075017c ದುರ್ಯೋಧನಸ್ಯ ಜಗ್ರಾಹ ಪಾರ್ಷ್ಣಿಂ ಸತ್ಪುರುಷೋಚಿತಾಂ।।

ಆಗ ಸಿಂಧುಗಳ ರಾಜಾ ರಥಶ್ರೇಷ್ಠ ಜಯದ್ರಥನು ಸತ್ಪುರುಷರಿಗೆ ಉಚಿತವಾದಂತೆ ದುರ್ಯೋಧನನ ಪಾರ್ಷ್ಣಿಯನ್ನು ಹಿಡಿದುಕೊಂಡನು.

06075018a ಕೃಪಶ್ಚ ರಥಿನಾಂ ಶ್ರೇಷ್ಠಃ ಕೌರವ್ಯಮಮಿತೌಜಸಂ।
06075018c ಆರೋಪಯದ್ರಥಂ ರಾಜನ್ದುರ್ಯೋಧನಮಮರ್ಷಣಂ।।

ರಾಜನ್! ಆಗ ರಥಿಗಳಲ್ಲಿ ಶ್ರೇಷ್ಠ ಕೃಪನು ಅಮಿತೌಜಸ ಕೌರವ್ಯ ಅಮರ್ಷಣ ದುರ್ಯೋಧನನನ್ನು ತನ್ನ ರಥದ ಮೇಲೇರಿಸಿಕೊಂಡನು.

06075019a ಸ ಗಾಢವಿದ್ಧೋ ವ್ಯಥಿತೋ ಭೀಮಸೇನೇನ ಸಂಯುಗೇ।
06075019c ನಿಷಸಾದ ರಥೋಪಸ್ಥೇ ರಾಜಾ ದುರ್ಯೋಧನಸ್ತದಾ।।

ಆಗ ಸಂಯುಗದಲ್ಲಿ ಭೀಮಸೇನನಿಂದ ಗಾಢವಾಗಿ ಗಾಯಗೊಂಡ ದುರ್ಯೋಧನನು ವ್ಯಥಿತನಾಗಿ ರಥದಲ್ಲಿಯೇ ಕುಳಿತುಕೊಂಡನು.

06075020a ಪರಿವಾರ್ಯ ತತೋ ಭೀಮಂ ಹಂತುಕಾಮೋ ಜಯದ್ರಥಃ।
06075020c ರಥೈರನೇಕಸಾಹಸ್ರೈರ್ಭೀಮಸ್ಯಾವಾರಯದ್ದಿಶಃ।।

ಆಗ ಭೀಮನನ್ನು ಕೊಲ್ಲಲು ಬಯಸಿ ಜಯದ್ರಥನು ಅನೇಕ ಸಾವಿರ ರಥಗಳಿಂದ ಭೀಮನನ್ನು ಎಲ್ಲಕಡೆಗಳಿಂದಲೂ ಮುತ್ತಿಗೆ ಹಾಕಿದನು.

06075021a ಧೃಷ್ಟಕೇತುಸ್ತತೋ ರಾಜನ್ನಭಿಮನ್ಯುಶ್ಚ ವೀರ್ಯವಾನ್।
06075021c ಕೇಕಯಾ ದ್ರೌಪದೇಯಾಶ್ಚ ತವ ಪುತ್ರಾನಯೋಧಯನ್।।

ರಾಜನ್! ಆಗ ಧೃಷ್ಟಕೇತು, ವೀರ್ಯವಾನ್ ಅಭಿಮನ್ಯು, ಕೇಕಯರು ಮತ್ತು ದ್ರೌಪದೇಯರು ನಿನ್ನ ಪುತ್ರರನ್ನು ಎದುರಿಸಿ ಯುದ್ಧಮಾಡಿದರು.

06075022a ಚಿತ್ರಸೇನಃ ಸುಚಿತ್ರಶ್ಚ ಚಿತ್ರಾಶ್ವಶ್ಚಿತ್ರದರ್ಶನಃ।
06075022c ಚಾರುಚಿತ್ರಃ ಸುಚಾರುಶ್ಚ ತಥಾ ನಂದೋಪನಂದಕೌ।।
06075023a ಅಷ್ಟಾವೇತೇ ಮಹೇಷ್ವಾಸಾಃ ಸುಕುಮಾರಾ ಯಶಸ್ವಿನಃ।
06075023c ಅಭಿಮನ್ಯುರಥಂ ರಾಜನ್ಸಮಂತಾತ್ಪರ್ಯವಾರಯನ್।।

ರಾಜನ್! ಚಿತ್ರಸೇನ, ಸುಚಿತ್ರ, ಚಿತ್ರಾಶ್ವ, ಚಿತ್ರದರ್ಶನ, ಚಾರುಚಿತ್ರ, ಸುಚಾರು, ನಂದ, ಉಪನಂದ ಈ ಎಂಟು ಮಹೇಷ್ವಾಸ ಯಶಸ್ವಿ ಸುಕುಮಾರರು ಅಭಿಮನ್ಯುವಿನ ರಥವನ್ನು ಎಲ್ಲಕಡೆಗಳಿಂದಲೂ ಸುತ್ತುವರೆದರು.

06075024a ಆಜಘಾನ ತತಸ್ತೂರ್ಣಮಭಿಮನ್ಯುರ್ಮಹಾಮನಾಃ।
06075024c ಏಕೈಕಂ ಪಂಚಭಿರ್ವಿದ್ಧ್ವಾ ಶರೈಃ ಸಂನ್ನತಪರ್ವಭಿಃ।
06075024e ವಜ್ರಮೃತ್ಯುಪ್ರತೀಕಾಶೈರ್ವಿಚಿತ್ರಾಯುಧನಿಃಸೃತೈಃ।।

ಆಗ ಮಹಾಮನಸ್ವಿ ಅಭಿಮನ್ಯುವು ತಕ್ಷಣವೇ ಅವರಲ್ಲಿ ಒಬ್ಬೊಬ್ಬರನ್ನೂ ಭೋರ್ಗರೆಯುತ್ತಿರುವ ತನ್ನ ಚಿತ್ರ ಧನುಸ್ಸಿನಿಂದ ವಜ್ರಮೃತ್ಯುಸಮನಾಗಿರುವ ಐದೈದು ಸನ್ನತಪರ್ವಶರಗಳಿಂದ ಹೊಡೆದು ಗಾಯಗೊಳಿಸಿದನು.

06075025a ಅಮೃಷ್ಯಮಾಣಾಸ್ತೇ ಸರ್ವೇ ಸೌಭದ್ರಂ ರಥಸತ್ತಮಂ।
06075025c ವವರ್ಷುರ್ಮಾರ್ಗಣೈಸ್ತೀಕ್ಷ್ಣೈರ್ಗಿರಿಂ ಮೇರುಮಿವಾಂಬುದಾಃ।।

ಅದನ್ನು ಸಹಿಸಲಾರದೇ ಅವರೆಲ್ಲರೂ ರಥಸತ್ತಮ ಸೌಭದ್ರನ ಮೇಲೆ ಮೋಡಗಳು ಮೇರುವಿನ ಮೇಲೆ ಮಳೆ ಸುರಿಸುವಂತೆ ತೀಕ್ಷ್ಣ ಮಾರ್ಗಣಗಳ ಮಳೆಯನ್ನು ಸುರಿಸಿದರು.

06075026a ಸ ಪೀಡ್ಯಮಾನಃ ಸಮರೇ ಕೃತಾಸ್ತ್ರೋ ಯುದ್ಧದುರ್ಮದಃ।
06075026c ಅಭಿಮನ್ಯುರ್ಮಹಾರಾಜ ತಾವಕಾನ್ ಸಮಕಂಪಯತ್।
06075026e ಯಥಾ ದೇವಾಸುರೇ ಯುದ್ಧೇ ವಜ್ರಪಾಣಿರ್ಮಹಾಸುರಾನ್।।

ಮಹಾರಾಜ! ಸಮರದಲ್ಲಿ ಪೀಡಿತನಾದ ಆ ಕೃತಾಸ್ತ್ರ ಯುದ್ಧದುರ್ಮದ ಅಭಿಮನ್ಯುವು ದೇವಾಸುರರ ಯುದ್ಧದಲ್ಲಿ ವಜ್ರಪಾಣಿಯು ಮಹಾಸುರರನ್ನು ಹೇಗೋ ಹಾಗೆ ನಿನ್ನವರನ್ನು ನಡುಗುವಂತೆ ಮಾಡಿದನು.

06075027a ವಿಕರ್ಣಸ್ಯ ತತೋ ಭಲ್ಲಾನ್ಪ್ರೇಷಯಾಮಾಸ ಭಾರತ।
06075027c ಚತುರ್ದಶ ರಥಶ್ರೇಷ್ಠೋ ಘೋರಾನಾಶೀವಿಷೋಪಮಾನ್।
06075027e ಧ್ವಜಂ ಸೂತಂ ಹಯಾಂಶ್ಚಾಸ್ಯ ಚಿತ್ತ್ವಾ ನೃತ್ಯನ್ನಿವಾಹವೇ।।

ಭಾರತ! ಆಗ ಆ ರಥಶ್ರೇಷ್ಠನು ವಿಕರ್ಣನ ಮೇಲೆ ಘೋರ ಸರ್ಪಗಳ ವಿಷದಂತಿದ್ದ ಹದಿನಾಲ್ಕು ಭಲ್ಲಗಳನ್ನು ಪ್ರಯೋಗಿಸಿ, ಅವನ ದ್ವಜ, ಸಾರಥಿ, ಮತ್ತು ಕುದುರೆಗಳನ್ನು ತುಂಡರಿಸಿ ಯುದ್ಧದಲ್ಲಿ ನರ್ತಿಸಿದನು.

06075028a ಪುನಶ್ಚಾನ್ಯಾಂ ಶರಾನ್ಪೀತಾನಕುಂಠಾಗ್ರಾಂ ಶಿಲಾಶಿತಾನ್।
06075028c ಪ್ರೇಷಯಾಮಾಸ ಸೌಭದ್ರೋ ವಿಕರ್ಣಾಯ ಮಹಾಬಲಃ।।

ಪುನಃ ವಿಕರ್ಣನ ಮೇಲೆ ಮಹಾಬಲ ಸೌಭದ್ರನು ಅನ್ಯ ಶಿಲಾಶಿತ ಪೀತ ಕುಂಠಾಗ್ರ ಶರಗಳನ್ನು ಪ್ರಯೋಗಿಸಿದನು.

06075029a ತೇ ವಿಕರ್ಣಂ ಸಮಾಸಾದ್ಯ ಕಂಕಬರ್ಹಿಣವಾಸಸಃ।
06075029c ಭಿತ್ತ್ವಾ ದೇಹಂ ಗತಾ ಭೂಮಿಂ ಜ್ವಲಂತ ಇವ ಪನ್ನಗಾಃ।।

ಆ ಕಂಕಪುಕ್ಕಗಳನ್ನು ಹೊಂದಿದ್ದ ಶರಗಳು ವಿಕರ್ಣನಿಗೆ ತಾಗಿ ಅವನ ದೇಹವನ್ನು ಭೇದಿಸಿ ಭೂಮಿಯ ಮೇಲೆ ಉರಿಯುತ್ತಿರುವ ಪನ್ನಗಗಳಂತೆ ಬಿದ್ದವು.

06075030a ತೇ ಶರಾ ಹೇಮಪುಂಖಾಗ್ರಾ ವ್ಯದೃಶ್ಯಂತ ಮಹೀತಲೇ।
06075030c ವಿಕರ್ಣರುಧಿರಕ್ಲಿನ್ನಾ ವಮಂತ ಇವ ಶೋಣಿತಂ।।

ಆ ಹೇಮಪುಂಖಾಗ್ರ ಶರಗಳು ವಿಕರ್ಣನ ರಕ್ತವನ್ನು ಕುಡಿದು ಭೂಮಿಯಮೇಲೆ ಕಾರುತ್ತಿರುವಂತೆ ತೋರಿದವು.

06075031a ವಿಕರ್ಣಂ ವೀಕ್ಷ್ಯ ನಿರ್ಭಿನ್ನಂ ತಸ್ಯೈವಾನ್ಯೇ ಸಹೋದರಾಃ।
06075031c ಅಭ್ಯದ್ರವಂತ ಸಮರೇ ಸೌಭದ್ರಪ್ರಮುಖಾನ್ರಥಾನ್।।

ವಿಕರ್ಣನಿಗೆ ಗಾಯವಾದುದನ್ನು ನೋಡಿ ಅವನ ಅನ್ಯ ಸಹೋದರರು ಧಾವಿಸಿ ಸಮರದಲ್ಲಿ ಅಭಿಮನ್ಯುವಿನ ನಾಯಕತ್ವದಲ್ಲಿದ್ದ ರಥರನ್ನು ಎದುರಿಸಿದರು.

06075032a ಅಭಿಯಾತ್ವಾ ತಥೈವಾಶು ರಥಸ್ಥಾನ್ಸೂರ್ಯವರ್ಚಸಃ।
06075032c ಅವಿಧ್ಯನ್ಸಮರೇಽನ್ಯೋನ್ಯಂ ಸಂರಬ್ಧಾ ಯುದ್ಧದುರ್ಮದಾಃ।।

ಹೀಗೆ ಸೂರ್ಯವರ್ಚಸ ರಥಗಳಲ್ಲಿ ನಿಂತು ಆ ಯುದ್ಧದುರ್ಮದರು ಸಂರಬ್ಧರಾಗಿ ಬರಲು ಸಮರದಲ್ಲಿ ಅನ್ಯೋನ್ಯರನ್ನು ಹೊಡೆದರು.

06075033a ದುರ್ಮುಖಃ ಶ್ರುತಕರ್ಮಾಣಂ ವಿದ್ಧ್ವಾ ಸಪ್ತಭಿರಾಶುಗೈಃ।
06075033c ಧ್ವಜಮೇಕೇನ ಚಿಚ್ಛೇದ ಸಾರಥಿಂ ಚಾಸ್ಯ ಸಪ್ತಭಿಃ।।

ದುರ್ಮುಖನು ಶ್ರುತಕರ್ಮನನ್ನು ಏಳು ಆಶುಗಗಳಿಂದ ಹೊಡೆದು, ಧ್ವಜವನ್ನು ಒಂದರಿಂದಲೂ ಸಾರಥಿಯನ್ನು ಏಳರಿಂದಲೂ ತುಂಡರಿಸಿದನು.

06075034a ಅಶ್ವಾಂ ಜಾಂಬೂನದೈರ್ಜಾಲೈಃ ಪ್ರಚ್ಛನ್ನಾನ್ವಾತರಂಹಸಃ।
06075034c ಜಘಾನ ಷಡ್ಭಿರಾಸಾದ್ಯ ಸಾರಥಿಂ ಚಾಭ್ಯಪಾತಯತ್।।

ಕುದುರೆಗಳನ್ನು ಬಂಗಾರದ ಬಾಣಗಳ ಜಾಲಗಳಿಂದ ಮುಚ್ಚಿ ಕೊಂದನು ಮತ್ತು ಆರರಿಂದ ಅವನ ಸಾರಥಿಯನ್ನು ಬೀಳಿಸಿದನು.

06075035a ಸ ಹತಾಶ್ವೇ ರಥೇ ತಿಷ್ಠಂ ಶ್ರುತಕರ್ಮಾ ಮಹಾರಥಃ।
06075035c ಶಕ್ತಿಂ ಚಿಕ್ಷೇಪ ಸಂಕ್ರುದ್ಧೋ ಮಹೋಲ್ಕಾಂ ಜ್ವಲಿತಾಮಿವ।।

ಕುದುರೆಗಳು ಆ ರಥದಲ್ಲಿಯೇ ನಿಂತು ಮಹಾರಥ ಶ್ರುತಕರ್ಮನು ಸಂಕ್ರುದ್ಧನಾಗಿ ಮಹಾ ಉಲ್ಕೆಯಂತೆ ಉರಿಯುತ್ತಿರುವ ಶಕ್ತಿಯನ್ನು ಎಸೆದನು.

06075036a ಸಾ ದುರ್ಮುಖಸ್ಯ ವಿಪುಲಂ ವರ್ಮ ಭಿತ್ತ್ವಾ ಯಶಸ್ವಿನಃ।
06075036c ವಿದಾರ್ಯ ಪ್ರಾವಿಶದ್ಭೂಮಿಂ ದೀಪ್ಯಮಾನಾ ಸುತೇಜನಾ।।

ಅದು ಯಶಸ್ವಿ ದುರ್ಮುಖನ ಕವಚವನ್ನು ಸೀಳಿ ಒಳಹೊಕ್ಕು ತೇಜಸ್ಸಿನಿಂದ ಬೆಳಗುತ್ತಾ ಭೂಮಿಯನ್ನು ಪ್ರವೇಶಿಸಿತು.

06075037a ತಂ ದೃಷ್ಟ್ವಾ ವಿರಥಂ ತತ್ರ ಸುತಸೋಮೋ ಮಹಾಬಲಃ।
06075037c ಪಶ್ಯತಾಂ ಸರ್ವಸೈನ್ಯಾನಾಂ ರಥಮಾರೋಪಯತ್ಸ್ವಕಂ।।

ಅಲ್ಲಿ ವಿರಥನಾಗಿದ್ದ ಅವನನ್ನು ನೋಡಿ ಮಹಾಬಲ ಸುತಸೋಮನು ಸರ್ವ ಸೇನೆಗಳೂ ನೋಡುತ್ತಿದ್ದಂತೆ ಅವನನ್ನು ತನ್ನ ರಥದ ಮೇಲೇರಿಸಿಕೊಂಡನು.

06075038a ಶ್ರುತಕೀರ್ತಿಸ್ತಥಾ ವೀರೋ ಜಯತ್ಸೇನಂ ಸುತಂ ತವ।
06075038c ಅಭ್ಯಯಾತ್ಸಮರೇ ರಾಜನ್ ಹಂತುಕಾಮೋ ಯಶಸ್ವಿನಂ।।

ರಾಜನ್! ಆಗ ವೀರ ಶ್ರುತಕೀರ್ತಿಯು ನಿನ್ನ ಮಗ ಯಶಸ್ವಿ ಜಯತ್ಸೇನನನ್ನು ಕೊಲ್ಲಲು ಬಯಸಿ ಸಮರದಲ್ಲಿ ಅವನನ್ನು ಎದುರಿಸಿದನು.

06075039a ತಸ್ಯ ವಿಕ್ಷಿಪತಶ್ಚಾಪಂ ಶ್ರುತಕೀರ್ತೇರ್ಮಹಾತ್ಮನಃ।
06075039c ಚಿಚ್ಛೇದ ಸಮರೇ ರಾಜನ್ಜಯತ್ಸೇನಃ ಸುತಸ್ತವ।
06075039e ಕ್ಷುರಪ್ರೇಣ ಸುತೀಕ್ಷ್ಣೇನ ಪ್ರಹಸನ್ನಿವ ಭಾರತ।।

ರಾಜನ್! ಭಾರತ! ಮಹಾತ್ಮ ಶ್ರುತಕೀರ್ತಿಯು ಎಳೆದು ಹಿಡಿದಿದ್ದ ಚಾಪವನ್ನು ಸಮರದಲ್ಲಿ ನಿನ್ನ ಮಗ ಜಯತ್ಸೇನನು ನಗುತ್ತಾ ತೀಕ್ಷ್ಣ ಕ್ಷುರಪ್ರಗಳಿಂದ ತುಂಡುಮಾಡಿದನು.

06075040a ತಂ ದೃಷ್ಟ್ವಾ ಚಿನ್ನಧನ್ವಾನಂ ಶತಾನೀಕಃ ಸಹೋದರಂ।
06075040c ಅಭ್ಯಪದ್ಯತ ತೇಜಸ್ವೀ ಸಿಂಹವದ್ವಿನದನ್ಮುಹುಃ।।

ಸಹೋದರನ ಬಿಲ್ಲು ತುಂಡಾದುದನ್ನು ನೋಡಿದ ತೇಜಸ್ವೀ ಶತಾನೀಕನು ಸಿಂಹದಂತೆ ಗರ್ಜಿಸುತ್ತಾ ಮುಂದೆ ಬಂದನು.

06075041a ಶತಾನೀಕಸ್ತು ಸಮರೇ ದೃಢಂ ವಿಸ್ಫಾರ್ಯ ಕಾರ್ಮುಕಂ।
06075041c ವಿವ್ಯಾಧ ದಶಭಿಸ್ತೂರ್ಣಂ ಜಯತ್ಸೇನಂ ಶಿಲೀಮುಖೈಃ।।

ಶತಾನೀಕನಾದರೋ ಸಮರದಲ್ಲಿ ಬಿಲ್ಲನ್ನು ದೃಢವಾಗಿ ಟೇಂಕರಿಸಿ ಬೇಗನೇ ಹತ್ತು ಶಿಲೀಮುಖಗಳಿಂದ ಜಯತ್ಸೇನನನ್ನು ಹೊಡೆದನು.

06075042a ಅಥಾನ್ಯೇನ ಸುತೀಕ್ಷ್ಣೇನ ಸರ್ವಾವರಣಭೇದಿನಾ।
06075042c ಶತಾನೀಕೋ ಜಯತ್ಸೇನಂ ವಿವ್ಯಾಧ ಹೃದಯೇ ಭೃಶಂ।।

ಶತಾನೀಕನು ತಕ್ಷಣವೇ ಇನ್ನೊಂದು ಸರ್ವಾವರಣಗಳನ್ನೂ ಭೇದಿಸಬಲ್ಲ ತೀಕ್ಷ್ಣ ಬಾಣದಿಂದ ಜಯತ್ಸೇನನ ಹೃದಯಕ್ಕೆ ಜೋರಾಗಿ ಹೊಡೆದನು.

06075043a ತಥಾ ತಸ್ಮಿನ್ವರ್ತಮಾನೇ ದುಷ್ಕರ್ಣೋ ಭ್ರಾತುರಂತಿಕೇ।
06075043c ಚಿಚ್ಛೇದ ಸಮರೇ ಚಾಪಂ ನಾಕುಲೇಃ ಕ್ರೋಧಮೂರ್ಚಿತಃ।।

ಹೀಗೆ ನಡೆಯುತ್ತಿರುವಾಗ ಸಹೋದರನ ಹತ್ತಿರದಲ್ಲಿ ಇದ್ದ ದುಷ್ಕರ್ಣನು ಸಮರದಲ್ಲಿ ಕ್ರೋಧಮೂರ್ಛಿತನಾಗಿ ನಾಕುಲ ಶತಾನೀಕನ ಧನುಸ್ಸನ್ನು ತುಂಡರಿಸಿದನು.

06075044a ಅಥಾನ್ಯದ್ಧನುರಾದಾಯ ಭಾರಸಾಧನಮುತ್ತಮಂ।
06075044c ಸಮಾದತ್ತ ಶಿತಾನ್ಬಾಣಾಂ ಶತಾನೀಕೋ ಮಹಾಬಲಃ।।
06075045a ತಿಷ್ಠ ತಿಷ್ಠೇತಿ ಚಾಮಂತ್ರ್ಯ ದುಷ್ಕರ್ಣಂ ಭ್ರಾತುರಗ್ರತಃ।
06075045c ಮುಮೋಚ ನಿಶಿತಾನ್ಬಾಣಾಂ ಜ್ವಲಿತಾನ್ಪನ್ನಗಾನಿವ।।

ಆಗ ಇನ್ನೊಂದು ಭಾರವಾದ ಉತ್ತಮ ಧನುಸ್ಸನ್ನು ತೆಗೆದುಕೊಂಡು ಮಹಾಬಲ ಶತಾನೀಕನು ಹರಿತ ಬಾಣಗಳನ್ನು ಹೂಡಿ “ನಿಲ್ಲು! ನಿಲ್ಲು!” ಎಂದು ಅಣ್ಣನ ಮುಂದೆ ನಿಂತಿದ್ದ ದುಷ್ಕರ್ಣನನ್ನು ಕರೆದು ಪನ್ನಗಗಳಂತೆ ಪ್ರಜ್ವಲಿಸುತ್ತಿದ್ದ ನಿಶಿತ ಬಾಣಗಳನ್ನು ಪ್ರಯೋಗಿಸಿದನು.

06075046a ತತೋಽಸ್ಯ ಧನುರೇಕೇನ ದ್ವಾಭ್ಯಾಂ ಸೂತಂ ಚ ಮಾರಿಷ।
06075046c ಚಿಚ್ಛೇದ ಸಮರೇ ತೂರ್ಣಂ ತಂ ಚ ವಿವ್ಯಾಧ ಸಪ್ತಭಿಃ।।
06075047a ಅಶ್ವಾನ್ಮನೋಜವಾಂಶ್ಚಾಸ್ಯ ಕಲ್ಮಾಷಾನ್ವೀತಕಲ್ಮಷಃ।
06075047c ಜಘಾನ ನಿಶಿತೈಸ್ತೂರ್ಣಂ ಸರ್ವಾನ್ದ್ವಾದಶಭಿಃ ಶರೈಃ।।

ಮಾರಿಷ! ಆಗ ಅವನು ಸಮರದಲ್ಲಿ ಒಂದರಿಂದ ಧನುಸ್ಸನ್ನೂ, ಎರಡರಿಂದ ಸೂತನನ್ನೂ ಮತ್ತು ಪುನಃ ಏಳು ಬಾಣಗಳಿಂದ ದುಷ್ಕರ್ಣನನ್ನೂ ಹೊಡೆದನು. ಅನಂತರ ಹನ್ನೆರಡು ಶರಗಳಿಂದ ಮನಸ್ಸಿನ ವೇಗವನ್ನುಳ್ಳ, ಕೊಳೆಯೇ ಇಲ್ಲದ ಕಲ್ಮಾಷ ಕುದುರೆಗಳೆಲ್ಲವನ್ನೂ ಬೇಗನೆ ಕೊಂದನು.

06075048a ಅಥಾಪರೇಣ ಭಲ್ಲೇನ ಸುಮುಕ್ತೇನ ನಿಪಾತಿನಾ।
06075048c ದುಷ್ಕರ್ಣಂ ಸಮರೇ ಕ್ರುದ್ಧೋ ವಿವ್ಯಾಧ ಹೃದಯೇ ಭೃಶಂ।।

ಆಗ ಚೆನ್ನಾಗಿ ಪ್ರಯೋಗಿಸಲ್ಪಟ್ಟ ಇನ್ನೊಂದು ಭಲ್ಲದಿಂದ ಸಮರದಲ್ಲಿ ಕ್ರುದ್ಧನಾಗಿ ದುಷ್ಕರ್ಣನ ಹೃದಯಕ್ಕೆ ಚೆನ್ನಾಗಿ ಹೊಡೆದನು.

06075049a ದುಷ್ಕರ್ಣಂ ನಿಹತಂ ದೃಷ್ಟ್ವಾ ಪಂಚ ರಾಜನ್ಮಹಾರಥಾಃ।
06075049c ಜಿಘಾಂಸಂತಃ ಶತಾನೀಕಂ ಸರ್ವತಃ ಪರ್ಯವಾರಯನ್।।

ರಾಜನ್! ದುಷ್ಕರ್ಣನು ಹತನಾಗಿ ಬಿದ್ದುದನ್ನು ನೋಡಿ ಐವರು ಮಹಾರಥರು ಶತಾನೀಕನನ್ನು ಕೊಲ್ಲಲು ಬಯಸಿ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದರು.

06075050a ಚಾದ್ಯಮಾನಂ ಶರವ್ರಾತೈಃ ಶತಾನೀಕಂ ಯಶಸ್ವಿನಂ।
06075050c ಅಭ್ಯಧಾವಂತ ಸಂರಬ್ಧಾಃ ಕೇಕಯಾಃ ಪಂಚ ಸೋದರಾಃ।।

ಶರವ್ರಾತಗಳಿಂದ ಯಶಸ್ವಿ ಶತಾನೀಕನನ್ನು ಹೊಡೆಯುತ್ತಿದ್ದ ಆ ಸಂರಬ್ಧರನ್ನು ಕೇಕಯದ ಐವರು ಸೋದರರು ಧಾವಿಸಿ ಬಂದು ಎದುರಿಸಿದರು.

06075051a ತಾನಭ್ಯಾಪತತಃ ಪ್ರೇಕ್ಷ್ಯ ತವ ಪುತ್ರಾ ಮಹಾರಥಾಃ।
06075051c ಪ್ರತ್ಯುದ್ಯಯುರ್ಮಹಾರಾಜ ಗಜಾ ಇವ ಮಹಾಗಜಾನ್।।

ಮಹಾರಾಜ! ಅವರು ಆಕ್ರಮಣ ಮಾಡುತ್ತಿರುವುದನ್ನು ನಿನ್ನ ಮಹಾರಥ ಪುತ್ರರು ಮಹಾಗಜಗಳನ್ನು ಗಜಗಳು ಹೇಗೋ ಹಾಗೆ ಎದುರಿಸಿ ಯುದ್ಧಮಾಡಿದರು.

06075052a ದುರ್ಮುಖೋ ದುರ್ಜಯಶ್ಚೈವ ತಥಾ ದುರ್ಮರ್ಷಣೋ ಯುವಾ।
06075052c ಶತ್ರುಂಜಯಃ ಶತ್ರುಸಹಃ ಸರ್ವೇ ಕ್ರುದ್ಧಾ ಯಶಸ್ವಿನಃ।
06075052e ಪ್ರತ್ಯುದ್ಯಾತಾ ಮಹಾರಾಜ ಕೇಕಯಾನ್ ಭ್ರಾತರಃ ಸಮಂ।।

ದುರ್ಮುಖ, ದುರ್ಜಯ, ಯುವಕ ದುರ್ಮರ್ಷಣ, ಶತ್ರುಂಜಯ, ಶತ್ರುಸಹ ಎಲ್ಲ ಯಶಸ್ವಿಗಳೂ ಕ್ರುದ್ಧರಾಗಿ ಕೇಕಯ ಸಹೋದರರೊಂದಿಗೆ ಸರಿಸಾಟಿಗಳಾಗಿ ಯುದ್ಧಮಾಡಿದರು.

06075053a ರಥೈರ್ನಗರಸಂಕಾಶೈರ್ಹಯೈರ್ಯುಕ್ತೈರ್ಮನೋಜವೈಃ।
06075053c ನಾನಾವರ್ಣವಿಚಿತ್ರಾಭಿಃ ಪತಾಕಾಭಿರಲಂಕೃತೈಃ।।
06075054a ವರಚಾಪಧರಾ ವೀರಾ ವಿಚಿತ್ರಕವಚಧ್ವಜಾಃ।
06075054c ವಿವಿಶುಸ್ತೇ ಪರಂ ಸೈನ್ಯಂ ಸಿಂಹಾ ಇವ ವನಾದ್ವನಂ।।

ಮನೋವೇಗಗಳ ಕುದುರೆಗಳನ್ನು ಕಟ್ಟಿದ್ದ, ನಾನಾ ವರ್ಣವಿಚಿತ್ರ ಪತಾಕೆಗಳಿಂದ ಅಲಂಕೃತವಾಗಿದ್ದ ನಗರಗಳಂತಿರುವ ರಥಗಳಲ್ಲಿ, ಶ್ರೇಷ್ಠ ಧನುಸ್ಸುಗಳನ್ನು, ವಿಚಿತ್ರ ಕವಚ-ಧ್ವಜಗಳನ್ನು ಧರಿಸಿ ಆ ವೀರರು ವನದಿಂದ ಇನ್ನೊಂದು ವನಕ್ಕೆ ಹೋಗುವ ಸಿಂಹಗಳಂತೆ ಶತ್ರುಗಳ ಸೈನ್ಯವನ್ನು ಪ್ರವೇಶಿಸಿದರು.

06075055a ತೇಷಾಂ ಸುತುಮುಲಂ ಯುದ್ಧಂ ವ್ಯತಿಷಕ್ತರಥದ್ವಿಪಂ।
06075055c ಅವರ್ತತ ಮಹಾರೌದ್ರಂ ನಿಘ್ನತಾಮಿತರೇತರಂ।
06075055e ಅನ್ಯೋನ್ಯಾಗಸ್ಕೃತಾಂ ರಾಜನ್ಯಮರಾಷ್ಟ್ರವಿವರ್ಧನಂ।।

ರಾಜನ್! ರಥಸೈನ್ಯಗಳಿಂದಲೂ ಗಜಸೈನ್ಯಗಳಿಂದಲೂ ಕೂಡಿದ್ದ ಅವರ ಇತರೇತರರನ್ನು ಸಂಹರಿಸುವ, ಅನ್ಯೋನ್ಯರನ್ನು ಹೊಡೆಯುವ, ಯಮರಾಷ್ಟ್ರವನ್ನು ಹೆಚ್ಚುಗೊಳಿಸುವ ಆ ತುಮುಲ ಮಹಾರೌದ್ರ ಯುದ್ಧವು ನಡೆಯಿತು.

06075056a ಮುಹೂರ್ತಾಸ್ತಮಿತೇ ಸೂರ್ಯೇ ಚಕ್ರುರ್ಯುದ್ಧಂ ಸುದಾರುಣಂ।
06075056c ರಥಿನಃ ಸಾದಿನಶ್ಚೈವ ವ್ಯಕೀರ್ಯಂತ ಸಹಸ್ರಶಃ।।

ಸೂರ್ಯನು ಅಸ್ತಮಿಸುತ್ತಿದ್ದ ಮುಹೂರ್ತದಲ್ಲಿಯೂ ಸಹಸ್ರಾರು ರಥಿಗಳು ಮತ್ತು ಕುದುರೆ ಸವಾರರನ್ನು ಬೀಳಿಸುತ್ತಾ ಆ ಸುದಾರುಣ ಯುದ್ಧವನ್ನು ನಡೆಸಿದರು.

06075057a ತತಃ ಶಾಂತನವಃ ಕ್ರುದ್ಧಃ ಶರೈಃ ಸಂನ್ನತಪರ್ವಭಿಃ।
06075057c ನಾಶಯಾಮಾಸ ಸೇನಾಂ ವೈ ಭೀಷ್ಮಸ್ತೇಷಾಂ ಮಹಾತ್ಮನಾಂ।
06075057e ಪಾಂಚಾಲಾನಾಂ ಚ ಸೈನ್ಯಾನಿ ಶರೈರ್ನಿನ್ಯೇ ಯಮಕ್ಷಯಂ।।

ಆಗ ಶಾಂತನವ ಭೀಷ್ಮನು ಕ್ರುದ್ಧನಾಗಿ ಸನ್ನತಪರ್ವ ಶರಗಳಿಂದ ಆ ಮಹಾತ್ಮ ಪಾಂಚಾಲರ ಸೈನ್ಯಗಳನ್ನು ಯಮಕ್ಷಯಕ್ಕೆ ಕಳುಹಿಸಿ ನಾಶಪಡಿಸಿದನು.

06075058a ಏವಂ ಭಿತ್ತ್ವಾ ಮಹೇಷ್ವಾಸಃ ಪಾಂಡವಾನಾಮನೀಕಿನೀಂ।
06075058c ಕೃತ್ವಾವಹಾರಂ ಸೈನ್ಯಾನಾಂ ಯಯೌ ಸ್ವಶಿಬಿರಂ ನೃಪ।।

ನೃಪ! ಹೀಗೆ ಪಾಂಡವರ ಸೇನೆಗಳನ್ನು ಭೇದಿಸಿ ಆ ಮಹೇಷ್ವಾಸನು ಸೈನ್ಯಗಳನ್ನು ಹಿಂತೆಗೆದುಕೊಂಡು ತನ್ನ ಶಿಬಿರಕ್ಕೆ ತೆರಳಿದನು.

06075059a ಧರ್ಮರಾಜೋಽಪಿ ಸಂಪ್ರೇಕ್ಷ್ಯ ಧೃಷ್ಟದ್ಯುಮ್ನವೃಕೋದರೌ।
06075059c ಮೂರ್ಧ್ನಿ ಚೈತಾವುಪಾಘ್ರಾಯ ಸಂಹೃಷ್ಟಃ ಶಿಬಿರಂ ಯಯೌ।।

ಧರ್ಮರಾಜನೂ ಕೂಡ ಧೃಷ್ಟದ್ಯುಮ್ನ-ವೃಕೋದರರನ್ನು ನೋಡಿ ಸಂಹೃಷ್ಟನಾಗಿ ಅವರ ನೆತ್ತಿಯನ್ನು ಆಘ್ರಾಣಿಸಿ ತನ್ನ ಶಿಬಿರಕ್ಕೆ ತೆರಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಷಷ್ಠದಿವಸಾವಹಾರೇ ಪಂಚಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಷಷ್ಠದಿವಸಾವಹಾರ ಎನ್ನುವ ಎಪ್ಪತ್ತೈದನೇ ಅಧ್ಯಾಯವು.