074 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ

ಭೀಷ್ಮವಧ ಪರ್ವ

ಅಧ್ಯಾಯ 74

ಸಾರ

ಸಂಕುಲ ಯುದ್ಧ (1-36).

06074001 ಸಂಜಯ ಉವಾಚ।
06074001a ತತೋ ದುರ್ಯೋಧನೋ ರಾಜಾ ಮೋಹಾತ್ಪ್ರತ್ಯಾಗತಸ್ತದಾ।
06074001c ಶರವರ್ಷೈಃ ಪುನರ್ಭೀಮಂ ಪ್ರತ್ಯವಾರಯದಚ್ಯುತಂ।।

ಸಂಜಯನು ಹೇಳಿದನು: “ಆಗ ರಾಜಾ ದುರ್ಯೋಧನನು ಮೂರ್ಛೆಯಿಂದ ಎಚ್ಚೆತ್ತು ಪುನಃ ಅಚ್ಯುತ ಭೀಮನನ್ನು ಶರವರ್ಷಗಳಿಂದ ಆಕ್ರಮಣಿಸಿದನು.

06074002a ಏಕೀಭೂತಾಃ ಪುನಶ್ಚೈವ ತವ ಪುತ್ರಾ ಮಹಾರಥಾಃ।
06074002c ಸಮೇತ್ಯ ಸಮರೇ ಭೀಮಂ ಯೋಧಯಾಮಾಸುರುದ್ಯತಾಃ।।

ಪುನಃ ನಿನ್ನ ಮಹಾರಥ ಪುತ್ರರು ಒಂದಾಗಿ ಸೇರಿ ಸಮರದಲ್ಲಿ ಭೀಮನೊಂದಿಗೆ ಯುದ್ಧಮಾಡತೊಡಗಿದರು.

06074003a ಭೀಮಸೇನೋಽಪಿ ಸಮರೇ ಸಂಪ್ರಾಪ್ಯ ಸ್ವರಥಂ ಪುನಃ।
06074003c ಸಮಾರುಹ್ಯ ಮಹಾಬಾಹುರ್ಯಯೌ ಯೇನ ತವಾತ್ಮಜಃ।।

ಮಹಾಬಾಹು ಭೀಮಸೇನನೂ ಕೂಡ ಸಮರದಲ್ಲಿ ಪುನಃ ತನ್ನ ರಥವನ್ನು ಪಡೆದು ಅದನ್ನೇರಿ ನಿನ್ನ ಮಕ್ಕಳನ್ನು ಎದುರಿಸಿದನು.

06074004a ಪ್ರಗೃಹ್ಯ ಚ ಮಹಾವೇಗಂ ಪರಾಸುಕರಣಂ ದೃಢಂ।
06074004c ಚಿತ್ರಂ ಶರಾಸನಂ ಸಂಖ್ಯೇ ಶರೈರ್ವಿವ್ಯಾಧ ತೇ ಸುತಾನ್।।

ಮಹಾವೇಗವುಳ್ಳ ಬಂಗಾರದಿಂದ ಅಲಂಕರಿಸಲ್ಪಟ್ಟ ದೃಢವಾದ ಬಣ್ಣದ ಬಿಲ್ಲನ್ನು ಹಿಡಿದು ರಣದಲ್ಲಿ ನಿನ್ನ ಮಕ್ಕಳನ್ನು ಶರಗಳಿಂದ ಹೊಡೆದನು.

06074005a ತತೋ ದುರ್ಯೋಧನೋ ರಾಜಾ ಭೀಮಸೇನಂ ಮಹಾಬಲಂ।
06074005c ನಾರಾಚೇನ ಸುತೀಕ್ಷ್ಣೇನ ಭೃಶಂ ಮರ್ಮಣ್ಯತಾಡಯತ್।।

ಆಗ ರಾಜಾ ದುರ್ಯೋಧನನು ಮಹಾಬಲ ಭೀಮಸೇನನನ್ನು ತೀಕ್ಷ್ಣ ನಾರಾಚಗಳಿಂದ ಮರ್ಮಗಳಿಗೆ ಚೆನ್ನಾಗಿ ಹೊಡೆದನು.

06074006a ಸೋಽತಿವಿದ್ಧೋ ಮಹೇಷ್ವಾಸಸ್ತವ ಪುತ್ರೇಣ ಧನ್ವಿನಾ।
06074006c ಕ್ರೋಧಸಂರಕ್ತನಯನೋ ವೇಗೇನೋತ್ಕ್ಷಿಪ್ಯ ಕಾರ್ಮುಕಂ।।
06074007a ದುರ್ಯೋಧನಂ ತ್ರಿಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್।
06074007c ಸ ತಥಾಭಿಹತೋ ರಾಜಾ ನಾಚಲದ್ಗಿರಿರಾಡಿವ।।

ನಿನ್ನ ಮಗನಿಂದ ಅತಿಯಾಗಿ ಪೆಟ್ಟುತಿಂದ ಆ ಮಹೇಷ್ವಾಸನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ವೇಗದಿಂದ ಧನುಸ್ಸನ್ನು ಎತ್ತಿ ದುರ್ಯೋಧನನನ್ನು ಮೂರುಬಾಣಗಳಿಂದ ಅವನ ಬಾಹುಗಳಿಗೂ ಎದೆಗೂ ಹೊಡೆದನು. ಅವನಿಂದ ಪೆಟ್ಟುತಿಂದರೂ ರಾಜನು ಅಲುಗಾಡದೇ ಪರ್ವತದಂತಿದ್ದನು.

06074008a ತೌ ದೃಷ್ಟ್ವಾ ಸಮರೇ ಕ್ರುದ್ಧೌ ವಿನಿಘ್ನಂತೌ ಪರಸ್ಪರಂ।
06074008c ದುರ್ಯೋಧನಾನುಜಾಃ ಸರ್ವೇ ಶೂರಾಃ ಸಂತ್ಯಕ್ತಜೀವಿತಾಃ।।
06074009a ಸಂಸ್ಮೃತ್ಯ ಮಂತ್ರಿತಂ ಪೂರ್ವಂ ನಿಗ್ರಹೇ ಭೀಮಕರ್ಮಣಃ।
06074009c ನಿಶ್ಚಯಂ ಮನಸಾ ಕೃತ್ವಾ ನಿಗ್ರಹೀತುಂ ಪ್ರಚಕ್ರಮುಃ।।

ಸಮರದಲ್ಲಿ ಕ್ರುದ್ಧರಾಗಿ ಪರಸ್ಪರರನ್ನು ಹೊಡೆಯುತ್ತಿದ್ದ ಅವರಿಬ್ಬರನ್ನು ನೋಡಿ ಜೀವವನ್ನೇ ತೊರೆಯಲು ಸಿದ್ಧರಾಗಿದ್ದ ದುರ್ಯೋಧನನ ಶೂರ ತಮ್ಮಂದಿರೆಲ್ಲರೂ ಭೀಮನನ್ನು ಹಿಡಿಯುವ ತಮ್ಮ ಹಿಂದಿನ ಉಪಾಯದಂತೆ ಮನಸ್ಸು ಮಾಡಿ ಅವನನ್ನು ಸೆರೆಹಿಡಿಯಲು ಪ್ರಯತ್ನಿಸಿದರು.

06074010a ತಾನಾಪತತ ಏವಾಜೌ ಭೀಮಸೇನೋ ಮಹಾಬಲಃ।
06074010c ಪ್ರತ್ಯುದ್ಯಯೌ ಮಹಾರಾಜ ಗಜಃ ಪ್ರತಿಗಜಾನಿವ।।

ಮಹಾರಾಜ! ಅವರು ಅವನ ಮೇಲೆ ಎರಗಲು ಮಹಾಬಲ ಭೀಮಸೇನನು ಎದುರಾಳಿ ಆನೆಯನ್ನು ಇನ್ನೊಂದು ಆನೆಯು ಹೇಗೋ ಹಾಗೆ ಎದುರಿಸಿ ಯುದ್ಧ ಮಾಡಿದನು.

06074011a ಭೃಶಂ ಕ್ರುದ್ಧಶ್ಚ ತೇಜಸ್ವೀ ನಾರಾಚೇನ ಸಮರ್ಪಯತ್।
06074011c ಚಿತ್ರಸೇನಂ ಮಹಾರಾಜ ತವ ಪುತ್ರಂ ಮಹಾಯಶಾಃ।।

ತುಂಬಾ ಕ್ರುದ್ಧನಾದ ಆ ತೇಜಸ್ವಿಯು ಮಹಾಯಶಸ್ವಿ ನಿನ್ನ ಮಗ ಚಿತ್ರಸೇನನನ್ನು ನಾರಾಚಗಳಿಂದ ಹೊಡೆದನು.

06074012a ತಥೇತರಾಂಸ್ತವ ಸುತಾಂಸ್ತಾಡಯಾಮಾಸ ಭಾರತ।
06074012c ಶರೈರ್ಬಹುವಿಧೈಃ ಸಂಖ್ಯೇ ರುಕ್ಮಪುಂಖೈಃ ಸುವೇಗಿತೈಃ।।

ಭಾರತ! ಹಾಗೆಯೇ ನಿನ್ನ ಇತರ ಮಕ್ಕಳನ್ನೂ ವೇಗವುಳ್ಳ ಅನೇಕ ವಿಧದ ರುಕ್ಮಪುಂಖ ಶರಗಳಿಂದ ಹೊಡೆದನು.

06074013a ತತಃ ಸಂಸ್ಥಾಪ್ಯ ಸಮರೇ ಸ್ವಾನ್ಯನೀಕಾನಿ ಸರ್ವಶಃ।
06074013c ಅಭಿಮನ್ಯುಪ್ರಭೃತಯಸ್ತೇ ದ್ವಾದಶ ಮಹಾರಥಾಃ।।
06074014a ಪ್ರೇಷಿತಾ ಧರ್ಮರಾಜೇನ ಭೀಮಸೇನಪದಾನುಗಾಃ।
06074014c ಪ್ರತ್ಯುದ್ಯಯುರ್ಮಹಾರಾಜ ತವ ಪುತ್ರಾನ್ಮಹಾಬಲಾನ್।।

ಮಹಾರಾಜ! ಆಗ ಭೀಮಸೇನನನ್ನು ಅನುಸರಿಸಿ ಹೋಗಬೇಕೆಂದು ಧರ್ಮರಾಜನು ಅಭಿಮನ್ಯುವಿನ ನಾಯಕತ್ವದಲ್ಲಿ ಕಳುಹಿಸಿದ್ದ ಹನ್ನೆರಡು ಮಹಾರಥರು ತಮ್ಮ ಎಲ್ಲ ಸೇನೆಗಳೊಂದಿಗೆ ಬಂದು ನಿನ್ನ ಮಹಾಬಲ ಪುತ್ರರನ್ನು ಎದುರಿಸಿ ಯುದ್ಧಮಾಡಿದರು.

06074015a ದೃಷ್ಟ್ವಾ ರಥಸ್ಥಾಂಸ್ತಾಂ ಶೂರಾನ್ಸೂರ್ಯಾಗ್ನಿಸಮತೇಜಸಃ।
06074015c ಸರ್ವಾನೇವ ಮಹೇಷ್ವಾಸಾಮ್ಭ್ರಾಜಮಾನಾಂ ಶ್ರಿಯಾ ವೃತಾನ್।।
06074016a ಮಹಾಹವೇ ದೀಪ್ಯಮಾನಾನ್ಸುವರ್ಣಕವಚೋಜ್ಜ್ವಲಾನ್।
06074016c ತತ್ಯಜುಃ ಸಮರೇ ಭೀಮಂ ತವ ಪುತ್ರಾ ಮಹಾಬಲಾಃ।।

ಆ ಶೂರರ ಸೂರ್ಯಾಗ್ನಿಸಮತೇಜಸ್ಸಿನ ರಥಗಳನ್ನೂ, ಶ್ರೀಯಿಂದ ಆವೃತರಾಗಿ ಬೆಳಗುತ್ತಿರುವ ಮತ್ತು ಮಹಾಹವದಲ್ಲಿ ಸುವರ್ಣಕವಚಗಳ ಬೆಳಕಿನಿಂದ ಬೆಳಗುತ್ತಿರುವ ಆ ಮಹೇಷ್ವಾಸರನ್ನೂ ನೋಡಿ ನಿನ್ನ ಮಹಾಬಲ ಪುತ್ರರು ಸಮರದಲ್ಲಿ ಅವನನ್ನು ತ್ಯಜಿಸಿದರು.

06074017a ತಾನ್ನಾಮೃಷ್ಯತ ಕೌಂತೇಯೋ ಜೀವಮಾನಾ ಗತಾ ಇತಿ।
06074017c ಅನ್ವೀಯ ಚ ಪುನಃ ಸರ್ವಾಂಸ್ತವ ಪುತ್ರಾನಪೀಡಯತ್।।

ಅವರು ಜೀವಸಹಿತರಾಗಿ ಹೊರಟುಹೋದುದನ್ನು ಕೌಂತೇಯನು ಸಹಿಸಲಿಲ್ಲ. ಅವರನ್ನು ಬೆನ್ನಟ್ಟಿಹೋಗಿ ನಿನ್ನ ಪುತ್ರರನ್ನು ಪುನಃ ಪೀಡಿಸಿದನು.

06074018a ಅಥಾಭಿಮನ್ಯುಂ ಸಮರೇ ಭೀಮಸೇನೇನ ಸಂಗತಂ।
06074018c ಪಾರ್ಷತೇನ ಚ ಸಂಪ್ರೇಕ್ಷ್ಯ ತವ ಸೈನ್ಯೇ ಮಹಾರಥಾಃ।।
06074019a ದುರ್ಯೋಧನಪ್ರಭೃತಯಃ ಪ್ರಗೃಹೀತಶರಾಸನಾಃ।
06074019c ಭೃಶಮಶ್ವೈಃ ಪ್ರಜವಿತೈಃ ಪ್ರಯಯುರ್ಯತ್ರ ತೇ ರಥಾಃ।।

ಆಗ ಸಮರದಲ್ಲಿ ಭೀಮಸೇನ ಮತ್ತು ಪಾರ್ಷತರೊಡನೆ ಅಭಿಮನ್ಯುವು ಇರುವುದನ್ನು ನೋಡಿ ನಿನ್ನ ಸೇನೆಯಲ್ಲಿದ್ದ ದುರ್ಯೋಧನನೇ ಮೊದಲಾದ ಮಹಾರಥರು ಧನ್ನುಸ್ಸುಗಳನ್ನು ಹಿಡಿದು ಉತ್ತಮ ಅಶ್ವಗಳಿಂದ ಎಳೆಯಲ್ಪಟ್ಟ ರಥಗಳಲ್ಲಿ ಅವರಿರುವಲ್ಲಿಗೆ ಧಾವಿಸಿದರು.

06074020a ಅಪರಾಹ್ಣೇ ತತೋ ರಾಜನ್ಪ್ರಾವರ್ತತ ಮಹಾನ್ರಣಃ।
06074020c ತಾವಕಾನಾಂ ಚ ಬಲಿನಾಂ ಪರೇಷಾಂ ಚೈವ ಭಾರತ।।

ರಾಜನ್! ಭಾರತ! ಆಗ ಅಪರಾಹ್ಣದಲ್ಲಿ ನಿನ್ನವರ ಮತ್ತು ಬಲಶಾಲಿ ಶತ್ರುಗಳ ನಡುವೆ ಮಹಾ ರಣವಾಯಿತು.

06074021a ಅಭಿಮನ್ಯುರ್ವಿಕರ್ಣಸ್ಯ ಹಯಾನ್ ಹತ್ವಾ ಮಹಾಜವಾನ್।
06074021c ಅಥೈನಂ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮಾಚಿನೋತ್।।

ಅಭಿಮನ್ಯುವು ವಿಕರ್ಣನ ಮಹಾವೇಗದ ಕುದುರೆಗಳನ್ನು ಕೊಂದು ಇಪ್ಪತ್ತೈದು ಕ್ಷುದ್ರಕಗಳಿಂದ ಅವನನ್ನು ಹೊಡೆದನು.

06074022a ಹತಾಶ್ವಂ ರಥಮುತ್ಸೃಜ್ಯ ವಿಕರ್ಣಸ್ತು ಮಹಾರಥಃ।
06074022c ಆರುರೋಹ ರಥಂ ರಾಜಂಶ್ಚಿತ್ರಸೇನಸ್ಯ ಭಾಸ್ವರಂ।।

ರಾಜನ್! ಅಶ್ವವು ಹತವಾಗಲು ಮಹಾರಥ ವಿಕರ್ಣನು ಚಿತ್ರಸೇನನ ಹೊಳೆಯುವ ರಥವನ್ನು ಏರಿದನು.

06074023a ಸ್ಥಿತಾವೇಕರಥೇ ತೌ ತು ಭ್ರಾತರೌ ಕುರುವರ್ಧನೌ।
06074023c ಆರ್ಜುನಿಃ ಶರಜಾಲೇನ ಚಾದಯಾಮಾಸ ಭಾರತ।।

ಭಾರತ! ಒಂದೇ ರಥದಲ್ಲಿ ನಿಂತಿದ್ದ ಆ ಇಬ್ಬರು ಕುರುವರ್ಧನ ಸಹೋದರರನ್ನು ಆರ್ಜುನಿಯು ಶರಜಾಲಗಳಿಂದ ಮುಚ್ಚಿದನು.

06074024a ದುರ್ಜಯೋಽಥ ವಿಕರ್ಣಶ್ಚ ಕಾರ್ಷ್ಣಿಂ ಪಂಚಭಿರಾಯಸೈಃ।
06074024c ವಿವ್ಯಧಾತೇ ನ ಚಾಕಂಪತ್ಕಾರ್ಷ್ಣಿರ್ಮೇರುರಿವಾಚಲಃ।।

ಆಗ ದುರ್ಜಯ ಮತ್ತು ವಿಕರ್ಣರು ಕಾರ್ಷ್ಣಿಯನ್ನು ಐದು ಆಯಸಗಳಿಂದ ಹೊಡೆದರೂ ಕಾರ್ಷ್ಣಿಯು ಮೇರುವಿನಂತೆ ಅಲುಗಾಡದೇ ಅಚಲವಾಗಿದ್ದನು.

06074025a ದುಃಶಾಸನಸ್ತು ಸಮರೇ ಕೇಕಯಾನ್ಪಂಚ ಮಾರಿಷ।
06074025c ಯೋಧಯಾಮಾಸ ರಾಜೇಂದ್ರ ತದದ್ಭುತಮಿವಾಭವತ್।।

ಮಾರಿಷ! ರಾಜೇಂದ್ರ! ದುಃಶಾಸನನಾದರೋ ಸಮರದಲ್ಲಿ ಐವರು ಕೇಕಯರೊಂದಿಗೆ ಯುದ್ಧಮಾಡತೊಡಗಿದನು. ಅದು ಅದ್ಭುತವಾಗಿತ್ತು.

06074026a ದ್ರೌಪದೇಯಾ ರಣೇ ಕ್ರುದ್ಧಾ ದುರ್ಯೋಧನಮವಾರಯನ್।
06074026c ಏಕೈಕಸ್ತ್ರಿಭಿರಾನರ್ಚತ್ಪುತ್ರಂ ತವ ವಿಶಾಂ ಪತೇ।।

ವಿಶಾಂಪತೇ! ದ್ರೌಪದೇಯರು ರಣದಲ್ಲಿ ಕ್ರುದ್ಧರಾಗಿ ನಿನ್ನ ಮಗ ದುರ್ಯೋಧನನನ್ನು ಸುತ್ತುವರೆದು ಒಬ್ಬೊಬ್ಬರೂ ಮೂರು ಬಾಣಗಳಿಂದ ಹೊಡೆದರು.

06074027a ಪುತ್ರೋಽಪಿ ತವ ದುರ್ಧರ್ಷೋ ದ್ರೌಪದ್ಯಾಸ್ತನಯಾನ್ರಣೇ।
06074027c ಸಾಯಕೈರ್ನಿಶಿತೈ ರಾಜನ್ನಾಜಘಾನ ಪೃಥಕ್ಪೃಥಕ್।।

ರಾಜನ್! ನಿನ್ನ ಮಗ ದುರ್ಧರ್ಷನೂ ಕೂಡ ರಣದಲ್ಲಿ ದ್ರೌಪದೇಯರನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಿಶಿತ ಸಾಯಕಗಳಿಂದ ಹೊಡೆದನು.

06074028a ತೈಶ್ಚಾಪಿ ವಿದ್ಧಃ ಶುಶುಭೇ ರುಧಿರೇಣ ಸಮುಕ್ಷಿತಃ।
06074028c ಗಿರಿಪ್ರಸ್ರವಣೈರ್ಯದ್ವದ್ಗಿರಿರ್ಧಾತುವಿಮಿಶ್ರಿತೈಃ।।

ಅವರಿಂದಲೂ ಪೆಟ್ಟುತಿಂದ ಅವನು ರಕ್ತದಿಂದ ತೋಯ್ದು ಗೈರಿಕಾದಿ ಧಾತುಗಳ ಸಮ್ಮಿಶ್ರಣಗಳಿಂದ ಕೂಡಿದ ಝರಿಗಳಿರುವ ಗಿರಿಯಂತೆ ಶೋಭಿಸಿದನು.

06074029a ಭೀಷ್ಮೋಽಪಿ ಸಮರೇ ರಾಜನ್ಪಾಂಡವಾನಾಮನೀಕಿನೀಂ।
06074029c ಕಾಲಯಾಮಾಸ ಬಲವಾನ್ಪಾಲಃ ಪಶುಗಣಾನಿವ।।

ರಾಜನ್! ಭೀಷ್ಮನೂ ಕೂಡ ಸಮರದಲ್ಲಿ ಗೋಪಾಲಕನು ಹಸುಗಳನ್ನು ತರುಬುವಂತೆ ಪಾಂಡವರ ಸೇನೆಯನ್ನು ತಡೆದಿದ್ದನು.

06074030a ತತೋ ಗಾಂಡೀವನಿರ್ಘೋಷಃ ಪ್ರಾದುರಾಸೀದ್ವಿಶಾಂ ಪತೇ।
06074030c ದಕ್ಷಿಣೇನ ವರೂಥಿನ್ಯಾಃ ಪಾರ್ಥಸ್ಯಾರೀನ್ವಿನಿಘ್ನತಃ।।

ಆಗ ವಿಶಾಂಪತೇ! ರಣಭೂಮಿಯ ದಕ್ಷಿಣಭಾಗದಿಂದ ಸೇನೆಗಳನ್ನು ಸಂಹರಿಸುತ್ತಿದ್ದ ಪಾರ್ಥನ ಗಾಂಡೀವ ನಿರ್ಘೋಷವು ಕೇಳಿಬಂದಿತು.

06074031a ಉತ್ತಸ್ಥುಃ ಸಮರೇ ತತ್ರ ಕಬಂಧಾನಿ ಸಮಂತತಃ।
06074031c ಕುರೂಣಾಂ ಚಾಪಿ ಸೈನ್ಯೇಷು ಪಾಂಡವಾನಾಂ ಚ ಭಾರತ।।

ಭಾರತ! ಅಲ್ಲಿ ಸಮರದಲ್ಲಿ ಕುರುಗಳ ಮತ್ತು ಪಾಂಡವರ ಸೇನೆಗಳಲ್ಲಿ ಎಲ್ಲ ಕಡೆ ಸಂಹೃತರಾದವರ ಮುಂಡಗಳು ಎದ್ದು ನಿಂತಿದ್ದವು.

06074032a ಶೋಣಿತೋದಂ ರಥಾವರ್ತಂ ಗಜದ್ವೀಪಂ ಹಯೋರ್ಮಿಣಂ।
06074032c ರಥನೌಭಿರ್ನರವ್ಯಾಘ್ರಾಃ ಪ್ರತೇರುಃ ಸೈನ್ಯಸಾಗರಂ।।

ಸೈನ್ಯವೆಂಬ ಸಾಗರದಲ್ಲಿ ರಕ್ತವೇ ನೀರಾಗಿತ್ತು. ಬಾಣಗಳು ಸುಳಿಯಾಗಿದ್ದವು. ಆನೆಗಳು ದ್ವೀಪಗಳಂತಿದ್ದವು. ಕುದುರೆಗಳು ಅಲೆಗಳಾಗಿದ್ದವು. ರಥಗಳು ನರವ್ಯಾಘ್ರರು ದಾಟಲು ಬಳಸಿದ ನೌಕೆಗಳಂತಿದ್ದವು.

06074033a ಚಿನ್ನಹಸ್ತಾ ವಿಕವಚಾ ವಿದೇಹಾಶ್ಚ ನರೋತ್ತಮಾಃ।
06074033c ಪತಿತಾಸ್ತತ್ರ ದೃಶ್ಯಂತೇ ಶತಶೋಽಥ ಸಹಸ್ರಶಃ।।

ಅಲ್ಲಿ ಕೈಗಳು ಕತ್ತರಿಸಿದ, ಕವಚಗಳಿಲ್ಲದ, ದೇಹವೇ ಇಲ್ಲದ ನೂರಾರು ಸಾವಿರಾರು ನರೋತ್ತಮರು ಅಲ್ಲಿ ಬಿದ್ದಿರುವುದು ಕಾಣುತ್ತಿತ್ತು.

06074034a ನಿಹತೈರ್ಮತ್ತಮಾತಂಗೈಃ ಶೋಣಿತೌಘಪರಿಪ್ಲುತೈಃ।
06074034c ಭೂರ್ಭಾತಿ ಭರತಶ್ರೇಷ್ಠ ಪರ್ವತೈರಾಚಿತಾ ಯಥಾ।।

ಭಾರತ! ರಕ್ತದಿಂದ ತೋಯಿಸಲ್ಪಟ್ಟು ನಿಹತವಾದ ಮತ್ತ ಮಾತಂಗಗಳು ನೆಲದ ಮೇಲೆ ಪರ್ವತಗಳಂತೆ ತೋರುತ್ತಿದ್ದವು.

06074035a ತತ್ರಾದ್ಭುತಮಪಶ್ಯಾಮ ತವ ತೇಷಾಂ ಚ ಭಾರತ।
06074035c ನ ತತ್ರಾಸೀತ್ಪುಮಾನ್ಕಶ್ಚಿದ್ಯೋ ಯೋದ್ಧುಂ ನಾಭಿಕಾಂಕ್ಷತಿ।।

ಭಾರತ! ಅಂತಹ ಅಲ್ಲಿಯೂ ನಾವು ಒಂದು ಪರಮಾದ್ಭುತವನ್ನು ಕಂಡೆವು. ನಿನ್ನವರಲ್ಲಿಯಾಗಲೀ ಅವರಲ್ಲಿಯಾಗಲೀ ಯುದ್ಧವು ಬೇಡವೆಂದು ಹೇಳುವವರು ಯಾರೂ ಇರಲಿಲ್ಲ.

06074036a ಏವಂ ಯುಯುಧಿರೇ ವೀರಾಃ ಪ್ರಾರ್ಥಯಾನಾ ಮಹದ್ಯಶಃ।
06074036c ತಾವಕಾಃ ಪಾಂಡವೈಃ ಸಾರ್ಧಂ ಕಾಂಕ್ಷಮಾಣಾ ಜಯಂ ಯುಧಿ।।

ಹೀಗೆ ಮಹಾಯಶಸ್ಸನ್ನು ಬಯಸುತ್ತಾ ನಿನ್ನ ವೀರರು ಯುದ್ಧದಲ್ಲಿ ಜಯವನ್ನೇ ಬಯಸಿ ಪಾಂಡವರೊಂದಿಗೆ ಯುದ್ಧಮಾಡಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ಚತುಃಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಪ್ಪತ್ನಾಲ್ಕನೇ ಅಧ್ಯಾಯವು.